ಹೆಣ್ಣು – ಗಂಡು ಸಮಾನರೇ???!!!

ಹೆಣ್ಣೊಬ್ಬಳು `ತಾಯಿ’, ಗಂಡೊಬ್ಬ `ತಂದೆ’ ಎಂಬ ಸ್ಥಾನಕ್ಕೇರುವಾಗ ಗಂಡು-ಹೆಣ್ಣಿನ ಪರಿಕಲ್ಪನೆಯಿಂದ ಹೊರಬಂದು ಹೊಸ ಅಸ್ತಿತ್ವವನ್ನು ಪಡೆದು ಕೊಳ್ಳುತ್ತಾರೆ, ಜವಾಬ್ದಾರಿಯನ್ನು ಪಡೆದುಕೊಳ್ಳುತ್ತಾರೆ. ಇಬ್ಬರೂ ಸೇರಿ ಕುಟುಂಬ ಎಂಬ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ.
ಈ ಮನೆ ಮತ್ತು ಕುಟುಂಬ ನಿರ್ವಹಣೆಯಲ್ಲಿ ಎರಡು ರೀತಿಯ ಪಾತ್ರಗಳಿರುತ್ತವೆ.
ಒಂದು ನಾವು ಪ್ರಸಕ್ತ ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆಯಲ್ಲಿ ಎರಡು ರೀತಿಯ ಅಧಿಕಾರವನ್ನು ಹೊಂದಿದವರನ್ನು ಕಾಣುತ್ತೇವೆ. ಒಂದು ರಾಷ್ಟ್ರದ ಅಧ್ಯಕ್ಷ, ಇನ್ನೊಂದು ರಾಷ್ಟ್ರದ ಪ್ರಧಾನ ಮಂತ್ರಿ.
ಪವಿತ್ರ ಕುರ್‍ಆನಿನ ಆಶಯಗಳನ್ನು ಅಧ್ಯಯನ ಮಾಡಿದರೆ ಇದೇ ಅಂಶವನ್ನು ಮನೆಯಲ್ಲೂ ಕುಟುಂಬದಲ್ಲೂ ರೂಪಿಸಲು ಅದು ಕರೆ ಕೊಡುತ್ತದೆ. ತನ್ನ ದೈಹಿಕ ಸೃಷ್ಟಿ ಪ್ರಕ್ರಿಯೆಯ ಆಧಾರದಲ್ಲಿ ಮತ್ತು ತನ್ನ ಜವಾಬ್ದಾರಿಯ ನಿರ್ವಹಣೆಯ ನೆಲೆಯಲ್ಲಿ ಪತಿಗೆ (ಗಂಡು ಎಂಬ ನೆಲೆಯಲ್ಲಿ ಅಲ್ಲ) ಅದು ಕಾನೂನಿನ ರೂಪದಲ್ಲಿ ಅಧಿಕಾರ ಸ್ಥಾನಮಾನವನ್ನು ನೀಡಿದರೆ, ಹೇಗೆ ರಾಷ್ಟ್ರದ ಅಧ್ಯಕ್ಷರಿಗೆ ಪದವಿ ಇದೆಯೋ ಅದೇ ರೀತಿಯ ಸ್ಥಾನಮಾನವನ್ನು ನೀಡಿದೆ. ಅದೇ ಸಂದರ್ಭದಲ್ಲಿ ಮನೆಯ ವ್ಯವಸ್ಥೆಯ ಜವಾಬ್ದಾರಿ, ಕುಟುಂಬ ನಿರ್ವಹಣೆಯ
ಜವಾಬ್ದಾರಿಯ ಅಧಿಕಾರ ಪತ್ನಿಗೆ ನೀಡಿದೆ.
ಇದನ್ನೇ ಕುರ್‍ಆನ್ ಹೇಳಿದೆ, “ಅರ್ರಿಜಾಲು ಕವ್ವಾಮೂನ ಅಲನ್ನಿಸಾ” (ಪುರುಷರು ಮಹಿಳೆಯ ಮೇಲ್ವಿಚಾರಕರಾಗಿರುತ್ತಾರೆ.) ಈ ವ್ಯವಸ್ಥಿತ ಮನೆ ನಿರ್ಮಾಣಗೊಂಡ ನಂತರ ಯಾವುದೇ ಮಹಿಳೆ ಸಾಮಾಜಿಕವಾಗಿ ದುಡಿಯಲು ಅಥವಾ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಾದರೆ ಅವಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಇಸ್ಲಾಮ್ ನೀಡಿದೆ. ಅವಳು ವ್ಯಾಪಾರ, ದುಡಿಮೆ, ಉದ್ಯೋಗ ಮಾಡಬಹುದು. ತನಗಾಗಿ ಸ್ವತಂತ್ರ ಆದಾಯದ ಮೂಲವನ್ನು ವ್ಯವಸ್ಥೆಗೊಳಿಸಬಹುದು. ಯಾವುದನ್ನೆಲ್ಲ ಸಂಪಾದಿಸಿದ್ದಾಳೋ ಅದರ ಏಕಮಾತ್ರ ಒಡೆಯಳಾಗಿ ಅವಳಿಗೆ ಅದನ್ನು ಖರ್ಚು ಮಾಡಬಹುದು. ಈ ನಿಟ್ಟಿನಲ್ಲಿ ಇಸ್ಲಾಮ್ ಎಲ್ಲಿಯೂ ಅವಳಿಗೆ ತಡೆಯಾಗಲಿಲ್ಲ. ಆದರೆ ಒಂದು ವ್ಯತ್ಯಾಸ ಮಾಡಿದೆ. ಪುರುಷನಿಗೆ ಜೀವನಾಧಾರಕ್ಕಾಗಿ ಪರಿಶ್ರಮ ಮಾಡುವ ಜವಾಬ್ದಾರಿಯನ್ನು ನೀಡಿದೆ. ಇನ್ನು ಈ ಜವಾಬ್ದಾರಿಯಿಂದ ಯಾರಾದರೂ ನಿರ್ಲಕ್ಷ್ಯ, ಅಸಡ್ಡೆ, ಸೋಮಾರಿತನ ತೋರಿದರೆ ಅವನು ಕಾನೂನಿನ ಮುಂದೆ ವಿಚಾರಣೆಗೊಳಪಡುತ್ತಾನೆ. ಈ ಜವಾಬ್ದಾರಿಯನ್ನು ಬಯಸದಿದ್ದರೂ ತನ್ನ ಕುಟುಂಬ ನಿರ್ವಹಣೆಗಾಗಿ ಆತ ಮಾಡಿಯೇ ತೀರಬೇಕು. ಅದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಅವಕಾಶವೂ ಇಸ್ಲಾಮ್ ಅವನಿಗೆ ಕೊಟ್ಟಿಲ್ಲ. ತನ್ನ ಮನೆ ಮತ್ತು ಪತ್ನಿಯ ಬೇಕು-ಬೇಡಗಳು, ಮಕ್ಕಳ ಶಿಕ್ಷಣ, ಮದುವೆ, ರೋಗರುಜಿನ ಮುಂತಾದ ಎಲ್ಲದರ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳಬೇಕು. ಅದಕ್ಕಾಗಿ ಆತನಿಗೆ ಮೇಲ್ವಿಚಾರಕ ಸ್ಥಾನವನ್ನು ನೀಡಿದೆ. ಒಂದು ವೇಳೆ ಈ ಜವಾಬ್ದಾರಿಯನ್ನು ನಿರ್ವಹಿಸಲಿಕ್ಕೆ ಇಸ್ಲಾವಿೂ ಕಾನೂನು ಶಕ್ತಿಯ ಅಥವಾ ಬಲ ಪ್ರಯೋಗದ ಮೂಲಕ ಅವನನ್ನು ಕೆಲಸ ಕಾರ್ಯಗಳನ್ನು ಮಾಡಲು ನಿರ್ಬಂಧಿಸುವುದು.

ಇನ್ನು ಮಹಿಳೆ ತಾನು ದುಡಿಯುತ್ತೇನೆ ಎಂದು ಬಯಸುವುದಾದರೆ ದುಡಿಯಬಹುದು. ವ್ಯಾಪಾರ ಮಾಡಬಹುದು. ಇನ್ನು ನಾನು ಉದ್ಯೋಗ ಮಾಡುವುದಿಲ್ಲ, ವ್ಯಾಪಾರ ಮಾಡುವು ದಿಲ್ಲ ಮನೆಯಲ್ಲೇ ಇದ್ದು ತನ್ನ ತಾಯ್ತತನದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರೆ ಯಾವುದೇ ಕಾನೂನು ಅಧಿಕಾರ ಶಕ್ತಿಯು ಆಕೆಯನ್ನು ನಿರ್ಬಂಧಿಸುವಂತಿಲ್ಲ. ಅದರ ಆಯ್ಕೆಯ ಸ್ವಾತಂತ್ರ್ಯವನ್ನು ಆಕೆಗೇ ಬಿಟ್ಟುಬಿಟ್ಟಿದೆ. ಪುರುಷನಿಗೆ ಒಂದು ಹೆಚ್ಚಿನ ಜವಾಬ್ದಾರಿ ನೀಡಿ, ಆದೇಶಿಸಲಾಗಿದೆ. ಅದಕ್ಕೇ ಆತ ಮೇಲ್ವಿಚಾರಕನಾಗಿರುತ್ತಾನೆ.

ಮಹಿಳೆಗೆ ಆಕೆಯ ತಾಯತ್ತನ, ಮುಟ್ಟು, ಗರ್ಭಿಣಿಯ ಕಾಲಘಟ್ಟ ಹೀಗೆ ಪ್ರಕೃತಿಯನ್ನು ಮುಂದಿಟ್ಟು ಆಕೆಯನ್ನು ಈ ಜವಾಬ್ದಾರಿಯಿಂದ ಸ್ವತಂತ್ರಗೊಳಿಸಲಾಯಿತು. ಇನ್ನು ಮಹಿಳೆಗೂ ಪುರುಷನಂತೆಯೇ ಪ್ರಕೃತಿ ಇರುತ್ತಿದ್ದರೆ ಮಹಿಳೆಯ ಮೇಲೂ ದೇವನು ಈ ಆಜ್ಞೆಯನ್ನು ಹೊರಡಿಸಿ ಗೀಟು ಹಾಕಿದಂತೆ ಸಮಾನತೆ ಕಾಯ್ದುಕೊಳ್ಳುತ್ತಿದ್ದನು. ಎರಡು ಅಡಿ ಉದ್ದ ಇರುವ ಮನುಷ್ಯನಿಗೆ ಅವನ ಎತ್ತರಕ್ಕೆ ಯೋಗ್ಯವಾದ ಉಡುಪು ನೀಡಬೇಕು. ಒಂದು ಇಡ್ಲಿ ತಿನ್ನುವ ಸಾಮರ್ಥ್ಯ ಇರುವವನಿಗೆ ಒಂದು ಇಡ್ಲಿ ಇನ್ನು ಐದು ಇಡ್ಲಿ ತಿನ್ನುವ ಸಾಮರ್ಥ್ಯವಿರುವವನಿಗೆ ಅವನ ಸಾಮರ್ಥ್ಯದ ಆಹಾರ ನೀಡುವುದು. ಇಂತಹ ಸಮಾನತೆಯನ್ನು ಇಸ್ಲಾಮ್ ಕುಟುಂಬದಲ್ಲೂ ಜವಾಬ್ದಾರಿಯಲ್ಲೂ ಪ್ರಕೃತಿಯಲ್ಲೂ ಕಾಯ್ದುಕೊಳ್ಳುತ್ತದೆ. ನಾವಿದನ್ನು ಆಟೋಟಗಳಲ್ಲಿ ನೋಡುತ್ತೇವೆ. 50 ಕೆ.ಜಿ. ಇರುವವರ ಕುಸ್ತಿ ಪಂದ್ಯಾಟ, 60 ಕೆ.ಜಿ. ಇರುವವರ ಕುಸ್ತಿ ಪಂದ್ಯಾಟ, ಮಹಿಳೆ ಮಹಿಳೆಯರೊಂದಿಗೆ ಮಾತ್ರ ಸ್ಪರ್ಧಿಸುವ ಕ್ರೀಡೆಗಳು ಇವೆಲ್ಲವೂ ಉಚ್ಚ- ನೀಚತೆ ಅಥವಾ ಉನ್ನತ ಕೀಳು ಎಂಬ ಪರಿಕಲ್ಪನೆಯನ್ನು ಸೂಚಿಸುವುದಿಲ್ಲ. ಬದಲಾಗಿ ದೈಹಿಕ ಪ್ರಕೃತಿಗನುಸಾರವಾಗಿ ಸಮಾನತೆಯನ್ನು ಕಾಯ್ದುಕೊಳ್ಳಲಾಗುತ್ತದೆ. ಆದುದರಿಂದ ಮಹಿಳೆಯನ್ನು ಜವಾಬ್ದಾರಿಯಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೇಳಿ ಹೆಣ್ಣಿನ ಮೇಲೆ ಅನ್ಯಾಯ ದೌರ್ಜನ್ಯ ಮಾಡುವ ಮನೆಯವರೂ ಇದ್ದಾರೆ. ಅಂತಹ ವ್ಯಕ್ತಿಗಳು ಇಸ್ಲಾವಿೂ ಕಾನೂನಿನ ಮುಂದೆ ವಿಚಾರಣೆಗೊಳಪಡಬೇಕಾದವರಾಗಿದ್ದಾರೆ. ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವ ಹಕ್ಕು ಪತಿಗೆ ಎಷ್ಟಿದೆಯೋ, ತಂದೆಗೆಷ್ಟಿದೆಯೋ ಅದರಲ್ಲಿ ಅನ್ಯಾಯ, ಹಿಂಸೆ ದೌರ್ಜನ್ಯಗಳು ಸಂಭವಿಸಿದರೆ ನಂತರ ಸರಕಾರ ಖಾಝಿ ಮಧ್ಯೆ ಪ್ರವೇಶಿಸಿ ಅದನ್ನು ಶಕ್ತಿಯ ಮೂಲಕ ಸರಿ ಪಡಿಸುವುದು ಇಸ್ಲಾಮಿನ ಕಾನೂನಾಗಿದೆ. ಇಸ್ಲಾಮ್ ಎಲ್ಲೂ ಮಹಿಳೆಗೆ ಸಾಮಾಜಿಕ ಕ್ಷೇತ್ರ, ಚಟುವಟಿಕೆಗಳಿಂದ, ಪರಿಶ್ರಮಗಳಿಂದ ದೂರ ಇಟ್ಟ ಉದಾಹರಣೆ ಪ್ರವಾದಿ ಚರ್ಯೆಯಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ. ಈ ಹಕ್ಕು ಅಲ್ಲಾಹನಿಂದ ಪ್ರವಾದಿಯವರಿಂದ(ಸ) ನೀಡಿದ್ದಾಗಿದೆ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮಹಿಳೆಯ ಮೇಲೆ ಸಾಮಾಜಿಕ ಆರ್ಥಿಕ ಆದಾಯದ ಕಾನೂನಿ ಜವಾಬ್ದಾರಿಯನ್ನು ಹೇರಲಾಗಿಲ್ಲ. ಮಹಿಳೆ ಇದ್ದಕ್ಕಾಗಿ ವಿಚಾರಣೆಯನ್ನು ಎದುರಿಸಬೇಕ್ಕಿಲ್ಲ. ಪುರುಷ ಜವಾಬ್ದಾರಿಯಿಂದ ನುಣುಚಿ ಕೊಂಡರೆ ಅವನು ಕಾನೂನಿನ ಮೂಲಕವೂ ಅಪರಾಧಿಯಾಗಿರುತ್ತಾನೆ. ನಾಳೆ ಪರಲೋಕದಲ್ಲಿ ಅಲ್ಲಾಹನ ಮುಂದೆಯೂ ಅಪರಾಧಿ ಸ್ಥಾನದಲ್ಲಿ ನಿಂತು ವಿಚಾರಣೆಗೊಳಪಡುತ್ತಾನೆ. ಆದರೆ
ಮಹಿಳೆಗೆ ಈ ಎಲ್ಲ ಜಂಜಡಗಳಿಂದ ಮುಕ್ತಿ ನೀಡಲಾಗಿದೆ. ಇದನ್ನು ಒಂದು ರೀತಿಯಲ್ಲಿ ದೈವಿಕ ವಿೂಸಲಾತಿ (devine reservation) ಎಂದರೂ ತಪ್ಪಾಗಲಾರದು. ಆದ್ದರಿಂದ ಇಸ್ಲಾಮ್ ಮಾನವ ನಿರ್ಮಿತ ಸಮಾನತೆಯನ್ನು ಅರ್ಥಹೀನ ಮತ್ತು ಶೋಷಣೆಯ ಇನ್ನೊಂದು ಪ್ರತಿರೂಪ ಎಂದು ಭಾವಿಸುತ್ತದೆ. ಎಲ್ಲರಿಗೂ ಒಂದೇ ಲಾಠಿಯಿಂದ ಹೊಡೆಯಬೇಕು ಎಂಬ ಮಾನವ ನಿರ್ಮಿತ ಸಮಾನತೆಯನ್ನು ಇಸ್ಲಾಮ್ ವಿರೋಧಿಸುತ್ತದೆ.

ಇಸ್ಲಾಮಿನ ಪ್ರಥಮ ಮಹಿಳೆ ಖದೀಜಾರಿಗೆ ದೊಡ್ಡ ಮಟ್ಟದ ವ್ಯಾಪಾರವಿತ್ತು. ಪ್ರವಾದಿ ಮುಹಮ್ಮದ್‍ರು(ಸ) ಮದುವೆಗಿಂತ ಮುಂಚೆ ಖದೀಜಾರ ವ್ಯಾಪಾರದಲ್ಲಿ ನೌಕರಿಯನ್ನು ಪ್ರವಾದಿವರ್ಯರು(ಸ) ಮಾಡುತ್ತಿದ್ದರು. ಅವರು ಖದೀಜಾರ(ರ) ವ್ಯಾಪಾರದ ಮೇಲ್ನೋಟ ವಹಿಸಿ ದೂರ ದೂರಕ್ಕೆ ಪ್ರಯಾಣವನ್ನು ಕೈಗೊಂಡಿದ್ದರು. ಬಹಳ ದೊಡ್ಡ ವ್ಯಾಪಾರೀ ಮಹಿಳೆ ಎಂಬ ಗೌರವ ಖ್ಯಾತಿ ಖದೀಜರಿಗೆ(ರ) ಅರೇಬಿಯಾದಲ್ಲಿತ್ತು. ಪ್ರವಾದಿ(ಸ) ಸಂದೇಶ ಪ್ರಚಾರದ ಕಾರ್ಯ ಭಾರವನ್ನು ಕೈಗೆತ್ತಿಕೊಂಡು ಸಂದೇಶವಾಹಕರಾಗಿ ಜವಾಬ್ದಾರಿ ನಿರ್ವಹಿಸುವಾಗ ಪ್ರವಾದಿಯವರ(ಸ) ಆರಂಭ ಕಾಲದ ಎಲ್ಲ ಆರ್ಥಿಕ ಖರ್ಚು ವೆಚ್ಚಗಳನ್ನು ಅವರೇ ಭರಿಸುತ್ತಿದ್ದರು. ಅವರ ಸಂಪತ್ತಿನಿಂದ ಪ್ರವಾದಿಯವರು(ಸ) ತನ್ನ ಮಿಷನ್‍ಗಾಗಿ ಬಹಳಷ್ಟು ಪ್ರಯೋಜನ, ಸಹಾಯವನ್ನು ಪಡೆದಿದ್ದರು. ಇಸ್ಲಾಮಿನ ಜೀವಂತ ಸಮಾಜದಲ್ಲಿ ಪ್ರವಾದಿ ಮುಹಮ್ಮದ್‍ರವರ(ಸ) ಮರಣಾ ನಂತರವೂ ಬಹಳಷ್ಟು ಸಾಮಾಜಿಕ, ಅಭಿವೃದ್ಧಿ ಪರ ಕಾರ್ಯಗಳಲ್ಲಿ ತಮ್ಮ ತಮ್ಮ ಪಾತ್ರವನ್ನು ಮಹಿಳೆಯರು ನಿರ್ವಹಿಸಿದ್ದರು.

ಸಹಲ್ ಬಿನ್ ಸಅದ್(ರ) ಓರ್ವ ಮಹಿಳೆಯ ಕುರಿತು ವಿವರಿಸಿದ್ದಾರೆ. ಆ ಮಹಿಳೆಗೆ ತನ್ನದೇ ಆದ ಹೊಲವಿತ್ತು. ಅವರು ನೀರಿನ ನಾಲೆಗಳ ಸುತ್ತ ಬೀಟ್‍ರೋಟ್‍ಗಳನ್ನು ಬೆಳೆಸುತ್ತಿದ್ದರು. ಜುಮಾ ದಿವಸ ಹ. ಸಹಲ್ ಬಿನ್ ಸಅದ್ ಮತ್ತು ಇತರ ಸಹಾಬಿಗಳು ಅವರನ್ನು ಭೇಟಿಯಾಗಲು ಹೋದಾಗ ಅವರು ಬೀಟ್‍ರೋಟ್ ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿದ ಹಲ್ವಾವನ್ನು ಅವರಿಗೆ ತಿನ್ನಿಸುತ್ತಿದ್ದರು. (ಬುಖಾರಿ)
ಕೀಲ(ರ) ಎಂಬ ಸಹಾಬಿ ಮಹಿಳೆಯೋರ್ವರು ತನ್ನನ್ನು ಓರ್ವ ವ್ಯಾಪಾರಿಯ ರೂಪದಲ್ಲಿ ಪ್ರವಾದಿ(ಸ) ಅವರ ಮುಂದೆ ಪರಿಚಯ ಪಡಿಸಿ ಅವರಲ್ಲಿ ಕ್ರಯ ವಿಕ್ರಯದ ಬಗ್ಗೆ ಕೆಲವು ವಿಷಯಗಳನ್ನು ವಿಚಾರಿಸಿದರು. (ತಬಕಾತ್ ಇಬ್ನು ಸಅದ್) ಹ. ಉಮರ್‍ರ(ರ) ಖಿಲಾಫತ್ ಕಾಲದಲ್ಲಿ ಅಸ್ಮಾ ಬಿನ್ತಿ ಮುಖ್ಝಮರಿಗೆ(ರ) ಅವರ ಪುತ್ರ ಅಬ್ದುಲ್ಲಾ ಬಿನ್ ಅಬೀ ರಬೀಅ(ರ) ಯಮನ್‍ನಿಂದ ಸುಗಂಧ ದ್ರವ್ಯ ಕಳುಹಿಸುತ್ತಿದ್ದರು. ಅವರು ಅದರ ವ್ಯಾಪಾರ ಮಾಡುತ್ತಿದ್ದರು.

ಹ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಅವರ ಪತ್ನಿ ಕೈ ಕಸುಬನ್ನು ತಿಳಿದವರಾಗಿದ್ದರು. ಅವರು ತನ್ನ ಪತಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಪ್ರವಾದಿ ಸನ್ನಿಧಿಗೆ ಬಂದು ಹೇಳಿದರು, “ನಾನು ಓರ್ವ ಕೈ ಕಸುಬು ಬಲ್ಲ ಸ್ತ್ರೀ ಆಗಿರುವೆನು. ವಸ್ತುಗಳನ್ನು ತಯಾರಿಸಿ ಮಾರುತ್ತೇನೆ. ಆದರೆ ನನ್ನ ಪತಿ ಮತ್ತು ಮಕ್ಕಳಿಗೆ ಯಾವುದೇ ಆದಾಯ ಮೂಲ ಇಲ್ಲ. ನಾನು ಅವರಿಗಾಗಿ ಖರ್ಚು ಮಾಡಬಹುದೇ?” ಪ್ರವಾದಿ(ಸ) ಹೇಳಿದರು, “ಹೌದು ನೀನು ಖರ್ಚು ಮಾಡಬಹುದು. ನಿನಗೆ ಅದರ ಪುಣ್ಯ ಸಿಗುವುದು.” (ತಬಕಾತ್)

ಉಮರ್‍ರ(ರ) ಕಾಲದಲ್ಲಿ ಓರ್ವ ಮಹಿಳೆಗೆ ಮಾರುಕಟ್ಟೆ ಪರಿಶೀಲನೆ ಸಮಿತಿಯ ಮೇಲುಸ್ತುವಾರಿಯನ್ನು ನೀಡಿದ್ದರು. ಆದ್ದರಿಂದ ಇಸ್ಲಾವಿೂ ಸಮಾಜವನ್ನು ತಾವು ತಮ್ಮ ಅನುಭವ ಅಥವಾ ಸಮಕಾಲೀನ ಪರಿಸ್ಥಿತಿಗೆ, ಸಾಮಾಜಿಕ ವಾತಾವರಣ, ರಿವಾಜುಗಳಿಗೆ ಜೋಡಿಸಿ ನೋಡದಿರಿ. ಇಲ್ಲಿ ನಡೆಯುವ ದೌರ್ಜನ್ಯ, ಹಿಂಸೆ, ಹಕ್ಕುಗಳ ದಮನಕ್ಕೆ ಇಸ್ಲಾಮ್ ಜವಾಬ್ದಾರವಲ್ಲ. ಇಸ್ಲಾಂ ತನ್ನ ಸುವರ್ಣ ಕಾಲಘಟ್ಟಗಳಲ್ಲಿ ಈ ಎಲ್ಲ ಹಕ್ಕುಗಳನ್ನು ಮಹಿಳೆಗೆ ನೀಡಿದೆ.

ಲೇಖಕರು : ಅಬೂಕುತುಬ್

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *