ಹಜ್ಜ್

ಹಿಜರಿ ವರ್ಷದ ದುಲ್ ಹಜ್ಜ್ ತಿಂಗಳ ಪ್ರಥಮಾರ್ಧದಲ್ಲಿ ಮಕ್ಕಾದಲ್ಲಿ ನಿರ್ದಿಷ್ಟ ಕರ್ಮಗಳನ್ನು ಮಾಡಲೆಂದು ನಡೆಸುವ ತೀರ್ಥ ಯಾತ್ರೆಯನ್ನು ಇಸ್ಲಾಮಿನಲ್ಲಿ ಹಜ್ಜ್ ಎಂದು ಕರೆಯುತ್ತೇವೆ. ಪ್ರವಾದಿಗಳಲ್ಲಿ ಪ್ರಮುಖರಾದ ಇಬ್‍ರಾಹೀಮ್‍ರ(ಅ) ಕಾಲದಿಂದಲೇ (ಕ್ರಿ.ಪೂ.2000) ಹಜ್ಜ್ ಕರ್ಮ ನೆಲೆಯೂರಿದೆ. ಪ್ರವಾದಿ ಇಬ್‍ರಾಹೀಮ್‍ರು(ಅ) ಹಜ್ಜ್ ಕರ್ಮವನ್ನು ಪ್ರಾರಂಭಿಸಿದ್ದೆಂದು ಪವಿತ್ರ ಕುರ್ ಆನ್ ಸೂಚಿಸುತ್ತದೆ. ಕಅಬಾದ ಪುನರ್ ನಿರ್ಮಾಣ ಪೂರ್ತಿಗೊಂಡಾಗ ಅಲ್ಲಾಹನು ಅವರೊಡನೆ ಆದೇಶಿಸಿದನು “ಮತ್ತು ನೀವು ಹಜ್ಜ್ ಯಾತ್ರೆಗಾಗಿ ಸಾರ್ವತ್ರಿಕ ಕರೆ ನೀಡಿರಿ. ಅವರು ದೂರ ದೂರದ ಪ್ರದೇಶಗಳಿಂದೆಲ್ಲ ಕಾಲ್ನಡಿಗೆಯಿಂದಲೂ, ಒಂಟೆಗಳ ಮೇಲೆ ಸವಾರಿ ಮಾಡಿಕೊಂಡೂ ನಿಮ್ಮ ಬಳಿಗೆ ಬರುವಂತಾಗಲಿ”(ಪವಿತ್ರ ಕುರ್ ಆನ್-22:27).

404526_333690419986247_100000358745229_1108082_1820975745_n

ಜೀವನದಲ್ಲಿ ಒಂದು ಬಾರಿಯಾದರೂ ವಿಶ್ವಾಸಿಯು ಹಜ್ಜ್ ಕರ್ಮವನ್ನು ನಿರ್ವಹಿಸಬೇಕು. ಆರೋಗ್ಯವಿಲ್ಲದವರೂ, ಆವಶ್ಯಕತೆಯಷ್ಟು ಧನಾನುಕೂಲತೆಯಿಲ್ಲದವರೂ, ಪ್ರಯಾಣದ ಸೌಕರ್ಯವಿಲ್ಲದವರೂ ಇದಕ್ಕೆ ಹೊರತಾಗಿದ್ದಾರೆ. ಸಾಧ್ಯವಿರುವವರು ಒಂದಕ್ಕಿಂತ ಹೆಚ್ಚು ಬಾರಿ ಹಜ್ಜ್ ಕರ್ಮ ನಿರ್ವಹಿಸುವುದು ಪುಣ್ಯವಾಗಿ ಪರಿಗಣಿಸಲ್ಪಡುತ್ತದೆ. ಮಕ್ಕಾಕ್ಕೆ ತೆರಳಿ ಕಅಬಾ ಭವನವನ್ನು 7 ಸಲ ಪ್ರದಕ್ಷಿಣೆ ಬರುವುದು, ಕಅಬಾದ ಸಮೀಪವೇ ಇರುವ ಸಫಾ ಮರ್ವಾ ಬೆಟ್ಟಗಳ ಮಧ್ಯೆ 7 ಬಾರಿ ನಡೆಯುವುದು, ದುಲ್ ಹಜ್ಜ್ 8 ರಂದು ಕಅಬಾಕ್ಕೆ ಆರು ಕಿ.ಮೀ ದೂರದಲ್ಲಿರುವ ಮಿನಾದಲ್ಲಿ ತಂಗುವುದು, 9ನೇ ದಿನ ಹಗಲು ಅರಫಾ ಮೈದಾನಕ್ಕೆ ಹೋಗಿ ಪ್ರಾರ್ಥಿಸುವುದು, ಅಂದು ರಾತ್ರಿ ಅರಫಾ ಮತ್ತು ಮಿನಾಗಳ ನಡುವೆ ಇರುವ ಮುಝ್ದಲಿಫಾದಲ್ಲಿ ತಂಗುವುದು, ಮರುದಿನ ಮಿನಾಕ್ಕೆ ಮರಳಿ ಬಂದು ಜಮ್ರಾದಲ್ಲಿ ಕಲ್ಲೆಸೆಯುವುದು, ಎರಡು ಅಥವಾ ಮುರು ದಿವಸ ಮಿನಾದಲ್ಲಿಯೇ ತಂಗುವುದು, ಈ ನಡುವೆ ಬಲಿ ಕರ್ಮವನ್ನು ನೀಡುವುದು-ಇದು ಹಜ್ಜ್ ನಲ್ಲಿ ನಡೆಸುವ ಪ್ರಧಾನ ಕರ್ಮಗಳಾಗಿವೆ. ಹಜ್ಜ್ ನಂತೆಯೇ  ಉಮ್ರಾಗಳಲ್ಲಿಯೂ ಈ ಕರ್ಮ ನಿರ್ಬಂಧವಾಗುವುದು. ಆದರೆ ಉಮ್ರಾವನ್ನು ವರ್ಷದಲ್ಲಿ ಯಾವಾಗ ಬೇಕಾದರೂ ಮಾಡಬಹುದು. ಹಜ್ಜ್ ಗೆ ಹೋಲಿಸಿದರೆ ಉಮ್ರಾದ ಕ್ರಮಗಳು ಸರಳವಾಗಿವೆ. ಮಕ್ಕಾಕ್ಕೆ ಹೋಗಿ ಕಅಬಾಕ್ಕೆ 7 ಬಾರಿ ಪ್ರದಕ್ಷಿಣೆ ಬರುವುದು, ಸಫಾ ಮರ್ವಾ ನಡುವೆ ನಡೆಯುವುದು ಅಲ್ಲಿಗೆ ಉಮ್ರಾ ಪೂರ್ತಿಯಾಗುವುದ

295899_131358690304977_100002925409628_176239_1316200379_n

ಹಜ್ಜ್ ಉಮ್ರಾದ ಕರ್ಮಗಳು ಪ್ರತಿಯೊಂದೂ ದೇವನೊಂದಿಗಿರುವ ಭಕ್ತಿಯ, ಪ್ರೀತಿಯ, ಪೈಶಾಚಿಕ ಶಕ್ತಿಗಳ ವಿರುದ್ಧ ಹೋರಾಟದ, ದೇವನಿಗೆ ಆತ್ಮ ಸಮರ್ಪಣೆಯ ಪ್ರತೀಕಗಳಾಗಿವೆ ಮತ್ತು ಇಸ್ಲಾಮೀ ಇತಿಹಾಸದ ಘಟನೆಗಳ ಸ್ಮರಣೆಯಾಗಿದೆ. ಹಜ್ಜ್ ಕಾಲ ದೇಶಗಳಿಗೆ ಅತೀತವಾಗಿ ವಿಶ್ವಾಸ ಮತ್ತು ಆ ವಿಶ್ವಾಸದಲ್ಲಿ ತುಂಬಿ ಹೋದ ಧರ್ಮವ್ಯವಸ್ಥೆಯ ಅಂತಾರಾಷ್ಟ್ರೀಯ ಸಹೋದರತ್ವದ ದರ್ಶನವಾಗಿದೆ. ಅದು ಮುಸ್ಲಿಮರ ಜಾಗತಿಕ, ಆಧ್ಯಾತ್ಮಿಕ ಕೇಂದ್ರದಲ್ಲಿ ಸೇರುವ ವಾರ್ಷಿಕ ಸಮ್ಮೇಳನವಾಗಿದೆ. ಅರಫಾ ಸಂಗಮವು ಹಜ್ಜ್ ನ ಅತೀ ಪ್ರಧಾನ ಕರ್ಮವಾಗಿದೆ. ಲೋಕದ ವಿವಿಧ ಮುಲೆಗಳಿಂದ ಅಲ್ಲಿಗೆ ಬಂದು ತಲುಪುವ ಎಲ್ಲ ವಿಶ್ವಾಸಿಗಳು ದೇಶ, ಭಾಷೆ, ವರ್ಗ, ವರ್ಣ ವ್ಯತ್ಯಾಸಗಳನ್ನು ಮರೆತು ಇಲ್ಲಿ ಒಂದೇ ರೀತಿಯ ಸಮಾನ ವಸ್ತ್ರ ಧರಿಸಿ ಒಬ್ಬನೇ ದೇವನ ಮುಂದೆ ಕೈ ಚಾಚಿ ಪ್ರಾರ್ಥಿಸುತ್ತಾರೆ ಮತ್ತು ಒಂದೇ ನಾಯಕನ ಪ್ರವಚನವನ್ನು ಆಲಿಸುತ್ತಾರೆ. ಮುಸ್ಲಿಮ್ ಲೋಕವನ್ನು ಪರಸ್ಪರ ಪರಿಚಯಿಸುವುದರಲ್ಲಿ, ಏಕೀಕರಿಸುವುದರಲ್ಲಿ ಹಜ್ಜ್ ಬಹು ದೊಡ್ಡ ಪಾತ್ರ ವಹಿಸುತ್ತದೆ. ಹಜ್ಜ್ ಆಧ್ಯಾತ್ಮಿಕ ಉತ್ಕರ್ಷ, ಸಮಾನತೆ, ಸಹೋದರತೆಗಳನ್ನು ಬೆಳೆಸುವ ಕರ್ಮವಾಗಿದೆ.

One comment

  1. This book reveals some of the misconceptions about Islam and corrects a scientific manner based on derived from the Quran and Sunnah.

Leave a Reply

Your email address will not be published. Required fields are marked *