ವೈಯಕ್ತಿಕ ಶುಚಿತ್ವ ಮತ್ತು ಪ್ರವಾದಿ(ಸ)

@ ಆಯಿಶಾ ಸ್ಟೇಸಿ

ಕಳೆದೆರಡು ದಶಕಗಳಲ್ಲಿ ಹಲವಾರು ಸಾಂಕ್ರಾಮಿಕ ರೋಗಗಳ ಕುರಿತು ಸಂಶೋಧನೆಗಳು, ರೋಗಗಳನ್ನು ಗುರುತಿಸುವ ಸಾಹಸಗಳು ನಡೆಯುತ್ತಲೇ ಇವೆ. ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳ ಮೂಲಕ ನೀರು, ಗಾಳಿ ಹಾಗೂ ಆಹಾರದೊಂದಿಗೆ ಹರಡುವ ರೋಗಗಳ ಕುರಿತೂ ಇಂದು ಅಧ್ಯಯನಗಳು ಜಾರಿಯಲ್ಲಿವೆ.
ಸಾರ್ವಜನಿಕ ಹಿತಾಸಕ್ತಿಗಳಲ್ಲಿ ಪ್ರಾಥಮಿಕ ಶುಚಿತ್ವವನ್ನು ಪಾಲಿಸಬೇಕಾದ ಮನಸ್ಥಿತಿಗಳನ್ನು ನಿರ್ಮಿಸುವ ಬಹುದೊಡ್ಡ ಸವಾಲು ವೈದ್ಯಕೀಯ ರಂಗದೆದುರಿದೆ. 21ನೇ ಶತಮಾನದಲ್ಲಿ ಗುಲ್ಲೆಬ್ಬಿಸುತ್ತಿರುವ ಸಾಂಕ್ರಾಮಿಕ ರೋಗಗಳಿಂದ ಹೇಗೆ ಸಂರಕ್ಷಿಸಿ ಕೊಳ್ಳಬೇಕೆಂಬುದನ್ನು 1,400 ವರ್ಷಗಳ ಹಿಂದೆ ಪ್ರವಾದಿಯವರು(ಸ) ಕಲಿಸಿಕೊಟ್ಟ ವೈಯಕ್ತಿಕ ಶುಚಿತ್ವದ ಅಂಶಗಳನ್ನು ಅವರ ಜೀವನ ಚರ್ಯೆಯಿಂದ ಕಾಣಬಹುದು.

ಕೆಮ್ಮು ಮತ್ತು ಸೀನು
2014ರಲ್ಲಿ ಎಮ್‍ಐಟಿ(Massachusetts Institute Of Technology)ಯು ಕೆಮ್ಮುವಾಗ ಮತ್ತು ಸೀನಿದಾಗ ಅನಿಲಗಳು ಉತ್ಪತ್ತಿಯಾಗುತ್ತದೆಂಬುದನ್ನು ವರದಿ ಮಾಡಿತು. ಕೆಮ್ಮುವಾಗ ಮತ್ತು ಸೀನುವಾಗ ದೇಹದಿಂದ ಹೊರ ಹಾಕಲ್ಪಡುವ ಗಾಳಿಯ ವೇಗವು ಹೆಚ್ಚಿರುತ್ತದೆಂಬುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಹೊರ ಹೋಗುವ ಅನಿಲದ ಪರಿಣಾಮವು ಅತ್ಯಧಿಕವಾಗಿದ್ದು, ಇದು ವಾತಾವರಣದಲ್ಲಿ ಹೆಚ್ಚು ಕಾಲ ನಿಲ್ಲುವುದು. ಸಾಮಾನ್ಯ ಸ್ಥಿತಿಯಲ್ಲಿದ್ದಾಗ ಹೊರಹಾಕಲ್ಪಡುವ ಮತ್ತು ಚಲಿಸುವ ಅನಿಲದ ಪ್ರಮಾಣವು ಕೆಮ್ಮಿದಾಗ ಮತ್ತು ಸೀನಿದಾಗ 5 ರಿಂದ 200 ಮೀಟರ್ ದೂರದವರೆಗೆ ಚಲಿಸಬಲ್ಲದು. ಕೆಮ್ಮು ಮತ್ತು ಸೀನಿನ ಮೂಲಕ ಬಾಕ್ಟೀರಿಯಾ- ವೈರಸ್‍ಗಳು ವಾತಾವರಣದಲ್ಲಿ ಉಳಿದುಕೊಳ್ಳುವವೆಂಬ ಸತ್ಯವು ನಮಗೆಲ್ಲರಿಗೂ ತಿಳಿದಿದೆ. ಆದ್ದರಿಂದ ನಾವು ಕೆಮ್ಮುವಾಗ ಅಥವಾ ಸೀನುವಾಗ ಬಟ್ಟೆಯನ್ನೋ ಕೈಯನ್ನೋ ಬಾಯಿಯ ಹತ್ತಿರಕ್ಕೆ ಹಿಡಿಯಬೇಕೆಂದು ಸಾಮಾನ್ಯವಾಗಿ ತಿಳಿಸಲಾಗುತ್ತದೆ. ಆದ್ದರಿಂದ ಶೀತಭಾದೆಯು ಹೆಚ್ಚಾದಾಗ ನಾವು ನಮ್ಮ ಮುಖವನ್ನು ಬಟ್ಟೆಯ ಸಹಾಯದಿಂದ ನಿಯಂತ್ರಿಸಿಕೊಳ್ಳುತ್ತೇವೆ.
ಪ್ರವಾದಿಯವರು(ಸ) ವೈಯಕ್ತಿಕ ಶುಚಿತ್ವದತ್ತ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಅವರು ಕಲಿಸಿಕೊಟ್ಟ ಮಾದರಿಯು ಆಧ್ಯಾತ್ಮಿಕ ಮತ್ತು ದೈಹಿಕ ಶುಚಿತ್ವಗಳೆರಡಕ್ಕೂ ಅತ್ಯುತ್ತಮ ಮಾದರಿಯಾಗಿದೆ. ಅಲ್ಲಾಹನು ಕುರ್‍ಆನಿನಲ್ಲಿ ಈ ರೀತಿ ಆಜ್ಞಾಪಿಸಿರುವನು.
“….ನಿಶ್ಚಯವಾಗಿಯೂ ಪಾಪಗಳಿಂದ ಪಶ್ಚಾತ್ತಾಪ ಪಡುವವರನ್ನೂ, ಶುದ್ಧಾಚಾರವಿರಿಸುವವರನ್ನೂ ಅಲ್ಲಾಹನು ಇಷ್ಟಪಡುತ್ತಾನೆ.” (2:222)
ಮತ್ತು ಪ್ರವಾದಿಯವರು(ಸ) “ಶುಚಿತ್ವವು ಸತ್ಯವಿಶ್ವಾಸ ಅರ್ಧಾಂಶವಾಗಿದೆ” ಎಂದು ಕಲಿಸಿಕೊಟ್ಟಿರುವರು. ಪ್ರವಾದಿಯವರು(ಸ) ಸೀನುವಾಗ ಮತ್ತು ಕೆಮ್ಮುವಾಗ ತಮ್ಮ ಮುಖವನ್ನು ಮುಚ್ಚಿಕೊಳ್ಳಲು ಆಜ್ಞಾಪಿಸಿರುವುದನ್ನು ಕಾಣಬಹುದು.

ಕೈ ತೊಳೆಯುವಿಕೆ (ಕೈಗಳ ಶುಚಿತ್ವ)
ಇಸ್ಲಾಮನ್ನು ಅನುಸರಿಸುವ ವ್ಯಕ್ತಿಯು ಸೀನುವಾಗ ಮತ್ತು ಕೆಮ್ಮುವಾಗ ಮುಖದ ಮೇಲೆ ಬಟ್ಟೆಯನ್ನೋ ಕರವಸ್ತ್ರವನ್ನೋ ಅಥವಾ ಟಿಶ್ಯೂಗಳನ್ನೊ ಉಪಯೋಗಿಸುತ್ತಾನೆ. ಮಾತ್ರವಲ್ಲ, ತಮ್ಮ ಕೈಗಳನ್ನು ಅಡ್ಡಗಟ್ಟಿ ಅವುಗಳನ್ನು ನಿರ್ವಹಿಸುವುದೂ ಕೂಡಾ ಸ್ವೀಕಾರ್ಹವಾದುದಾಗಿದೆ. ಪ್ರವಾದಿಯವರು(ಸ) ತಮ್ಮ ಅನುಯಾಯಿಗಳಿಗೆ ನಮಾಝ್‍ಗೆ ಮುನ್ನ, ತಿನ್ನುವ ಮೊದಲು ಮತ್ತು ತಿಂದಾದ ನಂತರ, ಮುಂಜಾನೆ ನಿದ್ದೆಯಿಂದೆದ್ದಾಗ ಕೈಗಳನ್ನು ತೊಳೆಯುವಂತೆ ಸಲಹೆಯನ್ನಿತ್ತಿರುವುದನ್ನು ಕಾಣಬಹುದು.
ನೈರ್ಮಲ್ಯಕರ ಗುಣಗಳನ್ನು ಅಂಗ ಸ್ನಾನ (ವುಝೂ) ಮಾಡುವಿಕೆಯ ಮೂಲಕ ಪಾಲಿಸಬೇಕೆಂದು ಪ್ರವಾದಿಯವರು(ಸ) ಕಲಿಸಿ ಕೊಟ್ಟಿರುವರು. ದಿನಕೈದು ಬಾರಿ ಪ್ರತಿಯೊಬ್ಬ ಮುಸ್ಲಿಮನು ಅಂಗಸ್ನಾನ (ವುಝೂ) ಮಾಡಿಯೇ ನಮಾಝ್ ನಿರ್ವಹಿಸಬೇಕಾದುದು ಕಡ್ಡಾಯವಾಗಿದೆ. ಅಂಗ ಸ್ನಾನದಲ್ಲಿ ಮೊದಲು ಕೈಗಳನ್ನು ಶುಚಿಗೊಳಿಸಿ, ಬಾಯಿ, ಮುಖ, ಮೊಣಕೈ ವರೆಗೆ ಕೈಗಳನ್ನು, ತಲೆ, ಕಿವಿ ಮತ್ತು ಕಾಲುಗಳನ್ನು ಶುಚಿಗೊಳಿಸಲಾಗುತ್ತದೆ. ಇವುಗಳು ಮಾನವರಿಗಿಂದು ವೈಯಕ್ತಿಕ ಸ್ವಚ್ಛತೆಗೆ ಕಲಿಸಿ ಕೊಡಲಾಗುತ್ತಿರುವ ಶುಚಿತ್ವದ ಪ್ರಾಥಮಿಕ ಆಯಾಮಗಳಾಗಿ ಗಣಿಸಲ್ಪಡುತ್ತವೆ.
ಬಾಯಿ ಮತ್ತು ಮೂಗಿನ ಮೂಲಕ ಬ್ಯಾಕ್ಟೀರಿಯ ವೈರಸ್‍ಗಳ ದಾಳಿಯಿಂದಾಗಿ ಸಾಂಕ್ರಾಮಿಕ ರೋಗಗಳು ಬಾಧಿಸುತ್ತವೆ. ಮಾತ್ರವಲ್ಲ ಕೈಗಳನ್ನು ತೊಳೆಯದೇ ಆಹಾರವನ್ನು ಸೇವಿಸುವಿಕೆಯು ಇತರರಿಗೂ ರೋಗಗಳನ್ನು ಹಂಚಲು ಹೊರಟ ಪ್ರಕ್ರಿಯೆಯಾಗಿ ಗುರುತಿಸಲ್ಪಡುತ್ತದೆ ಮತ್ತು ಇದೊಂದು ಸಭ್ಯತೆಯ ಲಕ್ಷಣವಲ್ಲವೆಂದು ಪರಿಗಣಿಸಲಾಗುತ್ತದೆ. ಶೌಚಾಲಯವನ್ನು ಬಳಸಿದ ನಂತರ ಕೈಗಳನ್ನು ಶುಚಿಗೊಳಿಸದೇ ಆಹಾರ ವಸ್ತುಗಳನ್ನು ಸ್ಪರ್ಶಿಸಿದಲ್ಲಿ ಖಂಡಿತವಾಗಿಯೂ ಇತರರಿಗೆ ಸಾಂಕ್ರಾಮಿಕ ಬಾಧೆಯನ್ನು ಹರಡಿದಂತೆಯೇ ಸರಿ.
ಗಾಳಿಯಲ್ಲಿರುವ ಬ್ಯಾಕ್ಟೀರಿಯ-ವೈರಸ್‍ಗಳ ಪ್ರಮಾಣ ಹಾಗೂ ನಮ್ಮ ಬಾಯಿ-ಮೂಗುಗಳಲ್ಲಿರುವ ಬ್ಯಾಕ್ಟೀರಿಯ ವೈರಸ್‍ಗಳ ಪ್ರಮಾಣವು ಅಧಿಕವಾಗಿರುತ್ತದೆ. ಒಂದು ವೇಳೆ ಕೈಗಳನ್ನು ಶುಚಿಗೊಳಿಸದೆ ಇದ್ದಲ್ಲಿ ಅವುಗಳ ಭಾದೆಯು ಖಂಡಿತವಾಗಿಯೂ ಅರಿವಿಗೆ ಬರುವುದು.
ಆದ್ದರಿಂದ ವೈಯಕ್ತಿಕ ಶುಚಿತ್ವದಲ್ಲಿ ರೋಗ ನಿರೋಧಕವಾಗಿ ಕೈಗಳನ್ನು ತೊಳೆಯುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕಾದುದು ಅನಿವಾರ್ಯ.
ಪ್ರವಾದಿಯವರು(ಸ) ಅವರ ಅನುಯಾಯಿಗಳಿಗೆ ದಿನಕೈದು ಬಾರಿ ನಮಾಝ್ ಮಾಡುವ ಸಮಯದಲ್ಲಿ ನಿರ್ವಹಿಸುವ ಅಂಗಸ್ನಾನವಲ್ಲದೇ ಸಂದರ್ಭಗಳಿಗನುಗುಣವಾಗಿ ಕೈಗಳನ್ನು ಶುಚಿಗೊಳಿಸಲು ಆಜ್ಞಾಪಿಸಿರುವರು. ಅವರು ಕಲಿಸಿಕೊಟ್ಟ ಶುಚಿತ್ವ ಕ್ರಮಗಳನ್ನು ಇಂದಿನ ಆರೋಗ್ಯ ಸಲಹಾ ಕೇಂದ್ರಗಳು ಜಗತ್ತಿನಾದ್ಯಂತ ಪಾಲಿಸುತ್ತಿವೆ. ಪ್ರವಾದಿಯವರು(ಸ) ಎದ್ದ ಕೂಡಲೇ ಕೈಗಳನ್ನು ತೊಳೆಯದೇ ಯಾವುದೇ ವಸ್ತುಗಳನ್ನು ಮುಟ್ಟಬಾರದೆಂದು ಆಜ್ಞಾಪಿಸಿರುವರು. ಕೈ ತೊಳೆಯದೇ ವಸ್ತುಗಳನ್ನು ಹಿಡಿಯುವುದರಿಂದ ಅವುಗಳು ಬ್ಯಾಕ್ಟೀರಿಯ-ವೈರಸ್‍ಗಳ ದಾಸ್ತಾನಾಗಿ ಮಾರ್ಪಡುವವು. ಪ್ರವಾದಿಯವರು(ಸ) ತಿನ್ನುವ ಮುನ್ನ ಮತ್ತು ನಂತರ ಕೈ ತೊಳೆಯಲು ಅದೇ ರೀತಿ ಶೌಚಾಲಯ ಉಪಯೋಗಿಸಿದ ನಂತರ ಕೈ ತೊಳೆಯಲು ಆಜ್ಞಾಪಿಸಿರುವುದನ್ನು ಹದೀಸ್‍ಗಳಲ್ಲಿ ಕಾಣಬಹುದಾಗಿದೆ. ಈ ಕ್ರಮವು ಬಾಹ್ಯವಾಗಿ ಹರಡುವ ರೋಗಗಳಿಗೆ ತಡೆಯನ್ನು ನಿರ್ಮಿಸುವಲ್ಲಿ ಸಫಲವಾಗುತ್ತವೆ.

ಉಸಿರಾಟ ವ್ಯವಸ್ಥೆ
ಪ್ರತಿದಿನ ನೀರನ್ನು ಮೂಗಿಗೇರಿಸಿ ಅದನ್ನು ಹೊರಬಿಡುವ ಆಚರಣೆಯನ್ನು ಮುಸ್ಲಿಮರು ಪಾಲಿಸುತ್ತಾರೆ. ಪ್ರವಾದಿಯವರು(ಸ) ಮುಂಜಾನೆ ಎದ್ದ ಕೂಡಲೇ ಈ ಕ್ರಮವನ್ನು ಪಾಲಿಸಲು ಸಲಹೆಯನ್ನಿತ್ತಿರುವರು. ಈ ಕ್ರಮವನ್ನು 2-3 ಬಾರಿ ಮಾಡಲಾಗುತ್ತದೆ. ಇದರಿಂದಾಗಿ ಮೂಗಿನ ಹೊಳ್ಳೆಗಳು ಶುಚಿಗೊಳ್ಳುವುದಲ್ಲದೇ ನೆಗಡಿ, ಶೀತ ಭಾದೆಗೆ, ಉಸಿರಾಟ ತೊಂದರೆಯನ್ನು ಅನುಭವಿಸುವವರಿಗೆ, ಸೋರುವ ಮೂಗುಗಳಿಗೆ, ಅಸ್ತಮಾ ಮತ್ತು ಇನ್ನಿತರ ಉಸಿರಾಟ ತೊಂದರೆಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ.
ಮೂಗಿನ ಮೂಲಕ ಉಸಿರಾಡುವಿಕೆಯು ಗಾಳಿಯನ್ನು ಶ್ವಾಸಕೋಶಗಳಿಗೆ ತಲುಪಿಸುತ್ತದೆ. ಸರಿಯಾದ ರೀತಿಯ ಶುಚಿತ್ವವನ್ನು ಪಾಲಿಸಿದಲ್ಲಿ 100 ಶೇಕಡಾ ಉಸಿರಾಟದ ತೊಂದರೆಗಳನ್ನು ನಿಯಂತ್ರಿಸಲು ಸಾಧ್ಯವಿದೆ. ನಿರಂತರವಾಗಿ ನಮ್ಮ ದೇಹವನ್ನು ಶುಚಿಗೊಳಿಸುವುದು ಮತ್ತು ಬಾಹ್ಯ ಅಂಗಾಂಗಗಳೊಂದಿಗೆ ಗುಪ್ತ ಅಂಗಾಂಗಗಳ ಸ್ವಚ್ಛತೆಯನ್ನು ಪಾಲಿಸುವುದು ನಮ್ಮನ್ನು ಗಾಳಿ, ನೀರು, ಆಹಾರ, ಧೂಳು ಇತ್ಯಾದಿ ಮೂಲಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ಸಂರಕ್ಷಿಸುತ್ತದೆ.

ದಂತ ಶುಚಿತ್ವ
ವಸಡುಗಳ ತೊಂದರೆಗಳಿರುವವರಿಗೆ ಹೃದ್ರೋಗ ಮತ್ತು ಹೃದಯ ಸ್ಥಂಭನದ ಸಮಸ್ಯೆಗಳು ಉಂಟಾಗಬಹುದೆಂದು ಇತ್ತೀಚೆಗಿನ ಅಧ್ಯಯನಗಳು ತಿಳಿಯ ಪಡಿಸಿವೆ. ಜನರು ಬಾಯಿಯ ಶುಚಿತ್ವವನ್ನು ಪಾಲಿಸದಿದ್ದಲ್ಲಿ ಹೃದಯ ರೋಗಗಳಿಗೆ ತುತ್ತಾಗುವರೆಂಬುದರ ಕುರಿತು ಹಲವಾರು ವರದಿಗಳು ಪ್ರಕಟಗೊಂಡಿವೆ. ಧೂಮಪಾನ, ಅಪೌಷ್ಟಿಕಾಂಶದ ಕೊರತೆಗಳಲ್ಲದೇ ಬಾಹ್ಯ ಶುಚಿತ್ವಕ್ಕೆ ಪ್ರಾಮುಖ್ಯತೆ ನೀಡದವರೂ ಕೂಡಾ ಈ ರೋಗಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಬಾಯಿಯ ಮೂಲಕ ಪ್ರವೇಶಿಸುವ ಬ್ಯಾಕ್ಟೀರಿಯಗಳು ಇಡೀ ದೇಹವನ್ನಾವರಿಸಿ ದೈಹಿಕ ನಿಶ್ಶಕ್ತಿಗೂ ರೋಗಗಳಿಗೂ ದಾರಿ ಮಾಡಿಕೊಡುವುದು ಮತ್ತು ಇದು ಹೃದಯ ರೋಗಗಳಿಗೆ, ಸಂಧಿವಾತ ರೋಗಗಳಿಗೆ ಹಾಗೂ 2 ರೀತಿಯ ಮಧುಮೇಹ ಖಾಯಿಲೆಗಳಿಗೆ ದಾರಿ ಮಾಡಿಕೊಡುವುದೆಂದು ತಿಳಿಸಲಾಗಿದೆ.
ಪ್ರವಾದಿಯವರು(ಸ) ದಂತಗಳನ್ನು ಶುಚಿಗೊಳಿಸುವುದರ ಕುರಿತು ಅತಿ ಹೆಚ್ಚು ಪ್ರಾಮುಖ್ಯತೆ ನೀಡಿರುವರು. ಪ್ರವಾದಿವರ್ಯರು(ಸ) ತಮ್ಮ ಅನುಯಾಯಿಗಳಿಗೆ ಮಿಸ್ವಾಕ್ ಬಳಸಲು, ಬಾಯಿಯನ್ನು ಸ್ವಚ್ಛವಾಗಿಡಲು ಆಜ್ಞಾಪಿಸಿದ್ದರು. ಪ್ರವಾದಿಯವರು(ಸ) “ದಂತ ಮಜ್ಜನದಿಂದ ಬಾಯಿ ಶುದ್ಧಗೊಳ್ಳುತ್ತದೆ, ಕ್ರಿಮಿಗಳು ನಾಶವಾಗುತ್ತವೆ, ಅಲ್ಲಾಹನ ಸಂಪ್ರೀತಿ ಪ್ರಾಪ್ತವಾಗುತ್ತದೆ ಅಥವಾ ಅದರಿಂದ ದೃಷ್ಟಿಯು ತೀಕ್ಷ್ಣವಾಗುತ್ತದೆ” ಎಂದು ಹೇಳಿರುವರು. ಒಂದು ವೇಳೆ ಸತ್ಯ ವಿಶ್ವಾಸಿಗಳಿಗೆ ಪ್ರತಿ ನಮಾಝ್‍ಗೆ ಮುಂಚಿತವಾಗಿ ಹಲ್ಲುಜ್ಜಲು ಆಜ್ಞಾಪಿಸುತ್ತಿದ್ದೆ. ಆದರೆ ಅದು ಹೊರೆಯಾಗಬಾರದೆಂಬ ಕಾರಣಕ್ಕಾಗಿ ಕಡ್ಡಾಯಗೊಳಿಸಲಾಗಿಲ್ಲ ಎನ್ನುವ ಕುರಿತು ದಂತ ಮಜ್ಜನದ ಪ್ರಯೋಜನಗಳು ತಿಳಿದಿದ್ದರೆ ಖಂಡಿವಾಗಿಯೂ ಜನರು ಅದನ್ನು ಅನುಸರಿಸುವರೆಂಬುದರ ಕುರಿತು ಪ್ರವಾದಿಯವರು(ಸ) ಹೇಳಿರುವುದಾಗಿ ಉಲ್ಲೇಖಗಳಿವೆ.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಜರ್ನಲ್ ಪ್ರಕಾರ ವಿಸ್ವಾಕ್ ಮಾಡುವ ಕ್ರಮವು ಬ್ಯಾಕ್ಟೀರಿಯ ನಿರೋಧಕವಾಗಿ ಕೆಲಸ ಮಾಡುವುದೆಂದು ತಿಳಿಸಿದೆ. ಮಾತ್ರವಲ್ಲ, ಈ ಕ್ರಮವು ಒಸಡುಗಳ ಆರೋಗ್ಯಕ್ಕೆ (ಬಾಯಿ ಶುಚಿಗೊಳಿಸುವಿಕೆಯು) ಉತ್ತಮವಾದುದೆಂದು ತಿಳಿಸಿದೆ. ಹಲ್ಲುಗಳ ಶುಚಿತ್ವಕ್ಕಾಗಿ ಬ್ರಶ್ ಉಪಯೋಗಿಸುವ ಕ್ರಮವು ಹಲ್ಲುಗಳ ಮೇಲ್ಪದರ ಹಾನಿಗೂ, ಲಾಲಾರಸದ ಉತ್ಪಾದನೆಯ ಮೇಲೆ ಅಡ್ಡ ಪರಿಣಾಮ ಬೀರುವುದೆಂದು ತಿಳಿಸಿದೆ.
21ನೇ ಶತಮಾನದ ಆರೋಗ್ಯ ನೈರ್ಮಲ್ಯ ಆಚರಣೆಗಳು ಪ್ರವಾದಿ(ಸ)ರು ಕಲಿಸಿಕೊಟ್ಟ ಇಸ್ಲಾವಿೂ ಶಿಷ್ಟಾಚಾರಗಳೊಂದಿಗೆ ಬಲವಾದ ಸಂಬಂಧವನ್ನಿಟ್ಟುಕೊಂಡಿರುವುದನ್ನು ಕಾಣಬಹುದು. 1,400 ವರ್ಷಗಳ ಹಿಂದೆ ಬೋಧಿಸಲ್ಪಟ್ಟ ಈ ಕ್ರಮಗಳು 21ನೇ ಶತಮಾನಕ್ಕೂ ಉಪಯುಕ್ತವಾಗಿವೆ.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *