ಲವ್ ಜಿಹಾದ್ ಎಂಬ ಬೆದರು ಗೊಂಬೆ


ಶೇಕ್ ಮುಹಮ್ಮದ್ ಕೆ.
ಲವ್ ಜಿಹಾದ್ ಹಾಗೂ ಮತಾಂತರದ ಕುರಿತು ನಿರಂತರ ಚರ್ಚೆಗಳು ನಡೆಯುತ್ತಲೇ ಇದೆ. ಸುಶಕ್ತವಾದ ಪ್ರಚಾರಗಳಿಂದ ಸತ್ಯವನ್ನು ಅಪ್ರಸ್ತುತಗೊಳಿಸಬಹುದೆಂಬ ನಿಟ್ಟಿನಲ್ಲಿ ಪ್ರಯತ್ನಗಳು ಸಾಗುತ್ತಿದೆ. ಇದು ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿದರೆ ಅದು ಸತ್ಯವಾಗುತ್ತದೆಂಬ ಗೋಬಲ್ಸ್ ನ ತಂತ್ರವಾಗಿದೆ.
ಒಂದೆಡೆ ಇಸ್ಲಾಮ್ ಮಹಿಳೆಯರ ಸ್ಥಾನಮಾನ ಹಕ್ಕುಗಳನ್ನು ಕಸಿಯುತ್ತದೆಂದೂ ನಾಲ್ಕು ಗೋಡೆಯೊಳಗೆ ಕೂಡಿ ಹಾಕಿದೆಯೆಂದು ಆರೋಪಿಸುತ್ತಾರೆ. ಮುಸ್ಲಿಮರು ಬೇಕಾಬಿಟ್ಟಿ ಪತ್ನಿಯರಿಗೆ ತಲಾಕ್ ನೀಡುವವರೆಂದೂ ಮೂರು ನಾಲ್ಕು ಮಹಿಳೆಯರನ್ನು ಮದುವೆಯಾಗಿ ಅಡುಗೆ ಮನೆಯಲ್ಲಿ ಕೂಡಿ ಹಾಕಲಾಗುತ್ತದೆಂಬ ಪ್ರಚಾರವೂ ನಡೆಸುತ್ತಾರೆ. ಈಗ ಐಸಿಸ್‍ನಲ್ಲಿ ಸೇರಿಸಿಕೊಲ್ಲಲು ಕರೆದುಕೊಂಡು ಹೋಗಲಾಗುತ್ತದೆಯೆಂಬ ಆರೋಪವೂ ಬಲವಾಗಿದೆ. ಅಂತಾದರೆ ತಮ್ಮನ್ನು ಗುಲಾಮರನ್ನಾಗಿ ಮಾಡಿ, ವಂಚಿಸುವ, ಕೊಲ್ಲಲು ಕೊಡುವ ಪುರುಷರನ್ನು ವಿವಾಹವಾಗಲು ಶಿಕ್ಷಣ ಸಂಪನ್ನರಾದ ಯುವತಿಯರು ಸಿದ್ಧರಾಗುವರೇ? ಇಂತಹ ಸುಳ್ಳು ಪ್ರಚಾರಗಳನ್ನು ನಡೆಸುವ ಫ್ಯಾಸಿಸ್ಟ್ ಶಕ್ತಿಗಳು ನಿಜಾರ್ಥದಲ್ಲಿ ಹಿಂದೂ ಸಹೋದರಿಯರನ್ನು ಅಪಮಾನಿಸುತ್ತಿದೆ. ಅವರಿಗೆ ಸ್ವಾತಂತ್ರ್ಯ ಹಾಗೂ ವ್ಯಕ್ತಿತ್ವದ ಕುರಿತು ಆಲೋಚನೆಗಳಿಲ್ಲದ ಮಂದ ಬುದ್ಧಿಯರೆಂದು ಆರೋಪಿಸುತ್ತಲೂ ಇದೆ.
ಸ್ತ್ರೀಯರು ಇಸ್ಲಾಮ್ ಸ್ವೀಕರಿಸುವುದು ಲವ್ ಜಿಹಾದ್ ಕಾರಣದಿಂದ ಎಂಬುದು ನಿಜವಾದರೆ ಮತಾಂತರವು ಹೆಚ್ಚಾಗಿ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಅಮೇರಿಕಾದಲ್ಲಿ ವರ್ಷಕ್ಕೆ 25,000 ಮಂದಿ, ಬ್ರಿಟನ್‍ನಲ್ಲಿ 15,000, ಸ್ಪೇನ್‍ನಲ್ಲಿ 20,000 ಮಂದಿಯೂ ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ. ಇಸ್ರೇಲ್‍ನಲ್ಲೂ ಮುಸ್ಲಿಮರಾಗುವುದು ಅಪರೂಪವಲ್ಲ. ಅಮೇರಿಕಾದಲ್ಲಿ ಇಸ್ಲಾಮ್ ಸ್ವೀಕರಿಸುವವರಲ್ಲಿ 70% ಮಹಿಳೆಯರು. ಅದೇ ರೀತಿ ಬ್ರಿಟನ್‍ನಲ್ಲಿ 75% ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ನಾಲ್ಕರಲ್ಲಿ ಮೂರು ಹಾಗೂ ಮೂರರಲ್ಲಿ ಎರಡು ಮಹಿಳೆಯರೇ ಇಸ್ಲಾಮ್ ಸ್ವೀಕರಿಸುತ್ತಿದ್ದಾರೆ.
ಸಮಾಜದಲ್ಲಿನ ಗಣ್ಯ ವ್ಯಕ್ತಿಗಳೂ ಇವರಲ್ಲಿದ್ದಾರೆ. ವಿಶ್ವ ಪ್ರಸಿದ್ಧ ಪತ್ರಕರ್ತೆ ಇವಾನ್ ರೆಡ್ಲಿ, ಬ್ರಿಟನ್‍ನ ಮಾಜಿ ಪ್ರಧಾನಿ ಟೋನಿ ಬ್ಲೇರ್‍ರ ಪತ್ನಿಯ ಸಹೋದರಿ, ಎಂ.ಟಿ.ವಿ. ನಿರೂಪಕ ಕ್ರಿಸ್ಟೀಬ ಬೆಕರ್‍ರಂತವರೂ ಇವರಲ್ಲಿದ್ದಾರೆ.
ಇಸ್ಲಾಮ್ ಮಹಿಳೆಯರಿಗೆ ನೀಡುವ ಉನ್ನತ ಸ್ಥಾನಮಾನ ಹಾಗೂ ಕುಟುಂಬ ಭದ್ರತೆಗೆ ಮಹಿಳೆಯರು ಆಕರ್ಷಿತರಾಗುತ್ತಾರೆ. ತಾಲಿಬಾನ್‍ಗಳಿಂದ ಅಪಹರಣಗೊಂಡು, ಕೆಲವು ದಿನಗಳ ಬಳಿಕ ಬಿಡುಗಡೆಗೊಳಿಸುವಾಗ ಅವರು ನೀಡಿದ ಕುರ್‍ಆನ್ ಅನುವಾದವನ್ನು ಓದಿ ರಿಡ್ಲಿ ಇಸ್ಲಾಮ್ ಸ್ವೀಕರಿಸಿದ್ದು ಇದಕ್ಕೊಂದು ದೊಡ್ಡ ಉದಾಹರಣೆಯಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸೆಂಟರ್ ಫೋರ್ ಇಸ್ಲಾಮಿಕ್ ಸ್ಟಡೀಸ್ ಪಟ್ಟಿಯಲ್ಲಿರುವ ನವ ಮುಸ್ಲಿಮರ ಸಹಾಯದೊಂದಿಗೆ ಇಸ್ಲಾಮ್ ಸ್ವೀಕರಿಸಿದ ಮಹಿಳೆಯರ ಕುರಿತು ಒಂದು ಪುಸ್ತಕ ಹೊರ ತರಲಾಗಿದೆ. 129 ಪುಟವಿರುವ ಈ ಪುಸ್ತಕ ಪಾಶ್ಚಾತ್ಯ ಮಹಿಳೆಯರು ಇಸ್ಲಾಮಿನೆಡೆಗೆ ಆಕರ್ಷಿತರಾಗುವ ಕಾರಣಗಳನ್ನು ಸ್ಪಷ್ಟಪಡಿಸಿದೆ. ಅದುವೇ ಭಾರತೀಯ ಮಹಿಳೆಯರನ್ನೂ ಆಕರ್ಷಿಸುತ್ತಿವೆ.
ಇಸ್ಲಾಮಿನ ವಿಶ್ವಾಸ ಶುದ್ದಿಯೂ, ಜೀವನ ವ್ಯವಸ್ಥೆಯ ಸಮಗ್ರತೆಯೂ, ಕುಟುಂಬ ಜೀವನದ ಭದ್ರತೆಯೂ ಸೇರಿದಂತೆ ವಿವಿಧ ಘಟಕಗಳು ಅದರ ಕುರಿತು ಅಧ್ಯಯನ ನಡೆಸುವವರನ್ನು ಆಕರ್ಷಿಸುತ್ತಿದೆ.
ಆಲೋಚಿಸುವ ಹಾಗೂ ಚಿಂತಿಸುವ ಸಾಮಥ್ರ್ಯವೇ ಮನುಷ್ಯರ ಸವಿಶೇಷತೆಯಾಗಿದೆ. ಈ ಸಾಮಥ್ರ್ಯವನ್ನು ಉಪಯೋಗಿಸದವನು ಪ್ರಾಣಿಗಳಿಗೆ ಸಮಾನ, ವಿಶ್ವಾಸ ಹಾಗೂ ಜೀವನದ ಗುರಿಯು ರೂಪುಗೊಳ್ಳುವುದು ಮಾನವನ ಮನಸ್ಸಿನಲ್ಲಿ. ಅಲ್ಲಿ ಸಂಭವಿಸುವ ಬದಲಾವಣೆಗಳಿಗೆ ಅನುಸಾರವಾಗಿ ಆಚಾರ ಅನುಷ್ಠಾನಗಳು, ಜೀವನ ಶೈಲಿಗಳು ಬದಲಾಗುತ್ತಿರುತ್ತದೆ. ಅಧ್ಯಯನ, ಓದುವುದು, ಚಿಂತನೆ, ಜ್ಞಾನಗಳು ಮಾನವ ಮನಸ್ಸನ್ನೇ ಅಗಾಧವಾಗಿ ಸ್ವಾದೀನ ಪಡಿಸುತ್ತದೆ. ಅದಕ್ಕನುಗುಣವಾಗಿ ಅಲ್ಲಿ ಸ್ವಾಭಾವಿಕವಾಗಿಯೇ ಬದಲಾವಣೆಗಳು ಸಂಭವಿಸುತ್ತದೆ- ಹೀಗೆ ಸಂಭವಿಸಬಾರದೆಂದು ಸಾಮಾನ್ಯ ಬುದ್ಧಿಯಿರುವ ಯಾರು ಹೇಳುವುದಿಲ್ಲ.
ಧರ್ಮವು ವಿಶ್ವಾಸದಲ್ಲಿ ನೆಲೆ ನಿಂತಿದೆ. ಅರಿವು, ಚಿಂತನೆಗಳು ಅದರಲ್ಲಿ ಸ್ವಾದೀನತೆಯನ್ನು ಉಂಟು ಮಾಡುತ್ತದೆ. ಹೊಸ ವಿಷಯಗಳು ಮನವರಿಕೆಯಾಗಿ, ಅದರಂತೆ ತಮ್ಮ ವಿಶ್ವಾಸಗಳನ್ನು ತಿದ್ದಿಕೊಳ್ಳಬಾರದೆಂಬ ವಿಚಾರವು ಮಾನವನ ಬುದ್ಧಿಗೆ ಅಪಮಾನ ಮಾಡಿದಂತಾಗುತ್ತದೆ. ತನಗೆ ಪರಂಪರಾಗತವಾಗಿ ಸಿಕ್ಕಿದ ವಿಶ್ವಾಸವು ಅಸಂಬದ್ಧವೆಂದು ತಿಳಿದರೂ ಅದರಲ್ಲೇ ಸ್ಥಿರವಾಗಿರಬೇಕೆಂದೂ, ತಾನಿಚ್ಛಿಸಿದ ಆದರ್ಶವನ್ನು ಸ್ವೀಕರಿಸಬಾರದೆಂಬುದು ಹೇಳುವುದು ಅರ್ಥಹೀನ ವಾದವಾಗಿದೆ. ಆದ್ದರಿಂದ ತನಗೆ ಸರಿಯೆನಿಸುವ ವಿಶ್ವಾಸ ಹಾಗೂ ಜೀವನಶೈಲಿ, ಆಚಾರ ಅನುಷ್ಠಾನಗಳನ್ನು ಸ್ವೀಕರಿಸಲು ಹಾಗೂ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿರಬೇಕು. ಅದು ಮಾನವನ ಜನ್ಮ ಸಿದ್ಧ ಹಕ್ಕಾಗಿದೆ. ಅದನ್ನು ನಿರಾಕರಿಸುವುದು ಸ್ವಾತಂತ್ರ್ಯದ ನಿಷೇಧವಾಗಿದೆ.
ಹೀಗೆಯೇ ತನಗೆ ಸರಿಯೆಂದು ತಿಳಿದ ವಿಷಯಗಳನ್ನು ಇತರರಿಗೆ ಹೇಳಿಕೊಡುವುದು ಮತ್ತು ಪ್ರಚಾರ ಮಾಡುವ ಅವಕಾಶ, ಸ್ವಾತಂತ್ರ್ಯ ಎಲ್ಲರಿಗೂ ಇದೆ. ಅದನ್ನು ನಿಷೇಧಿಸುವುದು ಮೌಲ್ಯಯುತ ಮಾನವ ಹಕ್ಕುಗಳನ್ನೇ ನಿಷೇಧವಾಗಿದೆ. ಆದ್ದರಿಂದಲೇ ಭಾರತೀಯ ಸಂವಿಧಾನವು ಅದಕ್ಕೆ ಸಂಪೂರ್ಣ ಅನುಮತಿ ನೀಡಿದೆ.
ಹಿಂದಿನ ಕಾಲದಿಂದಲೇ ವಿಶ್ವದ ಇತರ ಭಾಗಗಳಂತೆಯೇ ಭಾರತದಲ್ಲಿ ಮತಾಂತರ ಮಾಡುವ ಸ್ವಾತಂತ್ರವಿತ್ತು. ನಮ್ಮ ದೇಶದಲ್ಲಿ ಹುಟ್ಟಿದ ಬೌದ್ಧ, ಸಿಖ್, ಜೈನ ಧರ್ಮಗಳಿಗೆ ದೊರೆತ ಪ್ರಚಾರ ಹಾಗೂ ಇಸ್ಲಾಂ ಕ್ರೈಸ್ತ ಧರ್ಮಗಳಿಗೆ ದೊರೆತ ವ್ಯಾಪಕ ಸ್ವಾದೀನವು ಇದನ್ನು ಸ್ಪಷ್ಟಪಡಿಸುತ್ತದೆ. ಹಿಂದಿನ ಸಮೂಹ ಅನುಭವಿಸಿದ್ದ ಸ್ವಾತಂತ್ರ್ಯವನ್ನು ಕೂಡ ನಿಷೇಧಿಸಬೇಕೆಂದು ವಾದವು ಭಯ ಪಡಿಸುವಂತಹದ್ದಾಗಿದೆ.
ವಿಶ್ವಾಸ ಹಾಗೂ ಆಶಯಗಳನ್ನು ಒಪ್ಪಿಕೊಳ್ಳಬೇಕಾದದ್ದು ಮಾನವನ ಮನಸ್ಸಾಗಿದೆ. ಅದಲ್ಲದೆ ಕೇವಲ ನಾಲಗೆಯ ಘೋಷಣೆಗಳು ಮಾನವನ ಇಷ್ಟಾನಿಷ್ಟಗಳನ್ನು ಅವಲಂಬಿಸಿದೆ. ಅದನ್ನು ಯಾರ ಮೇಲೂ ಹೇರಬಾರದು ಮತ್ತು ಹೇರಲು ಸಾಧ್ಯವೂ ಇಲ್ಲ. ಆದ್ದರಿಂದಲೇ ಬಲವಂತದ ಮತಾಂತರವನ್ನು ಇಸ್ಲಾಮ್ ಒಪ್ಪುವುದಿಲ್ಲ. ಮಾತ್ರವಲ್ಲ, ಅದನ್ನು ತೀವ್ರವಾಗಿ ವಿರೋಧಿಸಿದೆ. ಭಯ ಪಡಿಸಿ, ಹಿಂಸಿಸಿ, ಪ್ರೀತಿಸಿ, ಆಮಿಷಗಳಿಂದ ಮತಾಂತರ ಮಾಡಲು ಇಸ್ಲಾಮ್ ಅನುಮತಿಸುವುದಿಲ್ಲ. ಕುರ್‍ಆನ್ (10:29, 5:48, 16:93, 88:21-22, 2:256, 18:29) ಇಸ್ಲಾಮ್ ಧರ್ಮ ಅಥವಾ ಮುಸ್ಲಿಮರು ಬಲವಂತದ ಮತಾಂತರಕ್ಕೆ ಶ್ರಮಿಸಿದ್ದಿದ್ದರೆ ಮುಸ್ಲಿಮ್ ದೇಶವಾಗಿದ್ದ ಸ್ಪೇನ್‍ನಲ್ಲಿ ಶಿಲುಬೆ ಯುದ್ಧಕೋರರು ಆದಿಪತ್ಯ ಸ್ಥಾಪಿಸಿದ ಅರ್ಧ ಶತಮಾನದೊಳಗೆ ಒಬ್ಬ ಮುಸ್ಲಿಮನೂ ಉಳಿಯದಂತೆಯೇ 14 ಶತಮಾನ ಮುಸ್ಲಿಮರು ಆಳ್ವಿಕೆ ನಡೆಸಿದ ರಾಷ್ಟ್ರಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಮನಲ್ಲದವನು ಇರುತ್ತಿರಲಿಲ್ಲ. ಆದರೆ ಮುಸ್ಲಿಮರು 14 ಶತಮಾನ ಕಾಲ ನಿರಂತವಾಗಿ ಆಡಳಿತ ನಡೆಸಿದ ಈಜಿಪ್ಟ್ ನಲ್ಲಿ ಈಗಲೂ 9% ಕ್ಯಾಥೋಲಿಕ್ ಕ್ರೈಸ್ತರಿದ್ದಾರೆ.
ವಿಶ್ವ ಸಂಸ್ಥೆಯ ಸೆಕ್ರಟರಿ ಜನರಲ್ ಆಗಿದ್ದ ಬುತ್ರೋಸ್ ಘಾಲಿ ಅಲ್ಲಿನ ಮಂತ್ರಿಯಾಗಿದ್ದರು.
ಇರಾಕ್‍ನಲ್ಲಿ ಈಗಲೂ ಧಾರಾಳ ಕ್ರೈಸ್ತರಿದ್ದಾರೆ. ಯಕೋಬಿಯ ಚರ್ಚ್‍ನ ಕೇಂದ್ರ ಸ್ಥಾನ ಈಗಲೂ ಇರಾಕ್ ಆಗಿದೆ. ಲೆಬನಾನ್‍ನಲ್ಲಿ 45 ಶೇಕಡಾದವರೆಗೆ ಕ್ರೈಸ್ತ ಅನುಯಾಯಿಗಳಿದ್ದಾರೆ. ಸಂವಿಧಾನ ಬದ್ಧವಾಗಿಯೇ ಅವರು ಅಧಿಕಾರವನ್ನು ಹಂಚಿಕೊಳ್ಳುತ್ತಿದ್ದಾರೆ.
ಇಸ್ರೇಲ್ ಬಿಟ್ಟರೆ ವಿಶ್ವದಲ್ಲಿ ಅತ್ಯಧಿಕ ಯಹೂದಿಯರು ಇರಾನಿನಲ್ಲಿದ್ದಾರೆ. ಅಲ್ಲಿ 25,000 ಯಹೂದಿಯರಿದ್ದಾರೆ. ಯಾವುದೇ ಒಂದು ಯುರೋಪಿಯನ್ ದೇಶದಲ್ಲಿ ಇಷ್ಟು ಸಂಖ್ಯೆಯಲ್ಲಿ ಯಹೂದಿಯರಿಲ್ಲ. ಅಮೇರಿಕಾದಲ್ಲೂ ಇಲ್ಲ. ಇತರ ಮುಸ್ಲಿಮ್ ರಾಷ್ಟ್ರಗಳಲ್ಲೂ ಇತರ ಧರ್ಮೀಯರು ಸ್ವಸ್ಥ ಶಾಂತಿಯುತ ಜೀವನ ಸಾಗಿಸುತ್ತಿದ್ದಾರೆ.
ಭಾರತದಲ್ಲಿ ಮುಸ್ಲಿಮ್ ರಾಜರ ಆಡಳಿತ ಕಾಲದಲ್ಲಿ 1% ಮಂದಿ ಮಾತ್ರ ಇಸ್ಲಾಮ್ ಸ್ವೀಕರಿಸಿದ್ದರು. 1707 ಮಾರ್ಚ್ 3ಕ್ಕೆ ಕೊನೆಯ ಮುಸ್ಲಿಮ್ ಅರಸ ಮರಣ ಹೊಂದಿದಾಗ ಭಾರತದ ಮುಸ್ಲಿಮ್ ಜನ ಸಂಖ್ಯೆಯು ಒಟ್ಟು ಜನ ಸಂಖ್ಯೆಯ ಒಂದು ಶೇಕಡಾ ಮಾತ್ರವಿತ್ತೆಂದು ಎಫ್. ಬರ್ನಿಲ್ ಟ್ರಾವೆಲ್ಸ್ ಇನ್ ಮೊಗಲ್ ಎಂಪಯರ್ ಎಂಬ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆಂದು ಎಂ.ಎಲ್. ಶ್ರೀ ವಾಸ್ತವ ತನ್ನ ಭಾರತೀಯ ಚರಿತ್ರೆಯಲ್ಲಿ ಉದ್ಧರಿಸಿದ್ದಾರೆ. (ಪುಟ: 1) ಆದರೆ, 1931ರಲ್ಲಿ ಎರಡನೇ ಸಮ್ಮೇಳನ ನಡೆಯುವಾಗ ಅದು 25% ವಾಗಿ ವರ್ಧಿಸಿತು.
ಮುಸ್ಲಿಮ್ ಆಳ್ವಿಕೆಯ ಎಂಟು ಶತಮಾನದ ವರೆಗೆ ಕೇವಲ ಒಂದು ಶೇಕಡಾ ಮಂದಿ ಇಸ್ಲಾಮ್ ಸ್ವೀಕರಿಸುವಾಗ, ಅಧಿಕಾರವಿಲ್ಲದ 224 ವರ್ಷದಲ್ಲೇ ಅದು 25% ವಾಗಿ ಹೆಚ್ಚಳವಾದದ್ದು ಬಲವಂತದ ಮತಾಂತರವೆಂದು ಹೇಳುವುದು ಸುಳ್ಳಾರೋಪವೆಂದು ಸ್ಪಷ್ಟವಾಗುತ್ತದೆ.
ಇಸ್ಲಾಮ್ ಬಲವಂತ ಮತಾಂತರವನ್ನು ಒಪ್ಪುವುದಿಲ್ಲ. ಎಲ್ಲರಿಗೂ ತಾನಿಚ್ಛಿಸಿದ ಧರ್ಮವನ್ನು ಸ್ವೀಕರಿಸುವ ಅನುಮತಿ ನೀಡಬೇಕೆಂದು ಪ್ರಬಲವಾಗಿ ವಾದಿಸುತ್ತದೆ. ಪ್ರೇಮವನ್ನು ಮತಾಂತರದ ದಾರಿಯೆಂಬುದನ್ನು ಇಸ್ಲಾಮ್ ಒಪ್ಪುವುದಿಲ್ಲ. ಅಂತಹದ್ದೊಂದು ಎಲ್ಲಿಯೂ ನಡೆಯುತ್ತಲೂ ಇಲ್ಲ.
ಅದರೊಂದಿಗೆ ಲವ್‍ ಜಿಹಾದ್ ಎಂಬ ಪದ ಪ್ರಯೋಗವು ಧರ್ಮ ನಿಂದನೆಯಾಗಿದೆ. ನ್ಯಾಯ ಹಾಗೂ ಸನ್ಮಾರ್ಗವನ್ನು ಸ್ಥಾಪಿಸಲು ಹಾಗೂ ಉಳಿಸಲು ಮಾಡುವ ಪರಿಶ್ರಮವೇ ಜಿಹಾದ್ ಆಗಿದೆ. ಅದು ಇಸ್ಲಾಮ್‍ನ ಅವಿಭಾಜ್ಯ ಅಂಗವಾಗಿದೆ. ಪುಣ್ಯವಾದ ಮಹತ್ಕಾರ್ಯವಾಗಿದೆ. ಅದನ್ನು ಪ್ರೇಮ ಅಥವಾ ಲವ್‍ನೊಂದಿಗೆ ಜೋಡಿಸುವುದು ಹೀನ ಕೃತ್ಯವಾಗಿದೆ. ಜಿಹಾದ್ ಎಂದರೆ ಮತಾಂತರ ಮಾಡುವ ಪದವೆಂಬ ಭಾವನೆಯನ್ನು ಬೆಳೆಸಲು, ಇಂತಹ ಪ್ರಚಾರ ನಡೆಯುತ್ತಿದೆಯೆಂಬ ವಾಸ್ತವಿಕತೆಯನ್ನು ಯಾರೂ ಮರೆಯಬಾರದು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *