`ಮಹಿಳಾ ವಿರೋಧಿ ಪ್ರವಾದಿ’ ಮಹಿಳೆಯರಿಗೇಕೆ ಇಷ್ಟ?


ಸಮೀನಾ ಅಫ್ಶಾನ್, ಮಂಗಳೂರು
ಜಗತ್ತಿನಾದ್ಯಂತ ಇಸ್ಲಾಮ್ ಧರ್ಮವನ್ನು ಸ್ವೀಕರಿಸುವ ಜನರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ಇಸ್ಲಾಮ್ ಸ್ವೀಕರಿಸುವ ಮಹಿಳೆಯರ ಸಂಖ್ಯೆ ಪುರುಷರಿಗಿಂತಲೂ ಮೂರು ಪಟ್ಟು ಹೆಚ್ಚು ಎಂಬುದು ಅಂಕಿ ಅಂಶಗಳ ಪ್ರಕಾರ ಸಾಬೀತಾದ ಸತ್ಯ. ಈ ಮಹಿಳೆಯರ ಪೈಕಿ ಹೆಚ್ಚಿನವರು ಮಹಿಳಾ ಸಬಲೀಕರಣದ ನೇತಾರರೆನಿಸಿದ ಪಾಶ್ಚಾತ್ಯ ಜಗತ್ತಿಗೆ ಸೇರಿದವರು ಎಂಬುದು ಕೂಡಾ ಇನ್ನೊಂದು ಸತ್ಯ. ಪರಿಸ್ಥಿತಿ ಹೀಗಿರುವಾಗ ಆಶ್ಚರ್ಯದ ಸಂಗತಿಯೆಂದರೆ ಇಸ್ಲಾಮ್ ಮಹಿಳೆಯರನ್ನು ಶೋಷಿಸುತ್ತದೆ, ಅವರನ್ನು ಮನೆಯೊಳಗೇ ಕೂಡಿರಿಸುತ್ತದೆ, ಅವರ ಸ್ವಾತಂತ್ರ್ಯ ಹರಣ ಮಾಡುತ್ತದೆ, ಅವರಿಗೆ ಸಮಾನ ಹಕ್ಕು ನೀಡುವುದಿಲ್ಲ, ಅವರ ಅಸ್ತಿತ್ವವನ್ನು ತೃಣೀಕರಿಸುತ್ತದೆ ಎಂಬಿತ್ಯಾದಿ ಆರೋಪಗಳು ಸಾಧಾರಣವಾಗಿ ಕೇಳಿಬರುವುದುಂಟು. ಈ ಆರೋಪಗಳನ್ನು ಪಸರಿಸಿ ಮುಸ್ಲಿಮ್ ಮಹಿಳೆಯ ಬಗ್ಗೆ ಒಂದು ನಿರ್ದಿಷ್ಟ ದೃಷ್ಟಿಕೋನವನ್ನು ಸೃಷ್ಟಿಸುವ ವ್ಯವಸ್ಥಿತ ಜಾಲಗಳೂ ಇವೆ. ಇಸ್ಲಾಮ್ ಧರ್ಮದ ಬೋಧನೆಗಳನ್ನು ಜಗತ್ತಿಗೆ ಕಲಿಸಿ ಕೊಟ್ಟ ಪ್ರವಾದಿ ಮುಹಮ್ಮದ್(ಸ)ರು ಈ ಮಹಿಳಾ ತುಚ್ಛೀಕರಣದ ಮೊಟ್ಟ ಮೊದಲ ಆರೋಪಿ ಎಂದು ಜಗತ್ತಿಗೆ ಸಾಬೀತು ಪಡಿಸುವ ಹುನ್ನಾರ ಕೂಡ ನಿರಂತರ ನಡೆಯುತ್ತಾ ಇದೆ. ಮಹಿಳೆಯರ ನಿದ್ದೆಗೆಡಿಸುವ ಬಹುಪತ್ನಿತ್ವದ ಕಲ್ಪನೆ, ಅವರಿಗೆ ನಿಗದಿಪಡಿಸಲಾದ ಒಂದು ನಿರ್ದಿಷ್ಟ ವಸ್ತ್ರ ಸಂಹಿತೆ, ಆಸ್ತಿಯ ಪಾಲಿನಲ್ಲಿ ಅವರಿಗೆ ಅರ್ಧ ಭಾಗದ ಘೋಷಣೆ, ಪುರುಷರಿಗೆ ವಿವಾಹ ವಿಚ್ಛೇದನೆಯ ಅನುಮತಿ ಇತ್ಯಾದಿಗಳು ಪ್ರವಾದಿ ಮುಹಮ್ಮದ್(ಸ)ರು ಹುಟ್ಟು ಹಾಕಿರುವ ಮಹಿಳಾ ಶೋಷಣೆಯ ವಿವಿಧ ರೀತಿಗಳು ಎಂಬ ದೊಡ್ಡ ಆಪಾದನೆ ಅವರ ಮೇಲಿದೆ. ಇವುಗಳು ಪ್ರತ್ಯಕ್ಪವಾಗಿ ಮಹಿಳೆಯರ ಮೇಲಿನ ದಬ್ಬಾಳಿಕೆಯಂತೆ ತೋರುತ್ತದಲ್ಲದೆ ಅದನ್ನು ಹಾಗೆಂದು ಪ್ರತಿಪಾದಿಸುವ ಅವಿರತ ಪ್ರಯತ್ನವೂ ನಡೆಯುತ್ತಿದೆ. ಇಂತಹ ಆರೋಪಗಳ ವ್ಯಾಪಕ ಪ್ರಚಾರದ ಹೊರತಾಗಿಯೂ ಗಣನೀಯ ಸಂಖ್ಯೆಯಲ್ಲಿ ಸುಶಿಕ್ಷಿತ, ಪ್ರಗತಿಪರ ಮಹಿಳೆಯರು ಇಸ್ಲಾಮ್ ಧರ್ಮದೆಡೆಗೆ ಆಕರ್ಷಿತರಾಗಬೇಕಾದರೆ ಆ ಆಕರ್ಷಣೆ ಏನಿರಬೇಕೆಂಬುದು ಖಂಡಿತವಾಗಿಯೂ ಕುತೂಹಲವನ್ನು ಕೆರಳಿಸುವಂತಹದ್ದು. ಆರೋಪಿ ಸ್ಥಾನಕ್ಕೆ ಏರಿಸಲ್ಪಟ್ಟ ಈ ಪ್ರವಾದಿಯ ವ್ಯಕ್ತಿತ್ವದೆಡೆಗೆ ಆಕರ್ಷಿತರಾಗಿ, ಅವರ ಬೋಧನೆಗಳನ್ನು ಸ್ವೀಕರಿಸಿ, ಅವರನ್ನು ಅಷ್ಟೊಂದು ಪ್ರೀತಿಸುವ ಮಹಿಳೆಯರ ಸಂಖ್ಯೆ ಯಾಕಾಗಿ ಹೆಚ್ಚಾಗಬೇಕು ಎಂಬ ಪ್ರಶ್ನೆಗೆ ಉತ್ತರ ಹುಡುಕಲೇಬೇಕು.
ಮಹಿಳೆ ಎಲ್ಲ ಕಾಲದಲ್ಲೂ ಶೋಷಿಸಲ್ಪಟ್ಟಿದ್ದಳು ಮತ್ತು ಇಂದಿಗೂ ಶೋಷಿಸಲ್ಪಡುತ್ತಿದ್ದಾಳೆ. ಶೋಷಣೆಯ ರೀತಿಗಳು ಬದಲಾಗಿದೆಯೇ ಹೊರತು ಆಕೆ ಪುರುಷನಿಗಾಗಿ ಹುಟ್ಟಿದವಳಾಗಿದ್ದು, ಪುರುಷನಿಗೆ ಆಕೆ ಒಂದಲ್ಲ ಒಂದು ರೀತಿಯಲ್ಲಿ ಉಪಯುಕ್ತಳಾಗಿರುವ ತನಕ ಮಾತ್ರ ಆಕೆಗೆ ಬೆಲೆ ಕಲ್ಪಿಸುವ ಕೀಳು ದೃಷ್ಟಿಕೋನ ಮಾತ್ರ ಬದಲಾಗಿಲ್ಲ. ಹಿಂದೆ ಆ ಉಪಯುಕ್ತತೆ ಮನೆಗೆಲಸ ಮತ್ತು ಮನೆ ಮಂದಿಯ ಸೇವೆಗಳಿಗೆ ಮೀಸಲಾಗಿದ್ದರೆ ಇಂದು ಅದು ಪುರುಷನ ಲೈಂಗಿಕ ತೃಷೆಯನ್ನು ತೀರಿಸುವ ವಿಭಿನ್ನ ರೀತಿಯಾಗಿ ಮಾರ್ಪಟ್ಟಿದೆ.
ಕಾಲ ಬದಲಾಗುತ್ತಿರುವಂತೆ ಮಹಿಳೆಗೆ ತಾನು ಸ್ವತಂತ್ರಳಾಗಬೇಕು ಎಂಬ ಆಲೋಚನೆ ಬಂದು ಆಕೆ ಅದಕ್ಕಾಗಿ ಧ್ವನಿ ಎತ್ತ ತೊಡಗಿದಾಗ ಪುರುಷನು ಆಕೆಯ ವಿಮೋಚನೆಯ ಹೊಣೆ ಹೊತ್ತುಕೊಂಡ. ಬಾಹ್ಯ ಸೌಂದರ್ಯ, ಪುರುಷರನ್ನು ಆಕರ್ಷಿಸುವ ಶಕ್ತಿ, ದೇಹ ಪ್ರದರ್ಶನ ಇತ್ಯಾದಿಗಳೇ ತನ್ನ ಸ್ವಾತಂತ್ರ್ಯದ ಮಾನದಂಡವೆಂದು ಆಕೆಯನ್ನು ನಂಬಿಸಿ ಆಕೆಯ ಸ್ವಾತಂತ್ರ್ಯ ಹೋರಾಟಕ್ಕೊಂದು ದಿಕ್ಕು ತೋರಿಸಿಕೊಟ್ಟ. ಹೀಗೆ ಮಾಡಿದಲ್ಲಿ ಆಕೆ ತನ್ನ ನೈಜ ಅಸ್ತಿತ್ವವನ್ನು ಹುಡುಕುವ ಕೆಲಸಕ್ಕೆ ತಿಲಾಂಜಲಿ ಹಾಕುತ್ತಾಳೆಂಬುದು ಆತನ ಕಲ್ಪನೆಯಾಗಿತ್ತು. ಆದರೆ ಈ ಪರಿಕಲ್ಪನೆಗೆ ಬಲಿಪಶುವಾಗಲು ನಿರಾಕರಿಸಿದ ಮತ್ತು ನಿರಾಕರಿಸುತ್ತಿರುವ ಅದೆಷ್ಟೋ ಮಹಿಳೆಯರಿದ್ದಾರೆ. ಅವರು ಈ ಪುರುಷ ಪ್ರಧಾನ ಸಮಾಜದಲ್ಲಿ ತಮ್ಮ ನೈಜ ಸ್ಥಾನಮಾನದ ಹುಡುಕಾಟದಲ್ಲಿದ್ದಾರೆ. ಮಹಿಳಾ ಶೋಷಣೆಯ ಆರೋಪ ಹೊತ್ತಿರುವ ಪ್ರವಾದಿ ಮುಹಮ್ಮದ್(ಸ)ರ ಬೋಧನೆಯೆಡೆಗೆ ಗಣನೀಯ ಸಂಖ್ಯೆಯ ಮಹಿಳೆಯರು ಆಕರ್ಷಿತರಾಗುತ್ತಿರುವುದು ಅದೇ ಹುಡುಕಾಟದ ಭಾಗವಾಗಿರಬಹುದೇನೋ.
ಮಹಿಳೆಗೆ ಆಕೆಯ ಮನದಲ್ಲಿ ಆಗಾಗ ಉಧ್ಭವಿಸುವ `ತಾನು ಯಾರು?’ ಎಂಬ ಪ್ರಶ್ನೆಗೆ ಉತ್ತರ ನೀಡಿದವರು ಪ್ರವಾದಿ ಮುಹಮ್ಮದ್(ಸ). ಮಹಿಳೆ ಮತ್ತು ಪುರುಷನನ್ನು ದೇವನು ಇಹಲೋಕದಲ್ಲಿ ಆತನ ಪ್ರತಿನಿಧಿಗಳಾಗಿ ಕಳುಹಿಸಿದ್ದನೆಂಬ ದೇವವಾಣಿಯನ್ನು ಅವರು ಜಗತ್ತಿಗೆ ಸಾರಿದರು. ಇಬ್ಬರು ಒಂದೇ ರೀತಿಯ ಪ್ರತಿನಿಧಿಗಳು. ಇಬ್ಬರಿಗೂ ಸ್ವರ್ಗದಲ್ಲಿ ಒಂದೇ ಸ್ಥಾನವಿತ್ತು. ಇಬ್ಬರೂ ಮಾಡಬಾರದಂತಹ ತಪ್ಪು ಮಾಡಿಬಿಟ್ಟರು. ಪರಿಣಾಮವಾಗಿ ಇಬ್ಬರನ್ನೂ ದೇವನು ಶಿಕ್ಷಿಸಿದನು. ಇಬ್ಬರೂ ಒಂದೇ ರೀತಿಯಲ್ಲಿ ದೇವನ ಕ್ಷಮೆ ಯಾಚಿಸಿದರು. ಇಬ್ಬರನ್ನೂ ದೇವನು ಕ್ಷಮಿಸಿದನು ಮತ್ತು ಇಬ್ಬರನ್ನೂ ಭೂಮಿಗೆ ಆತನ ಪ್ರತಿನಿಧಿಗಳಾಗಿ ಕಳುಹಿಸಿದನು. ಅಲ್ಲಿ ಪ್ರಾರಂಭವಾದ ಅಪ್ಪಟ ಲಿಂಗ ಸಮಾನತೆಯನ್ನು ಅಲ್ಲೋಲ
ಕಲ್ಲೋಲವಾಗಿಸುತ್ತಾ ಬಂದು, ಇಂದು ಆ ಲಿಂಗ ತಾರತಮ್ಯ ತಾರಕಕ್ಕೇರಿರುವಾಗ, ಈ ಅದ್ಭುತ ಸಮಾನತೆಯ ಪ್ರತಿಪಾದಕರೂ ಕಾರ್ಯಕರ್ತರೂ ಆದ ಪ್ರವಾದಿ ಮುಹಮ್ಮದ್(ಸ)ರ ಬೋಧನೆಗಳಿಗೆ ಶರಣಾಗದೆ ಮಹಿಳೆ ಇನ್ನೇನು ಮಾಡಿಯಾಳು?
ಮಹಿಳೆಗೆ ಒಂದು ನಿರ್ದಿಷ್ಟ ವಸ್ತ್ರ ಸಂಹಿತೆಯನ್ನು ನಿಗದಿಪಡಿಸಿರುವುದು ಪ್ರವಾದಿ ಮುಹಮ್ಮದ್(ಸ)ರ ಮೇಲೆ ಹೊರಿಸಲ್ಪಟ್ಟ ಆರೋಪಗಳ ಪೈಕಿ ಒಂದು. ಪುರುಷ ಪ್ರಧಾನ ದೃಷ್ಟಿಕೋನವು ಮಹಿಳೆಗೆ ಸ್ವಾತಂತ್ರ್ಯಗಳಿಸಿಕೊಡುವ ಭರವಸೆ ನೀಡಿ ಆಕೆಯ ಜೀವನೋದ್ದೇಶವನ್ನು ಎರಡು ವಿಷಯಕ್ಕೆ ಸೀಮಿತಗೊಳಿಸುವಲ್ಲಿ ಬಹುತೇಕ ಸಫಲವಾಗಿದೆ. ಅವುಗಳ ಪೈಕಿ ಒಂದು ಉದ್ದೇಶ- ತಾನು ಸದಾ ಪುರುಷನಿಗೆ ಆಕರ್ಷಿತಳಾಗಿ ಕಾಣಬೇಕು ಎಂಬುದಾಗಿದ್ದು, ಅದು ಪೂರ್ತಿಯಾಗದ ಸ್ಥಿತಿಯಲ್ಲಿ ತಾನು ಪುರುಷನಂತೆಯೇ ಆಗಬೇಕು, ಆಗ ಮಾತ್ರ ತಾನು ಸಮಾನಳಾಗುತ್ತೇನೆ ಎಂಬುದು ಆಕೆಯ ಇನ್ನೊಂದು ಆಗ್ರಹ. ಇವೆರಡರಲ್ಲೂ ಆಕೆ ತನ್ನ ತನವನ್ನು ಎಲ್ಲೋ ಕಳೆದು ಬಿಡುತ್ತಾಳೆ. ಪ್ರವಾದಿ(ಸ)ರು ತೋರಿಸಿಕೊಟ್ಟ ವಸ್ತ್ರ ಸಂಹಿತೆಯು ಮಹಿಳೆಯನ್ನು ದೈಹಿಕವಾಗಿಯೂ ಮಾನಸಿಕವಾಗಿಯೂ ಸ್ವತಂತ್ರ ಳಾಗಿಸುತ್ತದೆ. ಈ ಸಂಹಿತೆಯಿಂದಾಗಿ ಆಕೆ ಸಮಾಜದಲ್ಲಿ ತನ್ನ ಸ್ಥಾನವು ಗೌರವಾನ್ವಿತವಾಗಬೇಕಾದರೆ ತಾನು ಪುರುಷನನ್ನು ಆಕರ್ಷಿಸಬೇಕಾದ ಶತ ಪ್ರಯತ್ನ ಮಾಡಬೇಕಾಗಿಯೂ ಇಲ್ಲ, ಆತನ ನಡೆನುಡಿಗಳ ಅನುಕರಣೆ ಮಾಡಿ ಸಮಾನತೆಯನ್ನು ಮೆರೆಯಬೇಕಾಗಿಯೂ ಇಲ್ಲ ಎಂಬ ಅತ್ಯಂತ ಪ್ರಗತಿಪರ ವೈಚಾರಿಕತೆಯ ಒಡೆಯಳಾಗುತ್ತಾಳೆ.
ಇನ್ನು ಪ್ರವಾದಿ(ಸ)ರ ಮೇಲಿರುವ ಮತ್ತೊಂದು ಮಹಾ ಆಪಾದನೆಯಾದ ಬಹುಪತ್ನಿತ್ವದ ಕಲ್ಪನೆಯ ಬಗ್ಗೆ ಹೇಳುವುದಾದರೆ, ಆ ಕಲ್ಪನೆ ಮನುಷ್ಯ ಸಮಾಜಕ್ಕೆ ಖಂಡಿತವಾಗಿಯೂ ಹೊಸತಲ್ಲ. ಅನಾದಿ ಕಾಲದಿಂದಲೂ ನಡೆದು ಬಂದಿರುವ ಆಚರಣೆಯಿದು. ಎಡ್ವರ್ಡ್ ವೆಸ್ಟೇರ್ಮಾರ್ಕ್ ಎಂಬ ಪ್ರಖ್ಯಾತ ಸಮಾಜ ಶಾಸ್ತ್ರಜ್ಞರು `ದಿ ಹಿಸ್ಟರಿ ಆಫ್ ಹ್ಯೂಮನ್ ಮ್ಯಾರೇಜ್’ ಎಂಬ ತಮ್ಮ ಪುಸ್ತಕದಲ್ಲಿ ಬಹುಪತ್ನಿತ್ವವನ್ನು ಜಗತ್ತಿನ ಎಲ್ಲಾ ಸಮುದಾಯವು ಎಲ್ಲ ಕಾಲದಲ್ಲೂ ಆಚರಿಸುತ್ತಾ ಬಂದಿದೆ ಎಂದು ಉಲ್ಲೇಖಿಸಿದ್ದಾರೆ. ಆದರೆ ಅದನ್ನು ಈಗ ಬಹಳ ಚಾಣಾಕ್ಷತನದಿಂದ ಕೇವಲ ಇಸ್ಲಾಮ್ ಧರ್ಮದೊಂದಿಗೆ ಜೋಡಿಸಲಾಗುತ್ತಿದೆ. ಬಹುಶಃ ಪತ್ನಿಯರ ಸಂಖ್ಯೆಗೆ ಒಂದು ಮಿತಿ ಇರಿಸಿ, ಒಂದಕ್ಕಿಂತ ಹೆಚ್ಚು ಪತ್ನಿಯರನ್ನಿರಿಸಲು `ನ್ಯಾಯ ಪಾಲನೆ’ ಎಂಬ ಬಹಳ ಕಠಿಣವಾದ ಶರ್ತವನ್ನಿರಿಸಿದ ಏಕೈಕ ಧರ್ಮಗ್ರಂಥವಾಗಿದೆ ಪವಿತ್ರ ಕುರ್‍ಆನ್. ಅದಲ್ಲದೆ ಪ್ರವಾದಿ(ಸ)ರು ಬಹುಪತ್ನಿತ್ವವನ್ನು ಎಲ್ಲೂ ಶ್ಲಾಘಿಸಲಿಲ್ಲ, ಅದೊಂದು ಸಾಧನೆಯೆಂದು ಎಲ್ಲೂ ಹೇಳಲಿಲ್ಲ, ಅದನ್ನು ಪ್ರೋತ್ಸಾಹಿಸಲೂ ಇಲ್ಲ. ಅದು ಮುಸ್ಲಿಮ್ ಸಮಾಜದಲ್ಲಿ ಪ್ರಚಲಿತವಿರುವ ರೂಢಿಯಂತೂ ಖಂಡಿತಾ ಅಲ್ಲ. ಸಮಾಜದಲ್ಲಿ ಯುದ್ಧಗಳು ವ್ಯಾಪಕವಾಗಿ, ಪುರುಷರ ಸಂಖ್ಯೆಯು ಗಣನೀಯವಾಗಿ ಕುಸಿದು, ಸಮಾಜದಲ್ಲಿ ವಿಧವೆಯರ ಮತ್ತು ಅನಾಥ ಮಕ್ಕಳ ಸಂಖ್ಯೆ ಹೆಚ್ಚಾಗಿ, ಅವರು ನಿರಾಶ್ರಿತರಾಗಿ ಮಾರ್ಪಟ್ಟ ಪ್ರತ್ಯೇಕ ಸನ್ನಿವೇಶದ ಹಿನ್ನಲೆಯಲ್ಲಿ ಪವಿತ್ರ ಕುರ್‍ಆನ್ ನೀಡಿದ ನಿರ್ದೇಶ ಮಾತ್ರವದು.
ನಿನಗೆ ಆಸ್ತಿಯಲ್ಲಿ ಅರ್ಧ ಪಾಲು ಮಾತ್ರ ಎಂದು ಸದಾ ಮುಸ್ಲಿಮ್ ಮಹಿಳೆಯನ್ನು ಕೆಣಕಲಾಗುತ್ತದೆ. ವಾಸ್ತವದಲ್ಲಿ ಪ್ರವಾದಿ ಮುಹಮ್ಮದ್(ಸ)ರು ಏಳನೇ ಶತಮಾನದಲ್ಲೇ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯವನ್ನು ಘೋಷಿಸಿದ್ದಾರೆ. ಅದರ ಪ್ರಕಾರ ಆಕೆಗೆ ಆಸ್ತಿಯನ್ನು ಹೊಂದುವ ಸ್ವತಂತ್ರ್ಯವಿದೆ. ಅದನ್ನು ತನಗೆ ಬೇಕಾದ ಹಾಗೆ ವ್ಯಯಿಸಬಹುದಾಗಿದೆ. ಆಕೆಗೆ ಸಂಪಾದಿಸುವ ಹಕ್ಕಿದೆ. ಆಕೆಯ ಸಂಪಾದನೆಯಲ್ಲಿ ಯಾರೂ ಪಾಲುದಾರರಿಲ್ಲ. ಒಂದು ವೇಳೆ ಆಕೆ ತನ್ನಿಷ್ಟದಿಂದ ಮನೆ ಮಂದಿಗಾಗಿ ಖರ್ಚು ಮಾಡಿದರೆ ಅದು ಆಕೆ ಮಾಡಿದ ದಾನವೆಂದು ಪರಿಗಣಿಸಲಾಗುತ್ತದೆ. ಆಕೆಯ ಮೇಲೆ ಯಾವುದೇ ರೀತಿಯ ಆರ್ಥಿಕ ಹೊಣೆಗಾರಿಕೆ ಇಲ್ಲ. ಆಕೆ ತನ್ನ ತವರಿನ, ಪತಿಯ ಮತ್ತು ಮಕ್ಕಳ ಸೊತ್ತಿಗೆ ಹಕ್ಕುದಾರಳು. ವಾರೀಸು ಹಕ್ಕಿನಲ್ಲಿ ಪುರುಷನ ಪಾಲು ಹೆಚ್ಚಾಗಿರುವುದು ಆತನ ಮೇಲಿರುವ ಆರ್ಥಿಕ ಹೊಣೆಗಾರಿಕೆಯಿಂದಾಗಿಯೇ ಹೊರತು ಅಲ್ಲಿ ಲಿಂಗ ತಾರತಮ್ಯದಿಂದಲ್ಲ. ಮಹಿಳೆಗೆ ದೊರಕುವ ವಾರೀಸು ಹಕ್ಕು ಸಂಪೂರ್ಣವಾಗಿ ಆಕೆಯ ಸೊತ್ತು. ಇಲ್ಲಿ ಆಕೆ ಮಹಾ ಭಾಗ್ಯಶಾಲಿ. ಎಲ್ಲಕ್ಕಿಂತ ಮಿಗಿಲಾಗಿ ವಿವಾಹದ ವೇಳೆ ಮಹಿಳೆಗೆ ಸಿಗಬೇಕಾದ ಮಹ್ರ್ (ವಧು ಧನ/ಉಡುಗೊರೆ) ಅನ್ನು ಪ್ರವಾದಿಯವರು(ಸ) ಕಡ್ಡಾಯಗೊಳಿಸಿದ್ದಾರೆ. ತನಗೆ ಮದುವೆಯಾಗಬೇಕು ಎಂದು ಯಾರಾದರೂ ಅವರೊಡನೆ ಪ್ರಸ್ತಾಪಿಸಿದರೆ, ವಧುವಿಗೆ ಉಡುಗೊರೆ ನೀಡಲು ನಿನ್ನ ಬಳಿ ಏನಾದರೂ ಇದೆಯೇ ಎಂದು ಕೇಳುತ್ತಿದ್ದರು. ಪ್ರಗತಿಪರವೆನಿಸಿಕೊಂಡ ಸಮಾಜದಲ್ಲಿ ಹತ್ತು ಹಲವು ಕಾನೂನುಗಳು ಜಾರಿಯಾದ ಹೊರತಾಗಿಯೂ, ಇಂದಿಗೂ ವರದಕ್ಷಿಣೆ ಎಂಬ ಪಿಡುಗನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂಬುದು ಇಲ್ಲಿ ಗಮನಾರ್ಹ. ಪಾಶ್ಚಾತ್ಯರಲ್ಲಿ ಮಹಿಳೆಗೆ ಆರ್ಥಿಕ ಸ್ವಾತಂತ್ರ್ಯ ಎಂಬುದು ತೀರಾ ಇತ್ತೀಚಿನ ಕಲ್ಪನೆ. ಆ ರಾಷ್ಟ್ರಗಳ ಪೈಕಿ ಬ್ರಿಟನ್ ಮೊಟ್ಟ ಮೊದಲ ಬಾರಿಗೆ `ಮ್ಯಾರೀಡ್ ವಿಮೆನ್ ಪ್ರಾಪರ್ಟಿ ಆಕ್ಟ್ ‘ ಜಾರಿಗೊಳಿಸಿರುವುದು 1860ರಲ್ಲಿ ಎಂಬುದು ಕೂಡಾ ಗಮನಾರ್ಹ.
ಪ್ರವಾದಿ ಮುಹಮ್ಮದ್(ಸ)ರು ತಂದ ದೇವ ಸಂದೇಶವನ್ನು ಸ್ವೀಕರಿಸಿ ಅವರ ಮೇಲೆ ಮೊಟ್ಟ ಮೊದಲು ವಿಶ್ವಾಸ ತಾಳಿರುವುದು ಒಬ್ಬ ಮಹಿಳೆ – ಅವರ ಪತ್ನಿ ಖದೀಜಾ(ರ). ತದನಂತರ ವಿಶ್ವಾಸವಿರಿಸಿದ ಬೆರಳೆಣಿಕೆಯ ವ್ಯಕ್ತಿಗಳ ಪೈಕಿ ಮುಂಚೂಣಿಯಲ್ಲಿದ್ದದ್ದು ಮೂವರು ಮಹಿಳೆಯರು- ಲುಬಾಬಾ ಬಿಂತ್ ಹಾರಿಸ್(ರ), ಹುತಾತ್ಮೆಯಾದ ಸುಮಯ್ಯ(ರ) ಮತ್ತು ಫಾತಿಮಾ ಬಿಂತ್ ಖತ್ತಾಬ್ (ರ).
ಪ್ರವಾದಿ(ಸ) ರಾಜಕೀಯ ರಂಗದಲ್ಲಿ ಮಹಿಳೆಯರನ್ನು ಅಗ್ರ ಪಂಕ್ತಿಯಲ್ಲಿರಿಸಿದರು. ಖದೀಜಾ(ರ) ಅವರ ಮುಖ್ಯ ಸಲಹೆಗಾರರಾಗಿದ್ದರು. ಉಮ್ಮು ಸಲಮಾ(ರ)ರೊಂದಿಗೆ ಅವರು ಅನೇಕ ರಾಜಕೀಯ ಆಗು-ಹೋಗುಗಳನ್ನು ಚರ್ಚಿಸುತ್ತಿದ್ದರು. ಮದೀನಾ ನಗರಕ್ಕೆ ವಲಸೆ ಹೋಗಬೇಕಾದರೆ ಅವರು ಅಲ್ಲಿನ ಮಹಿಳೆಯರ ಅಭಿಪ್ರಾಯಗಳನ್ನು ಪರಿಗಣಿಸಿದರು. ಸೌರ್ ಗುಹೆಯಲ್ಲಿ ರಹಸ್ಯವಾಗಿ ಮೂರು ದಿನ ಕಳೆದಾಗ ಆ ರಹಸ್ಯ ಸ್ಥಾನದ ಬಗ್ಗೆ ತಿಳಿದಿದ್ದದ್ದು ಅಸ್ಮಾ ಬಿಂತ್ ಅಬೂಬಕರ್ ಎಂಬ ಮಹಿಳೆಗೆ ಮಾತ್ರ.
ವಿವಾಹಕ್ಕೂ ವಿವಾಹ ವಿಚ್ಛೇದನೆಗೂ ಒಂದು ಸಂಪೂರ್ಣವಾದ, ಸ್ಪಷ್ಟ ಕಾನೂನನ್ನು ಪ್ರವಾದಿ(ಸ)ರಲ್ಲದೆ ಇನ್ನಾರೂ ಜಾರಿಗೊಳಿಸಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ವಿಧವೆಯರನ್ನು `ವಿಧವೆ’ ಎಂಬ ಹಣೆ ಪಟ್ಟಿಯೊಂದಿಗೆ ಮೂಲೆ ಗುಂಪಾಗಲು ಬಿಡದೆ ಅವರ ಮರು ವಿವಾಹವನ್ನು ಪ್ರೋತ್ಸಾಹಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ಅವರು ಕರೆತಂದರು.
ಪ್ರವಾದಿ ಮುಹಮ್ಮದ್(ಸ)ರ ಸಮಾಜದಲ್ಲಿ ಪತ್ನಿಯೊಂದಿಗೆ ಸದ್ವರ್ತನೆ ಮಾಡಿದವನನ್ನು ಪುರುಷತ್ವ ಇಲ್ಲದವನು ಎಂದು ಹೀಯಾಳಿಸಲಾಗುತ್ತಿತ್ತು. ಇಂದಿಗೂ ನಮ್ಮ ಸಮಾಜದಲ್ಲಿ ಈ ಮನೋವೃತ್ತಿ ಹಲವೊಮ್ಮೆ ಕಾಣಸಿಗುತ್ತದೆ. ಅಂತಹ ಸಮಾಜದಲ್ಲಿ ಪ್ರವಾದಿ(ಸ) ಪತ್ನಿಯೊಂದಿಗೆ ಸದ್ವರ್ತನೆ ತೋರಿದವನೇ ನಿಮ್ಮ ಪೈಕಿ ಅತ್ಯುತ್ತಮನು ಎಂದು ಸಾರಿದರು. ಅವರು ಮಾದರಿ ಪತಿಯಾಗಿದ್ದರು. ಅವರು ತಮ್ಮ ಪತ್ನಿಯೊಂದಿಗೆ ಕೂತು ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು. ಪತ್ನಿಯರು ಕುದುರೆ ಅಥವಾ ಒಂಟೆಯ ಮೇಲೇರುವಾಗ ತಾವು ಮೊಣಕಾಲೂರಿ ಕೂತು ಅವರಿಗೆ ತಮ್ಮ ಮಂಡಿಗಳ ಮೇಲೆ ನಿಂತು ಏರಲು ಅನುವು ಮಾಡಿ ಕೊಡುತ್ತಿದ್ದರು. ಅವರೊಂದಿಗೆ ಆಟೋಟದಲ್ಲಿ ಭಾಗಿಯಾಗುತ್ತಿದ್ದರು. ಅವರಿಗೆ ಮನೆಗೆಲಸದಲ್ಲಿ ಸಹಕಾರಿಯಾಗುತ್ತಿದ್ದರು. ಅವರೊಂದಿಗೆ ಎಂದೂ ಏರು ಧ್ವನಿಯಲ್ಲಿ ಮಾತಾಡಲಿಲ್ಲ. ಅವರಿಗೆ `ಉಮ್ಮಹಾತುಲ್ ಮೂಮಿನೀನ್’ (ಸತ್ಯವಿಶ್ವಾಸಿಗಳ ಮಾತೆಯರು) ಎಂಬ ಗೌರವಾನ್ವಿತ ಬಿರುದನ್ನು ನೀಡಿದರು. ಆಯಿಷಾ(ರ)ರ ಪ್ರಕಾರ ಅವರು ಮನೆಯಿಂದ ಹೊರಗೆ ಹೋಗುವಾಗಲೆಲ್ಲ ಪತ್ನಿಯ ಗಲ್ಲವನ್ನು ಚುಂಬಿಸಿ ಹೋಗುತ್ತಿದ್ದರು. ಒಬ್ಬ ಹೆಣ್ಣು ತನ್ನ ಪತಿಯಲ್ಲಿ ಹುಡುಕುವ ಎಲ್ಲ ವೈಶಿಷ್ಟ್ಯಗಳೂ ಇದ್ದ ಆ ಪ್ರವಾದಿಯ ಮಾದರಿಯನ್ನು ಮೆಚ್ಚದೆ ಇರಲು ಯಾವ ಮಹಿಳೆಗೆ ಸಾಧ್ಯ?
ಪ್ರವಾದಿ(ಸ)ರ ಪುತ್ರಿಯಾದ ಫಾತಿಮಾ(ರ) ಅವರನ್ನು ಭೇಟಿಯಾಗಲು ಬಂದಾಗಲೆಲ್ಲ ಎದ್ದು ನಿಂತು, ಸ್ವಾಗತಿಸಿ, ಪುತ್ರಿಯ ಕೈ ಚುಂಬಿಸುತ್ತಿದ್ದ ಆ ಸ್ನೇಹಮಯಿ ತಂದೆಯನ್ನು ಪ್ರೀತಿಸದೆ ಇರಲು ಯಾವುದೇ ಹೆಣ್ಮಗಳಿಗೆ ಸಾಧ್ಯವೇ? ಸಾಕು ತಾಯಿಯಾದ ಉಮ್ಮು ಐಮನ್ (ರ)ರನ್ನು ನೋಡಿದ ತಕ್ಷಣ ಎದ್ದು ತಮ್ಮ ಆಸನವನ್ನು ಅವರಿಗೆ ನೀಡಿ ಗೌರವಿಸುತ್ತಿದ್ದ ಆ ಮಾದರಿ ಪ್ರವಾದಿಯು ಮಹಿಳೆಯರಿಗೆ ಅಚ್ಚುಮೆಚ್ಚಾಗುವುದರಲ್ಲಿ ಸಂಶಯವೇನಿದೆ? ಒಬ್ಬರು ಪ್ರವಾದಿಯ ಬಳಿಗೆ ಬಂದು ತಮ್ಮ ಸದ್ವರ್ತನೆಗೆ ಅತ್ಯಂತ ಅರ್ಹರು ಯಾರು ಎಂದು ಅವರೊಂದಿಗೆ ಪ್ರಶ್ನಿಸಿದಾಗ `ನಿನ್ನ ತಾಯಿ’ ಎಂದು ಮೂರು ಬಾರಿ ಆವರ್ತಿಸಿ ಹೇಳಿದ ಪ್ರವಾದಿಯನ್ನು ತಾಯಂದಿರು ಇಷ್ಟಪಡದೆ ಇರಲು ಸಾಧ್ಯವೇ? ತಮ್ಮ ತುಂಬು ಯವ್ವನದಲ್ಲಿ ನಲ್ವತ್ತು ವರ್ಷ ವಯಸ್ಸಿನ ಮಹಿಳೆಯನ್ನು ವಿವಾಹವಾಗಿ, ಅವರೊಂದಿಗೆ ಇಪ್ಪತ್ತೆಂಟು ವರ್ಷಗಳ ಕಾಲ ಬಹಳ ಪ್ರೀತಿಭರಿತ ಸಂಸಾರ ನಡೆಸಿ, ಆ ಪತ್ನಿಯ ಮರಣಾ ನಂತರ ಅವರನ್ನು ಜೀವನದುದ್ದಕ್ಕೂ ಸ್ಮರಿಸುತ್ತಿದ್ದ ಪ್ರವಾದಿಯನ್ನು ಕೊಂಡಾಡದಿರಲು ಮಹಿಳೆಯರಿಗೆ ಸಾಧ್ಯವೇ? ಒಮ್ಮೆ ಮಹಿಳೆಯೊಬ್ಬರು ಪ್ರವಾದಿ(ಸ)ರ ಬಳಿಗೆ ಬಂದು ತನಗಿಷ್ಟವಿಲ್ಲದವರೊಡನೆ ತನ್ನ ತಂದೆ ತನ್ನ ವಿವಾಹ ಮಾಡಿಸಿದ್ದಾರೆ ಎಂದು ದೂರು ನೀಡಿದಾಗ ತಕ್ಷಣವೇ “ನಿಮಗೆ ಈ ವಿವಾಹವನ್ನು ಈಗಲೇ ಕೊನೆಗೊಳಿಸುವ ಸ್ವತಂತ್ರ್ಯವಿದೆ” ಎಂಬ ಆದೇಶವನ್ನು ಹೊರಡಿಸಿ ಆ ಮಹಿಳೆಯ ಆಯ್ಕೆಯ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಪ್ರವಾದಿಯನ್ನು ಮಹಿಳೆಯರು ಅತ್ಯುನ್ನತ ಸ್ಥಾನದಲ್ಲಿರಿಸಿ ಗೌರವಿಸದಿರುವುದು ಅಸಾಧ್ಯವಲ್ಲವೇ? ತಮ್ಮ ವಿದಾಯ ಭಾಷಣದಲ್ಲಿ “ಮಹಿಳೆಯರ ಹಕ್ಕುಗಳ ಬಗ್ಗೆ ಜಾಗರೂಕರಾಗಿರಿ. ನಿಮಗೆ ಅವರ ಮೇಲೆ ಹಕ್ಕುಗಳಿರುವಂತೆ ಅವರಿಗೂ ನಿಮ್ಮ ಮೇಲೆ ಹಕ್ಕುಗಳಿವೆ” ಎಂದು ಪುರುಷರಿಗೆ ಎಚ್ಚರಿಕೆ ನೀಡಿದ ಆ ಪ್ರವಾದಿಯ ಬಗ್ಗೆ ಮಹಿಳೆಯರಿಗೆ ಅದೆಷ್ಟು ಪ್ರೀತಿಯಿರಬೇಕು!
ಪ್ರವಾದಿ ಮುಹಮ್ಮದ್(ಸ)ರು ಹದಿನಾಲ್ಕು ಶತಮಾನಗಳ ಹಿಂದೆ ತಮಗೆ ನೀಡಿರುವ ಹಕ್ಕುಗಳನ್ನು ಅರಿಯುವುದು ಮಹಿಳೆಯರ ಕರ್ತವ್ಯ. ಅವುಗಳನ್ನು ಎತ್ತಿ ಹಿಡಿಯುವುದರಲ್ಲಿ ಕೂಡಾ ಅವರೇ ಪ್ರಮುಖ ಪಾತ್ರ ವಹಿಸಬೇಕು. ಪ್ರವಾದಿ ಮುಹಮ್ಮದ್(ಸ)ರು ಮಹಿಳೆಯರಿಗೆ ಯಾಕೆ ಅತಿ ಹೆಚ್ಚು ಗೌರವಾನ್ವಿತರು ಎಂಬುದನ್ನು ಮಹಿಳೆಯರೊಡನೆಯೇ ಕೇಳಿದರೆ ಇನ್ನೂ ಅದೆಷ್ಟೋ ಹೆಚ್ಚು ಕಾರಣಗಳು ಬೆಳಕಿಗೆ ಬಂದೀತು.
ಮುಸ್ಲಿಮ್ ಮಹಿಳೆ ಶೋಷಿತಳು ಎಂದು ದುಃಖಿಸುತ್ತಿರುವ ಮತ್ತು ಆ ಶೋಷಣೆಯನ್ನು ನಿಲ್ಲಿಸಲು ಬೊಬ್ಬಿಡುತ್ತಿರುವ ಸಮಾಜವು ಪ್ರವಾದಿ ಮುಹಮ್ಮದ್(ಸ)ರ ಮಹಿಳಾ ಪರ
ಸುಧಾರಣೆಗಳ ಅಧ್ಯಯನ ನಡೆಸಿ, ಅವರು ನಡೆಸಿದ ಮಹಿಳಾ ವಿಮೋಚನಾ ಆಂದೋಲನವನ್ನು ಅನುಸರಿಸಿದರೆ, ಮಹಿಳಾ ಸ್ವಾತಂತ್ರ್ಯದ ಕನಸು ಅತಿ ಶೀಘ್ರವೇ ಸಾಕ್ಷಾತ್ಕಾರವಾಗಬಹುದು.

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *