“ಮನುಷ್ಯರನ್ನು ಕೊಂದು ಉಳಿಸಿ ಕೊಳ್ಳುವ ಧರ್ಮ ಯಾವುದು?”: ದೀಪಕ್ ರಾವ್ ಮತ್ತು ಬಷೀರ್ ರವರ ಸ್ವಗತ

ನಮಸ್ಕಾರ, ಅಸ್ಸಲಾಮ್ ಅಲೈಕುಂ

ನಾವಿಬ್ಬರು ಒಂದೇ ಊರಿನವರು. ನಮ್ಮಿಬ್ಬರದ್ದು ದುಡಿದು ತಿನ್ನುವ ಶ್ರಮ ಸಂಸ್ಕೃತಿ. ನಿಜ ನಮ್ಮಿಬ್ಬರಿಗೂ ಒಂದೊಂದು ಧರ್ಮವಿದೆ. ನಾವಿಬ್ಬರೂ ನಮ್ಮದೆ ಆದ ದೇವರು,ನಂಬಿಕೆಯನ್ನು ಹೊಂದಿದವರು. ಆದರೆ ಯಾರನ್ನೂ ದ್ವೇಷಿಸಲಿಲ್ಲ. ನಾವು ನಂಬಿದ ಧರ್ಮಗಳ ಯಾವ ಪುಟಗಳಲ್ಲೂ ಯಾರೊಬ್ಬರನ್ನೂ ದ್ವೇಷಿಸಿ, ಹೊಡೆದು,ಕೊಂದು ನಿಮ್ಮ ಧರ್ಮವನ್ನು ರಕ್ಷಿಸಿಕೊಳ್ಳಿ,ಶ್ರೇಷ್ಠಗೊಳಿಸಿಕೊಳ್ಳಿ ಎಂಬ ಸಣ್ಣ ಸಾಲಿನ ಒಕ್ಕಣಿಕೆಯೂ ಕಂಡವರಲ್ಲ. ಅಷ್ಟಕ್ಕೂ ನಾವಿಬ್ಬರು ಯಾವುದೇ ಧರ್ಮದ ವಕ್ತಾರರೂ ಆಗಿರಲಿಲ್ಲ. ಯಾಕಾಗಿ ನಮ್ಮನ್ನು ಕೊಂದರೋ ಗೊತ್ತಿಲ್ಲ.
ನಮ್ಮ ಮೇಲೆ ಕತ್ತಿ,ತಲವಾರುಗಳು ದಾಳಿ ಇಟ್ಟಾಗಲೆ ಗೊತ್ತಾಗಿದ್ದು ಎಲ್ಲರನ್ನೂ ಕಾಯಬೇಕಾದ ಧರ್ಮಕ್ಕೂ ಕಾಯುವವರು ಇದ್ದಾರೆ! .ಎಲ್ಲರನ್ನು ಪೊರೆಯುವ ಧರ್ಮವನ್ನು ಪೊರೆಯಲು ನರಮನುಷ್ಯ ರೂಪದ ಕಟುಕರು ಇಲ್ಲಿದ್ದಾರೆ!ಎಂಬುದು.

ನಾವಿಬ್ಬರು ದುಡಿಮೆ ಮುಗಿಸಿಕೊಂಡು ಮನೆಗೆ ಬರುತ್ತೇವೆ ಎಂದು ಮನೆಯವರಿಗೆ ಖಚಿತ ಭರವಸೆ ನೀಡಿದ್ದೆವು. ಏಕೆಂದರೆ ನಮ್ಮ ಸುತ್ತ ಇರುವ ಮನುಷ್ಯರನ್ನು ನಂಬಿದ್ದೆವು. ಮನುಷ್ಯರ‌ ನಡುವೆ ಹಂತಕರು ಇದ್ದದ್ದು ಗೊತ್ತೇ ಇರಲಿಲ್ಲ.

ಕೊಂದ ಕತ್ತಿಗಳಿಗೂ ದೇವರು- ಧರ್ಮದ ಹಂಗಿಲ್ಲ. ಅದಿರುವುದು ಕೈಗಳಿಗೆ, ಮಲಿನಗೊಂಡ ಮನಸ್ಸಿಗೆ ಮಾತ್ರ.
ಹರಿದ ನಮ್ಮ ರಕ್ತದಲ್ಲಾಗಲಿ, ಬಿಕ್ಕಳಿಸಿ,ಬಿಕ್ಕಳಿಸಿ ಉಮ್ಮಳಿಸುತ್ತಿರುವ ನಮ್ಮ ಕುಟುಂಬಗಳ ಕಣ್ಣೀರಿನಲ್ಲಾಗಲಿ, ಆಕ್ರಂದನವಾಗಲಿ ಧರ್ಮಗಳನ್ನು ನೀವು ಹುಡುಕಬಲ್ಲಿರಾ?

ಜೀವಹತ್ಯೆಗಳು ನಿಮ್ಮ ರಾಜಕೀಯ, ಧರ್ಮ,ದೇವರನ್ನು ಸಂತುಷ್ಟಿಗೊಳಿಸಿದ್ದೆ ಆಗಿದ್ದರೆ ಜಗತ್ತು ರಕ್ತ,ಹೆಣಗಳಿಂದ ತುಂಬಿ ಹೋಗಿರುತ್ತಿತ್ತು. ಹೂ ತೋಟಕ್ಕಿಂತ ಈ ಭೂಮಿ ಮರಣ ಮಸಣವೇ ಆಗಿರುತ್ತಿತ್ತು.
ಕೊಂದವರು,ಕೊಲ್ಲಿಸಿದವರು, ಕೊಲೆಯನ್ನು ಸಂಭ್ರಮಿಸುವವರು ನೀವಾದರೂ ಈ ಜಗತ್ತಿನಲ್ಲಿ ಅಜರಾಮರಾಗಿ ಉಳಿವಿರಾ?

ಮನುಷ್ಯರನ್ನೆಲ್ಲಾ ಕೊಂದ ಮೇಲೆ ದೇವರು- ಧರ್ಮವಾದರೂ ಉಳಿದು ಪ್ರಯೋಜನವೇನು?

ದಾರ್ಶನಿಕರು‌ ಹೇಳಿದಂತೆ ” ಮನುಷ್ಯರನ್ನು ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ?, ಹಾಗೊಮ್ಮೆ ಅಂತಹದ್ದು ಇರುವುದೇ ಆದರೆ ಅದು ಧರ್ಮವೇ ಅಲ್ಲ.”

ನಮ್ಮ ಅಧರ್ಮದ ಹತ್ಯೆಗೆ ಮನುಷ್ಯರೆಲ್ಲರೂ ಮಿಡಿದಿದ್ದಾರೆ. ಅದಷ್ಟೇ ನಮಗೆ ಸಮಾಧಾನ.
ನನ್ನನ್ನು ಕೊಲ್ಲಲ್ಲು ಅವನು ಕತ್ತಿ ಎತ್ತಿದಾಗ ನಾನು ಭಯಗೊಂಡೆ ಅವನು‌ ನನ್ನನ್ನು ಕೊಲ್ಲುತ್ತಾನೆ ಎಂದಲ್ಲ. ನನ್ನ ಪ್ರಾಣ ಉಳುವಿಗಾಗಿ ನಾನು ಅವನನ್ನು ಕೊಂದು ಅಲ್ಲಾಹು ವಿನ ಅವಕೃಫೆಗೆ ಪಾತ್ರನಾಗಿ ಬಿಡುತ್ತೇನೆ ಎಂದು.

ಇನ್ನಾದರೂ ನಮ್ಮೂರಲ್ಲಿ ನಮ್ಮಿಬ್ಬರಿಗೆ ಬಂದ ‘ಅಧರ್ಮ’ ಸ್ಥಿತಿ ಯಾವೊಬ್ಬರಿಗೂ ಬಾರದಿರಲಿ, ಯಾವ ತಾಯಂದಿರು ಅಳದಿರಲಿ, ವಿಧವೆಯ ಪಟ್ಟಗಳು ದಕ್ಕದಿರಲಿ, ಮಕ್ಕಳು ಅನಾಥರಾಗಿ ನಲುಗದಿರಲಿ.
ದೇವರೆ, ಯಾ ಖುದ್ಹಾ..
ಕೊಲ್ಲಲು ಎತ್ತಿದ ಕತ್ತಿಗಳೆಲ್ಲ ಹೂವು ಗಳಾಗಲಿ, ಕೊಲ್ಲುವ ಮನಸ್ಸುಗಳಲ್ಲಿ ಅಮೃತ ಬಿಂದು ಉಕ್ಕಲಿ.

ಅಲ್ ವಿದಾ..
ಹೋಗಿ ಬರುತ್ತೇವೆ.
– ದೀಪಕ್ ರಾವ್ – ಬಷೀರ್
—————————————-
( ಎನ್.ರವಿಕುಮಾರ್ ಶಿವಮೊಗ್ಗ)

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *