ಪ್ರಶ್ನೋತ್ತರ

 • ಏಕದೇವ ವಿಶ್ವಾಸದ ಇಸ್ಲಾಮಿ ಕಲ್ಪನೆ ?
  ismika15-07-2014
  ಏಕದೇವ ವಿಶ್ವಾಸವು ಇಸ್ಲಾಮ್ ಧರ್ಮದ ಮುಲಭೂತ ವಿಶ್ವಾಸವಾಗಿದೆ. ಏಕದೇವ ವಿಶ್ವಾಸವೆಂಬ ತಳಹದಿಯ ಮೇಲೆಯೇ ಇಸ್ಲಾಮ್ ಧರ್ಮದ ಸೌಧ ನಿಂತಿದೆ. ಆದುದರಿಂದ ಇಸ್ಲಾಮ್ ಧರ್ಮದ ಬಗ್ಗೆ ತಿಳಿಯ ಬಯಸುವವರು ಮೊದಲು ಏಕದೇವ ವಿಶ್ವಾಸದ ಕುರಿತು ಸರಿಯಾಗಿ ಅರಿತಿರುವುದು ಅತ್ಯಗತ್ಯ.
  ಈ ಜಗತ್ತಿನ ಸೃಷ್ಟಿಕರ್ತ ಒಬ್ಬನೇ, ಅವನೇ ಸಮಸ್ತ ವಿಶ್ವವನ್ನೂ  ಅದೊಳಗೊಂಡಿರುವ ಸಕಲ ಚರಾಚರಗಳನ್ನೂ ಸೃಷ್ಟಿಸಿದವನು. ಮನುಷ್ಯರನ್ನೂ ಇತರ ಜೀವಜಾಲಗಳನ್ನೂ ಅವನೇ ಪೋಷಿಸಿ ಬೆಳೆಸುತ್ತಿದ್ದಾನೆ. ಸರ್ವಲೋಕದ ಒಡೆತನ ಮತ್ತು ಆಧಿಪತ್ಯವು ಅವನಿಗೆ ಸೇರಿದೆ. ಆ ಏಕದೇವನನ್ನೇ ಪವಿತ್ರ ಕುರ್ಆನಿನಲ್ಲಿ 'ಅಲ್ಲಾಹ್' ಎಂದು ಕರೆಯಲಾಗಿದೆ. ಜಗತ್ತಿನ ಏಕೈಕ ಸೃಷ್ಟಿಕರ್ತನೂ ಪರಿಪಾಲಕನೂ ಒಡೆಯನೂ ಅಧಿಪತಿಯು ಅಲ್ಲಾಹನೇ ಆಗಿರುವಾಗ ಮನುಷ್ಯನ ಆರಾಧನೆ, ದಾಸ್ಯ ಮತ್ತು ಅನುಸರಣೆಗಳೂ ಆತನಿಗೆ ಸಲ್ಲಬೇಕೆಂಬುದು ಬುದ್ಧಿಯ ಬೇಡಿಕೆಯಾಗಿದೆ.
 • 'ಅಲ್ಲಾಹ್ 'ಮುಸ್ಲಿಮರ ದೇವರೇ?
  ismika15-07-2014
  ನಿಜವಾಗಿ 'ಅಲ್ಲಾಹ್ '  ಕೇವಲ ಮುಸ್ಲಿಮರ ದೇವರಲ್ಲ. ಶ್ರೀರಾಮ, ಶ್ರೀ ಕೃಷ್ಣರು ಹಿಂದೂಗಳ ದೇವರಾಗಿರುವಂತೆ, ಎಸುಕ್ರಿಸ್ತರು ಕ್ರೈಸ್ತರ ದೇವರಾಗಿರುವಂತೆ, ಮಹಾವೀರರು ಜೈನರ ದೇವರಾಗಿರುವಂತೆ ' ಅಲ್ಲಾಹ್ ' ಮುಸ್ಲಿಮರ ದೇವರು ಎಂದು ಕೆಲವರು ಭಾವಿಸುತ್ತಾರೆ. ಆದರೆ ಪವಿತ್ರ ಕುರ್ಆನ್ ಈ ವಾದವನ್ನು ಸ್ಪಷ್ಟವಾಗಿ ಖಂಡಿಸುತ್ತದೆ. ಅದರ ಪ್ರಥಮ ವಾಕ್ಯವೇ ಅಲ್ಲಾಹನನ್ನು ಈ ರೀತಿ ಪರಿಚಯಿಸುತ್ತದೆ.
  " ಸರ್ವಸ್ತುತಿಯು ಸರ್ವಲೋಕಗಳ ಒಡೆಯನಾದ ಅಲ್ಲಾಹನಿಗೆ ಮೀಸಲು.''(1 . 1 )
  ಪವಿತ್ರ ಕುರ್ಆನಿನ  ಕೊನೆಯ ಅಧ್ಯಾಯದಲ್ಲಿ ಅಲ್ಲಾಹನ ಕುರಿತು ಹೀಗೆ ಪ್ರಸ್ತಾಪಿಸಲಾಗಿದೆ;
  "ಹೇಳಿರಿ - ನಾನು ಮನುಷ್ಯರ ಒಡೆಯ, ಮನುಷ್ಯರ ಅಧಿಪತಿ, ಮತ್ತು ಮನುಷ್ಯರ ಆರಾಧ್ಯನ ಅಭಯ ಯಾಚಿಸುತ್ತೇನೆ." (114 : 1 - 3 )
  ಪವಿತ್ರ ಕುರ್ಆನಿನ ಒಂದೇ ಒಂದು ಸೂಕ್ತದಲ್ಲಾಗಲೀ ಪ್ರವಾದಿ ಮುಹಮ್ಮದ್ ರ (ಸ) ಒಂದೇ ಒಂದು ವಚನದಲ್ಲಾಗಲೀ ಅಲ್ಲಾಹನನ್ನು ಮುಸ್ಲಿಮರ ದೇವರು ಎಂದು ಎಲ್ಲೂ ಪ್ರಸ್ತಾಪಿಸಿಲ್ಲ. ಪವಿತ್ರ ಕುರ್ಆನಿನಲ್ಲಿ ಆ ಏಕದೇವನ ತೊಂಬತ್ತೊಂಬತ್ತು ಗುಣನಾಮಗಳನ್ನು ಪ್ರಸ್ತಾಪಿಸಲಾಗಿದೆ. ಆ ಪೈಕಿ ಯಾವ ಗುಣವೂ ಅಲ್ಲಾಹನು ಯಾವುದೇ ಒಂದು ಕೋಮಿನ, ಜನಾಂಗದ ಅಥವಾ ವರ್ಗದ ದೇವನೆಂದು ಸೂಚಿಸುವುದಿಲ್ಲ. ಬದಲಾಗಿ ಆತನನ್ನು ಭೂಮಿ- ಆಕಾಶಗಳ ಮತ್ತು ಅವುಗಳ ಮಧ್ಯೆ ಇರುವ ಎಲ್ಲ ವಸ್ತುಗಳ ಸೃಷ್ಟಿಕರ್ತ, ಪ್ರಭು ಮತ್ತು ಪರಿಪಾಲಕನೆಂದು ಅದು ಘಂಟಾಘೋಷವಾಗಿ ಸಾರುತ್ತದೆ.
 • ಇಸ್ಲಾಮ್ ಮತ್ತು ಭಯೋತ್ಪಾದನೆ ?
  ismika18-07-2014

  ಪ್ರಶ್ನೆ: ಜಗತ್ತಿನಾದ್ಯಂತವಿರುವ ಮುಸ್ಲಿಮರು ಭಯೋತ್ಪಾದಕರು ಮತ್ತು ತೀವ್ರವಾದಿಗಳಾಗಲು ಇಸ್ಲಾಮ್ ಕಾರಣವಲ್ಲವೇ?

  ಉತ್ತರ: ಇದು ಹೆಚ್ಚು ವಿವರಣೆಯನ್ನು ಬಯಸುವ ಪ್ರಶ್ನೆಯಾಗಿದೆ. 1492 ಮಾನವೇತಿಹಾಸದ ಅತಿ ದೊಡ್ಡ ದುರಂತದ ವರ್ಷವಾಗಿತ್ತು. ಸುದೀರ್ಘ ಶತಮಾನಗಳಲ್ಲಿ ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ, ಕಲೆ, ಸಾಹಿತ್ಯ, ಸಾಂಸ್ಕ್ರಂತಿಕ, ನಾಗರಿಕ, ವೈಜ್ಞಾನಿಕ ಕ್ಷೇತ್ರಗಳಲ್ಲಿಯೂ ಜಗತ್ತಿಗೆ ನಾಯಕತ್ವವನ್ನು ನೀಡುತ್ತಿದ್ದ ಮುಸ್ಲಿಮ್ ಸ್ಪೈನಿನ ಕೊನೆಯ ಆಡಳಿತಗಾರ ಅಬೂ ಅಬ್ದುಲ್ಲಾ ಆಗಿದ್ದರು. ಕೇವಲ ಗ್ರೆನಡಾ ನಗರವೊಂದೇ ಅವರ ಅಧೀನದಲ್ಲಿತ್ತು. ಆದರೆ 1492ರ ಜನವರಿಯಲ್ಲಿ ಅವರನ್ನು ಅಲ್ಲಿಂದ ಹೊರತಳ್ಳಿ ಸ್ಪೈನಿಯರು ಅಧಿಕಾರವನ್ನು ವಶಪಡಿಸಿಕೊಂಡಿದ್ದರು. ಸ್ಪೈನಿನ ಪತನ ಪೂರ್ಣಗೊಂಡ ಅದೇ ವರ್ಷ ಸಾಮ್ರಾಜ್ಯಶಾಹಿ ಶಕ್ತಿಗಳು ಅತಿಕ್ರಮಣವನ್ನು ಆರಂಬಿಸಿದರೆಂಬುದು ಗಮನಾರ್ಹವಾಗಿದೆ. ಕೊಲಂಬಸನು ತನ್ನ ಕಂಡು ಹಿಡಿಯುವ ಕಾರ್ಯವನ್ನು 1492ರಲ್ಲಿ ಪ್ರಾರಂಭಿಸಿದ್ದ. ಅದೇ ವರ್ಷ ಅಕ್ಟೋಬರ್ 12ಕ್ಕೆ ಆತ ಗಾನಹಾನಿ ದೀಪಕ್ಕೆ ತಲುಪಿದ.ಶಸ್ತ್ರಾಸ್ತ್ರಗಳೊಂದಿಗೆ ಹಡಗನ್ನು ಇಳಿದ ಕೊಲಂಬಸ್ ಮತ್ತು ಸಂಗಡಿಗರು ಅದಕ್ಕೂ ಮೊದಲು ಆ ನಾಡು ಸ್ಫಾನಿಶ್ ರಾಜನದ್ದಾಗಿರಬೇಕೆಂದು ಘೋಷಿಸಿದರು. ಅಲ್ಲಿನ ನಿವಾಸಿಗಳಿಗೆ ಅವರು ತಿಳಿದಿರದ ಭಾಷೆಯ ಆದೇಶವನ್ನು ಓದಿ ಹೇಳಿದರು. ಈ ಆದೇಶವನ್ನು ಅನುಸರಿಸದಿದ್ದರೆ ಅದರ ಪರಣಾಮವೇನಾಗಿರುತ್ತದೆಯೆಂದು ಕೊಲಂಬಸ್ ವಿವರಿಸಿದನು. "ನಾನು ಖಚಿತವಾಗಿ ಹೇಳುತ್ತೇನೆ. ದೇವನ ಸಹಾಯದಿಂದ ನಿಮ್ಮ ನಾಡಿಗೆ ಬಲವಂತದಿಂದ ಪ್ರವೇಶಿಸುವೆವು. ನಿಮ್ಮೊಂದಿಗೆ ಸಾಧ್ಯವಿದ್ದಂತೆ ಯುದ್ಧ ಮಾಡುತ್ತೇವೆ. ನಿಮ್ಮನ್ನು ಕ್ರೈಸ್ತ ಇಗರ್ಜಿಗೂ ರಾಜಂದಿರಿಗೂ ಹಂಚುತ್ತೇವೆ. ನಿಮ್ಮ ಮಕ್ಕಳು ಮತ್ತು ಪತ್ನಿಯರನ್ನು ಹಿಡಿದು ಗುಲಾಮರನ್ನಾಗಿ ಮಾಡುತ್ತೇವೆ. ನಿಮ್ಮ ವಸ್ತುಗಳನ್ನು ಕಿತ್ತುಕೊಳ್ಳುತ್ತೇವೆ. ನಮ್ಮಿಂದ ಸಾಧ್ಯವಿರುವ ಎಲ್ಲಾ ರೀತಿಯ ದ್ರೋಹವನ್ನು ವಿನಾಶವನ್ನು ಮಾಡುವೆವು" (ಪಾಶ್ಚಾತ್ಯೀಕರಣದ 500 ವರ್ಷಗಳು, ಐ.ಪಿ.ಎಚ್-ಪುಟ 17)

  ಇದರೊಂದಿಗೆ ಯುರೋಪಿನ ಅತಿಕ್ರಮಣವು ಪ್ರಾರಂಭವಾಗಿತ್ತು. ಮುಸ್ಲಿಮ್ ಸ್ಫೈನ್ ಪತನಗೊಂಡ 6 ವರ್ಷದ ಬಳಿಕ 1498ರಲ್ಲಿ ವಾಸ್ಕೋಡಗಾಮ ಹಡಗಿನಲ್ಲಿ ಕಲ್ಲಿಕೋಟೆ ಎಂಬಲ್ಲಿ ಬಂದಿಳಿದನು. ಅಮೇರಿಕಾದಲ್ಲಿ 1492ರಲ್ಲಿ ಏಳೂವರೆಯಿಂದ ಹತ್ತು ಕೋಟಿಯವರೆಗೆ ಆದಿವಾಸಿಗಳು ವಾಸಿಸುತ್ತಿದ್ದರು. ಯುರೋಪಿನ ಅತಿಕ್ರಮಣದಿಂದಾಗಿ ಅವರಲ್ಲಿ ಶೇ 90 ರಷ್ಟು ಆದಿವಾಸಿಗಳನ್ನು ಒಂದೂವರೆ ಶತಮಾನದಲ್ಲಿ ಸ್ವಂತ ಮಣ್ಣಿಂದಲೇ ಯುರೋಪಿಯನ್ನರು ನಾಮಾವಶೇಷಗೊಳಿಸಿದರು. ಬರ್ಬರವಾದ ಸಾಮೂಹಿಕ ಕಗ್ಗೊಲೆಗಳಿಂದ ನಾಶಮಾಡಿದ ಬಳಿಕ 1776ರ ಸ್ವಾತಂತ್ರ್ಯ ಘೋಷಣೆಯೊಂದಿಗೆ ಯುರೋಪಿಯನ್ನರು ಅಮೇರಿಕವನ್ನು ವಶಪಡಿಸಿಬಿಟ್ಟಿದ್ದರು. ಸಂಪೂರ್ಣ ಅನ್ಯಾಯದ ಮತ್ತು ಅತಿಕ್ರಮಣದ ಆಧಾರದಲ್ಲಿದ್ದ ಈ ಸ್ವಾತಂತ್ರ್ಯ ಘೋಷಣೆಯ ಮೂಲಕ ಇಂದಿನ ಅಮೇರಿಕ ನೆಲೆನಿಂತಿದೆ.
  1527ರಲ್ಲಿ ಪೋರ್ಚುಗೀಸರು ಬಹ್ರೈನನ್ನು ಅತಿಕ್ರಮಿಸಿ ವಶಪಡಿಸಿಕೊಂಡರು. ಆನಂತರ ಓಮನನ್ನು ಕೂಡಾ ಅಧೀನಗೊಳಿಸಿದರು. ಆದರೂ ಉಸ್ಮಾನಿಗಳು ಆ ನಾಡನ್ನು ಮರಳಿ ವಶಪಡಿಸಿಕೊಂಡರು. ಆನಂತರ ಕ್ರಿ.ಶ 1798-1801ರ ಅವಧಿಗೆ ನೆಪೋಲಿಯನ್ನನ ಫ್ರೆಂಚ್‍ಸೇನೆ ಈಜಿಪ್ಟ್ ನ ಅಲಕ್ಸಾಂಡ್ರಿಯಾ, ಅಕ್ಕಾ ನಗರಗಳನ್ನು ವಶಪಡಿಸಿಕೊಂಡಿತು. ಆ ಬಳಿಕ ಶತಮಾನಗಳ ಕಾಲ ಅರೇಬಿಯಾದ ಮುಸ್ಲಿಮ್ ನಾಡುಗಳು ಅತಿಕ್ರಮಿತ ಪಾಶ್ಚಾತ್ಯರ ನಾಡುಗಳಾಗಿದ್ದವು. ಫ್ರಾನ್ಸ್ ದೇಶವು 1830ರಲ್ಲಿ ಆಲ್ಜೀರಿಯಾವನ್ನೂ, 1881ರಲ್ಲಿ ಟುನೀಷ್ಯಾವನ್ನೂ 1859ರಲ್ಲಿ ಜಿಬೂಟಿಯನ್ನು, 1991ರಲ್ಲಿ ಮೌರಿತಾನಿಯಾವನ್ನೂ ಅಧೀನಗೊಳಿಸಿತು. ಇಟಲಿ 1859ರಲ್ಲಿ ಸೋಮಾಲಿಯಾವನ್ನೂ 1911ರಲ್ಲಿ ಲಿಬಿಯಾವನ್ನೂ, 1880ರಲ್ಲಿ ಎರಿತ್ರಿಯಾವನ್ನೂ ವಶಪಡಿಸಿತು. ಬ್ರಿಟನ್ 1800ರಲ್ಲಿ ಮಸ್ಕತ್, 1820ರಲ್ಲಿ ಓಮನ್‍ನ ಉಳಿದ ಭಾಗವನ್ನು, 1839ರಲ್ಲಿ ಏಡನನ್ನು, 1863ರಲ್ಲಿ ಬಹ್ರೈನನ್ನೂ 1878ರಲ್ಲಿ ಸೈಪ್ರಸ್ಸನ್ನೂ, 1882ರಲ್ಲಿ ಈಜಿಪ್ಟನ್ನೂ 1898ರಲ್ಲಿ ಸುಡಾನನ್ನೂ, 1899ರಲ್ಲಿ ಕುವೈಟನ್ನೂ ಅಧೀನಕ್ಕೊಳಪಡಿಸಿತು. 1916ರಲ್ಲಿ ಬ್ರಿಟನ್ ಮತ್ತು ಫ್ರಾನ್ಸ್ ಜೊತೆಗೂಡಿ ಮಾಡಿಕೊಂಡ ಗುಪ್ತ ಸೆಕ್ಸಿಪಿಕೋಟ್ ಕರಾರು ಪ್ರಕಾರ ಉಸ್ಮಾನಿಯಾ ಖಿಲಾಫತ್‍ನ ಅದೀನದಲ್ಲಿದ್ದ ಅರಬ್ ಪಾಂತ್ಯಗಳನ್ನು ಬ್ರಿಟನ್ ಮತ್ತು ಫ್ರಾನ್ಸ್ ಹಂಚಿಕೊಡವು. ಈ ರೀತಿ ಇರಾಕ್ ಮತ್ತು ಜೋರ್ಡಾನ್, ಫೆಲೆಸ್ತೀನ್ ಮತ್ತು ಕತಾರ್, ಬ್ರಿಟನ್‍ಗೂ, ಸಿರಿಯಾ ಮತ್ತು ಲೆಬನಾನ್ ಫ್ರಾನ್ಸ್ ನ ಕಪಿ ಮುಷ್ಟಿಯ ಅಧೀನಗೊಂಡವು. ಮೊರೊಕ್ಕೋ ಸ್ಫೈನಿನ ಮತ್ತು ಇಂಡೋನೇಷಿಯಾ ಡಚ್ಚರ ಕಾಲನಿಗಳಾದವು. ಭಾರತ ಅಫಘಾನಿಸ್ತಾನಗಳೆಲ್ಲವೂ ಸಾಮ್ರಾಜ್ಯ ಶಕ್ತಿಗಳ ಕಪಿಮುಷ್ಟಿಗೊಳಗಿದ್ದಂತೆ. ಕಳೆದ ಶತಮಾನ ಆದ್ಯಭಾಗವು ಕಳೆದು ಹೋಗುತ್ತಿದ್ದಂತೆ ಎಲ್ಲ ಪಾಶ್ಚಾತ್ಯ ಕಾಲನಿಗಳಲ್ಲಿ ಸ್ವಾತಂತ್ರ್ಯದ ಹೋರಾಟವು ಬಲವರ್ಧಿಸಿತು. ತತ್ಪರಿಣಾಮವಾಗಿ 1932ರಲ್ಲಿ ಇರಾಕ್ ಮತ್ತು 1946ರಲ್ಲಿ ಸಿರಿಯಾ, ಲೆಬನಾನ್‍ಗಳು, 51ರಲ್ಲಿ ಲಿಬಿಯಾ ಮತ್ತು ಓಮನ್, 52ರಲ್ಲಿ ಈಜಿಪ್ಟ್, 56ರಲ್ಲಿ ಮೊರೋಕ್ಕೋ ಸುಡಾನ್ ಮತ್ತು ಟುನೀಷ್ಯಾ, 58ರಲ್ಲಿ ಜೋರ್ಡಾನ್, 59ರಲ್ಲಿ ಮೊರಿಟಾನಿಯಾ, 60ರಲ್ಲಿ ಸೋಮಾಲಿಯಾ, 61ರಲ್ಲಿ ಕುವೈಟ್, 62ರಲ್ಲಿ ಆಲ್ಜೀರಿಯಾ, 68ರಲ್ಲಿ ಯಮನ್, 71ರಲ್ಲಿ ಕತಾರ್, ಬಹ್ರೈನ್ ಮತ್ತು ಅರಬ್ ಎಮಿರೇಟ್ಸ್ 77ರಲ್ಲಿ ಜಿಬೂಟಿಯೂ ಸ್ವಾತಂತ್ರ್ಯವನ್ನು ಗಳಿಸಿಕೊಂಡಿತು. ಆದರೂ ಈ ನಾಡುಗಳಿಂದ ಸಾಮ್ರಾಜ್ಯಶಾಹಿಶಕ್ತಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ನಿರಂಕುಶಾಧಿಪತಿಗಳು ಮತ್ತು ಸ್ವೇಚ್ಛಾಧಿಪತಿಗಳಾದ ರಾಜಂದಿರು ಮತ್ತು ಚಕ್ರವರ್ತಿಗಳನ್ನು ಅಧಿಕಾರಕ್ಕೇರಿಸಿದ ನಂತರವೇ ಆ ನಾಡನ್ನು ತೊರೆದು ಹೋದರು. ಜೊತೆಯಲ್ಲಿ ಈ ನಾಡುಗಳಲ್ಲಿ ಪರಿಹರಿಸಲಾಗದ ಗಡಿ ವಿವಾದಗಳನ್ನು ಹುಟ್ಟು ಹಾಕಿದ್ದರು. ಯಮನ್ ಮತ್ತು ಸೌದಿ ಅರೇಬಿಯಾಗಳ ನಡುವೆ, ಇರಾನ್ ಮತ್ತು ಇರಾಕ್‍ಗಳ ನಡುವೆ, ಇರಾಕ್ ಮತ್ತು ಕುವೈಟ್‍ಗಳ ನಡುವೆ, ಇರಾನ್ ಮತ್ತು ಯುಎಇಗಳ ನಡುವೆ ಪರಿಹಾರವಾಗದ ವಿವಾದಗಳು ಬಾಕಿಯಾಗಿರುವುದಕ್ಕೆ ಸಾಮ್ರಾಜ್ಯಶಾಹಿ ಶಕ್ತಿಗಳು ಮಾಡಿಟ್ಟ ಕುತಂತ್ರಗಳು ಕಾರಣವಾಗಿದೆ. ಅರೇಬಿಯನ್ ಮುಸ್ಲಿಮರು ಒಗ್ಗೂಡದಂತೆ ಇದು ತಡೆಯನ್ನು ಸೃಷ್ಟಿಸುವುದರೊಂದಿಗೆ ಪರಸ್ಪರ ಪೈಪೋಟಿ ನಡೆಸಲು ಆಸ್ಪದವಾಗುತ್ತಿವೆ. ಅಮೇರಿಕ ಮತ್ತು ಇತರ ಬಂಡವಾಳಶಾಹಿ ದೇಶಗಳಿಗೆ ಆ ನಾಡಿನ ಪೆಟ್ರೋಲ್, ಅನಿಲ ಮತ್ತು ಇತರ ಅಸಂಸ್ಕರಿತ ವಸ್ತುಗಳನ್ನು ದೋಚಲು ಅವಕಾಶ ಲಭಿಸುತ್ತಿದೆ. ಸಾಮ್ರಾಜ್ಯಶಾಹಿ ಶಕ್ತಿಗಳು ಹುಟ್ಟು ಹಾಕಿದ ವಿವಾದದ ಆಧಾರದಲ್ಲಿ ಇರಾಕ್ ಮತ್ತು ಇರಾನ್‍ಗಳ ನಡುವೆ ಯುದ್ಧ ನಡೆದಿತ್ತಲ್ಲವೇ. ಇದು ಅಮೇರಿಕಕ್ಕೆ ಈ ವಲಯದಲ್ಲಿ ಹಸ್ತಕ್ಷೇಪ ನಡೆಸಲು ಅವಕಾಶವನ್ನು ಒದಗಿಸಿತು. ಅದು ಅವರ ಉದ್ದೇಶವಾಗಿತ್ತು ಅಷ್ಟೆ. ಅರೇಬಿಯನ್ ಮುಸ್ಲಿಮ್ ದೇಶಗಳು ಸ್ವಾತಂತ್ರ್ಯವನ್ನು ಗಳಿಸಿಕೊಂಡ ನಂತರವೂ ಅಲ್ಲಿ ಪಾಶ್ಚಾತ್ಯರ ಅದೃಶ್ಯ ಸಾಮ್ರಾಜ್ಯಶಾಹಿತ್ವ, ಶೋಷಣೆ ಮತ್ತು ನಿಯಂತ್ರಣಗಳು ಇಂದಿಗೂ ನೆಲೆನಿಂತಿವೆ. ಆ ದೇಶಗಳಿಗೆ ತಮ್ಮ ನಾಡಿನ ಸಂಪನ್ಮೂಲಗಳನ್ನೇ ತಮ್ಮಿಚ್ಛೆಯಂತೆ ಉಪಯೋಗಿಸಲು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲಿನ ಆಡಳಿತಗಾರರು ಅರಿತೋ ಅರಿಯದೆಯೋ ನಿರ್ಬಂಧಕ್ಕೊಳಗಾಗಿಯೂ ಒಳಗಾಗದೆಯೂ ಪಾಶ್ಚಾತ್ಯ ಹಿತಾಸಕ್ತಿಗಳನ್ನು ಸಂರಕ್ಷಿಸಿಕೊಂಡು ಬಂದರು. ಇರಾಕ್‍ನ ಮೇಲೆ ಹಸ್ತಕ್ಷೇಪಿಸಲು ಅವಕಾಶ ಸಿಗುತ್ತಿದ್ದಂತೆ ಅರಬ್ ರಾಷ್ಟ್ರಗಳ ಮೇಲಿನ ಹಿಡಿತವನ್ನು ಬಿಗಿಗೊಳಿಸಿತಲ್ಲದೆ ತಮ್ಮ ಸೈನಿಕರನ್ನು ಸಾಕುವ ಹೊಣೆ ಮತ್ತು ಆರ್ಥಿಕ ಹೊಣೆಯನ್ನೂ ಅವುಗಳ ಮೇಲೆಯೇ ಹೊರಿಸಿತು. ಇಂದು ಎಲ್ಲ ಅರಬ್ ನಾಡುಗಳಲ್ಲಿ ಅಮೇರಿಕ ಶಸ್ತ್ರ್ರಾಸ್ತ್ರ ದಾಸ್ತಾನು ಮತ್ತು ಸೇನಾ ನೆಲೆಗಳನ್ನು ಹೊಂದಿದೆ. ಅದನ್ನು ಕೊನೆಗೊಳಿಸಬೇಕೆನ್ನುವುದೂ ಈ ಸಾಮ್ರಾಜ್ಯಶಾಹಿ ಶೋಷಣೆಯನ್ನು ನಿಲ್ಲಿಸಬೇಕೆನ್ನುವುದನ್ನು ಪಾಶ್ಚಾತ್ಯ ನಾಡುಗಳು ಕ್ರೂರ ಪಾತಕವೆಂದು ಪರಿಗಣಿಸುತ್ತದೆ. ಕಳೆದ ಶತಮಾನದಲ್ಲಿ ಕೊನೆ ದಶಕದ ವರೆಗೂ ಜಗತ್ತಿನಲ್ಲಿ ಬಲ ಪ್ರಯೋಗದ ಸಮತೋಲನವು ನೆಲೆಯೂರಿತ್ತು. ಆದರೆ ಸಮಾಜವಾದದ ವಿಭಾಗವು ದುರ್ಬಲಗೊಂಡು ಇತಿಹಾಸಕ್ಕೆ ಸೇರವುದರೊಂದಿಗೆ ಶೀತಲ ಯುದ್ಧ ಕೊನೆಗೊಂಡಿತು. ಜಗತ್ತು ಅಮೇರಿಕದ ನೇತೃತ್ವದಲ್ಲಿ ಏಕ ಧ್ರುವವಾಗಿ ಪರಿವರ್ತನೆಗೊಂಡಿತು. ಗಲ್ಫ್ ಯುದ್ಧದಲ್ಲಿ ಅಮೇರಿಕ ಕೂಟವು ಗೆಲ್ಲುವುದರೊಂದಿಗೆ ಅದು ಜಾಗತಿಕ ಪೋಲಿಸ್‍ಗಿರಿಗಿಳಿಯಿತು. ತಮ್ಮ ಹಿತಾಸಕ್ತಿಗಳಿಗೆ ಎದುರು ನಿಲ್ಲುವವರನ್ನು ಉಗ್ರವಾದಿಗಳೆಂದೂ ಭಯೋತ್ಪಾದಕರೆಂದೂ ಮುದ್ರೆಯೊತ್ತಿತು. ಅವರ ಧ್ವಂಸಕ್ಕೆ ಹೊರಟಿತು. ಆಷ್ಚತ್‍ರ ಕೂಟ ಕಮ್ಯುನಿಸ್ಟರ ಪತನಾನಂತರ ಇಸ್ಲಾಮನ್ನು ತಮ್ಮ ಪ್ರಥಮ ಶತ್ರುವಾಗಿ ಪರಿಗಣಿಸಿತು. ಅಮೇರಿಕಾ ಮತ್ತು ಅದರ ನೇತೃತ್ವದಲ್ಲಿರುವ ನ್ಯಾಟೋ ಈ ವಿಷಯವನ್ನು ಶಂಕಾತೀತವಾಗಿ ತಿಳಿಸಿದೆ. ಆದುದರಿಂದ ಜಗತ್ತಿನುದ್ದಕ್ಕೂ ಇರುವ ಇಸ್ಲಾಮೀ ನವೋತ್ಥಾನ ಮತ್ತು ಮುನ್ನಡೆಯನ್ನು ದಮನಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ಇಸ್ಲಾಮ್ ಮತ್ತು ಮುಸ್ಲಿಮರ ಮೇಲೆ ಧಾರ್ಮಿಕ ಮೂಲಭೂತವಾದ, ಧರ್ಮಭ್ರಾಂತಿ, ಭಯೋತ್ಪಾದನೆ, ಉಗ್ರವಾದ ಮುಂತಾದ ಪದಗಳನ್ನು ಅಡೆತಡೆಯಿಲ್ಲದೆ ನಿರಂತರ ಅವರು ಪ್ರಯೋಗಿಸುತ್ತಿದ್ದಾರೆ. 1993ರಲ್ಲಿ ಅಮೇರಿಕನ್ ಕಾಂಗ್ರೆಸ್ ಅಂಗೀಕರಿಸಿ ಬಿಡುಗಡೆ ಮಾಡಿ ಹೊರತಂದ ಕೇವಲ 93 ಪುಟಗಳ 'ಹೊಸ ಜಾಗತಿಕ ಇಸ್ಲಾಮಿಸ್ಟ್ ಗಳು' ಎಂಬ ಅಧಿಕೃತ ದಾಖಲೆಯಲ್ಲಿ 288 ಸಲ ಭಯೋತ್ಪಾದನೆ, ಭಯೋತ್ಪಾದಕರು ಎಂಬ ಪದಗಳನ್ನು ಪ್ರಯೋಗಿಸಿದ್ದಾರೆ. ಝಿಯೋನಿಸ್ಟ್ ಆಂದೋಲನದೊಂದಿಗೆ ಸಂಬಂಧವನ್ನು ಬೆಳೆಸುವ ಫಾನ್‍ಫೋರೆಯೆಂಟ್ಚ ಯಾಸುಫ್ ಝೋದಾನಿಸ್ಕಿ ಮುಂತಾದವರು ಪ್ರಸ್ತುತ ದಾಖಲೆಯನ್ನು ತಯಾರಿಸಿದ್ದಾರೆ. ವಾಸ್ತವದಲ್ಲಿ ಜಗತ್ತಿನಲ್ಲಿ ಸಾಮೂಹಿಕ ಕಗ್ಗೊಲೆ ಮತ್ತು ಭಯೋತ್ಪಾದನೆಯನ್ನು ನಡೆಸುವವರು ಒಂದನೇ ಜಾಗತಿಕ ಯುದ್ಧದಲ್ಲಿ 80 ಲಕ್ಷ ಮತ್ತು ಎರಡನೇ ಜಾಗತಿಕ ಯುದ್ಧದಲ್ಲಿ 5 ಕೋಟಿ ಮತ್ತು ವಿಯೆಟ್ನಾಮ್ ಯುದ್ಧದಲ್ಲಿ ಮೂವತ್ತು ಲಕ್ಷ ಜನರು ಸತ್ತರು. ಪನಾಮ ಮತ್ತು ಗ್ವಾಟಮಾಲದಲ್ಲಿ ನಿಕರಾಗುವಾ,
  ಕೆಂಬೋಡಿಯಾ, ಕೊರಿಯಾ ಮತ್ತು ದಕ್ಷಿಣಾಫ್ರಿಕದಲ್ಲಿ ಲಕ್ಷಾಂತರ ಜನರ ಕಗ್ಗೊಲೆ ನಡೆಯಿತು. ಇವುಗಳಲ್ಲಿ ಇಸ್ಲಾಮಿನದ್ದಾಗಲಿ ಮುಸ್ಲಿಮರದ್ದಾಗಲಿ ಯಾವುದೇ ಪಾತ್ರವಿರಲಿಲ್ಲ. ಜಪಾನ್ ಯುದ್ಧದಿಂದ ಹಿಂದೆ ಸರಿಯಲು ಸಿದ್ಧವಾಗಿದ್ದರೂ ಹಿರೋಷಿಮ ನಾಗಸಾಕಿಗಳಲ್ಲಿ ಅಣುಬಾಂಬ್ ಹಾಕಿರುವುದು ಕ್ರೂರ ಭಯೋತ್ಪಾದಕನಾದ ಅಮೇರಿಕಾವೇ ಆಗಿದೆ. ಆ ಹೆಸರಿಗೆ ಅದು ಇಂದು ಕೂಡಾ ಅರ್ಹವಾಗಿಯೇ ಇದೆ. ತಮ್ಮ ಹಿತಾಸಕ್ತಿಗಳನ್ನು ಸ್ವೀಕರಿಸದಿರುವ ಎಲ್ಲ ದೇಶಗಳನ್ನು ಮತ್ತು ಸಮುದಾಯಗಳನ್ನು ಅದು ವಿರೋಧಿಸುತ್ತಿದೆ. ತನ್ನ ನಿಯಂತ್ರಣಕ್ಕೆ ಬಾರದ ಎಲ್ಲ ನಾಡುಗಳಲ್ಲಿ ಅದು ಭಯೋತ್ಪಾದನೆಯ ಕೃತ್ಯವನ್ನು ಮಾಡಿಸುತ್ತಿದೆ. ಅದಕ್ಕೆಂದೇ ಗುಪ್ತದಳವಾದ ಸಿಐಎ ಮತ್ತು ಭಯೋತ್ಪಾದನೆಯ ಚಟುವಟಿಕೆಯಲ್ಲಿ ನಿರತವಾದ ಝಿಯೋನಿಸ್ಟರನ್ನು ಅದು ಬಳಸಿಕೊಳ್ಳುತ್ತಿದೆ. ಆಂತರಿಕ ಸಮಸ್ಯೆಗಳನ್ನು ದೂರವಿರಿಸುವುದಕ್ಕೂ ಅದು ಜಗತ್ತಿನಲ್ಲಿ ಯುದ್ಧಗಳನ್ನು ಮಾಡಿಸುತ್ತಿದೆ. ಅಮೇರಿಕಾದ ರಾಜಕೀಯ ವೃತ್ತಗಳಲ್ಲಿ ನೆರೆದು ನಿಂತ ಮಿಸ್ಟರ್ ರೋಸ್ಪೊರರ್ ಹೇಳುತ್ತಾರೆ- ಆಂತರಿಕ ಪರಿಸ್ಥಿತಿ ಕೆಟ್ಟು ಹೋದಾಗ ಗಮನವನ್ನು ಬೇರೆಡೆಗೆ ಸೆಳೆಯಲು ನಾವು ಜಗತ್ತಿನಲ್ಲಿ ಸಣ್ಣ ಯುದ್ಧಗಳನ್ನು ಮಾಡಿಸುತ್ತೇವೆ. ಈ ರೀತಿ ಕಳೆದ ಒಂದು ಶತಮಾನದಲ್ಲಿ ಅಮೇರಿಕ ಜಗತ್ತಿನ 50ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಹಸ್ತಕ್ಷೇಪ ನಡೆಸಿ ಕ್ಷೋಭೆ ಮತ್ತು ಸಾಮೂಹಿಕ ಕಗ್ಗೊಲೆಗಳನ್ನು ಮಾಡಿಸಿದೆ. ಇಂತಹ ಒಂದು ಭಯೋತ್ಪಾದಕ ರಾಷ್ಟ್ರದ ಸುಳ್ಳು ಪ್ರಚಾರವು ಇಸ್ಲಾಮ್ ಮತ್ತು ಮುಸ್ಲಿಮರ ಕುರಿತು ತಪ್ಪು ಅಭಿಪ್ರಾಯಗಳು ಬೆಳೆಯುವುದಕ್ಕ್ಕೆಕಾರಣವಾಗಿದೆ. ಎಲ್ಲ ವಿಧದ ಪ್ರಚಾರದ ಸರಕುಗಳನ್ನು ಹಸ್ತದಲ್ಲಿಟ್ಟು ಕೊಂಡಿರುವ ಅಮೇರಿಕದ ಕುಟಿಲ ತಂತ್ರಗಳು ಜಾಗತಿಕ ಜನ ಸಮುದಾಯವನ್ನು ತಪ್ಪುದಾರಿಗೆಳೆಯುವುದರಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಿದೆ. ವಾಸ್ತವದಲ್ಲಿ ಇಂದು ಅತಿ ಕ್ರೂರ ಭಯೋತ್ಪಾದಕ ಕೃತ್ಯವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯೇ ನಡೆಸುತ್ತಿದೆ. ಯಾವುದಾದರೊಂದು ದೇಶದ ಪ್ರಯಾಣಿಕ ವಿಮಾನವನ್ನು ಅಪಹರಿಸಿ ಅದರಲ್ಲಿದ್ದ ಪ್ರಯಾಣಿಕರನ್ನು ಸೆರೆಯಾಳುಗಳನ್ನಾಗಿರಿಸಿದರೆ ಅಂತಹವರನ್ನು ನಾವು ಉಗ್ರವಾದಿಗಳು ಮತ್ತು ಭಯೋತ್ಪಾದಕರೆಂದು ಕರೆಯುವೆವು. ಅದು ಖಂಡಿತವಾಗಿಯೂ ಸರಿಯೇ ಆಗಿದೆ. ನಿರಪರಾಧಿಗಳಾದ ಪ್ರಯಾಣಿಕರನ್ನು ಶಾರೀರಿಕವಾಗಿಯೂ ಮಾನಸಿಕವಾಗಿಯೂ ಪೀಡಿಸುವುದು ಕ್ರೂರವೂ ಮಾನವ ವಿರೋಧಿಯೂ ಆಗಿದೆ. ಆದ್ದರಿಂದ ಅದು ಧರ್ಮ ವಿರೋಧಿಯೂ ಆಗಿದೆ. ಆದರೆ ಸದ್ದಾಮ್ ಹುಸೈನ್ ಎಂಬ ಓರ್ವ ಆಡಳಿತಗಾರನಲ್ಲಿದ್ದ ವೈರಕ್ಕಾಗಿ ಇರಾಕ್‍ನ ಒಂದೂ ಕಾಲು ಕೋಟಿ ಜನರನ್ನು ಕಳೆದ 11 ವರ್ಷಗಳಲ್ಲಿ ಆಹಾರ ಔಷಧಗಳನ್ನು ನೀಡದೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ಬಂದಿಗಳಾಗಿಸಿರುವುದಲ್ಲದೆ, 6 ಲಕ್ಷ ಮಕ್ಕಳು ಸಹಿತ 11 ಲಕ್ಷ ಮಂದಿಯನ್ನು ಕೊಂದು ಹಾಕಿತು. ಈ ರೀತಿ ಜಗತ್ತಿನಲ್ಲಿ ಅತಿ ಕ್ರೂರಿ ಕೊಲೆಗಡುಕನಾಗಿ ಪರಿವರ್ತನೆಗೊಂಡ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈಗ ಶಾಂತಿಯ ಕಾವಲು ಭಟನೆಂದು ಕರೆಯಲ್ಪಡುತ್ತಿರುವುದು ಎಷ್ಟೊಂದು ವಿಚಿತ್ರವೂ ವಿರೋಧಭಾಸವೂ ಆಗಿದೆ. ಅಮೇರಿಕದಲ್ಲದ ಯಾವುದೇ ಮಾನದಂಡ ಇಂದು ಲೋಕದಲ್ಲಿಲ್ಲ ಎಂಬುದೇ ಅದಕ್ಕೆ ಕಾರಣವಾಗಿದೆ. ಮುಸ್ಲಿಮರಲ್ಲಿ ಉಗ್ರವಾದಿಗಳೋ ಅಥವಾ ಭಯೋತ್ಪಾದಕರೋ ಇಲ್ಲವೆಂದು ಇದರ ಅರ್ಥವಲ್ಲ. ಇಸ್ಲಾಮನ್ನು ಕಳಂಕಿತಗೊಳಿಸುವ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಕೆಲವರು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಸ್ಲಿಮ್ ದೇಶಗಳಲ್ಲಿ ಅಂತಹ ಕೃತ್ಯಗಳು ಕಾಣಿಸಿಕೊಳ್ಳಲು ಇಲ್ಲಿನ ಸ್ವೇಚ್ಛಾಧಿಪತಿ ಆಡಳಿತಗಾರರು ಮತ್ತು ಅವರ ದೌರ್ಜನ್ಯಗಳು ಕಾರಣವಾಗಿವೆ. ಪ್ರಜಾಪ್ರಭುತ್ವದ ಶಾಂತಿಯ ಮಾರ್ಗಗಳಿಂದ ಜನರ ಅಭಿಲಾಷೆಗಳಿಗೆ ಪ್ರಾತಿನಿಧ್ಯ ನೀಡುವ ಸರಕಾರಗಳನ್ನು ಸ್ಥಾಪಿಸಲು ಮತ್ತು ಕಳೆದ ಕೆಲವು ದಶಕಗಳಿಂದ ನಡೆಸುತ್ತಾ ಬರುವ ಪ್ರಯತ್ನಗಳು ಸಾಮ್ರಾಜ್ಯಶಾಹಿ ಶಕ್ತಿಗಳ ಹಸ್ತಕ್ಷೇಪದ ಕಾರಣದಿಂದ ಸೋಲನುಭವಿಸಿದ್ದು ಜಿಗುಪ್ಸೆ ತಾಳಿದ ಯುವಕರು ಉಗ್ರವಾದಿ ನಿಲುವನ್ನು ಸ್ವೀಕರಿಸುತ್ತಿದ್ದಾರೆ. ಮುಸ್ಲಿಮ್ ಅಲ್ಪ ಸಂಖ್ಯಾತರಾದ ಕೆಲವು ನಾಡಿನಲ್ಲಿ ಸರಕಾರಿ ಭಯೋತ್ಪಾದನೆಗೆ ಬೇಸತ್ತು ಯುವಕರನ್ನು ಅದೇ ಮಟ್ಟದ ಪ್ರತಿ ಹೊಡೆತಕ್ಕೆ ಪ್ರೇರೇಪಿಸುತ್ತಿದೆ. ಬೆರೆಳೆಣಿಕೆಯ ಇಂತಹ ಘಟನೆಗಳನ್ನು ದೊಡ್ಡದಾಗಿ ಮಾಡಿ ತೋರಿಸಿ ಇಸ್ಲಾಮ್‍ನ ವಿರುದ್ಧ ಭಯೋತ್ಪಾದನೆ ಮತ್ತು ಉಗ್ರವಾದವನ್ನು ಆರೋಪಿಸಲಾಗುತ್ತಿದೆ. ಇಸ್ಲಾಮ್ ಎಲ್ಲ ರೀತಿಯ ಭಯೋತ್ಪಾದನೆಗಳನ್ನು ವಿರೋಧಿಸುತ್ತಿದೆ. ವ್ಯಕ್ತಿ, ಸಂಘಟನೆ, ಸರಕಾರ ಮತ್ತು ವಿಶ್ವಸಂಸ್ಥೆಯ ಭಯೋತ್ಪಾನೆಯನ್ನು ಕೂಡಾ ಅದು ಎದುರಿಸುತ್ತಿದೆ. ಭಯೋತ್ಪಾದನೆ ಮತ್ತು ಉಗ್ರವಾದವನ್ನು ಅದು ನಿರಾಕರಿಸುತ್ತಿದೆ. ಅಮಾಯಕರ ಮರಣ, ಸೊತ್ತು ವಿತ್ತ ನಾಶಗಳಿಗೆ ಅವಕಾಶ ನೀಡುತ್ತಿರುವ ಭಯೋತ್ಪಾದನಾ ಚಟುವಟಿಕೆಗಳು ಧರ್ಮ ವಿರೋಧಿಯಾಗಿದೆ. ಆ ಕಾರಣವಾಗಿ ಓರ್ವನನ್ನು ವಧಿಸುವುದು ಸಕಲ ಮಾನವರನ್ನು ವಧಿಸುವುದಕ್ಕೆ ಸಮ. ಓರ್ವರಿಗೆ ಜೀವನ ನೀಡುವುದು ಸಕಲ ಮಾನವರಿಗೆ ಜೀವನ ನೀಡುವುದಕ್ಕೆ ಸಮ ಎಂದು ಪವಿತ್ರ ಕುರ್‍ಆನ್ ಅಸಂದಿಗ್ಧವಾಗಿ ಘೋಷಿಸಿದೆ. (5.32) ಆದುದರಿಂದ ವಿಶ್ವಾಸಿಗಳು ಉಗ್ರವಾದಿಗಳಾಗುವುದು, ಭಯೋತ್ಪಾದನಾ ಚಟುವಟಿಕೆ ನಡೆಸುವುದು ಎಂದೂ ಸಾಧ್ಯವಿಲ್ಲ. ಜಗತ್ತಿನಾದ್ಯಂತ ಮುಸ್ಲಿಮರು ಭಯೋತ್ಪಾದನೆ ನಡೆಸುವವರು ಎಂಬುದು ಅಮೇರಿಕಾ ಮತ್ತು ಸಂಗಡಿಗರ ಅಪಪ್ರಚಾರವಾಗಿದೆ.( ಹೆಚ್ಚಿನ ವಿವರಗಳಿಗೆ ಶಾಂತಿ ಪ್ರಕಾಶನದ ಭಯೋತ್ಪಾದನೆ ಮತ್ತು ಇಸ್ಲಾಮ್ ಹಾಗೂ ಜಿಹಾದ್ ಮತ್ತು ಭಯೋತ್ಪಾದನೆ ಎಂಬ ಕೃತಿಗಳ ಅಧ್ಯಯನವನ್ನು ನಡೆಸಿರಿ)

 • ಮಹಿಳೆಯೇಕೆ ಪ್ರವಾದಿಯಾಗಿಲ್ಲ?
  ismika15-07-2014

  ಪ್ರಶ್ನೆ : ದೇವರ ಬಳಿ ಲಿಂಗ ತಾರತಮ್ಯವಿಲ್ಲ ಎಂದು ಹೇಳಲಾಗುತ್ತದೆ. ಆದರೆ ಪ್ರವಾದಿಗಳಾಗಿ ಮಹಿಳೆಯರನ್ನು ಯಾಕೆ ಆರಿಸಲಿಲ್ಲ?

  ಉತ್ತರ : ದೇವನು ಕಲಿಸಿರುವ ಜೀವನ ವ್ಯವಸ್ಥೆಯನ್ನು ಜನರಿಗೆ ಕಲಿಸುವುದು, ಆ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜನರಿಗೆ ತೋರಿಸುವುದು ಪ್ರವಾದಿಗಳ ಪ್ರಧಾನ ಹೊಣೆಗಾರಿಕೆಯಾಗಿದೆ. ಆದ್ದರಿಂದ ಆರಾಧನಾ ವಿಷಯಗಳಲ್ಲೂ ಆರ್ಥಿಕ, ಸಾಂಸ್ಕøತಿಕ, ರಾಜಕೀಯ ರಂಗಗಳಲ್ಲೂ ಯುದ್ಧ ಒಪ್ಪಂದದ ವಿಷಯಗಳಲ್ಲೂ ಅವರು ಮಾನವ ಕೋಟಿಗೆ ಮಾದರಿಯಾಗಿದ್ದಾರೆ. ತಿಂಗಳಿನ ಕೆಲವು ದಿನಗಳಲ್ಲಿ ಆರಾಧನಾ ಕರ್ಮಗಳಿಗೆ ನೇತೃತ್ವ ವಹಿಸುವುದರಿಂದಲೂ, ಗರ್ಭಧಾರಣೆ, ಹೆರಿಗೆ ಮುಂತಾದ ವಿಷಯಗಳಿಂದಾಗಿ ಆಡಳಿತದಿಂದ ಅಥವಾ ನಾಯಕತ್ವದಿಂದ ಹಿಂದೆ ಸರಿಯಬೇಕಾದಂತಹ ಅನಿವಾರ್ಯತೆ ಮಹಿಳೆಯರಿಗೆ ಸಂಬಂಧಿಸಿದಂತೆ ಇದೆ. ಆದ್ದರಿಂದ ಜನರಿಗೆ ಸದಾ ಮಾರ್ಗದರ್ಶನ ನೀಡಬೇಕಾದಂತಹ ಹೊಣೆಗಾರಿಕೆಯಿಂದ ಅವಳನ್ನು ಮುಕ್ತಗೊಳಿಸಲಾಗಿದೆ. ಆದರೂ ಪ್ರವಾದಿ ಮೂಸಾರ(ಅ) ತಾಯಿಗೆ, ತನ್ನ ಜೀವನದಲ್ಲಿ ಅಳವಡಿಸಬೇಕಾದ ಸದಾಚಾರಗಳ ಕುರಿತು ದೇವರಿಂದ ನೇರವಾಗಿ ಸೂಚನೆ ನೀಡಲಾಗಿದೆ ಎಂದು ಕುರ್‍ಆನ್ ತಿಳಿಸಿದೆ. ಅಲ್ಲಾಹನು ಹೇಳುತ್ತಾನೆ, “ನಾವು ಮೂಸಾರ ತಾಯಿಗೆ, ‘ಇದಕ್ಕೆ ಮೊಲೆ ಹಾಲುಣಿಸು. ಮುಂದೆ ನಿನಗೆ ಇದರ ಪ್ರಾಣದ ಬಗೆಗೆ ಭಯವುಂಟಾದರೆ ಇದನ್ನು ನದಿಯಲ್ಲಿ ಹಾಕಿಬಿಡು. ನೀನು ಕೊಂಚವೂ ಭಯಪಡಬೇಡ. ನಾವು ಇದನ್ನು ನಿನ್ನ ಬಳಿಗೆ ಮರಳಿ ತರುವೆವು ಮತ್ತು ಇದನ್ನು ಸಂದೇಶ ವಾಹಕರಲ್ಲಿ ಸೇರಿಸುವೆವು’ ಎಂದು ಸೂಚನೆ ನೀಡಿದೆವು.” (28.7)

  ಪ್ರವಾದಿಗಳಿಗೆ ಲಭಿಸಿದಂತೆ ಈಸಾ(ಏಸು)ರ ಮಾತೆ ಮರ್ಯಮ್‍ರಿಗೆ ದೇವದೂತನಿಂದ ದಿವ್ಯ ಸಂದೇಶ ಲಭಿಸಿದೆ ಎಂದು ಕುರ್‍ಆನ್ ಹೇಳಿದೆ:
  “ಮರ್ಯಮರಿಗೆ ಆ ಮಗುವಿನ ಗರ್ಭ ಉಂಟಾಯಿತು ಮತ್ತು ಅವರು ಆ ಗರ್ಭ ಸಹಿತ ದೂರದ ಒಂದು ಸ್ಥಳಕ್ಕೆ ಹೋದರು. ತರುವಾಯ ಪ್ರಸವ ವೇದನೆಯು ಅವರನ್ನು ಒಂದು ಖರ್ಜೂರದ ಮರದೆಡೆಗೆ ತಲುಪಿಸಿತು. ಅವರು, ‘ಅಕಟ ನಾನು ಇದಕ್ಕಿಂತ ಮುಂಚೆ ಸತ್ತು ಹೋಗಿದ್ದರೆ! ಮತ್ತು ಹೇಳ ಹೆಸರಿಲ್ಲದಂತೆ ಅಳಿದು ಹೋಗಿದ್ದರೆ (ಚೆನ್ನಾಗಿತು)’ ಎನ್ನ ತೊಡಗಿದರು. ದೇವಚರನು ಕಾಲ ಬಳಿಯಿಂದ ಅವರನ್ನು ಕೂಗಿ, ‘ಮರುಗಬೇಡಿರಿ, ನಿಮ್ಮ ಪ್ರಭು ನಿಮ್ಮ ತಳಭಾಗದಲ್ಲೊಂದು ಚಿಲುಮೆಯನ್ನು ಹರಿಸಿ ಬಿಟ್ಟಿದ್ದಾನೆ ಮತ್ತು ನೀವು ಆ ಮರದ ಕಾಂಡವನ್ನು ಹಿಡಿದು ಅಲುಗಾಡಿಸಿರಿ. ನಿಮ್ಮ ಮೇಲೆ ಹಸನಾದ ಖರ್ಜೂರದ ಹಣ್ಣುಗಳು ಉದುರಿ ಬೀಳುವುವು. ಈ ರೀತಿಯಲ್ಲಿ ನೀವು ತಿಂದು, ಕುಡಿದು ಕಣ್ಮನಗಳನ್ನು ತಣಿಸಿರಿ. ನೀವು ಮಾನವರಾರನ್ನಾದರೂ ಕಂಡರೆ ನಾನು ಕರುಣಾನಿಧಿ(ಅಲ್ಲಾಹನಿ)ಗಾಗಿ ಉಪವಾಸ ವ್ರತದ ಹರಕೆ ಹೊತ್ತಿರುವುದರಿಂದ ಇಂದು ಯಾರೊಡನೆಯೂ ಮಾತನಾಡಲಾರೆನೆಂದು ಹೇಳಿಬೀಡಿರಿ’ ಎಂದನು.” (19: 22-26)
  ಪ್ರಾಕೃತಿಕವಾದ ಕಾರಣಗಳಿಂದ ಮಹಿಳೆಯರನ್ನು ಪ್ರವಾದಿಗಳಾಗಿ ಆರಿಸದಿದ್ದರೂ ಪ್ರವಾದಿಗಳಿಗೆ ದಿವ್ಯ ಸಂದೇಶಗಳು ಲಭಿಸಿದಂತೆ ಅವರಿಗೂ ಲಭಿಸಿದೆ ಎಂದು ಈ ಮೇಲಿನ ಕುರ್‍ಆನ್ ವಚನಗಳಿಂದ ವ್ಯಕ್ತವಾಗುತ್ತದೆ.
 • ಇದ್ದತ್ ಉದ್ದೇಶ?
  ismika15-07-2014

  ಪ್ರಶ್ನೆ : ಪತಿಯು ಮರಣ ಹೊಂದಿ ಇದ್ದತ್ ಆಚರಿಸುವ ಮಹಿಳೆಯು ಉದ್ಯೋಗಸ್ಥೆಯಾದರೆ ಅವರಿಗೆ ಕೆಲಸಕ್ಕೆ ಹೋಗಬಹುದೇ? ಇದ್ದತ್ ಆಚರಿಸುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು. ತಲೆ ಬೋಳಿಸಬೇಕು ಎಂದೆಲ್ಲಾ ಹೇಳುತ್ತಾರೆ. ಇದು ಸರಿಯೇ?

  ಉತ್ತರ : ಪತಿ ಮರಣ ಹೊಂದಿದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಮತ್ತು ಗರ್ಭಿಣಿಯಾಗಿದ್ದರೆ ಹೆರಿಗೆಯ ವರೆಗೆ ಪುನರ್ವಿವಾಹವಾಗುವುದರಿಂದ ಮತ್ತು ಅಲಂಕಾರ ಹೊಂದುವುದರಿಂದ ದೂರ ನಿಲ್ಲುವುದನ್ನು `ಇದ್ದತ್' ಎನ್ನುತ್ತಾರೆ.

  ಕುರ್‍ಆನ್ ಹೇಳುತ್ತದೆ, “ನಿಮ್ಮಲ್ಲಿ ಯಾರಾದರೂ ಮೃತಪಟ್ಟರೆ ಮತ್ತು ಅವರ ಪತ್ನಿಯ ಜೀವಂತವಾಗಿದ್ದರೆ ಅವರು ನಾಲ್ಕು ತಿಂಗಳು, ಹತ್ತು ದಿನಗಳ ತನಕ ತಮ್ಮನ್ನು ತಾವೇ ತಡೆದಿರಿಸಿಕೊಳ್ಳಬೇಕು.” (ಅಲ್ ಬಕರ: 234)
  ಪತಿಯೊಂದಿಗೆ ನೈಜ ಸಂಪರ್ಕ ಏರ್ಪಡುವ ಮೊದಲೇ ಪತಿಯನ್ನು ಕಳಕೊಂಡ ಸ್ತ್ರೀಯರಿಗೂ ಮರಣದ ನಂತರದ ಈ ಇದ್ದತ್ ಅನ್ವಯಿಸುತ್ತದೆ. ಆದರೆ ಗರ್ಭಿಣಿ ಸ್ತ್ರೀ ಇದಕ್ಕೆ ಹೊರತಾಗಿದ್ದಾಳೆ. ಆಕೆಯ ಇದ್ದತ್‍ನ ಅವಧಿ ಹೆರಿಗೆಯ ತನಕವಾಗಿದೆ. ಹೆರಿಗೆ ಪತಿಯ ನಿಧನದ ತಕ್ಷಣವಾದರೂ ಅಥವಾ ಕೆಲವು ತಿಂಗಳುಗಳ ಬಳಿಕವಾದರೂ ಸರಿಯೇ. ‘ತಮ್ಮನ್ನು ತಾವು ತಡೆದಿರಿಕೊಳ್ಳಬೇಕು’ ಎಂದರೆ ಮರುವಿವಾಹದಿಂದ ತಡೆದಿರಿಕೊಳ್ಳಬೇಕೆಂದು ಮಾತ್ರವಲ್ಲ, ತನ್ನನ್ನು ಶೃಂಗಾರದಿಂದಲೂ ತಡೆದಿರಿಸಬೇಕೆಂದೂ ಅದರಲ್ಲಿ ಸೇರಿದೆ.
  ಯಾವ ಮನೆಯಲ್ಲಿ ಆಕೆಯ ಪತಿ ಮರಣ ಹೊಂದಿದ್ದರೋ ಆ ಮನೆಯಲ್ಲಿ ಇದ್ದತ್ ಆಚರಿಸಬೇಕು ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಇದ್ದತ್‍ನ ಕಾಲಾವಧಿಯಲ್ಲಿ ಪುನರ್ವಿವಾಹಕ್ಕೆ ಮುಂದಾಗುವುದು ಅಥವಾ ಯಾರಾದರೂ ಅವರ ಬಳಿ ವಿವಾಹ ಸಂಬಂಧದೊಂದಿಗೆ ಸವಿೂಪಿಸುವುದು ನಿಷಿದ್ಧವಾಗಿದೆ. ಆದರೂ ವಿವಾಹ ಸಂಬಂದಗಳ ಕುರಿತು ಸೂಚಿಸುವುದರಲ್ಲಿ ವಿರೋಧವಿಲ್ಲ.
  ಕುರ್‍ಆನ್ ಹೇಳುತ್ತದೆ, “ಇದ್ದತ್‍ಗಳ ಕಾಲಾವಧಿಯಲ್ಲಿ ಆ ವಿಧವೆಯರೊಂದಿಗೆ ವಿವಾಹದ ಇರಾದೆಯನ್ನು ನೀವು ಸಂಕೇತಗಳ ಮೂಲಕ ಪ್ರಕಟಗೊಳಿಸಿದರೂ ಮನಸ್ಸಿನೊಳಗೆ ಬಚ್ಚಿಟ್ಟರೂ ತಪ್ಪಿಲ್ಲ. ನಿಮ್ಮ ಮನದೊಳಗೆ ಅವರ ಯೋಚನೆ ಬಂದೇ ತೀರುವುದೆಂಬುದನ್ನು ಅಲ್ಲಾಹನು ಅರಿತಿರುತ್ತಾನೆ. ಆದರೆ ರಹಸ್ಯ ವಾಗ್ದಾನ ಮಾಡಬಾರದು. ಯಾವುದೇ ಪ್ರಸ್ತಾಪ ಮಾಡುವುದಾದರೆ ನ್ಯಾಯೋಚಿತ ರೀತಿಯಿಂದ ಮಾಡಿರಿ. ಇದ್ದತ್ ಪೂರ್ಣಗೊಳ್ಳುವ ತನಕ ವಿವಾಹÀ ಬಂಧನದ ನಿರ್ಧಾರ ಮಾಡಬೇಡಿರಿ.” (ಅಲ್ ಬಕರ: 235)
  ಇದ್ದತ್ ಆಚರಿಸುವ ವಿಧವೆಯು ಸಿಂಗರಿಸುವುದರ ಕುರಿತು ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಅಬೂದಾವೂದ್ ನಸಾಯಿ ಮುಂತಾದವರು ವರದಿ ಮಾಡಿದ್ದಾರೆ, “ಅವಳು ಬಣ್ಣ ಬಣ್ಣದ ವಸ್ತ್ರ ಧರಿಸಬಾರದು. ಆಭರಣಗಳನ್ನು ಧರಿಸಬಾರದು. ಮದರಂಗಿ ಹಚ್ಚಬಾರದು. ಕಣ್ಣುಗಳಿಗೆ ಕಾಡಿಗೆ ಹಚ್ಚಬಾರದು.” ಈ ರೀತಿಯ ಹಲವು ಹದೀಸ್‍ಗಳಿವೆ. ಇದರಿಂದೆಲ್ಲಾ ತಿಳಿದು ಬರುವುದೇನೆಂದರೆ ಪತಿ ಮರಣ ಹೊಂದಿದ ಮಹಿಳೆಯು ಸಿಂಗರಿಸಿಕೊಂಡು ನಡೆಯಬಾರದು ಮತ್ತು ಸರಳ ವೇಷ ಭೂಷಣಗಳಲ್ಲಿ ಕಳೆಯಬೇಕು ಎಂದಾಗಿದೆ. ಇದು ಇಸ್ಲಾಮ್ ಹೇಳಿರುವ ಇದ್ದತ್ ಹಾಗೂ ದುಃಖಾಚರಣೆಯಾಗಿದೆ.
  ಪುರುಷರನ್ನು ನೋಡುವ ವಿಚಾರದಲ್ಲಿ ಇತರ ಮಹಿಳೆಯರಿಗಿಂತ ಹೆಚ್ಚಿನ ನಿಯಮಗಳೇನೂ ಇದ್ದತ್ ಆಚರಿಸುವ ಮಹಿಳೆಯರಿಗಿಲ್ಲ. ಅಗತ್ಯ ಕೆಲಸಕ್ಕಾಗಿ ಹೊರಹೋಗುವುದರಲ್ಲೂ ಅಭ್ಯಂತರವಿಲ್ಲ. ಆದರೆ ರಾತ್ರಿ ಸ್ವಗೃಹದಲ್ಲೇ ಉಳಿದುಕೊಳ್ಳಬೇಕು. ಹಝ್ರತ್ ಮುಜಾಹಿದ್‍ರಿಂದ ವರದಿಯಾದ ಒಂದು ವಚನವು ಅದಕ್ಕಿರುವ ಪುರಾವೆಯಾಗಿದೆ:
  ಉಹುದ್ ಯುದ್ಧದಲ್ಲಿ ಹಲವಾರು ಮಂದಿ ಹುತಾತ್ಮರಾಗಿದ್ದರು. ಅವರ ಪತ್ನಿಯರು ಬಂದು ಪ್ರವಾದಿಯವರೊಡನೆ(ಸ) ಹೇಳಿದರು, “ಪ್ರವಾದಿಯವರೇ(ಸ) ರಾತ್ರಿ ಕಾಲದಲ್ಲಿ ನಮಗೆ ವಿಪರೀತ ಏಕಾಂತತೆಯ ಅನುಭವವಾಗುತ್ತದೆ. ಆದ್ದರಿಂದ ನಾವು ಯಾರಾದರೊಬ್ಬರ ಮನೆಯಲ್ಲಿ ನಾವೆಲ್ಲರೂ ಉಳಿದುಕೊಳ್ಳಬಹುದೇ? ಪ್ರಭಾತವಾಗುವಾಗ ನಾವು ನಮ್ಮ ಸ್ವಗೃಹಕ್ಕೆ ಮರಳುತ್ತೇವೆ.” ಪ್ರವಾದಿಯವರು(ಸ) ಹೇಳಿದರು, “ನೀವು ನಿಮ್ಮ ಪೈಕಿ ಯಾರಾದರೊಬ್ಬರ ಮನೆಯಲ್ಲಿ ಕುಳಿತು ಮಾತನಾಡುತ್ತೀರಿ. ಆದರೆ ಮಲಗಲು ಪ್ರತಿಯೋರ್ವರೂ ತಂತಮ್ಮ ಮನೆಗೇ ಹೋಗಬೇಕು.”
  ಆದರೆ ಹಜ್ಜ್‍ನಂತಹ ಸುಪ್ರದಾನವೂ ಸುಧೀರ್ಘವೂ ಆದ ಯಾತ್ರೆಗಳಲ್ಲಿ ಮನೆ ತೊರೆಯುವುದರಲ್ಲೋ ಬೇರೆ ಸ್ಥಳಗಳಲ್ಲಿ ಉಳಿದುಕೊಳ್ಳವುದರಲ್ಲೋ ವಿರೋಧವಿಲ್ಲ ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳು ಹಾಗೂ ತಾಬಿಈಗಳ ಕಾಲದಲ್ಲಿ ನಡೆದ ಇಂತಹ ಘಟನೆಗಳನ್ನು ಅವರು ಅದಕ್ಕೆ ಪುರಾವೆಯಾಗಿ ನೀಡುತ್ತಾರೆ.
  ಈ ಹಿನ್ನಲೆಯಲ್ಲಿ ಇದ್ದತ್ ಆಚರಿಸುವ ಉದ್ಯೋಗಸ್ಥ ಮಹಿಳೆಯು ಕೆಲಸಕ್ಕೆ ಹೋಗುವುದರಲ್ಲಿ ವಿರೋಧವಿಲ್ಲ. ಇದ್ದತ್‍ನ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕು. ಕನ್ನಡಿ ನೋಡಬಾರದು, ಸಂಬಂಧಿಗಳಾದ ಪುರುಷರನ್ನೂ ನೋಡಬಾರದು, ತಲೆ ಬೋಳಿಸಬೇಕು ಮೊದಲಾದ ನಿಯಮಗಳು ಅಜ್ಞಾನ ಕಾಲದ ಸಂಸ್ಕøತಿಗಳಿಂದ ಮುಸ್ಲಿಮ್ ಸಮುದಾಯಕ್ಕೆ ಬಂದ ಅನಾಚಾರಗಳಾಗಿವೆ. ಅವುಗಳಿಗೆ ಇಸ್ಲಾಮಿನಲ್ಲಿ ಯಾವುದೇ ಪುರಾವೆಗಳಿಲ್ಲ.

 • ಕಾಫಿರ್ ಎಂಬ ಪದ ಮತ್ತು ಅದನ್ನು ಸುತ್ತಿರುವ ವಿವಾದ ?
  ismika19-07-2014

  ಕುಫ್ರ್ ಮತ್ತು ಕಾಫಿರ್ ಎಂಬುದು ಇಸ್ಲಾಮಿನ ಕೆಲವು ವಿಶೇಷ ಪಾರಿಭಾಷಿಕ ಶಬ್ದಗಳಲ್ಲಿ ಎರಡು ಶಬ್ದವಾಗಿದೆ. ಇದು ವಿಶೇಷ ಅರ್ಥವನ್ನು ಹೊಂದಿದೆ. ಖೇದವೇನೆಂದರೆ ಬೇರೆ ಬೇರೆ ಪಾರಿಭಾಷಿಕ ಶಬ್ದಗಳಂತೆಯೇ ಈ ಶಬ್ದಗಳಿಗೂ ತಪ್ಪು ಅರ್ಥ ನೀಡಿ ಅದರ ನಿಜವಾದ ಅರ್ಥವನ್ನು ಅಪಾರ್ಥಗೊಳಿಸುವ ಕೆಲಸ ಸಾಂಗವಾಗಿ ನಡೆಯುತ್ತಿದೆ. ಕಾಫಿರ್ ಶಬ್ದಕ್ಕೆ ಮುಸ್ಲಿಮೇತರ ಸಹೋದರರನ್ನು ದ್ವೇಷಿಸುವುದು ತಿರಸ್ಕರಿಸುವುದು ಮತ್ತು ಅಸಮಾನತೆ ತೋರಿಸುವುದೆಂಬ ಅರ್ಥವನ್ನು ಹೇಳಲಾಗುತ್ತಿದೆ ಮತ್ತು ಕಾಫಿರ್ ಅಂತ ಹೇಳಿ ಮುಸ್ಲಿಮೇತರ ಸಹೋದರರನ್ನೇ ಅವರ ಮೂಲ ಮಾನವ-ಹಕ್ಕುಗಳಿಂದ ಇಸ್ಲಾಮ್ ವಂಚಿಸುತ್ತಿದೆ ಹಾಗೂ ಅವರಿಗೆ ಜೀವಿಸುವ ಹಕ್ಕನ್ನು ನೀಡಲು ಕೂಡಾ ಇಚ್ಛಿಸುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಇದು ವಾಸ್ತವಕ್ಕೆ ದೂರವಾದ ಅಪ ಪ್ರಚಾರವಾಗಿದೆ.
  ಪವಿತ್ರ ಕುರ್‍ಆನ್‍ನಲ್ಲಿ ಕಾಫಿರ್, ಕುಫ್ರ್ ಮತ್ತು ಶಿರ್ಕ್‍ನ ಶಬ್ದಗಳು ತುಂಬ ಕಡೆಗಳಲ್ಲಿ ಬಂದಿವೆ. ಕುಫ್ರ್ ನ ಅರ್ಥ ಸಂದರ್ಭಾನುಸಾರ ಬೇರೆ ಬೇರೆಯಾಗಿರುತ್ತದೆ. ಅಂದರೆ ನಿರಾಕರಣೆ, ಅವಜ್ಞೆ, ಕೃತಘ್ನತೆ ಮತ್ತು ನಿರ್ಲಕ್ಷ್ಯ, ಸತ್ಯವನ್ನು ಅಡಗಿಸಿಡುವುದು ಮತ್ತು ಅಧರ್ಮ ಇತ್ಯಾದಿ. ಕುಫ್ರ್ ಮಾಡುತ್ತಿರುವವನನ್ನು ಅರಬಿ ಭಾಷೆಯಲ್ಲಿ ಕಾಫಿರ್ ಎಂದು ಕರೆಯುತ್ತಾರೆ.
  `ಕಾಫಿರ್' ಎಂಬುದು ವ್ಯಾಪಕ ದೃಷ್ಟಿಯಲ್ಲಿ ಗುಣವಾಚಕ ಸಂಕೇತವಾಗಿದ್ದು ಇದು ಅಪಮಾನ ಭೋದಕ ಶಬ್ದವಲ್ಲ. ಇದು ಯಾರ ಕುರಿತು ಸಂಬೋಧಿಸಲಾಗಿದೆಯೆಂದರೆ ಅವರ ಮುಂದೆ ದೈವಿಕ ಶಿಕ್ಷಣಗಳನ್ನು ತಿಳಿಸಲಾಗಿತ್ತು ಮತ್ತು ಅವರು ಯಾವುದೋ ಕಾರಣದಿಂದ ಈ ಶಿಕ್ಷಣಗಳನ್ನೇ ತಪ್ಪೆಂದು ಭಾವಿಸಿದರು ಹಾಗೂ ಅವರು ಅವನ್ನೆಲ್ಲ ತಿರಸ್ಕರಿಸಿದ್ದರು. ಮಾತ್ರವಲ್ಲ, ಅವರು ಅಮುಸ್ಲಿಮರಾಗಿದ್ದರೂ ಮುಸ್ಲಿಮರೆಂದು ತಮ್ಮನ್ನು ಹೆಸರಿಸುತ್ತಿದ್ದರು. ಇಸ್ಲಾಮಿನ ಮೇಲೆ ಅವರು ನಿಷ್ಠೆ ಇರಿಸಿರಲಿಲ್ಲ. ಇಂತಹವರಿಗೂ
  ಕುಫ್ರ್ ಎಂಬ ಶಬ್ದ ಅನ್ವಯವಾಗುತ್ತದೆ. ಉದಾ: ದೇವನ ಸಂದೇಶ ವಾಹಕರಾದ ಪ್ರವಾದಿಯವರು(ಸ) ಹೇಳಿದರು, "ಯಾವ ಮುಸ್ಲಿಮನು ಉದ್ದೇಶಪೂರ್ವಕ ನಮಾಝ್ ತೊರೆದನೋ. ಅವನು ಕುಫ್ರ್ ಮಾಡಿದನು." (ಹದೀಸ್) ಪವಿತ್ರ ಕುರ್‍ಆನ್ ಹೇಳುತ್ತದೆ, "ಅಲ್ಲಾಹನು ಅವತೀರ್ಣಗೊಳಿಸಿದ ಕಾನೂನಿನ ಪ್ರಕಾರ ತೀರ್ಮಾನ ಮಾಡದವರೇ ಸತ್ಯನಿಷೇಧಿ(ಕಾಫಿರ್)ಗಳು." (5:44)
  ಇಸ್ಲಾಮ್‍ನ ಅನುಯಾಯಿಯಾಗಿದ್ದು ಅಥವಾ ಹಾಗೆ ವಾದಿಸುತ್ತಿದ್ದು-ಮುಸ್ಲಿಮನೆಂದು ಹೇಳುತ್ತಿದ್ದು ಇಸ್ಲಾಮಿನಲ್ಲಿ ನಿಷ್ಠೆ ಇರಿಸದವರನ್ನು ಈ ಶಿಕ್ಷಣವು ಸಂಭೋದಿಸುತ್ತಿದೆ. ಪವಿತ್ರ ಕುರ್‍ಆನ್ ಇನ್ನೊಂದು ಕಡೆಯಲ್ಲಿ ಹೇಳುತ್ತದೆ, "ಯಾರು ತಾಗೂತ (ಕಾಲ್ಪನಿಕ ದೇವರು)ನ್ನು ಕುಫ್ರ್ (ನಿರಾಕರಣೆ) ಮಾಡಿದನೋ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಟ್ಟನೋ ಅಂತಹವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿಕೊಂಡನು. (ಅವನು ಆಶ್ರಯ ಪಡೆದ) ಅಲ್ಲಾಹ್ ಸರ್ವಶ್ರುತನೂ ಸರ್ವಜ್ಞನೂ ಆಗಿರುತ್ತಾನೆ." (2:256) ಇಲ್ಲಿ ಪವಿತ್ರ ಕುರ್‍ಆನ್ ಕುಫ್ರ್ ಎಂಬ ಶಬ್ದಕ್ಕೆ ನಿರಾಕರಣೆ ಎಂಬ ಅರ್ಥ ನೀಡಿದೆ ಮತ್ತು ಮುಸ್ಲಿಮರಿಗೆ ತಾಗೂತನ್ನು ನಿರಾಕರಿಸಲು ಸೂಚಿಸಿದೆ.
  ಕುಫ್ರ್ ಅರಬಿ ಭಾಷೆಯ ಪದವಾಗಿದೆ. ಇದರ ಅರ್ಥ ಯಾವುದೇ ವಸ್ತುವನ್ನು ಅಡಗಿಸುವುದು, ಮರೆಸುವುದು ಎಂದಾಗಿದೆ. ಇದೇ ರೀತಿ ಕುಫ್ರ್ ಗೆ ಕೃತಘ್ನತೆ, ಅಸಂತೋಷ ಎಂಬ ಅರ್ಥವೂ ಇದೆ. ಅಂದರೆ ಯಾವುದೇ ವ್ಯಕ್ತಿ ಕೃತಘ್ನತೆ ತೋರಿಸುತ್ತಾನೆ, ತನಗೆ ಉಪಕಾರ ಮಾಡಿದವನ ಉಪಕಾರವನ್ನು ಅಡಗಿಸಿಡುತ್ತಾನೆ ಮತ್ತು ಅದರ ಮೇಲೆ ಪರದೆ ಹಾಕುತ್ತಾನೆ ಎಂದಾಗುತ್ತದೆ. ಇದೇ ರೀತಿ ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನು ತನ್ನ ಸಂದೇಶವಾಹಕರನ್ನು ಭೂಮಿಗೆ ಕಳುಹಿಸಿ ತನ್ನ ದಾಸರಿಗೆ ಸನ್ಮಾರ್ಗದಲ್ಲಿ ನಡೆಯುವಂತೆ ಆದೇಶ ನೀಡಿದ್ದಾನೆ ಮತ್ತು ಈ ಆದೇಶದಲ್ಲಿ ವಿಶ್ವಾಸವಿರಿಸಲು ನಿರಾಕರಿಸುವುದು ಎಂಬುದು ಇನ್ನೊಂದು ಅರ್ಥವಾಗಿದೆ. ಪವಿತ್ರ ಕುರ್‍ಆನ್‍ನಲ್ಲಿ ಬೇರೆ ಅರ್ಥದಲ್ಲಿಯೂ ಈ ಪದ ಬಳಕೆಗೊಂಡಿದೆ ಮತ್ತು ಇಸ್ಲಾಮ್‍ನಲ್ಲಿ ಇದು ಒಂದು ಪಾರಿಭಾಷಿಕ ಶಬ್ದವಾಗಿಯೂ ಪರಿಗಣನೆ ಪಡೆದುಕೊಂಡಿದೆ. ಒಬ್ಬ ರೈತ ಹೊಲದಲ್ಲಿ ಬೀಜವನ್ನು ಬಿತ್ತುತ್ತಾನೆ. ಅರ್ಥಾತ್ ಅದನ್ನು ಹೊರಗೆ ಕಾಣದಂತೆ ಇರಿಸುತ್ತಾನೆ. ಹಾಗಾಗಿ ರೈತನನ್ನು ಕೂಡಾ ಕಾಫಿರ್ (ಬೀಜವನ್ನು ಹೂತಿಡುವವನು) ಎಂದು ಹೇಳಲಾಗುತ್ತಿದೆ. ಕೆಲವು ಕಡೆ ಕೃತಜ್ಞತೆಗೆ ವಿರುದ್ಧ ಪದವಾಗಿ ಕೃತಘ್ನತೆಯ ಅರ್ಥದಲ್ಲಿಯೂ ಈ ಪದ ಬಳಕೆಯಾಗಿದೆ. ಹಾಗಾಗಿ ಸೃಷ್ಟಿಕರ್ತನ ಉಪಕಾರಕ್ಕೆ ಉತ್ತರವಾಗಿ ಕೃತಜ್ಞತೆಯ ಬದಲು ಕೃತಘ್ನತೆಯ ನಿಲುವು ಹೊಂದುವುದು ಕುಫ್ರ್ ಎನಿಸಿ ಕೊಳ್ಳುತ್ತಿದೆ ಮತ್ತು ಹೀಗೆ ಮಾಡುವ ವ್ಯಕ್ತಿಯೇ ಕಾಫಿರ್ ಎಂದು ಕರೆಯಲ್ಪಡುತ್ತಾನೆ. ಪವಿತ್ರ ಕುರ್‍ಆನ್ ಹೇಳುತ್ತದೆ, "ಚೆನ್ನಾಗಿ ತಿಳಿದುಕೊಳ್ಳಿರಿ! ಲೌಕಿಕ ಜೀವನವು ಕೇವಲ ಒಂದು ಆಟ ವಿನೋದ, ತೋರಿಕೆಯ ವೈಭವ, ಪರಸ್ಪರರ ಮೇಲೆ ಹಿರಿಮೆ ಸಾಧಿಸುವ ಪ್ರಯತ್ನ ಮತ್ತು ಸಂಪತ್ತು ಹಾಗೂ ಸಂತಾನದ ವಿಷಯದಲ್ಲಿ ಪರಸ್ಪರರನ್ನು ವಿೂರಿ ಹೋಗುವ ಪೈಪೋಟಿ ಮಾತ್ರವಲ್ಲದೆ ಇನ್ನೇನೂ ಅಲ್ಲ. ಇದರ ಉಪಮೆ ಹೀಗಿದೆ: ಒಂದು ಮಳೆ ಬಂದೊಡನೆ ಅದರಿಂದಾಗಿ ಹುಟ್ಟುವ ಸಸ್ಯಗಳನ್ನು ಕಂಡು ಕೃಷಿಕರು ಸಂತೋಷಗೊಂಡು ತರುವಾಯ ಅದೇ ಬೆಳೆಯು ಬಲಿತಾಗ ಅದು ಹಳದಿಯಾಗಿ ಬಿಟ್ಟದ್ದನ್ನು ನೀವು ಕಾಣುತ್ತೀರಿ. ಅನಂತರ ಅದು ಹೊಟ್ಟಾಗಿ ಬಿಡುತ್ತದೆ." (57:20) ಇಲ್ಲಿ ಪವಿತ್ರ ಕುರ್‍ಆನ್ ಈ ಶಬ್ದವನ್ನು `ಕುಫ್ಫಾರ್' (ಕಾಫಿರುಗಳು) ಅಂದರೆ ಕೃಷಿಕರು ಎಂಬ ಅರ್ಥದಲ್ಲಿ ಪ್ರಯೋಗಿಸಿದೆ. ಪವಿತ್ರ ಕುರ್‍ಆನ್‍ನಲ್ಲಿ ಅಲ್ಲಾಹನು ಹೇಳುತ್ತಾನೆ, "ನೀನು ನನ್ನನ್ನು ಸ್ಮರಿಸುತ್ತಿರು. ನಾನು ನಿನ್ನನ್ನು ಸ್ಮರಿಸುವೆನು ಮತ್ತು ನನಗೆ ಕೃತಜ್ಞತೆ ತೋರಿಸುತ್ತಾ ಇರು. ನನಗೆ ಕುಫ್ರ್ (ಕೃತಘ್ನತೆ) ತೋರಿಸಬೇಡ".
  ಪವಿತ್ರ ಕುರ್‍ಆನ್ ಈ ವಚನದಲ್ಲಿ ಕುಫ್ರ್ ಎಂಬುದನ್ನು ಕೃತಘ್ನತೆ ಎಂಬ ಅರ್ಥದಲ್ಲಿ ಬಳಸಿದೆ. ಪವಿತ್ರ ಕುರ್‍ಆನ್‍ನಲ್ಲಿ ಎಲ್ಲ ಕಡೆಗಳಲ್ಲಿಯೂ ದೇವನು ಮತ್ತು ಅವನ ಶಿಕ್ಷಣಗಳು ಹಾಗೂ ಆದೇಶಗಳನ್ನು ನಿರಾಕರಿಸುವವರಿಗೆ ಕಾಫಿರ್ ಎಂಬ ಶಬ್ದ ಬಳಕೆಯಾಗಿದೆ. ಅಂದರೆ ಇದರ ಅರ್ಥ ಬೈಗುಳವೋ, ಅನಾದರವೋ, ತಿರಸ್ಕಾರವೋ ಎಂದಲ್ಲ. ಬದಲಾಗಿ ನಿರಾಕರಿಸುತ್ತಿರುವವರ ವಾಸ್ತವವನ್ನು ತಿಳಿಸುವುದಕ್ಕಾಗಿ ಹೀಗೆ ಈ ಪದ ಬಳಕೆಗೊಂಡಿದೆ. ಕಾಫಿರ್ ಶಬ್ದ ಹಿಂದೂ ಶಬ್ದದ ಪರ್ಯಾಯ ಶಬ್ದವಲ್ಲ. ಆದರೆ ಇಂದು ಆ ರೀತಿ ಅಪಪ್ರಚಾರ ನಡೆಸಲಾಗುತ್ತಿರುವುದು ಶುದ್ಧ ತಪ್ಪಾಗಿದೆ. ಸುಮಾರಾಗಿ ಕಾಫಿರ್ ಶಬ್ದದ ಪರ್ಯಾಯ ವಾಚಕ ಶಬ್ದವನ್ನು ನಾಸ್ತಿಕ ಎಂದು ಕರೆಯಬಹುದಾಗಿದೆ.
  ಪವಿತ್ರ ಕುರ್‍ಆನ್‍ನಲ್ಲಿ ಬಹುವಂಶ ಕುಫ್ರ್ ಶಬ್ದವನ್ನು ವಿಶ್ವಾಸ (ಈಮಾನ್)ದ ನಿರಾಕರಣೆ ಎಂಬರ್ಥದಲ್ಲಿ ಪ್ರಯೋಗಿಸಲಾಗಿದೆ. ಧರ್ಮದಲ್ಲಿ ಅವಿಶ್ವಾಸ ತಾಳಿದವರ ಬಗ್ಗೆ ಪ್ರತಿಯೊಂದು ಧರ್ಮವೂ ವಿಶೇಷ ಶಬ್ದಾವಳಿಯನ್ನು ಬಳಸುತ್ತಿದೆ. ಉದಾ: ಯಾವುದೇ ವ್ಯಕ್ತಿ ಹಿಂದೂ ಕುಟುಂಬದಲ್ಲಿ ಹುಟ್ಟುತ್ತಾನೆ, ಆದರೆ ಆ ಧರ್ಮದಲ್ಲಿ ವಿಶ್ವಾಸವಿರಿಸುವುದಿಲ್ಲ ಎಂದಾದರೆ ಅಂತಹವನನ್ನು ನಾಸ್ತಿಕ ಎಂದು ಕರೆಯುತ್ತಾರೆ. ಇದೇ ರೀತಿ ಪ್ರತಿಯೊಂದು ಧರ್ಮದಲ್ಲಿ ಆ ಧರ್ಮಗಳ ಮೂಲಭೂತ ವಿಶ್ವಾಸ ಹಾಗೂ ಶಿಕ್ಷಣಗಳಲ್ಲಿ ವಿಶ್ವಾಸವಿರಿಸುವವರು ಮತ್ತು ವಿಶ್ವಾಸವಿರಿಸದವರಿಗೆ ಬೇರೆ ಬೇರೆ ವಿಶೇಷ ಶಬ್ದಗಳನ್ನು ಬಳಸಲಾಗಿದೆ. ಹಿಂದೂ ಧರ್ಮದಲ್ಲಿ ಅಂತಹವರಿಗೆ ನಾಸ್ತಿಕ, ಅನಾರ್ಯ, ಅಸಭ್ಯ, ದಸ್ಯು ಮತ್ತು ಮ್ಲೇಚ್ಛ ಎಂಬ ಶಬ್ದಗಳನ್ನು ಬಳಸಲಾಗುತ್ತಿದೆ. ಅಂದರೆ ಅವರು ಹಿಂದೂ ಧರ್ಮದ ಅನುಯಾಯಿಗಳಲ್ಲ ಎಂದರ್ಥ.
  ಕುಫ್ರ್‍ನ ಒಂದು ಅರ್ಥ ಒಳಿತಿನ ಮೇಲೆ ಪರದೆ ಹಾಕುವುದೆಂದಾಗಿದೆ. ಸಕಲ ಅನುಗ್ರಹಗಳನ್ನು ದೇವನು ನೀಡಿದ್ದಾನೆ. ಈ ಸತ್ಯವನ್ನು ಅಡಗಿಸಿಟ್ಟು ಅಥವಾ ಪರದೆ ಹಾಕಿ ಅನುಗ್ರಹಗಳನ್ನು ಇತರರಿಗೆ ಪೋಣಿಸುವುದು ಮತ್ತು ಅಲ್ಲಾಹನನ್ನು ಬಿಟ್ಟು ಇತರರಿಗೆ ಕೃತಜ್ಞನಾಗಿರುವುದು ಕುಫ್ರ್ ನ ವರ್ತನೆಯಾಗಿದೆ.
  ಕಾಫಿರ್ ಶಬ್ದ ವಾಸ್ತವದಲ್ಲಿ “ದೈವಿಕ ಸತ್ಯ ಧರ್ಮದಲ್ಲಿ” ವಿಶ್ವಾಸ ವಿರಿಸದಿರುವವರು ಮತ್ತು ವಿಶ್ವಾಸವಿರಿಸುವವರ ಮಧ್ಯೆ ವ್ಯತ್ಯಾಸವನ್ನು ಸ್ಪಷ್ಟಪಡಿಸುವುದಕ್ಕಾಗಿ ಬಳಸಲಾಗಿದೆಯೇ ಹೊರತು ಬೈಗುಳವೋ ಅನಾದರವನ್ನೋ ವ್ಯಕ್ತಪಡಿಸುವುದಕ್ಕಾಗಿರುವುದಲ್ಲ. ಈಗ ಕಾಫಿರ್ ಶಬ್ದದಲ್ಲಿ ತಿರಸ್ಕಾರ ಮತ್ತು ಅಪಮಾನದ ಯಾವುದೇ ಮಜಲುಗಳಿಲ್ಲ ವೆಂದು ಸ್ಪಷ್ಟವಾಯಿತಷ್ಟೇ. ಇಲ್ಲಿ ಸೈದ್ಧಾಂತಿಕವಾದ ಸತ್ಯಧರ್ಮ ವಿಶ್ವಾಸಿಗಳು ಮತ್ತು ಅವಿಶ್ವಾಸಿಗಳ ನಡುವೆ ವ್ಯತ್ಯಾಸವನ್ನು ಸ್ಪಷ್ಟಪಡಿಸಲು ಈ ಪದವನ್ನು ಬಳಸಲಾಗಿದೆ. ಯಾಕೆಂದರೆ ಇಸ್ಲಾವಿೂ ಆದೇಶಗಳನ್ನು ಪಾಲಿಸುವವರು ಪಾಲಿಸದಿರುವವರ ಜೊತೆ ಬೇರೆ ಬೇರೆ ರೀತಿ ವ್ಯವ ಹರಿಸಲು ಸಾಧ್ಯವಾಗಬೇಕಾಗಿದೆ ಮತ್ತು ಇಸ್ಲಾವಿೂ ವಿಶ್ವಾಸಿಗಳನ್ನು ಅದರ ನಿಯಮಕ್ಕೆ ಬದ್ಧಗೊಳಿಸಲು ಸಾಧ್ಯವಾಗಬೇಕಾಗಿದೆ. ಆದ್ದರಿಂದ ಇಸ್ಲಾಮ್‍ನ ಮೂಲ ಶಿಕ್ಷಣವು ಅದರಲ್ಲಿ ವಿಶ್ವಾಸವಿರಿಸದಿರುವ ವ್ಯಕ್ತಿ ಯನ್ನು ಕಾಫಿರ್ ಎಂದು ಹೇಳಿ ಅವನ ಸ್ಥಿತಿಯನ್ನು ಸ್ಪಷ್ಟಪಡಿಸಿದೆ. ಆದರೆ ಇಸ್ಲಾವಿೂ ರಾಷ್ಟ್ರ ಹಾಗೂ ಸಮಾಜದಲ್ಲಿ ಅವನ ಮೂಲಭೂತ ಹಕ್ಕುಗಳಿಗೆ ಯಾವುದೇ ಬಾಧೆಯಿಲ್ಲ ಮತ್ತು ಲೌಕಿಕ ವಿಚಾರಗಳಲ್ಲಿ ಅವನೊಂದಿಗೆ ಯಾವುದೇ ಭೇದಭಾವ ತೋರಿಸುವುದಿಲ್ಲ. ಅಲ್ಲಾಹನು ಮಾನವನನ್ನು ಎಲ್ಲಕ್ಕಿಂತಲೂ ಸುಂದರವಾದ ರೂಪ, ಬಣ್ಣಗಳಿಂದ ಸೃಷ್ಟಿಸಿದ್ದಾನೆ. ಅವನಿಗೆ ಜೀವಿಸುವುದಕ್ಕಾಗಿ ಪ್ರತಿಯೊಂದೂ ಸವಲತ್ತು ಗಳನ್ನು ನೀಡಿದ್ದಾನೆ ಮತ್ತು ಸಕಲ ಆವಶ್ಯಕತೆಗಳನ್ನು ಈಡೇರಿಸುತ್ತಾನೆ. ಈ ಎಲ್ಲ ಅನುಗ್ರಹಗಳ ಬೇಡಿಕೆಯೇ ಜನರು ಅಲ್ಲಾಹನಲ್ಲಿ ವಿಶ್ವಾಸವಿರಿಸಬೇಕು ಎಂದಾಗಿದೆ. ಯಾಕೆಂದರೆ ಅವನೇ ಜನರಿಗೆ ಅನುಗ್ರಹದಾತನಾಗಿದ್ದಾನೆ. ಇದೇ ರೀತಿ ಅಲ್ಲಾಹನ ಸಕಲ ಪ್ರವಾದಿಗಳ ಮೇಲೂ ವಿಶೇಷತಃ ಅಂತಿಮ ಪ್ರವಾದಿ ಮುಹಮ್ಮದ್‍ರವರ(ಸ) ಮೇಲೆಯೂ ವಿಶ್ವಾಸವಿರಿಸಬೇಕು ಮತ್ತು ಸತ್ತ ನಂತರ ಪರಲೋಕ ಎಂಬ ಶಾಶ್ವತ ಲೋಕದಲ್ಲಿ ಶಾಶ್ವತವಾಗಿ ಬದುಕಬೇಕಾಗಿದೆ ಮತ್ತು ಅಲ್ಲಿ ಪ್ರತಿಯೊಬ್ಬ ಮನುಷ್ಯನ ಉತ್ತಮ-ಕೆಟ್ಟ ಕರ್ಮಗಳ ಕುರಿತು ಪ್ರಶ್ನಿಸಲಾಗುವುದು ಎಂಬ ಬಗ್ಗೆ ವಿಶ್ವಾಸವಿರಿಸಬೇಕಾಗಿದೆ. ಪರಿಶುದ್ಧವಾದ ರೀತಿಯಲ್ಲಿ ಅಲ್ಲಾಹನ ದಾಸ್ಯಾರಾಧನೆ ಮಾಡಬೇಕು ಮತ್ತು ಅವನ ಆದೇಶವನ್ನು ಪಾಲಿಸಬೇಕು. ಯಾರು ಅಲ್ಲಾಹನ ಅನುಗ್ರಹಗಳಿಂದ ಲಾಭ ಪಡೆದೂ ಅವನಲ್ಲಿ ವಿಶ್ವಾಸವಿರಿಸುವುದಿಲ್ಲವೋ ಅಥವಾ ಅವನ ದೇವತ್ವದೊಂದಿಗೆ ಇತರರನ್ನು ಭಾಗೀದಾರಗೊಳಿಸುತ್ತಾರೋ ಅಂತಹವರೇ ಕೃತಘ್ನರು ಮತ್ತು ಕುಫ್ರ್ (ನಿರಾಕರಣೆ) ನೀತಿ ಅನುಸರಿಸುವವರಾಗಿದ್ದಾರೆ. ಅಲ್ಲಾಹನ ಆದೇಶಗಳನ್ನು ತಿಳಿಯಬೇಕಾದರೆ ಅಲ್ಲಾಹನು ತನ್ನ ಅಂತಿಮ ಪ್ರವಾದಿ ಮುಹಮ್ಮದ್‍ರಿಗೆ(ಸ) ಅವತೀರ್ಣಗೊಳಿಸಿರುವ ಪವಿತ್ರ ಕುರ್‍ಆನನ್ನು ಅಧ್ಯಯನ ನಡೆಸಬೇಕಾಗಿದೆ. ಪವಿತ್ರ ಕುರ್‍ಆನ್ ಶಿಕ್ಷಣಗಳ ವ್ಯಾವಹಾರಿಕ ರೂಪಕ್ಕೆ ಉದಾಹರಣೆಯು ಪ್ರವಾದಿ ಮುಹಮ್ಮದ್ ರವರ(ಸ) ಜೀವನದಲ್ಲಿ ಸಿಗುತ್ತದೆ. ಪವಿತ್ರ ಕುರ್‍ಆನ್ ಹಾಗೂ ಪ್ರವಾದಿ ಚರ್ಯೆಗಳೆರಡು ಇಂದಿಗೂ ಸುರಕ್ಷಿತ ರೂಪದಲ್ಲಿದೆ. ಇದುವೇ ಅದರ ಸತ್ಯವಂತಿಕೆಗೆ ಪ್ರಮಾಣವಾಗಿದೆ.

 • ‘ಅದಾನ್’ ಅಥವಾ ‘ಬಾಂಗ್’ ಏನಿದು ಕರೆ ?
  ismika18-07-2014

  ಉತ್ತರ: ಮಸೀದಿಗಳಿಂದ ದಿನಕ್ಕೆ ಐದು ಬಾರಿ ಕೇಳಿ ಬರುವ ‘ಅದಾನ್’ ಅಥವಾ ‘ಬಾಂಗ್’ ನಮಾಝ್‍ನ ಕರೆಯಾಗಿದೆ. ಅನೇಕ ದೇಶಬಾಂಧವರು ಈ ಅದಾನ್ ಕರೆಯನ್ನೇ ಪ್ರಾರ್ಥನೆ ಎಂದು ಭಾವಿಸುವುದಿದೆ. ಅದಾನ್ ಕರೆಯನ್ನು ಮಸೀದಿಗಳಿಂದ ಸಾಮಾನ್ಯವಾಗಿ ಧ್ವನಿವರ್ಧಕಗಳಲ್ಲಿ ಕೊಡಲಾಗುತ್ತದೆ. ಕೆಲವರು ಪ್ರಾರ್ಥನೆಯನ್ನು ಇಷ್ಟು ಗಟ್ಟಿಯಾಗಿ ಯಾಕೆ ಹೇಳಬೇಕು, ದೇವರಿಗೆ ಕಿವಿ ಕೇಳಿಸುವುದಿಲ್ಲವೇ? ಎಂದು ಕೇಳುವುದುಂಟು. ನಿಜವಾಗಿ ಅದಾನ್ ಪ್ರಾರ್ಥನೆಯಲ್ಲ. ಅದು ‘ಪ್ರಾರ್ಥನೆಗೆ ಸಮಯವಾಯಿತು, ಮಸೀದಿಗೆ ಬನ್ನಿ’ ಎಂದು ಜನರಿಗೆ ನೀಡುವ ಕರೆ. ಊರಿನ ಅಥವಾ ಪರಿಸರದ ಎಲ್ಲ ಜನರು ಕೇಳುವಂತಾಗಲು ಅದನ್ನು ಧ್ವನಿವರ್ಧಕದಲ್ಲಿ ನೀಡಲಾಗುತ್ತದೆ. ಅದಾನ್‍ನಲ್ಲಿ ಹೇಳಲಾಗುವ ವಚನಗಳ ಅರ್ಥ ತಿಳಿದರೆ ಈ ಬಗ್ಗೆ ಇರುವ ಹಲವು ಗೊಂದಲಗಳು ನಿವಾರಣೆಯಾಗುತ್ತದೆ.
  ಅಲ್ಲಾಹು ಅಕ್ಬರ್
  ಅಲ್ಲಾಹನೇ ಅತ್ಯಂತ ಮಹಾನನು
  (ಇದನ್ನು ನಾಲ್ಕು ಬಾರಿ ಹೇಳಲಾಗುತ್ತದೆ.)
  ಅಶ್‍ಹದು ಅಲ್ಲಾ ಇಲಾಹ ಇಲ್ಲಲ್ಲಾಹ್
  ಅಲ್ಲಾಹನಲ್ಲದೆ ಆರಾಧನೆಗೆ ಅರ್ಹರು ಯಾರೂ ಇಲ್ಲವೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)
  ಅಶ್ಹದು ಅನ್ನ ಮುಹಮ್ಮದರ್ರಸೂಲುಲ್ಲಾಹ್
  ಪ್ರವಾದಿ ಮುಹಮ್ಮದ್(ಸ) ಅವರು ಅಲ್ಲಾಹನ ಸಂದೇಶವಾಹಕರಾಗಿರುವರೆಂದು ನಾನು ಸಾಕ್ಷ್ಯ ನುಡಿಯುತ್ತೇನೆ. (ಎರಡು ಸಲ)
  ಹಯ್ಯ ಅಲಸ್ಸಲಾಃ
  ಬನ್ನಿ ನಮಾಝ್‍ನ ಕಡೆಗೆ
  (ಎರಡು ಸಲ)
  ಹಯ್ಯ ಅಲಲ್ ಫಲಾಹ್
  ಬನ್ನಿ ವಿಜಯದ ಕಡೆಗೆ
  (ಎರಡು ಸಲ)
  ಅಲ್ಲಾಹು ಅಕ್ಬರ್
  ಅಲ್ಲಾಹನೇ ಅತ್ಯಂತ ಮಹಾನನು
  (ಎರಡು ಸಲ)
  ಲಾ ಇಲಾಹ ಇಲ್ಲಲ್ಲಾಹ್
  ಅಲ್ಲಾಹನಲ್ಲದೆ ಮತ್ತಾರೂ ಆರಾಧನೆಗೆ ಅರ್ಹರಿಲ್ಲ.
  ನಿತ್ಯ ಬೆಳಿಗ್ಗೆ ಸೂರ್ಯೋದಯಕ್ಕೆ ಸುಮಾರು 80ನಿಮಿಷ ಮುಂಚೆ ದಿನದ ಪ್ರಥಮ ನಮಾಝ್‍ಗೆ ಕರೆ ನೀಡುವಾಗ 2 ಸಲ ಈ ಕೆಳಗಿನ ನುಡಿಯನ್ನು ಸೇರಿಸಿ ಹೇಳಲಾಗುತ್ತದೆ.
  ಅಸ್ಸಲಾತು ಖೈರುಂಮಿನನ್ನೌಮ್
  ನಮಾಝ್ ನಿದ್ದೆಗಿಂತ ಉತ್ತಮವಾದುದು.
  (ಎರಡು ಸಲ)
  ಅದಾನ್‍ನ ಈ ನುಡಿಗಳಿಂದ ತಿಳಿಯುವುದೇನೆಂದರೆ ಅವು ಕೇವಲ ಒಂದು ಪ್ರಾರ್ಥನೆಯ ಕರೆಯಾಗಿರದೆ ಇಸ್ಲಾಮಿನ ಮೂಲ ತತ್ವಗಳ ಸುಂದರ ಪ್ರತಿಪಾದನೆಯೂ ಆಗಿದೆ. ವಿಶ್ವದ ಸೃಷ್ಟಿಕರ್ತನೂ ಒಡೆಯನೂ ಪರಿಪಾಲಕನೂ ಅಧಿಪತಿಯೂ ಆದ ಅಲ್ಲಾಹನ ಮಹಿಮೆಯನ್ನು ಇದರಲ್ಲಿ ಕೊಂಡಾಡಲಾಗಿದೆ. ಇದು ಯಾವುದೇ ಜನಾಂಗದ ಅಥವಾ ಕೋಮಿನ ಮಹಿಮೆಯ ಘೋಷಣೆಯಲ್ಲ. ಇಡೀ ಮಾನವಕುಲದ ಸೃಷ್ಟಿಕರ್ತ ಪ್ರಭುವಿನ ಮಹಾನತೆಯ ಪ್ರಕೀರ್ತನೆಯಾಗಿದೆ.
  ‘ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲ’ ಎಂಬ ವಚನವು ಇಸ್ಲಾಮ್ ಧರ್ಮದ ಮೂಲ ಮಂತ್ರವಾಗಿದೆ. ಮಾನವಕುಲದ ಆರಂಭದಿಂದಲೇ ಈ ಜಗತ್ತಿಗೆ ಬಂದ ಪ್ರವಾದಿಗಳೂ ಈ ಮೂಲ ಮಂತ್ರವನ್ನೇ ಪ್ರತಿಪಾದಿಸಿದ್ದರು. ಅದರ ಕಡೆಗೇ ಅವರು ತಂತಮ್ಮ ಜನತೆಯನ್ನು ಆಹ್ವಾನಿಸಿದ್ದರು. ಹಝ್ರತ್ ಮುಹಮ್ಮದ್(ಸ) ಆ ಪೈಕಿ ಕೊನೆಯವರಾಗಿದ್ದಾರೆ. ಆದ್ದರಿಂದ ಅವರ ಪ್ರವಾದಿತ್ವದ ಸಾಕ್ಷ್ಯವನ್ನೂ ಈ ಕರೆಯಲ್ಲಿ ಅಳವಡಿಸಲಾಗಿದೆ.
  ಅನಂತರ ಈ ಮೂಲ ಮಂತ್ರದ ಮೇಲೆ ನಂಬಿಕೆಯಿರುವವರನ್ನು ಅಲ್ಲಾಹನ ಆರಾಧನೆಯಾದ ನಮಾಝ್‍ಗಾಗಿ ಕರೆದು ಅವರ ನೈಜ ಯಶಸ್ಸು ಮತ್ತು ವಿಜಯವು ಅದರಲ್ಲೇ ಅಡಕವಾಗಿದೆಯೆಂದು ಸಾರಲಾಗಿದೆ.
  ಕೊನೆಗೆ ಪುನಃ ಅಲ್ಲಾಹನ ಮಹಾನತೆಯನ್ನು ಕೊಂಡಾಡಿ ಅವನ ಹೊರತು ಅನ್ಯರಾರೂ ಆರಾಧನೆಗೆ ಅರ್ಹರಲ್ಲವೆಂಬ ಪರಮ ಸತ್ಯವನ್ನು ಇನ್ನೊಮ್ಮೆ ಘೋಷಿಸಲಾಗಿದೆ.
  ಈ ಅದಾನ್ ಕರೆಯ ಮಹತ್ವ ಮತ್ತು ಅರ್ಥವನ್ನು ಅರಿತ ಯಾವ ವ್ಯಕ್ತಿಯೂ ಇದನ್ನು ಆಕ್ಷೇಪಿಸಲಾರ. ಅದನ್ನು ಗೇಲಿ ಮಾಡಲಾರ.

 • ಸೇನೆಯು ಜನಸಾಮಾನ್ಯರ ಮೇಲೆ ದಾಳಿ ಮಾಡಬಹುದೇ?
  ismika13-08-2014

  ಪ್ರಶ್ನೆ: ಎರಡು ರಾಷ್ಟ್ರಗಳ ವಿರುದ್ಧ ಯುದ್ಧ ನಡೆದಾಗ ಒಂದು ಇಸ್ಲಾವಿೂ ರಾಷ್ಟ್ರ ಕೇವಲ ಆ ರಾಷ್ಟ್ರದ ಸೇನೆಯ ವಿರುದ್ಧ ಹೋರಾಡಬೇಕೇ? ಅಥವಾ ಒಂದು ರಾಷ್ಟ್ರ ಜನಸಾಮಾನ್ಯರ ಮೇಲೆ ಆಕ್ರಮಣ ಮಾಡಿದರೆ ಇಸ್ಲಾವಿೂ ರಾಷ್ಟ್ರ ಕೂಡ ಅವರ ಸಮಾಜದ ಮೇಲೆ ಆಕ್ರಮಣ ಮಾಡಬಹುದೇ?

  ಉತ್ತರ: ಒಂದು ಇಸ್ಲಾವಿೂ ರಾಷ್ಟ್ರವು ತನ್ನ ರಾಷ್ಟ್ರದ ಹಿತರಕ್ಷಣೆಗಾಗಿ ಕೇವಲ ಸೇನೆಯೊಂದಿಗೆ ಮಾತ್ರ ಯುದ್ಧ ಮಾಡುವುದು. ಯಾಕೆಂದರೆ ವಿರೋಧಿ ರಾಷ್ಟ್ರವು ಮೇಲುಗೈ ಸಾಧಿಸಿ ಬಿಟ್ಟರೆ ಅದು ತನ್ನ ಹಿತಾಸಕ್ತಿಗೆ ತಕ್ಕಂತೆ ವರ್ತಿಸಬಹುದು. ದೇವನ ಆದೇಶಕ್ಕೆ ವಿರುದ್ಧವಾಗಿಯೂ ನಡೆಯಬಹುದು. ಆದರೆ ಇಸ್ಲಾವಿೂ ರಾಷ್ಟ್ರಕ್ಕೆ ಹಾಗೆ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಮುಸ್ಲಿಮ್ ಎಂದರೆ ದೇವನನ್ನು ಭಯ ಪಟ್ಟು ಜೀವಿಸುವ ಹೆಸರಾಗಿದೆ. ಯಾರಾ ದರೂ ಮುಸ್ಲಿಮನ ತಾಯಿ, ಮಕ್ಕಳ ಮೇಲೆ ಹಿಂಸೆ ದೌರ್ಜನ್ಯ ನಡೆಸಿದರೆ ಅವರ ತಾಯಿ ಮಕ್ಕಳ ಮೇಲೆ ಹಿಂಸೆ ನಡೆಸುವುದನ್ನು ಇಸ್ಲಾಮ್ ಸರ್ವಥಾ ಅನುಮತಿ ನೀಡುವುದಿಲ್ಲ ಮತ್ತು ಅದನ್ನು ಅಪರಾಧವೆಂದು ಪರಿಗಣಿ ಸುತ್ತದೆ. ಮುಸ್ಲಿಮನಾಗುವುದರ ಅರ್ಥ ಗರಿಷ್ಠ ದೌರ್ಜನ್ಯ ನಡೆದರೂ ಕೂಡಾ ಮುಸ್ಲಿಮನು ಅನ್ಯಾಯ ದೌರ್ಜನ್ಯ ನಡೆಸಲಾರನು. ಒಂದು ವೇಳೆ ಹಾಗೆ ಮಾಡಿದರೆ ಮುಸ್ಲಿಮನಿಗೂ ಜಾಹಿಲ್(ಅಜ್ಞಾನಿ)ಗೂ ಯಾವುದೇ ವ್ಯತ್ಯಾಸವಿರಲಾರದು. ಆದ್ದರಿಂದ ಎಲ್ಲ ರೀತಿಯ ಜಾಹಿಲಿಯ್ಯತನ್ನು ಪ್ರವಾದಿ(ಸ) ಕೊನೆಗೊಳಿಸಿದ್ದಾರೆ. ಒಬ್ಬನು ಅಕ್ರಮ, ಅನ್ಯಾಯ, ದೌರ್ಜನ್ಯವೆಸಗಿಸದರೆ ನಾವು ಕೂಡಾ ಹಾಗೆಯೇ ಮಾಡುವುದನ್ನು ಜಾಹಿಲಿಯ್ಯತ್ ಎಂದು ಪ್ರವಾದಿ(ಸ) ಶಿಕ್ಷಣ ನೀಡಿದ್ದಾರೆ. ಆದ್ದರಿಂದ ನಮಗೆ ಎಲ್ಲ ಪರಿಸ್ಥಿತಿಗಳಲ್ಲಿಯೂ ಅಲ್ಲಾಹನ ಕಾನೂನಿನಂತೆ ತೀರ್ಮಾನ ಕೈಗೊಳ್ಳ ಬೇಕಾಗಿದೆ. ನಾವು ಯಾವುದೇ ಅಮಾ ಯಕನ ಜೀವವನ್ನು ಹರಣ ಮಾಡ ಬಾರದು. ಇಸ್ಲಾಮಿನ ಪ್ರಕಾರ ಸೇನೆಗೆ ಹೊರತಾದವರ ಮೇಲೆ ಆಕ್ರಮಣ ನಡೆಸುವುದು ಬಹಳ ದೊಡ್ಡ ಅಪರಾಧ ವಾಗಿದೆ. ನಾಗರಿಕರ ಮೇಲೆ ಆಕ್ರಮಣ ನಡೆಸಿದ ಬಗ್ಗೆ ಕುರ್‍ಆನ್ ಮತ್ತು ಪ್ರವಾದಿ ಚರ್ಯೆ ಮತ್ತು ಸಹಾಬಿಗಳ ಚರಿತ್ರೆಯಲ್ಲಿ ಯಾವುದೇ ಉದಾಹರಣೆ ಯಿಲ್ಲ. ಅಬೂಬಕರ್(ರ) ಯುದ್ಧಕ್ಕೆ ಹೊರಡುವವರೊಂದಿಗೆ ನೀಡಿದ ಪ್ರಥಮ ಶಿಕ್ಷಣ, "ನಿಮ್ಮ ವಿರುದ್ಧ ಯುದ್ಧ ಮಾಡದವರೊಂದಿಗೆ ಯುದ್ಧ ಮಾಡಬಾರದು" ಎಂದಾಗಿತ್ತು. ಒಂದು ವೇಳೆ ಯಾವುದೇ ಸೇನಾ ನೆಲೆಯ ಮೇಲೆ ಆಕ್ರಮಣ ನಡೆಸಿದಾಗ, ಅನಿ ರೀಕ್ಷಿತವಾಗಿ ಅಥವಾ ತಪ್ಪಿ ಯಾವು ದಾದರೂ ನಾಗರಿಕರು ಜೀವ ಕಳೆದು ಕೊಂಡರೆ ಆ ಬಗ್ಗೆ ಕ್ಷಮೆ ಕೇಳಲಾಗುತ್ತದೆ ಮತ್ತು ಪರಿಹಾರ ನೀಡಲಾಗುತ್ತದೆ. ಕುರ್‍ಆನ್ ಮಾನವ ಜೀವಕ್ಕೆ ಬಹಳ ಪಾವಿತ್ರ್ಯತೆಯನ್ನು ನೀಡಿದೆ. ಒಂದು ವೇಳೆ ಕೊಲೆ ಮಾಡುವ ಉದ್ದೇಶ ಇಲ್ಲದೆ ತಪ್ಪಿ ಯಾರದಾದರೂ ಜೀವ ಹರಣವಾದರೆ ಅದಕ್ಕೆ ಎರಡು ತಿಂಗಳು ಉಪವಾಸ ಆಚರಿಸಬೇಕು. ಪರಿಹಾರ ನೀಡಬೇಕು. ಪ್ರವಾದಿಯವರು(ಸ), "ಕಅಬಾ, ಮಕ್ಕಾಕ್ಕೆ ಎಷ್ಟು ಗೌರವ ವಿದೆಯೋ ಅಷ್ಟೇ ಗೌರವ ಮಾನವ ಜೀವಕ್ಕೂ ಇದೆ" ಎಂದು ಹೇಳಿದ್ದಾರೆ. ಅದಕ್ಕೆ ಜಾತಿ ಮತ ಧರ್ಮದ ಭೇದವಿಲ್ಲ. ನಾವು ಮುಸ್ಲಿಮರಾಗಿದ್ದೇವೆ. ಇತರರು ಅನ್ಯಾಯ, ಆಕ್ರಮ, ದೌರ್ಜನ್ಯ ವೆಸಗಿದರೆ ನಾವು ಕೂಡಾ ಅದೇ ಬಣ್ಣ ತೋರಿಸುವುದು ಇಸ್ಲಾಮಿಗೆ ವಿರುದ್ಧವಾದುದಾಗಿದೆ. ಅವರು ನಮ್ಮ ಮಕ್ಕಳನ್ನು ಕಿಡ್ನಾಪ್ ಮಾಡಿದರೆ ನಾವು ಅವರ ಮಕ್ಕಳನ್ನು ಕಿಡ್ನಾಪ್ ಮಾಡು ವುದು, ಅವರು ನಮ್ಮ ಮಹಿಳೆಯ ಮೇಲೆ ದೌರ್ಜನ್ಯವೆಸಗಿದರೆ ನಾವು ಅವರ ಮಹಿಳೆಯರ ಮೇಲೆ ದೌರ್ಜನ್ಯ ವೆಸಗುವುದು ಇವೆಲ್ಲವೂ ಜಾಹಿಲಿಯ್ಯತ್ (ಅಜ್ಞಾನ) ಆಗಿದ್ದು, ಪ್ರವಾದಿ(ಸ) ವಿರೋಧಿಸಿದ ಕೃತ್ಯಗಳಾಗಿವೆ. ಅದೇ ರೀತಿ ಕೋಮು ಗಲಭೆ ಮತ್ತಿತರ ಸಂದರ್ಭಗಳಲ್ಲಿ ಅವರು ನಮ್ಮವರಿಗೆ ಹೊಡೆದರೆ ನಾವು ಅವರಿಗೆ ಹೊಡೆಯ ಬೇಕು ಎಂಬುದೂ ಜಾಹಿಲಿಯ್ಯತ್ ಪಟ್ಟಿಗೆ ಸೇರುತ್ತದೆ. ಅದೇ ಸಂದರ್ಭದಲ್ಲಿ ಅತ್ಮರಕ್ಷಣೆ ಮತ್ತು ದೌರ್ಜನ್ಯವೆಸಗು ವವರನ್ನು ಪ್ರತಿಭಟಿಸುವುದು ಹಾಗೂ ಅಮಾಯಕರನ್ನು ಗೌರವಿಸುವುದನ್ನು ಇಸ್ಲಾಮ್ ಅನುಮತಿಸುತ್ತದೆ. "ಯಾರಾ ದರೂ ತನ್ನ ಸೊತ್ತು, ಮನೆ ಮತ್ತು ಜೀವದ ರಕ್ಷಣೆಗಾಗಿ ಮಡಿದರೆ ಅವನಿಗೆ ಹುತಾತ್ಮನ ಪದವಿ ಸಿಗುತ್ತದೆ" ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದರೆ ಇಲ್ಲಿ ಯಾವುದೇ ಅಮಾಯಕನು ಅನ್ಯಾಯ ಮತ್ತು ದೌರ್ಜನ್ಯಕ್ಕೆ ಆಸ್ಪದವಿರಬಾರದು. ಮುಸ್ಲಿಮನು ಜಾತಿ ಮತ್ತು ಧರ್ಮ ಭೇದವೆನ್ನದೆ ಮಾನವ ಜೀವದ ರಕ್ಷಕರಾಗುವ ಜವಾಬ್ದಾರಿ ಯನ್ನು ನಿರ್ವಹಿಸಬೇಕು.

 • ಸಮಾಜ ದ್ರೋಹಿಗಳ ಹಿಂಬಾಲಕರು?
  ismika13-08-2014

  ಪ್ರಶ್ನೆ: ಸಮಾಜ ದ್ರೋಹಿ, ಧರ್ಮ ದ್ರೋಹಿ ನಾಯಕನ ಹಿಂಬಾಲಕರು, ಬೆಂಬಲಿಗರಾಗಿರುವುದರ ಕುರಿತು ಇಸ್ಲಾಮ್ ಏನು ಹೇಳುತ್ತದೆ?

  ಉತ್ತರ: ಸಮಾಜದ್ರೋಹಿ, ಧರ್ಮದ್ರೋಹಿ ನಾಯಕನನ್ನು ಪವಿತ್ರ ಕುರ್‍ಆನ್ 'ತಾಗೂತ್' (ಅತಿಕ್ರಮಿ) ಎಂದು ಕರೆಯುತ್ತದೆ. ಇದು ವಿಶಾಲಾರ್ಥದ ಪದವಾಗಿದೆ. ತನ್ನ ನ್ಯಾಯಬದ್ಧ ಮೇರೆಯನ್ನು ವಿೂರುವ ಅಂದರೆ ದಾಸ್ಯ ತನದ ಮೇರೆಯನ್ನು ವಿೂರಿ ಸ್ವತಃ ದೇವತ್ವವನ್ನು ಮೆರೆದು ಅಥವಾ ಒಡೆತನದ ಸೋಗು ತೋರಿಸಿ ದೇವನ ಸೃಷ್ಟಿಗಳಿಂದ ತನ್ನ ದಾಸ್ಯತನವನ್ನು ಮಾಡುವವ ನಾಗಿದ್ದಾನೆ. ಅಂಥವನನ್ನು ಧಿಕ್ಕರಿಸಬೇಕೆಂದು ಪವಿತ್ರ ಕುರ್‍ಆನ್ ವಿಶ್ವಾಸಿಗಳಿಗೆ ಕರೆ ಕೊಡುತ್ತದೆ. ಏಕೆಂದರೆ ಅವನು ಮನುಷ್ಯರನ್ನು ತಮ್ಮ ದಾಸರಾಗಿ ಮಾಡಲು ಪ್ರಯತ್ನಿಸುತ್ತಾನೆ. ಅವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಕರೆದೊಯ್ಯುತ್ತಾನೆ. ಕೊನೆಗೆ ಅದು ಅವರನ್ನು ನರಕಕ್ಕೆ ಕೊಂಡೊಯ್ಯುತ್ತದೆ. ಪವಿತ್ರ ಕುರ್‍ಆನ್ ಹೇಳುತ್ತದೆ: ತಾಗೂತನ್ನು ನಿರಾಕರಿಸಿ ಅಲ್ಲಾಹನಲ್ಲಿ ವಿಶ್ವಾಸವಿಟ್ಟವನು ಎಂದೆಂದಿಗೂ ಮುರಿಯದಂತಹ ಬಲವಾದ ಆಧಾರವನ್ನು ನೆಚ್ಚಿ ಕೊಂಡನು (2:256).

  ಅವರು ಇವರನ್ನು ಪ್ರಕಾಶದಿಂದ ಅಂಧಕಾರಗಳೆಡೆಗೆ ಎಳೆದೊಯ್ಯುತ್ತಾರೆ. ಇವರು ನರಕಾಗ್ನಿಯವರಾಗಿದ್ದು ಸದಾ ಅಲ್ಲೇ ಇರುವರು. (2:257)

  ಧರ್ಮ ದ್ರೋಹಿಗಳು ಅವರನ್ನು ಅನುಸರಿಸುವವರನ್ನು ಧರ್ಮ ದ್ರೋಹಿಗಳ ನ್ನಾಗಿ ಮಾಡುತ್ತಾರೆ. ಅಲ್ಲಾಹನ ಆಜ್ಞೆಗಳನ್ನು ಧಿಕ್ಕರಿಸಿ ಇತರ ಯಾರ ಆಜ್ಞೆ ಯನ್ನು ಪಾಲಿಸಬಾರದೆಂದು ವಿಶ್ವಾಸಿಗಳಿಗೆ ಕಟ್ಟೆಚ್ಚರ ನೀಡಲಾಗಿದೆ. ಪ್ರವಾದಿ(ಸ) ಹೇಳಿದರು- ದೇವನ ಆಜ್ಞೋಲ್ಲಂಘನೆ ಮಾಡಿ, ಯಾರನ್ನೇ ಅನುಸರಿಸುವುದು ಧರ್ಮ ಸಮ್ಮತವಲ್ಲ.
  ಪರಲೋಕದಲ್ಲಿ ದೇವಧಿಕ್ಕಾರಿಗಳನ್ನು ಅನುಸರಿಸಿ ನಡೆದವರು ತಮ್ಮ ನಾಯಕರ ಜೊತೆಯಲ್ಲಿ ನರಕದಲ್ಲಿರುವರು. ಅಲ್ಲಿ ಅವರ ಸ್ಥಿತಿಯನ್ನು ಕುರ್‍ಆನ್ ಈ ರೀತಿ ಚಿತ್ರೀಕರಿಸಿದೆ.
  "ಅಂದು ಅವರು ಯಾವ ಮಿತ್ರನನ್ನು ಸಹಕಾರಿಯನ್ನು ಪಡೆಯಲಾರರು. ಅವರ ಮುಖಗಳು ನರಕಾಗ್ನಿಯಲ್ಲಿ ಹೊರಳಾಡಿಸಲ್ಪಡುವ ದಿನ ಅವರು, ಅಯ್ಯೋ! ನಾವು ಅಲ್ಲಾಹ್ ಮತ್ತು ಪ್ರವಾದಿಯವರನ್ನು(sಸ) ಅನುಸರಿಸುತ್ತಿದ್ದರೆ! ಎನ್ನುವರು" ಮತ್ತು ಮುಂದುವರಿದು, "ನಮ್ಮ ಪ್ರಭೂ! ನಾವು ನಮ್ಮ ಸರದಾರರನ್ನು ಹಾಗೂ ಹಿರಿಯರನ್ನು ಅನುಸರಿಸಿದೆವು. ಅವರು ನಮ್ಮನ್ನು ದಾರಿಗೆಡಿಸಿ ಬಿಟ್ಟರು. ನಮ್ಮ ಪ್ರಭೂ! ಅವರಿಗೆ ಇಮ್ಮಡಿ ಯಾತನೆ ಕೊಡು. ಅವರನ್ನೂ ಅತ್ಯುಗ್ರವಾಗಿ ಶಪಿಸು ಎಂದೂ ಹೇಳುವರು." (ಅಲ್ ಅಹ್‍ಝಾದ್: 65-68)
  ಆದ್ದರಿಂದ ಸಮಾಜ ದ್ರೋಹಿ, ಧರ್ಮ ದ್ರೋಹಿಗಳಾದ ನಾಯಕರನ್ನು ಅವರ ದಬ್ಬಾಳಿಕೆಗೆ, ಬೆದರಿಕೆಗೆ ಹೆದರಿಯೋ, ಅವರ ಆಮಿಷಗಳಿಗೆ ಬಲಿಯಾಗಿಯೇ ಅನುಸರಿಸುವುದು ಮಹಾಪಾಪವಾಗಿದೆ. ಅದರ ಅಂತಿಮ ಪರಿಣಾಮ ಬಹಳ ಕೆಟ್ಟದಾಗಿರುವುದೆಂದು ವ್ಯಕ್ತವಾಗುತ್ತದೆ.

 • ಮಾಟ ಮತ್ತು ಚಿಕಿತ್ಸೆ?
  ismika13-08-2014

  ಪ್ರಶ್ನೆ: ಪ್ರವಾದಿ ಮುಹಮ್ಮದ್(ಸ) ಅವರ ಮೇಲೆ ಮಾಟದ ಪ್ರಭಾವವುಂಟಾಗಿತ್ತೆಂದು ಅಧ್ಯಯನಗಳಿಂದ ತಿಳಿಯುತ್ತದೆ. ಒಬ್ಬ ಮಹಾನ್ ಪ್ರವಾದಿಯ ಮೇಲೂ ಮಾಟದ ಪ್ರಭಾವವುಂಟಾಗಲು ಸಾಧ್ಯವಿದೆಯೆಂದಾದರೆ ನಮ್ಮಂತಹ ಸಾಮಾನ್ಯರ ಮೇಲೆ ಉಂಟಾಗುವ ಮಾಟದ ಪ್ರಭಾವವನ್ನು ಅರಿಯುವುದು ಹೇಗೆ? ಅದಕ್ಕೆ ಸೂಕ್ತವಾದ ಚಿಕಿತ್ಸೆಯನ್ನು ಶರೀಅತ್ ಪ್ರಕಾರವೇ ತಿಳಿಸಿ. ಕೇವಲ `ಮುಅವ್ವಿದತೈನ್' ಓದಿದರೆ ಸಾಕೆ?

  ಉತ್ತರ: ಪ್ರವಾದಿ ಮುಹಮ್ಮದ್(ಸ) ಅವರ ಶಿಕ್ಷಣ ಬೋಧನೆಗಳನ್ನು ಹತ್ತಿಕ್ಕಲು ಇಸ್ಲಾಮಿನ ವಿರೋಧಿಗಳಾದ ಯಹೂದಿಯರು ಮತ್ತು ಮುಶ್ರಿಕರು ಬಹಳಷ್ಟು ಪ್ರಯತ್ನಿಸಿದರು. ಅವರ ಎಲ್ಲ ಷಡ್ಯಂತ್ರಗಳೂ ವಿಫಲವಾದಾಗ ಯಹೂದ್ಯರು ಪ್ರವಾದಿ(ಸ) ಅವರ ಮೇಲೆ ಮಾಟ ಮಾಡಿದರು. ಇದರ ಪ್ರಭಾವವು ಪ್ರವಾದಿ(ಸ) ಅವರ ಮೇಲೆ ಗೋಚರಿಸ ತೊಡಗಿತು. ಈ ಪ್ರಭಾವವು ಒಂದು ವರ್ಷದವರೆಗೆ ಮುಂದುವರಿಯಿತು. ಆ ಅವಸ್ಥೆಯಲ್ಲಿ ಪ್ರವಾದಿಯವರ(ಸ) ದೈನಂದಿನ ಚಟುವಟಿಕೆಗಳಲ್ಲಿ ಕೆಲವೊಂದು ಮಾರ್ಪಟುಗಳುಂಟಾಗಿತ್ತು. ಅವರು ಯಾವುದಾದರೊಂದು ಕೆಲಸವನ್ನು ಮಾಡಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಅದನ್ನು ಮಾಡಿರುತ್ತಿರಲಿಲ್ಲ. ಕೆಲವು ಪತ್ನಿಯರ ಬಳಿಗೆ ಹೋಗಿ ಬಂದಿದ್ದೇನೆಂದು ಭಾವಿಸುತ್ತಿದ್ದರು. ಆದರೆ ಹಾಗೆ ಹೋಗುತ್ತಿರಲಿಲ್ಲ. ಅವರ ಶರೀರದಲ್ಲಿ ಬಳಲಿಕೆಯಿರುತ್ತಿತ್ತು. ಆದರೆ ಅವೆಲ್ಲದರ ಹೊರತಾಗಿಯೂ ಅವರ ನೈಜ ಕರ್ತವ್ಯ (ಸಂದೇಶ ಪ್ರಚಾರ)ದಲ್ಲಿ ಎಂದೂ ಕೊರೆತೆಯುಂಟಾಗಿರಲಿಲ್ಲ. ಈ ಕುರಿತು ಇತಿಹಾಸದಲ್ಲಿ ಪ್ರವಾದಿ(ಸ) ಅವರ ವೈರಿಗಳಿಂದಲೂ ಯಾವುದೇ ಉಲ್ಲೇಖವಿಲ್ಲ. ಒಂದು ವೇಳೆ ಪ್ರವಾದಿವರ್ಯರಿಂದ(ಸ) ಅದರಲ್ಲೂ ಲೋಪವುಂಟಾಗುತ್ತಿದ್ದರೆ ಪ್ರವಾದಿತ್ವದ ನಿರಾಕರಣೆಗೆ ಅಂದೊಂದೇ ಘಟನೆ ಸಾಕಾಗುತ್ತಿತ್ತು. ಇನ್ನು ಪ್ರವಾದಿವರ್ಯರ(ಸ) ಮೇಲೆ ಮಾಟ ಮಾಡಿದ್ದು ಅವರಿಗೆ ತಿಳಿದಿತ್ತೇ ಎಂಬ ಪ್ರಶ್ನೆ. ಪ್ರವಾದಿವರ್ಯರಿಗೆ(ಸ) ಮಾಟ ಮಾಡಲಾಗಿತ್ತೆಂದು ಮಾಟದ ಪ್ರಭಾವ ಸಂಪೂರ್ಣವುಂಟಾಗಿ ಒಂದು ವರ್ಷ ದಾಟಿದಾಗಲಷ್ಟೇ ಇಬ್ಬರು ದೇವಚರರ ಮೂಲಕ ಅವರಿಗೆ ತಿಳಿಸಲಾಗಿತ್ತೆಂದು ಇತಿಹಾಸದಿಂದ ತಿಳಿದು ಬರುತ್ತದೆ. ಯಾರು ಮಾಟ ಮಾಡಿದ್ದಾರೆಂದು ಅವರಿಗೆ ತಿಳಿಸಲಾಯಿತು. ಆದ್ದರಿಂದ ಅಪರಾಧಿಯ ಪತ್ತೆಯೂ ಆಯಿತು. ಆದರೆ ಪ್ರವಾದಿವರ್ಯರು(ಸ) ಅಪರಾಧಿಯ ವಿರುದ್ಧ ಪ್ರತೀಕಾರವೆಸಗಲಿಲ್ಲ. ಏಕೆಂದರೆ ತಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸಿದವರೊಂದಿಗೆ ಅವರು ಎಂದೂ ಪ್ರತಿಕಾರವೆಸಗುತ್ತಿರಲಿಲ್ಲ.

  ಪ್ರವಾದಿ(ಸ) ಅವರಂತಹ ಉನ್ನತ ವ್ಯಕ್ತಿಗೆ ಮಾಟ ಮಾಡಲಾಗಿದೆಯೆಂದು ತಿಳಿಯದಾದಾಗ ನಮ್ಮಂತಹ ಸಾಮಾನ್ಯ ವ್ಯಕ್ತಿಗಳಿಗೆ ಅದನ್ನು ಗುರುತಿಸಲು ಸಾಧ್ಯವಿಲ್ಲವೆಂದು ವ್ಯಕ್ತವಾಗುತ್ತದೆ. ಒಂದು ವೇಳೆ ಹಾಗೇನಾದರೂ ಸಂದೇಹವುಂಟಾದರೆ ಪವಿತ್ರ ಕುರ್‍ಆನಿನ ಕೊನೆಯ ಎರಡು ಸೂರಾಃಗಳಾದ `ಮುಆವ್ವಿದತೈನ್' ಓದುತ್ತಾ ಇದ್ದರೆ ಸಾಕು. ಪ್ರವಾದಿ(ಸ) ರಾತ್ರಿ ಮಲಗುವುದಕ್ಕಿಂತ ಮುಂಚೆ ಈ ಸೂರಾಃಗಳನ್ನು ಓದಿ ಕೈಗಳಿಗೆ ಊದಿ ಇಡೀ ಶರೀರಗಳ ಮೇಲೆ ಸವರುತ್ತಿದ್ದರು ಎಂದು ಹದೀಸ್‍ಗಳಿಂದ ತಿಳಿದು ಬರುತ್ತದೆ. ಒಂದು ವೇಳೆ ದೈಹಿಕವಾಗಿ ಅಥವಾ ಮಾನಸಿಕವಾಗಿ ಏನಾದರೂ ತೊಂದರೆ ಇದ್ದರೆ ಅದಕ್ಕೆ ನುರಿತ ವೈದ್ಯರಿಂದ ಸೂಕ್ತ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಮಾಟ ಮಾಡಲಾಗಿದೆಯೆಂಬ ಸಂದೇಹದಿಂದ ಜ್ಯೋತಿಷಿಗಳನ್ನು ಸವಿೂಪಿಸುವುದು ಅವರು ಕೊಟ್ಟ ಮಾಹಿತಿ ಪ್ರಕಾರ ಯಾರ ಮೇಲಾದರೂ ಹಗೆತನವಿಟ್ಟುಕೊಳ್ಳುವುದು ಇತ್ಯಾದಿ ಅಪಕೃತ್ಯಗಳನ್ನು ಮಾಡುವುದು ಸರಿಯಲ್ಲ. ಮಾಟ ಮಾಡುವುದು ಮಾನವನನ್ನು ವಿನಾಶಕ್ಕೂಯ್ಯಬಲ್ಲ ಏಳು ಮಹಾ ಪಾಪಗಳ ಪೈಕಿ ಒಂದಾಗಿದೆ. ಅದೇ ರೀತಿ ಮಾಟಗಾರನನ್ನು- ಮಾಟ ಮಾಡಲು ಅಥವಾ ಬಿಡಿಸಲು- ಸವಿೂಪಿಸುವುದು ಸತ್ಯವಿಶ್ವಾಸಕ್ಕೆ ವಿರುದ್ಧವಾದ ಕಾರ್ಯಗಳಾಗಿವೆ. ಪ್ರವಾದಿ(ಸ) ಹೀಗೆ ಹೇಳಿದ್ದಾರೆ. “ತನ್ನ ಸಮುದಾಯದ ಎಪ್ಪತ್ತು ಸಾವಿರ ಮಂದಿಯನ್ನು ವಿಚಾರಣೆವಿಲ್ಲದೆ ಸ್ವರ್ಗಕ್ಕೆ ಕಳಿಸಲಾಗುವುದು. ಅವರಲ್ಲಿ ಮಾಟಗಾರರ ಬಳಿಗೆ ಹೋಗದವರೂ ಸೇರಿದ್ದಾರೆ.”

 • ವಾಸ್ತು ದೋಷ ?
  ismika22-08-2014

  ಪ್ರಶ್ನೆ: ರೋಗ ಬಾಧಿಸುವುದು ಮತ್ತು ವ್ಯಾಪಾರದಲ್ಲಿ ನಷ್ಟವಾಗುವುದು ವಾಸ್ತುವಿನಿಂದ ಎಂದು ಕೆಲವರು ಹೇಳುತ್ತಾರೆ. ಇಸ್ಲಾಮಿನಲ್ಲಿ ವಾಸ್ತು ದೋಷವೆಂಬುದಿದೆಯೇ? ಇದ್ದರೆ ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾಯಿಸಬಹುದೇ?

  ಉತ್ತರ: ವಾಸ್ತು ದೋಷವೆಂಬುದು ಮಿಥ್ಯ ಕಲ್ಪನೆಯಾಗಿದೆ. ಅದಕ್ಕೆ ಇಸ್ಲಾಮಿನಲ್ಲಿ ಯಾವುದೇ ಸ್ಥಾನವಿಲ್ಲ. ಮನೆ, ಕಛೇರಿ ಅಥವಾ ಅಂಗಡಿಯ ವಿನ್ಯಾಸ ಬದಲಾವಣೆಯಿಂದ ರೋಗ ಬಾಧಿಸುವುದೋ ವ್ಯಾಪಾರದಲ್ಲಿ ನಷ್ಟವಾಗುವುದೋ ನಿವಾರಣೆಯಾಗುವುದಿಲ್ಲ. ಇಸ್ಲಾಮೀನ ಪ್ರಕಾರ, ರೋಗಬಾಧಿಸುವುದು ಮತ್ತು ವ್ಯಾಪಾರ, ಕೃಷಿ ಇತ್ಯಾದಿಗಳಲ್ಲಿ ನಷ್ಟ ಸಂಭವಿಸುವುದು ಅಥವಾ ಇನ್ನಿತರ ಯಾವುದೇ ಸಂಕಷ್ಟಗಳು ಮನುಷ್ಯನಿಗೆ ಬಾಧಿಸುವುದು ವಿಧಿಲಿಖಿತ ಪ್ರಕಾರವಾಗಿದೆ. ಅಂದರೆ ಅವೆಲ್ಲವೂ ಅಲ್ಲಾಹನಿಂದ ಪೂರ್ವನಿರ್ಧರಿತವಾಗಿರುತ್ತದೆ. ಅವೆಲ್ಲ ಮನುಷ್ಯನ ಪರೀಕ್ಷಾರ್ಥವಾಗಿ ಅಲ್ಲಾಹನು ಕಳುಹಿಸುತ್ತಾನೆ. ಬಂಧ ಸಂಕಷ್ಟಗಳು ಅಥವಾ ಇನ್ನು ಬರಬಹುದಾದ ಯಾವುದೇ ವಿಪತ್ತು ಅಥವಾ ಸಂಕಷ್ಟ ಅಲ್ಲಾಹನ ವತಿಯಿಂದ ಮಾತ್ರ ಬರುತ್ತದೆ ಎಂಬ ದೃಢ ನಂಬಿಕೆ ಹೊಂದಿದರೆ ಅವನು ಜೀವನದ ಪರೀಕ್ಷೆಯಲ್ಲಿ ಸಫಲನಾಗುವನು. ಮಾತ್ರವಲ್ಲ, ಸತ್ಯದ ಹಾದಿಯಲ್ಲಿ ಅಚಲವಾಗಿ ನಿಲ್ಲಲು ಅವನಿಗೆ ಅದು ಸ್ಫೂರ್ತಿ ನೀಡುತ್ತದೆ. ಪವಿತ್ರ ಕುರ್‍ಆನ್ ಹೇಳುತ್ತದೆ, "ನಾವು ನಿಮ್ಮನ್ನು ಭಯಾಶಂಕೆ, ಹಸಿವು, ಧನ ಹಾನಿ, ಜೀವಹಾನಿ ಮತ್ತು ಉತ್ಪನ್ನಗಳ ನಾಶಗಳಿಂದ ಖಂಡಿತ ನಿಮ್ಮನ್ನು ಪರೀಕ್ಷಿಸುವೆವು. ಇಂತಹ ಸನ್ನಿವೇಶಗಳಲ್ಲಿ ತಾಳ್ಮೆ ವಹಿಸಿದವರಿಗೆ ಸುವಾರ್ತೆ ನೀಡಿರಿ. ಅಂತಹವರ ಮೇಲೆ ವಿಪತ್ತೇನಾದರೂ ಎರಗಿದಾಗ ಅವರು, `ನಿಶ್ಚಯವಾಗಿಯೂ ನಾವು ಅಲ್ಲಾಹನವರು ಮತ್ತು ಅಲ್ಲಾಹನಡೆಗೆ ನಮಗೆ ಮರಳಲಿಕ್ಕಿದೆ'ಯೆನ್ನುವರು. ಅವರ ಮೇಲೆ ಅವರ ಪ್ರಭುವಿನ ಮಹಾ ಅನುಗ್ರಹಗಳಿರುವುವು. ಅವನ ಕಾರುಣ್ಯವು ಅವರನ್ನು ಅಚ್ಛಾದಿಸುವುದು ಮತ್ತು ಇಂತಹವರೇ ಸನ್ಮಾರ್ಗ ಹೊಂದಿದವರಾಗಿರುತ್ತಾರೆ." (2: 155-157)

  ಆದ್ದರಿಂದ ಅಲ್ಲಾಹನ ವಿಧಿಯ ಮೇಲೆ ಅಚಂಚಲ ವಿಶ್ವಾಸವಿರಿಸುವುದೇ ವಿಶ್ವಾಸಿಗಳಿಗಿರುವ ಸರಿಯಾದ ನಿಲುವು. ಮಳೆಯ ಕುರಿತು ಅಲ್ಲಾಹನು ಹೇಳುತ್ತಾನೆ, "ಮಳೆಯನ್ನು ಸುರಿಸುವವರು ನಾವು" (56: 68-69) ಆದರೆ ಮಳೆ ಬರುವುದು ಇಂತಿಂತಹ ಕಾರಣಗಳಿಂದ ಎಂದು ನಂಬಿದರೆ ಅಥವಾ ಹೇಳಿದರೆ ಅವನು `ಶಿರ್ಕ್' ಮಾಡಿದನು ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಶಿರ್ಕ್ ಅಥವಾ ಬಹುದೇವಾರಾಧನೆ ಮಹಾ ಪಾಪವಾಗಿದೆಯಷ್ಟೆ. ಅದು ಇದಕ್ಕೂ ಅನ್ವಯಿಸುತ್ತದೆ. ಆದ್ದರಿಂದ ವಾಸ್ತುವನ್ನು ಬದಲಾಯಿಸುವುದರಿಂದ ವಿಧಿ ಬದಲಾಗುವುದಿಲ್ಲವೆಂಬುದನ್ನು ತಿಳಿದಿರಬೇಕು. ವಿಧಿ ಬದಲಾಗಬೇಕಾದರೆ ಅಲ್ಲಾಹನೊಂದಿಗೆ ಸನ್ಮನಸ್ಸಿನಿಂದ ಪ್ರಾರ್ಥಿಸಬೇಕು. ರೋಗ ಬಾಧಿಸಿದರೂ ವ್ಯಾಪಾರದಲ್ಲಿ ನಷ್ಟ ಸಂಭವಿಸಿದರೂ ಅಥವಾ ಇನ್ಯಾವುದೇ ಸಂಕಷ್ಟ ಬಂದರೂ ಅಲ್ಲಾಹನಲ್ಲೇ ಪ್ರಾರ್ಥಿಸಬೇಕು. ಅವನಿಚ್ಛಿಸಿದರೆ ಸಂಕಷ್ಟದ ಪರಿಸ್ಥಿತಿಯನ್ನು ಬದಲಾಯಿಸುವನು.

 • ವರದಕ್ಷಿಣೆ ಯಾಕೆ ನಿಷಿದ್ಧ?
  ismika23-08-2014
  ಪ್ರಶ್ನೆ: ಇಂದು ಮುಸ್ಲಿಮ್ ಸಮುದಾಯದಲ್ಲಿ ವರದಕ್ಷಿಣೆಯ ಪದ್ದತಿ ರೂಢಿಯಲ್ಲಿದೆ. ಇದು ನಿಶಿದ್ಧ ಹಾಗೂ ಅನುವದನೀಯ ಎಂಬ ಅಭಿಪ್ರಾಯಗಳು ಹಲವರಿಂದ ಕೇಳಿಬರುತ್ತಿದೆ. ಇದರ ಕುರಿತು ಇಸ್ಲಾಮಿನ ನಿಲುವೇನು? ಇದು ನಿಷಿದ್ಧ ಎಂದಾದರೆ ಯಾವ ಆಧಾರದಲ್ಲಿ ಇದನ್ನುನಿಷಿದ್ಧಗೊಳಿಸಲಾಗಿದೆ?
   
  ಉತ್ತರ: ವಿವಾಹಿತನಾಗಲು ಬಯಸುವ ಯುವಕ ಅಥವಾ ಅವನ ಮನೆ ಮಂದಿ ವಿವಾಹಕ್ಕಿರುವ ಬೇಡಿಕೆಯಾಗಿ ಹೆಣ್ಣಿನ ಕಡೆಯಿಂದ ಅನ್ಯಾಯವಾಗಿ ಪಡೆಯುವ ಹಣ, ಚಿನ್ನ, ಆಸ್ತಿ-ಪಾಸ್ತಿಗಳು, ವಾಹನಗಳು, ಕಟ್ಟಡಗಳು ಮುಂತಾದವುಗಳನ್ನು ವರದಕ್ಷಿಣೆ ಎಂದು ಹೇಳುತ್ತಾರೆ.
  ಈ ರೀತಿಯ ಬೇಡಿಕೆ ಇರಿಸುವುದು ವಿವಾಹಿತನಾಗುವವನೋ ಅವನ ಹೆತ್ತವರೋ ಆಗಿರಬಹುದು. ಇದನ್ನು ನೀಡಬೇಕಾದ ಹೊಣೆ ವಧು ಅಥವಾ ಅವಳ ಮನೆಯವರಿಗೋ ಆಗಿರುತ್ತದೆ. ವಿವಾಹದ ಎಲ್ಲಾ ಸಿದ್ಧತೆಗಳು ಮುಗಿದಿದ್ದರೂ ಈ ಹಣ ಸಿಗದಿದ್ದರೆ ವಿವಾಹವೇ ನಿಂತುಹೋಗುವುದಿದೆ.
  ಇಂದು ಚಾಲ್ತಿಯಲ್ಲಿರುವ ವರದಕ್ಷಿಣೆ ಸಂಪ್ರದಾಯವು ನಿಷಿದ್ಧವಾಗಿದೆ ಎಂಬ ವಿಷಯದಲ್ಲಿ ಯಾವುದೇ ಸಂಶಯವಿಲ್ಲ. ಅನ್ಯಾಯವಾಗಿ ಇತರರ ಸಂಪತ್ತನ್ನು ಅನುಭವಿಸುವ, ಅಲ್ಲಾಹನು ಸ್ಪಷ್ಟವಾಗಿ ವಿರೋದಿಸಿದ ಸಾಲಿಗೆ ಇದು ಸೇರುತ್ತದೆ. ಗತ್ಯಂತರವಿಲ್ಲದೆ ಮನೆಮಾರುಗಳನ್ನು ಮಾರಿ ಹೊರಲಾರದ ಸಾಲಗಳನ್ನು ಹೊತ್ತು ಅಭಿಮಾನವನ್ನು ಅಡವಿಟ್ಟು ಇತರರ ಮುಂದೆ ಬೇಡಿ ಮಾನಸಿಕ ಯಾತನೆ ಅನುಭವಿಸಿ ಹೆತ್ತವರು ಹಣ ಹೊಂದಿಸುತ್ತಾರೆ. ಹೀಗೆ ಹಣ ಶೇಕರಿಸಿ ನೀಡುವ ವರದಕ್ಷಿಣೆಯನ್ನು ಸಮರ್ಥಿಸುವ ಯಾವುದೇ ಕುರ್‍ಆನ್ ಸೂಕ್ತಗಳು, ಪ್ರವಾದಿ ವಚನಗಳು ಅಥವಾ ಇಮಾಮರುಗಳ ಅಭಿಪ್ರಾಯಗಳೋ ಇಲ್ಲ.
  ಇನ್ನು ವರದಕ್ಷಿಣೆಯು ನಿಷಿದ್ಧವಾಗುವುದು ಯಾವ ಆಧಾರದಲ್ಲೆಂದರೆ,
  (1)ಇಸ್ಲಾಮಿನ ದೃಷ್ಟಿಯಲ್ಲಿ ಓರ್ವನ ಬಳಿಯಲ್ಲಿರುವ ಹಣವು ಇನ್ನೋರ್ವನಿಗೆ ಅನುವದನೀಯವಾಗಬೇಕಾದರೆ ಈ ಕೆಳಗಂಡ ಯಾವುದಾದರೂ ಮಾರ್ಗದಲ್ಲಾಗಿರಬೇಕು. 1. ವ್ಯಾಪಾರ 2. ಕೃಷಿ 3. ದುಡಿಮೆ 4. ನೌಕರಿ. ಅಥವಾ ವಂತಿಗೆ, ದಾನ, ಪಾರಿತೋಷಿಕ, ಪಿತ್ರಾರ್ಜಿತ ಮತ್ತು ವಸೀಯತ್‍ನ ರೂಪದಲ್ಲಿ.
  ಪ್ರವಾದಿ(ಸ) ಹೇಳಿದರು: "ಯಾವುದೇ ವಿಶ್ವಾಸಿಗೆ ತನ್ನ ಸಹೋದರನ ಒಂದು ಬೆತ್ತ ಕೂಡಾ ಆತನ ತೃಪ್ತಿಯಿಲ್ಲದೆ ಅನುವದನೀಯವಾಗುವುದಿಲ್ಲ. ಇದು, ಓರ್ವ ವಿಶ್ವಾಸಿಯ ಸಂಪತ್ತಿನಲ್ಲಿ ಇನ್ನೋರ್ವ ವಿಶ್ವಾಸಿಗೆ ಎಷ್ಟು ಬಾಧ್ಯತೆ ಇದೆ ಎಂದು ತಿಳಿಸುವುದಕ್ಕಾಗಿದೆ." (ಇಬ್ನು ಹಿಬ್ಬಾನ್) ಇಲ್ಲಿ ವರದಕ್ಷಿಣೆಯು ಈ ಅನುವದನೀಯವಾದ ಪಟ್ಟಿಗೆ ಸೇರುವುದಿಲ್ಲ.
  (2) ವರದಕ್ಷಿಣೆಯು ಕುರ್‍ಆನಿನ ಆದೇಶಕ್ಕೆ ವಿರುದ್ಧವಾಗಿದೆ. ಕಾರಣ, ಪುರುಷನು ಮಹಿಳೆಗೆ ವಿವಾಹ ಧನ (ಮಹ್ರ್) ನೀಡಬೇಕೆಂದು ಕುರ್‍ಆನ್ ಆಜ್ಞಾಪಿಸಿದೆ. ಅದಕ್ಕೆ ಯಾವುದೇ ಮಿತಿ ಇಲ್ಲ. ಮಿತಿ ನಿಶ್ಚಯಿಸಲು ಪ್ರಯತ್ನಿಸಿದ ಆಢಳಿತಾಧಿಕಾರಿಗಳು ಪ್ರಜೆಗಳಿಂದ ಪ್ರಶ್ನಿಸಲ್ಪಟ್ಟ ಐತಿಹಾಸಿಕ ಉದಾಹರಣೆಗಳಿವೆ. ಹಾಗೆ ನೀಡಲ್ಪಟ್ಟ ವಿವಾಹ ಧನವು ಹೆಣ್ಣಿನ ಹಕ್ಕಾಗಿ ಬದಲಾಗುತ್ತದೆ. ಬಳಿಕ ಅದರ ಮೇಲೆ ಪತಿಗೆ ಯಾವುದೇ ಹಕ್ಕು ಇರುವುದಿಲ್ಲ.
  (3) ಇದು ಇತರ ಸಮುದಾಯ ಹಾಗೂ ವಿಭಾಗಗಳ ಅನಾಚಾರಗಳನ್ನು ಅನುಸರಿಸುವಂಥಾಗಿದೆ. "ಯಾರು ಒಂದು ಸಮುದಾಯದೊಂದಿಗೆ ಸಾಮ್ಯತೆ ಇರುವಂತೆ ವರ್ತಿಸಿದನೋ ಅವನು ಆ ಸಮುದಾಯಕ್ಕೆ ಸೇರಿದವನಾಗುತ್ತಾನೆ" ಎಂದು ಪ್ರವಾದಿ(ಸ) ಹೇಳಿದ್ದಾರೆ.
  (4) ವರದಕ್ಷಿಣೆ ಸಂಪ್ರದಾಯದ ಮೂಲಕ ಒಂದು ವಿಭಾಗ ಸಂತೋಷಪಡುವಾಗ ಇನ್ನೊಂದು ವಿಭಾಗವು ಕಷ್ಟ ಹಾಗೂ ದುಃಖ ಅನುಭವಿಸುತ್ತದೆ.
  (5) ಹೆಣ್ಣಿನ ಮನೆಯವರ ಹಣ ಖರ್ಚು ಮಾಡಿ ವಿವಾಹವಾಗುವುದು ಓರ್ವ ಗಂಡಿಗೆ ಭೂಷಣವಲ್ಲ.
  ವರನು ವಧುವಿಗೆ ಕಡ್ಡಾಯವಾಗಿ ವಧುದಕ್ಷಿಣೆ ನೀಡಬೇಕೆಂದು ಆಜ್ಞಾಪಿಸುವ ಹಲವಾರು ಪ್ರವಾದಿ ವಚನಗಳೂ ಪುರಾವೆಗಳೂ ಇವೆ. ಇವೆಲ್ಲವನ್ನು ಕಡೆಗಣಿಸಿ ಮಹ್ರ್ ನೀಡುವುದನ್ನು ಕ್ಷುಲ್ಲಕ ಹಾಗೂ ಹೆಸರಿಗೆ ಮಾತ್ರ ಇರುವ ಕಾರ್ಯವಾಗಿ ಮಾಡುತ್ತಾರೆ. ಒಂದು ಪವನ್ ಚಿನ್ನವನ್ನು ಮಹ್ರ್ ಆಗಿ ನಿಶ್ಚಯಿಸಿ ಪವನ್ ಗಟ್ಟಲೆ ಚಿನ್ನ ಹಾಗೂ ಲಕ್ಷಗಟ್ಟಲೆ ಹಣವನ್ನು ಹೆಣ್ಣಿನ ಕಡೆಯಿಂದ ಪಡೆಯುತ್ತಾರೆ. ಇದು ಶರೀಅತ್‍ವ ಕಾನೂನನ್ನು ಗೇಲಿಮಾಡುವುದಲ್ಲವೇ?
  ಮೇಲೆ ವಿವರಿಸಿದ್ದಕ್ಕಿಂತ ಭಿನ್ನವಾಗಿ, ಯಾವುದಾದರೂ ಹೆತ್ತವರು ಪೂರ್ಣ ಸಂತೃಪ್ತಿಯೊಂದಿಗೆ ತಮ್ಮ ಮಗಳ ವಿವಾಹದ ಪ್ರಯುಕ್ತ ಆಭರಣ ಅಥವಾ ಇತರ ವಸ್ತುಗಳನ್ನು ವಿವಾಹ ಪಾರಿತೋಶಕವಾಗಿ ನೀಡಿದರೆ ಅದನ್ನು ವರದಕ್ಷಿಣೆ ಎಂದು ಹೇಳಲು ಸಾಧ್ಯವಿಲ್ಲ. ಹುಡುಗ ಅಥವಾ ಆತನ ಹೆತ್ತವರ ಪ್ರೇರಣೆ, ಒತ್ತಡ ಇಲ್ಲದಿದ್ದರೆ ಅದನ್ನು ಮೇಲೆ ತಿಳಿಸಿದ ವರದಕ್ಷಿಣೆಯ ಪಟ್ಟಿಗೆ ಸೇರಿಸಲಾಗದು. ಮಾತ್ರವಲ್ಲ, ಪ್ರವಾದಿ(ಸ) ತನ್ನ ಪ್ರಿಯ ಪುತ್ರಿ ಫಾತಿಮಾರನ್ನು ವಿವಾಹ ಮಾಡಿಸಿ ಕಳಿಸುವಾಗ ಅಗತ್ಯದ ಗೃಹಬಳಕೆಯ ಸಾಮಗ್ರಿಗಳನ್ನು ನೀಡಿರುವುದಾಗಿ ಹದೀಸ್‍ಗಳಲ್ಲಿ ವರದಿಯಾಗಿದೆ.
  ಆದರೆ ಹಾಗೆ ಮಾಡಲುದ್ದೇಶಿಸುವವರು ಕೆಲವು ವಿಚಾರಗಳನ್ನು ತಿಳಿದುಕೊಳ್ಳಬೇಕು. ವರದಕ್ಷಿಣೆಯು ಸಾರ್ವತ್ರಿಕವಾಗಿರುವ ಈ ಕಾಲದಲ್ಲಿ ಹೆಣ್ಣಿನ ಹೆತ್ತವರು ತನ್ನ ಅಳಿಯನಿಗೆ ವಿವಾಹದ ಪ್ರಯುಕ್ತ ವಾಹನ ಅಥವಾ ಇತರ ವಸ್ತುಗಳನ್ನು ಪಾರಿತೋಶಕವಾಗಿ ನೀಡಿದಾಗ ಅದು ಹಲವು ತಪ್ಪು ತಿಳುವಳಿಕೆಗಳಿಗೆ ಕಾರಣವಾಗಬಹುದು. ಅದನ್ನು ವರದಕ್ಷಿಣೆಗೆ ಸಮರ್ಥನೆಯಾಗಿ ಹಲವರು ಬಳಸಬಹುದು. ವಿಶೇಷತಃ ವರದಕ್ಷಿಣೆಯ ವಿರುದ್ಧ ಹೋರಾಟ ನಡೆಸುವವರಿಗೆ ಇದು ದೊಡ್ಡ ಸಂಕಷ್ಟವನ್ನು ತಂದೊಡ್ಡಬಹುದು.
 • ಇಸ್ಲಾಮಿನ ಮೂಲವಚನ ಯಾವುದು? ವಿವರಿಸಿ?
  ismika28-08-2014

  'ಲಾ ಇಲಾಹ ಇಲ್ಲಲ್ಲಾಹು, ಮುಹಮ್ಮದರ್ರಸೂಲುಲ್ಲಾಹ್' ಅರ್ಥಾತ್ "ಅಲ್ಲಾಹನ ಹೊರತು ದಾಸ್ಯ ಮತ್ತು ಆರಾಧನೆಗೆ ಅರ್ಹನಾದವನು ಯಾರೂ ಇಲ್ಲ. ಮುಹಮ್ಮದರು(ಸ) ಅಲ್ಲಾಹನ ಸಂದೇಶವಾಹಕರಾಗಿದ್ದಾರೆ" ಎಂಬುದು ಇಸ್ಲಾಮಿನ ಮೂಲ ವಚನ. ಈ ಪವಿತ್ರ ವಚನವೇ ಪವಿತ್ರ ಕುರ್‍ಆನಿನ ಶಿಕ್ಷಣಗಳ ತಿರುಳು. ಮನುಷ್ಯನ ಎಲ್ಲ ರೀತಿಯ ಆರಾಧನೆ, ದಾಸ್ಯ ಮತ್ತು ಅನುಸರಣೆಗೆ ಅರ್ಹನಾದವನು ಅಲ್ಲಾಹನು ಮಾತ್ರ. ಆತನ ದೇವತ್ವದಲ್ಲಿ ಯಾರೂ ಭಾಗೀದಾರರಿಲ್ಲ. ಅವನು ಏಕೈಕನು, ಚಿರಂತನನು, ನಿರಾಕಾರನು, ಸ್ವಯಂ ಜೀವಂತನು, ಅನಾದಿ, ಅನಂತನು, ಎಲ್ಲ ಅತ್ಯುತ್ತಮ ಗುಣಗಳೂ ಅತ್ಯುನ್ನತ ಮಟ್ಟದಲ್ಲಿ ಆತನಲ್ಲಿ ಸಮ್ಮಿಳಿತವಾಗಿವೆ. ಆತನು ಸರ್ವ ಸದ್ಗುಣ ಸಂಪನ್ನನು. ಎಲ್ಲ
  ನ್ಯೂನತೆ-ಕೊರತೆಗಳಿಂದ ಮತ್ತು ಮನುಷ್ಯನಿಗೆ ಊಹಿಸಲು ಸಾಧ್ಯವಾಗುವ ಯಾವುದೇ ರೀತಿಯ ದೌರ್ಬಲ್ಯಗಳಿಂದ ಅವನು ಸಂಪೂರ್ಣ ಮುಕ್ತನಾಗಿರುವನು.

  ಪವಿತ್ರ ಕುರ್‍ಆನಿನ ಪ್ರತಿಯೊಂದು ಪುಟದಲ್ಲೂ ಮೇಲೆ ಪ್ರಸ್ತಾಪಿಸಿದ ಏಕದೇವ ಕಲ್ಪನೆಯ ವಿವರಣೆಗಳು ಬೇರೆ ಬೇರೆ ರೀತಿಯಲ್ಲಿ ಬಂದಿವೆ. ಆ ಪೈಕಿ ಕೆಲವನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತಿದ್ದೇವೆ.

  "ಹೇಳಿರಿ - ಅವನು ಅಲ್ಲಾಹನು ಏಕೈಕನು. ಅಲ್ಲಾಹನು ಸಕಲರಿಂದ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ, ಅವನು ಯಾರ ಸಂತಾನವೂ ಅಲ್ಲ ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ." (112. 1-4)
  ಈ ಅಧ್ಯಾಯದಲ್ಲಿ ದೇವನಿಗೆ ಸಹಭಾಗಿಗಳಿರುವರು, ಪುತ್ರ-ಪುತ್ರಿಯರಿರುವರು ಹಾಗೂ ಅವನಿಗೆ ಮಡದಿ ಮಕ್ಕಳಿರುವರು ಎಂಬ ಕಲ್ಪನೆಗಳನ್ನು ಸ್ಪಷ್ಟವಾಗಿ ಖಂಡಿಸಲಾಗಿದೆ. ಇನ್ನೊಂದು ಕಡೆ ಪವಿತ್ರ ಕುರ್‍ಆನಿನಲ್ಲಿ ಏಕದೇವ ಕಲ್ಪನೆಯನ್ನು ಈ ರೀತಿ ಸ್ಪಷ್ಟಪಡಿಸಲಾಗಿದೆ.
  "ಅಲ್ಲಾಹನು ಚಿರಂತನು, ಸ್ವಯಂ ಜೀವಂತನು. ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡತಕ್ಕವನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಅವನಿಗೆ ದಣೆಸುವಂಥ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ." (2. 255)

 • 'ಗೋರಿ ಪೂಜೆ' ಮತ್ತು ಇಸ್ಲಾಮ್?
  ismika28-08-2014

  'ಕಬರ್ ಝಿಯಾರತ್' ಅಥವಾ 'ಸಮಾಧಿ ಸಂದರ್ಶನ' ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, ಪರಲೋಕ ಜೀವನದ ಬಗ್ಗೆ ಪ್ರಜ್ಞಾವಂತನಾಗುವುದು ಮತ್ತು ತನ್ನ ಮೃತ ಬಂಧುಗಳ ಮೋಕ್ಷಕ್ಕಾಗಿ ಪ್ರಾರ್ಥಿಸುವುದು ಸಮಾಧಿ ಸಂದರ್ಶನದ ಉದ್ದೇಶ. ಇದು ಪ್ರವಾದಿ ಚರ್ಯೆಯಾಗಿದ್ದು ಪುಣ್ಯ ಕಾರ್ಯವಾಗಿದೆ. ಆದರೆ ಗೋರಿಗಳನ್ನು ಎತ್ತರಿಸಿ ಕಟ್ಟುವ, ಅವುಗಳನ್ನು ಅಲಂಕರಿಸುವ, ಅವುಗಳ ಮೇಲೆ ಬಟ್ಟೆ ಹೊದಿಸುವ, ದೀಪ ಬೆಳಗಿಸುವ ಹಾಗೂ ಅಗರಬತ್ತಿಗಳನ್ನು ಹೊತ್ತಿಸುವ ಸಂಪ್ರದಾಯಗಳು ಪ್ರವಾದಿಚರ್ಯೆಗೆ ವಿರುದ್ಧವಾಗಿವೆ. ಗೋರಿ ಸಂದರ್ಶನವನ್ನು 'ಗೋರಿ ಪೂಜೆ'ಯಾಗಿ ಮಾರ್ಪಡಿಸಬಹುದಾದ ಇಂತಹ ಸಂಪ್ರದಾಯಗಳಿಗೆ ಇಸ್ಲಾಮಿನ ಮೂಲಗ್ರಂಥಗಳಾದ ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ಯಾವ ಆಧಾರವೂ ಇಲ್ಲ. ಹಾಗೆಯೇ ಸಂತರ ಸಮಾಧಿಗಳಲ್ಲಿ ನಡೆಸಲ್ಪಡುವ 'ಉರೂಸ್' ಎಂಬ ಉತ್ಸವಗಳಿಗೆ ಇಸ್ಲಾಮ್ ಧರ್ಮದೊಂದಿಗೆ ಯಾವ ಸಂಬಂಧವೂ ಇಲ್ಲ. ಇದು ಇಸ್ಲಾಮಿನೊಳಗೆ ನುಸುಳಿಕೊಂಡಿರುವ ಅನ್ಯಧರ್ಮೀಯ ಸಂಪ್ರದಾಯಗಳಾಗಿವೆ. ಇನ್ನು ಸಮಾಧಿಸ್ಥರಾದ ಮಹಾತ್ಮರನ್ನು ಕರೆದು ಪ್ರಾರ್ಥಿಸುವುದಾಗಲೀ ಗೋರಿಗಳಿಗೆ ಸಾಷ್ಟಾಂಗವೆರಗುವುದಾಗಲೀ ಇಸ್ಲಾಮ್ ಧರ್ಮದ ಏಕದೇವ ವಿಶ್ವಾಸಕ್ಕೆ ತೀರಾ ವಿರುದ್ಧವಾಗಿದ್ದ ನಿಷಿದ್ಧ ಕಾರ್ಯವೆಂಬುದನ್ನು ಸ್ವಯಂ ಉರೂಸ್ ಸಂಪ್ರದಾಯದ ಬೆಂಬಲಿಗರೂ ಒಪ್ಪುತ್ತಾರೆ.

 • 786 ಮತ್ತು ಬಾಲಚಂದ್ರ ಇಸ್ಲಾಮಿನ ಸಂಕೇತವೇ?
  ismika28-08-2014

  ಕೆಲವರು '786' ಎಂಬ ಸಂಖ್ಯೆಯನ್ನು ಮತ್ತು ಬಾಲಚಂದ್ರ ಮತ್ತು ನಕ್ಷತ್ರವನ್ನೊಳಗೊಂಡ ಆಕೃತಿಯನ್ನು ಅಲ್ಲಾಹನ ಸಂಕೇತ ಎಂದು ಭಾವಿಸುವುದಿದೆ. ಆದರೆ ಅಲ್ಲಾಹನಿಗೆ ಅಥವಾ ಇಸ್ಲಾಮ್ ಧರ್ಮಕ್ಕೆ ಅಂತಹ ಯಾವ ಸಂಕೇತವೂ ಇಲ್ಲ. ಪವಿತ್ರ ಕುರ್‍ಆನಿನ ಪ್ರತಿಯೊಂದು ಅಧ್ಯಾಯದ ಆರಂಭದಲ್ಲಿ ಬರುವ "ಪರಮ ದಯಾಮಯನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದ" ಎಂಬರ್ಥದ ವಾಕ್ಯವನ್ನು ಸಂಕೇತಿಸಲು ಕೆಲವು ಮುಸ್ಲಿಮರು 786 ಎಂಬ ಸಂಖ್ಯೆಯನ್ನು ಬಳಸುತ್ತಾರೆ. 'ಅಬ್‍ಜದ್'ಎಂಬ ಅರಬೀ ಸಂಖ್ಯಾಶಾಸ್ತ್ರದ ಗಣನೆಯ ಪ್ರಕಾರ ಪ್ರಸ್ತುತ ವಾಕ್ಯದ ಮೊತ್ತವೇ 786 ಆಗುತ್ತದೆ. ಕೆಲವರು ಪವಿತ್ರ ಕುರ್‍ಆನಿನ ವಾಕ್ಯಕ್ಕೆ ಅಗೌರವ ಆಗದಿರಲಿ ಎಂಬ ಉದ್ದೇಶದಿಂದ ತಮ್ಮ ಪತ್ರಗಳಲ್ಲಿ '786' ಸಂಖ್ಯೆಯನ್ನು ಬರೆಯುತ್ತಾರೆ. ಮುಸ್ಲಿಮರು ತಮ್ಮ ಎಲ್ಲಾ ಕೆಲಸಗಳನ್ನು ಪರಮ ದಯಾಮನೂ ಕರುಣಾನಿಧಿಯೂ ಆದ ಅಲ್ಲಾಹನ ನಾಮದಿಂದಲೇ ಆರಂಭಿಸಬೇಕು ಎಂಬ ಪ್ರವಾದಿ ಮುಹಮ್ಮದ್‍ರವರ(ಸ) ಆದೇಶವನ್ನು ಪಾಲಿಸುವುದೇ ಹೀಗೆ ಮಾಡುವುದರ ಉದ್ದೇಶ. ಆದರೆ ಈ ರೀತಿ '786' ಸಂಖ್ಯೆಯನ್ನು ಬಳಸುವುದಕ್ಕೆ ಕುರ್‍ಆನ್- ಹದೀಸ್‍ಗಳಲ್ಲಿ ಯಾವುದೇ ಪುರಾವೆಯಿಲ್ಲ. ಅಂತೆಯೇ ಆ ಸಂಖ್ಯೆಗೆ ಯಾವುದೇ ಧಾರ್ಮಿಕ ಮಹತ್ವವೂ ಇಲ್ಲ.

  ಇಸ್ಲಾಮಿನ ಪಂಚಾಂಗವು ಚಾಂದ್ರಮಾನ ಕಾಲಗಣನೆಯನ್ನು ಅವಲಂಭಿಸಿದೆ. ಹಿಜರಿ ಶಕೆಯೂ ಚಾಂದ್ರಮಾನ ವರ್ಷವನ್ನಾಧರಿಸಿದೆ. ಹಜ್ಜ್ ಯಾತ್ರೆ ಮತ್ತು ಉಪವಾಸ ವ್ರತದಂತಹ ಪ್ರಮುಖ ಆರಾಧನಾ ಕರ್ಮಗಳು ಮತ್ತು ಇಸ್ಲಾಮಿನ ಎರಡು ಪ್ರಮುಖ ಹಬ್ಬಗಳಾದ 'ಈದುಲ್ ಫಿತೃ' (ರಮಝಾನ್ ಹಬ್ಬ) ಮತ್ತು 'ಈದುಲ್ ಅಝ್‍ಹಾ' (ಬಕ್ರೀದ್) ಆಚರಣೆಯೂ ಚಂದ್ರದರ್ಶನವನ್ನಾಧರಿಸಿದೆ. ಆದುದರಿಂದ ಟರ್ಕಿಯ ಖಿಲಾಫತ್‍ನ ಕಾಲದಲ್ಲಿ ಬಾಲಚಂದ್ರ ಮತ್ತು ನಕ್ಷತ್ರವನ್ನು ಅಲ್ಲಿಯ ರಾಷ್ಟ್ರ ಧ್ವಜದಲ್ಲಿ ಅಳವಡಿಸಲಾಯಿತು. ಅಂದಿನಿಂದ ಅನೇಕ ಮುಸ್ಲಿಮರು ಅದನ್ನು ಒಂದು ಉತ್ತಮ ಸಂಕೇತದ ರೂಪದಲ್ಲಿ ಬಳಸುತ್ತಾರೆ. ಆದರೆ ಅದಕ್ಕೂ ಯಾವುದೇ ಧಾರ್ಮಿಕ ಮಹತ್ವವಿಲ್ಲ.

 • ಪ್ರವಾದಿ ಮುಹಮ್ಮದ್(ಸ) ಇಸ್ಲಾಮಿನ ಸ್ಥಾಪಕರೆ?
  ismika03-09-2014

  ಪ್ರವಾದಿ ಮುಹಮ್ಮದ್(ಸ) ಇಸ್ಲಾಮ್ ಧರ್ಮದ ಸ್ಥಾಪಕರೆಂಬುದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಒಂದು ತಪ್ಪುಕಲ್ಪನೆ. ಕ್ರೈಸ್ತ ಧರ್ಮದ ಸ್ಥಾಪಕ ಏಸುಕ್ರಿಸ್ತ ಎನ್ನಲಾಗುವಂತೆ, ಬೌದ್ಧ ಧರ್ಮದ ಸ್ಥಾಪಕ ಬುದ್ಧರಾಗಿರುವಂತೆ, ಝರತುಷ್ಟ್ರ ಧರ್ಮದ ಸ್ಥಾಪಕ ಝರತುಷ್ಟ್ರರಾಗಿರುವಂತೆ, ಇಸ್ಲಾಮ್ ಧರ್ಮವು ಮುಹಮ್ಮದರಿಂದ(ಸ) ಸ್ಥಾಪಿಸಲ್ಪಟ್ಟಿತು ಎಂದು ಜನರು ತಿಳಿಯುವುದು ಸಹಜ.

  ಆದರೆ ಇಸ್ಲಾಮ್ ಧರ್ಮದ ಹೆಸರೇ ಸೂಚಿಸುವಂತೆ ಅದು ಮುಹಮ್ಮದ್‍ರವರು(ಸ) ಸ್ಥಾಪಿಸಿದ ಧರ್ಮವಾಗಲೀ ಅವರು ಸ್ಥಾಪಿಸಿದ ಒಂದು ಹೊಸ ಪಂಥವಾಗಲೀ ಅಲ್ಲ. ಅಂತೆಯೇ ಯಹೂದಿ ಜನಾಂಗದ ಧರ್ಮಕ್ಕೆ ಯಹೂದಿ ಪಂಥವೆಂದು ಹೆಸರಿರುವಂತೆ, ಸಿಂಧೂ ನದಿಯ ದೇಶದ ವಾಸಿಗಳು ಹಿಂದೂಗಳೆನಿಸಿಕೊಂಡಿರುವಂತೆ, ಇಸ್ಲಾಮ್ ಒಂದು ವರ್ಗ ಅಥವಾ ಪ್ರದೇಶದೊಂದಿಗೆ ಸಂಬಂಧವಿರಿಸಿಕೊಂಡ ಧರ್ಮವೂ ಅಲ್ಲ. ಅದು ಮುಹಮ್ಮದ್(ಸ) ಆವಿಷ್ಕರಿಸಿದ ಮುಹಮ್ಮದೀಯ ಧರ್ಮವಾಗಿರದೇ ಮಾನವಕುಲದ ಆದಿಪಿತ ಆದಮರಿಂದ(ಅ) ಹಿಡಿದು ಅಂತಿಮ ಪ್ರವಾದಿ ಮುಹಮ್ಮದ್‍ರವರ(ಸ) ವರೆಗೆ ವಿಶ್ವದ ಒಡೆಯನಿಂದ ನೇಮಿಸಲ್ಪಟ್ಟ ಎಲ್ಲ ಪ್ರವಾದಿಗಳೂ ಪ್ರತಿಪಾದಿಸಿದ ಸನಾತನವೂ ಚಿರನೂತನವೂ ಆದ ಧರ್ಮವಾಗಿದೆ. ಇಸ್ಲಾಮ್ ಎಂಬ ಪದದ ಅರ್ಥವು ಅನುಸರಣೆ, ವಿಧೇಯತೆ ಮತ್ತು ಶಾಂತಿ ಎಂದಾಗಿದೆ. ಮನುಷ್ಯನು ತನ್ನ ಸೃಷ್ಟಿಕರ್ತ, ಪಾಲಕ, ಪ್ರಭು ಮತ್ತು ಅಧಿಪತಿಯಾದ ಅಲ್ಲಾಹನಿಗೆ ಸಂಪೂರ್ಣ ವಿಧೇಯನಾಗಿ ಅವನ ಆಜ್ಞೆಗಳನ್ನು ಅನುಸರಿಸಿ ಜೀವಿಸುವ ಜೀವನ ಪದ್ಧತಿ ಎಂಬುದೇ ಆ ಪದದ ತಾತ್ಪರ್ಯ. ಹಾಗೆ ಜೀವಿಸಿದಾಗ ಅವನು ಇಹ-ಪರ ಲೋಕಗಳಲ್ಲಿ ಶಾಂತಿ ಮತ್ತು ನೆಮ್ಮದಿ ಹಾಗೂ ಮೋಕ್ಷ ಮತ್ತು ವಿಜಯವನ್ನು ಪಡೆಯುವನು.
  ಅಲ್ಲಾಹನ ಬಳಿ ಸ್ವೀಕಾರ ಯೋಗ್ಯವಾದ ಧರ್ಮವು ಇದೊಂದೇ ಆಗಿದೆ ಎಂಬುದನ್ನು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸಿದೆ. ಮಾತ್ರವಲ್ಲ, ಪ್ರಥಮ ಮಾನವರೂ ಪ್ರಥಮ ಪ್ರವಾದಿಯೂ ಆದ ಆದಮ್‍ರಿಂದ(ಅ) ಅಂತಿಮ ಪ್ರವಾದಿ ಹ. ಮುಹಮ್ಮದ್‍ರ(ಸ) ತನಕ ಎಲ್ಲ ಪ್ರವಾದಿಗಳು ತಂತಮ್ಮ ಜನತೆಯ ಮುಂದೆ ಇದೇ ಧರ್ಮವನ್ನು ಪ್ರತಿಪಾದಿಸಿದರು ಮತ್ತು ಅದರಂತೆ ಬದುಕಿ ತೋರಿಸಿದರು. ಈ ಧರ್ಮವು ಮನುಷ್ಯನ ಪರಲೋಕ ಮೋಕ್ಷಕ್ಕೆ ಹೇತುವಾಗುವುದು ಮಾತ್ರವಲ್ಲ ಅವನ ಇಹಲೋಕ ಜೀವನದ ಅತ್ಯುತ್ತಮ ನಿರ್ಮಾಣವೂ ಈ ಧರ್ಮದಿಂದಲೇ ಆಗುವುದು. ಅವನ ಎಲ್ಲಾ ಸಮಸ್ಯೆಗಳಿಗೂ ಇದರಲ್ಲಿ ಸೂಕ್ತ ಪರಿಹಾರವಿದ್ದು ಈ ಧರ್ಮ ಮಾತ್ರ ನೈಜ ಅರ್ಥದಲ್ಲಿ ಅವನನ್ನು ವಿಜಯದ ಕಡೆಗೆ ಒಯ್ಯಬಲ್ಲುದು. ಅವನಿಗೆ ಶಾಂತಿ, ಸುಭಿಕ್ಷೆ ಮತ್ತು ಕಲ್ಯಾಣವನ್ನು ನೀಡಬಲ್ಲುದು.

 • ಮುಸ್ಲಿಮೇತರರಿಗೆ ಸಲಾಮ್ ಹೇಳುವುದು?
  ismika17-09-2014

  ಪ್ರಶ್ನೆ: ನನ್ನ ಮುಸ್ಲಿಮೇತರ ಸ್ನೇಹಿತನೋರ್ವನು ನನ್ನೊಂದಿಗೆ ಕೇಳಿದನು- "ನೀವು ಮುಸ್ಲಿಮರಿಗೆ ಮಾತ್ರ ಸಲಾಮ್ ಹೇಳುವುದು ಯಾಕೆ? ಅದು ಶಾಂತಿಯ ಪ್ರಾರ್ಥನೆಯಾಗಿದ್ದರೆ ಅದನ್ನು ಎಲ್ಲರಲ್ಲೂ ಹೇಳಬಹುದಲ್ಲವೇ? ಈ ಅಭಿಪ್ರಾಯವು ಸರಿಯಲ್ಲವೇ?

  ಉತ್ತರ: 'ಅಸ್ಸಲಾಮು ಅಲೈಕುಂ' ಎಂಬು ವುದು ಮುಸ್ಲಿಮ್-ಮುಸ್ಲಿಮೇತರ ಎಂಬ ಬೇಧ ಭಾವವಿಲ್ಲದೆ ಪ್ರಯೋಗಿಸಬಹು ದಾದ ವಾಕ್ಯವಾಗಿದೆ. ಇಮಾಮ್ ಬುಖಾರಿ ಹಾಗೂ ಮುಸ್ಲಿಮ್ ವರದಿ ಮಾಡಿರುವ ಹದೀಸಿನಲ್ಲಿ ಹೀಗೆ ಕಾಣ ಬಹುದು. "ಅಲ್ಲಾಹನು ಆದಮ ರನ್ನು(ಅ) ಸೃಷ್ಟಿಸಿದ ಬಳಿಕ ಹೀಗೆ ಹೇಳಿದನು- ತಾವು ಆ ಗುಂಪಿನ ಬಳಿಗೆ ಹೋಗಿರಿ. ಅಲ್ಲಿ ಮಲಕ್‍ಗಳ ಒಂದು ಗುಂಪು ಇದೆ. ಅವರು ನಿಮ್ಮನ್ನು ಅಭಿನಂಧಿಸುವುದನ್ನು ಆಲಿ ಸಿರಿ. ನಿಮ್ಮ ಹಾಗೂ ನಿಮ್ಮ ಸಂತತಿಗಳ ಅಭಿನಂದನೆಯು ಅದುವೇ ಆಗಿದೆ. ಹಾಗೆ ಅವರು 'ಅಸ್ಸಲಾಮು ಅಲೈಕುಂ' ಎಂದು ಹೇಳಿದರು. ಅಸ್ಸಲಾಮು ಅಲೈಕ ವರಹ್‍ಮತುಲ್ಲಾಹಿ ಎಂದು ಅವರು ಪ್ರತಿಯಾಗಿ ಅಭಿನಂಧಿಸಿದರು." 
  (ಬುಖಾರಿ, ಮುಸ್ಲಿಂ)
  ಇದರಿಂದ ತಿಳಿದು ಬರುವುದೇ ನೆಂದರೆ ಅಲ್ಲಾಹನು ಆದಮರಿಗೂ(ಅ) ಅವರ ಸಂತತಿಗಳಿಗೂ ಅಭಿನಂದನೆಯ ವಾಕ್ಯವಾಗಿ ಕಲಿಸಿದ್ದು ಅಸ್ಸಲಾಮು ಅಲೈಕುಂ ಎಂದಾಗಿದೆ. ಆದಮರ ಸಂತತಿಗಳು ಎಂದು ಹದೀಸ್‍ನಲ್ಲಿ ಹೇಳಲಾಗಿದೆ. ಮನುಷ್ಯರೆಲ್ಲರೂ ಆದಮರ ಸಂತತಿಗಳಾಗಿದ್ದಾರೆ.
  ಕುರ್‍ಆನಿನಲ್ಲೂ ನಮಗೆ ವಿಭಿನ್ನ ಅಭಿನಂದನಾ ರೀತಿಗಳನ್ನು ಕಾಣಲು ಸಾಧ್ಯವಿಲ್ಲ. ಉದಾ: "ಸತ್ಯ ವಿಶ್ವಾಸಿಗಳೇ, ನಿಮ್ಮ ಮನೆಗಳ ಹೊರತು ಇತರರ ಮನೆಗಳಿಗೆ ಅವರ ಒಪ್ಪಿಗೆ ಪಡೆಯದೆ ಹಾಗೂ ಮನೆಯವರಿಗೆ ಸಲಾಮ್ ಹೇಳದೆ ಪ್ರವೇಶಿಸಬೇಡಿ. ಈ ಕ್ರಮವು ನಿಮ್ಮ ಮಟ್ಟಿಗೆ ಉತ್ತಮ. ನೀವು ಇದನ್ನು ಗಮನದಲ್ಲಿರಿಸುವಿರೆಂದು ನಿರೀಕ್ಷಿಸಲಾಗಿದೆ." (ಅನ್ನೂರ್: 27)
  "ಸಂದೇಶವಾಹಕರೇ, ಇವರನ್ನು ಮನ್ನಿಸಿರಿ ಮತ್ತು ನಿಮಗೆ ಸಲಾಮ್ (ಶಾಂತಿ) ಎಂದು ಹೇಳಿರಿ. ಸದ್ಯವೇ ಇವರಿಗೆ ತಿಳಿದು ಬರುವುದು." 
  (ಅಝುಖ್‍ರುಫ್: 89)
  "ಆಗ ಇಬ್ರಾಹೀಮರು, `ತಮಗೆ ಸಲಾಮ್, ತಮ್ಮನ್ನು ಕ್ಷಮಿಸಲಿಕ್ಕಾಗಿ ನಾನು ನನ್ನ ಪ್ರಭುವಿನೊಡನೆ ಪ್ರಾರ್ಥಿಸು ವೆನು. ನನ್ನ ಪ್ರಭು ನನ್ನ ಮೇಲೆ ಅತ್ಯಧಿಕ ಕೃಪೆಯುಳ್ಳವನು' ಎಂದರು." 
  (ಮರ್ಯಮ್: 47)
  ಮುಸ್ಲಿಮೇತರರಿಗೂ ಸಲಾಮ್ ಹೇಳಬಹುದು ಎಂದು ಪ್ರಸಿದ್ಧ ಸಹಾಬಿ ಗಳಾದ ಇಬ್ನು ಅಬ್ಬಾಸ್, ಇಬ್ನು ಮಸ್‍ಊದ್, ಅಬೂ ಉಮಾಮ(ರ) ಮೊದಲಾದವರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳ ಕಾಲಾನಂತರ ಬಂದ ಖಲೀಫಾ ಉಮರ್ ಬಿನ್ ಅಬ್ದುಲ್ ಅಝಿಝ್, ಸುಫ್‍ಯಾನ್ ಬಿನ್ ಉಯೈನ, ಶಅïಬಿ, ಔಝಾಈ, ತ್ವಬ್‍ರಿ ಮುಂತಾದವರೂ ಇದೇ ಅಭಿ ಪ್ರಾಯವನ್ನು ಹೊಂದಿದ್ದಾರೆ.
  ಯಹೂದಿ-ಕ್ರೈಸ್ತರಿಗೆ ಸಲಾಮ್ ಹೇಳುವುದನ್ನು ವಿರೋಧಿಸಿದ ಹದೀಸ್ ಗಳನ್ನು ಪರಿಶೀಲಿಸಿದರೆ ಅದು ಯುದ್ಧದ ಸಂದರ್ಭಗಳಿಗೆ ಮಾತ್ರ ಸೀಮಿತವಾದ ಪ್ರತ್ಯೇಕ ವಿಧಿಗಳೆಂದು ತಿಳಿದು ಬರುತ್ತದೆ. "ನಾಳೆ ಅವರನ್ನು ಎದುರಿಸಲು ಹೋಗ ಲಿದ್ದೇವೆ. ಆದ್ದರಿಂದ ಅವರೊಂದಿಗೆ ಸಲಾಮ್‍ನಿಂದ ಆರಂಭಿಸಬೇಡಿ" ಎಂದು ಒಂದು ವರದಿಯಲ್ಲಿ ಕಾಣ ಬಹುದು. ಬೇರೆ ಶೈಲಿಯಲ್ಲೂ ಈ ಇಂಗಿತವು ಪ್ರಕಟಗೊಂಡಿದೆ. ಇಂತಹ ಹದೀಸ್‍ಗಳ ಪೂರ್ಣ ರೂಪವನ್ನು ನೋಡುವುದಾದರೆ, ಯಹೂದಿಯರು ಕೈಗೊಂಡ ಇಸ್ಲಾಮ್ ವಿರೋಧಿ ಧೋರಣೆಗಳ ಹಿನ್ನೆಲೆಯಲ್ಲಿ ಅಂತಹ ಸಲಹೆ ನೀಡಲಾಗಿದೆ ಎಂದು ತಿಳಿದು ಬರುವುದು.
  ಒಟ್ಟಿನಲ್ಲಿ ಶತ್ರುಗಳಲ್ಲದೆ ಯಾರೇ ಆದರೂ ಅವರಿಗೆ ಸಲಾಮ್ ಹೇಳುವು ದಕ್ಕೂ ಅದನ್ನು ಮರಳಿಸುವುದಕ್ಕೂ ವಿರೋಧವಿಲ್ಲ ಎಂಬ ಅಭಿಪ್ರಾಯವು ಹೆಚ್ಚು ಸ್ವೀಕಾರಾರ್ಹ ಎಂದು ಭಾಸ ವಾಗುತ್ತದೆ. ಪ್ರವಾದಿ(ಸ) ಹೀಗೆ ಕಲಿಸಿ ದ್ದಾರೆ, "ನೀನು ಪರಿಚಿತರೊಂದಿಗೂ ಅಪರಿಚಿತರೊಂದಿಗೂ ಸಲಾಮ್ ಹೇಳು."
  ಇಮಾಮ್ ಕುರ್ತುಬಿ ತನ್ನ ಕುರ್‍ಆನ್ ವ್ಯಾಖ್ಯಾನ ಗ್ರಂಥದಲ್ಲಿ ಈ ವಿಷಯವನ್ನು ಚರ್ಚಿಸಿದ್ದಾರೆ. ಇಮಾಮ್ ಸುಫ್‍ಯಾನ್ ಬಿನ್ ಉಯೈನರೊಂದಿಗೆ ಓರ್ವ ವ್ಯಕ್ತಿ ಕೇಳಿದರು, "ಸತ್ಯನಿಷೇಧಿಗಳಿಗೆ ಸಲಾಮ್ ಹೇಳಬಹುದೇ?" "ಹೌದು, ಹೇಳ ಬಹುದು." ಅವರು ಉತ್ತರಿಸಿದರು. ಬಳಿಕ ಮುಮ್ತಹಿನ ಅಧ್ಯಾಯದ ನಾಲ್ಕನೇ ಸೂಕ್ತವನ್ನು ಪುರಾವೆಯಾಗಿ ಓದಿದರು. ಮಾತ್ರವಲ್ಲ, ಇಬ್ರಾಹೀಮ ರಲ್ಲಿ(ಅ) ನಮ್ಮ ಉತ್ತಮ ಮಾದರಿ ಇದೆ ಎಂಬ ಸೂಕ್ತವನ್ನು ಉದ್ಧರಿಸಿ, ಇಬ್ರಾಹೀಮ್(ಅ) ತನ್ನ ತಂದೆಯೊಂದಿಗೆ `ಸಲಾಮುನ್ ಅಲೈಕ' ಎಂದು ಹೇಳಿದ ಭಾಗವನ್ನೂ ಅವರು ತೋರಿಸಿದರು. ಈ ನಿಲುವು ಸರಿ ಎಂದು ಇಮಾಮ್ ತ್ವಬ್ರೀ ಒತ್ತು ನೀಡಿ ಹೇಳಿದ್ದಾರೆ. ಗತ ಕಾಲದ ಮಹಾನ್ ವ್ಯಕ್ತಿಗಳಲ್ಲಿ ಇತರ ಧರ್ಮೀಯರಿಗೆ ಸಲಾಮ್ ಹೇಳಿ ದವರೂ ಹೇಳದವರೂ ಇದ್ದರು ಎಂದು ಇಮಾಮ್ ಔಝಾಈ ಹೇಳಿದ್ದನ್ನು ಕುರ್ತುಬಿ ಉದ್ಧರಿಸಿದ್ದಾರೆ.
  ಒಟ್ಟಿಗೆ ಆಡಿ, ಕಲಿತು, ಬೆರೆತು, ಒಟ್ಟಿಗೆ ದುಡಿದು ಪರಸ್ಪರ ಗೌರವ ದೊಂದಿಗೆ ಬದುಕುವವರು ಯಾವುದೇ ಧವರ್ಿೂಯರಾಗಿದ್ದರೂ ಅವರಿಗೆ ಆದಮರ(ಅ) ಸಂತತಿಗೆ ಅಲ್ಲಾಹನು ಕಲಿಸಿದ ಶಾಂತಿಯ ಹಾಗೂ ಸಾಮಾ ಧಾನದ ಹಾರೈಕೆ ಅರ್ಪಿಸಬೇಕು ಎಂಬುದು ಇಸ್ಲಾಮಿನ ಬಯಕೆಯಾಗಿದೆ.

 • ಇಸ್ಲಾಮಿನಲ್ಲಿ ಪೌರೋಹಿತ್ಯವಿದೆಯೇ ?
  ismika17-09-2014

  ಉತ್ತರ: ಇಸ್ಲಾಮಿನಲ್ಲಿ ಪೌರೋಹಿತ್ಯವಿಲ್ಲ. ಧಾರ್ಮಿಕ ವಿಧಿಗಳನ್ನು ನಿರ್ವಹಿಸಲು ಯಾವುದೇ ವಿಶಿಷ್ಟ ವರ್ಗದ ಅಗತ್ಯವಿಲ್ಲ. ಇಸ್ಲಾಮಿನಲ್ಲಿ ಸನ್ಯಾಸವಿಲ್ಲ. ಧರ್ಮದ ಜ್ಞಾನ, ಕುರ್‍ಆನಿನ ವಿದ್ಯೆ, ದೇವಭಕ್ತಿ ಮತ್ತು ಧರ್ಮನಿಷ್ಠೆ ಇವುಗಳೇ ಇಮಾಮತ್‍ಗೆ(ನೇತೃತ್ವ) ಬೇಕಾದ ಗುಣಗಳು. ಈ ಗುಣಗಳಿರುವ ಯಾವ ವ್ಯಕ್ತಿಯೂ ಇಮಾಮತ್(ನೇತೃತ್ವ) ಮಾಡಬಹುದು. ಅವನ ಕುಲಗೋತ್ರಗಳಿಗಾಗಲೀ ವರ್ಣ, ವರ್ಗಗಳಿಗಾಗಲೀ ಯಾವುದೇ ಮಹತ್ವವಿಲ್ಲ. ಇಮಾಮತ್‍ಗೆ ನೇಮಿಸಲ್ಪಟ್ಟ ವ್ಯಕ್ತಿ ಕಾರಣಾಂತರದಿಂದ ಯಾವುದಾದರೂ ನಮಾಝ್‍ಗೆ ಸಮಯಕ್ಕೆ ಸರಿಯಾಗಿ ಬರದೇ ಇದ್ದರೆ ಅವರ ಸ್ಥಾನದಲ್ಲಿ ನಮಾಝ್‍ಗೆ ಸೇರಿದವರ ಪೈಕಿ ಕುರ್‍ಆನ್ ಹೆಚ್ಚು ಬಲ್ಲವರು ಮತ್ತು ಹೆಚ್ಚು ದೇವಭಕ್ತಿಯುಳ್ಳವರನ್ನು ಇಮಾಮತ್‍ಗೆ ನಿಲ್ಲಿಸಲಾಗುತ್ತದೆ. ನಮಾಝ್‍ನಲ್ಲಿ ಎಲ್ಲರೂ ಸಮಾನವಾಗಿ ಒಂದೇ ಪಂಕ್ತಿಯಲ್ಲಿ ಭುಜಕ್ಕೆ ಭುಜ, ಪಾದಕ್ಕೆ ಪಾದ ತಾಗಿಸಿ ಸಾಲಾಗಿ ನಿಲ್ಲುತ್ತಾರೆ. ಮೊದಲು ಬಂದವರು ಮುಂದಿನ ಸಾಲಲ್ಲಿ ಮತ್ತು ಅನಂತರ ಬಂದವರು ಹಿಂದಿನ ಸಾಲುಗಳಲ್ಲಿ ನಿಲ್ಲಬೇಕು. ಇಲ್ಲಿ ಯಾರಿಗೂ ಸ್ಥಳ ಕಾದಿರಿಸುವಿಕೆಯಿಲ್ಲ. ಯಾರನ್ನೂ ಕಾಯುವ ಪ್ರಸಂಗವಿಲ್ಲ.

 • ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮವೇ?
  ismika17-09-2014

  ಪ್ರಶ್ನೆ: ಇಸ್ಲಾಮ್ ಖಡ್ಗದಿಂದ ಪಸರಿಸಿದ ಧರ್ಮ ಎಂದು ಹೇಳಲಾಗುತ್ತದೆ, ಇದು ಸರಿಯೇ?

  ಉತ್ತರ: ಮುಸ್ಲಿಮನೆಂದರೆ, "ಒಂದು ಕೈಯಲ್ಲಿ ಖಡ್ಗ ಮತ್ತೊಂದು ಕೈಯಲ್ಲಿ ಕುರ್‍ಆನ್ ಹಿಡಿದುಕೊಂಡು ಒಂದೋ ಕುರ್‍ಆನನ್ನು ನಂಬಿ ಮುಸ್ಲಿಮನಾಗು ಇಲ್ಲವೇ ಖಡ್ಗಕ್ಕೆ ಶರಣಾಗಿ ಸಾಯಲು ಸಿದ್ಧನಾಗು" ಎಂದು ಹೇಳುವ ಮತ್ತು ಖಡ್ಗದ ಬಲದಿಂದ ಜನರನ್ನು ಮತಾಂತರ ಮಾಡುವ ಒಬ್ಬ ಮತಾಂಧನೆಂಬ ವಿಕೃತ ಚಿತ್ರವನ್ನು ಇಸ್ಲಾಮಿನ ಪಾಶ್ಚಾತ್ಯ ಶತ್ರುಗಳು ಮತ್ತವರ ಪೌರ್ವಾತ್ಯ ಅಂಧಾನುಯಾಯಿಗಳು ಮೂಡಿಸಿರುವರು. ಸಾಮಾನ್ಯವಾಗಿ 'ಜಿಹಾದ್' ಎಂದರೆ ಧರ್ಮವನ್ನು ಬಲಾತ್ಕಾರವಾಗಿ ಹೇರಲು ಮಾಡುವಂತಹ ಯುದ್ಧ ಎಂದು ಭಾವಿಸಲಾಗುತ್ತದೆ. ಆದರೆ ಪವಿತ್ರ ಕುರ್‍ಆನ್, ಪ್ರವಾದಿ ವಚನಗಳು, ಪ್ರವಾದಿ ಜೀವನ ಚರಿತ್ರೆ ಮತ್ತು ಅವರ ಸತ್ಯಸಂಧರಾದ ಖಲೀಫರುಗಳ ಇತಿಹಾಸವು ಜಿಹಾದ್‍ನ ಬಗ್ಗೆ ಇದಕ್ಕೆ ತೀರಾ ವ್ಯತಿರಿಕ್ತವಾದ ಒಂದು ಚಿತ್ರವನ್ನು ನಮ್ಮ ಮುಂದಿಡುತ್ತದೆ.

  'ಧರ್ಮದಲ್ಲಿ ಯಾವುದೇ ಒತ್ತಾಯ, ಬಲಾತ್ಕಾರಗಳಿಲ್ಲ' (2:256)ವೆಂದು ಪವಿತ್ರ ಕುರ್‍ಆನ್ ಖಡಾಖಂಡಿತವಾಗಿ ಸಾರಿದೆ. ವಿಚಾರ ಸ್ವಾತಂತ್ರ್ಯವು ಮನುಷ್ಯನ ಜನ್ಮಸಿದ್ಧ ಹಕ್ಕು. ಅದನ್ನು ಕಸಿಯುವ ಅಧಿಕಾರವನ್ನು ಇಸ್ಲಾಮ್ ಯಾರಿಗೂ ನೀಡುವುದಿಲ್ಲ. ಒತ್ತಾಯ-ಬಲಾತ್ಕಾರಗಳಿಂದ, ಖಡ್ಗ-ಬಂದೂಕುಗಳಿಂದ ಜನರ ಶಿರಬಾಗಿಸಬಹುದೇ ಹೊರತು ಅವರ ಮನಗಳನ್ನು ಜಯಿಸಲು ಸಾಧ್ಯವಿಲ್ಲ. ಇಸ್ಲಾಮ್ ಮನುಷ್ಯರ ಮನವನ್ನು ಜಯಿಸ ಬಯಸುತ್ತದೆ. ಅದು ಮಾನವನ ಮನಸ್ಸಿನಲ್ಲಿ ಕೆಲವು ವಿಶ್ವಾಸ-ಶ್ರದ್ಧೆಗಳನ್ನು ಬಿತ್ತ ಬಯಸುತ್ತದೆ. ಮನುಷ್ಯನಲ್ಲಿ ವೈಚಾರಿಕ ಕ್ರಾಂತಿಯನ್ನು ತರಬಯಸುತ್ತದೆ. ಈ ಕಾರ್ಯ ಖಡ್ಗದಿಂದ ಸಾಧ್ಯವಲ್ಲವೆಂಬುದು ಶತಃಸಿದ್ಧ. ಇಸ್ಲಾಮಿನ ಸಂಪೂರ್ಣ ಧರ್ಮಸಂಹಿತೆಯು ಈ ವೈಚಾರಿಕ ಕ್ರಾಂತಿಯನ್ನು ಅವಲಂಬಿಸಿರುವಾಗ ಅದನ್ನು ಖಡ್ಗದ ಮೂಲಕ ಸಾಧಿಸಬಹುದೆನ್ನುವುದು ಮಹಾ ಮೂರ್ಖತನ.

  ಪ್ರವಾದಿವರ್ಯರ(ಸ) ಮಕ್ಕಾ ಜೀವನದ 13 ವರ್ಷಗಳಲ್ಲಿ ಅವರು ಮತ್ತು ಅವರ ಅನುಯಾಯಿಗಳು ಅನುಭವಿಸಿದ ಕಷ್ಟ-ನಷ್ಟಗಳಿಗೆ, ಹಿಂಸೆ-ದೌರ್ಜನ್ಯಗಳಿಗೆ ಲೆಕ್ಕ ಮಿತಿ ಇರಲಿಲ್ಲ. ಆದರೂ ಪ್ರವಾದಿ(ಸ) ಆ ಕಾಲದಲ್ಲಿ ತಮ್ಮ ಅನುಯಾಯಿಗಳಿಗೆ ಆತ್ಮ ರಕ್ಷಣೆಗಾಗಿಯೂ ಖಡ್ಗ ಎತ್ತುವ ಅನುಮತಿ ನೀಡಿರಲಿಲ್ಲ. ಕೊನೆಗೊಮ್ಮೆ ಶತ್ರುಗಳ ಹಿಂಸೆ ಮಿತಿ ವಿೂರಿದಾಗ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳು(ರ) ಮಕ್ಕಾ ಪಟ್ಟಣವನ್ನು ತೊರೆದು ಮದೀನಾಕ್ಕೆ ವಲಸೆ ಹೋಗುತ್ತಾರೆ. ಅಲ್ಲಿಯೂ ಪ್ರವಾದಿವರ್ಯರು(ಸ) ಮತ್ತವರ ಅನುಯಾಯಿಗಳನ್ನೂ ತಮ್ಮಿಷ್ಟದ ಧರ್ಮವನ್ನು ಪಾಲಿಸುತ್ತಾ, ಹಾಯಾಗಿ ಜೀವಿಸಲು ಮತ್ತು ಶಾಂತಿಯುತವಾಗಿ ಅದನ್ನು ಪ್ರಚಾರ ಪಡಿಸಲು ಮಕ್ಕಾದ ಬಹುದೇವಾರಾಧಕರು ಅನುಮತಿಸಲಿಲ್ಲ. ಅವರು ಮಕ್ಕಾದಿಂದ ದಂಡೆತ್ತಿ ಬಂದು ಮದೀನಾದ ಮೇಲೆ ಆಕ್ರಮಣಕ್ಕೆ ಸಜ್ಜಾದಾಗ ಮುಸ್ಲಿಮರಿಗೆ ಮೊಟ್ಟ ಮೊದಲು ಯುದ್ಧ ಮಾಡುವ ಅನುಮತಿ ದೊರೆಯಿತು. ಪವಿತ್ರ ಕುರ್‍ಆನಿನಲ್ಲಿ ಅದು ಈ ರೀತಿ ಉಲ್ಲೇಖಿಸಲ್ಪಟ್ಟಿದೆ- "ನಿಮ್ಮೊಡನೆ ಯುದ್ಧ ಮಾಡುವವರೊಂದಿಗೆ ನೀವೂ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ಆದರೆ ಅತಿಕ್ರಮಿಸಬೇಡಿರಿ. ಅಲ್ಲಾಹನು ಅತಿಕ್ರಮಿಸುವವರನ್ನು ಮೆಚ್ಚುವುದಿಲ್ಲ." (2:190)

  ಅದೇ ರೀತಿ ಧರ್ಮಾಚರಣೆ ಮತ್ತು ಧರ್ಮ ಪ್ರಚಾರವು ಮನುಷ್ಯನ ಮೂಲಭೂತ ಸ್ವಾತಂತ್ರ್ಯ. ತನಗಿಷ್ಟ ಬಂದ ಧರ್ಮವನ್ನು ಸ್ವೀಕರಿಸುವ, ಅದರಂತೆ ಜೀವನ ಸಾಗಿಸುವ ಮತ್ತು ಶಾಂತಿಯುತವಾಗಿ ಅದನ್ನು ಇತರರಲ್ಲಿ ಪ್ರಚಾರಪಡಿಸುವ ಹಕ್ಕು ಪ್ರತಿಯೊಬ್ಬ ಮನುಷ್ಯನಿಗೂ ಇದೆ. ಇಸ್ಲಾಮ್ ಮನುಷ್ಯನ ಈ ಸ್ವಾತಂತ್ರ್ಯವನ್ನು ಮಾನ್ಯ ಮಾಡುತ್ತದೆ. ಈ ಸ್ವಾತಂತ್ರ್ಯವು ಕಸಿಯಲ್ಪಟ್ಟಾಗ ಅಥವಾ ಶಾಂತಿಯುತ ಧರ್ಮಪ್ರಚಾರ ಕಾರ್ಯಗಳು ಹಿಂಸಾ ಮಾರ್ಗದಿಂದ ತಡೆಯಲ್ಪಟ್ಟಾಗ, ಇಸ್ಲಾಮ್ ಹಾಗೆ ಹಿಂಸೆಗಿಳಿಯುವವರ ವಿರುದ್ಧ ಯುದ್ಧ ಮಾಡುವ ಅನುಮತಿ ನೀಡುತ್ತದೆ.
  "ಓ ಸತ್ಯವಿಶ್ವಾಸಿಗಳೇ, 'ಫಿತ್ನ'(ಕ್ಷೋಭೆ) ಅಳಿದು ಹೋಗುವವರೆಗೂ 'ಧರ್ಮ'(ದೀನ್) ಸರ್ವಸಂಪೂರ್ಣವಾಗಿ ಅಲ್ಲಾಹನಿಗಾಗಿ ಆಗುವವರೆಗೂ ಈ ಸತ್ಯನಿಷೇಧಿಗಳೊಡನೆ ಹೋರಾಡಿರಿ." (8:39)

  ಆದರೆ ಶಾಂತಿಯ ಎಲ್ಲ ಮಾರ್ಗಗಳು ಮುಚ್ಚಲ್ಪಟ್ಟಾಗ ಮಾತ್ರ ಯುದ್ಧಕ್ಕೆ ಅನುಮತಿ ನೀಡಲಾಗಿದೆ. ಅನಿವಾರ್ಯ ಸ್ಥಿತಿಯಲ್ಲಿ ಯುದ್ಧಕ್ಕೆ ಅನುಮತಿ ಸಿಕ್ಕಿದ ಬಳಿಕವೂ ಅದಕ್ಕೆ ಕೆಲವು ನೀತಿ-ನಿಯಮಗಳನ್ನು ಇಸ್ಲಾಮ್ ಧರ್ಮವು ನಿರ್ಧರಿಸಿದೆ. ಅವುಗಳ ಪಾಲನೆಯು ಕಡ್ಡಾಯವಾಗಿದೆ. ಮುನ್ನೆಚ್ಚರಿಕೆ ಅಥವಾ ಪೂರ್ವ ಘೋಷಣೆಯಿಲ್ಲದೆ ಯುದ್ಧ ಮಾಡುವಂತಿಲ್ಲ. ರಕ್ತಪಾತವನ್ನು ತಪ್ಪಿಸಿ ಶಾಂತಿ ಸ್ಥಾಪನೆಯ ಅಂತಿಮ ಅವಕಾಶವನ್ನು ನೀಡದೆ ಯುದ್ಧಕ್ಕೆ ಧುಮುಕುವಂತಿಲ್ಲ.
  "ಓ ಪೈಗಂಬರರೇ, ಶತ್ರುವು ಶಾಂತಿ ಸಂಧಾನಗಳ ಕಡೆಗೆ ವಾಲಿದರೆ ನೀವೂ ಅದಕ್ಕೆ ಸಿದ್ಧರಾಗಿರಿ ಮತ್ತು ಅಲ್ಲಾಹನ ಮೇಲೆ ಭರವಸೆಯನ್ನಿರಿಸಿರಿ." (8:61)

 • ಪವಿತ್ರ ಕುರ್‍ಆನ್ ಮುಹಮ್ಮದ್ ಪೈಗಂಬರರ ಕೃತಿಯೇ?
  ismika17-09-2014

  ಉತ್ತರ: ಇಸ್ಲಾಮ್ ಧರ್ಮದ ಬಗ್ಗೆ ಹಾಗೂ ಪವಿತ್ರ ಕುರ್‍ಆನಿನ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕೆಲವರು ಪವಿತ್ರ ಕುರ್‍ಆನನ್ನು ಪ್ರವಾದಿ ಮುಹಮ್ಮದ್‍ರವರ(ಸ) ಕೃತಿಯೆಂದು ಹೇಳುವುದಿದೆ. ಆದರೆ ಇದು ತಪ್ಪು. ಪವಿತ್ರ ಕುರ್‍ಆನ್ ಮನುಷ್ಯ ಕೃತಿಯಲ್ಲವೆಂದೂ ಅದು ಸರ್ವಲೋಕ ಪರಿಪಾಲಕನಾದ ಅಲ್ಲಾಹನ ವಚನವೆಂದೂ ಸ್ವಯಂ ಆ ಗ್ರಂಥವೇ ಪ್ರತಿಪಾದಿಸುತ್ತದೆ. ಅಲ್ಲಾಹನು ತನ್ನ ವಚನವನ್ನು ದೇವದೂತರಾದ ಜಿಬ್ರೀಲ್‍ರ(ಅ) ಮೂಲಕ ತನ್ನ ದಾಸರಾದ ಮುಹಮ್ಮದ್‍ರವರ(ಸ) ಮೇಲೆ ಅವತೀರ್ಣಗೊಳಿಸಿದನು. ಈ ವಾಸ್ತವಿಕತೆಯನ್ನು ಪವಿತ್ರ ಕುರ್‍ಆನ್ ಅನೇಕ ಕಡೆ ಸಾರಿ ಹೇಳಿದೆ:
  "ಇದು ಸರ್ವಲೋಕಗಳ ಪಾಲಕ ಪ್ರಭುವಿನಿಂದ ಅವತೀರ್ಣಗೊಂಡಿದೆ. ನೀವು (ದೇವ ವತಿಯಿಂದ ದೇವ ಸೃಷ್ಟಿಗಳಿಗೆ) ಎಚ್ಚರಿಕೆ ನೀಡುವವರಲ್ಲಿ ಸೇರಲಿಕ್ಕಾಗಿ, ಪ್ರಾಮಾಣಿಕ ಆತ್ಮವು ಇದರ ಜೊತೆ ನಿಮ್ಮ ಹೃದಯಕ್ಕೆ ಇಳಿದಿದೆ. ಇದು ಸುಸ್ಪಷ್ಟ ಅರಬೀ ಭಾಷೆಯಲ್ಲಿದೆ."(26:192-195)

  ಪವಿತ್ರ ಕುರ್‍ಆನಿಗಿಂತ ಮುಂಚೆ ಅವತೀರ್ಣಗೊಂಡ ದೇವಗ್ರಂಥಗಳಾದ ತೌರಾತ್ ಮತ್ತು ಇಂಜೀಲ್‍ಗಳಲ್ಲಿ ಇದರ ಬಗ್ಗೆ ಭವಿಷ್ಯವಾಣಿ ಮತ್ತು ಸುವಾರ್ತೆಗಳಿದ್ದುವು. ಒಂದು ಅಂತಿಮ ದೇವಗ್ರಂಥ ಬರಲಿಕ್ಕಿದೆ ಮತ್ತು ಓರ್ವ ಅಂತಿಮ ಪ್ರವಾದಿ ಬರಲಿಕ್ಕಿರುವರು ಎಂದು ಅವು ಭವಿಷ್ಯ ನುಡಿದಿದ್ದುವು. ಪವಿತ್ರ ಕುರ್‍ಆನ್ ಆ ಭವಿಷ್ಯ ನುಡಿಗಳಿಗೆ ಅನುಗುಣವಾಗಿಯೇ ಇದೆ ಎಂಬುದನ್ನು ಆ ಗ್ರಂಥದಲ್ಲೇ ಸ್ಪಷ್ಟಪಡಿಸಲಾಗಿದೆ- "ಕುರ್‍ಆನಿನಲ್ಲಿ ವಿವರಿಸಲ್ಪಡುತ್ತಿರುವುದೆಲ್ಲ ಕೃತಕ ವಿಷಯಗಳಲ್ಲ. ಪರಂತು ಇದಕ್ಕಿಂತ ಮುಂಚೆ ಬಂದಿರುವ ಗ್ರಂಥಗಳ ದೃಢೀಕರಣವೂ ಪ್ರತಿಯೊಂದು ವಿಷಯದ ವಿವರಣೆಯೂ ಸತ್ಯವಿಶ್ವಾಸವನ್ನು ಸ್ವೀಕರಿಸಿಕೊಳ್ಳುವವರಿಗೆ ಸನ್ಮಾರ್ಗದರ್ಶನವೂ ಅನುಗ್ರಹವೂ ಆಗಿರುತ್ತದೆ." (12:111)

  ಬೈಬಲ್‍ನ ಪುರಾವೆಗಳು
  ತಮ್ಮ ಅನುಯಾಯಿಗಳಿಂದ ಹಸ್ತಕ್ಷೇಪಕ್ಕೆ ಒಳಗಾಗಿ ತಿದ್ದುಪಡಿಗೊಂಡು ವಿಕೃತವಾಗಿರುವ ತೌರಾತ್ ಮತ್ತು ಇಂಜೀಲ್‍ಗಳ ಇಂದಿನ ಅವಶೇಷವಾದ ಬೈಬಲ್‍ನಲ್ಲಿ ಕೂಡಾ ಅನೇಕ ಕಡೆಗಳಲ್ಲಿ ಈ ಸುವಾರ್ತೆಯ ಉಲ್ಲೇಖವಿರುವುದು ಕಂಡು ಬರುತ್ತದೆ.
  (ನೋಡಿರಿ: ಮತ್ತಾಯನು ಬರೆದ ಸುವಾರ್ತೆ 21:42-45, ಯೋಹಾನನು ಬರೆದ ಸುವಾರ್ತೆ 16:12-13, 14:15-17, 29-3ಂ, 16:7-8)
  ಯೇಸು ಅವರಿಗೆ ಹೇಳಿದನು: ಮನೆ ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು; ಇದು ಕರ್ತನಿಂದ ಆಯಿತು; ನಿಮಗೆ ಆಶ್ಚರ್ಯವಾಗಿ ತೋರುತ್ತದೆ ಎಂಬ ಮಾತನ್ನು ನೀವು ಶಾಸ್ತ್ರದಲ್ಲಿ ಎಂದಾದರೂ ಓದಲಿಲ್ಲವೋ? ಆದ್ದರಿಂದ ದೇವರ ರಾಜ್ಯವು ನಿಮ್ಮಿಂದ ತೆಗೆಯಲ್ಪಟ್ಟು ಅದರ ಫಲಗಳನ್ನು ಕೊಡುವ ಜನಕ್ಕೆ ಕೊಡಲಾಗುವುದು. ಈ ಕಲ್ಲಿನ ಮೇಲೆ ಬೀಳುವವನು ತುಂಡು ತುಂಡಾಗುವನು; ಇದು ಯಾರ ಮೇಲೆ ಬೀಳುತ್ತದೋ ಅವನನ್ನು ಪುಡಿಪುಡಿ ಮಾಡುವುದು.
  (ಮತ್ತಾಯನು ಬರೆದ ಸುವಾರ್ತೆ- 21:42-45)
  ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ. ಸತ್ಯದ ಆತ್ಮ ಬಂದಾಗ ಆತನು ನಿಮ್ಮನ್ನು ನಡೆಸಿಕೊಂಡು ಹೋಗಿ ಸಕಲ ವಿಷಯದಲ್ಲಿಯೂ ಸತ್ಯಕ್ಕೆ ಸೇರಿಸುವನು. ಆತನು ತನ್ನಷ್ಟಕ್ಕೆ ತಾನೇ ಮಾತಾಡದೆ ಕೇಳಿದ ಮಾತುಗಳನ್ನೇ ಆಡುವನು ಮತ್ತು ಮುಂದಾಗುವ ಸಂಗತಿಗಳನ್ನು ನಿಮಗೆ ತಿಳಿಸುವನು.
  (ಯೋಹಾನನು ಬರೆದ ಸುವಾರ್ತೆ- 16:12-13)
  ನೀವು ನನ್ನನ್ನು ಪ್ರೀತಿಸುವವರಾದರೆ ನನ್ನ ಆಜ್ಞೆಗಳನ್ನು ಕೈಗೊಂಡು ನಡೆಯುವಿರಿ. ಆಗ ನಾನು ತಂದೆಯನ್ನು ಕೇಳಿಕೊಳ್ಳುವೆನು; ಆತನು ನಿಮಗೆ ಬೇರೊಬ್ಬ ಸಹಾಯಕನನ್ನು ಸದಾ ಕಾಲ ನಿಮ್ಮ ಸಂಗಡ ಇರುವುದಕ್ಕೆ ಕೊಡುವನು.
  (ಯೋಹಾನನು ಬರೆದ ಸುವಾರ್ತೆ- 14:15-17)
  ಆದರೆ ಆ ಸಹಾಯಕನು ಅಂದರೆ ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಪವಿತ್ರಾತ್ಮನೇ ನಿಮಗೆ ಎಲ್ಲವನ್ನು ಉಪದೇಶಿಸಿ ನಾನು ನಿಮಗೆ ಹೇಳಿದ್ದನ್ನೆಲ್ಲಾ ನಿಮ್ಮ ನೆನಪಿಗೆ ತರುವನು. (ಯೋಹಾನನು ಬರೆದ ಸುವಾರ್ತೆ- 14:26)
  ಅದೆಲ್ಲಾ ನಡೆಯುವಾಗ ನೀನು ನಮ್ಮನ್ನು ನಂಬುವಂತೆ ಅದು ನಡೆಯುವುದಕ್ಕಿಂತ ಮುಂಚೆಯೇ ಈಗ ನಿಮಗೆ ಹೇಳಿದ್ದೇನೆ. ಇನ್ನು ನಾನು ನಿಮ್ಮ ಸಂಗಡ ಬಹಳ ಮಾತುಗಳ ನ್ನಾಡುವುದಿಲ್ಲ. ಏಕೆಂದರೆ ಇಹಲೋಕಾಧಿಪತಿಯು ಬರುತ್ತಾನೆ. ಅವನಿಗೆ ಸಂಬಂಧಪಟ್ಟದ್ದು ಯಾವುದೊಂದೂ ನನ್ನಲ್ಲಿಲ್ಲ. (ಯೋಹಾನನು ಬರೆದ ಸುವಾರ್ತೆ- 14:29-3೦)
  ಆದರೂ ನಾನು ನಿಮಗೆ ಸತ್ಯವನ್ನು ಹೇಳುತ್ತೇನೆ, ಕೇಳಿರಿ; ನಾನು ಹೋಗುವುದು ನಿಮಗೆ ಹಿತಕರವಾಗಿದೆ, ಹೇಗೆಂದರೆ ನಾನು ಹೋಗದಿದ್ದರೆ ಆ ಸಹಾಯಕನು ನಿಮ್ಮ ಬಳಿಗೆ ಬರುವುದಿಲ್ಲ. ನಾನು ಹೋದರೆ ಆತನನ್ನು ನಿಮ್ಮ ಬಳಿಗೆ ಕಳುಹಿಸಿ ಕೊಡುತ್ತೇನೆ. ಆತನು ಬಂದು ಪಾಪ, ನೀತಿ, ನ್ಯಾಯ ತೀರ್ಪಿಗೆ ಈ ವಿಷಯಗಳಲ್ಲಿ ಲೋಕಕ್ಕೆ ಅರುಹನ್ನು ಹುಟ್ಟಿಸುವನು. (ಯೋಹಾನನು ಬರೆದ ಸುವಾರ್ತೆ- 16:7-8)
  ಈ ಉದ್ಧರಣೆಗಳಲ್ಲಿ ಬಂದಿರುವ ಭವಿಷ್ಯವಾಣಿಯು ಪ್ರವಾದಿ ಮುಹಮ್ಮದ್(ಸ) ಮತ್ತು ಪವಿತ್ರ ಕುರ್‍ಆನಿನ ಬಗೆಗಾಗಿದೆ ಎಂಬುದು ಸ್ಪಷ್ಟ.
  'ಮುಖ್ಯವಾದ ಮೂಲೆಗಲ್ಲಾಯಿತು' ಅಂದರೆ ಕೊನೆಗೆ ನಾಯಕತ್ವ ಪದವಿ ಪಡೆಯಿತು ಎಂದರ್ಥ.
  "ಆದರೆ ಸದ್ಯಕ್ಕೆ ನೀವು ಅದನ್ನು ಹೊರಲಾರಿರಿ" ಎಂದರೆ ಇನ್ನಷ್ಟು ದೇವ ವಿಧಿಗಳ ಭಾರ ಹೊರುವ ಶಕ್ತಿ ನಿಮ್ಮಲ್ಲಿಲ್ಲ. ಆದ್ದರಿಂದ ಅಲ್ಲಾಹನು ನನ್ನ ಮೂಲಕ ತನ್ನಧರ್ಮವನ್ನು ಪೂರ್ಣಗೊಳಿಸದೆ ಅದಕ್ಕಾಗಿ ಇನ್ನೊಬ್ಬ ಪ್ರವಾದಿಯನ್ನು ನಿಯೋಗಿಸುವನೆಂದರ್ಥ.
  'ಸಹಾಯಕ' ಎಂಬ ಪದದ ಹಿಬ್ರೂ ಮೂಲವನ್ನು ಅರಬಿ ಬೈಬಲ್‍ನಲ್ಲಿ 'ಫಾರ್ಕಲೀತ್' ಎಂದು ಅನುವಾದಿಸಲಾಗಿದೆ. ಇದು ಮುಹಮ್ಮದ್ ಮತ್ತು ಅಹ್ಮದ್ ಎಂಬ ಪದಗಳಿಗೆ ಸಮಾನವಾದ ಅರ್ಥವುಳ್ಳ ಪದವಾಗಿದೆ.
  'ಸದಾ ಕಾಲ ನಿಮ್ಮ ಸಂಗಡ' ಇರುವುದಕ್ಕೆ ಎಂದರೆ ಅವನು ತರುವ ಧರ್ಮಗ್ರಂಥವು ತೌರಾತ್ ಮತ್ತು ಇಂಜೀಲ್‍ಗಳಂತೆ ಒಂದು ಸೀಮಿತ ಕಾಲಾವಧಿಗೆ ಆಗಿರದೆ ಸಾರ್ವಕಾಲಿಕ ವಾಗಿರುವುದೆಂದರ್ಥ.
  'ಇಹಲೋಕಾಧಿಪತಿ' ಎಂದರೆ ಸಂಪೂರ್ಣ ವಿಶ್ವ ಮತ್ತು ಸಮಸ್ತ ಮಾನವಕುಲಕ್ಕೆ ಅಲ್ಲಾಹನ ಪ್ರವಾದಿ. ಯಾವುದೇ ಪ್ರತ್ಯೇಕ ಜನಾಂಗ ಅಥವಾ ರಾಷ್ಟ್ರಕ್ಕೆ ಅಲ್ಲ.
  "ಅವನಿಗೆ ಸಂಬಂಧಪಟ್ಟ ಯಾವೊಂದೂ ನನ್ನಲ್ಲಿಲ್ಲ" ಎಂದರೆ ಅವನು ನನಗಿಂತ ಬಹಳ ಉನ್ನತ ಸ್ಥಾನಮಾನಗಳ ಪ್ರವಾದಿಯಾಗಿರುವನು ಎಂದರ್ಥ.
  ಈ ವಚನಗಳ ಇಂಗಿತ ತಿಳಿಯಲು ಈ ಸಂಕ್ಷಿಪ್ತ ವಿವರಣೆ ಸಾಕು.

  ಪವಿತ್ರ ಕುರ್‍ಆನ್ ಮಾನವ ಕೃತಿಯಾಗಿದ್ದರೆ 23 ವರ್ಷಗಳ ದೀರ್ಘ ಅವಧಿಯಲ್ಲಿ ಭಿನ್ನ ಭಿನ್ನ ಪರಿಸ್ಥಿತಿಗಳಲ್ಲಿ ಪೂರ್ಣಗೊಂಡ 114 ಅಧ್ಯಾಯಗಳ ಮತ್ತು 6236 ಸೂಕ್ತಗಳ ಈ ಬೃಹತ್ ಗ್ರಂಥದಲ್ಲಿ ಒಂದಲ್ಲ ಒಂದು ಕಡೆ ವಿರೋಧಾಭಾಸವಿರುವುದು ಅನಿವಾರ್ಯವಾಗಿತ್ತು. ಅಂತೆಯೇ ಇದರ ವಿಷಯಗಳು, ತತ್ವಗಳು, ವಿಚಾರಗಳು ಮತ್ತು ಶಿಕ್ಷಣಗಳಲ್ಲಿ ಸ್ವಾಭಾವಿಕವಾಗಿಯೂ ಭಿನ್ನತೆಗಳಿರುತ್ತಿದ್ದುವು. ಆದರೆ ಪವಿತ್ರ ಕುರ್‍ಆನಿನಲ್ಲಿ ಇಂತಹ ವಿರೋಧಾಭಾಸದ ಛಾಯೆಯನ್ನು ನಾವು ಕಾಣುವುದಿಲ್ಲ. ಕುರ್‍ಆನ್ ಸ್ವತಃ ಈ ರೀತಿ ಹೇಳುತ್ತದೆ:
  "ಇದು ಅಲ್ಲಾಹನ ಹೊರತು ಇನ್ನಾರ ಕಡೆಯಿಂದಾದರೂ ಆಗಿರುತ್ತಿದ್ದರೆ ಇದರಲ್ಲಿ ಅನೇಕ ವಿರೋಧಾಭಾಸಗಳು ಕಂಡು ಬರುತ್ತಿದ್ದುವು." (4:82)

 • ಪ್ರಾಣಿಗೆ ಚೂರಿ ಹಾಕುವುದು ಕ್ರೌರ್ಯವಲ್ಲವೇ?
  ismika18-09-2014

  ಪ್ರಶ್ನೆ: ಪ್ರಾಣಿ ದಯೆಯ ಕುರಿತು ಹೆಚ್ಚು ಚರ್ಚಿಸುವ ಇಸ್ಲಾಮ್ ಮೃಗ ಮತ್ತು ಇತರ ಜೀವಿಗಳೊಂದಿಗೆ ತೋರಿಸುವುದು ಕ್ರೌರ್ಯವಲ್ಲವೇ? ಅವುಗಳಿಗೆ ಚೂರಿ (ದಿಬಹ್) ಹಾಕುವುದು ಸರಿಯೇ?

  ಉತ್ತರ: ಭೂಮಿಯಲ್ಲಿರುವ ಎಲ್ಲ ಜೀವಿಗಳೊಂದಿಗೆ ಕರುಣೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಆದೇಶಿಸುತ್ತದೆ.
  ಪ್ರವಾದಿ(ಸ) ಹೇಳಿದ್ದಾರೆ. “ಭೂಮಿಯಲ್ಲಿರುವವರೊಡನೆ ಕುರಣೆ ತೋರಿಸಿರಿ. ಮೇಲಿರುವವನು ನಿಮ್ಮೊಡನೆ ಕರುಣೆ ತೋರಿಸುವನು” (ತಬ್‍ರಾನಿ).
  ಕರಣೆಯಿಲ್ಲದವನ ಮೇಲೆ ಕಾರುಣ್ಯವಿಲ್ಲ. (ಬುಖಾರಿ, ಮುಸ್ಲಿಮ್)
  “ದೌರ್ಭಾಗ್ಯದವನಲ್ಲದೆ ಕರುಣೆಯಿಲ್ಲದವನಾಗಲಾರ” (ಅಬೂ ದಾವೂದ್)
  ಇಸ್ಲಾಮ್ ಭೂಮಿಯ ಸಕಲ ಜೀವಿಗಳನ್ನು ಮನುಷ್ಯರಂತೆಯೇ ಇರುವ ಸಮುದಾಯವಾಗಿ ಪರಿಗಣಿಸುತ್ತದೆ. ಅಲ್ಲಾಹನು ಹೇಳುತ್ತಾನೆ, “ಭೂಮಿಯ ಮೇಲೆ ಚಲಿಸುವ ಪ್ರಾಣಿಗಳನ್ನೂ ವಾಯುವಿನಲ್ಲಿ ರೆಕ್ಕೆಗಳಿಂದ ಹಾರಾಡುವ ಪಕ್ಷಿಗಳನ್ನೂ ನೋಡಿಕೊಳ್ಳಿರಿ ಇವೆಲ್ಲವೂ ನಿಮ್ಮಂತೆಯೇ ಇರುವ ವರ್ಗಗಳು.”(ಪವಿತ್ರ ಕುರ್ ಆನ್, 6:38)
  ಮಾನವರು ಧಿಕ್ಕಾರಿಗಳಾದ ಕೂಡಾ ಇತರ ಜೀವಿಗಳನ್ನು ಪರಿಗಣಿಸಿ ಮಳೆ ಸುರಿಯುವುದೆಂದು ಪ್ರವಾದಿ(ಸ) ಕಲಿಸಿದ್ದಾರೆ. “ಜನರು ಝಕಾತ್ ನೀಡದಿದ್ದರೆ ಮಳೆ ಸ್ಥಗಿತಗೊಳ್ಳುತ್ತಿತ್ತು. ಹಾಗಿದ್ದರೂ ಜೀವ ಜಂತುಗಳ ಕಾರಣದಿಂದ ಮಳೆ ಸುರಿಯುತ್ತದೆ. (ಇಬ್ನು ಮಾಜ)
  ಜೀವವಿರುವ ಎಲ್ಲ ಜೀವಿಗಳಿಗೆ ಸಹಾಯ ಮಾಡುವುದು ಮತ್ತು ಸೇವೆಗೈಯುವುದು ಪುಣ್ಯ ಕರ್ಮವಾಗಿದೆಯಷ್ಟೇ. ಪ್ರವಾದಿ(ಸ) ಹೇಳುತ್ತಾರೆ. “ಹಸಿ ಕರುಳಿರುವ ಯಾವುದೇ ಜೀವಿಯ ವಿಷಯದಲ್ಲಿ ಕೂಡಾ ನಿಮಗೆ ಪುಣ್ಯವಿದೆ.” (ಬುಖಾರಿ)
  ಪ್ರವಾದಿವರ್ಯರು(ಸ) ಹೇಳುತ್ತಾರೆ, “ಓರ್ವನು ಒಂದು ದಾರಿಯಲ್ಲಿ ಸಾಗುತ್ತಿರುವಾಗ ಬಾಯಾರಿ ಬಳಲಿದನು. ಅವನು ಅಲ್ಲಿ ಒಂದು ಬಾವಿಯನ್ನು ನೋಡಿದನು. ಅದಕ್ಕಿಳಿದು ನೀರು ಕುಡಿದನು. ಹೊರ ಬಂದಾಗ ಒಂದು ನಾಯಿ ಬಾಯಾರಿಕೆ ತಡೆಯಲಾಗದೆ ಮಣ್ಣನ್ನು ಮೂಸುವುದು ನೋಡಿದನು. ‘ಈ ನಾಯಿಗೆ ತುಂಬ ಬಾಯಾರಿಕೆಯಾಗಿದೆ, ನನಗೆ ಬಾಯಾರಿಕೆ ಆದಂತೆ” ಎಂದು ಸ್ವಗತ ನುಡಿದು ಆತ ಬಾವಿಗಿಳಿದು, ಬೂಟ್‍ನಲ್ಲಿ ನೀರು ತುಂಬಿಸಿ ಅದನ್ನು ಬಾಯಲ್ಲಿ ಕಚ್ಚಿ ಹಿಡಿದು ಮೇಲೆ ಬಂದು ನಾಯಿಗೆ ಕುಡಿಸಿದನು. ಅವನ ಈ ಕಾರ್ಯದಿಂದ ಅಲ್ಲಾಹನು ಸಂತುಷ್ಟಗೊಂಡನು, ಮತ್ತು ಅವನನ್ನು ಕ್ಷಮಿಸಿದನು.” ಇದನ್ನು ಆಲಿಸಿದ ಅಲ್ಲಿದ್ದ ಪ್ರವಾದಿ(ಸ) ಸಂಗಾತಿಗಳು ಕೇಳಿದರು, ಮೃಗಗಳ ವಿಷಯದಲ್ಲಿಯೂ ನಮಗೆ ಪ್ರತಿಫಲವಿದೆಯೇ? ಪ್ರವಾದಿ(ಸ) ಹೇಳಿದರು, ಹಸಿ ಕರುಳಿರುವ ಎಲ್ಲ ಜೀವಿಯ ವಿಷಯದಲ್ಲಿಯೂ ನಿಮಗೆ ಪ್ರತಿಫಲ ಇದೆ (ಬುಖಾರಿ, ಮುಸ್ಲಿಮ್).
  ಇನ್ನೊಂದು ಘಟನೆಯನ್ನು ಪ್ರವಾದಿ(ಸ) ಹೀಗೆ ವಿವರಿಸುತ್ತಾರೆ. ಒಂದು ನಾಯಿ ಬಾವಿಯ ಸುತ್ತಲೂ ಓಡಾಡುತ್ತಿತ್ತು. ಕಠಿಣವಾದ ಬಾಯಾರಿಕೆಯ ಕಾರಣದಿಂದ ಅದು ಸಾಯಲು ತಯಾರಾಗಿತ್ತು. ಅದನ್ನು ನೋಡಿ ಇಸ್ರಾಯಿಲರ ಒರ್ವ ವ್ಯಭಿಚಾರಿಣಿ ಮಹಿಳೆ ತನ್ನ ಬೂಟನ್ನು ಕಳಚಿ ಅದರಲ್ಲಿ ನೀರು ತಂದು ನಾಯಿಗೆ ಕುಡಿಸಿ ತಾನೂ ಕುಡಿದಳು. ಅದರಿಂದಾಗಿ ಅವಳನ್ನು ಅಲ್ಲಾಹನು ಕ್ಷಮಿಸಿದನು.” (ಬುಖಾರಿ)
  ಯಾವ ಜೀವಿಗೂ ಉಪದ್ರವ ನೀಡುವುದು ಪಾಪವಾಗುವುದು. ಅದನ್ನು ಪ್ರವಾದಿ(ಸ) ಬಲವಾಗಿ ನಿಷೇಧಿಸಿರುವರು. ಪ್ರವಾದಿ(ಸ) ಹೇಳಿದರು. “ಬೆಕ್ಕಿನ ಕಾರಣದಿಂದ ಓರ್ವ ಮಹಿಳೆ ಶಿಕ್ಷೆಗೀಡಾದಳು. ಅವಳು ಅದು ಹಸಿದು ಸಾಯುವವರೆಗೂ ಕಟ್ಟಿಹಾಕಿದ್ದಳು. ಹೀಗೆ ಅವಳು ನರಕವಾಸಿಯಾದಳು (ಬುಖಾರಿ, ಮುಸ್ಲಿಮ್)
  ಇದೇ ರೀತಿಯಲ್ಲಿ ಮೃಗಗಳಿಗೆ ಕಲ್ಲೆಸೆಯುವುದು, ಜೇನ್ನೋಣ, ಇರುವೆಯಂತಿರುವ ಜೀವಿಗಳನ್ನು ಕೊಲ್ಲುವುದನ್ನು ಕೂಡಾ ಪ್ರವಾದಿವರ್ಯರು(ಸ) ನಿಷೇಧಿಸಿದ್ದಾರೆ. (ಮುಸ್ಲಿಮ್, ಅಬೂ ದಾವೂದ್)
  ಪ್ರವಾದಿ(ಸ) ಹೇಳುತ್ತಾನೆ ಯಾರಾದರೂ ಒಂದು ಹಕ್ಕಿಯನ್ನು ಅನವಶ್ಯಕವಾಗಿ ಕೊಂದರೆ ಅಂತ್ಯದಿನದಲ್ಲಿ ಅದು ಆರ್ತನಾದಗೈಯುತ್ತಾ ಅಲ್ಲಾಹನೊಡನೆ ಹೇಳುವುದು, ನನ್ನ ಪ್ರಭು ಇಂತಹವರು ನನ್ನನ್ನು ಅನಾವಶ್ಯಕವಾಗಿ ಕೊಂದಿರುತ್ತಾರೆ. ಉಪಯೋಗಕ್ಕಾಗಿ ಅವರು ನನ್ನನ್ನು ಕೊಂದಿರುವುದಿಲ್ಲ. (ಸನಾಇ, ಇಬ್ನು ಹಬ್ಬಾಸ್)
  ಪ್ರವಾದಿ(ಸ) ಚಳಿಯಿಂದ ರಕ್ಷಣೆ ಪಡೆಯಲಿಕ್ಕಾಗಿ ಬೆಂಕಿ ಉರಿಸಿದ ಸಂಗಾತಿಗಳೊಡನೆ, ಇರುವೆ ಸುಟ್ಟು ಹೋಗಲು ಕಾರಣವಾಗಬಹುದೇ ಎಂಬ ಸಂದೇಹದಲ್ಲಿ ಅದನ್ನು ಆರಿಸಿ ಬಿಡುವಂತೆ ಆದೇಶಿಸಿದರಲ್ಲದೆ, ಒಂಟೆಯನ್ನು ಕಟ್ಟಿ ಹಾಕಿ ಅದಕ್ಕೆ ಆಹಾರ ನೀಡದೆ ಹಸಿಯುವಂತೆ ಮಾಡಿದವನನ್ನು ಬಲವಾಗಿ ಎಚ್ಚರಿಸಿದರು ಮತ್ತು ಮೃಗಗಳ ಮುಖಕ್ಕೆ ಮುದ್ರೆ ಹಾಕುವುದನ್ನು, ಬೆನ್ನಿಗೆ ಬರೆ ಎಳೆಯುವುದನ್ನು ನಿಷೇದಿಸಿರುತ್ತಾರೆ. ಪ್ರಾಣಿಗಳ ಹೊರ ಭಾಗವನ್ನು ಆಸನ ಮಾಡಬಾರದೆಂದೂ ಆಜ್ಞಾಪಿಸಿದ್ದಾರೆ. ಮಾತ್ರವಲ್ಲ ಮರಗಳ ಮೇಲೆಯೂ ದಯೆ ತೋರಿಸಬೇಕೆಂದು ಉಪದೇಶಿಸಿದ್ದಾರೆ. ಮರಕ್ಕೆ ಕಲ್ಲೆಸದ ಹುಡುಗನಿಗೆ ಪ್ರವಾದಿ(ಸ) ಹೇಳಿದರು, `ಇನ್ನು ಮೇಲೆ ನೀನು ಯಾವ ಮರಕ್ಕೂ ಕಲ್ಲೆಸೆಯಬಾರದು. ಕಲ್ಲಿನಿಂದ ಪೆಟ್ಟಾಗಿ ಅದಕ್ಕೆ ನೋವಾಗುವುದು.” “ಈ ರೀತಿ ಪ್ರಪಂಚದ ಪ್ರತಿಯೊಂದರ ಮೇಲೆ ತುಂಬು ಕರುಣೆಯಿಂದ ವರ್ತಿಸಬೇಕೆಂದು ಇಸ್ಲಾಮ್ ಆಗ್ರಹಿಸುತ್ತದೆ.

  ಪ್ರತಿಯೊಂದೂ ಇಲ್ಲಿ ಆಹಾರದಿಂದಲೇ ಬದುಕುವುದು. ಸಸ್ಯ, ಪ್ರಾಣಿ, ಜಂತು ಜಲ ಜೀವಿ ಜಾನುವಾರು ಹಕ್ಕಿಗಳು ಆಹಾರ ಉಪಯೋಗದಿಂದಲೇ ಬದುಕುತ್ತವೆ. ಅದು ಆಗಬೇಕಾದರೆ ಪ್ರತಿಯೊಂದೂ ಇನ್ನೊಂದನ್ನು ಆಹಾರವಾಗಿ ಉಪಯೋಗಿಸಬೇಕಾಗುವುದು. ಸಸ್ಯಗಳನ್ನು ತಮ್ಮ ಅಸ್ತಿತ್ವಕ್ಕಾಗಿ ಬೇರೆ ಸಸ್ಯಗಳನ್ನು ಉಪಯೋಗಿಸುವುದು. `ಅಪೂರ್ವವಾದ ಕೆಲವು ಸಸ್ಯಗಳು ಜೀವಿಗಳನ್ನು ಆಹಾರವಾಗಿ ಸೇವಿಸುತ್ತದೆ. ಪ್ರಾಣಿಗಳು; ಸಸ್ಯಗಳನ್ನೂ ಬೇರೆ ಜೀವಿಗಳನ್ನೂ ತಿನ್ನುವುದು. ಗಾಳಿಯಲ್ಲಿ, ನೀರಲ್ಲಿ, ದಡದಲ್ಲಿ, ಕಡಲಿನಲ್ಲಿರುವ ಜೀವಿಗಳೆಲ್ಲವು ತಮ್ಮ ಅಸ್ತಿತ್ವಕ್ಕಾಗಿ ಸಸ್ಯಗಳನ್ನು ಮತ್ತು ಇತರ ಜೀವಿಗಳನ್ನು ಆಹಾರವಾಗಿ ಉಪಯೋಗಿಸುತ್ತದೆ. ಇದರಲ್ಲಿ ಪ್ರತಿಯೊಂದು ಜೀವಿಗಲು ಅದರ ಶಾರೀರಿಕ ವ್ಯವಸ್ಥೆಗೆ ಅನುಗುಣವಾದ ಜೀವನ ಪದ್ಧತಿಯಿದೆ. ಮೊಲ ಸಸ್ಯಹಾರಿಯಾಗಿರುವುದರಿಂದ ಅದಕ್ಕೆ ಅನುಗುಣವಾದ ಹಲ್ಲುಗಳು ಮತ್ತು ಹೊಟ್ಟೆಯಿದೆ. ಸಿಂಹ ಮಾಂಸಹಾರಿಯಾಗಿರುವುದರಿಂದ ಅದರ ಬಾಯಿ ಮತ್ತು ಹೊಟ್ಟೆಯು ಅದಕ್ಕೆ ತಕ್ಕಂತಿದೆ. ಮಾನವನನ್ನು ಸಸ್ಯಾಹಾರ ಮತ್ತು ಮಾಂಸ ಆಹಾರ ಈ ಎರಡನ್ನೂ ಭಕ್ಷಿಸುವ ರೀತಿಯಲ್ಲಿ ಸೃಷ್ಟಿಸಲಾಗಿದೆ. ಪೂರ್ಣ ಸಸ್ಯಾಹಾರಿಗಳಾದ ಆಡು, ದನ, ಕುರಿ ಮುಂತಾದವುಗಳ ಹಲ್ಲುಗಳು ಸಸ್ಯಾಹಾರ ಮಾತ್ರ ಭಕ್ಷಣೆ ಮಾಡಲು ಸಾಧ್ಯವಿರುವ ರೀತಿಯಲ್ಲಿ ರಚನೆಗೊಂಡಿದೆ. ಸಂಪೂರ್ಣ ಮಾಂಸಹಾರಿಯಾದ ಹುಲಿ ಮುಂತಾದವುಗಳ ಹಲ್ಲು ಅಗಲ ಮತ್ತು ಚೂಪಾದವು ಆಗಿದೆ. ಅಥವಾ ಮನುಷ್ಯನನ್ನು ಮಿಶ್ರಹಾರಿಯಾಗಿಯೇ ಸೃಷ್ಟಿಸಲಾಗಿದೆ.
  ಪಚನಾಂಗಗಳ ಸ್ಥಿತಿಯೂ ಇದೇ ರೀತಿಯಲ್ಲಿವೆ. ಸಸ್ಯಾಹಾರಿಗಳಿಗೆ ಸಸ್ಯಾಹಾರವು ಮಾತ್ರ ಕರುಗುವಂತಹ, ಮಾಂಸಾಹಾರಿಗಳಿಗೆ ಅದಕ್ಕೆ ಸೂಕ್ತವಾಗುವಂತಹ ಪಚನಾಂಗಗಳಿವೆ. ಪಚನಾಂಗಗಳಲ್ಲಿ ಮಾನವರ ಪಚನಾಂಗ ಎರಡು ರೀತಿಯ ಆಹಾರವನ್ನೂ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಹಲ್ಲುಗಳು ಕೂಡಾ ಎರಡು ರೀತಿಯ ಆಹಾರ ಭಕ್ಷಣೆಗೆ ಯೋಗ್ಯವಿರುವಂತೆ ರಚನೆಯಾಗಿದೆ.

  ಈ ಭೂಮಿಯಲ್ಲಿರುವುದೆಲ್ಲವೂ ಮಾನವನಿಗಾಗಿ ಸೃಷ್ಟಿಸಲಾಗಿದೆ. ಮತ್ತು ಭೂಮಿಯಲ್ಲಿ ಅವನೇ ಕೇಂದ್ರ ಬಿಂದುವಾಗಿರುವನು. "ಅಲ್ಲಾಹನು ಆಕಾಶಗಳಲ್ಲೂ ಭೂಮಿಯಲ್ಲೂ ಇರುವ ಸಕಲ ವಸ್ತುಗಳನ್ನು ನಿಮಗೆ ಅಧೀನಗೊಳಿಸಿರುವುದನ್ನೂ ತನ್ನ ಪ್ರತ್ಯಕ್ಷ ಹಾಗೂ ರಹಸ್ಯ ಅನುಗ್ರಹಗಳನ್ನು ನಿಮಗೆ ಪೂರ್ತಿಗೊಳಿಸಿಕೊಟ್ಟಿರುವುದನ್ನೂ ನೀವು ನೋಡುತ್ತಿಲ್ಲವೇ” (ಪವಿತ್ರ ಕುರ್ ಆನ್.31-20)

  ಜಾನುವಾರುಗಳಲ್ಲಿ ಸವಾರಿ ಮತ್ತು ಹೊರೆ ಹೊರುವುದಕ್ಕಾಗಿ, ಉಪಯೋಗವಾಗುವವುಗಳನ್ನು ತಿನ್ನಲು, ಮತ್ತು ಹಾಸಲು ಉಪಯೋಗವಾಗುವವುಗಳನ್ನೂ ಉಂಟುಮಾಡಿದವನು ಅವನೇ (ಅಲ್ಲಾಹನೇ) ಅಲ್ಲಾಹ್ ದಯಪಾಲಿಸಿದ ವಸ್ತುಗಳಿಂದ ತಿನ್ನಿರಿ ಶೈತಾನನ್ನು ಅನುಸರಿಸ ಬೇಡಿರಿ. (ಪವಿತ್ರ ಕುರ್ ಆನ್.6:142)

  ವಾಸ್ತವದಲ್ಲಿ ಜಾನುವಾರುಗಳಲ್ಲಿಯೂ ನಿಮಗೊಂದು ಪಾಠವಿದೆ. ಅವುಗಳ ಉದರದೊಳಗೆ ಏನಿರುವುದೋ ಅದರಿಂದ ನಾವು ನಿಮಗೊಂದು ವಸ್ತುವನ್ನು ಕುಡಿಸುತ್ತೇವೆ ಮತ್ತು ನಿಮಗೆ ಅವುಗಳಲ್ಲಿ ಬೇರೆ ಬೇರೆ ಪ್ರಯೋಜನಗಳೂ ಇವೆ. ಅವುಗಳನ್ನು ನೀವು ತಿನ್ನುತ್ತೀರಿ. (ಪವಿತ್ರ ಕುರ್ ಆನ್,23-21)

  ನಿಮಗಾಗಿ ಸಮುದ್ರಗಳನ್ನು ನಿಯಂತ್ರಿಸಿ ನೀವು ಅದರಿಂದ ತಾಜಾ ಮಾಂಸ ಪಡೆದು ತಿನ್ನಲಾಗುವಂತೆಯೂ ಅದರಿಂದ ನೀವು ಧರಿಸುವ ಅಲಂಕಾರ ಸಾಧನಗಳನ್ನು ಹೊರ ತೆಗೆಯುವಂತೆಯೂ ಮಾಡಿದವನು ಅವನೇ(ಅಲ್ಲಾಹನೇ). (ಪವಿತ್ರ ಕುರ್ ಆನ್,16:14)

  ಭೂಮಿಯಲ್ಲಿರುವುದೆಲ್ಲವೂ ಮನುಷ್ಯರಿಗಾಗಿ ಸೃಷ್ಟಿಸಲಾಗಿದೆ ಎಂಬ ವಾಸ್ತವವನ್ನು ನಿರಾಕರಿಸುವವರೇ ಪ್ರಾಯೋಗಿಕವಾಗಿ ಅದಕ್ಕನುಸಾರವೇ ನಿಲುವು ತಳೆಯುತ್ತಾರೆ. ಮನುಷ್ಯ ತನ್ನ ಹಿತಕ್ಕಾಗಿ ಭೂಮಿಯನ್ನು ಮೊಗೆಯುತ್ತಾನೆ. ಬಾವಿ-ಕೊಳಗಳನ್ನು ಅಗೆಯುತ್ತಾನೆ. ರಸ್ತೆ ಸೇತುವೆ ನಿರ್ಮಿಸುತ್ತಾನೆ. ಮನೆ ಕಟ್ಟುತ್ತಾನೆ. ಇದನ್ನು ಮಾಡುವಾಗ ಅಲ್ಲಿದ್ದ ಜೀವಿಗಳಿಗೆ ಏನು ಸಂಭವಿಸುವುದೆಂದು ಪರಿಗಣಿಸುವುದಿಲ್ಲ. ಎಲ್ಲ ಜೀವಿಗಳು ಬದುಕುವ ಹಕ್ಕನ್ನು ಹೊಂದಿರುವ ಭೂಮಿಯಲ್ಲಿ ನಾವು ಬಾವಿ-ರಸ್ತೆಗಳನ್ನು ಮಾಡುತ್ತಿದ್ದೇವೆ ಎಂದು ನಾವು ಯೋಚಿಸುವುದೇ ಇಲ್ಲ. ಇದೇ ರೀತಿ ಸಸ್ಯಗಳೂ ಫಲ ಮರಗಳೂ ಬೆಳೆಗಳೆಲ್ಲವೂ ಮನುಷ್ಯನ ಹಿತಕ್ಕೆ ಬಳಕೆಯಾಗುತ್ತಿವೆ. ಆದುದರಿಂದ ಭೂಮಿ ಮತ್ತು ಅದರಲ್ಲಿರುವುದೆಲ್ಲವೂ ಮನುಷ್ಯನಿಗಾಗಿ ಸಜ್ಜುಗೊಳಿಸಲಾಗಿದೆಯೆಂಬ ಸತ್ಯವನ್ನು ಪ್ರಾಯೋಗಿಕ ಹಂತದಲ್ಲಿ ಅಂಗೀಕರಿಸದಿರುವವರು ಯಾರೂ ಇಲ್ಲ.

  ಯಾವ ಜೀವಿಯನ್ನು ಕೊಲ್ಲುವುದಿಲ್ಲ ಎಂಬುದು ಅಹಿಂಸೆಯ ಉದ್ದೇಶವಾಗಿದೆ. ಅದಕ್ಕೆ ತಕ್ಕಂತೆ ಬದುಕುತ್ತಿರುವವರು ಯಾರೂ ಈ ಭೂಮಿಯಲ್ಲಿ ಇಲ್ಲ. ಮಾಂಸಾಹಾರ ಭಕ್ಷಿಸದಿರುವವರು. ಸಸ್ಯಾಹಾರ ಭಕ್ಷಣೆ ಮಾಡುತ್ತಿರುವರಲ್ಲವೇ. ಆದುದರಿಂದ ಮಾಂಸ ತಿನ್ನುವವರಂತೆ ಸಸ್ಯ ತಿನ್ನುವವರೂ ಜೀವಹಾನಿ ಮಾಡುವವರೂ ಸಸ್ಯಗಳಿಗೆ ನೋವುಂಟು ಮಾಡುವವರೂ ಆಗಿದ್ದಾರೆ. ಯಾವ ಮನುಷ್ಯನೂ ಶರೀರಕ್ಕೆ ಗಾಯವಾದರೆ ಅದರಲ್ಲಿರುವ ವಿಷಾಣಗಳಿಗೆ ಔಷಧಿ ಹಾಕಿ ಕೊಲ್ಲುತ್ತಾನೆ. ಉದಾ: ಕ್ರಿಮಿಗಳನ್ನು ನಾಶಮಾಡುವುದು, ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡುವ ಮಲಿನ ನೀರಿನಲ್ಲಿ ವಿಷ ಹಾಕಿ ಅವುಗಳನ್ನು ಕೊಲ್ಲುತ್ತಾನೆ. ಮೊಟ್ಟೆ ಮತ್ತು ಸೊಳ್ಳೆಗಳನ್ನು ನಾಶ ಮಾಡುತ್ತಾನೆ. ಒಟ್ಟಾರೆ ಯಾವುದಾದರೊಂದು ಜೀವಿಯನ್ನು ವಧಿಸದಿರುವವರು ಯಾರೂ ಈ ಲೋಕದಲ್ಲಿ ಇಲ್ಲ. ಇರಲೂ ಸಾಧ್ಯವೂ ಇಲ್ಲ.

  ಮನುಷ್ಯ ಸಮಾಜದ ಸುಗಮ ಅಸ್ತಿತ್ವಕ್ಕಾಗಿ ವಿಷಾಣುಗಳನ್ನು ಕೊಲ್ಲ ಬಹುದಾದರೆ ಅದೇ ವಿಷಯದಲ್ಲಿ ಅತ್ಯುತ್ತಮ ಪೋಷಕಾಹಾರ ಎಂಬ ನೆಲೆಯಲ್ಲಿಯೂ ಮಾಂಸವನ್ನು ಉಪಯೋಗಿಸಬಹುದಾಗಿದೆ. ಪ್ರೋಟೀನ್, ಕಬ್ಬಿಣ ಸತ್ವ, ವಿಟಮಿನ್ ಬಿ% ನಿಯಾಸಿನ್ ಮುಂತಾದವುಗಳು ಮಾಂಸಾಹಾರದಲ್ಲಿ ಧಾರಾಳವಾಗಿ ಇದೆ ಎಂಬುದು ವಾಸ್ತವ. ಸಸ್ಯಗಳನ್ನೂ, ಪ್ರಾಣಿಗಳನ್ನು, ಅಣುಗಳನ್ನು ತಮ್ಮ ಅಸ್ತಿತ್ವ ಉಳಿಸುವುದಕ್ಕಾಗಿ ಕೊಲ್ಲಬಹುದೆಂದು ತೀರ್ಮಾನಿಸಿರುವವರು ಜನ ಸಮೂಹಕ್ಕೆ ಆಹಾರವಾದ ಮಾಂಸವನ್ನು ತ್ಯಜಿಸಬೇಕೆಂದು ಹೇಳುವುದು ಸಂಪೂರ್ಣ ಅರ್ಥಹೀನವಾದ ವಿಚಾರವಾಗಿದೆ. ಆದ್ದರಿಂದಲೇ ಜೀವಜಾಲಗಳ ಮೇಲೆ ಪರಮಾವಧಿ ಕರುಣೆತೋರುತ್ತಿರುವ ಇಸ್ಲಾಮ್ ಅವುಗಳ ಮಾಂಸ ಆಹಾರ ಅನುವದನೀಯ ಗೊಳಿಸಿದೆ. ಜಗತ್ತಿನ ಕೋಟ್ಯಾಂತರ ಮಂದಿ ಮಾಂಸಹಾರ ಸೇವಿಸುತ್ತಿದ್ದಾರೆ. ಅದನ್ನು ನಿಷೇಧಿಸುವುದು ಸಮಾಜ ದ್ರೋಹವೂ ಜೀವ ವಿರೋಧಿಯೂ ಆಗಿದೆ.

 • ಹಜ್ಜ್ ಮತ್ತು ಈದ್ ವೇಳೆ ನಡೆಸುವ ಬಲಿ ಕರ್ಮ ಸರಿಯೇ? ಯಾಕೆ ಇಷ್ಟು ಜೀವಿಗಳನ್ನು ಕೊಲ್ಲುವುದು?
  ismika25-09-2014

  ಪ್ರಶ್ನೆ: ಹಜ್ಜ್ ಮತ್ತು ಈದ್ ವೇಳೆ ನಡೆಸುವ ಬಲಿ ಕರ್ಮ ಸರಿಯೇ? ಯಾಕೆ ಇಷ್ಟು ಜೀವಿಗಳನ್ನು ಕೊಲ್ಲುವುದು?

  ಉತ್ತರ: ಇತಿಹಾಸದಲ್ಲಿ ಅಂಧಕಾರವೇ ತುಂಬಿರುವ ಕವಲು ಹಾದಿಯಲ್ಲಿ ಆಗಾಗ ನಡೆಯುತ್ತ ಇರುವ ನರಬಲಿ ಎಂಬ ಅತ್ಯಾಚಾರಕ್ಕೆ ಕೊನೆ ಹಾಡಿದ ಮಹಾಸಂಭವದ ಸ್ಮರಣೆಯೇ ಇಸ್ಲಾಮಿನ ಬಲಿ ಪರಿಕಲ್ಪನೆಯಾಗಿದೆ. ಜೊತೆಗೆ ಸಾಟಿಯಿಲ್ಲದ ಆತ್ಮ ತ್ಯಾಗದ ನೆನಪು ನವೀಕರಿಸುವ ಸಮರ್ಪಣಾ ಪ್ರತಿಜ್ಞೆಯೂ ಆಗಿರುವುದು.

  ವಯಸ್ಸಾದರೂ ಪ್ರವಾದಿ ಇಬ್ರಾಹೀಮ್‍ರಿಗೆ(ಅ) ಮಕ್ಕಳಾಗಿರಲಿಲ್ಲ. ಅವರು ಮನನೊಂದು ದೇವನಲ್ಲಿ ಪ್ರಾರ್ಥಿಸಿದರು. ನಿರಂತರ ಪ್ರಾರ್ಥನೆಯ ಫಲವಾಗಿ ಅವರಿಗೆ ಒಬ್ಬ ಪುತ್ರ ಜನಿಸಿದ. ಇಸ್ಮಾಈಲ್ ಎಂದು ಕರೆಯಲ್ಪಟ್ಟ ಪ್ರೀತಿಯ ಪುತ್ರ. ನಡೆದಾಡುವ ಪ್ರಾಯ ಆದಾಗ ಅವನನ್ನು ಬಲಿ ನೀಡಬೇಕು ಎಂದು ದೇವಾಜ್ಞೆಯಾಯಿತು. ತಂದೆ ಮಗ ಇಬ್ಬರೂ ದೇವಾಜ್ಞೆ ಪಾಲಿಸಿ ಬಲಿಗೆ ಸಿದ್ಧರಾದರು. ಆಗ ಮಗನನ್ನು ಬಲಿ ನೀಡಬೇಕಿಲ್ಲ ಬದಲಾಗಿ ಮೃಗ ಬಲಿ ನೀಡಿದರೆ ಸಾಕು ಎಂದು ದೇವಾದೇಶವಾಯಿತು. `ಏನು ಸಿಗುವುದು’ ಎಂಬ ದೃಷ್ಟಿಕೋನ ಮಾನವನಲ್ಲಿ ಇಹಲೋಕದ ಬದುಕಿಗೆ ಸದಾ ಪ್ರೇರಣೆಯಾಗಿದೆಯಷ್ಟೆ. ಆದರೆ “ಏನು ನೀಡಲು ಸಾಧ್ಯವಿದೆ” ಎಂಬ ಪ್ರಶ್ನೆ ಮತ್ತು ಚಿಂತನೆಗಳನ್ನು ಧರ್ಮ ಯಾವಾಗಲೂ ವಿಶ್ವಾಸಿಗಳಲ್ಲಿ ಜಾಗೃತಗೊಳಿಸುವುದು. ಕ್ಲಿಷಕರವಾದ ಯಾವುದನ್ನು ಕೂಡಾ ನೀಡುವೆ ಎಂದು ಉತ್ತರಿಸುವ ಪ್ರಚೋದನೆಯನ್ನು ಬಲಿ (ಕರ್ಮ) ಸೃಷ್ಟಿಸುತ್ತದೆ.

  ತನಗೆ ಹೆಚ್ಚು ಪ್ರಿಯವಾದ ಯಾವುದನ್ನು ಕೂಡಾ ದೇವನಿಗೆ ಸಮರ್ಪಿಸಲು ಅಣಿಯಾದ ಪ್ರವಾದಿ ಇಬ್ರಾಹೀಮ್(ಅ)ರ ತ್ಯಾಗೋಜ್ವಲವಾದ ಕರ್ಮದ ಹೆಗ್ಗುರುತಿನ ಮರುಕಳಿಕೆಯಾಗಿ ಹಜ್ಜ್ ವೇಳೆಯಲ್ಲಿ ಮತ್ತು ಪೂರಕವಾಗಿ ಈದ್(ಬಕ್ರೀದ್) ವೇಳೆ ಬಲಿ (ಪ್ರಾಣಿ ಬಲಿ) ನೀಡಲಾಗುತ್ತಿದೆ. ಇದು ತನಗೆ ಹೆಚ್ಚು ಇಷ್ಟವಿರುವ ಮತ್ತು ಹೆಚ್ಚು ಆವಶ್ಯವಿರುವ ಯಾವುದನ್ನು ತ್ಯಜಿಸಲು ಸಿದ್ಧ ಅದಕ್ಕೆ ತನ್ನ ಪದವಿಯೋ, ಪ್ರತಾಪವೋ, ಪ್ರಶಸ್ತಿಯೋ, ಹೆಣ್ಣೋ, ಬಂಗಾರವೋ, ಕುಲವೋ, ಕುಟುಂಬವೋ, ಅಂತಸ್ತು, ಅಧಿಕಾರವೋ ಇವು ಯಾವುದೂ ದೇವನ ಹಿತಕ್ಕಿಂತ ಮಿಗಿಲಲ್ಲ ಎಂಬ ದೃಢ ನಂಬಿಕೆಯ ಪ್ರಕಟಣೆಯು ಬಲಿ ಕರ್ಮದಲ್ಲಿದೆ. ಅತಿ ಮುಖ್ಯವಾದುದೆಂದು ಭಾವಿಸುವವುಗಳ ಸಮರ್ಪಣೆಯು ಅತಿ ಹೆಚ್ಚು ಕಷ್ಟಕರವಾಗಿರುವುದು. ಆದರೆ ವಿಶ್ವಾಸಿಯು ತಾನು ಅದಕ್ಕೆ ಕೂಡಾ ಸಿದ್ಧನಿರುವೆ ಎಂಬುದನ್ನು ಬಲಿ ಕರ್ಮದ ಮೂಲಕ ಘೋಷಿಸುವನು. ನೋಡಲಿಕ್ಕೆ ಬಲಿ ನೀಡುವುದೆಂದರೆ ಒಂದು ಜೀವ ಹತ್ಯೆಯಾಗಿರುವುದು. ಆದರೆ, ಅದರ ಒಳಾರ್ಥ ಅತಿ ಮಹತ್ತರವಾದುದು. ಪ್ರಪಂಚದೊಡೆಯನ ಪ್ರೀತಿಗಾಗಿ ಹೆಚ್ಚು ಪ್ರಿಯವಾಗಿರುವುದನ್ನು ಕೊಡುವುದಕ್ಕೂ, ಪ್ರಯಾಸವಿರುವುದನ್ನು ಮಾಡುವುದಕ್ಕೂ ನಾನು ತಯಾರಿದ್ದೇನೆಂಬ ಪ್ರತಿಜ್ಞೆಯೂ ಅದರಲ್ಲಿ ಅಡಕವಾಗಿರುವುದು. ಆದುದರಿಂದ ಪವಿತ್ರ ಕುರ್‍ಆನ್ ಬಲಿ ಕರ್ಮದ ಕುರಿತು ಹೀಗೆ ಪ್ರಸ್ತಾಪಿಸಿದೆ “ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ಆದರೆ ಅವನಿಗೆ ಧರ್ಮನಿಷ್ಠೆ ತಲುಪುತ್ತದೆ” (22:37)

  ವಿಶೇಷವಾಗಿ ಇಸ್ಲಾಮಿನ ದೇವಾರಾಧನೆಗಳು ಸಮಾಜಕ್ಕೂ, ಸಾರ್ವಜನಿಕವಾಗಿಯೂ, ಅಸಹಾಯಕರು ನಿರ್ಗತಿಕರಿಗೆ ಹೆಚ್ಚು ಉಪಯುಕ್ತವಾಗುವಂತಿರುತ್ತವೆ. ಬಲಿ ಕರ್ಮ ಕೂಡಾ ಆ ರೀತಿಯಲ್ಲಿದೆ. ಅಲ್ಲಾಹನು ಆಜ್ಞಾಪಿಸುತ್ತಾನೆ “ಅವರಿಗೆ ದಯಪಾಲಿಸಿರುವ ಜಾನುವಾರುಗಳ ಮೇಲೆ ಅವನ ನಾಮವನ್ನುಚ್ಛರಿಸಲಿ. ಸ್ವತಃ ತಿನ್ನಲಿ ಮತ್ತು ಬಡ ಬಗ್ಗರಿಗೂ ಕೊಡಲಿ (ಪವಿತ್ರ ಕುರ್ ಆನ್. 22:28)

  ಸಂತೋಷದ ಸಂದರ್ಭಗಳಲ್ಲಿ ದೇವನ ಮೇಲಿರುವ ಕೃತಜ್ಞತಾರ್ಪಣೆಯ ಬಾಗವಾಗಿ ಅವನ ಸೃಷ್ಟಿಗಳಾದ ಮಾನವರಿಗೆ ಅದರಲ್ಲೂ ವಿಶೇಷತಃ ಅವರಲ್ಲಿರುವ ಬಡವರಿಗೆ ಅನ್ನದಾನ ನಡೆಸುವುದು ಉತ್ತಮವೆಂದು ಇಸ್ಲಾಮ್ ಸೂಚಿಸಿದೆ. ಆಹಾರಗಳಲ್ಲಿ ಮಾಂಸಾಹಾರವು ಹೆಚ್ಚು ಪೋಷಕಾಂಶಭರಿತವಾಗಿಯೂ, ಉತ್ತಮವೂ ಆಗಿರುವುದರಿಂದ ಅದನ್ನು ನೀಡುವುದರಲ್ಲಿ ಉದಾರಮತಿಗಳಾದ ವಿಶ್ವಾಸಿಗಳು ನಿಷ್ಕರ್ಷೆ ತೋರುತ್ತಾರೆ. ಜಗತ್ತಿನ ಯಾವುದೇ ಭಾಗದ, ಯಾವುದೇ ಜನ ವಿಭಾಗದಲ್ಲಿ ಮಾಂಸಾಹಾರವಿಲ್ಲದ ಸತ್ಕಾರ ಕಾರ್ಯಕ್ರಮಗಳು ಬಹಳ ವಿರಳವಾಗಿದೆ.

 • ಪ್ರವಾದಿಗಳು ಯಾರು?
  ismika30-10-2014
  ಈ ಲೋಕದಲ್ಲಿ ಮಾನವನ ಮಾರ್ಗದರ್ಶನಕ್ಕಾಗಿ ಅಲ್ಲಾಹನು ಮಾಡಿರುವ ವ್ಯವಸ್ಥೆಯೇ ಪ್ರವಾದಿತ್ವ. ಭೂಮುಖದ ಮೇಲೆ ಮಾನವ ಜನಾಂಗದ ಆರಂಭವೇ ಓರ್ವ ಪ್ರವಾದಿಯ ಮೂಲಕ ಆಯಿತೆಂದು ಪವಿತ್ರ ಕುರ್‍ಆನ್ ಕಲಿಸುತ್ತದೆ. ಅವರಿಗೆ ಅಲ್ಲಾಹನು ತನ್ನ ದೂತರ ಮೂಲಕ ತನ್ನ ಸಂದೇಶವನ್ನು ಮುಟ್ಟಿಸಿದನು. ಅವರು ಅದನ್ನು ತಮ್ಮ ಸಂತತಿಗೆ ಮುಟ್ಟಿಸಿದರು. ಆ ಬಳಿಕ ಆ ಸಂತತಿಗಳು ಶೈತಾನನ ದುಷ್ಪ್ರೇರಣೆಯಿಂದ ಅಥವಾ ತಮ್ಮ ಭ್ರಷ್ಟ ಚಿತ್ತದ ಪ್ರೇರಣೆಯಿಂದ ಪ್ರವಾದಿ ಆದಮ್‍ರವರು(ಅ) ಬೋಧಿಸಿದ ಶಿಕ್ಷಣಗಳನ್ನು ಮರೆತಾಗ ಪುನಃ ದೇವನ ವತಿಯಿಂದ ಅವರ ಮಧ್ಯೆಯೇ ಪ್ರವಾದಿಗಳು ಜನಿಸಿ ಬಂದರು. ಈ ರೀತಿ ದೇವನು ಮಾನವರಿಗೆ ತನ್ನ ಸಂದೇಶವನ್ನು ಮುಟ್ಟಿಸಲು ಆರಿಸುವ ಪ್ರವಾದಿಗಳು ಮನುಷ್ಯರ ಪೈಕಿ ಅತ್ಯುತ್ತಮ ಗುಣನಡತೆ ಮತ್ತು ಚಾರಿತ್ರ್ಯವುಳ್ಳವರಾಗಿರುತ್ತಿದ್ದರು. ಆ ಪ್ರವಾದಿಗಳು ಮಾನವ ಇತಿಹಾಸದ ವಿವಿಧ ಕಾಲಘಟ್ಟಗಳಲ್ಲಿ ವಿವಿಧ ಜನಾಂಗಗಳಲ್ಲಿ ಬಂದರು. ಅವರ ಪೈಕಿ ಪ್ರತಿಯೊಬ್ಬರೂ ಜನರಿಗೆ ತಂತಮ್ಮ ಜನಾಂಗದ ಭಾಷೆಯಲ್ಲೇ ದೇವಸಂದೇಶವನ್ನು ಮುಟ್ಟಿಸಿದರು.
  ಹೀಗೆ ಮಾನವ ಜನಾಂಗದ ಸನ್ಮಾರ್ಗದರ್ಶನಕ್ಕಾಗಿ ಬಂದ ಪ್ರವಾದಿಗಳ ಸಂಖ್ಯೆ  ಸುಮಾರು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ ಇದೆಯೆಂದು ಪ್ರವಾದಿ ಮುಹಮ್ಮದ್(ಸ)
  ತಿಳಿಸಿರುವರು. ಎಲ್ಲ ಪ್ರವಾದಿಗಳೂ ಮಾನವರೇ ಆಗಿದ್ದರು. ಅವರಿಗೆ ಮಾನವ ಸಹಜವಾದ ಎಲ್ಲ ಬಯಕೆ-ಬೇಡಿಕೆಗಳೂ ಇದ್ದವು. ಅವರು ಆಹಾರ ಸೇವಿಸುತ್ತಿದ್ದರು. ಹೆಂಡತಿ ಮಕ್ಕಳನ್ನು ಹೊಂದಿದ್ದರು. ಜೀವನೋಪಾಯಕ್ಕಾಗಿ ಅವರು ದುಡಿಯುತ್ತಿದ್ದರು. ಅವರ ಪೈಕಿ ಯಾರೂ ದೇವರಾಗಲಿ, ದೇವ ಪುತ್ರರಾಗಲಿ, ದೇವಾಂಶ ಸಂಭೂತರಾಗಲಿ          ಆಗಿರಲಿಲ್ಲ. ಅವರ ಪೈಕಿ ಯಾರೂ ಅತಿ ಮಾನವರೋ ದೇವನಿಗೆ ಸಮಾನರೋ ಅವನ ಭಾಗೀದಾರರೋ ಆಗಿರಲಿಲ್ಲ.
  ಪ್ರವಾದಿ ಮುಹಮ್ಮದ್(ಸ) ಈ ಪ್ರವಾದಿಗಳ ಪೈಕಿ ಕೊನೆಯವರೂ ಪ್ರವಾದಿ  ಶೃಂಖಲೆಯ ಕೊನೆಯ ಕೊಂಡಿಯೂ ಪ್ರವಾದಿತ್ವ ವ್ಯವಸ್ಥೆಯ ಪರಿಪೂರ್ಣತೆಯೂ ದೇವ ಸಂದೇಶವಾಹಕತ್ವದ ಪರಿಸಮಾಪ್ತಿಯೂ ಆಗಿದ್ದಾರೆ. ಅವರು ಇತಿಹಾಸದ ಪೂರ್ಣ ಬೆಳಕಿನಲ್ಲಿ ಜನಿಸಿದರು, ಬಾಳಿದರು ಮತ್ತು ಬೆಳೆದರು. ಆಮಿನಾ ಮತ್ತು ಅಬ್ದುಲ್ಲಾ ದಂಪತಿಗಳ ಮಗನಾಗಿ ಮುಹಮ್ಮದ್(ಸ) ಅರೇಬಿಯಾದ ಮಕ್ಕಾ ಪಟ್ಟಣದಲ್ಲಿ ಕ್ರಿ.ಶ. 571ರಲ್ಲಿ ಜನಿಸಿದರು. ಮುಹಮ್ಮದ್‍ರವರು(ಸ) ತಮ್ಮ ಜನನಕ್ಕೆ ಮುಂಚೆಯೇ ತಂದೆಯನ್ನು ಕಳಕೊಂಡಿದ್ದರು. ಕೇವಲ 6 ವರ್ಷ ಪ್ರಾಯದವರಾಗಿದ್ದಾಗ ತಾಯಿಯ ಆಶ್ರಯವೂ ಇಲ್ಲದಂತಾಯಿತು. ತಾತ ಅಬ್ದುಲ್ ಮುತ್ತಲಿಬ್ ಅವರ ಪೋಷಣೆಯಲ್ಲಿ ಎರಡು ವರ್ಷ ಕಳೆದರು. 8ನೆಯ ವರ್ಷ ಪ್ರಾಯದಲ್ಲಿ ತಾತನ ನೆರಳೂ ಇಲ್ಲದಾಯಿತು. ಆ ಬಳಿಕ ಮುಹಮ್ಮದ್(ಸ) ತಮ್ಮ ಚಿಕ್ಕಪ್ಪ ಅಬೂ ತಾಲಿಬರ ಆಸರೆಯಲ್ಲಿ ಬೆಳೆದರು. ಮುಹಮ್ಮದ್(ಸ)ರಿಗೆ ಅಕ್ಷರಾಭ್ಯಾಸ ಮಾಡುವ ಮತ್ತು ವಿದ್ಯೆ ಕಲಿಯುವ ಸಂದರ್ಭವೇ ಒದಗಿ ಬಂದಿರಲಿಲ್ಲ. ಅವರು ಓರ್ವ ನಿರಕ್ಷರಿಯಾಗಿಯೇ ಬೆಳೆದರು. ಕುಡಿತ, ದರೋಡೆ, ಜೂಜಾಟ, ವ್ಯಭಿಚಾರಗಳ ಆಗರವಾಗಿದ್ದ ಅರಬ್ ದೇಶದಲ್ಲಿ ಅವರು ಕೆಡುಕಿನ ಗಂಧಗಾಳಿಯೂ ಸೋಂಕದೆ ಯೌವನಾವಸ್ಥೆಯನ್ನು ಕಳೆದರು. ಅರಬರು ಅವರ ಪ್ರಾಮಾಣಿಕತೆಯನ್ನೂ ಸತ್ಯನಿಷ್ಠೆಯನ್ನೂ ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದರು. 'ಅವಿೂನ್' (ಪ್ರಾಮಾಣಿಕ) ಮತ್ತು 'ಸಾದಿಕ್' (ಸತ್ಯಸಂಧ) ಎಂಬ ಬಿರುದನ್ನು ಮಕ್ಕಾ ನಿವಾಸಿಗಳು ಅವರಿಗೆ ನೀಡಿದ್ದರು. ಸುತ್ತಮುತ್ತಲ ಜನರು ಸೃಷ್ಟಿ ಪೂಜೆ, ಸ್ವಾರ್ಥ, ಅನೀತಿ, ಅತ್ಯಾಚಾರಗಳಲ್ಲಿ ನಿರತರಾಗಿರುವುದನ್ನು ಕಂಡು ಹೃದಯ ಬೇಗುದಿಯಿಂದ ಮುಹಮ್ಮದ್(ಸ) 'ಹಿರಾ' ಎಂಬ ಗುಹೆಯಲ್ಲಿ ಧ್ಯಾನಾಸಕ್ತರಾಗಿ ಕಾಲ ಕಳೆಯ ತೊಡಗಿದರು. ಈ ರೀತಿ ಸೃಷ್ಟಿಕರ್ತನಾದ ಅಲ್ಲಾಹನ ಧ್ಯಾನದಲ್ಲಿ ನಿರತರಾಗಿರುವಾಗ ಒಂದು ದಿನ ದೇವಚರ ಜಿಬ್ರೀಲರ ಮೂಲಕ ದೇವವಾಣಿ ಅವರಿಗೆ ಅವತೀರ್ಣಗೊಳ್ಳಲು ಆರಂಭವಾಯಿತು. ಮಕ್ಕಾದ ಪರಿಸರದಲ್ಲಿರುವ 'ಹಿರಾ' ಗುಹೆಯಲ್ಲಿ ಪ್ರವಾದಿ ಮುಹಮ್ಮದ್‍(ಸ)ರವರ 40ನೆಯ ವಯಸ್ಸಿನಲ್ಲಿ ಆರಂಭಗೊಂಡ ಈ ದಿವ್ಯ ಬೋಧನೆಯು ಅವರ ಜೀವನಾಂತ್ಯದವರೆಗೆ ಮುಂದುವರಿಯಿತು.
  ಜಗತ್ತಿಗೆ ಬಂದ ಇತರ ಎಲ್ಲ ಪ್ರವಾದಿಗಳಂತೆ ತಾನೂ ಒಬ್ಬ ಪ್ರವಾದಿಯೆಂದು ಅವರು ಘೋಷಿಸಿದರು. ತಾನೂ ಇತರ ಮನುಷ್ಯರಂತೆ ಓರ್ವ ಮನುಷ್ಯನಾಗಿರುವೆನೆಂಬುದನ್ನೂ ಅವರು ಬಹಳ ಒತ್ತುಕೊಟ್ಟು ಹೇಳಿದರು. ಹಾಗೆ ಸಾರಿ ಹೇಳಬೇಕೆಂದು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದನ್ನು ಪವಿತ್ರ ಕುರ್‍ಆನ್ ಈ ರೀತಿ ಉಲ್ಲೇಖಿಸಿದೆ:
  "ಓ ಪೈಗಂಬರರೇ, ಹೇಳಿರಿ- ನಾನು ನಿಮ್ಮಂತೆಯೇ ಇರುವ ಒಬ್ಬ ಮನುಷ್ಯ. ನಿಮ್ಮ ದೇವನು ಏಕ ಮಾತ್ರ ದೇವನೆಂದು ನನ್ನ ಕಡೆಗೆ 'ದಿವ್ಯವಾಣಿ' ಮಾಡಲಾಗುತ್ತಿದೆ. ಆದುದರಿಂದ ತನ್ನ ಪ್ರಭುವಿನ ಭೇಟಿಯನ್ನು ನಿರೀಕ್ಷಿಸುವವನು ಸತ್ಕರ್ಮಗಳನ್ನೆಸಗಲಿ ಮತ್ತು ಆರಾಧನೆಯಲ್ಲಿ ತನ್ನ ಪ್ರಭುವಿನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡದಿರಲಿ." (18:110)
  ಸತ್ಯವಿಶ್ವಾಸಿಗಳು ಪ್ರವಾದಿ ಮುಹಮ್ಮದ್‍ರವರನ್ನು(ಸ) ಕರೆದು ಪ್ರಾರ್ಥಿಸುವುದಿಲ್ಲ. ಅಲ್ಲಾಹನ ವ್ಯಕ್ತಿತ್ವದಲ್ಲಾಗಲೀ ಗುಣಗಳಲ್ಲಾಗಲೀ ಹಕ್ಕು ಮತ್ತು ಅಧಿಕಾರಗಳಲ್ಲಾಗಲೀ  ಅವರನ್ನು ಪಾಲುದಾರರೆಂದು ಬಗೆಯುವುದಿಲ್ಲ.
  ಪ್ರವಾದಿ ಮುಹಮ್ಮದ್(ಸ) ಇತರ ಎಲ್ಲ ಪ್ರವಾದಿಗಳಂತೆಯೇ ಓರ್ವ ಪ್ರವಾದಿಯಾಗಿದ್ದರೂ ಎರಡು ವಿಷಯಗಳಲ್ಲಿ ಅವರಿಗೆ ಇತರ ಪ್ರವಾದಿಗಳಿಗಿಂತ ಶ್ರೇಷ್ಠತೆ ಪ್ರಾಪ್ತವಿದೆ. ಹಿಂದಿನ ಎಲ್ಲ ಪ್ರವಾದಿಗಳೂ ಒಂದು ನಿರ್ದಿಷ್ಟ ಪ್ರದೇಶ ಮತ್ತು ಒಂದು ನಿರ್ದಿಷ್ಟ ಕಾಲಕ್ಕಾಗಿ ಕಳುಹಿಸಲ್ಪಡುತ್ತಿದ್ದರು. ಕೆಲವೊಮ್ಮೆ ಒಂದೇ ಸಮಯದಲ್ಲಿ ಬೇರೆ ಬೇರೆ ಪ್ರದೇಶಗಳಿಗೆ ಬೇರೆ ಬೇರೆ ಪ್ರವಾದಿಗಳನ್ನು ಕಳುಹಿಸಲಾಗುತ್ತಿತ್ತು. ಒಂದೇ ಪ್ರದೇಶಕ್ಕೆ ಒಬ್ಬರಿಗಿಂತ ಹೆಚ್ಚು ಪ್ರವಾದಿಗಳನ್ನು ರವಾನಿಸಿದ್ದೂ ಇದೆ. ಪ್ರತಿಯೊಬ್ಬ ಪ್ರವಾದಿಯ ಪ್ರವಾದಿತ್ವವು ಮುಂದಿನ ಪ್ರವಾದಿಯ ಆಗಮನದೊಂದಿಗೆ ಕೊನೆಗೊಳ್ಳುತ್ತಿತ್ತು. ಆದರೆ ಪ್ರವಾದಿ ಮುಹಮ್ಮದ್(ಸ) ಸಮಸ್ತ ವಿಶ್ವದ ಸಂಪೂರ್ಣ ಮಾನವ ಜನಾಂಗಕ್ಕೆ ಲೋಕಾಂತ್ಯ ಕಾಲದ ವರೆಗೆ ಮಾರ್ಗದರ್ಶನ ಮಾಡಲು ಕಳುಹಿಸಲ್ಪಟ್ಟ ಅಂತಿಮ ಪ್ರವಾದಿಯಾಗಿರುವರು:
  "ಹೇಳಿರಿ: ಓ ಮಾನವರೇ, ನಾನು ನಿಮ್ಮೆಲ್ಲರ ಕಡೆಗೆ ಭೂಮಿ ಆಕಾಶಗಳ ಸಾರ್ವಭೌಮನಾಗಿರುವ ಅಲ್ಲಾಹನ ಸಂದೇಶವಾಹಕನಾಗಿರುತ್ತೇನೆ." (ಪವಿತ್ರ ಕುರ್‍ಆನ್, 7:158)
  "(ಪೈಗಂಬರರೇ,) ನಾವು ನಿಮ್ಮನ್ನು ಸಕಲ ಮಾನವರಿಗೆ ಸುವಾರ್ತೆ ಕೊಡುವವರಾಗಿಯೂ ಎಚ್ಚರಿಕೆ ನೀಡುವವರಾಗಿಯೂ ಮಾಡಿ ಕಳುಹಿಸಿರುತ್ತೇವೆ. ಆದರೆ ಹೆಚ್ಚಿನವರು ಅರಿಯುವುದಿಲ್ಲ." (ಪವಿತ್ರ ಕುರ್‍ಆನ್, 34:28)
  "ಪೈಗಂಬರರೇ, ನಾವು ನಿಮ್ಮನ್ನು ಸಕಲ ಲೋಕದವರಿಗೆ ಅನುಗ್ರಹವಾಗಿ ಮಾಡಿ ಕಳುಹಿಸಿರುತ್ತೇವೆ." (ಪವಿತ್ರ ಕುರ್‍ಆನ್, 21:107)
  "(ಜನರೇ) ಮುಹಮ್ಮದ್‍ರು ನಿಮ್ಮ ಪುರುಷರ ಪೈಕಿ ಯಾರದೇ ತಂದೆಯಲ್ಲ. ವಾಸ್ತವದಲ್ಲಿ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಪ್ರವಾದಿಗಳಲ್ಲಿ ಕೊನೆಯವರಾಗಿರುತ್ತಾರೆ."  (ಪವಿತ್ರ ಕುರ್‍ಆನ್, 33:40)
 • ಪ್ರವಾದಿ ಮುಹಮ್ಮದ್‍ರ(ಸ) ವಿವಾಹಗಳನ್ನು ಸಂಕ್ಷಿಪ್ತವಾಗಿ ವಿವರಿಸಿ?
  ismika30-10-2014

  ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಸಾಮಾನ್ಯವಾಗಿ ಮುಸ್ಲಿಮೇತರ ಬಂಧುಗಳಲ್ಲಿ ಗೊಂದಲಕ್ಕೆ ಕಾರಣವಾಗುವುದಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದನೆಯದಾಗಿ ಬಹುಪತ್ನಿತ್ವ ಸಂಪ್ರದಾಯವನ್ನು ಸಾಮಾನ್ಯವಾಗಿ ಕೆಟ್ಟ ದೃಷ್ಟಿಯಿಂದ ನೋಡಲಾಗುತ್ತದೆ. ಎರಡನೆಯದಾಗಿ ಪಾಶ್ಚಾತ್ಯ ಇಸ್ಲಾಮ್ ವಿರೋಧಿಗಳು ಮತ್ತು ಅವರ ಪೌರ್ವಾತ್ಯ ಅಂಧಾನುಯಾಯಿಗಳು ಇಸ್ಲಾಮಿನ ವಿರುದ್ಧ ನಡೆಸುವ ಯೋಜಿತ ಕುಪ್ರಚಾರಗಳಲ್ಲಿ ಬಹುಪತ್ನಿತ್ವ, ಅದರಲ್ಲೂ ವಿಶೇಷವಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳು ಪ್ರಮುಖ ವಿಷಯವಾಗಿವೆ. ಮೂರನೆಯದಾಗಿ ಪ್ರವಾದಿ ಮುಹಮ್ಮದ್‍ರವರ(ಸ) ವಿವಾಹಗಳ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆ ಜನಸಾಮಾನ್ಯರಿಗೆ ಸರಿಯಾದ ತಿಳುವಳಿಕೆ ಇಲ್ಲ. ಇಲ್ಲಿ ನಾವು ಪ್ರವಾದಿವರ್ಯರ(ಸ) ವಿವಾಹಗಳ ಕುರಿತು ಸಂಕ್ಷಿಪ್ತವಾಗಿ ವಿವೇಚಿಸೋಣ-

  ಪ್ರಥಮ ವಿವಾಹ
  ಪ್ರವಾದಿ ಮುಹಮ್ಮದ್‍ರ(ಸ) ಪ್ರಥಮ ವಿವಾಹ ನಡೆದಾಗ ಅವರಿಗೆ 25 ವರ್ಷ ವಯಸ್ಸು, ಈ ಪ್ರಥಮ ವಿವಾಹವು 4೦ರ ಹರೆಯದ ಖದೀಜಾ(ರ) ಎಂಬ ಓರ್ವ ವಿಧವೆಯೊಂದಿಗೆ ನಡೆದಿತ್ತು. ಖದೀಜಾ ಮಕ್ಕಾದ ಓರ್ವ ಗೌರವಾನ್ವಿತ ಮಹಿಳೆಯಾಗಿದ್ದರು. ಪ್ರವಾದಿ ಮುಹಮ್ಮದ್(ಸ) ಖದೀಜಾರ ಜೊತೆ ಸುಮಾರು 25 ವರ್ಷಗಳ ವೈವಾಹಿಕ ಬಾಳ್ವೆ ನಡೆಸಿದರು. ಪ್ರಥಮ ಪತ್ನಿ ಖದೀಜಾ ನಿಧನರಾದಾಗ ಪ್ರವಾದಿವರ್ಯರಿಗೆ(ಸ) 5೦ ವರ್ಷ ವಯಸ್ಸಾಗಿತ್ತು. ಆಗ ಖದೀಜಾರ ವಯಸ್ಸು 65 ವರ್ಷ. ಖದೀಜಾ ಜೀವಂತವಿದ್ದಷ್ಟು ಕಾಲ ಪ್ರವಾದಿಯವರು(ಸ) ಬೇರೆ ವಿವಾಹವಾಗಿರಲಿಲ್ಲ. ಅವರ ವೈವಾಹಿಕ ಜೀವನ ಎಲ್ಲ ವಿಧದಲ್ಲೂ ಸುಖಮಯ ಹಾಗೂ ಆದರ್ಶ ಪ್ರಾಯವಾಗಿತ್ತು. ಮುಹಮ್ಮದ್‍ರವರು(ಸ) ಖದೀಜಾರಿಂದಲೇ ಸಂತಾನವನ್ನೂ ಪಡೆದರು.
  ಪ್ರವಾದಿವರ್ಯರ(ಸ) ಇತರ ಎಲ್ಲ ವಿವಾಹಗಳೂ ಖದೀಜಾರವರ(ರ) ನಿಧನಾನಂತರ ಅಂದರೆ 5೦ ವರ್ಷ ವಯಸ್ಸು ಕಳೆದ ಬಳಿಕವೇ ಜರುಗಿದುವು. ಇದಕ್ಕೆ ಅಮಿತ ಲೈಂಗಿಕ ಆಸಕ್ತಿ ಅಥವಾ ಅತಿಕಾಮ ಖಂಡಿತ ಕಾರಣವಾಗಿರಲಿಲ್ಲ. ಅರಬರು ಯುವಕರಾಗಿರುವಾಗಲೇ ಹತ್ತಾರು ಮಂದಿಯನ್ನು ವರಿಸಿಕೊಳ್ಳುತ್ತಿದ್ದ ಕಾಲವಾಗಿತ್ತದು. ವಿವಾಹದಂತೆಯೇ ವಿವಾಹ ವಿಚ್ಛೇದನವೂ ಸರ್ವಸಾಮಾನ್ಯವಾಗಿತ್ತು. ಒಬ್ಬ ಪುರುಷನು ತನಗಿಷ್ಟ ಬಂದಷ್ಟು ಸಲ ತನ್ನ ಪತ್ನಿಯನ್ನು ವಿಚ್ಛೇದಿಸಿ ಪುನಃ ಆಕೆಯೊಂದಿಗೇ ದಾಂಪತ್ಯ ಜೀವನವನ್ನು ಮುಂದುವರಿಸುವುದು ಸಾಮಾನ್ಯವಾಗಿತ್ತು. ಇದಕ್ಕೆ ಯಾವುದೇ ಮಿತಿಯಾಗಲೀ ನಿಯಂತ್ರಣವಾಗಲೀ ಇರಲಿಲ್ಲ. ಇಂತಹ ಸನ್ನಿವೇಶದಲ್ಲಿ ಪ್ರವಾದಿ ಮುಹಮ್ಮದ್(ಸ) ಏಕಪತ್ನೀಕರಾಗಿ ತಮ್ಮ ಯುವತ್ವವನ್ನೂ ಮಧ್ಯ ವಯಸ್ಸನ್ನೂ ಕಳೆದರು. ಅದೂ ಈ ಹಿಂದೆ ಎರಡು ಸಲ ವಿವಾಹವಾಗಿದ್ದ ಓರ್ವ ಮಧ್ಯ ವಯಸ್ಕ ವಿಧವೆಯ ಜೊತೆ. ಇದು ಲೈಂಗಿಕ ಆಸಕ್ತಿ ಹೆಚ್ಚಿರುವಂತಹ ಓರ್ವ ಪುರುಷನ ಲಕ್ಷಣವೆಂದು ಬುದ್ದಿಯುಳ್ಳವರಾರೂ ಹೇಳಲಾರರು.

  ವಿವಾಹದ ಕಾರಣಗಳು
  ಪ್ರವಾದಿವರ್ಯರು(ಸ) ತಮ್ಮ ಇಳಿವಯಸ್ಸಿನಲ್ಲಿ ಮಾಡಿಕೊಂಡ ವಿವಾಹಗಳ ಹಿಂದೆ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕವಾದ ಅನೇಕ ಪ್ರಬಲ ಕಾರಣಗಳಿದ್ದುವು. ಪ್ರವಾದಿ ಮುಹಮ್ಮದ್‍ರವರು(ಸ) ಪುರುಷರಂತೆ ಸ್ತ್ರೀಯರ ಮಟ್ಟಿಗೂ ಅಲ್ಲಾಹನ ಅಂತಿಮ ಪ್ರವಾದಿಯಾಗಿದ್ದರು. ಅವರ ಜೀವನವು ಸ್ತ್ರೀ-ಪುರುಷ ಭೇದವಿಲ್ಲದೆ ಎಲ್ಲ ಮನುಷ್ಯರಿಗೂ ಸದಾಕಾಲಕ್ಕೆ ಆದರ್ಶ ಜೀವನವಾಗಿದೆ. ಹಾಗಿರುವಾಗ ದೈವಿಕ ಶಿಕ್ಷಣ- ಬೋಧನೆಗಳನ್ನು ಸ್ತ್ರೀಯರಿಗೆ ತಲುಪಿಸುವ ವ್ಯವಸ್ಥೆ ಮಾಡುವುದು ಪ್ರವಾದಿವರ್ಯರ(ಸ) ದೇವದತ್ತ ಕರ್ತವ್ಯವಾಗಿತ್ತು. ಸ್ತ್ರೀಯರಿಗೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕಲಿಸುವಂತಹ ಹೊಣೆಗಾರಿಕೆಯನ್ನು ಪ್ರವಾದಿವರ್ಯರು(ಸ) ತಮ್ಮ ಪತ್ನಿಯರಿಗೆ ವಹಿಸಿಕೊಟ್ಟಿದ್ದರು. ಪ್ರವಾದಿ ಮುಹಮ್ಮದ್(ಸ) ಅವರಿಂದ ಸಹಸ್ರಾರು ವಚನಗಳನ್ನು ವರದಿ ಮಾಡಿರುವ ಹ. ಆಯಿಶಾರವರ(ರ) ಹೆಸರು ಆ ಪೈಕಿ ಉಲ್ಲೇಖನೀಯ. ಮೂಢನಂಬಿಕೆಗಳು, ಕಂದಾಚಾರಗಳು ಮತ್ತು ಅಜ್ಞಾನಜನ್ಯ ರೂಢಿ-ಸಂಪ್ರದಾಯಗಳಿಂದ ತುಂಬಿಹೋಗಿದ್ದ ಒಂದು ಸಮುದಾಯಕ್ಕೆ ಅಲ್ಲಾಹನ ಧರ್ಮವನ್ನು ತಲುಪಿಸುವ ಹೊಣೆಗಾರಿಕೆ ಪ್ರವಾದಿ ಮುಹಮ್ಮದ್ ರವರ(ಸ) ಮೇಲಿತ್ತು. ಪುರುಷರಂತೆ ಸ್ತ್ರೀಯರನ್ನು ಸುಶಿಕ್ಷಿತಗೊಳಿಸದೆ ಈ ಗುರುತರ ಜವಾಬ್ದಾರಿಯನ್ನು ಈಡೇರಿಸಲು ಸಾಧ್ಯವಿರಲಿಲ್ಲ. ಪ್ರವಾದಿವರ್ಯರಿಗೆ(ಸ) ಈ ಹೊಣೆಯನ್ನು ನಿರ್ವಹಿಸಲಿಕ್ಕೆ ವಿಭಿನ್ನ ಯೋಗ್ಯತಾರ್ಹತೆಗಳ, ವಿಭಿನ್ನ ಪ್ರಕೃತಿಯ, ವಿಭಿನ್ನ ವಿದ್ಯಾರ್ಹತೆಯಿರುವ, ವಿಭಿನ್ನ ಪ್ರಾಯದ ಮತ್ತು ವಿಭಿನ್ನ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕ್ರತಿಕ ಹಿನ್ನೆಲೆಯಿರುವ ಮಹಿಳೆಯರ ಅಗತ್ಯವಿತ್ತು. ಅದಕ್ಕಾಗಿ ಅಂಥವರನ್ನು ವಿವಾಹವಾಗುವುದೊಂದೇ ಪ್ರಾಯೋಗಿಕ ಮಾರ್ಗವಾಗಿತ್ತು. ಪ್ರವಾದಿ(ಸ) ಮಾನವಕುಲಕ್ಕೆ ಆದರ್ಶಪುರುಷ ರಾಗಿರುವುದು ಕೇವಲ ಸಾಮಾಜಿಕ ಜೀವನದಲ್ಲಿ ಮಾತ್ರ ಅಲ್ಲ, ಖಾಸಗಿ ಮತ್ತು ಗೃಹ ಜೀವನದಲ್ಲೂ ಅವರೇ ಅನುಕರಣೀಯ ಆದರ್ಶ ಪುರುಷರಾಗಿರುವರು. ಅವರ ಸಾಮಾಜಿಕ ಜೀವನದ ಎಲ್ಲ ಸೂಕ್ಷ್ಮಾತಿಸೂಕ್ಷ್ಮ ವಿವರಗಳನ್ನು ಮಾನವಕುಲಕ್ಕೆ ತಲುಪಿಸಲು ಅವರ ಸುತ್ತ ಅನೇಕ ಪುರುಷ ಅನುಯಾಯಿಗಳಿದ್ದರು. ಆದರೆ ಕೌಟುಂಬಿಕ ಮತ್ತು ಗೃಹ ಜೀವನದಲ್ಲಿ ಪ್ರವಾದಿಯ ಆದರ್ಶವೇನೆಂಬುದನ್ನು ಸಕಲ ವಿವರಗಳೊಂದಿಗೆ ಮಾನವಕುಲಕ್ಕೆ ತಲುಪಿಸಲು ಪ್ರವಾದಿಯ ಪತ್ನಿಯರಿಗೆ ಮಾತ್ರ ಸಾಧ್ಯವಿತ್ತು. ಅವರ ಮೂಲಕವೇ ಪ್ರವಾದಿ ಮುಹಮ್ಮದರು(ಸ) ಅರೇಬಿಯಾದ ಮಹಿಳೆಯರನ್ನು ಇಸ್ಲಾಮಿನೆಡೆಗೆ ಆಹ್ವಾನಿಸಿದರು ಮತ್ತು ಅವರ ಮೂಲಕವೇ ಸ್ತ್ರೀ ಕುಲದ ಶಿಕ್ಷಣ ತರಬೇತಿಗಳ ಏರ್ಪಾಡು ಮಾಡಿದರು.
  ಪ್ರವಾದಿವರ್ಯರು(ಸ) ತಮ್ಮ ಧರ್ಮಪ್ರಚಾರ ಕಾರ್ಯದಿಂದಾಗಿ ಇಡೀ ಅರಬ್ ಜಗತ್ತಿನ ಎಲ್ಲ ಕುಲಗೋತ್ರಗಳ ಶತ್ರುತ್ವಕ್ಕೆ ಪಾತ್ರರಾಗಿದ್ದರು. ಈ ಶತ್ರುತ್ವವನ್ನು ಮಿತ್ರತ್ವವಾಗಿ ಬದಲಿಸುವುದರಲ್ಲಿಯೂ ಪ್ರವಾದಿವರ್ಯರ(ಸ) ವಿವಾಹಗಳು ನಿರ್ಣಾಯಕ ಪಾತ್ರ ವಹಿಸಿದ್ದುವು. ವಿಭಿನ್ನ ಗೋತ್ರಗಳಿಗೆ ಸೇರಿದ ವಿಧವೆ, ವಿವಾಹ ವಿಚ್ಛೇದಿತೆ ಮತ್ತು ಅನಾಥೆಯರಾದ ಮಹಿಳೆಯರನ್ನು ವಿವಾಹವಾಗುವ ಮೂಲಕ ಅವರು ಆ ಗೋತ್ರಗಳ ಸ್ನೇಹ ಸಂಬಂಧವನ್ನೂ ಬಂಧುತ್ವವನ್ನೂ ಗಳಿಸಿಕೊಂಡರು. ಕನಿಷ್ಠಪಕ್ಷ ತಮ್ಮ ಗೋತ್ರದೊಂದಿಗೆ ವಿವಾಹ ಸಂಬಂಧವಿರುವವರೆಂಬ ನೆಲೆಯಲ್ಲಿ ಪ್ರವಾದಿವರ್ಯರ(ಸ) ಮೇಲಿನ ಅವರ ದ್ವೇಷ ಮತ್ತು ವೈರವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಯಿತು. ಇಸ್ಲಾಮಿನ ಬದ್ಧವೈರಿಯಾಗಿದ್ದ ಅಬೂ ಸುಫ್ಯಾನ್‍ರ ಮಗಳಾದ ಉಮ್ಮು ಹಬೀಬಾರೊಂದಿಗೆ ಪ್ರವಾದಿಯ ವಿವಾಹವು ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ.

  ದತ್ತು ಸಂಬಂಧದಲ್ಲಿ ವಿವಾಹ
  ಸಮಾಜದ ಅಜ್ಞಾನಜನ್ಯ ರೀತಿ-ಸಂಪ್ರದಾಯಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ತಮ್ಮ ದತ್ತುಪುತ್ರರಾದ ಝೈದ್‍ರ ವಿಚ್ಛೇದಿತ ಪತ್ನಿ ಹ. ಝೈನಬ್‍ರೊಂದಿಗೆ ಪ್ರವಾದಿ ವರ್ಯರು(ಸ) ಮಾಡಿಕೊಂಡ ವಿವಾಹವು ಐತಿಹಾಸಿಕ ಮಹತ್ವಕ್ಕೆ ಪಾತ್ರವಾಗಿದೆ. ತನ್ಮೂಲಕ ಅರೇಬಿಯಾದಲ್ಲಿ ದತ್ತುಪುತ್ರನನ್ನು ಸ್ವಂತ ಪುತ್ರನಂತೆ ಪರಿಗಣಿಸಿ ಆಸ್ತಿಯಲ್ಲಿ ಹಕ್ಕುನೀಡುತ್ತಿದ್ದ ಹಾಗೂ ತನ್ನ ಪತ್ನಿ ಮತ್ತು ಪುತ್ರಿಯರನ್ನು ಅವನ ತಾಯಿ ಮತ್ತು ಸಹೋದರಿಯರೆಂದು ಪರಿಗಣಿಸುತ್ತಿದ್ದ ಸಂಪ್ರದಾಯವು ಕೊನೆಗೊಂಡಿತು (ಹೆಚ್ಚಿನ ವಿವರಗಳಿಗೆ ನೋಡಿರಿ- ಪವಿತ್ರ ಕುರ್‍ಆನ್ ಅಧ್ಯಾಯ 33ರ ಮುನ್ನುಡಿ ಮತ್ತು ಕುರ್‍ಆನ್ ವ್ಯಾಖ್ಯಾನ ಭಾಗ-2ರ ಅಧ್ಯಾಯ 33ರ ಪ್ರಸ್ತಾವನೆ.)
  ಹ. ಸಫಿಯಾ ಮತ್ತು ಜುವೇರಿಯಾ(ರ) ಯಹೂದಿ ಮನೆತನಕ್ಕೆ ಸೇರಿದ ಸ್ತ್ರೀಯರಾಗಿದ್ದರು. ಅವರನ್ನು ವಿವಾಹವಾಗುವ ಮೂಲಕ ಯಹೂದಿ ಗೋತ್ರಗಳೊಂದಿಗೂ ಪ್ರವಾದಿ ವರ್ಯರು(ಸ) ಸಂಬಂಧ ಸ್ಥಾಪಿಸಿಕೊಂಡರು ಮತ್ತು ಆ ಮೂಲಕ ಅವರ ಶತ್ರುತ್ವಕ್ಕೆ ಕಡಿವಾಣ ಹಾಕಿದರು. ಅಂದಿನ ಅರಬ್ ಸಂಪ್ರದಾಯದಂತೆ ಒಂದು ಗೋತ್ರದ ಯಾವುದೇ ಹೆಣ್ಣನ್ನು ವರಿಸಿದವನು ಆ ಗೋತ್ರದ ಅಳಿಯನಾಗಿ ಮಾರ್ಪಡುತ್ತಿದ್ದನು. ತನ್ಮೂಲಕ ದ್ವೇಷ ಮತ್ತು ಪ್ರತೀಕಾರದ ಕ್ರಮಗಳಿಂದ ಸುರಕ್ಷಿತನಾಗಿ ಅವರ ಆತ್ಮೀಯ ಸಂಬಂಧಿಯಾಗಿ ಬಿಡುತ್ತಿದ್ದನು. ಈ ರೀತಿ ದೂರಗಾಮಿ ಸಾಮಾಜಿಕ, ಧಾರ್ಮಿಕ ಮತ್ತು ನೈತಿಕ ಪರಿಣಾಮಗಳನ್ನು ಹೊಂದಿರುವ ಪ್ರವಾದಿವರ್ಯರ(ಸ) ವಿವಾಹಗಳು ಯಾವ ನಿಷ್ಪಕ್ಷಮತಿಗೂ ಯಾವ ದೃಷ್ಟಿಯಿಂದಲೂ ಆಕ್ಷೇಪಾರ್ಹವಾಗಿ ಕಾಣಲಾರವು.

 • ಪರಲೋಕ ವಿಶ್ವಾಸ ಮತ್ತು ಇಸ್ಲಾಮ್ ?
  ismika30-10-2014

  ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ಮನುಷ್ಯನ ಈ ಲೌಕಿಕ ಜೀವನವು ಒಂದು ಶಿಕ್ಷೆಯಾಗಲೀ ಪುರಸ್ಕಾರವಾಗಲೀ ಅಲ್ಲ. ಇದು ಹಿಂದಿನ ಜನ್ಮದ ಪಾಪಗಳಿಗೆ ಸಿಕ್ಕಿದ ಶಿಕ್ಷೆಯೂ ಅಲ್ಲ. ಹಿಂದಿನ ಜನ್ಮದ ಪುಣ್ಯಗಳಿಗೆ ಸಿಕ್ಕಿದ ಪುರಸ್ಕಾರವೂ ಅಲ್ಲ. ವಾಸ್ತವದಲ್ಲಿ ಇದು ಮನುಷ್ಯನ ಪರೀಕ್ಷಾರ್ಥವಾಗಿ ಅವನಿಗೆ ಲಭಿಸಿದ ಜೀವನವಾಗಿದೆ. ಇಲ್ಲಿ ಅವನಿಗೆ ವಿಚಾರ-ಆಚಾರಗಳ ತಾತ್ಕಾಲಿಕ ಸ್ವಾತಂತ್ರ್ಯ ನೀಡಲಾಗಿದೆ. ಆತನು ತನ್ನ ನೈಜ ಸೃಷ್ಟಿಕರ್ತನನ್ನು ಯಥಾವತ್ತಾಗಿ ಗುರುತಿಸಿ ಅವನ ಆರಾಧನೆ, ದಾಸ್ಯ ಮತ್ತು ಅನುಸರಣೆ ಮಾಡಲು ಸಿದ್ಧನಾಗುತ್ತಾನೆಯೇ ಅಥವಾ ತನ್ನ ಭ್ರಷ್ಟ ಚಿತ್ತದ ಪ್ರೇರಣೆಗಳಿಗೆ ಬಲಿಯಾಗಿ ಸ್ವೇಚ್ಛಾ ವಿಹಾರಿಯಾಗಿ ಜೀವಿಸುತ್ತಾನೆಯೇ ಎಂಬುದನ್ನು ಪರೀಕ್ಷಿಸುವ ತಾಣವಿದು. ಆತನು ದೇವ ಪ್ರವಾದಿಗಳ ಶಿಕ್ಷಣಗಳನ್ನು ಅರಿತು ಅವುಗಳನ್ನು ಮೈಗೂಡಿಸಿಕೊಂಡು ಜೀವಿಸುತ್ತಾನೋ ಅಥವಾ ಶೈತಾನನ ಜಾಲಗಳಿಗೆ ಸಿಲುಕಿ ಆತನ ಅನುಸರಣೆಯಲ್ಲಿ ಜೀವಿಸುತ್ತಾನೋ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಆತನು ತನ್ನ ಸೃಷ್ಟಿಕರ್ತನ ಇಷ್ಟಾನಿಷ್ಟಗಳನ್ನರಿತು ಅವುಗಳಿಗೆ ಬದ್ಧವಾಗಿ ಜೀವನ ಸಾಗಿಸಲು ಸಿದ್ಧನಾಗುತ್ತಾನೋ ಅಥವಾ ಮಾನವ ನಿರ್ಮಿತ ಸಿದ್ಧಾಂತಗಳಿಗೆ ಮರುಳಾಗುತ್ತಾನೋ ಎಂಬುದನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ. ಪರಸ್ಪರ ವಿರುದ್ಧವಾದ ಈ ಎರಡು ಮಾರ್ಗಗಳನ್ನು ಅಲ್ಲಾಹನು ಮನುಷ್ಯನ ಮುಂದೆ ತೆರೆದಿಟ್ಟಿರುವನು. ಅವುಗಳ ಪೈಕಿ ಮನುಷ್ಯನು ಯಾವ ಮಾರ್ಗವನ್ನು ಆರಿಸಿಕೊಳ್ಳುವನೋ ಅದರಲ್ಲಿ ನಡೆಯಲುಬೇಕಾದ ಎಲ್ಲ ಅನುಕೂಲತೆಗಳನ್ನು ಒದಗಿಸಿ ಕೊಡಲಾಗುತ್ತದೆ. ಪವಿತ್ರ ಕುರ್‍ಆನ್ ಮನುಷ್ಯ ಜೀವನದ ಈ ವಾಸ್ತವಿಕತೆಯನ್ನು ಅನೇಕ ಕಡೆ ವಿವರಿಸಿದೆ. ಆ ಪೈಕಿ ಕೆಲವು ಸೂಕ್ತಗಳನ್ನು ಮಾತ್ರ ಇಲ್ಲಿ ಉದಾಹರಣೆಗಾಗಿ ಕೊಡಲಾಗುತ್ತಿದೆ:
  "ನಾವು ಅವನಿಗೆ ಮಾರ್ಗದರ್ಶನ ಮಾಡಿದೆವು. ಅವನು ಕೃತಜ್ಞತೆ ಸಲ್ಲಿಸುವವನಾಗಲಿ ಅಥವಾ ಕೃತಫ್ನನಾಗಲಿ." (ಪವಿತ್ರ ಕುರ್‍ಆನ್, 76:3)
  "ನಿಮ್ಮನ್ನು ಪರೀಕ್ಷಿಸಿ ನಿಮ್ಮ ಪೈಕಿ ಯಾರು ಸತ್ಕರ್ಮವೆಸಗುವವನೆಂದು ನೋಡಲಿಕ್ಕಾಗಿ ಅವನು ಜೀವನವನ್ನೂ ಮರಣವನ್ನೂ ಆವಿಷ್ಕರಿಸಿದನು." (ಪವಿತ್ರ ಕುರ್‍ಆನ್, 67:2)
  "ಅವನಿಗೆ ಎರಡು ಸುಸ್ಪಷ್ಟ ದಾರಿಗಳನ್ನು ತೋರಿಸಿ ಕೊಡಲಿಲ್ಲವೇ?" (ಪವಿತ್ರ ಕುರ್‍ಆನ್, 9೦:1೦)

  ಐಹಿಕ ಜೀವನದ ವಾಸ್ತವಿಕತೆ
  ಪವಿತ್ರ ಕುರ್‍ಆನಿನ ಪ್ರಕಾರ ಮನುಷ್ಯನ ಇಹಲೋಕ ಜೀವನವು ಆತನ ಪ್ರಥಮ ಜೀವನವಾಗಿದ್ದು ಪರೀಕ್ಷಾರ್ಥವಾಗಿರುವ ಈ ಇಹಜೀವನವು ಮರಣದೊಂದಿಗೆ ಕೊನೆಗೊಳ್ಳುತ್ತದೆ. ಒಂದು ದಿನ ಈ ಸಂಪೂರ್ಣ ವಿಶ್ವವ್ಯವಸ್ಥೆಯು ಅಸ್ತವ್ಯಸ್ತಗೊಂಡು ಸಂಪೂರ್ಣವಾಗಿ ನಾಶಗೊಳಿಸಲ್ಪಡುವುದು. ಮನುಷ್ಯ ಸಮೇತ ಭೂಮುಖದ ಮೇಲಿರುವ ಎಲ್ಲ ಜೀವಿಗಳು ಸಾವನ್ನಪ್ಪುವರು. ಆ ಬಳಿಕ ಅಲ್ಲಾಹನು ಒಂದು ಹೊಸ ವಿಶ್ವ ವ್ಯವಸ್ಥೆಯನ್ನು ಹೊಸ ನಿಯಮಾವಳಿಗಳೊಂದಿಗೆ ಸೃಷ್ಟಿಸುವನು. ಅದುವೇ ಪರಲೋಕ. ಭೂಮುಖದ ಮೇಲೆ ಪ್ರಥಮ ಮಾನವನಿಂದಾರಂಭಿಸಿ ಪ್ರಳಯ ಕಾಲದ ತನಕ ಹುಟ್ಟಿ ಮರಣ ಹೊಂದಿದ ಪ್ರತಿಯೊಬ್ಬ ಮನುಷ್ಯನನ್ನೂ ಅಂದು ಅಲ್ಲಾಹನು ಪುನಃ ಜೀವಂತಗೊಳಿಸುವನು. ಎಲ್ಲ ಮನುಷ್ಯರೂ ತಮ್ಮ ಸೃಷ್ಟಿಕರ್ತನಾದ ಅಲ್ಲಾಹನ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಹಾಜರುಗೊಳಿಸಲ್ಪಡುವರು. ಆ ಮಹಾ ನ್ಯಾಯಾಧೀಶನ ನ್ಯಾಯಾಲಯದಲ್ಲಿ ಮನುಷ್ಯನು ತನ್ನ ಎಲ್ಲ ಆಚಾರ-ವಿಚಾರ ಮತ್ತು ಸತ್ಕರ್ಮ-ದುಷ್ಕರ್ಮಗಳ ಜತೆ ಹಾಜರಾಗುವನು. ಅವನ ಯಾವ ಕರ್ಮವೂ ಯಾವ ವಿಚಾರವೂ ಯಾವ ಸಂಕಲ್ಪವೂ ಅಲ್ಲಾಹನಿಂದ ಮರೆಯಾಗಿರ ಲಾರದು. ಅಲ್ಲಿ ತೀರ್ಮಾನವು ಮನುಷ್ಯನ ವಿಚಾರ ಮತ್ತು ವಿಶ್ವಾಸ ಹಾಗೂ ಆಚಾರ ಮತ್ತು ಕರ್ಮಗಳ ಆಧಾರದಲ್ಲಾಗುವುದು. ಆ ನಿರ್ಣಾಯಕ ದಿನದ ಅಧಿಪತಿಯೂ ಸರ್ವಶ್ರೇಷ್ಠ ನ್ಯಾಯಾಧೀಶನೂ ಆದ ಅಲ್ಲಾಹನು ಮನುಷ್ಯರ ಮಧ್ಯೆ ಅತ್ಯಂತ ನ್ಯಾಯಪೂರ್ಣವಾಗಿ ತೀರ್ಮಾನಿಸುವನು.

  ಪರಲೋಕ ಜೀವನದ ವಾಸ್ತವಿಕತೆ
  ಇಲ್ಲಿ ಸತ್ಯದ ಮೇಲೆ ವಿಶ್ವಾಸವಿರಿಸುತ್ತಾ ಸತ್ಕರ್ಮಗಳನ್ನು ಮಾಡುತ್ತಾ ಜೀವಿಸಿದವನು ಆ ನಿರ್ಣಾಯಕ ದಿನದಂದು ವಿಜಯಿಯಾಗುವನು, ಮೋಕ್ಷ ಹೊಂದುವನು ಮತ್ತು ಅನುಗ್ರಹಭರಿತ ಸ್ವರ್ಗದ ಶಾಶ್ವತ ನಿವಾಸಿಯಾಗುವನು. ಅಲ್ಲಿ ಅವನಿಗೆ ಯಾವ ಕಣ್ಣೂ ನೋಡಿರದ, ಯಾವ ಕಿವಿಯೂ ಕೇಳಿರದ, ಯಾವ ನಾಲಗೆಯೂ ಸವಿದಿರದ, ಯಾವ ಬುದ್ದಿಯೂ ಯೋಚಿಸಿರದಂತಹ ಎಲ್ಲ ಸುಖ ಸೌಭಾಗ್ಯಗಳು ಲಭ್ಯವಾಗುವುವು. ಅಲ್ಲಿ ಕಾಯಿಲೆಯಾಗಲೀ ಮುಪ್ಪಾಗಲೀ ಮರಣವಾಗಲೀ ಮನುಷ್ಯನಿಗೆ ಬಾರದು. ಅಲ್ಲಿ ಮನುಷ್ಯನು ತಾನು ಬಯಸಿದ್ದೆಲ್ಲವನ್ನೂ ಪಡೆಯುವನು. ಶಾಶ್ವತ ಐಶ್ವರ್ಯ, ಶಾಶ್ವತ ಯೌವನ, ಶಾಶ್ವತ ಆರೋಗ್ಯ ಮತ್ತು ಶಾಶ್ವತ ಜೀವನ ಅವನಿಗೆ ಅಲ್ಲಿ ಪ್ರಾಪ್ತವಾಗುವುದು. ಯಾವ ಚಿಂತೆಯೂ ಅವನನ್ನು ಕಾಡದು, ಯಾವ ಭಯವೂ ಅವನ ಬಳಿ ಸುಳಿಯದು.
  ಜೀವನವನ್ನು ಮಿಥ್ಯ ವಿಚಾರಗಳು ಮತ್ತು ದುರಾಚಾರಗಳಲ್ಲಿ ಕಳೆದವನು ಆ ನಿರ್ಣಾಯಕ ನ್ಯಾಯಾಲಯದಲ್ಲಿ ಕಠಿಣ ಶಿಕ್ಷೆಗೆ ಗುರಿಯಾಗುವನು. ಅವನ ದುರ್ವಿಚಾರ ಮತ್ತು ದುರಾಚಾರಗಳಿಗೆ ಅನುಗುಣವಾದ ಶಿಕ್ಷೆಯನ್ನು ಅವನು ನರಕದಲ್ಲಿ ಅನುಭವಿಸುವನು. ಯಾವ ಶಿಪಾರಸೂ ಅವನನ್ನು ಅದರಿಂದ ರಕ್ಷಿಸಲಾರದು. ಯಾವನ ವಕಾಲತ್ತೂ ಅವನಿಗೆ ಫಲಕಾರಿಯಾಗದು. ಲಂಚವಾಗಲೀ ಪರಿಹಾರ ಧನವಾಗಲೀ ಅಲ್ಲಾಹನ ನ್ಯಾಯಾಲಯದಲ್ಲಿ ಸ್ವೀಕರಿಸಲ್ಪಡದು. ದೇವನ ಹೊರತು ಅವನು ಯಾರ್ಯಾರಲ್ಲಿ ನಂಬಿಕೆಯಿಟ್ಟು ಕರೆದು ಪ್ರಾರ್ಥಿಸುತ್ತಿದ್ದನೋ, ಯಾರ್ಯಾರಲ್ಲಿ ಭರವಸೆಯಿಟ್ಟು ಅವನು ಜೀವನದಲ್ಲಿ ಸ್ವೇಚ್ಛಾವಿಹಾರಿಯಾಗಿ ವರ್ತಿಸಿದ್ದನೋ, ಯಾರ್ಯಾರ ಆರಾಧನೆ ಉಪಾಸನೆಗಳಲ್ಲಿ ಅವನು ಮೋಕ್ಷ ವನ್ನು ಅರಸಿದ್ದನೋ, ಅವೆಲ್ಲವೂ ಮಿಥ್ಯವೆಂದು ಅವನಿಗೆ ಮನವರಿಕೆಯಾಗುವುದು. ಯಾರಿಗಾಗಿ ಮನುಷ್ಯನು ಜೀವನದಲ್ಲಿ ಎಲ್ಲ ನಿಷಿದ್ಧ ಮಾರ್ಗಗಳಿಂದ ಸಂಪಾದಿಸಿದ್ದನೋ ಆ ತಂದೆ ತಾಯಿಗಳಾಗಲೀ ಮಡದಿ ಮಕ್ಕಳಾಗಲೀ ಬಂಧು, ನೆಂಟರಿಷ್ಟರಾಗಲಿ ಯಾರೂ ಅಂದು ಅವನ ನೆರವಿಗೆ ಬರಲಾರರು. ನರಕಾಗ್ನಿಯ ಘೋರ ಯಾತನೆಯಿಂದ ಅವನನ್ನು ರಕ್ಷಿಸಲಾರರು.
  ಈ ಬಗ್ಗೆ ಪವಿತ್ರ ಕುರ್‍ಆನ್ ಹೀಗೆನ್ನುತ್ತದೆ:
  "ಅಂದು ಮನುಷ್ಯನು ದೂರ ಓಡುವನು- ತನ್ನ ಸಹೋದರನಿಂದ- ತನ್ನ ತಾಯಿಯಿಂದ ಮತ್ತು ತನ್ನ ತಂದೆಯಿಂದ- ತನ್ನ ಪತ್ನಿಯಿಂದ ಮತ್ತು ತನ್ನ ಮಕ್ಕಳಿಂದ. ಅವರಲ್ಲಿ ಪ್ರತಿಯೊಬ್ಬನಿಗೂ ಅಂದು, ತನ್ನ ಹೊರತು ಬೇರೆ ಯಾರ ಪ್ರಜ್ಞೆಯೂ ಇಲ್ಲದಂತಹ ಪರಿಸ್ಥಿತಿ ಬಂದೊದಗುವುದು." (ಪವಿತ್ರ ಕುರ್‍ಆನ್, 8೦:34-37)
  "ಜನರೇ ನಿಮ್ಮ ಪ್ರಭುವಿನ ಕ್ರೋಧವನ್ನು ಭಯಪಡಿರಿ. ವಾಸ್ತವದಲ್ಲಿ ಪುನರುತ್ಥಾನದ ಘಳಿಗೆಯ ಮಹಾಕಂಪನವು (ಭಯಾನಕ) ವಿಷಯವಾಗಿದೆ. ನೀವು ಅದನ್ನು ಕಾಣುವಂದು ಹಾಲುಣಿಸುವವಳು ಹಾಲುಣ್ಣುವ ತನ್ನ ಶಿಶುವನ್ನು ಮರೆತು ಬಿಡುವಳು. ಪ್ರತಿಯೊಬ್ಬ ಗರ್ಭಿಣಿಗೆ ಗರ್ಭಪಾತವಾಗಿ ಬಿಡುವುದು. ಜನರು ನಿಮಗೆ ಉನ್ಮತ್ತರಂತೆ ತೋರುವರು. ವಸ್ತುತಃ ಅವರು ಉನ್ಮತ್ತರಾಗಿರಲಾರರು. ನಿಜವಾಗಿ ಅಲ್ಲಾಹನ ಯಾತನೆಯೇ ಅಷ್ಟು ಭೀಕರವಾಗಿರುವುದು." (ಪವಿತ್ರ ಕುರ್‍ಆನ್, 22:1-2)
  "ಭೂಮಿಯು ತನ್ನ ಸಂಪೂರ್ಣ ಉಗ್ರತೆಯೊಂದಿಗೆ ಕುಲುಕಲ್ಪಡುವಾಗ, ಭೂಮಿಯು ತನ್ನೊಳಗಿನ ಸಕಲ ಹೊರೆಗಳನ್ನೂ ಹೊರ ಹಾಕಿ ಬಿಡುವಾಗ- ಮತ್ತು ಮನುಷ್ಯನು 'ಇದಕ್ಕೇನಾಗುತ್ತಿದೆ?' ಎನ್ನುವಾಗ, ಅಂದು ಅದು ತನ್ನ (ಮೇಲೆ ಗತಿಸಿದ) ಸ್ಥಿತಿಗತಿಗಳನ್ನು ವಿವರಿಸುವುದು- ಏಕೆಂದರೆ ನಿನ್ನ ಪ್ರಭು ಅದಕ್ಕೆ (ಹಾಗೆ ಮಾಡಬೇಕೆಂದು) ಅಪ್ಪಣೆ ಕೊಟ್ಟಿರುವನು. ಅಂದು ಜನರು ವಿಭಿನ್ನ ಸ್ಥಿತಿಗಳಲ್ಲಿ ಮರಳುವರು. (ಇದು) ಅವರ ಕರ್ಮಗಳು ಅವರಿಗೆ ತೋರಿಸಲ್ಪಡಲಿಕ್ಕಾಗಿ, ತರುವಾಯ ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿ ದವನು ಅದನ್ನು ಕಂಡೇ ತೀರುವನು. ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು." (ಪವಿತ್ರ ಕುರ್‍ಆನ್, 99:1-8)

  ಮಾನವ ಹುಟ್ಟು ಪಾಪಿಯಲ್ಲ
  ಮೇಲಿನ ವಿವರಗಳಿಂದ ಇಹಲೋಕ ಜೀವನ ಮತ್ತು ಪರಲೋಕದ ಕುರಿತು ಇಸ್ಲಾಮಿನ ಕಲ್ಪನೆಗಳ ಸ್ಥೂಲ ಪರಿಚಯವಾಯಿತು. ಈ ಕಲ್ಪನೆಯಲ್ಲಿ ಮಾನವನು ಜನ್ಮತಃ ಪಾಪಿಯಾಗಿದ್ದಾನೆ ಎಂಬುದಕ್ಕೆ ಯಾವ ಸ್ಥಾನವೂ ಇಲ್ಲ. ಎಲ್ಲಾ ಮನುಷ್ಯರು ಜನ್ಮತಃ ಸೃಷ್ಟಿಕರ್ತನಾದ ಅಲ್ಲಾಹನ ಮೂಲ ಪ್ರಕೃತಿಯಲ್ಲಿ ಸೃಷ್ಟಿಸಲ್ಪಡುತ್ತಾರೆ. ನಿಷ್ಕಳಂಕವಾದ ಬೌದ್ದಿಕ ಮತ್ತು ಶಾರೀರಿಕ ಸಾಮರ್ಥ್ಯಗಳೊಂದಿಗೆ ಅವನನ್ನು ಸೃಷ್ಟಿಸಲಾಗಿದೆ. ಅವನು ಜನ್ಮತಃ ಪಾಪಿಯೋ ಪುಣ್ಯವಂತನೋ ಆಗಿರದೆ ಬೆಳೆದು ಪ್ರೌಢನಾದ ಬಳಿಕ ಇರಿಸಿಕೊಳ್ಳುವ ವಿಶ್ವಾಸ-ನಂಬಿಕೆಗಳು, ವಿಚಾರ-ಶ್ರದ್ಧೆಗಳು, ಆಚಾರ-ಸಂಪ್ರದಾಯಗಳು ಮತ್ತು ಕೃತಿ-ಕರ್ಮಗಳ ಆಧಾರದಲ್ಲೇ ಪಾಪ ಪುಣ್ಯಗಳನ್ನು ಕಟ್ಟಿಕೊಳ್ಳುತ್ತಾನೆ.
  ಮಾನವಕುಲದ ಆದಿಪಿತರಾದ ಆದಮ್‍ರವರು(ಅ) ಸ್ವರ್ಗದಲ್ಲಿ ಮಾಡಿದ ಒಂದು ತಪ್ಪಿಗಾಗಿ ಅವರನ್ನು ಶಿಕ್ಷಾರೂಪದಲ್ಲಿ ಧರೆಗಿಳಿಸಲಾಯಿತೆಂಬ ನಂಬಿಕೆಯನ್ನೂ ಆದಮ್‍ರ(ಅ) ಸಂತತಿಗಳ ಪಾಪದ ಪ್ರಾಯಶ್ಚಿತ್ತಕ್ಕಾಗಿ ಪ್ರವಾದಿ ಈಸಾರನ್ನು[ಏಸುಕ್ರಿಸ್ತ](ಅ) ದೇವನು ಶಿಲುಬೆಗೇರಿಸಿದನೆಂಬ ವಿಶ್ವಾಸವನ್ನೂ ಇಸ್ಲಾಮ್ ಖಂಡಿಸುತ್ತದೆ. ಆದುದರಿಂದ ಕೇವಲ ಒಬ್ಬ ಪ್ರವಾದಿಯನ್ನು ದೇವಪುತ್ರನೆಂದು ನಂಬಿದ ಮಾತ್ರಕ್ಕೆ ಜನರ ಎಲ್ಲ ಪಾಪಗಳಿಗೂ ಪ್ರಾಯಶ್ಚಿತ್ತವಾಗಿ ಬಿಡುತ್ತದೆ ಎಂಬ ಮಿಥ್ಯ ಕಲ್ಪನೆಗೆ ಇಸ್ಲಾಮಿನಲ್ಲಿ ಆಸ್ಪದವೇ
  ಇಲ್ಲ. ಆದಮ್‍ರವರು(ಅ) ಸೃಷ್ಟಿಸಲ್ಪಟ್ಟಿದ್ದೇ ಭೂಮುಖದ ಮೇಲೆ ಅಲ್ಲಾಹನ ಪ್ರತಿನಿಧಿಯಾಗಿ ಕಳುಹಿಸಲ್ಪಡಲಿಕ್ಕಾಗಿ ಎಂದು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸುತ್ತದೆ. ಮನುಷ್ಯರ ಸೃಷ್ಟಿಗೆ ಮುಂಚೆ ಸೃಷ್ಟಿಕರ್ತನು ತನ್ನ ದೇವಚರರನ್ನು ಉದ್ದೇಶಿಸಿ ಹೀಗೆ ಹೇಳಿರುವುದಾಗಿ ಪವಿತ್ರ ಕುರ್‍ಆನ್ ಉಲ್ಲೇಖಿಸಿದೆ:
  "ನಿಮ್ಮ ಪ್ರಭುವು ಮಲಾಯಿಕಃ(ದೇವಚರ)ರೊಡನೆ, "ನಾನು ಭೂಮಿಯಲ್ಲಿ ಒಬ್ಬ ಖಲೀಫಃನನ್ನು (ಪ್ರತಿನಿಧಿ) ನೇಮಿಸಲಿದ್ದೇನೆ" ಎಂದು ಹೇಳಿದ ಸಂದರ್ಭವನ್ನು ಕೊಂಚ ಊಹಿಸಿರಿ." (ಪವಿತ್ರ ಕುರ್‍ಆನ್, 2:3೦)
  ಮನುಷ್ಯನನ್ನು ಭೂಮಿಗೆ ಕಳುಹಿಸುವಾಗ ಜೀವನದ ವಾಸ್ತವಿಕತೆಯನ್ನು ಮತ್ತು ದೇವ ಮಾರ್ಗದರ್ಶನದ ಅನುಸರಣೆಯ ಅಗತ್ಯವನ್ನು ಆತನಿಗೆ ಈ ರೀತಿ ಬೋಧಿಸಲಾಗಿತ್ತು:
  "ನೀವೆಲ್ಲರೂ ಇಲ್ಲಿಂದ ಹೊರಗಿಳಿಯಿರಿ. ಮುಂದೆ ನನ್ನ ಕಡೆಯಿಂದ ಮಾರ್ಗದರ್ಶನವು ನಿಮ್ಮ ಬಳಿ ಬಂದಾಗ, ಯಾರು ಆ ಮಾರ್ಗದರ್ಶನದಂತೆ ನಡೆಯುವರೋ ಅವರಿಗೆ ಯಾವುದೇ ಭಯ ಮತ್ತು ಚಿಂತೆ ಇರಲಾರದು. ಆ ಮಾರ್ಗದರ್ಶನವನ್ನು ಮಾನ್ಯಮಾಡಲು ನಿರಾಕರಿಸುವವರೂ ನಮ್ಮ 'ದೃಷ್ಟಾಂತ'ಗಳನ್ನು ಸುಳ್ಳಾಗಿಸುವವರೂ ನರಕಾಗ್ನಿಯಲ್ಲಿ ಬೀಳುವವರಾಗಿದ್ದು ಅಲ್ಲಿ ಅವರು ಸದಾ ಕಾಲವೂ ಇರುವರು." (ಪವಿತ್ರ ಕುರ್‍ಆನ್, 2:38-39)

 • ಝಕಾತ್: ಧನಿಕರ ಸೊತ್ತಿನಲ್ಲಿರುವ ಬಡವರ ಹಕ್ಕು?
  ismika30-10-2014

  ಝಕಾತ್ ಸಂಪತ್ತಿನ ಮೂಲಕ ನಡೆಸುವ ಆರಾಧನೆ. ಪ್ರತಿಯೊಬ್ಬ ಸ್ಥಿತಿವಂತ ಮುಸ್ಲಿಮನೂ ತನ್ನ ಸೊತ್ತು-ಸಂಪತ್ತುಗಳ ಒಂದಂಶವನ್ನು ಪ್ರತಿವರ್ಷ ಬಡಬಗ್ಗರಿಗೆ, ದೀನದಲಿತರಿಗೆ, ಸಾಲದಲ್ಲಿ ಮುಳುಗಿದವರಿಗೆ, ಪ್ರಯಾಣಿಕರಿಗೆ, ಧರ್ಮ ಸಂಸ್ಥಾಪನೆಯ ಕಾರ್ಯಗಳಿಗೆ ಕಡ್ಡಾಯವಾಗಿ ನೀಡಬೇಕು.
  ವರ್ಷಾಂತ್ಯದಲ್ಲಿ ಒಬ್ಬ ಸ್ಥಿತಿವಂತ ಮುಸ್ಲಿಮನ ಬಳಿಯಿರುವ ನಗದು, ವ್ಯಾಪಾರ ಸರಕು, ಬೆಳ್ಳಿ, ಬಂಗಾರಗಳು ಇತ್ಯಾದಿಗಳ ನಲ್ವತ್ತನೇ ಒಂದಂಶವನ್ನು ಝಕಾತ್ ನೀಡಬೇಕು. ಕೃಷಿ ಉತ್ಪನ್ನಗಳಿಂದ ಹತ್ತನೇ ಒಂದಂಶವನ್ನೂ ಕೃತಕ ನೀರಾವರಿಯಿಂದಾದ ಕೃಷಿ ಉತ್ಪನ್ನಗಳ ಇಪ್ಪತ್ತನೇ ಒಂದಂಶವನ್ನೂ ಝಕಾತ್ ನೀಡಬೇಕು.
  ಝಕಾತ್ ಒಂದು ದಾನವಾಗಲೀ ಭಿಕ್ಷೆಯಾಗಲೀ ಅಲ್ಲ. ಅದು ಬಡವರ ಹಕ್ಕಾಗಿದೆ. ಇದನ್ನು ಪವಿತ್ರ ಕುರ್‍ಆನ್ ಅನೇಕ ಕಡೆ ಸ್ಪಷ್ಟಪಡಿಸಿದೆ. ಅವುಗಳ ಪೈಕಿ ಒಂದನ್ನು ಮಾತ್ರ ಇಲ್ಲಿ ಉಲ್ಲೇಖಿಸುತ್ತೇವೆ:
  "ಅವರ ಸಂಪತ್ತುಗಳಲ್ಲಿ ಒಂದು ನಿಶ್ಚಿತ ಹಕ್ಕಿದೆ. ಬೇಡುವವನಿಗೆ ಮತ್ತು ವಂಚಿತನಿಗೆ." (ಪವಿತ್ರ ಕುರ್ ಆನ್ : 7೦:24-25)

  ಒಂದು ಇಸ್ಲಾವಿೂ ಸರಕಾರವಿರುವ ಕಡೆ ಧನಿಕರಿಂದ ಝಕಾತನ್ನು ಸಂಗ್ರಹಿಸುವ ಮತ್ತು ಬಡವರಲ್ಲಿ ಅದನ್ನು ವಿತರಿಸುವ ಕಾರ್ಯವನ್ನು ಸರಕಾರವೇ ಮಾಡಬೇಕು. ಇಸ್ಲಾವಿೂ ಸರಕಾರವಿಲ್ಲದಿರುವಲ್ಲಿ ಮುಸ್ಲಿಮರು ಝಕಾತನ್ನು ಸಾಧ್ಯವಿರುವಲ್ಲಿ ಸಾಮೂಹಿಕವಾಗಿ ಸಂಗ್ರಹಿಸುವ ಮತ್ತು ವಿತರಿಸುವ ವ್ಯವಸ್ಥೆ ಮಾಡುತ್ತಾರೆ. ಉಳಿದೆಡೆ ಧನಿಕರು ಸ್ವಯಂ ಅದರ ವಿತರಣೆಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕು.

  ಝಕಾತನ್ನು ದಾನದ ರೂಪದಲ್ಲಿ ನೀಡುವುದು ಮತ್ತು ಅದಕ್ಕಾಗಿ ಬಡವರು ತಮ್ಮ ಮನೆ ಬಾಗಿಲಿಗೆ ಬರುವಂತೆ ಮಾಡುವುದು ಇಸ್ಲಾಮಿನ ಶಿಕ್ಷಣಕ್ಕೆ ವಿರುದ್ಧವಾಗಿದೆ. ಅದು ಝಕಾತ್ ಹಣದ ವಿತರಣೆಯ ಹೊಣೆಯನ್ನು ಧನಿಕರ ಮೇಲೆಯೇ ಹೊರಿಸುತ್ತದೆ ಮತ್ತು ಅರ್ಹ ಬಡವರನ್ನು ಗುರುತಿಸಿ ಅದನ್ನು ತಲುಪಿಸುವಂತೆ ಅವರಿಗೆ ಆಜ್ಞಾಪಿಸುತ್ತದೆ.

  ಭಿಕ್ಷಾಟನೆಯನ್ನು ಇಸ್ಲಾಮ್ ಅತ್ಯುಗ್ರವಾಗಿ ಖಂಡಿಸಿದೆ. ಕೊಡುವ ಕೈಯು ಪಡೆಯುವ ಕೈಗಿಂತ ಉತ್ತಮವಾದುದೆಂದು ಪ್ರವಾದಿ(ಸ) ಹೇಳಿರುವರು. ಹಾಗೆಯೇ ಬೇಡುವುದನ್ನು ವೃತ್ತಿಯಾಗಿಸಿಕೊಂಡವನು ನಿರ್ಣಾಯಕ ದಿನದಂದು ಮುಖದ ಮೇಲೆ ಚರ್ಮವಿಲ್ಲದ ಸ್ಥಿತಿಯಲ್ಲಿ ಅಲ್ಲಾಹನ ಮುಂದೆ ಹಾಜರಾಗುವನೆಂದೂ ಪ್ರವಾದಿ(ಸ) ಎಚ್ಚರಿಸಿರುವರು. ಬಡವರನ್ನು ಮನೆ ಬಾಗಿಲಲ್ಲಿ ಸೇರಿಸಿ ಅವರಿಗೆ ಝಕಾತ್ ವಿತರಣೆ ಮಾಡುವುದರಲ್ಲಿ ತೃಪ್ತಿ ಕಾಣುವವರು ಪ್ರವಾದಿ ಮುಹಮ್ಮದ್‍ರವರ(ಸ) ಆದೇಶಗಳಿಗೆ ವಿರುದ್ಧ ವರ್ತಿಸುತ್ತಿದ್ದಾರೆ. ಮಾತ್ರವಲ್ಲ ಬಡವರ ಆತ್ಮ ಗೌರವವನ್ನು ಕಸಿಯುವ ಮೂಲಕ ಒಂದು ಘೋರ ಅಪರಾಧವನ್ನೂ ಎಸಗುತ್ತಿದ್ದಾರೆ.

 • ಹಜ್ಜ್: ವಿಶ್ವ ಭ್ರಾತೃತ್ವ ಸಮ್ಮೇಳನ?
  ismika17-11-2014
  ಪ್ರವಾದಿ ಮುಹಮ್ಮದ್(ಸ) ಹೇಳಿರುವರು: ಇಸ್ಲಾಮಿನ ಸೌಧವನ್ನು ಪಂಚ ಬುನಾದಿಗಳ ಮೇಲೆ ಕಟ್ಟಲಾಗಿದೆ. ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದೂ ಮುಹಮ್ಮದ್(ಸ) ಅಲ್ಲಾಹನ ಪ್ರವಾದಿಯಾಗಿರುವರೆಂದೂ ಸಾಕ್ಷ್ಯ ವಹಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು, ರಮಝಾನ್ ತಿಂಗಳ ಉಪವಾಸ ವ್ರತ ಆಚರಿಸುವುದು ಮತ್ತು ಹಜ್ಜ್ ನಿರ್ವಹಿಸುವುದು.
  ಹಜ್ಜ್ ಇಸ್ಲಾಮಿನ ಐದು ಬುನಾದಿ ಅಥವಾ ಸ್ತಂಭಗಳ ಪೈಕಿ ಒಂದಾಗಿದೆ  ಎಂಬುದು ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ. ನಮಾಝ್, ಝಕಾತ್ ಮತ್ತು ಉಪವಾಸ ವ್ರತದಂತೆಯೇ ಹಜ್ಜ್ ಕೂಡಾ ಒಂದು ಕಡ್ಡಾಯ ಆರಾಧನಾ ವಿಧಿಯಾಗಿದೆ.
  ಆರ್ಥಿಕವಾಗಿಯೂ ದೈಹಿಕವಾಗಿಯೂ ಸಾಮರ್ಥ್ಯವುಳ್ಳ ಪ್ರತಿಯೊಬ್ಬ ವಯಸ್ಕ ಮುಸ್ಲಿಮ್ ಸ್ತ್ರೀ-ಪುರುಷರ ಮೇಲೆ ಜೀವನದಲ್ಲಿ ಒಮ್ಮೆ ಹಜ್ಜ್ ನಿರ್ವಹಿಸುವುದು ಕಡ್ಡಾಯವಾಗಿದೆ.
  ಅರೇಬಿಯಾದ ಮಕ್ಕಾ ಪಟ್ಟಣವನ್ನು ಸಂದರ್ಶಿಸಿ ಅಲ್ಲಿರುವ ಕಅಬಾ ಭವನಕ್ಕೆ ಏಳು ಬಾರಿ ಪ್ರದಕ್ಷಿಣೆ ಬರುವುದು, ಕಅಬಾ ಭವನದ ಬಳಿಯಲ್ಲೇ ಇರುವ ಸಫಾ ಮತ್ತು ಮರ್ವಾ ಎಂಬ ಬೆಟ್ಟಗಳ ಮಧ್ಯೆ ಏಳು ಬಾರಿ ನಡೆದಾಡುವುದು, ಮಕ್ಕಾದ ಪರಿಸರದಲ್ಲಿರುವ ಮಿನಾ, ಅರಫಾತ್ ಮತ್ತು ಮುಝ್ದಲಿಫಾಗಳಲ್ಲಿ ನಿರ್ದಿಷ್ಟ ದಿನಗಳಲ್ಲಿ ತಂಗಿ ಅಲ್ಲಾಹನ ಸ್ತುತಿ-ಸ್ತೋತ್ರ  ಮತ್ತು ಪ್ರಾರ್ಥನೆಗಳಲ್ಲಿ ನಿರತರಾಗಿರುವುದು, ಇವಿಷ್ಟು ಹಜ್ಜ್ ಕರ್ಮದ ಪ್ರಮುಖ ಪ್ರತ್ಯಕ್ಷ ವಿಧಿಗಳು. ಪ್ರಾಣಿ ಬಲಿಯೂ ಹಜ್ಜ್ ಕಾರ್ಯಗಳಲ್ಲಿ ಸೇರಿದೆ.
  ಪವಿತ್ರ ಕಅಬಾ
  ಕಅಬಾ ಭವನವು ಜಗತ್ತಿನ ಅತ್ಯಂತ ಪುರಾತನ ಮಸೀದಿಯಾಗಿದೆ. ಅದನ್ನು ಅಲ್ಲಾಹನ ಆಜ್ಞೆಯ ಪ್ರಕಾರ ಪ್ರವಾದಿ ಇಬ್ರಾಹೀಮ್(ಅ) ಮತ್ತವರ ಪುತ್ರ ಪ್ರವಾದಿ ಇಸ್ಮಾಈಲ್(ಅ) ಸುಮಾರು 4 ಸಾವಿರ ವರ್ಷಗಳ ಹಿಂದೆ ನಿರ್ಮಿಸಿದರು. ಹಜ್ಜ್ ಕರ್ಮವೂ ಕಅಬಾ ಭವನದಷ್ಟೇ ಪುರಾತನವಾದ ಒಂದು ಆರಾಧನಾ ವಿಧಿಯಾಗಿದೆ. ಕಅಬಾ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಾಗ ಅಲ್ಲಾಹನು ಪ್ರವಾದಿ ಇಬ್ರಾಹೀಮ್‍ರವರಿಗೆ(ಅ) ಜನರನ್ನು ಆ ಭವನದೆಡೆಗೆ ಆಹ್ವಾನಿಸಲು ಆಜ್ಞಾಪಿಸಿದನು. ಅಂತೆಯೇ ಅವರು ಜನರನ್ನು ಆ ಪವಿತ್ರ ಭವನದ ಹಜ್ಜ್ ನಿರ್ವಹಿಸಲು ಆಹ್ವಾನಿಸಿದರು. ಅಂದಿನಿಂದ ಈ ತನಕ ಆ ಕರೆಗೆ ಓ ಗೊಡುತ್ತಾ ಜಗತ್ತಿನ ದಶದಿಕ್ಕುಗಳಿಂದಲೂ ಜನರು ಪ್ರತಿವರ್ಷ ಚಾಂದ್ರಮಾನ ವರ್ಷದ ದುಲ್‍ಹಜ್ಜ್ ತಿಂಗಳಲ್ಲಿ ಆ ಪುಣ್ಯ ಭವನದ ಯಾತ್ರೆ ಕೈಗೊಳ್ಳುತ್ತಿದ್ದಾರೆ.
  ನಾನು ಹಾಜರಿದ್ದೇನೆ!
  ಚಾಂದ್ರಮಾನ ವರ್ಷದ ಕೊನೆಯ ತಿಂಗಳಾದ ದುಲ್‍ಹಜ್ಜ್ ನಲ್ಲಿ ಜಗತ್ತಿನ ಏಕದೇವ ವಿಶ್ವಾಸಿಗಳ ಕೇಂದ್ರವಾದ ಈ ಭವನದಲ್ಲಿ ಒಂದು ವಿಶ್ವ ಸಮ್ಮೇಳನವೇ ಏರ್ಪಡುತ್ತದೆ. ಎಲ್ಲರೂ ಅಲ್ಲಾಹನ ಕರೆಗೆ ಓಗೊಡುತ್ತಾ,
  "ನಾನು ಹಾಜರಿದ್ದೇನೆ, ಅಲ್ಲಾಹನೇ ನಾನು ಹಾಜರಿದ್ದೇನೆ. ನಾನು ಹಾಜರಿದ್ದೇನೆ, ನಿನಗಾರೂ ಭಾಗೀದಾರರಿಲ್ಲ, ನಾನು ಹಾಜರಿದ್ದೇನೆ. ಖಂಡಿತವಾಗಿಯೂ ಸ್ತುತಿಸ್ತೋತ್ರಗಳೂ ಅನುಗ್ರಹಗಳೂ ಆಧಿಪತ್ಯವೂ ನಿನಗೇ ವಿೂಸಲು. ನಿನಗಾರೂ ಭಾಗೀದಾರರಿಲ್ಲ."
  ಎಂಬ ಘೋಷಣೆಯೊಂದಿಗೆ ಮಕ್ಕಾ ಪಟ್ಟಣದತ್ತ ಧಾವಿಸುತ್ತಾರೆ. ಪುರುಷರು ಹೊಲಿಗೆಯಿಲ್ಲದ ಕೇವಲ ಎರಡು ಬಿಳಿ ವಸ್ತ್ರಗಳನ್ನು ಧರಿಸಿರುತ್ತಾರೆ. ಒಂದನ್ನು ಲುಂಗಿಯಂತೆ ಉಟ್ಟುಕೊಂಡು ಇನ್ನೊಂದನ್ನು ಹೆಗಲ ಮೇಲೆ ಹೊದ್ದುಕೊಳ್ಳುತ್ತಾರೆ. ಸ್ತ್ರೀಯರು ಮುಖ ಮತ್ತು ಹಸ್ತಗಳನ್ನು ಬಿಟ್ಟು ಉಳಿದ ದೇಹವನ್ನು ಬಿಳಿ ವಸ್ತ್ರದಿಂದ ಪೂರ್ಣ ಮುಚ್ಚಿಕೊಳ್ಳುತ್ತಾರೆ.
  ಬಿಳಿಯರು, ಕರಿಯರು, ಹಳದಿ ವರ್ಣದವರು, ಅರಬರು, ತುರ್ಕರು, ಭಾರತೀಯರು, ಅಮೇರಿಕಾ, ಆಫ್ರಿಕಾ, ಆಸ್ಟ್ರೇಲಿಯಾ, ಯೂರೋಪ್ ಮತ್ತು ಏಷ್ಯಾ ಖಂಡದವರು. ಜಗತ್ತಿನ ಎಲ್ಲ ಭಾಷೆಗಳನ್ನಾಡುವವರು. ಶ್ರೀಮಂತರು, ಬಡವರು, ರಾಜರು, ರಾಷ್ಟ್ರಾಧ್ಯಕ್ಷರುಗಳು, ಮಂತ್ರಿಗಳು, ಪ್ರಜೆಗಳು, ವಿದ್ಯಾವಂತರು, ಅವಿದ್ಯಾವಂತರು ಎಲ್ಲರೂ ಒಂದೇ ಸಮವಸ್ತ್ರ ಧರಿಸಿ ಒಂದೇ ಘೋಷಣೆಯನ್ನು ಕೂಗುತ್ತಾ ಹಜ್ಜ್ ನ ವಿಧಿ ಕರ್ಮಗಳನ್ನು ನೆರವೇರಿಸುವ ದೃಶ್ಯ ಎಂತಹ ಮನುಷ್ಯನ ಮನಸ್ಸಿನಿಂದಲೂ ಜನಾಂಗೀಯ, ರಾಷ್ಟ್ರೀಯ, ಭಾಷೀಯ, ವಂಶೀಯ, ವರ್ಣೀಯ, ವರ್ಗೀಯ ಮೇಲ್ಮೆಗಳ ಮತ್ತು ಪಕ್ಷಪಾತಗಳ ಮಿಥ್ಯ ಕಲ್ಪನೆಗಳನ್ನು ಕಿತ್ತೆಸೆಯಲು ಪರ್ಯಾಪ್ತವಿದೆ.
  ಲಕ್ಷೋಪಲಕ್ಷ ಜನರು ನೆರೆಯುವ ಈ ವಾರ್ಷಿಕ ಹಜ್ಜ್ ಯಾತ್ರೆಯಲ್ಲಿ ವಾದ್ಯ ಘೋಷಗಳಾಗಲೀ, ಆಡಂಬರದ ಆಚರಣೆಗಳಾಗಲೀ, ಅಪವ್ಯಯದ ಕಂದಾಚಾರಗಳಾಗಲೀ ಇಲ್ಲ. ಯಾವುದೇ ರೀತಿಯ ಜಗಳವಾಗಲೀ, ಗಲಭೆ ಗದ್ದಲವಾಗಲೀ, ಉತ್ಸವ-ಜಾತ್ರೆಗಳಲ್ಲಿ ಸಾಮಾನ್ಯವಾಗಿರುವ ಮನೋರಂಜನಾ ಕಾರ್ಯಕ್ರಮಗಳಾಗಲೀ, ಆಟ ವಿನೋದಗಳಾಗಲೀ ಇಲ್ಲ. ಸಾಂಸ್ಕ್ರತಿಕ ಕಾರ್ಯಕ್ರಮದ ಹೆಸರಲ್ಲಿ ನಡೆಯುವ ನೃತ್ಯ-ಸಂಗೀತಗಳಾಗಲೀ, ಸ್ತ್ರೀ-ಪುರುಷರ ಅನಿರ್ಬಂಧಿತ ಮಿಲನಗಳಾಗಲೀ ಇಲ್ಲಿ ನಡೆಯುವುದಿಲ್ಲ. ಸ್ತ್ರೀಯೂ ಮುಖ ಮತ್ತು ಹಸ್ತಗಳನ್ನು ಬಿಟ್ಟು ದೇಹದ ಉಳಿದ ಎಲ್ಲ ಭಾಗಗಳನ್ನೂ ಉಬ್ಬು-ತಗ್ಗುಗಳು ಗೋಚರಿಸದಂತೆ ಮುಚ್ಚಿಕೊಳ್ಳಬೇಕಾದುದು ಕಅಬಾ ಭವನದೊಳಗೂ ಕಡ್ಡಾಯವಾಗಿದೆ. ಪತಿ-ಪತ್ನಿಯರು ಕೂಡಾ ಪರಸ್ಪರರೊಂದಿಗೆ ಕಾಮಾಸಕ್ತಿಯ ಮಾತು ಕೃತಿಗಳನ್ನು ಪೂರ್ಣವಾಗಿ ವರ್ಜಿಸಬೇಕು.
  ಕಅಬಾ ಪ್ರದಕ್ಷಿಣೆ
  ಕಅಬಾ ಭವನದ ತವಾಫ್ ಹಜ್ಜ್ ಕರ್ಮದ ಒಂದು ಕಡ್ಡಾಯ ವಿಧಿಯಾಗಿದೆ. ಕಅಬಾ ಭವನಕ್ಕೆ ಏಳು ಬಾರಿ ಕಾಲ್ನಡಿಗೆಯಿಂದ ಸುತ್ತು ಬರುವುದಕ್ಕೆ ತವಾಫ್ ಎನ್ನಲಾಗುತ್ತದೆ. ನಾಲ್ಕು ಗೋಡೆಗಳಿರುವ ಈ ಭವನದ ಪ್ರದಕ್ಷಿಣೆಯನ್ನು ಎಲ್ಲಿಂದ ಆರಂಭಿಸಬೇಕೆಂದು ಸೂಚಿಸಲು ಅದರ ಒಂದು ಮೂಲೆಯಲ್ಲಿ ಎರಡು ಗೋಡೆಗಳು ಸೇರುವ ಕಡೆ ಒಂದು ಕರಿಶಿಲೆಯನ್ನು ಆಳೆತ್ತರದಲ್ಲಿ ಗೋಡೆಗೆ ಜೋಡಿಸಿ ಇಡಲಾಗಿದೆ. ಇದನ್ನು 'ಹಜರುಲ್ ಅಸ್ವದ್' ಎನ್ನುತ್ತಾರೆ. 'ಕಪ್ಪು ಕಲ್ಲು' ಎಂಬುದೇ 'ಹಜರುಲ್‍ಅಸ್ವದ್'ನ ಅರ್ಥ. ಆ ಕಪ್ಪು ಶಿಲೆಯು ಪ್ರವಾದಿ ಇಬ್ರಾಹೀಮ್(ಅ) ನಿರ್ಮಿಸಿದ ಕಅಬಾ ಭವನದ ಒಂದು ಭಾಗವಾಗಿತ್ತು. ಇಂದಿನ ತನಕವೂ ಅದನ್ನು ಉಳಿಸಿಕೊಳ್ಳಲಾಗಿದೆ. ಒಂದು ತವಾಫ್ ಆಗಬೇಕಾದರೆ ಏಳು ಸಲ ಪ್ರದಕ್ಷಿಣೆ  ಬರಬೇಕು. ಒಂದು ಪ್ರದಕ್ಷಿಣೆಯು 'ಹಜರುಲ್ ಅಸ್ವದ್'ನಿಂದ ಆರಂಭಗೊಂಡು ಅಲ್ಲಿಗೇ ಕೊನೆಗೊಳ್ಳುತ್ತದೆ. ತೀವ್ರ ಜನಸಂದಣಿಯಲ್ಲಿಯೂ ಪ್ರದಕ್ಷಿಣೆಯ ಆರಂಭ ಮತ್ತು ಅಂತ್ಯ ತಿಳಿಯುವಂತಾಗಲು ಪ್ರತಿಸಲ ಪ್ರದಕ್ಷಿಣೆ ಬರುವಾಗ 'ಹಜರುಲ್ ಅಸ್ವದ್' ಅನ್ನು ಚುಂಬಿಸಬೇಕು ಅಥವಾ ಅದರೆಡೆಗೆ ಕೈಸನ್ನೆ ಮಾಡಬೇಕು ಎಂಬ ನಿಯಮವಿದೆ.
  'ಹಜರುಲ್ ಅಸ್ವದ್' ಕೇವಲ ಒಂದು ಕರಿಯ ಶಿಲೆ. ಅದಕ್ಕೆ ಯಾವುದೇ ವಸ್ತುವಿನ ಆಕಾರವಿಲ್ಲ. ಅದು ಆರಾಧ್ಯವೋ ಪೂಜ್ಯವೋ ಅಲ್ಲ. ಪ್ರವಾದಿವರ್ಯರ(ಸ) ಆಪ್ತ ಸಂಗಾತಿಗಳಲ್ಲೊಬ್ಬರೂ ದ್ವಿತೀಯ ಖಲೀಫರೂ ಆದ ಹ. ಉಮರ್ ಫಾರೂಕ್(ರ) ಒಮ್ಮೆ 'ಹಜರುಲ್ ಅಸ್ವದ್'ನ ಕುರಿತು ಈ ರೀತಿ ಹೇಳಿರುವುದು ಇತಿಹಾಸ ಗ್ರಂಥಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ:
  "ಹಜರುಲ್ ಅಸ್ವದ್! ನೀನು ಒಂದು ಶಿಲೆ ಮಾತ್ರ. ಯಾರಿಗೂ ಲಾಭ-ನಷ್ಟ ಉಂಟು ಮಾಡಲು ನಿನ್ನಿಂದಾಗದು. ಪ್ರವಾದಿವರ್ಯರು(ಸ) ಚುಂಬಿಸಿದ ಕಾರಣಕ್ಕೆ ಮಾತ್ರ ನಿನ್ನನ್ನು ನಾನು ಚುಂಬಿಸುತ್ತಿದ್ದೇನೆ. ಅನ್ಯಥಾ ನಾನು ನಿನ್ನನ್ನು ಚುಂಬಿಸುತ್ತಿರಲಿಲ್ಲ."(ಬುಖಾರಿ-ಮುಸ್ಲಿಮ್)
  ಇದರಿಂದ 'ಹಜರುಲ್ ಅಸ್ವದ್' ಪೂಜ್ಯವೆಂಬ ಭಾವನೆಯನ್ನು ಸಂಪೂರ್ಣ ನಿರಾಕರಿಸಿದಂತಾಗುತ್ತದೆ. ಪ್ರವಾದಿ ಇಬ್ರಾಹೀಮ್‍ರಿಂದ(ಅ) ಪ್ರವಾದಿ ಮುಹಮ್ಮದ್‍ರವರ(ಸ)
  ತನಕ ಅನೇಕ ಪ್ರವಾದಿಗಳು, ಪ್ರವಾದಿಯ ಲಕ್ಷಗಟ್ಟಲೆ ಸಂಗಾತಿಗಳು(ರ), ಕೋಟಿಗಟ್ಟಲೆ ಮಹಾತ್ಮರು, ಪುಣ್ಯ ಪುರುಷರು, ಧರ್ಮನಿಷ್ಠರು ಅದನ್ನು ಚುಂಬಿಸಿದ್ದಾರೆಂಬುದೇ ಅದಕ್ಕಿರುವ ಪ್ರಾಮುಖ್ಯತೆ. ಅದರ ಚುಂಬನವು ಹಜ್ಜ್ ನ ಕಡ್ಡಾಯ ವಿಧಿಯೇನಲ್ಲ. ಅದೊಂದು ಐಚ್ಛಿಕ ಪುಣ್ಯಕಾರ್ಯ ಮಾತ್ರ. ಅದನ್ನು ಚುಂಬಿಸದೆ ಅದರೆಡೆಗೆ ಸನ್ನೆ ಮಾಡಿ ಅಥವಾ ಅದನ್ನು ನೋಡಿ ತವಾಫ್ ಆರಂಭಿಸಿದರೂ ಸಾಕಾಗುತ್ತದೆ.
  ಹಜ್ಜ್ ಯಾತ್ರೆಯಾದ್ಯಂತ ಸತ್ಯವಿಶ್ವಾಸಿಗಳು ಮಾಡುವ ಮುಖ್ಯ ಪ್ರಾರ್ಥನೆ ಹೀಗಿದೆ:
  "ನಮ್ಮ ಪ್ರಭೂ! ನಮಗೆ ಇಹಲೋಕದಲ್ಲೂ ಒಳಿತನ್ನು ದಯಪಾಲಿಸು, ಪರಲೋಕದಲ್ಲೂ ಒಳಿತನ್ನು ದಯಪಾಲಿಸು ಮತ್ತು ನರಕಾಗ್ನಿಯ ಶಿಕ್ಷೆಯಿಂದ ನಮ್ಮನ್ನು ರಕ್ಷಿಸು."
  ಈ ಪ್ರಾರ್ಥನೆಯಲ್ಲಿ ಬಾಳಿನ ಬಗ್ಗೆ ಸತ್ಯವಿಶ್ವಾಸಿಯ ಕಲ್ಪನೆಯು ಅಭಿವ್ಯಕ್ತವಾಗುತ್ತದೆ. ಅವನು ಲೋಕವನ್ನೂ ಅದರ ಸುಖಗಳನ್ನೂ ತ್ಯಜಿಸುವ ವೈರಾಗಿಯಲ್ಲ. ಅಂತೆಯೇ ಪರಲೋಕದ ಶಾಶ್ವತ ಜೀವನದ ಬಗ್ಗೆ ನಂಬಿಕೆಯಿಲ್ಲದ ಅಥವಾ ಅದರ ಬಗ್ಗೆ ನಿಶ್ಚಿಂತನಾಗಿ ಲೌಕಿಕ ಸುಖಾಡಂಬರಗಳಲ್ಲೇ ತಲ್ಲೀನನಾಗುವ ಭೌತಿಕವಾದಿಯೂ ಅಲ್ಲ. ಅವನು ಇಹ-ಪರಗಳೆರಡರ ಹಿತವನ್ನು ಬಯಸುತ್ತಾ ಅದನ್ನು ಗಳಿಸಲು ಶ್ರಮಿಸುತ್ತಿರುವ ಸಮತೋಲನವಾದಿ ಎಂಬುದಕ್ಕೆ ಪವಿತ್ರ ಕುರ್‍ಆನ್ ಕಲಿಸಿರುವ ಈ ಪ್ರಾರ್ಥನಾ ನುಡಿಗಳೇ ಸಾಕ್ಷಿ.
  ಬಲಿದಾನ
  ಪ್ರಾಣಿ ಬಲಿಯೂ ಹಜ್ಜ್ ನ  ವಿಧಿಗಳಲ್ಲಿ ಒಂದು ಪ್ರಮುಖ ವಿಧಿ. ಮುಸ್ಲಿಮರಿಗೆ ತಿನ್ನಲು ಅನುಮತಿಯಿರುವ ಜಾನುವಾರುಗಳ ಪೈಕಿ ಯಾವುದಾದರೊಂದು ಜಾನುವಾರನ್ನು ಹಜ್ಜ್ ಯಾತ್ರಿಕನು ಬಲಿ ನೀಡಬೇಕು. ಆದರೆ ಈ ಬಲಿದಾನವು ಕಅಬಾ ಭವನದಲ್ಲಾಗಲೀ ಅದರ ಸುತ್ತಲಿರುವ 'ಮಸ್ಜಿದುಲ್ ಹರಾಮ್' ಎಂಬ ಪವಿತ್ರ ಮಸೀದಿಯಲ್ಲಾಗಲೀ ಅಥವಾ ಅದರ ಪರಿಸರದಲ್ಲಾಗಲೀ ನೀಡುವುದಲ್ಲ. ಬದಲಾಗಿ 'ಮಿನಾ'ದ ಮೈದಾನದಲ್ಲಿ ಈ ಬಲಿದಾನವನ್ನು ನೀಡಲಾಗುತ್ತದೆ. ಹ. ಇಬ್ರಾಹೀಮ್‍ರವರು(ಅ) ಅಲ್ಲಾಹನ ಆಜ್ಞೆಯ ಮೇರೆಗೆ ತಮ್ಮ ವೃದ್ಧಾಪ್ಯದ ಏಕೈಕ ಆಸರೆಯಾಗಿದ್ದ ಪುತ್ರ ಇಸ್ಮಾಈಲ್‍ರನ್ನು(ಅ) ಬಲಿಕೊಡಲು ಸಿದ್ಧರಾದ ಘಟನೆಯ ಸ್ಮರಣಾರ್ಥವಾಗಿ ಈ ಬಲಿದಾನವನ್ನು ನೀಡಲಾಗುತ್ತದೆ. ಬಲಿ ನೀಡಿದ ಜಾನುವಾರಿನ ರಕ್ತವಾಗಲೀ ಅದರ ಮಾಂಸವಾಗಲೀ ಅಲ್ಲಾಹನಿಗೆ ತಲುಪುವುದಿಲ್ಲ. ಆತನಿಗೆ ತಲುಪುವುದು ಸತ್ಯವಿಶ್ವಾಸಿಯ ಧರ್ಮನಿಷ್ಠೆ ಮತ್ತು ದೇವಭಕ್ತಿ ಮಾತ್ರ ಎಂದು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸುತ್ತದೆ. ಈ ಪ್ರಾಣಿ ಬಲಿಯನ್ನು ಕೇವಲ ದೇವಭಕ್ತಿಯ ಸಂಕೇತದ ರೂಪದಲ್ಲಿ ಮಾಡಿ ಅದರ ಮಾಂಸವನ್ನು, ಸ್ವತಃ ಬಲಿ ನೀಡಿದವನೂ ತಿನ್ನಬೇಕು ಮತ್ತು ಬಂಧುಗಳಿಗೂ ಬಡಬಗ್ಗರಿಗೂ ಹಂಚಬೇಕು ಎಂದು ಆಜ್ಞಾಪಿಸಲಾಗಿದೆ. ಅಂತೆಯೇ ಲಕ್ಷಗಟ್ಟಲೆ ಯಾತ್ರಾರ್ಥಿಗಳು ಬಲಿ ನೀಡಿದ ಪ್ರಾಣಿಗಳ ಮಾಂಸವನ್ನು ಸೌದಿ ಸರಕಾರವು ಜಗತ್ತಿನ ಬಡ ರಾಷ್ಟ್ರಗಳಿಗೆ ತಲುಪಿಸಿ ಧರ್ಮಾರ್ಥ ವಿತರಣೆಯ ವ್ಯವಸ್ಥೆ ಮಾಡುತ್ತದೆ.

   

 • ಹಾಫಿಝ್ ಅಗತ್ಯವೇ?
  ismika25-11-2014

  ಪ್ರಶ್ನೆ : ಇಂದಿನ ಕಾಲದಲ್ಲಿ ಕುರ್‍ಆನ್ ಕಂಠಪಾಠ (ಹಾಫಿಝ್) ಮಾಡುವ ಅಗತ್ಯವಿದೆಯೇ? ಯಾಕೆಂದರೆ ಆಧುನಿಕ ತಂತ್ರಜ್ಞಾನ ವಾದ ಸಿಡಿ, ಪೆನ್‍ಡ್ರೈ, ಹಾರ್ಡ್‍ಡಿಸ್ಕ್ ಅಥವಾ ಇತರ ಅತ್ಯುತ್ತಮ ರೂಪಗಳು ಕುರ್‍ಆನನ್ನು ಸಂಗ್ರಹಿಸಿಟ್ಟಿವೆ. ಅದನ್ನು ತಿದ್ದುಪಡಿ ಅಥವಾ ತಿರುಚಲು ಯಾರಿಂದಲೂ ಸಾಧ್ಯವಿಲ್ಲ. ಆದ್ದರಿಂದ ಕುರ್‍ಆನ್ ಹಾಫಿಝ್ ಆಗುವ ಅಗತ್ಯವಿಲ್ಲ. ಎರಡನೆಯದು 6-8 ವರ್ಷದ ಮಕ್ಕಳನ್ನು ಶಾಲೆ ಬಿಡಿಸಿ 2-3 ವರ್ಷ ಕುರ್‍ಆನ್ ಕಂಠಪಾಠ ಮಾಡಲು ಕಳುಹಿಸಲಾಗುತ್ತದೆ. ನಂತರ ಅವರನ್ನು ಶಾಲೆಗೆ ಸೇರಿಸುವಾಗ ಅವರು ತುಂಬಾ ಹಿಂದಿರುತ್ತಾರೆ. ಇದು ಅವರ ಮೇಲಿನ ಬಲವಂತದ ಹೇರಿಕೆ ಅಲ್ಲವೇ? ಪೋಷಕರ ಆಯ್ಕೆಯನ್ನು ಮಕ್ಕಳು ಹೊರಬೇಕಾಗುತ್ತದೆ, ಇದು ಸರಿಯೇ?

  ಉತ್ತರ: ಆಧುನಿಕ ತಂತ್ರಜ್ಞಾನದ ಆವಿಷ್ಕಾರದ ನಂತರವೂ ಕುರ್‍ಆನಿನ ಕಂಠಪಾಠವು ಕುರ್‍ಆನನ್ನು ಸಂಗ್ರಹಿಸುವ ಪ್ರಾಥಮಿಕ ಮಾಧ್ಯಮವಾಗಿದೆ ಮತ್ತು ಅದರಷ್ಟು ಸುರಕ್ಷಿತ ಮಾಧ್ಯಮ ಬೇರೊಂದಿಲ್ಲ ಎಂದು ಧೈರ್ಯವಾಗಿ ಹೇಳಬಹುದು. ಒಬ್ಬ ಸಚಿವನೊಂದಿಗೆ ಕೆಲವು ಸಾಫ್ಟ್‍ವೇರ್ ಇಂಜಿನಿಯರ್ ಹೇಳಿದರು, ನಾವು ಸರಕಾರಿ ದಾಖಲೆಗಳನ್ನು ಎಲ್ಲವನ್ನೂ ಕಂಪ್ಯೂಟರ್‍ನಲ್ಲಿ ಸಂಗ್ರಹಿಸಿಡಬಹುದು. ನಂತರ ಈ ಪೇಪರ್‍ನ ಅಗತ್ಯ ಇರುವುದಿಲ್ಲ. ಎಲ್ಲವೂ ವೆಬ್‍ನಲ್ಲಿ ಸುರಕ್ಷಿರತವಾಗಿರುತ್ತದೆ. ಅದಕ್ಕೆ ಸಚಿವರು ಹೇಳಿದರು; ಬಹಳ ಒಳ್ಳೆಯ ಆವಿಷ್ಕಾರ. ಆದರೆ ಎಲ್ಲವನ್ನೂ ಕಂಪ್ಯೂಟರೀಕರಣಗೊಳಿಸುವ ಮುಂಚೆ ಎಲ್ಲ ದಾಖಲೆಗಳ ಮೂರು ನಕಲು ಪ್ರತಿ ತೆಗೆದು ನನ್ನ ಕಪಾಟಿನಲ್ಲಿ ಇಡಿ. ಕುರ್‍ಆನಿಗೆ ಸಂಬಂಧಿಸಿ ನಿಮ್ಮೊಂದಿಗೂ ಇದೇ ಹೇಳಲಿಕ್ಕಿರುವುದು. ಕ್ಯಾಸೆಟ್, ಸಿಡಿ, ಪೆನ್‍ಡ್ರೈವ್ ಎಲ್ಲವೂ ಹೊಸ ಆವಿಷ್ಕಾರ ಬಂದೊಡನೆ ಅದರ ಬಳಕೆ ನಿಂತು ಬಿಡುತ್ತದೆ. ಆದ್ದರಿಂದ ಕಂಠಪಾಠವು ಬಹಳ ಸುರಕ್ಷಿತ ಮತ್ತು ಸಾಂಪ್ರದಾಯಿಕ ಮಾದರಿ. ಆದರೂ ಆಧುನಿಕ ಉಪಕರಣಗಳನ್ನು ಹಗುರಗೊಳಿಸಿ ನೋಡಲು ಸಾಧ್ಯವಿಲ್ಲ. ಅದೇ ರೀತಿ ಕಂಠಪಾಠ ಮಾಡುವ ವ್ಯಕ್ತಿ ಉಪಕರಣದಂತೆ ಅಲ್ಲ. ಅವನಿಗೆ ಕುರ್‍ಆನಿನ ಜೊತೆ ಜೀವಂತ ಸಂಬಂಧವಿರುತ್ತದೆ. ಭಾವನಾತ್ಮಕ ಸಂಬಂಧವಿರುತ್ತದೆ. ಈ ಸಂಬಂಧವು ಅವನ ವಿಶ್ವಾಸ, ನಡವಳಿಕೆ ಚಾರಿತ್ರ್ಯದ ಮೇಲೆ ಗಂಭೀರ ಸಕಾರಾತ್ಮಕ ಪರಿಣಾಮ ಬೀರುತ್ತದೆ.
  ಇನ್ನು ಎರಡನೇ ಪ್ರಶ್ನೆ, ಎಲ್ಲರನ್ನು ಸಮಾನೀಕರಿಸಿ ನೋಡಬೇಕಾಗಿಲ್ಲ. ಕಂಠಪಾಠದ ಪ್ರಕ್ರಿಯೆ ಮತ್ತು ಸಮಯವನ್ನು ಶಾಲಾ ಸಮಯಕ್ಕಣುಗುಣವಾಗಿ ಸರಿ ಹೊಂದಿಸಬಹುದು ಎಂಬುದು ಮುಜೀಬ್‍ನ ಅಭಿಪ್ರಾಯವಾಗಿದೆ. ಇಂಥ ಶಾಲೆಗಳೂ ಇವತ್ತು ನಮ್ಮ ನಡುವೆ ಇವೆ. ಚಿಕ್ಕ ಮಕ್ಕಳನ್ನು ಮುಖ್ಯವಾಹಿನಿಯ ಶಿಕ್ಷಣದಿಂದ ಹೊರತುಪಡಿಸಿ ಕೇವಲ ಧಾರ್ಮಿಕ ಶಿಕ್ಷಣಗಳಲ್ಲಿ ತೊಡಗಿಸಿಕೊಳ್ಳುವುದು ಮಕ್ಕಳ ಮೇಲೆ ಕೂಡಾ ಪರಿಣಾಮ ಬೀರುವ ಸಾಧ್ಯತೆ ಇದೆ. ಆದರೆ ಎರಡು-ಮೂರು ವರ್ಷ ಕಂಠಪಾಠ ಮಾಡಿ ನಂತರ ಶಾಲೆಗಳಲ್ಲಿ ಸೇರಿ ಉತ್ತಮ ಶಿಕ್ಷಣ ಪಡೆದ ಧಾರಾಳ ಹಾಫಿಝ್‍ಗಳನ್ನು ನಿಮಗೆ ತೋರಿಸಿಕೊಡಬಹುದು. ಲೌಕಿಕ ಮತ್ತು ಧಾರ್ಮಿಕ ಶಿಕ್ಷಣದಲ್ಲಿ ಮಧ್ಯಮ ನಿಲುವನ್ನು ಶಿಕ್ಷಣದ ವ್ಯವಸ್ಥೆಯಲ್ಲೇ ಮಾಡಬೇಕಾದ ಅನಿವಾರ್ಯತೆ ಇದೆ. ಮಕ್ಕಳಿಗೆ ತಾವು ಯಾವ ಕ್ಷೇತ್ರದಲ್ಲಿ ಮುಂದುವರಿಯ ಬಯಸುತ್ತೀರಿ ಅವರ ಆಸಕ್ತಿ ಪ್ರತಿಭೆ ಯಾವುದರಲ್ಲಿದೆ ಎಂಬುದಕ್ಕೆ ಹೆತ್ತವರು ಗಮನಕೊಡಬೇಕು. ಆ ಬಗ್ಗೆ ಚರ್ಚಿಸಬೇಕು ಮತ್ತು ಮಕ್ಕಳನ್ನು ಅದೇ ಮಾರ್ಗದಲ್ಲಿ ಮುಂದುವರಿಸಬೇಕು.

   

 • ದೇಶ ರಕ್ಷಣೆ ಮತ್ತು ಹುತಾತ್ಮತೆ?
  ismika25-11-2014

  ಪ್ರಶ್ನೆ: ಇಸ್ಲಾಮಿನ ಏಳಿಗೆಗಾಗಿ ಹೋರಾಡುತ್ತಾ ಮೃತಪಟ್ಟವರು ಹುತಾತ್ಮರೆನಿಸುತ್ತಾರೆ. ಅವರು ನೇರವಾಗಿ ಸ್ವರ್ಗ ಪ್ರವೇಶ ಮಾಡುತ್ತಾರೆ. ಆದರೆ ದೇಶದ ರಕ್ಷಣೆಗಾಗಿ ಗಡಿಯಲ್ಲಿ ಹೋರಾಡುತ್ತಾ ಮೃತಪಟ್ಟವರು ಹುತಾತ್ಮರಾಗುವರೆ? ಅವರಿಗೆ ಸ್ವರ್ಗ ಸಿಗುವುದೇ? ಕುರ್‍ಆನ್-ಹದೀಸ್‍ನ ಮೂಲಕ ತಿಳಿಸಿ.?

  ಉತ್ತರ: ಸ್ವರ್ಗ ಪ್ರಾಪ್ತಿಗಿರುವ ಪ್ರಥಮ ಶರ್ತ ಈಮಾನ್ ಮತ್ತು ಅಮಲೆ ಸಾಲಿಹ್ (ಸತ್ಯವಿಶ್ವಾಸ ಮತ್ತು ಸತ್ಕರ್ಮ) ಆಗಿದೆ. ಅದಿಲ್ಲದಿದ್ದರೆ ಸ್ವರ್ಗ ನಿರೀಕ್ಷಿಸುವಂತಿಲ್ಲ. ಅಲ್ಲಾಹನ ಮಾರ್ಗದಲ್ಲಿ ನಡೆಸುವ ಪ್ರತಿಯೊಂದು ಚಟುವಟಿಕೆಯೂ ಸತ್ಕರ್ಮವಾಗಿದೆ. ಇಸ್ಲಾಮಿನ ಉತ್ತುಂಗತೆಗಾಗಿ ಹೋರಾಡುವುದು ಉನ್ನತಮಟ್ಟದ ಸತ್ಕರ್ಮವಾಗಿದೆ. ಈ ಹೋರಾಟದಲ್ಲಿ ಮಡಿದವರು ಹುತಾತ್ಮರೆನಿಸುವರು, ಅವರು ಜೀವತೆತ್ತ ಕೂಡಲೇ ಸ್ವರ್ಗ ಪ್ರವೇಶ ಮಾಡುವರೆಂದು ಪ್ರವಾದಿ(ಸ) ಹೇಳಿದ್ದಾರೆ.

  ಇನ್ನು ದೇಶಕ್ಕಾಗಿ ಹೋರಾಡುತ್ತಾ ಪ್ರಾಣತೆತ್ತವರು ಸ್ವರ್ಗ ಪಡೆಯುವರೇ ಎಂಬ ಪ್ರಶ್ನೆ. ಸತ್ಯವಿಶ್ವಾಸಿಯು ಯಾವಾಗಲೂ ನ್ಯಾಯದ ಪರವಾಗಿರುತ್ತಾನೆ. ಅನ್ಯಾಯವು ತನ್ನವರಿಂದಾದರೂ ಅವನಿಗೆ ಸಹ್ಯವಲ್ಲ. ಅದೇ ರೀತಿ ನಮ್ಮ ದೇಶವನ್ನು ಪರರು ಅನ್ಯಾಯವಾಗಿ ಆಕ್ರಮಿಸುವಾಗ ಅದರ ವಿರುದ್ಧ ಹೋರಾಡುವುದು ದೇಶಪ್ರೇಮ ಮತ್ತು ದೇಶ ನಿಷ್ಠೆಯಾಗಿದೆ. ಗಡಿಯಲ್ಲಿ ದೇಶ ರಕ್ಷಣೆಗಾಗಿ ಹೋರಾಡುವ ಓರ್ವ ಮುಸ್ಲಿಮ್ ಯೋಧನು, ದೇಶವು ನ್ಯಾಯದಲ್ಲಿರುವವರೆಗೆ ಅಲ್ಲಾಹನ ಮಾರ್ಗದಲ್ಲಿದ್ದಾನೆ. ಪ್ರವಾದಿ(ಸ) ಹೇಳಿರುವರು, "ತನ್ನ ಪ್ರಾಣ ರಕ್ಷಣೆಯಲ್ಲಿ ಹೋರಾಡಿ ಮಡಿದವನು ಹುತಾತ್ಮನಾಗಿದ್ದಾನೆ. ಹಾಗೆಯೇ ತನ್ನ ಸೊತ್ತು-ವಿತ್ತ ಹಾಗೂ ಮಾನರಕ್ಷಣೆಗಾಗಿ ಹೋರಾಡಿ ಮಡಿದವನೂ ಹುತಾತ್ಮನಾಗಿದ್ದಾನೆ." ನಮ್ಮ ದೇಶವು ನಮ್ಮ ಸೊತ್ತಾಗಿದೆ. ಅದೇ ರೀತಿ ನಮ್ಮ ಅಭಿಮಾನವಾಗಿದೆ. ಅದನ್ನು ಯಾರಾದರೂ ಅನ್ಯಾಯವಾಗಿ ಆಕ್ರಮಿಸಿದಾಗ ಕೈಕಟ್ಟಿ ಕುಳಿತುಕೊಳ್ಳುವುದು ವಿಶ್ವಾಸಿಗೆ ಭೂಷಣವಲ್ಲ. ಅವನು ಅದರ ವಿರುದ್ಧ ಹೋರಾಡಬೇಕು. ಈ ರೀತಿ ಹೋರಾಡಿ ಮಡಿದವನು ನಿಜ ವಾಗಿಯೂ ಹುತಾತ್ಮನೆನಿಸಬಹುದು.
  ಆದರೆ ತನ್ನ ದೇಶ ಅನ್ಯಾಯ ಮಾಡುತ್ತಿದೆ, ಇತರರ ಮೇಲೆ ವೃಥಾ ದಾಳಿ ಮಾಡುತ್ತಿದೆ, ಅವರನ್ನು ಕೊಲ್ಲು ತ್ತಿದೆ, ಅವರ ಸೊತ್ತು-ವಿತ್ತಗಳನ್ನು ಸ್ವಾಧೀನ ಪಡಿಸುತ್ತಿದೆಯೆಂದರೆ ಅದನ್ನು ಬೆಂಬಲಿಸಲು ಓರ್ವ ವಿಶ್ವಾಸಿಗೆ ಸಾಧ್ಯ ವಿಲ್ಲ. ಅವನು ತನ್ನವರ ವಿರುದ್ಧ ಸ್ವರವೆತ್ತಬೇಕು. ಒಂದು ವೇಳೆ ಹಾಗೆ ಮಾಡದೆ ನ್ಯಾಯ ಮಾಡಿದರೂ ಅನ್ಯಾಯ ಮಾಡಿದರೂ ತನ್ನ ದೇಶ, ಅದಕ್ಕಾಗಿ ಹೋರಾಡಿ ಸಾಯುವುದು ನನ್ನ ಧರ್ಮ ಎಂದರೆ ಅವನನ್ನು ನ್ಯಾಯ ನಿಷ್ಠನೆನ್ನುವಂತಿಲ್ಲ. ಅಂತಹವನು ಅನ್ಯಾಯ ಮಾಡುವ ತನ್ನವರನ್ನು ಬೆಂಬಲಿಸಿದರೆ ಅವನ ಈಮಾನೇ ಸಂದೇಹಾಸ್ಪದವಾಗುತ್ತದೆ. 'ಅನ್ಯಾಯವನ್ನು ಬೆಂಬಲಿಸುವವನು ಬಾವಿಗೆ ಬೀಳುವ ಒಂಟೆಯ ಬಾಲವನ್ನು ಹಿಡಿದು ತಾನೂ ಬಾವಿಗೆ ಬೀಳುವವನಂತೆ' ಎಂದು ಪ್ರವಾದಿ(ಸ) ಹೇಳಿದ್ದಾರೆ. ಅಂತಹವನು ದೇಶಕ್ಕಾಗಿ ಮಡಿದರೆ ಅದನ್ನು ಅಲ್ಲಾಹನ ಮಾರ್ಗದಲ್ಲಿ ಮಡಿದನೆಂದು ಹೇಳುವಂತಿಲ್ಲ. ಅವನ ಸ್ವರ್ಗ ಪ್ರವೇಶವೂ ಸಂದೇಹಾಸ್ಪದವಾಗಿದೆ.

 • ಮಕ್ಕಳನ್ನು ದತ್ತು ಪಡೆಯುವುದು?
  ismika03-12-2014

  ಪ್ರಶ್ನೆಮಕ್ಕಳನ್ನು ದತ್ತು ಪಡೆಯುವ ಬಗ್ಗೆ ಇಸ್ಲಾಮಿನ ದೃಷ್ಟಿಕೋನವೇನು? ಅದನ್ನು ಇಸ್ಲಾಮ್ ವಿರೋಧಿಸುತ್ತದೆಯೇ? ಮಕ್ಕಳಿಲ್ಲದ ದಂಪತಿಗಳು (ಪುರುಷನಿಗೆ ಬಂಜೆತನ ಇದ್ದರೆ) ಬೀಜವನ್ನು ದತ್ತು ಪಡೆಯುವುದರ ಬಗ್ಗೆ ಇಸ್ಲಾಮ್ ಏನು ಹೇಳುತ್ತದೆ?

  ಉತ್ತರ: ಇಸ್ಲಾಮಿನ ಧರ್ಮ ಪ್ರಚಾರದ ಚಟುವಟಿಕೆಗಳು ಮಕ್ಕಾದಲ್ಲಿ ಪ್ರಾರಂಭವಾಯಿತು. ಅಂದು ಮಕ್ಕಾವು ಅರೇಬಿಯದ ಒಂದು ಸಾಂಸ್ಕ್ರತಿಕ ಕೇಂದ್ರವಾಗಿತ್ತು. ಅಲ್ಲಿ ಅನೇಕ ವಿಶ್ವಾಸ ವೈವಿಧ್ಯ ಗಳೂ ಆಚಾರಗಳೂ ಅಸ್ತಿತ್ವದಲ್ಲಿದ್ದವು. ಇಲ್ಲಿ ಸರಿಯಾದ ವಿಶ್ವಾಸ ಆಚಾರಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿಸಲಿಕ್ಕಿರುವ ಹೊಣೆಗಾರಿಕೆಯನ್ನು ಪ್ರವಾದಿಯವರು(ಸ) ನಿರ್ವಹಿಸಬೇಕಾಗಿತ್ತು. ಮಕ್ಕಳನ್ನು ದತ್ತು ಪಡೆಯುವುದು ಅಂದಿನ ಸಾಮಾನ್ಯ ಸಂಪ್ರದಾಯವಾಗಿತ್ತು. ಮಕ್ಕಳಿರುವ ಹೆತ್ತವರು ಕೂಡಾ ಈ ರೀತಿ ಮಾಡುತ್ತಿದ್ದರು. ಒಂದು ಮಗು ಮೆಚ್ಚುಗೆಯಾದರೆ ಅದನ್ನು ಸ್ವಂತ ಮಗುವಾಗಿ ಘೋಷಿಸಲಾಗುತ್ತಿತ್ತು! ಆ ಮಗು ಇತರ ಮಕ್ಕಳನ್ನು ಸಹೋದರರನ್ನಾಗಿ ಸ್ವೀಕರಿಸ ಬೇಕಾಗಿತ್ತು. ದತ್ತು ಪಡೆದವರನ್ನು ಸ್ವಂತ ಹೆತ್ತವರಂತೆ ಪರಿಗಣಿಸಲಾಗುತ್ತಿತ್ತು. ಕುಟುಂಬ ಸಂಬಂಧ, ವೈವಾಹಿಕ ಸಂಬಂಧ, ವಾರೀಸು ಹಕ್ಕು ಮುಂತಾದ ವಿಷಯಗಳಲ್ಲಿ ಅವರು ಸ್ವಂತ ಮಕ್ಕಳಂತೆಯೇ ಆಗಿರುವರು.

  ಈ ಸಂಪ್ರದಾಯವು ಆಳವಾಗಿ ಬೇರೂರಿದ್ದ ಇಸ್ಲಾವಿೂ ಸಮುದಾಯದಲ್ಲಿ ಅದರ ಭವಿಷ್ಯದ ಬಗ್ಗೆ ಮನವರಿಕೆ ಮಾಡಿಸಲೂ ಅದನ್ನು ಪ್ರಾಯೋಗಿಕ ವಾಗಿ ತಿದ್ದಲೂ ಪ್ರವಾದಿಯವರಿಗೆ(ಸ) ನಿರ್ದೇಶನ ಲಭಿಸಿತು. ಪವಿತ್ರ ಕುರ್ ಆನಿನ ಸೂರಃ ಅಲ್ ಅಹ್‍ಝಾಬ್‍ನ ಒಂದು ಭಾಗವು ಈ ವಿಷಯದಲ್ಲಿಯೇ ಅವತೀರ್ಣಗೊಂಡಿದೆ. ಅಲ್ ಅಹ್‍ಝಾಬ್‍ನ ನಾಲ್ಕನೇ ಸೂಕ್ತದಲ್ಲಿ ದತ್ತು ಪುತ್ರರು ನೈಜ ಮಕ್ಕಳಲ್ಲ ಎಂದು ಸ್ಪಷ್ಟಪಡಿಸಲಾಯಿತು. “ಅಲ್ಲಾಹನು ಯಾವ ಮನುಷ್ಯನ ಶರೀರದೊಳಗೂ ಎರಡು ಹೃದಯಗಳನ್ನಿರಿಸಿಲ್ಲ. ನೀವು `ಝಿಹಾರ್’ ಮಾಡುವ ನಿಮ್ಮ ಪತ್ನಿಯರನ್ನು ಅವನು ನಿಮ್ಮ ತಾಯಂದಿರನ್ನಾಗಿ ಮಾಡಲೂ ಇಲ್ಲ ಮತ್ತು ಅವನು ನಿಮ್ಮ ದತ್ತು ಪುತ್ರರನ್ನು ನಿಮ್ಮ ಸ್ವಂತ ಪುತ್ರರನ್ನಾಗಿ ಮಾಡಿರುವುದೂ ಇಲ್ಲ. ಇವೆಲ್ಲ ನೀವು ನಿಮ್ಮ ಬಾಯಿಯಿಂದ ಹೊರಡಿಸಿ ಬಿಡುವ ಮಾತುಗಳು. ಆದರೆ ಅಲ್ಲಾಹನು ಕೇವಲ ಸತ್ಯವಾದುದನ್ನೇ ಹೇಳುತ್ತಾನೆ.” ಮುಂದಿನ ಸೂಕ್ತದಲ್ಲಿ ದತ್ತು ಮಕ್ಕಳನ್ನು ಅವರ ತಂದೆಯ ಹೆಸರಿನೊಂದಿಗೆ ಸೇರಿಸಿ ಕರೆಯಬೇಕೆಂದು ಆಜ್ಞಾಪಿಸಲಾಯಿತು. ತಂದೆಯು ಯಾರೆಂದು ತಿಳಿಯದಿದ್ದರೆ ಅವರನ್ನು ಧರ್ಮ ಸಹೋದರರಾಗಿ ಪರಿಗಣಿಸಬೇಕೆಂಬ ನಿರ್ದೇಶನ ನೀಡಲಾಯಿತು. “ದತ್ತು ಮಕ್ಕಳನ್ನು ಅವರ ಪಿತರಿಗೆ ಸಂಬಂಧಿಸಿ ಕರೆಯಿರಿ. ಇದು ಅಲ್ಲಾಹನ ಬಳಿ ಹೆಚ್ಚು ನ್ಯಾಯೋಚಿತವಾದ ವಿಷಯವಾಗಿದೆ ಮತ್ತು ಅವರ ಪಿತರು ಯಾರೆಂದು ತಿಳಿಯದಿದ್ದರೆ ಅವರು ನಿಮ್ಮ ಧರ್ಮ ಸಹೋದರರು ಮತ್ತು ಮಿತ್ರರಾಗಿರುತ್ತಾರೆ. ನೀವು ತಿಳಿಯದೆ ಹೇಳಿ ಬಿಟ್ಟ ಮಾತಿಗಾಗಿ ನಿಮ್ಮ ಮೇಲೇನೂ ದೋಷವಿಲ್ಲ. ಆದರೂ ನೀವು ಉದ್ದೇಶಪೂರ್ವಕ ವಾಗಿ ಹೇಳಿದ ಮಾತಿನ ಬಗ್ಗೆ ಖಂಡಿತ ದೋಷವಿದೆ. ಅಲ್ಲಾಹನು ಕ್ಷಮಾಶೀಲನೂ ಕರುಣಾನಿಧಿಯೂ ಆಗಿರುತ್ತಾನೆ.”
  ಹಳೆಯ ಸಂಪ್ರದಾಯದ ಪ್ರಕಾರ ಪ್ರವಾದಿಯವರು(ಸ) ಝೈದ್(ರ) ಬಿನ್ ಹಾರಿಸರನ್ನು ದತ್ತು ಪುತ್ರನೆಂದು ಘೋಷಿಸಿದ್ದರು. ಪ್ರಾಯೋಗಿಕವಾಗಿ ಜನ ಮಾನಸಗಳಲ್ಲಿ ಬದಲಾವಣೆಯನ್ನು ತರಲು ಝೈದ್‍ರನ್ನು(ರ) ಹಾರಿಸರ ಮಗನಾಗಿ ಪ್ರವಾದಿಯವರು(ಸ) ಕರೆದರು. ಝೈದ್‍ರು(ರ) ವಿವಾಹವಾದದ್ದು ಕುಲೀನ ವಂಶದ ಝೈನಬ್(ರ) ಬಿಂತ್ ಜಹ್‍ಶರನ್ನಾಗಿತ್ತು. ಆ ದಾಂಪತ್ಯ ಜೀವ ನವು ಹೆಚ್ಚು ಕಾಲ ಉಳಿಯಲಿಲ್ಲ. ಝೈದ್‍ರು(ರ) ಝೈನಬ್‍ರಿಗೆ ವಿಚ್ಛೇದನ ನೀಡಿದರು. ವರದಿಯನುಸಾರ ಝೈನಬ್‍ರು ಪ್ರವಾದಿಯವರ(ಸ) ಪುತ್ರ ಪತ್ನಿ (ಸೊಸೆ) ಆಗಿದ್ದರು. ಪುತ್ರನ ಪತ್ನಿಯನ್ನು ಪುತ್ರನು ವಿಚ್ಛೇದನ ನಡೆಸಿದರೆ ಆಕೆಯನ್ನು ವಿವಾಹವಾಗಲು ತಂದೆಗೆ ಅನುಮತಿ ಇಲ್ಲ. ಝೈದ್‍ರು(ರ) ನೈಜ ಪುತ್ರರಲ್ಲವೆಂದೂ ಆದ್ದರಿಂದ ಝೈದ್‍ರು ವಿವಾಹವಾದ ಮಹಿಳೆಯನ್ನು ಪ್ರವಾದಿಯವರು(ಸ) ವಿವಾಹವಾಗಲು ವಿರೋಧವಿಲ್ಲವೆಂದೂ ಪ್ರಾಯೋಗಿಕವಾಗಿ ತಿಳಿಸಲು ಝೈನಬ್‍ರನ್ನು ಪತ್ನಿಯಾಗಿ ಸ್ವೀಕರಿಸಲು ಅಲ್ಲಾಹನು ಪ್ರವಾದಿಯವರಿಗೆ(ಸ) ಆಜ್ಞಾಪಿಸಿದನು. ಈ ಘಟನೆಯನ್ನು 37ನೇ ಸೂಕ್ತದಲ್ಲಿ ಸೂಚಿಸಲಾಗಿದೆ. ಕಪಟ ವಿಶ್ವಾಸಿಗಳು ಈ ವಿವಾಹವನ್ನು ಒಂದು ಅನೈತಿಕ ಪ್ರೇಮ ವಿವಾಹವಾಗಿ ಚಿತ್ರೀಕರಿಸಿ ದೊಡ್ಡ ರಾದ್ಧಾಂತವನ್ನೇ ಉಂಟು ಮಾಡಿದರು. ಕೆಟ್ಟ ಮನಸ್ಸಿನವರು ಎಲ್ಲವನ್ನೂ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಾರಷ್ಟೇ?
  ಇಲ್ಲಿ ನಾವು ಕಾಣುತ್ತಿರುವುದು ಸಮಾಜದಲ್ಲಿ ಬೇರೂರಿರುವ ಒಂದು ಸಂಪ್ರದಾಯವನ್ನು ಬದಲಾಯಿಸಲಿಕ್ಕಿರುವ ಪ್ರಾಯೋಗಿಕ ಶೈಲಿಯನ್ನಾಗಿದೆ. ದತ್ತು ಪಡೆಯುವುದನ್ನು ಇಸ್ಲಾಮ್ ಮಾತಿನ ಮೂಲಕವೂ ಪ್ರಾಯೋಗಿಕವಾಗಿಯೂ ತಿದ್ದಿದೆ. ಇದರ ಹಿನ್ನೆಲೆಯಲ್ಲಿರುವ ತತ್ವವು ರಕ್ತ ಸಂಬಂಧವು ಪವಿತ್ರವಾದುದಾಗಿದೆ, ಅವರಲ್ಲಿ ಕಲಬೆರಕೆ ಮಾಡಬಾರದು ಎಂಬುದಾಗಿದೆ. ಓರ್ವನ ಪಿತೃತ್ವವನ್ನು ಡಿ.ಎನ್.ಎ. ಪರೀಕ್ಷೆಯ ಮೂಲಕ ತಿಳಿಯಲು ಸಾಧ್ಯವಿರುವ ಈ ಕಾಲದಲ್ಲಿ ಇದನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವಲ್ಲ. ಆದರೆ ದತ್ತು ಪಡೆಯುವುದು ಒಂದು ಸಾಮಾಜಿಕ ಅಗತ್ಯ ವಾಗಿರಬಹುದು. ಸಂರಕ್ಷಿಸಲು ಜನರಿಲ್ಲದ ಮಕ್ಕಳ ಹೊಣೆಯನ್ನು ಹೊತ್ತು ಕೊಂಡು ಬೆಳೆಸಬೇಕಾದ ವ್ಯವಸ್ಥೆ ಬೇಕಾಗಬಹುದು. ಇದು ಇಸ್ಲಾಮ್ ಅತೀ ಹೆಚ್ಚು ಪ್ರೋತ್ಸಾಹ ನೀಡಿರುವ ಕೆಲಸವಾಗಿದೆ. ಈ ಮಕ್ಕಳು ಕುಟುಂಬದ ಸದಸ್ಯರಲ್ಲ, ಬದಲಾಗಿ ಸಂರಕ್ಷಿತರಾಗಿದ್ದಾರೆ. ರಕ್ತ ಸಂಬಂಧವಿರುವ ಮಕ್ಕಳು ಮತ್ತು ಇವರ ಮಧ್ಯೆ ಅನೇಕ ವ್ಯತ್ಯಾಸಗಳಿರುತ್ತವೆ. ಆದರೆ ಆಹಾರ, ಅಭಯ, ಬಟ್ಟೆ ಮುಂತಾದ ಭೌತಿಕ ವಿಚಾರಗಳಲ್ಲಿ ಅವರಿಗೆ ಸಮಾನ ಪರಿಗಣನೆ ಲಭಿಸುತ್ತದೆ. (ಕೆಲವು ರಾಷ್ಟ್ರ ಗಳಲ್ಲಿ `ಗುರುತಿನ ಚೀಟಿ’ ಲಭಿಸಬೇಕಾದರೆ ದತ್ತು ಪಡೆಯುವ ವ್ಯಕ್ತಿಯನ್ನು `ಲೀಗಲ್ ಪೇರೆಂಟ್’ ಆಗಿ ದಾಖಲಿಸಬೇಕೆಂಬ ಕಾನೂನಿದೆ. ಇಂತಹ ಸಂದರ್ಭಗಳಲ್ಲಿ ಕಾನೂನಿನ ಬೇಡಿಕೆಯನ್ನು ಪೂರೈಸಲು ತಂದೆ/ತಾಯಿ ಎಂದು ದಾಖಲಿಸಬಹುದೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.)
  ಮಕ್ಕಳಿಲ್ಲದವರು ತಮ್ಮ ದುಃಖವನ್ನು ಹೋಗಲಾಡಿಸಲು ಒಂದು ಮಗುವನ್ನು ದತ್ತು ಪಡೆದು ಸಾಕಬಹುದಾದರೂ ಅವರಿಗೆ ಸ್ವಂತ ಮಕ್ಕಳ ಸ್ಥಾನವನ್ನು ನೀಡಲು ಸಾಧ್ಯವಿಲ್ಲ. ಇಂತಹ ಮಕ್ಕಳು ದೊಡ್ಡ ವರಾದ ಬಳಿಕ ತನ್ನ ತಂದೆಯು `ನಕಲಿ’ ಎಂದು ತಿಳಿಯುವಾಗ ಅದು ದೊಡ್ಡ ಮಾನಸಿಕ ಆಘಾತಕ್ಕೆ ಆಸ್ಪದವಾಗುವುದಿದೆ. ಬಾಲ್ಯದಿಂದಲೇ ತಾನು ಸಾಕು ತಾಯಿ ಮಾತ್ರ ಆಗಿದ್ದೇನೆ. ನೈಜ ತಾಯಿ ನಾನಲ್ಲ ವೆಂದು ಮಕ್ಕಳಿಗೆ ತಿಳಿಸಿ ಬೆಳೆಸುವುದು ಸರಿಯಾದ ರೀತಿಯಾಗಿದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.
  ಪ್ರಶ್ನೆ ಕೇಳಿದವರ ಚಿಂತನೆಯು ಮತ್ತೊಂದು ಕಡೆಗೆ ಸಾಗಿದೆ. ಸಾಧಾರಣವಾಗಿ ಇನ್ನೋರ್ವನಿಗೆ ಜನಿಸಿದ ಮಗುವನ್ನು ದತ್ತು ಪಡೆಯಲಾಗುವುದಷ್ಟೇ. ಮಗು ಹುಟ್ಟುವುದಕ್ಕಿಂತ ಮುಂಚೆಯೇ ಬೀಜವಿರುವಾಗ ದತ್ತು ಪಡೆದರೆ ಹೇಗೆ?
  ದತ್ತು ಪಡೆಯುವುದನ್ನು ಇಸ್ಲಾಮ್ ವಿರೋಧಿಸಿದವರ ಮೂಲ ಕಾರಣವನ್ನು ತಿಳಿಸಲಾಗಿದೆಯಷ್ಟೇ. ಇದು ಕುಟುಂಬದ ಸದಸ್ಯರ ಡಿ.ಎನ್.ಎ. ವ್ಯವಸ್ಥೆಯೇ ಅಸ್ತವ್ಯಸ್ಥವಾಗುವ ಕೆಲಸವಾಗಿದೆ.
  ಇಪ್ಪತ್ತಮೂರು ಜೋಡಿ ಕ್ರೋಮೊ ಝೊಮ್‍ಗಳು ಡಿ.ಎನ್.ಎ.ಯಲ್ಲಿದೆ. ಅವುಗಳ ಪೈಕಿ ಅರ್ಧಭಾಗವು ಪುರುಷ ಬೀಜಾಣುಗಳಿಂದಲೂ ಉಳಿದದ್ದು ಸ್ತ್ರೀಯ ಅಂಡಾಶಯದಿಂದಲೂ ಬಂದ ದ್ದಾಗಿವೆ. ಅವುಗಳು ಪರಸ್ಪರ ಸೇರಿ ಕೋಶಗಳಲ್ಲಿ ಕ್ರೋಮೊಝೋಮ್ ಜೋಡಿಗಳು ಪೂರ್ಣಗೊಳ್ಳುತ್ತವೆ. ಓರ್ವ ಪುರುಷನೂ ಆತನ ಪತ್ನಿಯೂ ಸೇರಿ ಉಂಟಾಗುವ ಕುಟುಂಬದ ಪ್ರತೀ ಸದಸ್ಯರಲ್ಲಿಯೂ ಡಿ.ಎನ್.ಎ.ಯ ಪ್ರತಿ ಬಿಂಬವನ್ನು ಕಾಣಬಹುದಾಗಿದೆ. ಇದರ ಮಾನಸಿಕ ಹಾಗೂ ಶಾರೀರಿಕವಾದ ಪ್ರಭಾವಗಳ ಕುರಿತು ಇನ್ನೂ ಹಲವಾರು ವಿಚಾರಗಳು ಪತ್ತೆ ಹಚ್ಚಬೇಕಾಗಿದೆ.
  “ನೀವು ಕುಟುಂಬ ಸಂಬಂಧವನ್ನು (ರಕ್ತಸಂಬಂಧ) ಕೆಡಿಸಬೇಡಿರಿ.” (4:1) ಎಂದು ಕುರ್‍ಆನ್ ಕಲಿಸಿರುವುದು ಇದಕ್ಕೆಲ್ಲ ಬೆಳಕು ಹರಿಸುತ್ತದೆ. ಆದ್ದರಿಂದ ಬೀಜ ದಾನ ಹಾಗೂ ಅಂಡದಾನವು ನಿಷಿದ್ಧವಾಗಿದೆಯೆಂದೂ ವ್ಯಭಿಚಾರವನ್ನು ನಿಷಿದ್ಧಗೊಳಿಸಿದುದರ ಹಿಂದೆ ಈ ತತ್ವವೂ ಅಡಗಿದೆಯೆಂದೂ ಶ್ರೇಷ್ಠ ತತ್ವಜ್ಞಾನಿಗಳು ಫತ್ವಾ ನೀಡಿದ್ದಾರೆ.
  ಪವಿತ್ರ ಕುರ್‍ಆನಿನ 42ನೇ ಅಧ್ಯಾ ಯದ 49ನೇ ವಚನವನ್ನು ಗಮನಿಸಿರಿ. `ಸೃಷ್ಟಿಸುವುದು’ ಎಂಬ ವಿಷಯವು ಅಲ್ಲಾಹನ ಪರಮಾಧಿಕಾರದ ವ್ಯಾಪ್ತಿಗೆ ಸೇರಿದ ಕೆಲಸವಾಗಿದೆ. ಮಕ್ಕಳನ್ನು ದಯಪಾಲಿಸುವುದೂ ನೀಡದಿರುವುದೂ ಅಲ್ಲಾಹನೇ ಆಗಿದ್ದಾನೆ.
  ಬಂಜೆತನವು ನಿವಾರಣೆಯಾದ ಕೆಲವು ಅಪೂರ್ವ ಉದಾಹರಣೆಗಳನ್ನೂ ಕುರ್‍ಆನಿನಲ್ಲಿ ಕಾಣಲು ಸಾಧ್ಯವಿದೆ. ಪ್ರಾರ್ಥನೆ ಹಾಗೂ ಅಲ್ಲಾಹನ ಮೇಲೆ ಭರವಸೆ ಇರಿಸುವುದು ಪ್ರಧಾನವಾದುದಾಗಿದೆ. ಆಗ ಪರಿಹಾರವೂ ಅಲ್ಲಾಹನ ಕಡೆಯಿಂದಲೇ ಲಭಿಸುತ್ತದೆ.

 • ದಾಂಪತ್ಯ ಕಿರುಕುಳದ ಬಗ್ಗೆ ಇಸ್ಲಾಮಿನ ನಿಲುವು?
  ismika03-12-2014

  ಪ್ರಶ್ನೆ: ದಾಂಪತ್ಯ ಕಿರುಕುಳದ ಬಗ್ಗೆ ಇಸ್ಲಾಮಿನ ನಿಲುವೇನು? ಪತಿಯು ಆಗ್ರಹಿಸುವ ಯಾವುದೇ ಕಾರ್ಯವನ್ನು ಮಾಡಲು ಪತ್ನಿಯು ಹೊಣೆಗಾರಳಾಗಿರುವಳೇ?

  ಉತ್ತರ: ಇಸ್ಲಾಮ್ ಯಾವಾಗಲೂ ಒಂದು ಬಲಿಷ್ಠ ಸಮಾಜದ ನಿರ್ಮಾಣಕ್ಕೆ ಪ್ರಯತ್ನಿಸುತ್ತದೆ. ಕುಟುಂಬವು ಸಮಾಜದ ಅಡಿಪಾಯವಾಗಿದೆ. ಆದ್ದರಿಂದ ಇಸ್ಲಾಮ್ ಅದರ ಭದ್ರತೆಯನ್ನು ಕಾಪಾ ಡಲು ಹೆಚ್ಚು ಗಮನವಹಿಸುತ್ತದೆ. ಅದಕ್ಕಾಗಿ ಕೌಟುಂಬಿಕ ಜೀವನದ ಸ್ಪಷ್ಟ ರೂಪುರೇಷೆಯನ್ನು ಇಸ್ಲಾಮ್ ಸಮರ್ಪಿಸಿದೆ.
  ಮನೆಯಲ್ಲಿನ ಕಿರುಕುಳಗಳೂ ದೌರ್ಜನ್ಯಗಳೂ ಇಂದು ಒಂದು ಸಾಮಾಜಿಕ ಪಿಡುಗಾಗಿ ಮಾರ್ಪ ಟ್ಟಿದೆ. ಅದು ಯಾವುದೇ ಪ್ರತ್ಯೇಕ ವಿಭಾಗದಲ್ಲಲ್ಲ ಬದಲಾಗಿ ಎಲ್ಲಾ ಸಮುದಾಯಗಳಲ್ಲೂ ಗೋಚರ ವಾಗುತ್ತದೆ. ಕಿರುಕುಳಗಳಿಗೆ ಒಳಗಾಗುತ್ತಿರುವುದು ಹೆಣ್ಣು ಎಂಬುದು ಮಾತ್ರ ಎಲ್ಲಾ ಸಮುದಾಯ ಗಳಲ್ಲಿನ ಸಮಾನ ವಿಚಾರವಾಗಿದೆ.
  ಓರ್ವ ವ್ಯಕ್ತಿಯ ಅನುಮತಿ ಇಲ್ಲದೆ ಅಥವಾ ಬಲಾತ್ಕಾರವಾಗಿ ಲೈಂಗಿಕ ಕಿರುಕುಳ ನೀಡುವುದನ್ನು ಸಾಮಾನ್ಯವಾಗಿ ರೇಪ್ ಎಂದು ಹೇಳಲಾಗುತ್ತದೆ. ಇತರ ಕಿರುಕುಳಗಳಿಗೆ ಹೋಲಿಸಿದರೆ ದಾಂಪತ್ಯ ಕಿರುಕುಳವನ್ನು ಕೆಲವೊಮ್ಮೆ ಹೆಚ್ಚು ಗಂಭೀರವಾಗಿ ಪರಿಗಣಿಸಬೇಕಾದುದಾಗಿದೆ. ಕಾರಣ ಅಧ್ಯಯನಗಳ ಪ್ರಕಾರ ಇಂತಹ ಕಿರುಕುಳಗಳು ಕೆಲವೊಮ್ಮೆ ಅತ್ಯಂತ ಮಾರಕ ಹಾಗೂ ಹಿಂಸಾತ್ಮಕವಾಗಿ ಬದಲಾಗುವುದಿದೆ. ಅನ್ಯ ವ್ಯಕ್ತಿಯ ಕಿರುಕುಳವು ಕೆಲವೊಮ್ಮೆ ಒಂದೇ ಬಾರಿಗೆ ಸಂಭವಿಸುವುದಾಗಿರುತ್ತದೆ. ಆದರೆ ದಾಂಪತ್ಯ ಕಿರುಕುಳವು ನಿರಂತರವಾಗಿ ನಡೆಯುವುದಾಗಿರುತ್ತದೆ. ಕೆಲವೊಮ್ಮೆ ಅದು ವರ್ಷಗಟ್ಟಲೆ ಮುಂದುವರಿಯಬಹುದು ಅಥವಾ ಅತ್ಯಾಚಾರಿಯಾದ ಓರ್ವ ಪತಿಯೊಂದಿಗೆ ಆಕೆಗೆ ಬದುಕಬೇಕಾಗಿ ಬರುವುದು.
  ಓರ್ವನು ತನ್ನ ಪತ್ನಿಗೆ ಕಿರುಕುಳ ನೀಡುತ್ತಿರುವುದು ಯಾಕಾಗಿರಬಹುದು? ಸ್ವಾಭಾವಿಕವಾದ ದೈಹಿಕ ಸಂಬಂಧದ ಬಗ್ಗೆ ಆಕೆಗಿರುವ ವಿರೋಧದಿಂದಾಗಿರಬಹುದೇ? ಹಾಗಾಗಲು ಸಾಧ್ಯವಿಲ್ಲ. ಕಾರಣ, ದಾಂಪತ್ಯ ಕಿರುಕುಳಗಳಿಗೆ ಬಲಿಯಾಗುವ ಮಹಿಳೆಯರು ತಮ್ಮ ಪತಿಯೊಂದಿಗೆ ದೈಹಿಕ ಸಂಬಂಧಕ್ಕೆ ಮುಂದಾಗುವವರಾಗಿದ್ದಾರೆ ಎಂದು ಸಮೀಕ್ಷೆ ಸ್ಪಷ್ಟಪಡಿಸುತ್ತದೆ.
  ಮೇಲೆ ತಿಳಿಸಲಾದ ಇಷ್ಟು ವಿಚಾರಗಳಿಂದ ಇಸ್ಲಾಮ್ ಯಾಕೆ ದಾಂಪತ್ಯ ಸಂಬಂಧದಲ್ಲಿ ಪರಸ್ಪರ ಪ್ರೀತಿಗೂ ಕರುಣೆಗೂ ಮುಖ್ಯ ಸ್ಥಾನ ನೀಡಿದೆ ಎಂದು ತಿಳಿದು ಬರುತ್ತದೆ. ಪವಿತ್ರ ಕುರ್‍ಆನ್ ಹೇಳಿದೆ, “ಅವನು ನಿಮಗಾಗಿ ನಿಮ್ಮ ವರ್ಗದಿಂದಲೇ ಜೋಡಿಗಳನ್ನು ಸೃಷ್ಟಿಸಿ, ನೀವು ಅವರ ಬಳಿ ಪ್ರಶಾಂತಿಯನ್ನು ಪಡೆಯುವಂತೆ ಮಾಡಿದುದು ಮತ್ತು ನಿಮ್ಮ ನಡುವೆ ಪ್ರೇಮ ಮತ್ತು ಅನುಕಂಪವನ್ನುಂಟು ಮಾಡಿದುದೂ ಅವನ ನಿದರ್ಶನಗಳಲ್ಲೊಂದಾಗಿದೆ. ನಿಶ್ಚಯವಾಗಿಯೂ ವಿವೇಚಿಸುವವರಿಗೆ ಇದರಲ್ಲಿ ಅನೇಕ ನಿದರ್ಶನಗಳಿವೆ.” (ಅರ್ರೂಮ್- 21)
  ಇಸ್ಲಾಮಿಕ್ ಸೊಸೈಟಿ ಆಫ್ ನಾರ್ತ್ ಅಮೇರಿಕ(ISNA)ದ ಮಾಜಿ ಅಧ್ಯಕ್ಷರೂ ವಿದ್ವಾಂಸರೂ ಆದ ಡಾ| ಮುಝ್ಝಮಿಲ್ ಸಿದ್ದೀಕಿ ಹೀಗೆ ಅಭಿಪ್ರಾಯ ಪಟ್ಟಿದ್ದಾರೆ. “ಮೇಲೆ ಪ್ರಸ್ತಾಪಿಸಲಾದ ವಚನದಲ್ಲಿ ದಂಪತಿಗಳು ಪರಸ್ಪರ ಸ್ಥಾಪಿಸಬೇಕಾದ ಸಂಬಂಧದ ಮೂರು ಮೂಲ ತತ್ವಗಳನ್ನು ಸೂಚಿಸಲಾಗಿದೆ. ಅವುಗಳು ಶಾಂತಿ (ಸುಕೂನ್), ಪ್ರೇಮ (ಮವದ್ದ), ಕರುಣೆ (ರಹ್‍ಮತ್) ಮೊದಲಾದವುಗಳಾಗಿವೆ. ಇವು ಇಸ್ಲಾವಿೂ ವಿವಾಹದ ನಿರ್ಣಾಯಕ ಗುರಿಗಳಾಗಿವೆ. ಈ ಮೂರು ವಿಷಯಗಳು ಪತಿ-ಪತ್ನಿಯರಿಗೆ ಒಂದೇ ರೀತಿಯಲ್ಲಿ ಅನುಭವವಾಗಬೇಕು. ಮಾತ್ರವಲ್ಲ, ಈರ್ವರೂ ಅದನ್ನು ಪ್ರಕಟಗೊಳಿಸಬೇಕು. ಪರಸ್ಪರ ಸಂತೋಷ ಗಳಲ್ಲೂ ಭಾವನಾತ್ಮಕವಾದ ಸನ್ನಿವೇಶಗಳಲ್ಲೂ ಭಾಗಿಯಾಗಬೇಕು. ಯಾವುದೇ ರೀತಿಯಲ್ಲಿ ತನ್ನ ಜೋಡಿಯನ್ನು ಮಾನಸಿಕ ಅಥವಾ ಶಾರೀರಿಕವಾಗಿ ಘಾಸಿಗೊಳಿಸದೆ ರಕ್ಷಾ ಕವಚವಾಗಿ ಮಾರ್ಪಡ ಬೇಕು. ಹಾಗಾದರೆ ಮಾತ್ರ ಕುರ್‍ಆನ್ ಸೂಚಿಸಿರುವಂತಹ ಮೂರು ಭಾವನೆಗಳು ದಂಪತಿಗಳ ಮಧ್ಯೆ ಇರಲು ಸಾಧ್ಯ. ಅಲ್ಲಾಹನು ವಿರೋಧಿಸಿದ ಯಾವುದಾದರೂ ಕಾರ್ಯ ನಿರ್ವಹಿಸಲು ತನ್ನ ಜೋಡಿಯನ್ನು ಒತ್ತಾಯಪಡಿಸುವ ಕಾರ್ಯವು ಇಬ್ಬರ ಭಾಗದಿಂದಲೂ ಉಂಟಾಗಬಾರದು. ಲೈಂಗಿಕತೆಯು ಪ್ರಾಕೃತಿಕವಾದ ಅವಶ್ಯಕತೆ ಹಾಗೂ ಬೇಡಿಕೆಯಾಗಿದೆ. ವಿವಾಹಿತರಾದ ದಂಪತಿಗಳ ಮಧ್ಯೆ ಮಾತ್ರ ಇಸ್ಲಾಮ್ ದೈಹಿಕ ಸಂಬಂಧಕ್ಕೆ ಅನುಮತಿ ನೀಡಿದೆ. ವ್ಯಭಿಚಾರ ಹಾಗೂ ಅನೈತಿಕ ಸಂಬಂಧವನ್ನು ಇಸ್ಲಾಮ್ ತೀವ್ರವಾಗಿ ವಿರೋಧಿಸಿದೆ ಅಥವಾ ಮನುಷ್ಯನ ಈ ಶಾರೀರಿಕ ಅವಶ್ಯ ಕತೆಯನ್ನು ಪೂರ್ತೀಕರಿಸಲು ಏಕೈಕ ಅನುವದನೀಯ ಮಾರ್ಗವನ್ನಾಗಿ ಅದು ಮದುವೆಯನ್ನು ನಿಶ್ಚಯಿಸಿದೆ.
  ಅದಕ್ಕೆಂದೇ ಇಸ್ಲಾಮ್ ಸ್ಪಷ್ಟವಾದ ಎರಡುಮಾನದಂಡಗಳನ್ನಿರಿಸಿದೆ.
  1. ಮದುವೆಯಾದರೆ ದೈಹಿಕ ಅವಶ್ಯಕತೆಯನ್ನು ಪೂರೈಸಲಿಕ್ಕಿರುವ ಆಗ್ರಹವನ್ನು ದಂಪತಿಗಳಿಬ್ಬರೂ ನಿರಾಕರಿಸುವ ಸ್ಥಿತಿ ಉಂಟಾಗಬಾರದು. ತನ್ನ ಜೋಡಿಯನ್ನು ತೃಪ್ತಿಪಡಿಸಲು ಸಾಧ್ಯವಾಗುವಂತೆ ಇಬ್ಬರೂ ಪ್ರಯತ್ನಿಸಬೇಕು. ಮುಟ್ಟು ಹಾಗೂ ಹೆರಿಗೆಯ ನಂತರದ ನಿರ್ದಿಷ್ಟ ಕಾಲದವರೆಗೆ ದೈಹಿಕ ಸಂಬಂಧವನ್ನು ಹೊರತುಪಡಿಸಿ ಬೇರೇನನ್ನೂ ಮಾಡಲೂ ಪ್ರೀತಿಯನ್ನು ಪ್ರಕಟಪಡಿಸಲೂ ಶರೀಅತ್ ಪತಿ-ಪತ್ನಿಯರಿಗೆ ಅನುಮತಿ ನೀಡಿದೆ.
  2. ದಾಂಪತ್ಯ ಜೀವನದಲ್ಲಿ ಜೋಡಿಗಳು ಪರಸ್ಪರ ಪರಿಗಣಿಸುವವರೂ ಅನುಕಂಪ ಇರುವವರೂ ಆಗಿರಬೇಕು. ಶೀಘ್ರವಾಗಿ ದೈಹಿಕ ಸಂಪರ್ಕದಲ್ಲೇರ್ಪಟ್ಟು ಪತ್ನಿಯ ಬಯಕೆ ನೆರವೇರುವುದಕ್ಕಿಂತ ಮುಂಚೆಯೇ ಅದರಿಂದ ಹಿಂದೆ ಸರಿಯುವನ್ನು ಪ್ರವಾದಿ(ಸ) ತಡೆದಿರುವುದಾಗಿ ಕೆಲವು ಹದೀಸ್ ಗಳಲ್ಲಿ ಕಾಣಲು ಸಾಧ್ಯ. ಇಮಾಮ್ ಗಝ್ಝಾಲಿ ತನ್ನ ಇಹ್‍ಯಾ ಉಲೂಮುದ್ದೀನ್‍ನಲ್ಲಿ ಪ್ರಸ್ತುತ ಹದೀಸನ್ನು ಉದ್ಧರಿಸಿದ್ದಾರೆ. (ಭಾಗ-2, 49-50)
  ಅದು ಹೀಗಿದೆ, “ಪತ್ನಿಯೊಂದಿಗೆ ಪ್ರಾರಂಭದಲ್ಲಿ ದೈಹಿಕ ಸಂಪರ್ಕ ಪೂರ್ವ ಕ್ರಿಯೆಗಳನ್ನು ನಡೆಸದೆ ಅದಕ್ಕೆ ಮುಂದಾಗುವುದು ಅಶಿಸ್ತಾಗಿದೆ.” ಇನ್ನೊಂದು ಹದೀಸ್‍ನಲ್ಲಿ ಹೀಗಿದೆ.” ತನ್ನ ಬಯಕೆಯನ್ನು ಶೀಘ್ರವೇ ಪೂರೈಸಲಿಕ್ಕಾಗಿ ಶಾರೀರಿಕವಾಗಿ ತಯಾರಾಗಿಲ್ಲದ ಪತ್ನಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸುವುದೂ ಪತ್ನಿಯು ಪೂರ್ಣ ತೃಪ್ತಳಾಗುವುದಕ್ಕಿಂತ ಮುಂಚೆಯೇ ಅದರಿಂದ ಹಿಂದೆ ಸರಿಯುವುದೂ ಓರ್ವ ಉತ್ತಮ ಪುರುಷನಿಗೆ ಭೂಷಣವಲ್ಲ.”
  ಈ ಹದೀಸ್‍ಗಳು ದುರ್ಬಲವಾಗಿದೆಯೆಂದು ವಿದ್ವಾಂಸರು ಅಭಿಪ್ರಾಯ ಪಡುತ್ತಾರಾದರೂ ಇಸ್ಲಾಮಿಕವಾಗಿಯೂ ಪ್ರಾಕೃತಿಕವಾಗಿಯೂ ಹಲವಾರು ಒಳಿತುಗಳು ಈ ಹದೀಸ್‍ಗಳಲ್ಲಿವೆ ಯೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
  ದಂಪತಿಗಳ ಲೈಂಗಿಕ ಅವಶ್ಯಕತೆಗಳ ಹಾಗೂ ಅದರ ನಿಬಂಧನೆಗಳ ಬಗ್ಗೆ ಶೈಕ್ ಇಬ್ನು ಉತೈವಿೂನ್ ಹೀಗೆ ಹೇಳುತ್ತಾರೆ, “ಪತಿಯು ತನ್ನ ಬಯಕೆಯನ್ನು ಪೂರೈಸಲಿಕ್ಕಾಗಿ ಪತ್ನಿಯನ್ನು ಕರೆದರೆ ಅದಕ್ಕೆ ಸ್ವಂದಿಸುವುದು ಪತ್ನಿಯ ಬಾಧ್ಯತೆಯಾಗಿದೆ. ಶಾರೀರಿಕ ಅಥವಾ ಮಾನಸಿಕವಾದ ಕಷ್ಟಗಳನ್ನು ಅನುಭವಿಸುವ ಸಂದರ್ಭಗಳಲ್ಲಿ ಪತಿಯು ಆಕೆಯನ್ನು ಒತ್ತಾಯ ಪಡಿಸಲೂಬಾರದು. ಏಕೆಂದರೆ, ಪ್ರವಾದಿಯವರು(ಸ) ಹೇಳಿದ್ದಾರೆ, “ದ್ರೋಹ ಮಾಡಬಾರದು, ಪ್ರತಿದ್ರೋಹ ಮಾಡಬಾರದು” ಅಥವಾ ಅವಳ ಮನಸ್ಸಿಗೆ ನೋವುಂಟಾಗದ ರೀತಿಯಲ್ಲಿ ಸ್ವತಃ ಹಿಂದೆ ಸರಿಯುವ ಮನೋಭಾವವನ್ನು ಪತಿ ಬೆಳೆಸಿಕೊಳ್ಳಬೇಕು. ಒಟ್ಟಿನಲ್ಲಿ, ಇಸ್ಲಾವಿೂ ನಿರ್ದೇಶನಗಳನ್ನೂ ಕಟ್ಟುಪಾಡುಗಳನ್ನೂ ಪಾಲಿಸಲಾಗುವ, ಪ್ರವಾದಿವರ್ಯರ(ಸ) ಉದಾತ್ತ ಮಾದರಿಯನ್ನು ಅನುಸರಿಸುವ ಒಂದು ವಿವಾಹದಲ್ಲಿ ದಾಂಪತ್ಯ ಕಿರುಕುಳ ಎಂಬ ಸ್ಥಿತಿ ಉಂಟಾಗಲಿಕ್ಕಿಲ್ಲ. ಬದಲಾಗಿ ಅಲ್ಲಿ ದೈಹಿಕ ಸಂಬಂಧವು ಪವಿತ್ರವಾದ ಪ್ರೇಮ ಹಾಗೂ ಅನುಕಂಪದ ಆಧಾರದಲ್ಲಿ ಉಂಟಾಗುವುದಾಗಿದೆ.
  ಪ್ರಮುಖ ವಿದ್ವಾಂಸರೂ ನಾರ್ತ್ ಅಮೇರಿಕನ್ ಫಿಕ್ಹ್ ಕೌನ್ಸಿಲ್‍ನ ಸದಸ್ಯರೂ ಆದ ಮುಹಮ್ಮದ್ ಅಲ್ ಹಾನೂತಿ ಹೇಳುತ್ತಾರೆ, “ಪತಿ-ಪತ್ನಿಯರ ಮಧ್ಯೆ ಇರುವ ಪ್ರೀತಿಯು ಗಾಢವಾಗಬೇಕಾದದ್ದು ಪರಸ್ಪರ ಗೌರವ ಹಾಗೂ ಬಾಂಧವ್ಯದ ಹಿನ್ನೆಲೆಯಿಂದಾಗಿರಬೇಕು. ಅದರಲ್ಲಿ ದುರಾಗ್ರಹ ಹಾಗೂ ಬಲಾತ್ಕಾರದ ಸ್ವಭಾವವು ಇರಬಾರದು.” ಪ್ರವಾದಿಯವರು(ಸ) ತಮ್ಮೊಂದಿಗೆ ಹೇಗೆ ವರ್ತಿಸುತ್ತಿದ್ದರು ಎಂಬುದನ್ನು ಅವರ ಪತ್ನಿಯರೇ ತಿಳಿಸಿರುತ್ತಾರೆ.
  ತನ್ನ ಜೋಡಿಯು ಕರೆದರೆ ಪತ್ನಿಯ ಭಾಗದಿಂದ ಅನುಕೂಲಕರ ಪ್ರತಿಕ್ರಿಯೆ ಉಂಟಾಗಬೇಕು. ಪತಿಯನ್ನು ಗೌರವಿಸಬೇಕು. ಅದೇ ವೇಳೆ ಒತ್ತಾಯ ಪೂರ್ವಕವಾಗಿ ತನ್ನ ಅವಶ್ಯಕತೆಯನ್ನು ಪೂರೈಸಿಕೊಳ್ಳುವ ಸ್ವಭಾವವು ಪತಿಯಲ್ಲಿರಬಾರದು. ವಾಸ್ತವದಲ್ಲಿ ಪತಿಯು ಪತ್ನಿಯ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವವನಾಗಿದ್ದಾನೆ. ಆದ್ದರಿಂದ ಆಕೆಯು ಮಾನಸಿಕ ಸಾಮೀಪ್ಯ ಪಡೆಯಲು ಬಯಸುವಾಗಲೆಲ್ಲಾ ಪತಿಯು ಅದಕ್ಕೆ ಸ್ಪಂದಿಸಬೇಕು. ಮಾತ್ರವಲ್ಲ, ಅದಕ್ಕಾತನು ಬಾಧ್ಯಸ್ಥನಾಗಿರುತ್ತಾನೆ. ನಿಬಿಡತೆಯಿಂದಾಗಿ ಪತಿಗೆ ಈ ರೀತಿ ವರ್ತಿಸುವುದರಲ್ಲಿ ಲೋಪದೋಷ ಉಂಟಾದರೆ ಅದು ಕ್ಷಮಾರ್ಹವಾದ ತಪ್ಪಾಗಿದೆ. ಅದೇ ವೇಳೆ, ನಾಲ್ಕು ತಿಂಗಳಿಗಿಂತ ಹೆಚ್ಚಾಗಿ ಪತಿಯು ಪತ್ನಿಯಿಂದ ಬೇರ್ಪಟ್ಟು ನಿಲ್ಲುವ ಸ್ಥಿತಿಯು ಉಂಟಾಗಬಾರದು.

 • ಕಥೆಗಳು ಸುಳ್ಳು ಹೇಳುವುದಕ್ಕೆ ಸಮಾನವೇ?
  ismika03-12-2014

  ಪ್ರಶ್ನೆ: ಹೊಸದಾಗಿ ಕಥೆಗಳನ್ನು ನಿರ್ಮಿಸುವುದರ ವಿಧಿ ಏನು? ಎಲ್ಲವೂ ಉತ್ತಮ ಪಾಠಗಳಿರುವಂತಹ ಕಥೆಗಳೇ ಆಗಿವೆ. ಅದೇ ರೀತಿ ಜನಪ್ರಿಯ ಕಥೆಗಳು ಎಂದು ಪ್ರಸಿದ್ಧವಾಗಿರುವ ಕಥೆಗಳು? ಇಸ್ಲಾವಿೂ ನಿಯತಕಾಲಿಕಗಳಲ್ಲಿ ಪ್ರಾಣಿಯ ಕಥೆಗಳೂ ತಮಾಷೆಯ ಕಥೆಗಳೂ ಪಾಠ ಇರುವಂತಹದ್ದೂ ಸಮಯ ಕೊಲ್ಲುವಂತಹದ್ದೂ ಆಗಿವೆ. ಕೆಲವು ಸುಳ್ಳು ಕಥೆಗಳೂ ಇವೆ. ಇವುಗಳು ಸುಳ್ಳು ಹೇಳುವದರ ಸಾಲಿಗೆ ಸೇರುವುದಿಲ್ಲವೇ? ಉತ್ತರ ನಿರೀಕ್ಷಿಸುತ್ತೇನೆ.

  ಉತ್ತರ: ಮನುಷ್ಯನಿಗೆ ಅನೇಕ ವಿಶೇಷತೆ ಗಳಿವೆ. ಅವುಗಳ ಪೈಕಿ ಭಾವನೆಯು ಒಂದಾಗಿದೆ. ಅನೇಕ ಭಾವನೆಗಳು ವಾಸ್ತವವಾದಾಗ ಅದು ನಾಗರಿಕತೆಯ ಬೆಳೆವಣಿಗೆಗೆ ಕಾರಣವಾಯಿತು. ಹಾರುವುದನ್ನು ಭಾವನೆಯ ಮೂಲಕ ಕಂಡಾಗ ಅದು ವಿಮಾನದ ನಿರ್ಮಾ ಣಕ್ಕೆ ಕಾರಣವಾಯಿತು. ದೂರದ ದೃಶ್ಯ ಗಳನ್ನು ಕುಳಿತಲ್ಲಿಂದಲೇ ನೋಡ ಬೇಕೆಂಬ ಭಾವನೆ ಉಂಟಾದಾಗ ಟೆಲಿ ವಿಶನ್ ಅಸ್ತಿತ್ವಕ್ಕೆ ಬಂತು.
  ಅಲ್ಲಾಹನ ಅನುಗ್ರಹವಾದ ಭಾವನೆ ಯನ್ನು ಕ್ರಿಯಾತ್ಮಕವಾಗಿ ಉತ್ತಮ ಕೆಲಸಗಳಿಗೆ ಉಪಯೋಗಿಸುವ ಒಂದು ರೀತಿಯು ಕಥಾ ರಚನೆಯಾಗಿದೆ. ಕಥಾ ಪಾತ್ರಗಳು ಕಲ್ಪಿತ ಎಂದು ಓದು ಗರಿಗೆ ತಿಳಿದಿರುತ್ತದೆ. ಆದ್ದರಿಂದ ಇವು ಗಳು ಸುಳ್ಳು ಹೇಳಿದುದರ ಸಾಲಿಗೆ ಸೇರುವುದಿಲ್ಲ.
  ಇಸ್ಲಾಮ್ ಎಲ್ಲಾ ಕರ್ಮಗಳಿಗೂ ಮೇರೆಗಳನ್ನು ನಿರ್ಣಯಿಸಿದೆ. ಒಳಿತನ್ನು ಸ್ಥಾಪಿಸಲು ಕೆಡುಕನ್ನು ಅಳಿಸಲು ಸಹಾಯ ಕವಾಗುವ ಕೆಲಸಗಳನ್ನು ವಿಶ್ವಾಸಿಯು ಮಾಡಬೇಕಾಗಿದೆ. ಮನುಷ್ಯನ ಮನಸ್ಸಿಗೆ ಒತ್ತಡ ಉಂಟು ಮಾಡುವಂತಹದ್ದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಸ್ಯ ಗಳೂ ವಿನೋದಗಳೂ ಒತ್ತಡವನ್ನು ಕಡಿಮೆಗೊಳಿಸಲು ಸಹಾಯಕವಾಗುತ್ತವೆ. ಆದರೆ ಇದರಲ್ಲಿ ಜಾಗರೂಕತೆ ಪಾಲಿ ಸಲು ಪ್ರವಾದಿ(ಸ) ಹೇಳಿದ್ದಾರೆ. ‘ಜನರು ನಗಿಸಲಿಕ್ಕಾಗಿ ಮಾತ್ರ ಮಾತನಾಡುವು ದನ್ನು’ ಪ್ರವಾದಿ(ಸ) ವಿರೋಧಿಸಿದ್ದಾರೆ. ಹಾಸ್ಯದೊಂದಿಗೆ ಧಾರ್ಮಿಕತೆಯೂ ಸೇರಿ ಕೊಂಡಾಗ ಅದು ಪ್ರಯೋಜನಕಾರಿಯಾಗುತ್ತದೆ.
  ಮನುಷ್ಯನು ಮಾಡುವ ನೀಚ ಕೆಲಸಗಳನ್ನು ಬಹಿರಂಗವಾಗಿ ವಿಮರ್ಶಿಸಲು ಸ್ವಾತಂತ್ರ್ಯವಿಲ್ಲದ ಕಡೆಗಳಲ್ಲಿ ಮೃಗಗಳನ್ನು ಕಥಾ ಪಾತ್ರಗಳನ್ನಾಗಿಸು ತ್ತೇವೆ. ಅನೇಕ ಭಾಷೆಗಳಿಗೆ ಅನುವಾದಗೊಂಡ ಪಂಚತಂತ್ರ ಕಥೆಗಳು ಇದಕ್ಕೆ ಉದಾಹರಣೆ ಗಳಾಗಿವೆ.
  ಕಥೆಗಳು ಸಮಯವನ್ನು ಹಾಳು ಮಾಡು ವಂತಹದ್ದಾಗಿರಬಾರದು. ಪವಿತ್ರ ಕುರ್‍ಆನಿನಲ್ಲಿ ಕಥೆಗಳನ್ನು ಪ್ರಸ್ತಾಪಿಸಿದ ಬಳಿಕ “ಈ ಕಥೆಗಳಲ್ಲಿ ಆಲೋಚಿಸುವವರಿಗೆ ಪಾಠವಿದೆ” ಎಂದು ಪ್ರತ್ಯೇಕವಾಗಿ ಹೇಳಲಾಗಿದೆ. ಪ್ರವಾದಿ ಯವರು(ಸ) ಅನುಚರರಿಗೆ ಹೇಳಿದ ಕಥೆಗಳಲ್ಲಿ ಇಂತಹದ್ದೇ ಪಾಠಗಳಿರುತ್ತಿದ್ದವು.
  ಕಥೆಗಳನ್ನು ಮನುಷ್ಯನಿಗೆ ನೆನಪಿಸಲು ಸುಲಭವಾಗುತ್ತವೆ. ಅವು ಅವನ ಮನಸ್ಸಿಗೆ ಬೇಗನೇ ಹತ್ತಿಕೊಳ್ಳುತ್ತವೆ. ನೆನಪಿನ ಶಕ್ತಿಯು ಹೆಚ್ಚಿಸಲಿಕ್ಕಾಗಿ ವಿಷಯಗಳನ್ನು ಕಥೆಯ ರೂಪದಲ್ಲಿ ಹೇಳುವ ಶೈಲಿಯಿದೆ. ವೈಜ್ಞಾನಿಕ ವಿಷಯಗಳೂ ಹೀಗೆ ರೂಪಾಂತರ ಗೊಳಿಸಿ ನೆನಪಿಸಿಕೊಳ್ಳಲು ಸುಲಭವಾಗುತ್ತದೆ. ಭಾವನೆಗಳನ್ನು ಇಂತಹ ಪ್ರಯೋಜನಕಾರಿಯಾದ ರಂಗಗಳಿಗೆ ಕೊಂಡೊ ಯ್ಯುವುದು ಹೆಚ್ಚು ಉತ್ತಮವಾಗಿದೆ. ಆದ್ದರಿಂದ ಪಾಠವಿರುವಂತಹ ಉತ್ತಮ ಕಥೆಗಳು ಸುಳ್ಳಿನ ಸಾಲಿಗೆ ಸೇರುವುದಿಲ್ಲ.
 • ಮಂತ್ರ: ಸರಿ-ತಪ್ಪು ?
  ismika03-12-2014

  ಪ್ರಶ್ನೆ: ಇತ್ತೀಚೆಗೆ ನಾನು ಒಂದು ಪುಸ್ತಕದಲ್ಲಿ ಈ ರೀತಿ ಬರೆದದ್ದನ್ನು ನೋಡಿದ್ದೇನೆ, “ರೋಗಗಳಿಗೆ ಮದ್ದು ಎರಡು ರೂಪಗಳಲ್ಲಿವೆ. ಒಂದು ಔಷಧ ಹಾಗೂ  ಇನ್ನೊಂದು ಮಂತ್ರ. ಪ್ರವಾದಿ(ಸ) ಇವೆರಡನ್ನೂ ಉಪಯೋಗಿಸಿದ್ದಾರೆ ಮತ್ತು ನಮಗೂ ಅದನ್ನು ಮಾಡಲು ಹೇಳಿದ್ದಾರೆ.” ಇದು ಸರಿಯೇ? ರೋಗ  ಶಮನಕ್ಕೆ ಮಂತ್ರ ಉಪಯೋಗಿಸಲು ಕಲಿಸಿರುವ ಹದೀಸ್‍ಗಳಿವೆಯೇ?

   
  ಉತ್ತರ: ಮಂತ್ರಗಳು ಹಲವು ವಿಧಗಳಲ್ಲಿವೆ. ಕೆಲವರು ಮಂತ್ರದ ಹೆಸರಿನಲ್ಲಿ ದೇವನ ಶಕ್ತಿಯ ಸೇವೆಯನ್ನು ಸ್ವತಃ ಕಲ್ಪಿಸುತ್ತಾ ಕೆಲವು ಕರ್ಮಗಳನ್ನು ಮಾಡುತ್ತಾರೆ.  ಇನ್ನು ಕೆಲವರು ಕೆಲ ಕಾಗದದಲ್ಲೂ ಕೋಳಿ ಮೊಟ್ಟೆಯಲ್ಲೂ ತಗಡಿನಲ್ಲೂ ಏನೆಲ್ಲಾ ಬರೆದು ಅದನ್ನು ಮಣ್ಣಿನಲ್ಲಿ ಹೂತು ಹಾಕುತ್ತಾರೆ ಅಥವಾ ಮನೆಯ  ಯಾವುದಾದರೂ ಕಡೆಗಳಲ್ಲಿ ಕಟ್ಟಿ ತೂಗುಹಾಕುತ್ತಾರೆ. ಇವೆಲ್ಲವೂ ಅನಾಚಾರ ಗಳಾಗಿವೆ. ಕುರ್‍ಆನ್ ಸೂಕ್ತಗಳು ಹಾಗೂ ಇಸ್ಲಾವಿೂ ಪ್ರಾರ್ಥನೆಗಳನ್ನು  ಪಠಿಸುತ್ತಾ ರೋಗಿಯ ಮೇಲೆ ಊದುವುದನ್ನು ಮಂತ್ರ ಎಂದು ಹೇಳಲಾಗುತ್ತದೆ.
  ಮೇಲೆ ಕೊನೆಯಲ್ಲಿ ಹೇಳಲಾದ ಮಂತ್ರವನ್ನು ಇಸ್ಲಾಮ್ ಅನುಮತಿಸಿದೆ ಮತ್ತು ಪ್ರವಾದಿ(ಸ) ಮಾಡಿದ್ದೂ ಆಗಿದೆ. ವಾಸ್ತವದಲ್ಲಿ ಇದು ಪ್ರಾರ್ಥನೆಯಾಗಿದೆ.  ಓರ್ವ ರೋಗಿಯ ಬಳಿ ನಿಂತು ಇವರಿಗೆ ರೋಗದಿಂದ ಮುಕ್ತಿ ನೀಡು ಎಂದು ಪ್ರಾರ್ಥಿಸುವುದಾಗಿದೆ. ಅದರೊಂದಿಗೆ ರೋಗಿಯ ಶರೀರಕ್ಕೆ  ಊದುವುದಾಗಿದೆ. ಈ ರೀತಿ ಮಾಡುವುದು ಊದುವಿಕೆ ಹಾಗೂ ಪ್ರಾರ್ಥನೆಗೆ ಔಷಧದ ಗುಣ ಇರುವುದರಿಂದಲ್ಲ. ಹಾಗೆ ಔಷಧದ ಗುಣ ಇದೆಯೆಂದು  ಪ್ರವಾದಿ(ಸ) ಕಲಿಸಿಯೂ ಇಲ್ಲ, ಆದರೆ ಪ್ರಾರ್ಥನೆಗೆ ಅದರದ್ದೇ ಆದ ಫಲ ಹಾಗೂ ಸ್ವಾಧೀನವಿದೆ. ರೋಗ ಶಮನದ ವಿಷಯದಲ್ಲಿ ಮಾತ್ರವಲ್ಲ, ಎಲ್ಲದಕ್ಕೂ  ರೋಗಿಯ ಶರೀರಕ್ಕೆ ಊದುವುದು ಸುಖ ಹಾಗೂ ನೆಮ್ಮದಿಯ ಪ್ರತೀಕವಾಗಿದೆ.
  ಒಟ್ಟಿನಲ್ಲಿ ಇಸ್ಲಾಮ್ ಅನುಮತಿಸಿರುವ ಮಂತ್ರವು ರೋಗ ಶಮನಕ್ಕಿರುವ ಪ್ರಾರ್ಥನೆಯ ಇಸ್ಲಾವಿೂ ಶೈಲಿಯಾಗಿದೆ. ಪ್ರವಾದಿ(ಸ) ಮಂತ್ರಿಸಿರುವುದಾಗಿ  ಉದ್ಧರಿಸಲ್ಪಟ್ಟ ಹದೀಸ್‍ಗಳನ್ನು ಪರಿ ಶೀಲಿಸಿದರೆ ಇದು ಸ್ಪಷ್ಟವಾಗಬಹುದು. ಬುಖಾರಿ ವರದಿ ಮಾಡಿರುವ ಬಅïಸಿ ಇಶ್ಪಿ ಅಂತಶ್ಶಾಫಿ ಲಾ  ಶಾಫಿಯ ಇಲ್ಲಾ  ಅಂತ ಶಿಫಾಅನ್ ಲಾ ಯುಗಾದಿರು ಸಕಮ” (ಜನರ ಪ್ರಭುವಾದ ಅಲ್ಲಾಹನೇ, ತೊಂದರೆಗಳನ್ನು ನೀಗಿಸುವವನೇ, ನೀನು ರೋಗವನ್ನೂ ಶಮನಗೊಳಿಸು,  ಒಂದು ರೋಗವನ್ನು ಬಾಕಿಯಿರಿಸದಂತಹ ಶಮನ, ರೋಗ ಶಮನ ಮಾಡುವವನಾಗಿ ನೀನಲ್ಲದೆ ಇನ್ನಾರೂ ಇಲ್ಲ.) ಬುಖಾರಿ ವರದಿ ಮಾಡಿರುವ  ಇನ್ನೊಂದು ಹದೀಸ್‍ನಲ್ಲಿ ಪ್ರವಾದಿ(ಸ) ಈ ರೀತಿ ಮಂತ್ರಿಸಿರುವುದಾಗಿ ಕಾಣಬಹುದು. “ಇಂಸಹಿಲ್ ಬಅïಸ ರಬ್ಬನ್ನಾ ಬಿಯದಿಕಶ್ಶಿಫಾಉ
  ಲಾ ಕಾಶಿಫಲಹು ಇಲ್ಲಾ ಅಂತ.” (ಮಾನವರ ಪ್ರಭುವೇ, ನೀನು ತೊಂದರೆಗಳನ್ನು ನೀಗಿಸು. ರೋಗ ಶಮನವು ನಿನ್ನ ಕೈಯಲ್ಲಿದೆ. ನೀನಲ್ಲದೆ ತೊಂದರೆಗಳನ್ನು ನೀಗಿಸುವವನು ಇನ್ನಾರೂ ಇಲ್ಲ.)
  ಮಂತ್ರವನ್ನು ಅನುಮತಿಸಿರುವ ಹದೀಸ್‍ಗಳನ್ನು ವಿವರಿಸುತ್ತಾ ಸ್ವಹೀಹುಲ್ ಬುಖಾರಿಯ ವಾಖ್ಯಾನ ಕಾರರಾದ ಇಬ್ನುಲ್ ಹಜರ್ ತನ್ನ ಫತುಹುಲ್  ಬಾರಿಯಲ್ಲಿ ಹೀಗೆ ಬರೆದಿದ್ದಾರೆ, “ಯಾವುದೇ ವಿಷಯದಲ್ಲಿ ಅಲ್ಲಾಹನ ಕಡೆಗೆ ಭಯದಿಂದ ಮರಳುವುದು ಹಾಗೂ ಅವನೊಂದಿಗೆ ಅಭಯ ಯಾಚಿಸುವುದಕ್ಕೆ ಶರೀಅತ್ ಅನುಮತಿಸಿದೆ ಎಂಬ ವಿಚಾರದಲ್ಲಿ ತರ್ಕವಿಲ್ಲ.”
  ಇಬ್ನುತ್ತೀನ್ ಹೇಳುತ್ತಾರೆ, “ಮಅವ್ವದಾತ್ (ಅಲ್ಲಾಹನೊಂದಿಗೆ ಅಭಯ ಯಾಚಿಸುವ ವಚನಗಳು) ಹಾಗೂ ಇತರ ದೇವನಾಮಗಳ ಮಂತ್ರಗಳು ಆಧ್ಯಾತ್ಮಿಕ  ಚಿಕಿತ್ಸೆಗಳಾಗಿವೆ. ಅದು ಸಜ್ಜನರ ನಾಲಗೆಯಿಂದ ಹೊರಡುವುದಾದರೆ ದೇವ ಸಹಾಯದಿಂದ ರೋಗ ಶಮನ ಉಂಟಾಗುತ್ತದೆ. ಇಂತಹ ವ್ಯಕ್ತಿಗಳ ಕೊರತೆ  ಉಂಟಾದಾಗ ಜನರು ಶಾರೀರಿಕ ಚಿಕಿತ್ಸೆ ಹಾಗೂ ಜಿನ್ನ್ ಸೇವೆ ಎಂಬ ಸ್ವತಃ ಕಲ್ಪಿಸಿಕೊಳ್ಳುವ ವ್ಯಕ್ತಿಗಳು ಹಾಗೂ ಅವರ ಮಂತ್ರಗಳಿಗೆ ಮೊರೆ  ಹೋಗತೊಡಗಿದರು. ಹಾಗೆ ಅವರು ಸತ್ಯ, ಮಿಥ್ಯ, ದೇವ ನಾಮಗಳು, ಪಿಶಾಚಿಗಳ ನಾಮ ಹಾಗೂ ಅವುಗಳೊಂದಿಗಿನ ಸಹಾಯ ಯಾಚನೆ ಗಳೆಲ್ಲಾ  ಮಿಶ್ರಗೊಳಿಸಿ ಮಂತ್ರ ನಡೆಸುತ್ತಾರೆ. (ಫತುಹುಲ್ ಬಾರಿ ಭಾಗ-12, ಪುಟ-305)
  ಮೂರು ನಿಬಂಧನೆಗಳೊಂದಿಗೆ ಮಂತ್ರವು ಅನುವದನೀಯವಾಗುತ್ತದೆ ಎಂಬ ವಿಚಾರದಲ್ಲಿ ವಿದ್ವಾಂಸರು ಒಮ್ಮತಾಭಿಪ್ರಾಯ ಹೊಂದಿದ್ದಾರೆ ಎಂದು ಇಬ್ನು  ಹಜರ್ ಬರೆದಿದ್ದಾರೆ.
  (1) ಅಲ್ಲಾಹನ ವಚನಗಳು ಅಥವಾ ಗುಣ ನಾಮಗಳಿಂದ ಕೂಡಿದ್ದಾಗಿರಬೇಕು.
  (2) ಅರಬಿ ಭಾಷೆಯಲ್ಲಿ ಅಥವಾ ಅರ್ಥ ತಿಳಿದಿರುವ ಇನ್ನಾವುದೇ ಭಾಷೆಯಲ್ಲಾಗಿರಬೇಕು.
  (3) ಮಂತ್ರಕ್ಕೆ ಯಾವುದೇ ಶಕ್ತಿಯಿಲ್ಲ, ಅದನ್ನು ಫಲಕಾರಿಯಾಗಿಸುವುದು ಅಲ್ಲಾಹನಾಗಿದ್ದಾನೆ ಎಂಬ ವಿಶ್ವಾಸವಿರಬೇಕು.
  ಮುಸ್ಲಿಮ್ ವರದಿ ಮಾಡಿರುವ ಹದೀಸ್‍ನಲ್ಲಿ ಈ ರೀತಿ ಇದೆ. “ಅಜ್ಞಾನ ಕಾಲದಲ್ಲಿ ಮಂತ್ರ ನಡೆಸುತ್ತಿದ್ದ ಔಫ್ ಬಿನ್ ಮಾಲಕ್‍ರವರು  ಪ್ರವಾದಿಯವರೊಂದಿಗೆ(ಸ) ಅದರ ಬಗ್ಗೆ ವಿಚಾರಿ ಸಿದರು. ಪ್ರವಾದಿಯವರು(ಸ) ಆ ಮಂತ್ರವನ್ನು ಆಲಿಸಲು ಮನವಿ ಮಾಡುತ್ತ ಹೇಳಿದರು. “ಶಿರ್ಕ್ ಇಲ್ಲದ  ಮಂತ್ರದಿಂದ ಯಾವುದೇ ತೊಂದರೆಯಿಲ್ಲ.” ಇಂತಹ ಹದೀಸ್‍ಗಳು ಬೇರೆಯೂ ಇವೆ. ಇದರಿಂದೆಲ್ಲಾ ತಿಳಿದು ಕೊಳ್ಳಲು ಸಾಧ್ಯವಾಗುವುದೇನೆಂದರೆ ರೋಗ  ಶಮನಕ್ಕಿರುವ ಒಂದು ಪಾರ್ಥನೆ ಎಂಬ ನೆಲೆಯಲ್ಲಿ ಮಂತ್ರವು ಅನುವದನೀಯವಾಗಿದೆ. ಮಂತ್ರ ದಲ್ಲಿ ಅಲ್ಲಾಹೇತರರೊಂದಿಗಿರುವ ಆರಾಧನೆ,  ಅವರೊಂದಿಗಿರುವ ಸಹಾಯ ಯಾಚನೆ ಇರಬಾರದು. ಅದು ಶಿರ್ಕಾಗಿದೆ. ಮಂತ್ರ ಹಾಗೂ ಮಂತ್ರಿಸುವವರಿಗೆ ದಿವ್ಯ ಶಕ್ತಿ ಇದೆ ಎಂಬ ವಿಶ್ವಾಸ ಇರಬಾರದು.  ಮಂತ್ರವನ್ನು ಫಲಕಾರಿಯಾಗಿಸುವುದು ಅಲ್ಲಾಹನಾಗಿದ್ದಾನೆ.
  ಇಸ್ಲಾಮ್ ಬರುವುದಕ್ಕಿಂತ ಮುಂಚೆಯೇ ಮಂತ್ರವನ್ನು ಒಂದು ಚಿಕಿತ್ಸಾ ರೂಪವಾಗಿ ಸ್ವೀಕರಿಸಲಾಗಿತ್ತು. ಮಂತ್ರದಲ್ಲಿ ಶಿರ್ಕ್‍ನ ಅಂಶವಿರುವ ಪ್ರಾರ್ಥನೆಗಳು,  ವಚನಗಳು, ಅಂತಹ ನಂಬಿಕೆಗಳು ಬೆರೆಯಬಾರದು. ಪ್ರಾರ್ಥನೆಗೆ ಉತ್ತರ ನೀಡುವುದು ಅಲ್ಲಾಹನ ತೀರ್ಮಾನ. ಮಂತ್ರದಿಂದ ಮನಸ್ಸಿಗೆ ಸ್ವಲ್ಪ ನೆಮ್ಮದಿ  ದೊರೆಯಬಹುದೇ ಹೊರತು ಅದಕ್ಕೆ ರೋಗ ಶಮನದ ಶಕ್ತಿಯಿಲ್ಲ ಎಂಬುದಾಗಿ ಪ್ರವಾದಿಯವರು(ಸ) ಕಲಿಸಿರುವರು. ಮಂತ್ರವು ಔಷಧ ಚಿಕಿತ್ಸೆಗೆ  ಪರ್ಯಾಯವಾಗಿ ನೀಡುವ ಮದ್ದು ಎಂದು ಪ್ರವಾದಿ(ಸ) ಕಲಿಸಿಲ್ಲ. ರೋಗಗಳನ್ನೆಲ್ಲಾ ಸೃಷ್ಟಿಸಿದ್ದು ಅಲ್ಲಾಹ್. ಅವನೇ ಅದಕ್ಕಿರುವ ಮದ್ದನ್ನು ಸೃಷ್ಟಿಸಿದ್ದಾನೆ. ಆ  ಮದ್ದನ್ನು ಕಂಡು ಹಿಡಿದು ರೋಗಕ್ಕೆ ಚಿಕಿತ್ಸೆ ನೀಡಲು ಪ್ರವಾದಿ(ಸ) ಕಲಿಸಿದ್ದಾರೆ.
  ಪ್ರವಾದಿ(ಸ) ಅನುಮತಿ ನೀಡಿರುವ ಮಂತ್ರವು ಇಸ್ಲಾವಿೂ ತತ್ವಗಳಿಗೆ ವಿರುದ್ಧವಾದದ್ದೋ ವಿಜ್ಞಾನಕ್ಕೆ ಸವಾಲಾದದ್ದೋ ಅಲ್ಲ. ಇಸ್ಲಾಮ್ ಅನುಮತಿ ಸಿರುವ  ಮಂತ್ರವನ್ನು ಪ್ರಚಾರ ಮಾಡುವುದು ಇಸ್ಲಾಮಿಗೆ ವಿರುದ್ಧ ಎಂದು ಹೇಳುವಂತಿಲ್ಲ. ಆದರೆ, ಮಂತ್ರವು ರೋಗ ಶಮನಕ್ಕೆ ಔಷಧದಂತೆಯೇ ಇರುವ ಒಂದು  ವಸ್ತುವಾಗಿದೆ. ಅದನ್ನು ಬಳಸಲು ಪ್ರವಾದಿ(ಸ) ಆಜ್ಞಾಪಿಸಿದ್ದಾರೆ ಎಂದು ಪ್ರಚಾರ ಪಡಿಸುವುದು ಇಸ್ಲಾಮಿಗೆ ವಿರುದ್ಧವಾಗಿದೆ. ಶಿರ್ಕ್ ಬೆರೆತಿರುವ ಮಂತ್ರಗಳು,  ಮಂತ್ರದ ಹೆಸರಿನಲ್ಲಿ ಮಾಡುವ ಕಸರತ್ತುಗಳು, ಆಚಾರಗಳು ಖಂಡಿತವಾಗಿಯೂ ನಿಷಿದ್ಧವಾಗಿದೆ.
 • ಕುಟುಂಬ ಸಂಬಂಧ ಮತ್ತು ಹೆತ್ತವರೊಂದಿಗೆ ವರ್ತನೆ?
  ismika03-12-2014

  ಪ್ರಶ್ನೆ: ನಮ್ಮ ಕುಟುಂಬವು ಆರ್ಥಿಕ ಅಥವಾ ಶಾರೀರಿಕವಾದ ಯಾವುದೇ ಸಮಸ್ಯೆಗಳಿಲ್ಲದ ಒಂದು ಕುಟುಂಬವಾಗಿದೆ.  ಆದರೆ ಅತ್ಯಂತ ಹತ್ತಿರದ ಸಂಬಂಧಿಕರೊಂದಿಗೆ ನಾವು ಮನಸ್ತಾಪ ಹೊಂದಿದ್ದೇವೆ. ನಮ್ಮೊಂದಿಗೆ ಅನ್ಯಾಯವೆಸಗಿದವರೊಂದಿಗೆ ಯಾವುದೇ ರೀತಿಯ ಸಂಬಂಧ ಹೊಂದಬಾರದೆಂದು ಮಕ್ಕಳಾದ ನಮ್ಮಲ್ಲಿ ಹೆತ್ತವರು ಹೇಳಿದ್ದಾರೆ.  ಆದರೆ ನಮಗೆ ಹಳೆಯ ವಿಷಯಗಳಲ್ಲಿ ಯಾವುದೇ ಸಂಬಂಧವಿಲ್ಲದ್ದರಿಂದ ನಾವು ಸಂಬಂಧಿಕರೊಂದಿಗೆ ಉತ್ತಮವಾಗಿ  ವರ್ತಿಸಲು ಬಯಸುತ್ತೇವೆ. ಈ ರೀತಿ ಮಾಡಿದರೆ ಹೆತ್ತವರನ್ನು ಧಿಕ್ಕರಿಸಿದಂತಾಗುತ್ತದೆಯೇ?

  ಉತ್ತರ: ಹಿಂದಿನ ಕಾಲದ ನಡೆದ ಮನಸ್ತಾಪಕ್ಕೆ ಹೆತ್ತವರು ಹಠ ಹಿಡಿಯುವುದನ್ನು ಸಾಮಾನ್ಯವಾಗಿ ನಾವು ನೋಡುತ್ತೇವೆ.  ಇಲ್ಲಿ ಯುಕ್ತಿ ಮತ್ತು ಸುಧಾರಣೆಯಿಂದ ಈ ಸಮಸ್ಯೆಯನ್ನು ಪರಿಹರಿಸಬೇಕು. ಸಂಬಂಧ ಮುರಿಯುವುದರಿಂದ  ಯಾವುದೆಲ್ಲ ಪರಿಣಾಮ ಇದೆ ಎಂಬುದನ್ನು ಹೆತ್ತವರಿಗೆ ಮನಮುಟ್ಟುವಂತೆ ಸುಧಾರಣೆಯ ರೂಪದಲ್ಲಿ  ಹೇಳಿಕೊಡಬೇಕು. ಆದರೂ ಕೆಲವೊಮ್ಮೆ ಹೆತ್ತವರು ಹಠ ಹಿಡಿಯುವ ಸಾಧ್ಯತೆಯಿದೆ. ಒಬ್ಬರೊಂದಿಗೆ ಸಂಬಂಧ ಬೆಳೆಸಲು  ಹೋಗಿ ಹೆತ್ತವರೊಂದಿಗೆ ಸಂಬಂಧ ಕಡಿಯುವ ಪರಿಸ್ಥಿತಿಯೊದಗದಂತೆ ಯುಕ್ತಿಯಿಂದ ನೋಡಿಕೊಳ್ಳಬೇಕು. ಇತ್ತ  ತಾಯಿಯನ್ನು ಸುಧಾರಿಸುತ್ತಲೂ ಅತ್ತ ಅವರೊಂದಿಗೆ ಸಂಬಂಧ ಮರುಸ್ಥಾಪಿಸಲೂ ಪ್ರಯತ್ನಿಸಬೇಕು.
  ಇದು ನಮ್ಮ ನಾಡಿನಲ್ಲಿ ಸಾಮಾನ್ಯವಾಗಿ ನಡೆಯುವಂತಹ ಘಟನೆಗಳಾಗಿವೆ. ಇವೆಲ್ಲವೂ ಕುರ್‍ಆನ್ ಹಾಗೂ ಪ್ರವಾದಿ ವಚನಗಳನ್ನು ಕಡೆ ಗಣಿಸಿ ಸ್ವಂತ ಇಷ್ಟದ ಪ್ರಕಾರ ತೀರ್ಮಾನಗಳನ್ನು ತಾಳುವುದರ ಫಲವಾಗಿದೆ. ಓರ್ವ ವಿಶ್ವಾಸಿಗೆ  ಸಂಬಂಧಿಸಿದಂತೆ ಆತನ ಜೀವನವು ಕುರ್‍ಆನ್ ಹಾಗೂ ಪ್ರವಾದಿ ಚರ್ಯೆಯ ಪ್ರಕಾರವಾಗಿರಬೇಕು. ಹಾಗಾದರೆ ಮಾತ್ರ  ಎರಡೂ ಲೋಕಗಳಲ್ಲಿ ನೆಮ್ಮದಿಯ ಜೀವನ ಸಾಗಿಸಲು ಸಾಧ್ಯ. ಆದ್ದರಿಂದ ಇಂತಹ ಸನ್ನಿವೇಶಗಳನ್ನು ಅಲ್ಲಾಹ್ ಮತ್ತು  ಪ್ರವಾದಿ(ಸ) ಹೇಗೆ ನಿರ್ವಹಿಸಿದ್ದಾರೆ ಎಂಬುದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
  ಪ್ರವಾದಿ ಪತ್ನಿ ಅಯಿಶಾರ(ರ) ಕುರಿತು ಕಪಟ ವಿಶ್ವಾಸಿಗಳು ಸುಳ್ಳಾರೋಪ ಹೊರಿಸಿದ ಘಟನೆ ಎಲ್ಲರಿಗೂ ತಿಳಿದೆ. ಅವರು  ಆಯಿಶಾರ(ರ) ಮೇಲೆ ವ್ಯಭಿಚಾರದ ಆರೋಪ ಹೊರಿಸಿ ಪ್ರವಾದಿಯವರ(ಸ) ಕುಟುಂಬವನ್ನು ಅವಹೇಳನ ಮಾಡಲು  ಪ್ರಯತ್ನಿಸಿದರು. ಘಟನೆಯ ಗಂಭೀರತೆ ಯನ್ನು ತಿಳಿಯದ ಹಲವು ಸಾಧು ಮುಸ್ಲಿಮರೂ ಆ ಅಪವಾದ ಪ್ರಚಾರದಲ್ಲಿ  ಭಾಗವಹಿಸಿದ್ದರು. ಅವರ ಪೈಕಿ ಮಿಸ್‍ತ್ವಹ್ ಎಂಬ ಸಹಾಬಿಯೂ ಇದ್ದರು. ಅವರು ಅಬೂಬಕರ್‍ರವರ(ರ) ಚಿಕ್ಕಮ್ಮನ  ಮಗನಾಗಿದ್ದರು. ಆಯಿಶಾರು(ರ) ಅಬೂಬಕರ್ ರವರ(ರ) ಮಗಳು. ಮಿಸ್‍ತ್ವಹ್‍ರವರನ್ನು ಅಬೂಬಕರ್‍ರವರು(ರ)  ನೋಡಿಕೊಳ್ಳುತ್ತಿದ್ದರು. ಅವರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನೆಲ್ಲಾ ಅಬೂಬಕರ್ ರವರೇ(ರ) ನೀಡುತ್ತಿದ್ದರು. ಆದರೆ  ಮಿಸ್‍ತ್ವಹ್ ಇವೆಲ್ಲವನ್ನೂ ಮರೆತು ಕಪಟ ವಿಶ್ವಾಸಿಗಳ ಪ್ರಚಾರಗಳಲ್ಲಿ ಭಾಗಿಯಾದರು. ಮುಸ್ಲಿಮ್ ಸಮುದಾಯವನ್ನು  ಪೂರ್ತಿಯಾಗಿ ತಲ್ಲಣಗೊಳಿಸಿದ ಈ ಘಟನೆಯ ನೈಜ ಸ್ಥಿತಿಯನ್ನು ಅಲ್ಲಾಹನು ದಿವ್ಯವಾಣಿಯ ಮೂಲಕ  ಬಹಿರಂಗಪಡಿಸಿದನು. ಸೂರಃ ಅನ್ನೂರ್‍ನ 11ರಿಂದ 20ರ ವರೆಗಿನ ಸೂಕ್ತಗಳು ಈ ಘಟನೆಯ ಪ್ರಯುಕ್ತ ಅವತೀರ್ಣಗೊಂಡಿತು. ಆದರೆ ಮಿಸ್‍ತ್ವಹ್‍ರ ಈ ಕೃತ್ಯವನ್ನು ಅಬೂಬಕರ್‍ರಿಗೆ(ರ) ಕ್ಷಮಿಸಲು ಸಾಧ್ಯವಾಗಲಿಲ್ಲ ಆದ್ದರಿಂದ,  ಅಬೂಬಕರ್‍ರವರು(ರ) ಮಿಸ್‍ತ್ವಹ್ ರಿಗೆ ನೀಡುತ್ತಿದ್ದ ಸಹಾಯವನ್ನು ನಿಲ್ಲಿಸುವುದಾಗಿ ಪ್ರತಿಜ್ಞೆ ಮಾಡಿದರು. ಆದರೆ  ಇಂತಹ ಪರಿಸ್ಥಿತಿ ಯಲ್ಲಿಯೂ ವಿಶ್ವಾಸಿಗಳು ತಮ್ಮ ವೈಚಾರಿಕತೆಯನ್ನು ಮರೆತು ಕುರುಡು ನಿರ್ಧಾರ ತಾಳಬಾರದು  ಎಂದು ಅಲ್ಲಾಹನು ಅಂತ್ಯ ದಿನದ ವರೆಗಿನ ಎಲ್ಲಾ ವಿಶ್ವಾಸಿಗಳಿಗೆ ಆಜ್ಞಾಪಿಸಿದನು. “ನಿಮ್ಮಲ್ಲಿ ಅನುಗ್ರಹೀತರು ಮತ್ತು  ಸಾಮಥ್ರ್ಯವುಳ್ಳವರು ತಮ್ಮ ಸಂಬಂಧಿಕರಿಗೂ ದರಿದ್ರರಿಗೂ ಅಲ್ಲಾಹನ ಮಾರ್ಗದಲ್ಲಿ ವಲಸೆ ಹೋಗುವವರಿಗೂ ಸಹಾಯ  ಮಾಡಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿ ಬಿಡಬಾರದು. ಅವರನ್ನು ಕ್ಷಮಿಸಿ ಬಿಡಬೇಕು ಮತ್ತು ಮನ್ನಿಸಬೇಕು. ಅಲ್ಲಾಹನು  ನಿಮ್ಮನ್ನು ಕ್ಷಮಿಸಬೇಕೆಂದು ನೀವು ಇಚ್ಛಿಸುವುದಿಲ್ಲವೇ? ಅಲ್ಲಾಹ್ ಅತ್ಯಂತ ಕ್ಷಮಾಶೀಲನೂ ಕರುಣಾ ನಿಧಿಯೂ  ಆಗಿರುತ್ತಾನೆ. (ಅನ್ನೂರ್-22)
  ಅಲ್ಲಾಹನ ವಚನಗಳನ್ನು ಗೌರವಿಸುವ ಅಬೂಬಕರ್‍ರವರು(ರ) ಹೀಗೆ ಪ್ರತಿಕ್ರಿಯಿಸಿದರು. “ಹೌದು, ಅಲ್ಲಾಹನು ನನ್ನನ್ನು  ಕ್ಷಮಿಸಬೇಕು ಎಂದು ನಾನು ಬಯಸುತ್ತೇನೆ”. ಬಳಿಕ ಅವರು ಮಿಸ್‍ತ್ವಹ್ ರಿಗೆ ನೀಡುತ್ತಿದ್ದ ಎಲ್ಲಾ ಸಹಾಯಗಳನ್ನು ಪುನರಾರಂಭಿಸಿದರು.
  ತಮ್ಮೊಂದಿಗೆ ಅನ್ಯಾಯದಿಂದ ವರ್ತಿಸುವವರೊಂದಿಗೂ ಸಂಬಂಧವನ್ನು ಸ್ಥಾಪಿಸುವುದು ಮತ್ತು ಸಂಬಂಧ  ಮುರಿಯದಿರುವುದು ನೈಜ ವಿಶ್ವಾಸಿಗಳ ಸ್ವಭಾವವಾಗಿದೆ. ಅಬೂಹುರೈರರಿಂದ ಇಮಾಮ್ ಮುಸ್ಲಿಮ್ ಹೀಗೆ ವರದಿ  ಮಾಡಿದ್ದಾರೆ-”ಓರ್ವರು ಪ್ರವಾದಿಯವರೊಂದಿಗೆ ಕೇಳಿದರು-ಅಲ್ಲಾಹನ ಸಂದೇಶವಾಹಕರೇ, ನನಗೆ ಕೆಲವು  ಸಂಬಂಧಿಕರಿದ್ದಾರೆ. ನಾನು ಅವರೊಂದಿಗೆ ಸಂಬಂಧ ಸ್ಥಾಪಿಸುತ್ತೇನೆ. ಅವರು ನನ್ನೊಂದಿಗೆ ಸಂಬಂಧ ಕಡಿಯುತ್ತಾರೆ.  ನಾನು ಅವರಿಗೆ ಒಳಿ ತನ್ನು ಮಾಡುತ್ತೇನೆ. ಅವರು ನನ್ನೊಂದಿಗೆ ಕೆಟ್ಟದಾಗಿ ವರ್ತಿಸುತ್ತಾರೆ. ಅವರು ನನ್ನೊಂದಿಗೆ ಅವಿ  ವೇಕ ತೋರುತ್ತಾರೆ. ನಾನು ಸಹನೆ ವಹಿಸುತ್ತೇನೆ.” ಆಗ ಪ್ರವಾದಿಯವರು(ಸ) ಹೇಳಿದರು. “ನೀನು ಈ ರೀತಿಯೇ  ವರ್ತಿಸುವುದಾದರೆ ನೀನು ಅವರಿಗೆ ಬಿಸಿ ಬೂದಿ ತಿನ್ನಿಸುತ್ತಿದ್ದೀರಿ. ನೀನು ಈ ಧೋರಣೆ ನಿಲ್ಲಿಸುವವರೆಗೆ ನಿನಗೆ  ಅಲ್ಲಾಹನ ಒಂದು ಸಹಾಯವಿರುತ್ತದೆ.” (ಮುಸ್ಲಿಮ್, ಅಧ್ಯಾಯ: ಕೌಟುಂಬಿಕ ಸಂಬಂಧ, 6689)
  ಇಲ್ಲಿ ‘ಬಿಸಿ ಬೂದಿ ತಿನ್ನಿಸುವುದು’ ಎಂದು ಹೇಳಿರುವುದರ ತಾತ್ಪರ್ಯವನ್ನು ಇಮಾಮ್ ನವವಿಯವರಂತಹ  ವಿದ್ವಾಂಸರು ವಿವರಿಸಿದ್ದಾರೆ. ಆದೆಂದರೆ, ತಮ್ಮ ಈ ಉತ್ತಮ ವರ್ತನೆಯ ವಿರುದ್ಧ ಅವರು ತೋರುತ್ತಿರುವ ವರ್ತನೆಯು  ಕೆಂಡದಿಂದ ಕೂಡಿದ ಬೂದಿ ತಿನ್ನುವುದಕ್ಕೆ ಸಮಾನವಾಗಿದೆ. ತಾವು ಈ ಉತ್ತಮ ಸ್ವಭಾವವನ್ನು ಹೊಂದಿರುವವರೆಗೆ  ಅಲ್ಲಾಹನ ನೆರವು ಹಾಗೂ ನೆರಳು ನಿಮ್ಮ ಮೇಲಿರುತ್ತದೆ”. ಅದ್ದರಿಂದ ಪ್ರವಾದಿ(ಸ) ಹೇಳಿದ್ದಾರೆ ಪ್ರಸ್ತುತ ಇರುವ  ಸಂಬಂಧವನ್ನು ದೃಢಪಡಿಸುವುದಕ್ಕಿಂತ ಮುರಿದ ಸಂಬಂಧಗಳನ್ನು ಪುನಃ ಸ್ಥಾಪಿಸುವುದು ವಾಸ್ತವ ದಲ್ಲಿ ಸಂಬಂಧ  ಸ್ಥಾಪಿಸುವವನು.”
  ಗಂಭೀರವಾದ ತಪ್ಪೆಸಗಿದ ಮಿಸ್‍ತ್ವಹ್‍ರೊಂದಿಗೆ ಅಸಹಕಾರ ಧೋರಣೆ ತೋರಿದ ಅಬೂಬಕರ್ ರೊಂದಿಗೆ(ರ)  “ಅಲ್ಲಾಹನು ನಿಮ್ಮನ್ನು ಕ್ಷಮಿಸ ಬೇಕೆಂದು ನೀವು ಇಚ್ಛಿಸುವುದಿಲ್ಲವೇ” ಎಂಬ ಕುರ್‍ಆನಿನ ಪ್ರಶ್ನೆಯು  ಗಮನಾರ್ಹವಾಗಿದೆ. ಇಲ್ಲಿ ತಪ್ಪೆಸಗದವರೂ ಪರಿಪೂರ್ಣ ಆದವರೂ ಯಾರಿದ್ದಾರೆ ಅಲ್ಲಾಹನ ಕ್ಷಮೆ ಹಾಗೂ ಪಾಪ  ವಿಮೋಚನೆಯ ಅಗ್ಯತ್ಯವಿಲ್ಲದ ಪರಿಶುದ್ಧರು ಯಾರಿದ್ದಾರೆ ಎಂದು ಅಲ್ಲಾಹನು ಕೇಳುತ್ತಾನೆ. ಈ ಪ್ರಶ್ನೆಗೆ, “ಅಲ್ಲಾಹನೇ  ನಾನು ನಿನ್ನ ಕೃಪೆ ಹಾಗೂ ಕ್ಷಮೆಯ ಅವಶ್ಯಕತೆ ಇರುವವನಾಗಿದ್ದೇನೆ” ಎಂದು ಉತ್ತರಿಸುತ್ತ ಅಬೂಬಕರ್(ರ) ಉಜ್ವಲವಾದ ಧೋರಣೆ ತಾಳಿದರು. ಆದ್ದರಿಂದ  ಧಾರಾಳ ತಪ್ಪನ್ನೆಸಗುವ ನಾವು ಆ ಶ್ರೇಷ್ಠ ವ್ಯಕ್ತಿಗಳ ಜೀವನವನ್ನು ಮಾದರಿಯಾಗಿಸಬೇಕು. ಆರೋಗ್ಯದಿಂದ  ದೀರ್ಘಾಯುಷಿಯಾಗಿ ಜೀವಿಸಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಅದಕ್ಕಿರುವ ಉತ್ತಮ ಮಾರ್ಗವಾಗಿ ಪ್ರವಾದಿ(ಸ)  ಕುಟುಂಬ ಸಂಬಂಧಗಳನ್ನು ಉತ್ತಮ ಪಡಿಸಲು ಹೇಳಿದ್ದಾರೆ. ಒಮ್ಮೆ ಪ್ರವಾದಿ(ಸ) ಹೇಳಿದರು. “ಅಲ್ಲಾಹನು ನೀಡಿದ  ಅನುಗ್ರಹಗಳು ವರ್ಧಿಸಬೇಕು ಮತ್ತು ಆಯುಷ್ಯವು ದೀರ್ಘವಾಗಬೇಕೆಂದು ಯಾರು ಬಯಸುತ್ತಾನೋ ಅವನು  ಕುಟುಂಬ ಸಂಬಂಧವನ್ನು ಸ್ಥಾಪಿಸಲಿ”.
 • ಮುಸ್ಲಿಮೇತರ ತಂದೆ-ತಾಯಿ?
  ismika03-12-2014

  ಪ್ರಶ್ನೆ : ಇಸ್ಲಾಮ್ ಸ್ವೀಕಾರ ಮಾಡಿದ ಯುವತಿಯು ಮುಸ್ಲಿಮ್ ಯುವಕನನ್ನು ಮದುವೆಯಾದ ಬಳಿಕ ಆಕೆ ತನ್ನ ಮುಸ್ಲಿಮೇತರ ತಂದೆ-ತಾಯಿ ಅಥವಾ ಸಂಬಂಧಿಕರೊಂದಿಗೆ  ಸಂಪರ್ಕವಿಡುವುದು, ಅವಳ ಬಂಧುಗಳು, ಗಂಡನ ಮನೆಗೆ ಬರುವುದು, ಉಣ್ಣುವುದು, ಕುಡಿಯುವುದು ಇತ್ಯಾದಿ ಮಾಡಬಹುದೇ? ಇದರ ಬಗ್ಗೆ ಶರೀಅತ್ ಏನು  ಹೇಳುತ್ತದೆ?

  ಉತ್ತರ : ಮುಸ್ಲಿಮೇತರ ಯುವತಿಯು ಇಸ್ಲಾಮ್ ಸ್ವೀಕರಿಸುವುದೆಂದರೆ ಆಕೆಯ ಆಚಾರ-ವಿಚಾರಗಳನ್ನು ಬದಲಿಸುವು ದೆಂದರ್ಥ. ಇದರಿಂದ ಆಕೆಯ ಮಾನ ವೀಯ  ಸಂಬಂಧಗಳಿಗೆ ಯಾವುದೇ ಧಕ್ಕೆ ಉಂಟಾಗುವುದಿಲ್ಲ. ಆಕೆ ತನ್ನ ಹೆತ್ತವರೊಂದಿಗೆ ಬಂಧು-ಬಳಗದವ ರೊಂದಿಗೆ ಹಿಂದಿನಂತೆಯೇ ಸಂಬಂಧ ವನ್ನು ಇರಿಸಿಕೊಳ್ಳಬಹುದು.  ಮಾತ್ರವಲ್ಲ, ಹೆತ್ತವರ ಮತ್ತು ಸಂಬಂಧಿಕರ ಸುಖ ಸಂತೋಷಗಳಲ್ಲಿ, ದುಃಖ ದುಮ್ಮಾನ ಗಳಲ್ಲಿ ಪಾಲ್ಗೊಳ್ಳಬಹುದು. ಅವರ ಸಂಕಷ್ಟಗಳ ವೇಳೆ ಅವರಿಗೆ ತನ್ನಿಂದಾದ  ಸಹಾಯ ಸಹಕಾರಗಳನ್ನು ನೀಡಬೇಕು. ಅವರ ಮನೆಯಲ್ಲಿ ಉಳಕೊಳ್ಳಲು ಮತ್ತು ಆಹಾರ ಪಾನೀಯಗಳನ್ನು ಸೇವಿಸಲು ಯಾವ ಅಭ್ಯಂತರವೂ ಇಲ್ಲ. ಆದರೆ ಅವರು  ಏನಾದರೂ ನಿಷಿದ್ಧ ಪದಾರ್ಥಗಳನ್ನು ನೀಡಿದರೆ ಅದನ್ನು ಸೇವಿಸುವಂತಿಲ್ಲ. ಉದಾ: ದಿಬಹ್ ಮಾಡದ ಮಾಂಸ, ಶರಾಬು ಇತ್ಯಾದಿ. ಕುರ್‍ಆನ್ ಹೀಗೆ ಹೇಳುತ್ತದೆ,  “ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ. ಅವನ ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ಅವನನ್ನು  ತನ್ನ ಗರ್ಭದಲ್ಲಿರಿಸಿದಳು ಮತ್ತು ಸ್ತನಪಾನ ಬಿಡಿಸುವುದರಲ್ಲಿ ಎರಡು ವರ್ಷಗಳು ತಗಲಿದವು. ಆದುದರಿಂದಲೇ ನನಗೆ ಕೃತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ  ಕೃತಜ್ಞತೆ ಸಲ್ಲಿಸು. ನೀನು ನನ್ನ ಕಡೆಗೆ ಮರಳಬೇಕಾಗಿದೆ. (ಎಂದು ಅವನಿಗೆ ನಾವು ಉಪದೇಶಿಸಿದೆವು) ಆದರೆ ಅವರು ನಿಮಗೆ ತಿಳಿಯುವುದನ್ನು ನನ್ನೊಂದಿಗೆ  ಸಹಭಾಗಿಯಾಗಿ ಮಾಡಬೇಕೆಂದು ನಿನ್ನ ಮೇಲೆ ಒತ್ತಡ ಹೇರಿದರೆ ಅವರ ಮಾತನ್ನು ಎಂದೆಂದಿಗೂ ಕೇಳಬಾರದು. ಈ ಲೋಕದಲ್ಲಿ ಅವರೊಂದಿಗೆ ಸದ್ವರ್ತನೆ  ಮಾಡುತ್ತಿರು. ಆದರೆ ಯಾರು ನನ್ನ ಕಡೆಗೆ ಒಲಿದಿರುವನೋ ಅವನ ಮಾರ್ಗವನ್ನು ಮಾತ್ರ ಅನುಸರಿಸು. ಮುಂದೆ ನಿಮಗೆಲ್ಲರಿಗೂ ನನ್ನ ಕಡೆಗೆ ಮರಳಲಿಕ್ಕಿದೆ. ಆಗ ನೀವು  ಯಾವ ತರದ ಕರ್ಮಗಳನ್ನು ಮಾಡುತ್ತಿದ್ದಿರೆಂದು ನಾನು ನಿಮಗೆ ತೋರಿಸುವೆನು. (31: 14-15)
  ಇಸ್ಲಾಮ್ ಸ್ವೀಕಾರ ಮಾಡಿದವರಿಗೆ ತಮ್ಮ ಮುಸ್ಲಿಮೇತರ ತಂದೆ-ತಾಯಿಗಳಿಂದ ಅವರ ಆಸ್ತಿಯ ಪಾಲನ್ನು ಪಡೆಯುವ ಹಕ್ಕಿಲ್ಲ. ಮುಸ್ಲಿಮೇತರರಿಗೂ ತಮ್ಮ ಮುಸ್ಲಿಮ್  ಸಂತಾನಗಳಿಂದ ಅಥವಾ ಹೆತ್ತವರಿಂದ ಆಸ್ತಿಯ ಪಾಲನ್ನು ಪಡೆಯುವ ಹಕ್ಕಿಲ್ಲ. ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ.
  “ಮುಸ್ಲಿಮನು ಸತ್ಯನಿಷೇಧಿಯ ಮತ್ತು ಸತ್ಯನಿಷೇಧಿಯು ಮುಸ್ಲಿಮನ ವಾರೀಸುದಾರನಾಗಲಾರ.”
  (ಬುಖಾರಿ-ಮುಸ್ಲಿಮ್)
  ಅದೇ ರೀತಿಯಲ್ಲಿ ಆಕೆಯ ಬಂಧು-ಬಳಗದವರು, ಹೆತ್ತವರು ಆಕೆಯ ಮನೆಗೆ ಭೇಟಿ ನೀಡಿದರೆ ಅವರನ್ನು ತುಂಬು ಹೃದಯದಿಂದ ಸ್ವಾಗತಿಸಬೇಕು. ಅವರನ್ನು  ಸರಿಯಾಗಿ ಉಪಚರಿಸಬೇಕು. ಅವರೊಂದಿಗೆ ಉತ್ತಮವಾಗಿ ವರ್ತಿಸಬೇಕು. ಅವರನ್ನು ಸರ್ವ ರೀತಿಯಲ್ಲೂ ಗೌರವಿಸಬೇಕು.
 • ಬಂಪರ್ ಬಹುಮಾನ?
  ismika03-12-2014

  ಪ್ರಶ್ನೆ :  ಬಟ್ಟೆ ಅಂಗಡಿ ಅಥವಾ ಇನ್ನಿತರ ಅಂಗಡಿಗಳಲ್ಲಿ ನೀಡಲಾಗುವ ಬಂಪರ್ ಬಹುಮಾನಗಳನ್ನು ಪಡೆಯಬಹುದೇ?  ಇದು ಜೂಜಿನ ಸಾಲಿಗೆ ಸೇರುವುದಿಲ್ಲವೇ?

  ಉತ್ತರ : ಜೂಜು ಎಂದರೆ ಜನರನ್ನು ವಂಚಿಸುವ ಕ್ರಿಯೆಯಾಗಿದೆ. ಅವರಲ್ಲಿ ಒಬ್ಬನಿಗೆ ಲಾಭ ಇನ್ನೊಬ್ಬನಿಗೆ ನಷ್ಟವಾಗುತ್ತದೆ.  ಇದನ್ನು ಇಸ್ಲಾಮ್ ಕುಟುವಾಗಿ ವಿರೋಧಿಸಿದೆ.
  ಆದರೆ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ಹೆಚ್ಚಿಸಲಿಕ್ಕಾಗಿ ಖರೀದಿಯ ಮೇಲೆ ನೀಡುವ ಬಹುಮಾನಗಳನ್ನು  ಜೂಜೆಂದು ಪರಿಗಣಿಸುವಂತಿಲ್ಲ. ಏಕೆಂದರೆ ವ್ಯಾಪಾರದಲ್ಲಿ ಕ್ರಯ-ವಿಕ್ರಯ ನಡೆದಿರುತ್ತದೆ. ಅಂದರೆ ಖರೀದಿದಾರನಿಗೆ  ಅವನ ಹಣದ ಬದಲಿಗೆ ಅವನ ವಸ್ತು ಸಿಕ್ಕಿರುತ್ತದೆ. ಇನ್ನು ಅಂಗಡಿಯವರು ಯಾವುದಾದರೂ ವಿಧಾನ ದಿಂದ  ಬಹುಮಾನ ಕೊಡು ವುದಾದರೆ ಅದನ್ನು ಸ್ವೀಕರಿಸುವುದರಲ್ಲಿ ಅಡ್ಡಿಯಿಲ್ಲ. ಒಂದು ವೇಳೆ ಬಹುಮಾನ ಸಿಗದಿದ್ದರೂ  ಅವನಿಗೆ ನಷ್ಟವೇನೂ ಇಲ್ಲ. ಏಕೆಂದರೆ ಅವನಿಗೆ ತನ್ನ ಹಣದ ಸರಕು ಸಿಕ್ಕಿರುತ್ತದೆ. ಆದುದರಿಂದ ಅಂತಹ ಬಹುಮಾನ  ಯೋಜನೆ ಜೂಜಲ್ಲ. ಅದರ ಜಾಹೀರಾತು ಪ್ರಕಟಿಸುವುದರಲ್ಲೂ ಯಾವುದೇ ತಪ್ಪಿಲ್ಲ.
  ಇನ್ನೊಂದು ವಿಧದ ಬಹುಮಾನ ಯೋಜನೆ ಇದೆ. ಅದೆಂದರೆ ಒಂದು ವಸ್ತುವನ್ನು ತಿಂಗಳ ಕಂತುಗಳಲ್ಲಿ  ಪಡೆಯುವಂತಹ ವ್ಯಾಪಾರ. ಅದರಲ್ಲಿ ಪ್ರತಿ ತಿಂಗಳು ಚೀಟಿ ಎತ್ತಲಾಗುತ್ತದೆ. ಚೀಟಿಯಲ್ಲಿ ಹೆಸರು ಬಂದವರು ನಂತರ  ಹಣ ಕಟ್ಟಬೇಕಾಗಿಲ್ಲ. ಅಂದರೆ ಒಂದು ವಸ್ತುವಿನ ಬೆಲೆ 12 ತಿಂಗಳ ಬಳಿಕ ಪೂರ್ಣ ಕಟ್ಟಿದಾಗ ರೂ. 2,400 ಆಗುತ್ತದೆ.  ಆದರೆ ಒಂದನೇ ತಿಂಗಳ ಚೀಟಿಯಲ್ಲಿ ಒಬ್ಬನಿಗೆ ಬಂದರೆ ಅವನಿಗೆ ಆ ವಸ್ತು ಕೇವಲ 200 ರೂಪಾಯಿಗೆ ಸಿಗುತ್ತದೆ.  ಇನ್ನೊಂದು ತಿಂಗಳಲ್ಲಿ ಹೆಸರು ಬರುವವನಿಗೆ ಅದು 400 ರೂಪಾಯಿಗೆ ದೊರೆಯುತ್ತದೆ. ಈ ರೀತಿ ಅನೇಕ  ಮಂದಿಯನ್ನು ಪ್ರತಿ ತಿಂಗಳು ವಂಚಿಸಲಾಗುತ್ತದೆ. ಇದು ಕಂತಿನ ಬಹುಮಾನ ಯೋಜನೆಯಾಗಿದೆ. ಇಂತಹ  ವ್ಯಾಪಾರವು ಇಸ್ಲಾಮಿನ ದೃಷ್ಟಿಯಲ್ಲಿ ನಿಷಿದ್ಧವಾಗಿದೆ.
 • ಅಮಲು ಪದಾರ್ಥಗಳ ಸೇವನೆ?
  ismika03-12-2014

  ಪ್ರಶ್ನೆ: ಇಸ್ಲಾಮಿನ ಪ್ರಕಾರ ಅಮಲು ಪದಾರ್ಥವು ನಿಷಿದ್ಧವಾಗಿದೆ. ಆದರೆ ಇಂದು ಹಲವರು ಮಧು, ಪಾನ್‍ಪರಾಗ್, ಬಿಯರ್, ಬೀಡಿ, ಸಿಗರೇಟ್‍ನಂತಹ ವಸ್ತುಗಳನ್ನು ಸೇವಿಸುತ್ತಾರೆ. ಇದರ ವಿಧಿಯೇನು?

  ಉತ್ತರ: ಅಮಲು ಪದಾರ್ಥಗಳ ಸೇವನೆಯನ್ನು ಇಸ್ಲಾಮ್ ನಿಷಿದ್ಧಗೊಳಿಸಿದೆ. ಒಂದು ವಸ್ತುವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ಅಮಲಾಗುತ್ತದೆ ಎಂದಾದರೆ ಅದನ್ನು ಸಣ್ಣ ಪ್ರಮಾಣದಲ್ಲಿ ಸೇವಿಸುವುದೂ ನಿಷಿದ್ಧವಾಗಿದೆ. ಬೀಡಿ, ಸಿಗರೇಟ್‍ಗಳು ನಿಷಿದ್ಧ ಪದಾರ್ಥಗಳೆಂದು ಆಧುನಿಕ ವಿದ್ವಾಂಸರ ಪೈಕಿ ಅನೇಕರ ಅಭಿಪ್ರಾಯವಾಗಿದೆ.
  ಕುರ್‍ಆನ್ ಮತ್ತು ಪ್ರವಾದಿ ವಚನಗಳಲ್ಲಿ ಹರಾಮ್ ಎಂದು ಸ್ಪಷ್ಟವಾಗಿ ಸಾರಿರದ ವಸ್ತುಗಳ ಸೇವನೆಯ ಬಗ್ಗೆ ಎಚ್ಚರ ವಹಿಸಬೇಕಾಗಿದೆ. ಒಂದು ವಸ್ತುವಿನ ಸೇವನೆಯಿಂದ ಅದು ಪಾಪವಾಗಬಹುದೆಂಬ ಭೀತಿಯಿದ್ದರೆ ಅಂತಹ ವಸ್ತುವನ್ನು ವರ್ಜಿಸುವುದೇ ಉತ್ತಮವಾಗಿದೆ. ಪ್ರವಾದಿಯವರು(ಸ) ಹೀಗೆ ಹೇಳಿದ್ದಾರೆ, “ಹಲಾಲನ್ನು ಸ್ಪಷ್ಟಪಡಿಸಲಾಗಿದೆ. ಹರಾಮನ್ನು ಕೂಡಾ ಸ್ಪಷ್ಟಪಡಿಸಲಾಗಿದೆ. ಅವೆರಡರ ಮಧ್ಯೆ ಸಂದೇಹಾಸ್ಪದ ವಸ್ತುಗಳನ್ನು ವರ್ಜಿಸಿದರೆ ಅವನು ಆ ಮೂಲಕ ತನ್ನ ಧರ್ಮವನ್ನೂ ಮಾನವನ್ನೂ ಪಾವನಗೊಳಿಸಿದರು.” (ಬುಖಾರಿ-ಮುಸ್ಲಿಮ್)
  ಇನ್ನೊಂದು ಹದೀಸ್‍ನಲ್ಲಿ ಈ ರೀತಿ ಇದೆ. “ನಿರರ್ಥಕ ವಸ್ತುಗಳನ್ನು ತ್ಯಜಿಸುವುದು ಒಬ್ಬ ವ್ಯಕ್ತಿಯ ಇಸ್ಲಾವಿೂ ವೈಶಿಷ್ಟ್ಯಗಳಲ್ಲೊಂದಾಗಿದೆ.” (ತಿರ್ಮಿದಿ)
  ಪ್ರಶ್ನೆಯಲ್ಲಿ ಸೂಚಿಸಿದಂತಹ ವಸ್ತುಗಳು ನಿರರ್ಥಕವೆಂಬುದರಲ್ಲಿ ಸಂಶಯವಿಲ್ಲ. ಅವುಗಳ ಪೈಕಿ ಬಿಯರ್ ಎಂಬುದು ಶರಾಬಿನ ಒಂದು ಪರಿಷ್ಕøತ ರೂಪವಾಗಿದೆ. ಅದು ಖಂಡಿತ ಹರಾಮ್ ಆಗಿದೆ. ಮಧು ಮತ್ತು ಪಾನ್ ಪರಾಗ್‍ಗಳಲ್ಲಿ ಮಾದಕ ಪದಾರ್ಥಗಳಿರುವುದರಿಂದ ಅದು ಕೂಡ ವರ್ಜಿಸಲ್ಪಡಬೇಕಾದದ್ದೇ ಆಗಿದೆ. ಸಿಗರೇಟ್ ಮತ್ತು ಬೀಡಿಗಳು ಅಮಲು ಪದಾರ್ಥದ ಸಾಲಿಗೆ ಸೇರುವುದಿಲ್ಲ. ಆದರೆ ಅದರಲ್ಲಿ ಹಾನಿಕಾರ ಹಾಗೂ ಚಟ ಉಂಟು ಮಾಡುವಂತಹ ನಿಕೋಟಿನ್ ಎಂಬ ಅಂಶವಿದೆ. ಇದು ಆರೋಗ್ಯಕ್ಕೆ ಹಾನಿಕರ. ಇದು ಆರೋಗ್ಯವನ್ನು ನಿಧಾನವಾಗಿ ಹದಗೆಡಿಸುತ್ತದೆ. ಆದ್ದರಿಂದ ಇಂತಹ ವಸ್ತುಗಳ ಸೇವನೆಯು ಆತ್ಮಹತ್ಯೆಗೆ ಸಮಾನ ಎಂದು ಕೆಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಮಾತ್ರವಲ್ಲ, ಹಲವು ಅರಬ್ ವಿದ್ವಾಂಸರು ಅದನ್ನು ಹರಾಮ್ ಎಂದೂ ಸಾರಿರುವರು.

 • ಸ್ತ್ರೀ-ಪುರುಷರಿಗಿಂತ ಕೀಳು?
  ismika03-12-2014

  ಪ್ರಶ್ನೆ: ಸ್ತ್ರೀಯರನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ ಎಂದು ಕುರ್‍ಆನಿನಲ್ಲಿದೆಯೇ? ಅದರಿಂದ ಸ್ತ್ರೀಯರು ಪುರುಷರಿಗಿಂತ ಕೀಳು ಎಂಬ ಅರ್ಥವಿದೆಯೇ?

  ಉತ್ತರ:  ಸ್ತ್ರೀಯರನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ ಎಂದು ಕುರ್‍ಆನಿನಲ್ಲಿ ಹೇಳಲಾಗಿಲ್ಲ. ಆದರೆ ಆ ಬಗ್ಗೆ ಹದೀಸ್‍ನಲ್ಲಿ ಇರುವ ಒಂದು ಉಲ್ಲೇಖ ಹೀಗಿದೆ, “ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಿರಿ.  ಅವರನ್ನು ಪಕ್ಕೆಲುಬಿನಿಂದ ಸೃಷ್ಟಿಸಲಾಗಿದೆ. ಪಕ್ಕೆಲುಬಿನ ತುದಿಭಾಗವು ಹೆಚ್ಚು ಬಾಗಿಕೊಂಡಿದೆ. ನೀವು ಅದನ್ನು ನೇರವಾಗಿಡಲು ಪ್ರಯತ್ನಿಸಿದರೆ ಅದು ತುಂಡಾಗಬಹುದು. ನೀವು ಅದನ್ನು ಹಾಗೆಯೇ ಬಿಟ್ಟು ಬಿಟ್ಟರೆ  ಅದು ಬಾಗಿಕೊಂಡೇ ಇರುವುದು. ಆದ್ದರಿಂದ ಮಹಿಳೆಯರೊಂದಿಗೆ ಸೌಜನ್ಯದಿಂದ ವರ್ತಿಸಿರಿ.” (ಅಬೂ ಹುರೈರಾ-ಬುಖಾರಿ, ಮುಸ್ಲಿಮ್)
  ಸ್ತ್ರೀಯರನ್ನು ಪಕ್ಕೆಲುಬಿಗೆ ಹೋಲಿಸಿರುವುದರ ಉದ್ದೇಶವೇನೆಂದು ಈ ಪ್ರವಾದಿ ವಚನದಿಂದ ವ್ಯಕ್ತವಾಗುತ್ತದೆ. ಸ್ತ್ರೀಯ ಕೋಮಲತೆ ಮತ್ತು ಸೂಕ್ಷ್ಮ ಸ್ವಭಾವವನ್ನರಿತು ಆಕೆಯೊಂದಿಗೆ ನಯವಾಗಿ  ನಡೆದುಕೊಳ್ಳಬೇಕೆಂಬುದು ಈ ಹದೀಸ್‍ನ ಇಂಗಿತ. ಸ್ತ್ರೀಯರು ಪುರುಷರಿಗಿಂತ ಕೀಳು ಎಂದು ಇದರ ಅರ್ಥವಲ್ಲ. (2: 177)
  ಈ ವಾಕ್ಯದಿಂದ ದೊರೆಯುವ ಅಲ್ಲಾಹನ ಸದ್ಭಕ್ತರ ಚಿತ್ರಣವೇನೆಂದರೆ ಅವರು ಧಾರ್ಮಿಕ ಆಚಾರಗಳನ್ನು ಪಾಲಿಸುವ ಸಾಮಾಜಿಕ ಕರ್ತವ್ಯಗಳನ್ನು ನಿರ್ವಹಿಸುವ ಮತ್ತು ಲೋಕದಲ್ಲಿ ಸಜ್ಜನರಂತೆ ಬಾಳ್ವೆ  ನಡೆಸುವವರಾಗಿರು ತ್ತಾರೆ. ಧಾರ್ಮಿಕ ಮತ್ತು ಲೌಕಿಕ ಕರ್ತವ್ಯಗಳನ್ನು ನೆರವೇರಿಸದೆ, ಲೋಕ ದಿಂದ ವಿರಕ್ತರಾದ ಮತ್ತು ದರವೇಶಿಗಳ ವೇಷ ಧರಿಸಿದ ವಿಲಕ್ಷಣ ವ್ಯಕ್ತಿತ್ವದ ಜನರು ಅಲ್ಲಾಹನ ಔಲಿಯಾಗಳಾಗಲು  ಸಾಧ್ಯವಿಲ್ಲ ಎಂದು ಕುರ್‍ಆನ್ ನೀಡುವ ಈ ಚಿತ್ರಣದಿಂದ ನಮಗೆ ವ್ಯಕ್ತವಾಗುತ್ತದೆ
 • ಕುರ್‍ಆನ್-ಬೈಬಲ್?
  ismika03-12-2014

  ಪ್ರಶ್ನೆ: ಕುರ್‍ಆನ್ ಅರಬಿ ಭಾಷೆಯಲ್ಲಿ ಅವತೀರ್ಣಗೊಂಡಿತು. ಅದೇ ರೀತಿ ಬೈಬಲ್ ಯಾವ ಭಾಷೆಯಲ್ಲಿ ಯಾರಿಂದ, ಯಾವಾಗ ಈ ಭೂಮಿಗೆ ಬಂತು?

  ಉತ್ತರ: ಸುಮಾರು 2,500 ವರ್ಷಗಳ ಹಿಂದೆ ಮೂಸಾರಿಗೆ(ಅ) ಅಲ್ಲಾಹನ ವತಿಯಿಂದ ಅವತೀರ್ಣಗೊಂಡ ಗ್ರಂಥ ‘ತೌರಾತ್’ ಆಗಿದ್ದು ಅನಂತರ ಅದು ಹಸ್ತಕ್ಷೇಪಕ್ಕೆ ಒಳಗಾಗಿ ಕೆಟ್ಟು ಹೋಯಿತು. ಸುಮಾರು 2000 ವರ್ಷಗಳ ಹಿಂದೆ ಈಸಾರಿಗೆ(ಅ) ಅವತೀರ್ಣಗೊಂಡ ಗ್ರಂಥ ಇಂಜೀಲ್ ಆಗಿದೆ.  ಅದು ಕೂಡಾ ತಿದ್ದುಪಡಿಗೆ ಒಳಗಾಗಿದೆ. ಈಸಾರ(ಅ) ಆರೋಹಣವಾಗಿ ಸುಮಾರು ಒಂದು ಶತಮಾನದ ಬಳಿಕ ಈ ಎರಡು ಗ್ರಂಥಗಳನ್ನು ಕ್ರೊಢೀಕರಿಸಲಾಯಿತು. ಅದುವೇ ಬೈಬಲ್ ಎಂದು ಕರೆಯಲ್ಪಡುವ ಗ್ರಂಥ. ತೌರಾತನ್ನು ಅದರಲ್ಲಿ ಹಳೆಯ ಒಡಂಬಡಿಕೆಯೆಂದೂ ಇಂಜೀಲನ್ನು ಹೊಸ ಒಡಂಬಡಿಕೆಯೆಂದೂ ಉಲ್ಲೇಖಿಸಲಾಗಿದೆ. ಅದರಲ್ಲಿ ಮೂಲ ಗ್ರಂಥಗಳ ಕೆಲವು ಅಂಶಗಳು  ಇದ್ದರೂ ಹೆಚ್ಚಿನ ಭಾಗವು ಸೇರಿಸ ಲ್ಪಟ್ಟದ್ದಾಗಿದೆ. ಆದುದರಿಂದ ಅದನ್ನು ಅಧಿಕೃತವೆಂದು ಹೇಳುವಂತಿಲ್ಲ. ಅದರ ಮೂಲ ಗ್ರಂಥವು ಹಿಬ್ರೂ ಭಾಷೆಯಲ್ಲಿ ಅವತೀರ್ಣಗೊಂಡಿತು. ಮೂಲ ಗ್ರಂಥ ಈಗ ಎಲ್ಲೂ ಇಲ್ಲ.

 • ಮಹಿಳೆ ವಾಹನ ಚಲಾಯಿಸಬಹುದೇ?
  ismika03-12-2014

  ಪ್ರಶ್ನೆ: ಮಹಿಳೆ ವಾಹನ ಚಲಾಯಿಸಬಹುದೇ? ಇಸ್ಲಾಮ್ ಈ ಕುರಿತು ಏನು ಹೇಳುತ್ತದೆ? ದಯವಿಟ್ಟು ವಿವರಿಸಿ.

  ಉತ್ತರ: ಮಹಿಳೆ ವಾಹನ ಚಲಾಯಿಸುವುದಕ್ಕೆ ಇಸ್ಲಾಮಿನಲ್ಲಿ ಯಾವುದೇ ನಿಷೇಧ ವಿಲ್ಲ. ಪ್ರವಾದಿ ಮುಹಮ್ಮದ್(ಸ) ಅವರ ಕಾಲದಲ್ಲಿ ಮಹಿಳೆಯರು ವಾಹನ ಚಲಾಯಿಸುತ್ತಿದ್ದರು. ಇಂದಿನಂತಹ ಕಾರು, ಬೈಕುಗಳು ಅಂದು ಇರಲಿಲ್ಲ. ಅಂದಿನ ವಾಹನಗಳಾದ ಒಂಟೆ, ಕುದುರೆ, ಹೇಸರಗತ್ತೆ, ಕತ್ತೆ ಇತ್ಯಾದಿಗಳನ್ನು ಚಲಾಯಿಸುತ್ತಿದ್ದರು. ಇಸ್ಲಾಮ್ ಸಾರ್ವಕಾಲಿಕ ಧರ್ಮವಾಗಿದೆ. ಅದು ಕಿಯಾಮತ್‍ನ ವರೆಗೂ ಉಳಿದಿರುವುದು. ಕಾಲದೊಂದಿಗೆ ಅದು ಹೊಂದಿಕೊಳ್ಳುತ್ತಾ ಸಾಗುತ್ತದೆ. ಪುರುಷರು ಯಾವೆಲ್ಲ ಕೆಲಸಗಳನ್ನು ಮಾಡುತ್ತಾರೋ ಅದೇ ಕೆಲಸಗಳನ್ನು ಸ್ತ್ರೀಯರೂ ಮಾಡಬಹುದು. ಆದರೆ ಪರ್ದಾ ನಿಯಮವನ್ನು ಪಾಲಿಸಬೇಕು.
  ಪ್ರವಾದಿಯವರು(ಸ) ಹೇಳಿದರು, “ನಿಮ್ಮ ಮಕ್ಕಳಿಗೆ ಕುದುರೆ ಸವಾರಿ ಮತ್ತು ಬಿಲ್ಲು ವಿದ್ಯೆ ಕಲಿಸಿರಿ.” ಈ ಹದೀಸಿನಲ್ಲಿ ಪ್ರವಾದಿಯವರು(ಸ) ಗಂಡು ಮಕ್ಕಳಿಗೆ ಎಂದು ಹೇಳಲಿಲ್ಲ. ಅದು ಸಾರ್ವತ್ರಿಕ ಆದೇಶವಾಗಿದೆ. ಗಂಡು-ಹೆಣ್ಣುಗಳಿಬ್ಬರಿಗೂ ಇದು ಅನ್ವಯವಾಗುತ್ತದೆ.
  ‘ಪರ್ದಾ ನಿಯಮ’ವೆಂದರೆ ಮುಖ ಮತ್ತು ಕೈಗಳನ್ನು ಹೊರತು ಪಡಿಸಿ ಸಂಪೂರ್ಣ ಮೈಮುಚ್ಚಿಕೊಳ್ಳುವುದಾಗಿದೆ. ಹೊರಗೆ ಹೋಗುವಾಗ ಮೈಗೆ ಬಟ್ಟೆ ಹೊದ್ದುಕೊಳ್ಳುವುದು ಅಥವಾ ಬುರ್ಖಾ ಧರಿಸುವುದಾಗಿದೆ. ಅದರಿಂದ ವಾಹನ ಚಲಾಯಿಸಲು ಏನೂ ತೊಂದರೆಯಾಗುವುದಿಲ್ಲ. ಮಹಿಳೆಯರಲ್ಲಿ ಕೇವಲ ಕಣ್ಣು ಗಳು ಮಾತ್ರ ಕಾಣುವ ರೀತಿಯಲ್ಲಿ ಪರ್ದಾ ಧರಿಸುವವರಿದ್ದಾರೆ. ಅದೇ ರೀತಿ ಮುಖ ತೆರೆದುಕೊಂಡಿರುವ ರೀತಿಯಲ್ಲೂ ಧರಿಸುವವರಿದ್ದಾರೆ. ಎರಡೂ ವಿಧಾನ ಗಳನ್ನು ಇಸ್ಲಾಮ್ ಮಾನ್ಯ ಮಾಡುತ್ತದೆ.
 • ಕಿಯಾಮತ್ ಉಂಟಾಗುವ ಲಕ್ಶಣಗಳೇನು? ದಯವಿಟ್ಟು ಉತ್ತರಿಸಿರಿ.
  ismika03-12-2014

  ಪ್ರಶ್ನೆ: ಕಿಯಾಮತ್ ಉಂಟಾಗುವ ಲಕ್ಶಣಗಳೇನು? ದಯವಿಟ್ಟು ಉತ್ತರಿಸಿರಿ.

  ಉತ್ತರ: ಲೋಕಾಂತ್ಯವಾಗುವಾಗ ಕಿಯಾಮತ್ ಆಗುತ್ತದೆ. ಅದರ ಲಕ್ಷಣಗಳನ್ನು ಪ್ರವಾದಿ ಮುಹಮ್ಮದ್(ಸ) ಒಂದು ಹದೀಸ್‍ನಲ್ಲಿ ವಿವರಿಸಿದ್ದಾರೆ. ಅವು ಹೀಗಿವೆ:
  ಪ್ರವಾದಿಯವರು(ಸ) ಹೇಳಿದರು- ಹತ್ತು ಲಕ್ಷಣಗಳು ಒಂದರ ಹಿಂದೆ ಒಂದರಂತೆ ಗೋಚರಿಸದೆ ಕಿಯಾಮತ್ ಬರಲಾರದು.
  1) ಸೂರ್ಯನು ಪಶ್ಚಿಮದಿಂದ ಉದಯಿಸುವುದು
  2) ಇಡೀ ಲೋಕವನ್ನು ಆವರಿಸಿಕೊಂಡಿರುವ ಒಂದು ಹೊಗೆ
  3) ಜನರೊಂದಿಗೆ ಮಾತನಾಡುವ ಒಂದು ಪ್ರಾಣಿ
  4) ಯಅಜೂಜ್-ಮಅಜೂಜರ ಕ್ಷೋಭೆ
  5) ಈಸಾ(ಅ) ಬಿನ್ ಮರ್ಯಮ್‍ರ ಅವರೋಹಣ
  6) ಭೀಕರವಾದ ಮೂರು ಭೂ ಕುಸಿತಗಳು
  7) ಒಂದು ಪಶ್ಚಿಮದಲ್ಲಿ 8) ಇನ್ನೊಂದು ಪೂರ್ವದಲ್ಲಿ 9) ಮತ್ತೊಂದು ಅರಬ್ ಪರ್ಯಾಯ ದ್ವೀಪದಲ್ಲಿ
  10) ಏಡನ್‍ನಿಂದ ಏಳುವ ದಳ್ಳುರಿಯೊಂದು ಜನರನ್ನು ಅಟ್ಟಿಕೊಂಡು ಹೋಗುವುದು. (ಮುಸ್ಲಿಮ್)
  ಇನ್ನೊಂದು ಹದೀಸ್‍ನಲ್ಲಿ ಮೇಲೆ ಪ್ರಸ್ತಾಪಿಸಿದ ಹೊಗೆಯ ಕುರಿತು ಹೀಗೆ ಹೇಳಿದ್ದಾರೆ- ಆ ಹೊಗೆ ಆವರಿಸಿದಾಗ ಸತ್ಯವಿಶ್ವಾಸಿಗೆ ಶೀತ ಬಾಧೆಯಾದಂತಾಗುವುದು. ಸತ್ಯನಿಷೇಧಿಗೆ ಉಸಿರು ಕಟ್ಟಿದಂತಾಗುವುದು.
  ಮೇಲಿನ ಹದೀಸ್‍ನಲ್ಲಿ ಯಅಜೂಜ್-ಮಅಜೂಜ್‍ರ ಕುರಿತೂ ಪ್ರಸ್ತಾಪಿಸಲಾಗಿದೆ.
  ಯಅಜೂಜ್-ಮಅಜೂಜ್ ಎಂದರೆ ಇಬ್ಬರು ವ್ಯಕ್ತಿಗಳ ಹೆಸರಲ್ಲ. ಅದು ಪುರಾತನ ಕಾಲದಿಂದಲೂ ನಾಗರಿಕ ಸಮಾಜಗಳನ್ನು ಕೊಳ್ಳೆ ಹೊಡೆಯುತ್ತಿದ್ದ
  ಏಶ್ಯಾ ಖಂಡದ ಈಶಾನ್ಯ ಭಾಗದಲ್ಲಿ ವಾಸಿಸುತ್ತಿದ್ದ ಎರಡು ಜನಾಂಗಗಳಾಗಿವೆ. ಅವರು ಏಶ್ಯಾದ ದೇಶಗಳ ಮೇಲೆ ಮಾತ್ರವಲ್ಲ, ಯುರೋಪಿನ ರಾಷ್ಟ್ರಗಳ ಮೇಲೂ ಆಕ್ರಮಣ ನಡೆಸಲು ನುಗ್ಗಿ ಬರುತ್ತಿದ್ದರು. ಅವರ ಕಿರುಕುಳದಿಂದ ಬೇಸತ್ತ ಜನಾಂಗಗಳು ದುಲ್‍ಕರ್ನೈನ್ ಚಕ್ರವರ್ತಿಯ ವಿಜಯ ಯಾತ್ರೆಯ ವೇಳೆ ಆತನೊಂದಿಗೆ ಅವರು ಬರದಂತೆ ಮಾಡಲು ಒಂದು ತಡೆಗೋಡೆ ಕಟ್ಟಿಕೊಡಬೇಕೆಂದು ವಿನಂತಿಸಿದ್ದರು. ಅದರಂತೆ ಅವನು ದೀರ್ಘವಾದ ಒಂದು ಉಕ್ಕಿನ ಗೋಡೆಯನ್ನು ಕಟ್ಟಿಸಿದ್ದನು. ಅದರಿಂದಾಗಿ ಅವರ ಆಕ್ರಮಣದ ಸರಣಿ ನಿಂತಿತ್ತು. ಇನ್ನು ಕಿಯಾಮತ್ ಹತ್ತಿರವಾಗುವಾಗ ಆ ಜನಾಂಗಗಳೂ ಮುಂದುವರಿದು ಎಲ್ಲೆಡೆ ಆಕ್ರಮಣ ನಡೆಸುವಂತಹ ಶಕ್ತಿ ಗಳಿಸಲೂಬಹುದು.
  ಆಗ ಅವು ಇನ್ನೊಮ್ಮೆ ಕ್ಷೋಭೆ ಹರಡಲೂಬಹುದು. ಅವರ ಈ ಪುನರಾಗಮನವನ್ನು ಪ್ರಸ್ತುತ ಹದೀಸ್‍ನಲ್ಲಿ ಕಿಯಾಮತ್‍ನ ಲಕ್ಷಣಗಳಲ್ಲೊಂದೆಂದು ಸಾರಲಾಗಿದೆ.

 • ಅಂಗಾಂಗ ದಾನ?
  ismika03-12-2014
  ಪ್ರಶ್ನೆ: ಅಂಗಾಂಗ ದಾನದ ಕುರಿತು ಕುರ್‍ಆನ್ ಹದೀಸ್ ಏನು ಹೇಳುತ್ತದೆ? ಈ ಕುರಿತು ಶರೀಅತ್‍ನ ನಿಲುವು ಏನು?
  ಉತ್ತರ: ಅಂಗದಾನ ಎಂಬುದು ಆಧುನಿಕ ವೈದ್ಯಶಾಸ್ತ್ರವು ಅಂಗಗಳನ್ನು ಬದಲಿಸಲು ಸಾಮಥ್ರ್ಯ ಪಡೆದಾಗ ಉದ್ಭವಿಸಿದ ಒಂದು ಸಮಸ್ಯೆಯಾಗಿದೆ. ಆದ್ದರಿಂದ ಕುರ್‍ಆನ್, ಹದೀಸ್ ಅಥವಾ ಪೂರ್ವಿಕ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇದರ ಕುರಿತಾದ ವಿಧಿಗಳೊಂದೂ ಕಾಣಲು ಸಾಧ್ಯವಾಗಲಿಲ್ಲ. ಈ ವಿಷಯದಲ್ಲಿ ಜಾಗತಿಕ ವಿದ್ವಾಂಸರು ಸಭೆ ಸೇರಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬರ ಬೇಕಾಗಿದೆ. ಕೆಲವು ಕಡೆಗಳಲ್ಲಿ ಚರ್ಚೆಗಳು ನಡೆದಿವೆಯೇ ಹೊರತು ಸ್ಪಷ್ಟ ತೀರ್ಮಾನಕ್ಕೆ ಬರಲಾಗಿಲ್ಲ.
  ಶರೀಅತ್‍ನ ತತ್ವಗಳಿಗೂ ಧಾರ್ಮಿಕ ಶಿಷ್ಟಾಚಾರಗಳಿಗೂ ವಿರುದ್ಧವಲ್ಲದ್ದು ಹಾಗೂ ಮನುಷ್ಯನ ಜೀವನಕ್ಕೆ ಉಪಕಾರಿಯಾದ ಎಲ್ಲಾ ಸಂಶೋಧನೆಗಳೂ, ಹೊಸತನಗಳೂ ಅನುವದನೀಯವಾ ಗಿದೆ ಎಂದು ತಿಳಿದುಕೊಳ್ಳಬಹುದು. ಮಾನವನ ಅಂಗಾಂಗಗಳನ್ನು ಬದಲಿಸುವುದು ಅಥವಾ ಅವನಿಗೆ ಅತ್ಯಾವಶ್ಯವಿಲ್ಲದ ಅಂಗಾಂಗಗಳನ್ನು ಅಗತ್ಯ ಇರುವವರಿಗೆ ದಾನ ಮಾಡುವುದು- ಜೀವಂತವಾಗಿದರೂ ಮರಣ ಹೊಂದ ಬಳಿಕವೂ- ಶರೀಅತ್‍ಗೋ ಧಾರ್ಮಿಕ ಶಿಷ್ಟಾಚಾರಗಳಿಗೋ ವಿರುದ್ಧವೆಂದು ತೋರುವುದಿಲ್ಲ. ಆದ್ದರಿಂದ ಮರಣಾ ನಂತರ ಕಣ್ಣುಗಳನ್ನು ನೀಡುವ ವಸೀಯತ್ ಮಾಡುವುದೂ ಜೀವಿಸಿರುವಾಗಲೇ ಕಣ್ಣು ಅಥವಾ ಕಿಡ್ನಿ ದಾನ ಮಾಡುವುದೂ ಅನುವದನೀಯವಾಗಿದೆ ಎಂದು ಇದರಿಂದ ತಿಳಿದುಕೊಳ್ಳಬಹುದು. ಈ ವಿಷಯದಲ್ಲಿ ಈಜಿಪ್ಟಿನ ಮುಫ್ತಿ ಡಾ| ಮುಹಮ್ಮದ್ ಸೈಯದ್ ತಂತಾವಿ ಈ ರೀತಿ ಒಂದು ಫತ್ವಾ ನೀಡಿದ್ದಾರೆ. “ಅವಶ್ಯಕ ಸಂದರ್ಭಗಳಲ್ಲಿ ಮೃತ ಶರೀರದ ಯಾವುದೇ ಭಾಗಗಳನ್ನು ಉಪಯೋಗಿಸಲು ಶರೀಅತ್ ಅನುಮತಿ ನೀಡಿದೆ. ಅದನ್ನು ವಾರೀಸು ಹಕ್ಕುದಾರರಿಗೆ ಮರಳಿಸಬೇಕಾದ ಅಗತ್ಯವಿಲ್ಲ.” ಅಂಗಾಂಗಗಳನ್ನು ಬದಲಿಸುವುದರ ಬಗ್ಗೆ ನಡೆದ ಚರ್ಚಾಗೋಷ್ಠಿಯಲ್ಲಿ ಅವರು ಹೀಗೆ ಹೇಳಿದರು. “ಮಾನವನ ಅಂಗಾಂಗಗಳನ್ನು ಹಣಕ್ಕಾಗಿ ಮಾರುವುದು ನಿಷಿದ್ಧವಾಗಿದೆ. ಕಾರಣ ಮಾನವ ಶರೀರದ ಯಜಮಾನ ಆತನಲ್ಲ. ಬದಲಾಗಿ ಅಲ್ಲಾಹನಾಗಿದ್ದಾನೆ. ಆದರೆ ಸ್ವಂತ ಶರೀರಕ್ಕೆ ಹಾನಿಕರವಲ್ಲದ ಸ್ಥಿತಿಯಲ್ಲಿ ತನ್ನ ಒಂದು ಪ್ರತ್ಯೇಕ ಅಂಗವನ್ನು ದಾನ ಮಾಡುವುದು ಕಾನೂನು ಬದ್ಧವಾಗಿದೆ. ಹಾಗೆ ದಾನ ಮಾಡುವಾಗ ಅದು ದಾನಿಯ ಶರೀರಕ್ಕೆ ಹಾನಿಕರವೋ ಅಲ್ಲವೋ ಎಂದು ತಜ್ಞ ವೈದ್ಯರು ತಪಾಸಿಸಬೇಕು.”
  ಎಲ್ಲಾ ವಿಷಯಗಳ ಮೂಲ ವಿಧಿಯು ‘ಅನುವದನೀಯ’ ಎಂದಾಗಿದೆ. ‘ಅನುವದನೀಯ’ ಎಂಬುದಕ್ಕೆ ಪುರಾವೆಗಳು ಬೇಕಾಗಿಲ್ಲ. ‘ಅನುವದನೀಯವಲ್ಲ’ ಎಂಬುದಕ್ಕೆ ಪುರಾವೆಯ ಅಗತ್ಯವಿದೆ. ಈ ವಿಷಯದಲ್ಲಿ ‘ಅನುವದನೀಯವಲ್ಲ’ ಎಂಬುದಕ್ಕೆ ಪ್ರಬಲ ಪುರಾವೆಗಳಿಲ್ಲ. ಅಂಗಾಂಗ ದಾನ ದಿಂದಾಗಿ ಸಮಾಜಕ್ಕೆ ಆಪತ್ತಾಗಿದೆ ಅಥವಾ ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದು ಸಾಬೀತುಗೊಂಡಿಲ್ಲ. ಇಸ್ಲಾಮಿನ ಯಾವುದಾದರೂ ಮೌಲ್ಯಗಳಿಗೋ ಕಾನೂನುಗಳಿಗೋ ಅದು ವಿರುದ್ಧವಾಗಿದೆ ಎಂದು ತೋರುವುದಿಲ್ಲ. ಬಡವರ ಶುಶ್ರೂಷೆ ಎಂಬ ನೆಲೆಯಲ್ಲಿ ಅದು ಉತ್ತಮ ದಾನವಾಗಿದೆ. ರಕ್ತ ದಾನವು ವ್ಯಾಪಕವಾಗಿ ನಡೆಯುತ್ತಿದೆಯಲ್ಲವೇ. ರಕ್ತವೂ ಕೂಡಾ ಮಾನವ ಶರೀರದ ಒಂದು ಭಾಗವಾಗಿದೆ. ಆದರೆ ಅಂಗಾಂಗ ದಾನ ಮಾಡುವಾಗ ಈ ಕೆಳಗಿನ ವಿಷಯಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.
  1. ದಾನ ಪ್ರಕ್ರಿಯೆಯು ಎರಡು ಭಾಗದವರ ಸಮ್ಮತಿ ಪ್ರಕಾರ ನಡೆಯಬೇಕು. ಓರ್ವನ ಸಮ್ಮತಿ ಇಲ್ಲದೆ ಅವನ ಅಂಗವನ್ನು ಇತರರಿಗಾಗಿ ತೆಗೆಯಲು ಅಥವಾ ಪಡೆಯುವವನ ಅನುಮತಿ ಇಲ್ಲದೆ ಆತನ ಶರೀರಕ್ಕೆ ಇತರರ ಅಂಗವನ್ನು ಜೋಡಿಸಲು ಅನುಮತಿ ಇಲ್ಲ.
  2. ದಾನವು ಆತ್ಮಹತ್ಯೆಯಂತಿರಬಾರದು. ಸ್ವಂತ ಶರೀರವನ್ನು ಅಪಾಯಕ್ಕೆ ಸಿಲುಕಿಸುವ ರೀತಿಯಲ್ಲಿ ತನ್ನ ಅಂಗಾಂಗವನ್ನು ಇತರರಿಗೆ ದಾನ ಮಾಡಬಾರದು. ಇತರ ಅಗತ್ಯಗಳಿಗಾಗಿ ಶರೀರದಿಂದ ಬೇರ್ಪಡಿಸಲೂಬಾರದು. ಅತ್ಮಹತ್ಯೆಯು ಎಲ್ಲಾ ರೀತಿಯಲ್ಲೂ ನಿಷಿದ್ಧವೂ ಮಹಾ ಪಾತಕವೂ ಆಗಿದೆ.
  ಕಣ್ಣು, ಕಿಡ್ನಿಯಂತಹ ಜೋಡಿ ಅಂಗಾಂಗಗಳಲ್ಲಿ ಒಂದೇ ಸಮಯದಲ್ಲಿ ಎರಡೂ ಅಂಗಾಂಗಗಳು ಕಾರ್ಯ ನಿರ್ವಹಿಸಬೇಕಾಗುವುದು ಜೀವದ ಅಸ್ಥಿತ್ವಕ್ಕೆ ಅತ್ಯಾವಶ್ಯಕವಲ್ಲ. ಈ ಎರಡೂ ಅಂಗಾಂಗಗಳು ಕಾರ್ಯ ನಿರ್ವಹಿಸುತ್ತಿರುವ ಶರೀರದಿಂದ ಒಂದನ್ನು ತೆಗೆದು ಎರಡೂ ಕೆಟ್ಟು ಹೋದ ಶರೀರಕ್ಕೆ ಅಳವಡಿಸುವುದು ಅನುವದನೀಯವೆಂದು ಅರ್ಥಮಾಡಿಕೊಳ್ಳಬಹುದಾಗಿದೆ.
 • ಕ್ರಿಸ್‍ಮಸ್ ಶುಭಾಶಯ?
  ismika11-12-2014

  ಯೂಸುಫುಲ್ ಕರ್ಝಾವಿ ಉತ್ತರಿಸುತ್ತಾರೆ.
  =========================
  ಪ್ರಶ್ನೆ: ನಾನು ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದೇನೆ. ಅಲ್ಲಿ ಮುಸ್ಲಿಮರೊಂದಿಗೆ ಕ್ರೈಸ್ತರೂ ಇದ್ದಾರೆ. ನಾವು ಉತ್ತಮ ಬಾಂಧವ್ಯದೊಂದಿಗೆ ಅಲ್ಲಿ ಬದುಕುತ್ತಿದ್ದೇವೆ. ಕ್ರಿಸ್‍ಮಸ್ ವೇಳೆಗಳಲ್ಲಿ ಅವರು ನಮ್ಮನ್ನು ಊಟಕ್ಕೆ ಆಹ್ವಾನಿಸುತ್ತಾರೆ. ನಾವು ಅವರಿಗೆ ಕ್ರಿಸ್‍ಮಸ್ ಶುಭಾಶಯಗಳನ್ನೂ ಕೋರುತ್ತೇವೆ. ಶುಭಾಶಯಗಳನ್ನು ಕೋರುವುದು, ಕ್ರಿಸ್‍ಮಸ್ ಪಾರ್ಟಿಗಳಲ್ಲಿ ಭಾಗವಹಿಸುವುದು ಅನಿಸ್ಲಾಮಿಕವೆಂದು ಕೆಲವರು ವಾದಿಸುತ್ತಾರೆ. ಇದರ ವಾಸ್ತವಿಕತೆಯೇನು?

  ಉತ್ತರ: ಮುಸ್ಲಿಮರು ಮತ್ತು ಕ್ರೈಸ್ತರು ಬೆರೆತು ಬಾಳುವಾಗ ಆ ಸನ್ನಿವೇಶವನ್ನು ಅನಿವಾರ್ಯಗೊಳಿ ಸುವ ಹಲವು ರೀತಿಯ ಸಂಬಂಧಗಳು ಅವರ ಮಧ್ಯೆ ಉಂಟಾಗಬಹುದು. ನೆರೆಮನೆ, ಕೆಲಸದ ಸ್ಥಳಗಳಲ್ಲಿನ ಸಹವಾಸ, ಮೊದಲಾದವುಗಳು ಇದಕ್ಕೆ ಉದಾಹರಣೆಗಳಾಗಿವೆ. ಇಂತಹ ಸಂದರ್ಭ ಗಳಲ್ಲಿ ಅವರ ಮಧ್ಯೆ ಆಳವಾದ ಸೌಹಾರ್ದತೆಯು ಬೆಳೆಯುವ ಸಾಧ್ಯತೆ ಇದೆ.
  ಮುಸ್ಲಿಮರೊಂದಿಗೆ ಸೌಹಾರ್ದತೆಯಿಂದ ವರ್ತಿ ಸುವ ಮುಸ್ಲಿಮೇತರರೊಂದಿಗೆ ಓರ್ವ ಮುಸ್ಲಿಮನು ಯಾವ ನಿಲುವು ತಾಳಬೇಕು? ಮುಸ್ಲಿಮರು ಮತ್ತು ಮುಸ್ಲಿಮೇತರ ಮಧ್ಯೆ ಇರಬೇಕಾದ ಸಂಬಂಧಗಳ ಶೈಲಿಯ ಬಗ್ಗೆ ಕುರ್‍ಆನ್ ಸ್ಪಷ್ಟಪಡಿಸುತ್ತದೆ. (ಸೂರಃತುಲ್ ಮುಮ್ತಹಿನ)
  ಮೂರ್ತಿ ಪೂಜಕರಾದ ಮುಶ್ರಿಕ್‍ರ ಬಗ್ಗೆ ಅವರಲ್ಲಿ ಅಲ್ಲಾಹನು ಹೀಗೆ ಹೇಳುತ್ತಾನೆ,
  "ಧರ್ಮದ ವಿಷಯದಲ್ಲಿ ನಿಮ್ಮೊಡನೆ ಯುದ್ಧ ಮಾಡಿರದ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರದವರೊಂದಿಗೆ ಸೌಜನ್ಯ ಹಾಗೂ ನ್ಯಾಯದೊಂದಿಗೆ ವರ್ತಿಸುವುದರಿಂದ ಅಲ್ಲಾಹನು ನಿಮ್ಮನ್ನು ತಡೆಯುವುದಿಲ್ಲ. ಅಲ್ಲಾಹನು ನ್ಯಾಯ ಪಾಲನೆ ಮಾಡುವವರನ್ನು ಪ್ರೀತಿಸುತ್ತಾನೆ. ನೀವು ಧರ್ಮದ ವಿಷಯದಲ್ಲಿ ನಿಮ್ಮ ವಿರುದ್ಧ ಯುದ್ಧ ಮಾಡಿರುವ ಹಾಗೂ ನಿಮ್ಮನ್ನು ನಿಮ್ಮ ಮನೆಗಳಿಂದ ಹೊರ ಹಾಕಿರುವ ಮತ್ತು ನಿಮ್ಮನ್ನು ಹೊರ ಹಾಕುವ ವಿಷಯದಲ್ಲಿ ಪರಸ್ಪರ ಸಹಕರಿಸಿರುವ ಜನರೊಂದಿಗೆ ಸ್ನೇಹ ಬೆಳೆಸುವುದರಿಂದ ಮಾತ್ರ ಅಲ್ಲಾಹನು ನಿಮ್ಮನ್ನು ತಡೆಯುತ್ತಾನೆ. ಅವನೊಂದಿಗೆ ಸ್ನೇಹ ಬೆಳೆಸುವವರೇ ಅಕ್ರಮಿಗಳು. 
  (ಅಲ್‍ಮುಮ್ತಹಿನ: 8-9)
  ಈ ಎರಡು ಸೂಕ್ತಗಳು ಮುಸ್ಲಿಮರೊಂದಿಗೆ ಸೌಹಾರ್ದತೆ ಕಾಪಾಡುವವರನ್ನೂ ವೈರತ್ವ ಹೊಂದು ವವರನ್ನೂ ಪ್ರತ್ಯೇಕಿಸಿ ತೋರಿಸಿದೆ. ಮೊದಲ ವಿಭಾಗದವರೊಂದಿಗೆ (ಸೌಹಾರ್ದದ ವಕ್ತಾರ ರೊಂದಿಗೆ) ನ್ಯಾಯ ಪಾಲಿಸಲೂ ಅದಕ್ಕಿಂತ ಮಿಗಿಲಾಗಿ ಔದಾರ್ಯ, ಸದ್ವರ್ತನೆ ತೋರಲೂ ಕುರ್‍ಆನ್ ಹೇಳಿದೆ. ಹಕ್ಕುಗಳನ್ನು ಗಳಿಸುವುದೂ ಓರ್ವ ವ್ಯಕ್ತಿಯ ಹಕ್ಕುಗಳನ್ನು ಪೂರ್ಣವಾಗಿ ಪೂರೈಸುವುದೂ ನ್ಯಾಯದ ಬೇಡಿಕೆಯಾಗಿದೆ. ನಮ್ಮ ಹಕ್ಕುಗಳನ್ನು ತ್ಯಾಗ ಮಾಡಿ ಇತರರ ಹಕ್ಕುಗಳಿಗಿಂತಲೂ ಮಿಗಿಲಾದುದನ್ನು ಮಾಡಿ ಕೊಡುವುದು `ಬಿರ್ರ್' (ಒಳಿತು) ಎಂಬುದರ ತಾತ್ಪರ್ಯವಾಗಿದೆ.
  ಆದರೆ ಕುರೈಶರು ಹಾಗೂ ಮಕ್ಕಾದ ಮುಶ್ರಿಕರು ಮಾಡಿರುವಂತೆ, ತಮ್ಮ ಪ್ರಭು ಅಲ್ಲಾಹನಾಗಿದ್ದಾನೆ ಎಂದು ಘೋಷಿಸಿದ್ದಕ್ಕಾಗಿ ಮುಸ್ಲಿಮರೊಂದಿಗೆ ವೈರತ್ವ ಹೊಂದಿ ಯುದ್ಧ ಸಾರಿದ, ಅನ್ಯಾಯವಾಗಿ ನಾಡಿನಿಂದ ಹೊರ ಹಾಕಿದ ಜನರೊಂದಿಗೆ ಮೇಲೆ ಸೂಚಿಸಿದಂಥ ನಿಲುವು ತಾಳುವುದನ್ನು ಕುರ್‍ಆನ್ ವಿರೋಧಿಸಿದೆ.
  ಮುಸ್ಲಿಮರೊಂದಿಗೆ ಸೌಹಾರ್ದತೆಯಿಂದ ವರ್ತಿಸುವ ವ್ಯಕ್ತಿಗಳೊಂದಿಗೆ ತೋರುವ ವರ್ತನೆಗೆ ಕುರ್‍ಆನ್ `ಬಿರ್ರ್' ಎಂಬ ಪದಪ್ರಯೋಗ ಮಾಡಿದೆ. ಅಲ್ಲಾಹನೊಂದಿಗಿನ ಬಾಧ್ಯತೆಯ ಬಳಿಕ ಓರ್ವ ಮಾನವನ ಮೇಲಿನ ಅತ್ಯಂತ ಶ್ರೇಷ್ಠವಾದ ಬಾಧ್ಯತೆಯನ್ನು (ಬಿರ್ರುಲ್ ವಾಲಿದೈನಿ) ಸೂಚಿಸಲು ಈ ಪದ ಬಳಕೆಯಾಗಿದೆ.
  ಅಸ್ಮಾರಿಂದ(ರ) ವರದಿಯಾಗಿದೆ. "ಅವರು ಪ್ರವಾದಿಯವರ(ಸ) ಸನ್ನಿಧಿಗೆ ಆಗಮಿಸಿ ಕೇಳಿದರು- ಅಲ್ಲಾಹನ ಸಂದೇಶವಾಹಕರೇ, ನನ್ನ ತಾಯಿಯು ನನ್ನ ಬಳಿಗೆ ಬಂದಿದ್ದಾರೆ. ಅವರು ಬಹುದೇವ ವಿಶ್ವಾಸಿನಿಯಾಗಿದ್ದಾರೆ. ಅವರು ಹಾಗೂ ನನ್ನ ಮಧ್ಯೆ ಗಾಢ ಸಂಬಂಧ ಇರಬೇಕೆಂದು ಅವರು ಬಯಸುತ್ತಾರೆ. ನಾನು ಅವರೊಂದಿಗೆ ಸಂಬಂಧ ಮುಂದುವರಿಸಬಹುದೇ? ಪ್ರವಾದಿ(ಸ) ಹೇಳಿದರು, ನೀನು ನಿನ್ನ ತಾಯಿಯೊಂದಿಗೆ ಗಾಢ ಸಂಬಂಧ ವನ್ನು ಮುಂದುವರಿಸು. (ಬುಖಾರಿ, ಮುಸ್ಲಿಮ್)
  ಇದು ಓರ್ವ ಬಹುದೇವ ವಿಶ್ವಾಸಿನಿಯೊಂದಿ ಗಿನ ಧೋರಣೆಯಾಗಿದೆ. ವೇದ ಗ್ರಂಥದವರೊಂದಿ ಗಿನ ಇಸ್ಲಾಮಿನ ಧೋರಣೆಯು ಬಹುದೇವ ವಿಶ್ವಾಸಿಗಳೊಂದಿಗಿನ ಧೋರಣೆಗಿಂತ ಮೃದು ವಾಗಿದೆಯೆಂದು ನಮಗೆಲ್ಲರಿಗೂ ತಿಳಿದಿದೆಯಷ್ಟೇ. ಅವರು ದಿಬ್ಹ್ ಮಾಡಿದ್ದನ್ನು ತಿನ್ನುವುದು, ಅವ ರೊಂದಿಗೆ ವೈವಾಹಿಕ ಸಂಬಂಧವನ್ನು ಸ್ಥಾಪಿಸುವು ದನ್ನು ಕುರ್‍ಆನ್ ಅನುಮತಿಸಿದೆ. ಅಲ್ಲಾಹನು ಹೇಳುತ್ತಾನೆ, "ಇಂದು ನಿಮಗೆ ಸಕಲ ಶುದ್ಧ ವಸ್ತುಗಳೂ `ಧರ್ಮ ಸಮ್ಮತ' ಮಾಡಲ್ಪಟ್ಟಿವೆ. ಗ್ರಂಥದವರ ಆಹಾರ ನಿಮಗೂ ನಿಮ್ಮ ಆಹಾರ ಅವರಿಗೂ ಧರ್ಮಸಮ್ಮತ ಆಗಿರುತ್ತದೆ. ಸುಶೀಲ ಸ್ತ್ರೀಯರು- ಅವರು ಸತ್ಯವಿಶ್ವಾಸಿ ವರ್ಗದವರಿರಲಿ ಅಥವಾ ನಿಮಗಿಂತ ಮುಂಚೆ ಗ್ರಂಥ ನೀಡಲ್ಪಟ್ಟ ವರ್ಗದವರಿರಲಿ- ನೀವು ಅವರಿಗೆ ವಿವಾಹಧನ ಕೊಟ್ಟು ವಿವಾಹದಲ್ಲಿ ಅವರ ರಕ್ಷಕರಾದರೆ ನಿಮಗೆ ಅವರು ಧರ್ಮಸಮ್ಮತ ಆಗಿರುತ್ತಾರೆ..."
  (ಅಲ್ ಮಾಇದಃ- 5)
  ಒಮ್ಮೆ ಅಬೂದರ್ರ್‍ರಿಗೆ ಉಪದೇಶ ನೀಡುತ್ತಾ ಪ್ರವಾದಿಯವರು(ಸ) ಹೇಳಿದರು, ನೀನು ಎಲ್ಲೇ ಇದ್ದರೂ ಅಲ್ಲಾಹನನ್ನು ಭಯಪಡು. ಕೆಡುಕಿನ ಬಳಿಕ ಒಳಿತನ್ನು ಮಾಡು. ಆ ಒಳಿತು ಕೆಡುಕನ್ನು ಅಳಿಸುತ್ತದೆ. ಜನರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸು. (ತಿರ್ಮಿದಿ, ಅಹ್ಮದ್) ಇಲ್ಲಿ ಮುಸ್ಲಿಮ ರೊಂದಿಗೆ ಉತ್ತಮವಾಗಿ ವರ್ತಿಸು ಎಂದು ಹೇಳಿದ್ದಲ್ಲ, ಬದಲಾಗಿ ಜನರೊಂದಿಗೆ ಉತ್ತಮವಾಗಿ ವರ್ತಿಸು ಎಂದು ಹೇಳಲಾಗಿದೆ. ಅದೇ ರೀತಿ ಸೌಮ್ಯವಾಗಿ ವರ್ತಿಸಲೂ ಒರಟುತನದ ಬಗ್ಗೆ ಜಾಗ್ರತೆ ವಹಿಸಲೂ ಪ್ರವಾದಿಯವರು(ಸ) ಪೆÇ್ರೀತ್ಸಾಹ ನೀಡಿದ್ದಾರೆ.
  ಪ್ರವಾದಿಯವರ(ಸ) ಸನ್ನಿಧಿಗೆ ಕೆಲವು ಯಹೂದಿಗಳು ಬಂದು ಅಸ್ಸಾಮು ಅಲೈಕ ಎಂದು ಹೇಳಿದರು (ಅಸ್ಸಾಮು ಎಂಬ ಪದದ ಅರ್ಥವು ನಾಶ, ಮರಣ ಎಂದಾಗಿದೆ). ಇದನ್ನು ಕೇಳಿದ ಆಯಿಶಾ(ರ) ಈ ರೀತಿ ಪ್ರತಿಕ್ರಿಯಿಸಿದರು- ಅಲ್ಲಾಹನ ವೈರಿಗಳೇ, ನಿಮಗೆ ಕೂಡಾ ನಾಶವೂ ಶಾಪವೂ ಇರಲಿ. ಆದರೆ ಇದರ ಬಗ್ಗೆ ಪ್ರವಾದಿ ಯವರು(ಸ) ಆಯಿಶಾರನ್ನು ಆಕ್ಷೇಪಿಸಿದರು. ಆಗ ಆಯಿಶಾ(ರ) ಕೇಳಿದರು, "ಅವರು ಹೇಳಿದ್ದು ತಾವು ಕೇಳಲಿಲ್ಲವೇ?" ಪ್ರವಾದಿಯವರು(ಸ) ಹೇಳಿದರು, ಖಂಡಿತವಾಗಿಯೂ ನಾನು ಆಲಿಸಿ ದ್ದೇನೆ. ವಅಲೈಕುಮ್ ಎಂದು ನಾನು ಉತ್ತರವನ್ನೂ ನೀಡಿದ್ದೇನೆ. (ನೀವು ಹೇಳಿದಂತೆ ನಿಮಗೂ ಸಂಭವಿಸಲಿ ಎಂದು ಇದರ ಅರ್ಥ). ಬಳಿಕ ಪ್ರವಾದಿಯವರು(ಸ) ಹೇಳಿದರು, ಎಲ್ಲಾ ವಿಷಯಲ್ಲೂ ಅಲ್ಲಾಹನು ಸೌಮ್ಯತೆಯನ್ನು ಇಷ್ಟ ಪಡುತ್ತಾನೆ. (ಬುಖಾರಿ, ಮುಸ್ಲಿಮ್)
  ಇಸ್ಲಾಮಿನ ಆಚರಣೆಗಳ ವೇಳೆ ಮುಸ್ಲಿಮೇ ತರರು ಶುಭಾಶಯ ಹೇಳುವುದಾದರೆ ಅವರ ಆಚರಣೆಯ ವೇಳೆಯಲ್ಲೂ ಶುಭಾಶಯ ಕೋರು ವುದು ಇಸ್ಲಾಮ್ ಅಂಗೀಕರಿಸುವ ವಿಚಾರವಾಗಿದೆ. ಒಳಿತಿಗೆ ಬದಲಾಗಿ ಒಳಿತು ಮಾಡಲು ಅಭಿನಂದನೆ ಗಳಿಗೆ ಹೆಚ್ಚು ಉತ್ತಮ ರೀತಿಯಲ್ಲಿ ಅಥವಾ ಅದಕ್ಕೆ ಸಮಾನವಾದ ರೀತಿಯಲ್ಲಿ ಅಭಿನಂದನೆ ಸಲ್ಲಿಸಲು ನಾವು ಆಜ್ಞಾಪಿಸಲ್ಪಟ್ಟವರಾಗಿದ್ದೇವೆ. ಅಲ್ಲಾಹನು ಹೇಳುತ್ತಾನೆ, "ನಿಮಗೆ ಯಾರಾದರೂ ಸಾದರದಿಂದ ಸಲಾಮ್ ಹೇಳಿದರೆ ಅದಕ್ಕಿಂತಲೂ ಉತ್ತಮ ರೀತಿಯಿಂದ ಅಥವಾ ಕನಿಷ್ಟ ಪಕ್ಷ ಅದೇ ರೀತಿಯಲ್ಲಿ ಪ್ರತಿ ಸಲಾಮ್ ಹೇಳಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಕಲ ವಿಷಯಗಳ ಲೆಕ್ಕ ಪರಿಶೋಧಿಸುವವನಾಗಿದ್ದಾನೆ."
  (ಅನ್ನಿಸಾ- 86)
  ಗೌರವ ಹಾಗೂ ಇತರ ಉತ್ಕøಷ್ಟ ಸ್ವಭಾವಗಳ ವಿಷಯದಲ್ಲಿ ಇತರರಿಗಿಂತ ಹಿಂದೆ ಬೀಳುವುದು ಓರ್ವ ಮುಸ್ಲಿಮನಿಗೆ ಭೂಷಣವಲ್ಲ. ಈ ವಿಚಾರಗಳಲ್ಲಿ ಇತರೆಲ್ಲರಿಗಿಂತಲೂ ಮುಸ್ಲಿಮನು ಮುಂಚೂಣಿಯಲ್ಲಿರಬೇಕಾಗಿದೆ. ಪ್ರವಾದಿ(ಸ) ಹೇಳಿದರು, ವಿಶ್ವಾಸಿಗಳ ಪೈಕಿ ಈಮಾನ್ ಅತ್ಯಂತ ಪೂರ್ಣಗೊಂಡವನು ಅವರಲ್ಲಿ ಉತ್ತಮ ಸ್ವಭಾವ ಹೊಂದಿದವರಾಗಿದ್ದಾರೆ.
  (ಅಹ್ಮದ್, ಅಬೂದಾವೂದ್)
  ಅಗ್ನಿಯಾರಾಧಕನಾದ ಓರ್ವನು ಇಬ್ನು ಅಬ್ಬಾಸ್‍ರೊಂದಿಗೆ `ಅಸ್ಸಲಾಮು ಅಲೈಕುಂ' ಎಂದು ಹೇಳಿದರು. ಆಗ ಅವರು `ವಅಲೈಕುಮ್ ಸಲಾಮ್ ವರಹ್ಮತುಲ್ಲಾಹಿ' ಎಂದು ಹೇಳಿದರು. ಇದನ್ನು ಕೇಳಿದ ಕೆಲವರು ಪ್ರತಿಕ್ರಿಯಿಸಿದರು, "ಆತನಿಗೆ ಅಲ್ಲಾಹನ ಕರುಣೆ ಇರಲಿ ಎಂದು ಹೇಳುತ್ತಿದ್ದೀರಾ?" ಇಬ್ನು ಅಬ್ಬಾಸ್(ರ) ಹೇಳಿದರು, "ಆತ ಬದುಕುತ್ತಿರುವುದು ಅಲ್ಲಾಹನ ಕರುಣೆ ಯಿಂದಲ್ಲವೇ?"
  ಮುಸ್ಲಿಮೇತರರನ್ನು ಇಸ್ಲಾಮಿಗೆ ಆಹ್ವಾನಿಸಲೂ ವಿಶ್ವಾಸಿಗಳು ಅವರಿಗೆ ಪ್ರಿಯರನ್ನಾಗಿಸಲೂ ನಾವು ಬಯಸುವುದಾದರೆ ಅದು ಪರಸ್ಪರ ಬೇರ್ಪಡುವಿಕೆ ಯಿಂದ ಸಾಧ್ಯವಿಲ್ಲ ಎಂದು ಇದು ಸೂಚಿಸುತ್ತದೆ. ಆದ್ದರಿಂದ, ಆಚರಣೆಯ ವೇಳೆಗಳಲ್ಲಿ ಓರ್ವ ಮುಸ್ಲಿಮನು ವೈಯಕ್ತಿಕವಾಗಿ ಅಥವಾ ಒಂದು ಇಸ್ಲಾವಿೂ ಸಂಸ್ಥೆಯು ಮಾತಿನ ಮೂಲಕವೋ ಇಸ್ಲಾಮಿಗೆ ವಿರುದ್ಧವಾದ ಶಿಲುಬೆಯಂತಹ ಚಿಹ್ನೆ ಅಥವಾ ಪ್ರಸ್ತಾಪಗಳಿಲ್ಲದಂತಹ ಶುಭಾಶಯ ಪತ್ರಗಳ ಮೂಲಕವೋ ಶುಭಾಶಯ ಹೇಳುವುದರಲ್ಲಿ ತಪ್ಪಿಲ್ಲ. ಇಂತಹ ಸಂದರ್ಭಗಳಲ್ಲಿರುವ ಸಾಂಪ್ರ ದಾಯಿಕ ಶುಭಾಶಯ ವಚನಗಳಲ್ಲಿ ಅವರ ಧರ್ಮವನ್ನು ಅಂಗೀಕರಿಸುವ, ಅದನ್ನು ಮೆಚ್ಚಿ ಕೊಳ್ಳುವ ಕೆಲಸ ಮಾಡುವುದಿಲ್ಲ. ಅವು ಜನರು ಸಂಪ್ರದಾಯವಾಗಿಸಿದ ಕೆಲವು ಶುಭಾಶಯ ಗಳಾಗಿವೆಯಷ್ಟೇ.
  ಅದೇ ರೀತಿ ಅವರಿಂದ ಉಡುಗೊರೆಗಳನ್ನು ಪಡೆಯುವುದರಲ್ಲೂ ತಪ್ಪಿಲ್ಲ. ಈಜಿಪ್ಟ್‍ನ ಮುಖೌಕಿಸ್ ರಾಜರಂತಹವರಿಂದ ಪ್ರವಾದಿ ಯವರು(ಸ) ಉಡುಗೊರೆಗಳನ್ನು ಸ್ವೀಕರಿಸಿದ್ದಾರೆ. ಅದೇ ವೇಳೆ ಅವು ಮುಸ್ಲಿಮರಿಗೆ ನಿಷಿದ್ಧವಾಗಿರು ವಂತಹ ವಸ್ತುಗಳಾಗಿರಬಾರದು. ಇಬ್ನು ತೈವಿಯಾರಂತಹ ಕೆಲವು ವಿದ್ವಾಂಸರು ವೇದದವರ ಹಾಗೂ ಮುಶ್ರಿಕರ ಆಚರಣೆಗೆ ಸಂಬಂಧಿಸಿದ ವಿಷಯಗಳಲ್ಲಿ ಕಟ್ಟು ನಿಟ್ಟಿನ ನಿಲುವು ತೋರಿದ್ದಾರೆ. ಇಕ್‍ತಿದಾಲು ಸಿರಾತಿಲ್ ಮುಸ್ತಕೀಮ್ ಎಂಬ ಗ್ರಂಥದಲ್ಲಿ ಅದನ್ನು ಕಾಣಬಹುದಾಗಿದೆ.
  ಮುಸ್ಲಿಮರು ವೇದದವರ ಹಾಗೂ ಮುಶ್ರಿಕ್‍ಗಳ ಆಚರಣೆಗಳನ್ನು ಆಚರಿಸುವ ವಿಷಯದಲ್ಲಿ ನಾನು ಅವರ ನಿಲುವನ್ನೇ ಹೊಂದಿದ್ದೇನೆ. ಕೆಲವು ಮುಸ್ಲಿಮರು ಈದುಲ್ ಫಿತ್ರ್ ಹಾಗೂ ಈದುಲ್ ಅಝ್ಹಾದಂತೆ (ಕೆಲವೊಮ್ಮೆ ಒಂದು ಹೆಜ್ಜೆ ಮುಂದೆ ಹೋಗಿ) ಕ್ರಿಸ್‍ಮಸ್ ಆಚರಿಸುವುದನ್ನು ಕಾಣುತ್ತೇವೆ. ಇದೆಂದೂ ಅನುವದನೀಯವಾಗುವು ದಿಲ್ಲ. ನಮಗೆ ನಮ್ಮದೇ ಆದ ಆಚರಣೆಗಳಿವೆ. ಅವರಿಗೆ ಅವರದೇ ಆಚರಣೆಗಳಿವೆ. ಅದೇ ವೇಳೆ, ಇತರ ಧವರ್ಿೂಯರೊಂದಿಗೆ ಕುಟುಂಬ ಸಂಬಂಧ ಅಥವಾ ನೆರೆಕರೆ ಸಂಬಂಧ, ಸೌಹಾ ರ್ದತೆ, ಪ್ರೀತಿ, ಸದ್ವರ್ತನೆ ಅಥವಾ ಅಂಗೀಕೃತವಾದ ಇತರ ಸಾಮಾಜಿಕ ಸಂಬಂಧ ಇರುವವರು ಅವರ ಆಚರಣೆಗಳಿಗೆ ಶುಭಾಶಯ ಕೋರುವುದರಲ್ಲಿ ತಪ್ಪಿಲ್ಲ ಎಂಬುದು ನನ್ನ ಅಭಿಪ್ರಾಯವಾಗಿದೆ.
  ಇಬ್ನು ತೈಮಿಯಾ ತಮ್ಮ ಸಮಕಾಲೀನ ಸ್ಥಿತಿಗತಿಗಳನ್ನು ಮುಂದಿರಿಸಿ ಈ ವಿಷಯದಲ್ಲಿ ಫತ್ವ ನೀಡಿದ್ದಾರೆ. ಕಾಲ, ದೇಶ, ಸನ್ನಿವೇಶ ಮೊದಲಾದವುಗಳನ್ನೆಲ್ಲಾ ತನ್ನ ಫತ್ವಾದಲ್ಲಿ ಪರಿ ಗಣಿಸಿದ್ದಾರೆ. ಹಾಗೆಯೇ ಸ್ವಾತಂತ್ರ್ಯ ದಿನ, ರಿಪಬ್ಲಿಕ್ ದಿನದಂತಹ ರಾಷ್ಟ್ರೀಯ ಆಚರಣೆಗಳಲ್ಲೂ ತಾಯಂದಿರ ದಿನ, ಶಿಶುದಿನ, ಕಾರ್ಮಿಕರ ದಿನ ದಂತಹ ಸಾಮಾಜಿಕ ಆಚರಣೆಗಳಲ್ಲಿ ಭಾಗವಹಿಸಲು ಮುಸ್ಲಿಮರಿಗೆ ಯಾವುದೇ ಅಡೆತಡೆಯಿಲ್ಲ. ಇಂತಹ ಸಂದರ್ಭಗಳಲ್ಲುಂಟಾಗುವ ನಿಷಿದ್ಧ ಕಾರ್ಯಗಳ ಬಗ್ಗೆ ಮಾತ್ರ ಜಾಗೃತರಾಗಿರಬೇಕು ಮತ್ತು ಅದ ರಿಂದ ದೂರ ಸರಿಯಬೇಕು.

 • ಹೆಣ್ಣು - ಗಂಡು ಸಮಾನರೇ???!!!
  ismika02-03-2015
  ಪ್ರಶ್ನೆ: ಹೆಣ್ಣು - ಗಂಡು ಸಮಾನರೇ???!!!

  ಉತ್ತರ: ಹೆಣ್ಣೊಬ್ಬಳು `ತಾಯಿ', ಗಂಡೊಬ್ಬ `ತಂದೆ' ಎಂಬ ಸ್ಥಾನಕ್ಕೇರುವಾಗ ಗಂಡು-ಹೆಣ್ಣಿನ ಪರಿಕಲ್ಪನೆ ಯಿಂದ ಹೊರಬಂದು ಹೊಸ ಅಸ್ತಿತ್ವವನ್ನು ಪಡೆದುಕೊಳ್ಳುತ್ತಾರೆ, ಜವಾಬ್ದಾರಿಯನ್ನು ಪಡೆದು ಕೊಳ್ಳುತ್ತಾರೆ. ಇಬ್ಬರೂ ಸೇರಿ ಕುಟುಂಬ ಎಂಬ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರಾಗಿ ತಮ್ಮ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ.
  ಈ ಮನೆ ಮತ್ತು ಕುಟುಂಬ ನಿರ್ವಹಣೆಯಲ್ಲಿ ಎರಡು ರೀತಿಯ ಪಾತ್ರಗಳಿರುತ್ತವೆ.
  ಒಂದು ನಾವು ಪ್ರಸಕ್ತ ಪ್ರಜಾಸತ್ತಾತ್ಮಕ ರಾಷ್ಟ್ರದ ಪರಿಕಲ್ಪನೆಯಲ್ಲಿ ಎರಡು ರೀತಿಯ ಅಧಿಕಾರವನ್ನು ಹೊಂದಿದವರನ್ನು ಕಾಣುತ್ತೇವೆ. ಒಂದು ರಾಷ್ಟ್ರದ ಅಧ್ಯಕ್ಷ, ಇನ್ನೊಂದು ರಾಷ್ಟ್ರದ ಪ್ರಧಾನ ಮಂತ್ರಿ.
  ಪವಿತ್ರ ಕುರ್‍ಆನಿನ ಆಶಯಗಳನ್ನು ಅಧ್ಯಯನ ಮಾಡಿದರೆ ಇದೇ ಅಂಶವನ್ನು ಮನೆಯಲ್ಲೂ ಕುಟುಂಬದಲ್ಲೂ ರೂಪಿಸಲು ಅದು ಕರೆಕೊಡುತ್ತದೆ. ತನ್ನ ದೈಹಿಕ ಸೃಷ್ಟಿ ಪ್ರಕ್ರಿಯೆಯ ಆಧಾರದಲ್ಲಿ ಮತ್ತು ತನ್ನ ಜವಾಬ್ದಾರಿಯ ನಿರ್ವಹಣೆಯ ನೆಲೆಯಲ್ಲಿ ಪತಿಗೆ (ಗಂಡು ಎಂಬ ನೆಲೆಯಲ್ಲಿ ಅಲ್ಲ) ಅದು ಕಾನೂನಿನ ರೂಪದಲ್ಲಿ ಅಧಿಕಾರ ಸ್ಥಾನಮಾನವನ್ನು ನೀಡಿದರೆ, ಹೇಗೆ ರಾಷ್ಟ್ರದ ಅಧ್ಯಕ್ಷರಿಗೆ ಪದವಿ ಇದೆಯೋ ಅದೇ ರೀತಿಯ ಸ್ಥಾನಮಾನವನ್ನು ನೀಡಿದೆ. ಅದೇ ಸಂದರ್ಭದಲ್ಲಿ ಮನೆಯ ವ್ಯವಸ್ಥೆಯ ಜವಾಬ್ದಾರಿ, ಕುಟುಂಬ ನಿರ್ವಹಣೆಯ ಜವಾ ಬ್ದಾರಿಯ ಅಧಿಕಾರ ಪತ್ನಿಗೆ ನೀಡಿದೆ.
  ಇದನ್ನೇ ಕುರ್‍ಆನ್ ಹೇಳಿದೆ, "ಅರ್ರಿಜಾಲು ಕವ್ವಾಮೂನ ಅಲನ್ನಿಸಾ" (ಪುರುಷರು ಮಹಿಳೆಯ ಮೇಲ್ವಿಚಾರಕ ರಾಗಿರುತ್ತಾರೆ.) ಈ ವ್ಯವಸ್ಥಿತ ಮನೆ ನಿರ್ಮಾಣ ಗೊಂಡ ನಂತರ ಯಾವುದೇ ಮಹಿಳೆ ಸಾಮಾಜಿಕ ವಾಗಿ ದುಡಿಯಲು ಅಥವಾ ಸಾಮಾಜಿಕ ಕ್ಷೇತ್ರ ಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವುದಾದರೆ ಅವಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ಇಸ್ಲಾಮ್ ನೀಡಿದೆ. ಅವಳು ವ್ಯಾಪಾರ, ದುಡಿಮೆ, ಉದ್ಯೋಗ ಮಾಡಬಹುದು. ತನಗಾಗಿ ಸ್ವತಂತ್ರ ಆದಾಯದ ಮೂಲವನ್ನು ವ್ಯವಸ್ಥೆಗೊಳಿಸಬಹುದು. ಯಾವುದ ನ್ನೆಲ್ಲ ಸಂಪಾದಿಸಿದ್ದಾಳೋ ಅದರ ಏಕಮಾತ್ರ ಒಡೆಯಳಾಗಿ ಅವಳಿಗೆ ಅದನ್ನು ಖರ್ಚು ಮಾಡ ಬಹುದು. ಈ ನಿಟ್ಟಿನಲ್ಲಿ ಇಸ್ಲಾಮ್ ಎಲ್ಲಿಯೂ ಅವಳಿಗೆ ತಡೆಯಾಗಲಿಲ್ಲ. ಆದರೆ ಒಂದು ವ್ಯತ್ಯಾಸ ಮಾಡಿದೆ. ಪುರುಷನಿಗೆ ಜೀವನಾಧಾರಕ್ಕಾಗಿ ಪರಿಶ್ರಮ ಮಾಡುವ ಜವಾಬ್ದಾರಿಯನ್ನು ನೀಡಿದೆ. ಇನ್ನು ಈ ಜವಾಬ್ದಾರಿಯಿಂದ ಯಾರಾದರೂ ನಿರ್ಲಕ್ಷ್ಯ, ಅಸಡ್ಡೆ, ಸೋಮಾರಿತನ ತೋರಿದರೆ ಅವನು ಕಾನೂನಿನ ಮುಂದೆ ವಿಚಾರಣೆಗೊಳಪಡು ತ್ತಾನೆ. ಈ ಜವಾಬ್ದಾರಿಯನ್ನು ಬಯಸದಿದ್ದರೂ ತನ್ನ ಕುಟುಂಬ ನಿರ್ವಹಣೆಗಾಗಿ ಆತ ಮಾಡಿಯೇ ತೀರಬೇಕು. ಅದರಿಂದ ತಪ್ಪಿಸಿಕೊಳ್ಳುವ ಯಾವ ಮಾರ್ಗವೂ ಅವಕಾಶವೂ ಇಸ್ಲಾಮ್ ಅವನಿಗೆ ಕೊಟ್ಟಿಲ್ಲ. ತನ್ನ ಮನೆ ಮತ್ತು ಪತ್ನಿಯ ಬೇಕು-ಬೇಡಗಳು, ಮಕ್ಕಳ ಶಿಕ್ಷಣ, ಮದುವೆ, ರೋಗರುಜಿನ ಮುಂತಾದ ಎಲ್ಲದರ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳಬೇಕು. ಅದಕ್ಕಾಗಿ ಆತನಿಗೆ ಮೇಲ್ವಿಚಾರಕ ಸ್ಥಾನವನ್ನು ನೀಡಿದೆ. ಒಂದು ವೇಳೆ ಈ ಜವಾಬ್ದಾರಿಯನ್ನು ನಿರ್ವಹಿಸಲಿಕ್ಕೆ ಇಸ್ಲಾವಿೂ ಕಾನೂನು ಶಕ್ತಿಯ ಅಥವಾ ಬಲ ಪ್ರಯೋಗದ ಮೂಲಕ ಅವನನ್ನು ಕೆಲಸ ಕಾರ್ಯಗಳನ್ನು ಮಾಡಲು ನಿರ್ಬಂಧಿಸುವುದು.

  ಇನ್ನು ಮಹಿಳೆ ತಾನು ದುಡಿಯುತ್ತೇನೆ ಎಂದು ಬಯಸುವುದಾದರೆ ದುಡಿಯಬಹುದು. ವ್ಯಾಪಾರ ಮಾಡಬಹುದು. ಇನ್ನು ನಾನು ಉದ್ಯೋಗ ಮಾಡುವುದಿಲ್ಲ, ವ್ಯಾಪಾರ ಮಾಡುವು ದಿಲ್ಲ ಮನೆಯಲ್ಲೇ ಇದ್ದು ತನ್ನ ತಾಯ್ತತನದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದರೆ ಯಾವುದೇ ಕಾನೂನು ಅಧಿಕಾರ ಶಕ್ತಿಯು ಆಕೆಯನ್ನು ನಿರ್ಬಂಧಿಸುವಂತಿಲ್ಲ. ಅದರ ಆಯ್ಕೆಯ ಸ್ವಾತಂತ್ರ್ಯವನ್ನು ಆಕೆಗೇ ಬಿಟ್ಟುಬಿಟ್ಟಿದೆ. ಪುರುಷನಿಗೆ ಒಂದು ಹೆಚ್ಚಿನ ಜವಾಬ್ದಾರಿ ನೀಡಿ, ಆದೇಶಿಸಲಾಗಿದೆ. ಅದಕ್ಕೇ ಆತ ಮೇಲ್ವಿಚಾರಕನಾಗಿ ರುತ್ತಾನೆ.

  ಮಹಿಳೆಗೆ ಆಕೆಯ ತಾಯತ್ತನ, ಮುಟ್ಟು, ಗರ್ಭಿಣಿಯ ಕಾಲಘಟ್ಟ ಹೀಗೆ ಪ್ರಕೃತಿಯನ್ನು ಮುಂದಿಟ್ಟು ಆಕೆಯನ್ನು ಈ ಜವಾಬ್ದಾರಿಯಿಂದ ಸ್ವತಂತ್ರಗೊಳಿಸಲಾಯಿತು. ಇನ್ನು ಮಹಿಳೆಗೂ ಪುರುಷನಂತೆಯೇ ಪ್ರಕೃತಿ ಇರುತ್ತಿದ್ದರೆ ಮಹಿಳೆಯ ಮೇಲೂ ದೇವನು ಈ ಆಜ್ಞೆಯನ್ನು ಹೊರಡಿಸಿ ಗೀಟು ಹಾಕಿದಂತೆ ಸಮಾನತೆ ಕಾಯ್ದುಕೊಳ್ಳುತ್ತಿ ದ್ದನು. ಎರಡು ಅಡಿ ಉದ್ದ ಇರುವ ಮನುಷ್ಯನಿಗೆ ಅವನ ಎತ್ತರಕ್ಕೆ ಯೋಗ್ಯವಾದ ಉಡುಪು ನೀಡ ಬೇಕು. ಒಂದು ಇಡ್ಲಿ ತಿನ್ನುವ ಸಾಮರ್ಥ್ಯ ಇರುವವನಿಗೆ ಒಂದು ಇಡ್ಲಿ ಇನ್ನು ಐದು ಇಡ್ಲಿ ತಿನ್ನುವ ಸಾಮರ್ಥ್ಯವಿರುವವನಿಗೆ ಅವನ ಸಾಮರ್ಥ್ಯದ ಆಹಾರ ನೀಡುವುದು. ಇಂತಹ ಸಮಾನತೆಯನ್ನು ಇಸ್ಲಾಮ್ ಕುಟುಂಬದಲ್ಲೂ ಜವಾಬ್ದಾರಿಯಲ್ಲೂ ಪ್ರಕೃತಿಯಲ್ಲೂ ಕಾಯ್ದುಕೊಳ್ಳುತ್ತದೆ. ನಾವಿದನ್ನು ಆಟೋಟಗಳಲ್ಲಿ ನೋಡುತ್ತೇವೆ. 50 ಕೆ.ಜಿ. ಇರು ವವರ ಕುಸ್ತಿ ಪಂದ್ಯಾಟ, 60 ಕೆ.ಜಿ. ಇರುವವರ ಕುಸ್ತಿ ಪಂದ್ಯಾಟ, ಮಹಿಳೆ ಮಹಿಳೆಯರೊಂದಿಗೆ ಮಾತ್ರ ಸ್ಪರ್ಧಿಸುವ ಕ್ರೀಡೆಗಳು ಇವೆಲ್ಲವೂ ಉಚ್ಚ- ನೀಚತೆ ಅಥವಾ ಉನ್ನತ ಕೀಳು ಎಂಬ ಪರಿ ಕಲ್ಪನೆಯನ್ನು ಸೂಚಿಸುವುದಿಲ್ಲ. ಬದಲಾಗಿ ದೈಹಿಕ ಪ್ರಕೃತಿಗನುಸಾರವಾಗಿ ಸಮಾನತೆಯನ್ನು ಕಾಯ್ದು ಕೊಳ್ಳಲಾಗುತ್ತದೆ. ಆದುದರಿಂದ ಮಹಿಳೆಯನ್ನು ಜವಾಬ್ದಾರಿಯಿಂದ ಸ್ವತಂತ್ರಗೊಳಿಸಲಾಗಿದೆ ಎಂದು ಹೇಳಿ ಹೆಣ್ಣಿನ ಮೇಲೆ ಅನ್ಯಾಯ ದೌರ್ಜನ್ಯ ಮಾಡುವ ಮನೆಯವರೂ ಇದ್ದಾರೆ. ಅಂತಹ ವ್ಯಕ್ತಿಗಳು ಇಸ್ಲಾವಿೂ ಕಾನೂನಿನ ಮುಂದೆ ವಿಚಾರಣೆಗೊಳಪಡಬೇಕಾದವರಾಗಿದ್ದಾರೆ. ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುವ ಹಕ್ಕು ಪತಿಗೆ ಎಷ್ಟಿದೆಯೋ, ತಂದೆಗೆಷ್ಟಿದೆಯೋ ಅದರಲ್ಲಿ ಅನ್ಯಾಯ, ಹಿಂಸೆ ದೌರ್ಜನ್ಯಗಳು ಸಂಭವಿಸಿದರೆ ನಂತರ ಸರಕಾರ ಖಾಝಿ ಮಧ್ಯೆ ಪ್ರವೇಶಿಸಿ ಅದನ್ನು ಶಕ್ತಿಯ ಮೂಲಕ ಸರಿಪಡಿಸುವುದು ಇಸ್ಲಾಮಿನ ಕಾನೂನಾಗಿದೆ. ಇಸ್ಲಾಮ್ ಎಲ್ಲೂ ಮಹಿಳೆಗೆ ಸಾಮಾಜಿಕ ಕ್ಷೇತ್ರ, ಚಟುವಟಿಕೆ ಗಳಿಂದ, ಪರಿಶ್ರಮಗಳಿಂದ ದೂರ ಇಟ್ಟ ಉದಾ ಹರಣೆ ಪ್ರವಾದಿ ಚರ್ಯೆಯಲ್ಲಿ ನಮಗೆ ಕಾಣಲು ಸಾಧ್ಯವಿಲ್ಲ. ಈ ಹಕ್ಕು ಅಲ್ಲಾಹನಿಂದ ಪ್ರವಾದಿಯವ ರಿಂದ(ಸ) ನೀಡಿದ್ದಾಗಿದೆ. ಇದನ್ನು ಕಸಿಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ ಮಹಿಳೆಯ ಮೇಲೆ ಸಾಮಾಜಿಕ ಆರ್ಥಿಕ ಆದಾಯದ ಕಾನೂನಿ ಜವಾಬ್ದಾರಿಯನ್ನು ಹೇರಲಾಗಿಲ್ಲ. ಮಹಿಳೆ ಇದ್ದಕ್ಕಾಗಿ ವಿಚಾರಣೆಯನ್ನು ಎದುರಿಸ ಬೇಕ್ಕಿಲ್ಲ. ಪುರುಷ ಜವಾಬ್ದಾರಿಯಿಂದ ನುಣುಚಿ ಕೊಂಡರೆ ಅವನು ಕಾನೂನಿನ ಮೂಲಕವೂ ಅಪರಾಧಿಯಾಗಿರುತ್ತಾನೆ. ನಾಳೆ ಪರಲೋಕದಲ್ಲಿ ಅಲ್ಲಾಹನ ಮುಂದೆಯೂ ಅಪರಾಧಿ ಸ್ಥಾನದಲ್ಲಿ ನಿಂತು ವಿಚಾರಣೆಗೊಳಪಡುತ್ತಾನೆ. ಆದರೆ ಮಹಿ ಳೆಗೆ ಈ ಎಲ್ಲ ಜಂಜಡಗಳಿಂದ ಮುಕ್ತಿ ನೀಡ ಲಾಗಿದೆ. ಇದನ್ನು ಒಂದು ರೀತಿಯಲ್ಲಿ ದೈವಿಕ ವಿೂಸಲಾತಿ (devine reservation) ಎಂದರೂ ತಪ್ಪಾಗಲಾರದು. ಆದ್ದರಿಂದ ಇಸ್ಲಾಮ್ ಮಾನವ ನಿರ್ಮಿತ ಸಮಾನತೆಯನ್ನು ಅರ್ಥಹೀನ ಮತ್ತು ಶೋಷಣೆಯ ಇನ್ನೊಂದು ಪ್ರತಿರೂಪ ಎಂದು ಭಾವಿಸುತ್ತದೆ. ಎಲ್ಲರಿಗೂ ಒಂದೇ ಲಾಠಿಯಿಂದ ಹೊಡೆಯಬೇಕು ಎಂಬ ಮಾನವ ನಿರ್ಮಿತ ಸಮಾನತೆಯನ್ನು ಇಸ್ಲಾಮ್ ವಿರೋಧಿಸುತ್ತದೆ.

  ಇಸ್ಲಾಮಿನ ಪ್ರಥಮ ಮಹಿಳೆ ಖದೀಜಾರಿಗೆ ದೊಡ್ಡ ಮಟ್ಟದ ವ್ಯಾಪಾರವಿತ್ತು. ಪ್ರವಾದಿ ಮುಹಮ್ಮದ್‍ರು(ಸ) ಮದುವೆಗಿಂತ ಮುಂಚೆ ಖದೀಜಾರ ವ್ಯಾಪಾರದಲ್ಲಿ ನೌಕರಿಯನ್ನು ಪ್ರವಾದಿ ವರ್ಯರು(ಸ) ಮಾಡುತ್ತಿದ್ದರು. ಅವರು ಖದೀಜಾರ(ರ) ವ್ಯಾಪಾರದ ಮೇಲ್ನೋಟ ವಹಿಸಿ ದೂರ ದೂರಕ್ಕೆ ಪ್ರಯಾಣವನ್ನು ಕೈಗೊಂಡಿದ್ದರು. ಬಹಳ ದೊಡ್ಡ ವ್ಯಾಪಾರೀ ಮಹಿಳೆ ಎಂಬ ಗೌರವ ಖ್ಯಾತಿ ಖದೀಜರಿಗೆ(ರ) ಅರೇಬಿಯಾದ ಲ್ಲಿತ್ತು. ಪ್ರವಾದಿ(ಸ) ಸಂದೇಶ ಪ್ರಚಾರದ ಕಾರ್ಯ ಭಾರವನ್ನು ಕೈಗೆತ್ತಿಕೊಂಡು ಸಂದೇಶ ವಾಹಕರಾಗಿ ಜವಾಬ್ದಾರಿ ನಿರ್ವಹಿಸುವಾಗ ಪ್ರವಾದಿಯವರ(ಸ) ಆರಂಭ ಕಾಲದ ಎಲ್ಲ ಆರ್ಥಿಕ ಖರ್ಚು ವೆಚ್ಚಗಳನ್ನು ಅವರೇ ಭರಿಸುತ್ತಿ ದ್ದರು. ಅವರ ಸಂಪತ್ತಿ ನಿಂದ ಪ್ರವಾದಿಯವರು(ಸ) ತನ್ನ ಮಿಷನ್‍ಗಾಗಿ ಬಹಳಷ್ಟು ಪ್ರಯೋಜನ, ಸಹಾಯವನ್ನು ಪಡೆದಿದ್ದರು. ಇಸ್ಲಾಮಿನ ಜೀವಂತ ಸಮಾಜದಲ್ಲಿ ಪ್ರವಾದಿ ಮುಹಮ್ಮದ್‍ರವರ(ಸ) ಮರಣಾ ನಂತರವೂ ಬಹಳಷ್ಟು ಸಾಮಾಜಿಕ, ಅಭಿವೃದ್ಧಿ ಪರ ಕಾರ್ಯಗಳಲ್ಲಿ ತಮ್ಮ ತಮ್ಮ ಪಾತ್ರವನ್ನು ಮಹಿಳೆಯರು ನಿರ್ವಹಿಸಿದ್ದರು.

  ಸಹಲ್ ಬಿನ್ ಸಅದ್(ರ) ಓರ್ವ ಮಹಿಳೆಯ ಕುರಿತು ವಿವರಿಸಿದ್ದಾರೆ. ಆ ಮಹಿಳೆಗೆ ತನ್ನದೇ ಆದ ಹೊಲವಿತ್ತು. ಅವರು ನೀರಿನ ನಾಲೆಗಳ ಸುತ್ತ ಬೀಟ್‍ರೋಟ್‍ಗಳನ್ನು ಬೆಳೆಸುತ್ತಿದ್ದರು. ಜುಮಾ ದಿವಸ ಹ. ಸಹಲ್ ಬಿನ್ ಸಅದ್ ಮತ್ತು ಇತರ ಸಹಾಬಿಗಳು ಅವರನ್ನು ಭೇಟಿ ಯಾಗಲು ಹೋದಾಗ ಅವರು ಬೀಟ್‍ರೋಟ್ ಮತ್ತು ಗೋಧಿ ಹಿಟ್ಟಿನಿಂದ ತಯಾರಿಸಿದ ಹಲ್ವಾವನ್ನು ಅವರಿಗೆ ತಿನ್ನಿಸುತ್ತಿದ್ದರು. (ಬುಖಾರಿ)
  ಕೀಲ(ರ) ಎಂಬ ಸಹಾಬಿ ಮಹಿಳೆಯೋ ರ್ವರು ತನ್ನನ್ನು ಓರ್ವ ವ್ಯಾಪಾರಿಯ ರೂಪದಲ್ಲಿ ಪ್ರವಾದಿ(ಸ) ಅವರ ಮುಂದೆ ಪರಿಚಯ ಪಡಿಸಿ ಅವರಲ್ಲಿ ಕ್ರಯ ವಿಕ್ರಯದ ಬಗ್ಗೆ ಕೆಲವು ವಿಷಯ ಗಳನ್ನು ವಿಚಾರಿಸಿದರು. (ತಬಕಾತ್ ಇಬ್ನು ಸಅದ್) ಹ. ಉಮರ್‍ರ(ರ) ಖಿಲಾಫತ್ ಕಾಲದಲ್ಲಿ ಅಸ್ಮಾ ಬಿನ್ತಿ ಮುಖ್ಝಮ ರಿಗೆ(ರ) ಅವರ ಪುತ್ರ ಅಬ್ದುಲ್ಲಾ ಬಿನ್ ಅಬೀ ರಬೀಅ(ರ) ಯಮನ್‍ನಿಂದ ಸುಗಂಧ ದ್ರವ್ಯ ಕಳುಹಿಸುತ್ತಿದ್ದರು. ಅವರು ಅದರ ವ್ಯಾಪಾರ ಮಾಡುತ್ತಿದ್ದರು.

  ಹ. ಅಬ್ದುಲ್ಲಾ ಬಿನ್ ಮಸ್‍ಊದ್(ರ) ಅವರ ಪತ್ನಿ ಕೈ ಕಸುಬನ್ನು ತಿಳಿದವರಾಗಿದ್ದರು. ಅವರು ತನ್ನ ಪತಿ ಮತ್ತು ಮಕ್ಕಳ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಪ್ರವಾದಿ ಸನ್ನಿಧಿಗೆ ಬಂದು ಹೇಳಿದರು, "ನಾನು ಓರ್ವ ಕೈ ಕಸುಬು ಬಲ್ಲ ಸ್ತ್ರೀ ಆಗಿರುವೆನು. ವಸ್ತುಗಳನ್ನು ತಯಾರಿಸಿ ಮಾರುತ್ತೇನೆ. ಆದರೆ ನನ್ನ ಪತಿ ಮತ್ತು ಮಕ್ಕಳಿಗೆ ಯಾವುದೇ ಆದಾಯ ಮೂಲ ಇಲ್ಲ. ನಾನು ಅವರಿಗಾಗಿ ಖರ್ಚು ಮಾಡಬಹುದೇ?” ಪ್ರವಾದಿ(ಸ) ಹೇಳಿ ದರು, “ಹೌದು ನೀನು ಖರ್ಚು ಮಾಡಬಹುದು. ನಿನಗೆ ಅದರ ಪುಣ್ಯ ಸಿಗುವುದು.” (ತಬಕಾತ್)

  ಉಮರ್‍ರ(ರ) ಕಾಲದಲ್ಲಿ ಓರ್ವ ಮಹಿಳೆಗೆ ಮಾರುಕಟ್ಟೆ ಪರಿಶೀಲನೆ ಸಮಿತಿಯ ಮೇಲುಸ್ತು ವಾರಿಯನ್ನು ನೀಡಿದ್ದರು. ಆದ್ದರಿಂದ ಇಸ್ಲಾವಿೂ ಸಮಾಜವನ್ನು ತಾವು ತಮ್ಮ ಅನುಭವ ಅಥವಾ ಸಮಕಾಲೀನ ಪರಿಸ್ಥಿತಿಗೆ, ಸಾಮಾಜಿಕ ವಾತಾ ವರಣ, ರಿವಾಜುಗಳಿಗೆ ಜೋಡಿಸಿ ನೋಡದಿರಿ. ಇಲ್ಲಿ ನಡೆಯುವ ದೌರ್ಜನ್ಯ, ಹಿಂಸೆ, ಹಕ್ಕುಗಳ ದಮನಕ್ಕೆ ಇಸ್ಲಾಮ್ ಜವಾಬ್ದಾರವಲ್ಲ. ಇಸ್ಲಾಂ ತನ್ನ ಸುವರ್ಣ ಕಾಲಘಟ್ಟಗಳಲ್ಲಿ ಈ ಎಲ್ಲ ಹಕ್ಕುಗಳನ್ನು ಮಹಿಳೆಗೆ ನೀಡಿದೆ.

   

 • ಮಹಿಳೆಯ ಅನುಮತಿಯಿಲ್ಲದೆ ವಿವಾಹ?
  ismika02-03-2015

  ಪ್ರಶ್ನೆ: ಮಹಿಳೆಯ ಒಪ್ಪಿಗೆ-ಅನುಮತಿಯಿಲ್ಲದೆ ಅವಳನ್ನು ಮದುವೆ ಮಾಡಿಕೊಡಲು ಹೆತ್ತವರಿಗೆ ಇಸ್ಲಾಮ್ ಅನುಮತಿ ನೀಡಿದೆಯೇ?

  ಉತ್ತರ: ಇಲ್ಲ. ಮಹಿಳೆಯ ಅನುಮತಿ ರಹಿತವಾಗಿ ಅವಳ ವಿವಾಹವನ್ನು ಮಾಡಿಸುವ ಅಧಿಕಾರವನ್ನು ಇಸ್ಲಾಮ್ ಯಾರಿಗೂ ನೀಡಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದನ್ನು
  ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಹಕ್ಕು ಮಹಿಳೆಯರಿಗಿದೆ. ಪ್ರವಾದಿ(ಸ)ಹೇಳಿದ್ದಾರೆ ' ಕನ್ಯೆಯಲ್ಲದ ಓರ್ವ ಮಹಿಳೆಯ ಕುರಿತು ಅವಳ ರಕ್ಷಕರಿಗಿಂತಲೂ ಸ್ವಂತ ವಿಷಯವನ್ನು ನಿರ್ಧರಿಸುವ ಹಕ್ಕು ಅವಳದ್ದಾಗಿದೆ. ಕನ್ಯೆಯನ್ನು ವಿವಾಹ ಮಾಡಿಕೊಡಲು ಅವಳ ಅನುಮತಿ ಕೇಳಬೇಕಾಗಿದೆ. ಅವಳ ಮೌನವನ್ನು ಅನುಮತಿಯೆಂದು ಪರಿಗಣಿಸಬಹುದು.(ಮುಸ್ಲಿಮ್, ತಿರ್ಮಿದಿ, ಅಬೂದಾವೂದ್, ನಸಾಇ, ಇಬ್ನುಮಾಜಃ)
  ಒಮ್ಮೆ ಓರ್ವ ಹುಡುಗಿ ಪ್ರವಾದಿವರ್ಯ(ಸ) ಸನ್ನಿಧಿಯಲ್ಲಿ ಹಾಜರಾದಳು. ತಂದೆ ನನ್ನ ಸಮ್ಮತಿಯಿಲ್ಲದೆಯೇ ಓರ್ವನನ್ನು ಮದುವೆ ಮಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದಾರೆಂದು ದೂರಿತ್ತಳು. ಆಗ ಅವಳಿಗೆ ಸ್ವಂತ ಇಷ್ಟದಂತೆ ಮಾಡಲು ಪ್ರವಾದಿ(ಸ) ಅನುಮತಿ ನೀಡಿದರು. ಓರ್ವ ಯುವತಿ ಪ್ರವಾದಿಯವರ(ಸ) ಸನ್ನಿಧಿಗೆ ಬಂದು ಹೇಳಿದಳು "ನನ್ನ ತಂದೆ ಸ್ವಂತ ಸಹೋದರನ ಪುತ್ರನೊಂದಿಗೆ ಆತನ ಕೊರತೆಯನ್ನು ತುಂಬುವುದಕ್ಕಾಗಿ ನನ್ನ ವಿವಾಹ ನಡೆಸಿಕೊಟ್ಟಿದ್ದಾರೆ." ಆಗ ಪ್ರವಾದಿ(ಸ) ಅದನ್ನು ತೀರ್ಮಾನಿಸುವ ಹಕ್ಕನ್ನು ಅವಳಿಗೆ ನೀಡಿದರು. ಆಗ ಅವಳು ಹೇಳಿದಳು, ತಂದೆಯ ಕಾರ್ಯವನ್ನು ನಾನು ಅಂಗೀಕರಿಸುವೆನು. ಈ ವಿಷಯದಲ್ಲಿ ತಂದೆಯಂದಿರಿಗೆ ಯಾವ ಅಧಿಕಾರವೂ ಇಲ್ಲವೆಂದು ಸ್ತ್ರೀಯರಿಗೆ ಕಲಿಸಿಕೊಡುವುದು  ನನ್ನ ಉದ್ಧೇಶವಾಗಿತ್ತು ಎಂದು ಹೇಳಿದಳು. ತಮ್ಮ ಮದುವೆ ಕಾರ್ಯದಲ್ಲಿ ತೀರ್ಮಾನ ಕೈಗೊಳ್ಳವ ಅಧಿಕಾರ ಹಕ್ಕು ಮಹಿಳೆಯರಿಗಿದೆ ಎಂಬುದನ್ನು ಈ ಎಲ್ಲ ಘಟನೆಗಳು ಸ್ಪಷ್ಟಪಡಿಸುತ್ತವೆ.

 • ಮಹಿಳೆಗೆ ಪುರುಷನ ಅರ್ಧಪಾಲು?
  ismika02-03-2015

  ಪ್ರಶ್ನೆ: ಮಹಿಳೆಗೆ ಪುರುಷನ ಅರ್ಧಾಂಶ ಸೊತ್ತುಗಳನ್ನು ಇಸ್ಲಾಮ್ ಅನುಮತಿಸಿದೆ. ಇದು ಕಟು ಅನ್ಯಾಯ ಮತ್ತು ತಾರತಮ್ಯವಲ್ಲವೇ?

  ಉತ್ತರ: ಇಸ್ಲಾಮಿನ ನಿಯಮಗಳ ಪ್ರಕಾರ ಯಾವ ಸಂದರ್ಭದಲ್ಲಿಯೂ ಮಹಿಳೆಗೆ ಯಾವುದೇ ರೀತಿಯ ಆರ್ಥಿಕ ಹೊಣೆಗಾರಿಕೆಯಿಲ್ಲ. ಬದಲಾಗಿ ಹಕ್ಕುಗಳಿವೆ. ಎಲ್ಲ ಹೊಣೆಗಾರಿಕೆಗಳು ಯಾವುದೇ ಪರಿಸ್ಥಿತಿಯಲ್ಲಿಯೂ ಪುರುಷನೇ ನಿಭಾಯಿಸಬೇಕಾಗಿದೆ. ವಿವಾಹದ ವೇಳೆಯಲ್ಲಿ ವಧುವಿಗೆ ಕಡ್ಡಾಯ ವಿವಾಹ ಧನ (ಮಹ್ರ್)ವನ್ನು ನೀಡಬೇಕು. ಆ ಮೇಲೆ ಮಹಿಳೆ ಮತ್ತು ಮಕ್ಕಳ ಸಂರಕ್ಷಣೆಯ ಸಂಪೂರ್ಣ ಜವಾಬ್ದಾರಿ ಪುರುಷನದ್ದಾಗಿದೆ. ಅವರಿಬ್ಬರೂ ಸಮಾನವಾದ ವೈದ್ಯೆರೋ ಅದ್ಯಾಪಕ ಅದ್ಯಾಪಿಕೆಯರಾದರೂ ಸರಿ, ಪುರುಷನೇ ಎಲ್ಲ ಜವಾಬ್ದಾರಿಕೆಯನ್ನು ಹೊತ್ತುಕೊಳ್ಳಬೇಕಾಗಿದೆ. ಸ್ತ್ರೀ ತಾನು ಸೇರಿದಂತೆ ಯಾರ ಆರ್ಥಿಕ ಖರ್ಚುವೆಚ್ಚಗಳನ್ನು ಹೊತ್ತುಕೊಳ್ಳಬೇಕಾಗಿಲ್ಲ. ಉದ್ಯೋಗಸ್ಥೆಯಾದ ಪತ್ನಿಯ ಆಹಾರ, ಬಟ್ಟೆಬರೆಗಳ, ಆರೋಗ್ಯ ಚಿಕಿತ್ಸೆಯ ಎಲ್ಲ ಖರ್ಚುಗಳನ್ನು ಕೂಡ ಪತಿಯಾದವನೇ ಭರಿಸಬೇಕಾಗಿದೆ. ಅಥವಾ ಪತಿ ಮೃತನಾದರೆ ಆತನಿಗೆ ಸೊತ್ತುಗಳಿಲ್ಲದಿದ್ದರೆ ಆತನ ತಂದೆಯು ಆತನ ಅನಾಥ ಮಕ್ಕಳನ್ನು ಸಂರಕ್ಷಿಸಬೇಕು. ಅಥವಾ ಸಹೋದರರು, ಸಹೋದರ ಮಕ್ಕಳು, ಅಜ್ಜ ಮುಂತಾದವರು ಆ ಜವಾಬ್ದಾರಿಯನ್ನು ವಹಿಸಬೇಕು. ಮೃತನಾದ ವ್ಯಕ್ತಿಗೆ ಸೊತ್ತಿದ್ದೂ ಮಕ್ಕಳಿಲ್ಲದಿದ್ದರೆ ಆ ಸೊತ್ತಿಗೆ ಯಾರೆಲ್ಲ ಹಕ್ಕುದಾರರಾಗುವರೋ ಅವರು ಈ ಜವಾಬ್ದಾರಿಯನ್ನು ನಿಭಾಯಿಸಬೇಕು. ಸ್ತ್ರೀ ಮದುವೆಯಾಗಿದ್ದರೆ ಅವಳ ಸಂರಕ್ಷಣೆಯನ್ನು ಪತಿಯು ನೋಡಿಕೊಳ್ಳಬೇಕು. ಅವಿವಾಹಿತಳಾಗಿದ್ದರೆ ತಂದೆ, ತಂದೆ ಇಲ್ಲದಿದ್ದರೆ ಸಹೋದರರು ಅವಳ ಸಂರಕ್ಷಣೆಯನ್ನು ಮಾಡಬೇಕಾಗುವುದು. ತಾಯಿಯ ಸಂರಕ್ಷಣೆಯ ಹೊಣೆ ಪುತ್ರರದ್ದಾಗಿದೆ. ಆದ್ದರಿಂದ ಯಾವ ಸ್ಥಿತಿಯಲ್ಲಿಯೂ ಸ್ತ್ರೀಗೆ ಯಾವುದೇ ರೀತಿಯ ಆರ್ಥಿಕ ಬಾಧ್ಯತೆಗಳಿಲ್ಲ. ಪರಸ್ಪರ ಸಂಬಂಧ ಮತ್ತು ಪ್ರೀತಿಯಿಂದ ವೆಚ್ಚ ಮಾಡುವುದಾದರೆ ಅದು ಬೇರೆಯೇ ವಿಷಯವಾಗಿದೆ. ಹಾಗಿದ್ದೂ ಇಸ್ಲಾಮ್ ಮಹಿಳೆಗೆ ಸೊತ್ತಿನಲ್ಲಿ ಹಕ್ಕಿರಿಸಿರುವುದು, ಮಹ್ರ್ ಕಡ್ಡಾಯಗೊಳಿಸಿರುವುದು ಮತ್ತು ಅವರ ಅಂತಸ್ತಿನ ಸುರಕ್ಷೆಯನ್ನು ಖಚಿತಗೊಳಿಸಿರುತ್ತದೆ. ತನ್ನ ಸ್ವಂತ ಸೊತ್ತನ್ನು ಕಾಪಾಡಲು, ಸಂರಕ್ಷಿಸಲು ಮತ್ತು ಹೆಚ್ಚಿಸುವ ಸ್ವಾತಂತ್ರ್ಯ ಹಕ್ಕು ಮಹಿಳೆಗಿದೆ. ತಾಯಿ, ಮಗಳು, ಪತ್ನಿ, ಸಹೋದರಿ ಈ ರೀತಿ ಮಹಿಳೆಗೆ ಸಂಪೂರ್ಣ ಸಂರಕ್ಷಣೆಯನ್ನು ದೃಢಪಡಿಸಿದ ನಂತರವೂ, ಭೌತಿಕ ಮಾನದಂಡದ ಅನುಸಾರ ಅವಳಿಗೆ ಸೊತ್ತು ಅನವಶ್ಯಕವಾಗಿದ್ದರೂ ಇಸ್ಲಾಮ್ ಅದನ್ನು ಅನುಮತಿಸಿದೆ. ಇದು ಸ್ತ್ರೀತ್ವದ ಮಹತ್ವಕ್ಕೆ, ಗೌರವಕ್ಕೆ ಇಸ್ಲಾಮ್ ನೀಡಿರುವ ಮೇಲ್ಮೆಯಾಗಿದೆ.

 • ಮಹಿಳೆಯ ಸಾಕ್ಷ್ಯ?
  ismika02-03-2015

  ಪ್ರಶ್ನೆ: ಸಾಕ್ಷಿಯಲ್ಲಿ ಒಬ್ಬ ಪುರುಷನ ಬದಲಿಗೆ ಇಬ್ಬರು ಸ್ತ್ರೀಯರಿರಬೇಕೆಂದು ನಿಯಮವಿದೆ. ಇದು ಸ್ತ್ರೀಯರೊಡನೆ ತೋರಿಸುವ ತಾರತಮ್ಯವೂ ಪುರುಷ ಪಾರಮ್ಯದ ನಿಲುವೂ ಆಗುವುದಿಲ್ಲವೇ?

  ಉತ್ತರ: ಒಬ್ಬ ಪುರುಷನ ಬದಲಿಗೆ ಇಬ್ಬರು ಸ್ತ್ರೀಯರ ಸಾಕ್ಷಿ ಬೇಕು ಎಂಬುದು ಇಸ್ಲಾಮಿನ ಸಾರ್ವತ್ರಿಕ ನಿಯಮವೇನಲ್ಲ. ಆರ್ಥಿಕ ವಹಿವಾಟಿಗೆ ಮಾತ್ರವೇ ಇದು ಅನ್ವಯವಾಗುವುದು. ಸಾಮಾನ್ಯವಾಗಿ ಸ್ತ್ರೀಯರು ಆರ್ಥಿಕ ವಹಿವಾಟು ನಡೆಸುವವರೂ, ಕೊಡು-ಕೊಳ್ಳು ವ್ಯವಹಾರದಲ್ಲಿ ಭಾಗವಹಿಸುವವರೂ ಅಲ್ಲವಾದ್ದರಿಂದ ಹಣಕಾಸಿನ ವ್ಯವಹಾರದ ಸಾಕ್ಷಿಯ ವಿಚಾರದಲ್ಲಿ ಪ್ರಮಾದ ಸಂಭವಿಸದಿರಲು ಮತ್ತು ಎಚ್ಚರಿಕೆ ಪಾಲಿಸುವುದಕ್ಕಾಗಿ ನಿಶ್ಚಯಿಸಿರುವ ನಿಬಂಧನೆಯಿದು. ಸ್ತ್ರೀಯ ಚಾರಿತ್ರ್ಯದ ಮೇಲೆ ಆರೋಪ ಹೊರಿಸಲ್ಪಟ್ಟಾಗ ಸ್ವಯಂ ಸಾಕ್ಷಿತ್ವ ಮತ್ತು ಸತ್ಯ ಪ್ರಮಾಣ ನಡೆಸುವ ವಿಚಾರದಲ್ಲಿ ಸ್ತ್ರೀ ಪುರುಷರೆಂಬ ವ್ಯತ್ಯಾಸವಿಲ್ಲ. ಎಂದು ಪವಿತ್ರ ಕುರ್‍ಆನ್ ಸ್ಪಷ್ಟಪಡಿಸಿದೆ.

  ಇತರ ಸಾಕ್ಷ್ಯಗಳ ಸ್ಥಿತಿಯೂ ಇದುವೇ ಆಗಿದೆ. ವಿವಾಹ ವಿಚ್ಛೇದನದ ಕುರಿತು ಪವಿತ್ರ ಕುರ್‍ಆನ್ ಹೇಳುವುದು "ತಮ್ಮ (ಇದ್ದತಿನ) ಕಾಲಾವಧಿಯ ಕೊನೆಯನ್ನು ತಲುಪಿದಾಗ ಉತ್ತಮ ರೀತಿಯಿಂದ ಅವರಿಂದ ಬೇರ್ಪಡಿರಿ ಮತ್ತು ನಿಮ್ಮ ಪೈಕಿ ನ್ಯಾಯಶೀಲರಾದ ಇಬ್ಬರನ್ನು ಸಾಕ್ಷಿಗಳಾಗಿ ಮಾಡಿಕೊಳ್ಳಿರಿ" (65:2)
  ಉಯಿಲಿನ ಕುರಿತು ಪವಿತ್ರ ಕುರ್‍ಆನ್ ಈ ರೀತಿ ಹೇಳಿದೆ "ಓ ಸತ್ಯವಿಶ್ವಾಸಿಗಳೇ, ನಿಮಗಾರಿಗಾದರೂ ಮರಣದ ಕಾಲ ಬಂದಾಗ ಮತ್ತು ಅವನು ಉಯಿಲು ಮಾಡುತ್ತಿರುವಾಗ ನಿಮ್ಮ ಕೂಟದಿಂದ ಇಬ್ಬರು ನ್ಯಾಯಶೀಲರನ್ನು ಸಾಕ್ಷಿಗಳಾಗಿರಿಸಿಕೊಳ್ಳಬೇಕು ಅಥವಾ ನೀವು ಪ್ರಯಾಣದಲ್ಲಿದ್ದಾಗ ನಿಮಗೆ ಮರಣಯಾತನೆಯುಂಟಾದರೆ ಪರ (ಧರ್ಮೀಯ)ರಿಂದಲಾದರೂ ಇಬ್ಬರನ್ನು ಸಾಕ್ಷಿಗಳಾಗಿಸಿಕೊಳ್ಳಿರಿ. (5-106).
  ಆರ್ತವ, ಪ್ರಸವ ಮುಂತಾದ ಪುರುಷರನ್ನು ಸಾಕ್ಷಿಗಳಾಗಿಸಲು ಕ್ಲಿಷ್ಟಕರವಾದ ವಿಷಯಗಳಲ್ಲಿ ಸ್ತ್ರೀಯರ ಸಾಕ್ಷ್ಯ ಮಾತ್ರ ಸ್ವೀಕರಿಸಲು ಯೋಗ್ಯವೆಂಬ ಬಗ್ಗೆ ಇಸ್ಲಾಮೀ ವಿದ್ವಾಂಸರು ಒಮ್ಮತಾಭಿಪ್ರಾಯವನ್ನು ಹೊಂದಿದ್ದಾರೆ.
  ಇಸ್ಲಾಮಿನಲ್ಲಿ ಆರ್ಥಿಕ, ಸಾಮಾಜಿಕ, ರಾಜಕೀಯ, ಆಡಳಿತಾತ್ಮಕವಾದ ಎಲ್ಲ ನಿಯಮಗಳಿಗೆ ಪ್ರವಾದಿಚರ್ಯೆಯು ಆಧಾರ ಪ್ರಮಾಣವಾಗಿದೆ. ಈ ಪ್ರವಾದಿಚರ್ಯೆಯ ವರದಿಯ ಸ್ವೀಕಾರಾರ್ಹತೆಯ ವಿಚಾರದಲ್ಲಿ ಪುರುಷನಂತೆಯೇ ಸ್ತ್ರೀಯ ವರದಿಯು ಸತ್ಯಸಂಧ ಮತ್ತು ಪ್ರಬಲವೆಂದು ಸ್ವೀಕಾರಗೊಂಡಿದೆ. ಇಲ್ಲಿ ಯಾವುದೇ ವಿಧದ ಲಿಂಗ ತಾರತಮ್ಯವನ್ನು ತೋರಿಸಿಲ್ಲ. ಆದ್ದರಿಂದಲೇ ಪ್ರಬಲ ಹದೀಸ್ ಗ್ರಂಥಗಳಲ್ಲಿ (ಪ್ರವಾದಿಚರ್ಯೆಯ ಗ್ರಂಥ) ಪುರುಷರು ಮತ್ತು ಸ್ತ್ರೀಯರಿಂದ ವರದಿಯಾದ ಧಾರಾಳ ಹದೀಸ್‍ಗಳನ್ನು ಕಾಣಲು ಸಾಧ್ಯವಾಗಿದೆ. ಎಲ್ಲ ಸಾಕ್ಷ್ಯಗಳ ಸಾಕ್ಷ್ಯದ ಆಧಾರ ಪ್ರಮಾಣದ ವಿಚಾರದಲ್ಲಿ ಪುರುಷನಿಗೆ ಸಮಾನವಾದ ದರ್ಜೆಯನ್ನು ಸ್ತ್ರೀಗೂ ನೀಡಿರುವ ಇಸ್ಲಾಮ್ ವಹಿವಾಟಿನ ವಿಚಾರದಲ್ಲಿ ಭಿನ್ನ ನಿಲುವು ತಾಳಿರುವುದು ತಾರತಮ್ಯವೋ, ಕಡೆಗಣನೆಯೋ, ಅನ್ಯಾಯವೋ ಅಲ್ಲ ಬದಲಾಗಿ ಪ್ರಮಾದಗಳಾಗಬಾರದು ಎಂಬ ಎಚ್ಚರಿಕೆಯಿಂದಾಗಿದೆ. ಇಮಾಮ್ ಅಬೂ ಹನೀಫಾ, ತ್ವಬರಿಯವರಂತಹ ವಿದ್ವಾಂಸರು, ಸ್ತ್ರೀಯರು ನ್ಯಾಯಾಧೀಶರ ಸ್ಥಾನವನ್ನು ವಹಿಸಿಕೊಳ್ಳಬಹುದೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿರುವರು. ನೀತಿ ಮತ್ತು ನ್ಯಾಯದ ವಿಚಾರದಲ್ಲಿ ತಾರತಮ್ಯ ಇರುವುದಾದರೆ ನ್ಯಾಯನಿರ್ವಹಣೆಯ ಪರಮೋಚ್ಛ ಸ್ಥಾನವಾದ ನ್ಯಾಯಾಧೀಶರ ಸ್ಥಾನವನ್ನು ಸ್ತ್ರೀ ವಹಿಸಬಹುದೆಂದೂ ಸತ್ಯಸಂಧ ವಿದ್ವಾಂಸರು ಹೇಳುತ್ತಿರಲಿಲ್ಲವಷ್ಟೇ.

   

 • ಅಲ್ಲಾಹ್ ಎಂಬ ಹೆಸರು?
  ismika06-03-2015

  ಪ್ರಶ್ನೆ: ಅಲ್ಲಾಹ್ ಎಂಬ ಹೆಸರು ಹೇಗೆ ಬಂತು? ಅಲ್ಲಾಹ್ ಅಂದರೆ ದೇವರಾ? ಅವನಿಗಿರುವ ಶಕ್ತಿಯೇನು? ಮೊದಲು ಅಲ್ಲಾಹ್ ಎಂದು ಹೆಸರು ಹೇಳಿದವರು ಯಾರು?
  ದಯವಿಟ್ಟು ತಿಳಿಸಿರಿ.

  ಉತ್ತರ: ಅರಬರು ಆರಾಧಿಸುವ ವಸ್ತುಗಳನ್ನು ಇಲಾಹ್ ಎಂದು ಹೇಳುತ್ತಿದ್ದರು. ಇಲಾಹ್‍ನ ಅರ್ಥ ಆರಾಧ್ಯ (ದೇವರು). ಆದರೆ ಭೂಮ್ಯಾಕಾಶ ಗಳನ್ನು ಸೃಷ್ಟಿಸಿದ, ಮಾನವನ ಹುಟ್ಟು ಸಾವುಗಳನ್ನು ನಿರ್ಣಯಿಸುವ ಓರ್ವ ಮಹಾ ದೇವನನ್ನೂ ಅವರು ನಂಬುತ್ತಿದ್ದರು. ಅವನೇ ಅಲ್ ಇಲಾಹ್. ಇದೇ ಅಲ್ ಇಲಾಹ್ ಕ್ರಮೇಣ ‘ಅಲ್ಲಾಹ್’ ಎಂದು ಪ್ರಚಲಿತಗೊಂಡಿತು. ಅದನ್ನು ಯಾರು ಆರಂಭಿಸಿದರು ಎಂದು ನಿಖರವಾಗಿ ಹೇಳಲಾಗದು. ಪ್ರವಾದಿ ಮುಹಮ್ಮದ್(ಸ) ಏಕದೇವನ ಆರಾಧನೆಯ ಕರೆ ಕೊಟ್ಟಾಗ ಸತ್ಯನಿಷೇಧಿಗಳು "ನಮ್ಮ ಅನೇಕ ದೇವರುಗಳನ್ನು ಅಳಿಸಿ ಇವನು ಒಬ್ಬ ದೇವನನ್ನು ಮಾಡಿಕೊಂಡನೇ?" ಎಂದು ಆಕ್ಷೇಪಿಸಿದ್ದರು. ಅಲ್ಲಾಹ್ ಎಂಬುದು ನಾಮ ಪದವಾದರೆ ಈ ಒಬ್ಬ ಅಲ್ಲಾಹನಿಗೆ ನೂರಾರು ಗುಣ ಸೂಚಕ ನಾಮಗಳಿವೆ. ಅವನಿಗೆ ಸಾಟಿಯಾದ ಯಾವೊಂದೂ ವಸ್ತು ಇಲ್ಲ.
  ಸಂಕಷ್ಟಗಳು ಮತ್ತು ವಿಪತ್ತುಗಳು ಬಂದಾಗ ಅರಬರು ತಮ್ಮ ಎಲ್ಲ ದೇವರುಗಳನ್ನು ಮರೆತು ಕೇವಲ ಅಲ್ಲಾಹನಲ್ಲಿ ಮೊರೆಯಿಡುತ್ತಿದ್ದರು. ಉದಾ: ಪ್ರವಾದಿ ಮುಹಮ್ಮದ್‍ರ(ಸ) ಜನನದ ವರ್ಷ ಕಅಬಾ ಭವನವನ್ನು ಕೆಡವಲು ಬಂದ ಅಬ್ರಹನ ಸೇನೆಯಿಂದ ತಮ್ಮನ್ನೂ, ತಮ್ಮ ಕುಟುಂಬವನ್ನೂ ರಕ್ಷಿಸಬೇಕೆಂದು ಪ್ರವಾದಿಯವರ ಪಿತಾಮಹ ಅಬ್ದುಲ್ ಮುತ್ತಲಿಬ್ ಕೇವಲ ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಕಅಬಾ ‘ಅಲ್ಲಾಹನ ಭವನ’. ಅದನ್ನು ಅವನು ಮಾತ್ರ ರಕ್ಷಿಸಬಲ್ಲನು ಎಂದವರು ಹೇಳಿದ್ದರು. ಅವರ ಪ್ರಾರ್ಥನೆಯ ಬಳಿಕ ಅದನ್ನು ಕೆಡವಲು ಮುಂದೆ ಬಂದ ಅಬ್ರಹನ ಬೃಹತ್ ಗಜ ಸೇನೆಯನ್ನು ಅಲ್ಲಾಹನು ‘ಅಬಾಬಿಲ್’ ಎಂಬ ಚಿಕ್ಕ ಪಕ್ಷಿಗಳ ತಂಡದಿಂದ ನಾಶಗೊಳಿಸಿ ಬಿಟ್ಟನು.
  ಇನ್ನೊಂದು ಘಟನೆಯಲ್ಲಿ ಪ್ರವಾದಿಯವರನ್ನು(ಸ) ನಖಶಿಖಾಂತ ವಿರೋಧಿಸುತ್ತಿದ್ದ ಅಬೂ ಜಹಲ್‍ನ ಮಗ ಇಕ್ರಿಮಾ 20 ವರ್ಷಗಳ ಪ್ರಬಲ ವಿರೋಧದ ಹೊರತಾಗಿಯೂ ಪ್ರವಾದಿ ಯವರಿಗೆ(ಸ) ಮಕ್ಕಾ ವಿಜಯ ಪ್ರಾಪ್ತವಾದಾಗ, ಇನ್ನು ಈ ನೆಲದಲ್ಲಿ ನಾನಿರಲಾರೆ ಎಂದು ಪಲಾಯನಗೈದರು. ಹಾಗೇ ಅವರಿಗೆ ಒಂದು ಹಡಗು ಸಿಕ್ಕಿತು. ಅದನ್ನೇರಿ ಸುರಕ್ಷಿತವಾಗಿ ಪಾರಾಗಬಲ್ಲೆನೆಂದು ಅವರು ಭಾವಿಸಿದ್ದರು. ಹಡಗು ಸ್ವಲ್ಪ ದೂರ ಹೋದಾಗ ಕಡಲಲ್ಲಿ ಭಯಂಕರ ಬಿರುಗಾಳಿಯೆದ್ದಿತು. ಪ್ರಯಾಣಿಕರಲ್ಲಿ ಹಾಹಾಕಾರವೆದ್ದಿತು. ಆಗ ಅವರೆಲ್ಲರೂ ತಂತಮ್ಮ ಇಷ್ಟ ದೇವರುಗಳನ್ನು ಪ್ರಾರ್ಥಿಸತೊಡಗಿದ್ದರು. ಆದರೂ ಬಿರುಗಾಳಿ ಕಡಿಮೆಯಾಗಲಿಲ್ಲ. ಎಲ್ಲರೂ ಜೀವ ಹಿಡಿದು ಹಡಗಿನಲ್ಲಿ ಕುಳಿತಿದ್ದರು. ಕೊನೆಗೆ ಅವರೆಲ್ಲರೂ ಒಕ್ಕೂರಳಿನಿಂದ ‘ಅಲ್ಲಾಹನನ್ನು ಮಾತ್ರ ಪ್ರಾರ್ಥಿಸೋಣ’ ಎಂದು ತೀರ್ಮಾನಿಸಿದರು. ಏಕೆಂದರೆ ಅಂತಹ ನಿರ್ಣಾಯಕ ಘಟ್ಟದಲ್ಲಿ ಅಲ್ಲಾಹನು ಮಾತ್ರ ಸಹಾಯಕ್ಕೆ ಒದಗುವವನೆಂದು ಅವರಿಗೆ ಚೆನ್ನಾಗಿ ತಿಳಿದಿತ್ತು. ಈ ಪ್ರಾರ್ಥನೆಯು ಇಕ್ರಿಮಾರ ಕಣ್ಣು ತೆರೆಸಿತು. ಅವರಿಗೆ ಜ್ಞಾನೋದಯವಾಯಿತು. ಈ ಕಳೆದ ಎರಡು ದಶಕಗಳಿಂದ ಮುಹಮ್ಮದ್(ಸ) ಹೇಳುತ್ತಿದ್ದುದು ಇದನ್ನೇ ಅಲ್ಲವೇ ಎಂದು ಅವರು ಯೋಚಿಸಿದರು. ಕೊನೆಗೆ ಒಂದು ತೀರ್ಮಾನಕ್ಕೆ ಬಂದರು. ಈ ವಿಪತ್ತಿನಿಂದ ಪಾರಾದರೆ ನೇರವಾಗಿ ಪ್ರವಾದಿಯವರ ಬಳಿಗೆ ಹೋಗಿ ವಿಧೇಯತೆಯ ಪ್ರತಿಜ್ಞೆ ಕೈಗೊಳ್ಳುವುದಾಗಿ ಅವರು ನಿರ್ಧರಿಸಿದರು. ಹಾಗೆ ಬಿರುಗಾಳಿ ನಿಂತಾಗ ಅವರು ಪ್ರವಾದಿಯವರ(ಸ) ಸನ್ನಿಧಿಗೆ ಬಂದು ಇಸ್ಲಾಮ್ ಸ್ವೀಕರಿಸಿದರು.
  ‘ಅಲ್ಲಾಹ್’ ಎಂಬುದು ಇಲಾಹ್‍ಗಳ ಇಲಾಹ್ ಆಗಿರುವವನು. ಅಲ್ ಇಲಾಹ್ ಪದ ಕ್ರಮೇಣ ಅಲ್ಲಾಹ್ ಎಂದು ಪ್ರಸಿದ್ಧವಾಯಿತು. ಅರಬರು ಆ ಪರಮ ಇಲಾಹ್‍ನನ್ನೇ ಅಲ್ಲಾಹ್ ಎಂದು ಕರೆಯುತ್ತಿದ್ದರು. ಎಲ್ಲ ಆಶ್ರಯಗಳೂ ವಿಫಲವಾದಾಗ ತಮ್ಮ ಮೊರೆಯನ್ನು ಸಂಕಷ್ಟದ ವೇಳೆ ಅಲ್ಲಾಹನ ಮುಂದಿಡುತ್ತಿದ್ದರು. ಹೀಗೆ ಅಲ್ ಇಲಾಹ್- ಅಲ್ಲಾಹ್ ಆಯಿತೆಂಬುದು ಹೆಚ್ಚಿನವರ ಅಭಿಪ್ರಾಯ. ಹಿರಿಯ ವಿದ್ವಾಂಸರು, ವ್ಯಾಖ್ಯಾನ ಕಾರರಲ್ಲಿ ಅನೇಕರು ಈ ಅಭಿಪ್ರಾಯವನ್ನು ಹೊಂದಿದ್ದಾರೆ.

 • ಪರ್ದಾ ಕಡ್ಡಾಯಗೊಳಿಸುವ ಮೂಲಕ ಇಸ್ಲಾಮ್ ಮಹಿಳೆಯನ್ನು ಶೋಷಣೆ ನಡೆಸುತ್ತಿದೆಯೇ?
  ismika06-03-2015

  ಪ್ರಶ್ನೆ: ಪರ್ದಾ ಕಡ್ಡಾಯದಿಂದ ಇಸ್ಲಾಮ್ ಸ್ತ್ರೀಯರನ್ನು ಪೀಡಿಸುತ್ತಿದೆಯೇ? ಇದು ಮುಸ್ಲಿಮ್ ಮಹಿಳೆಯರು ಹಿಂದುಳಿಯಲು ಮುಖ್ಯ ಕಾರಣವಾಗಿದೆಯಲ್ಲವೆ?

  ಉತ್ತರ: ಸ್ತ್ರೀ ಮುಖ ಮುಂಗೈಯನ್ನು ಹೊರತುಪಡಿಸಿ ದೇಹದ ಇತರ ಭಾಗಗಳನ್ನು ಮರೆಸಬೇಕೆಂದು ಇಸ್ಲಾಮ್‍ನ ವಿಧಿಯಾಗಿದೆ. ಇದು ಪ್ರಗತಿಗೆ ಅಡ್ಡಿಯಲ್ಲ ಬದಲಾಗಿ ಸಹಾಯಕವಾಗಿದೆ. ಸ್ತ್ರೀಗೆ ಪರ್ದಾ ಒಂದು ಹಿಂಸೆಯಾಗಿರುವುದಿಲ್ಲ ಬದಲಾಗಿ ಸುರಕ್ಷೆಯಾಗಿದೆ. ಇಂದು ಜಗತ್ತಿನ ಹಲವು ಕಡೆಗಳಲ್ಲಿ ಪರ್ದಾ ಧಾರಿಣಿ ಮಹಿಳೆಯರು ವಿಜ್ಞಾನಿಗಳಾಗಿ, ಪೈಲಟ್‍ಗಳಾಗಿ, ಸಾಹಿತಿಗಳಾಗಿ, ಪತ್ರಕರ್ತೆಯರಾಗಿ, ಪಾರ್ಲಿಮೆಂಟಿನ ಸದಸ್ಯರಾಗಿ ಇಂತಹ ಮುಖ್ಯವಾದ ಕೆಲಸಗಳನ್ನೂ ಮಾಡುತ್ತಿದ್ದಾರೆ. ಇರಾನ್‍ನಲ್ಲಿ ಐವರು ಉಪಾಧ್ಯಕ್ಷರಿಗಳಿದ್ದು ಅವರಲ್ಲಿ ಓರ್ವ ಪರ್ದಾ ಧಾರಿಣಿ ಮಹಿಳೆಯಾಗಿದ್ದಾರೆ. ಮಅಸೂಮ ಇಬ್‍ತಿಕಾರ ಎಂದು ಅವರ ಹೆಸರು. ಅಮೇರಿಕದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಗಳಿಸಿದ್ದ ಈಕೆ ಟೆಹ್ರಾನ್ ಯೂನಿವರ್ಸಿಟಿಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಹಾಗೂ ಪತ್ರಕರ್ತೆಯೂ ಆಗಿದ್ದಾರೆ. ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತೆಯಾಗಿದ್ದು ಅನೇಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇರಾಕ್‍ನ ಪ್ರಮುಖ ಮಹಿಳಾ ಪತ್ರಿಕೆಯಾದ ‘ಮಹ್‍ಜುಬಾಹಿ’ಯ ಸಂಪಾದಕಿ, ಟೆಹ್ರಾನ್ ವಿಶ್ವವಿದ್ಯಾಲಯದ ಪ್ರೊಫೆಸರ್, ಟುರಾನ್ ಜಂಶಿದ್ಯಾನ್, ನ್ಯಾಶನಲ್ ಒಲಿಂಪಿಕ್ಸ್ ಉಪಾಧ್ಯಕ್ಷೆಯೂ ಪಾರ್ಲಿಮೆಂಟ್ ಸದಸ್ಯೆಯೂ ಆದ ಹಸೀಹ್ ಹಾಶ್ಮಿ, ಮಹಿಳಾ ಕಲ್ಯಾಣ ಖಾತೆಯ ಸಲಹೆಗಾರ್ತಿಯಾಗಿದ್ದ ಶಹ್ಹಾ ಹಬೀಬಿ, ಮಲೇಶಿಯನ್ ರಾಜಕೀಯದಲ್ಲಿರುವ ವಾನ್ ಅಝೀಝ್ ಮುಂತಾದ ಮಹಿಳೆಯರೆಲ್ಲರೂ ಪರ್ದಾ ಧರಿಸುವವರು. ಆಧುನಿಕ ಜಗತ್ತಿನಲ್ಲಿ ರಣರಂಗದಲ್ಲಿ ಧೀರರಾಗಿ ಹೋರಾಡಿದ ವೀರ ವನಿತೆಯರು ಇರಾನ್, ಅಪಘಾನಿಸ್ತಾನದಲ್ಲಿದ್ದು ಅವರೆಲ್ಲರೂ ಪರ್ದಾಧಾರಿಗಳಾಗಿದ್ದರು. ವಾಲಿಬಾಲ್, ಬಾಸ್ಕೆಟ್ ಬಾಲ್, ಶೂಟಿಂಗ್, ಸೈಕ್ಲಿಂಗ್, ಟೆನಿಸ್, ಜಿಮ್ನಾಸ್ಟಿಕ್, ಕುದುರೆ ಸವಾರಿ, ಜುಡೋ, ಕರಾಟೆ, ಚೆಸ್ ಮುಂತಾದ ಕ್ರೀಡೆಗಳಲ್ಲಿಯೂ ಸಾಮರ್ಥ್ಯ ತೋರಿಸಿರುವ ಇರಾನಿ ಮಹಿಳೆಯರು ಮಹಿಳಾ ಪ್ರಗತಿ ಪಥದಲ್ಲಿ ಯಾವ ರೀತಿಯ ಅಘಾತವನ್ನು ಸೃಷ್ಟಿಸಿಲ್ಲ, ಪರ್ದಾಕ್ಕೆ ಸಮಾನವಾದ ಉಡುಪು ಧರಿಸಿದ ಮದರ್ ತೆರೇಸಾರ ಸೇವಾ ಕಾರ್ಯಗಳೂ ಅಘಾತ ಸೃಷ್ಟಿಸಿಲ್ಲ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಗೈಯುತ್ತಿರುವ ಕ್ರೈಸ್ತ ಸನ್ಯಾಸಿನಿಯರೂ ಇಸ್ಲಾಮಿನ ಪರ್ದಾಕ್ಕೆ ಸಮಾನವಾದ ಉಡುಪು ಧರಿಸುವರು. ಶರೀರ ಭಾಗವನ್ನು ಮರೆಸುವುದು ಜಗತ್ತನ್ನು ಸುತ್ತಾಡುವುದಕ್ಕೋ, ಇತ್ಯಾದಿ ಕಾರ್ಯಗಳಿಗೋ ತಡೆಯನ್ನುಂಟು ಮಾಡುವುದಿಲ್ಲ ಎಂಬುದನ್ನು ಚಂದ್ರನ ಯಾತ್ರಿಗಳ ಅನುಭವದಿಂದಲೂ ದೃಢಪಟ್ಟಿದೆ. ಪ್ಯಾಂಟ್, ಶರ್ಟು, ಟೈ ಓವರ್ ಕೋಟ್, ಶೂ, ಕ್ಯಾಪ್‍ಗಳನ್ನು ಧರಿಸುವ ಪ್ರಖ್ಯಾತ್ಯ ರಾಷ್ಟ್ರಗಳ ಪುರುಷರೇ, ಇಸ್ಲಾಮ್ ಮಹಿಳೆಯರೊಡನೆ ಮರೆಸಲು ಸೂಚಿಸಿರುವ ದೇಹದ ಭಾಗಗಳನ್ನು ಮುಚ್ಚುತ್ತಾರೆ. ಅವರ ಸ್ತ್ರೀಯರು ಇದಕ್ಕೆ ವಿಪರೀತವಾಗಿದ್ದರೂ. ಪರ್ದಾ ಪ್ರಗತಿ, ಸಂಸ್ಕಾರಕ್ಕೆ ಅಡ್ಡಿಯೆಂದು ಅಭಿಪ್ರಾಯ ಸೃಷ್ಟಿಸಿದವರು ದೇಹ ಭಾಗವನ್ನು ಪ್ರದರ್ಶಿಸಿ ಪಟ್ಟಣ, ಸಾರ್ವಜನಿಕ ಸ್ಥಳಗಳಲ್ಲಿ ಸುತ್ತಾಡುವುದನ್ನು ಪ್ರಗತಿಯೆಂದು ಬಿಂಬಿಸುತ್ತಾರೆ. ಪುರುಷರು ಸ್ತ್ರೀಯರ ದೇಹ ಭಾಗವನ್ನು ಕಂಡು ಆಸ್ವಾದಿಸಲಿ ಎಂಬ ಈ ಮನೋಭಾವನ್ನು ವಿಕೃತ ಮನೋಭಾವವೆಂದೇ ಕರೆಯಬೇಕಾಗಿದೆ. ಸಮಾಜದಲ್ಲಿ ಮಹಿಳೆಯ ಸೌಂದರ್ಯವನ್ನು ಕಂಡು ಆಸ್ವಾದಿಸಲು ಕಾಮಾತುರರಾದ ಕಣ್ಣುಗಳೊಂದಿಗೆ ಕಾದಿರುವವರ ಎದುರು ಶರೀರ ಭಾಗವನ್ನು ಮರೆಸುವುದು ಗೌರವವಲ್ಲವೇ? ಮಹಿಳೆಯರ ಸಂರಕ್ಷಣೆಗೆ ಅದು ಹೆಚ್ಚು ಸಹಾಯಕವೂ ಆಗಿದೆ. ಪರ್ದಾ ಧರಿಸಲು ಇಸ್ಲಾಮ್ ಸೂಚಿಸಿರುವ ಕಾರಣವೂ ಇದುವೇ. ಆದ್ದರಿಂದ ಅದು ಪ್ರಗತಿಗೆ ಯಾವ ರೀತಿಯೂ ಕಂಠಕವಾಗುವುದಿಲ್ಲ. ಇರಾನ್‍ಗೆ ಭೇಟಿ ನೀಡಿದ್ದ ಎಂ.ಪಿ. ವಿರೇಂದ್ರ ಕುಮಾರ್‍ರು ಹೀಗೆ ಬರೆದಿದ್ದಾರೆ; ಇರಾನಿ ಮಹಿಳೆಯರು ಪರ್ದಾ ಧರಿಸುತ್ತಾರೆ ಮುಖ ಮುಚ್ಚುವುದಿಲ್ಲ. ತಲೆ ಮುಚ್ಚುತ್ತಾರೆ. ಯಾವುದೇ ಪಿಕ್‍ನಿಕ್ ಸ್ಥಳಕ್ಕೆ ಹೋದರೂ ನೂರಾರು ಇಂತಹ ಮಹಿಳೆಯರನ್ನು ಕಾಣಬಹುದಾಗಿದೆ. ಇರಾನ್‍ನಲ್ಲಿ ಸುದ್ದಿ ಸಂಸ್ಥೆಯಾದ ಇರ್ನಾದ ಕೇಂದ್ರ ಸಮತಿ ಆಫಿಸ್‍ಗೆ ಹೋದಾಗ ಅಲ್ಲಿ ಕೆಲಸ ಮಾಡುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಪರ್ದಾಧಾರಿಗಳಾಗಿದ್ದರು. ಮಹಿಳೆಯರು ಟೆಹ್ರಾನ್‍ನಲ್ಲಿ ಕಾರು ಚಲಾಯಿಸುತ್ತಾರೆ. ಯಾವ ತೊಂದರೆಯೂ ಇಲ್ಲ. ಆದರೆ ನ್ಯೂಯಾರ್ಕಿನಂತೆ ಮಹಿಳೆಯರು ಸೆಕ್ಸ್ ಗೊಂಬೆಗಳಾಗಿ ಕಾಣುವುದಕ್ಕೆ ಇರಾನಿಯವರು ಅನುಮತಿಸುವುದಿಲ್ಲ. (ಬೋಧನಂ ವಾರ ಪತ್ರಿಕೆ 1993 ನವೆಂಬರ್ 6) ಶ್ರೀಮತಿ ಕಲ್ಪನಾ ಶರ್ಮ ಎಂಬವರು ವಿದ್ಯಾರ್ಜನೆಗಾಗಿ ಹೊರಗಿಳಿಯಲು, ಕೆಲಸ ಮಾಡಲು, ದಾಂಪತ್ಯ ಸಂಬಂಧ ಹೊಂದಲು ವಿವಾಹ ವಿಚ್ಛೇದನ ಕೇಳಿ ಕೋರ್ಟಿಗೇರುವ ಹಕ್ಕು ಹೊಂದಿರುವ ಇರಾನಿನ ಮಹಿಳೆಯರ ವಿರುದ್ಧ ತೀರ್ಪು ಕೊಡಲು ನಾವು ಶಕ್ತರೇ? ಪರ್ದಾ ಧರಿಸುವ ಇರಾನಿನ ಸಹೋದರಿಯರಿಗಿಂತ ನಮ್ಮ ನಾಡಿನ ಮಹಿಳೆಯರಿಗೆ ಏನು ಮಹತ್ವವಿದೆ ಎಂದು ಪ್ರಶ್ನಿಸುತ್ತಾರೆ. (Kalpana Sharma-Behind The Veil. The Hindu 20-7-97)
  ಪ್ರಕೃತಿ ದತ್ತವಾಗಿ ಮಹಿಳೆಯರು ಪುರುಷರೂ ಸಮಾನರಲ್ಲ. ಅವರ ಶರೀರ ಪ್ರಕೃತಿ ಸಮಾನವಲ್ಲ. ಪುರುಷ ಶಾರೀರಿಕವಾಗಿ ಬಲಶಾಲಿಯಾಗಿದ್ದಾನೆ. ಮಹಿಳೆಯ ಶರೀರ ಅಷ್ಟು ಬಲಿಷ್ಠವೂ ಅಲ್ಲ. ಶಾರೀರಿಕ ವ್ಯತ್ಯಾಸವನ್ನು ಹೆಚ್ಚು ಸುರಕ್ಷಿತವಾಗಿರಿಸಲು ಪರ್ದಾ ಸಹಕಾರಿಯಾಗಿದೆ. ಅವಳು ತನ್ನ ಸೌಂದರ್ಯವನ್ನು ಪರಪುರುಷನ ಮುಂದೆ ತೋರಿಸಬಾರದೆಂದು ಇಸ್ಲಾಮ್ ಸೂಚಸಿರುವುದಕ್ಕೆ ಕಾರಣವೂ ಅದುವೇ ಆಗಿದೆ. ಹೀಗಾಗಿ ಪರ್ದಾ ಮಹಿಳೆಯರಿಗೆ ಬಾಧಕವಲ್ಲ. ಸುರಕ್ಷೆಯಾಗಿದೆ.

 • ಇಸ್ಲಾಮ್ ಪುರುಷ ಪಾರಮ್ಯದ ಧರ್ಮವೇ?
  ismika06-03-2015

  ಪ್ರಶ್ನೆ: ಇಸ್ಲಾಮ್, ಪುರುಷ ಪಾರಮ್ಯದ ಪರವಾಗಿದೆಯಲ್ಲವೇ? ಪವಿತ್ರ ಕುರ್‍ಆನ್‍ನ 34ನೇ ಅಧ್ಯಾಯ 34ನೇ ವಚನ ಇದಕ್ಕೆ ಆಧಾರವಲ್ಲವೇ?

  ಉತ್ತರ: ಪುರುಷರು ಸ್ತ್ರೀಯರ ಮೇಲೆ ಮೇಲ್ವಿಚಾರಕ ಆಗಿರುತ್ತಾರೆ. ಇದು ಅಲ್ಲಾಹನು ಕೆಲವರಿಗೆ ಕೆಲವರ ಮೇಲೆ ಶ್ರೇಷ್ಠತೆ ಪ್ರಧಾನ ಮಾಡಿದುದರಿಂದ ಆಗಿದೆ. ಇಲ್ಲಿ ಪುರುಷರಿಗೆ ಸಂಬಂಧ ಪಟ್ಟು ‘ಖವ್ವಾಂ’ ಎಂಬ ಪಧ ಪ್ರಯೋಗವಾಗಿದೆ. ಓರ್ವ ವ್ಯಕ್ತಿ, ಸಂಸ್ಥೆ, ಸಂಘಟನೆಗಳ ಕೆಲಸಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರಲು, ಮೇಲ್ನೋಟ ನೋಡಲು ಅದಕ್ಕೆ ಬೇಕಾದ ಅವಶ್ಯಕತೆಗಳನ್ನು ಸಿದ್ಧ ಪಡಿಸುವ ಹೊಣೆಯಿರುವ ವ್ಯಕ್ತಿಯನ್ನು ಅರಬಿಯಲ್ಲಿ ಖವ್ವಾಂ ಅಥವಾ ಖಯ್ಯಂ ಎಂದು ಹೇಳುವುದು. (ತಪ್ಹೀಮುಲ್ ಕುರ್‍ಆನ್, ಭಾಗ 1, ಪುಟ 310 *56ನೇ ಅಡಿಟಿಪ್ಪಣಿ). ಮೇಲ್ನೋಟ ನೋಡುವವನೂ, ರಕ್ಷಾಧಿಕಾರಿಯೂ ಇಲ್ಲದೆ ಯಾವುದೇ ಸಂಸ್ಥೆ, ಸಂಘ ಇತ್ಯಾದಿ ಯಶಸ್ವಿಯಾಗಿ ನೆಲೆ ನಿಲ್ಲುವುದಿಲ್ಲ. ಸಮಾಜದ ಮೂಲ ಘಟಕವಾದ ಕುಟುಂಬ, ಭದ್ರವಾಗಿ ಸುರಕ್ಷಿತವಾಗಿ ನೆಲೆಯೂರಬೇಕಾದ ಸಂಸ್ಥೆಯಷ್ಟೆ ನಿರ್ವಾಹಕನಿಲ್ಲದೆ ಹಾಗಾಗಲು ಸಾಧ್ಯವಿಲ್ಲ. ಅದು ಯಾರಾಗಿರಬೇಕೆಂಬುದು ಪ್ರತಿಯೊಂದು ಕುಟುಂಬದೊಳಗೆ ಇರುವ ಗಂಡು- ಹೆಣ್ಣಿನ ನಡುವೆ ವಿವಾದದ ವಿಷಯವಾಗಿ ಬಿಟ್ಟರೆ ಕುಟುಂಬದ ಭದ್ರತೆ ನಾಶವಾಗುವುದು, ಛಿದ್ರಗೊಳ್ಳುವುದು. ಆದ್ದರಿಂದ ಶರೀರ, ಮನಸ್ಸು ಮತ್ತು ವೈಚಾರಿಕವಾಗಿ ಇರುವ ಭಿನ್ನತೆಯನ್ನು ಆಧಾರವಾಗಿಟ್ಟು ಇಸ್ಲಾಮ್ ಆ ಜವಾಬ್ದಾರಿಕೆಯನ್ನು ಪುರುಷನಿಗೆ ವಹಿಸಿತು. ಕುಟುಂಬ ಸಂರಕ್ಷಣೆ ಎಂಬುದು ಒಂದು ಅಧಿಕಾರವೋ, ಹಕ್ಕೋ ಅಲ್ಲ. ಭಾರವಾದ ಜವಾಬ್ದಾರಿಯಾಗಿದೆ. ಜೀವನದೊಂದಿಗೆ ಹೋರಾಟ ನಡೆಸಲು ಹೆಚ್ಚು ಸೂಕ್ತನೂ ಸಮರ್ಥನೂ ಪುರುಷನಾದ್ದರಿಂದ ಕಠಿಣವಾದ ಆ ಹೊಣೆಯನ್ನು ಪುರುಷನಿಗೆ ವಹಿಸಿಕೊಡಲಾಗಿದೆ. ಆದ್ದರಿಂದ ಇಸ್ಲಾವಿೂ ದೃಷ್ಟಿಕೋನದಲ್ಲಿ ಪುರುಷನು ಕುಟುಂಬ ಎಂಬ ಪುಟ್ಟ ರಾಷ್ಟ್ರದ ಪ್ರಧಾನ ಮಂತ್ರಿಯೂ ಸ್ತ್ರೀ ಗೃಹ ಸಚಿವೆಯೂ ಆಗಿದ್ದಾರೆ. ಮನೆಯೊಳಗಿನ ಕಾರ್ಯಗಳನ್ನು ತೀರ್ಮಾನಿಸುವುದೂ ನಿರ್ಣಯಿಸುವುದು ಮಹಿಳೆ. ಸ್ತ್ರೀ ಪುರುಷರ ನಡುವಿನ ಸಂಬಂಧ ಆಡಳಿತಗಾರ- ಪ್ರಜೆಗಳ ಸಂಬಂಧ ಅಲ್ಲ. ಆದ್ದರಿಂದ ಇಸ್ಲಾಮ್ ದಂಪತಿಗಳನ್ನು ಪತಿ ಪತ್ನಿಯರೆಂದು ಕರೆದದ್ದು, ವಿಶ್ಲೇಷಿಸಿದ್ದು. ಜೋಡಿಗಳೆಂದು ಇಸ್ಲಾಮ್ ದಂಪತಿಗಳನ್ನು ವಿಶ್ಲೇಷಿಸಿದೆ. “ಸ್ತೀ ಪುರುಷನ ಮತ್ತು ಪುರುಷ ಸ್ತ್ರೀಯ ಉಡುಪು ಆಗಿದ್ದಾರೆ (2:187) ಎಂದು ಪವಿತ್ರ ಕುರ್‍ಆನ್ ಹೇಳಲು ಕಾರಣವೂ ಅದುವೇ ಆಗಿದೆ. ದೇಶದ ಆಡಳಿತಾಧಿಕಾರಿ- ಪ್ರಜೆಗಳೊಂದಿಗೂ, ಸಮಾಜದ ಮುಂದಾಳು ಅನುಯಾಯಿಗಳೊಂದಿಗೂ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವಂತೆಯೇ ಮನೆಯೊಡೆಯ ಮನೆಯಾಕೆಯೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳಬೇಕಿದೆ. ‘ತಮ್ಮ ಕಾರ್ಯಗಳನ್ನು ಪರಸ್ಪರ ಸಮಾಲೋಚನೆಯಿಂದ ಮಾಡುವವರು ಅವರು’ (42:38) ಆದ್ದರಿಂದ ಪುರುಷನು ಮನೆಯ ಸ್ವೇಚ್ಛಾಧಿಪತಿಯೋ, ಸರ್ವಾಧಿಕಾರಿಯೋ ಅಲ್ಲ. ಎಲ್ಲ ದೈವಿಕ ಪರಿಧಿಯನ್ನು ಪಾಲಿಸಲು ಅವನು ಬಾಧ್ಯಸ್ತನಾಗಿರುವನು. ಕುಟುಂಬದ ಸುರಕ್ಷಣೆಯನ್ನು ಗೌರವಾದಿ ಶಿಷ್ಟಾಚಾರಗಳಿಂದ ನಿರ್ವಹಿಸುವ ಕರ್ತವ್ಯ ಅವನ ಮೇಲಿರುವುದು. ಸ್ತ್ರೀಯ ಹಕ್ಕುಗಳೆಲ್ಲವನ್ನೂ ಸಂಪೂರ್ಣವಾಗಿ ಪಾಲಿಸುತ್ತ ಅದನ್ನು ಅವನು ನಿರ್ವಹಿಸಬೇಕಾಗಿದೆ. ಅಲ್ಲಾಹನು ಹೇಳುವನು, ಸ್ತ್ರೀಯರಿಗೆ ಕೆಲವು ಬಾಧ್ಯತೆಗಳಿರುವಂತೆ ನ್ಯಾಯವಾದ ಕೆಲವು ಹಕ್ಕುಗಳೂ ಅವರಿಗಿದೆ (2:228) ಪ್ರವಾದಿ(ಸ) ಹೇಳಿರುವರು “ಕುಟುಂಬದೊಡನೆ ಕರುಣೆ ತೋರಿಸದವನೂ, ಅಹಂಕಾರಿಯೂ ಸ್ವರ್ಗ ಪ್ರವೇಶಿಸಲಾರ” (ಅಬೂ ದಾವೂದ್)
  “ವಿಶ್ವಾಸಿಗಳಲ್ಲಿ ವಿಶ್ವಾಸ ಪರವಾದ ಅತ್ಯಧಿಕ ಪರಿಪೂರ್ಣತೆ ಪಡೆದವರು ಅವರಲ್ಲಿ ಅತ್ಯುತ್ತಮ ಸ್ವಭಾವ ಇರುವವನು. ನಿಮ್ಮಲ್ಲಿ ಅತ್ಯುತ್ತಮರು ಸಹಧರ್ಮಿಣಿಯೊಡನೆ ಉತ್ತಮವಾಗಿ ವರ್ತಿಸುವವನು (ತಿರ್ಮಿದಿ)
  ಸ್ವ ಕುಟುಂಬದ ಅಸ್ತಿತ್ವಕ್ಕೂ ಪ್ರತಿರೋಧಕ್ಕೂ, ಜೀವನಾವಶ್ಯಕತೆಗಳಿಗೂ ಪ್ರಯೋಜನಕರವಾದ ಎಲ್ಲದ್ದಕ್ಕೂ ಪಾಲ್ಗೊಳ್ಳುವುದಕ್ಕಾಗಿ ತನ್ನ ಜೀವನವನ್ನು ವಿೂಸಲಿಟ್ಟಿರುವುದು, ಪುರುಷನಾದ್ದರಿಂದ ಮನೆಯ ಕೊನೆಯ ಮಾತು ಅವನದ್ದಾಗಿರಬೇಕು. ಆದರೆ ಅದು ಒಳಿತಿಗೆ ವಿರುದ್ಧವೋ, ಹಕ್ಕು ನಿಷೇಧವೋ ಅವೇವಿಕದ್ದೋ ಆಗಿರಬಾರದು. ಪತಿಗೆ ಪ್ರಮಾದ ಸಂಭವಿಸಿದರೆ ತಿದ್ದುವ ಆತನ ಅನ್ಯಾಯದ ತೀರ್ಮಾನಗಳನ್ನು ಕಡೆಗಣಿಸಲು, ಅಗತ್ಯಬಿದ್ದರೆ ಅದೇ ಅಗತ್ಯಕ್ಕಾಗಿ ತನ್ನದೋ ಆತನದ್ದೋ ಕುಟುಂಬವನ್ನೋ ಅಧಿಕಾರ ಕೇಂದ್ರಗಳನ್ನೋ ಸವಿೂಪಿಸಲು ಸ್ತ್ರೀ ಹಕ್ಕು ಹೊಂದಿರುವಳು. ಪುರುಷನಾದರೋ, ಆಗ ದೈವಿಕ ಪರಿಧಿಯನ್ನು ಪಾಲಿಸಿ, ಜಾರಿಗೊಳಿಸಲು ಬಾಧ್ಯಸ್ತನಾಗಿರುವನು. ಹೊರಗೆ ಹೋಗಿ ಕೆಲಸ ಮಾಡಲು ಮಹಿಳೆಯರಿಗಿಂತ ಗಂಡಸರಿಗೆ ಹೆಚ್ಚು ಸಾಧ್ಯವಿರುವುದು. ಪ್ರತಿ-ಸ್ಪರ್ಧಿಗಳ ಪರಾಕ್ರಮಗಳನ್ನು ಪ್ರತಿರೋಧಿಸಲು ಸಾಧ್ಯವಾಗುವುದೂ ಆತನಿಗೆ ಆಗಿದೆ. ಏನೇ ಹೇಳಿದರೂ ಸ್ತ್ರೀ ಎಲ್ಲ ಸಮಯದಲ್ಲಿಯೂ ಗದ್ದೆ, ತೋಟ, ಪ್ಯಾಕ್ಟರಿಯಲ್ಲಿಯೂ ಹೊರಗೆ ಹೋಗಿಯೂ ಕೆಲಸಮಾಡುವುದು ಸಾಧ್ಯವಿಲ್ಲ. ಮನುಷ್ಯರಾಶಿ ಅಸ್ತಿತ್ವದಲ್ಲಿ ಉಳಿಯಬೇಕಾದರೆ ಸ್ತ್ರೀ ಗರ್ಭ ಧರಿಸಿ ಹೆರಬೇಕಾಗುವುದು, ಮೊಲೆ ಹಾಲು ಊಣಿಸಬೇಕು ತಾನೆ. ಈ ಶರೀರಕ್ಕೆ ಸಂಬಂಧ ಪಟ್ಟ ವಿಶೇಷತೆಗಳಿಂದಾಗಿ ಇಸ್ಲಾಮ್, ಕುಟುಂಬದ ಆರ್ಥಿಕ ಹೊಣೆ, ಸಂರಕ್ಷಣೆಯ ಹೊಣೆ ಮತ್ತು ನೇತೃತ್ವದ ಹೊಣೆಯನ್ನು ಪುರುಷನಿಗೆ ವಹಿಸಲು ಕಾರಣವಾಗಿದೆ

 • ಇಸ್ಲಾಮ್‍ನ ಪ್ರಚಾರ ಮತ್ತು ಆಯುದ್ಧ ಪ್ರಯೋಗ?
  ismika18-03-2015

  ಪ್ರಶ್ನೆ: ಭಾರತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾದ್ದರಿಂದ ತಾನೇ ನಮ್ಮ ವಿರುದ್ಧ ಜಿಹಾದ್ ನಡೆಸುತ್ತಿರುವುದು? ಇಸ್ಲಾಮ್ ಕಾಫಿರ್‍ಗಳ ವಿರುದ್ಧ ಜಿಹಾದ್‍ಗೆ
  ಆದೇಶಿಸುತ್ತಿದೆಯಲ್ಲವೇ?

  ಉತ್ತರ: ಮುಸ್ಲಿಮರು ಜಿಹಾದ್ ಮಾಡುವುದಿಲ್ಲವೆಂಬ ಧೋರಣೆಯೇ ತಪ್ಪು. ಕಾರಣ, ಸಕಲ ವಿಶ್ವಾಸಿಗಳು ಜಿಹಾದ್ ನಿರ್ವಹಿಸಲು ಬಾಧ್ಯಸ್ತರಾಗಿದ್ದಾರೆ. ಅದರಿಂದ ಹಿಂದುಳಿಯಲು ಯಾರೊಬ್ಬರಿಗೂ ಅನುಮತಿ ಇಲ್ಲ. ನರಕ ಶಿಕ್ಷೆಯಿಂದ ಪಾರಾಗಲು ಸ್ವರ್ಗ ಪಡೆಯಲು ಅದು ಅನಿವಾರ್ಯವಾಗುವುದು. ಪವಿತ್ರ ಕುರ್‍ಆನ್ ಹೇಳುತ್ತಿದೆ, “ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿರಿ ಮತ್ತು ನಿಮ್ಮ ಸಂಪತ್ತುಗಳಿಂದಲೂ ಜೀವಗಳಿಂದಲೂ ಅಲ್ಲಾಹನ ಮಾರ್ಗದಲ್ಲಿ ಹೋರಾಡಿರಿ. ನೀವು ಅರಿಯುವವರಾಗಿದ್ದರೆ, ನಿಮ್ಮ ಪಾಲಿಗೆ ಇದೇ ಉತ್ತಮವಾಗಿದೆ. (61-11) “ನೀವು ನಿರಾಯಸವಾಗಿ ಸ್ವರ್ಗವನ್ನು ಪ್ರವೇಶಿಸುವಿರೆಂದು ಭಾವಿಸುವಿರಾ? ವಸ್ತುತ ನಿಮ್ಮಲ್ಲಿ ಯಾರೆಲ್ಲ ಅಲ್ಲಾಹನ ಮಾರ್ಗದಲ್ಲಿ ಹೋರಾಟ ನಡೆಸುವವರೂ ಅದಕ್ಕಾಗಿ ಸಹನೆ ಪಡುವವರೂ ಇದ್ದಾರೆ. (3:142) ಎಂದು ಪವಿತ್ರ ಕುರ್‍ಆನ್ ಘೋಷಿಸುತ್ತದೆ. “ಅಲ್ಲಾಹನ ಮಾರ್ಗದಲ್ಲಿ ಹೋರಾಡಬೇಕಾದ ರೀತಿಯಲ್ಲಿ ಹೋರಾಡಿರಿ. ಅವನು ತನ್ನ ಕಾರ್ಯಕ್ಕಾಗಿ ನಿಮ್ಮನ್ನು ಆರಿಸಿಕೊಂಡಿರುತ್ತಾನೆ ಮತ್ತು ಧರ್ಮದಲ್ಲಿ ನಿಮಗೇನೂ ಸಂಕೀರ್ಣತೆಯನ್ನು ಇರಿಸಿಲ್ಲ. (22-78)
  ಜಿಹಾದ್‍ಗೆ ಯಾರು ವಿರೋಧವಾಗಿದ್ದಾರೆ ಎಂಬ ಧೋರಣೆ ಬಹುದೊಡ್ಡ ಪ್ರಮಾದ ಆಗುವುದು. ಸತ್ಯ ಸಂಸ್ಥಾಪನೆಗಾಗಿ ನಿರಂತರ ಯತ್ನ ಅದು. ವ್ಯಾಮೋಹಗಳನ್ನು ನಿಯಂತ್ರಿಸಿ ಇಚ್ಛೆಗಳನ್ನು ತಹಬಂದಿಗೆ ತಂದು ಆಗ್ರಹಗಳ ಮೇಲೆ ನಿಯಂತ್ರಣ ಸಾಧಿಸಿ ಸ್ವಂತ ಜೀವವನ್ನು ದೇವ ನಿರ್ದೇಶನಗಳಿಗೆ ಅನುರೂಪಗೊಳಿಸಿ, ಯಥಾರ್ಥ ಸತ್ಯವಿಶ್ವಾಸಿ ನಡೆಸುವ ಶ್ರಮವು ಜಿಹಾದ್ ಆಗಿದೆ. ಯುದ್ಧರಂಗದಿಂದ ಮರಳುವಾಗ ಒಮ್ಮೆ ಪ್ರವಾದಿ(ಸ)ಯವರು ಹೇಳಿದರು “ನಾವು ಅತ್ಯಂತ ಚಿಕ್ಕ ಜಿಹಾದ್‍ನಿಂದ ಬಹುದೊಡ್ಡ ಜಿಹಾದ್‍ಗೆ ಮರಳಿರುತ್ತೇವೆ.” ಪ್ರವಾದಿ(ಸ)ರೊಡನೆ ಶಿಷ್ಯರು ಕೇಳಿದರು, “ಯಾವುದು ಬಹು ದೊಡ್ಡ ಜಿಹಾದ್" ಪ್ರವಾದಿ(ಸ) ಹೇಳಿದರು “ಮನಸ್ಸಿನೊಡನೆ ನಡೆಸುವ ಹೋರಾಟವೂ ಸ್ವಯಂ ತನ್ನೊಡನೆ ನಡೆಸುವ ಜಿಹಾದ್” ಆಗಿದೆ. ಕುಟುಂಬದ ಇಸ್ಲಾವಿೂಕರಣಕ್ಕಾಗಿ ನಡೆಸುವ ವಿದ್ಯಾಭ್ಯಾಸ, ಸಂಸ್ಕರಣೆ, ಸದುಪದೇಶ, ರಕ್ಷಣೆ ಮುಂತಾದವು ಜಿಹಾದ್‍ನ ಸಾಲಿನಲ್ಲಿ ಸೇರುವುದು. ಸತ್ಯ ಸಂಸ್ಥಾಪನೆ, ಒಳಿತಿನ ಪ್ರಚಾರಕ್ಕೂ ಧರ್ಮದ ಉನ್ನತಿಗೂ ಬರವಣಿಗೆ, ಭಾಷಣ, ಸಂಭಾಷಣೆ, ಚರ್ಚೆ, ವಿದ್ಯಾಭ್ಯಾಸ ಪ್ರಸಾರ ಎಲ್ಲವೂ ಅದರಲ್ಲಿ ಒಳಗೊಳ್ಳುವುದು. ಸಮುದಾಯದ ಉನ್ನತಿಯ ಲಕ್ಷ್ಯವಿಟ್ಟು ವಿಜ್ಞಾನ- ತಂತ್ರ ಜ್ಞಾನ, ಸಂಸ್ಕ್ರತಿ - ಕಲೆ, ಸಾಹಿತ್ಯಿಕ ಚಟುವಟಿಕೆಗಳು ಕೂಡ ಜಿಹಾದ್ ಆಗಿದೆ. ದೈವಿಕ ಸನ್ಮಾರ್ಗ ಸಂಸ್ಥಾಪನೆಗಾಗಿ ನಡೆಸುವ ಸಕಲ ಪ್ರಯತ್ನಗಳೂ ದೇವ ಮಾರ್ಗದ ಜಿಹಾದ್ ಆಗಿದೆ. ಅದು ಒಂದು ಸಮಗ್ರ ಪದವಾಗಿದೆ. ಬೌದ್ಧಿಕ, ವೈಚಾರಿಕ ಕ್ರಾಂತಿ ಉಂಟು ಮಾಡಲು, ಜನರ ಭಾವನೆ, ಇಷ್ಟ, ಸಂಸ್ಕರಿಸಲು, ಅವರ ದೃಷ್ಟಿ ದೈವಿಕ ಸನ್ಮಾರ್ಗಕ್ಕೆ ಅನುರೂಪಗೊಳಿಸಿ ಮಾರ್ಪಡಿಸಲು ನಡೆಸುವ ವಾಚಾ, ಲಿಖಿತ ಪ್ರಯತ್ನಗಳೆಲ್ಲವೂ ಮತ್ತು ಸತ್ಯದ ಶತ್ರುಗಳೊಂದಿಗೆ ನಡೆಸುವ ಸಶಸ್ತ್ರ ಹೋರಾಟದವರೆಗೂ ಅದು ವ್ಯಾಪಿಸುತ್ತದೆ. ವ್ಯಕ್ತಿ ತನ್ನ ಅಭಿಮಾನ, ಜೀವ, ಸೊತ್ತು ಸಂರಕ್ಷಿಸಲು ಶ್ರಮಿಸುವುದೂ ಜಿಹಾದ್ ಆಗಿದೆ. ಆ ಮಾರ್ಗದಲ್ಲಿ ಮರಣ ದೇವಾನುಸರಣೆಯ ಹುತಾತ್ಮೆಯಾಗಿದೆ. ಆದ್ದರಿಂದ ಮುಸ್ಲಿಮರು ಕೇವಲ ಅಲ್ಪಸಂಖ್ಯಾತರಾದರೂ, ಬೃಹತ್ ಬಹುಸಂಖ್ಯಾತರಾದರೂ ಜಿಹಾದ್ ಕಡ್ಡಾಯವಾಗಿದೆ. ಪರಿಸ್ಥಿತಿ ಅದರ ರೀತಿಯನ್ನು ನಿರ್ಣಯಿಸುತ್ತದೆ. ಅದು ಮುಸ್ಲಿಮೇತರರೊಂದಿಗಿನ ಸಶಸ್ತ್ರ ಹೋರಾಟವೋ, ಯುದ್ಧವೋ ಅಲ್ಲ. ದೇವ ಮಾರ್ಗದ ತ್ಯಾಗ, ಪರಿಶ್ರಮವಾಗಿದೆ.
  ಪ್ರಶ್ನೆಯಲ್ಲಿರುವಂತೆ ಮುಸ್ಲಿಮೇತರರು ಕಾಫಿರರಲ್ಲ. ಕಾಫಿರ್ ಎಂಬುದು ಇಸ್ಲಾಮ್‍ನ ಒಂದು ಸಾಂಕೇತಿಕ ಪದವಾಗಿದೆ. ಸತ್ಯವೂ, ಸನ್ಮಾರ್ಗವೂ ಯಥಾವಿಧಿ ಮನದಟ್ಟು ಮಾಡಿ ಕೊಂಡು ಬಳಿಕ ಪ್ರಜ್ಞಾ ಪೂರ್ವಕ ಅದನ್ನು ನಿಷೇಧಿಸಿದವನು ಕಾಫಿರ್. ಕಾಫಿರ್‍ಗಳೊಂದಿಗೆ ಅನಿವಾರ್ಯವಾದ ಕಾರಣಗಳಿಲ್ಲದೆ ಶಸ್ತ್ರ ಎತ್ತಿ ಕಾದಾಡಲು ಇಸ್ಲಾಮ್ ಅನುಮತಿಸುವುದಿಲ್ಲ. ಅವರು ಮುಸ್ಲಿಮರು ಬಹುಸಂಖ್ಯಾತರಾಗಿರುವ ಪ್ರದೇಶದಲ್ಲಿದ್ದರೂ ಅಲ್ಪಸಂಖ್ಯಾತರಾಗಿರುವ ನಾಡುಗಳಲ್ಲಿದ್ದರೂ ಆ ಅನುಮತಿಯಿಲ್ಲವೇ ಇಲ್ಲ.

 • ಗಲ್ಫ್ ರಾಷ್ಟ್ರಗಳಲ್ಲಿ ಮಂದಿರ ನಿಷೇಧ?
  ismika18-03-2015

  ಪ್ರಶ್ನೆ: ಗಲ್ಫ್ ರಾಷ್ಟ್ರಗಳಲ್ಲಿ ಹಿಂದೂಗಳ ಕ್ಷೇತ್ರ ನಿರ್ಮಾಣ ಅನುಮತಿಸದಿರುವುದು ಯಾಕೆ?

  ಉತ್ತರ: ಗಲ್ಫ್ ನಾಡುಗಳಲ್ಲಿ ಹಿಂದೂ ಪ್ರಜೆಗಳಿಲ್ಲ. ಅಲ್ಲಿಗೆ ಹೋದ ಹಿಂದೂಗಳು ಕೆಲಸ ನಿಮಿತ್ತ ವಿದೇಶಿಗಳಾಗಿದ್ದಾರೆ. ಮುಸ್ಲಿಮ್ ಸಹಿತ ವಿದೇಶಿಗಳಾದ ಯಾರಿಗೂ ಅಲ್ಲಿಗೆ ಸ್ಥಳ ಖರೀದಿಸಲಿಕ್ಕೊ ಆರಾಧನಾಲಯ ಕಟ್ಟಿಸಲಿಕ್ಕೊ ಅನುಮತಿಯಿಲ್ಲ. ಅಥವಾ ವಿದೇಶಿ ಮುಸ್ಲಿಮರು ಮಸೀದಿ ನಿರ್ಮಾಣಕ್ಕೂ ಅಲ್ಲಿನ ಕಾನೂನು ಅನುಮತಿಸುವುದಿಲ್ಲ. ವಿದೇಶಿಯರಿಗೆ ಭಾರತದಲ್ಲಿ ಅಥವಾ ಇತರ ಜಾತ್ಯತೀತ ನಾಡುಗಳಲ್ಲಿ ಸ್ವಂತವಾದ ಆರಾಧನಾಲಯ ನಿರ್ಮಿಸಲು ಅನುಮತಿಯಿಲ್ಲದಿರುವಂತೆ ಅಲ್ಲಿಯೂ ನಿರ್ಮಿಸಲು ಅನುಮತಿಯಿಲ್ಲ. ಹಾಗಿದ್ದೂ ದೀರ್ಘ ಕಾಲದಿಂದ ಗಲ್ಫ್ ನಾಡಲ್ಲಿ ವಾಸಿಸುತ್ತಿರುವ ಸಿಂಧಿ ಹಿಂದೂಗಳಿಗೆ ಆರಾಧನಾಲಯ ನಿರ್ಮಾಣಕ್ಕೆ ವಿಶೇಷ ಅನುಮತಿಯನ್ನೂ ಅಲ್ಲಿನ ಆಡಳಿತ ಕೂಟ ನೀಡಿತ್ತು. ಮಳೆಯಾಳಂನಲ್ಲಿ ಪ್ರಕಟಗೊಳ್ಳುವ ಆರೆಸ್ಸೆಸ್ ವಾರ ಪತ್ರಿಕೆ ಕೇಸರಿ ಬರೆದಿದೆ,‘ಮಸ್ಕತ್, ಬಹ್ರಿನ್, ದುಬೈಗಳಲ್ಲಿ ಭಾರತೀಯ ಹಿಂದೂಗಳಾದ ಸಿಂಧಿಗಳು ಇಲ್ಲಿ ವಲಸೆ ಬಂದಿರುವ ಕಾರಣ ಆ ದೇಶಗಳ ಅಭಿವೃದ್ಧಿಯಲ್ಲಿ ಗಣನೀಯ ಪಾತ್ರ ನಿಭಾಯಿಸಿರುವುದರಿಂದ ಪ್ರಸ್ತುತ ವಾಸ್ತವಿಕತೆಯನ್ನು ಪರಿಗಣಿಸಿ ಅಲ್ಲಿನ ಆಡಳಿತಾಧಿಕಾರಿಗಳು ಅವರಿಗೆ ವಿಶೇಷ ಪರಿಗಣನೆ ನೀಡುತ್ತಿದ್ದಾರೆ. (64.1986) ದುಬೈ ಶೇಕ್ ಅವರಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡುವುದರಲ್ಲಿ ವಿಶೇಷ ಶ್ರದ್ಧೆ ವಹಿಸಿದ್ದಾರೆ. ಸಿಂಧಿಗಳ ಅವಶ್ಯಾರ್ಥ ಹಿಂದೂಗಳ ಒಂದು ಮಂದಿರ, ಇಷ್ಟ ದೇವತೆಗಳನ್ನಿರಿಸಿ ಪೂಜಿಸುವ ಅನುಮತಿ, ಅದೇ ರೀತಿ ಉತ್ಸವಗಳನ್ನು ಆಚರಿಸಲು ಅಂಗೀಕಾರ ನೀಡಿತ್ತು. ಹಿಂದುಗಳಿಗೆ ಶವ ಸಂಸ್ಕಾರ ನಡೆಸಲಿಕ್ಕಾಗಿ ಒಂದು ಪ್ರತ್ಯೇಕ ಸ್ಮಶಾನದ ಸ್ಥಳವನ್ನು ಕೂಡಾ ಅನುಮತಿಸಿತ್ತು. (ಕೇಸರಿ 5-1-1986)

 • ಮುಸ್ಲಿಮ್ ರಾಷ್ಟ್ರಗಳಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ಇದೆಯೇ?
  ismika18-03-2015

  ಪ್ರಶ್ನೆ: ಜಾತ್ಯತೀತ ನಾಡುಗಳಂತೆಯೇ ಹೆಚ್ಚು ಧಾರ್ಮಿಕ ಅಲ್ಪ ಸಂಖ್ಯಾತರಿರುವಲ್ಲಿ ಅವರಿಗೆ ಧಾರ್ಮಿಕ ಸ್ವಾತಂತ್ರ್ಯವಿದೆಯೇ? ಇದ್ದರೆ, ಜಗತ್ತಿನಲ್ಲಿ ಯಾವುದಾದರೂ ಮುಸ್ಲಿಂ ರಾಷ್ಟ್ರದಲ್ಲಿ ಹಿಂದೂಗಳಿಗೆ ದೇವಸ್ಥಾನ ನಿರ್ಮಿಸಲು ಅನುಮತಿ ಇದೆಯೇ? ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಇರುವ ಮಂದಿರಗಳ ಧ್ವಂಸ ನಡೆಯುತ್ತಿದೆಯಲ್ಲವೆ?

  ಉತ್ತರ: ಸಮಾಜದಲ್ಲಿ ನೆಲೆಯಾಗಿರುವ ಗಂಭೀರವಾದ ತಪ್ಪಾಭಿಪ್ರಾಯಗಳೇ ಇಂತಹ ಸಂದೇಹಗಳಿಗೆ ಕಾರಣ. ಮುಸ್ಲಿಮ್ ಬಾಹುಳ್ಯವಿರುವ ಎಲ್ಲ ರಾಷ್ಟ್ರಗಳು ಧರ್ಮಾಧಾರಿತ ಇಸ್ಲಾವಿೂ ರಾಷ್ಟ್ರಗಳಾಗಿವೆ ಎಂಬ ಅಭಿಪ್ರಾಯ ಸರಿಯಲ್ಲ. ಇಸ್ಲಾವಿೂ ವ್ಯವಸ್ಥೆ ಯಥಾವತ್, ಜಾರಿಗೊಳಿಸುವ ರಾಷ್ಟ್ರಗಳು ಮಾತ್ರವೇ ಇಸ್ಲಾವಿೂ ವಿಶೇಷಣಕ್ಕೆ ಅರ್ಹವೆನಿಸುವುದು. ಪ್ರಚಲಿತ ಇರುವ ಮುಸ್ಲಿಮ್ ನಾಡುಗಳು ಆ ರೀತಿ ಮಾಡದಿರುವುದರಿಂದಾಗಿ ಜಗತ್ತಿನೆಡೆ ಎಲ್ಲಿಯೂ ಮಾದರಿ ಇಸ್ಲಾವಿೂ ರಾಷ್ಟ್ರ ಕಂಡು ಬರುವುದಿಲ್ಲ. ಅಂಶಿಕವಾಗಿ ಇಸ್ಲಾವಿೂ ವ್ಯವಸ್ಥೆ ಜಾರಿಗೆ ತಂದಿರುವ ನಾಡುಗಳಿವೆ. ಅವು ಅಷ್ಟು ಮಾತ್ರ ಇಸ್ಲಾಮಿಕ್ ಎನಿಸಿಕೊಳ್ಳುತ್ತದೆ. ಇಸ್ಲಾವಿೂ ರಾಷ್ಟ್ರದ ಮುಸ್ಲಿಮೇತರ ಪ್ರಜೆಗಳಿಗೆ ತಮ್ಮ ವಿಶ್ವಾಸ, ಆರಾಧನೆ ಆಚಾರ- ಅನುಷ್ಠಾನ ನಿರ್ವಹಿಸಲು, ಅದರಂತೆ ಆಚರಣೆ ನಡೆಸುವ ಸ್ವಾತಂತ್ರ್ಯ ಇರಲಿದೆ. ಯಾರ ಮೇಲೆಯೂ ಇಸಾಮನ್ನು ಹೇರುವುದೋ ಯಾರನ್ನಾದರೂ ಧರ್ಮಾಂತರ ಮಾಡಲು ನಿರ್ಬಂಧಿಸುವುದೋ ಇಲ್ಲ. ಹಾಗೆ ಮಾಡುವುದನ್ನು ಸ್ವಯಂ ಇಸ್ಲಾಮ್ ಕಟ್ಟು ನಿಟ್ಟಾಗಿ ನಿರ್ಬಂಧಿಸಿದೆ. “ಧರ್ಮದ ವಿಷಯದಲ್ಲಿ ಯಾವುದೆ ಒತ್ತಾಯ, ಬಲಾತ್ಕಾರಗಳಿಲ್ಲ. ಸನ್ಮಾರ್ಗವು ದುರ್ಮಾಗದಿಂದ ಬೇರ್ಪಡಿಸಲ್ಪಟ್ಟಿದೆ” (ಪವಿತ್ರ ಕುರ್ ಆನ್ - 2:56) “ಸ್ಪಷ್ಟವಾಗಿ (ಹೀಗೆ) ಹೇಳಿ ಬಿಡಿರಿ- ಇದು ನಿಮ್ಮ ಪ್ರಭುವಿನ ಕಡೆಯಿಂದ ಬಂದ ಸತ್ಯ. ಇಷ್ಟವಿದ್ದವರು ಸ್ವೀಕರಿಸಿಕೊಳ್ಳಲಿ, ಇಷ್ಟವಿದ್ದವರು ನಿರಾಕರಿಸಲಿ (ಪವಿತ್ರ ಕುರ್ ಆನ್-18:29)
  ದೇವ ಸಂದೇಶವಾಹಕರಿಗೂ ಧರ್ಮಸ್ವೀಕಾರಕ್ಕೆ ಯಾರನ್ನು ಒತ್ತಾಯ, ಬಲಾತ್ಕಾರ, ನಿರ್ಬಂಧಪಡಿಸುವ ಅನುಮತಿಯಿರಲಿಲ್ಲ. ಅಲ್ಲಾಹನು ಹೇಳುತ್ತಾನೆ, “ಸರಿ (ಸಂದೇಶವಾಹಕರೇ) ನೀವು ಉಪದೇಶ ಮಾಡುತ್ತ ಸಾಗಿರಿ. ನೀವು ಕೇವಲ ಉಪದೇಶಕರು” (ಪವಿತ್ರ ಕುರ್ ಆನ್- 88:21)
  “ಅವರ ಮೇಲೇನೂ ಬಲಾತ್ಕಾರ ಮಾಡುವವರಲ್ಲ” (ಪವಿತ್ರ ಕುರ್ ಆನ್ - 88:22)
  ಜಗತ್ತಿನ ಪ್ರಥಮ ಇಸ್ಲಾವಿೂ ರಾಷ್ಟ್ರವಾದ ಮದೀನದಲ್ಲಿ ಅದರ ಸ್ಥಾಪಕರಾದ ಪ್ರವಾದಿ(ಸ)ರು ಧಾರ್ಮಿಕ ಅಲ್ಪಸಂಖ್ಯಾತರಿಗೆ ನೀಡಿರುವಂತಹ ಸ್ವಾತಂತ್ರ್ಯವು ಸೌಕರ್ಯಗಳು ಇನ್ಯಾವುದೇ ಧರ್ಮಾಧಿಷ್ಠಿತ ನಾಡುಗಳಲ್ಲಿ ಅಥವಾ ಜಾತ್ಯತೀತ ನಾಡುಗಳಲ್ಲಿ ಕಂಡು ಬರುತ್ತಿವೆಯೇ ಎಂದು ನ್ಯಾಯವಾಗಿಯೇ ಶಂಕೆ ಪಡಬಹುದಾಗಿದೆ. ಮದೀನ ಅಂಗೀಕರಿಸಿದ, ಘೋಷಿಸಿದ ಪ್ರಮಾಣದಲ್ಲಿ ಹೀಗಿರುವುದನ್ನು ನಾವು ಕಾಣಬಹುದು; “ನಮ್ಮ ಆಡಳಿತ ಸಹೋದರ ಸೀಮೆಯಲ್ಲಿ ಬರುವ ಯಹೂದಿಯರಿಗೂ ವರ್ಗಾಧಾರಿತ ಪಕ್ಷಪಾತ-ವರ್ತನೆ ದ್ರೋಹಗಳಿಂದ ರಕ್ಷಣೆ ನೀಡಲಾಗುವುದು. ನಮ್ಮ ಸಹಾಯ ಮತ್ತು ದಯಾಯುಕ್ತವಾದ ಸಂರಕ್ಷಣೆಗೂ ಮುಸ್ಲಿಮ್ ಸಮುದಾಯದ ಸದಸ್ಯರಂತೆ ಅವರಿಗೂ ಹಕ್ಕುಗಳಿವೆ. ಮುಸ್ಲಿಮರೊಡಗೂಡಿ ಅವರು ಏಕ ಸಂವಿದಾನವುಳ್ಳ ಒಂದು ರಾಷ್ಟ್ರವಾಗಿರುವರು. ಮುಸ್ಲಿಮರಂತೆಯೇ ಅವರಿಗೂ ಸ್ವತಂತ್ರವಾಗಿ ತಮ್ಮ ಧರ್ಮವನ್ನೂ ಆಚರಿಸಬಹುದು.”
  ಥಾಮಸ್ ಅರ್ನಾಲ್ಡ್ ಬರೆಯುತ್ತಾರೆ; “ಮುಹಮ್ಮದ್ ಹಲವು ಅರಬ್-ಕ್ರೈಸ್ತ ಗೋತ್ರಗಳೊಂದಿಗೆ ಸಂಧಿ ಮಾಡಿಕೊಂಡಿದ್ದರು. ಅವರಿಗೆ ಅವರು ಸಂರಕ್ಷಣೆ ಮತ್ತು ಸ್ವ ಧರ್ಮಾಚರಣೆಯ ಸ್ವಾತಂತ್ರ್ಯವನ್ನು ನೀಡಿದರು.” ಪ್ರವಾದಿವರ್ಯರನ್ನು(ಸ) ಅನುಸರಿಸಿ ಸಕಲ ಮುಸ್ಲಿಮ್ ಆಡಳಿತಗಾರರು ಸ್ವೀಕರಿಸಿದ ನಿಲುವು ಇದುವೇ ಆಗಿದೆ. ಭಾರತದ ಇತಿಹಾಸದಲ್ಲಿ ಹೆಚ್ಚು ತಪ್ಪಾಭಿಪ್ರಾಯಕ್ಕೊಳಗಾದ, ಟೀಕೆಗೆ ವಿಧೇಯನಾದ ಔರಂಗ್ ಜೇಬ್‍ರ ಧಾರ್ಮಿಕ ನಿಲುವುಗಳಲ್ಲಿ ಪ್ರಕಟಗೊಂಡ ಸಹಿಷ್ಣುತೆ ಕುರಿತು ಅಲೆಗ್ಸಾಂಡರ್ ಹ್ಯಾಮಿಲ್ಟನ್ ಬರೆಯುತ್ತಾರೆ; ಹಿಂದೂಗಳಿಗೆ ಪರಿಪೂರ್ಣವಾದ ಧಾರ್ಮಿಕ ಸ್ವಾತಂತ್ರ್ಯ ಲಭಿಸುತ್ತಿತ್ತೆಂಬುದಕ್ಕೆ ಹೊರತಾಗಿ ಹಿಂದೂ ರಾಜ ಕುಮಾರರ ಅಧೀನವಾಗಿದ್ದಾಗ ಅವರು ಮಾಡುತ್ತಿದ್ದ ವೃತ, ಉತ್ಸವಗಳು, ಆಚರಣೆಗಳಿಗೆಲ್ಲ ಸೌಕರ್ಯಗಳು ಔರಂಗ ಜೇಬ್‍ರ ಆಳ್ವಿಕೆಯಲ್ಲಿಯು ಇತ್ತು. ವಿೂರತ್ ನಗರ ಒಂದರಲ್ಲೇ ಹಿಂದೂ ವಿಭಾಗದ ನೂರಕ್ಕೂ ಹೆಚ್ಚು ಭಿನ್ನ ಭಿನ್ನ ವಿಭಾಗಗಳಿದ್ದರೂ ಅವರು ಪರಸ್ಪರ ಪ್ರಾರ್ಥನೆ, ಸಿದ್ಧಾಂತಗಳ ಹೆಸರಲ್ಲಿ ಯಾವುದೇ ವಿಧದ ವಿವಾದ ಇರಲಿಲ್ಲ. ಯಾರೊಬ್ಬರಿಗೂ ಅವರು ಬಯಸುವ ರೀತಿ ಧರ್ಮಾಚರಣೆ ನಡೆಸಲು, ಆರಾಧಿಸಲು ಸ್ವಾತಂತ್ರ್ಯ ಇತ್ತು. ಧರ್ಮ ವಿದ್ವಂಸಕತೆ ಇರಲೇ ಇಲ್ಲ. (Alexander Hamilton A new Account of the East Indies, Vol.1, PP. 159, 162, 163).
  ಮುಸ್ಲಿಮ್ ಆಡಳಿತಗಾರರು ಧರ್ಮ ಪರಿವರ್ತನೆಗೆ ನಿರ್ಬಂಧಿಸಿರುತ್ತಿದ್ದರೆ. ಒತ್ತಡ ಹೇರಿರುತ್ತಿದ್ದರೆ ಸಾವಿರಾರು ವರ್ಷಗಳ ಅವರ ಆಳ್ವಿಕೆಯ ನಂತರವೂ ಮುಸ್ಲಿಮರು ಅಲ್ಪ ಸಂಖ್ಯಾತರಾಗಿ ಉಳಿಯಬಹುದಿತ್ತೇ? ಇಸ್ಲಾಮಿಕ್ ಆಳ್ವಿಕೆಯಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಪೂರ್ಣ ಆರಾಧನೆ ಸ್ವಾತಂತ್ರ್ಯ ನೀಡಲಾಗಿತ್ತು. ನಝ್ರಾನ್‍ನ ಕ್ರೈಸ್ತರೊಂದಿಗೆ ಪ್ರವಾದಿ(ಸ)ರು ಮಾಡಿಕೊಂಡ ಸಂಧಿಯನ್ನು ಹೀಗೆ ಓದಬಹುದು, “ನಝ್ರಾನ್‍ನ ಕ್ರೈಸ್ತರಿಗೂ ಅವರ ಸಹವಾಸಿಗಳಿಗೂ ದೇವನ ಅಭಯವೂ ದೇವ ಸಂದೇಶವಾಹಕರಾದ ಮುಹಮ್ಮದರ(ಸ) ಸಂರಕ್ಷಣೆಯ ಜವಾಬ್ದಾರಿಯೂ ಇದೆ. ಅವರ ಜೀವ, ಧರ್ಮ, ಧನ ಎಂಬಿವುಗಳಿಗೆ ಅವರಲ್ಲಿ ಹಾಜರಿರುವವನಿಗೂ ಇಲ್ಲದವನಿಗೂ ಅವರ ಒಂಟೆಗಳಿಗೂ, ನಿವೇದಕ ತಂಡಗಳಿಗೂ, ಶಿಲುಬೆ, ಚರ್ಚ್ ನಂತಹ ಧಾರ್ಮಿಕ ಚಿನ್ನೆಗಳಿಗೆ ಆಗಿವೆ. ಪ್ರಚಲಿತ ವ್ಯವಸ್ಥೆಯಲ್ಲಿ ಯಾವ ಬದಲಾವಣೆಯನ್ನೂ ಉಂಟುಮಾಡುವುದಿಲ್ಲ. ಅವರ ಯಾವ ಹಕ್ಕುಗಳನ್ನೂ ಯಾವುದೇ ಧಾರ್ಮಿಕ ಚಿನ್ನೆಯನ್ನೂ ಬದಲಾಯಿಸುವುದಿಲ್ಲ. ಅವರ ಪಾದ್ರಿ-ಪುರೋಹಿತನನ್ನೋ , ಚರ್ಚ್ ಸೇವಕನನ್ನೋ ತತ್‍ಸ್ಥಾನದಿಂದ ತೆಗೆದು ಹಾಕುವುದಿಲ್ಲ.”
  ಆದರೆ ಇಸ್ಲಾವಿೂ ರಾಷ್ಟ್ರದಲ್ಲಿ ಅನ್ಯಾಯಗಳು ತಾರತಮ್ಯ ನಡೆಯಲಾರದು, ಜಾತಿ ಮತ ಭೇದವಿಲ್ಲದೆ ಕಟ್ಟುನಿಟ್ಟು ನ್ಯಾಯ ಜಾರಿಗೊಳಿಸಲ್ಪಡುವುದು. ಪವಿತ್ರ ಕರ್‍ಆನ್ ಹೇಳುತ್ತದೆ, “ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನಿಗಾಗಿ ಸತ್ಯದಲ್ಲೇ ನೆಲೆನಿಲ್ಲುವವರೂ ನ್ಯಾಯದ ಸಾಕ್ಷ್ಯವಹಿಸುವವರೂ ಆಗಿರಿ. ಒಂದು ವಿಭಾಗದ ಮೇಲಿನ ದ್ವೇಷವು ನಿಮ್ಮನ್ನು ನ್ಯಾಯದಿಂದ ವಿಮುಖರಾಗುವಷ್ಟು ರೇಗಿಸದಿರಲಿ. ನ್ಯಾಯ ಪಾಲಿಸಿರಿ. ಇದು ದೇವ ಭಯಕ್ಕೆ ಹೆಚ್ಚು ಅನುಗುಣವಾಗಿರುತ್ತದೆ. (ಪವಿತ್ರ ಕುರ್ ಆನ್- 5:8)
  ಇಸ್ಲಾವಿೂ ರಾಷ್ಟ್ರದಲ್ಲಿ ಮುಸ್ಲಿಮೇತರ ಪ್ರಜೆಗಳ ವಿರುದ್ಧ ಗಲಭೆ ನಡೆಸಿದರೆ ಶಿಕ್ಷಾ ಕ್ರಮ ಜಾರಿಗೊಳಿಸಲ್ಪಡುವುದು. ವಧಿಸಿದರೆ ಪ್ರತಿ ಕ್ರಿಯೆ ನಡೆಸಲ್ಪಡುವುದು. ಆರಾಧನಾಲಯಗಳನ್ನು ಧ್ವಂಸಗೈದರೆ, ಧ್ವಂಸಗೈದವರಿಗೆ ಕಠಿಣ ಶಿಕ್ಷೆ ನೀಡಲ್ಪಡುವುದು. ಧ್ವಂಸ ಗೈದದ್ದನ್ನು ಮತ್ತೆ ನಿರ್ಮಿಸಲಾಗುವುದು. ಆರಾಧನಾಲಯಗಳಂತೆಯೇ ಧಾರ್ಮಿಕ ಅಲ್ಪಸಂಖ್ಯಾತರ ಜೀವ, ಸೊತ್ತು, ಶಿಕ್ಷಣ ಸಂಸ್ಥೆ, ವೈಯಕ್ತಿಕ ನಿಯಮಗಳು ಸುರಕ್ಷಿತವಾಗಿರುವುದು. ಅವುಗಳ ಮೇಲೆ ಯಾವುದೇ ರೀತಿಯ ಹಸ್ತಕ್ಷೇಪ ನಡೆಸಲ್ಪಡುವುದಿಲ್ಲ. ಆದ್ದರಿಂದಲೇ ಇಸ್ಲಾಮಿಕ್ ಆಡಳಿತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಸ್ವಾತಂತ್ರ್ಯ, ಸಂರಕ್ಷಣೆಯನ್ನು ಒದಗಿಸಿಕೊಡುತ್ತದೆ ಎಂಬುದರಲ್ಲಿ ಸಂದೇಹ ಇಲ್ಲ. ಅವರೆಂದೂ ಸ್ವಲ್ಪವೂ ಅನ್ಯಾಯ, ದಾಳಿ, ಅವಹೇಳನಕ್ಕೆ ಬಲಿಯಾಗಲಾರರು.

 • ಇಸ್ಲಾಮ್‍ನಲ್ಲಿ ಮಹಿಳೆಯ ಸ್ಥಾನ?
  ismika18-03-2015

  ಪ್ರಶ್ನೆ: ಇಸ್ಲಾಮ್‍ನಲ್ಲಿ ಸ್ತ್ರೀ ಪುರುಷರು ಸಮಾನರೇ? ಮಹಿಳೆಯ ಸ್ಥಾನ ಪುರುಷನಿಗಿಂತ ಬಹಳ ಕೆಳಗಿದೆ ಅಲ್ಲವೇ?
  ಉತ್ತರ: ಮನುಷ್ಯರಲ್ಲಿ ಹಲವು ತರದವರಿದ್ದಾರೆ. ಮನುಷ್ಯರ ಸ್ಥಿತಿ ವ್ಯತ್ಯಾಸದ ಅನುಸಾರ ಅವರ ಸ್ಥಾನ-ಪದಗಳಲ್ಲಿಯೂ ಹಕ್ಕು-ಬಾಧ್ಯತೆಗಳಲ್ಲಿಯೂ ಅಂತರ ಇರುವುದು ಸಹಜವಾಗಿದೆಯಷ್ಟೇ. ಅದೇ ರೀತಿ ಸ್ತ್ರೀ ಪುರುಷರ ಮಧ್ಯೆ ಶಾರೀರಿಕ ಭೇದವಿದೆ. ಪುರುಷ ಏಷ್ಟೇ ಪ್ರಯತ್ನಪಟ್ಟರೂ ಅವನು ಗರ್ಭ ಧರಿಸಲಾರ, ಹೆರಲಾರ, ಮಗುವಿಗೆ ಮೊಲೆ ಯೂಡಿಸಲಾರ. ಮಹಿಳೆ, ಪುರುಷನಿಗಿಂತ ವ್ಯತ್ಯಸ್ತವಾಗಿ ತಿಂಗಳಲ್ಲಿ ನಿಶ್ಚಿತ ದಿನಗಳ ಋತುಶ್ರಾವ, ಮತ್ತು ಆ ವೇಳೆ ಅನಿವಾರ್ಯ ದೈಹಿಕ-ಮಾನಸಿಕ ಸಮಸ್ಯೆ ಅನುಭವಿಸುತ್ತಾಳೆ. ದೇಹ ಪ್ರಕೃತಿ ಧರ್ಮದಂತೆ ಪುರುಷ ಸ್ತ್ರೀಗಿಂತ ಬಲಿಷ್ಠ ಕಠಿಣ ಕೆಲಸ ಮಾಡಲು ಸಮರ್ಥ ಆಗಿರುವನು.
  ಪುರುಷನ ಶರೀರದ ಎಲ್ಲ ಅವಯವಗಳು ಮಹಿಳೆಗಿಂತ ಸಂಪೂರ್ಣ ಭಿನ್ನವಾದುದು. ಪ್ರಮುಖ ಶರೀರಶಾಸ್ತ್ರ ವಿಜ್ಞಾನಿ ಹಾವ್ಲೊಕ್ ಎಲಿಸ್ ಹೇಳುತ್ತಾರೆ, “ಪುರುಷ ಅವನ ಕೈಬೆರಳು ತುದಿವರೆಗೂ ಪುರುಷನೆ ಆಗಿರುವನು. ಮಹಿಳೆ ಕಾಲ್ಬೆರಳು ತುದಿವರೆಗೂ ಮಹಿಳೆಯೇ ಆಗಿರುವಳು.”
  ಶರೀರದ ವ್ಯವಸ್ಥೆಯಲ್ಲಿ ಈ ಅಂತರವು ಮನಸ್ಸು-ಭಾವನೆಗಳಲ್ಲಿ ಪ್ರಕಟಗೊಳ್ಳುವುದಷ್ಟೆ. ಆದ್ದರಿಂದ ಸ್ತ್ರೀ-ಪುರುಷರ ಮಧ್ಯೆ ಶಾರೀರಿಕ-ಮಾನಸಿಕವಾದ ಸಮಾನತೆಯೋ ಹೋಲಿಕೆಯೋ ಇಲ್ಲ. ಆದ್ದರಿಂದ ಅವರ ಮಧ್ಯೆ ಸಂಪೂರ್ಣ ಸಮಾನತೆ ಎಂಬುದು ಪ್ರಾಯೋಗಿಕವೇ ಅಲ್ಲ, ಮಾತ್ರವಲ್ಲ ಪ್ರಕೃತಿ ವಿರೋಧಿಯೂ ಆಗುವುದು.
  ಇದು ಮಾನವ ರಾಶಿಗೆ ಸೃಷ್ಟಿಕರ್ತ ಸಂರಕ್ಷಕನಾದ ದೇವನೆ ಮಾಡಿದ ಜೀವನ ವ್ಯವಸ್ಥೆಯಾಗಿದೆ. ಆದ್ದರಿಂದಲೇ ಅದು ಮಾನವ ಪ್ರಕೃತಿಗೆ ಸಂಪೂರ್ಣ ಒಪ್ಪುವ-ಬಾಗುವ ವ್ಯವಸ್ಥೆಯಾಗಿದೆ. ಇಸ್ಲಾಮ್ ಸ್ತ್ರೀ-ಪುರುಷರು ಪರಸ್ಪರ ಹಕ್ಕು-ಬಾಧ್ಯತೆಗಳ ಹೆಸರಲ್ಲಿ ಪರಸ್ಪರ ಜಗಳಕ್ಕಿಳಿಯುವ ಶತ್ರು ವರ್ಗವೆಂದು ಭಾವಿಸುವುದಿಲ್ಲ. ಪ್ರತಿ ವರ್ಗವೂ ಸಹಕಾರ- ಜೊತೆಗೂಡಿ ಬದುಕುವ ಎರಡೂ ಜೋಡಿಗಳಾಗಿ ಪರಿಗಣಿಸಿದೆ. ನೀವೆಲ್ಲರೂ ಒಂದೇ ವರ್ಗಕ್ಕೆ ಸೇರಿದವರು (ಪ.ಕು. 4:25) ಪ್ರವಾದಿ(ಸ) ಹೇಳಿದರು, “ಸ್ತ್ರೀಯರು ಪುರುಷರ ಭಾಗವೇ ಆಗಿರುವರು. (ಅಬು ದಾವೂದ್) ಆದ್ದರಿಂದ ಸ್ತ್ರೀ ಪುರುಷರ ಸ್ಥಾನವನ್ನು ಗಣಿತಶಾಸ್ತ್ರ ಪ್ರಕಾರ ವಿಶ್ಲೇಷಿಸಲಾಗದು. ಕೆಲವು ಕಾರ್ಯಗಳಲ್ಲಿ ಪುರುಷರಿಗೆ ಆದ್ಯತೆ ಇದ್ದರೆ, ಇನ್ನೂ ಕೆಲವು ವಿಚಾರಗಳಲ್ಲಿ ಮಹಿಳೆಯರಿಗೆ ಆದ್ಯತೆ ಇರುವುದು. ಈ ಕುರಿತು ಇಸ್ಲಾವಿೂ ನಿಲುವನ್ನು ಹೀಗೆ ಸಂಕ್ಷೇಪಿಸಬಹುದು.
  1) ಅಲ್ಲಾಹನ ಬಳಿ ಸ್ತ್ರೀ ಪುರುಷರ ನಡುವೆ ಯಾವುದೇ ಅಂತರ-ತಾರತಮ್ಯಗಳಿಲ್ಲ. ಅವನ ಬಳಿ ಅವರಿಬ್ಬರಿಗೂ ಸಂಪೂರ್ಣ ಸಮಾನತೆಯ ವಾಗ್ದಾನ ನೀಡಲಾಗಿದೆ. “ಪುರುಷನಾಗಿರಲಿ, ಸ್ತ್ರೀ ಆಗಿರಲಿ ಯಾರು ಸತ್ಕರ್ಮವೆಸಗುವನೋ ಅವನು ಸತ್ಯವಿಶ್ವಾಸಿಯಾಗಿದ್ದರೆ ಅವನಿಗೆ ನಾವು ಇಹಲೋಕದಲ್ಲಿ ಪರಿಶುದ್ಧ ಜೀವನವನ್ನು ದಯಪಾಲಿಸುವೆವು ಮತ್ತು ಇಂತಹವರಿಗೆ (ಪರಲೋಕದಲ್ಲಿ) ಅವರ ಅತ್ಯುತ್ತಮ ಕರ್ಮಗಳಿಗನುಸಾರ ಪ್ರತಿಫಲ ನೀಡುವೆವು. (ಪವಿತ್ರ ಕುರ್ ಆನ್ -16:97)
  “ಸತ್ಕರ್ಮವೆಸಗಿದವನು ಪುರುಷನಿರಲಿ, ಸ್ತ್ರೀ ಇರಲಿ, ಸತ್ಯವಿಶ್ವಾಸಿಯಾಗಿದ್ದರೆ ಇಂತಹವರೆಲ್ಲರೂ ಸ್ವರ್ಗವನ್ನು ಪ್ರವೇಶಿಸುವರು.” (ಪವಿತ್ರ ಕುರ್ ಆನ್- 40:40)
  “ಅವರ ಪ್ರಭು ಅವರಿಗೆ ಉತ್ತರ ನೀಡಿದನು, ನಾನು ನಿಮ್ಮಲ್ಲಿ ಯಾರೊಬ್ಬನ ಕರ್ಮವನ್ನೂ ನಿಷ್ಫಲಗೊಳಿಸುವವನಲ್ಲ. ಪುರುಷರಾಗಲಿ ಸ್ತ್ರೀಯರಾಗಲಿ ನಿವೇಲ್ಲರೂ ಒಂದೇ ವರ್ಗದವರು. (ಪವಿತ್ರ ಕುರ್ ಆನ್ - 3:195)
  2) ಭೂಮಿಯಲ್ಲಿ ಮಹಿಳೆಯೇ ಅತ್ಯಧಿಕ ಆದರಕ್ಕೆ ಅರ್ಹವಾದವಳು, ಮಾತೃತ್ವಕ್ಕಿಂತ ಮಹತ್ವದ್ದು ಈ ಲೋಕದಲ್ಲಿ ಬೇರೆ ಇಲ್ಲ. ತಲೆಮಾರುಗಳಿಗೆ ಜನ್ಮಕೊಟ್ಟವಳು ಅವಳು. ಮೊದಲ ಗುರು ಅವಳೇ. ಮನುಷ್ಯ ಜನನ ಬೆಳವಣಿಗೆಯಲ್ಲಿ ಅತ್ಯಧಿಕ ಪಾತ್ರ ಅವಳದ್ದೆ. ಇಹದಲ್ಲಿ ಸಂಕಷ್ಟ ಅನುಭವಿಸುವುದು ತಾಯಿಯೇ. ಆದ್ದರಿಂದಲೇ ಮನುಷ್ಯ ಭೂಮಿಯಲ್ಲಿ ಅತಿ ಹೆಚ್ಚು ಅನುಸರಿಸುವ, ಗೌರವಿಸುವ, ಮತ್ತು ಅಂಗೀಕರಿಸಬೇಕಿರುವುದು ತಾಯಿಯನ್ನೇ.
  ಓರ್ವನು ಪ್ರವಾದಿ(ಸ) ಸನ್ನಿಧಿಯಲ್ಲಿ ಬಂದು ಕೇಳಿದನು: ‘ಸಂದೇಶವಾಹಕರೇ(ಸ) ನನ್ನ ಉತ್ತಮ ವರ್ತನೆಗೆ ಭಾಜನರು ಯಾರು?” ಪ್ರವಾದಿ(ಸ) ಹೇಳಿದರು, “ನಿನ್ನ ತಾಯಿ” ಆತ ಮತ್ತೆ ಕೇಳಿದನು “ಆ ಮೇಲೆ ಯಾರು?” ಪ್ರವಾದಿ(ಸ) ಹೇಳಿದರು “ನಿನ್ನ ತಾಯಿ”. ಆತ ಮತ್ತೊಮ್ಮೆ ಪ್ರಶ್ನಿಸಿದನು ‘ಆ ಮೇಲೆ ಯಾರು?’ “ನಿನ್ನ ತಾಯಿಯೇ “ ಆತ ಮತ್ತೂ ಪ್ರಶ್ನಿಸಿದಾಗ ಪ್ರವಾದಿವರ್ಯರು(ಸ) ಹೇಳಿದ್ದರು, “ನಿನ್ನ ತಂದೆ” (ಬುಖಾರಿ, ಮುಸ್ಲಿಮ್)
  ಪವಿತ್ರ ಕುರ್‍ಆನ್ ತಂದೆ ತಾಯಿಯರನ್ನು ಉಲ್ಲೇಖಿಸಿರುವ ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ತಾಯಿ ಸೇವೆಯನ್ನೇ ಎತ್ತಿ ಹಿಡಿದಿದೆ. “ಮಾನವನಿಗೆ ತನ್ನ ಮಾತಾಪಿತರ ಹಕ್ಕನ್ನು ತಿಳಿದುಕೊಳ್ಳಲು ನಾವೇ ತಾಕೀತು ಮಾಡಿರುತ್ತೇವೆ. ಅವನ ತಾಯಿ ನಿತ್ರಾಣದ ಮೇಲೆ ನಿತ್ರಾಣವನ್ನು ಸಹಸಿ ಅವನನ್ನು ತನ್ನ ಗರ್ಭದಲ್ಲಿರಿಸಿದಳು ಮತ್ತು ಅವನ ಸ್ತನಪಾನ ಬಿಡುವುದರಲ್ಲಿ ಎರಡು ತಿಂಗಳು ತಗಲಿದವು. (ಆದುದರಿಂದಲೇ ನಾವು ಅವರೊಡನೆ) ನನಗೆ ಕೃತಜ್ಞತೆ ಸಲ್ಲಿಸು ಮತ್ತು ನಿನ್ನ ಮಾತಾಪಿತರಿಗೆ ಕೃತಜ್ಞತೆ ಸಲ್ಲಿಸು. ನೀನು ನನ್ನ ಕಡೆಗೇ ಮರಳಬೇಕಾಗಿದೆ (ಎಂದು ಉಪದೇಶಿಸಿದೆವು) (ಪವಿತ್ರ ಕುರ್ ಆನ್- 31:14)
  “ತನ್ನ ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು” (ಪವಿತ್ರ ಕುರ್ ಆನ್- 46:15) ಹೀಗೆ ಇಸ್ಲಾಮ್‍ನ ದೃಷ್ಟಿಯಲ್ಲಿ ತಾಯಿ ಎಂಬ ಮಹಿಳೆಗೆ ಪ್ರಧಾನ ಸ್ಥಾನವಿದೆ.
  ಪ್ರವಾದಿ(ಸ) ಹೇಳಿದ್ದಾರೆ; ಓರ್ವನಿಗೆ ಇಬ್ಬರು ಹೆಮ್ಮಕ್ಕಳಿದ್ದು ಆತ ಅವರನ್ನು ಉತ್ತಮ ರೀತಿಯಲ್ಲಿ ಪೋಷಿಸಿದರೆ ಅವರ ಕಾರಣದಿಂದ ಆತ ಸ್ವರ್ಗ ಪ್ರವೇಶಿಸುವನು.” (ಬುಖಾರಿ)
  “ಮೂವರು ಹೆಮ್ಮಕ್ಕಳೋ ಸಹೋದರಿಯರೋ ಇದ್ದ ಕಾರಣವಾಗಿ ಪ್ರಾರಬ್ಧ ಅನುಭವಿಸುವವನಿಗೆ ಸ್ವರ್ಗ ಲಭಿಸದಿರಲಾರರು. (ತ್ವಹಾವಿ)
  ಈ ರೀತಿ ಪ್ರಕೃತಿ ದತ್ತ ವಿಶೇಷತೆಗಳನ್ನು ಸಂಪೂರ್ಣವಾಗಿ ಪರಿಗಣಿಸಿ ಸ್ಥಾನ ಪದವಿ ಹಕ್ಕು ಬಾಧ್ಯತೆಗಳನ್ನು ಇಸ್ಲಾಮ್ ಸ್ತ್ರೀ ಪುರುಷರಿಗೆ ಕಲ್ಪಿಸಿದೆ. ಆದ್ದರಿಂದ ತಾಯಿತ್ವಕ್ಕೆ ಮಹತ್ವ ನೀಡಿ ಅದನ್ನು ಅತ್ಯಂತ ಹೆಚ್ಚು ಗೌರವಿಸಿದೆ. ಹೀಗೆ ಪ್ರಕೃತಿ ದತ್ತ ವಿಶೇಷತೆಗಳನ್ನು ಸಂಪೂರ್ಣ ಇಸ್ಲಾಮ್ ಪರಿಗಣಿಸುತ್ತದೆ. ಆದ್ದರಿಂದ ಅದು ನ್ಯೂನತೆ ಮುಕ್ತವಾಗಿದೆ. ನಿಸ್ಸಂದಿಗ್ಧವೂ ಆಗಿದೆ.

 • ಆರನೆ ಶತಮಾನದ ಧರ್ಮ?
  ismika21-04-2015

  ಪ್ರಶ್ನೆ: 14ನೆ ಶತಮಾನದೊಳಗೆ ಜಗತ್ತು ವಿವರಿಸಲಾಗದ ರೀತಿಯಲ್ಲಿ ಬದಲಾವಣೆಯಾಗಿದೆ. ಪೌರಮ್ಯ ಪಡೆದ ಅಧುನಿಕ ಪರಿಷ್ಕ್ರತ ಯುಗದಲ್ಲಿ ಆರನೆ ಶತಮಾನದ ಧರ್ಮವಾಗಿ ಪರಿಗಣಿಸುವುದು ಮುರ್ಖತನ ಅಲ್ಲವೇ?

  ಉತ್ತರ: ಕಾಲ ಬದಲಾಗಿದೆ ನಿಜವೇ. ಜಗತ್ತಿನ ರೂಪವೂ ಬದಲಾಗಿದೆ. ಮನುಷ್ಯ ಅತ್ಯಧಿಕ ಪ್ರಗತಿ ಸಾಧಿಸಿದ್ದಾನೆ. ವಿಜ್ಞಾನ ವಿವರಿಸಲಾಗದಷ್ಟು ಬೆಳೆದು ನಿಂತಿದೆ. ತಂತ್ರಜ್ಞಾನ ಸಮೃದ್ಧವಾಗಿದೆ. ಜೀವನ ಸೌಕರ್ಯಗಳು ಸೀಮಾತೀತವಾಗಿ ವರ್ಧಿಸಿದೆ. ನಾಗರಿಕತೆ ನಿರ್ಣಾಯ ಸಾಧನೆ ಮಾಡಿತು. ಜೀವನಮಟ್ಟ ಬಹಳ ಉತ್ತಮವಾಯಿತು. ಆದರೆ, ಮನುಷ್ಯನಲ್ಲಿ ಇವೆಲ್ಲವೂ ಮೌಲ್ಯದಾಯಕವಾದ ಬದಲಾವಣೆಯನ್ನು ತಂದುಕೊಟ್ಟಿದೆಯೇ? ವಿಚಾರ-ಭಾವನೆ, ಆಚಾರ ಕ್ರಮ, ಆರಾಧನೆ ರೀತಿ, ವರ್ತನೆ, ಸಂಪ್ರದಾಯ, ಸ್ವಭಾವ, ನಿಲುಮೆಗಳಲ್ಲಿ ಇವು ಸ್ವಲ್ಪವಾದರೂ ಪ್ರಭಾವ ಬೀರಿದೆಯೇ? ಇಲ್ಲ ಎಂದರೆ ಸತ್ಯವಾಗುವುದು. ಸಹಸ್ರಾಬ್ಧಿಗಳಿಂದ ಸಮಾಜವನ್ನು ಅಂಧವಿಶ್ವಾಸವೇ ಆಳಿದೆ. ಸಮಕಾಲೀನ ಸಮಾಜದ ಸ್ಥಿತಿಯೂ ಅದುವೇ. ಅಂದಿನಂತೆ ಇಂದು ಮನುಷ್ಯನು ನಿರ್ಜೀವ ವಸ್ತುಗಳನ್ನು ಆರಾಧಿಸುತ್ತಿದ್ದಾನೆ. ಮೋಸ-ವಂಚನೆ, ಕಳ್ಳತನ, ಕೊಳ್ಳೆ ಹಿಂದಿನಂತೆಯೇ ಮುಂದುವರಿಯುತ್ತಿದೆ. ಮದ್ಯ ಸೇವನೆಯಲ್ಲಿಯೂ ವ್ಯತ್ಯಾಸವಿಲ್ಲ. ಲೈಂಗಿಕ ಅರಾಜಕತೆಯೂ ಹಾಗೆಯೇ ಮುಂದುವರಿಯುತ್ತಿದೆ. ಹೆಚ್ಚೇಕೆ, ಆರನೆ ಶತಮಾನದ ಕೆಲವು ಅರೇಬಿಯನ್ ಗೋತ್ರಗಳು ಮಾಡಿರುವಂತೆ ಹೆಮ್ಮಕ್ಕಳನ್ನು (ಶಿಶುಗಳನ್ನೂ) ಆಧುನಿಕ ಮನುಷ್ಯರೂ ಕ್ರೂರವಾಗಿ ಕೊಲೆಗೈಯುತ್ತಿದ್ದಾರೆ. ಅಂದು ಒಂದೆರಡು ಇಂತಹ ಘಟನೆಗಳು ನಡೆಯುತ್ತಿದ್ದರೆ ಇಂದು ಲಕ್ಷಗಳು ಕೋಟಿ ಲೆಕ್ಕದಲ್ಲಿಯೂ ನಡೆಯುತ್ತಿವೆ. ವೈದ್ಯಕೀಯ ವಿದ್ಯೆ ಇವೆಲ್ಲವನ್ನೂ ಅನಾಯಾಸವಾಗಿ ಮಾಡಿ ಮುಗಿಸುತ್ತಿವೆ. ನಾವು ಕಿರಾತವೆಂದು ಆರೋಪಿಸುವ ಕಾಲದಲ್ಲಿ ಸಂಭವಿಸುತ್ತಿದ್ದಂತೆಯೆ. ಇಂದು ಕೂಡಾ ಮನುಷ್ಯನು ತನ್ನ ಸಹಜೀವಿಯನ್ನು ಕ್ರೂರವಾಗಿ ಕೊಲೆಗೈಯುತ್ತಾನೆ. ಅಂದು ಚೂಪಾದ ಕಲ್ಲಿನಿಂದ ಜಜ್ಜಿ ಕೊಲೆಗೈಯ್ಯುತ್ತಿದ್ದರೆ ಇಂದು ಭಾರೀ ಸ್ಫೋಟ ಶಕ್ತಿಯಿರುವ ಬಾಂಬನ್ನು ಬಳಸುತ್ತಿದ್ದಾರೆ. ಆದ್ದರಿಂದ ಕೊಲೆ ಕೃತ್ಯ ಅಂದಿಗಿಂತ ಇಂದು ಗಣನೀಯ ಪ್ರಮಾಣದಲ್ಲಿ ಹೆಚ್ಚಿವೆ. ಸಂಕ್ಷಿಪ್ತವಾಗಿ ಲೋಕದಲ್ಲಿ ಆದ ಬದಲಾವಣೆಗಳು ಬಾಹ್ಯ ಬದಲಾವಣೆಗಳು ಮಾತ್ರವಾಗಿದೆ. ಒಳಗೆ ಅಂದೂ ಇಂದೂ ಒಂದೇ ರೀತಿಯಿವೆ. ಅಂದರೆ ಮನುಷ್ಯನ ಮನಸ್ಸು ಪರಿವರ್ತನೆಯಾಗಿಲ್ಲ. ಆದ್ದರಿಂದ ಮೌಲ್ಯಯುತವಾದ ಯಾವುದೇ ಬದಲಾವಣೆಗಳು ಸಂಭವಿಸಿಲ್ಲ. ಗತ ಶತಮಾನಗಳಲ್ಲಿ ಮನಪರಿವರ್ತನೆಯಾದವರು ಆ ಮೂಲಕ ಪರಿವರ್ತನೆ ಸೃಷ್ಟಿಸಿದ ಆದರ್ಶ ವಿಶ್ವಾಸಿಗಳ ಮೌಲ್ಯ ಪ್ರಜ್ಞೆಗೆ ಮಾತ್ರವೇ ಜೀವನ ಸುಧಾರಣೆ ನಡೆಸಲು ಸಾಧ್ಯವಾಗುತ್ತಿದೆ. ಆರನೆ ಶತಮಾನದ ಮಾನವ ಮನಸ್ಸಿಗೆ ಜೀವನದ ಪಾವಿತ್ರ್ಯವೂ ಕುಟುಂಬದ ನೆಮ್ಮದಿ, ಸಮಾಜದ ಸುರಕ್ಷೆ, ರಾಷ್ಟ್ರದ ಭದ್ರತೆ ನೀಡಿರುವ ದೈವಿಕ ಜೀವನ ವ್ಯವಸ್ಥೆಗೆ ಇಂದು ಕೂಡಾ ಇಂತಹ ಸಾಮರ್ಥ್ಯವಿದೆ. ಅದನ್ನು ಪ್ರಯೋಗಕ್ಕೆ ತಂದಂತೆ ಅದಕ್ಕೆ ತಕ್ಕಂತೆ ಸಮಕಾಲೀನ ಪ್ರಸಕ್ತತೆ, ಪ್ರಾಮುಖ್ಯ ಸದ್ಭಲಗಳು ಪ್ರಕಟಗೊಳ್ಳುವುದು ಮತ್ತು ಪ್ರಕಟವಾಗಿದೆ ಕೂಡಾ. ಪ್ರಕಟವಾಗುತ್ತಲೂ ಇವೆ. ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಯೆ ಸಮರ್ಪಿಸುವ ಸಮಗ್ರ ಜೀವನ ವ್ಯವಸ್ಥೆಯ ಒಂದಂಶ ಕೂಡಾ ಆಧುನಿಕ ಲೋಕದಲ್ಲಿ ಅಪ್ರಾಯೋಗಿಕವಾಗಿಯೋ ಅನುಚಿತವೋ ಆಗಿಲ್ಲ ಎಂಬುದು ಸತ್ಯವಾಗಿದೆ. ಮಾತ್ರವಲ್ಲ, ಅದರ ಪ್ರಾಯೋಗಿಕತೆ ಮಾತ್ರವೇ ಮಾನವ ರಾಶಿ ಇಂದು ಅನುಭವಿಸುವ ಸಮಸ್ಯೆ, ಸಂಕಷ್ಟಗಳಿಗೆ ಪೂರ್ಣ ಪರಿಹಾರವನ್ನು ಒದಗಿಸುತ್ತದೆ.

 • ಈಗ ಯಾಕೆ ದೇವ ಸಂದೇಶವಾಹಕರು (ದೂತರು) ಬರುವುದಿಲ್ಲ?
  ismika21-04-2015

  ಪ್ರಶ್ನೆ: ಪ್ರವಾದಿ ಮುಹಮ್ಮದ್(ಸ)ರು ಯಾಕೆ ದೇವನ ಅಂತಿಮ ಸಂದೇಶವಾಹಕರಾಗಿದ್ದಾರೆ? ದೇವ ಮಾರ್ಗದರ್ಶನದ ಆವಶ್ಯಕತೆ ಇಂದು ಕೂಡಾ ಇಲ್ಲವೇ? ಹಾಗಿರುವಾಗ ಇಂದು ಯಾಕೆ ದೇವನ ಸಂದೇಶವಾಹಕರು ಬರುವುದಿಲ್ಲ?

  ಉತ್ತರ: ದೇವದೂತರನ್ನು ನಿಯೋಜಿಸುವುದು ಮಾನವರ ಮಾರ್ಗದರ್ಶನಕ್ಕಾಗಿದೆ. ಪ್ರವಾದಿ ಮುಹಮ್ಮದರಿಗಿಂತ(ಸ) ಮುಂಚಿನ ಪ್ರವಾದಿಗಳ ಮೂಲಕ ಅವತೀರ್ಣಗೊಂಡ ದೇವ ಸಂದೇಶ ಕೆಲವು ಪ್ರತ್ಯೇಕ ಕಾಲದವರಿಗೂ, ದೇಶದವರಿಗೂ ಮಾತ್ರವೇ ಇರುವುದಾಗಿತ್ತು. ಜಗದ್ ವ್ಯಾಪಿಯಾಗಿ ಆ ಸಂದೇಶಗಳ ಪ್ರಚಾರ, ಅವುಗಳ ಭದ್ರ ಸಂರಕ್ಷಣೆ ಸಾಧ್ಯವಾಗಿರಲಿಲ್ಲ ಎಂಬುದು ಇದಕ್ಕೆ ಕಾರಣ ಇರಲೂ ಬಹುದು. ಏನಿದ್ದರೂ, ಅವರ ಮೂಲಕ ಲಭಿಸಿರುವ ದೇವ ಸಂದೇಶ ಮನುಷ್ಯರ ಹಸ್ತಕ್ಷೇಪ ನಡೆದಿದೆ. ಅದು ಶುದ್ಧ ರೂಪದಲ್ಲಿ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ. ಆದರೆ 1400 ವರ್ಷ ಮುಂಚೆ ಪ್ರವಾದಿ ಮುಹಮ್ಮದ್‍ರ(ಸ) ಮೂಲಕ ಅವತೀರ್ಣವಾದ ಪವಿತ್ರ ಕುರ್‍ಆನ್ ಸಕಲ ಮನುಷ್ಯರಿಗೂ ಪರ್ಯಾಪ್ತವಾದುದು ಆಗಿದೆ. ಅಂದು ಅದು ಜಗತ್ತಿನುದ್ದಕ್ಕೂ ತಲುಪಲು ಸೌಕರ್ಯವಾಗುವಂತೆ ಮನುಷ್ಯ ನಾಗರಿಕತೆ ಬೆಳೆದು ಅಭಿವೃದ್ಧಿ ಹೊಂದಿತ್ತು. ಪ್ರವಾದಿ(ಸ) ನಿಯೋಜನೆಯಾದ ನಂತರ ಹೆಚ್ಚು ಕಾಲ ವಿಲಂಬಿಸದೆ ಪರಿಚಿತ ನಾಡುಗಳಿಗೆ ಪವಿತ್ರ ಕುರ್‍ಆನ್ ಸಂದೇಶ ತಲುಪಿತ್ತಲ್ಲದೆ ಪ್ರಚಾರಗೊಂಡಿತ್ತು. ಪವಿತ್ರ ಕುರ್‍ಆನ್ ಇಂದಿಗೂ ಮನುಷ್ಯರ ಎಲ್ಲ ರೀತಿಯ ಹಸ್ತಕ್ಷೇಪಗಳಿಂದ, ಅದಕ್ಕೆ ಸೇರಿಸುವುದೋ, ತೆಗೆಯುವುದೋ ಇವೆಲ್ಲದ್ದರಿಂದ ಮುಕ್ತವಾಗಿ ಯಥಾ ರೂಪದಲ್ಲಿ ನೆಲೆನಿಂತಿದೆ . ಲೋಕವಸಾನದ ವರೆಗೂ ಅದು ಸುರಕ್ಷಿತವಾಗಿರುವುದು. ಈ ದೈವಿಕ ಗ್ರಂಥದಲ್ಲಿ ಒಂದಕ್ಷರಕ್ಕೂ ಏನೂ ಸಂಭವಿಸಿಲ್ಲ. ಅದರ ಸೂಕ್ಷ್ಮವಾದ ಸಂರಕ್ಷಣೆಯನ್ನು ದೇವನೆ ಹೊತ್ತು ಕೊಂಡಿದ್ದಾನೆ. ದೇವನು ಹೇಳುತ್ತಾನೆ, "ಈ ಉಪದೇಶವನ್ನು ನಿಶ್ಚಯವಾಗಿಯೂ ನಾವು ಅವತೀರ್ಣಗೊಳಿಸಿರುತ್ತೇವೆ ಮತ್ತು ಸ್ವತಃ ನಾವೇ ಅದರ ರಕ್ಷಕರೂ ಆಗಿರುತ್ತೇವೆ." (15:9) ಮನುಷ್ಯ ರಾಶಿಗಾಗಿ ನೀಡಲಾದ ದೈವಿಕ ಮಾರ್ಗದರ್ಶನವಾದ ಪವಿತ್ರ ಕುರ್‍ಆನ್ ಮತ್ತು ಅದರ ವ್ಯಾಖ್ಯಾನವಾದ ಪ್ರವಾದಿ ಚರ್ಯೆಯಲ್ಲಿಯೂ ಭದ್ರವಾಗಿ ಸೂಕ್ಷ್ಮವಾಗಿ ಅದು ಅಸ್ತಿತ್ವ ಹೊಂದಿರುವುದರಿಂದ ಹೊಸ ಮಾರ್ಗದರ್ಶನ ಅಥವಾ ಪ್ರವಾದಿಯ ಆವಶ್ಯಕತೆಯಿಲ್ಲ. ಆದ್ದರಿಂದಲೇ ಕಳೆದ 14 ಶತಮಾನಗಳಿಂದ ಹೊಸ ದೇವ ಗ್ರಂಥವೋ ದೇವ ಸಂದೇಶವಾಹಕರೋ ಆಗಿಲ್ಲ. ಇನ್ನು ಉಂಟಾಗುವುದಿಲ್ಲ. ಈ ವಿಷಯವನ್ನು ಪವಿತ್ರ ಕುರ್‍ಆನ್ ಸೂಚಿಸಿರುತ್ತದೆ.
  "ಜನರೇ, ಪ್ರವಾದಿ(ಸ) ನಿಮ್ಮಲ್ಲಿರುವ ಯಾವ ಪುರುಷರ ತಂದೆಯಲ್ಲ, ಬದಲಾಗಿ ಅವರು ಅಲ್ಲಾಹನ ಸಂದೇಶವಾಹಕರೂ ಪ್ರವಾದಿಗಳಲ್ಲಿ(ಸ) ಕೊನೆಯವರೂ ಆಗಿರುವರು. ಅಲ್ಲಾಹನು ಸರ್ವಜ್ಞನಾಗಿದ್ದಾನೆ."

 • ಕ್ಷೇತ್ರ ಪ್ರದಕ್ಷಿಣೆ ಮತ್ತು ಕಅಬಾ ತವಾಫ್?
  ismika21-04-2015

  ಪ್ರಶ್ನೆ: ಹಿಂದೂಗಳು ದೇವಳದ ಸುತ್ತಲೂ ಪ್ರದಕ್ಷಿಣೆ ಮಾಡುವಂತೆ ಮುಸ್ಲಿಮರು ಕಅಬಾದ ಸುತ್ತಲೂ ಸುತ್ತುತ್ತಾರಲ್ಲವೇ?

  ಉತ್ತರ: ಪ್ರವಾದಿ ಇಬ್ರಾಹೀಂ ಪವಿತ್ರ ಕಅಬಾ ನಿರ್ಮಾಣ ಮಾಡಿದರು. ಹಜ್ಜ್ ಗೆ ಕರೆ ನೀಡಿರುವುದು ಅವರೆ. ಅವರು ಕಟ್ಟಿದ ಕಅಬಾದಲ್ಲಿ ಪ್ರತಿಮೆ, ವಿಗ್ರಹ, ಚಿತ್ರಗಳಾದಿ ಯಾವುದೂ ಇರಲಿಲ್ಲ ಮಾತ್ರವಲ್ಲ, ಏಕದೇವಾರಾಧನೆಗಾಗಿ ಪ್ರವಾದಿ ಇಬ್ರಾಹೀಂ(ಅ) ಮತ್ತು ಪ್ರವಾದಿ ಇಸ್ಮಾಯೀಲ್(ಅ) ಸೇರಿ ಅದನ್ನು ಕಟ್ಟಿದ್ದರು. ಹಜ್ಜ್ ನ ಭಾಗವಾಗಿ ಅದರ ಸುತ್ತಲೂ ಸುತ್ತುವ ಸಂಪ್ರದಾಯ ಅಂದಿನಿಂದಲೇ ಪ್ರಾರಂಭಗೊಂಡಿತ್ತು. ಆದರೆ ಆನಂತರದ ಕಾಲದಲ್ಲಿ ಜನರು ಅಂಧವಿಶ್ವಾಸ ಅನಾಚಾರಗಳಿಗೆ ಅಧೀನರಾಗಿ ಅದೇ ಪ್ರವಾದಿಗಳ ಚಿತ್ರಗಳನ್ನು ಅದರೊಳಗೆ ಇರಿಸಿ ಆರಾಧಿಸ ತೊಡಗಿದರು. ಕಅಬಾ ಮತ್ತು ಅದರ ಸುತ್ತಲೂ ಅನೇಕ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಅವುಗಳನ್ನೆಲ್ಲಾ ಆರಾಧಿಸಲು ಪ್ರಾರಂಭಿಸಿದರು. ಹೀಗೆ ದೇವಾರಾಧನೆಯ ಪ್ರಕಾರವಾಗಿ ನಡೆದು ಬಂದಿದ್ದ ಕಅಬಾದ ಸುತ್ತ ಸುತ್ತುವ ವಿಧಾನ ವಿಗ್ರಾಹಾರಧನೆಯಾಗಿ ಪರಿಣಮಿಸಿತು. ಈ ಮಧ್ಯದಲ್ಲಿ ಪ್ರವಾದಿ ಮುಹಮ್ಮದ್‍ರು(ಸ) ನೇಮಿಸಲ್ಪಟ್ಟರು. ಭಾರೀ ವಿಶ್ವಾಸದ ಕ್ರಾಂತಿಯ ಮೂಲಕ ಅವರ ಮನ ಪರಿವರ್ತನೆ ಮಾಡಿ ಅವರು ಕಅಬಾದೊಳಗೆ ಅಜ್ಞಾನದಿಂದ ತಂದಿರಿಸಲಾಗಿದ್ದ ವಿಗ್ರಹಗಳನ್ನು ತೆರವುಗೊಳಿಸಿ ಅದನ್ನು ಶುದ್ಧೀಕರಿಸಿದರು. ಆ ಮೇಲೆಯೇ ಕಅಬಾದ ಸುತ್ತಲೂ ಸುತ್ತುವ ಪ್ರದಕ್ಷಿಣೆ ವಿಧಾನವನ್ನು, ಆರಾಧನೆ ಸಂಪ್ರದಾಯವನ್ನು ಇಸ್ಲಾಮ್ ಧರ್ಮ ಕೂಡಾ ಮುಂದುವರಿಸಿತು. ಅಂದರೆ ಅದನ್ನು ವಿಗ್ರಹಾರಾಧನೆಯ ಬದಲಾಗಿ ಏಕದೇವಾರಾಧನೆಯಾಗಿ ಪರಿವರ್ತಿಸಿತು. ವಿಗ್ರಹಗಳಿಗೆ ನಗ್ನರಾಗಿ ಪ್ರದಕ್ಷಿಣೆ ಬರಲಾಗಿತ್ತು. ಈ ಕರ್ಮವನ್ನು ಪ್ರವಾದಿ ಮುಹಮ್ಮದ್‍ರು(ಸ) ಗೌರವದಿಂದ ವಸ್ತ್ರಗಳನ್ನು ಧರಿಸಿ ನಿರ್ವಹಿಸಬೇಕು ಎಂದು ಸುಧಾರಣೆ ತಂದರು. ಈ ಮೂಲಕ ಅವರಲ್ಲಿದ್ದ ಎಲ್ಲಾ ಕೆಡುಕುಗಳು, ನೀಚತೆಗಳು ಕೊನೆಗೊಂಡು ಶುದ್ಧೀಕರಣಗೊಂಡಿತು.
  ಧರ್ಮಗಳ ಮೂಲ ಮೌಲ್ಯವಾಗಿದೆ. ಧರ್ಮ ದೇವನಿಂದ ಇರುವುದರಿಂದ ಆರಾಧನೆಗಳಲ್ಲಿಯೂ ಅದು ಪ್ರತಿಫಲನಗೊಳ್ಳಬೇಕಾಗಿದೆ. ಯಾವುದೇ ಆಚರಣೆಯಾಗಿದ್ದರೂ ದೇವನನ್ನು ಪ್ರತಿನಿಧಿಸುವ, ಪ್ರತಿಮೆ, ಪ್ರತಿಷ್ಠೆ, ವಿಗ್ರಹಗಳನ್ನು ಸ್ಥಾಪಿಸುವುದನ್ನು, ಅದನ್ನು ಆರಾಧಿಸುವುದನ್ನು ಮತ್ತು ಅದರ ಭಾಗವಾಗಿ ಸ್ಥಾಪಿಸಿದ ಕಟ್ಟಡಗಳಿಗೆ ಸುತ್ತು ಬರುವುದನ್ನು ಇಸ್ಲಾಮ್ ಬೆಂಬಲಿಸುವುದಿಲ್ಲ ಮಾತ್ರವಲ್ಲ ಶಕ್ತಿಶಾಲಿಯಾಗಿ ವಿರೋಧಿಸುತ್ತಿದೆ.

 • ದೇವನು ಕಅಬಾದಲ್ಲಿರುವನೆ?
  ismika21-04-2015

  ಪ್ರಶ್ನೆ: ಮುಸ್ಲಿಮರು ಯಾಕೆ ನಮಾಝ್‍ನಲ್ಲಿ ಕಅಬಾದೆಡೆಗೆ ಮುಖ ಮಾಡಿ ನಿಲ್ಲುತ್ತಾರೆ. ದೇವನು ಕಅಬಾದಲ್ಲಿರುವನೆ? ಅಲ್ಲವಾದರೆ, ಕಅಬಾ ದೇವನ ಪ್ರತೀಕವೋ? ಪೀಠವೋ?

  ಉತ್ತರ: ಇಸ್ಲಾವಿೂ ದೃಷ್ಟಿಕೋನದಲ್ಲಿ ದೇವನು ಯಾವುದಾದರೊಂದು ಪ್ರತ್ಯೇಕ ಸ್ಥಳಕ್ಕೆ ಪರಿಮಿತನೋ, ಪ್ರತಿಷ್ಠಾಪಿಸಲ್ಪಟ್ಟವನೋ ಅಲ್ಲ. ದೇವನಿಗೆ ಪ್ರತಿಮೆಗಳೋ ಪ್ರತಿಷ್ಠೆಗಳೋ ಇಲ್ಲ. "ಪೂರ್ವ ಪಶ್ಚಿಮಗಳೆಲ್ಲವೂ ಅಲ್ಲಾಹನವು. ನೀವೆತ್ತ ಮುಖ ಮಾಡಿದರೂ ಅಲ್ಲಿ ಅಲ್ಲಾಹನ ಮುಖವಿದೆ. ನಿಶ್ಚಯವಾಗಿಯೂ ಅಲ್ಲಾಹನು ಬಹು ವಿಶಾಲನೂ, ಅಭಿಜ್ಞನೂ ಆಗಿದ್ದಾನೆ." (2:115)
  ಭೂಮಿ ಆಕಾಶಗಳ ಪ್ರತಿಯೊಂದು ವಸ್ತುವಿನ ಜ್ಞಾನವು ಅಲ್ಲಾಹನಿಗೆ ಇದೆ ಎಂಬುದು ನಿಮಗೆ ತಿಳಿದಿಲ್ಲವೇ? ಮೂರು ಮಂದಿಯ ನಡುವೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಅವರೊಂದಿಗೆ ನಾಲ್ಕನೆಯವನಾಗಿ ಅಲ್ಲಾಹನು ಎಂದೂ ಇಲ್ಲದೆ ಇರುವುದಿಲ್ಲ. ಅಥವಾ ಐವರೊಳಗೆ ರಹಸ್ಯ ಮಾತುಕತೆ ನಡೆಯುತ್ತಿರುವಾಗ ಆರನೆಯವನಾಗಿ ಅಲ್ಲಾಹನಿಲ್ಲದೆ ಇರುವುದಿಲ್ಲ. ರಹಸ್ಯ ಮಾತುಕತೆ ನಡೆಸುವವರು ಇದಕ್ಕಿಂತ ಕಡಿಮೆ ಇರಲಿ ಅಥವಾ ಹೆಚ್ಚಿರಲಿ, ಅವರು ಎಲ್ಲೇ ಇರಲಿ, ಅಲ್ಲಾಹನು ಅವರ ಜೊತೆಗಿರುತ್ತಾನೆ. (58:7)
  "ನಾವು ಮಾನವನನ್ನು ಸೃಷ್ಟಿಸಿದ್ದೇವೆ ಮತ್ತು ನಾವು ಅವನ ಮನಸ್ಸಿನಲ್ಲಿ ಉದ್ಭವಿಸುವ ದುರ್ಭಾವನೆಗಳನ್ನು ಬಲ್ಲೆವು. ನಾವು ಅವನ ಕಂಠನಾಡಿಗಿಂತಲೂ ಹೆಚ್ಚು ಅವನಿಗೆ ಸಮೀಪವಿದ್ದೇವೆ." (50: 16)
  ಜಗತ್ತಿನಾದ್ಯಂತ ಇರುವ ಸಕಲ ಮನುಷ್ಯರ ಮತ್ತು ಅಖಿಲ ಜೀವಿತ ಕ್ಷೇತ್ರವನ್ನು ಏಕೀಕರಣಗೊಳಿಸುವ ಸಮಗ್ರ ಜೀವನ ಪದ್ಧತಿ ಇಸ್ಲಾಮ್ ಆಗಿದೆ. ಅದರ ಆರಾಧನಾ ಕ್ರಮ ವಿಶ್ವಾಸಿಗಳನ್ನು ಏಕೀಕರಿಸುವುದರಲ್ಲಿ ಹೆಚ್ಚು ಪಾತ್ರವಹಿಸುತ್ತಿದೆ. ಇದು ಸಾಧ್ಯವಾಗಬೇಕಾದರೆ, ಎಲ್ಲರ ಆರಾಧನಾ ರೀತಿ ಒಂದೇ ರೂಪದಲ್ಲಿರಬೇಕಲ್ಲವೇ. ಆದ್ದರಿಂದ ನಮಾಝ್‍ನಲ್ಲಿ ವಿಶ್ವಾಸವಿರುವ ವಿಶ್ವಾಸಿಗಳು ತಿರುಗಿ ನಿಲ್ಲಲು ಒಂದು ಸ್ಥಳ ಇರಬೇಕಲ್ಲವೇ. ಅದಕ್ಕಾಗಿ ದೇವನನ್ನು ಮಾತ್ರ ಆರಾಧಿಸಲು ಆದ್ಯ ನಿರ್ಮಾಣವಾದ ಕಅಬಾದೆಡೆ ಮುಖ ಮಾಡಲು ನಿಶ್ಚಯಿಸಲಾಗಿದೆ. ಆದ್ದರಿಂದ ಆ ಪವಿತ್ರ ಕಅಬಾಲಯ ಲೋಕದ ಜನರನ್ನು ಏಕೀಕರಿಸುವ ಕೇಂದ್ರವಾಗಿದೆ. ದೇವನನ್ನು ವಿಶೇಷವಾಗಿ ಪ್ರತಿಷ್ಠಾಪಿಸಿದ ಸ್ಥಳವೋ, ಪ್ರತಿಷ್ಠೆಯೋ ಅಲ್ಲ. ಬದಲಾಗಿ ಅದು ಏಕದೇವಾರಾಧನೆಯ ಪ್ರತೀಕವಾಗಿದೆ.
  "ನಿಶ್ಚಯವಾಗಿಯೂ ಮಾನವರಿಗಾಗಿ ನಿರ್ಮಿಸಲ್ಪಟ್ಟ ಪ್ರಥಮ ಆರಾಧಾನಾಲಯ ಮಕ್ಕಾದಲ್ಲಿರುವುದೇ ಆಗಿರುತ್ತದೆ. ಅದಕ್ಕೆ ಶುಭ ಸಮೃದ್ಧಿಗಳನ್ನು ನೀಡಲಾಗಿತ್ತು ಮತ್ತು ಅದು ಸಮಗ್ರ ಲೋಕದವರಿಗೆ ಸನ್ಮಾರ್ಗದರ್ಶನದ ಕೇಂದ್ರವನ್ನಾಗಿ ಮಾಡಲ್ಪಟ್ಟಿತ್ತು. (3: 96)
  "ನಾವು ಆ ಭವನ(ಕಅಬಾ)ವನ್ನು ಜನರಿಗೆ ಕೇಂದ್ರ ಹಾಗೂ ಶಾಂತಿ ಸ್ಥಾನವನ್ನಾಗಿ ನಿಶ್ಚಯಿಸಿದ ಸಂದರ್ಭವನ್ನು ಸ್ಮರಿಸಿ." (2:125)
  "ಅಲ್ಲಾಹನು ಪ್ರತಿಷ್ಠಿತ ಭವನವಾದ `ಕಅಬಾ'ವನ್ನು ಜನರ ಪಾಲಿಗೆ (ಸಾಮೂಹಿಕ ಜೀವನವನ್ನು) ನೆಲೆ ನಿಲ್ಲಿಸುವ ಸಾಧನವನ್ನಾಗಿ ಮಾಡಿದನು." (5:97)
  ಆದ್ದರಿಂದ ಪವಿತ್ರ ಕಅಬಾಲಯವನ್ನು ಆರಾಧಿಸುವುದಿಲ್ಲ. ಅದರ ಒಡೆಯನಾದ ಅಲ್ಲಾಹನನ್ನು ಆರಾಧಿಸುವುದು ಮಾತ್ರವಾಗಿದೆ.
  "ಅವರು ಈ ಭವನದ ಪ್ರಭುವಿನ ದಾಸ್ಯ-ಆರಾಧನೆ ಮಾಡಲಿ" (106:3)
  ಜಗತ್ತಿನ ಅತಿ ಹೆಚ್ಚು ಶ್ರದ್ಧೆ ಆಕರ್ಷಿಸುವ ಭವನವಾಗಿದೆ ಕಅಬಾ. ಸುಮಾರು 100 ಕೋಟಿ ಜನರು ದಿನಾಲೂ ಐದು ಹೊತ್ತು ಅದರತ್ತ ಮುಖ ಮಾಡುತ್ತಾರೆ. ಹಲವಾರು ಶತಮಾನಗಳು ಕಳೆದು ಹೋಗಿವೆ. ಕೋಟ್ಯಾಂತರ ವಿಶ್ವಾಸಿಗಳ ಮುಖವನ್ನು ಅಂತ್ಯ ವಿಶ್ರಮಕ್ಕಾಗಿ ಕಅಬಾದ ನೇರಕ್ಕೆ ಇರಿಸಲಾಗುತ್ತದೆ. ಅಂದರೆ ದಫನಗೈಯ್ಯಲಾಗುವ ವಿಶ್ವಾಸಿಯ ಮೃತದೇಹದ ಮುಖವನ್ನು ಕಅಬಾದೆಡೆಗೆ ಇರಿಸಲಾಗುತ್ತಿದೆ. ಜನರ ಭಾವನೆಯೊಂದಿಗೆ ಈ ರೀತಿ ಪೋಣಿಸಲ್ಪಡುವ ಬೇರೊಂದು ಆಲಯ ಜಗತ್ತಿನಲ್ಲಿಲ್ಲ. ಅದು ದೇವ ಭವನವಾಗಿದೆ. ಆದ್ದರಿಂದ ಅದು ಸಕಲ ಮನುಷ್ಯರಿಗೂ ಸೇರಿರುವುದಾಗಿದೆ. ಏಕದೇವಾರಾಧನೆಯ ಪ್ರತೀಕವೂ ಆಗಿದೆ. ಎಲ್ಲ ಏಕದೇವರಾಧಕರ ಪ್ರಾರ್ಥನೆಯ ದಿಕ್ಕು ಆಗಿದೆ.

 • ಪವಿತ್ರ ಕುರ್‍ಆನ್ ದೈವಿಕ ಗ್ರಂಥವೇ?
  ismika28-04-2015

  ಪ್ರಶ್ನೆ: ಪವಿತ್ರ ಕುರ್‍ಆನನ್ನು ದೇವ ಗ್ರಂಥವೆಂದು ಮಸ್ಲಿಮರು ಹೇಳುತ್ತಾರಲ್ಲವೇ. ಅದು ಮುಹಮ್ಮದರ ರಚನೆ ಅಲ್ಲ ದೇವಗ್ರಂಥ ಎಂದು ಹೇಗೆ ತಿಳಿದುಕೊಳ್ಳುವುದು? ಅದಕ್ಕೆ ಏನು ಪುರಾವೆ?

  ಉತ್ತರ: ಪವಿತ್ರ ಕುರ್‍ಆನ್ ದೇವಗ್ರಂಥ ಎನ್ನುವುದಕ್ಕೆ ಪುರಾವೆ ಆ ಗ್ರಂಥವೇ ಆಗಿದೆ. ಪ್ರವಾದಿ ಮುಹಮ್ಮದ್‍ರು(ಸ) ಮತ್ತು ಅವರ ಮೂಲಕ ಅವತೀರ್ಣಗೊಂಡ ಪವಿತ್ರ ಕುರ್‍ಆನಿನ ಸ್ಪಷ್ಟ ಚಿತ್ರವೂ, ಇತಿಹಾಸವೂ ಮನುಷ್ಯ ರಾಶಿಯ ಮುಂದಿದೆ. ಪ್ರವಾದಿ ಮುಹಮ್ಮದರ(ಸ) ಅಂತರಂಗ, ಬಹಿರಂಗ, ರಹಸ್ಯ ಈ ಎಲ್ಲ ಕಾರ್ಯವನ್ನು ಚಾಚು ತಪ್ಪದೆ ದಾಖಲಿಸಿರಿಸಲಾಗಿದೆ. ಆಧುನಿಕ ಕಾಲದ ಮಹಾನ್ ವ್ಯಕ್ತಿಗಳ ಚರಿತ್ರೆ ಕೂಡಾ ಆ ರೀತಿ ವಿಶದವಾಗಿ ಮತ್ತು ಸೂಕ್ಷ್ಮವಾಗಿ ಬರೆಯಲಾಗಿಲ್ಲ ಎಂಬುದು ಒಂದು ವಾಸ್ತವವಾಗಿದೆ.

  ಅಜ್ಞಾನಂಧಕಾರಗಳು ತುಂಬಿದ್ದ ಆರನೇ ಶತಮಾನದಲ್ಲಿ ಅರೇಬಿಯಾದಲ್ಲಿ ಮುಹಮ್ಮದ್‍ರು ಜನಿಸಿದರು. ಮರುಭೂಮಿಯ ಮಡಿಲಲ್ಲಿ ಸಂಪೂರ್ಣ ಅನಾಥರಾಗಿ ಅವರು ಬೆಳೆದರು. ಸಣ್ಣದರಲ್ಲಿಯೇ ಕುರಿಗಾಹಿ ಕೆಲಸ ಮಾಡಿದರು. ಅವರಿಗೆ ಬರೆಯಲು ಓದಲು ತಿಳಿದಿರಲಿಲ್ಲ. ಪಾಠ ಶಾಲೆಗಳಿಗೆ ಹೋಗಿರಲಿಲ್ಲ. ಧರ್ಮ ಚರ್ಚೆಗಳಲ್ಲಿ ಭಾಗವಹಿಸಿಯೂ ಇರಲಿಲ್ಲ. ಮಕ್ಕಾ ಸಾಹಿತಿಗಳು ಕವಿಗಳು ಭಾಷಣಕಾರರ ಕೇಂದ್ರವಾಗಿದ್ದೂ ಅವರು ನಲ್ವತ್ತು ವರ್ಷ ವಯಸ್ಸಿನವರೆಗೆ ಒಂದು ಗೆರೆ ಕವಿತೆಯನ್ನೋ ಪದ್ಯ ಗದ್ಯವನ್ನೋ ರಚಿಸಿರಲಿಲ್ಲ. ಭಾಷಣದ ಸಾಮಥ್ರ್ಯವನ್ನೋ ಪ್ರಕಟಿಸಿರಲಿಲ್ಲ. ಸೃಜನಾತ್ಮಕತೆಯ ಸಿದ್ಧಿಗಳು ಅವರಲ್ಲಿ ಕಂಡಿರಲಿಲ್ಲ. ಆಧ್ಯಾತ್ಮದಲ್ಲಿ ಅತೀವ ಶ್ರದ್ಧೆಯಿದ್ದ ಮುಹಮ್ಮದರು(ಸ) ಮಕ್ಕಾದ ಮಾಲಿನ್ಯಮಯ ವಾತಾವರಣದಿಂದ ದೂರದಲ್ಲಿದ್ದು ಧ್ಯಾನ ಪ್ರಾರ್ಥನೆಯಲ್ಲಿ ವ್ಯಸ್ತರಾಗಿರುತ್ತಿದ್ದರು. ಏಕಾಂತ ಸ್ಥಿತಿಯನ್ನು ಹೆಚ್ಚು ಇಷ್ಟಪಟ್ಟರು. ಪವಿತ್ರ ಕಅಬಾದಿಂದ ಮೂರು ಕಿಲೋ ಮೀಟರ್ ಉತ್ತರಕ್ಕಿರುವ ಪರ್ವತದ ತುದಿಯ ಹಿರಾ ಗುಹೆಯಲ್ಲಿ ಏಕಾಂತ ಸ್ಥಿತಿಯಲ್ಲಿರುವಾಗಲೇ ಮುಹಮ್ಮದರಿಗೆ(ಸ) ಪ್ರಥಮವಾಗಿ ದಿವ್ಯ ಸಂದೇಶ ಲಭಿಸಿತು. ಮುಂದಿನ ಇಪ್ಪತ್ತ್ಮೂರು ವರ್ಷಗಳಲ್ಲಿ ವಿವಿಧ ಸಂದರ್ಭಗಳಲ್ಲಿ ಲಭಿಸಿದ ದಿವ್ಯ ಬೋಧನೆಯ ಸಮಾಹಾರವೇ ಪವಿತ್ರ ಕುರ್‍ಆನ್. ಅದು ಸಾಧಾರಣ ಅರ್ಥದಲ್ಲಿರುವ ಗದ್ಯವೋ, ಪದ್ಯವೋ, ಕವಿತೆಯೋ ಅಲ್ಲ.ಸಂಪೂರ್ಣ ಸವಿಶೇಷ ಶೈಲಿ ಪವಿತ್ರ ಕುರ್‍ಆನ್‍ನದ್ದಾಗಿದೆ. ಅದನು ಅನುಕರಿಸಲಿಕ್ಕೊ ಅದರೊಂದಿಗೆ ಸ್ಪರ್ದಿಸಲಿಕ್ಕೋ ಇಂದಿನವರೆಗೆ ಯಾರಿಗೂ ಸಾಧ್ಯವಾಗಿಲ್ಲ, ಲೋಕವಸಾನದವರೆಗೆ ಯಾರಿಗೂ ಸಾಧ್ಯವೂ ಆಗುವುದಿಲ್ಲ.

  ಅನುಯಾಯಿಗಳು ದೈವಿಕ ಎಂದು ಹೇಳುವ ಒಂದಕ್ಕಿಂತ ಹೆಚ್ಚು ಗ್ರಂಥಗಳು ಲೋಕದಲ್ಲಿವೆ. ಆದರೆ ಸ್ವಯಂ ದೈವಿಕವೆಂದು ಘೋಷಿಸುವ ಏಕೈಕ ಗ್ರಂಥವೇ ಜಗತ್ತಿನಲ್ಲಿರುವುದು. ಅದುವೇ ಪವಿತ್ರ ಕುರ್‍ಆನ್. ಪವಿತ್ರ ಕುರ್‍ಆನ್ ದೇವನಿಂದ ಅವತೀರ್ಣವಾದುದೆಂದು ಸ್ವಯಂ ಅದುವೇ ಅನೇಕ ಬಾರಿ ಪುನರಾವರ್ತಿಸಿ ಹೇಳಿದೆ. ಜೊತೆಗೆ ಇದರಲ್ಲಿ ಯಾರಿಗಾದರೂ ಸಂಶಯವಿದ್ದರೆ 114 ಅಧ್ಯಾಯಗಳಿರುವ ಕುರ್‍ಆನ್‍ನ ಯಾವುದಾದರೊಂದು ಅಧ್ಯಾಯಕ್ಕೆ ಸಮಾನವಾದ ಒಂದು ಅಧ್ಯಾಯವನ್ನು ರಚಿಸಿ ತರಲು ಅದುವೇ ಸವಾಲೆಸೆದಿದೆ. ಇದಕ್ಕೆ ಜಗತ್ತಿನಲ್ಲಿರುವ ಯಾವುದೇ ಸಾಹಿತಿ ವಿದ್ವಾಂಸ ಬುದ್ಧಿಜೀವಿಯ ಸಹಾಯವನ್ನೂ ಪಡೆಯಬಹುದೆಂದು ಅದುವೇ ಸೂಚಿಸಿದೆ. ಅಲ್ಲಾಹನು ಹೇಳುತ್ತಾನೆ" ನಾವು ನಮ್ಮ ದಾಸನಿಗೆ ಅವತೀರ್ಣಗೊಳಿಸಿದ ಈ ಗ್ರಂಥವು ನಮ್ಮದೋ ಅಲ್ಲವೋ ಎಂಬ ವಿಷಯದಲ್ಲಿ ನಿಮಗೆ ಸಂದೇಹವಿದ್ದರೆ ಇದಕ್ಕೆ ಸರಿಸಮಾನವಾದ ಒಂದು ಅಧ್ಯಾಯವನ್ನಾದರೂ ರಚಿಸಿ ತನ್ನಿರಿ ಅಲ್ಲಾಹನ ಹೊರತು ನಿಮ್ಮೆಲ್ಲ ಸಾಕ್ಷಿಗಳನ್ನು ನಿಮ್ಮ ಸಹಾಯಕ್ಕಾಗಿ ಕರೆದು ತನ್ನಿರಿ. ನೀವು ಸತ್ಯವಾದಿಗಳಾಗಿದ್ದರೆ ಈ ಕಾರ್ಯವನ್ನು ಮಾಡಿ ತೋರಿಸಿರಿ"

  ಪ್ರವಾದಿವರ್ಯರ(ಸ) ಕಾಲದಿಂದ ಹಿಡಿದು ಅನೇಕ ಶತಮಾನಗಳಲ್ಲಿ ಇಸ್ಲಾಮ್‍ನ ವಿಮರ್ಶಕರು ನಿಪುಣ ಕವಿಗಳು ಸಾಹಿತಿಗಳು ಈ ಸವಾಲನ್ನು ಎದುರಿಸಲು ಪ್ರಯತ್ನಿಸಿದ್ದಾರೆ. ಎರಡರಲ್ಲಿ ಒಂದು ಅನುಭವವೇ ಅವರಿಗೆ ಆಗಿರುವುದು. ಮಹಾ ಸಂಖ್ಯೆಯಲ್ಲಿ ಸೋಲನ್ನೊಪ್ಪಿ ಇಸ್ಲಾಮ್‍ನ ಅನುಯಾಯಿಗಳಾದರು. ಉಳಿದವರು ಸೋಲುಂಡು ಹಿಂದೆ ಸರಿದರು. ಪ್ರವಾದಿವರ್ಯರ(ಸ) ಕಾಲದಲ್ಲಿ ಪ್ರಸಿದ್ಧ ಸಾಹಿತಿಗಳಾದ ಲಬೀದ್ ಹಸ್ಸಾನ್ ಕಅಬ್ ಇಬ್ನು ಝುಹೈರ್‍ರೆಲ್ಲ ಪವಿತ್ರ ಕುರ್‍ಆನಿನ್ ಮುಂದೆ ಪರಾಜಿತರಾಗಿ ನಿಶ್ಶರ್ತವಾಗಿ ಶರಣಾಗಿರುವವರ ಸಾಲಿಗೆ ಸೇರಿರುವರು. ಯವiನ್‍ನಿಂದ ಬಂದ ತುಫೈಲ್‍ರನ್ನು ಕುರ್‍ಆನ್‍ನ್ನು ಆಲಿಸುವುದರಿಂದ ಕುರೈಶಿಗಳು ತಡೆದರು. ಯಾವುದೋ ಅಂತಃಪ್ರಚೋದನೆಯಲ್ಲಿ ಪವಿತ್ರ ಕುರ್‍ಆನ್‍ನ್ನು ಆಲಿಸುವ ಸಂದರ್ಭ ಅವರಿಗೆ ಸಿಕ್ಕಾಗ ಪ್ರಮುಖ ಕವಿಯೂ ಗಾಯಕನೂ ಆದ ಅವರು ಹೀಗೆ ಹೇಳಿದರು"ದೇವನು ಸರ್ವಶಕ್ತ ಸರ್ವಜ್ಞನು ಆಗಿದ್ದಾನೆ. ನಾನೀಗ ಆಲಿಸಿರುವುದು ಅರಬಿ ಸಾಹಿತ್ಯದ ಅತುಲ್ಯ ವಾಕ್ಯಗಳನ್ನು ಆಗಿದೆ. ನಿಸ್ಸಂದೇಹ, ಅದು ಅತ್ಯುಕೃಷ್ಟವೇ ಆಗಿವೆ. ಇತರೆಲ್ಲದಕ್ಕಿಂತ ಪವಿತ್ರವೂ ಅವು ಎಷ್ಟು ಆಶಯ ಸಂಪೂರ್ಣ! ಅರ್ಥಪೂರ್ಣ! ಎಷ್ಟು ಮನೋಹರ! ಹೆಚ್ಚು ಆಕರ್ಷಕ ಇಂತಿರುವ ಯಾವುದನ್ನು ನಾನು ಈ ಮೊದಲು ಎಲ್ಲಿಯೂ ಕಂಡಿಲ್ಲ. ಅಲ್ಲಾಹನಾಣೆ ಇದು ಮನುಷ್ಯ ವಚನವಲ್ಲ. ಸ್ವಯಂಕೃತವೂ ಅಲ್ಲ. ದೈವಿಕವೇ ಆಗಿದೆ. ನಿಸ್ಸಂದೇಹ ಖಂಡಿತವಾಗಿಯೂ ಇವು ದೈವಿಕ ವಚನಗಳೇ ಆಗಿವೆ"

  ಮುಗೀರರ ಮಗ ಖಾಲಿದ್ ಇಸ್ಲಾಮ್ ಮತ್ತು ಪ್ರವಾದಿಯವರ ಕಟು ವಿರೋಧಿಯಾಗಿದ್ದರು. ಪವಿತ್ರ ಕುರ್‍ಆನ್ ಓದಿ ಕೇಳಿದ ಸಂದರ್ಭದಲ್ಲಿ ಅವರು ತನ್ನ ಅಭಿಪ್ರಾಯವನ್ನು ಹೀಗೆ ದಾಖಲಿಸಿದರು. ಇದರಲ್ಲಿ ಎಂದಿಲ್ಲದ ಮಾಧುರ್ಯವಿದೆ ಹೊಸತನವಿದೆ. ಅತ್ಯಂತ ಫಲ ಸಮೃದ್ಧವಾದುದು ಇದು. ನಿಶ್ಚಯವಾಗಿಯೂ ಇದು ಅತ್ಯುನ್ನತಿ ಪಡೆಯುವುದು. ಬೇರೆ ಯಾವುದೂ ಇದನ್ನು ಅಧೀನಗೊಳಿಸುವುದಿಲ್ಲ. ಇದರ ಕೆಳಗಿರುವುದನ್ನು ನಾಶ ಮಾಡುವುದು ಎಂದು ಎಂದಿಗೂ ಒಬ್ಬ ಮನುಷ್ಯನಿಗೆ ಹೇಳಲು ಸಾಧ್ಯವಿಲ್ಲ."
  ಇದು ಕೇಳಿ ಪ್ರವಾದಿವರ್ಯರ(ಸ) ಪ್ರಧಾನ ಎದುರಾಳಿ ಅಬೂ ಜಹಲ್ ಖಾಲಿದ್‍ರನ್ನು ಭೇಟಿಯಾಗಿ ಕುರ್‍ಆನ್ ಕುರಿತು ಕೆಟ್ಟದ್ದೇನಾದರು ಹೇಳು ಎಂದು ಒತ್ತಾಯಿಸಿದನು. ಅಸಹಾಯಕರಾಗಿ ಖಾಲಿದ್ ಪ್ರಶ್ನಿಸಿದರು, ನಾನೇನು ಹೇಳಲಿ, ಗಾನ ಪದ್ಯ ಕವಿತೆ ಗದ್ಯ ಮುಂತಾದ ಅರಬಿ ಸಾಹಿತ್ಯದ ಯಾವುದೇ ಶಾಖೆಯಲ್ಲಿಯೂ ನನಗೆ ನಿಮಗಿಂತ ಹೆಚ್ಚು ಪರಿಜ್ಞಾನವಿದೆ. ಅಲ್ಲಾಹನಾಣೆ! ಈ ಮನುಷ್ಯ ಹೇಳುವ ಕಾರ್ಯಗಳಿಗೆ ಅವುಗಳ ಯಾವ ಹೋಲಿಕೆಯೂ ಇಲ್ಲ. ಅಲ್ಲಾಹನೇ ಸಾಕ್ಷಿ! ಆ ಸಂಭಾಷಣೆಗಳಲ್ಲಿ ಅಸಾಧಾರಣವಾದ ಮಾಧುರ್ಯವಿದೆ. ಸವಿಶೇಷ ಸೌಂದರ್ಯವಿದೆ. ಅದರ ಶಾಖೆಗಳು ಫಲಸಮೃದ್ಧವೂ ತಳಿರುಗಳು ಶ್ಯಾಮ ಸುಂದರವೂ ಆಗಿದೆ. ಖಚಿತವಾಗಿಯೂ ಅವು ಇನ್ನಾವುದೇ ವಾಕ್ಯಗಳಿಗಿಂತ ಉತ್ಕಷ್ಟವಾಗಿದೆ. ಇತರ ವಾಕ್ಯಗಳು ಸರ್ವವೂ ಅದರ ಕೆಳಗೆ ಆಗಿವೆ." ಇದು ಅಬೂ ಜಹಲ್‍ನನ್ನು ಅತ್ಯಧಿಕ ಅಸ್ವಸ್ಥಗೊಳಿಸಿತು. ಆತ ಹೇಳಿದನು, ನೀವು ಯಾರೆಂದು ತಿಳಿದಿದೆಯೇ, ಅರಬರ ಅತ್ಯುನ್ನತ ನಾಯಕರಾಗಿದ್ದೀರಿ, ಯುವ ಸಮೂಹದ ಆರಾಧ್ಯರಾಗಿದ್ದೀರಿ. ಹೀಗಿದ್ದೂ ನೀವು ಓರ್ವ ಅನಾಥನ ಹಿಂಬಾಲಕರಾಗುವುದೇ. ಅವನ ಭ್ರಾಂತಿಯ ಮಾತುಗಳನ್ನು ಹೊಗಳುತ್ತಿರುವುದೇ. ತಮ್ಮಂತಹ ಮಹಾನ್ ವ್ಯಕ್ತಿಗಳಿಗೆ ಕೊರತೆಯಾಗಿದೆ. ಆದ್ದರಿಂದ ಮುಹಮ್ಮದರನ್ನು ತೆಗಳಿರಿ. ಅಹಂಕಾರಕ್ಕೊಳಗಾಗಿ ಖಾಲಿದ್ ಹೇಳಿದರು, ಮುಹಮ್ಮದ್ ಇಂದ್ರಜಾಲ ಮಾಡುವವರು, ಸಹೋದರರನ್ನು ಪರಸ್ಪರ ಹೊಡೆದಾಡುವಂತೆ ಮಾಡುವವರು, ಪತಿ ಪತ್ನಿಯರ ಸಂಬಂಧವನ್ನು ಮುರಿಯುವವರು, ಊರಲ್ಲಿ ಕ್ಷೋಭೆಯನ್ನು ಹರಡುವವರು, ಓರ್ವ ಇಂದ್ರಜಾಲ ವಿದ್ಯೆ ಇರುವವರು ಮಾತ್ರ ಎಂದು ಖಾಲಿದ್ ಹೇಳಿದರು. ಎಷ್ಟೇ ಪ್ರಯತ್ನಿಸಿದರೂ ಖಾಲಿದ್‍ರಿಗೆ ಪವಿತ್ರ ಕುರ್‍ಆನನ್ನು ಟೀಕಿಸಿ ಮಾತಾಡಲು ಸಾಧ್ಯವಾಗಲಿಲ್ಲ. ಅವರು ಅಂತಹ ನುರಿತ ಸಾಹಿತ್ಯಕಾರನಾಗಿಯೂ ಅವರಿಂದ ಅದನ್ನು ಮಾಡಲು ಸಾಧ್ಯವಾಗಲಿಲ್ಲ.

  ನಲ್ವತ್ತು ವರ್ಷದವರೆಗೆ ಪ್ರವಾದಿ(ಸ) ಜೀವನದಲ್ಲಿ ಒಂದೇ ಒಂದು ಸುಳ್ಳನ್ನು ಹೇಳಿರಲಿಲ್ಲ. ಆದ್ದರಿಂದ ಅವರನ್ನು ಅಲ್ ಅಮೀನ್ ಅರ್ಥಾತ್ ಸತ್ಯಸಂಧ ಎಂದು ಅರಬರು ಕರೆಯುತ್ತಿದ್ದರು. ಇಂತಹ ವ್ಯಕ್ತಿ ದೇವನ ಹೆಸರಲ್ಲಿ ಸುಳ್ಳು ಹೇಳುವರೆಂದು ಕಲ್ಪಿಸಿಕೊಳ್ಳುವುದು ಸಾಧ್ಯವಿರಲಿಲ್ಲ. ಮಾತ್ರವಲ್ಲ ಒಂದು ಅತ್ಯುತ್ಕಷ್ಟ ಗ್ರಂಥವನ್ನು ರಚಿಸುವ ಯಾವ ವ್ಯಕ್ತಿ ಈ ಗ್ರಂಥ ತನ್ನದಲ್ಲವೇ ಅಲ್ಲ ಅದರಲ್ಲಿ ತನ್ನ ಯಾವ ಪಾಲು ಇಲ್ಲ ಎಂದು ಹೇಳುವನೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಅಥವಾ ಪವಿತ್ರ ಕುರ್‍ಆನ್ ತನ್ನದೇ ಸೃಷ್ಟಿಯೆಂದು ಹೇಳುತ್ತಿದ್ದರೆ ಅರಬರು ಅವರನ್ನು ಅತ್ಯಧಿಕ ಆದರಿಸುತ್ತಿದ್ದರು. ಆದರೆ ಅವರಿಗೆ ಲಭಿಸಿರುವುದು ಕಟು ದೌರ್ಜನ್ಯಗಳಾಗಿದ್ದವು. ಲೋಕದಲ್ಲಿ ಅಸಂಖ್ಯಾತ ಗ್ರಂಥಗಳು ರಚಿಸಲ್ಪಟ್ಟಿದೆ. ಅವುಗಳಲ್ಲಿ ಹೆಚ್ಚು ಶ್ರದ್ಧೆಗೆ ಪಾತ್ರವಾದದ್ದು ಕೂಡಾ ಬದಲಾವಣೆಗೆ ಒಳಗಾದ್ದದಿದೆ. ಆದರೆ ಪವಿತ್ರ ಕುರ್‍ಆನ್ ಅಂದಿನಿಂದ ಇಂದಿನವರೆಗೂ ಯಾವುದೇ ಬದಲಾವಣೆಯಾಗದೆ ದೇವನಿಂದ ಅವತೀರ್ಣವಾದ ಅದೇ ಸ್ವರೂಪದಲ್ಲಿದೆ. ಮತ್ತು ಪವಿತ್ರ ಕುರ್‍ಆನ್ ದೇವನಿಂದ ಅವತೀರ್ಣವಾದುದೆಂದು ಅದುವೇ ಹೇಳುತ್ತಿದೆ. ಹದಿನಾಲ್ಕು ಶತಮಾನಗಳೇ ಕಳೆದ ಮೇಲೆಯೂ ಪವಿತ್ರ ಕುರ್‍ಆನ್‍ನ ಭಾಷೆ ಶೈಲಿ ಇಂದಿಗೂ ಜೀವಂತ ಭಾಷೆಯಾಗಿ ನೆಲೆನಿಂತಿದೆ. ಅರಬಿ ಭಾಷೆ ಅರಿಯುವ ಯಾರನ್ನೂ ಪವಿತ್ರ ಕುರ್‍ಆನ್ ಆಕರ್ಷಿಸುತ್ತದೆ. ಯಾರಿಗೂ ಅದರ ಆಶಯವನ್ನು ಸುಲಭವಾಗಿ ಮನದಟ್ಟು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ನಿತ್ಯನೂತನವಾದ ಗ್ರಂಥ ಜಗತ್ತಿನಲ್ಲಿ ಯಾವ ಭಾಷೆಯಲ್ಲಿ ಎಲ್ಲಿಯೂ ಕಾಣಸಿಗುವುದಿಲ್ಲ. ಇವೆಲ್ಲ ವಿವರಣೆಗಿಂತಲೂ ಅದರ ದೈವಿಕತೆ ಅರ್ಥವಾಗಲು ಅದರ ವಾಚನ ಅಧ್ಯಯನ ಮಾಡಿ ಅನುಭವಿಸಿ ಅರಿಯಬಹುದಾಗಿದೆ.

  ಪವಿತ್ರ ಕುರ್‍ಆನ್ ದೈವಿಕ ಎನ್ನಲು ಅದರಲ್ಲಿಯೇ ಇರುವ ಪುರಾವೆಗಳನ್ನು ಹೇಗೆ ಸ್ವೀಕರಿಸಬಹುದು? ಎಂಬ ಪ್ರಶ್ನೆ ಅಪ್ರಸ್ತುತವಾಗಿದೆ. ಯಾಕೆಂದರೆ ಚಿನ್ನದ ಬಳೆ ಚಿನ್ನದಿಂದ ಮಾಡಿದ್ದೆಂಬುದಕ್ಕೆ ಆ ಬಳೆಯೇ ಪುರಾವೆಯಾಗಿದೆ. ಮಾವು ಮಾವು ಆಗಿದೆಯೆನ್ನಲು ಆ ವೃಕ್ಷವೇ ಪುರಾವೆಯಾಗುವುದು ತಾನೆ. ವಿಶ್ವಚರಿತ್ರಾಲೋಕಂ ನೆಹ್ರೂರದ್ದೆನ್ನಲು ಆ ಗ್ರಂಥವೇ ಪ್ರಬಲ ಪುರಾವೆಯಾಗುವುದು. ಇದೇ ರೀತಿ ಪವಿತ್ರ ಕುರ್‍ಆನ್ ದೈವಿಕ ಎನ್ನಲು ಹೆಚ್ಚು ಪ್ರಬಲ ಮತ್ತು ಅನಿಷೇಧ್ಯ ಪುರಾವೆ ಆ ಗ್ರಂಥವೇ ಆಗಿದೆ.

 • ಹಸಿರು ಬಣ್ಣದೊಂದಿಗೆ ಇಸ್ಲಾಮಿನ ನಂಟಿದೆಯೇ?
  ismika03-11-2015

  ಪ್ರಶ್ನೆ: ಮುಸ್ಲಿಮರು ಹಸಿರು ಟೊಪ್ಪಿ, ಹಸಿರು ಪೇಟ ಮತ್ತು ಹಸಿರು ಧ್ವಜ ಬಳಸುತ್ತಾರೆ. ಮಸೀದಿಗಳಿಗೂ ಹಸಿರು ಬಣ್ಣ ಬಳಿಯುತ್ತಾರೆ. ಇದು ಮುಸ್ಲಿಮರ ಲಾಂಛನವೇ ಅಥವಾ ಇವುಗಳಿಗೆ ಶರೀಅತ್‍ನಲ್ಲಿ ಅಥವಾ ಪ್ರವಾದಿ ಚರ್ಯೆಯಲ್ಲಿ ಏನಾದರೂ ಮಹತ್ವವಿದೆಯೇ?

  ಉತ್ತರ: ಇಸ್ಲಾಮ್ ಧರ್ಮದ ದೃಷ್ಟಿಯಲ್ಲಿ ಎಲ್ಲ ಬಣ್ಣಗಳಂತೆಯೇ ಹಸಿರೂ ಒಂದು ಬಣ್ಣ. ಅದಕ್ಕಿಂತ ಹೆಚ್ಚಿನ ಮಹತ್ವವೇನೂ ಅದಕ್ಕಿಲ್ಲ. ಪ್ರವಾದಿ ಮುಹಮ್ಮದ್(ಸ) ಬಿಳಿ ಬಣ್ಣವನ್ನು ಇಷ್ಟಪಡುತ್ತಿದ್ದರು. ಹೆಚ್ಚಾಗಿ ಬಿಳಿ ವಸ್ತ್ರಗಳನ್ನೇ ಧರಿಸುತ್ತಿದ್ದರು. ತಮ್ಮ ಅನುಯಾಯಿಗಳಿಗೂ ಅದನ್ನು ಬಯಸುತ್ತಿದ್ದರು. ಯಾವುದೇ ಬಣ್ಣವನ್ನು ಕಡ್ಡಾಯಗೊಳಿಸಿದ ಚರಿತ್ರೆಯಿಲ್ಲ. ಸ್ವತಃ ಪ್ರವಾದಿಯವರೇ ಮಕ್ಕಾ ವಿಜಯದಂದು ಕಪ್ಪು ನಿಲುವಂಗಿ ಧರಿಸಿದ್ದರೆಂದು ಸೀರತ್ ಗ್ರಂಥಗಳಲ್ಲಿದೆ. ಒಂದು ವೇಳೆ ಹಸಿರು ಬಣ್ಣಕ್ಕೆ ಅಂತಹ ಮಹತ್ವವೇನಾದರೂ ಇದ್ದಿದ್ದರೆ ಕಅಬಾ ಭವನದ ಮೇಲು ಹೊದಿಕೆ ಕೂಡ ಹಸಿರು ಬಣ್ಣದ ಬಟ್ಟೆ ಉಪಯೋಗಿಸುತ್ತಿದ್ದರು.
  ಹಸಿರು ಬಣ್ಣ ವಾಸ್ತವದಲ್ಲಿ ಕಣ್ಣಿಗೆ ತಂಪು ಮಾಡುವ ಬಣ್ಣವಾಗಿದೆ. ನೀಲಿ ಬಣ್ಣವೂ ಅಷ್ಟೇ. ಇದೇ ಆಕಾಶವು ನೀಲ ವರ್ಣದ್ದಾಗಿರುವುದು, ಗಿಡಮರಗಳೆಲ್ಲ ಹಸಿರು ಬಣ್ಣದ್ದಾಗಿರುವುದನ್ನು ನಾವು ಕಾಣುತ್ತೇವೆ. ಇತರ ಬಣ್ಣಗಳಲ್ಲೂ ಕಡು ಬಣ್ಣವನ್ನು ಪ್ರವಾದಿ(ಸ) ಮೆಚ್ಚುತ್ತಿರಲಿಲ್ಲ. ಓರ್ವ ಸಹಾಬಿ ಅಚ್ಚ ಹಳದಿ ಬಣ್ಣದ ಅಂಗಿ ಧರಿಸಿ ಬಂದಿದ್ದಾಗ, ಅಂತಹ ಕಣ್ಣಿಗೆ ಕುಕ್ಕುವಂತಹ ಬಣ್ಣದ ಬಟ್ಟೆ ಧರಿಸಬಾರದೆಂದು ಹೇಳಿದರು.
  ಸಾಮಾನ್ಯವಾಗಿ ಸೂಫಿ ವೇಷಧಾರಿಗಳು ಹಸಿರು ಬಣ್ಣದ ಬಟ್ಟೆ ಧರಿಸುವುದಿದೆ. ಅವರು ಹಸಿರು ಕಂಬಳಿಯನ್ನು ಹೆಗಲಿಗೆ ಹಾಕಿರುವುದು ಅಥವಾ ಹೊದ್ದು ಕೊಂಡಿರುವುದನ್ನು ಕಾಣಬಹುದು. ದೇವಭಕ್ತಿಗೂ ವಸ್ತ್ರದ ಬಣ್ಣಕ್ಕೂ ಯಾವುದೇ ಸಂಬಂಧವಿಲ್ಲ. ದೇವಭಕ್ತರ ಸೋಗು ಹಾಕಿ ಜನರನ್ನು ವಂಚಿಸುವುದೇ ಸೂಫಿ ವೇಷಧಾರಿಗಳ ಉದ್ದೇಶವಾಗಿದೆ. ಹಸಿರು ಬಣ್ಣದ ಪರಂಪರೆಯು ಪರ್ಶಿಯಾದ ಶಿಯಾಗಳಿಂದ ಆರಂಭವಾಯಿತು.
  ಧ್ವಜದಲ್ಲೂ ಅಂತಹ ಮಹತ್ವವೇನೂ ಇಲ್ಲ. ಮಕ್ಕಾ ವಿಜಯದಂದು ಬಿಳಿಯ ಧ್ವಜ ಹಾರಾಡುತ್ತಿತ್ತೆಂದು ಚರಿತ್ರೆಯಲ್ಲಿದೆ.

 • ಪೆನ್ಶನ್ ಪಡೆಯಬಹುದೇ?
  ismika03-11-2015

  ಪ್ರಶ್ನೆ: ಸರಕಾರಿ ನೌಕರಿಯಿಂದ ನಿವೃತ್ತಿ ಹೊಂದಿದಾಗ ದೊರೆಯುವ ಪೆನ್ಶನ್ ಪಡೆಯುವುದರ ಬಗ್ಗೆ ಇಸ್ಲಾಮಿನ ನಿಲುವೇನು? ಅದನ್ನು ಪಡೆಯಬಹುದೇ?

  ಉತ್ತರ: ಜನರ ಕೆಲಸ ಮಾಡಲಿಕ್ಕಿರುವ ಸಾಮಥ್ರ್ಯವು ಕೊನೆಗೊಂಡಿದೆ ಎಂಬ ಘಟ್ಟದಲ್ಲಿ ಸರಕಾರ ಅಥವಾ ಸಂಸ್ಥೆಗಳು ಅವರ ನೌಕರರಿಗೆ ನಿವೃತ್ತಿ ನೀಡುತ್ತದೆ. ಓರ್ವನು ಆರೋಗ್ಯ ಹಾಗೂ ಸಾಮಥ್ರ್ಯಗಳೆಲ್ಲವನ್ನೂ ಚುರುಕಾಗಿರುವ ಸಮಯದಲ್ಲಿ ಅದನ್ನು ಉಪಯೋಗಿಸಿದವರು ಆತ ದುರ್ಬಲನಾದಾಗ ಅವನ ಸಂರಕ್ಷಣೆಗಾಗಿ ವ್ಯವಸ್ಥೆ ಮಾಡುವುದು ಅತ್ಯಂತ ಮಾನವೀಯವೂ ಧಾರ್ಮಿಕವೂ ಆದ ಬಾಧ್ಯತೆಯಾಗಿದೆ. ಓರ್ವನು ತನ್ನ ಆರೋಗ್ಯವನ್ನೂ ಆಯುಸ್ಸನ್ನೂ ಯಾರಿಗಾಗಿ ಉಪಯೋಗಿಸಿದನೋ ಅನಾರೋಗ್ಯ ಕಾಲದಲ್ಲಿ ಅವರಿಂದ ಸಂರಕ್ಷಣೆ ಪಡೆಯಲು ಆತನಿಗೆ ಅರ್ಹತೆ ಇದೆ. ಈ ಅರ್ಹತೆ ಅಥವಾ ಸೌಜನ್ಯಕ್ಕೆ ಇಸ್ಲಾಮ್ ವಿರುದ್ಧವಲ್ಲ. ಇಸ್ಲಾಮೀ ಸರಕಾರದ ಪ್ರಕಾರ, ಅದರ ಪ್ರಜೆಗಳ ಪೈಕಿ ದುರ್ಬಲ ವಾಗುವವರಿಗೆ ಅವರು ಸರಕಾರಿ ನೌಕರರಲ್ಲದಿದ್ದರೂ ಬದುಕಲು ಅಗತ್ಯವಾದ ಪೆನ್ಶನ್ ನೀಡಲು ಅದಕ್ಕೆ ಬಾಧ್ಯತೆ ಇದೆ.
  ಮಾತ್ರವಲ್ಲ, ನಿಶ್ಚಿತ ಅವಧಿಯವರೆಗೆ ಸರಕಾರ ಅಥವಾ ಸಂಸ್ಥೆಗಳಿಗಾಗಿ ಮಡಿದವರಿಗೆ ಪೆನ್ಶನ್ ನೀಡಬೇಕು ಎಂಬುದು ಆ ಸರಕಾರ ಅಥವಾ ಸಂಸ್ಥೆ ಅಂಗೀಕರಿಸಿದ ಸರ್ವೀಸ್ ನಿಯಮವಾಗಿದ್ದರೆ ಅದು ದೊರೆಯುತ್ತದೆ ಎಂಬ ನೆಮ್ಮದಿಯೊಂದಿಗೆ ಕೆಲಸಕ್ಕೆ ಸೇರಿ ನಿವೃತ್ತಿಯವರೆಗೆ ದುಡಿಯುತ್ತಾರೆ. ಆದ್ದರಿಂದ ಅದು ನೌಕರರ ಹಕ್ಕು ಹಾಗೂ ಸಂಬಂಧಪಟ್ಟ ಸಂಸ್ಥೆಗಳ ಬಾಧ್ಯತೆಯಾಗಿದೆ. ಆಗ ಅದಕ್ಕೆ ತೆಗೆದಿರಿಸಲಾದ ವೇತನದ ಸ್ಥಾನವಿದೆ.

 • ಕರ್ಮಗಳ ವಿಚಾರಣೆ ಎಲ್ಲಿ?
  ismika01-01-2016

  ಪ್ರಶ್ನೆ: ಒಬ್ಬ ಮನುಷ್ಯ ಸತ್ತ ನಂತರ ಅವನ ಕರ್ಮಗಳ ವಿಚಾರಣೆ ಗೋರಿಯಲ್ಲಿಯೇ ಮಾಡಲಾಗುತ್ತದೆಯೆ ಅಥವಾ ನಿರ್ಣಾಯಕ ದಿನದಂದು ಮಾಡಲಾಗುತ್ತದೆಯೇ? ಕುರ್‍ಆನ್ ಮತ್ತು ಹದೀಸ್‍ಗಳ ಪ್ರಕಾರ ಇದು ಅಂತ್ಯ ದಿನದಂದು ನಡೆಯುತ್ತದೆಂದಾದರೆ ಗೋರಿಯ ಶಿಕ್ಷೆ ಅರ್ಥಶೂನ್ಯವಲ್ಲವೇ?

  ಉತ್ತರ: ಮನುಷ್ಯನ ಕರ್ಮಗಳ ಅಂತಿಮ ವಿಚಾರಣೆ ಅಂತ್ಯದಿನದಲ್ಲೇ ನಡೆಯುತ್ತದೆ. “ಪವಿತ್ರ ಕುರ್‍ಆನ್ ಹೀಗೆ ಹೇಳು ತ್ತದೆ- ಹೃದಯಗಳೊಳಗೆ (ಅಡಗಿ) ಇರುವ ಎಲ್ಲವನ್ನೂ ಹೊರ ತೆಗೆದು ವಿಚಾರಣೆಗೊಳಪಡಿಸಲಾಗುವ ಆ ಸಂದರ್ಭವನ್ನು ಆತನು ಅರಿತಿಲ್ಲವೇ?” (100: 10) “ಅಂದು ಯಾವ ರಹಸ್ಯವನ್ನೂ ಪರಿಶೀಲಿಸದೆ ಬಿಡುವುದಿಲ್ಲ. ಅಡಗಿರುವ ರಹಸ್ಯಗಳ ವಿಚಾರಣೆ ನಡೆಯಲಿರುವ ಆ ದಿನ.” (86: 6)
  ಆದರೆ ಒಬ್ಬ ಮನುಷ್ಯನು ಕೆಟ್ಟವನೋ, ಒಳ್ಳೆಯನೋ, ಕೆಟ್ಟವನಾದರೆ ಅವನೊಂದಿಗೆ ಹೇಗೆ ವರ್ತಿಸಲಾಗುತ್ತದೆ ಮತ್ತು ಒಳ್ಳೆಯವನಾದರೆ ಹೇಗೆ ವರ್ತಿಸಲಾಗುತ್ತದೆ ಎಂಬುದು ಅವನ ಮರಣದ ವೇಳೆಯೇ ವ್ಯಕ್ತವಾಗುತ್ತದೆ. ಸಾಯುವವನು ಸಜ್ಜನನಾಗಿದ್ದರೆ ಅವನ ಪ್ರಾಣ ತೆಗೆಯುವ ದೇವಚರರು, ಅವನ ಬಳಿಗೆ ಬಂದಾಗ, “ನಿಮ್ಮ ಮೇಲೆ ಶಾಂತಿಯಿರಲಿ. ನಿಮ್ಮ ಕರ್ಮದ ಫಲವಾಗಿ ಸ್ವರ್ಗದೊಳಗೆ ಪ್ರವೇಶಿಸಿರಿ” (16: 32) ಎಂದು ಹೇಳುವರು. ಇನ್ನೊಂದು ಕಡೆ ಕುರ್‍ಆನ್‍ನಲ್ಲಿ ಹೀಗೆ ಹೇಳಲಾಗಿದೆ: ಓ ಶಾಂತಚಿತ್ತವೇ! ನೀನು ಸಂತುಷ್ಟನೂ (ನಿನ್ನ ಪ್ರಭುವಿನ) ಮೆಚ್ಚುಗೆಗೆ ಪಾತ್ರನೂ ಆಗಿರುವ ಸ್ಥಿತಿಯಲ್ಲಿ ನಿನ್ನ ಪ್ರಭುವಿನ ಬಳಿಗೆ ನಡೆ. ನನ್ನ (ಸಜ್ಜನ) ದಾಸರೊಂದಿಗೆ ಸೇರಿಕೋ ಮತ್ತು ನನ್ನ ಸ್ವರ್ಗದೊಳಗೆ ಪ್ರವೇಶಿಸು. (89: 28-29)
  ಈ ರೀತಿ ಅವರು ನೆಮ್ಮದಿಯಿಂದ ಪ್ರಾಣ ಬಿಡುತ್ತಾರೆ. ಅವರ ಪ್ರಾಣಗಳು ಹೂಜಿಯಿಂದ ನೀರು ತೊಟ್ಟಿಕ್ಕುವ ರೂಪದಲ್ಲಿ ಸುಲಭವಾಗಿ ದೇಹದಿಂದ ಬೇರ್ಪಡುವುದೆಂದು ಪ್ರವಾದಿಯವರು(ಸ) ಹೇಳಿದ್ದಾರೆ.
  ಇನ್ನು ಸಾಯುವವನು ಕೆಟ್ಟವನಾದರೆ ದೇವಚರರನ್ನು ನೋಡಿದಾಗ ಅವನ ಆತ್ಮವು ಗಾಬರಿಗೊಂಡು ಅವನ ದೇಹಕ್ಕೆ ಅಂಟಿಕೊಳ್ಳಲು ಪ್ರಯತ್ನಿಸುತ್ತದೆ ಎಂದು ಪ್ರವಾದಿಯವರು(ಸ) ಹೇಳಿದ್ದಾರೆ. ಆಗ ಅವನ ಆತ್ಮವು ಹೀಗೆ ಮೊರೆಯಿಡುವುದು- “ಪ್ರಭೂ! ನಾನು ಬಿಟ್ಟು ಬಂದ ಆ ಲೋಕಕ್ಕೆ ನನ್ನನ್ನು ಪುನಃ ಕಳಿಸು. ನಾನು ಸತ್ಕರ್ಮಗಳನ್ನೇ ಮಾಡುತ್ತೇನೆ.” (ಅಲ್ ಮೂಮಿನೂನ್: 99-100)
  ದೇವಚರರು (ಹತರಾದ) ಸತ್ಯ ನಿಷೇಧಿಗಳ ಪ್ರಾಣಹರಣ ಮಾಡುತ್ತಿದ್ದಾಗಿನ ಸ್ಥಿತಿಯನ್ನು ನೀವು ನೋಡುತ್ತಿದ್ದರೆ! ಅವರು ಅವರ ಮುಖಗಳ ಹಾಗೂ ಸೊಂಟಗಳ ಮೇಲೆ ಪ್ರಹಾರ ಗಳನ್ನೆಸಗುತ್ತ, “ಇದೋ ಈಗ ಸುಡುವ ಶಿಕ್ಷೆಯನ್ನು ಸವಿಯಿರಿ. ನಿಮ್ಮ ಸ್ವಹಸ್ತಗಳು ಈ ಮುಂಚೆ ಸಿದ್ಧಗೊಳಿಸಿಟ್ಟಿದ್ದ ಸಾಧನಗಳ ಪ್ರತಿಫಲವಿದು. ಅನ್ಯಥಾ ಅಲ್ಲಾಹನು ತನ್ನ ದಾಸರ ಮೇಲೆ ಅಕ್ರಮವೆಸಗುವವನಲ್ಲ” ಎಂದು ಹೇಳುತ್ತಲಿದ್ದರು. (ಅಲ್ ಅನ್‍ಫಾಲ್: 50-51)
  ಇನ್ನು ಗೋರಿಯ ವಿಚಾರಣೆಯ ವಿಷಯ. ಸತ್ತ ನಂತರ ಮಾನವನನ್ನು ಸಮಾಧಿ ಮಾಡಲಾಗುತ್ತದೆ. ಸತ್ತಂದಿನಿಂದ ಅಂತ್ಯ ದಿನದ ವರೆಗಿರುವ ಕಾಲಾವಧಿಗೆ ಬರ್ಝಕ್ ಎಂದು ಹೆಸರು. “ಅವರ ಹಿಂದೆ ಅವರನ್ನು ಪುನಃ ಜೀವಂತಗೊಳಿಸಲಾಗುವ ವರೆಗಿನ ಬರ್ಝಕ್ (ಮಧ್ಯ ಕಾಲಾವಧಿ) ಇದೆ.” (ಅಲ್ ಮೂಮಿನೂನ್: 100)
  ಗೋರಿಯಲ್ಲಿ ಹುಗಿದವರನ್ನು ಮಾತ್ರವಲ್ಲ ಇತರ ಯಾವುದೇ ವಿಧದಲ್ಲಿದ್ದರೂ ಅವರನ್ನು ಸತ್ತ ಬಳಿಕ ಒಮ್ಮೆ ಜೀವಂತಗೊಳಿಸಲಾಗುವುದು. ತರುವಾಯ ಅವರಿಂದ ಕೆಲವು ಸಂಕ್ಷಿಪ್ತ ಪ್ರಶ್ನೆಗಳಿಗೆ ಉತ್ತರ ಪಡೆಯಲಾಗುವುದು. ಇದು ವಾಸ್ತವದಲ್ಲಿ ಅಂತಿಮ ವಿಚಾರಣೆಯಲ್ಲ. ಆರಕ್ಷಕ ಠಾಣೆಯಲ್ಲಿ ಅಪರಾಧ ಸಾಬೀತಾಗುವುದಕ್ಕಿಂತ ಮುಂಚೆ ವಿಚಾರಣೆ ನಡೆಸುವ ರೀತಿಯಲ್ಲಿ ಅವರನ್ನು ವಿಚಾರಿಸಲಾಗುವುದು. ಆಗ ಸಾಮಾನ್ಯವಾಗಿ ಆರಕ್ಷಕರಿಗೂ ವಿಚಾರಣೆಗೊಳಗಾಗಿರುವ ವ್ಯಕ್ತಿ ಅಪರಾಧಿಯೋ ಅಲ್ಲವೋ ಎಂದು ತಿಳಿಯುತ್ತದೆ. ಅಂತೆಯೇ ಅವರು ನ್ಯಾಯಾಲಯಕ್ಕೆ F.I.R ಸಲ್ಲಿಸುತ್ತಾರಷ್ಟೆ. ದೇವಚರರು ಕೇಳುವ ಪ್ರಶ್ನೆಗಳಿಗೆ ಸಜ್ಜನರು ಒಂದು ರೀತಿಯಲ್ಲಿ ಅಂದರೆ ಸಮಾಧಾನಕರವಾಗಿ- ಉತ್ತರಿಸಿದರೆ ದುಷ್ಟರು ಇನ್ನೊಂದು ರೀತಿಯಲ್ಲಿ ಉತ್ತರಿಸುವರು. ಇದರ ಪ್ರಕಾರ ಅವರೊಂದಿಗೆ ಅಲ್ಲಿ ವ್ಯವಹರಿಸಲಾಗುವುದು. ಸಮಾಧಿಯಲ್ಲಿ ಪ್ರಶ್ನೋತ್ತರದ ಬಳಿಕ ಅವರು ಸಜ್ಜನರಾಗಿದ್ದರೆ ಅವರೊಂದಿಗೆ “ಮದುಮಗ ನಿದ್ರಿಸಿದಂತೆ ಸುಖವಾಗಿ ನಿದ್ರಿಸು” ಎಂದು ಹೇಳಲಾಗುವುದು. (ತಿರ್ಮಿದಿ)
  ಅವನು ದುರ್ಜನನಾಗಿದ್ದರೆ ಅವನಿಗಾಗಿ ಬೆಂಕಿಯ ಹಾಸನ್ನು ಹಾಕಿ ಅದರಲ್ಲಿ ಮಲಗಲು ಆದೇಶಿಸಲಾಗುವುದು. ಅವನು ಅಲ್ಲಿಯೇ ಭಯಾವಸ್ಥೆಯಲ್ಲಿ ಬಿದ್ದುಕೊಂಡಿರುವನು ಎಂದು ಪ್ರವಾದಿಯವರು(ಸ) ಹೇಳಿದ್ದಾರೆ.
  ಆದುದರಿಂದ ಮರಣದ ವೇಳೆ ಆಗುವ ಸ್ಥಿತಿ, ಗೋರಿಯ ವಿಚಾರಣೆ, ಅಂತಿಮ ದಿನದ ಕೊನೆಯ ವಿಚಾರಣೆಗಳು ಒಂದಕ್ಕೊಂದು ಪೂರಕವಾಗಿವೆಯೇ ಹೊರತು ಅದರಲ್ಲಿ ವಿರೋಧಾ ಭಾಸವೇನೂ ಇಲ್ಲವೆಂದು ಪ್ರಸ್ತುತ ಆಯತ್-ಹದೀಸ್‍ಗಳಿಂದ ವ್ಯಕ್ತವಾಗುತ್ತದೆ.

 • ಹಾಲಿನ ಋಣ?
  ismika19-01-2016

  ಪ್ರಶ್ನೆ: ಇಸ್ಲಾಮ್‍ನಲ್ಲಿ ತಾಯಿಗೆ ಹಾಲಿನ ಋಣ (ದೂದ್ ಬಕ್ಕ್) ತೀರಿಸುವ ಪದ್ಧತಿ ಇದೆಯೇ? ಇದ್ದರೆ ಹೇಗೆ ತೀರಿಸಬೇಕು? ಇಲ್ಲದಿದ್ದರೆ ಮನೆಯವರಿಗೆ ಹೇಗೆ ತಿಳಿಸಬೇಕು? ತಿಳಿಸಿ.

  ಉತ್ತರ: ತಾಯಿಯ ಹಾಲಿನ ಋಣ ತೀರಿಸುವ ಪದ್ಧತಿಯೆಂಬುದು ಇಸ್ಲಾಮಿನಲ್ಲಿಲ್ಲ. ಇಸ್ಲಾಮಿನಲ್ಲಿ ತಂದೆ-ತಾಯಿಗಳೊಂದಿಗೆ ಅತ್ಯುತ್ತಮವಾಗಿ ವರ್ತಿ ಸಲು ಮತ್ತು ಅವರನ್ನು ಅನುಸರಿಸಲು ತಾಕೀತು ಮಾಡಲಾಗಿದೆ. ತಂದೆ-ತಾಯಿಗಳ ಸೇವೆಯು ಅತ್ಯಂತ ಪುಣ್ಯದಾಯಕವಾಗಿದೆ. ಅದು ನಿಮ್ಮ ಮೇಲಿರುವ ಅವರ ಹಕ್ಕಾಗಿದೆ. ಅದನ್ನು ಪೂರೈಸುವುದು ನಿಮ್ಮ ಕರ್ತವ್ಯ. ಅದರಲ್ಲೂ ತಾಯಿಯ ಹಕ್ಕು ತಂದೆಗಿಂತ ಮೂರು ಪಟ್ಟು ಅಧಿಕವಾಗಿದೆ. ತಾಯಿಯು ದೈಹಿಕವಾಗಿಯೂ, ಮಾನಸಿಕವಾಗಿಯೂ ದುರ್ಬಲಳಾಗಿರುತ್ತಾಳೆ. ಅವಳ ಗರ್ಭಧಾರಣೆ ಮತ್ತು ಹೆರಿಗೆಯ ಸಂಕಷ್ಟ ಹೇಳ ತೀರದು. ಪವಿತ್ರ ಕುರ್‍ಆನ್ ಅವಳ ಸ್ಥಿತಿಯನ್ನು ಚೆನ್ನಾಗಿ ವಿವರಿಸಿದೆ. "ತನ್ನ ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಬೇಕೆಂದು ನಾವು ಮಾನವನಿಗೆ ಆದೇಶಿಸಿದೆವು. ಅವನ ತಾಯಿಯು ಬಹಳ ಕಷ್ಟಪಟ್ಟು ಅವನನ್ನು ಗರ್ಭದಲ್ಲಿರಿಸಿದ್ದಳು ಮತ್ತು ಕಷ್ಟಪಟ್ಟೇ ಅವನನ್ನು ಹೆತ್ತಳು. ಅವನ ಗರ್ಭಾವಧಿಯಲ್ಲಿ ಮತ್ತು ಮೊಲೆ ಹಾಲು ಬಿಡಿಸುವುದರಲ್ಲಿ ಮೂವತ್ತು ತಿಂಗಳು ಕಳೆದುವು." (ಅಹ್‍ಕಾಫ್:15)
  ತಾಯಿಯ ಋಣವು ಅತ್ಯಂತ ಹಿರಿದಾದುದು. ಒಮ್ಮೆ ಓರ್ವ ವ್ಯಕ್ತಿ ಪ್ರವಾದಿಯವರ(ಸ) ಬಳಿಗೆ ಬಂದು ನನ್ನ ಸದ್ವರ್ತನೆಗೆ ಹೆಚ್ಚು ಅರ್ಹರು ಯಾರು ಎಂದು ಕೇಳಿದ. ಪ್ರವಾದಿ(ಸ) ಹೇಳಿದರು- ನಿನ್ನ ತಾಯಿ. ಆತ ಪುನಃ, ಅನಂತರ ಯಾರು ಎಂದು ಕೇಳಿದಾಗ ನಿನ್ನ ತಾಯಿಯೆಂದೇ ಉತ್ತರಿಸಿದರು. ಆತ ಮೂರನೇ ಬಾರಿ ಅದೇ ಪ್ರಶ್ನೆಯನ್ನು ಹಾಕಿದಾಗ ನಿನ್ನ ತಾಯಿಯೆಂದೇ ಪ್ರವಾದಿ(ಸ) ಉತ್ತರಿಸಿದರು. ಆ ಬಳಿಕ ಯಾರೆಂದು ಆತ ಪ್ರಶ್ನಿಸಿದಾಗ ನಿನ್ನ ತಂದೆ ಎಂದು ಪ್ರವಾದಿ(ಸ) ಉತ್ತರಿಸಿದರು. (ಅದಬುಲ್ ಮುಫ್ರದ್) ತಾಯಿಯ ಹಕ್ಕು ತಂದೆಗಿಂತ ಮೂರು ಪಟ್ಟು ಹೆಚ್ಚೆಂದು ಇದರಿಂದ ತಿಳಿಯಬಹುದು.
  ತಂದೆ ತಾಯಿಯೊಂದಿಗೆ ಸೌಜನ್ಯದಿಂದ ವರ್ತಿಸುವುದು, ಅವರ ಆಜ್ಞೆ ಆದೇಶಗಳನ್ನು ಪಾಲಿಸುವುದು, ಅವರಿಗೆ ಎದುರಾಡದಿರುವುದು, ಅವರ ಮನನೋಯಿಸದಿರುವುದು ಹಾಗೂ ಅವರಿಗಾಗಿ ಪ್ರಾರ್ಥಿಸುವುದೇ ಅವರ ಪಾಲನೆ ಪೋಷಣೆಯ ಋಣ ಸಂದಾಯವಾಗಿದೆ. ಅದಕ್ಕೆ ಯಾವುದೇ ರೂಢಿ-ಸಂಪ್ರದಾಯಗಳಿಲ್ಲ. ಪವಿತ್ರ ಕುರ್‍ಆನ್ ಹೇಳುತ್ತದೆ- ನಿಮ್ಮ ಪ್ರಭು ಹೀಗೆ ವಿಧಿಸಿದ್ದಾನೆ, ನೀವು ಕೇವಲ ಅವನೊಬ್ಬನ ಹೊರತು ಇನ್ನಾರ ದಾಸ್ಯ-ಆರಾಧನೆಯನ್ನು ಮಾಡಬಾರದು. ಮಾತಾಪಿತರೊಂದಿಗೆ ಸೌಜನ್ಯದಿಂದ ವರ್ತಿಸಿರಿ. ಅವರ ಪೈಕಿ ಒಬ್ಬರು ಅಥವಾ ಅವರಿಬ್ಬರೂ ವೃದ್ಧರಾಗಿ ನಿಮ್ಮ ಬಳಿಯಲ್ಲಿದ್ದರೆ, ಅವರ ಬಗ್ಗೆ ಚಕಾರವೆತ್ತಬೇಡಿರಿ. (ಅಂದರೆ ಅವರೊಡನೆ `ಛೆ' ಎಂದೂ ಹೇಳದಿರಿ) ಅವರೊಂದಿಗೆ ಗೌರವ ಪೂರ್ಣವಾಗಿ ಮಾತಾಡಿರಿ. ನಯ-ವಿನಯ ಮತ್ತು ಕರುಣೆಯೊಂದಿಗೆ ಅವರ ಮುಂದೆ ಬಾಗಿರಿ ಮತ್ತು ಅವರಿಗಾಗಿ ಹೀಗೆ ಪ್ರಾರ್ಥಿಸಿರಿ "ರಬ್ಬಿರ್‍ಹಮ್ಹುಮಾ ಕಮಾ ರಬ್ಬಯಾನೀ ಸಗೀರಾ" (ಓ ನನ್ನ ಪ್ರಭು! ಇವರು ನನ್ನನ್ನು ಚಿಕ್ಕಂದಿನಲ್ಲಿ ದಯೆ-ವಾತ್ಸಲ್ಯಗಳಿಂದ ಸಾಕಿದಂತೆಯೇ ನೀನೂ ಅವರ ಮೇಲೆ ಕೃಪೆ ತೋರು). (ಬನೀ ಇಸ್ರಾಈಲ್: 23-24)
  ತಾಯಿಯ ಎಷ್ಟೇ ಸೇವೆ ಮಾಡಿದರೂ ಅವರ ಋಣ ಸಂದಾಯವಾಗುವುದಿಲ್ಲ. "ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯವರ ಬಳಿ ಬಂದು ನಾನು ನನ್ನ ವೃದ್ಧ ತಾಯಿಯನ್ನು ಹೊತ್ತುಕೊಂಡು ಕಾಲ್ನಡಿಗೆಯಲ್ಲಿ ಹಜ್ಜ್ ಕರ್ಮ ನಿರ್ವಹಿಸಿ ಬಂದೆ. ಅದರಿಂದ ತಾಯಿಯ ಋಣ ಸಂದಾಯವಾಯಿತೇ ಎಂದು ಕೇಳಿದರು. ಪ್ರವಾದಿ(ಸ) ಹೇಳಿದರು- ಅದರಿಂದ ನಿನ್ನ ತಾಯಿಯು
  ನಿನ್ನನ್ನು ಹೆರುವಾಗ ನೋವಿನಿಂದ ಚೀರಿದ್ದ, ಆ ನೋವಿನ ಋಣ ಸಂದಾಯವೂ ಆಗಲಿಲ್ಲ.

 • ಆಸ್ತಿಯ ಪಾಲು?
  ismika19-01-2016

  ಪ್ರಶ್ನೆ: ನನ್ನ ತಾಯಿ ತೀರಿ ಹೋಗಿ ಸುಮಾರು 15 ವರ್ಷಗಳಾಗಿವೆ. ತಂದೆ ಜೀವಂತ ಇದ್ದಾರೆ. ನಾನೂ ಸೇರಿ ನಾವು ನಾಲ್ಕು ಮಕ್ಕಳು. ನಾನೊಬ್ಬನೇ ಗಂಡು. ಹೆಣ್ಣು ಮಕ್ಕಳು ಮೂವರಿಗೂ ಮದುವೆ ಆಗಿದೆ. ಆದರೆ ಅವರಲ್ಲಿ ಒಬ್ಬಳು ವಿಚ್ಛೇದಿತೆಯಾಗಿದ್ದಾಳೆ. ನಮ್ಮ ತಂದೆ ಬೇರೆ ಮದುವೆಯಾಗಿದ್ದಾರೆ. ನನ್ನ ತಾಯಿಯ ಒಬ್ಬ ಸಹೋದರ ಮತ್ತು ಓರ್ವ ಸಹೋದರಿ ಇದ್ದಾರೆ. ನನಗೆ ಮದುವೆ ಆಗಿದೆ. ನಮ್ಮ ತಾಯಿಯ ಕೆಲವು ಚಿನ್ನಾಭರಣಗಳಿವೆ. ಅದನ್ನು ಶರೀಅತ್ ಪ್ರಕಾರ ಹೇಗೆ ಹಂಚಬೇಕು. ತಿಳಿಸಿ.?

  ಉತ್ತರ: ಪುರುಷರಾಗಲಿ, ಸ್ತ್ರೀಯರಾಗಲಿ ಮರಣ ಹೊಂದಿದರೆ ಅವರ ಒಟ್ಟು ಸೊತ್ತನ್ನು ಶರೀಅತ್ ಪ್ರಕಾರ ಅತಿ ಹತ್ತಿರದ ಸಂಬಂಧಿಕರಲ್ಲಿ ಹಂಚುವುದು ಅಗತ್ಯ. ನಿಮ್ಮ ತಾಯಿಗೆ ಚಿನ್ನಾಭರಣವಲ್ಲದೆ ಬೇರೇನಾದರೂ ವಸ್ತು ಇದ್ದರೆ ಅದನ್ನೂ ಒಟ್ಟು ಸೊತ್ತಿನಲ್ಲಿ ಸೇರಿಸಬೇಕು. ಅನಂತರ ಈ ಕೆಳಗಿನಂತೆ ಅದನ್ನು ಪಾಲು ಮಾಡಿ ಹಂಚಬೇಕು.
  ನಿಮ್ಮ ತಂದೆಗೆ ನಾಲ್ಕನೇ ಒಂದು ಉಳಿದ ನಾಲ್ಕನೇ ಮೂರು ಭಾಗ ಸೊತ್ತು ನಿಮಗೂ ನಿಮ್ಮ ಸಹೋದರಿಯರಿಗೂ 2:1ರ ಲೆಕ್ಕದಲ್ಲಿ ಸಿಗುತ್ತದೆ. ಮಕ್ಕಳಿರುವಾಗ ಸಹೋದರ
  ಸಹೋದರಿಯರಿಗೆ ಯಾವುದೇ ಪಾಲಿರುವುದಿಲ್ಲ. ಅಂದರೆ ನಿಮ್ಮ ತಾಯಿಯ ಸಹೋದರ ಮತ್ತು ಸಹೋದರಿಗೆ ಯಾವುದೇ ಪಾಲಿಲ್ಲ. ಇದನ್ನು ಈ ರೀತಿ ಗ್ರಹಿಸಬಹುದು.
  ಒಟ್ಟು ಸೊತ್ತಿನ ಶೇಕಡಾ 25 ತಂದೆಗೆ ಸಿಗುತ್ತದೆ. ಉಳಿದ ಶೇಕಡಾ 75ನ್ನು 5 ಪಾಲುಗಳಾಗಿ ಮಾಡಬೇಕು. ಅದರಲ್ಲಿ 2 ಪಾಲು ನಿಮಗೆ. ಉಳಿದ 3 ಪಾಲು ತಲಾ ಒಂದರಂತೆ ಮೂವರು ಸಹೋದರಿಯರಿಗೆ. ಈ ವಿತರಣೆ ಪವಿತ್ರ ಕುರ್‍ಆನಿನ ಆದೇಶಕ್ಕನುಸಾರವಾಗಿದೆ. (ನೋಡಿರಿ. ಅನ್ನಿಸಾ ಸೂಕ್ತ 11 ಮತ್ತು 12)

  ಪ್ರಶ್ನೆ: ನಮ್ಮ ತಂದೆ ಕೆಲವು ವರ್ಷಗಳ ಹಿಂದೆ ತೀರಿಹೋಗಿದ್ದಾರೆ. ತಾಯಿ ಇದ್ದಾರೆ. ಸೊತ್ತನ್ನು ನಾವು ಪಾಲು ಮಾಡಿದ್ದೇವೆ. ನಾವು ಇಬ್ಬರು ಗಂಡು, ಒಬ್ಬರು ಹೆಣ್ಣು ಮಕ್ಕಳಿದ್ದೇವೆ. ನಮ್ಮ ತಂದೆಯ ಒಂದು ಹೊಲವಿತ್ತು. ಅದನ್ನು ಪಾಲು ಮಾಡಿರಲಿಲ್ಲ. ಅದರ ಬೆಳೆಯನ್ನು ನಾವು ಒಟ್ಟಿಗೆ ಅನುಭವಿಸುತ್ತಿದ್ದೆವು. ಈಗ ಆ ಹೊಲವನ್ನು 80 ಸಾವಿರ ರೂಪಾಯಿಗಳಿಗೆ ಮಾರಿದ್ದೇವೆ. ಆ ಹಣವನ್ನು ಶರೀಅತ್ ಪ್ರಕಾರ ಹೇಗೆ ವಿತರಿಸುವುದೆಂದು ತಿಳಿಸಿರಿ.

  ಉತ್ತರ: ಹೊಲ ಮಾರಿ ಬಂದ ರೂ. 80 ಸಾವಿರದಲ್ಲಿ ಎಂಟನೇ ಒಂದು ಪಾಲು ನಿಮ್ಮ ತಾಯಿಗೆ ಅಂದರೆ ರೂ. 10 ಸಾವಿರ ಸಿಗುವುದು. ಉಳಿದ 70 ಸಾವಿರ ರೂಪಾಯಿಯನ್ನು 5 ಪಾಲು ಮಾಡಬೇಕು. ನೀವಿಬ್ಬರು ಗಂಡು ಮಕ್ಕಳಿಗೆ ಎರಡೆರಡು ಪಾಲು, ಹೆಣ್ಣು ಮಗಳಿಗೆ ಒಂದು ಪಾಲಿನಂತೆ ವಿತರಿಸಬೇಕು. ಅಂದರೆ ಗಂಡು ಮಕ್ಕಳಿಗೆ ತಲಾ ರೂ. 28,000/- ಹಾಗೂ ಹೆಣ್ಣು ಮಗಳಿಗೆ ರೂ. 14000/- ಬರುತ್ತದೆ.

 • ಸಿನೆಮಾ, ನಾಟಕಗಳಲ್ಲಿ ನಟಿಸುವುದು?
  ismika20-01-2016

  ಪ್ರಶ್ನೆ: ಸಿನೆಮಾ, ನಾಟಕ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ನಟಿಸುವುದನ್ನು ಇಸ್ಲಾಮ್ ವಿರೋಧಿಸಿದೆಯೇ ಆಥವಾ ಅದಕ್ಕೆ ಇಸ್ಲಾಮಿನಲ್ಲಿ ಅನುಮತಿ ಇದೆಯೇ?

  ಉತ್ತರ: ಒಂದು ಕಲೆ ಎಂಬ ನೆಲೆಯಲ್ಲಿ ಇಸ್ಲಾಮ್ ಅಭಿನಯವನ್ನು ವಿರೋಧಿಸುವುದಿಲ್ಲ. ಜನರನ್ನು ತಪ್ಪು ಗ್ರಹಿಕೆಗೆ ಒಳಪಡಿಸಲೂ ಅವರನ್ನು ವಂಚಿಸಲೂ ಬಳಸುವ ಅಭಿನಯವನ್ನು ಇಸ್ಲಾಮ್ ವಿರೋಧಿಸಿದೆ. ಅದು ಸಿನಿಮಾದಲ್ಲಾದರೂ ದೈನಂದಿನ ಬದುಕಿನಲ್ಲಾದರೂ ನಿಷಿದ್ಧವಾಗಿದೆ. ಕಲಾವಿದರನ್ನೂ ಜನರನ್ನೂ ಒಳಿತಿನೆಡೆಗೆ ಕೊಂಡೊಯ್ಯುವ ಕಲೆಗಳನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ಅದರ ಹೊರತು ಇನ್ನುಳಿದವುಗಳನ್ನು ವಿರೋಧಿಸುತ್ತದೆ. ಅಭಿನಯ ಕಲೆಗೆ ಸಂಬಂಧಿಸಿ ಅಭಿನಯಿಸುವವರ ವ್ಯಕ್ತಿತ್ವವನ್ನು ನಾಶಪಡಿಸುವ ಮತ್ತು ಪ್ರೇಕ್ಷಕರಲ್ಲಿ ದುಷ್ಟ ಚಿಂತನೆಗಳಿಗೆ ಪ್ರೇರಣೆ ನೀಡುವ ಸಿನಿಮಾಗಳಲ್ಲಿ, ನಾಟಕಗಳಲ್ಲಿ ನಟಿಸುವುದು ನಿಷಿದ್ಧವಾಗಿದೆ. ಸತ್ಫಲಗಳನ್ನು ಉಂಟು ಮಾಡುವವುಗಳು ಮಾತ್ರ ಅನುವದನೀಯವಾಗಿವೆ.

 • ಬಡ್ಡಿ ಪಡೆಯುವುದು?
  ismika20-01-2016

  ಪ್ರಶ್ನೆ: ಅನಿವಾರ್ಯ ಸಂದರ್ಭದಲ್ಲಿ ಒಂದು ಬ್ಯಾಂಕಿಗೆ ಬಡ್ಡಿ ನೀಡಬೇಕಾಗಿ ಬರುವ ಓರ್ವನಿಗೆ ಇನ್ನೊಂದು ಸಂದರ್ಭದಲ್ಲಿ ಅದೇ ಬ್ಯಾಂಕಿನಿಂದ ಬಡ್ಡಿ ದೊರೆಯುವುದಾದರೆ ಅದನ್ನು ಪಡೆಯಬಹುದೇ?

  ಉತ್ತರ: ಬಡ್ಡಿ ಪಡೆಯುವುದನ್ನೂ ನೀಡುವುದನ್ನೂ ಇಸ್ಲಾಮ್ ಕಟ್ಟುನಿಟ್ಟಾಗಿ ನಿಷೇಧಿಸಿದೆ. ಬಡ್ಡಿಯ ವ್ಯವಹಾರಕ್ಕೆ ಸಾಕ್ಷಿ ನಿಲ್ಲುವವನೂ ಅವರ ಗುಮಾಸ್ತನೂ ಎಲ್ಲರೂ ಶಪಿಸಲ್ಪಟ್ಟವರಾಗಿದ್ದಾರೆ ಎಂದು ಪ್ರವಾದಿ(ಸ) ಕಲಿಸಿದ್ದಾರೆ. ಸಹೀಹ್ ಮುಸ್ಲಿಮ್ ಉದ್ಧರಿಸಿರುವ ಒಂದು ಹದೀಸ್ ಹೀಗಿದೆ: ಬಡ್ಡಿ ತಿನ್ನುವವನನ್ನೂ ತಿನ್ನಿಸುವವನನ್ನೂ ಅದನ್ನು ಬರೆದಿಡುವವನನ್ನೂ ಪ್ರವಾದಿ(ಸ) ಶಪಿಸಿದ್ದಾರೆ. ಪ್ರವಾದಿಯವರು(ಸ) ಹೇಳಿದರು, "ಅವರೆಲ್ಲರೂ ಸಮಾನರಾಗಿದ್ದಾರೆ."
  ಆದ್ದರಿಂದ ಸಾಮಾನ್ಯ ಸಂದರ್ಭಗಳಲ್ಲಿ ಬಡ್ಡಿಯ ವ್ಯವಹಾರಕ್ಕೆ ಪ್ರೋತ್ಸಾಹ ನೀಡುವ ಯಾವುದೇ ಕೆಲಸವು ಮುಸ್ಲಿಮರಿಂದ ಉಂಟಾಗಬಾರದು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಇಸ್ಲಾಮಿನ ಎಲ್ಲಾ ನಿಷೇಧಾಜ್ಞೆಗಳಿಗೆ ರಿಯಾಯಿತಿ ಇದೆ. ಬಡ್ಡಿಯ ವ್ಯವಹಾರವೂ ಅದರಿಂದ ಹೊರತಲ್ಲ. ಆದ್ದರಿಂದ ಅನಿವಾರ್ಯ ಸಂದರ್ಭದಲ್ಲಿ ಓರ್ವನು ಬಡ್ಡಿ ನೀಡಬೇಕೆಂದಾದರೆ ಆತ ತಪ್ಪಿತಸ್ಥನಾಗುವುದಿಲ್ಲ. ಆದರೆ ಬಡ್ಡಿಯನ್ನು ಪಡೆದರೆ ಅದನ್ನು ಬಳಸುವ ಸಂದರ್ಭವುಂಟಾಗುತ್ತದೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಓರ್ವನು ಒಂದು ಬ್ಯಾಂಕ್ ಅಥವಾ ಇನ್ನಾರಿಗೋ ಬಡ್ಡಿ ನೀಡುತ್ತಾನೆ ಮತ್ತು ಪಡೆಯುತ್ತಾನೆ ಎಂದಾದರೆ ಆ ಬಡ್ಡಿಯನ್ನು ಪರಸ್ಪರ ತಾಳೆ ಹಾಕಿ ಸರಿಹೊಂದಿಸುವುದರಲ್ಲಿ ತಪ್ಪಿಲ್ಲ ಎಂದು ಮೇಲ್ನೋಟಕ್ಕೆ ಅನಿಸುತ್ತದೆ. ಆದರೆ, ಇವೆರಡೂ ಎರಡು ಸಂದರ್ಭಗಳಲ್ಲಿ ಎರಡು ಸಂಸ್ಥೆಗಳ ಮೂಲಕವಾಗುವಾಗ ಸಮಸ್ಯೆಯು ಉದ್ಭವಿಸುತ್ತದೆ. ಇಲ್ಲಿ ಬ್ಯಾಂಕ್ ನಿಮಗೆ ನೀಡುವ ಬಡ್ಡಿಯು ನಿಮ್ಮಿಂದ ಪಡೆದುದನ್ನಲ್ಲ. ಇನ್ನೊಂದು ಸಂದರ್ಭದಲ್ಲಿ ಅದು ನಿಮಗೆ ನೀಡುತ್ತಿರುವುದು ನಿಮ್ಮಿಂದ ಹಿಂದೆ ಪಡೆದುಕೊಂಡ ಬಡ್ಡಿಯನ್ನು ಮರಳಿಸುವುದು ಎಂಬ ಲೆಕ್ಕದಲ್ಲೂ ಅಲ್ಲ. ಮೊದಲನೆಯದು ಬ್ಯಾಂಕ್ ನಿಮಗೆ ನೀಡಿರುವ ಮೂಲ ಧನಕ್ಕೆ ಎರಡನೆಯದ್ದು ಬ್ಯಾಂಕಿನಲ್ಲಿರುವ ನಿಮ್ಮ ಹಣಕ್ಕೆ ಇರುವ ಬಡ್ಡಿಯಾಗಿದೆ. ಮೊದಲು ಬ್ಯಾಂಕಿಗೆ ಬಡ್ಡಿ ನೀಡಿದ್ದರೂ ನೀವು ಹೂಡಿಕೆ ಮಾಡುವಾಗ ನಿಮಗೆ ಬಡ್ಡಿ ದೊರೆಯುತ್ತದೆ. ಬಳಿಕ ನಿಮ್ಮ ಮೂಲಧನವನ್ನು ಬ್ಯಾಂಕಿನಲ್ಲಿ ಹೂಡಿಕೆ ನಡೆಸಲು ಬಯಸದಿದ್ದರೂ ಬ್ಯಾಂಕಿನಿಂದ ಸಾಲ ಪಡೆಯುವಾಗ ನೀವು ಬಡ್ಡಿ ನೀಡಬೇಕಾಗುತ್ತದೆ. ಬ್ಯಾಂಕ್‍ಗಳು ನೀಡುವ ಬಡ್ಡಿಯಲ್ಲಿ ಹಿಂದೆ ನೀವು ನೀಡಿರುವ ಬಡ್ಡಿಯ ಅಂಶವೂ ಇರಬಹುದು. ಆದರೆ ಕೇವಲ ಅದು ಮಾತ್ರ ಇರುವುದಲ್ಲ. ಬದಲಾಗಿ ನಿಮ್ಮಂತೆಯೇ ಅನೇಕರಿಂದ ಪಡೆದ ಬಡ್ಡಿಯ ಪುಟ್ಟ ಭಾಗವನ್ನು ಬ್ಯಾಂಕ್ ಅದರ ಹೂಡಿಕೆದಾರರಿಗೆ ನೀಡುತ್ತದೆ. ಆದ್ದರಿಂದ ಯಾವಾಗಲೋ ನೀವು ಬಡ್ಡಿಯ ರೂಪದಲ್ಲಿ ನೀಡಿರುವ ಮೊತ್ತವನ್ನು ಈಗ ನೀವು ನಡೆಸುವ ವ್ಯವಹಾರದಲ್ಲಿ ಬ್ಯಾಂಕ್ ನಿಮಗೆ ನೀಡುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅಂದು ನೀವು ಅನಿವಾರ್ಯ ಪರಿಸ್ಥಿತಿಯಲ್ಲಿ ಬಡ್ಡಿಯನ್ನು ನೀಡುವಿರಿ. ಇಂದು ಪಡೆಯುವ ಅನಿವಾರ್ಯತೆ ನಿಮಗಿಲ್ಲ. ಅನಿವಾರ್ಯತೆ ಇದೆ ಎಂದು ಹೇಳಬೇಕಾದರೆ ಬ್ಯಾಂಕ್ ಅಥವಾ ಸರಕಾರವು ನಿಮ್ಮ ಮೇಲೆ ಕ್ರಮ ಕೈಗೊಳ್ಳುವ ಪರಿಸ್ಥಿತಿ ಒದಗಬೇಕು. ಅದಿಲ್ಲದ ಸ್ಥಿತಿಯಲ್ಲಿ ಬ್ಯಾಂಕ್ ನೀಡುವ ಬಡ್ಡಿಯನ್ನು ಸ್ವಂತ ಅಗತ್ಯಕ್ಕೆ ಬಳಸಲು ನೀವು ಝಕಾತ್ ಪಡೆಯುವಷ್ಟು ನಿರ್ಗತಿಕರಾಗಿಬೇಕು. ಅಂತಹ ಸ್ಥಿತಿಯಲ್ಲಿ ನೀವಿಲ್ಲ ಎಂದಾದರೆ ಬ್ಯಾಂಕಿನಿಂದ ದೊರೆಯುವ ಬಡ್ಡಿ ನೀವು ಎಂದೋ ಯಾವುದೋ ಬ್ಯಾಂಕಿಗೆ ನೀಡಿದ ಬಡ್ಡಿಗೆ ಪ್ರತಿಯಾಗಿ ಮರಳಿ ಪಡೆಯುವುದು ಸರಿಯಲ್ಲ. ಅಂತಹ ಬಡ್ಡಿಯ ಹಣವನ್ನು ನಿರ್ಗತಿಕರಿಗೆ ವಿತರಿಸುವುದೇ ಸೂಕ್ತ ಕ್ರಮವಾಗಿದೆ.

 • ವುಝೂ ಇಲ್ಲದೆ ಕುರ್‍ಆನ್ ಪಠಿಸುವುದು?
  ismika23-02-2016

  ಯೂಸುಫ್ ಇಸ್ಲಾಹೀ ಉತ್ತರಿಸುತ್ತಾರೆ
  ಪ್ರಶ್ನೆ: ಕಂಠಪಾಠ ಇರುವ ಕುರ್‍ಆನ್ ವಚನಗಳ ಪಠಣ, ಸ್ವಸ್ತಿ ವಚನ, ಸಲಾತ್-ಸಲಾಮ್, ತೌಬಾ-ಇಸ್ತಗ್‍ಫಾರ್ ಇವೆಲ್ಲವನ್ನು ಕಣ್ಣು ಮುಚ್ಚಿ ಮಾಡುವುದು ಅನುವದನೀಯವೇ ಅಥವಾ ಅಲ್ಲವೇ? ವುಝೂ ಇಲ್ಲದೆ ಇದನ್ನೆಲ್ಲ ಮಾಡುವುದು ಸರಿಯೋ ತಪ್ಪೋ? ಇವೆಲ್ಲವುಗಳಿಗೆ ಯಾವುದಾದರೂ ಸಮಯವನ್ನು ನಿಗದಿ ಪಡಿಸಲಾಗಿದೆಯೇ? ಅಥವಾ ಯಾವಾಗ ಬೇಕಾದರೂ ಮಾಡಬಹುದೇ?

  ಉತ್ತರ: ಈ ಎಲ್ಲ ಕಾರ್ಯಗಳನ್ನು ಕಣ್ಣು ಮುಚ್ಚಿ ಮತ್ತು ವುಝೂ ಇಲ್ಲದೆಯೇ ಉಚ್ಚರಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಇವುಗಳಿಗೆ ಯಾವುದೇ ನಿರ್ದಿಷ್ಟ ಸಮಯವನ್ನೂ ನಿಗದಿಪಡಿಸಲಾಗಿಲ್ಲ. ಯಾವಾಗ ಹೃದಯವು ಬಯಸುವುದೋ ಆಗ ಮನಸಾರೆ ಇವನ್ನೆಲ್ಲ ಮಾಡಿರಿ. ಇನ್‍ಶಾ ಅಲ್ಲಾಹ್ ಖಂಡಿತ ಸಮಾಧಾನ ಒದಗುವುದು.
  ಅದೇ ವೇಳೆ ಸ್ವಚ್ಛತೆಯನ್ನು ಪಾಲಿಸುವುದು ಸ್ವಯಂ ಒಂದು ಒಳಿತಾಗಿದೆ. ಅಲ್ಲಾಹನ ಸಂದೇಶವಾಹಕರು(ಸ), "ಸ್ವಚ್ಛತೆಯು ಸತ್ಯವಿಶ್ವಾಸದ ಅರ್ಧಾಂಶವಾಗಿದೆ" ಎಂದು ಹೇಳಿದ್ದಾರೆ. ಅಂದರೆ ವ್ಯಕ್ತಿಯು ತನ್ನ ಆತ್ಮವನ್ನು ಶಿರ್ಕ್ (ಬಹುದೇವವಿಶ್ವಾಸ), ಕುಫ್ರ್ (ಸತ್ಯನಿಷೇಧ) ಮತ್ತಿತರ ಮಾಲಿನ್ಯಗಳಿಂದ ಮುಕ್ತವಾಗಿರಿಸಬೇಕಾದುದು ಈಮಾನಿನ ಮೊದಲ ಅರ್ಧಾಂಶವಾಗಿದೆ. ಉಳಿದ ಅರ್ಧಾಂಶದಲ್ಲಿ ತನ್ನ ದೇಹ, ವಸ್ತ್ರವನ್ನು ಸ್ವಚ್ಛವಾಗಿರಿಸುವುದಾಗಿದೆ. ಆದ್ದರಿಂದಲೇ ಶುಚಿತ್ವವನ್ನು ಪಾಲಿಸುವವರೇ ತನಗೆ ಅತಿ ಹೆಚ್ಚು ಪ್ರಿಯರು ಎಂದು ಅಲ್ಲಾಹ್ ತನ್ನ ಗ್ರಂಥದಲ್ಲಿ ತಿಳಿಯಪಡಿಸುತ್ತಾನೆ.
  ಅಲ್ಲಾಹನ ಸಂದೇಶವಾಹಕರು(ಸ) ಹೀಗೆಂದಿದ್ದಾರೆ, "ಪುನರುತ್ಥಾನ ದಿನದಂದು ನನ್ನ ಸಮುದಾಯದ ಗುರುತು ಹೇಗಿರುವುದೆಂದರೆ, ಅವರ ಹಣೆ ಮತ್ತು ವುಝೂವಿನ ಅಂಗಗಳು ಬೆಳಗುತಿರುವುದು. ಯಾರಿಗೆ ತನ್ನ ಪ್ರಕಾಶವನ್ನು ಹೆಚ್ಚಿಸುವ ಬಯಕೆ ಇದೆಯೋ ಹೆಚ್ಚಿಸಲಿ." (ಬುಖಾರಿ, ಮುಸ್ಲಿಮ್)
  ಒಟ್ಟಿನಲ್ಲಿ, ಯಾವ ಹೊತ್ತಿನಲ್ಲಾದರೂ ಕುರ್‍ಆನ್ ಪಠಿಸಲು ಮನಸ್ಸಾದರೆ, ಅದಕ್ಕೆ ಅವಕಾಶ ದೊರೆತರೆ, ಕೇವಲ ವುಝೂ ಇಲ್ಲ ಎಂಬ ಕಾರಣಕ್ಕೆ ಪಠಿಸದಿರುವುದು ಒಳ್ಳೆಯದಲ್ಲ. ಖಂಡಿತವಾಗಿಯೂ ಪಠಿಸಿರಿ.

 • ಪ್ರವಾದಿಯವರ(ಸ) ಭಾವಚಿತ್ರ?
  ismika23-02-2016

  ಪ್ರಶ್ನೆ: ಮುಹಮ್ಮದ್ ಪೈಗಂಬರರ ಭಾವಚಿತ್ರ ಎಲ್ಲಾದರೂ ಇದೆಯೇ? ಈ ಭಾವಚಿತ್ರವನ್ನು ಮುಸ್ಲಿಮರು ಆರಾಧಿಸುತ್ತಾರೆಯೇ?

  ಉತ್ತರ: ಪ್ರವಾದಿ ಮುಹಮ್ಮದ್‍ರ(ಸ) ಭಾವಚಿತ್ರ ಎಲ್ಲೂ ಇಲ್ಲ. ಹಾಗೆ ಇರಲು ಸಾಧ್ಯವೂ ಇಲ್ಲ. ಪ್ರವಾದಿಯವರ(ಸ) ಕಾಲದಲ್ಲಿ ಛಾಯಾಗ್ರಹಣ ಯಂತ್ರವನ್ನು ಕಂಡು ಹಿಡಿಯಲಾಗಿಲ್ಲ. ಪ್ರವಾದಿಯವರ(ಸ) ಪ್ರತೀ ಚಲನವಲನಗಳನ್ನು ವಿವರವಾಗಿ ದಾಖಲಿಸಲಾಗಿದೆ. ಅವುಗಳೇ ಹದೀಸ್ ಗ್ರಂಥಗಳು. ಪ್ರವಾದಿಯವರು(ಸ) ಯಾವಾಗಲಾದರೋ ತಮ್ಮ ಚಿತ್ರವನ್ನು ಬಿಡಿಸಲು ಹೇಳಿರುವುದಾಗಿ ಅಥವಾ ತಮ್ಮ ಪ್ರತಿಮೆಯನ್ನು ಕೆತ್ತಲು ಹೇಳಿರುವುದಾಗಿ ಆ ಗ್ರಂಥಗಳಲ್ಲಿ ಎಲ್ಲೂ ಇಲ್ಲ. ಮಾತ್ರವಲ್ಲ, ಫೋಟೋಗಳನ್ನೂ ಪ್ರತಿಮೆಗಳನ್ನೂ ಪೂಜಿಸುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ. ಆರಾಧಿಸಲ್ಪಡಬಹುದು ಎಂಬ ಕಾರಣಕ್ಕಾಗಿ ಜೀವಿಗಳ ಚಿತ್ರಗಳನ್ನೂ ಪ್ರತಿಮೆಗಳನ್ನೂ ನಿರ್ಮಿಸುವುದು ಅನಿಸ್ಲಾಮಿಕವಾಗಿದೆ ಎಂಬ ಅಭಿಪ್ರಾಯವನ್ನು ಕೆಲವು ವಿದ್ವಾಂಸರು ಹೊಂದಿದ್ದಾರೆ.
  ಮುಹಮ್ಮದ್ ಪೈಗಂಬರರದ್ದು ಎಂದು ಹೇಳಲಾಗುವ ಯಾವುದಾದರೂ ಚಿತ್ರ ಅಥವಾ ಪ್ರತಿಮೆಗಳು ಎಲ್ಲಾದರೂ ಇದ್ದರೆ, ಅವು ಅವರ ನಂತರದ ಕಾಲದಲ್ಲಿ ರಚಿಸಿರುವ ಕೇವಲ ಕಾಲ್ಪನಿಕ ಚಿತ್ರಗಳಾಗಿವೆಯಷ್ಟೇ. ಅವು ಪ್ರವಾದಿಯವರ(ಸ) ಚಿತ್ರ ಹಾಗೂ ಪ್ರತಿಮೆಗಳಾಗಿ ಮುಸ್ಲಿಮರು ಅಂಗೀಕರಿಸುವುದಿಲ್ಲ. ಆದ್ದರಿಂದಲೇ ಮುಸ್ಲಿಮರು ಪ್ರವಾದಿಯವರ(ಸ) ಚಿತ್ರವನ್ನು ಆರಾಧಿಸುವ ಕೆಲಸ ಮಾಡುವುದಿಲ್ಲ.
  ಮಾತ್ರವಲ್ಲ, ಮುಸ್ಲಿಮರ ದೃಷ್ಟಿಯಲ್ಲಿ ಪ್ರವಾದಿ ಮುಹಮ್ಮದ್(ಸ) ಓರ್ವ ಆರಾಧ್ಯರಲ್ಲ. ಅನುಸರಣಾರ್ಹರು ಮಾತ್ರವಾಗಿದ್ದಾರೆ. ಮುಸ್ಲಿಮರಿಗೆ ಅವರೊಂದಿಗೆ ಬಹಳ ಗೌರವವಿದೆ. ಸರ್ವಲೋಕಗಳ ಸೃಷ್ಟಿಕರ್ತ ಮಾತ್ರ ಆರಾಧನೆಗೆ ಅರ್ಹನು. ಪ್ರವಾದಿಯವರು(ಸ) ಓರ್ವ ಸೃಷ್ಟಿಯಾಗಿದ್ದಾರೆ, ಸೃಷ್ಟಿಕರ್ತನಲ್ಲ. ಆದ್ದರಿಂದ ಅವರು ಆರಾಧನೆಗೆ ಅರ್ಹರಲ್ಲ. ಇತರೆಲ್ಲರಂತೆ ಪ್ರವಾದಿಯವರು(ಸ) ಸೃಷ್ಟಿಕರ್ತನ ದಾಸ ಮಾತ್ರವಾಗಿದ್ದಾರೆ.

 • ಎರಡು ವಿಧದ ಬಿದ್‍ಅತ್?
  ismika23-02-2016

  ಪ್ರಶ್ನೆ: ಇಲ್ಲಿ ಕೆಲವರು ಏನೇ ಮಾಡಿದರೂ ಅದರಲ್ಲಿ ಬಿದ್‍ಅತ್‍ನ್ನು ಹುಡುಕುತ್ತಾರೆ. ಇದು ಬಿದ್‍ಅತ್, ಅದು ಬಿದ್‍ಅತ್ ಎಂದು ಫತ್ವಾ ಹೊರಡಿಸುತ್ತಾರೆ. ವಾಸ್ತವದಲ್ಲಿ ಬಿದ್‍ಅತ್ ಎಂದರೇನು?

  ಉತ್ತರ: ಕುರ್‍ಆನ್ ಅಥವಾ ಸುನ್ನತ್‍ನ ಆಧಾರವಿಲ್ಲದೆ ಧರ್ಮದಲ್ಲಿ ಹೊಸದಾಗಿ ಸೇರಿಸಿದ ವಿಶ್ವಾಸಗಳನ್ನೂ ಆಚಾರಗಳನ್ನೂ ಬಿದ್‍ಅತ್ ಎನ್ನುತ್ತಾರೆ. ಬಿದ್‍ಅತ್‍ಗಳೆಲ್ಲವೂ ನಿಷಿದ್ಧವೂ ಮನುಷ್ಯರನ್ನು ನರಕಕ್ಕೆ ಕೊಂಡೊಯ್ಯುವಂತಹದ್ದೂ ಆಗಿವೆ. "ಎಲ್ಲಾ ಬಿದ್‍ಅತ್ ಗಳೂ ದುರ್ಮಾರ್ಗಗಳಾಗಿವೆ." "ಎಲ್ಲಾ ದುರ್ಮಾರ್ಗಗಳು ನರಕಕ್ಕೆ ಕೊಂಡೊ ಯ್ಯುತ್ತವೆ." "ಹೊಸದಾಗಿ ನಿರ್ಮಿಸಿದ್ದೆ ಲ್ಲವೂ ಬಿದ್‍ಅತ್‍ಗಳಾಗಿವೆ." "ನಮ್ಮ ಈ ವಿಷಯದಲ್ಲಿ ಅದಕ್ಕೆ ಸೇರದ ಏನನ್ನಾದರೂ ಯಾರಾದರೂ ಹೊಸದಾಗಿ ಉಂಟು ಮಾಡಿದರೆ ಅದನ್ನು ತಳ್ಳಿಹಾಕಬೇಕಾಗಿದೆ" ಮುಂತಾದ ಅನೇಕ ಹದೀಸ್‍ಗಳಿವೆ. ಆ ನೆಲೆಯಲ್ಲಿ ಸುನ್ನತ್‍ನ ವಿರೋಧ ಪದವಾಗಿಯೂ ಮುಹ್‍ದಸತ್‍ನ ಪರ್ಯಾಯ ಪದವಾಗಿಯೂ ಬಿದ್‍ಅತನ್ನು ಉಪಯೋಗಿಸುತ್ತಾರೆ. ಎಲ್ಲದರ ಆಶಯ ಒಂದೇ ಆಗಿದೆ.
  ಇಸ್ಲಾಮ್ ಧರ್ಮವನ್ನು ಅಲ್ಲಾಹನು ಅಂತಿಮ ಪ್ರವಾದಿ ಮುಹಮ್ಮದ್‍ರ(ಸ) ಮೂಲಕ ಪೂರ್ತಿಗೊಳಿಸಿದ್ದಾನೆ. ಇನ್ನು ಅದರಲ್ಲಿ ಹೊಸದಾಗಿ ಸೇರಿಸಬೇಕಾದದ್ದೋ ಅದರಿಂದ ಕೈ ಬಿಡಬೇಕಾದದ್ದೋ ಆದ ಯಾವುದೇ ವಿಚಾರಗಳಿಲ್ಲ. ಅದಕ್ಕೆ ಹೊಸದಾಗಿ ಏನನ್ನಾದರೂ ಸೇರಿಸಲೋ ಇದ್ದದ್ದನ್ನು ತೆಗೆದು ಹಾಕಲೋ ಯಾರಿಗೂ ಅಧಿಕಾರವಿಲ್ಲ. ಯಾರಾದರೂ ಹಾಗೆ ಮಾಡುತ್ತಾರೆಂದಾದರೆ ಅದು ತಳ್ಳಿ ಹಾಕಲ್ಪಡುವುದಾಗಿದೆ. ಇತರರು ಅದನ್ನು ಅಂಗೀಕರಿಸುವುದು ಸನ್ಮಾರ್ಗದಿಂದಿರುವ ವ್ಯತಿ ಚಲನವಾಗಿದೆ.
  ಉಮರ್‍ರವರ(ರ) ಪ್ರಸ್ತಾಪವೊಂದನ್ನು ಆಧಾರವಾಗಿಸಿ ಕೆಲವು ವಿದ್ವಾಂಸರು ಬಿದ್‍ಅತ್‍ಗಳನ್ನು ಎರಡು ವಿಧವಾಗಿ ವಿಂಗಡಿಸಿದ್ದಾರೆ. ಒಂದು ಉತ್ತಮ ಬಿದ್‍ಅತ್
  (ಬಿದ್‍ಅತುನ್ ಹಸ ನತುನ್) ಇನ್ನೊಂದು ಕೆಟ್ಟ ಬಿದ್ ಅತ್ (ಬಿದ್‍ಅತುನ್ ಸೈಯ್ಯಿಅತುನ್). ಇದಕ್ಕೆ ಸಂಬಂಧಿಸಿ ಮೂಲತತ್ವ ಹೀಗಿದೆ: ಕುರ್‍ಆನ್, ಸುನ್ನತ್ ಇಜ್‍ಮಾಅ, ಕಿಯಾಸ್ ಅಸರ್ (ಸಹಾಬಿಗಳು ಹಾಗೂ ತಾಬಿಈಗಳಿಗೆ ಸೇರುವ ವರದಿ) ಮುಂತಾದವುಗಳಿಗೆ ವಿರುದ್ಧವಾಗಿ ಹೊಸದಾಗಿ ಆವಿಷ್ಕರಿಸುವ ವಿಚಾರಗಳು ಬಿದ್‍ಅತುಲ್ ಸೈಯ್ಯಿಅತ್ (ಕೆಟ್ಟ ಬಿದ್‍ಅತ್) ಆಗಿದೆ. ಗೋರಿಗಳಲ್ಲಿ ಎತ್ತಿ ಕಟ್ಟುವುದು, ಅಲ್ಲಿ ಕೆಲವು ಆಚರಣೆಗಳನ್ನು ನಡೆಸುವುದು ಮೊದಲಾದವುಗಳು ಇದರ ಉದಾಹರಣೆಗಳು. ಮೇಲೆ ತಿಳಿಸಲಾದ ಮೂಲ ಆಧಾರಗಳ ಬೇಡಿಕೆಯನುಸಾರ ಮಾಡುವ ಕಾರ್ಯಗಳು ಬಿದ್‍ಅತುನ್ ಹಸನತ್ ಆಗಿವೆ. ಉದಾಹರಣೆಗೆ ಶಿಕ್ಷಣ ಸಂಸ್ಥೆಗಳು, ವೈಜ್ಞಾನಿಕ ಗ್ರಂಥಗಳು, ಕುರ್‍ಆನ್ ಹಾಗೂ ಸುನ್ನತ್‍ನ ಅಥವಾ ಅನುಸರಿಸಲು ಕಡ್ಡಾಯವಾಗಿರುವ ಯಾವುದಾದರೂ ಆಜ್ಞೆಯನ್ನು ಜಾರಿಗೊಳಿಸಲು ಹೊಸ ಒಂದು ಕಾರ್ಯವನ್ನು ಜಾರಿಗೊಳಿಸಲು ಅನಿವಾರ್ಯವೆಂದಾದರೆ ಅಂತಹ ಕೆಲಸಗಳು ಬಿದ್‍ಅತುನ್ ಹಸನತ್‍ಗೆ ಸೇರುತ್ತವೆ. ಅದನ್ನು ಮಾಡಬೇಕಾದುದು ಕಡ್ಡಾಯವಾಗಿದೆ.
  ಆದರೆ ಇಸ್ಲಾಮೀ ಆಧಾರಗಳ ಬೇಡಿಕೆಯಾಗುವ ಅವುಗಳಿಗೆ ಸೂಕ್ತವಾದ ಉತ್ತಮ ಕಾರ್ಯಗಳನ್ನು ಹೊಸದಾಗಿ ಆವಿಷ್ಕರಿಸುವುದನ್ನು ಕೆಲವು ವಿದ್ವಾಂಸರು ಬಿದ್‍ಅತ್ ಎಂದು ಕರೆಯುತ್ತಿಲ್ಲ. ಅಂತಹ ಕಾರ್ಯಗಳು ಸುನ್ನತ್‍ನ ಮೇರೆಯಲ್ಲಿ ಬರುವುದರಿಂದ ಅವುಗಳನ್ನು ಸುನ್ನತ್ ಎಂದೇ ವ್ಯಾಖ್ಯಾನಿಸುತ್ತಾರೆ.

 • ಮಹಿಳೆಯ ಇದ್ದತ್?
  ismika15-04-2016

  ಪ್ರಶ್ನೆ: ಪತಿ ಮರಣಹೊಂದಿ ಇದ್ದತ್ ಆಚರಿಸುವ ಮಹಿಳೆಯು ಉದ್ಯೋಗಸ್ಥೆಯಾಗಿದ್ದರೆ ಕೆಲಸಕ್ಕೆ ಹೋಗಬಹುದೇ? ಇದ್ದತ್ ಆಚರಿಸುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತುಕೊಳ್ಳಬೇಕೆಂದೂ ಸಂಬಂಧಿಕರಾದ ಪುರುಷರನ್ನೂ ನೋಡಬಾರದೆಂದೂ ತಲೆ ಬೋಳಿಸಬೇಕೆಂದೂ ಹೇಳುತ್ತಾರೆ ಇದು ಸರಿಯೇ? ಇದ್ದತ್‍ನ ನೈಜ ರೂಪವೇನು?

  ಉತ್ತರ: ಪತಿ ತೀರಿಹೋದ ಮಹಿಳೆಯು ಗರ್ಭಿಣಿಯಲ್ಲದಿದ್ದರೆ ನಾಲ್ಕು ತಿಂಗಳು ಹತ್ತು ದಿವಸ ಹಾಗೂ ಗರ್ಭಿಣಿಯಾಗಿದ್ದರೆ ಹೆರಿಗೆಯಾಗುವ ವರೆಗೆ ಪುನರ್ ವಿವಾಹ ಹಾಗೂ ಅಲಂಕಾರಗಳಿಂದ ದೂರ ನಿಲ್ಲುವುದೇ ಇದ್ದತ್ ಆಗಿದೆ. ಕುರ್‍ಆನ್ ಹೇಳುತ್ತದೆ. “ನಿಮ್ಮ ಪೈಕಿ ಯಾರಾದರೂ ಮೃತಪಟ್ಟರೆ ಮತ್ತು ಅವರ ಪತ್ನಿಯರು ಜೀವಂತವಾಗಿದ್ದರೆ ಅವರು (ಪತ್ನಿಯರು) ನಾಲ್ಕು ತಿಂಗಳು ಹತ್ತು ದಿನಗಳ ತನಕ ತಮ್ಮನ್ನು ತಾವೇ ತಡೆದಿರಿಸಿಕೊಳ್ಳಬೇಕು.” (ಅಲ್‍ಬಕರ: 234)
  ಈ ಇದ್ದತ್‍ನ ವೇಳೆಯಲ್ಲಿ ಮಹಿಳೆಯು ಯಾವ ಮನೆಯಲ್ಲಿ ಅವಳ ಪತಿ ಮರಣ ಹೊಂದಿದ್ದಾನೋ ಅದೇ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದು ವಿದ್ವಾಂಸರು ಸೂಚಿಸಿದ್ದಾರೆ. ಇದು ಮರಣ ಹೊಂದಿದ ಮನೆಯು ಪತಿ ಅಥವಾ ಪತ್ನಿಯ ಒಡೆತನದಲ್ಲಿರುವ ಸಂದರ್ಭದಲ್ಲಾಗಿದೆ. ಇದ್ದತ್‍ನ ಅವಧಿಯಲ್ಲಿ ಪುನರ್ ವಿವಾಹದ ನೆಂಟಸ್ತಿಕೆಯಲ್ಲಿ ನೇರವಾಗಿ ಭಾಗಿಯಾಗುವುದು, ಇತರರು ವಿವಾಹ ಸಂಬಂಧಗಳೊಂದಿಗೆ ಅವರನ್ನು ಸಮೀಪಿಸಿರುವುದು ನಿಷಿದ್ಧವಾಗಿದೆ. ಆದರೂ ವಿವಾಹ ನೆಂಟಸ್ತಿಕೆಯನ್ನು ಸೂಚಿಸುವುದರಲ್ಲಿ ವಿರೋಧ ವಿಲ್ಲ. ಕುರ್‍ಆನ್ ಹೇಳುತ್ತದೆ, “ಇದ್ದತ್‍ನ ಕಾಲಾವಧಿಯಲ್ಲಿ ಆ ವಿಧವೆಯರೊಂದಿಗೆ ವಿವಾಹದ ಇರಾದೆಯನ್ನು ನೀವು ಸಂಕೇತಗಳ ಮೂಲಕ ಪ್ರಕಟಗೊಳಿಸಿದರೂ ಮನಸ್ಸಿನೊಳಗೆ ಬಚ್ಚಿಟ್ಟರೂ ತಪ್ಪಿಲ್ಲ. ನಿಮ್ಮ ಮನದೊಳಗೆ ಅವರ ಯೋಚನೆ ಬಂದೇ ತೀರುವುದೆಂಬುದನ್ನು ಅಲ್ಲಾಹನು ಅರಿತಿರುತ್ತಾನೆ. ಆದರೆ ರಹಸ್ಯ ವಾಗ್ದಾನ ಮಾಡಬಾರದು. ಯಾವುದೇ
  ಪ್ರಸ್ತಾಪ ಮಾಡುವುದಿದ್ದರೆ ಇದ್ದತ್ ಪೂರ್ಣಗೊಳ್ಳುವ ತನಕ ವಿವಾಹ ಬಂಧನದ ನಿರ್ಧಾರ ಮಾಡಬೇಡಿರಿ…” (ಅಲ್ ಬಕರ: 235)
  ಮರಣ ಇದ್ದತ್‍ನಲ್ಲಿರುವ ಸ್ತ್ರೀಯು ಅಲಂಕಾರಗಳನ್ನು ಮಾಡುವುದರ ಬಗ್ಗೆ ಪ್ರವಾದಿ(ಸ) ಪ್ರಸ್ತಾಪಿಸಿರುವುದಾಗಿ ಅಬೂದಾವೂದ್, ನಸಾಈ ಮೊದಲಾದವರು ವರದಿ ಮಾಡಿದ್ದಾರೆ, “ಅವರು ಬಣ್ಣದ ಬಟ್ಟೆಗಳನ್ನೋ ಆಭರಣಗಳನ್ನೋ ಧರಿಸುವುದು, ಮೆಹಂದಿ ಹಚ್ಚುವುದು, ಕಣ್ಣುಗಳಿಗೆ ಕಾಡಿಗೆ ಹಚ್ಚುವುದು ಮಾಡಬಾರದು.” ಇದೇ ರೀತಿಯ ಬೇರೆಯೂ ಹದೀಸ್‍ಗಳಿವೆ. ಇದರಿಂದೆಲ್ಲಾ ತಿಳಿಯುವುದೇನೆಂದರೆ ಪತಿ ಮರಣ ಹೊಂದಿ ಇದ್ದತ್ ಆಚರಿಸುವ ಮಹಿಳೆಯು ಸಿಂಗರಿಸಿಕೊಂಡು ನಡೆಯಬಾರದು ಹಾಗೂ ಆಡಂಬರವಿಲ್ಲದ ಸರಳ ವೇಷಭೂಷಣಗಳಲ್ಲಿ ಕಳೆಯಬೇಕು ಎಂದಾಗಿದೆ. ಇವು ಇಸ್ಲಾಮ್ ಸೂಚಿಸುವ ಇದ್ದತ್ ಹಾಗೂ ದುಃಖಾಚರಣೆಯಾಗಿದೆ.
  ಪುರುಷರನ್ನು ನೋಡುವ ವಿಚಾರದಲ್ಲಿ ಇತರ ಮಹಿಳೆಯರಿಗೆ ಇರುವ ನಿಯಮಕ್ಕಿಂತ ಮಿಗಿಲಾದ ನಿಯಮಗಳೊಂದೂ ಇದ್ದತ್‍ನಲ್ಲಿರುವ ಮಹಿಳೆಯರಿಗಿಲ್ಲ. ಅತ್ಯವಶ್ಯಕ ಕಾರ್ಯಗಳಿಗಾಗಿ ಹೊರ ಹೋಗುವುದರಲ್ಲಿ ಅಡ್ಡಿಯಿಲ್ಲ. ಆದರೆ ರಾತ್ರಿ ಉಳಕೊಳ್ಳುವುದು ಸ್ವಗೃಹದಲ್ಲೇ ಆಗಿರಬೇಕು. ಮುಜಾಹಿದ್‍ರಿಂದ ಉದ್ಧರಿಸಲ್ಪಟ್ಟಿರುವ ಒಂದು ವರದಿಯು ಇದಕ್ಕೆ ಪುರಾವೆಯಾಗಿದೆ. ಅವರು ಹೇಳಿದರು, “ಉಹುದ್‍ನಲ್ಲಿ ಹಲವಾರು ಮಂದಿ ಹುತಾತ್ಮರಾಗಿದ್ದರು. ಅವರ ಪತ್ನಿಯರು ಬಂದು ಪ್ರವಾದಿಯವರೊಂದಿಗೆ(ಸ) ಹೇಳಿದರು, “ಅಲ್ಲಾಹನ ಸಂದೇಶವಾಹರೇ, ರಾತ್ರಿಯಾಗುವಾಗ ನಾವು ವಿಪರೀತ ಏಕಾಂತತೆಯ ಅನುಭವಿಸುತ್ತೇವೆ. ಆದ್ದರಿಂದ ನಾವೆಲ್ಲರೂ ಯಾರಾದರೊಬ್ಬರ ಮನೆಯಲ್ಲಿ ರಾತ್ರಿ ಉಳಿದುಕೊಂಡರಾಗದೇ? ಪ್ರಭಾತವಾದಾಗ ನಾವು ಸ್ವಂತ ಮನೆಗೇ ಮರಳುತ್ತೇವೆ.” ಪ್ರವಾದಿ(ಸ) ಹೇಳಿದರು, “ನೀವು ನಿಮ್ಮ ಪೈಕಿ ಓರ್ವರ ಮನೆಯಲ್ಲಿ ಕುಳಿತು ಮಾತನಾಡುತ್ತಲಿರಿ. ಆದರೆ ನಿದ್ದೆ ಬರುವಾಗ ಮಲಗಲು ಪ್ರತಿಯೋರ್ವರು ಅವರವರ ಮನೆಗೇ ಮರಳಬೇಕು. ಆದರೆ ಹಜ್ಜ್‍ನಂತಹ ಪ್ರಧಾನವೂ ದೀರ್ಘವೂ ಆದ ಪ್ರಯಾಣದ ವೇಳೆ ಮನೆ ಬಿಟ್ಟು ಹೋಗುವುದರಲ್ಲಿ, ಇತರ ಸ್ಥಳಗಳಲ್ಲಿ ಉಳಿದು ಕೊಳ್ಳುವುದರಲ್ಲಿ ವಿರೋಧವಿಲ್ಲ” ಎಂದು ಹಲವು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಸಹಾಬಿಗಳ ಹಾಗೂ ತಾಬಿಈಗಳ ಕಾಲದಲ್ಲೂ ಅಂತಹ ಘಟನೆಗಳು ನಡೆದಿರುವುದಾಗಿ ಅವರು ಸೂಚಿಸಿದ್ದಾರೆ.
  ಈ ಹಿನ್ನೆಲೆಯಲ್ಲಿ ಉದ್ಯೋಗಸ್ಥ ಮಹಿಳೆಯರು ಇದ್ದತ್‍ನ ವೇಳೆ ಕೆಲಸಕ್ಕೆ ಹೋಗುವುದರಲ್ಲಿ ವಿರೋಧವಿಲ್ಲ. ಕೆಲಸವು ದೂರದ ಪ್ರದೇಶದಲ್ಲಾಗಿದ್ದರೆ ಅದಕ್ಕಾಗಿ ಮನೆ ಬಿಟ್ಟು ಕೆಲಸದ ಸ್ಥಳದಲ್ಲಿ ಉಳಿದುಕೊಳ್ಳಬಹುದಾಗಿದೆ.
  ಇದ್ದತ್‍ನಲ್ಲಿರುವ ಮಹಿಳೆಯು ಕತ್ತಲೆಯ ಕೋಣೆಯಲ್ಲಿ ಕುಳಿತು ಕೊಳ್ಳಬೇಕು, ಕನ್ನಡಿ ನೋಡಬಾರದು, ಸಂಬಂಧಿಕರ ಪುರುಷರನ್ನು ನೋಡಬಾರದು, ತಲೆಬೋಳಿಸಬೇಕು ಮೊದಲಾದ ನಿಯಮಗಳು ಅಜ್ಞಾನಕಾಲದ ಸಂಸ್ಕ್ರಯಾಗಿದೆ. ಇವುಗಳಿಗೆ ಇಸ್ಲಾಮಿನಲ್ಲಿ ಯಾವುದೇ ಮಹತ್ವವಿಲ್ಲ.

 • ಪರ್ದಾದ ಬಣ್ಣ?
  ismika15-04-2016

  ಪ್ರಶ್ನೆ: ಹಿಂದಿನ ಕಾಲಗಳಲ್ಲಿ ಮಹಿಳೆಯರು ಕೇವಲ ಕಪ್ಪು ಬಣ್ಣದ ಪರ್ದಾಗಳನ್ನು ಮಾತ್ರ ಧರಿಸುತ್ತಿದ್ದರು. ಈಗ ಹಲವು ರೀತಿಯ ಪರ್ದಾಗಳನ್ನು ಬಳಸುತ್ತಿದ್ದಾರೆ. ಇದು ಸಮ್ಮತವೇ?

  ಉತ್ತರ: ಪರ್ದಾ ಧರಿಸುವುದು ಮಹಿಳೆಯರ ಶರೀರ ಭಾಗಗಳನ್ನು ಪೂರ್ಣವಾಗಿ ಮರೆಸುವುದಕ್ಕಾಗಿದೆ. ಅದು ಇಂತಿಂಥ ಆಕೃತಿಯಲ್ಲಿರಬೇಕೆಂದೋ ಬಣ್ಣದಲ್ಲಿರಬೇಕೆಂದೋ ನಿಯಮವಿಲ್ಲ. ಶರೀರದ ಭಾಗಗಳನ್ನು ಮರೆಮಾಚಲು ಪರ್ದಾ ಎಂಬ ಹೆಸರಿನಲ್ಲಿರುವ ಬಟ್ಟೆಯನ್ನೇ ಬಳಸಬೇಕು ಎಂಬುದು ಕಡ್ಡಾಯವಿಲ್ಲ. ಒಟ್ಟಿನಲ್ಲಿ ಶರೀರದ ಭಾಗಗಳನ್ನು ಮುಚ್ಚಿದರೆ ಸಾಕು.
  ಇತ್ತೀಚಿನ ದಿನಗಳಲ್ಲಿ ಕೆಲವರು ಪರ್ದಾ ಧರಿಸಿಯೂ ಬಟ್ಟೆ ಧರಿಸದವರಂತಿರುತ್ತಾರೆ. ಶರೀರದ ಉಬ್ಬು ತಗ್ಗುಗಳು ಸ್ಪಷ್ಟವಾಗಿ ಅಗೋಚರವಾಗುತ್ತವೆ. ಅಂತಹವರು ಪರ್ದಾ ಧರಿಸಿಯೂ ಪ್ರಯೋಜನವಿಲ್ಲ. ಪರ್ದಾ ಧರಿಸುವುದಾದರೆ ಅದು ಶರೀರದ ಭಾಗಗಳನ್ನು ಮುಚ್ಚುವಂತಿರಬೇಕು.

 • ದೇವಾಲಯಗಳಲ್ಲಿ ನಮಾಝ್?
  ismika15-04-2016

  ಪ್ರಶ್ನೆ: ನಮಾಝ್ ನಿರ್ವಹಿಸಲು ಮಸೀದಿ ಅಥವಾ ಇನ್ನಿತರ ಸೌಕರ್ಯಗಳಿಲ್ಲದ ಸ್ಥಿತಿಯಲ್ಲಿ ಒಂದು ಕಡೆ ತಲುಪುವ ಮುಸ್ಲಿಮನಿಗೆ ಅಲ್ಲಿ ಕ್ರೈಸ್ತ ದೇವಾಲಯವಿದ್ದರೆ ಅಲ್ಲಿ ಕ್ರೈಸ್ತರೊಂದಿಗೆ ಪ್ರಾರ್ಥನೆ ನಡೆಸಬಹುದು ಅಥವಾ ನಮಾಝ್ ನಿರ್ವಹಿಸಬಹುದು ಎಂದು ಇಲ್ಲಿ ಓರ್ವ ಕ್ರೈಸ್ತ ಧರ್ಮಗುರು ಭಾಷಣ ಮಾಡಿದ್ದರು. ಅದನ್ನು ವೇದಿಕೆಯಲ್ಲಿದ್ದ ಮುಸ್ಲಿಮ್ ಧರ್ಮಗುರುಗಳು ಒಪ್ಪಿಕೊಂಡಿದ್ದರು. ಇದು ಸರಿಯೇ?

  ಉತ್ತರ: ಓರ್ವ ಮುಸ್ಲಿಮನಿಗೆ ಸಂಬಂಧಿಸಿದಂತೆ ಭೂಮಿಯು ಸಂಪೂರ್ಣವಾಗಿ ಮಸೀದಿಯಾಗಿದೆ. ಎಲ್ಲಿ ಬೇಕಾದರೂ ಅವನಿಗೆ ನಮಾಝ್ ನಿರ್ವಹಿಸಬಹುದು. ಕ್ರೈಸ್ತ ದೇವಾಲಯ ಗಳಲ್ಲೂ ಹಿಂದೂ ದೇವಸ್ಥಾನಗಳಲ್ಲೂ ಅವುಗಳ ಮೇಲ್ವಿಚಾರಕರು ಅನುಮತಿಸುವುದಿದ್ದರೆ ಅಗತ್ಯವಿದ್ದರೆ ಅಲ್ಲಿಯೂ ನಮಾಝ್ ನಿರ್ವಹಿಸಬಹುದಾಗಿದೆ. ಆದರೆ ಸಂಬಂಧ ಪಟ್ಟವರ ಅನುಮತಿ ಇಲ್ಲದೆ ಯಾವುದೇ ಪರಿಸ್ಥಿತಿಯಲ್ಲೂ ಇತರ ಧರ್ಮದವರ ದೇವಾಲಯಗಳನ್ನು ಸ್ವಂತ ಧಾರ್ಮಿಕ ಕರ್ಮಗಳಿಗಾಗಿ ಉಪಯೋಗಿಸುವಂತಿಲ್ಲ. ಯಾವುದೇ ಧರ್ಮದ ದೇವಾಲಯದಲ್ಲಾದರೂ ಮುಸ್ಲಿಮರು ನಿರ್ವಹಿಸುವ ಪ್ರಾರ್ಥನೆಗಳು, ಇತರ ಆರಾಧನಾ ಕರ್ಮಗಳು ಏಕೈಕನಾದ ಅಲ್ಲಾಹನಿಗಾಗಿ ಮಾತ್ರವಾಗಿರಬೇಕು. ಇಸ್ಲಾಮ್ ಆದೇಶಿಸಿರುವ ಪ್ರಕಾರ ಮಾತ್ರ ಅದನ್ನು ನಿರ್ವಹಿಸಬೇಕಾಗಿದೆ. ದೇವಾಲಯಗಳಲ್ಲಿನ ಪುರೋಹಿತರಿಗಾಗಿಯೋ ಮಹಾ ಪುರುಷರಿಗಾಗಿಯೋ ವಿಗ್ರಹಗಳಿಗೋ ಮುಸ್ಲಿಮರ ಇಬಾದತ್ ಗಳಲ್ಲಿ ಯಾವುದೇ ಪಾಲೂ ಇರಬಾರದು.

 • ವ್ಯಾಪಾರದ ಝಕಾತ್?
  ismika28-04-2016

  ಪ್ರಶ್ನೆ: ವ್ಯಾಪಾರದ ಝಕಾತ್ ನೀಡುವುದು ಹೇಗೆ?

  ಉತ್ತರ: ವರ್ಷ ಪೂರ್ತಿಯಾಗುವಾಗ ವ್ಯಾಪಾರದ ಝಕಾತ್ ನೀಡಬೇಕು. ವ್ಯಾಪಾರದ ನಿಸಾಬ್ (ಝಕಾತ್ ಅನ್ವಯವಾಗುವ ಪ್ರಮಾಣ) ಚಿನ್ನದ ನಾಣ್ಯ ಅಥವಾ ಚಿನ್ನ ನಿಶ್ಚಯಿಸಲಾದ ನಿಸಾಬ್ ಆಗಿದೆ. ವ್ಯಾಪಾರ ಪ್ರಾರಂಭಿಸಿ ಒಂದು ವರ್ಷವಾಗುವಾಗ ವ್ಯಾಪಾರದ ಸರಕು, ಕೈಯಲ್ಲಿರುವ ಮೊತ್ತ, ಬೇರೆಯವರಿಂದ ದೊರೆಯಲಿಕ್ಕಿರುವ ಮೊತ್ತ ಮೊದಲಾದವುಗಳ ಮೌಲ್ಯವನ್ನು ಲೆಕ್ಕ ಹಾಕಬೇಕು. ದೊರೆಯಲಿಕ್ಕಿರುವುದರಿಂದ ದೊರೆಯ ಬಹುದೆಂಬ ನಿರೀಕ್ಷೆ ಇಲ್ಲದ ಸಾಲಗಳನ್ನು ಇದರಿಂದ ಹೊರಗಿರಿಸಬಹುದಾಗಿದೆ. ಅದೇ ರೀತಿ ಬೇರೆಯವರಿಗೆ ಸಾಲ ನೀಡಲಿಕ್ಕಿದ್ದರೆ ಅದನ್ನೂ ಹೊರಗಿರಿಸಬಹುದಾಗಿದೆ. ವ್ಯಾಪಾರದ ಸರಕನ್ನು ಲೆಕ್ಕ ಹಾಕುವಾಗ ಅಂಗಡಿ ಕಟ್ಟಡ, ಕಪಾಟುಗಳು, ತಕ್ಕಡಿ, ಅಳತೆಯ ಪಾತ್ರೆಗಳು ಮೊದಲಾದ ಖಾಯಂ ವಸ್ತುಗಳ ಮೌಲ್ಯವನ್ನು ಸೇರಿಸಬೇಕಾಗಿಲ್ಲ. ಉಪಕರಣಗಳು ಎಂಬ ನೆಲೆಯಲ್ಲಿ ಅವುಗಳು ಝಕಾತ್‍ನಿಂದ ಹೊರಗುಳಿಯುತ್ತವೆ. ಇವೆಲ್ಲವನ್ನೂ ಕಳೆದು ವ್ಯಾಪಾರದ ಸರಕು ಹಾಗೂ ಕೈಯಲ್ಲಿರುವ ಮೊತ್ತ ದೊರೆಯಬಹುದೆಂಬ ಖಾತ್ರಿ ಇರುವ ಸಾಲವನ್ನು ಸೇರಿಸಿದಾಗ 85 ಗ್ರಾಮ್ ಚಿನ್ನಕ್ಕೆ ಸಮಾನ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯವಿರುವುದಾದರೆ ಅದಕ್ಕೆ ಎರಡೂವರೆ ಶೇಕಡಾ ಝಕಾತ್ ನೀಡಬೇಕಾಗಿದೆ. ಝಕಾತ್‍ನ ರೂಪದಲ್ಲಿ ಹಣವನ್ನೇ ನೀಡಬೇಕೆಂದೇನಿಲ್ಲ. ವ್ಯಾಪಾರದ ಸರಕುಗಳನ್ನೂ ನೀಡಬೇಕಾಗಿದೆ. ಅಂದರೆ ಧಾನ್ಯದ ವ್ಯಾಪಾರಿಯು ಧಾನ್ಯವನ್ನು ಬಟ್ಟೆಯ ವ್ಯಾಪಾರಿ ಬಟ್ಟೆಯನ್ನು ಝಕಾತ್‍ನ ರೂಪದಲ್ಲಿ ನೀಡಬಹುದಾಗಿದೆ.
  ಈ ವಿಷಯದಲ್ಲಿ ಹಿಂದಿನಿಂದಲೇ ವಿದ್ವಾಂಸರ ಮಧ್ಯೆ ಭಿನ್ನಾಭಿಪ್ರಾಯಗಳಿವೆ. ಉದಾಹರಣೆಗೆ ನಿಸಾಬ್ ವರ್ಷಾರಂಭದಲ್ಲೂ ವರ್ಷಾಂತ್ಯದಲ್ಲೂ ಇರಬೇಕೆಂದು ಕೆಲವರ ಅಭಿಪ್ರಾಯವಾದರೆ ವರ್ಷ ಪೂರ್ತಿಯಾಗುವುದರ ಮಧ್ಯೆ ನಿಸಾಬ್ ಕಡಿಮೆಯಾದರೆ ಆ ವರ್ಷ ಝಕಾತ್ ನೀಡಬೇಕಾಗಿಲ್ಲ ಎಂದು ಅಭಿಪ್ರಾಯ ಹೊಂದಿದವರೂ ಇದ್ದಾರೆ. ಅವರ ಅಭಿಪ್ರಾಯದ ಪ್ರಕಾರ ನಿಸಾಬ್‍ನಷ್ಟು ಮೌಲ್ಯದ ಮೊತ್ತವನ್ನು ವರ್ಷ ಪೂರ್ತಿ ನಿರ್ವಹಣೆ ಮಾಡಿದರೆ ಮಾತ್ರ ಝಕಾತ್ ಅನ್ವಯವಾಗುತ್ತದೆ. ಇಂತಹ ಅಭಿಪ್ರಾಯಗಳನ್ನು ಹೊಂದಿದವರು ಉನ್ನತ ವಿದ್ವಾಂಸರೇ ಆಗಿದ್ದಾರೆ. ಅವರಿಗೆ ಅವರದೇ ಆದ ಸಮರ್ಥನೆಗಳೂ ಇವೆ. ಭಿನ್ನಾಭಿಪ್ರಾಯಗಳ ಮಧ್ಯೆ ಒಮ್ಮತಾಭಿಪ್ರಾಯ ಮೂಡಿಲ್ಲದ ಸ್ಥಿತಿಯಲ್ಲಿ ಓರ್ವ ಸಾಮಾನ್ಯ ವ್ಯಕ್ತಿಗೆ ತನ್ನ ಬಾಧ್ಯತೆಯನ್ನು ಸರಳವಾಗಿ ಅರ್ಥ ಮಾಡಿಕೊಳ್ಳಲೂ ನಿರ್ವಹಿಸಲೂ ಸೂಕ್ತವಾದ ರೀತಿಯನ್ನು ಮೇಲೆ ವಿವರಿಸಲಾಗಿದೆ.

 • ಮಗ ಹಾಗೂ ಮಗಳಿಗೆ ಸೊತ್ತಿನ ವಿತರಣೆ?
  ismika28-04-2016

  ಪ್ರಶ್ನೆ: ಓರ್ವರಿಗೆ ಒಬ್ಬ ಮಗನೂ, ಓರ್ವ ಮಗಳೂ ಇದ್ದಾರೆ. ಮಗನು ಶ್ರೀಮಂತನಾಗಿದ್ದಾನೆ. ಮಗಳು ಆರ್ಥಿಕವಾಗಿ ಹಿಂದುಳಿದಿದ್ದಾಳೆ. ತಂದೆಗೆ ಸ್ವಲ್ಪ ಸೊತ್ತಿದೆ. ಅವರು ಮರಣ ಹೊಂದಿದರೆ ಮಗನಿಗೆ ದೊರೆಯುವುದರ ಅರ್ಧದಷ್ಟು ಮಾತ್ರ ಮಗಳಿಗೆ ದೊರೆಯುತ್ತದಷ್ಟೇ. ಆದ್ದರಿಂದ ಮರಣ ಹೊಂದುವುದಕ್ಕಿಂತ ಮುಂಚೆಯೇ ಅವರು ಸಂಪತ್ತನ್ನು ಎರಡು ಮಕ್ಕಳಿಗೂ ಸಮಾನವಾಗಿ ಪಾಲು ಮಾಡಿ ನೀಡುವುದಾದರೆ ಅದರಲ್ಲಿ ತಪ್ಪಿದೆಯೇ? ಹಾಗೆ ಮಾಡುವುದನ್ನು ಮಗನು ಇಷ್ಟಪಡದಿದ್ದರೆ? ಅವರು ಬದುಕಿರುವಾಗ ಹಾಗೆ ಪಾಲು ಮಾಡಿಕೊಡಲು ಸಾಧ್ಯವಾಗದಿದ್ದರೆ ತನ್ನ ಮರಣಾನಂತರ ಹಾಗೆ ಮಾಡಬೇಕೆಂದು ಅಭಿಲಾಶೆ ವ್ಯಕ್ತಪಡಿಸಿದರೆ ಅದರಂತೆ ಮಾಡಲು ಹಕ್ಕುದಾರರು ಬಾಧ್ಯಸ್ಥರಾಗುತ್ತಾರೆಯೇ?

  ಉತ್ತರ: ಬದುಕಿರುವ ಓರ್ವರ ಸೊತ್ತನ್ನು ಅವರು ಬಯಸುವ ವ್ಯಕ್ತಿಗೆ ದಾನ ಮಾಡಬಹುದಾಗಿದೆ ಯಾ ಮಾರಾಟ ಮಾಡಬಹುದಾಗಿದೆ. ಅದರಲ್ಲಿ ಮಕ್ಕಳ ಅಥವಾ ಇತರ ಬಂಧು ಮಿತ್ರಾದಿಗಳ ಇಷ್ಟಾನಿಷ್ಟಗಳು ಪ್ರಸಕ್ತವಲ್ಲ. ಸೊತ್ತನ್ನು ಮಕ್ಕಳಿಗೆ ದಾನ ಮಾಡುವುದಾದರೆ ಅವರಲ್ಲಿ ಕೆಲವರನ್ನು ಹೆಚ್ಚು ಪ್ರೀತಿಸುವ ಇನ್ನು ಕೆಲವರನ್ನು ಕಡಿಮೆ ಪ್ರೀತಿಸುವ ರೀತಿಯಲ್ಲಿ ದಾನ ಮಾಡಬಾರದೆಂದು ಪ್ರವಾದಿ(ಸ) ಕಲಿಸಿದ್ದಾರೆ. ಹಾಗೆ ದಾನ ಮಾಡುವುದನ್ನು ಪ್ರವಾದಿ(ಸ) ನಿಷೇಧಿಸಿದ್ದಾರೆ. ತನ್ನ ಮರಣಾನಂತರ ಸಮಾನ ಪಾಲು ಮಾಡಲಾರರು ಎಂಬ ಕಾರಣಕ್ಕೆ ಪಾಲು ಮಾಡುವುದು ಸರಿಯಲ್ಲ. ಸೊತ್ತನ್ನು ವಸಿಯ್ಯತ್ ಮಾಡುವ ವಿಷಯದಲ್ಲಿ ಮಾತ್ರ ನಿಯಂತ್ರಣವಿರುವುದು. ಪೂರ್ತಿ ಸೊತ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಭಾಗವನ್ನು ಅನ್ಯರಿಗಾಗಿ ವಸಿಯ್ಯತ್ ಮಾಡಬಾರದು. ಆಸ್ತಿಯಲ್ಲಿ ಪಾಲು ದೊರೆಯುವವರಿಗಾಗಿ ಮಾಡುವ ವಸಿಯ್ಯತ್ ಕೂಡಾ ಅಸಿಂಧುವಾಗಿರುತ್ತದೆ. ಬಡವಳಾದ ಮಗಳು ತನ್ನ ಕಾಲಾನಂತರ ಪಾಲು ದೊರೆಯುವ ಹಕ್ಕುದಾರಳಾಗುತ್ತಾಳೆ ಎಂಬುದು ಈಗ ಅವಳಿಗೆ ದಾನ ಮಾಡುವುದಕ್ಕೆ ತಡೆಯಾಗುವುದಿಲ್ಲ. ಆದರೆ ಸಮಾನ ಪಾಲು ಮಾಡಿ ತೆಗೆಯಬೇಕೆಂಬ ವಸೀಯತ್ ಮಾಡುವುದಕ್ಕೆ ಸೊತ್ತಿನ ಒಡೆಯನಿಗೆ ಅಧಿಕಾರವಿಲ್ಲ. ವಾರೀಸು ಸೊತ್ತಿನ ಯಾ ಇತರ ಇಸ್ಲಾಮಿನ ನಿಯಮದಲ್ಲಿ ತಿದ್ದುಪಡಿ ಮಾಡುವ ಅಧಿಕಾರ ಯಾರಿಗೂ ಇಲ್ಲ. ವಾರೀಸು ಸೊತ್ತು ಹಕ್ಕುದಾರರು ಶ್ರೀಮಂತನಿರಲಿ ಬಡವನಿರಲಿ ಅಲ್ಲಾಹನು ವಿಧಿಸಿದ ರೀತಿಯಲ್ಲೇ ಪಾಲು ಮಾಡಬೇಕಾದುದು ಸತ್ಯವಿಶ್ವಾಸಿಗಳ ಕರ್ತವ್ಯವಾಗಿದೆ. ಪಾಲು ಆದ ನಂತರ ಸಹೋದರ ತನ್ನ ಸಹೋದರಿಗೆ ತನ್ನ ಸೊತ್ತಿನಿಂದ ದಾನ ಮಾಡುವುದರಲ್ಲಿ ವಿರೋಧವಿಲ್ಲ. ಸಹೋದರ ದಾನ ಮಾಡದೆ ಇದ್ದರೆ ಕೋಪಿಸುವುದೋ-ಬೇಸರ ವ್ಯಕ್ತಪಡಿಸುವುದೋ ಸರಿಯಲ್ಲ. ಏಕೆಂದರೆ ಇದು ಅಲ್ಲಾಹನು ನಿಶ್ಚಯಿಸಿದ ಪಾಲುಗಳು. ಅದನ್ನು ಅನುಸರಿಸುವುದಕ್ಕೆ ಧರ್ಮಶಾಸ್ತ್ರ ಪರವಾಗಿ ಅವರು ಬಾಧ್ಯಸ್ಥರಲ್ಲ. ಕಾರಣ ವಾರೀಸಿನ ಹಕ್ಕುದಾರರಿಗೆ ವಸಿಯ್ಯತ್ ಕಾನೂನಿನ ಬಲವಿಲ್ಲ.

 • ಬಿಸ್ಮಿಲ್ಲಾ... ಏಕಿಲ್ಲ?
  ismika14-05-2016

  ಪ್ರಶ್ನೆ: ಸಂಚಿಕೆ 39ರಲ್ಲಿ `ಕುರ್‍ಆನಿನ ಹಾದಿಯಲ್ಲಿ' ಎಂಬ ಅಂಕಣದಲ್ಲಿ `ಬಿಸ್ಮಿಲ್ಲಾಹಿರ್ರಹ್ಮಾನಿರ್ರಹೀಮ್' ವಾಕ್ಯವು ಕುರ್‍ಆನಿನ 114 ಅಧ್ಯಾಯಗಳ ಪೈಕಿ ಒಂದನ್ನು ಬಿಟ್ಟು ಉಳಿದೆಲ್ಲ ಅಧ್ಯಾಯಗಳ ಆರಂಭದಲ್ಲಿ ಕಾಣಸಿಗುತ್ತದೆ ಎಂದಿದೆ. ಬಿಟ್ಟಿರುವ ಆ ಅಧ್ಯಾಯದಲ್ಲಿ ಬಿಸ್ಮಿಲ್ಲಾ... ಏಕೆ ಉಪಯೋಗಿಸಿಲ್ಲ ಎಂಬುದನ್ನು ವಿವರವಾಗಿ ತಿಳಿಸಬೇಕಾಗಿ ಕೋರುತ್ತೇನೆ.

  ಉತ್ತರ: ಕುರ್‍ಆನಿನ 113 ಅಧ್ಯಾಯಗಳ ಆರಂಭದಲ್ಲಿ ಬಿಸ್ಮಿಲ್ಲಾ... ಬರೆಯಲಾಗಿದೆ. ಕೇವಲ ಅತ್ತೌಬಃ ಅಧ್ಯಾಯದ ಆರಂಭದಲ್ಲಿ ಅದನ್ನು ಬರೆಯಲಾಗಿಲ್ಲ. ಅದಕ್ಕೆ ವಿದ್ವಾಂಸರು ಹಲವು ಕಾರಣಗಳನ್ನು ಕೊಡುತ್ತಾರೆ. ಕುರ್‍ಆನ್ ಅಲ್ಲಾಹನು ಪ್ರವಾದಿ ಮುಹಮ್ಮದ್(ಸ)ರಿಗೆ ವಹೀ ಮೂಲಕ ಕಳಿಸಿದ್ದಾನೆ. 23 ವರ್ಷಗಳಲ್ಲಿ ವಿವಿಧ ಸಂದರ್ಭ ಮತ್ತು ಸನ್ನಿವೇಶಗಳಲ್ಲಿ ಕೆಲವೊಮ್ಮೆ ಕೆಲವು ಆಯತ್ ಗಳು ಇನ್ನು ಕೆಲವೊಮ್ಮೆ ಕೆಲವು ಅಧ್ಯಾಯಗಳ ರೂಪದಲ್ಲಿ ಅದು ಅವತೀರ್ಣಗೊಂಡಿತು. ಕುರ್‍ಆನ್ ಅವತೀರ್ಣಗೊಂಡಾಗಲೆಲ್ಲ ಪ್ರವಾದಿಯವರು ಬರಹಗಾರರನ್ನು ಕರೆಸಿ ಅದನ್ನು ಲಿಖಿತಗೊಳಿಸುತ್ತಿದ್ದರು. ಆಗ ಇಂತಹ ಸೂಕ್ತವನ್ನು ಇಂತಹ ಸೂಕ್ತಕ್ಕಿಂತ ಮುಂಚೆ ಅಥವಾ ಅದರ ನಂತರ ಬರೆಯಬೇಕೆಂದು ಆದೇಶಿಸುತ್ತಿದ್ದರು. ಏಕೆಂದರೆ ಪ್ರವಾದಿಯವರಿಗೆ ಓದು ಬರಹ ಬರುತ್ತಿರಲಿಲ್ಲ. ಅವರ ಈ ಆದೇಶವು ಅಲ್ಲಾಹನ ಮಾರ್ಗದರ್ಶನದಿಂದಲೇ ಆಗಿತ್ತು. ಅಲ್ಲಾಹನು ಹೇಳುತ್ತಾನೆ- ಇದನ್ನು (ಕುರ್‍ಆನನ್ನು) ಕಂಠಪಾಠ ಮಾಡಿಸುವ ಮತ್ತು ಓದಿಸುವ ಹೊಣೆ ನಮ್ಮ ಮೇಲಿದೆ. ಆದ್ದರಿಂದ ನಾವು ಇದನ್ನು ಓದುತ್ತಿರುವಾಗ ನೀವು ಇದರ ಪಠಣವನ್ನು ಗಮನವಿಟ್ಟು ಆಲಿಸಿರಿ. (ಅಲ್ ಕಿಯಾಮ: 17-18) ಕುರ್‍ಆನಿನ ಕ್ರೋಢೀಕರಣವು ಸಂಪೂರ್ಣವಾಗಿ ಅಲ್ಲಾಹನ ಮಾರ್ಗದರ್ಶನದಿಂದಲೇ ಆಗಿದೆಯೆಂದು ಇದರಿಂದ ತಿಳಿದು ಬರುತ್ತದೆ.
  ಈ ರೀತಿ ಎಲ್ಲ ಅಧ್ಯಾಯಗಳ ಆರಂಭದಲ್ಲಿ ಬಿಸ್ಮಿಲ್ಲಾ ಬರೆಯುವಂತೆ ಪ್ರವಾದಿ(ಸ) ಆದೇಶಿಸಿದರು. ಆದರೆ ಸೂರಃ ತೌಬಾದ ಆರಂಭದಲ್ಲಿ ಅದನ್ನು ಬರೆಯಲು ಹೇಳಲಿಲ್ಲ. ಸೂರ ತೌಬಾ ಮತ್ತು ಅದಕ್ಕಿಂತ ಮುಂಚಿನ ಅನ್‍ಫಾಲ್ ಸೂರವು ಒಂದೇ ರೀತಿಯಲ್ಲಿದ್ದು, ಅವುಗಳ ವಿಷಯದಲ್ಲೂ ಸಾಮ್ಯತೆ ಕಂಡು ಬರುತ್ತದೆ. ಆದ್ದರಿಂದ ಅನ್‍ಫಾಲ್ ಅಧ್ಯಾಯ ಮತ್ತು ಅತ್ತೌಬ ಒಂದೇ ಸರಣಿಯದ್ದೆಂಬ ಕಾರಣಕ್ಕಾಗಿ ಮಧ್ಯದಲ್ಲಿ ಬಿಸ್ಮಿಲ್ಲಾ ಬರೆಯಲಾಗಿಲ್ಲವೆಂದು ವಿದ್ವಾಂಸರು ಹೇಳುತ್ತಾರೆ. ಎರಡನೆಯದಾಗಿ ಬಿಸ್ಮಿಲ್ಲಾ... ಎಂಬ ವಾಕ್ಯದಲ್ಲಿ ಅಲ್ಲಾಹನ ದಯೆ ಕರುಣೆಗಳ ಪ್ರಸ್ತಾಪವಿದೆ, ಅದು ಶಾಂತಿಯ ಸಂಕೇತವೂ ಹೌದು. ಆದರೆ ಅತ್ತೌಬ ಅಧ್ಯಾಯವು ಮುಶ್ರಿಕರ ಮೇಲೆ ಕಾಠಿಣ್ಯ ತೋರುವ, ಅವರನ್ನು ಪವಿತ್ರ ಹರಮ್ (ಕಅಬಾ ಭವನ) ನಿಂದ ಹೊರ ಹಾಕುವ ಮತ್ತು ಅವರಿಗೆ ನೀಡಲಾದ ಅವಧಿ ಮುಗಿದರೂ ಅಲ್ಲಿಂದ ಹೋಗದವರನ್ನು ಸೆರೆ ಹಿಡಿಯುವ ಮತ್ತು ವಧಿಸುವ ಪ್ರಸ್ತಾಪವಿರುವುದರಿಂದ ಅದರ ಆರಂಭದಲ್ಲಿ ಬಿಸ್ಮಿಲ್ಲಾ... ಬರೆಯಲಾಗಿಲ್ಲವೆಂಬ ಅಭಿಪ್ರಾಯವೂ ವಿದ್ವಾಂಸರ ಒಂದು ವಿಭಾಗದಲ್ಲಿದೆ.
  ಮೂರನೆಯದಾಗಿ, ಪ್ರವಾದಿಯವರ(ಸ) ವಿಯೋಗಾ ನಂತರ ಕುರ್ ಆನನ್ನು ಗ್ರಂಥ ರೂಪದಲ್ಲಿ ಕ್ರೋಢೀಕರಿಸುವ ಪ್ರಶ್ನೆ ಎದ್ದಾಗ, ಸಹಾಬಿಗಳ ತಂಡಕ್ಕೆ ಅದನ್ನು ಹೊಣೆಯನ್ನು ವಹಿಸಿ ಕೊಡಲಾಯಿತು. ಅಬೂಬಕ್ಕರ್‍ರ(ರ) ಮಾರ್ಗದರ್ಶನದಂತೆ ಅದನ್ನು ಗ್ರಂಥ ರೂಪಕ್ಕೆ ತಂದಾಗ ಅದರಲ್ಲೂ ಸೂರಃ ತೌಬಾದಲ್ಲಿ ಬಿಸ್ಮಿಲ್ಲಾ... ನಮೂದಿಸಲಾಗಲಿಲ್ಲ. ಅನಂತರ ಉಸ್ಮಾನ್‍ರ(ರ) ಕಾಲದಲ್ಲಿ ಕುರ್‍ಆನಿನ ಪ್ರತಿಗಳನ್ನು ಮಾಡಿಸಿ ಬೇರೆ ಬೇರೆ ರಾಷ್ಟ್ರಗಳಿಗೆ ಕಳಿಸಲಾಯಿತು. ಆ ಪ್ರತಿಗಳಲ್ಲೂ ಅತ್ತೌಬ ಅಧ್ಯಾಯದಲ್ಲಿ ಬಿಸ್ಮಿಲ್ಲಾ... ಬರೆಯಲಾಗಿಲ್ಲ. ಕುರ್‍ಆನಿನ ಕ್ರೋಢೀಕರಣದಲ್ಲಿ ಅತ್ಯಂತ ಸೂಕ್ಷ್ಮತೆ ಮತ್ತು ಜಾಗ್ರತೆ ಪಾಲಿಸಲಾಗಿದೆ.
  ಈ ಎಲ್ಲ ಕಾರಣಗಳಿಂದಾಗಿ ಅತ್ತೌಬಃ ಅಧ್ಯಾಯದ ಆರಂಭದಲ್ಲಿ ಬಿಸ್ಮಿಲ್ಲಾ ಓದಬಾರದೆಂದು ವಿದ್ವಾಂಸರು ಹೇಳಿದ್ದಾರೆ. ಕರ್ಮಶಾಸ್ತ್ರ ಪಂಡಿತರು ಹೇಳುವಂತೆ ಅನ್ಫಾಲ್ ಓದುತ್ತಾ ಇದ್ದು ಪಾರಾಯಣವನ್ನು ಅದರ ನಂತರವೂ ಮುಂದುವರಿಸುವವರು ಮಧ್ಯದಲ್ಲಿ ಬಿಸ್ಮಿಲ್ಲಾ ಪಠಿಸದೆ ಅತ್ತೌಬಃ ಅಧ್ಯಾಯವನ್ನು ಪಠಿಸಬೇಕು. ಆದರೆ ಕೇವಲ ಅತ್ತೌಬಃ ಆರಂಭಿಸುವವರು ಬಿಸ್ಮಿಲ್ಲಾ...ವನ್ನು ಪಠಿಸಬೇಕು. ಕೆಲವು ಅಜ್ಞಾನಿಗಳು ಹೇಳುವಂತೆ, ಅತ್ತೌಬಃ ಅಧ್ಯಾಯವಾಗಲಿ ಅದರ ಯಾವುದೇ ಸೂಕ್ತವನ್ನಾಗಲಿ ಪ್ರತ್ಯೇಕವಾಗಿ ಪಠಿಸುವಾಗ ಬಿಸ್ಮಿಲ್ಲಾ... ಓದಲೇಬಾರದು. ಅದು ತಪ್ಪು. ಆದರೆ ಅವರು ಹಾಗೆ ಆರಂಭಿಸುವಾಗ ಅವೂದು ಬಿಲ್ಲಾಹಿ ಮಿನನ್ನಾರ್ (ನಾನು ನರಕಾಗ್ನಿಯಿಂದ ಅಲ್ಲಾಹನ ಅಭಯ ಯಾಚಿಸುತ್ತೇನೆ) ಎಂದು ಹೇಳುತ್ತಾರೆ. ಇದೊಂದು ತಪ್ಪು ಕಲ್ಪನೆಯಾಗಿದೆ. ಇದಕ್ಕೆ ಪ್ರವಾದಿಯವರ ಅಥವಾ ಸಹಾಬಿಗಳ ಚರ್ಯೆಯಲ್ಲಿ ಯಾವುದೇ ಆಧಾರವಿಲ್ಲ.

 • ನಿಂತು ಮೂತ್ರ ಹೊಯ್ಯುವುದರ ಕುರಿತು ವಿಧಿ!
  ismika20-06-2016

  ಪ್ರಶ್ನೆ: ನಿಂತು ಕೊಂಡು ಮೂತ್ರ ವಿಸರ್ಜಿಸುವುದರ ವಿಧಿಯೇನು? ಶರೀರಕ್ಕೋ ಬಟ್ಟೆಗೋ ಮೂತ್ರ ರಟ್ಟುವುದಿಲ್ಲ ಎಂದು ಖಚಿತವಿದ್ದರೆ ಸಮ್ಮತಿಕರವೇ?

  ಉತ್ತರ: ನಿಂತು ಕೊಂಡು ಮೂತ್ರ ವಿಸರ್ಜಿಸುವುದರಲ್ಲಿ ತಪ್ಪಿಲ್ಲ. ವಿಶೇಷವಾಗಿ ಅದು ಅನಿವಾರ್ಯವಾಗುವ ಪರಿಸ್ಥಿತಿಯಲ್ಲಿ. ಆದರೆ ಮೂತ್ರ ವಿಸರ್ಜನೆ ಮಾಡುವ ವ್ಯಕ್ತಿಯ ನಗ್ನತೆಯನ್ನು ಬೇರೆ ಯಾರೂ ಕಾಣದಿರುವಂತೆ ಮರೆ ಮಾಡಿಕೊಳ್ಳುವುದು ಮಾತ್ರ ಕಡ್ಡಾಯವಾಗಿದೆ. ಜೊತೆಗೆ ಮೂತ್ರ ಶರೀರಕ್ಕೆ ರಟ್ಟುವುದಿಲ್ಲ ಎಂದು ಖಚಿತ ಪಡಿಸಿಕೊಳ್ಳಬೇಕು. ಆದರೆ ಕೂತು ಮೂತ್ರ ವಿಸರ್ಜಿಸುವುದು ಉತ್ತಮ. ಪ್ರವಾದಿವರ್ಯರ(ಸ)ಜೀವನ ಚರ್ಯೆ ಅದನ್ನೇ ಕಲಿಸುತ್ತಿದೆ. ನಗ್ನತೆ ಬಹಿರಂಗಗೊಳ್ಳದಿರಲು ಮೂತ್ರ ಶರೀರಕ್ಕೆ ರಟ್ಟದಿರಲು ಅತ್ಯಂತ ಉತ್ತಮ ಕೂತು ಮೂತ್ರ ಮಾಡುವುದಾಗಿದೆ.

 • ಮೃತರ ಬಾಕಿಯಾದ ಉಪವಾಸ ಇತರರು ಭರ್ತಿ ಮಾಡಬೇಕೆ?
  ismika21-06-2016

  ಪ್ರಶ್ನೆ: ಒಬ್ಬರು ಮೃತರಾಗಿದದು ಅವರ ಕೆಲವು ಉಪವಾಸ ಬಾಕಿಯಾಗಿ ಉಳಿದಿದೆ. ಅವರಿಗಾಗಿ ಬೇರೆಯವರು ಬಾಕಿಯಾಗಿರುವ ಉಪವಾಸವನ್ನು ಕಝಾ ಆಗಿ ನಿರ್ವಹಿಸಬೇಕೆ?

  ಉತ್ತರ: ರೋಗಿಗೆ ಉಪವಾಸ ಬಾಕಿಯಾಗಿದ್ದು ಕಝಾ ಆಗಿ ನಿರ್ವಹಿಸುವ ಮೊದಲು ಅವರು ಮೃತರಾಗಿ ಬಿಟ್ಟಿದ್ದರೆ ಹಾಗೂ ಅಶ್ರದ್ಧೆಯಿಂದ, ನಿರ್ಲಕ್ಷ್ಯದಿಂದ ಆತ ಉಪವಾಸ ನಿರ್ವಹಿಸಿಲ್ಲವಾಗಿದ್ದರೆ ಬೇರೆಯವರು ಅವರಿಗಾಗಿ ಆ ಬಾಕಿಯಿರುವ ಉಪವಾಸ ನಿರ್ವಹಿಸಿ ಪೂರ್ತಿಗೊಳಿಸಬೇಕು. ಆದರೆ ಅತ ನಿರ್ಲಕ್ಷಿಸಿಲ್ಲ, ಅಶ್ರದ್ಧೆ ತೋರಿಸಿಲ್ಲ ಎಂದಾದರೆ ಇತರರು ಕಝಾ ನಿರ್ವಹಿಸಬೇಕಾಗಿಲ್ಲ.

 • ಅಪಾಯ ಸಾಧ್ಯತೆಯಿರುವ ಪರ್ವತಾರೋಹಣ,ಸ್ಕೈ ಡೈವಿಂಗ್, ಸರ್ಫಿಂಗ್‍ನಂತಹ ಸಾಹಸಿಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಇಸ್ಲಾಮ್‍ನ ವಿಧಿಯೇನು?
  ismika21-06-2016

  ಪ್ರಶ್ನೆ:ಅಪಾಯ ಸಾಧ್ಯತೆಯಿರುವ ಪರ್ವತಾರೋಹಣ,ಸ್ಕೈ ಡೈವಿಂಗ್, ಸರ್ಫಿಂಗ್‍ನಂತಹ ಸಾಹಸಿಕ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರ ಬಗ್ಗೆ ಇಸ್ಲಾಮ್‍ನ ವಿಧಿಯೇನು?

  ಉತ್ತರ: ಮನುಷ್ಯನು ಶಾರೀರಿಕ ಹಾಗೂ ಮಾನಸಿಕ ಆರೋಗ್ಯವಂತರಾಗಿರಬೇಕೆಂದು ಇಸ್ಲಾಮ್ ಕಲಿಸಿದೆ. ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಲವಲವಿಕೆ ದೈಹಿಕ ಕ್ಷಮತೆ ಮನುಷ್ಯನಲ್ಲಿ ಹೆಚ್ಚಳವಾಗುತ್ತದೆ. ಆದ್ದರಿಂದ ಮಕ್ಕಳಿಗೆ ಈಜು, ಕುದುರೆ ಸವಾರಿ ಹಾಗೂ ಬಿಲ್ಗಾರಿಕೆಯನ್ನು ಕಲಿಸಬೇಕೆಂದು ಪ್ರವಾದಿವರ್ಯರು(ಸ)ಹೇಳಿದ್ದಾರೆ. ದುರ್ಬಲನಾದ ವಿಶ್ವಾಸಿಗಿಂತ ಪ್ರಬಲ ವಿಶ್ವಾಸಿ ಅಲ್ಲಾಹನಿಗೆ ಇಷ್ಟ ಎಂದು ಪ್ರವಾದಿ ವಚನಗಳಲ್ಲಿವೆ.
  ಆದರೆ ಇಂತಹ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸುವಾಗ ಅಗತ್ಯ ಸುರಕ್ಷಾ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ. ವಿಶೇಷವಾಗಿ ಪರ್ವತಾರೋಹಣ, ಸ್ಕೈ ಡೈವಿಂಗ್, ಸರ್ಫಿಂಗ್, ರೇಸ್ ಮುಂತಾದ ಸ್ಪರ್ಧೆಯಂತಹ ಸಾಹಸಿಕ ಕ್ರೀಡೆಗಳಲ್ಲಿ.
  ಇಸ್ಲಾಮ್‍ನ ಉದೇಶಿತ ಗುರಿಗಳಲ್ಲಿ ವ್ಯಕ್ತಿಯ ಜೀವ ಸಂರಕ್ಷಿಸುವುದು ಒಂದು. ಮನುಷ್ಯನ ಪ್ರಾಣವನ್ನು ಸೂಜಿಯ ಮೊನೆಯಲ್ಲಿಟ್ಟು ಸುರಕ್ಷೆ ವಿಧಾನವಿಲ್ಲದೆ ಆಡುವ ಸಾಹಸಿಕ ಕ್ರೀಡೆಗಳು ಆತ್ಮಹತ್ಯಾ ಪರವಾಗಿದೆ.
  ಆದರೆ ಸರಿಯಾದ ತರಬೇತಿ ಅಗತ್ಯ ಸುರಕ್ಷೆ ಏರ್ಪಡಿಸಿದ್ದರೆ ಯಾವ ಕ್ರೀಡಾ ವಿಭಾಗಗಳಲ್ಲಿಯೂ ಭಾಗವಹಿಸುವುದನ್ನು ಇಸ್ಲಾಮ್‍ನಲ್ಲಿ ನಿಷಿದ್ಧವಿಲ್ಲ. ಮನುಷ್ಯನ ಸುರಕ್ಷೆಗೆ ಅಗತ್ಯ ಏರ್ಪಾಡು ಮಾಡುವುದು ನಾವು ಕೈಗೊಳ್ಳಬೇಕಾದ ಪ್ರಾಥಮಿಕ ಕ್ರಮವಾಗಿದೆ.
  ಒಂದು ಸೈಕಲಲ್ಲಿ ಸರಿಯಾದ ತರಬೇತಿ ಇಲ್ಲದೆ ಸವಾರಿ ಹೊರಟರೆ ಅದು ಕೂಡಾ ಅವಘಡಕ್ಕೆ ಕಾರಣವಾಗಬಹುದು.

 • ಮುಸ್ಲಿಮಳಲ್ಲದ ಪತ್ನಿಗೆ ಫಿತ್ರ್ ಝಕಾತ್ ನೀಡಬಹುದೇ?
  ismika01-07-2016
  ಪ್ರಶ್ನೆ: ಮುಸ್ಲಿಮನಾದ ಪತಿ ಇಸ್ಲಾಮ್ ಸ್ವೀಕರಿಸದಿರುವ ತನ್ನ ಪತ್ನಿಗೆ ಫಿತ್ರ್ ಝಕಾತ್ ನೀಡಲು ಬಾಧ್ಯಸ್ಥನೆ?
  ಉತ್ತರ: ಮುಸ್ಲಿಮ್ ಆದ ಒಬ್ಬ ಪತಿ ಇಸ್ಲಾಮ್ ಸ್ವೀಕರಿಸದ ಆತನ ಪತ್ನಿಗೆ ಫಿತ್ರ್ ಝಕಾತ್ ನೀಡಬೇಕಿಲ್ಲ. ಯಾಕೆಂದರೆ ಫಿತ್ರ್ ಝಕಾತ್ ಮುಸ್ಲಿಮರಿಗೆ ಮಾತ್ರ ಬಾಧಕವಾಗಿದೆ. ಸಂಕ್ಷಿಪ್ತವಾಗಿ ಅದನ್ನು ಈ ರೀತಿ ವಿವರಿಸಬಹುದಾಗಿದೆ: ಗ್ರಂಥದವರಾದ (ಕ್ರೈಸ್ತ-ಯಹೂದಿ) ಪತ್ನಿಯರಿಗೆ ಮುಸ್ಲಿಮ್ ಆದ ಪತಿ ಫಿತ್ರ್ ಝಕಾತ್ ನೀಡಬೇಕಿಲ್ಲ. ಪಿತ್ರ್ ಝಕಾತ್ ಮುಸ್ಲಿಮರಿಗೆ ಮಾತ್ರ ಬಾಧಕವಾಗಿದೆ. ಇಬ್ನು ಉಮರ್(ರ) ವರದಿ ಮಾಡಿದ ಹದೀಸ್ ಇದಕ್ಕೆ ಆಧಾರವಾಗಿದೆ. ಮುಸ್ಲಿಮರಾದ ಗುಲಾಮರಿಗೂ ಸ್ವತಂತ್ರರಿಗೂ ಮಹಿಳೆಗೂ ಪುರುಷನಿಗೂ ಚಿಕ್ಕವನಿಗೂ ದೊಡ್ಡವನಿಗೂ ಒಂದು ಸ್ವಾಅï ಖರ್ಜೂರ ಅಥವಾ ಒಂದು ಸ್ವಾಅï ಯವವನ್ನೋ ನೀಡಬಹುದು ಎಂದು ಅಲ್ಲಾಹನ ಪ್ರವಾದಿ(ಸ) ಆದೇಶಿಸಿದ್ದಾರೆ.
  ವರದಿಯಲ್ಲಿ ಮುಸ್ಲಿಮರಾದ ಎಂದು ಸ್ಪಷ್ಟವಾಗಿ ಹೇಳಿದ್ದರಿಂದ ಫಿತ್ರ್ ಝಕಾತ್ ಅದರಲ್ಲಿ ವಿವರಿಸಲಾದ ಘಟಕಗಳಿಗೆ ಕಡ್ಡಾಯವಾಗುತ್ತದೆ ಎಂದು ತಿಳಿಯುತ್ತದೆ. ಇಮಾಮ್ ಮುಗ್ನಿ ಅವರ ಅಲ್ ಮುಹತಾಜ್‍ನಲ್ಲಿ ಹಾಗೂ ಹಾಫಿಝ್ ಇಬ್ನು ಹಜರ್ ಅಲ್ ಅಸ್ಖಲಾನಿ ತನ್ನ ಫತ್ಹುಲ್‍ಬಾರಿಯಲ್ಲಿ ಈ ವಿಷಯವನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
 • ತನ್ನದಲ್ಲದ ಹಣ ಬ್ಯಾಂಕ್ ಖಾತೆಗೆ ಬಂದರೆ ಏನು ಮಾಡಬೇಕು?
  ismika08-07-2016

  ಪ್ರಶ್ನೆ:ಬ್ಯಾಂಕ್ ಖಾತೆ ಮೂಲಕ ಸಂಬಳವನ್ನು ಸ್ವೀಕರಿಸುವ ಓರ್ವ ಉದ್ಯೋಗಿ ನಾನು. ಒಂದು ತಿಂಗಳಲ್ಲಿ ಯಾವುದೋ ಪ್ರಮಾದದಿಂದ ಎರಡು ಬಾರಿ ಸಂಬಳ ನನ್ನ ಅಕೌಂಟ್‍ಗೆ ಬಂತು. ಕಂಪೆನಿಯ ಅಧಿಕಾರಿಗಳಿಗೆ ಇದನ್ನು ತಿಳಿಸಿದಾಗ ಇನ್ನಾರದೇ ಅಕೌಂಟ್‍ನಲ್ಲಿ ಹಣ ಕಡಿಮೆ ಬಂದರೆ ನಿಮ್ಮನ್ನು ಕರೆದು ತಿಳಿಸಲಾಗುವುದು ಎಂದು ಹೇಳಿದರು. ಆದರೆ ಈ ವರೆಗೆ ಆ ವಿಷಯದಲ್ಲಿ ತನ್ನನ್ನು ಕರೆದಿಲ್ಲ. ಆ ಹಣ ತಾನು ಬಳಸುವುದು ಹಲಾಲ್ ಆಗಿದೆಯೇ? ಅಲ್ಲದಿದ್ದರೆ ಆ ಹಣವನ್ನು ಏನು ಮಾಡಬೇಕು?

  ಉತ್ತರ: ಈ ಹಣ ನಿಮ್ಮದಲ್ಲದ್ದಾದ್ದರಿಂದ ಅದನ್ನು ಬಳಸುವ ಹಕ್ಕು ನಿಮಗಿಲ್ಲ. ನೀವು ಅದನ್ನು ಕಂಪೆನಿಗೆ ಕೊಡಬೇಕು. ಅವರದನ್ನು ವಾಪಸು ಸ್ವೀಕರಿಸಲು ಸಿದ್ಧರಿಲ್ಲದಿದ್ದರೆ ನೀವು ಅದನ್ನು ಬಡವರಿಗೆ ನೀಡಬಹುದು. ಹಲಾಲ್ ಅಲ್ಲದ ಹಣವನ್ನು ನಮ್ಮ ಅಗತ್ಯಗಳಿಗೆ ಉಪಯೋಗಿಸುವುದು ಅನುವದನೀಯವಲ್ಲ ಎಂದು ಕರ್ಮಶಾಸ್ತ್ರ ವಿದ್ವಾಂಸರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಡ ಜನರಿಗಾಗಿ ಅದನ್ನು ಖರ್ಚು ಮಾಡಬಹುದೆಂದು ಅವರು ಹೇಳಿದ್ದಾರೆ.
  "ಅಲ್ಲಾಹನೇ, ನೀನು ನಿಷಿದ್ಧ ಮಾಡಿದ್ದಕ್ಕೆ ಬದಲಾಗಿ ನೀ ಅನುವದನೀಯಗೊಳಿಸಿದ್ದನ್ನು ತನಗೆ ನೀಡು. ನಿನ್ನ ಔದಾರ್ಯದಿಂದಾಗಿ ನೀನಲ್ಲದವರ ಔದಾರ್ಯ ಅಗತ್ಯವಿಲ್ಲದವರನ್ನಾಗಿಸು" ಎಂದು ಪ್ರಾರ್ಥನೆಯನ್ನು ನಿರಂತರ ಪ್ರಾರ್ಥಿಸಬೇಕಾಗಿದೆ.

 • ಇಸ್ಲಾಮೀ ವಿದ್ಯಾಭ್ಯಾಸದ ಉದ್ದೇಶ ಏನು?
  ismika11-07-2016

  ಪ್ರಶ್ನೆ: ಇಸ್ಲಾಮೀ ವಿದ್ಯಾಭ್ಯಾಸದ ಉದ್ದೇಶ ಏನು?

  ಉತ್ತರ: ಇಸ್ಲಾಮ್ ವಿದ್ಯಾಭ್ಯಾಸ ಧಾರ್ಮಿಕ ಜ್ಞಾನಗಳಿಸಬೇಕೆಂದು ಮಾತ್ರ ಕರೆ ನೀಡುವುದಿಲ್ಲ. ಬದಲಾಗಿ ಧರ್ಮ ಜ್ಞಾನದೊಂದಿಗೆ ಅಂಧಕಾರವನ್ನು ದೂರೀಕರಿಸಬೇಕೆಂಬ ಪ್ರಕೃತಿ ಶಾಸ್ತ್ರ, ಮನಃಶಾಸ್ತ್ರ, ಇತಿಹಾಸ, ಭೂಗೋಳ ಶಾಸ್ತ್ರ, ಸಮಾಜ ವಿಜ್ಞಾನ ಮುಂತಾದ ಎಲ್ಲ ಜ್ಞಾನಗಳು ಇಸ್ಲಾಮೀ ವಿದ್ಯಾಭ್ಯಾಸದ ಭಾಗವಾಗಿದೆ. ಸೃಷ್ಟಿಯಲ್ಲಿ ಹೊಳೆಯುವ ದೇವನ ಶಕ್ತಿ ಮಹಾತ್ಮೆಗಳ ಕುರಿತು ಜ್ಞಾನ ನೀಡುವುದು. ಆ ಮೂಲಕ ಆ ದೇವನಿಗೆ ಶರಣಾಗಬೇಕಾದವನು ತಾನು ಎಂಬ ಪ್ರಜ್ಞೆ ಸದಾ ಇರಬೇಕು. ದೇವನ ಪ್ರತಿನಿಧಿ ಎಂಬ ನೆಲೆಯಲ್ಲಿ ಎಲ್ಲ ಸೃಷ್ಟಿ ಜಾಲಗಳೊಂದಿಗೆ ಕರುಣೆಯಿಂದ ನ್ಯಾಯದಿಂದ ವರ್ತಿಸಬೇಕೆಂದು ಕಲಿಸಿ ಕೊಡುವುದು ಇಸ್ಲಾಮೀ ವಿದ್ಯಾಭ್ಯಾಸದ ಉದ್ದೇಶವಾಗಿದೆ.
  ಕಣ್ಣೆದುರಿಗಿರುವ ವಸ್ತುಗಳ ಕುರಿತು ಮಾತ್ರವಲ್ಲ, ಪ್ರಾಚೀನ ವಸ್ತುಗಳ ಪ್ರತಾಪಗಳು, ಶಕ್ತಿ, ನಾಗರಿಕತೆ ಕುರಿತು ಭೌತಿಕತೆಗೆ ಕಟ್ಟು ಬಿದ್ದು ಸತ್ಯವನ್ನು ಕಡೆಗಣಿಸಿದಾಗ ಅವರಿಗಾದ ವಿನಾಶದ ಕುರಿತು ಕಲಿಯಲಿಕ್ಕೂ ಇಸ್ಲಾಮ್ ಆಹ್ವಾನ ನೀಡುತ್ತದೆ. ಆ ಮೂಲಕ ಎಲ್ಲ ನೆಲೆಯಲ್ಲಿ ಸಮತೋಲನವನ್ನು ಸ್ವೀಕರಿಸುವ ಪುಣ್ಯಾತ್ಮನಾಗಿ ಬೆಳೆಯಲು ಮನುಷ್ಯನಿಗೆ ಇಸ್ಲಾಮೀ ವಿದ್ಯಾಭ್ಯಾಸ ಸಹಾಯ ನೀಡುತ್ತದೆ.

 • ಮಕ್ಕಳಿಗೆ ರಸೂಲ್ ಎಂದು ಹೆಸರಿಡಬಹುದೇ?
  ismika11-08-2016

  ಮಕ್ಕಳಿಗೆ ರಸೂಲ್ ಎಂದು ಹೆಸರಿಡಬಹುದೇ?
  ಉತ್ತರ: ರಸೂಲ್ ಎಂಬುದು ಮಕ್ಕಳಿಗೆ ಇರಿಸಬಹುದಾದ ಸೂಕ್ತ ಹೆಸರಲ್ಲ. ಪ್ರವಾದಿವರ್ಯರ(ಸ) ಹೆಸರಿಡ ಬಯಸುವವರು ಮುಹಮ್ಮದ್, ಅಹ್ಮದ್ ಎಂಬ ಹೆಸರುಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲಾಹನ ನಾಮಕ್ಕೆ ಅಬ್ದ್ ಎಂದು ಸೇರಿಸಿದ ಹೆಸರುಗಳು ಮತ್ತು ಪ್ರವಾದಿಗಳ ಹೆಸರನ್ನೂ ತಾವು ಬಳಸಿಕೊಳ್ಳಬಹುದು.
  ಮಕ್ಕಳಿಗೆ ಹೆಸರು ಇರಿಸುವ ಕುರಿತು ಕೆಲವು ವಿಷಯಗಳನ್ನು ಕೂಡ ಸೂಚಿಸಬಹುದಾಗಿದೆ. ಮಕ್ಕಳೆಂದರೆ ತಂದೆ ತಾಯಿಯರ ಕೈಗಳಿಗೆ ಅಲ್ಲಾಹನು ವಹಿಸಿಕೊಡುವ ಅಮಾನತ್ತು ಆಗಿದೆ. ಆ ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸಲು ಮತ್ತು ಮಕ್ಕಳೊಂದಿಗಿನ ಬಾಧ್ಯತೆಗಳನ್ನು ನಿರ್ವಹಿಸಲು ಹೆತ್ತವರು ಗಮನಹರಿಸಬೇಕು. ಈ ಹೊಣೆ ಅವರಿಗೆ ಮಗುವಿನ ಹುಟ್ಟಿನೊಂದಿಗೆ ಆರಂಭವಾಗುತ್ತದೆ. ಮಗು ಹುಟ್ಟಿದ ಕೂಡಲೆ ಮಗುವಿನ ಬಲ ಕಿವಿಗೆ ಅದಾನ್ ಮೆಲ್ಲನೆ ಓದಿ ಹೇಳುವುದು, ಮಗುವಿಗೆ ಒಳ್ಳೆಯ ಹೆಸರಿರಿಸುವುದು ಆ ಹೊಣೆಯಲ್ಲೇ ಸೇರಿದ್ದಾಗಿದೆ. ಹೆಸರನ್ನು ಆಯ್ಕೆ ಮಾಡುವಾಗ ಕೆಳಗೆ ವಿವರಿಸಿದ ವಿಷಯಗಳನ್ನು ಗಮನದಲ್ಲಿರಿಸಿಕೊಳ್ಳಬೇಕು.
  1) ಶಿರ್ಕ್ ದ್ಯೋತಕವಾದ ಹೆಸರುಗಳನ್ನು ಮಗುವಿಗೆ ಇರಿಸಬಾರದು. ಉದಾಹರಣೆಗೆ ಅಬ್ದುಲ್ ಕಅïಬ(ಕಬದ ಪುತ್ರ), ಅಬ್ದುನ್ನಬಿ(ನಬಿಯ ದಾಸ) ಇಂತಹ ಹೆಸರುಗಳು ಅಲ್ಲಾಹನ ಹಕ್ಕುಗಳೊಂದಿಗೆ ಭಾಗಿದಾರಿತ್ವದ ಸೂಚಕಗಳಾಗಿವೆ. ಇಂತಹ ಹೆಸರುಗಳನ್ನು ಮಕ್ಕಳಿಗೆ ಇರಿಸಬಾರದು.
  2) ಅಕ್ರಮವನ್ನು ಸೂಚಿಸುವ ಮತ್ತು ನಕಾರಾತ್ಮಕ ಸ್ವಭಾವದ ಹೆಸರುಗಳು ಒಳ್ಳೆಯದಲ್ಲ. ಪ್ರವಾದಿ(ಸ) ಹರ್ಬ್(ಯುದ್ಧ) ಎಂಬ ಹೆಸರನ್ನು ಸಲಾಂ (ಶಾಂತಿ) ಎಂದೂ ಸಅïಬ್(ಸಮಸ್ಯೆ ಜನಕ) ಹೆಸರನ್ನು ಸಹ್ಲ್ (ನಿರ್ಮಲ ವ್ಯಕ್ತಿ) ಎಂದು ಬದಲಾಯಿಸಿರುವುದನ್ನು ಹದೀಸ್‍ಗಳು ವಿವರಿಸಿವೆ.
  3) ಮಹತ್ತಾದ ಆಶಯಗಲು, ಒಳಿತುಗಳನ್ನು ಪಸರಿಸುವ ಹೆಸರುಗಳನ್ನು ಮಕ್ಕಳಿಗೆ ಇಡಲು ನಾವು ಪ್ರೋತ್ಸಾಹಿಸಲ್ಪಟ್ಟವರಾಗಿದ್ದೇವೆ. ಪ್ರವಾದಿಗಳ, ಜೀವ ಪರಿಶುದ್ಧಿಯಿಂದ ಹೊಳೆದ ಮಹಾನರ ಹೆಸರುಗಳನ್ನು ಇರಿಸಬಹುದಾಗಿದೆ. ಉದಾ: ಪ್ರವಾದಿ ತನ್ನ ಮಗನಿಗೆ ಇಬ್‍ರಾಹೀಂ ಎಂದು ಹೆಸರಿಟ್ಟು ಹೇಳಿದರು: ನನ್ನ ತಂದೆಯ ಹೆಸರಿನಲ್ಲಿ ನಾನು ಅವನನ್ನು ಕರೆಯುತ್ತೇನೆ" (ಮುಫ್ತಿ: ಶೇಖ್ ಅಹ್ಮದ್ ಕುಟ್ಟಿ)

 • ಹಜ್ ಸಂದರ್ಭದಲ್ಲಿ ರೋಗ ನಿರೋಧಕ ಇಂಜೆಕ್ಷನ್, ವ್ಯಾಕ್ಸಿನ್‍ಗಳು
  ismika16-08-2016

  ಪ್ರಶ್ನೆ: ಹಜ್ ಸಂದರ್ಭದಲ್ಲಿ ರೋಗ ನಿರೋಧಕ ಇಂಜೆಕ್ಷನ್ ತೆಗೆದು ಕೊಳ್ಳಬಹುದೇ?

  ಉತ್ತರ: ಭಯ, ಅತಂಕ ನಮ್ಮ ಪ್ರತಿರೋಧ ಶಕ್ತಿಯನ್ನು ಕ್ಷೀಣಿಸುವಂತೆ ಮಾಡುತ್ತದೆ. ಭಯಾತಂಕಗಳು ಯಾವತ್ತೂ ನಮ್ಮಲ್ಲಿ ಉಂಟಾಗಬಾರದು. ಮಾನಸಿಕ ಒತ್ತಡ , ನೋವು ನಮ್ಮ ಪ್ರತಿರೋಧ ಸಾಮಥ್ರ್ಯವನ್ನು ಅಡಿಮೇಲು ಮಾಡಿ ಬಿಡುತ್ತದೆ. 'ಅಲ್ಲಾಹನು ನಮಗೆ ವಿಧಿಸಿದ್ದಲ್ಲದೆ ಬೇರೇನೂ ಸಂಭವಿಸುವುದಿಲ್ಲ. ಅವನೇ ನಮ್ಮ ರಕ್ಷಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿ ಭಾರ ಹಾಕಲಿ" ಎಂದು ಅತ್ತೌಬ ಅಧ್ಯಾಯದ 51ನೇ ಸೂಕ್ತದ ಬೆಳಕಿನಲ್ಲಿ ಹಜ್‍ನ ಪ್ರತಿಯೊಂದೂ ಕ್ಷಣಗಳು ಆಧ್ಯಾತ್ಮಿಕ ಉನ್ನತಿಯೊಂದಿಗೆ ಇರಲು ನಮಗೆ ಸಾಧ್ಯವಾಗಬೇಕು. ಈ ವರೆಗೂ ಹೇಳಿದ್ದರ ಅರ್ಥ ನಮಗೆ ಈ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಬೇಡ ಎಂದಲ್ಲ. ಪ್ರತಿರೋಧ ಚಿಕಿತ್ಸೆ ಸೇರಿ ಜಗತ್ತಿನಲ್ಲಿ ಕಂಡು ಹುಡುಕಲಾದ ಎಲ್ಲ ವ್ಯವಸ್ಠೆಗಳನ್ನು ನಾವು ಉಪಯೋಗಿಸಬೇಕಾಗಿದೆ.

  ಪ್ರಶ್ನೆ: ಹಜ್ ಕರ್ಮಕ್ಕೆ ತೆರಳುವ ಮೊದಲು ತೆಗೆಯಬೇಕಾದ ವ್ಯಾಕ್ಸಿನ್‍ಗಳು ಯಾವುದೆಲ್ಲ ಎಂದು ವಿವರಿಸಬಹುದೇ?

  ಉತ್ತರ: ಕಡ್ಡಾಯವಾಗಿಯೂ ಎಲ್ಲ ಹಜ್ ಯಾತ್ರಿಕರು ಮೆನಿಜ್ಞೋಕೋಕಲ್ ವ್ಯಾಕ್ಸಿನ್ ತೆಗೆದು ಕೊಳ್ಳಬೇಕು ಇದನ್ನು ತೆಗೆದು ಕೊಳ್ಳದಿದ್ದರೆ ಸೌದಿ ಸರಕಾರ ಹಜ್ ವೀಸಾವನ್ನು ನೀಡುವುದಿಲ್ಲ ಎಂಬುದು ಇಲ್ಲಿ ಸ್ಮರಣೀಯ. ಇದರ ಜೊತೆಗೆ ಕೆಲವು ವ್ಯಾಕ್ಸಿನ್‍ಗಳನ್ನು ಫಿಶಿಸಿಯನ್‍ಗಳು ಸೂಚಿಸುತ್ತಾರೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಸಿಹಿ ಮೂತ್ರ. ಹೃದ್ರೋಗ ಅಸ್ತಮ ಇತ್ಯಾದಿ ಶ್ವಾಸಕೋಶಕ್ಕೆ ಸೇರಿದ ರೋಗವಿರುವವರಿಗೆ ನ್ಯೂಮೊಕೋಕಲ್ ವ್ಯಾಕ್ಸಿನ್‍ನ್ನು ಸೂಚಿಸಲಾಗುತ್ತದೆ. ಜೊತೆಗೆ ಸರಿಯಾಗಿ ಪೊಲಿಯೊ ವ್ಯಾಕ್ಸಿನ್ ತೆಗೆಯುವುದು ಉತ್ತಮವಾಗಿದೆ. ( ವೈದ್ಯರ ಸಲಹೆಯಂತೆ ಬೂಸ್ಟರ್ ಡೋಸ್ ಅಗತ್ಯವಿದೆಯೇ ಎಂದು ಖಚಿತ ಪಡಿಸಿಕೊಳ್ಳಬೇಕು) ಅಮೆರಿಕದ ಡಿಸೀಸ್ ಕಂಟ್ರೋಲ್ ಸೆಂಟರ್ ಫ್ಲು ಭೀತಿಯನ್ನು ಪ್ರತಿರೋಧಿಸಲಿಕ್ಕಾಗಿ ಇಂಫ್ಲುವೆಂಜ ಎಂಬ ವ್ಯಾಕ್ಸಿನ್ ಸೂಚಿಸಿದೆ. ಅದು ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಾನುಸರ ಆಗಿರಬೇಕು. ಹಜ್ ಯಾತ್ರೆ ಹೋಗುವುದಕ್ಕಿಂತ ಎರಡು ವಾರ ಮೊದಲೇ ಎಲ್ಲ ವ್ಯಾಕ್ಸಿನ್‍ಗಳನ್ನು ತೆಗೆದಿರಬೇಕಾಗಿದೆ.

 • 8 ವರ್ಷದ ಮಗುವಿಗೆ ಸ್ನನ ಪಾನ ಮಾಡಿಸಬಹುದೇ?
  ismika03-09-2016

  ಪ್ರಶ್ನೆ: ಪರಿಚಿತ ಮಹಿಳೆಯೊಬ್ಬರು ತನ್ನ ಎಂಟು ವರ್ಷದ ಮಗುವಿಗೆ ಮೊಲೆ ಹಾಲೂಡಿಸುವುದು ನೋಡಲು ಸಾಧ್ಯವಾಯಿತು. ಎರಡು ವರ್ಷ ದಾಟಿದ ಮಗುವಿಗೆ ಹಾಲೂಡಿಸಬಹುದೇ ಎಂಬುದು ನನ್ನ ಪ್ರಶ್ನೆಯಾಗಿದೆ. ಉತ್ತರಿಸಿ
  ಉತ್ತರ: ಒಂದು ಮಗುವಿಗೆ ಎರಡು ವರ್ಷ ಆದ ಮೇಲೆಯೂ ಎದೆ ಹಾಲುಣಿಸುವುದು ಅಷ್ಟು ಸರಿಯಲ್ಲ. ಆರೋಗ್ಯ ಸಮಸ್ಯೆಯಿದ್ದು ವೈದ್ಯರ ಸಲಹೆ ಇದ್ದರೆ ಅದು ಬೇರೆ ಮಾತು.
  ಪವಿತ್ರ ಕುರ್‍ಆನ್ ಹೀಗೆ ಹೇಳಿದೆ.
  "ತಮ್ಮ ಶಿಶುಗಳೂ ಪೂರ್ಣ ಸ್ತನಪಾನಾವಧಿಯವರೆಗೆ ಹಾಲು ಕುಡಿಯಬೇಕೆಂದು ಪಿತರು ಬಯಸಿದರೆ ತಾಯಂದಿರು ತಮ್ಮ ಶಿಶುಗಳಿಗೆ ಎರಡು ವರ್ಷ ಪೂರ್ತಿಯಾಗಿ ಹಾಲುಣಿಸಬೇಕು. ಆಗ ಶಿಶುವಿನ ತಂದೆಯು ಅವರಿಗೆ ನ್ಯಾಯೋಚಿತ ರೀತಿಯಿಂದ ಅನ್ನ, ಬಟ್ಟೆ ಕೊಡಲು ಬಾಧ್ಯಸ್ಥನಾಗುವನು. ಆದರೆ ಅವನವನ ಶಕ್ತಿಗಿಂತ ಮೀರಿದ ಭಾರವನ್ನು ಯಾರ ಮೇಲೆಯೂ ಹಾಕಬಾರದು. ಶಿಶುವು ತಾಯಿಯದ್ದು ಎಂಬ ಕಾರಣದಿಂದ ಅವಳನ್ನು ಕಷ್ಟಕ್ಕೊಳಪಡಿಸಬಾರದು ಮತ್ತು ಶಿಶಿವಿನ ತಂದೆಯೆಂಬ ಕಾರಣದಿಂದ ಅವನನ್ನೂ ಪೇಚಾಟಕ್ಕೊಳಪಡಿಸಬಾರದು. ಮೊಲೆ ಹಾಲನ್ನುಣೀಸುವವಳ ಈ ಹಕ್ಕು ತಂದೆಯೇ ಮೇಲಿರುವಂತೆಯೇ ಅವನ ವಾರಸುದಾರರ ಮೇಲೂ ಇದೆ. ಆದರೆ ಉಭಯತ್ರರು ಪರಸ್ಪರ ವಿಚಾರ ವಿನಿಮಯದಿಂದ ಒಮ್ಮತರಾಗಿ ಮೊಲೆ ಹಾಲನ್ನು ಬಿಡಿಸಿಲಿಚ್ಛಿಸುದರಲ್ಲಿ ತಪ್ಪಿಲ್ಲ ಮತ್ತು ನಿಮ್ಮ ಮಗುವಿಗೆ ಅನ್ಯ ಸ್ತ್ರೀಯಿಂದ ಮೊಲೆ ಹಾಲುಣಿಸುವ ಇಚ್ಛೆ ನಿಮಗಿದ್ದರೆ ಅದಕ್ಕೆ ಪ್ರತಿಫಲವನ್ನು ನಿಶ್ಚಯಿಸಿ ಅದನ್ನು ನ್ಯಾಯೋಚಿತವಾಗಿ ಪಾವತಿ ಮಾಡಿದರೆ ಅದರಲ್ಲೂ ತಪ್ಪಿಲ್ಲ. ಅಲ್ಲಾಹನನ್ನು ಭಯಪಡಿರಿ. ನೀವು ಮಾಡುವುದೆಲ್ಲವೂ ಅಲ್ಲಾಹನ ವೀಕ್ಷಣದೊಳಗಿದೆ ಎಂಬುದನ್ನು ನೀವು ತಿಳಿದಿರಬೇಕು"(ಅಲ್‍ಬಕರಾ 233)
  ಪ್ರಪಂಚದ ಸೃಷ್ಟಿಕರ್ತ ಸರ್ವಜ್ಞನಾದ ಅಲ್ಲಾಹನು ತನ್ನ ದಾಸರಿಗೆ ಯಾವುದು ಪ್ರಯೋಜಕ ಯಾವುದು ಹಾನಿಕರ ಎಂದು ಎಲ್ಲರಿಗಿಂತ ಹೆಚ್ಚು ತಿಳಿದವನು ಆಗಿದ್ದಾನೆ.
  ಮಗುವಿಗೆ ಎದೆ ಹಾಲೂಡಿಸುವ ಕುರಿತು ಮೇಲಿನ ಸೂಕ್ತ ವಿವರಿಸಿದೆ. ಈ ವಿಷಯದಲ್ಲಿ ಈ ಸೂಕ್ತವನ್ನು ಮುಂದಿಟ್ಟು ವಿದ್ವಾಂಸರು ಹೀಗೆ ಹೇಳುತ್ತಾರೆ.
  ಮೊಲೆ ಹಾಲು ನೀಡುವುದು ನಿಲ್ಲಿಸಲು ಎರಡು ವರ್ಷ ಸಮಯ ಪೂರ್ತಿಯಾಗಬೆಕೆಂದು ಅಲ್ಲಾಹನು ಹೇಳುವುದಾದ್ದರಿಂದ ಆ ಕಾಲವಧಿಯನ್ನು ಹೆಚ್ಚು ದೀರ್ಘಕ್ಕೆ ಒಯ್ಯಬಾರದು. ಇನ್ನೊಂದು ರೀತಿಯಲ್ಲಿ ಹೇಳುವುದಿದ್ದರೆ ಮಗುವಿಗೆ ಎದೆ ಹಾಲುಣಿಸುವುದನ್ನು ನಿಲ್ಲಿಸಬೇಕು. ಅಬ್ದುಲ್ಲಾಹಿಬ್ನು ಮಸ್‍ಊದ್ ಇಬ್ನು ಅಬ್ಬಾಸ್ ಮುಂತಾದ ವಿದ್ವಾಂಸರು ತಂದೆ ತಾಯಿ ಎರಡು ವರ್ಷಕ್ಕಿಂತ ಹೆಚ್ಚು ಮಗುವಿಗೆ ಎದೆ ಹಾಲುಣಿಸುವುದನ್ನು ನಿರುತ್ತೇಜಿಸಿದ್ದಾರೆ.

 • ಶಹದಃ ಎಂದರೇನು?
  ismika10-09-2016

  ಪ್ರಶ್ನೆ: ಶಹದಃ ಎಂದರೇನು?

  ಉತ್ತರ: ಈ ಪದದ ಶಾಬ್ದಿಕ ಅರ್ಥ ಸಾಕ್ಷ್ಯವಹಿಸುವುದು ಎಂದಾಗಿದೆ. ಇಸ್ಲಾಮ್‍ನಲ್ಲಿ ಲಾಇಲಾಹ ಇಲ್ಲಲ್ಲಾಹ್ ಮುಹಮದರ್ರೂಸಲುಲ್ಲಾಹ್ ಎಂಬ ಘೋಷಣೆಯನ್ನು ಶಹದಃ ಎಂದು ಹೇಳುತ್ತಾರೆ. ಈ ಘೋಷಣೆಯ ಮೂಲಕ ಪ್ರತಿಯೊಬ್ಬ ಮುಸ್ಲಿಮರು ಏಕದೇವವಾದಿ ಮತ್ತು ಮುಹಮ್ಮದ್‍ರು ಏಕದೇವನ ಪ್ರವಾದಿ ಮತ್ತು ಸಂದೇಶವಾಹಕರಾಗಿದ್ದಾರೆಂದು ಸಾಕ್ಷಿ ನುಡಿಯುತ್ತಾರೆ. ಇದು ಇಸ್ಲಾಮ್‍ನ ಅತ್ಯಂತ ಮುಖ್ಯಸಿದ್ಧಾಂತವಾಗಿದೆ. ಪ್ರತಿಯೊಬ್ಬಮುಸ್ಲಿಮರು ಇದನ್ನು ಸ್ವೀಕರಿಸುವುದು ಅನಿವಾರ್ಯವಾಗಿದೆ. ಒಬ್ಬ ಮುಸ್ಲಿಮೇತರನು ಇಸ್ಲಾಮ್ ಸ್ವೀಕರಿಸಬೇಕಾದರೆ ಈ ಸಾಕ್ಷ್ಯವಚನ(ಶಹದಃ)ವನ್ನು ಹೇಳಿದರೆ ಸಾಲುತ್ತದೆ.

 • ಅಲ್ಲ, ಚೆಸ್ ಆಡಬಹುದೇ?
  ismika30-09-2016

  ಡಾ.ಯೂಸುಫುಲ್ ಕರ್ಝಾವಿ
  ಉತ್ತರ: ಹೌದು, ಚೆಸ್ ಒಂದು ಜನಪ್ರಿಯ ಆಟವಾಗಿದೆ. ಅದರ ಬಗ್ಗೆ ಇಸ್ಲಾಮ್‍ನ ನಿಲುವೇನು ಎಂಬ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಬಿಪ್ರಾಯ ಇದೆ. ಕೆಲವರು ಅದು ಅನುವದನೀಯ, ಆಡಬಹುದು ಎಂದು ಹೇಳಿದರೆ, ಕೆಲವರು ಅದು ಆಡಬಾರದು ನಿಷಿದ್ಧವಾಗಿದೆ ಎಂದು ಹೇಳಿದ್ದಾರೆ. ಅದನ್ನುಪ್ರೋತ್ಸಾಹಿಸಬಾರದು ಎಂದು ಈ ಶ್ರೇಣಿಯ ವಿದ್ವಾಂಸರ ಅಭಿಪ್ರಾಯವಾಗಿದೆ.
  ಚೆಸ್ ನಿಷಿದ್ಧ ಎಂದು ಹೇಳುವವರು ನೀಡುವ ಪುರಾವೆಯಾಗಿ ಹದೀಸ್ (ಪ್ರವಾದಿ ವಚನ)ವನ್ನೇ ನೀಡುತ್ತಾರೆ. ಆದರೆ ಹದೀಸ್ ವಿದ್ವಾಂಸರು ಮತ್ತು ನಿರೂಪಕರು ಅವರ ವಾದವನ್ನು ಒಪ್ಪುವುದಿಲ್ಲ. ಯಾಕೆಂದರೆ ಪ್ರವಾದಿವರ್ಯರ(ಸ)ಕಾಲದಲ್ಲಿ ಚೆಸ್ ಎಂಬ ಆಟವೇ ಇರಲಿಲ್ಲ. ಸಹಾಬಿಗಳ(ಪ್ರವಾದಿ ಸಂಗಾತಿಗಳ)ಕಾಲದಲ್ಲಿ ಆರಂಭಗೊಂಡ ಆಟ ಅದು ಎಂದು ಇವರು ಹೇಳುತ್ತಾರೆ. ಹೀಗಾಗಿ ಚದುರಂಗದ ಬಗ್ಗೆ ಮುಂದಿಡುವ ಹದೀಸ್‍ಗಳು ಯೋಜ್ಯವಲ್ಲ ಎನ್ನುತ್ತಾರೆ.
  ಸಹಾಬಿಗಳಲ್ಲಿ ಕೂಡಾ ಚೆಸ್ ಬಗ್ಗೆ ಅಭಿಪ್ರಾಯ ಭೇದ ಪ್ರಕಟವಾಗಿವೆ. ಅದು ಪಗಡೆ ಆಟಕ್ಕಿಂತಲೂ ಕೆಟ್ಟದು ಎಂದು ಇಬ್ನು ಉಮರ್(ರ) ಹೇಳುತ್ತಾರೆ. ಅದು ಜೂಜಿಗೆ ಸಂಬಧಿಸಿದ್ದೆಂದು ಹಝ್ರತ್ ಅಲಿ(ರ) ಹೇಳುತ್ತಾರೆ. (ಅದಕ್ಕೆ ಪಂದ್ಯವೂ ಸೇರಿಸಿ ಅವರು ಈ ಅಭಿಪ್ರಾಯ ಪ್ರಕಟಿಸಿರಲೂಬಹುದು)
  ಇನ್ನು ಪ್ರೋತ್ಸಾಹಿಸಬಾರದು ಕರಾಅತ್ ಆಗಿದೆ ಎಂದು ಚೆಸ್ ಆಟವನ್ನು ವರ್ಗೀಕರಿಸಿದ್ದಾರೆ.
  ಅದೇ ರೀತಿ ಚೆಸ್ ಅನುವದನೀಯ ಎಂದು ಹೇಳಿದ ಸಹಾಬಿಗಳು ಮತ್ತು ತಾಬೀಈ (ಪ್ರವಾದಿ ಸಂಗಾತಿಗಳ ಸಂಗಾತಿಗಳು)ಗಳು ಇದ್ದಾರೆ. ಇಬ್ನು ಅಬ್ಬಾಸ್, ಅಬೂ ಹುರೈರ, ಇಬ್ನು ಸಿರೀನ್, ಹಿಶಾಂ ಬಿನ್ ಉರ್ವಃ, ಸಈದ್ ಬಿನ್ ಮುಸಯ್ಯಬ್, ಸಈದ್ ಬಿನ್ ಜುಬೈರ್ ಮುಂತಾದವರು ಈ ಸಾಲಿಗೆ ಸೇರಿದವರಾಗಿದ್ದಾರೆ. ಚೆಸ್ ನಿಷಿದ್ಧವಾಗಿದೆ ಎಂದು ಹೇಳಬಲ್ಲಂತಹ ಸ್ಪಷ್ಟವಾದ ಪುರಾವೆಗಳಿಲ್ಲವಾದ್ದರಿಂದ ಕೊನೆಗೆ ತಿಳಿಸಿದ ಚೆಸ್ ಅನುವದನೀಯವಾಗಿದೆ ಎಂಬ ಅಭಿಪ್ರಾಯವನ್ನು ನಾವೂ ಹೊಂದಿದ್ದೇವೆ. ಕೇವಲ ಆಟ ವಿನೋದಕ್ಕಿಂತ ಬುದ್ಧಿ ಚಿಂತನೆಗಳನ್ನು ಉದ್ದೀಪಿಸುವ ದೃಷ್ಟಿಯಿಂದ ಆಡಬಹುದಾಗಿದೆ. ಪಗಡೆ ಆಟಕ್ಕಿಂತ ಸಂಪೂರ್ಣ ವ್ಯತ್ಯಸ್ತವಾಗಿದೆ. ಭಾಗ್ಯವನ್ನೇ ಆಧಾರವಾಗಿಟ್ಟು ನಡೆಸುವ ಪಗಡೆ ಬಿಲ್ಲು ಪ್ರಯೋಗಿಸಿ ಅದೃಷ್ಟವನ್ನು ಪರೀಕ್ಷಿಸುವಂತೆ ಆಗಿದೆ. ಅದೇ ವೇಳೆ ಬುದ್ಧಿ ಮತ್ತು ಚಿಂತನೆಯನ್ನು ಉಪಯೋಗಿಸಿ ಆಡುವ ಚೆಸ್‍ನ್ನು ಬಿಲ್ಲು ಬಾಣ ಸ್ಪರ್ಧೆಗೆ ಹೋಲಿಸಬಹುದಾಗಿದೆ.
  ಚೆಸ್ ಅನುವದನೀಯವಾಗಿದೆ ಎಂದು ಹೇಳುವುದರೊಂದಿಗೆ ಮೂರು ನಿಬಂಧನೆಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ. ಅದರ ಕಾರಣದಿಂದ ನಮಾಝ್ ತಡವಾಗಬಾರದು. ಯಾಕೆಂದರೆ ಚೆಸ್ ಸಮಯವನ್ನು ಕೊಲ್ಲುವ ಕ್ರೀಡೆಯಾಗಿದೆ. ಅದನ್ನು ಪಂದ್ಯಕ್ಕೆ ಸೇರಿಸಿ ಇಡಬಾರದು ಎಂಬುದು ಎರಡನೆ ನಿಬಂಧನೆಯಾಗಿದೆ. ಆಟದ ನಡುವೆ ಕೆಟ್ಟದು ಮಾತಾಡುವುದು ಅಸಭ್ಯವಾಗಿ ಮಾತಾಡುವುದರಿಂದ ಆಟಗಾರ ಎಚ್ಚರ ವಹಿಸಬೇಕೆಂಬುದು ಮೂರನೇ ನಿಬಂಧನೆ. ಈ ಮೂರು ನಿಬಂಧನೆಗಳಲ್ಲಿ ಲೋಪವಾದರೆ ನಿಷೇಧದ ವೃತ್ತಕ್ಕೆ ಚೆಸ್ ಬಂದು ಸೇರುತ್ತದೆ ಎಂಬುದನ್ನು ವಿಶೇಷವಾಗಿ ಗಮನಿಸಬಹುದು.

 • ಮೊಹರಂ ಉಪವಾಸದ ಪ್ರಧಾನ್ಯವೇನು?
  ismika30-09-2016

  ಪ್ರಶ್ನೆ: ಮುಹರಂ ಒಂಬತ್ತು ಮತ್ತು ಹತ್ತಕ್ಕೆ ಉಪವಾಸ ಆಚರಿಸುವುದರ ಪ್ರಾಮುಖ್ಯತೆಯೇನು?
  ಉತ್ತರ: ಆಶೂರಾಅï ಉಪವಾಸವನ್ನು ಮುಹರಂ ಹತ್ತರಂದು ಅನುಷ್ಠಾನಿಸುವ ಬಗ್ಗೆ ಇಸ್ಲಾಮಿನಲ್ಲಿ ಹೆಚ್ಚು ಪ್ರಾಧಾನ್ಯತೆಯಿದೆ. ಪ್ರವಾದಿವರ್ಯರು(ಸ) ಹೇಳಿದ್ದಾರೆ " ಆಶೂರಾಅï ಉಪವಾಸ (ಮುಹರಂ ಹತ್ತು) ಆಚರಿಸುವುದಕ್ಕೆ ದೊಡ್ಡ ಪ್ರತಿಫಲವಿದೆ. ಕಳೆದು ಹೋದ ಒಂದು ವರ್ಷದ ಪಾಪಗಳನ್ನು ಅಲ್ಲಾಹನು ಕ್ಷಮಿಸುತ್ತಾನೆ.(ಮುಸ್ಲಿಂ). ಮುಹರಂ ಒಂಬತ್ತಕ್ಕೂ ಉಪವಾಸ ಹಿಡಿಯಿರಿ ಎಂದು ಪ್ರವಾದಿವರ್ಯರು(ಸ)ನಮ್ಮೊಂದಿಗೆ ಸೂಚಿಸಿದ್ದರು. ಅಬ್ಬಾಸ್(ರ) ಹೇಳಿದರೆಂದು ಇಮಾಮ್ ತಿರ್ಮಿದಿ ವರದಿ ಮಾಡುತ್ತಾರೆ; ಮುಹರಂ ಒಂಬತ್ತು ಮತ್ತು ಹತ್ತರಂದು ಎರಡು ದಿವಸ ನಾವು ಉಪವಾಸ ಆಚರಿಸುತ್ತಿದ್ದೆವು. ಯಹೂದಿಯರಿಗಿಂತ ವ್ಯತ್ಯಸ್ತವಾಗಿ ಆಚರಿಸಲಿಕ್ಕಾಗಿ ಎರಡು ದಿವಸ ಉಪವಾಸವನ್ನು ಆಚರಿಸುತ್ತಿದ್ದೆವು.(ತಿರ್ಮಿದಿ). ಮುಹರಂ ಹತ್ತಕ್ಕೆ ಉಪವಾಸ ಹಿಡಿಯುವುದು ಪ್ರವಾದಿಯ(ಸ) ಅಭ್ಯಾಸವಾಗಿತ್ತು. ಆದರೆ ಪ್ರವಾದಿ(ಸ) ಮದೀನಕ್ಕೆ ಬಂದ ಸಮಯದಲ್ಲಿ ಪ್ರವಾದಿ ಮೂಸಾರ ಸ್ಮರಣೆಗಾಗಿ ಯಹೂದಿಯರು ಕೂಡಾ ಅದೇ ದಿವಸ ಉಪವಾಸ ಹಿಡಿಯುತ್ತಿರುವುದುನ್ನು ಪ್ರವಾದಿ ಕಂಡರು." ಮೂಸಾರೊಂದಿಗೆ ನಿಮಗಿಂತ ಸಮೀಪದವರು ನಾವು ಆಗಿದ್ದೇವೆ ಎಂದು ಹೇಳಿದ ಪ್ರವಾದಿವರ್ಯರು(ಸ) ತನ್ನ ಸಂಗಡಿಗರಿಗೆ ಅಂದು ಉಪವಾಸ ಹಿಡಿಯಲು ಹೇಳಿರುವುದನ್ನು ನಾವು ಹದೀಸ್‍ಗಳಲ್ಲಿ ಕಾಣಬಹುದಾಗಿದೆ. ಅಂದರೆ ಪ್ರವಾದಿವರ್ಯರು(ಸ) ನಿಧನರಾಗುವುದಕ್ಕಿಂತ ಮೊದಲು ಮುಹರಂ ಒಂಬತ್ತಕ್ಕೂ ಉಪವಾಸ ಹಿಡಿಯಲು ವಿಶ್ವಾಸಿಗಳೊಂದಿಗೆ ಸೂಚಿಸಿದ್ದಾರೆ.
  ಪ್ರಮುಖ ಕರ್ಮಶಾಸ್ತ್ರ ವಿದ್ವಾಂಸ ಸಯ್ಯಿದ್ ಸಾಬಿತ್ ತನ್ನ ಕರ್ಮಶಾಸ್ತ್ರ ಗ್ರಂಥವಾದ ಫಿಕ್ಹುಸ್ಸುನ್ನದಲ್ಲಿ ಮುಹರಂ ಉಪವಾಸಕ್ಕೆ ಸಂಬಂಧಿಸಿ ವಿವರಣೆಯನ್ನು ನೀಡಿದ್ದಾರೆ.
  ಅಬೂಹುರೈರಾರಿಂದ ವರದಿಯಾಗಿದೆ: ಕಡ್ಡಾಯ ನಮಾಝ್ ಅಲ್ಲದೆ ಅತ್ಯಂತ ಪುಣ್ಯಕರವಾದ ಬೇರೆ ನಮಾಝ್ ಯಾವುದೆಂದು ತಾನು ಪ್ರವಾದಿವರ್ಯರಲ್ಲಿ(ಸ) ಕೇಳಿದೆ. ಪ್ರವಾದಿವರ್ಯರು(ಸ) ಹೇಳಿದರು: ನಡು ರಾತ್ರೆಯ ನಮಾಝ್. ನಾನು ಕೇಳಿದೆ: ರಮಝಾನ್ ನಂತರ ಯಾವ ಉಪವಾಸಕ್ಕೆ ಹೆಚ್ಚು ಪ್ರಾಧಾನ್ಯತೆ ಇದೆ. ಪ್ರವಾದಿವರ್ಯರು(ಸ) ಹೇಳಿದರು: ನೀವು ಮುಹರಂ ಎಂದು ಕರೆಯುವ ಅಲ್ಲಾಹನ ತಿಂಗಳ ಉಪವಾಸ. (ಅಹ್ಮದ್, ಮುಸ್ಲಿಂ, ಅಬೂದಾವೂದ್)
  ಪ್ರವಾದಿವರ್ಯರು(ಸ) ಹೇಳುವುದನ್ನು ತಾನು ಕೇಳಿಸಿದ್ದೇನೆ ಎಂದು ಮೂಆವಿಯ ಬಿನ್ ಅಬೂಸುಫಿಯಾನ್ ವರದಿ ಮಾಡಿದ್ದಾರೆ: ಆಶೂರಾ ದಿವಸ ಉಪವಾಸ ಆಚರಿಸಲು ತನಗೆ ಕಡ್ಡಾಯವಾಗಿರುವಂತೆ ನಿಮಗೆ ಕಡ್ಡಾಯವಿಲ್ಲ. ಆದರೆ ಉಪವಾಸ ಹಿಡಿಯ ಬಯಸುವವರು ಉಪವಾಸ ಹಿಡಿಯಿರಿ. ಬಯಸದಿರುವವರು ಉಪವಾಸ ಹಿಡಿಯಬೇಕಿಲ್ಲ" (ಬುಖಾರಿ, ಮುಸ್ಲಿಂ) ಮುಹರಂ ತಿಂಗಳ ಉಪವಾಸದ ಕುರಿತು ಮುಸ್ಲಿಂ ವಿದ್ವಾಂಸರು ಮುಖ್ಯವಾದ ಮೂರು ಅಭಿಪ್ರಾಯವನ್ನು ಹೊಂದಿರುವವರು ಆಗಿದ್ದಾರೆ.
  1) ನಿರಂತರ ಮೂರು ದಿವಸ ಉಪವಾಸ ಹಿಡಿಯಬೇಕು. ಮುಹರಂ ಒಂಬತ್ತು, ಹತ್ತು, ಹನ್ನೊಂದು
  2) ಮುಹರ್ರಂ ಒಂಬತ್ತು ಹತ್ತಕ್ಕೆ ಎರಡು ದಿವಸ ಉಪವಾಸ ಹಿಡಿಯಿರಿ.
  3) ಹತ್ತಕ್ಕೆ ಮಾತ್ರ ಉಪವಾಸ ಹಿಡಿಯಿರಿ.
  ಈ ವಿಷಯವನ್ನು ಅತ್ಯಂತ ಸರಿಯಾಗಿ ತಿಳಿದಿರುವವನು ಅಲ್ಲಾಹನೇ ಆಗಿದ್ದಾನೆ.

 • ಮಹ್ರ್ ಎಂದರೇನು?
  ismika06-10-2016

  ಪ್ರಶ್ನೆ: ಮಹ್ರ್ ಎಂದರೇನು?

  ಉತ್ತರ: ಮದುವೆಯ ಸಮಯದಲ್ಲಿ ವರನು ವಧುವಿಗೆ ನೀಡುವ ಪಾರಿತೋಷಕವನ್ನು ಮಹ್ರ್ ಎನ್ನುತ್ತೇವೆ. ಮಹ್ರ್ ಅಥವಾ ವಧುವಿಗೆ ನೀಡುವ ವಿವಾಹಧನ. ಮಹಿಳೆ ಮಾತ್ರವೇ ಮಹ್ರ್‍ಗೆ ಅರ್ಹಳು ಮತ್ತು ಅದರ ಒಡತಿಯಾಗಿದ್ದಾಳೆ. ಆ ಪಾರಿತೋಷಕ ಅವಳ ಹಕ್ಕಿಗೆ ಸೇರಿರುವುದಾಗಿದೆ. ವಿವಾಹ ಒಪ್ಪಂದದಲ್ಲಿ ಕಡ್ಡಾಯವಾದ ಘಟಕಗಳಲ್ಲಿ ಮಹ್ರ್ ಒಂದಾಗಿದೆ. ವಿವಾಹ ಸಿಂಧುವಾಗಬೇಕಾದರೆ ಮಹ್ರ್ ನೀಡಲೇಬೇಕು. ಮಹ್ರ್‍ಗೆ ಕನಿಷ್ಠ ಮಿತಿ ಹೆಚ್ಚಿನ ಮಿತಿ ಎಂಬುದಿಲ್ಲ. ಮಹ್ರ್ ಆಗಿ, ಚಿನ್ನ, ಇತರ ವಸ್ತುಗಳನ್ನು, ಕಲಿತ ವಿದ್ಯೆಯನ್ನೂ ನೀಡಬಹುದಾಗಿದೆ. ಮದುವೆಯಾಗಿ ದಂಪತಿಗಳು ಸೇರಿದ ಮೇಲೆ ಮಹ್ರ್‍ನ ಒಡೆತನದ ಸಂಪೂರ್ಣ ಹಕ್ಕು ಪತ್ನಿಗೆ ಲಭಿಸುತ್ತದೆ. ಆದರೆ ಅದಕ್ಕೆ ಮೊದಲು ತಲಾಕ್ ಆದರೆ ಮಹ್ರ್ ಮರಳಿಸಬೇಕಾಗುತ್ತದೆ. ಮಹ್ರ್ ಒಂದು ಪ್ರತೀಕವಾಗಿದೆ. ಪುರುಷ ಸ್ತ್ರೀಗೆ ತೋರಿಸುವ ಆದರವನ್ನು ಅದು ಸೂಚಿಸುತ್ತದೆ, ವಸ್ತು ರೂಪದಲ್ಲಿ ಮಹಿಳೆಗೆ ಕೊಡುವ ಸುರಕ್ಷಿತತೆ ಅದಾಗಿದೆ. ಮಹ್ರ್ ಎರಡು ರೀತಿ ಇವೆ.
  1. ಮಹ್ರುಲ್ ಮುಝಮ್ಮ(ಸುನಿಶ್ಚಿತ ಮಹ್ರ್)- ವಿವಾಹ ಕರಾರಿನಲ್ಲಿ ಸ್ಪಷ್ಟವಾಗಿ ನಮೂದಿಸುವುದು.
  2. ಮಹ್ರುಲ್ ಮಿಸಾಲ್- ನಡವಳಿಕೆಯಲ್ಲಿ ಇರುವ ಮಹ್ರ್ ( ಕಠಿಣವಾಗಿ ನಿಗದಿಗೊಳಿಸದಿರುವ ಮಹ್ರ್) ವಧುವಿನ ಕುಲ, ಧನ, ಗುಣ ಇವುಗಳನ್ನು ಪರಿಗಣಿಸಿದ ಬಳಿಕ ಸಮ್ಮತವಾದ ಒಂದು ಮೊತ್ತವನ್ನು ನೀಡಲಾಗುವುದು. ವಿವಾಹ ಒಪ್ಪಂದದಲ್ಲಿ ಮಹ್ರ್‍ನ್ನು ನಿಶ್ಚಿಯಿಸಿರುವುದಿಲ್ಲ. ವಿವಾಹೋಪ್ಪಂದದಲ್ಲಿ ಮಹ್ರ್ ನಿಶ್ಚಯಿಸದ ಎಲ್ಲ ವಿವಾಹಗಳಿಗೂ ಮಹ್ರ್ ಮಿಸಾಲ್ ಬಾಧಕವಾಗಿದೆ. ಮಹ್ರ್ ಆಗಿ ಲಭಿಸಿದ ಸೊತ್ತು ಮಹಿಳೆ ಯಥೇಚ್ಛವಾಗಿ ನಿಭಾಯಿಸಬಹುದಾಗಿದೆ.

 • ಅಡವಾಗಿ ಲಭಿಸಿದ ಮನೆಯನ್ನು ಉಪಯೋಗಿಸಬಹುದೇ?
  ismika01-11-2016

  ಪ್ರಶ್ನೆ: ಮನೆಯನ್ನು ಅಡವು ವಸ್ತುವಾಗಿ ಸ್ವೀಕರಿಸುವ ಮನೆಯನ್ನು ಬಳಸುವುದರ ಇಸ್ಲಾಮಿಕ್ ವಿಧಿಯೇನು?

  ಉತ್ತರ: ಪವಿತ್ರ ಕುರ್‍ಆನ್‍ನಲ್ಲಿ ಸೂರತುಲ್ ಬಕರಾದ ಕೊನೆಯ ಭಾಗದಲ್ಲಿ ಆರ್ಥಿಕ ವಿಷಯಗಳನ್ನು ನಿರ್ವಹಿಸುವ ಕುರಿತು ಪರಾಮರ್ಶೆಗಳಿವೆ. "ನೀವು ಪ್ರಯಾಣದಲ್ಲಿದ್ದು ಕರಾರು ಪತ್ರವನ್ನು ಬರೆಯಿಸಲು ಬರಹಗಾರನಾರೂ ಸಿಗದಿದ್ದರೆ, ಅಡವು ಪಡೆದು ವ್ಯವಹಾರ ನಡೆಸಿಕೊಳ್ಳಿರಿ." (ಅಲ್‍ಬಕರಾ: 283)
  ಅಡವು ವ್ಯವಹಾರವನ್ನು ಇಸ್ಲಾಮ್ ಅನುಮತಿಸಿದೆ ಎಂಬುದು ಈ ಸೂಕ್ತದಿಂದ ಗೊತ್ತಾಗುತ್ತದೆ. ನಮ್ಮ ಕೈವಶವಿರುವ ಮೌಲ್ಯಯುತವಾದ ಒಂದು ವಸ್ತುವನ್ನು ಅಡವಿಟ್ಟು ಅದರ ಬೆಲೆಯನ್ನು ಅದನ್ನಿರಿಸಿದವನಿಂದ ಸ್ವೀಕರಿಸುವುದನ್ನು ಅಡವು ವ್ಯವಹಾರ ಎಂದು ಕರೆಯಲಾಗುತ್ತದೆ. ಅಡವು ಇರಿಸಿದ ವಸ್ತು ನಮಗೆ ಹಣಕೊಟ್ಟಾತನ ಬಳಿ ಸುರಕ್ಷಿತವಾಗಿ ಇರುತ್ತದೆ. ನಾವು ಹಣಕೊಡಲು ನಿಶ್ಚಿಯಿಸಿದ ಸಮಯಕ್ಕೆ ಮರಳಿ ನೀಡುವಾಗ ಅಡವು ವಸ್ತು ಯಾವುದೇ ಹಾನಿಯಿಲ್ಲದೆ ನಮಗೆ ಮರಳಿಸಲಾಗುತ್ತದೆ. ಇದುವೇ ಅಡವು ವ್ಯವಹಾರದಲ್ಲಿ ಸಮಾನ್ಯವಾಗಿ ಸ್ವೀಕರಿಸಲಾಗುವ ಸಂಪ್ರದಾಯವಾಗಿದೆ. ಬ್ಯಾಂಕ್‍ಗಳು ಈ ರೀತಿಯನ್ನೇ ಅನುಸರಿಸುತ್ತಿವೆ. ಇಸ್ಲಾಮ್ ಕೂಡ ಅಡಮಾನ ವ್ಯವಹಾರದಲ್ಲಿ ಇದೇ ರೀತಿಯನ್ನು ಅಂಗೀಕರಿಸಿದೆ. ಆದರೆ ಒಬ್ಬ ಅಡವಿರಿಸಿ ಹಣ ಪಡೆಯುವ ಹೆಸರಿನಲ್ಲಿ ಆತನಿಂದ ಬಡ್ಡಿಯನ್ನು ಪಡೆಯುವುದಿಲ್ಲ ಎಂಬುದು ಇಸ್ಲಾಮೀ ವ್ಯವಹಾರದಲ್ಲಿ ಕಡ್ಡಾಯವಾಗಿದೆ.
  ಅಡವಿರಿಸಿದ ಸೊತ್ತು ಉಪಯೋಗಿಸಬಹುದೇ ಬಾರದೇ ಎಂಬುದು ಈ ವಿಷಯದಲ್ಲಿ ನಾವು ಮನವರಿಕೆ ಮಾಡಿಕೊಳ್ಳಬೇಕಾದ ಪ್ರಮುಖ ವಿಷಯವಾಗಿದ. ಬ್ಯಾಂಕ್‍ನಲ್ಲಿ ನಾವು ಚಿನ್ನಾಭರಣ ಅಡವಿಟ್ಟರೆ ಬ್ಯಾಂಕ್‍ಗೆ ಅದರ ಸಂಪೂರ್ಣ ಮಾಲಕತ್ವದ ಅಧಿಕಾರ ಲಭ್ಯವಾಗುವುದಿಲ್ಲ. ಅದನ್ನು ಬಳಿಯಲ್ಲಿರಿಸಿಕೊಳ್ಳುವ ಅಧಿಕಾರ ಮಾತ್ರವೇ ಲಭಿಸುತ್ತದೆ. ನಿಶ್ಚಿತ ಸಮಯದೊಳಗೆ ಪಡೆದಿರುವ ಹಣವನ್ನು ಮರಳಿಸಲು ಅಡವಿಟ್ಟವರಿಗೆ ಆಗದಿದ್ದರೆ ನಿಶ್ಚಿತ ಅವಧಿ ಮುಗಿದರೆ ಅಡವಿರಿಸಿದ ವಸ್ತುವನ್ನು ಮಾರುವ ಅಧಿಕಾರ ಬ್ಯಾಂಕ್‍ಗೆ ಇದೆ. ಮಾರಾಟ ಮಾಡಿದರೆ ಅಡವಿರಿಸಿದವರು ಪಡೆದುದಕ್ಕಿಂತ ಹೆಚ್ಚು ಸಿಕ್ಕಿದ ಹಣವನ್ನು ಅಡವಿರಿಸಿದವನಿಗೆ ಮರಳಿಸುವುದು ಅಡವು ವ್ಯವಹಾರದ ರೀತಿಯಾಗಿದೆ.ಅಡವು ವಸ್ತುವನ್ನು ಉಪಯೋಗಕ್ಕೆ ತೆಗೆಯುವಂತಿಲ್ಲ ಎಂದು ಇಸ್ಲಾಮೀ ವಿದ್ವಾಂಸರು ಖಚಿತವಾಗಿ ಹೇಳಿದ್ದಾರೆ. ಅಡವಿನಲ್ಲಿ ಸಿಕ್ಕ ಚಿನ್ನದಾಭರಣಗಳನ್ನು ಧರಿಸಬಾರದು.
  ಮನೆಯವರಿಗೆ ಧರಿಸಲು ಕೊಡಬಾರದು. ಅದನ್ನು ತೆಗೆದು ಜೋಪಾಸನವಾಗಿರಿಸಬೇಕು. ಉದಾಹರಣೆಗೆ ಒಬ್ಬರು ಐದು ಲಕ್ಷ ರೂಪಾಯಿಗೆ ಒಂದು ಮನೆ ಅಟವಿಟ್ಟರೆಂದು ಭಾವಿಸೋಣ. ಅಡವಿಗೆ ಪಡೆದ ಮನೆಯನ್ನು ಉಪಯೋಗಿಸುವಂತಿಲ್ಲ ಎಂಬುದೇ ಸರಿಯಾದ ಉತ್ತರವಾಗಿದೆ. ಆದರೆ ಊರಿನಲ್ಲಿರುವ ಒಂದು ಬಾಡಿಗೆ ನಿಶ್ಚಯಿಸಿ ಐದು ಲಕ್ಷವನ್ನು ಅಡ್ವಾನ್ಸ್ ರೂಪದಲ್ಲಿ ನೀಡುವುದಾದರೆ ಈ ವ್ಯವಹಾರದಲ್ಲಿ ಅಡ್ಡಿಯಿಲ್ಲ. ಆದರೆ ಮನೆಯನ್ನು ಅಡವಿಗೆ ನೀಡುವ ಒಂದು ರೀತಿ ಅಸ್ತಿತ್ವದಲ್ಲಿದೆ. ಉದಾಹರಣೆಗೆ ಓರ್ವ ಐದು ಲಕ್ಷ ರೂಪಾಯಿಗೆ ಒಂದು ಮನೆ ಅಡವು ಸ್ವೀಕರಿಸುತ್ತಾನೆ. ಒಂದು ವರ್ಷದ ಬಳಿಕ ಮನೆಯನ್ನು ಮರಳಿ ಕೊಡುವಾಗ ನೀಡಿದ ಐದು ಲಕ್ಷಕ್ಕೆ ಯಾವ ಕೊರತೆಯನ್ನು ಮಾಡದ ರೀತಿಯಲ್ಲಿ ಮರಳಿಸುತ್ತಾನೆ. ಒಂದು ವರ್ಷ ಅಡವು ಪಡೆದ ಮನೆಗೆ ಬಾಡಿಕೊಡದ್ದರಿಂದ ಮನೆಯನ್ನು ಬಳಸಿದ್ದು ಬಡ್ಡಿಯಾಗಿ ಬಿಡುತ್ತದೆ ಎಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಉಪಚಾರ ಅಗತ್ಯವಿರುವ ವಸ್ತುಗಳನ್ನು ಅಡವು ಇಡಲಾಗುತ್ತದೆ. ಓರ್ವ ಒಂದು ದನವನ್ನು ಅಡವು ಇಟ್ಟರೆ ಅದನ್ನು ಸಾಕಲು ಆತನಿಗೆ ಖರ್ಚು ವೆಚ್ಚ ಆಗುತ್ತದೆ. ಆದ್ದರಿಂದ ಅದು ಕೊಡುವ ಹಾಲನ್ನು ಸೆಗಣಿಯನ್ನು ಅಡವು ಪಡೆದ ಬಳಸಬಹುದಾಗಿದೆ. ಅಡವು ಪಡೆದ ವಸ್ತುವಿಗೆ ಖರ್ಚು ಮಾಡಬೇಕೆಂದಿದ್ದರೆ ಅದರಿಂದ ಬರುವ ವರಮಾನವನ್ನು ಅದಕ್ಕಾಗಿ ಬಳಸಬಹುದು ಎಂದು ಇದರಿಂದ ತಿಳಿಯುತ್ತದೆ.

 • ಸಫೇದ್ ಜೂಟ್ ಅನುವದನೀಯವೇ?
  ismika16-12-2016

  ಡಾ. ಯೂಸುಫುಲ್ ಕರ್ಝಾವಿ

  ಪ್ರಶ್ನೆ: ನಿಶ್ಚಿತವಾದೊಂದು ದಿವಸ ಗೆಳತಿಯ ಬಳಿ ಹೋಗುವೆ ಎಂದು ನಾನು ಅವಳಿಗೆ ಭಾಷೆ ಕೊಟ್ಟೆ. ಕೆಲವು ಗಡಿಬಿಡಿಗಳಿದ್ದುದರಿಂದ ನನಗೆ ಹೊಗಲು ಸಾಧ್ಯವಾಗಲಿಲ್ಲ. ನಂತರ ಅವಳಿಗೆ ಸಿಗಲು ಹಿಂಜರಿಕೆಯಾಗುತ್ತಿತ್ತು. ಆದ್ದರಿಂದ ನಾನು ಅವಳು ಸಿಕ್ಕಿದಾಗ ನಾನು ಹೊರಟಿದ್ದಾಗ ಮನೆಗೆ ಸಂಬಂಧಿಕರು ಬಂದರು ಆದ್ದರಿಂದ ಬರಲಾಗಲಿಲ್ಲ ಎಂದು ಹೇಳಿದೆ. ಈ ಸುಳ್ಳು ತನಗಾಗಲಿ ಗೆಳತಿಗಾಗಲಿ ಯಾವುದೇ ದೋಷವುಂಟು ಮಾಡುವುದಿಲ್ಲ ಮಾತ್ರವಲ್ಲ ನನಗೆ ಅದು ಭರವಸೆ ನೀಡುತ್ತಿದೆ. ಆದ್ದರಿಂದ ಬಿಳಿ ಸುಳ್ಳು (ನಿರುಪದ್ರಕರವಾದ ಸುಳ್ಳು) ಎಂದು ಇದನ್ನು ಹೇಳುತ್ತಾರೆ. ವ್ಯಾಪಾರ ಮತ್ತು ವ್ಯವಹಾರಗಳ ಸುಳ್ಳುಗಳಂತೆ ಅದರಲ್ಲಿ ವಂಚನೆ ಮೋಸ ದಗಲ್ಬಾಜಿಗಳ ವಿಷಯವೇ ಇಲ್ಲ. ಆದ್ದರಿಂದ ಯಾರ ಹಕ್ಕುಗಳು ಹನನವೂ ಆಗುವುದಿಲ್ಲ. ದೋಷವುಂಟೂ ಆಗುವುದಿಲ್ಲ. ನನ್ನಂತೆ ದಿನ ನಿತ್ಯದ ಜೀವನದಲ್ಲಿ ಇಂತಹ ಸುಳ್ಳುಗಳನ್ನು ಹೇಳುವ ಎಷ್ಟೋ ಜನರಿದ್ದಾರೆ. ಇಂತಹ ಸುಳ್ಳುಗಳಲ್ಲಿ ಇಸ್ಲಾಮ್ ಯಾವುದೇ ರಿಯಾಯತಿ ಅನುಮತಿಸಿದೆಯೇ ಎಂದು ತಿಳಿಯ ಬಯಸುತ್ತೇನೆ.?

  ಉತ್ತರ: ಒಬ್ಬ ತನಗೆ ನಂಬಿಕೆ ಇರುವ ಓರ್ವ ವಿದ್ವಾಂಸನಲ್ಲಿ ರಿಯಾಯಿತಿ ಯಾಚಿಸುವುದು ತಪ್ಪು ಕಾರ್ಯವೇನಲ್ಲ. ಪ್ರಶ್ನೆ ಕೇಳಿದವರ ಅಪರಾಧಿ ಪ್ರಜ್ಞೆಯಿಂದ ಆತಂಕದಿಂದ ಭರವಸೆ ಒದಗಿಸುವ ರಿಯಾಯಿತಿಯನ್ನು ಒಬ್ಬ ವಿದ್ವಾಂಸ ಹುಡುಕಿದರೂ ತಪ್ಪಿಲ್ಲ. ಹೆಚ್ಚು ಎಚ್ಚರಿಕೆ ಪಾಲಿಸುವ ವಿದ್ವಾಂಸ ಮತ್ತು ಕರ್ಮಶಾಸ್ತ್ರ ಜ್ಞಾನವಿದ್ದ ಸುಫಿಯಾನ್ ಶೌರಿ ಒಮ್ಮೆ ಹೇಳಿದರು: ನಂಬಿಕಸ್ಥ ವಿದ್ವಾಂಸನಿಂದ ರಿಯಾಯಿತಿ ಅರಿವು ಆಗಿದೆ.
  ಆದರೆ ರಿಯಾಯಿತಿ ಬಯಸುವ ಎಲ್ಲ ವಿಷಯದಲ್ಲಿಯೂ ರಿಯಾಯತಿ ಇರಲು ಸಾಧ್ಯವೆಂದೇನಿಲ್ಲ. ಸುಳ್ಳಿಗೆ ನಿರುಪದ್ರಕರ ಸುಳ್ಳು ಎಂದು ಕರೆದರೂ ಒಂದು ಸಂಕ್ಷಿಪ್ತ ಸಂದರ್ಭಗಳಲ್ಲಿ ಅಂತಹ ಒಂದು ರಿಯಾಯಿತಿ ಇರುವುದು ನಾನು ಕಂಡಿಲ್ಲ. ಸುಳ್ಳಿನ ಕುರಿತು ಬಹಿರಂಗವಾದ ಎಚ್ಚರಿಕೆಯನ್ನೇ ಇಸ್ಲಾಮ್ ಕೊಟ್ಟಿದೆ. ಮಾತ್ರವಲ್ಲ ಕುಫ್ರ್ ಮತ್ತು ನಿಫಾಕ್‍ನ ಚಿಹ್ನೆಯಾಗಿ ಇಸ್ಲಾಮ್ ಅದನ್ನು ಲೆಕ್ಕ ಮಾಡಿದೆ. ಪವಿತ್ರ ಕುರ್‍ಆನ್‍ನಲ್ಲಿ ಹೀಗಿರುವುದನ್ನು ನಾವು ಕಾಣುತ್ತೇವೆ. "ವಾಸ್ತವದಲ್ಲಿ ಅಲ್ಲಾಹನ ಸೂಕ್ತಗಳಲ್ಲಿ ವಿಶ್ವಾಸವಿರಿಸದವರೇ ಸುಳ್ಳು ಸ್ಪಷ್ಟನೆ ಮಾಡುತ್ತಿದ್ದಾರೆ. ನಿಜಕ್ಕೂ ಅವರೇ ಸುಳ್ಳುಗಾರರು" (ಅನ್ನಹ್ಲ್ 105)
  ಪ್ರವಾದಿವರ್ಯರು(ಸ) ಹೇಳಿದರು" ಮುನಾಫಿಕನ ಚಿಹ್ನೆ ಮೂರು ಆಗಿದೆ. ಮಾತಾಡಿದರೆ ಸುಳ್ಳು ಹೇಳುವನು. ವಾಗ್ದಾನ ಮಾಡಿದರೆ ಉಲ್ಲಂಘಿಸುವನು. ಕರಾರು ಮಾಡಿದರೆ ವಂಚಿಸುವನು" ಅವನು ನಮಾಝ್ ನಿರ್ವಹಿಸುವನು, ಉಪವಾಸ ಹಿಡಿಯುವನು ತಾನು ಮುಸ್ಲಿಮೆಂದು ವಾದಿಸಿದರೂ. ಮುಸ್ಲಿಮ್ ವರದಿ ಮಾಡಿರುವ ಹದೀಸ್ ಹೆಚ್ಚು ವಿವರಗಳಿವೆ.
  ಇನ್ನೊಂದು ಹದೀಸ್ ಹೀಗಿದೆ." ನಾಲ್ಕು ಗುಣಗಳಿರುವವರು ಪರಿಪೂರ್ಣ ಮುನಾಫಿಕ್ ಆಗಿದ್ದಾರೆ. ಅದರಲ್ಲಿ ಯಾವುದಾದರೂ ಒಂದು ಒಬ್ಬನಲ್ಲಿದ್ದರೆ ಅದನ್ನು ತೊರೆಯುವವರೆಗೆ ನಿಫಾಕ್‍ನ ಅಂಶ ಅವನಲ್ಲಿರುತ್ತದೆ: ವಿಶ್ವಾಸ ವಿಟ್ಟರೆ ವಂಚಿಸುತ್ತಾನೆ. ಮಾತಾಡಿದರೆ ಸುಳ್ಳು ಹೇಳುತ್ತಾನೆ. ಕರಾರು ಮಾಡಿದರೆ ಉಲ್ಲಂಘಿಸುವನು. ಜಗಳ ಮಾಡಿದರೆ ಅವಾಚ್ಯ ಬೈಯ್ಯುವನು"
  ಒಮ್ಮೆ ಪ್ರದಾದಿ(ಸ)ರೊಡನೆ ಪ್ರಶ್ನಿಸಲಾಯಿತು: ಅಲ್ಲಾಹನ ಸಂದೇಶವಾಹಕರೆ, ವಿಶ್ವಾಸಿ ಹೇಡಿಯಾಗುವನೆ? ಅವರು ಹೇಳಿದರು: ಆಗಬಹುದು. ಪುನಃ ಕೇಳಲಾಯಿತು: ವಿಶ್ವಾಸಿ ಸುಳ್ಳು ಹೇಳುವವನೇ? ಪ್ರವಾದಿ(ಸ) ಹೇಳಿದರು ಇಲ್ಲ. ಪ್ರವಾದಿಗೆ ಅತ್ಯಂತ ಅರೋಚಕವಾದ ವಿಷಯ ಸುಳ್ಳು ಹೇಳುವುದು ಆಗಿತ್ತು ಎಂದು ಒಮ್ಮೆ ಆಯಿಶಾ(ರ) ಹೇಳಿದ್ದಾರೆ. ಇಸ್ಲಾಮ್ ಸುಳ್ಳು ಹೇಳುವುದನ್ನು
  ವಿರೋಧಿಸಿದ್ದು ಎಷ್ಟರವರೆಗೆ ಎಂಬುದನ್ನು ಇವೆಲ್ಲವೂ ನಮಗೆ ತಿಳಿಸಿ ಕೊಡುತ್ತಿದೆ. ಮಕ್ಕಳನ್ನು ಕೂಡಾ ಸುಳ್ಳು ಹೇಳದಿರುವವರಾಗಿ ಬೆಳೆಸಬೇಕಾಗಿದೆ. ಆದ್ದರಿಂದ ದ್ರೋಹ ಇದ್ದರು ಇಲ್ಲದಿದ್ದರು ಸುಳ್ಳು ಸುಳ್ಳೇ ಆಗಿರುತ್ತದೆ. ಸತ್ಯಕ್ಕೆ ವಿರುದ್ಧವಾಗಿ ಮಾತಾಡುವುದು ಮುನಾಫಿಕ್‍ಗಳನ್ನು ಅನುಕರಿಸುವುದಾಗಿದೆ. ಪ್ರಯೋಜನ ಇದ್ದರೆ ಮಾತ್ರ ಸತ್ಯಸಂಧತೆಯನ್ನು ಬಿಗಿಯಾಗಿ ಹಿಡಿಯುವುದು ಎಂಬ ಹಠ ಬೇಕಿಲ್ಲ. ದ್ರೋಹವಿದ್ದರೆ ಮಾತ್ರವೇ ಸುಳ್ಳಾಡುವುದಿಲ್ಲ ಎಂಬ ಹಟವೂ ಸರಿಯಲ್ಲ ವೈಯಕ್ತಿಕವಾಗ ಕೆಲವು ಕಷ್ಟಗಳನ್ನು ಎದುರಿಸಬೇಕಾಗಿ ಬಂದರೂ ಶ್ರೇಷ್ಠ ಗುಣಗಳನ್ನೇ ಬಿಗಿ ಹಿಡಿಯಬೇಕಾಗಿದೆ. ತಾತ್ಕಾಲಿಕವಾದ ಸಾಧನೆಗಳನ್ನೆ ಒದಗಿಸಿ ಕೊಡುವುದಿದ್ದರೂ ಕೆಟ್ಟ ಗುಣಗಳನ್ನು ತೊರೆಯಬೇಕಾಗಿದೆ. ತನ್ನೊಡನೆ ಇತರರು ಸುಳ್ಳು ಹೇಳುವುದು ಎಲ್ಲ ಮನುಷ್ಯರು ವಿರೋಧಿಸುತ್ತಾರೆ. ಅದೇ ವೇಳೆ ಸುಳ್ಳು ಕ್ಷಮಾಪಣೆ ನಡೆಸಿ ಅವನು ಇತರರನ್ನು ವಂಚಿಸುವನು. ತಾನು ವಿರೋಧಿಸುವ ಸುಳ್ಳು ಇತರರ ವಿಷಯದಲ್ಲಿಯೂ ಆತ ಪರಿಗಣಿಸಬೇಕಿದೆ. ಜನರು ನಿನ್ನೊಡನೆ ಹೇಗೆ ವರ್ತಿಸಬೇಕೆಂಬಂತೆ ನೀನು ಕೂಡಾ ಅವರೊಡನೆ ವರ್ತಿಸುವುದು ನಿನ್ನ ಮೂಲಾಧಾರತತ್ವ ಆಗಿರಬೇಕಿದೆ. ಸುಳ್ಳು ಹೇಳುವುದರ ಅತ್ಯಂತ ದೊಡ್ಡ ದೋಷ ಅದರಿಂದ ಬಿಡುಗಡೆ ಪಡೆಯಲಾಗದ ರೀತಿಯಲ್ಲಿ ನಾಲಿಗೆ ಅದನ್ನೊಂದು ಅಭ್ಯಾಸ ಮಾಡುತ್ತದೆ ಎಂಬುದಾಗಿದೆ. ಸಾಕ್ಷ್ಯವೇ ಅಗತ್ಯವಿಲ್ಲದ ಕಣ್ಣ ಮುಂದೆ ಕಾಣುವ ಸತ್ಯ ಅದು. ನೀನು ನಾಲಿಗೆ ಸತ್ಯ ಅಭ್ಯಾಸ ಮಾಡು ಅದರಲ್ಲಿ ತೃಪ್ತನಾಗು. ನಾಲಿಗೆ ನೀನು ಅಭ್ಯಾಸ ಮಾಡುವುದನ್ನೇ ಆಡುತ್ತದೆ ಎಂದು ಹಿಂದೊಬ್ಬ ಕವಿ ಹೇಳಿದ್ದಾನೆ.
  ಸುಳ್ಳು ಹೇಳುವುದು ಕೊನೆಗೆ ಅಲ್ಲಾಹನ ಬಳಿ ಸುಳ್ಳು ಹೇಳುವುದಾಗಿ ದಾಖಲಿಸಲ್ಪಡುತ್ತದೆ ಎಂಬುದನ್ನು ಪ್ರವಾದಿವರ್ಯರು(ಸ) ಎಚ್ಚರಿಕೆ ನೀಡಿದ್ದಾರೆ. " ನೀವು ಸತ್ಯವಂತರಾಗಿರಿ. ನಿಶ್ಚಯವಾಗಿಯೂ ಸತ್ಯ ಒಳಿತಿಗೆ ಒಳಿತು ಸ್ವರ್ಗಕ್ಕೆ ಒಯ್ಯುವುದು. ಒಬ್ಬ ಮನುಷ್ಯ ಸತ್ಯವನ್ನು ಹೇಳುತ್ತಿರುವನು. ಅವನ ಹೆಸರನ್ನು ಅಲ್ಲಾಹ ಬಳಿ ಸತ್ಯವಂತ ಎಂದು ಬರೆಯಲ್ಪಡುವವರೆಗೂ. ಸುಳ್ಳಿನ ಬಗ್ಗೆ ಎಚ್ಚರ
  ವಹಿಸಿರಿ. ಸುಳ್ಳು ಅಧರ್ಮಕ್ಕೂ ಅಧರ್ಮ ನರಕ್ಕೂ ಕರೆದೊಯ್ಯುವುದು. ಒಬ್ಬ ಮನುಷ್ಯ ಸುಳ್ಳು ಹೇಳುತ್ತಿರುವನು. ಅವನ ಹೆಸರು ಅಲ್ಲಾಹನ ಬಳಿ ನಕಲಿ ವ್ಯಕ್ತಿ ಎಂದು ಬರೆಯಲ್ಪಡುವವರೆಗೂ" ಆದರೆ ಅದರೊಂದಿಗೆ ತತ್ವಗಳು ಮತ್ತು ಅವುಗಳ ಪ್ರಾಯೋಗಿಕತೆಯಲ್ಲಿ ಸಂತುಲನೆಯನ್ನು ಪಾಲಿಸುವುದು ಇಸ್ಲಾಮಿನ ವಿಶೇಷತೆಯಾಗಿದೆ. ಕೆಲವು ತತ್ವಚಿಂತಕರಂತೆ ಯಥಾರ್ಥ ಲೋಕಕ್ಕೆ ಇಳಿಯದೆ ಆಕಾಶದಲ್ಲಿ ಸುತ್ತು ಹೊಡೆಯುವ ಸಿದ್ಧಾಂತಗಳನ್ನು ಇಸ್ಲಾಮ್ ತೋರಿಸುವುದಿಲ್ಲ. ಜರ್ಮನ್ ತತ್ವ ಚಿಂತಕ ಕಾಂಟೆ ಇದಕ್ಕೊಂದು ಉದಾಹರಣೆಯಾಗಿದ್ದಾರೆ. ಯಾವ ಸಂದರ್ಭದಲ್ಲಿಯೂ ಸುಳ್ಳು ಹೇಳಲು ಮತ್ತು ಅದರಂತಹ ವಿಷಯಗಳನ್ನು ಮಾಡಲು ಅವನು ರಿಯಾಯಿತಿ ತೋರಿಸುವುದಿಲ್ಲ. ಯಾವುದೇ ಕಾರಣವಿದ್ದರೂ ಅದರ ಫಲ ಏನೇ ಆಗಿದ್ದರೂ ಸರಿ. ಆದರೆ ಇಸ್ಲಾಂ ಮನುಷ್ಯಪ್ರಕೃತಿಯ ಅನಿವಾರ್ಯತೆಗಳನ್ನು ಅರಿತಿರುವ ಅಲ್ಲಾಹನ ಸಿದ್ಧಾಂತವಾಗಿದೆ. ಆದ್ದರಿಂದ ಮನುಷ್ಯ ಪ್ರಕೃತಿ ಪರಿಗಣಿಸಿ ಸುಳ್ಳಿಗೆ ಕೆಲವು ವಿಶೇಷ ಸಂದರ್ಭಗಳಲ್ಲಿ ಅನುಮತಿ ಇದೆ. ಇದು
  ಅನಿವಾರ್ಯತೆಗನುಗುಣವಾಗಿರುತ್ತದೆ. ಮೈಮೂನ್ ಬಿನ್ ಮಿಹ್ರಾನ್ ಹೇಳುತ್ತಾರೆ "ಸುಳ್ಳು ಸತ್ಯಕ್ಕಿಂತ ಒಳ್ಳೆಯದಾಗಿ ಬರುವ ಕೆಲವು ಸಂದರ್ಭಗಳಿವೆ. ಒಬ್ಬ ಇನ್ನೊಬ್ಬನನ್ನು ಕೊಲ್ಲಲು ತಲವಾರೆತ್ತಿ ಅವನನ್ನು ಹುಡುಕುತ್ತಿರುವಾಗ. ಅದಕ್ಕೆ ಬಲಿಯಾಗಬಲ್ಲಂತಹ ಒಬ್ಬ ವ್ಯಕ್ತಿ ಒಂದು ಮನೆಯೊಳಗೆ ಹೊಕ್ಕು ಅಡಗಿ ಕೂತದ್ದನ್ನು ನೀವು ನೋಡಿದಿರಿ. ಕೊಲ್ಲಲು ಬಂದ ವ್ಯಕ್ತಿ ನಿಮ್ಮೊಂದಿ ಆತನ ಬಗ್ಗೆ ಕೇಳಿದಾಗ ನೀವು ನಾನು ಆತನನ್ನು ನೋಡಿಲ್ಲ ಎಂದು ಹೇಳುವುದು ಅನಿವಾರ್ಯ ಸುಳ್ಳಾಗಿದೆ. ಈ ರೀತಿಯ ಸುಳ್ಳು ಹೇಳಬಹುದಾದ ಇತರ ಕೆಲವು ಸಂದರ್ಭಗಳಿವೆ ಎಂದು ಹದೀಸ್‍ಗಳಿಂದ ನಮಗೆ ಗೊತ್ತಾಗುತ್ತದೆ.
  "ಮೂರು ಸಂದರ್ಭಗಳಲ್ಲಿ ಸುಳ್ಳು ಹೇಳುವುದು ಬಿಟ್ಟು ಬೇರೆ ಯಾವ ಸಂದರ್ಭದಲ್ಲಿಯೂ ಪ್ರವಾದಿವರ್ಯರು(ಸ) ರಿಯಾಯಿತಿ ತೋರಿಸಿಲ್ಲ. (ಜನರಲ್ಲಿ) ರಾಜಿ ಏರ್ಪಡಿಸಲಿಕ್ಕಾಗಿ ಹೇಳುವ ಮಾತು, ಒಬ್ಬ ಯುದ್ಧದಲ್ಲಿ ಹೇಳುವ ಮಾತು, ಒಬ್ಬ ಪುರುಷ ಪತ್ನಿಯೊಂದಿಗೆ ಮಾತಾಡುವಾಗ, ಮಹಿಳೆ ಪತಿಯೊಂದಿಗೆ ಮಾತಾಡುವಾಗ" ಇನ್ನು ನಾವು ಪ್ರಶ್ನೆಯತ್ತ ಗಮನ ಹರಿಸೋಣ, ಇಲ್ಲದ ಕಾರಣ ಹೇಳಿ ಕ್ಷಮೆ ಕೋರುವುದು ಪ್ರಶ್ನೆ ಕೇಳಿದ ಮಹಿಳೆ ಮಾಡಿದ್ದಾರೆ. ಸುಳ್ಳು ಹೇಳುವುದಕ್ಕೆ ಅನುಮತಿಸಲ್ಪಟ್ಟ ಮೂರು ಸಂದರ್ಭಗಳಲ್ಲಿ ಅಥವಾ ಅದಕ್ಕೆ ಸಮಾನವಾದ ರೀತಿಗಳಲ್ಲಿ ಇದು ಅಡಕವಾಗಿವೆಯೇ? ಅಲ್ಲದಿದ್ದರೆ ಇದು ನಿಷಿದ್ಧವಾಗಿದೆ.
  ಸಹೋದರಿಯ ಪ್ರಶ್ನೆಯನ್ನು ಪರಿಗಣಿಸುವಾಗ ಎರಡು ತಪ್ಪುಗಳನ್ನು ಅವರು ಮಾಡಿರುವುದು ಗೊತ್ತಾಗುತ್ತದೆ. ಒಂದು ಸಂಗಡಿಗಳಿಗೆ ನೀಡಿದ ವಾಗ್ದಾನವನ್ನು ಮುರಿದಿರುವುದು. ಇದು ಮುನಾಫಿಕ್‍ಗಳ ಲಕ್ಷಣಗಳಲ್ಲೊಂದಾಗಿದೆ. ಎರಡು, ಒಂದು ಕಾರಣವನ್ನು ಸೃಜಿಸಿ ಪ್ರಸ್ತುತ ಉಲ್ಲಂಘನೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅಂದರೆ ಒಂದು ತಪ್ಪಿಗೆ ಇನ್ನೊಂದು ತಪ್ಪಿನ ಮೂಲಕ ಚಿಕಿತ್ಸೆ ನೀಡಲಾಗಿದೆ.
  ತನ್ನ ತಪ್ಪು ಕಾಣಿಸುವುದಿದ್ದರೂ ನೈಜ ಕಾರಣವನ್ನು ಹೇಳುವುದೇ ಉತ್ತಮವಾಗಿದೆ. ಸುಳ್ಳು ಹೇಳುವುದಕ್ಕೆ ಬದಲಾಗಿ ಅದನ್ನು ಅಡಗಿಸುವ ಮಾತು ಆಡುವುದು ತಪ್ಪಲ್ಲ. ಆದರೆ ಆ ರೀತಿ ಹೇಳಲು ಸಾಧ್ಯವಿಲ್ಲದಿದ್ದರೆ ಒಂದು ವೇಳೆ ಸಂಗಡಿಗರ ನಡುವಿನ ಸಂಬಂಧ ಕೆಡುವ ಭೀತಿ ಇದ್ದರೆ. ಅದರಲ್ಲಿಯೂ ಅನಿವಾರ್ಯತೆಯ ಪರಿಮಿತಿಯನ್ನು ಅಲ್ಲಿಯೂ ಪಾಲಿಸಬೇಕಾಗುತ್ತದೆ. ಅದೊಂದು ಅಭ್ಯಾಸವಾಗಿ ಆಗಬಾರದು. ಯಾಕೆಂದರೆ ಅಗತ್ಯಕ್ಕೂ ಅಗತ್ಯವಿಲ್ಲದಿದ್ದರೂ ಸುಳ್ಳು ಹೇಳುವ ಅಭ್ಯಾಸ ರೂಢಿಯಾಗುತ್ತದೆ.

 • ಪರೀಕ್ಷೆಯಲ್ಲಿ ನಕಲು ಹೊಡೆಯಬಹುದೇ?
  ismika11-01-2017

  ಡಾ. ಯೂಸುಫುಲ್ ಕರ್ಝಾವಿ
  ಪ್ರಶ್ನೆ: ಕಲಿಕೆಯ ಅಂಗವಾಗಿ ನಡೆಯುವ ಪರೀಕ್ಷೆ ಮತ್ತು ಕೆಲಸ ಆಯ್ಕೆ ನಡೆಯುವ ಟೆಸ್ಟ್‍ಗಳಲ್ಲಿ ನಕಲು ಹೊಡೆಯುವುದರ ಬಗ್ಗೆ ವಿಧಿಯೇನು?

  ಉತ್ತರ: ಯಾವುದೇ ರೀತಿಯ ವಂಚನೆಯನ್ನು ಇಸ್ಲಾಮ್ ನಿರಾಕರಿಸುತ್ತದೆ. ನಿಷಿದ್ಧಗೊಳಿಸಿದೆ. ವಂಚನೆ ವ್ಯಾಪಾರದಲ್ಲಾಗಿರಲಿ, ಇತರ ಯಾವುದೇ ವ್ಯವಹಾರಗಳಲ್ಲಾಗಿರಲಿ ನಿಷಿದ್ಧವಾಗಿದೆ. ವಂಚಕ ನಮ್ಮವನಲ್ಲ ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ. ಇಸ್ಲಾಮ್ ಯಾವ ವಿಷಯದಲ್ಲಿ ಸತ್ಯವಂತರಾಗಿರಬೇಕೆಂದು ಹೇಳುತ್ತದೆ. ಅದನ್ನು ಎಲ್ಲರೂ ಬಿಗಿಯಾಗಿ ಹಿಡಿದಿರಬೇಕು. ಸತ್ಯ ಒಳಿತಿಗೆ ಒಳಿತು ಸ್ವರ್ಗಕ್ಕೂ ಜನರನ್ನು ತಲುಪಿಸುವುದು. ಪ್ರವಾದಿವರ್ಯರು(ಸ) ಹೇಳಿದರು: "ನಿಶ್ಚಯವಾಗಿಯೂ ಸತ್ಯ ಒಳಿತಿನೆಡೆಗೆ, ಒಳಿತು ಸ್ವರ್ಗದೆಡೆಗೆ ಕರೆದೊಯ್ಯುತ್ತದೆ. ಅಲ್ಲಾಹನ ಬಳಿ ಸತ್ಯಸಂಧರು ಎಂದು ದಾಖಲಿಸಲ್ಪಡುವುದಕ್ಕಾಗಿ ಜನರು ಸತ್ಯವನ್ನು ಹೇಳುವರು" ಇಹಲೋಕದಲ್ಲಿ ಲಭಿಸುವ ಅತ್ಯಂತ ದೊಡ್ಡ ಸಾಧನೆ ಇದಾಗಿದೆ.
  ಅಲ್ಲಾಹನು ನಿಷೇಧಗೊಳಿಸಿರುವ ಒಂದು ಕಾರ್ಯವನ್ನು ಒಬ್ಬ ಮಾಡುವುದಾದರೆ ಅದು ಪಾಪವಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಬೆಂಬಲ ಕೊಡುವುದು ಪಾಪ ಅಧರ್ಮಕ್ಕೆ ಸಹಕರಿಸಿದಂತಾಗುವುದು. ಪರೀಕ್ಷೆಯಲ್ಲಿ ವಂಚನೆ ನಡೆಸುವವನು ಪಾಪವನ್ನು ಮಾಡುವುದಾದರೆ ಅದಕ್ಕೆ ಅವನಿಗೆ ನೆರವಾದವನು ಆ ಪಾಪದಲ್ಲಿ ಪಾಲುದಾರನಾಗುವನು. ಜೊತೆಗೆ ಅವರು ಇನ್ನೊಬ್ಬರಿಗೆ ನ್ಯಾಯವಾಗಿ ಸಿಗುವ ಹಕ್ಕು ದಮನ ಮಾಡುತ್ತಿದ್ದಾರೆ. ಪರೀಕ್ಷೆ ಅಂದರೆ ಕ್ಲಾಸಿನಲ್ಲಿ ಅತ್ಯುತ್ತಮವಾಗಿ ಕಲಿಯುವ ವಿದ್ಯಾರ್ಥಿಯನ್ನು ಕಂಡು ಹುಡುಕುವುದಕ್ಕಾಗಿರುತ್ತದೆ. ಪರೀಕ್ಷೆ ಪರಿಶ್ರಮ ಮಾಡುವವರು ಮತ್ತು ಸೋಮಾರಿಗಳನ್ನು ಪ್ರತ್ಯೇಕಿಸಿ ತೋರಿಸಲಿಕ್ಕಿರುವ ಮಾನದಂಡವಾಗಿದೆ. ಅಲ್ಲಾಹನು ಹೇಳುತ್ತಾನೆ "ಸತ್ಯವಿಶ್ವಾಸ ವಿರಿಸಿ ಸತ್ಕರ್ಮವೆಸಗುವವರನ್ನೂ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವವರನ್ನೂ ನಾವು ಸಮಾನವಾಗಿಸಬೇಕೆ?"(ಸ್ವಾದ್:28)
  "ಜ್ಞಾನಿಗಳು ಮತ್ತು ಅಜ್ಞಾನಿಗಳು ಸರಿಸಮಾನರಾಗಬಲ್ಲರೇ?"(ಅಝ್ಝಮರ್:9)
  ಪರೀಕ್ಷೆಗಳು ಮತ್ತು ಕೆಲಸಕ್ಕಾಗಿ ನಡೆಸುವ ಟೆಸ್ಟ್‍ಗಳಲ್ಲಿ ನಕಲು ಮಾಡುವುದು ಕೆಟ್ಟ ಕೆಲಸವಾಗಿದೆ. ಅದನ್ನು ನಿಂದ್ಯ ಕೆಲಸಗಳ ಸಾಲಿಗೆ ಸೇರಿಸಲಾಗುತ್ತದೆ. ನಕಲು ಮಾಡುವುದೆಂದರೆ ಪರೀಕ್ಷೆ ಮಾಡಿಸುವವರನ್ನು ವಂಚಿಸುವುದಾಗಿದೆ. ಜೊತೆ ಸಮಾಜ, ರಾಷ್ಟ್ರದೊಂದಿಗೆ ತೋರಿಸುವ ಅನ್ಯಾಯವೂ ಅದು. ಅದರಿಂದ ಸಮಾಜಕ್ಕೆ ದೊಡ್ಡ ಅಪಾಯ ಸೃಷ್ಟಿಯಾಗುತ್ತದೆ. ನಕಲು ಹೊಡೆದು ಪಾಸು ಮಾಡಿದರೆ ಅಸಮರ್ಥರು ಮತ್ತು ಸಮರ್ಥರು ಸಮಾನ ಸ್ಥಾನಕ್ಕೆ ಸಮಾಜದಲ್ಲಿ ನಿಯೋಜಿಸಲ್ಪಡುತ್ತಾರೆ. ಕೆಲವೊಮ್ಮೆ ಅಸಮರ್ಥ, ಸಮರ್ಥನಿಗಿಂತಲೂ ಉನ್ನತ ಸ್ಥಾನದಲ್ಲಿರಬಹುದು. ಆಗ ಧರ್ಮದ ಪಕ್ಷ ಸಂಕುಚಿತವೂ ಅಧರ್ಮ ವಿಶಾಲವೂ ಆಗಿಬಿಡುತ್ತದೆ. ಇಂತಹವರಿರುವ ಸಮಾಜ ಹೇಗೆ ಗಟ್ಟಿಯಾಗಲು ಸದೃಢಗೊಳ್ಳಲು ಸಾಧ್ಯ. ಸಮಾಜದ ಸಮತೋಲನ ಅಸಮರ್ಥರಿಂದಾಗಿ ಬುಡಮೇಲು ಆಗಬಹುದು. ಹೀಗಾಗಿ ನಾವು ಪ್ರವಾದಿವರ್ಯರ ತಾಕೀತನ್ನು ಸ್ಮರಿಸಿಕೊಳ್ಳಬೇಕಿದೆ. "ಸತ್ಯ ಸಂಧತೆ ಪ್ರಮಾದವಾದರೆ ಅಂತ್ಯ ದಿನ ನಿರೀಕ್ಷಿಸಿರಿ. ಆಗ ಯಾರೋ ಕೇಳಿದರು: ಹೇಗೆ ಪ್ರಮಾದ ಸಂಭವಿಸುವುದು" "ಅನರ್ಹರಿಗೆ ಕೆಲಸ ವಹಿಸಿಕೊಡಲ್ಪಟ್ಟರೆ ಅಂತ್ಯ ದಿನವನ್ನು ನಿರೀಕ್ಷಿಸಿರಿ" ಎಂದು ಪ್ರವಾದಿವರ್ಯರು(ಸ) ಹೇಳಿದ್ದಾರೆ(ಬುಖಾರಿ)
  ಅಕ್ರಮದ ಮೂಲಕ ಒಬ್ಬ ಸರ್ಟಿಫಿಕೆಟ್ ಅಥವಾ ಕೆಲಸ ಸಂಪಾದಿಸಿಕೊಂಡರೆ ಅಲ್ಲಿ ಸಿಗುವ ಸಂಬಂಳ ಆತನಿಗೆ ನಿಷಿದ್ಧವಾಗಿದೆ. ಯಾಕೆಂದರೆ ತನಗೆ ಅರ್ಹವಲ್ಲದ ಆ ಸ್ಥಾನದಲ್ಲಿ ಆತ ಕೂತು ಕೆಲಸ ಮಾಡುತ್ತಿದ್ದಾನೆ. ನಿಜವಾಗಿಯೂ ಆ ಸ್ಥಾನದಲ್ಲಿರುವ ಯೋಗ್ಯತೆ ಅವನಿಗಿಲ್ಲ. ಆದ್ದರಿಂದ ಅದರಿಂದ ಲಭಿಸುವ ಸಂಬಳವನ್ನು ಆತ ಅಕ್ರಮವಾಗಿ ತಿನ್ನುತ್ತಾನೆ.
  "ತಮ್ಮ ಕೃತ್ಯಗಳಿಂದ ಸಂತುಷ್ಟರಾಗಿದ್ದು ನಿಜವಾಗಿ ತಾವು ಮಾಡದಿರುವ ಕಾರ್ಯಗಳ ಪ್ರಶಂಸೆ ತಮಗೆ ಸಲ್ಲಬೇಕೆಂದು ಬಯಸುವವರು ಯಾತನೆಯಿಂದ ಸುರಕ್ಷಿತರೆಂದು ಎಣಿಸಬೇಡಿರಿ. ವಾಸ್ತವದಲ್ಲಿ ಅವರಿಗೆ ವೇದನಾಯುಕ್ತ ಶಿಕ್ಷೆ ಸಿದ್ಧವಿದೆ. (ಆಲಿ ಇಮ್ರಾನ್:188)
  ಹೀಗೆ ಅನರ್ಹವಾದ ರೀತಿಯಲ್ಲಿ ಯಾರಾದರೂ ಕೆಲಸ ಗಳಿಸಿದ್ದರೆ ಅದಕ್ಕೆ ಅಗತ್ಯ ಅರ್ಹತೆಯೋಗ್ಯತೆಯನ್ನು ಗಳಿಸಲಿ. ಅಲ್ಲದಿದ್ದರೆ ತನ್ನ ಯೋಗ್ಯತೆಗೆ ತಕ್ಕ ಕೆಲಸ ಅವನು ಮಾಡಲಿ. ಈ ರೀತಿ ಅಲ್ಲಾಹನು ಒಂದು ಮಾರ್ಗ ತೋರಿಸುವವರೆಗೆ ಸೂಕ್ಷ್ಮ ಎಚ್ಚರಿಕೆ ಮತ್ತು ಸಹನೆಯಿಂದ ಇರಲು ನಾವು ಸಲಹೆ ನೀಡಬೇಕು. ಅವನಿಗೆ ಮಾನಸಿಕ ಕ್ಲೇಶಗಳಿಂದ ಮುಕ್ತರಾಗಲು ಅಲ್ಲಾಹನೇ ದಾರಿ ತೋರಿಸುವನು.

 • ಈ ಲೋಕ ಪಿಶಾಚಿಯದೇ?
  ismika27-01-2017

  ಪ್ರಶ್ನೆ: ಇಸ್ಲಾಮಿನ ದೃಷ್ಟಿಯಲ್ಲಿ ಈ ಲೋಕ ಪಿಶಾಚಿಯದು ಎಂದು ಹೇಳುವುದನ್ನು ಎಲ್ಲೋ ಕೇಳಿದ್ದೇನೆ. ಮರಣಾ ನಂತರವೇ ಒಳಿತಿದೆ ಎನ್ನುವಂತಾಯಿತು. ಇದು ನಿಜವೇ?

  ಉತ್ತರ: ಈ ಜಗತ್ತು ಪಿಶಾಚಿಯದ್ದೆಂದು ಇಸ್ಲಾಮ್ ಎಂದೂ ಕಲಿಸಿಯೇ ಇಲ್ಲ. ಈ ಲೋಕದಲ್ಲಿ ಎಲ್ಲಕ್ಕೂ ಒಂದು ಲಕ್ಷ್ಯವಿದೆ. ಮಾತ್ರವಲ್ಲ. ಮೂಲಭೂತವಾಗಿ ಎಲ್ಲ ಒಳಿತುಗಳು ಜಗತ್ತಿನಲ್ಲಿವೆ. ಅದರ ಜೊತೆಯಲ್ಲಿಯೇ ಕೆಡುಕುಗಳಿವೆ. ಒಂದು ವೇಳೆ ಕೆಡುಕೇ ಇಲ್ಲ ಎಂದಾಗಿದ್ದರೆ ಒಳಿತಿನ ಅಸ್ತಿತ್ವಕ್ಕೇನು ಅರ್ಥ ಎನ್ನುವಂಶ ನಾವು ಯೋಚಿಸಬೇಕು.
  ಈ ಜಗತ್ತು ಒಂದು ಪರೀಕ್ಷಾ ಗೃಹ. ಈ ಜಗತ್ತಿನಲ್ಲಿ ಒಳಿತಿನ ಸಂಸ್ಥಾಪನೆಗೆ ಕೆಲಸ ಮಾಡುವುದು ಮನುಷ್ಯ ಧರ್ಮ. ಆ ಉದ್ದೇಶಕ್ಕಾಗಿ ಆತ ಕೆಡುಕಿನೊಂದಿಗೆ ಹೋರಾಡುತ್ತಾನೆ. ಇಲ್ಲಿ ನಮ್ಮ ವಿರೋಧಿ ಬಾಹ್ಯ ಲೋಕದ ಕೆಡುಕು ಮಾತ್ರವಲ್ಲ. ಬದಲಾಗಿ ನಮ್ಮ ಹೃದಯಾಂತರಾಳದ ಕೆಡುಕು ಕೂಡಾ ನಮ್ಮ ಪಾಲಿನ ವಿರೋಧಿಯೇ ಎಂಬುದನ್ನು ನಾವು ತಿಳಿದಿರಬೇಕು.
  ಈ ಲೋಕದಲ್ಲಿ ನ್ಯಾಯ ಧರ್ಮ ಇರಬೇಕು. ಮತ್ತು ಅದು ಜಗತ್ತಿನಾದ್ಯಂತ ಯಶಸ್ವಿಯಾಗಿ ಸಂಸ್ಥಾಪಿಸಲ್ಪಡಬೇಕು ಎಂದು ಬಯಸುವ ಪ್ರತಿಯೊಬ್ಬನ ಜೀವನವು ಹೋರಾಟಗಳಿಂದಲೇ ಕೂಡಿರುತ್ತದೆ. ಅವನಿಗೆ ಕೆಡುಕಿನೊಂದಿಗೆ ಸಂಘರ್ಷವೊಂದೇ ಪರ್ಯಾಯ. ಹೀಗಾಗಿ .ವಾಸ್ತವದಲ್ಲಿ ಕೆಡುಕುಗಳೊಂದಿಗೆ ನಡೆಸುವ ಈ ಹೋರಾಟವನ್ನೇ ಜಿಹಾದ್ ಎಂದು ಕರೆಯಲಾಗುತ್ತದೆ.
  ಸತ್ಯಸಂಧವಾಗಿ ಜೀವಿಸಿದವರಿಗೆ ಮರಣಾನಂತರ ಒಳಿತು ಮತ್ತು ಸಂತೋಷದ ಜೀವನ ಸಿಗುತ್ತದೆ. ಅದೇ ವೇಳೆ ಕಪಟರಿಗೆ ತಮ್ಮ ಜೀವನವನ್ನು ಕೆಟ್ಟ ವಿಚಾರದಲ್ಲಿ ಪೋಲು ಮಾಡಿದವರಿಗೆ ವಿಷಾದ ಮತ್ತು ಖೇದ ದುಃಖ ಹಾಗೂ ಕಷ್ಟವೇ ಎದುರಿರುತ್ತದೆ.
  ಏಕ ದೇವನು, ಪ್ರವಾದಿ, ಅಂತ್ಯ ದಿವಸದಲ್ಲಿ ವಿಶ್ವಾಸ ಇವೆಲ್ಲ ಇದ್ದೂ ಒಳ್ಳೆಯದು ಮಾಡುತ್ತಿರುವವರಿಗೆ ಸ್ವರ್ಗ ಪ್ರವೇಶಿಸುವರು. ಅವರೇ ನಿಜವಾದ ವಿಜಯಿಗಳು. ದೇವ ಪ್ರವಾದಿಯನ್ನು ಮತ್ತು ಅಂತ್ಯ ದಿವಸವನ್ನು ಧಿಕ್ಕರಿಸಿದವರ ಅಂತಿಮ ನೆಲೆ ನರಕವಾಗಿದೆ ಎನ್ನಬಹುದು.

 • ತಾತ್ಕಾಲಿಕ ಗರ್ಭನಿರೋಧ ಅನುವದನೀಯವೇ?
  ismika06-02-2017

  ನಾವು ಕಲಿಯುವುದನ್ನು ಮುಂದುವರಿಸುತ್ತಿರುವ ವಿದ್ಯಾರ್ಥಿಗಳಾದ ದಂಪತಿಗಳು. ಆದ್ದರಿಂದ ಈಗಿನ ಸ್ಥಿತಿಯಲ್ಲಿ ಮಗುವನ್ನು ಬೆಳೆಸಲು ನಮಗೆ ಕಷ್ಟವಿದೆ. ಗರ್ಭಧಾರಣೆಯನ್ನು ಭರ್ತ್‍ಕಂಟ್ರೋಲ್ ಫಿಲ್ಸ್‍ನಿಂದ, ಕಾಂಡೋಂನಿಂದ ತಾತ್ಕಾಲಿಕವಾಗಿ ಮುಂದೂಡುವ ವಿಧಾನ ಇಸ್ಲಾಮ್‍ನಲ್ಲಿ ಅನುವದನೀಯವಾಗಿದೆಯೇ?
  ಉತ್ತರ: ವಿವಾಹದ ಪ್ರಧಾನ ಉದ್ದೇಶವೇ ಪ್ರಜನನವಾಗಿದೆ. ಭೂಮಿಯಲ್ಲಿ ಮನುಷ್ಯ ವಂಶವನ್ನು ನೆಲೆಯಾಗಿರುವಂತೆ ಮಾಡಲು ದೇವನು ಮಾಡಿರುವ ವ್ಯವಸ್ಥೆ ಅದು. ಅದಕ್ಕಿಂತ ಮಿಗಿಲಾಗಿ ಅನುಗ್ರಹವಾಗಿ ಇಸ್ಲಾಮ್ ಮಕ್ಕಳನ್ನು ಉದ್ಧರಿಸಿದೆ. ಆದ್ದರಿಂದ ಪ್ರವಾದಿ(ಸ) ವಿವಾಹ ಆಗಲು ಪ್ರಜನನಕ್ಕೆ ತಯಾರಾಗಲು ತನ್ನ ಸಂಗಾತಿಗಳನ್ನುಪ್ರೇರೇಪಿಸಿದರು. ಆದ್ದರಿಂದ ದಂಪತಿ ವಿವಾಹವನ್ನು ಲೈಂಗಿಕ ಅಗತ್ಯಕ್ಕೆ ಪೂರ್ತಿಗೊಳಿಸಲು ಮಾತ್ರ ಇರುವ ಉಪಾಧಿಯಾಗಿ ಕಾಣಬಾರದು.
  ವಿವಾಹದ ಮೂಲಕ ಮಕ್ಕಳುಂಟಾಗುವುದು ಬಹಳ ಮುಖ್ಯವಾಗಿದೆ. ನಾಳೆಯ ನಾಯಕರೂ ಸಮಾಜದ ಆಸ್ತಿಯಾಗಿ ಮಾರ್ಪಡುವ ಮಕ್ಕಳನ್ನು ಬೆಳೆಸುವುದು ಮತ್ತು ಪರಿಪಾಲಿಸುವುದಕ್ಕೆ ಇಸ್ಲಾಮ್ ಪ್ರಾಧಾನ್ಯತೆ ನೀಡಿದೆ. ಹೆತ್ತವರ ಕಡೆಯಿಂದ ಮಕ್ಕಳಿಗೆ ಸಾಕಷ್ಟು ಗಮನ ಪೋಷಣೆ ಲಭಿಸಬೇಕಿದೆ. ಆಂತಹದಿಲ್ಲದಿದ್ದರೆ ಮಕ್ಕಳು ಭಾರವಾಗಿ ಪರಿಣಮಿಸಬಹುದು.
  ಆದರೆ ನೀವಿಬ್ಬರೂ ವಿದ್ಯಾರ್ಥಿಗಳಾಗಿದ್ದು, ನಿಮ್ಮದೇ ಆದ ಪ್ರತ್ಯೇಕ ಪರಿಸ್ಥಿತಿಯಲ್ಲಿ ಮಕ್ಕಳ ಪರಿಪಾಲನೆಯ ಜವಾಬ್ದಾರಿಕೆ ವಹಿಸಿಕೊಳ್ಳಲು ಸಮರ್ಥರಾಗಿಲ್ಲ ಎಂಬ ಬಲವಾದ ಅನಿಸಿಕೆ ನಿಮಗಿದ್ದರೆ ಗರ್ಭಧಾರಣೆ ದೂರವಿಡಲು ತಾತ್ಕಾಲಿಕ ಗರ್ಭ ನಿರೋಧ ದಾರಿಯನ್ನು ಅನುಸರಿಸುವುದರಲ್ಲಿ ತಪ್ಪಿಲ್ಲ. ಆದರೆ ಈ ಅನುಮತಿ ತಾತ್ಕಾಲಿಕವಾದುದು.
  ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕಲಿಕೆ ಪೂರ್ತಿಗೊಳಿಸಿ ಈಗಿನ ಅವಸ್ಥೆಯಲ್ಲಿ ಬದಲಾವಣೆ ಆಗುವವರೆಗೆ ಗರ್ಭಧಾರಣೆಯನ್ನು ದೂರ ಇರಿಸಲು ಅನುಮತಿ ಇದೆ.
  ಪ್ರವಾದಿವರ್ಯರು(ಸ) ಮತ್ತು ಸಹಾಬಿಗಳ ಕಾಲದಲ್ಲಿ ಕೆಲವು ಪ್ರತ್ಯೇಕ ರೀತಿಗಳಿದ್ದವು ಎನ್ನುವುದರಿಂದ ಈ ವಿಷಯದಲ್ಲಿ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಮುಖ ಸಹಾಬಿವರ್ಯರಾದ ಜಾಬಿರ್(ರ) ಹೇಳಿದ್ದಾರೆ ನಮ್ಮ ಕಾಲದಲ್ಲಿ ಅಝಲ್ ಮಾಡುತ್ತಿದ್ದೆವು ಎಂದು ತಿಳಿಸಿದ್ದಾರೆ. ಆ ಕಾಲದಲ್ಲಿ ಪವಿತ್ರ ಕುರ್‍ಆನ್ ಅವತೀರ್ಣಗೊಳ್ಳುತ್ತಿತ್ತು. ಅದು ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದಿದ್ದಾರೆ. ಆದ್ದರಿಂದ ಅದು ಅನುವದನೀಯ ಎನ್ನುವ ಸೂಚನೆ ದೊರೆತಂತಾಗಿದೆ. ಆದರೆ ಆಧುನಿಕ ಕಾಲದಲ್ಲಿ ತಾತ್ಕಾಲಿಕ ಗರ್ಭನಿರೊಧ ಮಾರ್ಗ ಅನುಸರಿಸುವುದೆಂದರೆ ಅದು ಅಝಲ್‍ಗಿಂತ ವ್ಯತ್ಯಾಸವಾಗುವುದಿಲ್ಲ. ಜೀವನ ಸಖಿಯ ಪರಸ್ಪರ ಸಮ್ಮತಿಯಿಂದ ತತ್ಕಾಲಿಕ ಗರ್ಭಧಾರಣೆ ನಡೆಸಬಹುದೆಂದು ವಿದ್ವಾಂಸರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

 • ಪುರುಷರು ತಮ್ಮ ಕಾಲು ಮತ್ತು ಬೆನ್ನಿನ ಕೂದಲು ನಿವಾರಿಸಿಕೊಳ್ಳಬಹುದೇ?
  ismika06-02-2017

  ಪುರುಷರು ತಮ್ಮ ಕಾಲು ಮತ್ತು ಬೆನ್ನಿನ ಕೂದಲು ನಿವಾರಿಸಿಕೊಳ್ಳಬಹುದೇ?
  ಉತರ: ಇಸ್ಲಾಮೀ ಶರೀಅತ್ ವಿಧಿ ಪ್ರಕಾರ ಶರೀರದ ರೋಮಗಳನ್ನು ಮೂರು ರೀತಿಯಲ್ಲಿ ವಿಭಾಗಿಸಬಹುದಾಗಿದೆ. ಇರಿಸಬೇಕೆಂದು ಹೇಳಿದ ರೋಮ, ನಿವಾರಿಸಬೇಕೆಂದು ಹೇಳಲಾದ ಗುಪ್ತ ಭಾಗದ ರೋಮ ಮತ್ತು ಇವೆರಡೂ ಅಲ್ಲದ ಅದಕ್ಕೆಂದೇ ಪ್ರತ್ಯೇಕ ವಿಧಿಗಳಿಲ್ಲದ ರೋಮ ಮೂರನೆಯದು.
  ಕೈಕಾಲು ಮತ್ತು ಬೆನ್ನಿನ ರೋಮವೆಲ್ಲ ಕೊನೆಗೆ ತಿಳಿಸಿದ ವರ್ಗಕ್ಕೆ ಸೇರಿದೆ. ಇದನ್ನು ಇಟ್ಟುಕೊಳ್ಳಬೇಕೆ ಅಥವಾ ತೆಗೆಯಬೇಕೆ ಎಂದು ಇಸ್ಲಾಮ್ ಆದೇಶಿಸಿಲ್ಲ. ಅದನ್ನು ತೆಗೆಯಬಹುದು ಮತ್ತು ತೆಗೆಯದಿರಬಹುದು ಎಂದು ಇದರಿಂದ ನಮಗೆ ಮನವರಿಕೆಯಾಗುತ್ತದೆ. ಒಬ್ಬ ಪುರುಷ ರೋಮ ತೆಗೆಯುವುದರಿಂದ ಮಹಿಳೆಯರಂತೆ ಕಾಣಿಸುತ್ತಾನೆಂದಾದರೆ ಅದು ನಿಷಿದ್ಧವಾಗಿದೆ. ಅದೇ ವೇಳೆ ಒಬ್ಬ ತನ್ನ ಶರೀರದಲ್ಲಿ ರೋಮಗಳೇ ತುಂಬಿ ಕಷ್ಟಪಡುತ್ತಿದ್ದರೆ ಅದನ್ನು ತೆಗೆಯುವುದಕ್ಕೆ ವಿರೋಧವಿಲ್ಲ.

 • ನೀರಿನ ವ್ಯಾಪಾರದ ಬಗ್ಗೆ ಇಸ್ಲಾಮಿನ ನಿಲುವು?
  ismika06-03-2017

  ಬಶೀರ್ ಮುಹಿಯ್ಯುದ್ದೀನ್
  ಪ್ರಶ್ನೆ: ನೀರು ವ್ಯಾಪಾರದ ಮಾಡುವುದರ ಇಸ್ಲಾಮಿನ ವಿಧಿಯೇನು?

  ಉತ್ತರ: ನೀರು ಒಂದು ಮಾರುಕಟ್ಟೆಯ ವಸ್ತುವಾಗಿರುವ ಈ ದಿನಗಳಲ್ಲಿ ಹೆಚ್ಚು ಮುಖ್ಯ ಪ್ರಶ್ನೆಯಿದೆ. ಖರೀದಿ ಸಾಮಾಥ್ರ್ಯ ಇರುವ ಜನರಿಗೆ ಮಾತ್ರ ಸಿಗುವ ಸ್ಥಿತಿಗೆ ಜೀವಜಲ ಮಾರ್ಪಾಟಾಗಿದೆ. ಇನ್ನೂ ಸ್ವಲ್ಪ ಮುಂದೆ ಸಾಗಿದರೆ ನೀರು ಒಂದು ಆಡಂಬರ ವಸ್ತುವಾಗಿ ಮಾರ್ಪಡುವ ಸಾಧ್ಯತೆಯೂ ಇದೆ. ಗಾಳಿ, ಬೆಳಕಿಯಂತೆ ನೀರು ಕೂಡಾ ದೇವನ ಒಂದು ಅನುಗ್ರಹವಾಗಿದೆ. ಅದು ಎಲ್ಲ ಸೃಷ್ಟಿಗಳಿಗೂ ಉಪಯೋಗಿಸಲು ಸಿಗಬೇಕಾದ ವಸ್ತುವೂ ಹೌದು. ಆದರೆ ಶಕ್ತಿ ಶಾಲಿಗಳಾದ ಕೆಲವರು ಅಥವಾ ಬೃಹತ್ ಶಕ್ತಿಗಳು ಅದನ್ನು ವ್ಯಾಪಾರೀಕರಣ ಗೊಳಿಸಿಬಿಟ್ಟಿದ್ದಾರೆ.
  ಹಿಂದೆ ರಾಜರ ಆಳ್ವಿಕೆಯಿದ್ದ ಕಾಲದಲ್ಲಿ ಪ್ರಯಾಣಿಕರಿಗೆ, ಆವಶ್ಯಾರ್ಥಿಗಳಿಗೆ ನೀರು ಉಚಿತವಾಗಿ ಸಿಗಲೆಂದು ತಣ್ಣೀರಿನ ಕೊಳಗಳನ್ನು ಅರಸರು ಕಟ್ಟಿಸಿದ್ದರು. ಅಥವಾ ಅವರ ವ್ಯವಸ್ಥೆಯಿಂದ ನೀರಿನಾಶ್ರಯ ನಿರ್ಮಿಸಲಾಗಿತ್ತು. ಬರಬರುತ್ತಾ ನಾಗರಿಕತೆ ವಿಕಾಸಗೊಂಡಂತೆ ನಮ್ಮ ಮನಸ್ಸು ಸಂಕುಚಿತಗೊಂಡಿತು. ಪವಿತ್ರ ಕುರ್‍ಆನ್ ಸೂರ: ಮಾವೂನ್‍ನಲ್ಲಿ ಪರರಿಗೆ ಉಪಕಾರ ಮಾಡುವುದನ್ನು ತಡೆಯುವ ಕುರಿತು ಉದ್ಧರಿಸಲಾಗಿದೆ. ಈ ಪರೋಪಕಾರಿ ಆವಶ್ಯಕ ವಸ್ತುಗಳು ಯಾವುವು ಎಂದು ನಮಗೆ ಗೊತ್ತಿದೆಯೇ?. ಇಲ್ಲ. ಅಥವಾ ಮಾವೂನ್ ಎಂದರೇನು? ಈ ಕುರಿತು ಒಮ್ಮೆ ಹಝ್ರತ್ ಆಯಿಶಾ(ರ) ಪ್ರವಾದಿವರ್ಯರೊಡನೆ(ಸ) ಮಾವೂನ್ ಎಂದರೆ (ಸಣ್ಣ ಸಣ್ಣ ಪರೋಪಕಾರಗಳು) ಏನು ಎಂದು ಕೇಳಿ ತಿಳಿಯ ಬಯಸಿದರು. ಆಗ ಪ್ರವಾದಿ ವರ್ಯರು(ಸ) ವಿವರಿಸುತ್ತಾ ಮಾವೂನ್ ಎನ್ನುವ ನಾಲ್ಕು ವಸ್ತುಗಳನ್ನು ಪಟ್ಟಿ ಮಾಡಿದರು. ನೀರು, ಬೆಂಕಿ, ಹುಲ್ಲು, ಉಪ್ಪು ಇವುಗಳೇ ಮಾವೂನ್‍ಗಳಲ್ಲಿ ಸೇರಿಕೊಂಡು ವಸ್ತುಗಳಾಗಿವೆ. ಆದ್ದರಿಂದ ಯಾರು ಕೂಡಾ ಈ ವಸ್ತುಗಳನ್ನು ಇತರರಿಗೆ ತಡೆ ಹಿಡಿಯಬಾರದು. ಈ ವರದಿ ಪ್ರಕಾರ ನಮಗೆ ನೀರು ಇತರರಿಗೆ ತಡೆ ಹಿಡಿಯಲಾಗದ ವಸ್ತುವೆಂದು ಮನದಟ್ಟಾಗುತ್ತದೆ.
  ಹೌದು ನೀರು ಮನುಷ್ಯ ಜೀವಿಸುವ ಹಕ್ಕಿಗೆ ಸಂಬಂಧಿಸಿದ ಭಾಗವೇ ಆಗಿದೆ. ನೀರು ಮನುಷ್ಯನಿಗೆ ಸಿಗಲೇಬೇಕು. ನೀರು ಮನುಷ್ಯನ ಹಕ್ಕು. ಆತನ ದಾಹಕ್ಕೆ ಅದು ದೊರೆಯಲೇಬೇಕು. ಹೀಗಾಗಿ ನೀರು ಮನುಷ್ಯನ ಮೂಲಭೂತ ಹಕ್ಕುಗಳಲ್ಲೊಂದಾಗಿದೆ. ಆದ್ದರಿಂದ ನೀರನ್ನು ಯಾರೂ ತಡೆಹಿಡಿಯುವಂತಿಲ್ಲ. ಆದರೆ ಈ ಹಕ್ಕು ಪ್ರಜ್ಞೆಯನ್ನೇ ವ್ಯಾಪಾರಿ ಬಹಳ ಸುಲಭವಾಗಿ ಬುಡಮೇಲು ಗೊಳಿಸಿಬಿಟ್ಟಿದ್ದಾನೆ. ನೀರು ಅತ್ಯಾವಶ್ಯಕ ಉಪಯೋಗ ವಸ್ತು ಆದ್ದರಿಂದ ಅದನ್ನು ಹಣ ಕೊಟ್ಟು ಪಡೆಯಬೇಕು ಎನ್ನುವ ಪ್ರಚಾರಗಳು ನಡೆಯುತ್ತಿದೆ. ನಮ್ಮ ಸುತ್ತಲಿನ ಹಲವಾರು ಮಾಫಿಯಾಗಳ ಸಾಲಿಗೆ ಈ ಜಲ ಮಾಫಿಯಾ ಅಂದರೆ ನೀರಿನ ಮಾರುಕಟ್ಟೆ ಮಾಫಿಯಾ ಕೂಡಾ ಸೇರಿದೆ. ಇಂದು ಮದುವೆ ಮನೆಯಲ್ಲಿ ನಿಮಗೆ ಗೊತ್ತಿದೆ. ಅಲ್ಲಿ ಈಗ ನಿರಂತರ ಬಾಟ್ಲಿ ನೀರೆ ಸಿಗುತ್ತಿದೆ. ಇದನ್ನೆ ನಾವಿಂದು ಗೌರವದ ಸಂಕೇತವಾಗಿ ಮಾರ್ಪಡಿಸಿ ಕೊಂಡಿದ್ದೇವೆ. ನಿಜಕ್ಕಾದರೆ ಆ ನೀರಿನ ಖಾಲಿ ಬಾಟ್ಲಿ ಬಿಸಾಡಿದರೆ ಏನಾಗುತ್ತದೆ. ಅಂದರೆ ಖಾಲಿ ಬಾಟ್ಲಿಯಿಂದ ಪರಿಸರದಲ್ಲಾಗುವ ಸಮಸ್ಯೆ ಸಣ್ಣದೇನಲ್ಲ.
  ಪ್ರವಾದಿ(ಸ) ವಿಶೇಷವಾಗಿ ಎತ್ತಿ ಹೇಳಿದ ಆ ನಾಲ್ಕು ವಸ್ತುಗಳು ಪರಸ್ಪರ ಹಸ್ತಾಂತರವಾಗಬೇಕಾದ ಪ್ರಕೃತಿಯ ಸಂಪನ್ಮೂಲಗಳಾಗಿವೆ. ಅದು ಮಾರಲ್ಪಡಬೇಕಾದ ವಸ್ತುಗಳೇ ಅಲ್ಲ. ಅದೇ ರೀತಿ ಉಪ್ಪು ವ್ಯಾಪಾರದ ವಸ್ತು ಆಗಿದೆ. ಗ್ಯಾಸ್, ಕಟ್ಟಿಗೆಯ ರೂಪದಲ್ಲಿ ಬೆಂಕಿ, ಜಾನುವಾರುಗಳಿಗಿರುವ ಹುಲ್ಲು ಮಾರಾಟದ ಸರಕಾಗಿ ಮಾರ್ಪಟ್ಟಿದೆ. ಹೀಗೆ ಯಾವುದನ್ನೂ ಹಂಚಿಕೊಳ್ಳದ ಸ್ವಾರ್ಥದೆಡೆಗೆ ನಾವು ಅತಿ ಬೇಗನೆ ಮಾರ್ಪಟ್ಟೆವು. ಯುರೋಪ್, ಅರಬ್ ನಾಡುಗಳೆಲ್ಲ ಬಹಳ ಹಿಂದೆಯೇ ನೀರು ಮಾರಾಟದ ವಸ್ತುವಾಗಿ ಮಾರ್ಪಟ್ಟಿದೆ. ನೀರಿಗೆ ಹಣ ಕೊಟ್ಟು ಖರೀದಿಸಬೇಕೆಂದು ಹೇಳಿದಾಗ ಕುತೂಹಲವಾಗುತ್ತಿದ್ದ ಒಂದು ಕಾಲ ನಮದಾಗಿತ್ತು.
  ಇನ್ನು ಜಗತ್ತು ಎದುರಿಸಬೇಕಾದ ಬಹುದೊಡ್ಡ ಸಮಸ್ಯೆ ನೀರಿಗಾಗಿ ಯುದ್ಧವಾಗಿರುತ್ತದೆ ಎನ್ನಲಾಗುತ್ತಿದೆ. ಯಾವುದೇ ಜೀವಿ ಜೀವವಿರುವ ಕಾಲದವರೆಗೆ ನೀರು ಅತ್ಯಾವಶ್ಯಕ ವಸ್ತುವಾಗಿರುವುದರಿಂದ ನೀರು ಮಾಫಿಯ ಇದರ ಮೇಲೆ ಪ್ರಭುತ್ವವನ್ನು ಖಂಡಿತಾ ಸಾಧಿಸುತ್ತದೆ ಎನ್ನಬಹುದು. ಆದರೆ ನೀರು ದಾನಕ್ಕೆ ದೊಡ್ಡ ಮಹತ್ವವಿದೆ ಎಂದು ಪ್ರವಾದಿ ವರ್ಯರು(ಸ) ಕಲಿಸಿದ್ದಾರೆ. ಹಝ್ರತ್ ಆಯಿಶಾ(ರ)ರಿಗೆ ನೀಡಿದ ಉತ್ತರದಲ್ಲಿ ಪ್ರವಾದಿ(ಸ) ಹೇಳಿದರು. ನೀನೊಂದು ಲೋಟ ನೀರು ನೀಡಿ ಅದರ ಮೂಲಕ ಒಬ್ಬನ ಜೀವ ಉಳಿದರೆ ಸಕಲ ಮನುಷ್ಯರಿಗೆ ಜೀವ ನೀಡಿದಂತೆ. ಒಬ್ಬನಿಗೆ ಒಂದು ಗ್ಲಾಸ್ ನೀರು ನೀಡುವುದು ಇಷ್ಟರವರೆಗೆ ಪುಣ್ಯವಿರುವ ಕಾರ್ಯವಾಗಿದೆ. ಇಂದಿನ ಮಾರುಕಟ್ಟೆ ಸಂಸ್ಕøತಿ, ಇವೆಲ್ಲವನ್ನೂ ಬುಡಮೇಲು ಗೊಳಿಸಿದೆ. ರೈಲಿನಲ್ಲಿ ಪ್ರಯಾಣಿಸುವಾಗ ಸಹ ಪ್ರಯಾಣಿಕನಲ್ಲಿ ಸ್ವಲ್ಪ ನೀರು ಕೇಳಿ ಪಡೆಯಲು ಸಾಧ್ಯವಿಲ್ಲದಂತೆ ಇಂದು ನೀರು ವ್ಯಾಪಾರೀಕರಣಗೊಂಡಿದೆ. ನಮ್ಮಿಂದ ನಮ್ಮ ಜೀವಪ್ರಿಯ ಅಥವಾ ಮಾನವೀಯ ಮನಸ್ಸನ್ನು ಮತ್ತೆ ಉದ್ದೀಪಿಸಿದಾಗ ಮಾತ್ರ ಭೌತಿಕ ಹಿತಾಸಕ್ತಿಗಳನ್ನು ಎದುರಿಸಿ ಸೋಲಿಸಲು ಸಾಧ್ಯ.

 • ಝಂಝಂ ನೀರಲ್ಲಿ ಅದ್ದಿದ ಕಫನದ ಬಟ್ಟೆ!
  ismika14-03-2017

  ಪ್ರಶ್ನೆ: ಕೆಲವು ಜನರು ತಮ್ಮ ಕಫನದ ಬಟ್ಟೆಯನ್ನು ಝಂಝಂ ನೀರಿನಲ್ಲಿ ಅದ್ದಿ ತೆಗೆಯಲಿಕ್ಕಾಗಿ ಹಜ್ ಉಮ್ರಾ ಹೋಗುವಾಗ ತಮ್ಮ ಜೊತೆಗೆ ತೆಗೆದು ಕೊಂಡು ಹೋಗುತ್ತಾರೆ. ಇನ್ನು ಕೆಲವರು ಝಂಝಂ ನೀರಲ್ಲಿ ಅದ್ದಿ ತೆಗೆಯಲಿಕ್ಕಾಗಿ ಕಫನದ ಬಟ್ಟೆಯನ್ನು ಸೌದಿಯಿಂದಲೇ ಖರೀದಿಸುತ್ತಾರೆ. ಹಜ್ ಉಮ್ರಾಕ್ಕೆ ಬರುವ ಮಂದಿ ತಮ್ಮ ಕಫನ ಬಟ್ಟೆಯನ್ನು ಝಂಝಂ ನೀರಲ್ಲಿ ಮುಳುಗಿಸಿ ತೆಗೆಯುವುದು ಮತ್ತು ಪುಣ್ಯ ಗಳಿಸಲಿಕ್ಕಾಗಿ ಅದನ್ನು ತೆಗೆದು ಇಡುವುದು ಅನುವದನೀಯ ಪ್ರವೃತ್ತಿಯಾಗಿದೆಯೇ?
  ಉತ್ತರ:
  1. ನೀವು ಕೇಳಿದ ವಿಷಯ ಆರಾಧನಾ ಕರ್ಮಗಳ ವ್ಯಾಪ್ತಿಗೆ ಬರುತ್ತದೆ. ಆರಾಧನಾ ಕಾರ್ಯಗಳ ಅಡಿಪಾಯ ಅಲ್ಲಾಹನು ಮತ್ತು ಅವನ ಸಂದೇಶವಾಹಕರು ಆಗಿದ್ದಾರೆ. ಅಲ್ಲಾಹನು ಅನುವದನೀಯಗೊಳಿಸದ ಯಾವ ವಿಷಯವನ್ನೂ ಧರ್ಮದಲ್ಲಿ ಸೇರಿಸುವ ಅನುಮತಿ ನಮಗಿಲ್ಲ. ಆ ರೀತಿ ಮಾಡುವುದು ವ್ಯತಿಚಲನೆಯಾಗಿದೆ. ಕಫನ್ ಬಟ್ಟೆಯನ್ನು ಝಂಝಂ ನೀರಲ್ಲಿ ಅದ್ದಿ ತೆಗೆಯುವುದು ಅನುವದನೀಯವಾಗಿಯೋ ಕಡ್ಡಾಯವಾಗಿದೆಯೆಂದೋ ಪವಿತ್ರ ಕುರ್‍ಆನ್ ಮತ್ತು ಪ್ರವಾದಿ ಚರ್ಚೆಗಳು ಪರಿಚಯಿಸುವುದಿಲ್ಲ.
  2. ಸಹಾಬಿಗಳು ಮತ್ತು ಅವರ ನಂತರದ ತಾಬಿಈಗಳು ಹೀಗೆ ಮಾಡಿದ ಕುರಿತು ವರದಿಗಳಿಲ್ಲ. ಮುಸ್ಲಿಂ ಸಮುದಾಯದ ಉತ್ತಮ ಶತಮಾನಗಳಲ್ಲಿ ಬದುಕಿದ್ದವರು ಅವರು. ಅದರಲ್ಲಿ ಏನಾದರೂ ಒಳಿತಿರುತ್ತಿದ್ದರೆ ಮೊದಲು ಅವರು ಅದನ್ನು ಹಾಗೆ ಮಾಡಬೇಕಿತ್ತು.
  3. ಝಂಝಂ ನೀರು ಸ್ನಾನಕ್ಕೊ, ಶುಚೀಕರಣಕ್ಕೊ ಇರುವುದಲ್ಲ. ಬದಲಾಗಿ ಕುಡಿಯಲಿರುವುದಾಗಿದೆ. ಝಂಝಂ ಕುಡಿಯಲಿಕ್ಕಿರುವುದಾಗಿದೆ ಎಂದು ಪ್ರವಾದಿ(ಸ) ವಚನಗಳಿವೆ. ಪ್ರವಾದಿವರ್ಯರು(ಸ) ಅದನ್ನು ಕುಡಿಯಲು ಮಾತ್ರವೇ ಬಳಸಿದ್ದಾರೆ ಎನ್ನುವುದನ್ನು ನಾವು ಕಾಣಬಹುದಾಗಿದೆ. ಅಂಗ ಶುದ್ಧಿ ಮಾಡಲಿಕ್ಕೆ ಅಥವಾ ಶುಚೀಕರಣದಂತಹ ಕೆಲಸಗಳಿಗೆ ಪ್ರವಾದಿವರ್ಯರು(ಸ) ಅದನ್ನು ಬಳಸಿಲ್ಲ.
  4. ಪರಲೋಕ ಯಶಸ್ಸಿಗೆ ಕಫನ್ ಬಟ್ಟೆ ಅಥವಾ ಝಂಝಂ ನೀರು ಮಾನದಂಡವಲ್ಲ. ಅಲ್ಲಿ ಪರಿಗಣಿಸಲ್ಪಡುವುದು ಒಬ್ಬ ವ್ಯಕ್ತಿಯ ವಿಶ್ವಾಸ ಮತ್ತು ಸತ್ಕರ್ಮಗಳು ಮಾತ್ರವಾಗಿದೆ.
  " ಅಣು ಗಾತ್ರದಷ್ಟು ಪುಣ್ಯ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು. ಮತ್ತು ಅಣು ಗಾತ್ರದಷ್ಟು ಪಾಪ ಕಾರ್ಯವೆಸಗಿದವನು ಅದನ್ನು ಕಂಡೇ ತೀರುವನು" (ಅಲ್ ಝಿಲ್‍ಝಾಲ್:7-78)
  ಇಹಲೋಕ ಮತ್ತು ಪರಲೋಕಕ್ಕೆ ಅಗತ್ಯವಿರುವುದು ಯಾವುದನ್ನೂ ಮಾಡದೆ ಮೇಲಿನ ಆಚಾರಗಳಲ್ಲಿ ಸಿಲುಕಿ ಕೊಂಡರೆ ಅವರ ನೈಜ ಯಶಸ್ಸು ನಷ್ಟವಾಗುತ್ತದೆ.

 • ಬಹುದೇವತಾರಾಧಕರನ್ನು ಕಂಡಲ್ಲಿ ಕೊಲ್ಲಿ ಅವರು ಶರಣಾಗಿ ನನ್ನಲ್ಲಿ ವಿಶ್ವಾಸ ಇಡಲು ಒಪ್ಪಿದ್ದಲ್ಲಿ ಬಿಟ್ಟು ಬಿಡಿ. ಇದರ ತಾತ್ಪರ್ಯವೇನು ?
  ismika27-03-2017

  ನನ್ನ ಭಾರತೀಯ ಸಹೋದರನೊಬ್ಬನು ಪ್ರಸ್ತುತ ಕುರಾನ್ ಸೂಕ್ತಿಯ ಬಗ್ಗೆ ಸರಿಯಾಗಿ ಅರ್ಥ ಮಾಡಲು ಬಯಸುತ್ತಿದ್ದಾನೆ ಸಹಕರಿಸಿ..ಪರಸ್ಪರ ಸಹೋದರರಾಗಿ ಬಾಳೋಣ...

  ಪ್ರಶ್ನೆ: ಬಹುದೇವತಾರಾಧಕರನ್ನು ಕಂಡಲ್ಲಿ ಕೊಲ್ಲಿ ಅವರು ಶರಣಾಗಿ ನನ್ನಲ್ಲಿ ವಿಶ್ವಾಸ ಇಡಲು ಒಪ್ಪಿದ್ದಲ್ಲಿ ಬಿಟ್ಟು ಬಿಡಿ. ಅಲ್ಲಾಹ್ ಖಂಡಿತವಾಗಿಯೂ ಅವರನ್ನು ಕ್ಷಮಿಸುತ್ತಾನೆ. ಆತನು ಕರುಣಾಮಯಿಯೂ ಕ್ಷಮಾಶೀಲನೂ ಆಗಿದ್ದಾನೆ. ಇದರ ತಾತ್ಪರ್ಯವೇನು ?

  ಉತ್ತರ: ಪ್ರವಾದಿ ಮುಹಮ್ಮದ್ ಸ..ಅ ರಕ್ತಸಂಬಂಧಿಗಳು ಬಹುದೇವಾರಾಧಕರಾಗಿದ್ದರು..ಪ್ರವಾದಿಯವರ ಏಕದೇವತ್ವದ ಪ್ರತಿಪಾದನೆಯಿಂದಾಗಿ ರಕ್ತ ಸಂಬಂಧಿಕರಾದ ಮಕ್ಕಾದ ತನ್ನ ಆಪ್ತರೇ ಶತ್ರುಗಳಾಗಿ ಮಾರ್ಪಟ್ಟರು..ನಾನಾ ರೀತಿಯಲ್ಲಿ ಪ್ರವಾದಿ ಮತ್ತು ಅವರೊಂದಿಗೆ ಸೇರಿಕೊಂಡವರನ್ನು ಹಿಂಸಿಸಿದರು..ಕೊಲೆಯ ಸಂಚು ಹೂಡಿದರು..ಪ್ರವಾದಿಯವರು ಒಮ್ಮೆಯೂ ಅವರ ಮೇಲೆ ಆಕ್ರಮಣ ಮಾಡುವಂತೆ ಆಜ್ಙಾಪಿಸಿರಲಿಲ್ಲ..ಸಹನೆ ವಹಿಸಿರಿ ಎಂದೇ ಬೋಧಿಸಿದರು..ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗುವಂತೆ ಸಂಗಡಿಗರಿಗೆ ಆಜ್ಙಾಪಿಸಿ ತಾನೂ ಮದೀನಾಕ್ಕೆ ವಲಸೆ ಹೋದರು...ಮಕ್ಕಾದ ಅಕ್ರಮಿಗಳು ಅಲ್ಲಿಯೂ ಪ್ರವಾದಿಯವರನ್ನು ಹಿಂಬಾಲಿಸಿದರು..ಮುಸ್ಲಿಮರನ್ನು ನಾಶಮಾಡಲು ಸನ್ನಧ್ಧರಾದರು...ಅಂತಹ ಬಹುದೇವಾರಾಧಕರೊಡನೆ ಪ್ರತಿರೋಧಕ್ಕೆ ಸಜ್ಜಾಗಬೇಕು ಎಂಬ ಆದೇಶ ದೇವನಿಂದ ಅವತೀರ್ಣವಾಯಿತೇ ವಿನಃ ಪ್ರವಾದಿಯವರು ಯುದ್ಧ, ಪ್ರತೀಕಾರಕ್ಕೆ ಒಮ್ಮೆಯೂ ಆದೇಶ ನೀಡಿರಲಿಲ್ಲ ..ಯಾಕೆಂದರೆ ಪ್ರವಾದಿಯವರು ಮಕ್ಕಾದಲ್ಲಿ ಯಾರನ್ನೂ ಶತ್ರವೆಂದು ಪರಿಗಣಿಸಿರಲಿಲ್ಲ.. ಎಲ್ಲರೂ ತಮ್ಮ ಆಪ್ತರೇ ಆಗಿದ್ದರು..ಪ್ರವಾದಿಯವರು ಮದೀನಾಕ್ಕೆ ವಲಸೆ ಹೋಗುವಾಗ ಶತ್ರುಗಳಿಗೆ ತಿಳಿಯದ ಹಾಗೆ ಮದೀನಾದ ರಹಸ್ಯ ದಾರಿ ತೋರಿಸಿ ಸಹಕರಿಸಿರುವುದು ಅಬ್ದುಲ್ಲಾಬಿನ್ ಅರೀಕತ್ ಎಂಬ ಬಹುದೇವ ವಿಶ್ವಾಸಿಯಾಗಿದ್ದರು .ಹಾಗೆಯೇ ಸಂಗಡಿಗರು ವಲಸೆ ಹೋಗುವಾಗ ನೀವು ಜನರ ಹಿತಾಕಾಂಕ್ಷಿಗಳು ..ನಿಮ್ಮನ್ನು ನಾನು ವಲಸೆ ಹೋಗಲು ಬಿಡುವುದಿಲ್ಲ ಎಂದು ಹೇಳಿ ಸ್ಥಳ ನೀಡಲು ಮುಂದಾದವರು ಅಬೂದರ್ದಾ ಎಂಬ ಬಹುದೇವಾರಾಧಕನಾಗಿದ್ದನು..ಆದ್ದರಿಂದ ಕುರ್ ಆನ್ ನ ಮೇಲಿನ ಆದೇಶ ಕರುಣೆಯಿಲ್ಲದ, ಆಕ್ರಮಣಕಾರೀ ಮನೋಭಾವದ, ಮನುಷ್ಯರನ್ನು ಸ್ವಾರ್ಥಕ್ಕಾಗಿ ಕೊಲೆಮಾಡಲಿಕ್ಕೂ ಹೇಸದ ಅಕ್ರಮಿಗಳಾದ ಬಹುದೇವವಿಶ್ವಾಸಿಗಳ ಕುರಿತಾಗಿದೆ..ಇಂತಹ ಬಹುದೇವಾರಾಧಕರೂ ಶಾಂತಿಯನ್ನು ಬಯಸುವವರಾದರೆ ಅವರ ಮೇಲೆ ಕೈಮಾಡುವುದು ಅಪರಾಧ.

  ಹಾಗೆಯೇ ಭಾರತದ ಸಂವಿಧಾನದಲ್ಲಿ ಕಂಡಲ್ಲಿ ಗುಂಡು ಎಂಬುದು ಇದೆ. ಇದರ ಅರ್ಥ ಇಲ್ಲಿ ಬದುಕಲು ಅವಕಾಶ ಇಲ್ಲ ಎಂದಲ್ಲ. ಪರಿಸ್ಥಿತಿಯನ್ನು ಮುಂದಿಟ್ಟು ಕೈಗೊಳ್ಳುವ ಕ್ರಮ ಅಥವಾ ನಿಯಮ ಅದು.
  ಆ ಸೂಕ್ತ ಎರಡು ಸಿದ್ದಾಂತ ಎರಡು ರಾಷ್ಟ್ರದ ಮಧ್ಯೆ ನಡೆದ ಯುದ್ದದ ಸಂದರ್ಭದಲ್ಲಿ ಹೇಳಿದ ಸೂಕ್ತ ಆಗಿದೆ. ಜಗತ್ತಿನ ಪ್ರತಿಯೊಂದು ಯುದ್ಧ ಅದೇ ಹೇಳುತ್ತದೆ. ಆದರೆ ಕುರಾನ್ ಯುದ್ದದ ಸಮಯದಲ್ಲಿ ಯುದ್ದಕ್ಕಿಂತ ಹೆಚ್ಚಾಗಿ ಸಂಧಾನಕ್ಕೆ ಹೆಚ್ಚು ಮಹತ್ವ ಕೊಡುತ್ತದೆ.
  ಮಕ್ಕಾ ವಿಜಯ ಆಗಿ ಅದೇ ರಾಷ್ಟ್ರವನ್ನು ಗೆದ್ದಾಗ ಪ್ರವಾದಿ (ಸ) ಸಾರ್ವತ್ರಿಕ ಕ್ಷಮೆ ಮತ್ತು ರಕ್ಷಣೆಯನ್ನು ಘೋಷಿಸಿದರು. ಅದೇ ಜನತೆ, ಅದೇ ಬಹುದೇವಾರಾಧಕರು. ಈ ಕ್ಷಮೆ ಮತ್ತು ರಕ್ಷಣೆಯ ಅರಬೀ ಹೆಸರೇ ಇಸ್ಲಾಮ್ ಅಂದರೆ ಸಲಾಮತೀ ಆಪ್ ಪರ್...ಶಾಂತಿ ನಿಮ್ಮ ಮೇಲೆ ...

 • ನಿಮ್ಮ ಉದ್ಯಮ ಮತ್ತು ಕಟ್ಟಡಗಳಿಗೆ ಎಷ್ಟೆಷ್ಟು ಝಕಾತ್ ಇದೆ ಗೊತ್ತಾ?
  ismika26-04-2017

  ಪ್ರಶ್ನೆ: ನಿಮ್ಮ ಉದ್ಯಮ ಮತ್ತು ಕಟ್ಟಡಗಳಿಗೆ ಎಷ್ಟೆಷ್ಟು ಝಕಾತ್ ಇದೆ ಗೊತ್ತಾ?

  ಉತ್ತರ: ಒಂದು ಪ್ಯಾಕ್ಟರಿ ಬಹಳ ಶ್ರಮ ಪಟ್ಟು ಹಾಕಿದ್ದೀರಾ. ಅದಕ್ಕೆ ಬಹಳ ಹಣ ಖರ್ಚು ಆಗಿದೆ. ಇದಕ್ಕೂ ಝಕಾತ್ ಇದೆಯೇ . ಹೌದು ಇಸ್ಲಾಮಿನ ಪ್ರಕಾರ ಇವು ಕೂಡಾ ಝಕಾತ್ ಪಾವತಿಸಬೇಕಾದ ಸಾಲಿಗೆ ಸೇರಿದೆ. ನಿಮ್ಮ ಕಾರಖಾನೆ, ನಿಮ್ಮ ಪ್ಯಾಕ್ಟರಿಯ ಉತ್ಪನ್ನಳಿಗೆ, ನೀವು ಬಾಡಿಗೆಗೆ ಇಟ್ಟ ಹೆವಿಡ್ಯೂಟಿ ಟ್ರಕ್‍ಗಳಿಂದ ಹಿಡಿದು ಲೈಟ್ ಮೋಟಾರು ವೆಹಿಕಲ್‍ಗಳವರೆಗು ಅಂಗಡಿ ಕೋಣೆಗಳನ್ನು ಬಾಡಿಗೆಗೆ ನೀಡುವುದು, ಗೋಡೌನ್ ಮುಂತಾದುವುಗಳನ್ನು ಕಟ್ಟಿಸಿ ಬಾಡಿಗೆಗೆ ಕೊಡುವುದು. ಹೀಗೆ ಗಳಿಕೆಯ ಎಲ್ಲ ಮೂಲಗಳಿಗೂ ಆದಾಯಕ್ಕೆ ತಕ್ಕಂತೆ ಝಕಾತ್ ಇದೆ. ಇವುಗಳು ಹಳೆಯ ಕರ್ಮಶಾಸ್ತ್ರ ಗ್ರಂಥಗಳಲ್ಲಿ ಇವು ವಿವರಿಸಿಲ್ಲ ಆದ್ದರಿಂದ ಇವುಗಳು ಝಕಾತ್‍ನ ವ್ಯಾಪ್ತಿಯಿಂದ ಹೊರಗಿವೆ ಎಂದು ಭಾವಿಸಿ ಬಿಡುವ ಮುಸ್ಲಿಮರು ಇದ್ದಾರೆ . ಆದರೆ ತಿಳಿಯಿರಿ ಇದಕ್ಕೂ ಝಕಾತ್ ಕೊಡಬೇಕಾಗಿದೆ.
  ಇಸ್ಲಾಂ ಝಕಾತ್ ವಿಧಿಸಿದ ವಸ್ತುಗಳು ಎರಡು ರೀತಿಯಾಗಿದೆ.
  1. ಆದಾಯಕ್ಕೆ ಮಾತ್ರ ಝಕಾತ್ ಬಾಧಕವಾಗುವುದು. (5-10%)
  2. ಬಂಡವಾಳ ಮತ್ತು ಅದರ ಆದಾಯಕ್ಕೂ ಒಟ್ಟಿಗೆ ಝಕಾತ್ ಬಾಧಕವಾಗುವುದು.(ಎರಡೂವರೆ ಶೇಕಡಾ)
  ಆಧುನಿಕ ವಿದ್ವಾಂಸರು ಉದ್ದಿಮೆ, ಕೈಗಾರಿಕೆಗಳನ್ನು ಕೃಷಿಗೆ ಹೋಲಿಸಿದ್ದಾರೆ. ಆದ್ದರಿಂದ ಇವುಗಳಿಗೆ ಕೃಷಿ ಉತ್ಪನ್ನಗಳಿಗೆ ನೀಡುವಂತೆ ಶೇ. 10ರಷ್ಟು ಝಕಾತನ್ನು ನೀಡಬೇಕಾಗಿದೆ ಎನ್ನುತ್ತಾರೆ. ಆದರೆ ಉದ್ಯಮವೂ ಕೃಷಿ ಭೂಮಿಯೂ ಸಮಾನವಲ್ಲ. ಉದ್ಯಮದಲ್ಲಿ ಕಟ್ಟಡವಾಗಲಿ, ಯಂತ್ರಗಳಾಗಲಿ ಹಳೆಯದಾಗಿ ಸವೆದು ಹೋಗುತ್ತವೆ. ತೇಮಾನು ಉಂಟಾಗುತ್ತದೆ. ಆದ್ದರಿಂದ ಈ ತೇಮಾನನ್ನು ಪ್ರತಿ ವರ್ಷವೂ ಖರ್ಚಿನ ಬಾಬ್ತಿನಲ್ಲಿ ಬರೆಯಬೇಕು. ಮಿಕ್ಕಿದ ಆದಾಯಕ್ಕೆ ಝಕಾತ್ ಕೊಡಬೇಕು. ಕೃಷಿ ಬೆಳೆಗಳ ಉತ್ಪನ್ನಗಳನ್ನು ನಿಸಾಬ್‍ಗೆ ಪರಿಗಣಿಸುವಂತೆ ಪ್ಯಾಕ್ಟರಿಯನ್ನು ಪರಿಗಣಿಸಬಾರದು. ಬದಲಾಗಿ ಆದಾಯದ ರೂಪದಲ್ಲಿ ಸಿಗುವ ನಾಣ್ಯಗಳನ್ನು ನಿಸಾಬ್ ಆಗಿ ಲೆಕ್ಕ ಮಾಡಬೇಕು. ಆ ಪ್ರಕಾರ ಝಕಾತ್ ಪಾವತಿಸಬೇಕಾಗಿದೆ.

 • ಅತ್ಯಾಚಾರಕ್ಕೆ ಇಸ್ಲಾಮ್ ಯಾವ ಶಿಕ್ಷೆ ನೀಡುತ್ತದೆ?
  ismika25-08-2017

  ಅತ್ಯಾಚಾರಕ್ಕೆ ಇಸ್ಲಾಮ್ ಯಾವ ಶಿಕ್ಷೆ ನೀಡುತ್ತದೆ?

  ಉತ್ತರ: ಮಾನವ ಜೀವ ಪವಿತ್ರ ಕಅಬಾದ ಪವಿತ್ರತೆಗೆ ಸಮಾನ ಎಂದು ಇಸ್ಲಾಮಿನ ಘೋಷಣೆಯಾಗಿದೆ. ಒಬ್ಬ ಮಾನವನ ಕೊಲೆ ಅಥವಾ ಭೂಮಿಯಲ್ಲಿ ಕ್ಷೋಭೆ ಮಾಡುವ ಕಾರಣ ಹೊರತು ಒಬ್ಬನು ಒಬ್ಬನನ್ನು ರಕ್ಷಿಸಿದರೆ ಅದು ಸಕಲ ಮಾನವರನ್ನು ರಕ್ಷಿಸಿದಂತೆ ಇನ್ನು ಒಬ್ಬನನ್ನು ವಧಿಸಿದರೆ ಅದು ಸಕಲ ಮಾನವರನ್ನು ವಧಿಸಿದಂತೆ (ಅಲ್ ಮಾಯಿದ 32) ಎಂಬುದು ಕುರ್‍ಆನಿನ ಸಾರಾಂಶವಾಗಿದೆ. ಇಲ್ಲಿ ಜಾತಿ ಮತ ದೇಶ ಭಾಷೆ ಧರ್ಮದ ಭೇದವಿಲ್ಲ. ಎಲ್ಲರೂ ಸಮಾನರು.
  ಅದೇ ಸಂದರ್ಭದಲ್ಲಿ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲು ಶ್ರಮಿಸುವವರನ್ನು ಉಗ್ರವಾಗಿ ಶಿಕ್ಷಿಸಬೇಕೆಂದು ಕುರ್‍ಆನ್ ಕರೆ ಕೊಡುತ್ತದೆ. ಅಂದರೆ ಆ ಶಿಕ್ಷೆ ಯಾವುದೇ ಮನುಷ್ಯ ಅಥವಾ ನಾಗಾಲ್ಯಾಂಡ್‍ನಲ್ಲಿ ಗುಂಪು ಕಾನೂನನ್ನು ಕೈಗೆತ್ತಿ ನೀಡುವುದು ಇನ್ನಷ್ಟು ಕ್ಷೋಭೆಗೆ ಅಪಾಯಕ್ಕೆ ಕಾರಣವಾಗಬಹುದು. ಅಥವಾ ಭಾರತದಲ್ಲಿ ಕಾನೂನನ್ನು ನಿಂದಿಸಿ ಗುಂಪು ಹತ್ಯೆಗಳು ಇನ್ನಷ್ಟು ಕ್ಷೋಭೆಗೆ ಕಾರಣ ಆಗುತ್ತದೆ. ಮತ್ತು ಜನರಲ್ಲಿ ದೇಶದ ಕಾನೂನಿನ ಮೇಲೆ ಭರವಸೆ ಹೋಗುತ್ತದೆ. ಆದ್ದರಿಂದ ಕ್ಷೋಭೆ ಅಪರಾಧಕ್ಕೆ ಶಿಕ್ಷೆಯನ್ನು ಸರಕಾರ ನ್ಯಾಯಾಲಯ ನೀಡಬೇಕು. ಆ ಮೂಲಕ ಅಪರಾಧಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಮತ್ತು ಜನಮನಗಳಲ್ಲಿ ಅಪರಾಧದ ಬಗ್ಗೆ ಭಯ ಮಾಡಬೇಕು.
  ಪ್ರವಾದಿ (ಸ)ಆ ಕಾಲದಲ್ಲಿ ಕಲ್ಲಿನಿಂದ ಹೊಡೆದು ಕೊಲ್ಲುವ ಅಥವಾ ಎತ್ತರದಿಂದ ಎಸೆಯುವ ಇನ್ನಿತರ ಇಂತಹ ಶಿಕ್ಷೆಗಳು ಜಾರಿಯಾಗಿದ್ದವು.. ಇವು ಪ್ರವಾದಿ(ಸ) ಕುರ್‍ಆನಿನ ಆದೇಶದಂತೆ ಜಾರಿಗೊಳಿಸಿದ ಶಿಕ್ಷೆ ಎಂಬುದು ಅಷ್ಟೇ ನಿಚ್ಚಳವಾಗಿದೆ. ಈ ಬಗ್ಗೆ ಬಹಳಷ್ಟು ಭಿನ್ನಭಿಪ್ರಾಯಗಳೂ ಇವೆ.
  ಈ ಬಗ್ಗೆ ಕುರಾನಿನ ಸೂಕ್ತ ಹೇಳುತ್ತದೆ
  " ಕ್ಷೋಭೆಯನ್ನುಂಟು ಮಾಡಲಿಕ್ಕಾಗಿಯೇ ಭೂಮಿಯ ಮೇಲೆ ಶ್ರಮಿಸುತ್ತಿರುವವರಿಗೆ ಇರುವ ಶಿಕ್ಷೆಯು ವಧಿಸುವುದು ಅಥವಾ ಶಿಲುಬೆಗೇರಿಸುವುದು ಅಥವಾ ಅವರ ಕೈಯನ್ನೂ ಕಾಲನ್ನೂ ವಿರುದ್ಧ ದಿಕ್ಕುಗಳಿಂದ ಕಡಿದು ಹಾಕುವುದು ಅಥವಾ ಅವರನ್ನು ಗಡೀಪಾರು ಮಾಡುವುದು ಆಗಿರುತ್ತದೆ. ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನ. ಪರಲೋಕದಲ್ಲಿ ಅವರಿಗೆ ಇದಕ್ಕಿಂತಲೂ ಕಠಿಣ ಶಿಕ್ಷೆ ಕಾದಿದೆ" (ಪವಿತ್ರ ಕುರಾನ್ ಸೂರ 5 ಸೂಕ್ತ 33)
  ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡಲಿಕ್ಕಾಗಿಯೇ ಭೂಮಿಯ ಮೇಲೆ ಶ್ರಮಿಸುವವರಿಗೆ 4 ವಿಧದ ಶಿಕ್ಷೆಯನ್ನು ಇಲ್ಲಿ ಪ್ರಸ್ತಾಪಿಸಿದೆ. ಅಂದಿನ ಸಾಮಾಜಿಕ ಸನ್ನಿವೇಶವನ್ನು ಮುಂದಿಟ್ಟು ನೀಡಿದಂತಹ ಆದೇಶಗಳಾಗಿವೆ. ಶಿಕ್ಷೆಯು ಶಿಕ್ಷೆಗಿಂತ ಮುಖ್ಯ ವಾಗಿ ಅಪರಾಧಿಗೆ ಮತ್ತು ಸಮಾಜಕ್ಕೆ ಪಾಠ ಭೋಧಕವಾಗಿರಬೇಕೆಂಬುದೇ ಇಲ್ಲಿ ಉದ್ದೇಶವಾಗಿದೆ.
  ಒಬ್ಬ ವ್ಯಕ್ತಿ ಸಮ್ಮತಿ ಸೆಕ್ಸ್ ಅಥವಾ ವ್ಯಭಿಚಾರ ಮಾಡುತ್ತಾನೆ. ಅದೂ ಮಹಾ ಪಾಪವೇ. ಅದಕ್ಕೆ ಇಸ್ಲಾಂ ನೇರವಾಗಿ ಶಿಕ್ಷೆ ನೀಡುವುದಿಲ್ಲ. ಅದಕ್ಕೆ ನಾಲ್ಕು ಸಾಕ್ಷಿ ಮತ್ತು ನೀತಿ ನಿಯಮಗಳು ಇವೆ. ಆದರೆ ಒಬ್ಬ ವ್ಯಕ್ತಿ ಸಮಾಜದ ಮಗಳು, ಸೊಸೆ, ಯುವತಿಯ ಶೀಲಕ್ಕೆ ಅಪಾಯಕಾರಿಯಾಗುತ್ತಾನೆ. (ನಿರ್ಭಯ ಮತ್ತು ಇನ್ನಿತರ ಪ್ರಕರಣಗಳಲ್ಲಿ ಸಂಭವಿಸಿದಂತೆ) ಕೇವಲ ವ್ಯಭಿಚಾರ ಅಲ್ಲ, ಬಲಾತ್ಕಾರ ಮತ್ತು ಅತ್ಯಾಚಾರ ಮಾಡುತ್ತಾನೆ. ಗಲ್ಲಿ, ಕೇರಿ ಮಾರುಕಟ್ಟೆಯಲ್ಲಿ ಮುಗ್ಧ ಮಗಳೂ ಅಂಥವನಿಂದ ಸುರಕ್ಷಿತನಲ್ಲ ಎಂಬ ವಾತಾವರಣ ನಿರ್ಮಾಣವಾದರೆ ಅವನು ಭೂಮಿಯಲ್ಲಿ ಕೋಭೆ ಹರಡುವ ಅಪರಾಧಿಯಾಗುತ್ತಾನೆ ಮತ್ತು ಅವನಿಗೆ ತಕ್ಕ ಶಾಸ್ತಿ ಆಗಬೇಕೆಂದು ಇಸ್ಲಾಮ್ ಬಯಸುತ್ತದೆ ಮತ್ತು ಅವನನ್ನು ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಕುರಾನ್ ಹೇಳುತ್ತದೆ. ಪೂರ್ವ ದೈವಿಕ ಗ್ರಂಥಗಳನ್ನು ಅಧ್ಯಯನ ನಡೆಸಿದರೆ ಅಲ್ಲೂ ಶಿಕ್ಷೆಯ ಉಲ್ಲೇಖಗಳಿವೆ.
  ಮೇಲೆ ಸೂಕ್ತದಲ್ಲಿ ಹೇಳಿದಂತೆ,
  1. ಭಯಾನಕ ರೀತಿಯಲ್ಲಿ ಅವನನ್ನು ವಧಿಸುವುದು:
  ಇದು ದು ಆಡಳಿತದ ವತಿಯಿಂದ ಜಾರಿಗೊಳಿಸುವುದಾಗಿದೆ. ಕಲ್ಲೆಸೆದು ಕೊಲ್ಲುವುದು, ಎತ್ತರ ಪ್ರದೇಶದಿಂದ ಕೆಳಗೆ ಎಸೆಯುವುದು, ಬಂದೂಕು ಸಿಡಿಸುವುದು, ಕತ್ತನ್ನು ಬೇರ್ಪಡಿಸುವುದು ಅಥವಾ ಗೆಲ್ಲಿಗೇರಿಸುವುದು. ಯಾವುದೇ ಆದರೂ ಸಾರವಜನಿಕವಾಗಿ ಅದು ಬಹಳ ಭಯಾನಕವಾಗಿರಬೇಕು. ಯಾಕೆಂದರೆ ಅದರಿಂದ ಜನರು ಪಾಠಕಲಿಯಬೇಕು ಮತ್ತು ನ್ಯಾಯವು ಜಾರಿಗೊಳ್ಳಬೇಕು. ಇದಲ್ಲದೆ ಇತರ ಶಿಕ್ಷಾ ಮಾರ್ಗವನ್ನು ಕಂಡುಹಿಡಿಯಲೂಬಹುದು. ಒಂದು ಕಾಲದಲ್ಲಿ ರಾಜಂದಿರು ಆನೆಯಿಂದ ತುಳಿದು ಕೊಲ್ಲುವ ಶಿಕ್ಷೆಯನ್ನೂ ನೀಡಿದ್ದರು.
  2. ಅಥವಾ ಶಿಲುಬೆಗೇರಿಸುವುದು:
  ಶಿಲುಬೆಗೇರಿಸುವುದು ಒಂದು ಪ್ರಾಚೀನ ಶಿಕ್ಷೆಯಾಗಿದೆ. ಅಪರಾಧಿಯ ಎರಡು ಕೈ ಕಾಲುಗಳಿಗೆ ಮೊಳೆ ಹೊಡೆದು ನೇತಾಡಿಸಲಾಗುತ್ತದೆ. ಹೀಗೆ ರಕ್ತಸೋರಿ ಅವನು ಪ್ರಾಣ ಬಿಡುವ ಶಿಕ್ಷೆ ಪ್ರವಾದಿತ್ಯಕ್ಕಿಂತ ಮುಂಚೆಯೇ ಜಾರಿಯಲ್ಲಿತ್ತು. ಇದು ಪಾಸಿಯಲ್ಲ, ಗಲ್ಲಿಗೇರಿಸುವುದಲ್ಲ, ಇಲ್ಲೂ ಭಯಾನಕ ಶಿಕ್ಷೆ ಆಗಿದೆ.
  3. ಮೂರನೇ ಶಿಕ್ಷೆ ಅವನ ಕೈ ಕಾಲುಗಳನ್ನು ವಿರುದ್ಧ ದಿಕ್ಕುಗಳಿಂದ ಕಡಿಯಿರಿ:
  ವಿರುದ್ಧ ದಿಕ್ಕಿನಿಂದ ಕಡಿಯುವ ಉದ್ದೇಶವೂ ಅವನ ಬದುಕನ್ನು ಉಳಿಸಿ ಅವನನ್ನು ಸಮಾಜಕ್ಕೆ ಒಂದು ಭಯಾನಕ ಪಾಠ ಭೋದಕವನ್ನಾಗಿ ಮಾಡುವುದು. ಉದಾ:- ಬಲ ಕೈಕಡಿದು ಎಡಕಾಲನ್ನು ಕಡಿದು ಅವನನ್ನು ಜೀವಂತ ಬಿಡುವುದು. ಮತ್ತು ಜನರು ಅವನನ್ನು ನೋಡಿ ಪಾಠ ಕಲಿಯುವುದು. ಇದು ಶಿಕ್ಷೆಯ ಪ್ರಮಾಣದಲ್ಲಿ ಕಡಿತವಾದರೂ ಇಲ್ಲಿ ಭಯಾನಕತೆಯನ್ನು ಕಾಪಾಡಲಾಗಿದೆ.
  4. ಗಡೀ ಪಾರುಗೊಳಿಸುವುದು:
  ಇದು ಇಂತಹ ಅಪರಾಧಿಗಳಿಗೆ ನೀಡುವ ಅತೀ ಕಡಿಮೆ ಶಿಕ್ಷೆ ಆಗಿದೆ. ಒಬ್ಬನು ಇಂತಹ ಕೃತ್ಯ ವೆಸಗಿದ್ದಾನೆ. ಇದರಿಂದ ಯಾರದೇ ಜೀವ ಹೋಗಿಲ್ಲ. ಅತ್ಯಾಚಾರವಾಗಿಲ್ಲ. ಆದರೆ ವ್ಯಕ್ತಿ ಬಲತ್ಕಾರಕ್ಕೆ ಶ್ರಮಿಸಿದ್ದಾನೆ. ಅವನನ್ನು ಊರಿನಿಂದ ಹೊರ ಹಾಕುವುದು. ದೇಶದಿಂದ ಹೊರ ಹಾಕುವುದು ಅಥವಾ ಇಂದು ಅದು ಸಾಧ್ಯವಲ್ಲವೆಂದಾದರೆ ಜೀವ ಮಾನವಿಡೀ ಜೈಲಿಗೆ ಗಡೀ ಪಾರುಗೊಳಿಸಿ ಅವನಿಗೆ ಅಂತಹ ಅಪರಾಧ ಕಡಿವಾಣ ಹಾಕುವುದು. ನಂತ ಅವನಿಗೆ ಪರಿಶುದ್ಧತೆಗೆ ಸುಧಾರಣೆಗೆ ಅವಕಾಶವನ್ನು ನೀಡುವುದು.
  ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಸಾಮಾಜಿಕ ಸನ್ನಿವೇಶಕ್ಕನುಗುಣವಾಗಿ ಆರೋಪಿಯ ಆರೋಪ ಸಾಬೀತಾಗಬೇಕು. ಇದು (ನಾಗಲ್ಯಾಂಡ್ನಲ್ಲಿ ನಡೆದ ಮತ್ತು ಭಾರತದಲ್ಲಿ ನಡೆಯುತ್ತಿರುವ ಗುಂಪು ಹತ್ಯೆ)ನಂತೆ ದ್ವೇಷ ಸಾಧಿಸುವ ಸಾಧನವಾಗಬಾರದು. ಅಪರಾಧಿಯ ವಾತಾವರಣ, ಅವನ ಮನಸ್ಥಿತಿ, ಅವನ ಸನ್ನಿವೇಶ ಎಲ್ಲವನ್ನು ಮುಂದಿಟ್ಟು ನ್ಯಾಯ ಸಮ್ಮತವಾಗಿ ಶಿಕ್ಷೆ ಜಾರಿಗೊಳಿಸಲೇಬೇಕಾಗಿದೆ. ಪ್ರವಾದಿ(ಸ) ಕಾಲದಲ್ಲಿ ಅಲ್ಲಾಹನು ಅಧಿಪತಿಯಾಗಿದ್ದು , ಪ್ರವಾದಿ(ಸ) ಅಲ್ಲಾಹನ ಪ್ರತಿನಿಧಿ ಎಂಬಂತೆ ಆದೇಶವನ್ನು ಜಾರಿಗೊಳಿಸುತ್ತಿದ್ದರು.
  ಅಪರಾಧದ ಸನ್ನಿವೇಶ ಮತ್ತು ಪರಿಸ್ಥಿತಿ ಹಾಗೂ ರೂಪುರೇಷೆ ಉಗ್ರವಾಗಿದ್ದರೆ ಅಥವಾ ಮೃದುವಾಗಿದ್ದರೆ ಎರಡೂ ಸನ್ನಿವೇಶಗಳಿಗೆ ಕುರ್‍ಆನ್ ಶಿಕ್ಷೆಯಲ್ಲಿ ಮಧ್ಯಮ ನಿಲುವನ್ನು ಇಲ್ಲಿ ತಳೆದಿದೆ. ಎಲ್ಲದಕ್ಕೂ ಒಂದೇ ರೀತಿಯ ಶಿಕ್ಷೆ ನೀಡುವುದು ತರವಲ್ಲ. ಇನ್ನೂ ನಿರ್ಭಯಾ ಪ್ರಕರಣ ಮತ್ತು ಜಗತ್ತಿನಲ್ಲಿ ಸಂಭವಿಸುವ ಎಲ್ಲ ಶಿಕ್ಷೆಯನ್ನು ಈ ನಿಟ್ಟಿನಲ್ಲಿ ಪರಿಶೀಲನೆ ನಡೆಸಬೇಕು.
  ಅಪರಾಧಿ ಅಪ್ರಾಪ್ತನಾಗಿದ್ದರೆ, ಅವನ ತರಬೇತಿ ಆಗದಿದ್ದರೆ, ಅಥವಾ ಮಾನಸಿಕ ರೋಗಿ ಆಗಿದ್ದರೆ, ಕುಡಿದಿದ್ದರೆ, ಹೀಗೆ ನೂರಾರು ಕಾರಣಗಳನ್ನು ಆರೋಪಿ ಅಥವಾ ಅಪರಾಧಿಗೆ ಶಿಕ್ಷೆ ನೀಡುವುದಕ್ಕಿಂತ ಮುಂಚೆ ನೋಡಬೇಕಾಗಿದೆ.
  ನಮ್ಮ ಸಮಾಜ, ಸರಕಾರ ಪಾವಿತ್ರ್ಯಯ ವಾತಾವರಣ ನಿರ್ಮಾಣಮಾಡಿದೆಯೋ ಇಲ್ಲವೋ ಇತ್ಯಾದಿಗಳನ್ನು ನೋಡಬೇಕಾಗುತ್ತದೆ. ಒಂದು ಶಿಕ್ಷೆ ಎಲ್ಲ ಪರಿಸ್ಥಿತಿಗಳಲ್ಲಿ ನೀಡಲು ಸಾಧ್ಯವಿಲ್ಲ. ಆದ್ದರಿಂದಲೇ ಉಮರ್(ರ) ಕೆಲವೊಮ್ಮೆ ಶರೀಅತ್ ಕಾನೂನನ್ನು ಜಾರಿಗೊಳಿಸಿದರು ಇನ್ನೂ ಕೆಲವೊಮ್ಮೆ ಶಿಕ್ಷೆಯನ್ನೂ ರದ್ದುಗೊಳಿಸಿದರು. ಇದಕ್ಕೆ ಕಾರಣ `ಅಪರಾಧಿ'ಯನ್ನು ಎಲ್ಲ ರೀತಿಯಲ್ಲಿ ಅಳೆಯಬೇಕಾಗುತ್ತದೆ. ಈ ಅಧಿಕಾರ ಎಲ್ಲ ಸರಕಾರಗಳಿಗೆ ಇದೆ.
  ಕೊನೆಯಲ್ಲಿ ಕುರ್‍ಆನಿನಲ್ಲಿ ಹೇಳುತ್ತಾ ಇದು ಇಹಲೋಕದಲ್ಲಿ ಅವರಿಗಿರುವ ಅಪಮಾನವಾಗಿದೆ. ಆದ್ದರಿಂದ ಇಂತಹ ಅಪರಾಧಿಗಳ ಬಗ್ಗೆ ಇಹಲೋಕದಲ್ಲಿ ಯಾರೂ ಕರುಣೆ ತೋರಿಸಬಾರದು. ಮತ್ತು ಪರಲೋಕದಲ್ಲಿ ಅವರಿಗೆ ಅಲ್ಲಾಹನಿಂದ ಇದಕ್ಕಿಂತಲೂ ಕಠಿಣ ಶಿಕ್ಷೆ ಇದೆ. ಶಿಕ್ಷೆಯಿಂದ ಪಾರಾಗಲು ಯಾರಿಗೂ ಸಾಧ್ಯವಿಲ್ಲ.
  ಜಗತ್ತು ಎಷ್ಟು ಪ್ರಗತಿ ಹೊಂದುತ್ತದೋ ಅಷ್ಟೇ ನರಕ ಸದೃಶ್ಯವಾಗಲು ಕಾರಣ, ಮನುಷ್ಯ ಎಷ್ಟೇ ದೊಡ್ಡ ತಪ್ಪು ಮಾಡಿದರೂ ಅವನಿಗೆ ಕರುಣೆ ಮತ್ತು ಕ್ಷಮೆ ನೀಡಬೇಕು ಎಂಬ ಸಿದ್ಧಾಂತವಾಗಿದೆ. ದೈವಿಕ ಧರ್ಮ ಈ ಸಿದ್ಧಾಂತವನ್ನು ಒಪ್ಪುವುದಿಲ್ಲ.
  ಇದೆಲ್ಲದರ ಹೊರತಾಗಿಯೂ ಉಗ್ರ ಶಿಕ್ಷೆಯ ಕಾನೂನಿನಿಂದ ಸಮಾಜದಲ್ಲಿ ಕೆಡುಕು ಅತ್ಯಾಚಾರ ಕೊನೆಗೊಳ್ಳುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದುದರಿಂದ ಕೆಡುಕು ಮುಕ್ತ ಉತ್ತಮ ವಾತಾವರಣವನ್ನು ಆಡಳಿತವು ಬೆಳೆಸಬೇಕಾಗಿದೆ. ಅದಕ್ಕಾಗಿ ಪ್ರತಿ ಹೆಜ್ಜೆ ಇರಿಸಬೇಕಾಗಿದೆ.

 • ಜಪಮಾಲೆ ಬಳಸಬಹುದೇ?
  ismika21-12-2017

  ಪ್ರಶ್ನೆ: ಪ್ರವಾದಿ ಮುಹಮ್ಮದ್‍ರವರು(ಸ) ದಿಕ್ರ್ ಮಾಡುವಾಗ ಜಪಮಣಿಗಳನ್ನು ಉಪಯೋಗಿಸುತ್ತಿದ್ದರೇ? ಮಾಡಿರದಿದ್ದರೆ ಜಪಮಣಿಗಳನ್ನು ಉಪಯೋಗಿಸಿ ದಿಕ್ರ್ ಮಾಡುವ ಪದ್ಧತಿ ಎಂದಿನಿಂದ ರೂಢಿಗೆ ಬಂದಿದೆ? ತಿಳಿಸಿ.

  ಉತ್ತರ: ಪ್ರವಾದಿ(ಸ) ದಿಕ್ರ್ ಮಾಡುವಾಗ ಜಪಮಣಿಗಳನ್ನು ಉಪಯೋಗಿಸುತ್ತಿರಲಿಲ್ಲ. ತಸ್ಬೀಹ್ ಅಥವಾ ಜಪಮಾಲೆ ತಿರುಗಿಸುವ ಸಂಪ್ರದಾಯವು ಯಹೂದಿ ಮತ್ತು ಕ್ರೈಸ್ತ ವಿದ್ವಾಂಸರದ್ದಾಗಿದೆ. ಅದುವೇ ಬಳುವಳಿಯಾಗಿ ನಮ್ಮ ಸಮುದಾಯಕ್ಕೆ ನುಸುಳಿಕೊಂಡಿರಬೇಕು. ಈ ಧರ್ಮವನ್ನು ಆರಾಧನೆ, ಜಪ-ತಪ, ದಿಕ್ರ್-ತಸ್ಬೀಹ್‍ಗಳಿಗೆ ಮಾತ್ರ ಸೀಮಿತವೆಂದು ಭಾವಿಸಿಕೊಂಡಿರುವವರ ಕೈಯಲ್ಲಿ ಇದು ಸಾಮಾನ್ಯವಾಗಿ ಗೋಚರಿಸುತ್ತದೆ. ಆದರೆ ವಾಸ್ತವದಲ್ಲಿ ಪ್ರವಾದಿ(ಸ) ಇಂತಹ ಸಂಪ್ರದಾಯವನ್ನು ಸಮುದಾಯಕ್ಕೆ ಕಲಿಸಿರಲಿಲ್ಲ.
  ಇದಕ್ಕೆ ವ್ಯತಿರಿಕ್ತವಾಗಿ ದಿಕ್ರ್-ತಸ್ಬೀಹ್‍ಗಳ ಬಗ್ಗೆ ಈ ರೀತಿ ಮಾರ್ಗದರ್ಶನ ಮಾಡಿದ್ದಾರೆ: ಅಬ್ದುಲ್ಲಾ ಬಿನ್ ಉಮರ್(ರ) ಹೇಳುತ್ತಾರೆ- ಪ್ರವಾದಿಯವರು(ಸ) ತಮ್ಮ ಬಲಗೈಯ ಬೆರಳುಗಳಿಂದ ತಸ್ಬೀಹ್ ಮಾಡುವುದನ್ನು ನಾನು ಕಂಡಿದ್ದೇನೆ. (ಅಬೂದಾವೂದ್)
  ಮುಸೈರಾ ಎಂಬ ಸಹಾಬಿ ಮಹಿಳೆ ವರದಿ ಮಾಡುತ್ತಾರೆ- ಪ್ರವಾದಿಯವರು(ಸ) ಹೇಳಿದರು, “ಅಲ್ಲಾಹನ ಸ್ತುತಿ-ಸ್ತೋತ್ರ ಮತ್ತು ಗುಣಗಾನ ಮಾಡಿರಿ ಹಾಗೂ ಅವನ ಮಹಾನತೆಯನ್ನು ಕೊಂಡಾಡಿರಿ. ಇದು ನಿಮ್ಮ ಮಹಿಳೆಯರು ಮಾಡಬೇಕಾದ ಕರ್ತವ್ಯ. ಅದರಲ್ಲಿ ಅಸಡ್ಡೆ ತೋರದಿರಿ. ಅನ್ಯಥಾ ದಯಾಮಯನಾದ ಅಲ್ಲಾಹನು ನಿಮ್ಮನ್ನು ನಿರ್ಲಕ್ಷಿಸುವನು. ಬೆರಳುಗಳಿಂದ ಎಣಿಸಿರಿ. ಏಕೆಂದರೆ ಕಿಯಾಮತ್‍ನಂದು ಅವುಗಳೊಂದಿಗೆ ವಿಚಾರಿಸಲಾಗುವುದು ಮತ್ತು ಅವುಗಳಿಗೆ ಮಾತಾಡುವ ಶಕ್ತಿ ನೀಡಲಾಗುವುದು.” (ಅಬೂದಾವೂದ್, ತಿರ್ಮಿದಿ, ಇಬ್ನು ಅಬೀಶೈಬ, ಹಾಕಿಮ್, ಅಹ್ಮದ್)
  ಜಪಮಾಲೆ ತಿರುಗಿಸುವ ಸಂಪ್ರದಾಯವು ಪ್ರವಾದಿ(ಸ) ಅವರಿಗಿಂತ ಮುಂಚೆಯೇ ರೂಢಿಯಲ್ಲಿತ್ತು. ಸಾಮಾನ್ಯವಾಗಿ ಯಹೂದಿಯರ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ನಡೆಯಬೇಕೆಂದು ಪ್ರವಾದಿಯವರ(ಸ) ಶಿಕ್ಷಣದಲ್ಲಿದೆ. ಜಪಮಾಲೆಯ ಬದಲು ಕೈಯಿಂದ ತಸ್ಬೀಹ್ ಹೇಳಬೇಕೆಂದಿರುವುದೇ ಇದಕ್ಕೆ ಕಾರಣ ಆಗಿರಲೂಬಹುದು.

 • ವಧುವಿನ ಸೌಂದರ್ಯ
  ismika21-12-2017

  ಪ್ರಶ್ನೆ: ಹೆಣ್ಣನ್ನು ಆರಿಸುವಾಗ ಅವಳ ಸಂಪತ್ತು, ಅವಳ ಮನೆತನ ಮತ್ತು ಅವಳ ಸೌಂದರ್ಯವನ್ನು ನೋಡಬಾರದು ಎಂದು ಸಾಮಾನ್ಯವಾಗಿ ನಿಕಾಹ್‍ನ ಖುತ್ಬಾಗಳಲ್ಲಿ ಹೇಳಲಾಗುತ್ತದೆ. ಹಾಗಾದರೆ ಅವುಗಳನ್ನು ಪರಿಗಣಿಸುವುದು ತಪ್ಪೇ?

  ಉತ್ತರ:ಮದುವೆಗೆ ಹೆಣ್ಣನ್ನು ಆರಿಸುವಾಗ ಪ್ರಸ್ತುತ ಮೂರು ವಿಷಯಗಳನ್ನು ಪರಿಗಣಿಸುವುದು ತಪ್ಪೇನೂ ಅಲ್ಲ. ಆದರೆ ಅವುಗಳನ್ನು ಮಾತ್ರ ಪರಿಗಣಿಸುವುದು ಕೆಲವೊಮ್ಮೆ ಹಾನಿಕಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಪ್ರವಾದಿ(ಸ) ಅವರ ಪ್ರಸ್ತುತ ವಚನದಲ್ಲಿ ಮೇಲೆ ತಿಳಿಸಿದ ಮೂರು ವಿಷಯಗಳನ್ನಲ್ಲದೆ ನಾಲ್ಕನೆಯ ಒಂದು ವಿಷಯವನ್ನು ಹೇಳಿದ್ದಾರೆ. ಅದು ಧರ್ಮನಿಷ್ಠಳಾದ ಹೆಣ್ಣಿಗೆ ಪ್ರಾಶಸ್ತ್ಯ ನೀಡಬೇಕೆಂದಾಗಿದೆ. ಈ ನಾಲ್ಕೂ ವಿಷಯಗಳು ಒಬ್ಬ ಮಹಿಳೆಯಲ್ಲಿ ಇದೆಯೆಂದಾದರೆ ಅದು ಬಹಳ ಉತ್ತಮ. ಆದರೆ ಒಬ್ಬಳು ಐಶ್ವರ್ಯವಂತಳಾಗಿರಬಹುದು. ಆದರೆ ಅದು ಅವಳನ್ನು ಅಹಂಕಾರಿಯನ್ನಾಗಿ ಮಾಡಬಹುದು. ಕೆಲವೊಮ್ಮೆ ಆ ಸಂಪತ್ತೇ ಅಳಿದು ಹೋಗಬಹುದು. ಮನೆತನವೂ ಮಹಿಳೆಯನ್ನು ಕೆಡಿಸಬಹುದು. ಇತರರ ಮನೆತನದ ಹೆಸರು ಹೇಳಿ ಅವರನ್ನು ನಿಂದಿಸುವವಳಾಗಬಹುದು. ಪತಿಯ ಮನೆಯವರ ಮನೆತನವು ಅವಳಷ್ಟು ಉನ್ನತವಾಗಿಲ್ಲದಿದ್ದರೆ ಪತಿಯೇ ಆಕೆಯ ನಿಂದನೆ, ಮೂದಲಿಕೆಗೆ ಬಲಿಯಾಗಬಹುದು. ಇನ್ನು ಸೌಂದರ್ಯದ ಕುರಿತು ಹೇಳುವುದಾದರೆ ಅದು ಯಾವಾಗಲೂ ಶಾಶ್ವತವಾಗಿರುವುದಿಲ್ಲ. ಯಾವುದೇ ಕಾಯಿಲೆ ಅಥವಾ ಚರ್ಮ ರೋಗವು ಆಕೆಯ ಸೌಂದರ್ಯವನ್ನು ಕುರೂಪದಲ್ಲಿ ಬದಲಾಯಿಸಬಹುದು. ಇನ್ನು ಉಳಿದಿರುವುದು ಧಾರ್ಮಿಕ ಹಿನ್ನೆಲೆಯ, ಧರ್ಮ ಜ್ಞಾನವಿರುವ ಹೆಣ್ಣು. ಅವಳ ಗುಣ ಸ್ವಭಾವಗಳು ಎಂದೂ ಅಳಿದು ಹೋಗುವುದಿಲ್ಲ. ಪತಿಯ ಪಾಲಿಗೆ ಆಕೆ ಒಂದು ಅನುಗ್ರಹವಾಗಬಹುದು, ಆಕೆಯಲ್ಲಿ ಸಂಪತ್ತು ಸೌಂದರ್ಯವಿಲ್ಲದಿದ್ದರೂ ಆಕೆಯಲ್ಲಿ ಎಲ್ಲರನ್ನೂ ಅಂದರೆ ಪತಿಯನ್ನೂ ಪತಿಯ ಮನೆಯವರನ್ನೂ ಪ್ರೀತಿಸುವ ಹಾಗೂ ಗೌರವಿಸುವ ಹೃದಯವಿರಬಹುದು. ಮಕ್ಕಳನ್ನು ಪ್ರೀತಿಸುವ ಮತ್ತು ಅವರಿಗೆ ಸರಿಯಾದ ತರಬೇತಿ ನೀಡಿ ಬೆಳೆಸುವವಳಾಗಿರಬಹುದು. ಆದ್ದರಿಂದಲೇ ಧಾರ್ಮಿಕ ಜ್ಞಾನ ಹೊಂದಿದ ಧರ್ಮನಿಷ್ಠಳಾದ ಮಹಿಳೆಯನ್ನು ವಿವಾಹವಾಗಿರೆಂದು ಪ್ರವಾದಿ(ಸ) ಉಪದೇಶಿಸಿರುವುದು. ಒಂದು ವೇಳೆ ನಾಲ್ಕೂ ವಿಷಯಗಳು ಓರ್ವ ಹೆಣ್ಣಿನಲ್ಲಿದ್ದರೆ ಆಕೆ ಪತಿ ಗೃಹವನ್ನು ಸ್ವರ್ಗ ಸಮಾನವಾಗಿ ಮಾಡಬಲ್ಲಳು.

 • ಸಂಪತ್ತು ಸತ್ವ ಪರೀಕ್ಷೆಯೇ?
  ismika21-12-2017

  ಪ್ರಶ್ನೆ: ಪ್ರವಾದಿಯವರು(ಸ), ಪ್ರತಿಯೊಂದು ಸಮುದಾಯಕ್ಕೆ ಒಂದು ಸತ್ವ ಪರೀಕ್ಷೆ ಇದೆ. ನನ್ನ ಸಮುದಾಯದ ಸತ್ವ ಪರೀಕ್ಷೆ ಸಂಪತ್ತಾಗಿದೆಯೆಂದು ಒಂದು ಹದೀಸ್ ಓದಿದೆ. ಇದರ ಅರ್ಥವೇನು? ಉತ್ತರಿಸುವಿರಾ?

  ಉತ್ತರ: ಸಂಪತ್ತಿನ ವ್ಯಾಮೋಹವು ಮನುಷ್ಯನನ್ನು ಹುಚ್ಚನನ್ನಾಗಿಸಿ ಬಿಡುತ್ತದೆ. ಧನ-ಕನಕಗಳಿಗೆ ಮಾರು ಹೋದವನು ಅದನ್ನು ಯಾವ ರೀತಿಯಿಂದಲಾಗಲೂ ಗಳಿಸಲು ಗರಿಷ್ಠ ಪ್ರಯತ್ನಿಸುತ್ತಾನೆ. ಹಣ ಗಳಿಕೆಯೇ ತನ್ನ ಬದುಕಿನ ಉದ್ದೇಶವೆಂದು ಭಾವಿಸುವವನು ಹರಾಮ್ ಹಲಾಲ್‍ಗಳನ್ನು ನೋಡುವುದಿಲ್ಲ. ಅದಕ್ಕಾಗಿ ಎಲ್ಲ ಅಕ್ರಮ ಮಾರ್ಗಗಳನ್ನು ಅನುಸರಿಸುತ್ತಾನೆ. ಬಡ್ಡಿ, ಜೂಜು, ವಂಚನೆ, ದರೋಡೆ, ಕಳ್ಳತನವೇ ಮುಂತಾದ ಅನುಚಿತ ರೀತಿಯಿಂದ ಅವನು ಸಂಪಾದಿಸುತ್ತಾನೆ. ಈ ರೀತಿ ಅವನು ಸಂಪತ್ತಿನ ಶೇಖರಣೆ ಮತ್ತು ಅಧಿಕ್ಯವನ್ನು ತನ್ನ ಯಶಸ್ಸೆಂದು ಭಾವಿಸುತ್ತಾನೆ. ಆದರೆ ವಾಸ್ತವದಲ್ಲಿ ಈ ರೀತಿಯ ಸಂಪತ್ತು ಮನುಷ್ಯನ ಪಾಲಿಗೆ ವಿನಾಶಕಾರಿಯಾಗಿದೆ. ಈ ಲೋಕವು ಒಂದು ಪರೀಕ್ಷೆಯಾಗಿದೆ. ಅದರಲ್ಲಿ ಯಾರು ಅತ್ಯುತ್ತಮ ಸತ್ಕರ್ಮ ವೆಸಗುತ್ತಾರೆಂಬ ಪರೀಕ್ಷೆ ಮನುಷ್ಯನಿಗೆ ಎದುರಾಗುತ್ತದೆ.
  ಮಾನವನ ನೈಜ ಯಶಸ್ಸು ಪರಲೋಕದ ವಿಜಯವಾಗಿದೆ. ಅದಕ್ಕಾಗಿ ಶ್ರಮಿಸುವವನೇ ಬುದ್ಧಿವಂತ. ಓರ್ವ ನೈಜ ವಿಶ್ವಾಸಿ ಅಲ್ಲಾಹನ ಭಯವಿರಿಸಿಕೊಂಡು ಜೀವಿಸುತ್ತಾನೆ. ಅವನ ದೃಷ್ಟಿಯು ಸದಾ ಪರಲೋಕದ ಮೇಲಿ ರುವುದು. ಪರಲೋಕದ ವಿಜಯ ಸಾಧಿಸಲು ಅವನು ಈ ಲೋಕದ ಎಲ್ಲ ಕಷ್ಟ-ನಷ್ಟಗಳನ್ನು ಸಹಿಸಲು
  ತಯಾರಾಗುವನು. ಸಂಪತ್ತು ಶಾಶ್ವತವಲ್ಲ. ಸಂಪತ್ತಿನ ನೈಜ ಮಾಲಕ ಅಲ್ಲಾಹನಾಗಿದ್ದಾನೆ; ಮಾನವನಲ್ಲ. ಸಂಪತ್ತಿನ ಮೋಹವನ್ನು ಇಲ್ಲವಾಗಿಸಲು ಅಲ್ಲಾಹನು ಮಾನವನೊಂದಿಗೆ ದಾನ-ಧರ್ಮಗಳನ್ನು ಮಾಡಲು ಆದೇಶಿಸುತ್ತಾನೆ. ಅಲ್ಲಾಹನನ್ನು ಮರೆತವನು ಮತ್ತು ಪರಲೋಕವನ್ನು ಕಡೆಗಣಿಸುವವನು ಮಾತ್ರ ಸಂಪತ್ತಿನ ವ್ಯಾಮೋಹದಲ್ಲಿ ಸಿಲುಕುತ್ತಾನೆ. ತಾನು ಗಳಿಸಿದ್ದು ತನ್ನದು. ತನ್ನ ಮೇಲೆ ಯಾರೂ ವಿಚಾರಣೆ ನಡೆಸುವವರಿಲ್ಲವೆಂದು ಅವನು ಭಾವಿಸುತ್ತಾನೆ. ಆದ್ದರಿಂದ ಜಿಪುಣತೆ ತೋರುತ್ತಾನೆ. ವಾಸ್ತವದಲ್ಲಿ ಸಂಪತ್ತಿನಿಂದ ದಾನ-ಧರ್ಮಗಳನ್ನು ಮಾಡಿ, ಸತ್ಕಾರ್ಯಗಳಿಗಾಗಿ ವ್ಯಯಿಸಿ ಅವನು ಅಲ್ಲಾಹನ ಸಂಪ್ರೀತಿಯನ್ನು
  ಗಳಿಸಬೇಕಾಗಿತ್ತು. ಆದರೆ ಹಣಕ್ಕಾಗಿ ಜೀವ ತೊರೆಯುವ ಸ್ವಭಾವವು ಅವನನ್ನು ವಿನಾಶಕ್ಕೊಯ್ಯಬಹುದು. ಕೆಲವು ದಿನ ಅವನು ಸುಖ ಸಂತೋಷದಲ್ಲಿ ತೇಲಾಡಬಹುದಾದರೂ ಅವನ ಶಾಶ್ವತ ಪರಲೋಕವು ಅವನಿಗೆ ಮುಳುವಾಗಲಿದೆ. ಇಹಲೋಕವನ್ನು ಪರೀಕ್ಷೆಯೆಂದು ಭಾವಿಸಿ ಜೀವಿಸುವವನೇ ಪರಲೋಕದಲ್ಲಿ ಯಶಸ್ಸನ್ನು ಕಾಣುವನು ಎಂಬುದು ಪ್ರಸ್ತುತ ಹದೀಸ್‍ನ ತಾತ್ಪರ್ಯವಾಗಿದೆ.

 • ಮಾನವ ಕುಲದ ಬೆಳವಣಿಗೆ ಹೇಗೆ?
  ismika21-12-2017

  ಪ್ರಶ್ನೆ: ‘ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಲಾಗಿದೆ’ ಎಂದು ಪವಿತ್ರ ಕುರ್‍ಆನ್ ಹೇಳುತ್ತದೆ. ಆದರೆ ಆದಿಪಿತ ಆದಮ್(ಅ)ರಿಗೆ ಇಬ್ಬರು ಮಕ್ಕಳಿದ್ದು, ಇಬ್ಬರೂ ಗಂಡು ಮಕ್ಕಳಾಗಿದ್ದಾರೆ. ಹಾಗಾದರೆ ಅವರ ನಂತರ ಮಾನವಕುಲ ಹೇಗೆ ಬೆಳೆಯಿತು? ಕುರ್‍ಆನ್-ಹದೀಸ್‍ನ ಆಧಾರದಲ್ಲಿ ಉತ್ತರಿಸಿ.

  ಉತ್ತರ: ‘ನಿಮ್ಮನ್ನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಲಾಗಿದೆ’ ಎಂದು ಹೇಳುವುದಕ್ಕಿಂತ ಮುಂಚೆ ನಿಮ್ಮನ್ನು ಒಂದೇ ಜೀವದಿಂದ ಸೃಷ್ಟಿಸಲಾಗಿದೆಯೆಂದು ಮನುಷ್ಯರನ್ನುದ್ದೇಶಿಸಿ ಪವಿತ್ರ ಕುರ್‍ಆನ್ ಹೇಳುತ್ತದೆ. (ಅನ್ನಿಸಾ: 1) ಅದೇ ರೀತಿ
  ಮಾನವನನ್ನು ಮಣ್ಣಿನಿಂದ ಬಳಿಕ ವೀರ್ಯದಿಂದ ಸೃಷ್ಟಿಸಲಾಯಿತೆಂದೂ ಹೇಳುತ್ತದೆ. (ಅಲ್‍ಕಹ್ಫ್: 37)
  ಈ ಸೂಕ್ತಗಳಲ್ಲಿ ಯಾವುದೇ ವೈರುಧ್ಯಗಳಿಲ್ಲ. ಮೊದಲು ಅಲ್ಲಾಹನು ಆದಮ್‍ರನ್ನು ಮಣ್ಣಿನಿಂದ ಮಾಡಿದನು. ಅನಂತರ ಅದಕ್ಕೆ ಜೀವಕೊಟ್ಟು, ಅದೇ ಜೀವದಿಂದ ಹವ್ವಾರನ್ನು ಸೃಷ್ಟಿಸಿ ಆದಮ್‍ರ ಜೋಡಿ(ಪತ್ನಿ)ಯಾಗಿ ಮಾಡಿದನು. ಈ ದಂಪತಿಯಿಂದ ಸಂತಾನೋತ್ಪತ್ತಿಯ ಆರಂಭವಾಯಿತು. ಗಂಡು ಮತ್ತು ಹೆಣ್ಣಿಲ್ಲದೆ ಸಂತಾನೋತ್ಪತ್ತಿಯಾಗುವುದಿಲ್ಲವೆಂಬುದು ಸರ್ವವಿಧಿತ.
  ಆದಮ್‍ರಿಗೆ ಸಂತಾನವುಂಟಾದುದು ಅವರದೇ ಶರೀರ ಭಾಗದಿಂದ(ಪಕ್ಕೆಲುಬು) ಸೃಷ್ಟಿಸಲಾದ ಹವ್ವಾರ ಮೂಲಕ. ಅನಂತರ ಆದಮ್- ಹವ್ವಾ ದಂಪತಿಗಳಿಗೆ ಅನೇಕ ಮಕ್ಕಳಾದುವು. ಅದರಲ್ಲಿ ಗಂಡೂ-ಹೆಣ್ಣೂ ಇದ್ದುವು. ಆ ಪೈಕಿ ಇಬ್ಬರು ಪುತ್ರರ ಪ್ರಸ್ತಾಪ ಕುರ್‍ಆನಿನಲ್ಲಿ ಬಂದಿದೆ. ಅದರಿಂದ ಆದಮ್‍ರಿಗೆ ಕೇವಲ ಇಬ್ಬರು ಪುತ್ರರಿದ್ದರೆಂದು ಭಾವಿಸುವುದು ಸರಿಯಲ್ಲ. ಏಕೆಂದರೆ ಕುರ್‍ಆನಿನಲ್ಲೇ ಹೀಗೆ ಹೇಳಲಾಗಿದೆ- ಅವನು ನಿಮ್ಮನ್ನು ಒಂದು ಜೀವದಿಂದ ಸೃಷ್ಟಿಸಿದನು. ಅದೇ ಜೀವದಿಂದ ಅದರ ಜೋಡಿಯನ್ನು ಉಂಟು ಮಾಡಿದನು ಮತ್ತು ಅವೆರಡರಿಂದ ಅನೇಕಾನೇಕ ಸ್ತ್ರೀ-ಪುರುಷರನ್ನು ಲೋಕದಲ್ಲಿ ಹಬ್ಬಿಸಿದನು.
  (ಅನ್ನಿಸಾ- 1)
  ಆನೇಕಾನೇಕ ಸ್ತ್ರೀಪುರುಷ ಆದಮ್-ಹವ್ವಾ ದಂಪತಿಗಳಿಂದಲೂ ಆಗಿರಬಹುದು. ಅನಂತರ ಅದರ ಪೀಳಿಗೆ ಗಳೂ ಅದರಲ್ಲಿ ಸೇರುತ್ತವೆ. ಪ್ರಥಮ ಪೀಳಿಗೆಯಲ್ಲಿ ಆದಮ್-ಹವ್ವಾ ದಂಪತಿಯ ಮಕ್ಕಳು ಪರಸ್ಪರ ವಿವಾಹವಾಗುವುದು ಅನಿವಾರ್ಯವಾಗಿತ್ತು. ಸಹೋದರ-ಸಹೋದರಿಯರ ನಡುವೆ ವಿವಾಹವಾದರೆ ಮಾತ್ರ ಸಂತಾನವು ಮುಂದುವರಿಯುಲು ಸಾಧ್ಯವಿತ್ತು. ಪ್ರವಾದಿಗಳೆಲ್ಲರ ಧರ್ಮ ಒಂದೇ ಆಗಿತ್ತಾದರೂ ಶರೀಅತ್ (ನಿಯಮೋಪ ನಿಯಮಗಳು) ಭಿನ್ನವಾಗಿದ್ದುವು. ಆದ್ದರಿಂದಲೇ ಕೆಲವು ಶರೀಅತ್‍ಗಳಲ್ಲಿ ನಿಷಿದ್ಧವಾದ ವಸ್ತು ಇನ್ನೂ ಕೆಲವು ಶರೀಅತ್‍ಗಳಲ್ಲಿ ಧರ್ಮಸಮ್ಮತವಾಗಿತ್ತು.
  ಒಟ್ಟಿನಲ್ಲಿ ಆದಮ್‍ರಿಗೆ ಇಬ್ಬರು ಗಂಡು ಮಕ್ಕಳು ಇದ್ದುದಲ್ಲ. ಅನೇಕ ಗಂಡು, ಹೆಣ್ಣು ಮಕ್ಕಳಿದ್ದರು. ಅವರ ನಡುವೆ ವಿವಾಹ ಅನಿವಾರ್ಯವಾಗಿತ್ತು. ಆದರೂ ಒಬ್ಬ ಪುರುಷನು ಆತನ ಬೆನ್ನಲ್ಲೇ ಬರುವ ನೇರ ಸಹೋದರಿಯನ್ನು ವಿವಾಹವಾಗುತ್ತಿರಲಿಲ್ಲವೆಂದು ವಿದ್ವಾಂಸರು ಹೇಳುತ್ತಾರೆ. ಒಂದನ್ನು ಬಿಟ್ಟು ಒಂದರಂತೆ ವಿವಾಹವಾಗಿದ್ದರು. ಕುರ್‍ಆನಿನಲ್ಲಿ ಆದಮ್‍ರ ಇಬ್ಬರು ಗಂಡು ಮಕ್ಕಳ ಸಂಘರ್ಷದಲ್ಲಿ ಒಬ್ಬನು ಕೊಲೆಯಾದ ಪ್ರಸ್ತಾಪವಿದೆ. ಅವರ ಸಂಘರ್ಷ ಒಂದು ಹೆಣ್ಣಿಗೆ ಸಂಬಂಧಿಸಿ ಆಗಿತ್ತೆಂದು ಹೇಳಲಾಗುತ್ತದೆ. ಸಹೋದರ ಹಾಬೀಲ್, ಅನಂತರ ಕಾಬೀಲ್, ಆ ಬಳಿಕ ಹೆಣ್ಣು ಮಗಳು. ನಿಯಮ ಪ್ರಕಾರ, ಆಕೆ ಹಾಬೀಲ್‍ಗೆ ಸಲ್ಲತಕ್ಕವಳು. ಆದರೆ ಕಾಬೀಲ್ ಆಕೆಯನ್ನು ವರಿಸಲು ಹಠ ತೊಟ್ಟ. ಈ ಬಗ್ಗೆ ಅವರಿಬ್ಬರಲ್ಲಿ ವಿವಾದ ವುಂಟಾಯಿತು. ಅದರ ಇತ್ಯರ್ಥವನ್ನು ಪ್ರಾಣಿ ಬಲಿಯ ಮೂಲಕ ಮಾಡಲಾಯಿತು. ಹಾಬೀಲನ ಬಲಿ ಸ್ವೀಕೃತವಾಯಿತು. ಇದರಿಂದ ರೊಚ್ಚಿಗೆದ್ದ ಕಾಬೀಲನು ಹಿರಿಯ ಸಹೋದರನನ್ನು ವಧಿಸಿ ಬಿಟ್ಟನೆಂದು ಕುರ್‍ಆನ್ ಹೇಳುತ್ತದೆ. ಆದರೆ ಕುರ್‍ಆನಿನಲ್ಲಿ ಹೆಣ್ಣಿಗಾಗಿ ಅವರು ಜಗಳಾಡಿದರು ಎಂದು ಹೇಳಲಾಗಿಲ್ಲ. ಆದಮ್‍ರ ಶರೀಅತ್‍ನಲ್ಲಿ ಸಹೋದರ-ಸಹೋದರಿಯರ ನಡುವೆ ವಿವಾಹ ಧರ್ಮಸಮ್ಮತವಾಗಿದ್ದುದರಿಂದ ಮಾನವ ಕುಲವು ಬೆಳೆದಿರಬೇಕೆಂದು ತಿಳಿಯಬಹುದು.

 • ಪಾಲುದಾರಿಕೆ ವ್ಯಾಪಾರ ಹೇಗಿರಬೇಕು?
  ismika17-01-2018

  ಪ್ರಶ್ನೆ :ನಾನು ಪಾಲುದಾರಿಕೆ ವ್ಯಾಪಾರದಲ್ಲಿ ಹಣವನ್ನು ತೊಡಗಿಸಿದ್ದೇನೆ. ವ್ಯಾಪಾರ ಮಾಡುವುದು ನನ್ನ ಪಾಲುದಾರರು. ಅವರು ಅದೇ ಅಂಗಡಿಯಲ್ಲಿ ಕೂತು ಬೇರೆ ವ್ಯವಹಾರ ಮಾಡುತ್ತಾರೆ. ಅದರ ವಿಧಿ ಏನು? ಅವರ ವ್ಯಾಪಾರಕ್ಕೆ ಇದೇ ಅಂಗಡಿಯ ಸೇಲ್ಸ್‍ಮೇನ್ ಹುಡುಗನನ್ನು, ರೂಮನ್ನು ಉಪಯೋಗಿಸುತ್ತಾರೆ. ಹೀಗೆ ವ್ಯಾಪಾರ ಮಾಡಬಹುದೇ? ಅಂಗಡಿಯ ಎಲ್ಲಾ ವ್ಯವಹಾರವನ್ನು ಅವರು ಒಬ್ಬರೇ ನೋಡಿಕೊಳ್ಳುತ್ತಾರೆ. ಅದರ ಲಾಭ ನಷ್ಟವನ್ನು ಅವರಾಗಿಯೇ ಕೊಡಬೇಕೇ ಅಥವಾ ನಾನು ಕೇಳಬೇಕೇ? ಆ ಅಂಗಡಿಯಲ್ಲಿ ಮಾಡುವ ಎಲ್ಲ ವ್ಯವಹಾರಕ್ಕೆ ನನಗೂ ಪಾಲುದಾರಿಕೆ ಇದೆಯಾ?

  ಉತ್ತರ : ನೀವು ಸೂಚಿಸಿರುವಂತಹ ವ್ಯಾಪಾರವನ್ನು ಶರೀಅತ್‍ನ ಭಾಷೆಯಲ್ಲಿ `ಮದಾರಬ' ಎಂದು ಕರೆಯಲಾಗುತ್ತದೆ. ಅಂದರೆ ಒಬ್ಬನು ಹಣ ಹೂಡುವುದು ಮತ್ತೊಬ್ಬನು ಪರಿಶ್ರಮಿಸುವುದು. ಅದರಿಂದ ಬರುವ ಲಾಭವನ್ನು ಪರಸ್ಪರ ಕರಾರಿನಂತೆ ಹಂಚಿಕೊಳ್ಳುವುದು. ಈ ರೀತಿಯ ವ್ಯವಹಾರದಲ್ಲಿ ಕೆಲವು ವಿಷಯಗಳನ್ನು ಪರಿಗಣಿಸಬೇಕು. ಕೆಲವು ಶರ್ತಗಳನ್ನು ಮೊದಲೇ ನಿರ್ಧರಿಸಿಕೊಳ್ಳಬೇಕು. ಅದರ ವಿಧಿಗಳನ್ನು ಬರೆದಿಟ್ಟು ಉಭಯತ್ರರೂ ಸಾಕ್ಷಿಗಳ ಸಮಕ್ಷಮ ಸಹಿ ಹಾಕಬೇಕು.

  ಮೊಟ್ಟ ಮೊದಲಾಗಿ, ಪಾಲುದಾರಿಕೆ ಯಲ್ಲಿ ವ್ಯಾಪಾರ ಮಾಡುವವರಿಗೆ ಪರಸ್ಪರರ ಮೇಲೆ ಪ್ರಾಮಾಣಿಕವಾದ ನಂಬಿಕೆ ಇರಬೇಕು. ಮೂಲ ಧನವನ್ನು ಒಬ್ಬನು ಹಾಕಿದರೆ, ಇನ್ನೊಬ್ಬರು ವ್ಯಾಪಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಮದಾರಬ ಒಪ್ಪಂದದ ಪ್ರಕಾರ, ವ್ಯಾಪಾರದಲ್ಲಿ ಲಾಭ ಬಂದರೆ ಅದನ್ನು ಪೂರ್ವ ನಿರ್ಧರಿತ ನಿಷ್ಪತ್ತಿಯಲ್ಲಿ ಹಂಚಿ ಕೊಳ್ಳಬೇಕು. ಅದು ಸಮಪಾಲೇ ಆಗಿರಬೇಕೆಂದಿಲ್ಲ. ಹೆಚ್ಚೂ ಕಡಿಮೆಯೂ ಆಗಬಹುದು. ಉದಾ: ಹಣ ಹೂಡಿದವನು ತನಗೆ 60% ಲಾಭಾಂಶ ನೀಡಬೇಕೆಂದು ಹೇಳಿದರೆ ಅದನ್ನು ಅವನ ಪಾಲುದಾರನು ಒಪ್ಪಿದ್ದರೆ ಪರಿಶ್ರಮ ಪಡುವವನಿಗೆ 40% ಲಾಭಾಂಶ ಬರುತ್ತದೆ. ಈ ನಿಷ್ಪತ್ತಿಯು ವ್ಯತಿರಿಕ್ತವೂ ಆಗಬಹುದು. ಅಂದರೆ ಪರಿಶ್ರಮಿಸುವವನು ತನ್ನ ದುಡಿಮೆಗೆ 60% ನೀಡಬೇಕೆಂದು ಹೇಳಿದ್ದು ಅದನ್ನು ಅವನ ಪಾಲುದಾರನು ಒಪ್ಪಿಕೊಂಡರೆ ಹಣ ಹೂಡಿದವನಿಗೆ 40% ಲಾಭಾಂಶ ಸಿಗುವುದು. ಪರಿಶ್ರಮಿಸುವವನಿಗೆ ಅವನ ದೈಹಿಕ ಸಾಮಥ್ರ್ಯ ಮಾತ್ರ ಇರುವುದಲ್ಲ. ಅವನ ಬುದ್ಧಿವಂತಿಕೆ, ಸಮಯ ಎಲ್ಲವನ್ನೂ ತೊಡಗಿಸಿಕೊಳ್ಳಬೇಕಾಗುತ್ತದೆ. ಈ ನಿಷ್ಪತ್ತಿಯು ಅಷ್ಟೇ ಆಗಬೇಕೆಂದಿಲ್ಲ. ಹೆಚ್ಚೂ ಕಡಿಮೆಯೂ ಆಗಬಹುದು.

  ಇದು ಲಾಭವುಂಟಾದಾಗಿನ ವಿಷಯವಾಯ್ತು. ಇನ್ನು ನಷ್ಟ ಸಂಭವಿಸಿದರೆ ಏನು ಮಾಡುವುದು, ಹೇಗೆ ಪಾಲು ಮಾಡುವುದು ಎಂಬ ವಿಷಯ. ಇಸ್ಲಾಮಿನ ಆರ್ಥಿಕ ವ್ಯವಸ್ಥೆಯ ನಿಯಮಗಳ ಪ್ರಕಾರ, ನಷ್ಟ ಸಂಭವಿಸಿದರೆ ಅದರ ಹೊಣೆಗಾರಿಕೆ ಹಣ ಹೂಡಿದವನಿಗೆ ಮಾತ್ರ ಇರುವುದು. ದುಡಿದವನಿಗೆ ಅವನ ದುಡಿಮೆ ನಷ್ಟವಾಯಿತು. ಇದು ನ್ಯಾಯ ಪೂರ್ಣವೂ ಆಗಿದೆ.

  ಇನ್ನು ವ್ಯಾಪಾರದಲ್ಲಿ ಸಕ್ರಿಯವಾಗಿ ದುಡಿಯುವ ನಿಮ್ಮ ಪಾಲುದಾರ ಅದೇ ಅಂಗಡಿಯಲ್ಲಿ ಬೇರೆ ವ್ಯಾಪಾರವನ್ನು ಮಾಡುತ್ತಾರೆ. ಅಂಗಡಿಯ ಸೇಲ್ಸ್‍ಮ್ಯಾನನ್ನೂ ರೂಮನ್ನೂ ಉಪಯೋಗಿಸುತ್ತಾರೆ ಎಂಬ ಪ್ರಶ್ನೆ. ಈ ವಿಷಯವನ್ನು ನೀವು ಹಣ ಹೂಡುವ ಮೊದಲೇ ನಿಮ್ಮ ಪಾಲುದಾರನು ನಿಮಗೆ ತಿಳಿಸಿದ್ದು, ಅದನ್ನು ಕರಾರು ಪತ್ರದಲ್ಲಿ ನಮೂದಿಸಿದ್ದರೆ ಹಾಗೂ ಅವರ ಶರ್ತವನ್ನು ನೀವು ಒಪ್ಪಿಕೊಂಡೂ ಇದ್ದರೆ, ಅವರು ಮಾಡುವ ಪ್ರತ್ಯೇಕ ವ್ಯಾಪಾರವು ಧರ್ಮ ಸಮ್ಮತವಾಗುತ್ತದೆ. ಅನ್ಯಥಾ ಅವರ ನಿಲುವು ಸರಿಯಲ್ಲ. ಅಂಗಡಿಯ ಒಟ್ಟು ವ್ಯಾಪಾರದಲ್ಲಿ ಅಂಗಡಿಯ ಖರ್ಚು (ಸೇಲ್ಸ್‍ಮ್ಯಾನ್‍ನ ವೇತನ, ರೂಮ್ ಬಾಡಿಗೆ, ವಿದ್ಯುಚ್ಛಕ್ತಿ, ಟೆಲಿಫೋನ್, ಸ್ಟೇಶನರಿ ಇತ್ಯಾದಿ)ಗಳನ್ನು ಕಳೆದ ನಂತರ ಬರುವ ಲಾಭಾಂಶವನ್ನು ಇಬ್ಬರಲ್ಲಿ ಹಂಚಬೇಕು. ಇಲ್ಲಿ ಒಂದು ಉಪ ಸಮಸ್ಯೆಯಿದೆ. ಅಂಗಡಿಯಲ್ಲಿ ಅವರು ತನ್ನ ಸ್ವಂತದ ವ್ಯಾಪಾರವನ್ನು ಮಾಡುತ್ತಾರೆಂದಾದರೆ ಅವರೂ ಹಣ ಹೂಡಿದ್ದಾರೆಂದಾಯಿತು. ಅವರ ಹಣಕ್ಕೂ ಲಾಭ ದೊರೆಯಬೇಕಲ್ಲವೇ? ಆಗ ಹೂಡಿಕೆಯಲ್ಲಿ ನಿಮ್ಮದು ಮಾತ್ರವಲ್ಲ, ಅವರ ಪಾಲೂ ಇದೆಯೆಂದಾಗುತ್ತದೆ. ಹಾಗಿರುವಾಗ ಹೂಡಿಕೆಗೆ ಬರುವ ಲಾಭಾಂಶವನ್ನು (ದುಡಿಮೆಯದ್ದಲ್ಲ) ಹಣದ ಪ್ರಮಾಣಕ್ಕನುಸಾರ ನೀವಿಬ್ಬರೂ ಹಂಚಿಕೊಳ್ಳಬೇಕು. ಹಾಗಾದರೆ ಯಾವುದೇ ಸಮಸ್ಯೆ ಉದ್ಭವಿಸಲಿಕ್ಕಿಲ್ಲ. ಅನ್ಯಥಾ ಯಾವಾಗಲೂ ಸಂಶಯದಲ್ಲೇ ದಿನ ಕಳೆಯಬೇಕಾದೀತು. ಇದು ವ್ಯಾಪಾರದ ಏಳಿಗೆ, ಅಭಿವೃದ್ಧಿಗೆ ಮಾರಕವಾದೀತು. ಪ್ರವಾದಿ(ಸ) ಹೇಳಿದ್ದಾರೆ- "ಇಬ್ಬರು ಪಾಲುದಾರರು ಪರಸ್ಪರ ನಂಬಿಕೆಯಿಂದ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿದಾಗ ಅವರ ಜೊತೆಯಲ್ಲಿ ಅಲ್ಲಾಹನಿರುತ್ತಾನೆ. ಅದರಲ್ಲಿ ಬರ್ಕತ್ (ಸಮೃದ್ಧಿ) ಉಂಟಾಗುತ್ತದೆ. ಅವರಲ್ಲೊಬ್ಬನು ಇನ್ನೊಬ್ಬನನ್ನು ವಂಚಿಸಲು ನೋಡಿದಾಗ ಅಲ್ಲಿಗೆ ಶೈತಾನನು ಪ್ರವೇಶಿಸುತ್ತಾನೆ."

 • ತಂದೆಯ ಆಸ್ತಿಯಲ್ಲಿ ಚಿನ್ನ
  ismika22-01-2018

  ಪ್ರಶ್ನೆ: ನನ್ನ ಮದುವೆಯ ಸಂದರ್ಭದಲ್ಲಿ ನನ್ನ ತಂದೆಯವರ ಆರ್ಥಿಕ ಸ್ಥಿತಿ ಅಷ್ಟೊಂದು ಒಳ್ಳೆಯದಿರಲಿಲ್ಲ. ಆದ್ದರಿಂದ ಇತರ ಸಹೋದರಿಯರಿಗಿಂತ ಕಡಿಮೆ ಚಿನ್ನ ನೀಡಿ ನನ್ನ ಮದುವೆ ನನ್ನ ಸೋದರ ಮಾವನ ಮಗನೊಂದಿಗೆ ನಡೆಸಿದ್ದರು. ಇದೀಗ ತಂದೆಯವರು ಅನಾರೋಗ್ಯ ಪೀಡಿತರಾಗಿದ್ದಾರೆ. ಅವರ ಪಿತ್ರಾರ್ಜಿತ ಆಸ್ತಿ ಇದೆ. ಸಹೋದರರ ಆರ್ಥಿಕ ಸ್ಥಿತಿ ಕೂಡ ಇದೀಗ ಉತ್ತಮವಾಗಿದೆ. ಆದ ಕಾರಣ ನನಗೆ ಚಿನ್ನ ಕೊಡಿಸುವ ಜವಾಬ್ದಾರಿ ನನ್ನ ಸಹೋದರರ ಮೇಲೆ ಬೀಳುವುದಿಲ್ಲವೇ? ಇಲ್ಲವಾದಲ್ಲಿ ಮದುವೆಯ ಚಿನ್ನಾಭರಣ ಕೊಡದ ಬದಲಿಗ