ಪ್ರವಾದಿ ವಚನಗಳು • 1.ಪ್ರವಾದಿ ವಚನಗಳು
 • ಉತ್ತಮ ಚಾರಿತ್ರ್ಯ
  ismika28-06-2014

  ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು:
  “ನಿಮ್ಮ ಪೈಕಿ ಯಾರ ಚಾರಿತ್ರ್ಯವು ಅತ್ಯುತ್ತಮವಾಗಿದೆಯೋ ಅವರೇ ನಿಮ್ಮ ಪೈಕಿ ಅತ್ಯುತ್ತಮರು.”
  (ಹಝ್ರತ್ ಅಬ್ದುಲ್ಲಾ ಬಿನ್ ಅಮ್ರ್ (ರ)-ಮುಸ್ಲಿಮ್)
  ಪ್ರವಾದಿವರ್ಯ(ಸ)ರು ಹೀಗೆ ಹೇಳಿರುವರು:
  “ಸತ್ಯ ವಿಶ್ವಾಸಿಗಳಲ್ಲಿ ಯಾರ ಚಾರಿತ್ರ್ಯವು ಹೆಚ್ಚು ಉತ್ತಮವಾಗಿರುವುದೋ ಅವರು ಪೂರ್ಣ ವಿಶ್ವಾಸಿಗಳು”
  (ಹ.ಅಬೂಹುರೈರಃ(ರ)-ಅಬೂದಾವೂದ್)

 • ಹೆತ್ತವರ ಸೇವೆ
  ismika28-06-2014

  ಒಮ್ಮೆ ಪ್ರವಾದಿವರ್ಯರು(ಸ),"ಅವನು ಅಪಮಾನಿತನಾಗಲಿ" ಎಂದು ಮೂರು ಬಾರಿ ಹೇಳಿದರು. ಜನರು’ಯಾರು?’ ಎಂದು ವಿಚಾರಿಸಿದರು. ಆಗ ಪ್ರವಾದಿ(ಸ) ಹೇಳಿದರು; "ತನ್ನ ತಂದೆ-ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವೃದ್ಧಾಪ್ಯದ ಸ್ಥಿತಿಯಲ್ಲಿ ಕಂಡ ಬಳಿಕವೂ (ಅವರ ಸೇವೆ ಮಾಡುವ ಮೂಲಕ) ಸ್ವರ್ಗ ಪ್ರವೇಶಕ್ಕೆ ಅರ್ಹನಾಗದವನನ್ನು ನಾನು ಶಪಿಸುತ್ತಿದ್ದೇನೆ."(ಮುಸ್ಲಿಮ್, ವರದಿ-ಅಬೂ ಹುರೈರಾ(ರ))

 • ತಾಯಿಯ ಹಕ್ಕು
  ismika28-06-2014

  ಒಮ್ಮೆ ಓರ್ವ ವ್ಯಕ್ತಿ ಪ್ರವಾದಿವರ್ಯರೊಡನೆ(ಸ), "ಅಲ್ಲಾಹನ ಸಂದೇಶವಾಹಕರೇ! ನನ್ನ ಬಂಧುಗಳ ಪೈಕಿ ಸದ್ವರ್ತನೆಗೆ ಅತಿ ಹೆಚ್ಚು ಅರ್ಹರಾಗಿರುವವರು ಯಾರು?"ಎಂದು ವಿಚಾರಿಸಿದನು. ಅದಕ್ಕುತ್ತರವಾಗಿ ಪ್ರವಾದಿ(ಸ) ಹೇಳಿದರು: "ನಿನ್ನ ತಾಯಿ." "ಆ ಬಳಿಕ ಯಾರು?" ಎಂದು ಆ ವ್ಯಕ್ತಿ ಕೇಳಿದನು. "ನಿನ್ನ ತಾಯಿ" ಎಂದು ಪ್ರವಾದಿ(ಸ) ಉತ್ತರಿಸಿದರು. "ಆ ಬಳಿಕ ಯಾರು?" ಎಂದು ಅವನು ವಿಚಾರಿಸಿದನು. "ನಿನ್ನ ತಾಯಿ" ಎಂದು ಪ್ರವಾದಿ(ಸ) ಹೇಳಿದರು. "ಆ ಬಳಿಕ ಯಾರು?" ಎಂದು ಆ ವ್ಯಕ್ತಿ ಮತ್ತೆ ಕೇಳಿದಾಗ ಪ್ರವಾದಿ(ಸ) ಹೇಳಿದರು: "ನಿನ್ನ ತಂದೆ." (ಬುಖಾರಿ, ಮುಸ್ಲಿಮ್ ವರದಿ-ಅಬೂ ಹುರೈರಾ(ರ))

 • ಕೋಮುವಾದ
  ismika28-06-2014

  ನಾನು ಪ್ರವಾದಿ(ಸ)ರೊಡನೆ ಕೋಮುವಾದ ಅಂದರೇನು ? ಎಂದು ಪ್ರಶ್ನಿಸಿದೆ. ಅದಕ್ಕವರು ಹೇಳಿದರು
  “ನೀನು ಅನ್ಯಾಯದ ವಿಷಯದಲ್ಲಿ ನಿನ್ನ ಜನಾಂಗಕ್ಕೆ ಸಹಾಯ ಮಾಡಿದರೆ ಅದುವೇ ಕೋಮುವಾದ.”
  (ವಾಯಿಲ್ ಬಿನ್ ಅಸ್ಕ‌ಅ-ಅಬೂದಾವೂದ್)

 • ಕರುಣೆ
  ismika28-06-2014

  “ಯಾರು ಜನರ ಮೇಲೆ ಕರುಣೆ ತೋರುವುದಿಲ್ಲವೋ ಅವರ ಮೇಲೆ ಅಲ್ಲಾಹನು ಕರುಣೆ ತೋರುವುದಿಲ್ಲ.”
  (ಅಬ್ದುಲ್ಲಾ ಬಿನ್ ಅಮ್ರ್(ರ)-ಅಬೂದಾವೂದ್, ತಿರ್ಮಿದಿ)

 • ನಮ್ಮವನಲ್ಲ
  ismika28-06-2014

  “ಕಿರಿಯರ ಮೇಲೆ ಕರುಣೆ ತೋರದ ಹಾಗೂ ಹಿರಿಯರನ್ನು ಗೌರವಿಸದವನು ನಮ್ಮವನಲ್ಲ.”
  (ಅಬ್ದುಲ್ಲಾ ಬಿನ್ ಅಮ್ರ್(ರ)-ತಿರ್ಮಿದಿ)

 • ಲಂಚ
  ismika28-06-2014

  “ಅಲ್ಲಾಹನ ಸಂದೇಶವಾಹಕರು ಲಂಚ ಪಡೆಯುವವನನ್ನೂ, ಲಂಚ ಕೊಡುವವನನ್ನೂ ಶಪಿಸಿರುತ್ತಾರೆ.”
  (ಅಬ್ದುಲ್ಲಾ ಬಿನ್ ಅಮ್ರ್(ರ) ಅಬೂದಾವೂದ್, ಇಬ್ನುಮಾಜ, ತಿರ್ಮಿದಿ)

 • ಶ್ರೀಮಂತಿಕೆ
  ismika28-06-2014

  “ಶ್ರೀಮಂತಿಕೆ ಎಂಬುದು ಸಂಪತ್ ಸೌಕರ್ಯಗಳ ಆಧಿಕ್ಯದ ಹೆಸರಲ್ಲ. ಮನಸ್ಸಿನ ಶ್ರೀಮಂತಿಕೆಯೇ
  ನಿಜವಾದ ಶ್ರೀಮಂತಿಕೆ.” (ಹ. ಅಬೂಹುರೈರಾ(ರ)-ಬುಖಾರಿ, ಮುಸ್ಲಿಂ.)

 • ಮರ್ದಿತ
  ismika28-06-2014

  “ಮರ್ದಿತನ ಪ್ರಾರ್ಥನೆಯ ಬಗ್ಗೆ ಎಚ್ಚರಿಕೆ ವಹಿಸಿರಿ, ಅವನ ಮತ್ತು ಅಲ್ಲಾಹನ ಮಧ್ಯೆ ಯಾವುದೇ ತಡೆಯಿಲ.”
  (ಇಬ್ನು ಅಬ್ಬಾಸ್(ರ)-ಬುಖಾರಿ, ಮುಸ್ಲಿಮ್)

 • ಅಕ್ರಮಿ
  ismika28-06-2014

  “ಅಕ್ರಮಿಯನ್ನು ನೋಡಿಯೂ ಜನರು ಅವನನ್ನು ತಡೆಯದಿದ್ದರೆ, ಅಲ್ಲಾಹನು ಅವರನ್ನು ಒಟ್ಟಿಗೆ ಶಿಕ್ಷಿಸುವನು.”
  (ಅಬೂ ದಾವೂದ್)

 • ಕೋಮು ಪಕ್ಷಪಾತ
  ismika28-06-2014

  “ಕೋಮು ಪಕ್ಷಪಾತದ ಕಡೆಗೆ ಕರೆ ನೀಡುವವನು ನಮ್ಮವನಲ್ಲ. ಕೋಮು ಭಾವನೆಯೊಂದಿಗೆ ಯುದ್ಧ ಮಾಡುವವನೂ ನಮ್ಮವನಲ್ಲ. ಕೋಮು ಪಕ್ಷಪಾತದೊಂದಿಗೆ ಸಾಯುವವನೂ ನಮ್ಮವನಲ್ಲ.”
  (ಜುಬೈರ್ ಬಿನ್ ಮುತ್‌ಇಮ್(ರ)-ಅಬೂ ದಾವೂದ್)

  ನಾನು ಪ್ರವಾದಿ(ಸ)ರವರಲ್ಲಿ ಕೇಳಿದೆ, ನನ್ನವರನ್ನು ಪ್ರೀತಿಸುವುದು ಕೋಮು ಪಕ್ಷಪಾತವೇ? ಪ್ರವಾದಿ(ಸ) ಹೇಳಿದರು- “ಅಲ್ಲ, ಅದು ಪಕ್ಷಪಾತವಲ್ಲ. ಒಬ್ಬನು ತನ್ನವರಿಗೆ ಅವರ ಅಕ್ರಮ ಕಾರ್ಯಗಳಲ್ಲೂ ನೆರವಾಗುವುದು ಕೋಮು ಪಕ್ಷಪಾತವಾಗಿದೆ.” (ಅಬೂ ಫಸೀಲ(ರ)-ಮಿಶ್ಕಾತ್)

  “ಮಿಥ್ಯ ಮತ್ತು ನಿಷಿದ್ಧ ಕಾರ್ಯಗಳಲ್ಲಿ ತಮ್ಮ ಗೋತ್ರ (ಕುಲ, ಕುಟುಂಬ, ಜನಾಂಗ)ವನ್ನು ಬೆಂಬಲಿಸುವವನ
  ಉದಾಹರಣೆಯು, ಬಾವಿಗೆ ಬೀಳುವ ಒಂಟೆಯ ಬಾಲ ಹಿಡಿದವನಂತಿದೆ. ಒಂಟೆಯೊಂದಿಗೆ ಅವನೂ ಬಾವಿಯಲ್ಲಿ
  ಬೀಳುತ್ತಾ.” (ಇಬ್ನು ಮಸ್‌ವೂದ್(ರ)-ಅಬೂ ದಾವುದ್)

 • ಬಡ್ಡಿ
  ismika28-06-2014

  ಪ್ರವಾದಿ(ಸ)ರು ಬಡ್ಡಿ ತಿನ್ನುವವನನ್ನೂ, ಬಡ್ಡಿ ತಿನ್ನಿಸುವವನನ್ನೂ, ಬಡ್ಡಿಗೆ ಸಾಕ್ಷಿ ನಿಲ್ಲುವ ಇಬ್ಬರನ್ನೂ ಮತ್ತು ಬಡ್ಡಿಯ ದಾಖಲೆ ಪತ್ರ ಬರೆಯುವವನನ್ನೂ ಶಪಿಸಿದ್ದಾರೆ. (ಅಬ್ದುಲ್ಲಾ ಬಿನ್ ಮಸ್‌ವೂದ್(ರ)- ಬುಖಾರಿ, ಮುಸ್ಲಿಮ್)

 • ಸಹೋದರರು
  ismika28-06-2014

  ಪ್ರವಾದಿವರ್ಯರು(ಸ)ರು, “ಎಲ್ಲ ಮಾನವರೂ ಪರಸ್ಪರ ಸಹೋದರರೆಂದು ಸಾಕ್ಷ್ಯ ನುಡಿದಿದ್ದಾರೆ, ಕೇವಲ ಮುಸ್ಲಿಮರಲ.” (ಅಬೂ ದಾವೂದ್)

 • ಸ್ವರ್ಗದ ಗಂಧ
  ismika28-06-2014

  “ಸಂರಕ್ಷಣೆಯ ವಾಗ್ದಾನ ನೀಡಲಾಗಿರುವ ಒರ್ವ ಮುಸ್ಲಿಮೇತರನನ್ನು ಕೊಂದವನು, ಸ್ವರ್ಗದ ಗಂಧವನ್ನೂ ಅನುಭವಿಸಲಾರನು. ವಸುತಃ ಅದು ೪೦ ವರ್ಷಗಳಷ್ಟು ದೂರ ತಲುಪುತ್ತದೆ.” (ಇಬ್ನು ಉಮರ್(ರ)-ಬುಖಾರಿ)

 • ಅಕ್ರಮ
  ismika28-06-2014

  “ಒಬ್ಬನು ಯಾರದಾದರೂ ಗೇಣಗಲದಷ್ಟು ಭೂಮಿಯನ್ನು ಅಕ್ರಮವಾಗಿ ಕಬಳಿಸಿಕೊಂಡರೆ, ಕಿಯಾಮತ್‌ನಂದು ಏಳು ಭೂಮಿಗಳ ಉರುಳನ್ನು ಅವನ ಕೊರಳಿಗೆ ಹಾಕಲಾಗುವುದು.
  (ಸ‌ಈದ್ ಬಿನ್ ಝೈದ್(ರ)-ಬುಖಾರಿ,ಮುಸ್ಲಿಮ್)

 • ಸೇವಕರು
  ismika28-06-2014

  “ಸೇವಕರು, ಅಲ್ಲಾಹನು ನಿಮ್ಮ ಅಧೀನಗೊಳಿಸಿರುವ ನಿಮ್ಮ ಸಹೋದರರಾಗಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಅಧೀನವಿರುವ ಸಹೋದರನಿಗೆ ತಾನು ತಿನ್ನುವುದನ್ನೇ ತಿನ್ನಿಸಬೇಕು. ತಾನು ತೊಡುವುದನ್ನೇ ತೊಡಿಸಬೇಕು. ಮತ್ತು (ನೆನಪಿರಲಿ) ಆತನಿಗೆ ಶಕ್ತಿ ಮೀರಿದ ಕೆಲಸವನ್ನು ಕೊಡಬಾರದು; ಒಂದು ವೇಳೆ ಕೊಟ್ಟರೆ ನೀವು ಆತನಿಗೆ ಸಹಾಯ ಮಾಡಲೇ ಬೇಕು.” (ಅಬೂದರ್ರ್(ರ)-ಬುಖಾರಿ, ಮುಸ್ಲಿಮ್)

 • ಹೆಣ್ಣು ಮಕ್ಕಳು
  ismika28-06-2014

  “ಹೆಣ್ಣು ಮಕ್ಕಳ ಮೂಲಕ ಪರೀಕ್ಷೆಗೊಳಗಾಗಿ, ತರುವಾಯ ಅವರೊಂದಿಗೆ ಸದ್ವರ್ತನೆ ತೋರುವ ವ್ಯಕ್ತಿಯ ಪಾಲಿಗೆ ಆತನ ಹೆಣ್ಣು ಮಕ್ಕಳು ಆತನನ್ನು ನರಕದಿಂದ ರಕ್ಷಿಸುವ ಗುರಾಣಿಗಳಾಗುವರು.” (ಹ. ಆಯಿಶಾ(ರ)-ಮುಸ್ಲಿಮ್)

 • ಶ್ರೇಷ್ಠ ಉಡುಗೊರೆ
  ismika28-06-2014

  “ಯಾವ ತಂದೆಯೂ ತನ್ನ ಮಕ್ಕಳಿಗೆ ಅತ್ತ್ಯುತ್ತಮ ವಿದ್ಯಾಭ್ಯಾಸಕ್ಕಿಂತ ಶ್ರೇಷ್ಠ ಉಡುಗೊರೆಯನ್ನು ಕೊಟ್ಟಿಲ್ಲ.”
  (ತಿರ್ಮಿದಿ, ಬೈಹಕಿ )

 • ಸಚ್ಚರಿತ ಸ್ರೀ
  ismika28-06-2014

  “ಈ ಲೋಕವು ಒಂದು ಸಂಪತ್ತಾಗಿದೆ. ಮತ್ತು ಸಚ್ಚರಿತ ಸ್ರೀಯು ಈ ಲೋಕದ ಅತ್ತ್ಯುತ್ತಮ ಸಂಪತ್ತಾಗಿರುವಳು.” (ಅಬ್ದುಲ್ಲಾ ಬಿನ್ ಉಮರ್(ರ)-ಮುಸ್ಲಿಮ್ )
  ನಾಲ್ಕು ವಿಷಯ
  “ನಾಲ್ಕು ವಿಷಯಗಳ ಬಗ್ಗೆ ವಿಚಾರಣೆಗೊಳಪಡುವ ತನಕ ಯಾವ ಮನುಷ್ಯನೂ ಪುನರುತ್ಥಾನದ ದಿವಸದಂದು ಮುಂದೆ ಸಾಗಲಾರ
  ಅವನ ಆಯುಷ್ಯದ ಕುರಿತು ಅದನ್ನು ಅವನು ಯಾವ ಕೆಲಸದಲ್ಲಿ ಕೊನೆಗೊಳಿಸಿದನೆಂದು.
  ಅವನ ಕರ್ಮದ ಕುರಿತು, ಅವನು ಏನು ಕರ್ಮ ಮಾಡಿದನೆಂದು
  ಮತ್ತು ಅವನ ಸಂಪತ್ತಿನ ಕುರಿತು, ಅದನ್ನು ಅವನು ಎಲ್ಲಿಂದ ಸಂಪಾದಿಸಿದ, ಎಲ್ಲಿ ಅದನ್ನು ವ್ಯಯಿಸಿದನೆಂದು.
  ಮತ್ತು ಅವನ ಶರೀರದ ಕುರಿತು - ಅದನ್ನು ಅವನು ಯಾವ ಕೆಲಸದಲ್ಲಿ ಸವೆಯಿಸಿದನೆಂದು.”
  (ಅಬೂ ಬರ್ದಾ(ರ)-ತಿರ್ಮಿದಿ)

 • ನಿಷಿದ್ದ ಆಹಾರ
  ismika28-06-2014

  “ನಿಷಿದ್ದ ಆಹಾರದಿಂದ ಪೋಷಿಸಲ್ಪಟ್ಟ ಶರೀರವು ಸ್ವರ್ಗವನ್ನು ಪ್ರವೇಶಿಸಲಾರದು.”
  (ಹ. ಅಬೂಬಕ್ಕರ್(ರ)-ಮಿಷ್ಕಾತ್, ಬೈಹಕಿ )

 • ಚಾಡಿಕೋರ
  ismika28-06-2014

  “ಚಾಡಿಕೋರನು ಸ್ವರ್ಗದೊಳಗೆ ಪ್ರವೇಶಿಸಲಾರನು.” (ಹುದೈಫಃ(ರ)-ಬುಖಾರಿ,ಮುಸ್ಲಿಮ್)

 • ಸ್ವರ್ಗವನ್ನು ಪ್ರವೇಶಿಸಲಾರನು
  ismika28-06-2014

  “ಕುಟುಂಬ ಸಂಬಂಧ ಮುರಿವವನು ಸ್ವರ್ಗವನ್ನು ಪ್ರವೇಶಿಸಲಾರನು”
  (ಹ, ಜುಬೈರ್ ಬಿನ್ ಮುತ್‌ಇಮ್(ರ)-ಮುಸ್ಲಿಮ್)

 • ಜನ ಸೇವೆ
  ismika28-06-2014

  ಪ್ರವಾದಿವರ್ಯ(ಸ)ರು ಹೀಗೆಂದಿರುವರು:
  "ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ಅಲ್ಲಾಹನು ಅವನ ಕೃತ್ಯವನ್ನು ಗೌರವಿಸಿದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು."
  (ಹ.ಅಬೂ ಹುರೈರಃ(ರ)-ಮುಸ್ಲಿಮ್)

 • ಗುರುವಿನ ಆದರ
  ismika25-09-2014

  "ಧರ್ಮ ಜ್ಞಾನವನ್ನು ಸಂಪಾದಿಸಿರಿ.

  ಜ್ಞಾನಕ್ಕಾಗಿ ಘನತೆ ಮತ್ತು ಗಾಂಭೀರ್ಯವನ್ನು ಕಲಿಯಿರಿ.

  ಯಾರಿಂದ ಜ್ಞಾನ ಕಲಿಯುವಿರೋ ಅವರೊಂದಿಗೆ ವಿನಯದಿಂದ ವರ್ತಿಸಿರಿ."

  (ಪ್ರವಾದಿ ಮುಹಮ್ಮದ್(ಸ))

 • ಕಾರ್ಮಿಕನ ಮಜೂರಿ
  ismika25-09-2014

  "ಕಾರ್ಮಿಕನ ಬೆವರು ಆರುವುದಕ್ಕೆ ಮುಂಚಿತವಾಗಿ ಅವನ ವೇತನವನ್ನು ಕೊಟ್ಟು ಬಿಡಿರಿ" (ಪ್ರವಾದಿ ಮುಹಮ್ಮದ್(ಸ))

 • ದಾನವೆನಿಸುವುದು
  ismika25-09-2014

  ಒಬ್ಬ ವಿಶ್ವಾಸಿಯು ಒಂದು ಗಿಡ ನೆಟ್ಟರೆ ಮತ್ತು ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು.

  -ಪ್ರವಾದಿ ಮುಹಮ್ಮದ್(ಸ)

 • ಸುಳ್ಳು ಆಣೆ
  ismika25-09-2014

  ಸುಳ್ಳು ಆಣೆಗಳ ಮೂಲಕ ಒಬ್ಬನು ಇನ್ನೊಬ್ಬನ ಹಕ್ಕನ್ನು ಕಬಳಿಸಿದರೆ ಅಲ್ಲಾಹನು ಅವನಿಗೆ ನರಕಾಗ್ನಿಯನ್ನು ಕಡ್ಡಾಯಗೊಳಿಸಿರುವನು.

  ಅದು ಹಲ್ಲುಜ್ಜುವ ಒಂದು ಮರದ ತುಂಡಾದರೂ ಸರಿಯೇ. - ಪ್ರವಾದಿ ಮುಹಮ್ಮದ್(ಸ)

 • ಉತ್ತಮ ಆಹಾರ
  ismika25-09-2014

  ತನ್ನ ಕೈಯ ದುಡಿಮೆಯಿಂದ ಉಣ್ಣುವವನಿಗಿಂತ ಉತ್ತಮ ಆಹಾರ ಯಾರೂ ತಿಂದಿಲ್ಲ.

  -ಪ್ರವಾದಿ ಮುಹಮ್ಮದ್(ಸ)

 • ಬಿಕ್ಷಾಟನೆ
  ismika25-09-2014

  ಒಬ್ಬ ವ್ಯಕ್ತಿ ಜನರ ಮುಂದೆ ಕೈ ಎತ್ತಿ ಯಾಚಿಸಲಾರನೆಂದು ನನಗೆ ಭರವಸೆ ಕೊಟ್ಟರೆ ನಾನು ಅವರಿಗೆ ಸ್ವರ್ಗದ ಭರವಸೆ ನೀಡುತ್ತೇನೆ.

  ನಿಮ್ಮ ಪೈಕಿ ಯಾರಾದರೂ ಕಟ್ಟಿಗೆ ತಂದು ಮಾರಿ ಸಂಪಾದನೆ ಮಾಡುವುದು ಯಾರದಾದರೂ ಮುಂದೆ ಯಾಚಿಸುವುದಕ್ಕಿಂತ ಉತ್ತಮವಾಗಿದೆ. - (ಪ್ರವಾದಿ ಮುಹಮ್ಮದ್(ಸ)

 • ವ್ಯಾಪಾರ
  ismika25-09-2014

  ಫಲಗಳು ಪಕ್ವವಾಗದೆ ಅವುಗಳ ವ್ಯಾಪಾರ ಮಾಡಬೇಡಿರಿ. ಯಾಕೆಂದರೆ ಪಕ್ವವಾಗುವ ಮೊದಲೇ ಫಲಗಳು ನಾಶಹೊಂದಿದರೆ ಖರೀದಿಸಿದವ ಸಂಕಷ್ಟಕ್ಕೆ ಒಳಗಾಗುವನು. - ಪ್ರವಾದಿ ಮುಹಮ್ಮದ್(ಸ)

  ಯಾರು ಬೆಲೆಯೇರಿಕೆಯನ್ನು ಬಯಸಿ ಧಾನ್ಯವನ್ನು ತಡೆದಿರಿಸುತ್ತಾರೋ ಅವರು ಅಪರಾಧಿಯಾಗಿದ್ದಾರೆ. -ಪ್ರವಾದಿ ಮುಹಮ್ಮದ್(ಸ)

 • ಅಮಲು ಪದಾರ್ಥ
  ismika25-09-2014

  ಮದ್ಯಪಾನ ಮಾಡಬೇಡಿ, ಜೂಜಾಡಬೇಡಿ. ಅಮಲು ಉಂಟುಮಾಡುವ ಪ್ರತಿಯೊಂದು ವಸ್ತುವೂ ನಿಷಿದ್ಧವಾಗಿದೆ. - ಪ್ರವಾದಿ ಮುಹಮ್ಮದ್(ಸ)

  ಯಾವುದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸದರೆ ಅಮಲು ಉಂಟಾಗುತ್ತದೋ ಅದರ ಸಣ್ಣ ಪ್ರಮಾಣವೂ ನಿಷಿದ್ಧವಾಗಿದೆ. - ಪ್ರವಾದಿ ಮುಹಮ್ಮದ್(ಸ)

 • ಶಿಕ್ಷಣ ಮತ್ತು ತರಬೇತಿ
  ismika25-09-2014

  "ತಂದೆಯು ತನ್ನ ಮಕ್ಕಳಿಗೆ ಕೊಡುವ ವಸ್ತುಗಳ ಪೈಕಿ ಅತ್ಯುತ್ತಮ ವಸ್ತುವೆಂದರೆ ಅವರಿಗೆ ಉತ್ತಮವಾದ ಶಿಕ್ಷಣ ಮತ್ತು ತರಬೇತಿ." -ಪ್ರವಾದಿ ಮುಹಮ್ಮದ್(ಸ)

 • ಅಸೂಯೆ
  ismika25-09-2014

  ಅಸೂಯೆಯಿಂದ ದೂರವಿರಿ. ಏಕೆಂದರೆ ಬೆಂಕಿಯು ಕಟ್ಟಿಗೆಯನ್ನು ನುಂಗುವಂತೆ ಅಸೂಯೆಯು ಒಳಿತುಗಳನ್ನು ನುಂಗಿ ಬಿಡುತ್ತದೆ. -ಪ್ರವಾದಿ ಮುಹಮ್ಮದ್(ಸ)

   

  ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೇಳಿದರು - ಓ ನನ್ನ ಮಗನೇ! ನಿನಗೆ ಸಾಧ್ಯವಾದರೆ ನೀನು ನಿನ್ನ ಮನದಲ್ಲಿ ಯಾರ ಬಗ್ಗೆಯೂ ಅಸೂಯೆಯಿಲ್ಲದ ಸ್ಥಿತಿಯಲ್ಲಿ ಬೆಳಗ್ಗೆ ಮತ್ತು ಸಂಜೆ ಮಾಡು. ಅನಂತರ ಹೇಳಿದರು ಓ ನನ್ನ ಮಗನೇ! ಇದು ನನ್ನ ಮಾದರಿ ಆಗಿದೆ. ಯಾರು ನನ್ನ ಮಾದರಿಯನ್ನು ಪ್ರೀತಿಸುತ್ತಾನೋ ಅವನು ನನ್ನನ್ನು ಪ್ರೀತಿಸಿದನು. ಮತ್ತು ಯಾರು ನನ್ನನ್ನು ಪ್ರೀತಿಸುತ್ತಾನೋ ಅವನು ಸ್ವಗ೯ದಲ್ಲಿ ನನ್ನ ಜೊತೆಗಿರುವನು. (ತಿಮಿ೯ದಿ)

 • ಸಂಕಲ್ಪಶುದ್ಧಿ
  ismika17-11-2014

  ಹ. ಉಮರ್ ಬಿನ್ ಖತ್ತಾಬ್(ರ) ಹೇಳುತ್ತಾರೆ-

  ಪ್ರವಾದಿ(ಸ) ಹೇಳಿದರು: ಕರ್ಮಗಳು ಸಂಕಲ್ಪವನ್ನು ಅವಲಂಬಿಸಿವೆ. ಮಾನವನಿಗೆ ಅವನು ಸಂಕಲ್ಪ ಮಾಡಿದುದು ಮಾತ್ರ ಸಿಗುವುದು. ಯಾರು ಅಲ್ಲಾಹ್ ಮತ್ತು ರಸೂಲರಿಗಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ನೈಜ ಹಿಜ್ರತ್ ಆಗಿರುವುದು. ಯಾರು ಲೌಕಿಕ ಸಂಪತ್ತು ಗಳಿಸಲಿಕ್ಕಾಗಿ ಅಥವಾ ಯಾವುದೇ ಸ್ತ್ರೀಯೊಂದಿಗೆ ವಿವಾಹ ಮಾಡಲಿಕ್ಕಾಗಿ ಹಿಜ್ರತ್ ಮಾಡಿದನೋ ಅವನ ಹಿಜ್ರತ್ ಲೌಕಿಕ ಸಂಪತ್ತು ಅಥವಾ ಸ್ತ್ರೀಗಾಗಿರುವುದು.

  ಟಿಪ್ಪಣಿ: ಇದು ಸಂಸ್ಕರಣೆಯ ಬಾಬ್ತು ಇರುವ ಅತ್ಯಂತ ಮಹತ್ವದ ಹದೀಸ್ ಆಗಿದೆ. ಪ್ರವಾದಿವರ್ಯರ(ಸ) ಮಾತಿನ ಇಂಗಿತವೇನೆಂದರೆ ಸತ್ಕರ್ಮಗಳಿಗೆ ಪುಣ್ಯ ಸಿಗಬೇಕಾದರೆ ಅದಕ್ಕೆ ಸಂಕಲ್ಪಶುದ್ಧಿ ಅನಿವಾರ್ಯ. ಸಂಕಲ್ಪ ಸರಿಯಾಗಿದ್ದರೆ ಪುಣ್ಯ ಸಿಗುವುದು, ಅನ್ಯಥಾ ಸಿಗಲಾರದು. ಯಾವ ಕರ್ಮವೇ ಆಗಲಿ ಅದು ಎಷ್ಟೇ ಉತ್ತಮವಾಗಿದ್ದರೂ ಅದರ ಪ್ರೇರಕ ಶಕ್ತಿ ಅಲ್ಲಾಹನ ಸಂಪ್ರೀತಿಯ ಹೊರತು ಬೇರೇನಾದರೂ ಆದರೆ ಪರಲೋಕದ ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆಯೇ ಇರಲಾರದು. ಅಲ್ಲಿ ಅದು ಖೋಟಾ ನಾಣ್ಯವೆಂದು ಪರಿಗಣಿಸಲ್ಪಡುವುದು. ಈ ವಾಸ್ತವಿಕತೆಯನ್ನು ಪ್ರವಾದಿವರ್ಯರು(ಸ) ಹಿಜ್ರತ್‍ನ(ವಲಸೆ) ಉದಾಹರಣೆ ಕೊಟ್ಟು ಸ್ಪಷ್ಟಪಡಿಸಿದ್ದಾರೆ. ಹಿಜ್ರತ್ ಎಂಬುದು ಮಹಾ ಪುಣ್ಯಕಾರ್ಯವಾಗಿದೆ. ಆದರೆ ಅದರ ಪ್ರೇರಕ ಶಕ್ತಿ ಸರಿಯಾಗಿಲ್ಲದಿದ್ದರೆ, ಅಲ್ಲಾಹನ ಸಂಪ್ರೀತಿಯ ಹೊರತಾದ ಬೇರೆ ಯಾವುದೇ ಉದ್ದೇಶವಿದ್ದರೆ, ಆತನು ಪರಲೋಕದಲ್ಲಿ ಅದರ ಪುಣ್ಯದಿಂದ ವಂಚಿತನಾಗುವನು. ಮಾತ್ರವಲ್ಲ ಅವನ ವಿರುದ್ಧ ಮೋಸ, ವಂಚನೆಯ ಮೊಕದ್ದಮೆ ಹೂಡಿದರೂ ಅಚ್ಚರಿಯಿಲ್ಲ.

  ಪ್ರವಾದಿ(ಸ) ಹೀಗೆ ಹೇಳಿರುವುದಾಗಿ ಅಬೂಹುರೈರಾ(ರ) ಹೇಳುತ್ತಾರೆ: ನಿರ್ಣಾಯಕ ದಿನದಂದು ಪ್ರಪ್ರಥಮವಾಗಿ ಜಿಹಾದ್‍ನಲ್ಲಿ ತನ್ನ ಪ್ರಾಣವನ್ನು ಅರ್ಪಿಸಿದ ಒಬ್ಬ ವ್ಯಕ್ತಿಯ ವಿರುದ್ಧ ತೀರ್ಪು ನೀಡಲಾಗುವುದು. ಅವನನ್ನು ನ್ಯಾಯಾಲಯದಲ್ಲಿ ಹಾಜರುಗೊಳಿಸಲಾಗುವುದು. ಅನಂತರ ಅಲ್ಲಾಹನು ಅವನಿಗೆ ತನ್ನ ಕೊಡುಗೆಗಳನ್ನು ನೆನಪಿಸಿಕೊಡುವನು. ಅವನು ಅದನ್ನೆಲ್ಲ ಒಪ್ಪಿಕೊಳ್ಳುವನು. ಆಗ ಅಲ್ಲಾಹನು ಅವನೊಂದಿಗೆ ಕೇಳುವನು- ನೀನು ನನ್ನ ಅನುಗ್ರಹಗಳನ್ನು ಪಡೆದು ಏನು ಮಾಡಿದೆ? ಅವನು ಹೇಳುವನು- ನಾನು ನಿನ್ನ ಸಂಪ್ರೀತಿಗಾಗಿ ನಿನ್ನ ಧರ್ಮದ ವೈರಿಗಳೊಂದಿಗೆ ಹೋರಾಡಿ ಕಟ್ಟಕಡೆಗೆ ಪ್ರಾಣಾರ್ಪಣೆಯನ್ನೇ ಮಾಡಿದೆ. ಆಗ ಅಲ್ಲಾಹನು ಹೇಳುವನು- ನೀನು ಸುಳ್ಳು ಹೇಳುತ್ತಿರುವೆ. ಜನರು ನಿನ್ನನ್ನು ಪರಾಕ್ರಮಿಯೆಂದು ಕರೆಯಲಿಕ್ಕಾಗಿ ನೀನು ಯುದ್ಧಮಾಡಿದೆ. ಆದುದರಿಂದ ನಿನಗೆ ನಿನ್ನ ಪ್ರತಿಫಲ ಭೂಲೋಕದಲ್ಲೇ ಸಿಕ್ಕಿತು. ಅನಂತರ ಇವನನ್ನು ಮೂತಿ ಹಿಡಿದೆಳೆದು ನರಕಕ್ಕೆ ಹಾಕಿರಿ ಎಂದು ಆಜ್ಞಾಪಿಸಲಾಗುವುದು. ಹಾಗೆಯೇ ಅವನನ್ನು ನರಕಕ್ಕೆ ಹಾಕಲಾಗುವುದು.
  ತರುವಾಯ ಇನ್ನೊಬ್ಬ ವ್ಯಕ್ತಿಯನ್ನು ಅಲ್ಲಾಹನ ನ್ಯಾಯಾಲಯದ ಮುಂದೆ ತರಲಾಗುವುದು. ಅವನೊಬ್ಬ ಕುರ್‍ಆನಿನ ವಿದ್ವಾಂಸನಾಗಿರುವನು. ಅವನಿಗೂ ಅಲ್ಲಾಹನು ತನ್ನ ಕೊಡುಗೆಗಳನ್ನು ನೆನಪಿಸುವನು. ಅವನು ಅವುಗಳನ್ನು ಒಪ್ಪಿಕೊಳ್ಳುವನು. ಆಗ ಅಲ್ಲಾಹನು ಅವನೊಂದಿಗೆ ಕೇಳುವನು, ಈ ಅನುಗ್ರಹಗಳನ್ನು ಪಡೆದು ನೀನೇನು ಮಾಡಿದೆ? ಅವನು ಹೇಳುವನು- ದೇವಾ! ನಾನು ನಿನಗಾಗಿ ನಿನ್ನ ಧರ್ಮವನ್ನು ಕಲಿತೆ, ಪವಿತ್ರ ಕುರ್‍ಆನನ್ನು ಆಳವಾಗಿ ಅಭ್ಯಸಿಸಿದೆ ಮತ್ತು ಇತರರಿಗೆ ಅದನ್ನು ಕಲಿಸಿದೆ. ಆಗ ಅಲ್ಲಾಹನು ಹೇಳುವನು- ನೀನು ಸುಳ್ಳು ಹೇಳುತ್ತಿರುವೆ. ನೀನು ಧರ್ಮವನ್ನು ಕಲಿತದ್ದು, ಕಲಿಸಿದ್ದು ಮತ್ತು ಪವಿತ್ರ ಕುರ್‍ಆನನ್ನು ಅಭ್ಯಸಿಸಿದ್ದು ಜನರು ನಿನ್ನನ್ನು ವಿದ್ವಾಂಸನೆಂದೂ ವ್ಯಾಖ್ಯಾನಕಾರನೆಂದೂ ಹೇಳಬೇಕೆಂಬ ಉದ್ದೇಶದಿಂದಾಗಿತ್ತು. ನಿನ್ನ ಉದ್ದೇಶಿತ ಪ್ರತಿಫಲ ನಿನಗೆ ಭೂಲೋಕದಲ್ಲೇ ಸಿಕ್ಕಿತು. ಅನಂತರ, ಇವನನ್ನು ಮುಖ ಹಿಡಿದೆಳೆದು ನರಕಕ್ಕೆ ಹಾಕಿರಿ ಎಂದು ಆಜ್ಞಾಪಿಸಲಾಗುವುದು. ಹಾಗೆಯೇ ಅವನನ್ನು ಎಳೆದುಕೊಂಡು ನರಕಕ್ಕೆ ಹಾಕಲಾಗುವುದು.
  ಇನ್ನು ಮೂರನೆಯದಾಗಿ, ಅಲ್ಲಾಹನು ಭೂಲೋಕದಲ್ಲಿ ಅಪಾರ ಸಿರಿಸಂಪತ್ತನ್ನು ನೀಡಿದ ವ್ಯಕ್ತಿಯನ್ನು ಹಾಜರು ಪಡಿಸಲಾಗುವುದು. ಅವನಿಗೂ ಅವನಿಗೆ ನೀಡಲಾದ ಅನುಗ್ರಹ ಗಳನ್ನು ನೆನಪಿಸಲಾಗುವುದು. ಅವನು ಅವುಗಳನ್ನು ಒಪ್ಪಿಕೊಳ್ಳುವನು. ಅನಂತರ ಅವನೊಂದಿಗೆ, ನೀನೇನು ಮಾಡಿ ಬಂದಿರುವೆ? ಎಂದು ಕೇಳಲಾಗುವುದು. ಅವನು ಹೇಳುವನು- ಯಾವ ವಿಷಯಗಳಲ್ಲಿ ನೀನು ಖರ್ಚು ಮಾಡಬೇಕೆಂದು ವಿಧಿಸಿದ್ದೆಯೋ ಅವುಗಳಲ್ಲಿ ನಿನ್ನ ಸಂಪ್ರೀತಿಗಾಗಿ ನಾನು ಖರ್ಚುಮಾಡಿದೆ. ಆಗ ಅಲ್ಲಾಹನು, ಅದನ್ನು ಅಲ್ಲಗಳೆಯುವನು ಮತ್ತು 'ಜನರು ನಿನ್ನನ್ನು ಕೊಡುಗೈ ದಾನಿ ಎನ್ನಬೇಕೆಂಬ ಉದ್ದೇಶದಿಂದ ನೀನು ಖರ್ಚುಮಾಡಿದೆ. ನಿನ್ನ ಉದ್ದೇಶದ ಪ್ರತಿಫಲ ನಿನಗೆ ಸಿಕ್ಕಿದೆ' ಎನ್ನುವನು. ತರುವಾಯ ಅಲ್ಲಾಹನ ಆಜ್ಞೆಯ ಮೇರೆಗೆ ಅವನನ್ನೂ ಮುಖ ಹಿಡಿದೆಳೆದು ನರಕಕ್ಕೆ ಹಾಕಲಾಗುವುದು.

  ಟಿಪ್ಪಣಿ: ಈ ಹದೀಸ್ ಹಿಂದಿನ ಹದೀಸ್‍ನ ವಿವರಣೆಯಾಗಿದೆ. ಹಿಜ್ರತ್, ಜಿಹಾದ್, ಧಾರ್ಮಿಕ ವಿದ್ಯೆ ಕಲಿಯುವುದು ಮತ್ತು ಕಲಿಸುವುದು, ದೇವಮಾರ್ಗದಲ್ಲಿ ವೆಚ್ಚಮಾಡುವುದು ಇತ್ಯಾದಿಗಳು ಉನ್ನತ ಮಟ್ಟದ ಪುಣ್ಯ ಕಾರ್ಯಗಳಾಗಿವೆ. ಆದರೆ ಉದ್ದೇಶ ಶುದ್ದಿ ಇಲ್ಲದಿದ್ದರೆ ಪರಲೋಕದಲ್ಲಿ ಪುಣ್ಯ ನಿಷ್ಫಲವಾಗುವುದು. ಮಾತ್ರವಲ್ಲ, ಅವುಗಳಿಂದಾಗಿಯೇ ನರಕದ ಬೆಂಕಿಯಲ್ಲಿ ಉರಿಯಬೇಕಾದೀತು.

  ಅಬೂ ಉಮಾಮಾ(ರ)ರಿಂದ ವರದಿ: ಒಬ್ಬ ವ್ಯಕ್ತಿ ಪ್ರವಾದಿವರ್ಯರ(ಸ) ಬಳಿಗೆ ಬಂದು ಈ ರೀತಿ ಕೇಳಿದನು- ಒಬ್ಬನಿಗೆ ಪರಲೋಕದಲ್ಲಿ ಪುಣ್ಯ ದೊರಕಿಸಿಕೊಳ್ಳಲಿಕ್ಕಾಗಿ ಮತ್ತು ಈ ಲೋಕದಲ್ಲಿ ಹೆಸರು ಗಳಿಸಲಿಕ್ಕಾಗಿ ಜಿಹಾದ್ ಮಾಡಿದರೆ ಪುಣ್ಯ ಸಿಗುವುದೇ? ಪ್ರವಾದಿ(ಸ) ಹೇಳಿದರು- ಅವನಿಗೆ ಪರಲೋಕದಲ್ಲಿ ಏನೂ ದೊರೆಯಲಾರದು. ಅವನು ತನ್ನ ಪ್ರಶ್ನೆಯನ್ನು ಮೂರು ಬಾರಿ ಪುನರಾವರ್ತಿಸಿದನು. ಪ್ರವಾದಿ(ಸ) ಪ್ರತಿಯೊಂದು ಬಾರಿಯೂ ಅಂತಹ ವ್ಯಕ್ತಿಗೆ ಪರಲೋಕದಲ್ಲಿ ಯಾವುದೇ ಪುಣ್ಯ ಸಿಗಲಾರದು ಎಂದುತ್ತರಿಸಿದರು. ಕಟ್ಟಕಡೆಗೆ ಪ್ರವಾದಿವರ್ಯರು(ಸ) 'ಅಲ್ಲಾಹನು ಕೇವಲ ತನಗಾಗಿ ಮಾಡಿದ ಕರ್ಮವನ್ನಷ್ಟೆ ಸ್ವೀಕರಿಸುತ್ತಾನೆ ಮತ್ತು ಅವನ ಸಂಪ್ರೀತಿಯೇ ಅವನ ಕರ್ಮದ ಪ್ರೇರಣೆಯಾಗಿರಬೇಕು' ಎಂದರು. [ಅಬೂ ದಾವೂದ್, ನಸಾಈ]

  ಅನಸ್ ಬಿನ್ ಮಾಲಿಕ್(ರ) ವರದಿ ಮಾಡುತ್ತಾರೆ- ತಬೂಕ್ ಯುದ್ಧ ಮುಗಿದ ನಂತರ ನಾವು ಪ್ರವಾದಿ(ಸ) ಅವರೊಂದಿಗೆ ಮರಳಿದೆವು. (ಪ್ರಯಾಣದ ಮಧ್ಯೆ) ಪ್ರವಾದಿ(ಸ) ಹೀಗೆಂದರು- ನಮ್ಮ ಪೈಕಿ ಕೆಲವರು ಮದೀನಾದಲ್ಲಿ ಉಳಿದಿದ್ದಾರೆ. ಆದರೆ ವಾಸ್ತವದಲ್ಲಿ ಅವರು ಈ ಪ್ರಯಾಣದಲ್ಲಿ ನಮ್ಮೊಂದಿಗಿದ್ದಾರೆ. ನಾವು ಸಾಗುವ ಎಲ್ಲ ಬೆಟ್ಟ ಕಣಿವೆಗಳಲ್ಲೂ ಅವರು ನಮ್ಮೊಂದಿಗಿದ್ದಾರೆ. ಸೂಕ್ತ ಕಾರಣಗಳಿಂದಲೇ ಅವರು ತಡೆಹಿಡಿಯಲ್ಪಟ್ಟಿರುವರು. [ಬುಖಾರಿ]
  ಟಿಪ್ಪಣಿ: ಯಾರಾದರೂ ಒಂದು ಪುಣ್ಯ ಕಾರ್ಯವನ್ನು ಮಾಡಬೇಕೆಂದು ಬಯಸಿದ್ದು ಯಾವುದೇ ಕಾರಣದಿಂದ ಅದನ್ನು ಮಾಡಲಾಗದಿದ್ದರೆ, ಆ ವ್ಯಕ್ತಿ ಪರಲೋಕದಲ್ಲಿ ಅಲ್ಲಾಹನ ಬಳಿ ತನ್ನ ಕರ್ಮದ ಪುಣ್ಯದಿಂದ ವಂಚಿತನಾಗಲಾರನು ಎಂದು ಈ ಹದೀಸ್‍ನಿಂದ ತಿಳಿದುಬರುತ್ತದೆ.

  ಅಬೂದ್ದರ್ದಾ(ರ) ಅವರು ಪ್ರವಾದಿ(ಸ) ಅವರಿಂದ ಈ ರೀತಿ ಉಲ್ಲೇಖಿಸುತ್ತಾರೆ-
  ಪ್ರವಾದಿ(ಸ) ಹೇಳಿದರು- ಒಬ್ಬನು ತಾನು ತಹಜ್ಜುದ್ ನಮಾಝ್‍ಗಾಗಿ ಏಳುವೆನು ಎಂಬ ಸಂಕಲ್ಪದೊಂದಿಗೆ ಮಲಗಿದ್ದು, ಅವನಿಗೆ ಗಾಢನಿದ್ರೆ ಬಂದು ಅವನು ಮುಂಜಾನೆಯಾದ ಬಳಿಕವೇ ಎಚ್ಚರಗೊಂಡಿದ್ದರೆ ಅಂತಹ ವ್ಯಕ್ತಿಯ ಕರ್ಮಪತ್ರದಲ್ಲಿ ಆ ರಾತ್ರಿಯ ತಹಜ್ಜುದ್ ನಮಾಝ್ ದಾಖಲಿಸಲ್ಪಡುವುದು ಮತ್ತು ಈ ನಿದ್ರೆಯು ಅವನಿಗೆ ಅವನ ಪ್ರಭುವಿನ ವತಿಯಿಂದ ಉಡುಗೊರೆಯಾಗಿ ಲಭಿಸಿತು. [ನಸಾಈ, ಇಬ್ನುಮಾಜಃ]

  ಇಬ್ನು ಮಸ್‍ವೂದ್‍ರಿಂದ(ರ) ವರದಿ: ಪ್ರವಾದಿ(ಸ) ಹೇಳಿದರು- ಒಬ್ಬನು ಜನರ ಮುಂದೆ ಸರಿಯಾಗಿ ನಮಾಝ್ ಮಾಡುತ್ತಾನೆ (ಅರ್ಥಾತ್ ಭಯಭಕ್ತಿಯಿಂದ ರುಕೂಅ, ಸುಜೂದ್‍ಗಳನ್ನು ಸರಿಯಾಗಿ ಮಾಡುತ್ತಾನೆ) ಮತ್ತು ಏಕಾಂತದಲ್ಲಿ ನಮಾಝ್ ಮಾಡುವಾಗ ಸರಿಯಾಗಿ ಮಾಡುವುದಿಲ್ಲ. ಅಂತಹ ವ್ಯಕ್ತಿ ತನ್ನ ಪ್ರಭುವನ್ನು ಅಪಮಾನಿಸುತ್ತಾನೆ.
  [ಅಲ್‍ಮುಂದಿರೀ]

  ಮುಆದ್ ಬಿನ್ ಜಬಲ್‍ರಿಂದ(ರ) ವರದಿ: ಪ್ರವಾದಿ(ಸ) ನನ್ನನ್ನು ಯಮನ್‍ನ ರಾಜ್ಯಪಾಲನಾಗಿ ನೇಮಿಸಿ ಕಳಿಸುವಾಗ, 'ನನಗೇನಾದರೂ ಉಪದೇಶಿಸಿರಿ' ಎಂದು ನಾನು ಬಿನ್ನವಿಸಿದೆ. ಆಗ ಪ್ರವಾದಿ(ಸ) ಹೇಳಿದರು- ನಿಮ್ಮ ಉದ್ದೇಶವನ್ನು ಎಲ್ಲ ರೀತಿಯ ಕಲ್ಮಶದಿಂದ ನಿರ್ಮಲಗೊಳಿಸಿರಿ. ಯಾವುದೇ ಕರ್ಮವನ್ನು ಕೇವಲ ದೇವನ ಸಂಪ್ರೀತಿಗಾಗಿ ಮಾಡಿರಿ. ಅದು ಸ್ವಲ್ಪವಾದರೂ ಸರಿ, ಮೋಕ್ಷಕ್ಕೆ ಸಾಕಾಗುವುದು. [ಮುಸ್ತದ್ರಿಕ್ ತರ್ಗೀಬ್ ವ ತರ್ಹೀಬ್]

 • ವಿಶ್ವಾಸ ಮತ್ತು ನಂಬಿಕೆ
  ismika16-12-2014

  ಅಬೂ ಹುರೈರಾ(ರ) ಹೇಳುತ್ತಾರೆ- ಪ್ರವಾದಿ(ಸ) ಜನರೊಂದಿಗೆ ಹೀಗೆಂದರು- 'ನೀವು ನನ್ನಲ್ಲಿ ಧರ್ಮದ ವಿಷಯಗಳನ್ನು ಕೇಳಿ ತಿಳಿಯಿರಿ.' ಆದರೆ ಜನರಿಗೆ ಪ್ರವಾದಿಯವರ(ಸ) ಮೇಲೆ ಇದ್ದ ಗೌರವಾದರಗಳಿಂದಾಗಿ, ಅವರು ಸಾಮಾನ್ಯವಾಗಿ ಏನೂ ಪ್ರಶ್ನಿಸುತ್ತಿರಲಿಲ್ಲ (ಹೊರಗಿನಿಂದ ಯಾರಾದರೂ ಬಂದು ಪ್ರಶ್ನೆ ಕೇಳಿದರೆ ತಮಗೂ ಅದರಿಂದ ಪ್ರಯೋಜನ ಪಡೆಯಬಹುದೆಂದು ಪ್ರತಿಯೊಬ್ಬನೂ ನಿರೀಕ್ಷಿಸುತ್ತಿದ್ದನು). ಹೀಗಿರುವಾಗ ಒಬ್ಬ ವ್ಯಕ್ತಿ ಬಂದು, ಪ್ರವಾದಿಯವರ(ಸ) ಸಮೀಪ ಕುಳಿತುಕೊಂಡು ಕೇಳಿದನು- ಅಲ್ಲಾಹನ ಸಂದೇಶ ವಾಹಕರೆ! ಇಸ್ಲಾಮ್ ಎಂದರೇನು? ಪ್ರವಾದಿ(ಸ) ಹೇಳಿದರು- ಯಾರನ್ನೂ ದೇವನ ಸಹಭಾಗಿಯಾಗಿಸದಿರುವುದು, ನಮಾಝ್ ಸಂಸ್ಥಾಪಿಸುವುದು, ಅಲ್ಲಾಹನ ಮಾರ್ಗದಲ್ಲಿ ಸಂಪತ್ತನ್ನು ಖರ್ಚುಮಾಡುವುದು, ರಮಝಾನ್ ತಿಂಗಳಲ್ಲಿ ಉಪವಾಸವ್ರತ ಆಚರಿಸುವುದು. ಆಗ ಆ ವ್ಯಕ್ತಿ, 'ತಾವು ನಿಜ ಹೇಳಿದಿರಿ' ಎಂದನು. ತರುವಾಯ ಅವನು ಕೇಳಿದನು, ಅಲ್ಲಾಹನ ಸಂದೇಶವಾಹಕರೇ, ಈಮಾನ್ ಎಂದರೇನು? ಪ್ರವಾದಿ(ಸ) ಹೇಳಿದರು- ಅಲ್ಲಾಹನನ್ನು, ಮಲಕ್‍ಗಳನ್ನು, ಅಲ್ಲಾಹನ ಗ್ರಂಥಗಳನ್ನು, ಅವನ ಪ್ರವಾದಿಗಳನ್ನು ನಂಬುವುದು, ಮರಣದ ಬಳಿಕ ಜೀವಂತ ಎಬ್ಬಿಸಲ್ಪಡಲಿಕ್ಕಿದೆ ಹಾಗೂ ಈ ಲೋಕದಲ್ಲಿ ಸಂಭವಿಸುವುದೆಲ್ಲವೂ ಅಲ್ಲಾಹನ ವಿಧಿ ನಿಯಮಕ್ಕನುಗುಣವಾಗಿ ನಡೆಯುವುದೆಂದು ದೃಢವಾಗಿ ನಂಬುವುದು. ಆಗ ಅವನು, ತಾವು ಸತ್ಯ ಹೇಳಿದಿರಿ ಎಂದನು. ಆ ಬಳಿಕ ಆ ವ್ಯಕ್ತಿ 'ಇಹ್ಸಾನ್' ಎಂದರೇನು ಎಂದು ಕೇಳಿದನು. ಪ್ರವಾದಿ(ಸ) ಹೇಳಿದರು- 'ಇಹ್ಸಾನ್' ಎಂದರೆ ನೀನು ಅಲ್ಲಾಹನನ್ನು ನೋಡುತ್ತಿರುವೆಯೋ ಎಂಬಂತೆ ಅವನನ್ನು ಭಯಪಡುವುದು. ಒಂದು ವೇಳೆ ನೀನು ಅವನನ್ನು ನೋಡದಿದ್ದರೂ ಅವನಂತೂ ನಿನ್ನನ್ನು ನೋಡುತ್ತಿದ್ದಾನೆ. ಆಗ ಅವನು ಹೇಳಿದನು- ತಾವು ಸರಿಯಾದ ಉತ್ತರವನ್ನೇ ನೀಡಿದಿರಿ.
  ತರುವಾಯ ಅವನು ಕಿಯಾಮತ್(ಅಂತಿಮದಿನ) ಯಾವಾಗ ಬರುವುದೆಂದು ಕೇಳಿದನು. ಪ್ರವಾದಿ(ಸ) ಹೇಳಿದರು- ನನಗೂ ನಿಮ್ಮಂತೆಯೇ ಅದು ಬರುವ ಸಮಯ ತಿಳಿದಿಲ್ಲ. ಆದರೆ ಅದು ಬರುವುದಕ್ಕಿಂತ ಮುಂಚೆ ಪ್ರಕಟವಾಗುವ ಕೆಲವು ಸೂಚನೆಗಳನ್ನು ನೀಡಬಲ್ಲೆ-
  (1) ಸ್ತ್ರೀಯು ತನ್ನ ಮಾಲಕನನ್ನು ಹಡೆಯುವುದನ್ನು ಕಂಡರೆ ಕಿಯಾಮತ್ ಹತ್ತಿರ ಬಂತೆಂದು ತಿಳಿಯಿರಿ.
  (2) ನಗ್ನ ಪಾದ ಮತ್ತು ನಗ್ನ ಶರೀರದ ಕಿವುಡರ ಮತ್ತು ಮೂಗರ ಕೈಯಲ್ಲಿ ಭೂಮಿಯ ಅಧಿಕಾರ ಬಂದರೆ ಅದೂ ಕಿಯಾಮತ್‍ನ ಕುರುಹುಗಳಲ್ಲೊಂದಾಗಿದೆ.
  (3) ಜಾನುವಾರುಗಳನ್ನು ಮೇಯಿಸುವವರು ಭವ್ಯ ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ಪೈಪೋಟಿ ನಡೆಸುವುದನ್ನು ಕಂಡರೆ ಕಿಯಾಮತ್ ಹತ್ತಿರ ಬಂತೆಂದು ತಿಳಿಯಿರಿ.
  [ಬುಖಾರಿ, ಮುಸ್ಲಿಮ್]
  ಟಿಪ್ಪಣಿ: ಈಮಾನ್ ಎಂಬ ಪದದ ನೈಜ ಅರ್ಥ- ಯಾರನ್ನಾದರೂ ನಂಬುವುದು, ಅವನ ಮಾತನ್ನು ಸತ್ಯವೆಂದು ತಿಳಿದು ಒಪ್ಪಿಕೊಂಡು ಅದನ್ನು ತನ್ನದಾಗಿಸುವುದು. ಮನುಷ್ಯನಿಗೆ ಯಾವುದಾದರೊಂದು ವಿಷಯದ ಸತ್ಯಸಂಧತೆಯ ಬಗ್ಗೆ ಖಾತ್ರಿಯಾದಾಗ ಮಾತ್ರ ಆತನು ಅದನ್ನು ನಂಬಿ ಸ್ವೀಕರಿಸಿಕೊಳ್ಳುತ್ತಾನೆ. ಈಮಾನ್‍ನ ನೈಜ ಸ್ಫೂರ್ತಿ ಇದೇ ವಿಶ್ವಾಸ ಮತ್ತು ನಂಬಿಕೆಯಾಗಿದೆ. ಒಬ್ಬನು ಸತ್ಯ ವಿಶ್ವಾಸಿಯಾಗಲು ಅಲ್ಲಾಹನ ವತಿಯಿಂದ ಬಂದ ಎಲ್ಲ ವಿಷಯಗಳನ್ನು ಒಪ್ಪಿ ಅಂಗೀಕರಿಸಬೇಕಾದುದು ಅಗತ್ಯ.

 • ಅಲ್ಲಾಹನ ಮೇಲೆ ವಿಶ್ವಾಸ
  ismika16-12-2014

  'ಈಮಾನ್ ಬಿಲ್ಲಾಹ್' ಅರ್ಥಾತ್ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದೆಂದರೆ, ಅಲ್ಲಾಹನನ್ನು ಸದಾ ಇರುವವನೆಂದು ನಂಬುವುದು. ಅವನೇ ಈ ಪ್ರಪಂಚದ ಸೃಷ್ಟಿಕರ್ತನೆಂದೂ ಅದರ ವ್ಯವಸ್ಥೆಯನ್ನು ನೋಡಿಕೊಳ್ಳುವವನೆಂದೂ ಒಪ್ಪಿಕೊಳ್ಳುವುದು. ಅವನು ಎಲ್ಲ ರೀತಿಯ ನ್ಯೂನತೆ ಹಾಗೂ ದೌರ್ಬಲ್ಯಗಳಿಂದ ಮುಕ್ತನೆಂದೂ ಎಲ್ಲ ಒಳ್ಳೆಯ ಗುಣಗಳನ್ನು ಹೊಂದಿದವನೂ ಎಲ್ಲ ಒಳಿತುಗಳ ಮೂಲವೆಂದೂ ನಂಬುವುದು. ಅವನೇ ನೈಜ ಆರಾಧ್ಯ, ಜೀವನದ ನಿಯಮಗಳನ್ನು ನೀಡುವ ಆಜ್ಞಾಧಿಕಾರಿ ಮತ್ತು ಒಡೆಯನೆಂದು ಅಂಗೀಕರಿಸುವುದು.
  ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ಹದೀಸ್‍ಗಳನ್ನು ನೀಡಲಾಗುತ್ತದೆ. ಅದರಿಂದ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯ ಮನವರಿಕೆಯಾಗುತ್ತದೆ.

  ಪ್ರವಾದಿ(ಸ) ಅವರು (ಅಬುಲ್‍ಕೈಸ್ ಗೋತ್ರದ ನಿಯೋಗದೊಂದಿಗೆ) ಹೇಳಿದರು- ಏಕ ಅಲ್ಲಾಹನ ಮೇಲೆ ವಿಶ್ವಾಸವಿರಿಸುವುದೆಂದರೆ ಏನೆಂದು ನಿಮಗೆ ತಿಳಿದಿದೆಯೆ? ಅವರು ಹೇಳಿದರು- ಅದನ್ನು ಅಲ್ಲಾಹ್ ಮತ್ತು ಅವನ ಸಂದೇಶವಾಹಕರೇ ಚೆನ್ನಾಗಿ ಬಲ್ಲರು. ಪ್ರವಾದಿ(ಸ) ಹೇಳಿದರು- ಈಮಾನ್(ವಿಶ್ವಾಸ) ಎಂದರೆ ಅಲ್ಲಾಹನ ಹೊರತು ಯಾವ ಆರಾಧ್ಯರೂ ಇಲ್ಲವೆಂದೂ ಮುಹಮ್ಮದ್(ಸ) ಆತನ ಸಂದೇಶವಾಹಕರೆಂದೂ ಸಾಕ್ಷ್ಯ ನುಡಿಯುವುದು (ಮತ್ತು ಘೋಷಿಸುವುದು), ನಮಾಝ್ ಸಂಸ್ಥಾಪಿಸುವುದು, ಝಕಾತ್ ಕೊಡುವುದು ಮತ್ತು ರಮಝಾನ್ ತಿಂಗಳಲ್ಲಿ ಉಪವಾಸ ವ್ರತ ಆಚರಿಸುವುದು. [ಬುಖಾರಿ, ಮುಸ್ಲಿಮ್- ವರದಿ: ಇಬ್ನು ಅಬ್ಬಾಸ್(ರ)]

  ಅನಸ್(ರ) ಹೇಳುತ್ತಾರೆ- ಪ್ರವಾದಿಯವರು(ಸ) ಉಪನ್ಯಾಸ ನೀಡುತ್ತಿದ್ದಾಗಲೆಲ್ಲ 'ಯಾರಲ್ಲಿ ಅಮಾನತ್ ಇಲ್ಲವೋ ಆತನಲ್ಲಿ ಈಮಾನ್ ಇಲ್ಲ, ಯಾರು ವಚನ ಪಾಲನೆ ಮಾಡುವುದಿಲ್ಲವೋ ಅವನ ಬಳಿ ಧರ್ಮವಿಲ್ಲ' ಎಂಬ ಮಾತನ್ನು ಹೇಳದೆ ಇರುತ್ತಿರಲಿಲ್ಲ. [ಮಿಶ್ಕಾತ್- ಬೈಹಕಿಯಿಂದ]
  ಟಿಪ್ಪಣಿ: ಅಲ್ಲಾಹನ ಮತ್ತು ಜನರ ಹಕ್ಕುಗಳನ್ನು ಪೂರೈಸದವನ ವಿಶ್ವಾಸ ದೃಢವಾಗಿರುವುದಿಲ್ಲ ಪ್ರವಾದಿಯವರ(ಸ) ಈ ಮಾತಿನ ಇಂಗಿತವೆಂಬುದು ಅದೇ ರೀತಿ ಒಬ್ಬನು ಯಾವುದಾದರೂ ಹೊಣೆ ವಹಿಸುವ ವಾಗ್ದಾನ ಮಾಡಿದ್ದು ಅದನ್ನು ಪೂರೈಸದಿದ್ದರೆ ಅವನಲ್ಲಿ ಧರ್ಮನಿಷ್ಠೆಯಿಲ್ಲವೆಂದರ್ಥ. ಒಬ್ಬನ ಮನಸ್ಸಿನಲ್ಲಿ ವಿಶ್ವಾಸವು ದೃಢವಾಗಿ ಬೇರೂರಿದರೆ ಅವನು ಎಲ್ಲರ ಹಕ್ಕುಗಳನ್ನು ಪೂರೈಸುವಲ್ಲಿ ಪ್ರಾಮಾಣಿಕನಾಗಿರುತ್ತಾನೆ. ಯಾರ ಹಕ್ಕನ್ನೂ ವಂಚಿಸುವುದಿಲ್ಲ. ಅದೇ ರೀತಿ ಒಬ್ಬನಲ್ಲಿ ಧರ್ಮನಿಷ್ಠೆಯಿದ್ದರೆ ಅವನು ಮಾಡಿದ ವಾಗ್ದಾನಗಳನ್ನು ಜೀವನದಾದ್ಯಂತ ಪಾಲಿಸುವನು. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಅತಿ ದೊಡ್ಡ ಹಕ್ಕು ಇರುವುದು ಅಲ್ಲಾಹನದ್ದು, ಆತನ ಪ್ರವಾದಿಯದ್ದು(ಸ) ಹಾಗೂ ಅವನ ಗ್ರಂಥ (ಕುರ್‍ಆನ್)ದ್ದಾಗಿದೆ. ಅನಂತರ ಜನರ ಹಕ್ಕುಗಳಾಗಿವೆ. ಅತಿದೊಡ್ಡ ವಾಗ್ದಾನ ಮನುಷ್ಯನು ಅಲ್ಲಾಹನೊಂದಿಗೆ, ಆತನು ಕಳಿಸಿದ ಪ್ರವಾದಿಯೊಂದಿಗೆ ಹಾಗೂ ಅವರು ತಂದ ಧರ್ಮದೊಂದಿಗೆ ಮಾಡುವ ವಾಗ್ದಾನವಾಗಿದೆ. ಪವಿತ್ರ ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ 'ಅಮಾನತ್' ಮತ್ತು 'ಅಹ್ದ್' (ವಚನ) ಎಂಬ ಪದಗಳು ವಿಶಾಲಾರ್ಥಗಳಲ್ಲಿ ಪ್ರಯೋಗವಾಗಿವೆ.

  ಅಮ್ರ್ ಬಿನ್ ಅಬಸ(ರ) ಹೇಳುತ್ತಾರೆ- ನಾನು ಪ್ರವಾದಿಯವರೊಂದಿಗೆ(ಸ) 'ಈಮಾನ್' ಎಂದರೇನೆಂದು ಕೇಳಿದೆ. ಪ್ರವಾದಿ(ಸ) ಹೇಳಿದರು- 'ಸಬ್ರ್ ಮತ್ತು ಸಮಾಹತ್.'
  [ಮುಸ್ಲಿಮ್]
  ಟಿಪ್ಪಣಿ: ಈಮಾನ್ ಎಂದರೆ ಮನುಷ್ಯನು ಅಲ್ಲಾಹನ ಮಾರ್ಗವನ್ನು ಮೆಚ್ಚಿಕೊಂಡು ಈ ಮಾರ್ಗದಲ್ಲಿ ಬರುವ ಸಕಲ ಸಂಕಷ್ಟಗಳನ್ನು ಸಂತೋಷದಿಂದ ಸಹಿಸುವುದು ಮತ್ತು ಅಲ್ಲಾಹನ ಆಶ್ರಯ ಹಿಡಿದು ಮುಂದೆ ಸಾಗುವುದಾಗಿದೆ (ಇದುವೇ ಸಬ್ರ್). 'ಸಮಾಹತ್' ಎಂದರೆ ಮನುಷ್ಯನು ತಾನು ಸಂಪಾದಿಸಿದುದನ್ನು ಅಲ್ಲಾಹನ ಅಪೇಕ್ಷಿತ ದಾಸರ ಮೇಲೆ ಖರ್ಚು ಮಾಡಿ ಅದರಿಂದ ಸಂತೋಷಗೊಳ್ಳುವುದಾಗಿದೆ. ಈ ಪದಕ್ಕೆ ಮೃದುತ್ವ ಮತ್ತು ಹೃದಯ ವೈಶಾಲ್ಯ ಎಂಬ ಅರ್ಥಗಳೂ ಇವೆ.

  ಅಬೂ ಉಮಾಮರಿಂದ(ರ) ವರದಿ: ಪ್ರವಾದಿ(ಸ) ಹೇಳಿದರು- ಯಾರು ಅಲ್ಲಾಹನಿಗಾಗಿ ಗೆಳೆತನ ಬೆಳೆಸಿದನೋ, ಅಲ್ಲಾಹನಿಗಾಗಿ ಹಗೆತನ ಕಟ್ಟಿದನೋ, ಅಲ್ಲಾಹನಿಗಾಗಿ ಕೊಟ್ಟನೋ ಹಾಗೂ ಅಲ್ಲಾಹನಿಗಾಗಿ ತಡೆಹಿಡಿದನೋ ಅವನು ತನ್ನ ವಿಶ್ವಾಸವನ್ನು ಪೂರ್ಣಗೊಳಿಸಿದನು.
  [ಬುಖಾರಿ]
  ಟಿಪ್ಪಣಿ: ಮನುಷ್ಯನು ತನ್ನನ್ನು ಸಂಸ್ಕರಿಸುತ್ತಾ ಎಲ್ಲಿಗೆ ತಲಪುತ್ತಾನೆಂದರೆ ಯಾರೊಂದಿಗಾದರೂ ಸ್ನೇಹ ಬೆಳೆಸುವುದಾದರೆ ಅಲ್ಲಾಹನಿಗಾಗಿ ಬೆಳೆಸುತ್ತಾನೆ ಮತ್ತು ಯಾರಿಂದಾದರೂ ಸ್ನೇಹ ಮುರಿಯುವುದಾದರೆ ಅಲ್ಲಾಹನಿಗಾಗಿ ಮುರಿಯುತ್ತಾನೆ. ಅದೇ ರೀತಿ ಯಾರಿಗಾದರೂ ನೀಡುವುದಿದ್ದರೂ ನೀಡದಿರುವುದಿದ್ದರೂ ಆಗಲೂ ಅದರಲ್ಲಿ ಅಲ್ಲಾಹನ ಸಂಪ್ರೀತಿಯಲ್ಲದೆ ಬೇರಾವ ಉದ್ದೇಶ ಅಥವಾ ಪ್ರೇರಣೆಯಿರುವುದಿಲ್ಲ. ಅವನ ಪ್ರೀತಿ ಮತ್ತು ದ್ವೇಷಕ್ಕೆ ಅಲ್ಲಾಹನ ಧರ್ಮವೇ ಮೂಲಾಧಾರವಾಗಿದ್ದು, ಅವನ ಮನಸ್ಸು ಲೌಕಿಕ ಹಿತಾಸಕ್ತಿಯಿಂದ ಸಂಪೂರ್ಣ ಮುಕ್ತವಾಗಿರುವುದು. ಒಬ್ಬ ಮನುಷ್ಯನು ಈ ಸ್ಥಿತಿಗೆ ತಲಪಿದನೆಂದರೆ ಅವನ ಈಮಾನ್ (ವಿಶ್ವಾಸ) ಪೂರ್ಣಗೊಂಡಿತೆಂದು ಭಾವಿಸಬೇಕು.

  ಅಬ್ಬಾಸ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಅಲ್ಲಾಹನನ್ನು ತನ್ನ ಪ್ರಭುವೆಂದೂ ಇಸ್ಲಾಮನ್ನು ತನ್ನ ಧರ್ಮವೆಂದೂ ಮುಹಮ್ಮದ್‍ರನ್ನು(ಸ) ತನ್ನ ಪ್ರವಾದಿಯೆಂದೂ ಒಪ್ಪಿ, ಅದರಲ್ಲಿ ಸಂತೃಪ್ತನಾದವನು ಈಮಾನಿನ (ಸತ್ಯವಿಶ್ವಾಸದ) ರುಚಿಯನ್ನು ಸವಿದನು.
  [ಬುಖಾರಿ, ಮುಸ್ಲಿಮ್]
  ಟಿಪ್ಪಣಿ: ಆತ ಅಲ್ಲಾಹನ ದಾಸ್ಯಕ್ಕೆ ತನ್ನನ್ನು ಸಮರ್ಪಿಸಿ, ಇಸ್ಲಾಮನ್ನು ತನ್ನ ಜೀವನ ಕ್ರಮವಾಗಿ ಅಂಗೀಕರಿಸಿ, ತನ್ನನ್ನು ಪ್ರವಾದಿ ಮುಹಮ್ಮದ್‍ರ(ಸ) ಮಾರ್ಗದರ್ಶನಕ್ಕೆ ಒಪ್ಪಿಸಿ ಸಂಪೂರ್ಣ ತೃಪ್ತನಾದನು. ತನಗೆ ಇನ್ನಾರ ದಾಸ್ಯವನ್ನೂ ಕೈಗೊಳ್ಳಲಿಕ್ಕಿಲ್ಲ, ಎಲ್ಲ ಸ್ಥಿತಿಯಲ್ಲೂ ಇಸ್ಲಾಮ್ ತೋರಿಸಿದ ಮಾರ್ಗದಲ್ಲಿ ನಡೆಯಬೇಕಾಗಿದೆ ಮತ್ತು ಪ್ರವಾದಿ ಮುಹಮ್ಮದ್‍ರ(ಸ) ಹೊರತು ಇನ್ನಾರ ಮಾರ್ಗದರ್ಶನ ದಂತೆಯೂ ತನಗೆ ಜೀವಿಸಬೇಕಾಗಿಲ್ಲ ಎಂಬ ಸ್ಥಿತಿಗೆ ಯಾರಾದರೂ ತಲಪಿದರೆ ಆ ಭಾಗ್ಯವಂತನು ಈಮಾನಿನ ರುಚಿಯನ್ನು ಪಡೆದನು ಎಂದು ಭಾವಿಸಬೇಕು.

  ಝೈದ್ ಬಿನ್ ಅರ್ಕಮ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಯಾರು 'ಪ್ರಾಮಾಣಿಕ'ವಾಗಿ 'ಲಾ ಇಲಾಹ ಇಲ್ಲಲ್ಲಾಹ್' (ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲ) ಎಂದು ಹೇಳುವನೋ ಅವನು ಸ್ವರ್ಗ ಪ್ರವೇಶಿಸುವನು. 'ಪ್ರಾಮಾಣಿಕವಾಗಿ ಲಾ ಇಲಾಹ ಇಲ್ಲಲ್ಲಾಹ್ ಹೇಳುವುದೆಂದರೆ' ಏನೆಂದು ಜನರು ಕೇಳಿದರು. ಪ್ರವಾದಿ(ಸ) ಹೇಳಿದರು- ಅರ್ಥಾತ್: ಹಾಗೆ ಹೇಳುವವನು ಅಲ್ಲಾಹನು ನಿಷೇಧಿಸಿದ ಎಲ್ಲ ವಿಷಯಗಳಿಂದ ದೂರವಿರುತ್ತಾನೆಂದಾಗಿದೆ.
  ಮುಸ್ನದ್ ಅಹ್ಮದ್‍ನಲ್ಲಿ ರಿಪಾಅ ಜುಹ್ನೀ ಉಲ್ಲೇಖಿಸಿದ ಪದಗಳು ಹೀಗಿವೆ- ಅಲ್ಲಾಹನ ಹೊರತು ಆರಾಧ್ಯರಾರೂ ಇಲ್ಲವೆಂದೂ, ನಾನು [ಮುಹಮ್ಮದ್(ಸ)] ಅಲ್ಲಾಹನ ಸಂದೇಶವಾಹಕನೆಂದೂ ಪ್ರಾಮಾಣಿಕವಾಗಿ ಹೇಳಿ ಸನ್ಮಾರ್ಗದಲ್ಲಿ ನಡೆಯುವ (ಅಂದರೆ ಈಮಾನಿನ ಬೇಡಿಕೆಗಳನ್ನು ಪೂರೈಸಿದರೆ, ಸತ್ಕರ್ಮಗಳನ್ನು ಮಾಡಿದರೆ ಮತ್ತು ಕೆಟ್ಟ ಕಾರ್ಯಗಳಿಂದ ದೂರವಿದ್ದರೆ) ಅಲ್ಲಾಹನ ದಾಸನು ಸ್ವರ್ಗ ಪ್ರವೇಶ ಮಾಡುವನು.
  ತಿರ್ಮಿದಿಯ ವರದಿಯಲ್ಲಿ ಹೀಗಿದೆ- ತೌಹೀದ್‍ನ (ಏಕದೇವತ್ವ) ವಚನ ಉಚ್ಚರಿಸಿ ಮಹಾ ಪಾಪಗಳಿಂದ ದೂರವಿರುವ ಅಲ್ಲಾಹನ ದಾಸನು ಸ್ವರ್ಗಕ್ಕೆ ಹೋಗುವನು. [ಮುಸ್ನದ್ ಅಹ್ಮದ್]
  ಟಿಪ್ಪಣಿ: ಪ್ರಸ್ತುತ ಮೂರೂ ಹದೀಸ್‍ಗಳನ್ನು ಗಮನಿಸಿದರೆ, ಕೇವಲ ಈಮಾನಿನ ಕಲಿಮ (ವಿಶ್ವಾಸದ ವಚನ) ಸ್ವರ್ಗ ಪ್ರವೇಶಕ್ಕೆ ಸಾಕಾಗಲಾರದು. ಬದಲಾಗಿ ಈ ಹದೀಸ್‍ಗಳಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲ ವಿಷಯಗಳನ್ನೂ ಪಾಲಿಸಬೇಕು ಎಂದು ತಿಳಿದು ಬರುತ್ತದೆ.

 • ಪ್ರವಾದಿಗಳ ಮೇಲೆ ವಿಶ್ವಾಸ
  ismika16-12-2014

  ಪ್ರವಾದಿಗಳ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯವೇನೆಂದರೆ- ಅಲ್ಲಾಹನ ವತಿಯಿಂದ ಬಂದಿರುವ ಪ್ರವಾದಿಗಳೆಲ್ಲರೂ ಸತ್ಯವಂತರು. ಅವರೆಲ್ಲರೂ ಅಲ್ಲಾಹನ ವಾಣಿಯನ್ನು ಯಾವುದೇ ಹೆಚ್ಚು ಕಡಿಮೆ ಮಾಡದೆ ಜನರಿಗೆ ತಲಪಿಸಿದರು. ಈ ಪರಂಪರೆಯ ಕೊನೆಯ ಕೊಂಡಿ ಪ್ರವಾದಿ ಮುಹಮ್ಮದ್(ಸ) ಆಗಿದ್ದಾರೆ. ಇನ್ನು ಮಾನವರ ಮೋಕ್ಷವು ಕೇವಲ ಅವರನ್ನು ಅನುಸರಿಸುವುದರಲ್ಲಿದೆ ಎಂದು ನಂಬುವುದಾಗಿದೆ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡಲಾಗಿದೆ-

  ಅನಸ್(ರ) ಹೇಳುತ್ತಾರೆ: ಪ್ರವಾದಿ(ಸ) ನನ್ನೊಂದಿಗೆ ಹೀಗೆಂದರು- ನನ್ನ ಪ್ರಿಯ ಪುತ್ರಾ! ನಿನಗೆ ನಿನ್ನ ಮನಸ್ಸಿನಲ್ಲಿ ಯಾರ ವಿರುದ್ಧವಾದರೂ ಅಹಿತ ಭಾವನೆಯಿಲ್ಲದಂತಹ ಅವಸ್ಥೆಯಲ್ಲಿ ಜೀವನ ಸಾಗಿಸಲು ಸಾಧ್ಯವಾದರೆ ಹಾಗೆಯೇ ಜೀವಿಸು. ಅನಂತರ ಹೇಳಿದರು- ಪ್ರಿಯ ಪುತ್ರಾ! ನನ್ನ ಕ್ರಮವೂ ಇದುವೇ ಆಗಿದೆ. ನನ್ನ ಮನಸ್ಸಿನಲ್ಲಿ ಯಾರ ವಿರುದ್ಧವೂ ಯಾವುದೇ ಮಾಲಿನ್ಯವಿಲ್ಲ. ಯಾರು ನನ್ನ ಚರ್ಯೆ (ಕ್ರಮ)ಯನ್ನು ಪ್ರೀತಿಸಿದನೋ ಅವನು ನನ್ನನ್ನು ಪ್ರೀತಿಸಿದನು. ಯಾರು ನನ್ನನ್ನು ಪ್ರೀತಿಸಿದನೋ ಅವನು ನನ್ನೊಂದಿಗೆ ಸ್ವರ್ಗದಲ್ಲಿರುವನು. [ಮುಸ್ಲಿಮ್]

  ಅನಸ್(ರ) ಹೇಳುತ್ತಾರೆ: ಪ್ರವಾದಿಯವರ(ಸ) ಆರಾಧನೆಗಳ ಬಗ್ಗೆ ತಿಳಿಯಲು ಮೂರು ಮಂದಿಯ ನಿಯೋಗವೊಂದು ಪ್ರವಾದಿ ಪತ್ನಿಯರ(ರ) ಬಳಿಗೆ ಹೋದರು. ಅವರಿಗೆ ಆ ಕುರಿತು ತಿಳಿಸಲಾಯಿತು. ಆಗ ಅವರಿಗೆ ಈ ಆರಾಧನೆಗಳ ಪ್ರಮಾಣ ಕಡಿಮೆ ಎನಿಸಿತು. ಅವರು ಹೀಗೆ ಹೇಳತೊಡಗಿದರು- ಪ್ರವಾದಿಯವರಿಗೆ(ಸ) ಹೋಲಿಸಿದರೆ ನಮ್ಮ ಸ್ಥಿತಿಯೇನು? ನಾವಂತೂ ಪ್ರವಾದಿಗೆ ಸಮಾನರಲ್ಲ. ಪ್ರವಾದಿವರ್ಯರ ಹಿಂದಿನ ಮತ್ತು ಮುಂದಿನ ಪಾಪಗಳೆಲ್ಲವೂ ಕ್ಷಮಿಸಲ್ಪಟ್ಟಿವೆಯಷ್ಟೆ. ಹಾಗೆ ಅವರಲ್ಲಿ ಒಬ್ಬನು, ನಾನು ರಾತ್ರಿಯಿಡೀ ನಫಿಲ್ ನಮಾಝ್ ಮಾಡುವೆನೆಂದು ನಿಶ್ಚಯಿಸಿಕೊಂಡನು. ಇನ್ನೊಬ್ಬನು, ನಾನು ಎಡೆಬಿಡದೆ ಉಪವಾಸ ಆಚರಿಸುವೆನೆಂದು ಹೇಳಿದನು. ಮತ್ತೊಬ್ಬನು, ನಾನು ಜೀವನದಾದ್ಯಂತ ಸ್ತ್ರೀಯರಿಂದ ದೂರವಿರುವೆ, ಎಂದೂ ವಿವಾಹ ಮಾಡಲಾರೆನೆಂದೂ ಹೇಳಿದನು. (ಪ್ರವಾದಿಯವರಿಗೆ(ಸ) ಇವರ ಈ ವೈರಾಗ್ಯದ ಮಾತುಗಳ ಸುದ್ದಿ ಸಿಕ್ಕಿದಾಗ) ಅವರು ಅವರ ಬಳಿಗೆ ಹೋಗಿ, ನೀವು ಈ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದೀರಾ? ಎಂದು ಕೇಳಿದರು, ಅನಂತರ ಹೀಗೆಂದರು- ನೋಡಿ, ನಾನು ನಿಮ್ಮೆಲ್ಲರಿಗಿಂತಲೂ ಅಧಿಕ ಅಲ್ಲಾಹನನ್ನು ಭಯಪಡುವವನಾಗಿರುತ್ತೇನೆ ಮತ್ತು ಅವನ ಆಜ್ಞೋಲ್ಲಂಘನೆಯಿಂದ ದೂರವಿರುವವನಾಗಿರುತ್ತೇನೆ. ಆದರೆ ನೋಡಿ, ನಾನು ಉಪವಾಸ ಆಚರಿಸುತ್ತಲೂ ಇದ್ದೇನೆ, ಆಚರಿಸದೆಯೂ ಇರುತ್ತೇನೆ. ನಫಿಲ್ ನಮಾಝ್‍ಗಳನ್ನು ಮಾಡುತ್ತಲೂ ಇದ್ದೇನೆ. ನಿದ್ರಿಸುತ್ತಲೂ ಇದ್ದೇನೆ. ನಾನು ಸ್ತ್ರೀಯರೊಂದಿಗೆ ವಿವಾಹವನ್ನೂ ಮಾಡಿಕೊಳ್ಳುತ್ತೇನೆ. ಆದುದರಿಂದ ನನ್ನ ವಿಧಾನವನ್ನು ಅನುಸರಿಸುವುದರಲ್ಲೇ ನಿಮ್ಮ ಒಳಿತಿದೆ. ಯಾರ ದೃಷ್ಟಿಯಲ್ಲಿ ನನ್ನ ಚರ್ಯೆಗೆ ಬೆಲೆಯಿಲ್ಲವೋ ಯಾರು ನನ್ನ ಚರ್ಯೆಯನ್ನು ಧಿಕ್ಕರಿಸುತ್ತಾರೋ ಅವರು ನನ್ನವರಲ್ಲ. ನನಗೆ ಅವರೊಂದಿಗೆ ಯಾವ ಸಂಬಂಧವೂ ಇಲ್ಲ. [ಮುಸ್ಲಿಮ್]

  ಆಯಿಶಾ(ರ) ಹೇಳುತ್ತಾರೆ- ಪ್ರವಾದಿ(ಸ) ಒಂದು ಕೆಲಸ ಮಾಡಿದರು ಮತ್ತು ಜನರಿಗೆ ಅದರಲ್ಲಿ ಸೌಲಭ್ಯವುಂಟು ಮಾಡಿದರು. ಆದರೆ ಕೆಲವರು ಸೌಲಭ್ಯದ ಅಂಶವನ್ನು ಸ್ವೀಕರಿಸಲು ಹಿಂಜರಿದರು. ಪ್ರವಾದಿಯವರಿಗೆ(ಸ) ಜನರ ಈ ಮನೋಭಾವದ ಅರಿವಾದಾಗ ಅವರು ಒಂದು ಉಪನ್ಯಾಸವಿತ್ತರು. ಸ್ತುತಿ-ಸ್ತೋತ್ರಗಳ ಬಳಿಕ ಹೀಗೆಂದರು- ಕೆಲವರು ನಾನು ಮಾಡುವ ಕೆಲಸವನ್ನು ಮಾಡಲು ಏಕೆ ಹಿಂಜರಿಯುತ್ತಾರೆ? ಅಲ್ಲಾಹನಾಣೆ! ನಾನು ಇವರೆಲ್ಲರಿಗಿಂತ ಹೆಚ್ಚು ಅಲ್ಲಾಹನನ್ನು ತಿಳಿದವನಾಗಿದ್ದೇನೆ (ಅವನ ಇಂಗಿತವೇನು ಮತ್ತು ಅವನಿಗೆ ಅಪ್ರಿಯವಾದುದೇನು ಎಂಬುದರ ಕುರಿತು) ಮತ್ತು ನಾನು ಇವರೆಲ್ಲರಿಗಿಂತ ಹೆಚ್ಚು ಅಲ್ಲಾಹನನ್ನು ಭಯಪಡುವವನಾಗಿದ್ದೇನೆ. [ಬುಖಾರಿ, ಮುಸ್ಲಿಮ್]

  ಜಾಬಿರ್(ರ) ಪ್ರವಾದಿವರ್ಯರಿಂದ(ಸ) ವರದಿ ಮಾಡುತ್ತಾರೆ. ಹ. ಉಮರ್(ರ) ಪ್ರವಾದಿಯವರ(ಸ) ಬಳಿಗೆ ಹೋಗಿ ಹೀಗೆ ಕೇಳಿದರು- ನಮಗೆ ಯಹೂದಿಯರ ಕೆಲವು ವಿಷಯಗಳು ಒಳ್ಳೆಯದಾಗಿ ಕಾಣುತ್ತವೆ. ನಾವು ಅವುಗಳಿಂದ ಏನನ್ನಾದರೂ ಬರೆದಿಡುವ ಬಗ್ಗೆ ತಮ್ಮ ಅಭಿಪ್ರಾಯವೇನು? ಪ್ರವಾದಿ(ಸ) ಹೇಳಿದರು- ಯಹೂದಿ-ಕ್ರೈಸ್ತರು (ತಮ್ಮ ಗ್ರಂಥವನ್ನು ಬಿಟ್ಟು) ಪಥಭ್ರಷ್ಟತೆಯ ಕೂಪಕ್ಕೆ ಬಿದ್ದಂತೆ ನೀವೂ ಪಥಭ್ರಷ್ಟರಾಗ ಬಯಸುತ್ತೀರಾ? ನಾನು ನಿಮ್ಮ ಬಳಿಗೆ ಸೂರ್ಯನಿಗಿಂತಲೂ ಪ್ರಕಾಶಮಾನವಾದ ಹಾಗೂ ಕನ್ನಡಿಗಿಂತಲೂ ಶುಭ್ರವಾದ ಶರೀಅತ್ (ಧರ್ಮಶಾಸ್ತ್ರ) ತಂದಿದ್ದೇನೆ. ಈಗ ಒಂದು ವೇಳೆ ಮೂಸಾ(ಅ) ಜೀವಿಸಿರುತ್ತಿದ್ದರೆ ಅವರೂ ನನ್ನನ್ನು ಅನುಸರಿಸಬೇಕಾಗುತ್ತಿತ್ತು. [ಮುಸ್ಲಿಮ್]
  ಟಿಪ್ಪಣಿ: ಯಹೂದಿಯರು ಮತ್ತು ಕ್ರೈಸ್ತರು ತಮ್ಮ ಗ್ರಂಥಗಳಲ್ಲಿ ತಿದ್ದುಪಡಿಗಳನ್ನು ಮಾಡಿ ಅವುಗಳನ್ನು ವಿಕೃತಗೊಳಿಸಿದ್ದರು. ಆದರೆ ಅವರಲ್ಲಿ ಕೆಡುಕು ಮಾತ್ರ ಇದ್ದುದಲ್ಲ. ಬದಲಾಗಿ ಅವರ ಬಳಿ ಅಲ್ಲಾಹನ ಕೆಲವು ಒಳ್ಳೆಯ ವಿಷಯಗಳೂ ಇದ್ದುವು. ಅದನ್ನು ಮುಸ್ಲಿಮರು ಕೇಳುತ್ತಲೂ ಮೆಚ್ಚುತ್ತಲೂ ಇದ್ದರು. ಒಂದು ವೇಳೆ ಪ್ರವಾದಿ(ಸ) ಅದಕ್ಕೆ ಅನುಮತಿ ನೀಡುತ್ತಿದ್ದರೆ ಧರ್ಮದಲ್ಲಿ ಅನೇಕ ಕೆಡುಕುಗಳುಂಟಾಗುತ್ತಿತ್ತು. ಸತ್ಯ ಮತ್ತು ಉತ್ತಮ ಅಂಶಗಳಿಲ್ಲದ ಯಾವುದಾದರೂ ಧರ್ಮ ಈ ಲೋಕದಲ್ಲಿರಬಹುದೆ? ಪ್ರವಾದಿಯವರು(ಸ) ಉಮರ್‍ರಿಗೆ(ರ) ನೀಡಿದ ಉತ್ತರದಿಂದ ಸ್ಪಷ್ಟವಾಗುವುದೇನೆಂದರೆ ಯಾರ ಮನೆಯಲ್ಲಿ ಶುದ್ಧ ಚಿಲುಮೆಯಿರುವುದೋ ಅವರು ಮಲಿನ ಕೊಳದಿಂದ ತಮ್ಮ ಬಾಯಾರಿಕೆ ನೀಗಿಸ ಬಯಸುವುದು ವಿಚಿತ್ರ!

  ಅಬ್ದುಲ್ಲಾ ಬಿನ್ ಅಮ್ರ್(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು- ಒಬ್ಬ ವ್ಯಕ್ತಿಯ ಇಚ್ಛೆ ಮತ್ತು ಅವನ ಮಾನಸಿಕ ಒಲವುಗಳು ನಾನು ತಂದಿರುವ ಧರ್ಮಶಾಸ್ತ್ರಕ್ಕೆ ಅನುಗುಣ ವಾಗುವ ತನಕ ಆತ ವಿಶ್ವಾಸಿಯಾಗಲಾರ. [ಮಿಶ್ಕಾತ್]
  ಟಿಪ್ಪಣಿ: ವ್ಯಕ್ತಿಯು ತನ್ನ ಇಚ್ಛೆ ಮತ್ತು ಮಾನಸಿಕ ಒಲವುಗಳನ್ನು ಅಲ್ಲಾಹನ ಪ್ರವಾದಿ(ಸ) ತಂದಿರುವ ಧರ್ಮಶಾಸ್ತ್ರಕ್ಕೆ ಅಧೀನಗೊಳಿಸಬೇಕಾದುದು ಹಾಗೂ ಕುರ್‍ಆನ್ ಮತ್ತು ಪ್ರವಾದಿ ಚರ್ಯೆಯ ಕೈಯಲ್ಲಿ ತನ್ನ ಅಭಿಲಾಷೆಗಳ ಲಗಾಮನ್ನು ನೀಡಬೇಕಾದುದು ಪ್ರವಾದಿಯವರ(ಸ) ಮೇಲೆ ವಿಶ್ವಾಸವಿರಿಸುವುದರ ಬೇಡಿಕೆಯಾಗಿದೆ. ಯಾರಾದರೂ ಈ ಬೇಡಿಕೆಗಳನ್ನು ಪೂರೈಸದಿದ್ದರೆ ಅವನ ವಿಶ್ವಾಸಕ್ಕೆ ಅಲ್ಲಾಹನ ಬಳಿ ಯಾವ ಬೆಲೆಯೂ ಇರಲಾರದು.

  ಅನಸ್(ರ) ಹೇಳುತ್ತಾರೆ- ಪ್ರವಾದಿ(ಸ) ಹೇಳಿದರು- ಒಬ್ಬನಿಗೆ ಆತನ ತಂದೆ- ತಾಯಿಗಳು, ಅವನ ಸಂತಾನ ಮತ್ತು ಇತರ ಎಲ್ಲ ಮನುಷ್ಯರಿಗಿಂತಲೂ ನಾನು ಪ್ರಿಯವಾಗುವ ತನಕ ನಿಮ್ಮ ಪೈಕಿ ಯಾರೂ ವಿಶ್ವಾಸಿಯಾಗಲಾರ. [ಬುಖಾರಿ, ಮುಸ್ಲಿಮ್]
  ಟಿಪ್ಪಣಿ: ಈ ವಚನದ ತಾತ್ಪರ್ಯವೇನೆಂದರೆ ಪ್ರವಾದಿ(ಸ) ಅವರ ಮೇಲಿನ ಪ್ರೀತಿ ಮಿಕ್ಕೆಲ್ಲ ಪ್ರೀತಿಗಳಿಗಿಂತ ಅಧಿಕವಾಗುವ ತನಕ ಒಬ್ಬನು ನೈಜ ವಿಶ್ವಾಸಿಯಾಗಲಾರ. ತಂದೆ-ತಾಯಿಗಳು, ಸಂತಾನ ಮತ್ತು ಸಮಾಜದ ಇತರ ವ್ಯಕ್ತಿಗಳು ಒಬ್ಬನನ್ನು ಒಂದು ಮಾರ್ಗದಲ್ಲಿ ನಡೆಸ ಬಯಸುತ್ತಿರುವಾಗ ಅಲ್ಲಾಹನ ಪ್ರವಾದಿ ಅವನನ್ನು ಇನ್ನೊಂದು ಮಾರ್ಗದತ್ತ ಕರೆದರೆ ಸತ್ಯವಿಶ್ವಾಸಿಯಾದವನು ಅವರೆಲ್ಲರ ಬೇಡಿಕೆಗಳನ್ನು ತಿರಸ್ಕರಿಸಿ ತನ್ನ ನೆಚ್ಚಿನ ಪ್ರವಾದಿಯವರ(ಸ) ಕರೆಗೆ ಓಗೊಡಬೇಕು.

  ಅಬ್ದುಲ್ಲ ಬಿನ್ ಮುಗಫ್ಫಲ್(ರ) ಹೇಳುತ್ತಾರೆ: ಒಬ್ಬ ವ್ಯಕ್ತಿ ಪ್ರವಾದಿಯವರ(ಸ) ಬಳಿಗೆ ಬಂದು ಹೀಗೆಂದ- ನಾನು ತಮ್ಮನ್ನು ಪ್ರೀತಿಸುತ್ತೇನೆ. ಪ್ರವಾದಿ(ಸ) ಹೇಳಿದರು- ನೀನೇನು ಹೇಳುತ್ತಿರುವೆಯೆಂದು ಯೋಚಿಸು. ಅವನು ಮೂರು ಬಾರಿ ಆಣೆ ಹಾಕಿ 'ನಾನು ತಮ್ಮನ್ನು ಪ್ರೀತಿಸುತ್ತೇನೆ' ಎಂದನು. ಆಗ ಪ್ರವಾದಿ(ಸ) ಹೇಳಿದರು- ನೀನು ಸತ್ಯವಂತನಾಗಿದ್ದರೆ ಬಡತನ-ದಾರಿದ್ರ್ಯವನ್ನು ಎದುರಿಸಲು ಸಿದ್ಧನಾಗು. ಏಕೆಂದರೆ ನನ್ನನ್ನು ಪ್ರೀತಿಸುವವರ ಕಡೆಗೆ ಬಡತನವು, ನೆರೆ ನೀರು ಇಳಿಜಾರಿಗೆ ಹರಿಯುವುದಕ್ಕಿಂತಲೂ ವೇಗವಾಗಿ ಬರುತ್ತದೆ.
  [ತಿರ್ಮಿದಿ]
  ಟಿಪ್ಪಣಿ: ಪ್ರವಾದಿಯವರನ್ನು(ಸ) ಪ್ರೀತಿಸುವುದೆಂದರೆ ಅವರ ಒಂದೊಂದು ಹೆಜ್ಜೆಗುರುತುಗಳನ್ನೂ ಮಾರ್ಗ ಸಂಕೇತಗಳನ್ನೂ ಗುರುತಿಸಿ ಅದನ್ನು ಅನುಸರಿಸಿ ನಡೆಯುವುದಾಗಿದೆ. ಪ್ರವಾದಿ(ಸ) ಯಾವ ಮಾರ್ಗದಲ್ಲಿ ಸಂಕಷ್ಟಗಳನ್ನು ಅನುಭವಿಸಿದ್ದಾರೋ ಆ ಮಾರ್ಗದಲ್ಲಿ ಸಂಕಷ್ಟಗಳನ್ನು ಸಹಿಸುವ ಪಣ ತೊಡುವುದಾಗಿದೆ. ಪ್ರವಾದಿಯವರ(ಸ) ಮಾರ್ಗದಲ್ಲಿ ನಡೆಯುವ ಪಣ ತೊಡುವವನು ತನ್ನತ್ತ ಹರಿಯುವ ಬಡತನ- ದಾರಿದ್ರ್ಯವನ್ನು ಅಲ್ಲಾಹನ ಮೇಲೆ ಭರವಸೆ ಮತ್ತು ದೇವಪ್ರೇಮದ ಆಯುಧಗಳಿಂದ ತಡೆಯ ಬಲ್ಲನು. ಅವನು ತನ್ನ ಮನಸ್ಸಿನಲ್ಲಿ, ಅಲ್ಲಾಹನೇ ನನ್ನ ಸಂರಕ್ಷಕ, ನಾನೇನೂ ಅಸಹಾಯಕನಲ್ಲ ವೆಂದು ದೃಢ ಮಾಡಿಕೊಳ್ಳಬೇಕು. ನಾನು ಗುಲಾಮನಾಗಿದ್ದು ನನ್ನ ಯಜಮಾನನ ಇಚ್ಛೆಯನ್ನು ಪೂರೈಸಲೇ ಬೇಕಾಗಿದೆ ಮತ್ತು ನಾನು ಯಾರ ಕೆಲಸಕ್ಕಾಗಿ ನೇಮಿಸಲ್ಪಟ್ಟಿರುವೆನೋ ಅವನು ನ್ಯಾಯಪೂರ್ಣನೂ ಕರುಣಾಳುವೂ ಆಗಿದ್ದಾನೆ. ಆದುದರಿಂದ ನನ್ನ ಪರಿಶ್ರಮವೆಂದೂ ವ್ಯರ್ಥವಾಗದು ಎಂದು ನಂಬಿರಬೇಕು. ಅದೇ ರೀತಿ ನಾನು ಯಾರನ್ನು ಪ್ರೀತಿಸುತ್ತಿದ್ದೇನೆ ಎಂಬುದನ್ನು ಅವನು ಸದಾ ನೆನಪಿನಲ್ಲಿಡಬೇಕು.

 • ವಿಧಿಯ ಮೇಲೆ ವಿಶ್ವಾಸ
  ismika16-12-2014

  ವಿಧಿಯ ಮೇಲೆ ವಿಶ್ವಾಸವಿರಿಸುವುದೆಂದರೆ ಈ ಲೋಕದಲ್ಲಿ ನಡೆಯುವುದೆಲ್ಲವೂ ಅಲ್ಲಾಹನ ವತಿಯಿಂದಲೇ ನಡೆಯುತ್ತದೆ. ಇಲ್ಲಿ ಕೇವಲ ಅವನ ಆಜ್ಞೆ ನಡೆಯುತ್ತದೆ ಎಂದು ನಂಬುವುದು. ಅಲ್ಲಾಹನ ಇಚ್ಛೆಗೆ ವಿರುದ್ಧವಾಗಿ ಲೋಕದಲ್ಲಿ ಏನೂ ನಡೆಯುವುದಿಲ್ಲ. ಎಲ್ಲ ಒಳಿತು-ಕೆಡುಕು ಮತ್ತು ಸನ್ಮಾರ್ಗ-ದುರ್ಮಾರ್ಗಕ್ಕೆ ಒಂದು ನಿಯಮವಿದೆ. ಅದನ್ನು ಅವನು ಮುಂಚೆಯೇ ಮಾಡಿದ್ದಾನೆ. ಅಲ್ಲಾಹನ ಕೃತಜ್ಞ ದಾಸರ ಮೇಲೆ ಎರಗುವ ವಿಪತ್ತುಗಳು, ಅವರು ಎದುರಿಸುವ ಸಂಕಷ್ಟ ಮತ್ತು ಪರೀಕ್ಷೆಗಳೆಲ್ಲವೂ ಅವರ ಪ್ರಭುವಿನ ಆಜ್ಞೆ ಮತ್ತು ಮೊದಲೇ ನಿಶ್ಚಯಿಸಲ್ಪಟ್ಟ ನಿಯಮಗಳಿಗೆ ಅನುಸಾರವಾಗಿ ಬರುತ್ತವೆ. ಅಲ್ಲಾಹನ ವಿಧಿಯನ್ನು ವ್ಯಕ್ತ ಪಡಿಸುವ ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡಲಾಗಿದೆ-

  ಅಲೀ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ನಿಮ್ಮ ಪೈಕಿ ಪ್ರತಿಯೊಬ್ಬನ ಸ್ವರ್ಗ ಮತ್ತು ನರಕದ ತೀರ್ಮಾನವಾಗಿ ಬಿಟ್ಟಿದೆ. ಆಗ ಜನರು ಕೇಳಿದರು- ಅಲ್ಲಾಹನ ಸಂದೇಶ ವಾಹಕರೇ! ಹಾಗಾದರೆ ನಾವೇಕೆ ನಮ್ಮ ಬಗೆಗಿನ ತೀರ್ಮಾನವನ್ನು ಹೇತುವಾಗಿಸಿ ಕರ್ಮ ಮಾಡುವುದನ್ನು ಬಿಟ್ಟು ಬಿಡಬಾರದು? ಪ್ರವಾದಿ(ಸ) ಹೇಳಿದರು- ಇಲ್ಲ. ನೀವು ಕರ್ಮ ಮಾಡಿರಿ. ಏಕೆಂದರೆ ಪ್ರತಿಯೊಬ್ಬನಿಗೂ ಅವನು ಯಾವುದಕ್ಕಾಗಿ ಸೃಷ್ಟಿಸಲ್ಪಟ್ಟಿರುವನೋ ಅದರ ಅನುಗ್ರಹವೇ ಸಿಗುವುದು. ಸೌಭಾಗ್ಯವಂತನಿಗೆ ಸ್ವರ್ಗಕ್ಕೆ ಅರ್ಹವಾದ ಕೆಲಸಗಳನ್ನು ಮಾಡುವ ತೌಫೀಕ್ (ಅನುಗ್ರಹ) ಸಿಗುವುದು. ದುರದೃಷ್ಟವಂತನಿಗೆ ನರಕಕ್ಕೆ ಅರ್ಹವಾದ ಕೆಲಸಗಳನ್ನು ಮಾಡುವ ತೌಫೀಕ್ ಸಿಗುವುದು.
  ಅನಂತರ ಪ್ರವಾದಿಯವರು(ಸ) ಹದೀಸ್‍ನಲ್ಲಿ ಪ್ರಸ್ತಾಪಿಸಲಾದ (ಸೂರಃ ಲೈಲ್‍ನ) ಎರಡು ಆಯತ್‍ಗಳನ್ನು ಪಠಿಸಿದರು. ಅದರ ಅರ್ಥ ಹೀಗಿದೆ: ಯಾರು ಅಲ್ಲಾಹನ ಮಾರ್ಗದಲ್ಲಿ ಖರ್ಚುಮಾಡಿದನೋ, ಪಾವಿತ್ರ್ಯದ ಮಾರ್ಗವನ್ನು ಅವಲಂಬಿಸಿದನೋ ಮತ್ತು ಅತ್ಯುತ್ತಮ ಮಾತನ್ನು ದೃಢೀಕರಿಸಿದನೋ (ಅರ್ಥಾತ್: ಇಸ್ಲಾಮ್ ಸ್ವೀಕರಿಸಿದನೋ) ನಾವು ಅವನಿಗೆ ಉತ್ತಮ ಜೀವನ(ಸ್ವರ್ಗ)ದ ಅನುಗ್ರಹ ನೀಡುವೆವು ಮತ್ತು ಯಾರು ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವಲ್ಲಿ ಜಿಪುಣತೆ ತೋರಿದನೋ, ಅಲ್ಲಾಹನ ಬಗ್ಗೆ ಅಲಕ್ಷ್ಯನಾದನೋ ಮತ್ತು ಉತ್ತಮ ಜೀವನವನ್ನು ನಿರಾಕರಿಸಿದನೋ ನಾವು ಅವನಿಗೆ ಕಷ್ಟದ ಜೀವನ (ನರಕ)ವನ್ನು ಅನುಗ್ರಹಿಸುವೆವು (ಅರ್ಥಾತ್: ಅವನಿಗೆ ನರಕದ ಮಾರ್ಗದಲ್ಲಿ ನಡೆಯುವುದನ್ನು ಸುಲಭಗೊಳಿಸುವೆವು). ತನ್ನ ಕೆಟ್ಟ ಕೆಲಸಗಳಿಂದಾಗಿ ಅವನು ನರಕಕ್ಕೆ ಹೋಗುವನು. [[ಬುಖಾರಿ, ಮುಸ್ಲಿಮ್]
  ಟಿಪ್ಪಣಿ: ಮನುಷ್ಯನು ಯಾವ ಕರ್ಮಗಳಿಂದಾಗಿ ನರಕಕ್ಕೆ ಅರ್ಹನಾಗುವನು ಮತ್ತು ಯಾವ ಕರ್ಮಗಳಿಂದಾಗಿ ಸ್ವರ್ಗಕ್ಕೆ ಹೋಗುವನು ಎಂಬುದನ್ನು ಅಲ್ಲಾಹನು ಬಳಿ ತೀರ್ಮಾನಿಸಿದ್ದಾನೆ. ಈ 'ವಿಧಿ'ಯ ಕುರಿತು ಕುರ್‍ಆನ್ ಮತ್ತು ಹದೀಸ್‍ಗಳಲ್ಲಿ ವಿವರವಾಗಿ ಪ್ರಸ್ತಾಪಿಸಲ್ಪಟ್ಟಿದೆ. ಇನ್ನು ತಾನು ನರಕದ ಮಾರ್ಗದಲ್ಲಿ ನಡೆಯಬೇಕೋ, ಸ್ವರ್ಗದ ಮಾರ್ಗದಲ್ಲಿ ನಡೆಯಬೇಕೋ ಎಂಬುದು ಮಾನವನಿಗೆ ಬಿಟ್ಟ ವಿಷಯ. ಎರಡರಲ್ಲೊಂದನ್ನು ಆಯ್ಕೆ ಮಾಡಬೇಕಾದುದು ಅವನ ಕರ್ತವ್ಯ. ಅಲ್ಲಾಹನು ಮಾನವನಿಗೆ ತಾನು ಬಯಸುವ ಮಾರ್ಗದ ಆಯ್ಕೆಯ ಸ್ವಾತಂತ್ರ್ಯವನ್ನು ನೀಡಿರುವನು. ಆದುದರಿಂದಲೇ ಈ ಹೊಣೆಗಾರಿಕೆಯನ್ನು ಅವನ ಮೇಲೆ ಹೊರಿಸಿರುವನು. ಅವನಿಗೆ ಎರಡೂ ಮಾರ್ಗಗಳನ್ನು ತೋರಿಸ ಲಾಗಿದೆ. ದಯಾಮಯನ ಮಾರ್ಗವನ್ನೂ ಶೈತಾನನ ಮಾರ್ಗವನ್ನೂ ಸ್ಪಷ್ಟಪಡಿಸಲಾಗಿದೆ. ಈ ಸ್ವಾತಂತ್ರ್ಯವೇ ಅವನಿಗೆ ಶಿಕ್ಷೆಯನ್ನು ವಿಧಿಸಬಲ್ಲುದು ಅಥವಾ ಅವನನ್ನು ಶಾಂತಿಗೇಹಕ್ಕೂ ತಲಪಿಸಬಲ್ಲುದು. ಆದರೆ ಬಹುತೇಕ ತಿಳಿಗೇಡಿಗಳು ತಮ್ಮ ಹೊಣೆಗಾರಿಕೆಯನ್ನು ಅಲ್ಲಾಹನ ಮೇಲೆ ಹಾಕಿ ತಾವು ಅಸಹಾಯಕರೆಂದು ಸಾರಿಬಿಡುತ್ತಾರೆ.

  ಅಬೂ ಖಿಝಾಮರವರು ತನ್ನ ತಂದೆಯಿಂದ ಹೀಗೆ ವರದಿ ಮಾಡುತ್ತಾರೆ- ನನ್ನ ತಂದೆಯವರು ಪ್ರವಾದಿಯವರಲ್ಲಿ(ಸ) ಹೀಗೆ ವಿಚಾರಿಸಿದರು- ನಾವು ರೋಗ ಶಮನಕ್ಕಾಗಿ ಉಪಯೋಗಿಸುವ ತಾಯಿತ, ಔಷಧಿ ಮತ್ತು ಅವುಗಳಿಂದ ರಕ್ಷಣೆ ಪಡೆಯಲಿಕ್ಕಾಗಿ ನಾವು ಕೈಗೊಳ್ಳುವ ಉಪಾಯಗಳು ಅಲ್ಲಾಹನ ವಿಧಿಯನ್ನು ಬದಲಾಯಿಸಬಹುದೆ?
  ಪ್ರವಾದಿ(ಸ) ಹೇಳಿದರು- ಇದೆಲ್ಲವೂ ಅಲ್ಲಾಹನ ವಿಧಿಯೇ ಆಗಿವೆ. [ತಿರ್ಮಿದಿ]
  ಟಿಪ್ಪಣಿ: ಪ್ರವಾದಿ(ಸ) ಅವರ ಮಾತಿನ ತಾತ್ಪರ್ಯವೇನೆಂದರೆ ನಮ್ಮ ವಿಧಿಯಲ್ಲಿ ರೋಗವನ್ನು ಬರೆದಿರುವ ಅಲ್ಲಾಹನೇ ಅದನ್ನು ಇಂತಿಂತಹ ಔಷಧಿ ಮತ್ತು ಉಪಾಯಗಳಿಂದ ದೂರಗೊಳಿಸಬಹುದೆಂಬುದನ್ನೂ ನಿಶ್ಚಯಿಸಿದ್ದಾನೆ. ರೋಗದ ಸೃಷ್ಟಿಕರ್ತನೂ ಅವನೇ, ಔಷಧಿಯ ಸೃಷ್ಟಿಕರ್ತನೂ ಅವನೇ. ಎಲ್ಲವೂ ಅವನು ನಿಶ್ಚಯಿಸಿದ ನಿಯಮ-ನಿಬಂಧನೆಗಳಿಗೆ ಒಳಪಟ್ಟಿವೆ.

  ಇಬ್ನು ಅಬ್ಬಾಸ್(ರ) ಹೇಳುತ್ತಾರೆ: ಒಂದು ದಿನ ನಾನು ಪ್ರವಾದಿಯವರ(ಸ) ಹಿಂದೆ ಸವಾರಿಯಲ್ಲಿ ಕುಳಿತಿದ್ದೆ. ಪ್ರವಾದಿ(ಸ) ಹೇಳಿದರು- ಎಲೈ ಬಾಲಕನೇ! ನಾನು ನಿನಗೆ ಕೆಲವು ವಿಷಯಗಳನ್ನು ಹೇಳಿ ಕೊಡುತ್ತೇನೆ (ಗಮನ ಕೊಟ್ಟು ಕೇಳು), ನೀನು ಅಲ್ಲಾಹನನ್ನು ಸ್ಮರಿಸು; ಅವನು ನಿನ್ನನ್ನು ಸ್ಮರಿಸುವನು. ಅಲ್ಲಾಹನನ್ನು ಸ್ಮರಿಸಿದರೆ ಅವನನ್ನು ನಿನ್ನ ಮುಂದೆ ಕಾಣುವಿ. ನೀನು ಬೇಡುವಾಗ ಅಲ್ಲಾಹನಲ್ಲಿ ಬೇಡು. ಸಂಕಷ್ಟ ಎದುರಾಗಿ ನಿನಗೆ ಸಹಾಯದ ಅಗತ್ಯವಿರುವಾಗ ಅಲ್ಲಾಹನಿಂದ ಸಹಾಯ ಯಾಚಿಸು. ಎಲ್ಲರೂ ಸೇರಿ ನಿನಗೇನಾದರೂ ಲಾಭ ಉಂಟು ಮಾಡಬೇಕೆಂದು ಬಯಸಿದರೆ ಅಲ್ಲಾಹನು ನಿನಗಾಗಿ ಬರೆದಿರುವುದರ ಹೊರತು ಯಾವ ಲಾಭವನ್ನೂ ಅವರು ನಿನಗೆ ಉಂಟು ಮಾಡಲಾರರು. (ಅರ್ಥಾತ್: ಕೊಡಲಿಕ್ಕೆ ಯಾರ ಬಳಿಯಲ್ಲೂ ಏನೂ ಇಲ್ಲ. ಎಲ್ಲವೂ ಅಲ್ಲಾಹನದೇ ಆಗಿದ್ದು ಅವನು ಯಾರಿಗೆ ಎಷ್ಟು ನೀಡಲು ನಿರ್ಧರಿಸಿದ್ದಾನೋ ಅಷ್ಟು ಮಾತ್ರ ಅವನಿಗೆ ಸಿಗುವುದು) ಅದೇ ರೀತಿಯಲ್ಲಿ ಎಲ್ಲರೂ ಸೇರಿ ನಿನಗೆ ಏನಾದರೂ ನಷ್ಟವುಂಟು ಮಾಡಬೇಕೆಂದು ಬಯಸಿದರೆ ಅಲ್ಲಾಹನು ನಿನಗೆ ವಿಧಿಸಿದ್ದರ ಹೊರತು ಅವರು ಯಾವುದೇ ನಷ್ಟವುಂಟು ಮಾಡಲಾರರು ಎಂಬುದನ್ನು ದೃಢವಾಗಿ ನಂಬಿರಬೇಕು. [ಮಿಶ್ಕಾತ್]

  ಅಬೂಹುರೈರಾ(ರ) ವರದಿ ಮಾಡುತ್ತಾರೆ: ಪ್ರವಾದಿ(ಸ) ಹೇಳಿದರು- ಬಲಶಾಲಿಯಾದ ಸತ್ಯವಿಶ್ವಾಸಿಯು ದುರ್ಬಲ ಸತ್ಯವಿಶ್ವಾಸಿಗಿಂತ ಉತ್ತಮ ಹಾಗೂ ಅಲ್ಲಾಹನಿಗೆ ಪ್ರಿಯ ನಾಗಿರುತ್ತಾನೆ. ಇಬ್ಬರೂ ಒಳ್ಳೆಯವರೆ. ನೀನು (ಪರಲೋಕದಲ್ಲಿ) ಪ್ರಯೋಜನ ನೀಡುವಂತಹ ವಸ್ತುವಿನ ಆಶೆ ಪಡು. ಸಂಕಷ್ಟಗಳೆದುರಾದಾಗ ಅಲ್ಲಾಹನಿಂದ ಸಹಾಯ ಯಾಚಿಸು ಮತ್ತು ಧೈರ್ಯಗುಂದದಿರು. ಇನ್ನು ನಿನ್ನ ಮೇಲೆ ಏನಾದರೂ ವಿಪತ್ತೆರಗಿದರೆ, 'ನಾನು ಇಂತಹ ಉಪಾಯ ಕೈಗೊಳ್ಳುತ್ತಿದ್ದರೆ ಈ ವಿಪತ್ತು ಎದುರಾಗುತ್ತಿರಲಿಲ್ಲ'ವೆಂದು ಹೇಳಬೇಡ. ಬದಲಾಗಿ, ಅದನ್ನು ಅಲ್ಲಾಹನೇ ವಿಧಿಸಿದ್ದಾನೆ ಮತ್ತು ಅವನು ಬಯಸಿದ್ದು ಆಗಿಯೇ ತೀರುವುದು ಎಂದು ಹೇಳು. ಏಕೆಂದರೆ 'ಹಾಗಾಗುತ್ತಿದ್ದರೆ' ಎಂಬ ಮನೋಭಾವ ಪೈಶಾಚಿಕ ಕೃತ್ಯಗಳಿಗೆ ದಾರಿ ಮಾಡಿಕೊಡುತ್ತದೆ. [ಮಿಶ್ಕಾತ್]
  ಟಿಪ್ಪಣಿ: ಈ ಹದೀಸ್‍ನ ಮೊದಲ ವಾಕ್ಯದ ಅರ್ಥವೇನೆಂದರೆ ಒಬ್ಬ ಶಾರೀರಿಕವಾಗಿ ಮಾನಸಿಕ ಹಾಗೂ ನಿರ್ಧಾರ ಶಕ್ತಿಯ ಬಲಶಾಲಿಯಾದ ಮೂಮಿನನು ಅರ್ಥಾತ್ ಸತ್ಯವಿಶ್ವಾಸಿಯು ದುರ್ಬಲನಾದ ಮೂಮಿನನಿಗಿಂತ ಅಲ್ಲಾಹನಿಗೆ ಪ್ರಿಯನಾಗಿರುತ್ತಾನೆ. ಏಕೆಂದರೆ ಧರ್ಮದ ಸೇವೆಯು ಅವನಿಂದಲೇ ಹೆಚ್ಚು ಆಗಲು ಸಾಧ್ಯ. ಶಾರೀರಿಕವಾಗಿ ದುರ್ಬಲನಾಗಿರುವ, ಆರೋಗ್ಯ ಸರಿಯಿಲ್ಲದ ಹಾಗೂ ಆಲೋಚನೆ ಮತ್ತು ನಿರ್ಧಾರ ಶಕ್ತಿ ಕುಂದಿರುವ ಒಬ್ಬನಿಂದ ಅಂತಹ ಕಾರ್ಯ ಸಾಧ್ಯವಿಲ್ಲ. ಆದರೆ ಈ ಇಬ್ಬರೂ ಒಂದೇ ಸತ್ಯಮಾರ್ಗದ ಯಾತ್ರಿಕರಾಗಿರುವಾಗ ಪುರಸ್ಕಾರದಿಂದ ದುರ್ಬಲನನ್ನು ವಂಚಿತಗೊಳಿಸಲಾಗದು. ಇಲ್ಲಿ ಉದ್ದೇಶವು ಶಕ್ತಿಶಾಲಿ ಮೂಮಿನನಿಗೆ ಆದಷ್ಟು ಕೆಲಸ ಮಾಡಲು ಪ್ರೇರಣೆ ನೀಡುವುದೇ ಆಗಿದೆ.
  ಕೊನೆಯ ವಾಕ್ಯದ ತಾತ್ಪರ್ಯವೇನೆಂದರೆ ಮೂಮಿನನು ತನ್ನ ಬುದ್ದಿ ಶಕ್ತಿ, ಶಾರೀರಿಕ ಶಕ್ತಿ ಮತ್ತು ತನ್ನ ಕಾರ್ಯದಕ್ಷತೆಯ ಕುರಿತು ಜಂಭಕೊಚ್ಚಿಕೊಳ್ಳುವುದಿಲ್ಲ. ಅವನ ಮೇಲೆ ಏನಾದರೂ ವಿಪತ್ತು ಬಂದೆರಗಿದರೆ ನಾನು ಇಂತಹ ಉಪಾಯ ಕೈಗೊಂಡಿದ್ದರೆ ಇದರಿಂದ ಪಾರಾಗಬಹುದಿತ್ತು ಎಂದು ಯೋಚಿಸುವುದಿಲ್ಲ. ಬದಲಾಗಿ ಅವನ ಮನೋಭಾವ ಹೀಗಿರುತ್ತದೆ- ಇದು ನನ್ನ ಪ್ರಭು ನಿಶ್ಚಯಿಸಿದುದಾಗಿದೆ. ಅವನ ಈ ತೀರ್ಮಾನ ನನ್ನ ಮಟ್ಟಿಗೆ ಒಳಿತಾಗಿರಬಹುದು. ಅವನು ಈ ವಿಪತ್ತನ್ನು ನನ್ನ ಸಂಸ್ಕರಣೆಗಾಗಿ ಕಳಿಸಿರಬಹುದು.

 • ಅಲ್ಲಾಹನ ಗ್ರಂಥಗಳ ಮೇಲೆ ವಿಶ್ವಾಸ
  ismika16-12-2014

  ಗ್ರಂಥಗಳ ಮೇಲೆ ವಿಶ್ವಾಸವೆಂದರೆ ಅಲ್ಲಾಹನು ತನ್ನ ಸಂದೇಶವಾಹಕರ ಮೂಲಕ ಆಗಾಗ ಕಳಿಸುತ್ತಿದ್ದ ಎಲ್ಲ ಮಾರ್ಗದರ್ಶಕ ಗ್ರಂಥಗಳನ್ನು ಸತ್ಯವೆಂದು ನಂಬುವುದು. ಹಿಂದಿನ ಜನ ಸಮುದಾಯಗಳು ತಮ್ಮ ಬಳಿಗೆ ಬಂದಿದ್ದ ಗ್ರಂಥಗಳನ್ನು ಬದಲಾಯಿಸಿಬಿಟ್ಟಿದ್ದರು. ಅಲ್ಲಾಹನು ಕೊನೆಯದಾಗಿ ತನ್ನ ಅಂತಿಮ ಸಂದೇಶವಾಹಕರ(ಸ) ಮೂಲಕ ಸುಸ್ಪಷ್ಟವಾದ ಅಂತಿಮ ಗ್ರಂಥವನ್ನು ಕಳಿಸಿದನು. ಅದು ಎಲ್ಲ ನ್ಯೂನತೆಗಳಿಂದ ಮುಕ್ತವಾದ, ಎಲ್ಲ ರೀತಿಯ ಕೆಡುಕಿನಿಂದ ಸುರಕ್ಷಿತವಾದ ಗ್ರಂಥವಾಗಿದೆ. ಕೇವಲ ಮುಸ್ಲಿಮರಲ್ಲ, ಮುಸ್ಲಿಮೇತರ ಸಂಶೋಧಕರು ಕೂಡಾ ಅದನ್ನು ಸತ್ಯಗ್ರಂಥವೆಂದು ಒಪ್ಪಿದ್ದಾರೆ! ಅಲ್ಲಾಹನ ಕಡೆಗೆ ತಲಪಬಲ್ಲ ಬೇರಾವ ಗ್ರಂಥವೂ ಈ ಗ್ರಂಥದ ಹೊರತು ಈಗ ಲೋಕದಲ್ಲಿ ಅಸ್ತಿತ್ವದಲ್ಲಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡಲಾಗಿದೆ. ಅದರಿಂದ ಕುರ್‍ಆನ್‍ನ ಮೇಲೆ ವಿಶ್ವಾಸವಿರಿಸುವುದರ ತಾತ್ಪರ್ಯ ಮತ್ತು ಅದರ ಬೇಡಿಕೆಗಳೇನೆಂದು ಸ್ಪಷ್ಟವಾಗಿ ಮನದಟ್ಟಾಗುತ್ತದೆ.

  ಹ. ಇಬ್ನು ಅಬ್ಬಾಸ್(ರ) ಹೇಳುತ್ತಾರೆ- ಅಲ್ಲಾಹನ ಗ್ರಂಥವನ್ನು ಅನುಸರಿಸುವವನು ಈ ಲೋಕದಲ್ಲೂ ದಾರಿ ತಪ್ಪಲಾರನು. ಪರಲೋಕದಲ್ಲೂ ಪರಾಜಯ ಹೊಂದಲಾರನು. ತರುವಾಯ ಅವರು, "ಯಾರು ನನ್ನ ಸನ್ಮಾರ್ಗವನ್ನು ಅನುಸರಿಸುವನೋ ಅವನು ಇಹಲೋಕದಲ್ಲಿ ಪಥಭ್ರಷ್ಟನಾಗಲಾರನು, ಪರಲೋಕದಲ್ಲೂ ಪರಾಜಯ ಹೊಂದಲಾರನು" (ಸೂರಃ ತಾಹಾ: 123) ಎಂಬ ಕುರ್‍ಆನ್ ವಚನವನ್ನು ಪಠಿಸಿದರು. [ಮಿಶ್ಕಾತ್]

  ಅಬೂ ಹುರೈರಾ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಕುರ್‍ಆನ್‍ನಲ್ಲಿ ಐದು ವಸ್ತುಗಳ ಪ್ರಸ್ತಾಪವಿದೆ- 1) ಹಲಾಲ್. 2) ಹರಾಮ್. 3) ಮುಹ್ಕಮ್. 4) ಮುತಶಾಬಿಹ್. 5) ಅಮ್ಸಾಲ್. ನೀವು ಹಲಾಲನ್ನು ಹಲಾಲ್ (ಧರ್ಮಬದ್ಧ) ಎಂದು ಭಾವಿಸಿರಿ. ಹರಾಮನ್ನು ಹರಾಮ್ (ನಿಷಿದ್ಧ) ಎಂದು ಬಗೆಯಿರಿ, ಮುಹ್ಕಮ್‍ನಂತೆ (ನಿಯಮಗಳನ್ನು ವಿವರಿಸಲಾದ ಕುರ್‍ಆನ್ ಭಾಗಗಳು) ನಡೆಯಿರಿ, ಮುತಶಾಬಿಹ್ (ಪರಲೋಕದ ಕುರಿತು ಕುರ್‍ಆನಿನಲ್ಲಿ ಪ್ರಸ್ತಾಪಿಸಲಾದ ಭಾಗಗಳು ಅಂದರೆ ಸ್ವರ್ಗ, ನರಕ, ಅರ್ಶ್ (ದೇವ ಪೀಠ) ಕುರ್ಸಿ ಇತ್ಯಾದಿ)ಗಳ ಮೇಲೆ ವಿಶ್ವಾಸವಿರಿಸಿರಿ. (ಅದರ ಶೋಧನೆಗೆ ಹೋಗಬೇಡಿರಿ) ಅಮ್ಸಾಲ್‍ನಿಂದ (ಜನಾಂಗಗಳ ವಿನಾಶದ ಪಾಠಪ್ರದ ಪ್ರಸ್ತಾಪವಿರುವ ಕುರ್‍ಆನಿನ ಭಾಗಗಳು) ಪಾಠ ಬೋಧಕ ಕಲಿಯಿರಿ. [ಮಿಶ್ಕಾತ್]

  ಜಾಬಿರ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಅಲ್ಲಾಹನು ಕೆಲವು ವಿಷಯಗಳನ್ನು ಫರ್ಝ್(ಕಡ್ಡಾಯ) ಎಂದು ಸಾರಿದ್ದಾನೆ. ಅವುಗಳನ್ನು ನೆರವೇರಿಸಬೇಕು, ವ್ಯರ್ಥ ಗೊಳಿಸಬಾರದು. ಕೆಲವು ವಿಷಯಗಳನ್ನು ಹರಾಮ್ (ನಿಷಿದ್ಧ) ಎಂದು ಸಾರಿದ್ದಾನೆ. ಅವುಗಳನ್ನು ಮಾಡಬಾರದು. ಕೆಲವು ಮೇರೆಗಳನ್ನು ನಿಶ್ಚಯಿಸಿರುವನು. ಅವುಗಳನ್ನು ಉಲ್ಲಂಘಿಸಬಾರದು. ಕೆಲವು ವಿಷಯಗಳ ಬಗ್ಗೆ ಮೌನ ತಾಳಿದ್ದಾನೆ- ಇದು ಮರೆವಿನಿಂದಲ್ಲ- ಅವುಗಳನ್ನು ಕೆದಕಬಾರದು. [ಮಿಶ್ಕಾತ್]

  ಝಿಯಾದ್ ಬಿನ್ ಲಬೀದ್(ರ) ಹೇಳುತ್ತಾರೆ: ಪ್ರವಾದಿ(ಸ) ಒಂದು ವಿಷಯವನ್ನು ಪ್ರಸ್ತಾಪಿಸಿದರು- (ಬಹುಶಃ ಸಮುದಾಯಕ್ಕೆ ಮುಂದೆ ಬರಲಿರುವ 'ಅಪಾಯ'ದ ಕುರಿತಾಗಿರಬೇಕು) ಆ ಕಾಲವು 'ಇಲ್ಮ್' (ವಿದ್ಯೆ) ಎತ್ತಲ್ಪಡುವ ಕಾಲವಾಗಿರುವುದು. ಆಗ ನಾನು ಹೀಗೆ ಕೇಳಿದೆ- "ಅಲ್ಲಾಹನ ಸಂದೇಶವಾಹಕರೇ! ಅದು ಹೇಗೆ ಎತ್ತಲ್ಪಡುವುದು? ನಾವು ಕುರ್‍ಆನ್ ಓದುತ್ತಿರುವೆವು, ನಮ್ಮ ಮಕ್ಕಳಿಗೂ ಕಲಿಸುತ್ತಿರುವೆವು ಮತ್ತು ನಮ್ಮ ಮಕ್ಕಳು ಅವರ ಸಂತಾನಗಳಿಗೂ ಕಲಿಸುವರಲ್ಲವೆ?" ಪ್ರವಾದಿ(ಸ) ಹೇಳಿದರು- ಝಿಯಾದ್, ಭೇಷ್! ನಾನು ನಿಮ್ಮನ್ನು ಮದೀನಾದಲ್ಲಿ ದೊಡ್ಡ ಧರ್ಮಜ್ಞಾನಿಯೆಂದು ಭಾವಿಸಿದ್ದೆ! ಯಹೂದಿಯರೂ ಕ್ರೈಸ್ತರೂ ತೌರಾತ್ ಮತ್ತು ಇಂಜೀಲನ್ನು ಪಠಿಸುತ್ತಿಲ್ಲವೆ? ಆದರೆ ಅವುಗಳ ಬೋಧನೆಗಳಂತೆ ಅವರು ನಡೆಯುವುದಿಲ್ಲ. [ಇಬ್ನುಮಾಜಃ]
  ಟಿಪ್ಪಣಿ: 'ಇಲ್ಮ್' ಎಂದರೆ ಪ್ರವಾದಿಗಳ ಮೂಲಕ ಬಂದ ವಿದ್ಯೆಯಾಗಿದೆ. ಈ ಹದೀಸ್‍ನಿಂದ ತಿಳಿದು ಬರುವುದೇನೆಂದರೆ ಸಹಾಬಿಗಳು ತಮ್ಮ ಮಕ್ಕಳಿಗೆ ಪ್ರವಾದಿಗಳ ಶಿಕ್ಷಣವನ್ನು ನೀಡುವ ಬಗ್ಗೆ ಆಸ್ಥೆ ವಹಿಸುತ್ತಿದ್ದರು. ಅವರು ಕುರ್‍ಆನ್ ಕಲಿಸದೆ ಕ್ರೈಸ್ತ ಮಿಶನರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವ ಇಂದಿನ ಮುಸ್ಲಿಮರಂತೆ ಆಗಿರಲಿಲ್ಲ.

  ಅಬೂ ಶುರೈಹ್ ಖುಝಾಈ(ರ) ಹೇಳುತ್ತಾರೆ: ಪ್ರವಾದಿ(ಸ) ಒಂದು ದಿನ ತಮ್ಮ ನಿವಾಸದಿಂದ ಹೊರಟು ನಮ್ಮ ಬಳಿಗೆ ಬಂದು ಹೀಗೆಂದರು- ನೀವು ಅಲ್ಲಾಹನ ಹೊರತು ಬೇರೆ ಇಲಾಹ್ (ಆರಾಧ್ಯ, ಒಡೆಯ ಮತ್ತು ಆಜ್ಞಾಧಿಕಾರಿ) ಯಾರೂ ಇಲ್ಲವೆಂದೂ ನಾನು ಅಲ್ಲಾಹನ ಸಂದೇಶವಾಹಕನೆಂದೂ ಸಾಕ್ಷ್ಯ ವಹಿಸುವುದಿಲ್ಲವೆ? ಜನರು ಹೇಳಿದರು- ಖಂಡಿತ, ನಾವು ಈ ಎರಡೂ ವಿಷಯಗಳ ಸಾಕ್ಷ್ಯ ವಹಿಸುತ್ತೇವೆ. ತರುವಾಯ ಪ್ರವಾದಿ(ಸ) ಹೇಳಿದರು- ನೋಡಿರಿ, ಅಲ್ಲಾಹನ ಗ್ರಂಥದ- ಪವಿತ್ರ ಕುರ್‍ಆನ್- ಒಂದು ತುದಿಯು ಅಲ್ಲಾಹನ ಕೈಯಲ್ಲೂ ಇನ್ನೊಂದು ತುದಿಯು ನಿಮ್ಮ ಕೈಯಲ್ಲೂ ಇದೆ. ಆದುದರಿಂದ ನೀವು ಕುರ್‍ಆನನ್ನು ಬಿಗಿಯಾಗಿ ಹಿಡಿದರೆ ಎಂದೂ ದಾರಿ ತಪ್ಪಲಾರಿರಿ ಮತ್ತು ನಾಶವಾಗಲಾರಿರಿ.
  [ತರ್ಗೀಬು ಲಿಲ್ ಮುಂದಿರಿ]
  ಟಿಪ್ಪಣಿ: 'ಅಲ್ಲಾಹನ ಪಾಶವನ್ನು ಬಿಗಿಯಾಗಿ ಹಿಡಿಯಿರಿ' ಎಂಬ ಕುರ್‍ಆನಿನ ಸೂಕ್ತದ ಅತ್ಯುತ್ತಮ ವ್ಯಾಖ್ಯಾನವಾಗಿದೆ ಈ ಹದೀಸ್. ಕುರ್‍ಆನ್ ವಾಸ್ತವದಲ್ಲಿ ಒಂದು ಹಗ್ಗವಾಗಿದ್ದು ಅದರ ಒಂದು ತುದಿ ಅಲ್ಲಾಹನ ಕೈಯಲ್ಲೂ ಇನ್ನೊಂದು ತುದಿ ಸತ್ಯವಿಶ್ವಾಸಿಗಳ ಕೈಯಲ್ಲೂ ಇದೆ. ಮುಸ್ಲಿಮರು ಎಲ್ಲಿಯ ವರೆಗೆ ಈ ಹಗ್ಗವನ್ನು ಹಿಡಿದಿರುವರೋ ಅಲ್ಲಿಯ ವರೆಗೆ ಅಲ್ಲಾಹನ ಸಹಾಯ ಸಿಗುತ್ತಲಿರುವುದು. ಇಹಲೋಕದಲ್ಲೂ ಗೌರವ, ಪ್ರತಿಷ್ಠೆ ಹಾಗೂ ಪರಲೋಕದಲ್ಲೂ ಶಾಶ್ವತ ಸುಖ ಲಭಿಸುವುದು.
  ಆಯತ್‍ನಲ್ಲಿರುವ 'ಹಬ್ಲ್' ಎಂಬ ಪದಕ್ಕೆ ಒಪ್ಪಂದ ಎಂಬ ಅರ್ಥವೂ ಇದೆ. ಒಪ್ಪಂದವು ಏಕಪಕ್ಷೀಯವಾಗಿರುವುದಿಲ್ಲ. ಪ್ರವಾದಿಯವರ(ಸ) ಈ ಮಾತಿನ ಇಂಗಿತವೇನೆಂದರೆ ಕುರ್‍ಆನ್ ಒಂದು ಒಡಂಬಡಿಕೆಯಾಗಿದೆ. ಮುಸ್ಲಿಮರ ಮತ್ತು ಸರ್ವಲೋಕಗಳ ಪಾಲಕನಾದ ಅಲ್ಲಾಹನ ನಡುವೆ ನಡೆದ ಒಡಂಬಡಿಕೆಯಿದು. ಇದರಲ್ಲಿ ಎರಡು ಪರಿಚ್ಛೇದಗಳಿವೆ. ಒಂದನೆಯದು ಮುಸ್ಲಿಮರಿಗೆ ಸಂಬಂಧಿಸಿದೆ. ಎರಡನೆಯದರ ಸಂಬಂಧ ಅಲ್ಲಾಹನೊಂದಿಗಿದೆ. ಮುಸ್ಲಿಮರಿಗೆ ಸಂಬಂಧಿಸಿದ ಪರಿಚ್ಛೇದದಲ್ಲಿ ಈ ವಾಕ್ಯವಿದೆ- ಅಲ್ಲಾಹನೇ! ನಾವು ನಿನ್ನ ಗ್ರಂಥದ ಬೆಳಕಿನಲ್ಲಿ ಜೀವನ ಸಾಗಿಸುವೆವು. ನಿನ್ನ ಎಲ್ಲಾ ಆಜ್ಞೆಗಳನ್ನು ಪಾಲಿಸುವೆವು. ನಿನ್ನ ದಾಸರಾಗಿ ಬಾಳುವೆವು ಮತ್ತು ನಿನ್ನ ದಾಸ್ಯ ಅನುಸರಣೆಯಲ್ಲೇ ಸಾಯುವೆವು. ಅಲ್ಲಾಹನಿಗೆ ಸಂಬಂಧಿಸಿದ ಪರಿಚ್ಛೇದದಲ್ಲಿ ಈ ರೀತಿ ಬರೆಯಲಾಗಿದೆ- ಮುಸ್ಲಿಮರೇ! ನೀವು ಎಲ್ಲಿಯ ವರೆಗೆ ನಿಮ್ಮ ಒಪ್ಪಂದವನ್ನು ಪಾಲಿಸುವಿರೋ ಅಲ್ಲಿಯವರೆಗೆ ಭೂಲೋಕದಲ್ಲಿ ನಾನು ನಿಮ್ಮ ಸಹಾಯಕನಾಗಿರುವೆನು. ವೈರಿಗಳ ವಿರುದ್ಧ ನಿಮ್ಮನ್ನು ಗೆಲ್ಲಿಸುವೆನು. ಆದರೆ ನೀವು ಈ ಒಪ್ಪಂದದಲ್ಲಿ ವಂಚನೆ ಮಾಡಿದರೆ ನನ್ನ ಸಹಾಯ ಸಹಕಾರಗಳಿಂದ ವಂಚಿತರಾಗುವಿರಿ. ಇನ್ನು ನೀವು ಒಪ್ಪಂದವನ್ನು ಮುರಿದರೆ ನನ್ನ ಸಹಾಯ ಸಹಕಾರಗಳು ಶಾಶ್ವತವಾಗಿ ನಿಮ್ಮಿಂದ ದೂರ ಸರಿಯುವುವು. ಈ ಒಪ್ಪಂದದ ಪ್ರಸ್ತಾಪವು ಕುರ್‍ಆನಿನ ಸೂರಃ ಅಲ್ ಮಾಇದಃದ 7ರಿಂದ 13ರವರೆಗಿನ ವಚನಗಳಲ್ಲಿದೆ. ಮುಂದಿನ ಅಧ್ಯಾಯಗಳಲ್ಲಿ ಪ್ರವಾದಿಯವರ(ಸ) ವಚನಗಳಿಂದ ಅಲ್ಲಾಹನೊಂದಿಗೆ ಮಾಡಿದ ಒಪ್ಪಂದವನ್ನು ಮುರಿಯುವುದರ ದುಷ್ಪರಿಣಾಮಗಳು ವಾಚಕರ ಮುಂದೆ ಬರಲಿದೆ. ಮುಸ್ಲಿಮ್ ಸಮುದಾಯಕ್ಕೆ ಈ ಒಪ್ಪಂದವನ್ನು ಪುನಶ್ಚೇತನಗೊಳಿಸುವ ಸೌಭಾಗ್ಯವನ್ನು ಅಲ್ಲಾಹನು ದಯಪಾಲಿಸಲಿ. ಒಪ್ಪಂದ ಭಂಗ ಮತ್ತು ಅದರ ದುಷ್ಪರಿಣಾಮಗಳಿಂದ ಸಮುದಾಯವನ್ನು ರಕ್ಷಿಸಲಿ.

 • ಪರಲೋಕ ವಿಶ್ವಾಸ
  ismika16-12-2014

  ಪರಲೋಕದ ಮೇಲೆ ವಿಶ್ವಾಸವಿರಿಸುವುದೆಂದರೆ, ಮಾನವನು ಈ ಕೆಳಗಿನ ವಾಸ್ತವಿಕತೆ ಗಳನ್ನು ನಂಬುವುದಾಗಿದೆ- ಒಂದು ದಿನ ಬರಲಿದೆ, ಅಂದು ಎಲ್ಲ ಮಾನವರ ಜೀವನದ ಕಡತಗಳ ವಿಚಾರಣೆ ನಡೆಯುವುದು. ಯಾರ ಕರ್ಮಗಳು ತೃಪ್ತಿಕರವಾಗಿರುವುವೋ ಅವರು ಪುರಸ್ಕಾರ ಪಡೆಯುವರು. ಯಾರ ಕರ್ಮಗಳು ಹಾಳಾಗಿರುವುವೋ ಅವರು ಶಿಕ್ಷೆ ಪಡೆಯುವರು. ಶಿಕ್ಷೆಯೂ ಅನಂತ, ಪುರಸ್ಕಾರವೂ ಶಾಶ್ವತ ಹಾಗೂ ಸುಖ-ಸಂತೋಷವೂ ಶಾಶ್ವತ, ಕಷ್ಟಕಾರ್ಪಣ್ಯವೂ ಶಾಶ್ವತ. ಪರಲೋಕದ ಕುರಿತು ಕೆಲವು ಹದೀಸ್‍ಗಳನ್ನು ಇಲ್ಲಿ ಕೊಡ ಲಾಗಿದೆ. ಅದರಿಂದ ಪರಲೋಕದ ಕುರಿತು ಸ್ಪಷ್ಟವಾಗುತ್ತದೆ-

  ಇಬ್ನು ಉಮರ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಯಾರಾದರೂ ಈ ಲೋಕದಲ್ಲಿದ್ದುಕೊಂಡೇ ನಿರ್ಣಾಯಕ ದಿನವನ್ನು ಕಣ್ಣಾರೆ ನೋಡ ಬಯಸುವುದಾದರೆ 'ಇದಶ್ಶಂಸು ಕುವ್ವಿರತ್, ಇದಸ್ಸಮಾಉಂ ಫತರತ್ ಮತ್ತು ಇದಸ್ಸಮಾಉಂಶಕ್ಕತ್' ಎಂಬ ಮೂರು ಸೂರಃಗಳನ್ನು ಪಠಿಸಲಿ. (ಈ ಮೂರು ಅಧ್ಯಾಯಗಳಲ್ಲಿ ನಿರ್ಣಾಯಕ ದಿನದ ಚಿತ್ರಣವನ್ನು ಅತ್ಯಂತ ಪ್ರಭಾವಕಾರಿ ಶೈಲಿಯಲ್ಲಿ ಮಾಡಲಾಗಿದೆ) [ತಿರ್ಮಿದಿ]

  ಅಬೂ ಹುರೈರಾ(ರ) ಹೇಳುತ್ತಾರೆ: ಪ್ರವಾದಿಯವರು(ಸ) 'ಯೌಮಇದಿನ್ ತುಹದ್ದಿಸು ಅಖ್ಬಾರಹಾ' ಅಂದು ಭೂಮಿಯು ತನ್ನ ವೃತ್ತಾಂತವನ್ನು ವಿವರಿಸುವುದು ಸೂರಃ ಝಿಲ್‍ಝಾಲ್ ಎಂಬ ವಚನವನ್ನು ಪಠಿಸಿದರು. ತರುವಾಯ, ಅದರ ಅರ್ಥವೇನೆಂದು ಬಲ್ಲಿರಾ? ಎಂದು ಕೇಳಿದರು. ಜನರು ಹೇಳಿದರು- ಅಲ್ಲಾಹ್ ಮತ್ತು ಆತನ ಸಂದೇಶವಾಹಕರೇ ಚೆನ್ನಾಗಿಬಲ್ಲರು. ಆಗ ಪ್ರವಾದಿ(ಸ) ಹೇಳಿದರು- ನಿರ್ಣಾಯಕ ದಿನದಂದು ಭೂಮಿಯು, ಈ ನಿನ್ನ ದಾಸ ಮತ್ತು ದಾಸಿ ಇಂತಹ ದಿನ ಮತ್ತು ಇಂತಹ ಘಳಿಗೆಯಲ್ಲಿ ನನ್ನ ಬೆನ್ನ ಮೇಲೆ ಇಂತಿಂತಿಹ ಕೆಟ್ಟ ಅಥವಾ ಉತ್ತಮ ಕೆಲಸ ಮಾಡಿದನು(ಳು) ಎಂದು ಸಾಕ್ಷಿ ನುಡಿಯುವುದು. [ತಿರ್ಮಿದಿ]

 • ಕಪಟ ವಿಶ್ವಾಸದ ದುಷ್ಪರಿಣಾಮ
  ismika16-12-2014

  ಅಬೂಹುರೈರಾ(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು..... (ನಿರ್ಣಾಯಕ ದಿನದಂದು) ಒಬ್ಬ ದಾಸನು ಅಲ್ಲಾಹನ ಮುಂದೆ ಬರುವನು. ಅವನೊಂದಿಗೆ ಅಲ್ಲಾಹನು ಹೀಗೆನ್ನುವನು- ಓ ಇಂಥವನೇ! ನಾನು ನಿನಗೆ ಗೌರವಾದರಗಳನ್ನು ದಯಪಾಲಿಸಿರಲಿಲ್ಲವೆ? ನಾನು ನಿನ್ನನ್ನು ನಾಯಕನಾಗಿ ಮಾಡಿರಲಿಲ್ಲವೆ? ನಾನು ನಿನಗೆ ಪತ್ನಿಯನ್ನು ನೀಡಿರಲಿಲ್ಲವೆ? ನಿನ್ನ ಸ್ವಾಧೀನಕ್ಕೆ ಕುದುರೆ-ಒಂಟೆಗಳನ್ನು ಕೊಟ್ಟಿರಲಿಲ್ಲವೆ? ನೀನು ಆಡಳಿತವನ್ನು ನಡೆಸಿ ಜನರಿಂದ ಕಂದಾಯ ವಸೂಲು ಮಾಡಲು ನಿನಗೆ ನಾನು ಅವಕಾಶ ನೀಡಿರಲಿಲ್ಲವೇ? ಅವನು ಆ ಎಲ್ಲಾ ಕೊಡುಗೆಗಳನ್ನು ಒಪ್ಪಿಕೊಳ್ಳುವನು. ತರುವಾಯ ಅವನೊಂದಿಗೆ ಅಲ್ಲಾಹನು ಪುನಃ ಕೇಳುವನು- ನೀನು ಒಂದು ದಿನ ನನ್ನೆದುರು ಹಾಜರುಗೊಳಿಸಲ್ಪಡುವಿ ಎಂಬ ವಿಶ್ವಾಸ ವಿರಿಸಿದ್ದೆಯಾ? ಅವನು ಹೇಳುವನು- ಇಲ್ಲ, ನಾನು ಈ ದಿನದ ಬಗ್ಗೆ ವಿಶ್ವಾಸವಿರಿಸಿರಲಿಲ್ಲ. ಆಗ ಅಲ್ಲಾಹನು ಹೇಳುವನು- ಭೂಲೋಕದಲ್ಲಿ ನೀನು ನನ್ನನ್ನು ಮರೆತಂತೆಯೇ ಈ ದಿನ ನಾನೂ ನಿನ್ನನ್ನು ಮರೆತು ಬಿಡುವೆನು. (ನಿನ್ನನ್ನು ಕಡೆಗಣಿಸುವೆನು. ನನ್ನ ಅನುಗ್ರಹದಿಂದ ದೂರವಿರಿಸುವೆನು)
  ಅನಂತರ ಇನ್ನೋರ್ವನು (ನಿರ್ಣಾಯಕ ದಿನವನ್ನು ನಿರಾಕರಿಸುವ) ಅಲ್ಲಾಹನ ಮುಂದೆ ಬರುವನು. ಅವನಲ್ಲೂ ಇದೇ ರೀತಿಯ ಪ್ರಶ್ನೋತ್ತರ ನಡೆಯುವುದು. ಆ ಬಳಿಕ ಮತ್ತೊಬ್ಬ ವ್ಯಕ್ತಿ ಬರುವನು. ಈ ಇಬ್ಬರೊಡನೆ ಕೇಳಿದ ಪ್ರಶ್ನೆಗಳನ್ನೇ ಅವನಿಗೂ ಹಾಕಲಾಗುವುದು. ಆಗ ಅವನು ಹೀಗೆ ಉತ್ತರಿಸುವನು- ನನ್ನ ಪ್ರಭೂ! ನಾನು ನಿನ್ನ ಮೇಲೆ ವಿಶ್ವಾಸವಿರಿಸಿದ್ದೆ. ನಮಾಝ್ ಮಾಡುತ್ತಿದ್ದೆ. ಉಪವಾಸ ವ್ರತ ಆಚರಿಸುತ್ತಿದ್ದೆ. ನಿನ್ನ ಮಾರ್ಗದಲ್ಲಿ ನನ್ನ ಸಂಪತ್ತನ್ನು ವ್ಯಯಿಸುತ್ತಿದ್ದೆ. ಅದೇ ರೀತಿ ತಾನು ಮಾಡಿದ ಸತ್ಕರ್ಮಗಳನ್ನೆಲ್ಲ ಸರಸರನೆ ಹೇಳುತ್ತಾ ಹೋಗುವನು. ಆಗ ಅಲ್ಲಾಹನು ಅವನೊಂದಿಗೆ ಹೀಗೆನ್ನುವನು- ಸಾಕು ಮಾಡು, ನಿಲ್ಲಿಸು, ನಿನ್ನ ಕುರಿತು ಇತರ ಸಾಕ್ಷಿದಾರರನ್ನು ಕರೆಯುತ್ತೇನೆ. ಆಗ ಅವನು ಮನದಲ್ಲೇ ತನ್ನ ಬಗ್ಗೆ ಸಾಕ್ಷಿ ನುಡಿಯುವವರು ಯಾರಿರಬಹುದು ಎಂದು ಅಂದುಕೊಳ್ಳುವನು. ಹಾಗೆ ಅವನ ಸುಳ್ಳು ಹೇಳುವ ಬಾಯಿಯನ್ನು ಮುಚ್ಚಲಾಗುವುದು ಮತ್ತು ಅವನ ತೊಡೆ, ಮಾಂಸ ಮತ್ತು ಮೂಳೆಗಳೊಂದಿಗೆ ವಿಚಾರಿಸಲಾಗುವುದು. ಆಗ ಅವು ಅವನ ಪ್ರತಿಯೊಂದು ಮೋಸಗಾರಿಕೆಯ ಮತ್ತು ತೋರಿಕೆಯ ಕರ್ಮಗಳನ್ನು ಸ್ಪಷ್ಟವಾಗಿ ವಿವರಿಸುವುವು. ಈ ರೀತಿ ಅವನು ಸುಳ್ಳು ಹೇಳುವ ಬಾಗಿಲನ್ನೇ ಮುಚ್ಚಿ ಬಿಡಲಾಗುವುದು.
  ಪ್ರವಾದಿ(ಸ) ಹೇಳಿದರು- ಇದು ಭೂಲೋಕದಲ್ಲಿ ಕಾಪಟ್ಯ ತೋರಿದ ಮತ್ತು ಅಲ್ಲಾಹನ ಕ್ರೋಧಕ್ಕೆ ಪಾತ್ರನಾದ ವ್ಯಕ್ತಿಯಾಗಿರುವನು. [ಮುಸ್ಲಿಮ್]

  ಆಯಿಶಾ(ರ) ಹೇಳುತ್ತಾರೆ- ಪ್ರವಾದಿ(ಸ) ಕೆಲವು ನಮಾಝ್‍ಗಳಲ್ಲಿ ಈ ರೀತಿ ಪ್ರಾರ್ಥಿಸುವುದನ್ನು ಕೇಳಿದ್ದೇನೆ- ಓ ಅಲ್ಲಾಹ್! ನನ್ನನ್ನು ಸರಳ ವಿಚಾರಣೆಗೆ ಒಳಪಡಿಸು. ನಾನು ಕೇಳಿದೆ- ಅಲ್ಲಾಹನ ಸಂದೇಶವಾಹಕರೇ! ಸರಳ ವಿಚಾರಣೆಯೆಂದರೇನು? ಪ್ರವಾದಿ(ಸ) ಹೇಳಿದರು- ಸರಳ ವಿಚಾರಣೆಯೆಂದರೆ ಅಲ್ಲಾಹನು ತನ್ನ ದಾಸನ ಕರ್ಮಪತ್ರವನ್ನು ನೋಡಿ, ಅವನ ಲೋಪದೋಷಗಳನ್ನು ಕ್ಷಮಿಸಿಬಿಡುವುದು. ಅನಂತರ ಹೀಗೆಂದರು- ಆಯಿಶಾ! ವಿಚಾರಣೆ ನಡೆಸುವಾಗ ಯಾರ ಒಂದೊಂದು ಕರ್ಮವನ್ನೂ ಸೂಕ್ಷ್ಮವಾಗಿ ಪರಿಶೀಲಿಸ ಲಾಗುವುದೋ ಅವನು ನಾಶವಾಗಿ ಹೋದನು. [ಅಹ್ಮದ್]
  ಟಿಪ್ಪಣಿ: ಯಾರು ಅಲ್ಲಾಹನ ಮಾರ್ಗದಲ್ಲಿ ನಡೆಯುವ, ಅವರಿಗೆ ನೀಡಲಾದ ಆದೇಶಗಳನ್ನು ಪಾಲಿಸುತ್ತಾರೋ, ತಮಗೆ ನಿಷೇಧಿಸಲಾದ ವಿಷಯಗಳ ಹತ್ತಿರವೂ ಸುಳಿಯುವುದಿಲ್ಲವೋ ವಿಚಾರಣೆಯ ದಿನ ಅಲ್ಲಾಹನು ಅವರ ಮೇಲೆ ಕೃಪೆದೋರುವನು, ಅವರ ಚಿಕ್ಕ ಪುಟ್ಟ ದೋಷಗಳನ್ನು ಕಡೆಗಣಿಸುವನು, ಅವರನ್ನು ಸ್ವರ್ಗದಲ್ಲಿ ಪ್ರವೇಶಗೊಳಿಸುವನು ಎಂದು ಕುರ್‍ಆನ್ ಮತ್ತು ಅನೇಕ ಹದೀಸ್‍ಗಳಿಂದ ತಿಳಿದುಬರುತ್ತದೆ. ಅದಕ್ಕೆ ವ್ಯತಿರಿಕ್ತವಾಗಿ ಯಾರು ಕಡ್ಡಾಯ ಆದೇಶಗಳನ್ನು ಉದ್ದೇಶ ಪೂರ್ವಕವಾಗಿ ಮುರಿಯುತ್ತಾರೋ ಅವರನ್ನು ತಡೆಯಲಾದ ಪಾಪಗಳನ್ನು ಅರಿತೂ ಅರಿತೂ ಮಾಡುತ್ತಾರೋ ಅಂತಹ ಜನರೊಂದಿಗೆ ವಿಚಾರಣೆಯ ವೇಳೆ ಕಠಿಣವಾಗಿ ವರ್ತಿಸಲಾಗುವುದು. ಅವರ ಒಂದೊಂದು ತಪ್ಪನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದು. ಇಂತಹ ವ್ಯಕ್ತಿ ಕೆಟ್ಟ ಪರಿಣಾಮದಿಂದ ಪಾರಾಗುವುದಾದರೂ ಹೇಗೆ?

  ಅಬೂ ಸಈದ್ ಖುದ್ರೀ(ರ) ಹೇಳುತ್ತಾರೆ: ನಾನು ಪ್ರವಾದಿಯವರ(ಸ) ಬಳಿಗೆ ಹೋಗಿ 'ಯೌಮ ಯಕೂಮು' ಎಂಬ ವಚನ ಬಂದಿರುವ (ಒಂದು ದಿನವು ಒಂದು ಸಾವಿರ ವರ್ಷಗಳಿಗೆ ಸಮಾನವಾಗಿರುವ) ಆ ದಿನ ಅಲ್ಲಾಹನ ಸನ್ನಿಧಿಯಲ್ಲಿ ನಿಲ್ಲಬಲ್ಲವನು ಯಾರು ಎಂದು ಕೇಳಿದೆ. ಆಗ ಪ್ರವಾದಿ(ಸ) ಹೇಳಿದರು- ಆ ದಿನವು ಸತ್ಯವಿಶ್ವಾಸಿಯ ಮಟ್ಟಿಗೆ ಫರ್ಝ್ ನಮಾಝ್‍ನಂತೆ ಕನಿಷ್ಠವೂ ಹಗುರವೂ ಆಗಿರುವುದು. [ಮಿಶ್ಕಾತ್]
  ಟಿಪ್ಪಣಿ: ಹ.ಅಬೂ ಸಈದ್ ಖುದ್ರೀ ಅವರಿಗೆ ಪರಲೋಕದ ಚಿಂತೆ ಎಷ್ಟಿತ್ತೆಂದು ಈ ಹದೀಸ್‍ನಿಂದ ತಿಳಿದು ಬರುತ್ತದೆ. ಅವರಿಗೆ ಪ್ರವಾದಿ(ಸ) ಹೀಗೆಂದರು- ಆ ದಿನದ ಸಂಕಷ್ಟವು ಅಪರಾಧಿಗಳಿಗೂ ಬಂಡುಕೋರರಿಗೂ ಇರುವುದು. ಅವರಿಗೆ ಆ ದಿನವು ಒಂದು ಸಾವಿರ ವರ್ಷದಷ್ಟು ದೀರ್ಘವಾಗಿ ತೋರುವುದು. ಸಂಕಷ್ಟದಲ್ಲಿ ಸಿಲುಕಿದ ವ್ಯಕ್ತಿಯ ದಿನವು ದೀರ್ಘವಾಗಿರುತ್ತದೆ. ಹೊತ್ತು ಹೋಗುವುದೇ ಇಲ್ಲ. ಆದರೆ ಸದಾಚಾರಿ ಮುಸ್ಲಿಮನಿಗೆ ಆ ದಿನವು ಹಗುರವಾಗಿರುವುದು, ಸುಖದಾಯಕವಾಗಿರುವುದು. ಆ ದಿನದ ಸುಖ ಸಂತೋಷಗಳಿಗಾಗಿಯೇ ಅವರು ಈ ಲೋಕದ ಎಲ್ಲ ಸಂಕಷ್ಟಗಳನ್ನು ಸಹಿಸಿದ್ದರಲ್ಲವೆ!

  ಅನಸ್(ರ) ಹೇಳುತ್ತಾರೆ: ಪ್ರವಾದಿ(ಸ) ಹೇಳಿದರು- ಲೋಕದಲ್ಲಿ ನರಕಕ್ಕೆ ಅರ್ಹನಾದ ಅತ್ಯಂತ ಸಂಪನ್ನ ವ್ಯಕ್ತಿಯೊಬ್ಬನನ್ನು ತಂದು ನರಕಕ್ಕೆ ಹಾಕಲಾಗುವುದು. ಆ ಬೆಂಕಿಯು ತನ್ನ ಪ್ರಭಾವವನ್ನು ಅವನ ಮೇಲೆ ಬೀರಿದಾಗ ಅವನೊಂದಿಗೆ ಕೇಳಲಾಗುವುದು- ಓ ಮಾನವಾ! ನೀನೆಂದಾದರೂ ಸುಖ ಸಂತೋಷವನ್ನು ಕಂಡಿರುವೆಯಾ? ನಿನಗೆಂದಾದರೂ ಸಿರಿವಂತಿಕೆಯ ದಿನಗಳು ಬಂದಿವೆಯೇ? ಅವನು ಹೇಳುವನು- ನನ್ನ ಪ್ರಭೂ! ಖಂಡಿತ ಕಂಡಿಲ್ಲ.
  ಅನಂತರ ಅತ್ಯಂತ ದಾರಿದ್ರ್ಯದಲ್ಲಿ ಜೀವಿಸುತ್ತಿದ್ದ ಸ್ವರ್ಗಕ್ಕೆ ಅರ್ಹನಾದ ವ್ಯಕ್ತಿಯನ್ನು ತಂದು ಸ್ವರ್ಗದಲ್ಲಿರಿಸಲಾಗುವುದು. ಅವನು ಸ್ವರ್ಗದ ಸುಖಭೋಗಗಳನ್ನು ಚೆನ್ನಾಗಿ ಅನುಭವಿಸಿದಾಗ ಅವನೊಂದಿಗೆ ಕೇಳಲಾಗುವುದು- ಓ ಮಾನವಾ! ಲೋಕದಲ್ಲಿ ನೀನೆಂದಾದರೂ ಬಡತನವನ್ನು ಅನುಭವಿಸಿದ್ದುಂಟೆ? ನಿನಗೆಂದಾದರೂ ಸಂಕಷ್ಟದ ದಿನಗಳು ಬಂದಿವೆಯೆ? ಅವನು ಹೇಳುವನು- ಪ್ರಭೂ, ನಾನೆಂದೂ ಬಡತನ-ದಾರಿದ್ರ್ಯಕ್ಕೆ ಸಿಲುಕಲಿಲ್ಲ. ನನಗೆಂದೂ ಸಂಕಷ್ಟದ ದಿನಗಳು ಬಂದಿರಲಿಲ್ಲ. [ಮುಸ್ಲಿಮ್]

 • ನೆರೆಯವರೊಂದಿಗೆ ವರ್ತನೆ
  ismika19-01-2015
  “ಯಾವ ವ್ಯಕ್ತಿಯ ಉಪಟಳಗಳಿಂದಾಗಿ ಅವನ ನೆರೆಯವನಿಗೆ ಶಾಂತಿ ಭಂಗವಾಗುತ್ತದೋ ಆತ ಮುಸಲ್ಮಾನನಲ್ಲ”,
  ಪ್ರವಾದಿ ಮುಹಮ್ಮದ್(ಸ)ರ ಇನ್ನೊಂದು ವಚನವು ಹೀಗಿದೆ; “ಒಬ್ಬನು ಹೊಟ್ಟೆ ತುಂಬಾ ಉಣ್ಣುತ್ತಿದ್ದು, ಅದೇ ವೇಳೆ ಅವನ ನೆರೆಯವನು ಹೊಟ್ಟೆಗಿಲ್ಲದೆ ಉಪವಾಸ ಬಿದ್ದಿದ್ದರೆ ಅವನು ಸತ್ಯವಿಶ್ವಾಸಿಯಲ್ಲ.”
   

  “ನಿಮ್ಮ ಮಕ್ಕಳಿಗಾಗಿ ನೀವು ಹಣ್ಣು ಹಂಪಲು ಏನಾದರೂ ತಂದರೆ ಅದರಲ್ಲಿ ಸ್ವಲ್ಪವನ್ನು ನಿಮ್ಮ ಅಕ್ಕಪಕ್ಕದ ಮನೆಗಳಿಗೂ ಕಳಿಸಿ ಕೊಡಿರಿ. ಹಾಗಲ್ಲದಿದ್ದರೆ ಕನಿಷ್ಠ ಪಕ್ಷ ಹಣ್ಣಿನ ಸಿಪ್ಪೆಗಳನ್ನು ಮನೆಯ ಹೊರಕ್ಕೆ ಎಸೆಯಬೇಡಿರಿ. ನೆರೆಯ ಬಡವರಿಗೆ ನೋವಾಗಬಾರದು.”-  ಪ್ರವಾದಿ ಮುಹಮ್ಮದ್(ಸ) 

   
  ಒಮ್ಮೆ ಯಾರೋ ಪ್ರವಾದಿ ಮುಹಮ್ಮದ್(ಸ)ರೊಡನೆ ಹೇಳಿದರು: “ಒಬ್ಬ ಹೆಂಗಸು ಬಹಳಷ್ಟು ನಮಾಜ್ (ಆರಾಧನೆ) ಮಾಡುತ್ತಾಳೆ, ಆಗಾಗ ಉಪವಾಸ ವ್ರತ ಆಚರಿಸುತ್ತಾಳೆ, ಸಾಕಷ್ಟು ದಾನ ಧರ್ಮ ಮಾಡುತ್ತಾಳೆ, ಆದರೆ ಅವಳ ಜಗಳಗಂಟಿ ಸ್ವಭಾವದಿಂದಾಗಿ ಅವಳ ನೆರೆಯವರೆಲ್ಲಾ ಬೇಸತ್ತಿದ್ದಾರೆ.” ಆಗ ಪ್ರವಾದಿ(ಸ) ಹೇಳಿದರು: “ಆಕೆ ನರಕಕ್ಕೆ ಯೋಗ್ಯಳು.” ಇನ್ನೊಬ್ಬರು “ಇನ್ನೊಬ್ಬ ಹೆಂಗಸಿದ್ದಾಳೆ. ಅವಳಲ್ಲಿ ಪ್ರಸ್ತುತ ವೈಶಿಷ್ಟೃಗಳೇನೂ ಇಲ್ಲ. ಆದರೆ ಅವಳು ತನ್ನ ನೆರೆಯವರಿಗೆ ಯಾವುದೇ ತೊಂದರೆ ಕೊಡುವುದಿಲ್ಲ.” ಪ್ರವಾದಿ ಮುಹಮ್ಮದ್(ಸ) ಹೇಳಿದರು: “ಆಕೆ ಸ್ವರ್ಗ ಪಡೆಯುವಳು.”
   
  ಇನ್ನೊಂದು ಸಂದರ್ಭದಲ್ಲಿ ಪ್ರವಾದಿ(ಸ) ಹೇಳಿದರು: “ನಿನ್ನ ಅಕ್ಕಪಕ್ಕದವರು ನಿನ್ನನ್ನು ಒಳ್ಳೆಯವನೆಂದು ಭಾವಿಸುತ್ತಾರೆಂದಾದರೆ ನೀನು ನಿಜಕ್ಕೂ ಒಳ್ಳೆಯವನು, ಅವರ ದೃಷ್ಟಿಯಲ್ಲಿ ನೀನು ಕೆಟ್ಟವನಾಗಿದ್ದರೆ ನೀನು ನಿಜಕ್ಕೂ ಕೆಟ್ಟವನು.”
 • ನೈಜ ತಾಣ 
  ismika19-01-2015
  ಅಬ್ದುಲ್ಲಾ ಬಿನ್ ಉಮರ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ನಿಮ್ಮ ಪೈಕಿ ಒಬ್ಬ ವ್ಯಕ್ತಿ ಸತ್ತರೆ ಸಂಜೆ - ಮುಂಜಾನೆಗಳಲ್ಲಿ ಅವನಿಗೆ ಅವನ ತಾಣವನ್ನು ತೋರಿಸಲಾಗುತ್ತದೆ. ಸ್ವಗ೯ವಾಸಿಯಾಗಿದ್ದರೆ ಸ್ವಗ೯ವಾಸಿಯ ತಾಣ ಮತ್ತು ನರಕವಾಸಿಯಾಗಿದ್ದರೆ ನರಕವಾಸಿಯ ತಾಣ. ಇದು ನಿನ್ನ ತಾಣವಾಗಿದೆ. ಕಿಯಾಮತ್ ದಿನದಂದು ಅಲ್ಲಾಹನು ನಿನ್ನನ್ನು ಅದರ ಕಡೆಗೆ ಎಬ್ಬಿಸುವನು ಎಂದು ಅವನಿಗೆ ಹೇಳಲಾಗುತ್ತದೆ. (ಮುತ್ತಫಕುನ್ ಅಲೈಹಿ)

   

 • ಕೋಪವನ್ನು ನುಂಗುವುದು
  ismika19-01-2015

  ಕೋಪವನ್ನು ನುಂಗಿಕೊಳ್ಳುವುದು ಅತ್ಯಂತ ಕಹಿಯಾಗಿದೆ. ಅದು ಗಂಟಲೊಳಗೆ ಸುಲಭದಲ್ಲಿ ಇಳಿಯುವುದಿಲ್ಲ. ಆದರೆ ಅಲ್ಲಾಹನಿಗೆ ಈ ಗುಟುಕು ಬಹಳ ಪ್ರಿಯ. ಅಬ್ದುಲ್ಲಾ ಬಿನ್ ಉಮರ್(ರ) ವರದಿ ಮಾಡುತ್ತಾರೆ - ಪ್ರವಾದಿ(ಸ) ಹೇಳಿದರು: ಅಲ್ಲಾಹನ ಸಂಪ್ರೀತಿಗಾಗಿ ಮನುಷ್ಯ ಕುಡಿಯುವ ಕೋಪದ ಗುಟುಕಿಗಿಂತ ಶ್ರೇಷ್ಠವಾದ ಗುಟುಕು ಅಲ್ಲಾಹನ ದೃಷ್ಟಿಯಲ್ಲಿ ಬೇರೆ ಇಲ್ಲ. (ಅಹ್ಮದ್)

 • ಕಪಟವಿಶ್ವಾಸಿ
  ismika19-01-2015

  ಅಬ್ದುಲ್ಲಾ ಬಿನ್ ಅಮ್ರ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಯಾರಲ್ಲಿ ನಾಲ್ಕು ವಿಷಯಗಳಿರುತ್ತವೋ ಆತ ಅಪ್ಪಟ ಮುನಾಫಿಕ್(ಕಪಟವಿಶ್ವಾಸಿ) ಆಗಿರುತ್ತಾನೆ. ಯಾರಲ್ಲಿ ಯಾವುದಾದರೂ ಒಂದು ವಿಷಯವಿರವುದೋ ಅವನಲ್ಲಿ ಕಪಟ ವಿಶ್ವಾಸದ ಒಂದಂಶವಿರುವುದು - ಅವನು ಅದನ್ನು ತೊರೆಯುವ ತನಕ. 
  1. ವಸ್ತು ಜೋಪಾನವಾಗಿಡಲು ಕೊಟ್ಟರೆ ವಂಚನೆ ಮಾಡುವುದು.
  2. ಮಾತನಾಡಿದರೆ ಸುಳ್ಳು ಹೇಳುವುದು.
  3. ವಚನ ಕೊಟ್ಟರೆ ಭಂಗ ಮಾಡುವುದು.
  4. ಜಗಳಾಡಿದರೆ ಬಯ್ಯುವುದು.  (ಮುತ್ತಫಕುನ್ ಅಲೈಹಿ)

 • ಪ್ರಾಮಾಣಿಕತೆ ಮತ್ತು ವಚನಪಾಲನೆ
  ismika19-01-2015
  ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನಮಗೆ ಪ್ರವಚನ ಮಾಡಿದಾಗಲೆಲ್ಲಾ ಈ ರೀತಿ ಹೇಳದೆ ಇದ್ದುದು ವಿರಳ-ಯಾರಲ್ಲಿ ಪ್ರಾಮಾಣಿಕತೆಯಿಲ್ಲವೋ ಅವನಲ್ಲಿ ಈಮಾನ್ ಇಲ್ಲ ಮತ್ತು ಯಾರಲ್ಲಿ ವಚನಪಾಲನೆಯಿಲ್ಲವೋ ಅವನಲ್ಲಿ ಧರ್ಮವಿಲ್ಲ. (ಬೈಹಕಿ-ಶುಅಬುಲ್ ಈಮಾನ್ ನಲ್ಲಿ)

   

 • ಎರಡು ವಿಷಯಗಳಿಗೆ ಅಸೂಯೆ ಪಡಬಹುದು.
  ismika18-02-2015

  ಇಬ್ನು ಮಸ್'ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಇಬ್ಬರು ವ್ಯಕ್ತಿಗಳ ಬಗ್ಗೆ ಮಾತ್ರ ಅಸೂಯೆ ಪಡಬಹುದು. ಆ ಪೈಕಿ ಒಬ್ಬನಿಗೆ ಅಲ್ಲಾಹನು ಸಂಪತ್ತು ದಯಪಾಲಿಸಿದ್ದು, ಸತ್ಯದ ಮಾಗ೯ದಲ್ಲಿ ಅದನ್ನು ವ್ಯಯಿಸುವ ಸೌಭಾಗ್ಯ ನೀಡಿರುವನು. ಇನ್ನೊಬ್ಬನಿಗೆ ಅಲ್ಲಾಹನು ವಿವೇಕವನ್ನು ದಯಪಾಲಿಸಿದ್ದು, ಅವನು ಅದರಂತೆ ತೀಮಾ೯ನಿಸುತ್ತಾನೆ ಮತ್ತು ಇತರರಿಗೆ ಅದನ್ನು ಕಲಿಸುತ್ತಾನೆ. (ಮುತ್ತಫಕುನ್ ಅಲೈಹಿ)

 • ಮೂರು ವಿಧದ ಕಮ೯ಗಳು
  ismika18-02-2015
  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಕಮ೯ಗಳ ಪ್ರತಿಫಲವು ಸ್ಥಗಿತವಾಗುತ್ತದೆ. ಆದರೆ ಮೂರು ವಿಧದ ಕಮ೯ಗಳ ಪ್ರತಿಫಲವು ನಿರಂತರವಾಗಿ ಜಾರಿಯಲ್ಲಿರುತ್ತದೆ -
  1) ಶಾಶ್ವತವಾದ ದಾನ.
  2) ಉಪಯುಕ್ತ ವಿದ್ಯೆ.
  3) ಅವನಿಗಾಗಿ ಪ್ರಾಥಿ೯ಸುತ್ತಿರುವ ಸಜ್ಜನ ಸಂತತಿ. (ಮುಸ್ಲಿಮ್)

   

 • ಮರಣದ ಬಳಿಕವೂ ಪುಣ್ಯ
  ismika18-02-2015
  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಸತ್ಯವಿಶ್ವಾಸಿಗೆ ಮರಣದ ಬಳಿಕವೂ ಪುಣ್ಯ ತಲುಪುತ್ತಿರುವ ಕಮ೯ಗಳು ಮತ್ತು ಒಳಿತುಗಳ ಪೈಕಿ - ಅವನು ಕಲಿಸಿದ ಮತ್ತು ಪ್ರಸಾರಪಡಿಸಿದ ವಿದ್ಯೆ, ಅವನು ಬಿಟ್ಟುಹೋದ ಸಜ್ಜನ ಸಂತಾನ, ಅವನು ತನ್ನ ಉತ್ತರಾಧಿಕಾರಿಗಳಿಗೆ ಬಿಟ್ಟು ಹೋದ ಕುರ್'ಆನ್, ಅವನು ಕಟ್ಟಿಸಿದ ಮಸೀದಿ, ಅವನು ಪ್ರಯಾಣಿಕರಿಗಾಗಿ ಕಟ್ಟಿಸಿದ ಛತ್ರ, ಅವನು ತೋಡಿಸಿದ ಕಾಲುವೆ ಅಥವಾ ಅವನು ತನ್ನ ಸಂಪತ್ತಿನಿಂದ ತನ್ನ ಆರೋಗ್ಯದ ಮತ್ತು ಜೀವನದ ವೇಳೆ ಮಾಡಿದ ದಾನ-ಧರ್ಮಗಳು ಸೇರಿವೆ. ಇವು ಅವನ ಮರಣದ ಬಳಿಕವೂ ಅವನಿಗೆ ತಲುಪುತ್ತವೆ. (ಇಬ್ನುಮಾಜಃ ಬೈಹಕಿ-ಶುಅಬುಲ್ ಈಮಾನ್)

   

 • ಪ್ರವಾದಿಯ (ಸ) ಪ್ರಾರ್ಥನೆ
  ismika19-02-2015

  ಪ್ರವಾದಿ ಮುಹಮ್ಮದ್(ಸ) ಸದಾ ಈ ರೀತಿ ಪ್ರಾಥಿ೯ಸುತ್ತಿದ್ದರು: "ಓ ಅಲ್ಲಾಹ್ ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರಿಸು. ತಾವೇನು ಮಾಡುತ್ತಿದ್ದೇವೆಂಬುದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿ ಬಿಡು." ಪ್ರವಾದಿವಯ೯(ಸ)ರ ಈ ಸ್ಥಿತಿಯನ್ನು ಕಂಡು ಆ ಶತ್ರುಗಳನ್ನು ಶಪಿಸುವಂತೆ ಸಹಾಬಿಗಳು ವಿನಂತಿಸುತ್ತಾರೆ. ಆಗ ಪ್ರವಾದಿವಯ೯ರು ಹೀಗೆ ಹೇಳುತ್ತಾರೆ: ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಮತ್ತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ. ಓ ಅಲ್ಲಾಹ್! ನನ್ನ ಜನಾಂಗದವರನ್ನು ಕ್ಷಮಿಸಿಬಿಡು. ಏಕೆಂದರೆ ಈ ಜನರಿಗೆ ತಿಳುವಳಿಕೆ ಇಲ್ಲ."

 • ಧಮ೯ಸಮ್ಮತ ಮಾಗ೯ದಿಂದ ಸಂಪತ್ತು
  ismika02-03-2015

  ಅಬೂಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಒಬ್ಬನು ಯಾರ ಮುಂದೆಯೂ ಕೈ ಚಾಚುವ ನಿಂದ್ಯತೆಯಿಂದ ರಕ್ಷಣೆ ಹೊಂದಲಿಕ್ಕೆ, ತನ್ನ ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸಲಿಕ್ಕೆ ಮತ್ತು ತನ್ನ ನೆರೆಯವರ ಜೊತೆ ಸೌಜನ್ಯದ ವತ೯ನೆ ಮಾಡಲಿಕ್ಕೆ ಧಮ೯ಸಮ್ಮತ ಮಾಗ೯ದಿಂದ ಲೋಕ(ಸಂಪತ್ತು)ವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಯಾಗುವಾಗ ಆತನ ಮುಖವು ಹುಣ್ಣಿಮೆಯ ಚಂದ್ರನಂತಿರುವುದು. ಒಬ್ಬನು ಸಂಪತ್ತಿನಲ್ಲಿ ಹೆಚ್ಚಳವಾಗಲಿಕ್ಕೆ, ಜನರ ಮೇಲೆ ಅಹಂಕಾರವನ್ನು ಮೆರೆಯಲಿಕ್ಕೆ ಮತ್ತು ಹೆಸರು, ಕೀತಿ೯ ಗಳಿಸಲಿಕ್ಕೆ ಧಮ೯ಸಮ್ಮತವಾಗಿಯೇ ಲೋಕವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಾಗುವಾಗ ಅಲ್ಲಾಹನು ಅವನ ಮೇಲೆ ತೀವ್ರವಾಗಿ ಕೋಪಗೊಂಡಿರುವನು. (ಬೈಹಕಿ,ಶುಅಬುಲ್ ಈಮಾನ್)

 • 'ಆಸೆ.'
  ismika18-03-2015

  ಸುಫ್ಯಾನ್(ರ) ಅವರಿಂದ ವರದಿಯಾಗಿದೆ. ಉಮರ್ ಬಿನ್ ಖತ್ತಾಬ್(ರ) ಕ'ಅಬ್(ರ)ರೊಂದಿಗೆ ಹೀಗೆ ಕೇಳಿದರು 
  -' ವಿದ್ವಾಂಸರು ಯಾರು?' 
  ಅವರು ಹೇಳಿದರು - ತಾವು ಅರಿತಿರುವುದರ ಪ್ರಕಾರ ನಡೆದವರು.' 'ಯಾವ ವಸ್ತು ವಿದ್ವಾಂಸರ ಮನಸ್ಸಿನಿಂದ ವಿದ್ಯೆಯನ್ನು ಕಿತ್ತು ಕೊಳ್ಳುತ್ತದೆ?' 
  ಅವರು ಹೇಳಿದರು - 'ಆಸೆ.'

 • ಕಲಿಯಿರಿ ಮತ್ತು ಕಲಿಸಿರಿ.
  ismika18-03-2015

  ಇಬ್ನು ಮಸ್'ಊದ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನನ್ನಲ್ಲಿ ಹೀಗೆ ಹೇಳಿದರು - ವಿದ್ಯೆ ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಕುರ್'ಆನನ್ನು ಕಲಿಯಿರಿ ಮತ್ತು ಜನರಿಗೆ ಅದನ್ನು ಕಲಿಸಿರಿ. ಖಂಡಿತವಾಗಿಯೂ ನಾನು ಓವ೯ ವ್ಯಕ್ತಿಯಾಗಿದ್ದು ನನ್ನನ್ನು ವಶಪಡಿಸಲಾಗುವುದು. ವಿದ್ಯೆ ಕಡಿಮೆಯಾದರೆ ಕ್ಷೋಭೆ ಪ್ರತ್ಯಕ್ಷವಾಗುವುದು. ಎಲ್ಲಿಯವರೆಗೆಂದರೆ ಇಬ್ಬರು ಕಡ್ಡಾಯ ವಿಧಿಯೊಂದರ ಬಗ್ಗೆ ಜಗಳಾಡುವರು ಮತ್ತು ಅವರ ಮಧ್ಯೆ ತೀಮಾ೯ನ ಮಾಡುವವರು ಯಾರೂ ಇರಲಾರರು. (ದಾರಿಮೀ, ದಾರಕುತ್ನಿ)

 • ನಿಮ್ಮನ್ನು ರಕ್ಷಿಸಿರಿ
  ismika18-03-2015
  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಕೊನೆಯ ಕಾಲದಲ್ಲಿ ವಂಚನೆ ಮಾಡುವ ಸುಳ್ಳುಗಾರರಿರುವರು. ನಿಮ್ಮ ಬಳಿ ನೀವಾಗಲೀ ನಿಮ್ಮ ಪೂವ೯ಜರಾಗಲಿ ಕೇಳಿರದ ಹದೀಸ್'ಗಳನ್ನು ತರುವರು. ಅವರಿಂದ ದೂರವಿರಿ. ನಿಮ್ಮನ್ನು ರಕ್ಷಿಸಿರಿ. ಅವರು ನಿಮ್ಮನ್ನು ದಾರಿಗೆಡಿಸದಿರಲಿ ಮತ್ತು ಗೊಂದಲದಲ್ಲಿ ಸಿಲುಕಿಸದಿರಲಿ. (ಮುಸ್ಲಿಮ್)
   
  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಆದಮನ ಪುತ್ರ ನನ್ನನ್ನು ನಿರಾಕರಿಸುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ಬಯ್ಯುತ್ತಾನೆ. ಅದು ಅವನಿಗೆ ಭೂಷಣವಲ್ಲ. ಅವನು ನನ್ನನ್ನು ನಿರಾಕರಿಸುವುದು ಹೇಗೆಂದರೆ - ಆತ ನನ್ನನ್ನು ಮರಣಾನಂತರ ಖಂಡಿತ ಜೀವಂತಗೊಳಿಸಲಾರನು. ನನ್ನನ್ನು ಪ್ರಥಮ ಸಲ ಸೃಷ್ಟಿಸಿದಂತೆ. ಪ್ರಥಮ ಸಲ ಸೃಷ್ಟಿಸುವುದು ಅವನನ್ನು ಜೀವಂತಗೊಳಿಸುವುದಕ್ಕಿಂತ ಸುಲಭವಲ್ಲ ಎನ್ನುವುದಾಗಿದೆ. ಅವನು ನನ್ನನ್ನು ಬಯ್ಯುವುದು ಹೇಗೆಂದರೆ - ಅಲ್ಲಾಹನು ಮಗನನ್ನು ಹೊಂದಿದ್ದಾನೆ ಎನ್ನುವುದಾಗಿದೆ. ವಾಸ್ತವದಲ್ಲಿ ನಾನು ಏಕೈಕನೂ ನಿರಪೇಕ್ಷನೂ ಆಗಿರುವೆನು. ನನಗೆ ಯಾವ ಪುತ್ರನೂ ಇಲ್ಲ ಮತ್ತು ನಾನು ಯಾರ ಪುತ್ರನೂ ಅಲ್ಲ. ನನಗೆ ಸರಿಸಮಾನರು ಯಾರೂ ಇಲ್ಲ. ಇಬ್ನು ಅಬ್ಬಾಸ್(ರ) ರ ವರದಿಯಲ್ಲಿ ಈ ರೀತಿಯಿದೆ - ಅವನು ನನಗೆ ಬಯ್ಯುವುದು ಹೇಗೆಂದರೆ - ನನಗೆ ಮಗನಿದ್ದಾನೆ ಎನ್ನುವುದಾಗಿದೆ. ನಾನು ಯಾರನ್ನಾದರೂ ನನ್ನ ಪತ್ನಿ ಅಥವಾ ಪುತ್ರನಾಗಿಸುವುದರಿಂದ ಪರಿಶುದ್ಧನಾಗಿರುವೆನು. (ಬುಖಾರಿ)

   

 • ’ಏಳು ವಿನಾಶಕಾರಿ ವಸ್ತುಗಳು'
  ismika18-03-2015

  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು -
  ’ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ.' ಸಹಾಬಿಗಳು ವಿಚಾರಿಸಿದರು - 'ಅವು ಯಾವುವು?' ಪ್ರವಾದಿ(ಸ) ಹೇಳಿದರು - 'ಅಲ್ಲಾಹನ ಜತೆ ಭಾಗೀದಾರರನ್ನು ಮಾಡುವುದು, ಮಾಟ ಮಾಡುವುದು, ಅಲ್ಲಾಹನು ನಿಷಿದ್ಧಗೊಳಿಸಿದ ಪ್ರಾಣವನ್ನು ಅನ್ಯಾಯವಾಗಿ ಹರಣ ಮಾಡುವುದು, ಬಡ್ಡಿ ತಿನ್ನುವುದು, ಅನಾಥನ ಸೊತ್ತು ಕಬಳಿಸುವುದು, ಯುದ್ಧದ ವೇಳೆ ಬೆನ್ನು ತಿರುಗಿಸಿ ಓಡುವುದು ಮತ್ತು ಸುಶೀಲೆಯರಾದ ನಿದೋ೯ಷಿ ಸತ್ಯವಿಶ್ವಾಸಿನಿಯರ ಮೇಲೆ ಆರೋಪ ಹೊರಿಸುವುದು.' (ಮುತ್ತಫಕುನ್ ಅಲೈಹಿ)

 • ಸ್ಪಷ್ಟವಾದ ಈಮಾನ್(ಸತ್ಯವಿಶ್ವಾಸ)
  ismika18-03-2015

  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ)ವಯ೯ರ ಬಳಿಗೆ ಕೆಲವು ಸಹಾಬಿಗಳು ಬಂದು ಹೀಗೆ ವಿಚಾರಿಸಿದರು - ನಮ್ಮ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳಿರುತ್ತವೆ. ಅದನ್ನು ಹೇಳುವುದು ನಮ್ಮ ಪೈಕಿ ಪ್ರತಿಯೊಬ್ಬರಿಗೂ ಕೆಟ್ಟದೆನಿಸುತ್ತದೆ. ಪ್ರವಾದಿ(ಸ) ಕೇಳಿದರು - ನಿಜವಾಗಿಯೂ ನಿಮಗದು ಅನುಭವವಾಗುತ್ತದೆಯೇ? ನಾವು ಹೌದೆಂದಾಗ ಪ್ರವಾದಿ(ಸ) ಹೇಳಿದರು - ಇದು ಸ್ಪಷ್ಟವಾದ ಈಮಾನ್(ಸತ್ಯವಿಶ್ವಾಸ) ಆಗಿದೆ. (ಮುಸ್ಲಿಮ್)

 • ಜನರ ಪ್ರಶ್ನೆ
  ismika25-03-2015

  ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು - ಜನರು ಪರಸ್ಪರರಲ್ಲಿ ಪ್ರಶ್ನಿಸುತ್ತಲೇ ಇರುವರು. ಎಲ್ಲಿಯವರೆಗೆಂದರೆ - ಇದು ಅಲ್ಲಾಹನು ಸೃಷ್ಟಿಸಿದ ಸೃಷ್ಟಿಯಾಗಿದೆ. ಆದರೆ ಅಲ್ಲಾಹನನ್ನು ಸೃಷ್ಟಿಸಿದವರು ಯಾರು? ಎಂದು ಅವರು ಕೇಳುವರು. ಅವರು ಹೀಗೆ ಹೇಳತೊಡಗಿದಾಗ ಹೇಳಿರಿ - ಅಲ್ಲಾಹನು ಏಕೈಕನಾಗಿದ್ದಾನೆ. ಅಲ್ಲಾಹನು ನಿರಪೇಕ್ಷನಾಗಿದ್ದಾನೆ. ಅವನು ಯಾರ ತಂದೆಯೂ ಅಲ್ಲ, ಪುತ್ರನೂ ಅಲ್ಲ ಮತ್ತು ಅವನಿಗೆ ಸರಿಸಮಾನರಾದವರು ಯಾರೂ ಇಲ್ಲ. ಅನಂತರ ಮೂರು ಸಲ ತನ್ನ ಎಡಭಾಗಕ್ಕೆ ಉಗುಳಲಿ ಮತ್ತು ಶಪಿತ ಶೈತಾನನಿಂದ ಅಲ್ಲಾಹನ ಅಭಯ ಯಾಚಿಸಲಿ. (ಅಬೂ ದಾವೂದ್)

 • 'ಮುಹ್ಕಮಾತ್' 'ಮುತಶಾಬಿಹಾತ್.'
  ismika27-03-2015

  ಆಯಿಶಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಈ ಆಯತನ್ನು ಪಠಿಸಿದರು - ಅವನೇ ನಿಮ್ಮ ಮೇಲೆ ಈ ಗ್ರಂಥವನ್ನು ಅವತೀಣ೯ಗೊಳಿಸಿದನು. ಈ ಗ್ರಂಥದಲ್ಲಿ ಎರಡು ಬಗೆಯ ಆಯತ್'ಗಳಿವೆ. ಒಂದು ಗ್ರಂಥದ ಮೂಲಾಧಾರವಾಗಿರುವ 'ಮುಹ್ಕಮಾತ್' ಇನ್ನೊಂದು 'ಮುತಶಾಬಿಹಾತ್.' ಹೃದಯಗಳಲ್ಲಿ ಕೊಂಕುಳ್ಳವರು ಕ್ಷೋಭೆ ಎಬ್ಬಿಸಲಿಕ್ಕಾಗಿ ಮುತಶಾಬಿಹಾತ್'ಗಳ ಬೆನ್ನು ಹತ್ತುತ್ತಾರೆ ಮತ್ತು ಅವುಗಳ ದುವ್ಯಾ೯ಖ್ಯಾನ ಮಾಡಲು ಪ್ರಯತ್ನಿಸುತ್ತಾರೆ. ವಸ್ತುತಃ ಅವುಗಳ ನಿಜಾಥ೯ವನ್ನು ಅಲ್ಲಾಹನ ಹೊರತು ಇನ್ನಾರೂ ಬಲ್ಲವರಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಜ್ಞಾನದಲ್ಲಿ ಪರಿಪಕ್ವತೆ ಹೊಂದಿದವರು " ನಾವು ಇವುಗಳ ಬಗ್ಗೆ ವಿಶ್ವಾಸ ತಳೆದಿದ್ದೇವೆ. ಇವೆಲ್ಲ ನಮ್ಮ ಪ್ರಭುವಿನ ವತಿಯಿಂದಲೇ ಆಗಿರುತ್ತವೆ ಎನ್ನುತ್ತಾರೆ. ಯಾವುದರಿಂದಲೇ ಆದರೂ ಬುದ್ಧಿಜೀವಿಗಳು ಮಾತ್ರ ಸರಿಯಾದ ಪಾಠಹೊಂದುತ್ತಾರೆ." (ಸೂರಃ ಆಲಿಇಮ್ರಾನ್ -7) ಪ್ರವಾದಿ(ಸ) ಹೇಳಿದರು - ಜನರು ಮುತಶಾಬಿಹಾತ್'ಗಳ ಹಿಂದೆ ಬಿದ್ದಿರುವುದನ್ನು ನೀನು ಕಂಡಾಗ ಅವರು ಅಲ್ಲಾಹನು ಸೂಚಿಸಿದಂತಹ ವ್ಯಕ್ತಿಗಳೆಂದು ತಿಳಿದು ಅವರಿಂದ ದೂರವಿರಿ. (ಮುತ್ತಫಕುನ್ ಅಲೈಹಿ)

 • ರೋಗಿಗಳಿಗೆ ಪ್ರಾರ್ಥಿಸುವುದು
  ismika20-04-2015

  ಆಯಿಶಾ(ರ) ಅವರಿಂದ ವರದಿಯಾಗಿದೆ. ನಮ್ಮ ಪೈಕಿ ಯಾರಾದರೂ ಕಾಯಿಲೆ ಬಿದ್ದರೆ ಪ್ರವಾದಿ(ಸ) ಅವನ ಮೇಲೆ ತಮ್ಮ ಬಲಗೈಯನ್ನು ಸವರುತ್ತಿದ್ದರು ಮತ್ತು ಹೀಗೆ ಪ್ರಾಥಿ೯ಸುತ್ತಿದ್ದರು: 'ಅದ್'ಹಬಿಲ್ ಬ'ಅ್'ಸ ರಬ್ಬನ್ನಾಸಿ ವಶ್ಫಿ ಅಂತ ಶಾಫೀ ಲಾ ಶಿಫಾಅ ಇಲ್ಲಾ ಶಿಫಾಉಕ ಶಿಫಾಅನ್ ಲಾ ಯುಗಾದಿರು ಸಕಮಾಃ (ಓ ಜನರ ಪ್ರಭುವೇ! ಕಾಯಿಲೆಯನ್ನು ನಿವಾರಿಸು. ಉಪಶಮನ ನೀಡು. ನೀನೇ ಉಪಶಮನ ನೀಡುವವನು. ನಿನ್ನ ಉಪಶಮನದ ಹೊರತು ಬೇರೆ ಉಪಶಮನವಿಲ್ಲ. ಕಾಯಿಲೆಯ ಯಾವುದೇ ಕುರುಹನ್ನು ಉಳಿಸದಂತಹ ಉಪಶಮನವನ್ನು ದಯಪಾಲಿಸು).

 • ಪ್ರತಿಯೊಬ್ಬರು ಹೊಣೆಗಾರರು
  ismika20-04-2015

  ಪ್ರವಾದಿ(ಸ) ಹೇಳಿದರು - ತಿಳಿಯಿರಿ! ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ. ಪ್ರತಿಯೊಬ್ಬರಿಂದಲೂ ಅವರ ಹೊಣೆಯಲ್ಲಿರುವವರ ಕುರಿತು ವಿಚಾರಿಸಲಾಗುವುದು. ಅಧಿಪತಿಯು ಪ್ರಜೆಗಳ ಹೊಣೆಗಾರನಾಗಿದ್ದು ಅವನಲ್ಲಿ ಅವನ ಪ್ರಜೆಗಳ ಕುರಿತು ವಿಚಾರಿಸಲಾಗುವುದು. ಪುರುಷನು ತನ್ನ ಮನೆಮಂದಿಯ ಹೊಣೆಗಾರನಾಗಿದ್ದು ಅವನಲ್ಲಿ ಅವರ ಕುರಿತು ವಿಚಾರಿಸಲಾಗುವುದು. ಮಹಿಳಯು ತನ್ನ ಪತಿಗೃಹದ ಮತ್ತು ಅವನ ಮಕ್ಕಳ ಹೊಣೆಗಾರಳಾಗಿದ್ದು ಅವಳಲ್ಲಿ ಅವರ ಕುರಿತು ವಿಚಾರಿಸಲಾಗುವುದು. ಸೇವಕನು ತನ್ನೊಡೆಯನ ಸೊತ್ತಿನ ಹೊಣೆಗಾರನಾಗಿದ್ದೂ ಅವನಲ್ಲಿ ಅದರ ಬಗ್ಗೆ ವಿಚಾರಿಸಲಾಗುವುದು. ಎಚ್ಚರಿಕೆ! ನಿಮ್ಮಲ್ಲಿ ಪ್ರತಿಯೊಬ್ಬನೂ ಹೊಣೆಗಾರನಾಗಿದ್ದು ತಮ್ಮ ಹೊಣೆಯಲ್ಲಿರುವವರ ಕುರಿತು ಪ್ರತಿಯೊಬ್ಬರನ್ನೂ ವಿಚಾರಿಸಲಾಗುವುದು. 
  (ವರದಿ: ಹಝ್ರತ್ ಅಬ್ದುಲ್ಲಾ ಬಿನ್ ಉಮರ್(ರ) - ಬುಖಾರಿ,ಮುಸ್ಲಿಮ್)

 • ಐದು ವಿಷಯಗಳ ಬಗ್ಗೆ ವಿಚಾರಣೆ
  ismika20-04-2015

  ಪ್ರವಾದಿವರ್ಯರು(ಸ) ಹೀಗೆಂದಿರುವರು, "ಐದು ವಿಷಯಗಳ ಬಗ್ಗೆ ವಿಚಾರಣೆ ನಡೆಸದೆ ಆದಮರ ಸಂತತಿಯ ಕಾಲುಗಳು ಪ್ರಭುವಿನ ಸನ್ನಿಧಿಯಿಂದ ಕದಲಲಾರವು.
  (1) ಅವನು ತನ್ನ ಜೀವನವನ್ನು ಎಲ್ಲಿ ಕಳೆದಿದ್ದಾನೆ.
  (2) ತನ್ನ ಯೌವನವನ್ನು ಯಾವ ಕಾರ್ಯದಲ್ಲಿ ವ್ಯಯಿಸಿದ್ದಾನೆ.
  (3) ಸಂಪತ್ತನ್ನು ಎಲ್ಲಿಂದ ಗಳಿಸಿದ
  (4) ಯಾವುದಲ್ಲಿ ತೊಡಗಿಸಿದ.
  (5) ತನ್ನ ಜ್ಞಾನದಿಂದ ಎಷ್ಟು ಕರ್ಮವೆಸಗಿದ? ಎಂಬುದಾಗಿದೆ. (ವರದಿ: ಹ.ಇಬ್ನು ಮಸ್‍ಊದ್(ರ))

 • ಆಡಳಿತಾಧಿಕಾರಿ
  ismika28-07-2015

  ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಂದು ವೇಳೆ ಮೂಗು,ಕಿವಿ ತುಂಡಾದ ಒಬ್ಬ ಗುಲಾಮನನ್ನು ನಿಮ್ಮ ಅಮೀರ್(ಆಡಳಿತಾಧಿಕಾರಿ)ಆಗಿ ನೇಮಕ ಮಾಡಿದರೆ ಮತ್ತು ಅವನು ಅಲ್ಲಾಹನ ಗ್ರಂಥದ ಪ್ರಕಾರ ನಿಮ್ಮ ಮೇಲೆ ಆಢಳಿತ ನಡೆಸಿದರೆ ನೀವು ಅವನ ಮಾತು ಆಲಿಸಬೇಕು ಮತ್ತು ಅವನನ್ನು ಅನುಸರಿಸಬೇಕು. (ವರದಿ:ಹಝ್ರತ್ ಉಮ್ಮುಲ್ ಹುಸೈನ್(ರ) - ಮುಸ್ಲಿಮ್)

 • ಪ್ರಾಥ೯ನೆ, ಸತ್ಕಮ೯
  ismika28-07-2015

  ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು ಮತ್ತು ಒಬ್ಬ ವ್ಯಕ್ತಿಯು ಮಾಡಿದ ಪಾಪಕಾಯ೯ದಿಂದಾಗಿ ಅವನನ್ನು ಉಪಜೀವನದಿಂದ ವಂಚಿತಗೊಳಿಸಲಾಗುತ್ತದೆ. (ವರದಿ:ಹಝ್ರತ್ ಸೌಬಾನ್(ರ) - ಇಬ್ನುಮಾಜಃ)

 • ಬಡ್ಡಿಯ ಬಾಗಿಲು
  ismika28-07-2015

  ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಬ್ಬನ ಪರವಾಗಿ ಶಿಫಾರಸು ಮಾಡಿದ ವ್ಯಕ್ತಿಗೆ ಶಿಫಾರಸು ಮಾಡಲ್ಪಟ್ಟವ ಒಂದು ಉಡುಗೊರೆ ಕಳುಹಿಸಿ ಕೊಟ್ಟಿದ್ದು ಅವನು ಅದನ್ನು ಸ್ವೀಕರಿಸಿದರೆ ಅವನು ಬಡ್ಡಿಯ ಬಾಗಿಲುಗಳಲ್ಲಿ ಒಂದು ದೊಡ್ಡ ಬಾಗಿಲಲ್ಲಿ ಪ್ರವೇಶಿಸಿದನು. (ವರದಿ:ಹಝ್ರತ್ ಅಬೂ ಉಮಾಮ(ರ) - ಅಬೂದಾವೂದ್)

 • ಉಡುಗೊರೆ
  ismika28-07-2015

  ಪ್ರವಾದಿ ಮುಹಮ್ಮದ್(ಸ) ಹೇಳಿದರು: ಉಡುಗೊರೆಯನ್ನು ಯಾರೂ ಮರಳಿ ಪಡೆಯಬಾರದು. ತಂದೆಯು ತನ್ನ ಮಗನಿಗೆ ನೀಡಿದ ಉಡುಗೊರೆಯನ್ನು ಮರಳಿ ಪಡೆಯುವುದು ಮಾತ್ರ ಧಮ೯ಸಮ್ಮತವಾಗಿದೆ. (ವರದಿ:ಹಝ್ರತ್ ಅಬ್ದುಲ್ಲಾ ಬಿನ್ ಅಮ್ರ್(ರ) - ನಸಾಈ,ಇಬ್ನುಮಾಜಃ)

 • ಅಧಿಕಾರ ಮತ್ತು ವಿಚಾರಣೆ
  ismika28-07-2015

  ಇಬ್ನು ಉಮರ್(ರ) ಹೇಳುತ್ತಾರೆ - ಪ್ರವಾದಿ(ಸ) ಹೇಳಿದರು: "ಅಲ್ಲಾಹನು ಒಬ್ಬ ದಾಸನಿಗೆ ಕೆಲವರ ಮೇಲೆ ಅಧಿಕಾರ ಕೊಟ್ಟರೆ - ಅವನ ಅಧಿಕಾರಕ್ಕೆ ಅಧೀನವಾಗಿರುವವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚಿದ್ದರೂ - ಅವನು ಅವರ ಮೇಲೆ ಅಲ್ಲಾಹನ ಆದೇಶಗಳನ್ನು ಜಾರಿಗೊಳಿಸಿದ್ದನೋ ಅಥವಾ ನಿಲ೯ಕ್ಷ ತೋರಿದ್ದನೋ ಎಂದು ಪರಲೋಕದಲ್ಲಿ ಅಲ್ಲಾಹನು ಅವನೊಡನೆ ವಿಚಾರಣೆ ಮಾಡದೆ ಇರಲಾರನು. ವಿಶೇಷವಾಗಿ ಅಲ್ಲಾಹನು ಅವನೊಡನೆ ಅವನ ಸ್ವಂತ ಕುಟುಂಬದ(ಪತ್ನಿ,ಮಕ್ಕಳು ಮತ್ತು ಆತನಿಂದ ಪೋಷಿಸಲ್ಪಡುವ ಇತರರ)ಕುರಿತು ವಿಚಾರಣೆ ನಡೆಸುವನು." (ಮುಸ್ನದ್ ಅಹ್ಮದ್)

 • ಸೋದರ ಪ್ರಜ್ಞೆ
  ismika28-07-2015

  ಪ್ರವಾದಿ(ಸ) ಹೇಳಿದರು: ಒಬ್ಬನು ತನ್ನ ಸೋದರನ ವ್ಯಾಪಾರದ ಮೇಲೆ ವ್ಯಾಪಾರ ಮಾಡಬಾರದು ಮತ್ತು ಒಬ್ಬನು ತನ್ನ ಸೋದರನ ವಿವಾಹ ಪ್ರಸ್ತಾಪದ ಮೇಲೆ ತನ್ನ ವಿವಾಹ ಪ್ರಸ್ತಾಪವನ್ನಿಡಬಾರದು. ಅದರ ಅನುಮತಿ ಸಿಕ್ಕಿದಾಗ ಹೊರತು. (ವರದಿ:ಹಝ್ರತ್ ಇಬ್ನು ಉಮರ್(ರ) - ಮುಸ್ಲಿಮ್)

 • ಸತ್ಕಮ೯ದ ಪುಣ್ಯ
  ismika03-08-2015

  ನಾನು ಪ್ರವಾದಿವಯ೯(ಸ)ರಲ್ಲಿ ಹೀಗೆ ನಿವೇದಿಸಿಕೊಂಡೆ - "ಅಲ್ಲಾಹನ ಸಂದೇಶವಾಹಕರೇ ನಾನು ಅಜ್ಞಾನ ಕಾಲದಲ್ಲಿ ಮಾಡುತ್ತಿದ್ದಂತಹ ಕಾಯ೯ಗಳಾದ ಸಂಬಂಧಿಕರ ಯೋಗಕ್ಷೇಮ ನೋಡಿಕೊಳ್ಳುವುದು, ಕೊರಳನ್ನು ಜೀತದಿಂದ ಮುಕ್ತಗೊಳಿಸುವುದು, ದಾನಧರ್ಮ ಇತ್ಯಾದಿ ಗಳಿಗೆ ನನಗೆ ಪುಣ್ಯ ಸಿಗುವುದೇ? ತಿಳಿಸಿರಿ." ಪ್ರವಾದಿ ಮುಹಮ್ಮದ್(ಸ) ಹೇಳಿದರು - "ನೀವು ಗತಕಾಲದಲ್ಲಿ ಮಾಡಿದ ಸತ್ಕಮ೯ಗಳ ಮೇಲೆಯೇ ಮುಸ್ಲಿಮರಾದಿರಿ." (ವರದಿ:ಹಝ್ರತ್ ಹಕೀಮ್ ಬಿನ್ ಹಿಝಾಮ್(ರ) - ಬುಖಾರಿ)

 • ನಮಾಝ್'ನ ಪುಣ್ಯ
  ismika05-08-2015

  ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಬ್ಬ ವ್ಯಕ್ತಿ ರಾತ್ರಿಯ ನಮಾಝ್ ಮಾಡುತ್ತಿದ್ದು ಯಾವುದಾದರೂ ರಾತ್ರಿ ನಿದ್ರೆಯ ಕಾರಣ ಏಳದೇ ಇದ್ದರೆ ಖಂಡಿತ ಅವನ ಹೆಸರಲ್ಲಿ ನಮಾಝ್'ನ ಪುಣ್ಯಫಲವನ್ನು ಬರೆಯಲಾಗುತ್ತದೆ. ಅವನ ನಿದ್ರೆಯು ಸದಕ ಎನಿಸುವುದು. (ವರದಿ:ಹಝ್ರತ್ ಆಯಿಶಾ(ರ) - ಅಬೂದಾವೂದ್)

 • ಅಲ್ಲಾಹನ ಮಾಗ೯ದಲ್ಲಿ ಹೋರಾಟ
  ismika14-08-2015

  ಒಬ್ಬ ವ್ಯಕ್ತಿ ಪ್ರವಾದಿವಯ೯(ಸ)ರ ಬಳಿ ಬಂದು ಈ ರೀತಿ ಹೇಳಿದರು: "ಅಲ್ಲಾಹನ ಸಂದೇಶವಾಹಕರೇ, ಅಲ್ಲಾಹನ ಮಾಗ೯ದಲ್ಲಿ ಹೋರಾಟ ಮಾಡುವುದರ ಸ್ವರೂಪವೇನು? ಏಕೆಂದರೆ, ನಮ್ಮಲ್ಲಿ ಒಬ್ಬನು ಕುಪಿತನಾದ ಕಾರಣ ಹೋರಾಟ ಮಾಡುತ್ತಾನೆ. ಒಬ್ಬನು ಪಕ್ಷಪಾತದ ಕಾರಣ ಹೋರಾಟ ಮಾಡುತ್ತಾನೆ." ಪ್ರವಾದಿ ಮುಹಮ್ಮದ್(ಸ) ಅವನತ್ತ ತಲೆ ಎತ್ತಿದರು. ಆತನು ನಿಂತಿದ್ದ ಕಾರಣ ಪ್ರವಾದಿ(ಸ) ತಲೆ ಎತ್ತಿದರು. ಪ್ರವಾದಿ(ಸ) ಹೀಗೆ ಹೇಳಿದರು - "ಯಾರು ಅಲ್ಲಾಹನ ವಚನವು ಉತ್ತುಂಗವಾಗಲೆಂದು ಹೋರಾಡುತ್ತಾನೋ ಅವನು ಅಲ್ಲಾಹನ ಮಾಗ೯ದಲ್ಲಿ ಹೋರಾಡುತ್ತಾನೆ." (ವರದಿ:ಹಝ್ರತ್ ಅಬೂಮೂಸಾ(ರ) - ಬುಖಾರಿ)

 • ಧಮ೯ಸಮ್ಮತ ಸಂಪತ್ತು
  ismika18-02-2016

  ಪ್ರವಾದಿ(ಸ)ಹೇಳಿದರು: ಒಬ್ಬನು ಯಾರ ಮುಂದೆಯೂ ಕೈ ಚಾಚುವ ನಿಂದ್ಯತೆಯಿಂದ ರಕ್ಷಣೆ ಹೊಂದಲಿಕ್ಕೆ, ತನ್ನ ಮನೆ ಮಂದಿಯ ಅವಶ್ಯಕತೆಗಳನ್ನು ಪೂರೈಸಲಿಕ್ಕೆ ಮತ್ತು ತನ್ನ ನೆರೆಯವರ ಜೊತೆ ಸೌಜನ್ಯದ ವತ೯ನೆ ಮಾಡಲಿಕ್ಕೆ ಧಮ೯ಸಮ್ಮತ ಮಾಗ೯ದಿಂದ ಲೋಕ(ಸಂಪತ್ತು)ವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಾಗುವಾಗ ಆತನ ಮುಖವು ಹುಣ್ಣಿಮೆಯ ಚಂದ್ರನಂತಿರುವುದು. ಒಬ್ಬನು ಸಂಪತ್ತಿನಲ್ಲಿ ಹೆಚ್ಚಳವಾಗಲಿಕ್ಕೆ, ಜನರ ಮೇಲೆ ಅಹಂಕಾರವನ್ನು ಮೆರೆಯಲಿಕ್ಕೆ ಮತ್ತು ಹೆಸರು, ಕೀತಿ೯ ಗಳಿಸಲಿಕ್ಕೆ ಧಮ೯ಸಮ್ಮತವಾಗಿಯೇ ಲೋಕವನ್ನು ಗಳಿಸಿದರೆ ಅವನು ಕಿಯಾಮತ್ ದಿನದಂದು ಅಲ್ಲಾಹನನ್ನು ಭೇಟಿಯಾಗುವಾಗ ಅಲ್ಲಾಹನು ಅವನ ಮೇಲೆ ತೀವ್ರವಾಗಿ ಕೋಪಗೊಂಡಿರುವನು. (ವರದಿ:ಹ.ಅಬೂಹುರೈರಾ(ರ) - ಬೈಹಕಿ,ಶುಅಬುಲ್ ಈಮಾನ್)

 • ವ್ಯಾಪಾರ
  ismika18-02-2016

  ಪ್ರವಾದಿ(ಸ) ಹೇಳಿದರು: ಒಬ್ಬನು ತನ್ನ ಸೋದರನ ವ್ಯಾಪಾರದ ಮೇಲೆ ವ್ಯಾಪಾರ ಮಾಡಬಾರದು ಮತ್ತು ಒಬ್ಬನು ತನ್ನ ಸೋದರನ ವಿವಾಹ ಪ್ರಸ್ತಾಪದ ಮೇಲೆ ತನ್ನ ವಿವಾಹ ಪ್ರಸ್ತಾಪವನ್ನಿಡಬಾರದು. ಅದರ ಅನುಮತಿ ಸಿಕ್ಕಿದಾಗ ಹೊರತು. (ವರದಿ:ಹಝ್ರತ್ ಇಬ್ನು ಉಮರ್(ರ) - ಮುಸ್ಲಿಮ್)

 • ಅವನ ಪಾಲಿನ ದಾನ
  ismika18-02-2016

  ಪ್ರವಾದಿ(ಸ) ಹೇಳಿದರು: ಒಬ್ಬ ವಿಶ್ವಾಸಿಯು ಒಂದು ಗಿಡ ನೆಟ್ಟರೆ ಅಥವಾ ಬೇಸಾಯ ಮಾಡಿದರೆ ಹಾಗೂ ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು. (ವರದಿ:ಹಝ್ರತ್ ಅಬೂಹುರೈರಾ(ರ) - ಬುಖಾರಿ,ಮುಸ್ಲಿಮ್)

 • ಅಧಿಕಾರ
  ismika18-02-2016

  ಇಬ್ನು ಉಮರ್(ರ) ಹೇಳುತ್ತಾರೆ - ಪ್ರವಾದಿ(ಸ) ಹೇಳಿದರು: "ಅಲ್ಲಾಹನು ಒಬ್ಬ ದಾಸನಿಗೆ ಕೆಲವರ ಮೇಲೆ ಅಧಿಕಾರ ಕೊಟ್ಟರೆ - ಅವನ ಅಧಿಕಾರಕ್ಕೆ ಅಧೀನವಾಗಿರುವವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚಿದ್ದರೂ - ಅವನು ಅವರ ಮೇಲೆ ಅಲ್ಲಾಹನ ಆದೇಶಗಳನ್ನು ಜಾರಿಗೊಳಿಸಿದ್ದನೋ ಅಥವಾ ನಿಲ೯ಕ್ಷ ತೋರಿದ್ದನೋ ಎಂದು ಪರಲೋಕದಲ್ಲಿ ಅಲ್ಲಾಹನು ಅವನೊಡನೆ ವಿಚಾರಣೆ ಮಾಡದೆ ಇರಲಾರನು. ವಿಶೇಷವಾಗಿ ಅಲ್ಲಾಹನು ಅವನೊಡನೆ ಅವನ ಸ್ವಂತ ಕುಟುಂಬದ(ಪತ್ನಿ,ಮಕ್ಕಳು ಮತ್ತು ಆತನಿಂದ ಪೋಷಿಸಲ್ಪಡುವ ಇತರರ)ಕುರಿತು ವಿಚಾರಣೆ ನಡೆಸುವನು." (ಮುಸ್ನದ್ ಅಹ್ಮದ್)

 • ಕೊಂದವನೂ ಕೊಲ್ಲಲ್ಪಟ್ಟವನೂ ನರಕವಾಸಿ
  ismika18-02-2016

  ಅಬೂಬಕ್ರಃ(ರ)ಹೇಳುತ್ತಾರೆ: ಪ್ರವಾದಿ ಮುಹಮ್ಮದ್(ಸ)ಹೇಳಿದರು - "ಇಬ್ಬರು ಮುಸ್ಲಿಮರು ಖಡ್ಗ ಹಿಡಿದು ಪರಸ್ಪರ ಹೋರಾಡಿದರೆ ಕೊಂದವನೂ ಕೊಲ್ಲಲ್ಪಟ್ಟವನೂ ನರಕವಾಸಿಗಳಾಗುವರು." ಆಗ ನಾನು ಕೇಳಿದೆ, "ಕೊಲೆಗಾರನು ಅಪರಾಧಿ ಸರಿ. ಆದರೆ ಕೊಲ್ಲಲ್ಪಟ್ಟವನ ತಪ್ಪೇನು?" ಪ್ರವಾದಿ(ಸ)ಹೇಳಿದರು, "ಕೊಲ್ಲಲ್ಪಟ್ಟವನೂ ಕೊಲೆಗಾರನನ್ನು ವಧಿಸ ಬಯಸಿದ್ದನು." (ಸಹೀಹುಲ್ ಬುಖಾರಿ)

 • ಇತರರಿಗೆ ಉಪದೇಶ
  ismika18-02-2016

  ಪ್ರವಾದಿ(ಸ) ಹೇಳಿದರು- ನಿರ್ಣಾಯಕ ದಿನದಂದು ಒಬ್ಬ ವ್ಯಕ್ತಿಯನ್ನು ತಂದು ನರಕಕ್ಕೆ ಎಸೆಯಲಾಗುವುದು. ಅವನ ಕರುಳುಗಳು ಹೊರಗೆ ಬರುವುವು. ಅವನು ಅವುಗಳನ್ನು ಹೊತ್ತು, ಕತ್ತೆಯು ಗಾಣದ ಸುತ್ತ ತಿರುಗುವಂತೆ, ಬರುವನು. ಇತರ ನರಕವಾಸಿಗಳು ಅವನ ಸುತ್ತ ನೆರೆಯುವರು ಮತ್ತು, "ಇದೇನು ನಿನ್ನ ಅವಸ್ಥೆ? ನೀನು ಇಲ್ಲಿಗೆ ಹೇಗೆ ಬಂದೆ? ನೀನು ನಮಗೆ ಒಳಿತಿನ ಆಜ್ಞೆ ನೀಡುತ್ತಿದ್ದೆ. ಕೆಡುಕಿನಿಂದ ತಡೆಯುತ್ತಿದ್ದೆಯಲ್ಲ" ಎಂದು ಹೇಳುವರು. ಆಗ ಅವನು ಹೀಗೆ ಉತ್ತರಿಸುವನು- "ನಾನು ನಿಮಗೆ ಒಳಿತಿನ ಆಜ್ಞೆ ಕೊಡುತ್ತಿದ್ದೆ. ಆದರೆ ನಾನು ಅದರಂತೆ ನಡೆಯುತ್ತಿರಲಿಲ್ಲ. ನಿಮ್ಮನು ಕೆಡುಕಿನಿಂದ ತಡೆಯುತ್ತಿದ್ದೆ. ಆದರೆ ನಾನು ಸ್ವತಃ ಆ ಕೆಡುಕುಗಳನ್ನು ಮಾಡುತ್ತಿದ್ದೆ."
  [ಬುಖಾರಿ - ವರದಿ: ಉಸಾಮಾ ಬಿನ್ ಝೈದ್ (ರ)]

 • ಋಣ ಭಾರ
  ismika23-05-2016

  ಆಯಿಶಾ(ರ) ವರದಿ ಮಾಡಿದ್ದಾರೆ: ಸ್ತ್ರೀಯು ಯಾರೊಂದಿಗೆ ಹೆಚ್ಚು ಋಣ ಭಾರವಿರಿಸಬೇಕೆಂದು ವಿಚಾರಿಸಿದಾಗ ಅವರು (ಸ) ಹೇಳಿದರು, "ತನ್ನ ಪತಿಯೊಂದಿಗೆ!" ನಾನು ಕೇಳಿದೆ, "ಪುರುಷನಿಗ ಯಾರ ಮೇಲೆ ಹೆಚ್ಚು ಹೊಣೆಗಾರಿಕೆ ಇದೆ?" ಪ್ರವಾದಿ ಮುಹಮ್ಮದ್ (ಸ) ಹೇಳಿದರು, "ತಾಯಿಯೊಂದಿಗೆ."  

 • ನಾಚಿಗೆಯಾಗುವುದಿಲ್ಲವೇ?
  ismika23-05-2016
  ಪ್ರವಾದಿ ಮುಹಮ್ಮದ್ (ಸ) ಕೇಳಿದರು, "ನಿಮಗೆ ನಾಚಿಗೆಯಾಗುವುದಿಲ್ಲವೇ?
  ಸ್ತ್ರೀಯರಿಗಿಂತ ರಟ್ಟೆ ಬಲವಿದೆಯೆಂದು ಭಾವಿಸಿ ಪುರುಷನಿಗೆ ಆಕೆಯನ್ನು ಯಥೇಷ್ಟ ನೋಯಿಸುವ ಅಥವಾ ಶಕ್ತಿ ಪ್ರದಶಿ೯ಸುವ ಯಾವ ಅಧಿಕಾರವೂ ಇಲ್ಲ."
  ಅವರು ಹೇಳಿದ್ದಾರೆ, "ಪತ್ನಿಯರಿಗೆ ಹೊಡೆಯುವವರು ಸಭ್ಯರಲ್ಲ. (ಅಬೂದಾವೂದ್,ಇಬ್ನುಮಾಜಃ)
 • ಫಿರ್ದೌಸ್(ಸ್ವರ್ಗ)
  ismika28-07-2016
  ಅಬೂಹುರೈರಾ (ರ) ಹೇಳುತ್ತಾರೆ- ಪ್ರವಾದಿ (ಸ) ಹೇಳಿದರು.  ಅಲ್ಲಾಹ್ ಮತ್ತು ಅವನ ಸಂದೇಶವಾಹಕರ ಮೇಲೆ ವಿಶ್ವಾಸವಿರಿಸಿದ, ನಮಾಝ್ ಮಾಡಿದ ಹಾಗೂ ರಮಝಾನಿನ ಉಪವಾಸ ಆಚರಿಸಿದವನನ್ನು ಸ್ವರ್ಗಕ್ಕೆ ಕಳಿಸುವುದು ಅಲ್ಲಾಹನ ಹೊಣೆಯಾಗಿದೆ.  ಅಲ್ಲಾಹನಿಗಾಗಿ ಅವನು ಜಿಹಾದ್ ಮಾಡಿರಲಿ ಅಥವಾ ತನ್ನ ಮನೆಯಲ್ಲಿ ಕುಳಿತಿರಲಿ. ಜನರು ಹೇಳಿದರು - ಪ್ರವಾದಿಯವರೇ!   ನಾವು ಜನರಿಗೆ ಈ ಶುಭವಾರ್ತೆ ನೀಡಲೇ? ಪ್ರವಾದಿ (ಸ) ಹೇಳಿದರು.  ಸ್ವರ್ಗದಲ್ಲಿ 100 ಪದವಿಗಳಿವೆ.  ಅದನ್ನು ಆತನು ತನ್ನ ಮಾರ್ಗದಲ್ಲಿ ಜಿಹಾದ್ ಮಾಡಿದವರಿಗಾಗಿ ಸಿಧ್ಧಗೊಳಿಸಿಟ್ಟಿದ್ದಾನೆ.  ಅವುಗಳಲ್ಲಿ ಎರಡು ಪದವಿಗಳ ಮದ್ಯೆ ಭೂಮಿ ಮತ್ತು ಆಕಾಶದ ಮದ್ಯೆ ಇರುವಷ್ಟು ಅಂತರವಿದೆ.  ನೀವು ಅಲ್ಲಾಹನಲ್ಲಿ ಸ್ವರ್ಗ ಕೇಳುವಾಗ ಫಿರ್ದೌಸನ್ನು ಕೇಳಿರಿ.  ಏಕೆಂದರೆ ಅದು ಅತ್ಯುತ್ತಮ ಸ್ವರ್ಗವಾಗಿದೆ.  ವರದಿಗಾರರು ಹೇಳುತ್ತಾರೆ- ನನ್ನ ಅಭಿಪ್ರಾಯದಲ್ಲಿ ಅದಕ್ಕಿಂತ ಮೇಲೆ ರಹ್ಮಾನನ (ಪರಮ ದಯಾಮಯನ) ಅರ್ಶ್ (ಪೀಠ) ಇದೆ. ಅದೇ ಫಿರ್ದೌಸ್ ನಿಂದ ಸ್ವರ್ಗದ ಕಾಲುವೆಗಳು ಹರಿಯುತ್ತವೆ.    ( *ಸಹೀಹುಲ್ ಬುಖಾರಿ* ) *62- 1142*
 • ದ್ವೇಷಿಸಬಾರದು
  ismika28-07-2016
  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ, "ಓರ್ವ ಸತ್ಯವಿಶ್ವಾಸಿಯು ಸತ್ಯವಿಶ್ವಾಸಿನಿಯನ್ನು ದ್ವೇಷಿಸಬಾರದು. ಆಕೆಯ ಒಂದು ನಡವಳಿಕೆಯು ಅರೋಚಕವಾಗಿದ್ದರೆ ಮತ್ತೊಂದು ಖಂಡಿತ ಮುದಗೊಳಿಸುವುದು."
  ಬುಖಾರಿ,ಮುಸ್ಲಿಮ್
 • ಅತ್ಯಂತ ಕೆಟ್ಟ ಆಹಾರ
  ismika28-07-2016
  ಅಬೂಹುರೈರಾ(ರ)ವರದಿ ಮಾಡಿದ್ದಾರೆ: ಪ್ರವಾದಿ ಮುಹಮ್ಮದ್ (ಸ) ಹೇಳಿದರು, "ಕೇವಲ ಶ್ರೀಮಂತರನ್ನು ಆಮಂತ್ರಿಸಿ, ಬಡವರಿಗೆ ನಿಷೇಧಿಸಲಾಗುವ ಆಹಾರವೇ ಅತ್ಯಂತ ಕೆಟ್ಟ ಆಹಾರ."
  (ಬುಖಾರಿ,ಮುಸ್ಲಿಮ್, ಇಬ್ನುಮಾಜಃ)
 • ಲೋಕದಲ್ಲಿ ಉತ್ತಮ
  ismika28-07-2016

  ಅನಸ್ ಬಿನ್ ಮಾಲಿಕ್ (ರ) ಹೇಳುತ್ತಾರೆ. ಪ್ರವಾದಿ (ಸ) ಹೇಳಿದರು. ಹಗಲಿನ ಆರಂಭದಲ್ಲಿ ಅಥವಾ ಕೊನೆಯಲ್ಲಿ ಅಲ್ಲಾಹನ ಮಾರ್ಗದಲ್ಲಿ ಕಳೆಯುವುದು ಲೋಕ ಮತ್ತು ಅದರಲ್ಲಿರುವ ಎಲ್ಲಕ್ಕಿಂತಲೂ ಉತ್ತಮವಾಗಿದೆ.  ( *ಸಹೀಹುಲ್ ಬುಖಾರಿ* ) *62- 1143*

 • ಇಸ್ಲಾಮನ್ನು ಬೀಳಿಸುವ ವಸ್ತು
  ismika28-07-2016

  ಝಿಯಾದ್ ಬಿನ್ ಹುದೈರ್(ರ) ಅವರಿಂದ ವರದಿಯಾಗಿದೆ. ಹ.ಉಮರ್(ರ) ನನ್ನಲ್ಲಿ ಹೀಗೆ ವಿಚಾರಿಸಿದರು - ಇಸ್ಲಾಮನ್ನು ಯಾವ ವಸ್ತು ಬೀಳಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ನಾನು ಇಲ್ಲವೆಂದಾಗ ಅವರು ಹೇಳಿದರು - ವಿದ್ವಾಂಸನ ಜಾರುವಿಕೆ, ಕುರ್'ಆನಿನೊಂದಿಗೆ ಕಪಟವಿಶ್ವಾಸಿಯ ಜಗಳ ಮತ್ತು ಪಥಭ್ರಷ್ಟ ಮುಖಂಡರ ತೀರ್ಮಾನವು ಅದನ್ನು ಬೀಳಿಸುವುದು.

  ದಾರಿಮೀ

 • ಆಟ ಮತ್ತು ವಿನೋದ
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ, "ದೇವಸ್ಮರಣೆ ಇಲ್ಲದ ಎಲ್ಲವೂ ಆಟ ಮತ್ತು ವಿನೋದವಾಗಿದೆ. ನಾಲ್ಕು ವಿಷಯಗಳ ಹೊರತು. ಪುರುಷನು ಪತ್ನಿಯೊಂದಿಗೆ ಸರಸಸಲ್ಲಾಪ ನಡೆಸುವುದು, ಕುದುರೆಯನ್ನು ಪಳಗಿಸುವುದು, ನಿಧಿ೯ಷ್ಟ ಗುರಿಗಳ ಮಧ್ಯೆ ಓಡುವುದು ಮತ್ತು ಈಜು ಕಲಿಯುವುದು."   (ನಸಾಈ)

 • ವಿಶ್ವಾಸದಲ್ಲಿ ಪರಿಪೂಣ೯ರು
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ, "ಅತ್ಯುತ್ತಮ ಗುಣ ಸ್ವಭಾವದವರು ಮತ್ತು ತಮ್ಮ ಕುಟುಂಬದೊಂದಿಗೆ ಕರುಣೆಯಿಂದ ವತಿ೯ಸುವವರೇ ಸತ್ಯ ವಿಶ್ವಾಸದಲ್ಲಿ ಪರಿಪೂಣ೯ರು."   (ತಿಮಿ೯ದಿ,ನಸಾಈ)

 • ಜಿಪುಣತೆ
  ismika28-07-2016

  ಜಾಬಿರ್(ರ)ರಿಂದ ವರದಿಯಾಗಿದೆ - ಪ್ರವಾದಿ ಮುಹಮ್ಮದ್(ಸ) ಆದೇಶಿಸಿದ್ದಾರೆ, "ಜಿಪುಣತೆಯ ಬಗ್ಗೆ ನೀವು ಎಚ್ಚರ ವಹಿಸಿರಿ. ಅದುವೇ ನಿಮ್ಮ ಹಿಂದಿನವರನ್ನು ನಾಶಗೊಳಿಸಿತ್ತು ಹಾಗೂ ರಕ್ತ ಹರಿಸಿ ಕುಟುಂಬ ಸಂಬಂಧಗಳನ್ನು ಮುರಿಯಲು ಅವರನ್ನು ಪ್ರೇರೇಪಿಸಿತ್ತು."

 • ವಿನಯ ತೋರಿಸುವಾತ
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ, "ಅಲ್ಲಾಹನಿಗಾಗಿ ವಿನಯ ತೋರಿಸುವಾತನನ್ನು ಆತನು ಉನ್ನತ ಗೊಳಿಸದಿರಲಾರನು."

 • ಕುಟುಂಬ ಸಂಬಂಧ
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ: "ಕುಟುಂಬ ಸಂಬಂಧದ ಜೋಡಣೆ ಮತ್ತು ದಾನಗಳಿಗೆ ಕ್ಷಿಪ್ರ ಪ್ರತಿಫಲ ದೊರೆಯುತ್ತದೆ. ಕುಟುಂಬ ಸಂಬಂಧವನ್ನು ಕಡಿಯುವುದಕ್ಕೆ ಮತ್ತು ಅಕ್ರಮಕ್ಕೆ ಕ್ಷಿಪ್ರ ಶಿಕ್ಷೆ ದೊರೆಯುತ್ತದೆ." "ಕುಟುಂಬ ಸಂಬಂಧ ಕಡಿಯುವಾತನು ಸ್ವಗ೯ ಪ್ರವೇಶಿಸಲಾರನು."   (ಬುಖಾರಿ,ಮುಸ್ಲಿಮ್)

 • ಕರುಣೆ
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಮತ್ತು ಅನುಯಾಯಿಗಳು ಪಯಣದಲ್ಲಿದ್ದಾಗ ಅವರ ಪೈಕಿ ಒಬ್ಬರು ಒಂದು ಪಕ್ಷಿಯ ಮೊಟ್ಟೆಯನ್ನು ತೆಗೆದರು. ತಾಯಿ ಹಕ್ಕಿ ಚೀರಾಡುತ್ತಾ ಸುತ್ತಲೂ ಹಾರಲಾರಂಭಿಸಿತು. ಈ ಸುದ್ದಿ ತಿಳಿದ ಪ್ರವಾದಿಯವರು ಮೊಟ್ಟೆಯನ್ನು ತೆಗೆದ ಸ್ಥಳದಲ್ಲಿಯೇ ಇರಿಸಿ ಅದರೊಂದಿಗೆ ಕರುಣೆ ತೋರುವಂತೆ ಆದೇಶಿಸಿದರು.  (ಬುಖಾರಿ)

 • ಉಪವಾಸವು ಗುರಾಣಿಯಾಗಿದೆ
  ismika28-07-2016

  ಅಬೂಹುರೈರಾ(ರ) ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು : ಉಪವಾಸವು ಗುರಾಣಿಯಾಗಿದೆ. ಆದ್ದರಿಂದ ಯಾರಾದರೂ ಉಪವಾಸದ ವೇಳೆ ಅಶ್ಲೀಲ ಮಾತು, ಜಗಳ ಅಥವಾ ಗುಲ್ಲು ಗದ್ದಲ ಮಾಡಿದರೆ ಅವರೊಂದಿಗೆ, ನಾನು ಉಪವಾಸದಲ್ಲಿರುವೆನು ಎಂದು ಹೇಳಬೇಕು. ನನ್ನ ಪ್ರಾಣ ಯಾರ ಕೈಯಲ್ಲಿದೆಯೋ ಆತನಾಣೆ! ಉಪವಾಸಿಗನ ಬಾಯಿಯಿಂದ ಹೊರಡುವ ವಾಸನೆಯು ಅಲ್ಲಾಹನಿಗೆ ಕಸ್ತೂರಿ ಗಿಂತಲೂ ಹೆಚ್ಚು ಪ್ರಿಯವಾಗಿದೆ. ಅಲ್ಲಾಹನು ಹೇಳುತ್ತಾನೆ. 'ಉಪವಾಸಿಗನು ನನಗಾಗಿ ಆಹಾರ ಪಾನೀಯಗಳನ್ನೂ ಲೈಂಗಿಕ ಬಯಕೆಗಳನ್ನೂ ತೊರೆಯುತ್ತಾನೆ. ಆದ್ದರಿಂದ ಉಪವಾಸವು ಕೇವಲ ನನಗಾಗಿದೆ. ನಾನೇ ಅದರ ಪ್ರತಿಫಲ ನೀಡುವೆನು. ಒಂದು ಒಳಿತಿಗೆ ಹತ್ತು ಪುಣ್ಯ ನೀಡಲಾಗುವುದು.   (ಸಹೀಹುಲ್ ಬುಖಾರಿ)

 • ರೈಯ್ಯಾನ್ ದ್ವಾರ
  ismika28-07-2016

  ಸಹ್ಲ್(ರ) ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು : ಸ್ವಗ೯ದಲ್ಲಿ ರೈಯ್ಯಾನ್ ಎಂಬೊಂದು ದ್ವಾರವಿದೆ. ಅದರ ಮೂಲಕ ನಿಣಾ೯ಯಕ ದಿನದಂದು ಉಪವಾಸಿಗರು ಮಾತ್ರ ಪ್ರವೇಶಿಸುವರು. ಅವರಲ್ಲದೆ ಬೇರಾರೂ ಅದರಲ್ಲಿ ಪ್ರವೇಶಿಸಲಾರರು. ಅಂದು ಕೇಳಲಾಗುವುದು - ಉಪವಾಸಿಗರು ಎಲ್ಲಿ? ಆಗ ಉಪವಾಸಿಗರೆಲ್ಲ ಎದ್ದೇಳುವರು. ಅವರು ಪ್ರವೇಶಿಸಿದ ನಂತರ ಅದನ್ನು ಮುಚ್ಚಿ ಬಿಡಲಾಗುವುದು. ಬೇರಾರೂ ಅದರೊಳಗೆ ಪ್ರವೇಶಿಸಲಾರರು. (ಸಹೀಹುಲ್ ಬುಖಾರಿ

 • ಸಹರಿ
  ismika28-07-2016

  ಝೈದ್ ಬಿನ್ ಸಾಬಿತ್(ರ) ಹೇಳುತ್ತಾರೆ: ನಾವು ಪ್ರವಾದಿ ಮುಹಮ್ಮದ್ರ(ಸ) ಜೊತೆ ಸಹರಿ ತಿಂದು, ಆ ಬಳಿಕ ನಮಾಝ್'ಗಾಗಿ ಎದ್ದು ನಿಂತೆವು. ವರದಿಗಾರನೊಂದಿಗೆ, ಅದಾನ್ ಮತ್ತು ಸಹರಿಯ ನಡುವೆ ಎಷ್ಟು ಅಂತರವಿತ್ತೆಂದು ಕೇಳಲಾದಾಗ ಅವರು ಹೇಳಿದರು, "ಐವತ್ತು ಆಯತ್'ಗಳನ್ನು ಪಠಿಸುವಷ್ಡು ಸಮಯ."  (ಸಹೀಹುಲ್ ಬುಖಾರಿ)

 • ಅಲ್ಲಾಹನೇ ತಿನ್ನಿಸಿದನು, ಕುಡಿಸಿದನು.
  ismika28-07-2016

  ಅಬೂಹುರೈರಾ(ರ)ರಿಂದ ವರದಿ, ಪ್ರವಾದಿ ಮುಹಮ್ಮದ್ (ಸ) ಹೇಳುತ್ತಾರೆ  ಉಪವಾಸಿಗನು ಮರೆವಿನಿಂದಾಗಿ ಏನಾದರೂ ತಿಂದರೆ, ಕುಡಿದರೆ ಅವನು ಉಪವಾಸವನ್ನು ಪೂತಿ೯ಗೊಳಿಸಲಿ. ಏಕೆಂದರೆ ಅವನಿಗೆ ಅಲ್ಲಾಹನೇ ತಿನ್ನಿಸಿದನು, ಕುಡಿಸಿದನು.

  (ಸಹೀಹುಲ್ ಬುಖಾರಿ)

 • ಸಂದೇಹಾಸ್ಪದ ವಿಷಯಗಳು
  ismika28-07-2016
  ನುಅ್'ಮಾನ್ ಬಿನ್ ಬಶೀರ್(ರ) ಹೇಳುತ್ತಾರೆ - ಪ್ರವಾದಿ ಮುಹಮ್ಮದ್(ಸ) ಹೇಳಿದರು - ಹಲಾಲ್ ಸ್ಪಷ್ಟವಿದೆ. ಹರಾಮ್ ಕೂಡಾ ಸ್ಪಷ್ಟವಿದೆ. ಅವೆರಡರ ಮಧ್ಯೆ ಕೆಲವು ಸಂದೇಹಾಸ್ಪದ ವಿಷಯಗಳಿವೆ. ಯಾರು ಸಂದೇಹಾಸ್ಪದ ಪಾಪಗಳನ್ನು ತೊರೆದನೋ ಅವನು ಬಹಿರಂಗ ಪಾಪವನ್ನು ತೊರೆದನು. ಇನ್ನು, ಸಂದೇಹಾಸ್ಪದ ಪಾಪಗಳನ್ನು ಮಾಡಲು ಧೈಯ೯ ತೋರುವವನು ಶೀಘ್ರದಲ್ಲೇ ಬಹಿರಂಗ ಪಾಪಗಳಲ್ಲೂ ಸಿಲುಕಬಲ್ಲನು. ನಿಷೇಧಿತ ವಸ್ತುಗಳು ಅಲ್ಲಾಹನು ನಿಶ್ಚಯಿಸಿದ ಮೇರೆಗಳಾಗಿವೆ. ಯಾರು ಅದರ ಹತ್ತಿರ ಸುಳಿಯವನೋ ಅವನು ಶೀಘ್ರವೇ ಅದರೊಳಗೆ ನುಗ್ಗುವ ಸಾಧ್ಯತೆಯಿದೆ.   (ಸಹೀಹುಲ್ ಬುಖಾರಿ)
 • ಪರದೂಷಣೆಯ ಪ್ರಾಯಶ್ಚಿತ್ತ
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿರುವರು : ತನ್ನ ಸಹೋದರನ ಬಗ್ಗೆ ಪರದೂಷಣೆ ಗೈದಿರುವಾತನ ಪ್ರಾಯಶ್ಚಿತ್ತ ತನ್ನಿಂದಾದ ಅಪರಾಧಕ್ಕಾಗಿ ಕ್ಷಮೆಯ ಪ್ರಾಥ೯ನೆ ಮಾಡುವುದು ಮತ್ತು ಈ ರೀತಿ ಪಠಿಸುವುದಾಗಿದೆ, ಓ ಅಲ್ಲಾಹ್! ನಮ್ಮನ್ನೂ, ಆತನನ್ನೂ ಕ್ಷಮಿಸು.   (ಬೈಹಕಿ)

 • ಅಭಯ ಯಾಚಿಸುವುದು
  ismika28-07-2016
  ಇಬ್ನು ಉಮರ್(ರ)ವರದಿ ಮಾಡುತ್ತಾರೆ. ಪ್ರವಾದಿ ಮುಹಮ್ಮದ್ (ಸ) ತಮ್ಮ ದುಆದಲ್ಲಿ ಈ ರೀತಿ ಹೇಳುತ್ತಿದ್ದರು: ಓ ಅಲ್ಲಾಹ್! ನಿನ್ನ ಅನುಗ್ರಹಗಳು ಹೊರಟು ಹೋಗುವುದರಿಂದ, ನಿನ್ನ ಕ್ಷೇಮವು ಇಲ್ಲವಾಗುವುದರಿಂದ, ನಿನ್ನ ಶಿಕ್ಷೆಯ ಹಠಾತ್ ಆಗಮನದಿಂದ ಹಾಗೂ ನಿನ್ನ ಸಕಲ ಕ್ರೋಧದಿಂದ ನಾನು ನಿನ್ನ ಅಭಯ ಯಾಚಿಸುತ್ತೇನೆ.   (ಮುಸ್ಲಿಮ್)
 • ಸತ್ಯ ಮಿಥ್ಯ
  ismika28-07-2016
  ಪ್ರವಾದಿ ಮುಹಮ್ಮದ್ (ಸ) ಹೇಳಿದರು:
  "ಜನರೇ! ಸತ್ಯವನ್ನು ನೆಚ್ಚಿಕೊಳ್ಳಿರಿ. ಸತ್ಯ ಮತ್ತು ಒಳಿತು ಒಟ್ಟೊಟ್ಟಿಗಿರುತ್ತವೆ ಮತ್ತು ಅವೆರಡೂ ಸ್ವರ್ಗದೆಡೆಗೆ ಕೊಂಡೊಯ್ಯುತ್ತವೆ. ಮಿಥ್ಯದಿಂದ ದೂರ ಉಳಿಯಿರಿ. ಮಿಥ್ಯ ಮತ್ತು ಕೆಡುಕು ಒಟ್ಟೊಟ್ಟಿಗಿರುತ್ತವೆ ಮತ್ತು ಅವೆರಡೂ ನರಕದೆಡೆಗೆ ಕೊಂಡೊಯ್ಯುವ ವಸ್ತುಗಳಾಗಿವೆ. ಅಲ್ಲಾಹನೊಡನೆ ಕ್ಷೇಮವನ್ನು ಬೇಡುತ್ತಲಿರಿ. ಯಾವುದೇ ವ್ಯಕ್ತಿಗೆ ದೃಢಚಿತ್ತತೆಯ ತರುವಾಯ ಕ್ಷೇಮಕ್ಕಿಂತಲೂ ಮಿಗಿಲಾದ ಯಾವುದೇ ವಸ್ತು ದೊರಕಿಲ್ಲ.  ತಿರ್ಮಿದಿ, ಇಬ್ನುಮಾಜಃ, ಅಹ್ಮದ್
 • ಗುಡುಗು ಮಿಂಚಿನ ಸಂದರ್ಭದ ಪ್ರಾರ್ಥನೆ
  ismika28-07-2016
  ಗುಡುಗು ಮಿಂಚಿನ ಘರ್ಜನೆ ಕೇಳಿದಾಗ ಪ್ರವಾದಿ ಮುಹಮ್ಮದ್ (ಸ) ಈ ರೀತಿ ಪ್ರಾರ್ಥಿಸುತ್ತಿದ್ದರು :
  "ಅಲ್ಲಾಹುಮ್ಮ ಲಾ ತಕ್ತುಲ್'ನಾ ಬಿಗದಬಿಕ ವಲಾ ತುಹ್'ಲಿಕ್'ನಾ ಬಿ ಅದಾಬಿಕ ವ ಆಫಿನಾ ಕಬ್ಲ ಝಾಲಿಕ."
  ಓ ಅಲ್ಲಾಹ್! ನಮ್ಮನ್ನು ನಿನ್ನ ಕ್ರೋಧದಿಂದ ಕೊಲ್ಲಬೇಡ. ನಿನ್ನ ಯಾತನೆಯಿಂದ ನಾಶಗೊಳಿಸಬೇಡ. ಅಂತಹ ಸಮಯ ಬರುವುದಕ್ಕಿಂತ ಮುಂಚೆಯೇ ನಮ್ಮನ್ನು ನಿನ್ನ ಕೃಪಾಶ್ರಯದಲ್ಲಿರಿಸು.
  (ವರದಿ:ಅಬ್ದುಲ್ಲಾ ಬಿನ್ ಉಮರ್ - ತಿರ್ಮಿದಿ)
 • ಇಸ್ಲಾಮಿನ ಅತ್ಯುತ್ತಮ ಕಮ೯
  ismika28-07-2016
  ಅಬ್ದುಲ್ಲಾ ಬಿನ್ ಉಮರ್(ರ)ವರದಿ ಮಾಡುತ್ತಾರೆ:
  "ಓರ್ವ ವ್ಯಕ್ತಿ ಪ್ರವಾದಿಯವರ(ಸ) ಬಳಿ ಬಂದು 'ಅಯ್ಯುಲ್ ಇಸ್ಲಾಮಿ ಖೈರ್'(ಇಸ್ಲಾಮಿನ ಅತ್ಯುತ್ತಮ ಕಮ೯ ಯಾವುದು?)" ಎಂದು ವಿಚಾರಿಸಿದರು. ಪ್ರವಾದಿ ಮುಹಮ್ಮದ್ (ಸ) ಈ ರೀತಿ ಉತ್ತರಿಸಿದರು: "ದರಿದ್ರರಿಗೆ ಉಣಬಡಿಸುವುದು ಮತ್ತು ನಿಮಗೆ ಪರಿಚಯವಿದ್ದರೂ ಇಲ್ಲದಿದ್ದರೂ ಎಲ್ಲ ಮುಸ್ಲಿಮರಿಗೂ ಸಲಾಮ್ ಹೇಳುವುದು."  (ಮುತ್ತಫಕುನ್ ಅಲೈಹಿ)
 • ಪ್ರವಾದಿ (ಸ) ರ ಉಪದೇಶ
  ismika28-07-2016
  ಅಬೂಹುರೈರಾ(ರ)ಹೇಳುತ್ತಾರೆ, ಪ್ರವಾದಿ ಮುಹಮ್ಮದ್ (ಸ) ಸಲ್ಮಾನ್ ಫಾರ್ಸಿ(ರ)ರನ್ನು ಉಪದೇಶಿಸುತ್ತಾ ಹೇಳಿದರು:
  "ನಾನು ನಿಮಗೆ ಕೆಲವು ವಚನಗಳನ್ನು ಹೇಳಿಕೊಡುತ್ತೇನೆ. ಅವುಗಳ ಮೂಲಕ ನೀವು ಪರಮ ದಯಾಮಯನಿಂದ ಬೇಡಿರಿ. ಅವನತ್ತ ವಾಲಿರಿ. ಹಗಲೂ ರಾತ್ರಿಯೂ ಇದೇ ವಚನಗಳ ಮೂಲಕ ಅಲ್ಲಾಹನಲ್ಲಿ ಪ್ರಾರ್ಥಿಸಿರಿ. ಅದು ಈ ರೀತಿ ಇದೆ":-
  ಓ ಅಲ್ಲಾಹ್! ನಾನು ನಿನ್ನಿಂದ ಆರೋಗ್ಯಕರ ವಿಶ್ವಾಸವನ್ನು ಬಯಸುತ್ತೇನೆ. ಸಚ್ಚಾರಿತ್ರ್ಯದಲ್ಲಿ ಸತ್ಯವಿಶ್ವಾಸದ ಪ್ರಭಾವವನ್ನೂ ಬಯಸುತ್ತೇನೆ. ಪರಲೋಕದ ಯಶಸ್ಸು ಸಿಗುವಂತಹ ವಿಜಯವನ್ನು ನಾನು ನಿನ್ನಿಂದ ಬಯಸುತ್ತೇನೆ. ನಿನ್ನಿಂದ ಕರುಣೆ, ರಕ್ಷಣೆ, ಪಾಪಗಳಿಗೆ ಕ್ಷಮೆ ಮತ್ತು ಸಂಪ್ರೀತಿಯನ್ನೂ ಬಯಸುತ್ತೇನೆ.  (ತಬ್ರಾನಿ,ಹಾಕಿಮ್,ಹೈಸಮೀ)
 • ಅಭಯ ಯಾಚನೆ
  ismika28-07-2016
  ಓ ನಮ್ಮ ಪ್ರಭೂ! ನೀನೇ ಆರಂಭ, ನಿನಗಿಂತ ಮುಂಚೆ ಯಾವುದೂ ಇರಲಿಲ್ಲ. ನೀನೇ ಕೊನೆ. ನಿನ್ನ ತರುವಾಯ ಯಾವುದೂ ಇರುವುದಿಲ್ಲ. ಎಲ್ಲ ಜೀವಿಗಳ ಉಪಟಳದಿಂದ ನಿನ್ನ ಅಭಯ ಯಾಚಿಸುತ್ತೇನೆ. ಅದರ ಜುಟ್ಟು ನಿನ್ನ ಹಸ್ತಗಳಲ್ಲಿವೆ. ನಾನು ಅಪರಾಧ ಹಾಗೂ ಸೋಮಾರಿತನದಿಂದ, ಗೋರಿಯ ಯಾತನೆಯಿಂದ, ಐಶ್ವರ್ಯ ಮತ್ತು ದಾರಿದ್ರ್ಯದ ಪರೀಕ್ಷೆಯಿಂದ ನಿನ್ನ ಅಭಯ ಯಾಚಿಸುತ್ತೇನೆ. ಅಪರಾಧ ಹಾಗೂ ಸಾಲದ ವ್ಯವಹಾರದಿಂದಲೂ ನಿನ್ನ ಅಭಯ ಯಾಚಿಸುತ್ತೇನೆ.
  (ಮುಅ್'ಜಮ್ ಕಬೀರ್, ಔಸತ್-ತಬ್ರಾನಿ)
 • ಅಡವಿಡಲಾದ ಪ್ರಾಣಿ
  ismika28-07-2016
  ಅಬೂಹುರೈರಾ(ರ)ಹೇಳುತ್ತಾರೆ - ಅಡವಿಡಲಾದ ಪ್ರಾಣಿಯ ಖರ್ಚಿನ ಬದಲಿಗೆ ಅದರ ಮೇಲೆ ಸವಾರಿ ಮಾಡುವುದು ಧರ್ಮ ಸಮ್ಮತವಾಗಿದೆ. ಹಾಲು ಕೊಡುವ ಜಾನುವಾರಿನ ಖರ್ಚಿನ ಬದಲಿಗೆ ಅದರ ಹಾಲು ಕರೆದು ಪಡೆಯುವುದು ಧರ್ಮ ಸಮ್ಮತವಾಗಿದೆ. ಜಾನುವಾರುಗಳ ಖರ್ಚಿನ ಹೊಣೆ ಸವಾರಿ ಮಾಡುವವನ ಮತ್ತು ಹಾಲು ಕರೆಯುವವನ ಮೇಲಿದೆ. (ಸಹೀಹುಲ್ ಬುಖಾರಿ)
 • ಅವೂಝುಬಿಲ್ಲಾಹಿ ಮಿನಶೈತಾನಿರ್ರಜೀಮ್
  ismika28-07-2016
  ಸುಲೈಮಾನ್ ಬಿನ್ ಸುರ್'ವ(ರ)ಹೇಳುತ್ತಾರೆ, ನಾನು ಪ್ರವಾದಿ ಮಹಮ್ಮದ್ (ಸ) ರ ಬಳಿ ಕುಳಿತಿದ್ದಾಗ ಇಬ್ಬರು ವ್ಯಕ್ತಿಗಳ ನಡುವೆ ಪರಸ್ಪರ ಬೈದಾಟ ನಡೆಯಿತು. ಅವರಲ್ಲೊಬ್ಬರ ಮುಖ ಕೋಪದಿಂದ ಕೆಂಪಾಗಿತ್ತು. ಪ್ರವಾದಿ(ಸ)ಇದನ್ನು ಕಂಡು ಹೀಗೆ ಹೇಳಿದರು:
  ನನಗೊಂದು ವಚನದ ಬಗ್ಗೆ ತಿಳಿದಿದೆ. ಅದನ್ನು ಪಠಿಸಿದರೆ ಆತನ ಕ್ರೋಧ ತಣ್ಣಗಾಗುವುದು. ಆತ  اعوز بالله من الشيطان الرجيم (ಅವೂಝುಬಿಲ್ಲಾಹಿ ಮಿನಶೈತಾನಿರ್ರಜೀಮ್) ಪಠಿಸಿದರೆ ಆತನ ಕೋಪ ದೂರವಾಗುವುದು."  (ಮುತ್ತಫಕುನ್ ಅಲೈಹಿ)
 • ಎರಡು ವಿಧದ ಪ್ರಾರ್ಥನೆಗಳು
  ismika28-07-2016
  ಸಹಲ್ ಬಿನ್ ಸ'ಅದ್ ಹೇಳುತ್ತಾರೆ, ಪ್ರವಾದಿ ಮುಹಮ್ಮದ್ (ಸ) ಹೇಳಿರುವರು :
  ಎರಡು ವಿಧದ ಪ್ರಾರ್ಥನೆಗಳು ತಿರಸ್ಕೃತವಾಗದು ಅಥವಾ ಬಹಳ ವಿರಳವಾಗಿ ತಿರಸ್ಕೃತವಾಗುತ್ತವೆ. ಒಂದನೆಯದು ಅದಾನ್'ನ ವೇಳೆ ಪ್ರಾರ್ಥಿಸುವುದು, ಎರಡನೆಯದು ಯುದ್ಧದ ವೇಳೆ ಪಂಕ್ತಿಬದ್ಧರಾಗಿ ನಿಂತಿರುವಾಗ ಮಾಡುವ ಪ್ರಾರ್ಥನೆ. (ಅಬೂದಾವೂದ್)
 • ಇಬ್ರಾಹೀಮರ(ಅ),ಮುಹಮ್ಮದ್ (ಸ) ದುಆ
  ismika28-07-2016
  ಹಝ್ರತ್ ಇಬ್ನು ಅಬ್ಬಾಸ್(ರ)ಹೇಳುತ್ತಾರೆ: 'ಹಸ್'ಬುನಲ್ಲಾಹು ವ ನಿಅ್'ಮಲ್ ವಕೀಲ್' (ನಮಗೆ ಅಲ್ಲಾಹನೇ ಸಾಕು, ಅವನೇ ಅತ್ಯುತ್ತಮ ಕಾರ್ಯ ಸಾಧಕನು) ಎಂಬ ದುಆ ಇಬ್ರಾಹೀಮರ(ಅ) ದುಆವೂ ಹೌದು. ಮುಹಮ್ಮದ್ (ಸ) ದುಆವೂ ಹೌದು. ಇಬ್ರಾಹೀಮ್(ಅ)ರನ್ನು ಅಗ್ನಿಕುಂಡಕ್ಕೆ ಎಸೆಯಲಾದಾಗ ಅವರು ಅಲ್ಲಾಹನೊಡನೆ ಇದೇ ದುಆವನ್ನು ಬೇಡಿದ್ದರು. ಬದ್ರ್ ಯುದ್ಧ ದ ಸಂದರ್ಭದಲ್ಲಿ ವೈರಿಗಳು ಮುಸ್ಲಿಮರಲ್ಲಿ ಭಯ ಹುಟ್ಟಿಸುವುದಕ್ಕಾಗಿ ಮಕ್ಕಾದ ಜನತೆ ಬೃಹತ್ ಸಂಖ್ಯೆಯಲ್ಲಿ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿಸಿದರು. (ಇನ್ನನ್ನಾಸ ಕದ್ ಜಮ'ಊ ಲಕುಮ್ ಫಖ್'ಶೌಹುಮ್) ಆ ವೇಳೆ ಪ್ರವಾದಿ ಮುಹಮ್ಮದ್ (ಸ) ಹೇಳಿದರು:
  "ಹಸ್ಬುನಲ್ಲಾಹು ವನಿಅ್'ಮಲ್ ವಕೀಲ್."
  (ನಮಗೆ ಅಲ್ಲಾಹ್ ಸಾಕು ಮತ್ತು ಅವನೇ ಕಾರ್ಯ ಸಾಧಕನು.) (ಆಲಿ ಇಮ್ರಾನ್ : 173) (ಬುಖಾರಿ)
 • ದೋಷವನ್ನು ಅಡಗಿಸುವುದು
  ismika28-07-2016

  "ಯಾರಾದರೂ ತಮ್ಮ ಮುಸ್ಲಿಮ್ ಸಹೋದರನ ದೋಷವನ್ನು ಅಡಗಿಸಿದರೆ ಅಲ್ಲಾಹನು ಅಂತ್ಯದಿನದಲ್ಲಿ ಆತನ ದೋಷವನ್ನು ಅಡಗಿಸುತ್ತಾನೆ. ಶಿಕ್ಷಾರ್ಹವಾದ ಅಪರಾಧಗಳ ಬಗ್ಗೆ ಪರಸ್ಪರ ದಾಕ್ಷಿಣ್ಯ ತೋರಿಸಿರಿ. ನನ್ನ ಬಳಿಗೆ ಬರುವ ಅಪರಾಧಿಗಳಿಗೆ ಶಿಕ್ಷೆ ಕಡ್ಡಾಯವಾಗಿದೆ." (ಅಬೂದಾವೂದ್,ನಸಾಈ)

  ಮಾಇಝ್ ಬಿನ್ ಮಾಲಿಕ್'ರಿಂದ(ರ)ವ್ಯಭಿಚಾರ ಕೃತ್ಯ ಸಂಭವಿಸಿದಾಗ ಅದನ್ನು ಪ್ರವಾದಿಯವರ(ಸ) ಬಳಿ ಹೋಗಿ ತಿಳಿಸುವಂತೆ ಸೂಚಿಸಿದ ಹಸ್ಸಾಲ್ ಬಿನ್ ನುಐಮ್'ರೊಡನೆ ಪ್ರವಾದಿಯವರು(ಸ)ಕೇಳಿದರು.
  'ನೀವು ಆತನ ಅಪರಾಧವನ್ನು ಅಡಗಿಸಿದರೆ ಅದುವೇ ತುಂಬಾ ಉತ್ತಮವಾಗಿರುತ್ತಿತ್ತಲ್ಲವೇ?"
  (ಅಬೂದಾವೂದ್)
 • 7 ಮಹಾಪಾಪಗಳು
  ismika28-07-2016
  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ, "ವಿನಾಶಕಾರಿ ಯಾಗಿರುವ 7 ಮಹಾಪಾಪಗಳನ್ನು ತೊರೆಯಿರಿ." ಜನರು ಕೇಳಿದರು, "ಪ್ರವಾದಿಗಳೇ! ಅವು ಯಾವುವು?" ಅವರು(ಸ)ಹೇಳಿದರು,
  1. ಬಹುದೇವಾರಾಧನೆ,
  2. ಮಾಟಗಾರಿಕೆ,
  3. ಅಲ್ಲಾಹನು ಗೌರವಿಸಿರುವ ಮಾನವ ಪ್ರಾಣಹರಣ,
  4. ಬಡ್ಡಿ ಭಕ್ಷಣೆ,
  5. ಅನಾಥರ ಹಣ ಕಬಳಿಕೆ,
  6. ಯುದ್ಧದ ವೇಳೆಯಲ್ಲಿ ಹಿಂದೆ ಸರಿಯುವುದು
  7. ಸುಶೀಲೆಯರು ಮತ್ತು ಕುಲೀನರಾದ ವಿಶ್ವಾಸಿನಿಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವುದು."
  (ಬುಖಾರಿ,ಮುಸ್ಲಿಮ್)
 • ಮುಸ್ಲಿಮ್ ಯಾರು
  ismika28-07-2016

  ಪ್ರವಾದಿ ಮುಹಮ್ಮದ್ (ಸ) ಹೇಳಿದ್ದಾರೆ: "ಯಾರ ನಾಲಗೆ ಮತ್ತು ಕೈಗಳಿಂದ ಜನರು ಸುರಕ್ಷಿತರಾಗಿರುತ್ತಾರೋ ಆತನೇ ಮುಸ್ಲಿಮ್."  (ಬುಖಾರಿ,ಮುಸ್ಲಿಮ್)

 • ಇಸ್ತಿಖಾರಃ, ಸಮಾಲೋಚನೆ, ಮಿತವ್ಯಯ
  ismika28-07-2016
  ಅನಸ್ ಬಿನ್ ಮಾಲಿಕ್(ರ)ರಿಂದ ವರದಿಯಾಗಿದೆ, ಪ್ರವಾದಿ ಮುಹಮ್ಮದ್ (ಸ) ಹೇಳಿರುವರು :
  "ಇಸ್ತಿಖಾರಃ ಮಾಡುವವನು ಎಂದೂ ನಿರಾಶನಾಗುವುದಿಲ್ಲ. ಸಮಾಲೋಚನೆ ಮಾಡುವವನು ಎಂದೂ ಪರಿತಪಿಸುವುದಿಲ್ಲ. ಹಾಗೂ ಮಿತವ್ಯಯ ಪಾಲಿಸುವವನು ಎಂದೂ ಇತರರ ಅಪೇಕ್ಷಿತನಾಗುವುದಿಲ್ಲ."
   (ತಬ್ರಾನಿ;ಮುಅ್'ಜಮ್ ಸಗೀರ್)
 • ಪ್ರಾರ್ಥನೆ
  ismika28-07-2016
  ಒಮ್ಮೆ ಹಝ್ರತ್ ಅಮ್ಮಾರ್ ಬಿನ್ ಯಾಸಿರ್(ರ)ಸಂಕ್ಷಿಪ್ತವಾಗಿ ನಮಾಝ್ ನೆರವೇರಿಸಿದರು. ಜನರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಅದಕ್ಕೆ ಅಮ್ಮಾರ್(ರ)ಹೇಳಿದರು - ನಾನು ನಮಾಝಿನಲ್ಲಿ ಪ್ರವಾದಿವರ್ಯ(ಸ)ರಿಂದ ಆಲಿಸಿದ ದುಆವೊಂದನ್ನು ಬೇಡಿದ್ದೇನೆ. ಅದು ಈ ರೀತಿ ಇದೆ :
  ಓ ನಮ್ಮ ಪ್ರಭೂ! ನಿನ್ನ ಅದೃಶ್ಯ ಜ್ಞಾನ ಮತ್ತು ಸೃಷ್ಟಿಗಳ ಮೇಲಿನ ನಿನ್ನ ಸಾಮರ್ಥ್ಯದ ಮೂಲಕ ನಾನು ಬದುಕಿರುವುದು ನನ್ನ ಮಟ್ಟಿಗೆ ಉತ್ತಮವೆಂದು ನೀನು ಪರಿಗಣಿಸುವ ತನಕ ನನ್ನನ್ನು ಬದುಕಿಸು. ನಾನು ಸಾಯುವುದು ನನ್ನ ಮಟ್ಟಿಗೆ ಉತ್ತಮವೆಂದು ಕಂಡು ಬಂದಾಗ ನನ್ನನ್ನು ಸಾಯಿಸು.
   ಮುಸ್ನದ್ ಅಹ್ಮದ್,ಸಹೀಹ್ ಹಾಕಿಮ್
 • ಮಲಗುವ ವೇಳೆ ಪಠಿಸುವ ವಚನಗಳು
  ismika28-07-2016
  ಪ್ರವಾದಿ ಮುಹಮ್ಮದ್ (ಸ) ಹೇಳಿರುವುದಾಗಿ ಅಬೂ ಸ'ಈದ್ ಖುದ್ರೀ(ರ)ಉಲ್ಲೇಖಿಸುತ್ತಾರೆ : "ಯಾರು ಮಲಗುವ ವೇಳೆ ಈ ವಚನಗಳನ್ನು ಮೂರು ಬಾರಿ ಪಠಿಸತ್ತಾರೋ ಅಲ್ಲಾಹನು ಆತನ ಪಾಪಗಳನ್ನು ಮನ್ನಿಸುವನು. ಅದು ಸಮುದ್ರದ ನೊರೆಗಳಷ್ಟದ್ದಿರೂ ಅಥವಾ ಆಲಿಜ್'ನ (ಪಶ್ಚಿಮದ ಮರಭೂಮಿ)ಮರಳಿನಷ್ಟಿದ್ದರೂ ಅಥವಾ ವಿಶ್ಚವು ಅಸ್ತಿತ್ವದಲ್ಲಿರುವಷ್ಟು ದಿನಗಳ ಸಂಖ್ಯೆ ಯಷ್ಟಿದ್ದರೂ ಸರಿ.
  "ಅಸ್ತಗ್'ಫಿರುಲ್ಲಾಹಲ್ಲದೀ ಲಾ ಇಲಾಹ ಇಲ್ಲಾಹುವಲ್ ಹಯ್ಯುಲ್ ಕಯ್ಯೂಮ್ ವ'ಅತೂಬು ಇಲೈಹಿ." ಚಿರಂತನನೂ ಸ್ವಯಂ ಜೀವಂತನೂ ಅಖಿಲ ಪ್ರಪಂಚದ ನಿಯಂತ್ರಕನೂ ಆದ ಆತನ ಹೊರತು ಆರಾಧ್ಯರಾರೂ ಇಲ್ಲದಂತಹ ಅಲ್ಲಾಹನಲ್ಲಿ ನಾನು ಕ್ಷಮೆಯಾಚಿಸುತ್ತೇನೆ ಮತ್ತು ಆತನೆಡೆಗೇ ಪಶ್ಚಾತ್ತಾಪ ಪಟ್ಟು ಮರಳುತ್ತೇನೆ.  (ತಿರ್ಮಿದಿ)
 • ಉತ್ತಮ ಹೆಸರು
  ismika28-07-2016
  ಅಬುದ್ದರ್ದಾ(ರ)ಹೇಳುತ್ತಾರೆ, ಪ್ರವಾದಿ ಮುಹಮ್ಮದ್ (ಸ) ಹೇಳಿರುವರು :
   "ನಿರ್ಣಾಯಕ ದಿನದಂದು ನಿಮ್ಮನ್ನು ನಿಮ್ಮ ನಿಮ್ಮ ಹೆಸರು ಹಿಡಿದು ಕರೆಯಲಾಗುವುದು. ಆದುದರಿಂದ ಉತ್ತಮ ಹೆಸರನ್ನೇ ಇಡಿರಿ.  (ಅಬೂದಾವೂದ್)
 • ಇಹ್ಸಾನ್ ಎಂದರೇನು?
  ismika28-07-2016
  ಪ್ರಶ್ನಾರ್ಥಿಯು ಕೇಳುತ್ತಾನೆ : "ಮಲ್ ಇಹ್ಸಾನ್?" (ಇಹ್ಸಾನ್ ಎಂದರೇನು?) ಪ್ರವಾದಿ ಮುಹಮ್ಮದ್ (ಸ) ಹೇಳಿದರು :
  "ಅನ್ ತ'ಅ್'ಬುದಲ್ಲಾಹ ಕ'ಅನ್ನಕ ತರಾಹು ಫ'ಇನ್ ಲಮ್ ತಕುನ್ ತರಾಹು ಫ'ಇನ್ನಹು ಯರಾಕ." (ನೀವು ಅಲ್ಲಾಹನನ್ನು ನೋಡುತ್ತಿದ್ದೀರೋ ಎಂಬಂತೆ ಆತನ ದಾಸ್ಯ-ಆರಾಧನೆ ಮಾಡುವುದು, ಏಕೆಂದರೆ ನೀವಾತನನ್ನು ನೋಡದಿದ್ದರೂ ಆತನು ನಿಮ್ಮನ್ನು ನೋಡುತ್ತಿದ್ದಾನೆ.)
  ಅದ್'ಕಾರೆ ಮಸ್ನೂನಃ
 • " ಅಲ್ಲಾಹುಮ್ಮ ಅಲ್ಹಿಮ್'ನೀ ರುಶ್ದೀ ವಕಿನೀ ಶರ್ರನಫ್ಸೀ.
  ismika28-07-2016
  ಪ್ರವಾದಿ ಮುಹಮ್ಮದ್ (ಸ)ರು ಹಸ್ಸೀನ್ ಬಿನ್ ಮುಂದಿರ್ ಖುಝಾಈ (ಅವರು ಆ ವೇಳೆ ಇಸ್ಲಾಮ್ ಸ್ವೀಕರಿಸಿರಿಲಿಲ್ಲ) ಯೊಡನೆ ಕೇಳಿದರು. "ನೀನು ಎಷ್ಟು ಆರಾಧ್ಯರುಗಳ ಬಳಿ ದಂಡ ಪ್ರಮಾಣವೆರಗುತ್ತೀಯಾ?" ಹಸ್ಸೀನ್ ಬಿನ್ ಮುಂದಿರ್ ಹೇಳಿದರು: "ಏಳು ದೇವರುಗಳೊಂದಿಗೆ ಬೇಡುತ್ತೇನೆ, ಅವುಗಳಲ್ಲಿ ಆರು ಭೂಮಿಯಲ್ಲಿವೆ ಮತ್ತು ಒಂದು ಆಕಾಶದಲ್ಲಿದೆ." ಪ್ರವಾದಿ(ಸ)ಕೇಳಿದರು, "ನಿಮಗೆ ಯಾವ ದೇವನೊಂದಿಗೆ ಭಯ ಮತ್ತು ನಿರೀಕ್ಷೆ ಇದೆ?" ಹಸ್ಸೀನ್ ಹೇಳಿದರು, "ಆಕಾಶದಲ್ಲಿರುವವನೊಂದಿಗೆ." ಪ್ರವಾದಿ(ಸ)ಹೇಳಿದರು, ನೀವು ಇಸ್ಲಾಮಿನ ಅನುಯಾಯಿಯಾದರೆ ನಾನು ನಿಮಗೆ ಎರಡು ಅತ್ಯಂತ ಪ್ರಯೋಜನಕಾರಿ ಮಾತುಗಳನ್ನು ಕಲಿಸುತ್ತಿದ್ದೆ." ಆ ಪ್ರಕಾರ ತರುವಾಯ ಹಸ್ಸೀನ್ ಬಿನ್ ಮುಂದಿರ್ ಇಸ್ಲಾಮ್ ಸ್ವೀಕರಿಸಿದ ವೇಳೆ ಪ್ರವಾದಿವಯ೯ರಲ್ಲಿ ಅರಿಕೆ ಮಾಡಿಕೊಂಡರು. ಪ್ರವಾದಿವಯ೯ರೇ! ನನಗೆ ಆ ಎರಡು ವಚನಗಳನ್ನೂ ಕಲಿಸಿಕೊಡಿರಿ. "ಪ್ರವಾದಿ(ಸ)ಈ ರೀತಿ ಪಠಿಸುವಂತೆ ಹೇಳಿದರು.
  " ಅಲ್ಲಾಹುಮ್ಮ ಅಲ್ಹಿಮ್'ನೀ ರುಶ್ದೀ ವಕಿನೀ ಶರ್ರನಫ್ಸೀ.
  " ಓ, ಅಲ್ಲಾಹ್ ನನ್ನ ಹೃದಯದೊಳಗೆ ಸನ್ಮಾಗ೯ವನ್ನು ಹಾಕು ಹಾಗೂ ನನ್ನ ಆತ್ಮದ ಕೇಡಿನಿಂದ ನನ್ನನ್ನು ರಕ್ಷಿಸು.  (ತಿಮಿ೯ದಿ)
 • ಆಣೆ‌
  ismika11-08-2016

  ಸಾಬಿತ್ ಬಿನ್ ದಹ್ಹಾಕ್(ರ) ಹೇಳುತ್ತಾರೆ: ಪ್ರವಾದಿ ಮುಹಮ್ಮದ್ (ಸ) ಹೇಳಿದರು; ಒಬ್ಬನು ಉದ್ದೇಶಪೂರ್ವಕವಾಗಿ ಇಸ್ಲಾಮಿನ ಹೊರತು ಇತರ ಧರ್ಮಗಳ ಆಣೆ‌ ಹಾಕಿದರೆ ಅವನು ಅದರಂತೆಯೇ ಆಗುವನು. (ಉದಾ: ನಾನು ಹೇಳಿದ್ದು ಸತ್ಯವಲ್ಲವೆಂದಾದರೆ ನಾನು ಯಹೂದಿ ಎಂದು ಹೇಳುವುದು) ಒಬ್ಬನು ತನ್ನನ್ನು ತಾನೇ ಲೋಹದ ತುಂಡಿನಿಂದ ವಧಿಸಿದರೆ ನರಕದ ಬೆಂಕಿಯಲ್ಲಿ ಅವನಿಗೆ ಅದೇ ಲೋಹದಿಂದ ಶಿಕ್ಷಿಸಲಾಗುವುದು.  (ಸಹೀಹುಲ್ ಬುಖಾರಿ)

 • 'ಬಿಸ್ಮಿಲ್ಲಾ' ಹೇಳಿರಿ
  ismika11-08-2016

  ಅಬುಲ್ ಮಲೀಹ್ ಹೇಳುತ್ತಾರೆ: ನನ್ನಲ್ಲಿ ಓರ್ವ ವ್ಯಕ್ತಿ ಬಂದು ಈ ರೀತಿ ವಿವರಿಸಿದರು: "ನಾನು ಪ್ರವಾದಿ ಮುಹಮ್ಮದ್ (ಸ) ರ ಹಿಂದುಗಡೆ ಸವಾರನಾಗಿದ್ದೆ. ಅಷ್ಟರಲ್ಲಿ ಜಾನುವಾರಿನ ಕಾಲು ಜಾರಿತು. ನಾನು 'ತ'ಇಸಶ್ಶೈತಾನು' (ಶೈತಾನ್ ಹಾಳಾಗಲಿ) ಎಂದೆ. ಪ್ರವಾದಿ(ಸ)ಹೇಳಿದರು : ಆ ರೀತಿ ಹೇಳಬೇಡ. ಏಕೆಂದರೆ ಹಾಗೆ ಹೇಳುವುದರಿಂದ ಶೈತಾನನು ಸಂತೋಷಾತಿರೇಕದಿಂದ ಉಬ್ಬಿ ಹೋಗುತ್ತಾನೆ. ಎಷ್ಟರವರೆಗೆಂದರೆ ಆತ ಉಪ್ಪರಿಗೆಯಂತಾಗುತ್ತಾನೆ. ಬದಲಾಗಿ 'ಬಿಸ್ಮಿಲ್ಲಾ' ಎಂದು ಹೇಳಿರಿ. ಇದರಿಂದ ಆತ ನಿಂದಿತನಾಗುತ್ತಾನೆ. ಕುಗ್ಗಿ ನೊಣದಂತೆ ಆಗಿ ಬಿಡುತ್ತಾನೆ. (ಅಲ್ ಫತ್ಹುರ್ರಬ್ಬಾನಿ)

 • ಆತ್ಮ ಹೊರಟು ಹೋದರೆ
  ismika11-08-2016

  ಮರಣಾಸನ್ನ ವ್ಯಕ್ತಿಯ ಆತ್ಮ ಹೊರಟು ಹೋದರೆ ಆತನ ಕಣ್ಣುಗಳನ್ನು ಅತ್ಯಂತ ನಾಜೂಕಿನಿಂದ ಮುಚ್ಚಬೇಕು ಹಾಗೂ ಈ ದು'ಆ ಪಠಿಸಬೇಕು: "ಅಲ್ಲಾಹುಮ್ಮಗ್'ಫಿರ್ ಲಹೂ ವರ್'ಫ'ಅ್ ದರಜತಹು ಫಿಲ್ ಮಹ್ದಿಯ್ಯೀನ ವಖ್'ಲುಫ್'ಹೂ ಫೀ ಅಕಿಬಿಹೀ ಫಿಲ್ ಗಾಬಿರೀನ ವಗ'ಫಿರ್ ಲನಾ ವಲಹು ಯಾ ರಬ್ಬಲ್ ಆಲಮೀನ್, ವಫ್ತಹ್ ಲಹು ಫೀ ಕಬ್'ರಿಹೀ ವ ನವ್ವಿರ್ ಲಹು ಫೀಹಿ." ಓ ಅಲ್ಲಾಹ್! ಇವನನ್ನು ಕ್ಷಮಿಸು, ಸನ್ಮಾಗ೯ಹೊಂದಿದವರಲ್ಲಿ ಈತನ ಸ್ಥಾನ ಮಾನವನ್ನು ಉನ್ನತ ಗೊಳಿಸು. ಸಂತ್ರಸ್ತರಲ್ಲಿ ಈತನ ಪ್ರತಿನಿಧಿಯಾಗು. ಸವ೯ಲೋಕಗಳ ಪ್ರಭುವೇ! ನಮ್ಮನ್ನೂ ಈತನನ್ನೂ ಕ್ಷಮಿಸು. ಈತನ ಗೋರಿಯನ್ನು ವಿಶಾಲ ಹಾಗೂ ಪ್ರಕಾಶಮಾನಗೊಳಿಸು.

 • ಮಲಗುವುದಕ್ಕಿಂತ ಮುಂಚೆ ದುಆ
  ismika11-08-2016

  ಪ್ರವಾದಿ ಮುಹಮ್ಮದ್ (ಸ) ಮಲಗುವುದಕ್ಕಿಂತ ಮುಂಚೆ ಈ ದುಆ ಪಠಿಸುತ್ತಿದ್ದರೆಂದು ಹಝ್ರತ್ ಹುದೈಫಾ(ರ) ಹೇಳುತ್ತಾರೆ: "ಬಿಸ್ಮಿಕಲ್ಲಾಹುಮ್ಮ ಅಮೂತು ವ ಅಹ್'ಯಾ." ಓ ಅಲ್ಲಾಹ್! ನಾನು ನಿನ್ನ ನಾಮದೊಂದಿಗೆ ಸಾಯುವೆನು ಮತ್ತು ನಿನ್ನ ನಾಮದೊಂದಿಗೆ ಜೀವಂತ ಎದ್ದೇಳುವೆನು.

 • ಹಾಸಿಗೆಗೆ ಹೋಗುವಾಗ
  ismika11-08-2016

  ಪ್ರವಾದಿ ಮುಹಮ್ಮದ್ (ಸ) ರ ಆಪ್ತ ಸೇವಕರಾದ ಅನಸ್(ರ) ಹೇಳುತ್ತಾರೆ, ಪ್ರವಾದಿ (ಸ) ಹಾಸಿಗೆಗೆ ಹೋಗುವಾಗ ಈ ರೀತಿ ಪ್ರಾರ್ಥಿಸುತ್ತಿದ್ದರು: " ಅಲ್'ಹಮ್ದುಲಿಲ್ಲಾಹಿಲ್ಲದೀ ಅತ್'ಅಮ್'ನಾ ವಸಕಾನಾ ವಕಫಾನಾ ವ ಆವಾನಾ, ಫಕಂಮಿಮ್ಮನ್ ಲಾ ಕಾಫಿಯ ಲಹೂ ವಲಾ ಮುಅ್'ವಿಯ." ನಮಗೆ ತಿನ್ನಿಸಿದ, ಕುಡಿಸಿದ, ನಮ್ಮ ಕೆಲಸಗಳಲ್ಲಿ ಪೂರ್ಣವಾಗಿ ಸಹಾಯ ಮಾಡಿದ ಮತ್ತು ನಮ್ಮ ವಾಸಕ್ಕೆ ಒಂದು ಸ್ಥಳ ನೀಡಿದ ಅಲ್ಲಾಹನಿಗೆ ಸರ್ವಸ್ತುತಿ ಸ್ತೋತ್ರ ಗಳು. ಅದೆಷ್ಟೋ ಜನರು ಸಹಾಯಕರಿಲ್ಲದೆ, ಆಶ್ರಯ ನೀಡುವವರಿಲ್ಲದೆ ಇದ್ದಾರೆ.
  (ಮುಸ್ಲಿಮ್, ಅಬೂದಾವೂದ್, ತಿರ್ಮಿದಿ, ನಸಾಈ, ಇಮಾಮ್ ಅಹ್ಮದ್)

   

 • ಮಲಗಲು ಸಿದ್ಧರಾದಾಗ
  ismika11-08-2016

  ಹಝ್ರತ್ ಹಫ್ಸಾ(ರ)ಹೇಳುತ್ತಾರೆ : ಪ್ರವಾದಿ ಮುಹಮ್ಮದ್ (ಸ) ಮಲಗಲು ಸಿದ್ಧರಾದಾಗ ತಮ್ಮ ಬಲಕೈಯನ್ನು ಬಲಕೆನ್ನೆಯ ಕೆಳಗಿಡುತ್ತಿದ್ದರು ಮತ್ತು ಮೂರು ಸಲ ಈ ರೀತಿ ಪಠಿಸುತ್ತಿದ್ದರು: ಅಲ್ಲಾಹುಮ್ಮಕಿನೀ ಅದಾಬಕ ಯೌಮ ತಬ್'ಅಸು ಇಬಾದಕ" ಓ ನನ್ನ ಪ್ರಭೂ! ನೀನು ನಿನ್ನ ದಾಸರನ್ನು ನಿನ್ನ ಸನ್ನಿಧಿಯಲ್ಲಿ ಸೇರಿಸುವ ದಿನ ನನ್ನನ್ನು ನಿನ್ನ ಶಿಕ್ಷೆಯಿಂದ ರಕ್ಷಿಸು. (ಅಬೂದಾವೂದ್)

 • ಶೌಚಾಲಯಕ್ಕೆ ಹೋಗುವಾಗ
  ismika11-08-2016

  ಹಝ್ರತ್ ಅಲೀ(ರ)ವರದಿ ಮಾಡುತ್ತಾರೆ; ಪ್ರವಾದಿ ಮುಹಮ್ಮದ್ (ಸ) ಹೇಳಿರುವರು: ಶೌಚಾಲಯಕ್ಕೆ ಹೋಗುವಾಗ ವ್ಯಕ್ತಿಯೋರ್ವ ಬಿಸ್ಮಿಲ್ಲಾ ಪಠಿಸಿದರೆ ಆತನ ನಗ್ನತೆ ಮತ್ತು ಜಿನ್ನ್'ಗಳ ಮಧ್ಯೆ ಒಂದು ಪರದೆ ಹಾಕಲಾಗುತ್ತದೆ. (ತಿರ್ಮಿದಿ)

 • ಮಯ್ಯತ್ ನಮಾಝ್ ಮತ್ತು ದಫನ
  ismika11-08-2016

  ಅಬೂಹುರೈರಾ(ರ)ವರದಿ ಮಾಡುತ್ತಾರೆ: ಪ್ರವಾದಿ ಮುಹಮ್ಮದ್ (ಸ) ಹೇಳಿದರು, "ಯಾರು ಈಮಾನಿನೊಂದಿಗೆ ಪುಣ್ಯಫಲಾಪೇಕ್ಷಿಸಿ ಓವ೯ ಮುಸ್ಲಿಮನ ಮಯ್ಯತ್ ಯಾತ್ರೆಯ ಜೊತೆ ಹೋಗಿ ನಮಾಝ್ ಮತ್ತು ದಫನ ಕಾಯ೯ ಮುಗಿಯುವ ವರೆಗೆ ನಿಲ್ಲುತ್ತಾನೋ ಅವನು ಎರಡು ಕೀರಾತ್ ಪುಣ್ಯಗಳೊಂದಿಗೆ ಮರಳುತ್ತಾನೆ. ಒಂದು ಕೀರಾತ್, ಉಹುದ್ ಬೆಟ್ಟಕ್ಕೆ ಸಮಾನವಾಗಿದೆ. ಇನ್ನು ಯಾರು ಜನಾಝ ನಮಾಝ್ ನಿವ೯ಹಿಸಿ ದಫನಕ್ಕಿಂತ ಮುಂಚೆ ಮರಳುತ್ತಾನೋ ಅವನು ಒಂದು ಕೀರಾತ್'ನೊಂದಿಗೆ ಮರಳುತ್ತಾನೆ.  (ಸಹೀಹುಲ್ ಬುಖಾರಿ)

 • ಮಲಗುವ ವೇಳೆ
  ismika11-08-2016

  ಹಝ್ರತ್ ಇಬ್ನ್ ಉಮರ್(ರ)ವ್ಯಕ್ತಿಯೊಬ್ಬರಿಗೆ ಮಲಗುವ ವೇಳೆ ಈ ದುಆ ಅವಶ್ಯಕವಾಗಿ ಪಠಿಸುವಂತೆ ತಾಕೀತು ಮಾಡಿದ್ದರು: ಓ ಅಲ್ಲಾಹ್! ನೀನೇ ನನಗೆ ಜೀವನವನ್ನು ಪ್ರಧಾನ ಮಾಡಿರುವಿ, ನೀನೇ ಅದನ್ನು ಎತ್ತಿಕೊಳ್ಳಲಿರುವೆ, ಅದರ ಜೀವನ-ಮರಣವೆಲ್ಲವೂ ನಿನ್ನ ಹಸ್ತಗಳಲ್ಲೇ ಇದೆ. ನೀನದನ್ನು ಜೀವಂತವಿರಿಸುವುದಾದರೆ ಅದರ ಸಂರಕ್ಷಣೆ ಮಾಡು ಅಥವಾ ಮರಣ ನೀಡಿದರೆ ಅದನ್ನು ಕ್ಷಮಿಸು. ಓ ಅಲ್ಲಾಹ್ ನಾನು ನಿನ್ನಿಂದ ಒಳಿತನ್ನು ಬಯಸುತ್ತೇನೆ.  (ಮುಸ್ಲಿಮ್)

 • ಗೋರಿ ಸಂದಶ೯ನದ ದುಆ
  ismika18-10-2016

  ಹಝ್ರತ್ ಬುರೈದಾ(ರ)ವರದಿ ಮಾಡುತ್ತಾರೆ; ಪ್ರವಾದಿ ಮುಹಮ್ಮದ್ (ಸ) ತಮ್ಮ ಸಂಗಾತಿಗಳಿಗೆ ಗೋರಿ ಸಂದಶ೯ನದ ವೇಳೆ ಈ ದುಆ ಪಠಿಸಲು ಬೋಧಿಸುತ್ತಿದ್ದರು: ಅಸ್ಸಲಾಮು ಅಲೈಕುಮ್ ಅಹ್ಲದ್ದಿಯಾರಿ ಮಿನಲ್ ಮುಅ್'ಮಿನೀನ ವಲ್ ಮುಸ್ಲಿಮೀನ ವ ಇನ್ನಾ ಇನ್'ಶಾ ಅಲ್ಲಾಹು ಬಿಕುಮ್ ಲಾಹಿಕೂನ್, ನಸ್'ಅಲುಲ್ಲಾಹು ಲನಾ ವಲಕುಮುಲ್ ಆಫಿಯಃ." ಈ ಪ್ರದೇಶದ ವಾಸಿಗಳಾದ ಅನುಸರಣಶೀಲ ಸತ್ಯವಿಶ್ವಾಸಿಗಳೇ! ನಿಮ್ಮ ಮೇಲೆ ಶಾಂತಿಯಿರಲಿ. ನಾವೂ ಶೀಘ್ರವೇ ಬಂದು ನಿಮ್ಮನ್ನು ಸೇರಲಿದ್ದೇವೆ. ನಾವು ನಮಗಾಗಿ ಮತ್ತು ನಿಮಗಾಗಿ ಅಲ್ಲಾಹನಲ್ಲಿ ಪ್ರಾಥಿ೯ಸುತ್ತೇವೆ. ಅವನು ತನ್ನ ಕೋಪ ಶಾಪಗಳಿಂದ ನಮ್ಮನ್ನು ರಕ್ಷಿಸಲಿ. (ಇಬ್ನುಮಾಜಃ)

 • ಸತ್ಯವಿಶ್ವಾಸಿಯ ಸ್ಥಿತಿ
  ismika18-10-2016

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್(ಸ)ಹೇಳಿದರು - ಒಬ್ಬ ವ್ಯಭಿಚಾರಿ ಸತ್ಯವಿಶ್ವಾಸಿಯಾಗಿರುವ ಸ್ಥಿತಿ ಯಲ್ಲಿ ವ್ಯಭಿಚಾರವೆಸಗಲಾರ. ಒಬ್ಬ ಮದ್ಯಪಾನಿ ವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಮದ್ಯಪಾನ ಮಾಡಲಾರ. ಒಬ್ಬ ಕಳ್ಳನು ವಿಶ್ವಾಸಿಯಾಗಿರುವ ಸ್ಥಿತಿಯಲ್ಲಿ ಕಳ್ಳತನ ಮಾಡಲಾರ.

 • ಅಂದಿನ ದರದಲ್ಲಿ ಮಾರಾಟ
  ismika27-07-2017

  ಅಬ್ದುಲ್ಲಾ ಬಿನ್ ಮಸ್'ವೂದ್ (ರ) ವರದಿಯ ಪ್ರಕಾರ, ಪ್ರವಾದಿ ಮುಹಮ್ಮದ್ (ಸ) ಹೇಳಿದರು - ' ಓರ್ವನು ಮುಸ್ಲಿಮರ ಯಾವುದಾದರೂ ನಗರಕ್ಕೆ ಆಹಾರ ಪದಾರ್ಥಗಳನ್ನು ಅಂದಿನ ದರದಲ್ಲಿ ಮಾರಾಟ ಮಾಡಿದರೆ ಅವನಿಗೆ ಅಲ್ಲಾಹನ ಸಾಮೀಪ್ಯ ದೊರೆಯುವುದು. '

 • ಪ್ರವಾದಿ ಮುಹಮ್ಮದ್ (ಸ) ರ ಪಾವನ ಮುಖ
  ismika27-07-2017

  ಅಬ್ದುಲ್ಲಾ ಇಬ್ನ್ ಉಮರ್(ರ)ಹೇಳುತ್ತಾರೆ - ನಾನು ಪ್ರವಾದಿ ಮುಹಮ್ಮದ್ (ಸ) ರ ಪಾವನ ಮುಖ ನೋಡಿದೆ. ಅವರು ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಆಗ ಮಳೆ ಇರಲಿಲ್ಲ. (ಅವರ ಪ್ರಾರ್ಥನೆಯಿಂದ) ಸಕಲ ನದಿ ನಾಲೆಗಳು ತುಂಬಿ ಹರಿಯುವಷ್ಟು ಮಳೆಯಾಯಿತು. ಆಗ ನನಗೆ ಅಬೂತಾಲಿಬರ ಕವನ ನೆನಪಾಯಿತು.
  ನಿಮ್ಮ ಬಿಳಿ ಮುಖದಿಂದಾಗಿ
  ಮೋಡದಿಂದ ಸುರಿಯಬಹುದು ಮಳೆ
  ನೀವಾಗಿದ್ದೀರಿ ಅನಾಥರ ಮೇಲ್ವಿಚಾರಕರು
  ಮತ್ತು ವಿಧವೆಯರ ಸಂರಕ್ಷಕರು. (ಸಹೀಹುಲ್ ಬುಖಾರಿ)

 • ಆಕ್ಷೇಪಿಸುತ್ತಿರಲಿಲ್ಲ
  ismika27-07-2017

  ಅನಸ್ ಬಿನ್ ಮಾಲಿಕ್(ರ)ಹೇಳುತ್ತಾರೆ - ನಾವು ಪ್ರವಾದಿ ಮುಹಮ್ಮದ್ (ಸ)ರೊಂದಿಗೆ ಪ್ರಯಾಣ ಕೈಗೊಳ್ಳುತ್ತಿದ್ದೆವು. ಆದರೆ ಉಪವಾಸಿಗನು ಉಪವಾಸ ಆಚರಿಸದವನನ್ನಾಗಲಿ, ಉಪವಾಸ ಆಚರಿಸದವನು ಉಪವಾಸಿಗನನ್ನಾಗಲಿ ಆಕ್ಷೇಪಿಸುತ್ತಿರಲಿಲ್ಲ. (ಸಹೀಹುಲ್ ಬುಖಾರಿ)

 • ಹಿಜ್ರತ್, ಜಿಹಾದ್
  ismika27-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಮಕ್ಕಾ ವಿಜಯದ ದಿವಸ ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಇನ್ನು ಹಿಜ್ರತ್ ಇಲ್ಲ. ಆದರೆ ಜಿಹಾದ್ ಬಾಕಿ ಇದೆ. ಆದ್ದರಿಂದ ಜಿಹಾದ್'ಗಾಗಿ ನಿಮ್ಮನ್ನು ಕರೆಯಲಾದಾಗ ಹೊರಟು ನಿಲ್ಲಿ. (ಸಹೀಹುಲ್ ಬುಖಾರಿ)

 • ಜಮಾಅತ್(ಸಾಮೂಹಿಕ) ನಮಾಝ್
  ismika27-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಜಮಾಅತ್(ಸಾಮೂಹಿಕ) ನಮಾಝ್ ಮನೆಯಲ್ಲಿ ಅಥವಾ ಪೇಟೆಯಲ್ಲಿ ಮಾಡುವ ನಮಾಝ್ ಗಿಂತ 25 ಪಟ್ಟು ಪುಣ್ಯದಾಯಕವಾಗಿದೆ. ನಿಮ್ಮಲ್ಲೊಬ್ಬನು ಸರಿಯಾಗಿ ವುಝೂ ಮಾಡಿ ಕೇವಲ ನಮಾಝ್ ಗಾಗಿ ಮಸೀದಿಗೆ ಬಂದರೆ ಅವನ ಒಂದೊಂದು ಹೆಜ್ಜೆಗೂ ಅಲ್ಲಾಹನು ಅವನ ಒಂದು ಪದವಿಯನ್ನು ಹೆಚ್ಚಿಸುತ್ತಾನೆ ಮತ್ತು ಒಂದು ಪಾಪ ಕಡಿತಗೊಳಿಸುತ್ತಾನೆ. ಇನ್ನು ಮಸೀದಿಗೆ ಪ್ರವೇಶಿಸಿ ನಮಾಝ್ ನ ನಿರೀಕ್ಷೆಯಿಂದ ಅಲ್ಲಿ ಉಳಿದರೆ ಅವನು ನಮಾಝ್ ನಲ್ಲೇ ಇರುತ್ತಾನೆ. ನಮಾಝ್ ನ ಸ್ಥಳದಲ್ಲಿ ಕುಳಿತಿರುವಷ್ಟು ಸಮಯ ದೇವಚರರು ಅವನಿಗಾಗಿ ಹೀಗೆ ಪ್ರಾರ್ಥಿಸುತ್ತಾರೆ - ' ದೇವಾ! ಇವನನ್ನು ಕ್ಷಮಿಸು. ದೇವಾ! ಇವನ ಮೇಲೆ ಕರುಣೆ ತೋರು.' ಅವನ ವುಝೂ ಭಂಗವಾಗುವವರೆಗೂ ಈ ಸ್ಥಿತಿ ಇರುವುದು. (ಸಹೀಹುಲ್ ಬುಖಾರಿ)

 • ಅಡವಿಡಲಾದ ಪ್ರಾಣಿ
  ismika27-07-2017

  ಅಬೂಹುರೈರಾ(ರ)ಹೇಳುತ್ತಾರೆ - ಅಡವಿಡಲಾದ ಪ್ರಾಣಿಯ ಖರ್ಚಿನ ಬದಲಿಗೆ ಅದರ ಮೇಲೆ ಸವಾರಿ ಮಾಡುವುದು ಧರ್ಮ ಸಮ್ಮತವಾಗಿದೆ. ಹಾಲು ಕೊಡುವ ಜಾನುವಾರಿನ ಖರ್ಚಿನ ಬದಲಿಗೆ ಅದರ ಹಾಲು ಕರೆದು ಪಡೆಯುವುದು ಧರ್ಮ ಸಮ್ಮತವಾಗಿದೆ. ಜಾನುವಾರುಗಳ ಖರ್ಚಿನ ಹೊಣೆ ಸವಾರಿ ಮಾಡುವವನ ಮತ್ತು ಹಾಲು ಕರೆಯುವವನ ಮೇಲಿದೆ. (ಸಹೀಹ್ ಬುಖಾರಿ)

 • 'ಮುಅದ್ದಿನ್(ಅದಾನ್ ಕೊಡುವವ)
  ismika27-07-2017

  ಅಬೂ ಸ'ಈದ್ ಖುದ್ರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ. 'ಮುಅದ್ದಿನ್(ಅದಾನ್ ಕೊಡುವವ)ನ ಸ್ವರವನ್ನು ಯಾವುದೇ ಜಿನ್ನ್, ಮಾನವ ಹಾಗೂ ಇನ್ನಾವುದೇ ವಸ್ತು ಕೇಳಿಸಿಕೊಂಡರೆ ನಿರ್ಣಾಯಕ ದಿನದಂದು ಅವರೆಲ್ಲರೂ ಸಾಕ್ಷಿಗಳಾಗುವರು.'
  (ಸಹೀಹ್ ಬುಖಾರಿ)

 • ಕೈಯನ್ನು ತಡೆಯದಿರು
  ismika27-07-2017

  ಅಸ್ಮಾ ಬಿಂತಿ ಅಬೂಬಕರ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ನನ್ನಲ್ಲಿ (ದಾನ ಧರ್ಮದಿಂದ) ಕೈಯನ್ನು ತಡೆಯದಿರು. ನಿನಗೆ ನೀಡುವುದರಿಂದಲೂ ತಡೆಯಲಾಗುವುದು ಎಂದು ಹೇಳಿದರು. ಇನ್ನೊಂದು ವರದಿಯಲ್ಲಿ ಎಣಿಸಿ ಕೊಡದಿರು. ಅಲ್ಲಾಹನೂ ನಿಮ್ಮೊಂದಿಗೆ ಹಾಗೆಯೇ ವರ್ತಿಸುವನು ಎಂದಿದೆ. ಮತ್ತೊಂದು ವರದಿ ಪ್ರಕಾರ, ಹಣವನ್ನು ಕೂಡಿಡದಿರು. ಅನ್ಯಥಾ ಅಲ್ಲಾಹನು ನಿನ್ನಿಂದ ತಡೆದಿರಿಸುವನು. ನಿನ್ನಿಂದ ಸಾಧ್ಯವಿರುವಷ್ಟು ಖರ್ಚು ಮಾಡು. (ಸಹೀಹ್ ಬುಖಾರಿ)

 • ಕಸ್ತೂರಿಯಂತಹ ಸುವಾಸನೆ
  ismika27-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ನನ್ನ ಪ್ರಾಣ ಯಾರ ಕೈಯಲ್ಲಿ ಇದೆಯೋ ಆತನಾಣೆ. ಯಾರು ಅವನ ಮಾರ್ಗದಲ್ಲಿ ಘಾಸಿಗೊಂಡವನೆಂದು ಅಲ್ಲಾಹನು ಚೆನ್ನಾಗಿ ಬಲ್ಲ. ಅಂತ್ಯ ದಿನದಂದು ಅವನು ಎದ್ದು ಬರುವಾಗ ಅವನ ಗಾಯದಿಂದಾಗಿ ರಕ್ತ ಒಸರುವುದು. ಅದರ ಬಣ್ಣ ಕೆಂಪಾಗಿರುವುದು. ಅದರಿಂದ ಕಸ್ತೂರಿಯಂತಹ ಸುವಾಸನೆ ಹರಡುವುದು. (ಸಹೀಹ್ ಬುಖಾರಿ)

 • ಅಂತ್ಯ ದಿನ ಸಂಭವಿಸದು
  ismika27-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಸಣ್ಣ ಕಣ್ಣುಗಳಿರುವ ಕೆಂಪು ಮುಖವಿರುವ, ಚಪ್ಪಟೆ ಮೂಗಿರುವ, ಗುರಾಣಿಗಳಂತೆ ಕಾಣುವ ಮುಖವಿರುವ ತುರ್ಕರೊಂದಿಗೆ ನಿಮ್ಮ ಯುದ್ಧ ನಡೆಯುವ ವರೆಗೆ ಅಂತ್ಯ ದಿನ ಸಂಭವಿಸಲಾರದು. ರೋಮಗಳುಲ್ಲ ಚರ್ಮದ ಪಾದರಕ್ಷೆ ಧರಿಸಿದವರೊಂದಿಗೆ ಯುದ್ಧ ಮಾಡದೆ ಅಂತ್ಯ ದಿನ ಸಂಭವಿಸದು. (ಸಹೀಹ್ ಬುಖಾರಿ)

 • ಲೈಲತುಲ್ ಕದ್ರ್
  ismika27-07-2017

  ಇಬ್ನು ಉಮರ್(ರ)ಹೇಳುತ್ತಾರೆ - ಕೆಲವು ಸಹಾಬಿಗಳಿಗೆ (ತಿಂಗಳ)ಕೊನೆಯ ವಾರದಲ್ಲಿ ಕನಸಿನಲ್ಲಿ ಲೈಲತುಲ್ ಕದ್ರ್ ಕಂಡಿತು. ಪ್ರವಾದಿ ಮುಹಮ್ಮದ್ (ಸ) ಹೇಳಿದರು - ನಿಮಗೆಲ್ಲರಿಗೂ ಕೊನೆಯ ವಾರದಲ್ಲೇ ಕಂಡಿದೆ. ಆದ್ದರಿಂದ ಲೈಲತುಲ್ ಕದ್ರನ್ನು ಹುಡುಕುವವರು ಕೊನೆಯ ವಾರದಲ್ಲೇ ಹುಡುಕಲಿ.
  (ಸಹೀಹ್ ಬುಖಾರಿ)

 • ಸಮಯ ನೋಡಿ ಉಪದೇಶ
  ismika27-07-2017

  ಇಬ್ನು ಮಸ್'ಊದ್(ರ)ಹೇಳುತ್ತಾರೆ: ಪ್ರವಾದಿ ಮುಹಮ್ಮದ್ (ಸ) ನಮಗೆ ಸೂಕ್ತ ಸಮಯ ನೋಡಿ ಉಪದೇಶ ನೀಡುತ್ತಿದ್ದರು. ಏಕೆಂದರೆ ಅವರು ನಮ್ಮನ್ನು ನೀರಸಗೊಳಿಸಲು ಇಷ್ಟಪಡುತ್ತಿರಲಿಲ್ಲ. (ಸಹೀಹುಲ್ ಬುಖಾರಿ)

 • ಐದು ರಕ'ಅತ್ ನಮಾಝ್'
  ismika27-07-2017

  ಅಬ್ದುಲ್ಲಾ ಬಿನ್ ಮಸ್'ಊದ್(ರ)ಹೇಳುತ್ತಾರೆ - ಒಮ್ಮೆ ಪ್ರವಾದಿಯವರು(ಸ) ಝುಹರ್'ನಲ್ಲಿ ಐದು ರಕ'ಅತ್ ನಿರ್ವಹಿಸಿದರು. ನಮಾಝ್'ನಲ್ಲಿ ಹೆಚ್ಚಳವಾಯಿತೇ ಎಂದು ಕೇಳಲಾದಾಗ, ಅದೇಕೆ ಎಂದು ವಿಚಾರಿಸಿದರು. ತಾವು ಐದು ರಕ'ಅತ್ ನಿರ್ವಹಿಸಿದಿರಲ್ಲ ಎಂದು ಹೇಳಿದಾಗ, ಪ್ರವಾದಿಯವರು(ಸ) ಸಲಾಮ್ ನಂತರ ಎರಡು ಸುಜೂದ್'ಗಳನ್ನು ಮಾಡಿದರು. (ಸಹೀಹುಲ್ ಬುಖಾರಿ)

 • ರುಕೂಅ್ ಮತ್ತು ಸುಜೂದ್
  ismika27-07-2017

  ಆಯಿಶಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ರುಕೂಅ್ ಮತ್ತು ಸುಜೂದ್'ಗಳಲ್ಲಿ ' ಸುಬ್ಹಾನಕಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ ಅಲ್ಲಾಹುಮ್ಮಗ್ ಫಿರ್'ಲೀ ' ಎಂದು ಹೇಳುತ್ತಿದ್ದರು. ಆಯಿಶಾ(ರ)ರ ಇನ್ನೊಂದು ವರದಿಯಲ್ಲಿ ಪ್ರವಾದಿವರ್ಯ(ಸ)ರು "ಕುರ್'ಆನಿನ ಅಪ್ಪಣೆಯಂತೆ ಹಾಗೆ ಹೇಳುತ್ತಿದ್ದರು" ಎಂದು ಬಂದಿದೆ. (ಸಹೀಹುಲ್ ಬುಖಾರಿ)

 • ನೆಟ್ಟವನ ಪಾಲಿಗೆ ಸದಕಾ
  ismika27-07-2017

  ಅನಸ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಒಬ್ಬ ಮುಸ್ಲಿಮನು ಮರ ನೆಟ್ಟಿದ್ದು ಅಥವಾ ಹೊಲದಲ್ಲಿ ಬೀಜ ಹಾಕಿದ್ದು ಅದರಿಂದ ಪಶುಪಕ್ಷಿಗಳು ಅಥವಾ ಮನುಷ್ಯರು ಏನಾದರೂ ತಿಂದರೆ ಅದು ಈ ನೆಟ್ಟವನ ಪಾಲಿಗೆ ಸದಕಾ(ದಾನ ಧರ್ಮ) ಆಗಿರುವುದು. (ಸಹೀಹುಲ್ ಬುಖಾರಿ)

 • ಅಲ್ಲಾಹನನ್ನು ಮೀರಿಸುವ ಯಾರೂ ಇಲ್ಲ
  ismika27-07-2017

  ಅಬೂ ಮೂಸಾ ಅಶ್'ಅರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಅತಿಯಾದ ಕೋಪ ಬರಿಸುವ ಮಾತು ಮತ್ತು ಬೈಗುಳಗಳನ್ನು ಕೇಳಿ ಸಹಿಸುವುದರಲ್ಲಿ ಅಲ್ಲಾಹನನ್ನು ಮೀರಿಸುವ ಯಾರೂ ಇಲ್ಲ. ಕೆಲವರು ಅವನಿಗೆ ಸಂತಾನವಿದೆಯೆಂದು ಹೇಳುತ್ತಾರೆ. ಆದರೂ ಅವನು ಅವರನ್ನು ರಕ್ಷಿಸುತ್ತಾನೆ. ಅವರಿಗೆ ಆಹಾರ ನೀಡುತ್ತಾನೆ. (ಸಹೀಹುಲ್ ಬುಖಾರಿ)

 • ಮಲಗುವ ವೇಳೆ ಅಲ್ ಬಕರಃ
  ismika27-07-2017

  ಪ್ರವಾದಿ ಮುಹಮ್ಮದ್ (ಸ) ಹೇಳಿರುವುದಾಗಿ ಅಬೂ ಮಸ್'ಊದ್ ಅನ್ಸಾರಿ ಹೇಳುತ್ತಾರೆ: "ಯಾರು ಮಲಗುವ ವೇಳೆ ಅಲ್ ಬಕರಃ ಅಧ್ಯಾಯದ ಕೊನೆಯ ಎರಡು ಸೂಕ್ತಗಳನ್ನು ಪಠಿಸುತ್ತಾರೋ ಅವು ಎಲ್ಲ ಅರ್ಥದಲ್ಲೂ ಆತನಿಗೆ ಸಾಕೆನಿಸುವುದು." (ಬುಖಾರಿ,ಮುಸ್ಲಿಮ್)

 • ಹಾಸಿಗೆ ಗೆ ಹೋದಾಗ
  ismika27-07-2017

  ಬರಾಅ್ ಬಿನ್ ಆಝಿಬ್(ರ) ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹಾಸಿಗೆ ಗೆ ಹೋದಾಗ ಬಲಭಾಗಕ್ಕೆ ತಿರುಗಿ ಮಲಗುತ್ತಿದ್ದರು - ತರುವಾಯ ಹೀಗೆ ಪ್ರಾರ್ಥಿಸುತ್ತಿದ್ದರು: ಅಲ್ಲಾಹನೇ! ನನ್ನ ಪ್ರಾಣವನ್ನು ನಾನು ನಿನಗೆ ಸಮರ್ಪಿಸಿದ್ದೇನೆ. ನನ್ನ ಮುಖವನ್ನು ನಿನ್ನೆಡೆಗೆ ತಿರುಗಿಸಿದ್ದೇನೆ. ನನ್ನ ವಿಷಯಗಳನ್ನೆಲ್ಲ ನಿನಗೆ ವಹಿಸಿದ್ದೇನೆ. ನಾನು ನಿನ್ನ ಪ್ರತಿಫಲವನ್ನು ಬಯಸಿ ಮತ್ತು ನಿನ್ನ ಶಿಕ್ಷೆಯನ್ನು ಭಯಪಟ್ಟು ನಿನಗೆ ಶರಣಾಗಿದ್ದೇನೆ. ನಿನ್ನನ್ನು ಬಿಟ್ಟರೆ ನನಗೆ ಯಾವುದೇ ಆಶ್ರಯ ತಾಣವಿಲ್ಲ. ಅಭಯ ಸ್ಥಾನವಿಲ್ಲ. ನೀನು ಅವತೀರ್ಣಗೊಳಿಸಿದ ಗ್ರಂಥ ಮತ್ತು ನೀನು ಕಳಿಸಿದ ಪ್ರವಾದಿಯ ಮೇಲೆ ನಾನು ವಿಶ್ವಾಸವಿರಿಸಿದ್ದೇನೆ. (ಸಹೀಹುಲ್ ಬುಖಾರಿ)

 • ಸ್ವರ್ಗವಾಸಿಗಳೇ!
  ismika27-07-2017

  ಅಬೂ ಸ'ಈದ್ ಖುದ್ರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಅಲ್ಲಾಹನು ಸ್ವರ್ಗವಾಸಿಗಳ ಕುರಿತು, ಸ್ವರ್ಗವಾಸಿಗಳೇ! ಎಂದು ಕರೆಯುವನು. ಆಗ ಅವರು, ನಾವಿದೋ ಹಾಜರಿದ್ದೇವೆ ಎಂದು ಹೇಳುವರು. ಅಲ್ಲಾಹನು ಅವರೊಡನೆ ಕೇಳುವನು - ನಿಮಗೆ ತೃಪ್ತಿಯಾಯಿತೇ? ಆಗ ಅವರು ಹೇಳುವರು - ಸೃಷ್ಟಿಗಳಲ್ಲಿ ಯಾರಿಗೂ ನೀಡದ್ದನ್ನು ನೀನು ನಮಗೆ ನೀಡಿರುವಾಗ ನಾವು ತೃಪ್ತರಾಗದೇ ಇರುವುದಾದರೂ ಹೇಗೆ? ಅಲ್ಲಾಹನು ಹೇಳುವನು - ನಾನು ನಿಮಗೆ ಅದಕ್ಕಿಂತಲೂ ಉತ್ತಮವಾದುದನ್ನು ನೀಡುವೆನು. ಅವರು ಕೇಳುವರು - ಇದಕ್ಕಿಂತ ಉತ್ತಮವಾದುದು ಏನಿದೆ? ಆಗ ಅವನು ಹೇಳುವನು - ನನ್ನ ಸಂಪ್ರೀತಿಯನ್ನು ನಿಮ್ಮ ಮೇಲೆ ಸುರಿಯುವೆನು. ಇನ್ನೆಂದೂ ನಾನು ನಿಮ್ಮೊಂದಿಗೆ ಕೋಪಗೊಳ್ಳಲಾರೆ. (ಸಹೀಹುಲ್ ಬುಖಾರಿ)

 • ಪ್ರಶಂಸೆ ಯಲ್ಲಿ ಉತ್ಪ್ರೇಕ್ಷೆ
  ismika27-07-2017

  ಉಮರ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಕ್ರೈಸ್ತ ರು ಈಸಾರನ್ನು ಗೌರವಿಸುವುದರಲ್ಲಿ ಉತ್ಪ್ರೇಕ್ಷೆ ಮಾಡಿದಂತೆ ನೀವು ನನ್ನ ಪ್ರಶಂಸೆ ಯಲ್ಲಿ ಉತ್ಪ್ರೇಕ್ಷೆ ಮಾಡಬಾರದು. ಏಕೆಂದರೆ ನಾನು ಅಲ್ಲಾಹನ ದಾಸನಾಗಿದ್ದೇನೆ. ಆದ್ದರಿಂದ ಅಲ್ಲಾಹನ ದಾಸ ಮತ್ತು ಸಂದೇಶವಾಹಕ ಎಂದು ಮಾತ್ರ ಹೇಳಿರಿ. (ಸಹೀಹುಲ್ ಬುಖಾರಿ)

 • ಮೂರು ವರ್ಗದ ಜನರು
  ismika27-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಮೂರು ವರ್ಗದ ಜನರೊಡನೆ ಅಲ್ಲಾಹನು ಅತಿ ಹೆಚ್ಚು ಕೋಪಗಳ್ಳುತ್ತಾನೆ. ಹರಮಿನಲ್ಲಿ(ಕ'ಅಬಾದ ಪರಿಸರ) ಅತಿಕ್ರಮವೆಸಗುವವನು.
  ಅಜ್ಞಾನ ಕಾಲದ ಸಂಪ್ರದಾಯಗಳನ್ನು ಅನುಸರಿಸಬಯಸುವವನು.
  ಅನ್ಯಾಯವಾಗಿ ಒಬ್ಬನ ರಕ್ತಹರಿಸಲು ನೆಪ ಹುಡುಕುವವನು. (ಸಹೀಹುಲ್ ಬುಖಾರಿ)

 • ಪ್ರಯಾಣದಲ್ಲಿ ಉಪವಾಸ
  ismika27-07-2017

  ಜಾಬಿರ್ ಬಿನ್ ಅಬ್ದುಲ್ಲಾ (ರ) ಹೇಳುತ್ತಾರೆ - ನಾವು ಪ್ರವಾದಿಯವರ(ಸ) ಜೊತೆಯಲ್ಲಿ ಒಂದು ಪ್ರಯಾಣದಲ್ಲಿದ್ದೆವು. ಜನಸಂದಣಿಯ ಮಧ್ಯೆ ಒಬ್ಬ ವ್ಯಕ್ತಿಗೆ ನೆರಳು ಮಾಡುವುದನ್ನು ಕಂಡಾಗ, ಪ್ರವಾದಿ ಮುಹಮ್ಮದ್ (ಸ) ಏನು ವಿಷಯ ಎಂದು ಕೇಳಿದರು. ಜನರು ಆತ ಉಪವಾಸದಿಂದಿದ್ದಾರೆ ಎಂದು ಹೇಳಿದಾಗ ಪ್ರವಾದಿ(ಸ) ಹೇಳಿದರು - ಪ್ರಯಾಣದಲ್ಲಿ ಉಪವಾಸ ಮಾಡುವುದು ಒಳ್ಳೆಯದಲ್ಲ. (ಸಹೀಹುಲ್ ಬುಖಾರಿ)

 • ಬಾಕಿ ಕಡ್ಡಾಯ ಉಪವಾಸ
  ismika27-07-2017

  ಆಯಿಶಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಒಬ್ಬನು ಮರಣ ಹೊಂದಿದ್ದು ಆತನ ಮೇಲೆ ಕಡ್ಡಾಯ ಉಪವಾಸ ಬಾಕಿ ಇದ್ದಿದ್ದರೆ ಅವನ ಉತ್ತರಾಧಿಕಾರಿಯು ಅವನ ಪರವಾಗಿ ಉಪವಾಸ ಆಚರಿಸಲಿ. (ಸಹೀಹುಲ್ ಬುಖಾರಿ)

 • ಜನಾಝಾ ಜನರು ಹೆಗಲಲ್ಲಿಟ್ಟಾಗ
  ismika27-07-2017

  ಅಬೂ ಸ'ಈದ್ ಖುದ್ರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಜನಾಝಾ ಸಿದ್ದಗೊಳಿಸಿ ಜನರು ಹೆಗಲಲ್ಲಿಟ್ಟಾಗ, ಮೃತನು ಸಜ್ಜನನಾಗಿದ್ದರೆ, ಬೇಗ ಬೇಗ ನಡೆಯಿರಿ ಎಂದು ಹೇಳುತ್ತಾರೆ. ಇನ್ನು ಆತ ದುರ್ಜನನಾಗಿದ್ದರೆ, ಅಕಟಾ! ನನ್ನನ್ನು ಎಲ್ಲಿಗೆ ಹೊತ್ತೊಯ್ಯುತ್ತೀರಿ. ಅದರ ಧ್ವನಿಯನ್ನು ಮಾನವರ ಹೊರತು ಬೇರೆಲ್ಲ ವಸ್ತುಗಳೂ ಕೇಳಿಸಿಕೊಳ್ಳುವುದು. ಮಾನವನು ಒಂದು ವೇಳೆ ಕೇಳಿದರೆ ಆತ ಮೂರ್ಛೆ ಹೋಗುವನು. (ಸಹೀಹುಲ್ ಬುಖಾರಿ)

 • ವಿವಾಹ ಮಾಡಿಕೊಡಬಾರದು
  ismika27-07-2017

  ಅಬೂಹುರೈರಾ(ರ)ಹೇಳುತ್ತಾರೆ. ಪ್ರವಾದಿ ಮುಹಮ್ಮದ್ (ಸ) ಹೇಳಿದರು - ವಿಧವೆಯನ್ನು ಆಕೆಯೊಂದಿಗೆ ಸಮಾಲೋಚಿಸದೆ ವಿವಾಹ ಮಾಡಿಕೊಡಬಾರದು. ಕನ್ಯೆಯನ್ನು ಅವಳ ಸಮ್ಮತಿ ಪಡೆಯದೆ ವಿವಾಹ ಮಾಡಿಕೊಡಬಾರದು. ಸಹಾಬಿಗಳು ಕೇಳಿದರು - ಅಲ್ಲಾಹನ ಸಂದೇಶವಾಹಕರೇ! ಕನ್ಯೆಯ ಸಮ್ಮತಿಯನ್ನು ಗ್ರಹಿಸುವುದು ಹೇಗೆ? ಪ್ರವಾದಿ(ಸ)ಹೇಳಿದರು - ಮೌನವೇ ಅವಳ ಸಮ್ಮತಿಯಾಗಿದೆ. (ಸಹೀಹುಲ್ ಬುಖಾರಿ)

 • ಒಳಿತಿನ ಕಾರ್ಯಗಳಲ್ಲಿ ಬಿರುಗಾಳಿಗಿಂತಲೂ ಉದಾರಿ
  ismika27-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಜನರ ಪೈಕಿ ಎಲ್ಲರಿಗಿಂತಲೂ ದೊಡ್ಡ ಉದಾರಿಯಾಗಿದ್ದರು. ಅವರ ದಾನಶೂರತೆಯು ರಮಝಾನ್'ನಲ್ಲಿ ಜಿಬ್ರೀಲ್'ರನ್ನು ಭೇಟಿಯಾಗುವಾಗ ಅತೀ ಹೆಚ್ಚಾಗಿರುತ್ತಿತ್ತು. ರಮಝಾನ್'ನ ಎಲ್ಲಾ ರಾತ್ರಿಗಳಲ್ಲೂ ಜಿಬ್ರೀಲ್(ಅ)ಪ್ರವಾದಿಯವರನ್ನು(ಸ) ಭೇಟಿಯಾಗಿ ಅವರು ಜತೆಗೂಡಿ ಕುರ್'ಆನ್ ಪಾರಾಯಣಗೈಯ್ಯುತ್ತಿದ್ದರು. ಒಳಿತಿನ ಕಾರ್ಯಗಳಲ್ಲಿ ಪ್ರವಾದಿ(ಸ)ಬಿರುಗಾಳಿಗಿಂತಲೂ ಹೆಚ್ಚು ಉದಾರಿಯಾಗಿದ್ದರು. (ಸಹೀಹುಲ್ ಬುಖಾರಿ)

 • ವಿಶ್ವಾಸಿಯು ವಿಶ್ವಾಸಿಯ ಸಹೋದರನಾಗಿದ್ದಾನೆ
  ismika29-07-2017

  ಇಬ್ನು ಉಮರ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ವಿಶ್ವಾಸಿಯು ವಿಶ್ವಾಸಿಯ ಸಹೋದರನಾಗಿದ್ದಾನೆ. ಆದ್ದರಿಂದ ಯಾರೂ ಯಾರ ಮೇಲೂ ಅಕ್ರಮವೆಸಗಬಾರದು. ಅವನನ್ನು ವಿನಾಶಕ್ಕೊಳಪಡಿಸಬಾರದು. ಯಾರು ತನ್ನ ಸಹೋದರನ ಅಪೇಕ್ಷೆಯನ್ನು ಪೂರೈಸುತ್ತಾನೋ ಅಲ್ಲಾಹನು ಅವನ ಉದ್ದೇಶವನ್ನು ಈಡೇರಿಸುವನು. ಯಾರು ಓರ್ವ ವಿಶ್ವಾಸಿಯ ಸಂಕಷ್ಟವನ್ನು ನೀಗಿಸುತ್ತಾನೋ ಅಲ್ಲಾಹನು ಕಿಯಾಮತ್'ನಂದು ಅವನ ಸಂಕಷ್ಟಗಳನ್ನು ನೀಗಿಸುವನು. ಯಾರು ಓರ್ವ ವಿಶ್ವಾಸಿಯ ಕುಂದುಕೊರತೆಗಳನ್ನು ಮರೆಮಾಚುತ್ತಾನೋ ಅಲ್ಲಾಹನು ಕಿಯಾಮತ್'ನಂದು ಅವನ ಕುಂದುಕೊರತೆಗಳನ್ನು ಮರೆಮಾಚುವನು.
  (ಸಹೀಹುಲ್ ಬುಖಾರಿ)

 • ಸಹೋದರನಿಗೆ ನೆರವಾಗಿರಿ
  ismika29-07-2017

  ಅನಸ್(ರ)ಹೇಳುತ್ತಾರೆ - ನಿಮ್ಮ ಸಹೋದರನಿಗೆ ನೆರವಾಗಿರಿ. ಆತ ಮರ್ದಕನಾಗಿರಲಿ ಅಥವಾ ಮರ್ದಿತನಾಗಿರಲಿ. ಆಗ ಸಹಾಬಿಗಳು ಕೇಳಿದರು - ಮರ್ದಿತನಿಗೆ ನಾವು ನೆರವಾಗಬಹುದು. ಆದರೆ ಅಕ್ರಮಿಗೆ ನೆರವಾಗುವುದು ಹೇಗೆ?. ಪ್ರವಾದಿ(ಸ)ಹೇಳಿದರು - ಅವನ ಕೈ ಹಿಡಿಯಿರಿ. (ಸಹೀಹುಲ್ ಬುಖಾರಿ)

 • ಅಕ್ರಮ ಜಮೀನು
  ismika29-07-2017

  ಇಬ್ನು ಉಮರ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಯಾರು ಸ್ವಲ್ಪ ಜಮೀನನ್ನಾದರೂ ಅಕ್ರಮವಾಗಿ ಕಬಳಿಸುತ್ತಾನೋ ಅವನನ್ನು ಕಿಯಾಮತ್'ನಂದು ಏಳು ಭೂಮಿಯ ಕೆಳಗಿನವರೆಗೆ ಹೂಳಲಾಗುವುದು. (ಸಹೀಹುಲ್ ಬುಖಾರಿ)

  ಹಝ್ರತ್ ಇಬ್ನು ಉಮರ್ (ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಕಿಯಾಮತ್ ದಿವಸದಂದು ಅಕ್ರಮದ ಕಾರಣ ಅಕ್ರಮಿಗೆ ವಿವಿಧ ರೀತಿಯ ಅಂಧಕಾರಗಳು ಕವಿದಿರುವುದು. (ಸಹೀಹುಲ್ ಬುಖಾರಿ)

 • ಅತಿ ಕೆಟ್ಟ ವ್ಯಕ್ತಿ
  ismika29-07-2017

  ಹಝ್ರತ್ ಆಯಿಶಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಅತಿ ಹೆಚ್ಚು ಜಗಳಾಡುವವನೇ ಅಲ್ಲಾಹನ ಬಳಿ ಅತಿ ಕೆಟ್ಟ ವ್ಯಕ್ತಿಯಾಗಿರುವನು.(ಸಹೀಹುಲ್ ಬುಖಾರಿ)

 • ಅಂತ್ಯ ದಿವಸ
  ismika29-07-2017

  ಆಯಿಶಾ(ರ)ಹೇಳುತ್ತಾರೆ - ಕೆಲವು ಒರಟು ಸ್ವಭಾವದ ಗ್ರಾಮೀಣ ಅರಬರು ಬಂದು ಪ್ರವಾದಿ ಮುಹಮ್ಮದ್ (ಸ) ರೊಡನೆ ' ಅಂತ್ಯ ದಿವಸ ' ಯಾವಾಗ ಬರುವುದೆಂದು ವಿಚಾರಿಸುತ್ತಿದ್ದರು. ಆಗ ಪ್ರವಾದಿಯವರು(ಸ) ಅವರ ತಂಡದಲ್ಲಿರುವ ಅತ್ಯಂತ ಕಿರಿಯವನನ್ನು ನೋಡಿ ಹೇಳುತ್ತಿದ್ದರು - ' ಇವನು ಬದುಕಿ ಇವನಿಗೆ ಮುಪ್ಪು ಬರವುದಕ್ಕಿಂತ ಮುಂಚಿತವಾಗಿ ನಿಮ್ಮ ಅಂತ್ಯ ಸಮಯ ಬರುವುದು ' ಅಂದರೆ ನಿಮಗೆ ಮರಣ ಬರುವುದೆಂದರ್ಥ. (ಸಹೀಹುಲ್ ಬುಖಾರಿ)

 • ತೋರಿಕೆ
  ismika29-07-2017

  ಜುಂದುಬ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಯಾರಾದರೂ ತಾನು ಮಾಡಿದ ಸಾಧನೆಗಳು ಜನರಿಗೆ ತಿಳಿಯಬೇಕೆಂಬ ಉದ್ದೇಶ ಹೊಂದಿದ್ದರೆ, ಆತನ ನೈಜ ಸ್ವರೂಪವನ್ನು ಅಲ್ಲಾಹನು ಬಹಿರಂಗಪಡಿಸುವನು. ಯಾರಾದರೂ ತೋರಿಕೆಗಾಗಿ ಏನಾದರೂ ಮಾಡಿದರೆ ಅಲ್ಲಾಹನು ಅವನ ನೈಜ ಮುಖವನ್ನು ಅನಾವರಣಗೊಳಿಸುವನು. (ಸಹೀಹುಲ್ ಬುಖಾರಿ)

 • ಆ ವ್ಯಕ್ತಿಯಂತಾಗಬಾರದು
  ismika29-07-2017

  ಪ್ರವಾದಿ ಮುಹಮ್ಮದ್ (ಸ) ಅಬ್ದುಲ್ಲಾ ಬಿನ್ ಅಮ್ರ್ ರಿಗೆ ಈ ರೀತಿ ಆದೇಶಿಸಿದರು: "ಓ ಅಬ್ದುಲ್ಲಾ! ನೀನು ಆ ವ್ಯಕ್ತಿಯಂತಾಗಬಾರದು. ಆತ ರಾತ್ರಿ ತಹಜ್ಜುದ್'ಗಾಗಿ ಏಳುತ್ತಿದ್ದ. ಆ ಬಳಿಕ ಆತ ಅದನ್ನು ಬಿಟ್ಟು ಬಿಟ್ಟ. (ಬುಖಾರಿ,ಮುಸ್ಲಿಮ್, ಮಿಷ್ಕಾತ್)

 • ಉದ್ದೇಶ ಶುದ್ಧಿ
  ismika29-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಅಲ್ಲಾಹನು ಹೇಳಿರುವುದಾಗಿ ಪ್ರವಾದಿ ಮುಹಮ್ಮದ್ (ಸ) ಹೇಳಿದರು - ನಿಶ್ಚಯವಾಗಿಯೂ ಅಲ್ಲಾಹನು ಒಳಿತು ಕೆಡುಕುಗಳನ್ನು ನಿರ್ಣಯಿಸಿ, ಅದನ್ನು ಸ್ಪಷ್ಟಪಡಿಸಿರುವನು. ಯಾರಾದರೂ ಒಂದು ಸತ್ಕರ್ಮ ಮಾಡುವ ಉದ್ದೇಶ ಹೊಂದಿದ್ದು ಅದನ್ನು ಮಾಡದೆ ಇದ್ದರೂ ಅಲ್ಲಾಹನು ಅವನ ಲೆಕ್ಕದಲ್ಲಿ ಒಂದು ಪೂರ್ಣ ಸತ್ಕರ್ಮವನ್ನು ಬರೆಯುತ್ತಾನೆ.ಇನ್ನು ಅವನು ಆ ಸತ್ಕರ್ಮವನ್ನು ಮಾಡಿದರೆ ಅಲ್ಲಾಹನು ಅದಕ್ಕೆ ಹತ್ತರಿಂದ ಏಳ್ನೂರರ ವರೆಗೂ ಅದಕ್ಕಿಂತ ಹೆಚ್ಚೂ ತನ್ನ ಕಡೆಯಿಂದ ಸೇರಿಸಿ ಬರೆಯುತ್ತಾನೆ. ಯಾರಾದರೂ ಒಂದು ಪಾಪವೆಸಗುವ ಉದ್ದೇಶ ಹೊಂದಿದ್ದು ಅದನ್ನು ಮಾಡದೆ ಇದ್ದರೆ, ಅದಕ್ಕೆ ಅಲ್ಲಾಹನು ಒಂದು ಪೂರ್ಣ ಸತ್ಕರ್ಮವನ್ನೂ ತನ್ನ ವತಿಯಿಂದ ಬರೆಯುತ್ತಾನೆ. ಇನ್ನು ಅವನು ಆ ಪಾಪವನ್ನು ಎಸಗಿ ಬಿಟ್ಟರೆ ಅಲ್ಲಾಹನು ಅವನ ಲೆಕ್ಕದಲ್ಲಿ ಒಂದು ಪಾಪ ಮಾತ್ರ ಬರೆಯುತ್ತಾನೆ. (ಸಹೀಹುಲ್ ಬುಖಾರಿ)

 • ಕೆಟ್ಟ ಮತ್ತು ಒಳ್ಳೆಯ ಮಾತು
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಒಬ್ಬ ದಾಸನು ಅಲ್ಲಾಹನ ಸಂಪ್ರೀತಿಯ ಒಂದು ಮಾತನ್ನು ಆಡುತ್ತಾನೆ. ಅವನು ಅದಕ್ಕೆ ಹೆಚ್ಚಿನ ಮಹತ್ವವೇನೂ ನೀಡಿರಲಿಲ್ಲ. ಆದರೆ ಅಲ್ಲಾಹನು ಅದರ ಮೂಲಕ ಅವನ ಸ್ಥಾನವನ್ನು ಏರಿಸುವನು. ಇನ್ನೊಬ್ಬನು ಅಲ್ಲಾಹನನ್ನು ಕೋಪಗೊಳಿಸುವಂತಹ ಒಂದು ಮಾತನ್ನು ಹೇಳುತ್ತಾನೆ. ಅವನು ಅದಕ್ಕೆ ಅಷ್ಟೇನೂ ಮಹತ್ವ ಕೊಟ್ಟಿರುವುದಿಲ್ಲ. ಆದರೆ ಅದು ಅವನನ್ನು ನರಕಕ್ಕೆ ಒಯ್ಯುವುದು. (ಸಹೀಹುಲ್ ಬುಖಾರಿ)

 • ಕೆಳಗಿನವರನ್ನು ನೋಡಲಿ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು : ಒಬ್ಬನು ತನಗಿಂತ ಹೆಚ್ಚು ದೈಹಿಕ ಶಕ್ತಿ ಮತ್ತು ಸಂಪತ್ತನ್ನು ಪಡೆದಿರುವುದನ್ನು ಕಂಡರೆ, ಅವನು ತನಗಿಂತ ಕೆಳಮಟ್ಟದವನನ್ನೂ ನೋಡಲಿ(ಸಹೀಹುಲ್ ಬುಖಾರಿ)

 • ಅಲ್ಲಾಹನ ಕರುಣೆ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ನಿಮ್ಮ ಪೈಕಿ ಯಾರ ಕರ್ಮಗಳೂ ನಿಮ್ಮನ್ನು ಅಲ್ಲಾಹನ ಶಿಕ್ಷೆಯಿಂದ ಪಾರುಗೊಳಿಸಲಾರವು. ಸಂಗಾತಿಗಳು ಕೇಳಿದರು - ಅಲ್ಲಾಹನ ಸಂದೇಶವಾಹಕರೇ! ತಾವೂ ಪಾರಾಗಲಾರಿರಾ? ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಅಲ್ಲಾಹನು ತನ್ನ ಕರುಣೆಯಿಂದ ನನ್ನನ್ನು ಆವರಿಸದೆ ಇದ್ದರೆ ನಾನೂ ಪಾರಾಗಲಾರೆ. ಆದ್ದರಿಂದ ನೀವು ಸರಿಯಾದ ಮಾರ್ಗದಲ್ಲಿ ನಡೆಯಿರಿ. ಮಧ್ಯಮ ನಿಲುವು ತಳೆಯಿರಿ. ಸಂಜೆ ಮುಂಜಾನೆ ಮತ್ತು ರಾತ್ರಿಯ ಅಂತಿಮ ಜಾವದಲ್ಲಿ ಅಲ್ಲಾಹನ ಆರಾಧನೆ ಮಾಡಿರಿ. ನಿಮ್ಮ ಕೆಲಸ ಕಾರ್ಯಗಳಲ್ಲಿ ಮಿತಿಮೀರದಿರಿ. ನೀವು ಗುರಿ (ಸ್ವರ್ಗ) ಮುಟ್ಟಬಹುದು. (ಸಹೀಹುಲ್ ಬುಖಾರಿ)

 • ಪ್ರಯಾಣಿಕನಂತೆ ಬದುಕು
  ismika29-07-2017

  ಅಬ್ದುಲ್ಲಾ ಬಿನ್ ಉಮರ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ನನ್ನ ಹೆಗಲು ಹಿಡಿದು ಹೇಳಿದರು - ಈ ಲೋಕದಲ್ಲಿ ನೀನು ಓರ್ವ ಅಪರಿಚಿತ ಅಥವಾ ಪ್ರಯಾಣಿಕನಂತೆ ಬದುಕು. ಇಬ್ನ್ ಉಮರ್(ರ)ಹೇಳುತ್ತಿದ್ದರು - ಸಂಜೆಯಾದರೆ ನೀನು ಮುಂಜಾನೆಯನ್ನು ನಿರೀಕ್ಷಿಸಬೇಡ. ಮುಂಜಾನೆಯಾದರೆ ಸಂಜೆಯನ್ನು ಕಾಯಬೇಡ. ನೀನು ಆರೋಗ್ಯವಂತನಾಗಿರುವಾಗ ಅನಾರೋಗ್ಯಕ್ಕೆ ಬೇಕಾದುದನ್ನು ಸಿದ್ಧಪಡಿಸು. ನಿನ್ನ ಜೀವನದಿಂದ ಮರಣಕ್ಕೆ ಬೇಕಾದುದನ್ನು ಮಾಡಿಡು. (ಸಹೀಹುಲ್ ಬುಖಾರಿ)

 • ನಷ್ಟವಾಗುವಂತಹ ಅನುಗ್ರಹ
  ismika29-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ಆರೋಗ್ಯ ಮತ್ತು ಬಿಡುವಿನ ಸಮಯ ಹೆಚ್ಚಿನವರಿಗೆ ನಷ್ಟವಾಗುವಂತಹ ಅನುಗ್ರಹಗಳಾಗಿವೆ. (ಸಹೀಹುಲ್ ಬುಖಾರಿ)

 • ಪ್ರವಾದಿ (ಸ) ಪ್ರಾರ್ಥನೆ
  ismika29-07-2017

  ಅಬೂ ಮೂಸಾ ಅಶ್ಅರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೀಗೆ ಪ್ರಾರ್ಥಿಸುತ್ತಿದ್ದರು - ಅಲ್ಲಾಹನೇ! ನನ್ನ ತಪ್ಪುಗಳನ್ನು, ನನ್ನ ಅಜ್ಞಾನವನ್ನು ಮತ್ತು ನನ್ನ (ಪಾಪಗಳಲ್ಲಿ)ಮಿತಿ ಮೀರುವುದನ್ನು ನನಗೆ ಕ್ಷಮಿಸು. ನನಗಿಂತ ನೀನು ಹೆಚ್ಚು ತಿಳಿದಿರುವ, ತಮಾಷೆಗಾಗಿಯೂ ಗಂಭೀರವಾಗಿಯೂ ಮಾಡಿದ ಕೃತ್ಯಗಳನ್ನು ಕ್ಷಮಿಸು. ನಾನು ಅರಿತೋ ಅರಿಯದೆಯೋ ಮಾಡಿದ, ನಾನೇ ಕಾರಣನಾದ ಪ್ರಮಾದಗಳನ್ನು ಕ್ಷಮಿಸು. (ಸಹೀಹುಲ್ ಬುಖಾರಿ)

 • ಮನಸ್ಸಿಗೆ ಬೇಸರವಾದಾಗ
  ismika29-07-2017

  ಇಬ್ನು ಅಬ್ಬಾಸ್(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಮನಸ್ಸಿಗೆ ಬೇಸರವಾದಾಗ ಈ ರೀತಿ ಹೇಳುತ್ತಿದ್ದರು: ಮಹಾನನೂ ಕ್ಷಮಾಳುವೂ ಆದ ಅಲ್ಲಾಹನ ಹೊರತು ಆರಾಧ್ಯರಿಲ್ಲ. 'ಅರ್ಶ್' ನ ಪ್ರಭುವಾದ ಅಲ್ಲಾಹನ ಹೊರತು ಆರಾಧ್ಯರಿಲ್ಲ. ಭೂಮಿ ಆಕಾಶಗಳ ಮತ್ತು ಗೌರವಾರ್ಹ ಅರ್ಶ್ ನ ಪ್ರಭುವಾದ ಅಲ್ಲಾಹನ ಹೊರತು ಆರಾಧ್ಯರಿಲ್ಲ. (ಸಹೀಹುಲ್ ಬುಖಾರಿ)

 • ಪಶ್ಚಾತ್ತಾಪ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳುವುದನ್ನು ಕೇಳಿದ್ದೇನೆ: ಅಲ್ಲಾಹನಾಣೆ! ದಿವಸದಲ್ಲಿ ಎಪ್ಪತ್ತಕ್ಕಿಂತ ಹೆಚ್ಚು ಬಾರಿ ನಾನು ಪಶ್ಚಾತ್ತಾಪಪಟ್ಟು , ಕ್ಷಮೆ ಯಾಚಿಸುತ್ತೇನೆ. (ಸಹೀಹುಲ್ ಬುಖಾರಿ)

 • ಅಭಯ ಯಾಚನೆ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಅಲ್ಲಾಹನೊಂದಿಗೆ ಈ ರೀತಿ ಅಭಯ ಯಾಚಿಸುತ್ತಿದ್ದರು - ಆಪತ್ತಿನಿಂದಾಗುವ ನಾಶನಷ್ಟಗಳಿಂದ, ತೀವ್ರ ಸಂಕಷ್ಟದಿಂದ, ನಮಗೊದಗಬಹುದಾದ ವಿಪತ್ತಿನಿಂದ ಶತ್ರುಗಳು ಸಂತೋಷ ಪಡುವ ಮತ್ತು ನಮ್ಮ ಸಂತೋಷದಿಂದ ಅವರು ಬೇಸರಗೊಳ್ಳುವ ಪರಿಸ್ಥಿತಿಯುಂಟಾಗುವುದರಿಂದ. (ಸಹೀಹುಲ್ ಬುಖಾರಿ)

 • ಪ್ರಾರ್ಥನೆ -ಅವಸರ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ನಾನು ಪ್ರಾರ್ಥಿಸಿದೆ. ' ನನಗೆ ಉತ್ತರ ಸಿಕ್ಕಿಲ್ಲ ' ವೆಂದು ನೀವು ಅವಸರಿಸಿದರೆ ನಿಮ್ಮ ಪ್ರಾರ್ಥನೆ ಸ್ವೀಕೃತವಾಗಲಾರದು. (ಸಹೀಹುಲ್ ಬುಖಾರಿ)

 • ದೃಢ ಸಂಕಲ್ಪದೊಂದಿಗೆ ಪ್ರಾರ್ಥಿಸಿ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು - ' ನೀವು ಯಾರೂ, ಅಲ್ಲಾಹನೇ! ನೀನು ಬಯಸಿದರೆ ನನ್ನನ್ನು ಕ್ಷಮಿಸು, ನೀನು ಬಯಸಿದರೆ ನನ್ನ ಮೇಲೆ ಕರುಣೆ ತೋರು ' ಎಂದು ಪ್ರಾರ್ಥಿಸಬಾರದು. ದೃಢ ಸಂಕಲ್ಪದೊಂದಿಗೆ ಪ್ರಾರ್ಥಿಸಬೇಕು. ಯಾವುದೇ ಕಾರ್ಯ ಮಾಡುವಂತೆ ಅಲ್ಲಾಹನನ್ನು ನಿರ್ಬಂಧಿಸಲು ಯಾರಿಂದಲೂ ಸಾಧ್ಯವಿಲ್ಲ. (ಸಹೀಹುಲ್ ಬುಖಾರಿ)

 • ಸಾಮೀಪ್ಯ ಗಳಿಸುವ ಸಾಧನ
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೀಗೆ ಹೇಳುವುದನ್ನು ನಾನು ಕೇಳಿದ್ದೇನೆ - ಯಾವನೇ ಒಬ್ಬ ಮುಸ್ಲಿಮನನ್ನು ನಾನು ಬೈದಿದ್ದರೆ, ಅದನ್ನು ಅವನ ಪಾಲಿಗೆ, ಅಂತ್ಯ ದಿನದಂದು ನಿನ್ನ ಸಾಮೀಪ್ಯ ಗಳಿಸುವ ಸಾಧನವಾಗಿ ಮಾಡು. (ಸಹೀಹುಲ್ ಬುಖಾರಿ)

 • ನನ್ನ ಪ್ರಾರ್ಥನೆ -ಸಮುದಾಯಕ್ಕಾಗಿ ಶಿಫಾರಸು
  ismika29-07-2017

  ಅಬೂಹುರೈರಾ(ರ)ಹೇಳುತ್ತಾರೆ -ಪ್ರವಾದಿ ಮುಹಮ್ಮದ್ (ಸ) ಹೇಳಿದರು - ಎಲ್ಲ ಪ್ರವಾದಿಗಳಿಗೂ ಸ್ವೀಕೃತವಾಗುವ ಪ್ರಾರ್ಥನೆಯಿದ್ದು, ಅದನ್ನು ಅವರು ಪ್ರಾರ್ಥಿಸುತ್ತಾರೆ. ನನ್ನ ಪ್ರಾರ್ಥನೆಯನ್ನು ಪರಲೋಕದಲ್ಲಿ ನನ್ನ ಸಮುದಾಯಕ್ಕಾಗಿ ಶಿಫಾರಸು ಮಾಡಲಿಕ್ಕಾಗಿ ಕಾದಿರಿಸಿದ್ದೇನೆ. (ಸಹೀಹುಲ್ ಬುಖಾರಿ)

 • ಆತಿಥ್ಯ
  ismika29-07-2017

  ಉಕ್ಬಾ ಬಿನ್ ಆಮಿರ್(ರ)ಪ್ರವಾದಿ ಮುಹಮ್ಮದ್ (ಸ)ರೊಂದಿಗೆ ಕೇಳಿದರು - ತಾವು ನಮ್ಮನ್ನು ಝಕಾತ್ ವಸೂಲು ಮಾಡಲು ಎಲ್ಲಿಗಾದರೂ ಕಳಿಸುತ್ತೀರಿ. ಅಲ್ಲಿ ನಮಗೆ ಆತಿಥ್ಯ ನೀಡುವವರು ಯಾರೂ ಇರುವುದಿಲ್ಲ. ಹಾಗಿರುವಾಗ ನಾವೇನು ಮಾಡಬೇಕು. ಪ್ರವಾದಿ(ಸ)ಹೇಳಿದರು - ನೀವು ಎಲ್ಲಾದರೂ ತಂಗಿದಲ್ಲಿ ಜನರು ನಿಮಗೆ ಊಟ ಅಥವಾ ಅದಕ್ಕೆ ಸಮಾನವಾದ ಬೆಲೆ ನೀಡಿದರೆ ಅದನ್ನು ಸ್ವೀಕರಿಸಿಕೊಳ್ಳಿ. ಅನ್ಯಥಾ ಆತಿಥ್ಯದ ಹಕ್ಕನ್ನು ಒತ್ತಾಯ ಮಾಡಿ ಪಡೆಯಿರಿ. (ಸಹೀಹುಲ್ ಬುಖಾರಿ)

 • ದಾರಿಯ ಹಕ್ಕು
  ismika29-07-2017

  ಅಬೂ ಸ'ಈದ್ ಖುದ್ರೀ(ರ)ಹೇಳುತ್ತಾರೆ - ಪ್ರವಾದಿ ಮುಹಮ್ಮದ್ (ಸ) ಹೇಳಿದರು: ದಾರಿ ಬದಿಯಲ್ಲಿ ಕುಳಿತು ಕೊಳ್ಳದಿರಿ. ಸಹಾಬಿಗಳು ಹೇಳಿದರು - ನಮಗೆ ಕುಳಿತುಕೊಂಡು ಮಾತುಕತೆ ನಡೆಸಲು ಬೇರೆ ಸ್ಥಳವಿಲ್ಲವಲ್ಲ! ಪ್ರವಾದಿ(ಸ)ಹೇಳಿದರು - ನಿಮಗೆ ಬೀದಿ ಬದಿಯಲ್ಲಿ ಕುಳಿತುಕೊಳ್ಳಲೇಬೇಕೆಂದರೆ ದಾರಿಯ ಹಕ್ಕನ್ನು ಪೂರೈಸಿರಿ. ಸಹಾಬಿಗಳು ದಾರಿಯ ಹಕ್ಕು ಯಾವುದೆಂದು ಕೇಳಿದರು. ಪ್ರವಾದಿ(ಸ)ಹೇಳಿದರು - ದೃಷ್ಟಿಯನ್ನು ಕೆಳಗಿರಿಸುವುದು, ತೊಂದರೆ ಕೊಡುವ ವಸ್ತುಗಳನ್ನು ನೀಗಿಸುವುದು, ಪ್ರಶ್ನೆಗೆ ಉತ್ತರಿಸುವುದು, ಒಳಿತಿನ ಆಜ್ಞೆ ಕೊಡುವುದು ಮತ್ತು ಕೆಡುಕನ್ನು ತಡೆಯುವುದಾಗಿದೆ. (ಸಹೀಹುಲ್ ಬುಖಾರಿ)

 

2 comments

 1. mashallahu tabaraka vata aala

 2. I want to read hadidth. Sahi Muslim
  Can I get in translated Kannada version

Leave a Reply

Your email address will not be published. Required fields are marked *