ಪ್ರವಾದಿ: ನನ್ನ ಅನುಭವ


@ ತೆರೆಸಾ ಕ್ರೊಬಿನ್
ನಾನು ಮೊದಲ ಬಾರಿ ಇಸ್ಲಾಮ್ ಧರ್ಮದ ಕುರಿತು ಕೇಳಿದಾಗ ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಕೇಳಿಯೂ ಇರಲಿಲ್ಲ. ಮಾತ್ರವಲ್ಲ ಮುಹಮ್ಮದ್ ಎಂದು ಹೆಸರಿರುವ ಯಾವ ವ್ಯಕ್ತಿಯ ಹೆಸರನ್ನೂ ನಾನು ಕೇಳಿರಲಿಲ್ಲ. ನಾನು ಅತಿಯಾದ ಕೌಟುಂಬಿಕ ಆಶ್ರಯದಲ್ಲೇ ಬೆಳೆದುದರಿಂದ ಅರಿಯದಾಗಿರಬಹುದೆಂಬುದು ನಿಜಾಂಶವಾಗಿದೆಯೋ ಅಥವಾ 1998ರಲ್ಲಿ ಮೊದಲ ಬಾರಿಗೆ ನಾನು ಇಸ್ಲಾಮ್ ಎಂಬುದರ ಕುರಿತು ಕೇಳಿದುದು ಪ್ರಭಾವಿ ಆಯಿತೋ ಎಂದೆನ್ನಿಸುತ್ತದೆ. ಮುಸ್ಲಿಮ್ ವಿರೋಧಿ ಪ್ರಚಾರಭಿಯಾನಕ್ಕೂ ಮುನ್ನ ಮತ್ತು 9/11ರ ಕಾಲಾವಧಿಗೂ ಮುನ್ನ ಅಮೇರಿಕಾದ ಜನತೆಗೆ ಮುಸ್ಲಿಮರೆಂದರೆ ಯಾರೆಂಬುದೇ ತಿಳಿದಿರಲಿಲ್ಲ.
ಆದರೆ ಅವೆಲ್ಲವೂ ಬದಲಾಯಿತು. 9-11ರ ನಂತರ ಅಮೇರಿಕಾವನ್ನೊಳಗೊಂಡಂತೆ ಜಗತಿನಾದ್ಯಂತ ಪ್ರವಾದಿ ಮುಹಮ್ಮದ್(ಸ)ರ ಕುರಿತು ಹಲವಾರು ಲೇಖನಗಳು, ಅಧ್ಯಯನಗಳು ಬಹುಸಂಖ್ಯೆಯಲ್ಲಿ ಮೂಡಿ ಬಂದವು. ಆದರೆ ಇಸ್ಲಾಮಿನ ಪ್ರವಾದಿಯ(ಸ) ಕುರಿತು ಬರೆದ, ಮಾತನಾಡಿದ, ಗೀಚಿದ ಹೆಚ್ಚಿನ ಮಾಹಿತಿಗಳೆಲ್ಲವೂ ಅವರನ್ನು ಓರ್ವ ಕೀಳಾದ ವ್ಯಕ್ತಿಯೆಂಬಂತೆ ಬಿಂಬಿಸಲು ಸಫಲ ಯತ್ನ ನಡೆಸಿದಂತಿದ್ದವು.
ನಾನು ಕಾಲೇಜು ಜೀವನದಲ್ಲಿದ್ದಾಗ ನನಗೆ ಮೊದಲ ಬಾರಿಗೆ ಪ್ರವಾದಿ ಮುಹಮ್ಮದ್(ಸ)ರ ಕುರಿತು ತಿಳಿಯಲು ಅವಕಾಶ ಲಭಿಸಿತು. ನಾನು ಇಸ್ಲಾಮಿನ ಕುರಿತು ಅರಿಯಲಿಕ್ಕಾಗಿಯೇ ಆ ತರಗತಿಗಳಿಗೆ ಹಾಜರಾಗಿದ್ದೆ. ತರಗತಿಗಳು ಮುಕ್ತಾಯದ ಹಂತಕ್ಕೆ ತಲುಪಿದ್ದವು. ಅರ್ಧ ವರ್ಷ ಕ್ರೈಸ್ತ ಧರ್ಮವನ್ನರಿಯಲು, ಅರ್ಧ ವರ್ಷ ಯಹೂದಿ ಧರ್ಮವನ್ನರಿಯಲು ವ್ಯಯಿಸಿದ ನಾನು ಇಸ್ಲಾಮಿನ ಕಲಿಕೆಗೆ ನೀಡಿದ ಸಮಯ ಕೇವಲ ಒಂದು ವಾರ!
ದೀರ್ಘ ಕಾಲಿಕ ಅವಧಿಗಳ ವರೆಗೆ ಕ್ರೈಸ್ತ ಧರ್ಮವನ್ನು, ಯಹೂದಿ ಧರ್ಮವನ್ನು ಬಣ್ಣಿಸುವಲ್ಲಿ ಕಳೆದ ತರಗತಿಗಳ ನಂತರ ವಾರದ ವರೆಗೆ ನಡೆದ ಇಸ್ಲಾಮಿನ ಚರ್ಚೆಗಳಲ್ಲಿ ಅವರ ನಂಬಿಕೆ, ಸಂಸ್ಕøತಿ ಆಚಾರ-ವಿಚಾರಗಳ ಕಲಿಕೆಗೆ ಬದಲಾಗಿ ರಾಜಕೀಯ ಮುಖವಾಡ ತೊಟ್ಟು ಕೊಂಡವು. ಆಗೊಮ್ಮೆ ಈಗೊಮ್ಮೆ ಇವುಗಳ ನಡುವೆ ಪ್ರವಾದಿ(ಸ)ರ ಹೆಸರು ಹಾದು ಹೋಗುತ್ತಿತ್ತು.
ಜಗತ್ತಿನ ಪ್ರಚಲಿತ ಧರ್ಮವೊಂದರ ಕುರಿತು ಯಾರೂ ಕೂಡಾ ನನ್ನೊಂದಿಗೆ ಏಕೆ ಚರ್ಚಿಸಲಿಲ್ಲ, ಅದರ ಕುರಿತಾದ ಮಾಹಿತಿಯನ್ನು ನನಗೇಕೆ ನೀಡಲಿಲ್ಲ ಮತ್ತು ಯಾಕೆ ನೀಡುತ್ತಿಲ್ಲ ಎಂದು ಯೋಚಿಸುವಾಗ ನಾನು ಸಂಪೂರ್ಣ ಒತ್ತಡಕ್ಕೊಳಗಾಗಿದೆ. ನನಗೆ ಸಮಾಧಾನವೆಂಬುದೇ ಇರಲಿಲ್ಲ. ಅಸಹನೆಯು ನನ್ನಲ್ಲಿ ತಾಂಡವಾಡುತ್ತಿತ್ತು.
ನನ್ನೊಂದಿಗಿದ್ದ ಗೆಳತಿಯೂ ಕೂಡಾ ನನ್ನಂತೆ ಅಸಮಾಧಾನಕ್ಕೊಳಗಾಗಿದ್ದಳು. ಆದರೆ ಆಕೆ ನನಗಿಂತಲೂ ಹೆಚ್ಚು ಅಸಮಾಧಾನಕ್ಕೊಳಗಾಗಿದ್ದಳೆನ್ನಿಸಿತು. ಏಕೆಂದರೆ ಆಕೆ ಇಸ್ಲಾಮ್ ಎಂಬ ಧರ್ಮದ ಬೋಧನೆಗಳೇನು ಎಂಬುದರ ಕುರಿತು ತಿಳಿಯಲು ಮಾರ್ಗೋಪಾಯಗಳನ್ನು ಹುಡುಕಿಕೊಂಡೇ ಬಿಟ್ಟಿದ್ದಳು. ಅವಳಲ್ಲಿದ್ದ ಉತ್ಸಾಹದ ಚಿಲುಮೆ ಅಲ್ಪಾವಧಿಯಲ್ಲಿಯೇ ಇಸ್ಲಾಮನ್ನು ಅಧ್ಯಯನಕ್ಕೊಳಪಡಿಸಿ ಮುಸ್ಲಿಮಳಾಗಿ ಬದಲಾಗುವಂತೆ ಮಾಡಿ ಬಿಟ್ಟಿತ್ತು. ಆಕೆ ತನ್ನ ಹೊಸ ಧರ್ಮದಲ್ಲಿ ಕಲಿತ ಪ್ರತಿಯೊಂದು ವಿಶ್ವಾಸದ ಮುಖ್ಯಾಂಶಗಳನ್ನು ನನ್ನೊಂದಿಗೆ ಹಂಚಿಕೊಂಡಳು.
ಮುಸ್ಲಿಮರು; ಕ್ರೈಸ್ತರು ಹಾಗೂ ಯಹೂದಿಯರು ವಿಶ್ವಾಸವಿರಿಸುವ ಎಲ್ಲಾ ಪ್ರವಾದಿಗಳ ಮೇಲೆ ಮುಸ್ಲಿಮ್ ವಿಶ್ವಾಸವಿರಿಸುತ್ತಾರೆಂಬ ಸತ್ಯಾಂಶವು ನನಗೆ ಆಶ್ಚರ್ಯಕ್ಕೀಡು ಮಾಡಿತು. ಎಲ್ಲಾ ಪ್ರವಾದಿಗಳನ್ನು ನಂಬುವ ಧರ್ಮದಲ್ಲಿ ಹೊಸತನವೇನಿದೆ? ಅಷ್ಟು ಕೆಟ್ಟದಾಗಿ ಇಸ್ಲಾಮನ್ನು ಬಿಂಬಿಸಲು ಕಾರಣವೇನೆಂದು ಹುಡುಕಲು ನಾನು ಮುಂದಾದೆ. ಇತರೆಲ್ಲ ಪ್ರವಾದಿಗಳಂತೆಯೇ ಏಕದೇವತ್ವದ ಸಂದೇಶವನ್ನು ಈ ಧರೆಗೆ ತಂದವರು ಕೊನೆಯ ಪ್ರವಾದಿ- ಮುಹಮ್ಮದ್(ಸ) ಎಂಬುದು ನನಗೆ ತಿಳಿಯಿತು.

ಅವರು(ಸ) ಸತ್ಯ ಸಂಧರಾಗಿದ್ದರು:
ನಾನು ಪ್ರವಾದಿ ಮುಹಮ್ಮದ್(ಸ)ರ ಕುರಿತು ಹೆಚ್ಚು ಹೆಚ್ಚಾಗಿ ಅಧ್ಯಯನ ನಡೆಸಿದಾಗ ಅವರನ್ನು ಬಲ್ಲವರು ಮತ್ತು ಅವರ ಶತ್ರುಗಳ ನಡುವೆಯೂ ಕೂಡಾ ಪ್ರವಾದಿ ಮುಹಮ್ಮದ್(ಸ)ರು ಅಲ್ ಅಮೀನ್- ಅಲ್ ಸಾದಿಕ್ ಎಂಬ ಬಿರುದುಗಳನ್ನು ಹೊಂದಿದ್ದರು.
ರೋಮನ್ ದೊರೆ ಕೈಸರ್‍ನ ಕೈಗೆ ಪ್ರವಾದಿ ಮುಹಮ್ಮದ್(ಸ)ರ ಪತ್ರವು ಇಸ್ಲಾಮ್ ಸ್ವೀಕರಿಸುವಂತೆ ಕೈಸರ್ ದೊರೆಗೆ ಆಹ್ವಾನವಿತ್ತಿರುವುದನ್ನು ಕಂಡು ಅಬೂ ಸುಫ್‍ಯಾನ್‍ರ ಬಳಿ ಕೈಸರ್ ಪ್ರಶ್ನಿಸುತ್ತಾರೆ. ಅಬೂ ಸುಫ್‍ಯಾನ್ ಆ ಸಂದರ್ಭದಲ್ಲಿ ಪ್ರವಾದಿ(ಸ)ರ ಸಂದೇಶದ ಪ್ರಬಲ ವಿರೋಧಿಯಾಗಿರುತ್ತಾರೆ. ಅವರು ಹೇಳುತ್ತಾರೆ, “ಮುಹಮ್ಮದ್ ಗೌರವಾರ್ಹರಾಗಿ ಜನಿಸಿದರು. ಅವರು ಸತ್ಯಸಂಧರು ಮತ್ತು ಪ್ರಾಮಾಣಿಕರು. ಅವರೆಂದೂ ಪ್ರತಿಜ್ಞೆಗಳನ್ನು ಮುರಿಯುವುದಿಲ್ಲ. ಅವರ ಅನುಯಾಯಿಗಳೆಲ್ಲರೂ ಒಬ್ಬ ದೇವನನ್ನು ಮಾತ್ರ ಆರಾಧಿಸುತ್ತಾರೆ. ಅವರು ದಯೆ, ಕರುಣೆ, ಸಹನೆಯ ಕುರಿತು ಬೋಧಿಸುತ್ತಿರುವುದರಿಂದಲೇ ಅವರ ಅನುಯಾಯಿಗಳು ದಿನೇ ದಿನೇ ಹೆಚ್ಚುತ್ತಿದ್ದಾರೆ” ಎನ್ನುತ್ತಾರೆ.
ಪ್ರವಾದಿ(ಸ)ರ ಬೋಧನೆಗಳು ಮಾತ್ರ ನನ್ನನ್ನು ಇಸ್ಲಾಮಿನತ್ತ ಆಕರ್ಷಿಸಲಿಲ್ಲ. ಬದಲಾಗಿ ಅವರ ಬದ್ಧ ವೈರಿಗಳ ನಡುವೆಯೂ ಪ್ರವಾದಿಯವರು(ಸ) ಪ್ರಾಮಾಣಿಕ, ಸತ್ಯ ಸಂಧರೆಂಬ ಬಿರುದುಗಳಿಂದ ನಾಮಾಂಕಿತರಾಗಿರುವುದು ನನ್ನನ್ನು ಪ್ರವಾದಿ(ಸ)ರ ಚರಿತ್ರೆಯನ್ನು ಅರಿಯಬೇಕೆಂದು ಪ್ರೇರೇಪಿಸುತ್ತಿತ್ತು.

ಅವರೊಬ್ಬ(ಸ) ರಕ್ಷಕ:
ಪ್ರವಾದಿಯವರ(ಸ) ಚರಿತ್ರೆಯನ್ನು ಓದುವಾಗ ಅವರು ಹುಟ್ಟುವ ಮೊದಲೇ ತಂದೆಯನ್ನು ಕಳೆದುಕೊಂಡ, ತದ ನಂತರ ಬಾಲ್ಯಾವಸ್ಥೆಯಲ್ಲಿಯೇ ತಾಯಿಯನ್ನು ಕಳೆದುಕೊಂಡ ಅನುಭವಗಳು ಅವರ ಮೇಲೆ ಅಗಾಧ ಪರಿಣಾಮ ಬೀರಿದುದನ್ನು ನಾನು ಕಂಡು ಕೊಂಡೆನು. ಎಳವೆಯಲ್ಲಿಯೇ ಇಂತಹ ಅನುಭವಗಳನ್ನು ನುಂಗಿದ ಪ್ರವಾದಿಯವರು(ಸ) ಸಮಾಜದಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವವರ ಕುರಿತು ಅಪಾರ ಕಾಳಜಿ ಮೆರೆದರು. ಅವರು ಸಹಾಯಕ್ಕೆ ಅರ್ಹರಾದ ವಿಧವೆಯ ಅನಾಥರ ರಕ್ಷಣೆಗೆ ಮುಂದಾದರು ಮತ್ತು ಇತರರಿಗೂ ಅದನ್ನು ಬೋಧಿಸಿದರು.
ಪ್ರವಾದಿ(ಸ)ರು ಹೇಳಿರುವರು. “ವಿಧವೆಯರ ಮತ್ತು ಬಡವರಿಗಾಗಿ ದುಡಿಯುವವರು ಅಲ್ಲಾಹನ ಮಾರ್ಗದಲ್ಲಿ ಹೋರಾಡುವ ಯೋಧರಿಗೆ ಸಮಾನರಾಗಿದ್ದಾರೆ.” (ಅಲ್ ಬುಖಾರಿ)
ಹಾಗೂ
“ಮುಸ್ಲಿಮರಲ್ಲಿ ಅತ್ಯುತ್ತಮ ಮನೆಯು ಅನಾಥರನ್ನು ಸರಿಯಾಗಿ ಪೋಷಿಸುವ ಮನೆ ಮತ್ತು ಮುಸ್ಲಿಮರಲ್ಲಿ ಅತಿ ಕೆಟ್ಟ ಮನೆಯು ಅನಾಥರನ್ನು ಕೆಟ್ಟದಾಗಿ ನಡೆಸಿಕೊಂಡ ಮನೆಯಾಗಿದೆ.” (ಇಬ್ನು ಮಾಜಾ)
ಕೇವಲ ತಮ್ಮ ಏಳಿಗೆಯಲ್ಲಿಯೇ ಸ್ವಾರ್ಥಿಗಳಾಗಿರುವ ಸಮಾಜದಲ್ಲಿ ಇತರರ ಏಳಿಗೆಗಾಗಿ ಪರಿವರ್ತನೆಯ ದಾರಿ ದೀಪವಾದ ಪ್ರವಾದಿ(ಸ)ರ ಚರಿತ್ರೆಯು ನನ್ನನ್ನು ಬಲವಾಗಿ ನಾಟಿತು.

ಅವರೊಬ್ಬ(ಸ) ಗೌರವಾರ್ಹ ನ್ಯಾಯಾಧೀಶ:
ಪ್ರವಾದಿ ಮುಹಮ್ಮದ್(ಸ)ರ ಕುರಿತು ಓದಿದಷ್ಟು ನನಗವರ ಬಗೆಗಿನ ಗೌರವವು ಹೆಚ್ಚುತ್ತಿತ್ತು. ಪ್ರವಾದಿಯವರು(ಸ) ಓರ್ವ ಪರಿಪೂರ್ಣ ನ್ಯಾಯಾಧೀಶರಾಗಿದ್ದರು. ಪ್ರವಾದಿಯವರು(ಸ) ಹೇಳುತ್ತಾರೆ. ನಿನ್ನ ಸಹೋದರನಿಗೆ ನೆರವಾಗು- ಅವನು ಅಕ್ರಮಿಯಾಗಿರಲಿ ಅಥವಾ ಮರ್ದಿತನಾಗಿರಲಿ. ಆಗ ಒಬ್ಬ ವ್ಯಕ್ತಿ ಕೇಳಿದರು- ಪ್ರವಾದಿವರ್ಯರೇ! ಮರ್ದಿತನಿಗೆ ನೆರವಾಗಬೇಕೆಂಬ ಮಾತು ಅರ್ಥವಾಗುತ್ತದೆ. ಆದರೆ ಅಕ್ರಮಿಗೆ ನೆರವಾಗುವುದು ಹೇಗೆಂದು ಅರ್ಥವಾಗುವುದಿಲ್ಲ. ಪ್ರವಾದಿ(ಸ) ಹೇಳಿದರು, ಅವನು ಅಕ್ರಮ ಮಾಡದಂತೆ ಅವನನ್ನು ತಡೆಯುವುದು. ಇದುವೇ ಅವನಿಗೆ ನೆರವಾಗುವುದಾಗಿದೆ.” (ಬುಖಾರಿ, ಮುಸ್ಲಿಮ್, ವರದಿ: ಹ. ಅನಸ್(ರ))
ಸರಿ-ತಪ್ಪುಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಜಗತ್ತು ಇಂದು ತನ್ನ ಕುಟುಂಬ, ಜನಾಂಗ, ಧರ್ಮದ ಪರವಾಗಿ ಅವರನ್ನು ಬೆಂಬಲಿಸುವಲ್ಲಿ ನಿರತವಾಗಿದೆ. ಆದರೆ ಜನರಿಗೆ ಪರಿಪೂರ್ಣ ನ್ಯಾಯವೇ ಮೊದಲೆಂದು ಬಗೆದ ವ್ಯಕ್ತಿಯಲ್ಲಿ ಮೊದಲಿಗರು ಪ್ರವಾದಿ(ಸ) ಆಗಿದ್ದಾರೆ. ಇದೊಂದು ಅಂಶವು ನನಗೆ ಕ್ರಾಂತಿಕಾರಿ ಎನ್ನಿಸಿತು- ಏಕೆಂದರೆ ಈ ಅಂಶವು ಧರ್ಮಾಂಧತೆ, ಜನಾಂಗೀಯತೆ, ಪಂಥೀಯತೆಗಳಂತಹ ಹಲವಾರು ವಿಷಯಗಳಿಗೆ ವಿರುದ್ಧವಾಗಿ ಬಂಡಾಯವೇಳುವ ಕ್ರಾಂತಿಕಾರಿ ಅಂಶವಾಗಿದೆ.

ಅವರು(ಸ) ಗೌರವಾರ್ಹರು:
ಮಹಿಳೆಯನ್ನು ಗೌರವ ಪೂರ್ಣವಾಗಿ ಕಾಣಿರಿ ಎಂದು ಅದನ್ನು ಪಾಲಿಸುವ ಮೂಲಕ ಇತರರಿಗೂ ಬೋಧಿಸಿದ ಪ್ರವಾದಿಯವರು(ಸ) ನನ್ನ ಅಧ್ಯಯನಗಳಿಗೆ ಇನ್ನಷ್ಟು ಆತ್ಮೀಯತೆಯ ಭಾಗವಾದರು. ಪ್ರವಾದಿಯವರು(ಸ) ಮಹಿಳೆಯರ ಮೇಲೆ ಒಮ್ಮೆಯೂ ಕೈ ಚಲಾಯಿಸಿದ್ದನ್ನು ನಾನು ಓದಿಲ್ಲ. ಮಹಿಳೆಯರೊಂದಿಗೆ ಸಂವಾದಿಸುವಾಗ ಅವರು ತಮ್ಮ ಕೋಪ ನಿಯಂತ್ರಣ ಕಳೆದುಕೊಳ್ಳಲಿಲ್ಲ. ಮಹಿಳೆಯರಿಂದ ಸಲಹೆಗಳನ್ನು ಪಡೆದು ಅವರು ಮಹಿಳಾ ಹಕ್ಕುಗಳನ್ನು ಸರಿಯಾಗಿ ಪರಿಷ್ಕರಣೆಗೊಳಪಡಿಸಿದರು.
ಪ್ರವಾದಿಯವರು(ಸ) ಹೇಳಿರುವರು, “ಮಹಿಳೆಯರೊಂದಿಗೆ ಉತ್ತಮ ರೀತಿಯಿಂದ ವರ್ತಿಸಲು ನನ್ನ ಸಲಹೆಗಳನ್ನು ಸ್ವೀಕರಿಸಿ.” (ಮುಸ್ಲಿಮ್)
ಸಮಾಜದಲ್ಲಿ ಇಂದು ಪುರುಷರಿಗೆ ಬೆತ್ತಲೆ ಕ್ಲಬ್‍ಗಳು ಸಮಯ ಕಳೆಯುವ ತಾಣಗಳಾಗಿವೆ. ಮಹಿಳೆಯರನ್ನು ಶೋಷಿಸಲು ಅವರೊಂದಿಗೆ ತಮ್ಮ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಉಪಯೋಗಿಸುವ ಕೆಟ್ಟ ಪದ ಪ್ರಯೋಗಗಳು ಅವರ ಅಸ್ತ್ರಗಳಾಗಿ ಮಾರ್ಪಟ್ಟಿವೆ. ಆದರೆ ಮಹಿಳೆಯರೊಂದಿಗೆ ಸಂವಾದಿಸುವಾಗ ಅವರ ಗೌರವ ಭಾವನೆಗೆ, ಘನತೆಗೆ ಕುಂದುಂಟಾಗುವಂತೆ ವರ್ತಿಸಬಾರದೆಂದು ಬೋಧಿಸಿ ಸಹೋದರತೆಯ ಸಂದೇಶ ಸಾರಿದ ಪ್ರವಾದಿ(ಸ) ನನಗೆ ಅತಿಯಾಗಿ ಇಷ್ಟವಾದರು.

ಅವರು ಸಹನಾಮಯಿಯಾಗಿದ್ದರು:
ಪ್ರವಾದಿ ಮುಹಮ್ಮದ್(ಸ)ರನ್ನು ಅನುಸರಿಸಿ ನನ್ನ ಜೀವನವನ್ನು ಸವೆಸಬೇಕೆಂದು ನಾನು ತೀರ್ಮಾನಿಸಿದಾಗ ಅವರ ವಚನವೊಂದು ನನಗೆ ನೆನಪಾಯಿತು.
“ಮಲ್ಲ ಯುದ್ಧದಲ್ಲಿ ತನ್ನ ಎದುರಾಳಿಯನ್ನು ಸೋಲಿಸುವವನು ಶಕ್ತಿ ಶಾಲಿಯಲ್ಲ. ಬದಲಾಗಿ ಕೋಪ ಬಂದಾಗ ಅದನ್ನು ತನ್ನ ನಿಯಂತ್ರಣದಲ್ಲಿರಿಸುವವನೇ ನಿಜವಾದ ಶಕ್ತಿಶಾಲಿ. ಅರ್ಥಾತ್ ಕೋಪ ಬಂದಾಗ ಅಲ್ಲಾಹ್ ಮತ್ತು ಪ್ರವಾದಿವರ್ಯರು(ಸ) ಮೆಚ್ಚದಂತಹ ಯಾವ ಕೃತ್ಯವನ್ನು ಆತ ಎಸಗುವುದಿಲ್ಲ. ಆತ ತನ್ನ ಕೋಪವನ್ನು ನಿಗ್ರಹಿಸುತ್ತಾನೆ. ಇದು ನನ್ನ ಜೀವನಕ್ಕೊಂದು ಪ್ರೇರಣೆ ಆಯ್ತು.
ಹಿಂಸೆಯನ್ನು ಹಾಡಿ ಹೊಗಳುವ ಟಿವಿ, ಮಾಧ್ಯಮ, ವೀಡಿಯೊ ಗೇಮ್, ಸಿನಿಮಾಗಳು ಹಾಗೂ ಮನೆಯೊಳಗಿನ ದೌರ್ಜನ್ಯಗಳೇ ಸಂಸ್ಕøತಿಯ ಬಿಂಬವಾಗಿರುವ ಕಾಲದಲ್ಲಿಂದು ತನ್ನ ಕೋಪವನ್ನು ತಾನು ನಿಗ್ರಹಿಸಿಕೊಂಡವನು ಬಲಶಾಲಿ ಎಂದು ಪ್ರವಾದಿಯವರಂತೆ(ಸ) ಬೋಧಿಸಿದ ಮತ್ತೊಬ್ಬ ವ್ಯಕ್ತಿಯನ್ನು ನಾನು ಕಂಡಿಲ್ಲ. ಸ್ವಯಂ ನಿಯಂತ್ರಣವೇ ನಿಜವಾದ ಶಕ್ತಿ ಸಾಮಥ್ರ್ಯವೆಂಬುದು ಪ್ರವಾದಿಯವರ(ಸ) ಸಹನೆಯ ಬೋಧನೆಯಾಗಿತ್ತು.
ಪ್ರವಾದಿ(ಸ)ರನ್ನು ನೋಡಿರದಿದ್ದರೂ ಮುಸ್ಲಿಮರು ಅವರನ್ನು ಏಕೆ ಪ್ರೀತಿಸುತ್ತಾರೆಂಬುದನ್ನು ನಾನರಿತೆ. ಪ್ರವಾದಿ(ಸ)ರ ವರ್ತನೆ, ಬೋಧನೆ, ಸಹನೆ, ಸಾಮಥ್ರ್ಯ, ಅವರು ಕರುಣೆಯ ಕುರಿತು ಅಧ್ಯಯನ ನಡೆಸುತ್ತಾ ಹೋದಂತೆಲ್ಲ ಮಾನವನ ಜೀವನವು ಎಷ್ಟೊಂದು ಅದ್ಭುತವಾದುದೆಂಬುದನ್ನು ಕಂಡು ವಿಸ್ಮಿತಳಾದೆ. ಜೀವನದಲ್ಲಿ ನಾವೆಂದೂ ಕಂಡಿರದ ಓರ್ವ ವ್ಯಕ್ತಿಗೆ ಗೌರವವನ್ನೂ ನೀಡುವುದರೊಂದಿಗೆ ಅತಿಯಾಗಿ ಪ್ರೀತಿಸುವುದರ ಅನುಭೂತಿ ಏನೆಂಬುದನ್ನು ನಾನು ಕಂಡುಕೊಂಡೆ.
ಪ್ರವಾದಿ(ಸ)ರ ಕುರಿತು ಅಧ್ಯಯನ ನಡೆಸುವ ಮುಸ್ಲಿಮೇತರರು ಅವರಿಗೆ ಗೌರವ ಸಲ್ಲಿಸದೇ ಇರಲಾರರು. 19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಇತಿಹಾಸಗಳಲ್ಲಿ ಬ್ರಿಟಿಷ್ ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಲೇಖಕಿ, ಐರಿಶ್ ಮತ್ತು ಇಂಡಿಯನ್ ಸೆಲ್ಫ್‍ರೂಲ್ ಬೆಂಬಲಗಾರ್ತಿಯಾದ ಅನ್ನಿ ಬೆಸೆಂಟ್‍ರವರು ಪ್ರವಾದಿಯವರ(ಸ) ಕುರಿತು ಈ ರೀತಿ ಬರೆಯುತ್ತಾರೆ.
“ಪ್ರವಾದಿ ಮುಹಮ್ಮದ್(ಸ)ರ ಕುರಿತು ಅಧ್ಯಯನ ನಡೆಸುವ ಪ್ರತಿಯೊಬ್ಬರಿಗೂ ನಡೆದಂತೆ ನುಡಿದ ಕರುಣಾಮಯಿಯಾದ ಪ್ರವಾದಿ, ಪ್ರಬಲನೂ ಯುಕ್ತಿ ಪೂರ್ಣನೂ ಆದ ದೇವನ ಶ್ರೇಷ್ಠ ಪ್ರವಾದಿ ಎಂಬುದನ್ನು ಅಲ್ಲಗಳೆಯಲಾಗದು…”

@ ತೆರೆಸಾ ಕ್ರೊಬಿನ್

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *