ನಿಮಗೆ ಉತ್ತಮ ನಾಯಕರಾಗಬೇಕೇ… … ಇದನ್ನು ಮಿಸ್ ಮಾಡ್ಬೇಡಿ 

ಜಲಾಲುದ್ದೀನ್ ರೂಮಿಯವರ ಒಂದು ಮನೋಹರ ಕವನ ಇದೆ.
ಪ್ರತಿ ರಾತ್ರಿ ವ್ಯಕ್ತಿಯೊಬ್ಬ ಕರೆಯುತ್ತಾನೆ `ಅಲ್ಲಾಹ್ ಅಲ್ಲಾಹ್’
ಅವನ ತುಟಿಯಲ್ಲಿ ರಕ್ತ ಬರುವ ತನಕ ಇದೇ ಕರೆ
ನಂತರ ಶೈತಾನ ಹೇಳಿದ, ಹೇ ಮನುಷ್ಯ
ನೀನು ಪ್ರತಿ ರಾತ್ರಿ ಅವನನ್ನು ಕರೆಯುತ್ತಿರುವೆ
ಆದರೆ ಒಮ್ಮೆಯೂ ಅಲ್ಲಾಹನಿಂದ `ನಾನಿಲ್ಲಿದ್ದೇನೆ’ ಎಂಬ ಉತ್ತರವಿಲ್ಲ.
ನೀನು ಬಹಳ ಅಂತರಾಳದಿಂದ ಅವನನ್ನು ಕರೆಯುತ್ತಿರುವೆ ಉತ್ತರವಾಗಿ ಏನು?
ನಾನು ಹೇಳುತ್ತೇನೆ, ಅಂತಹದ್ದೊಂದು ಇಲ್ಲವೇ ಇಲ್ಲ.
ವ್ಯಕ್ತಿ ಮೌನವಾಗುತ್ತಾನೆ ಮತ್ತು ಕೋಪಿಸುತ್ತಾನೆ
ಕಳೆಗುಂದಿ ನೆಲಕ್ಕೊರಗುತ್ತಾನೆ
ಗಾಢ ನಿದ್ದೆಗೆ ಶರಣಾಗುತ್ತಾನೆ,
ಕನಸಿನಲ್ಲಿ ಅಬ್ರಹಾಂ(ಅ) ಸಿಗುತ್ತಾರೆ ಮತ್ತು ಕೇಳುತ್ತಾರೆ
ನೀನು ಅಲ್ಲಾಹನ ಧಾನ್ಯದಿಂದ ವಿಷಾದಗೊಂಡು ಹಿಂದೆ ಸರಿದದ್ದಾದರೂ ಯಾಕೆ?
ವ್ಯಕ್ತಿ ಹೇಳಿದ ನಾನು ಬಹಳ ಬಾರಿ ಕರೆದೆ,
ಆದರೆ ಅಲ್ಲಾಹನಿಂದ ‘ನಾನಿಲ್ಲಿದ್ದೇನೆ’ ಎಂಬ ಉತ್ತರವಿಲ್ಲ.
ಅಬ್ರಹಾಂ ವಿವರಿಸಿದರು, ಅಲ್ಲಾಹನು ಹೇಳಿದ್ದಾನೆ
ನಿನ್ನ ತುಟಿಯಿಂದ ಬರುವ ನನ್ನ ಹೆಸರು ಬರಿಸುವುದೇ ನಾನು
ಅದುವೇ ನನ್ನ ಉತ್ತರ ನಿನಗೆ
ನನಗಾಗಿರುವ ನಿನ್ನ ಹಂಬಲ
ಅದುವೇ ನನ್ನ ಸಂದೇಶ ನಿನಗೆ
ನನ್ನನ್ನು ತಲುಪಲು ನನ್ನ ಪ್ರಯತ್ನಗಳಾಗಿವೆ
ನನಗಾಗಿರುವ ನಿನ್ನ ಭಯ ಮತ್ತು ಪ್ರೀತಿ ನನ್ನನ್ನು ಹಿಡಿಯುವ ಉರುಳಾಗಿದೆ
ಅಲ್ಲಾಹ್ ಎಂಬ ಪ್ರತಿ ಕರೆಯ
ನಂತರದ ಸುತ್ತ ಮುತ್ತಲಿನ ಪ್ರತಿ ಮೌನದಲ್ಲಿ
ಸಾವಿರ ಉತ್ತರ ಕಾಯುತ್ತದೆ ‘ನಾನಿಲ್ಲಿದ್ದೇನೆ’ “ನಾನಿಲ್ಲಿದ್ದೇನೆ”
ಈ ಕವನದಲ್ಲಿ ಕವಿ ಸೃಷ್ಟಿಕರ್ತ ಮತ್ತು ದಾಸನ ಸಂಬಂಧವನ್ನು ವಿವರಿಸಿದ್ದಾರೆ. ಅಲ್ಲಾಹನಿಂದ ಆಯ್ಕೆಯಾಗುವುದು ಎಂಬುದು ದೊಡ್ಡ ಸ್ಥಾನ ಸಿಗುವುದಾಗಿದೆ. ಅದನ್ನು ಕುರ್‍ಆನಿನಲ್ಲಿ “ಅವನು ನಿಮ್ಮನ್ನು ಆಯ್ಕೆ ಮಾಡಿದ್ದಾನೆ” ಎಂಬುದು ಒಳಿತಿನ ಸಂಸ್ಥಾಪನೆ ಮತ್ತು ಕೆಡುಕಿನ ಕಾರ್ಯದಲ್ಲಿ ಕೆಲಸ ಮಾಡಲು ಸಿಗುವ ಅನುಗ್ರಹವಾಗಿದೆ. ಈ ಅನುಗ್ರಹಗಳನ್ನು ಕಾಯ್ದುಕೊಳ್ಳಲು ಪ್ರತಿಯೋರ್ವರಿಗೂ ಸಾಧ್ಯವಿಲ್ಲ. ಅಲ್ಲಾಹನು ತನ್ನ ಕಾರ್ಯಗಳಿಗೆ ಪ್ರವಾದಿಗಳನ್ನು, ಸತ್ಯಸಂಧರನ್ನು ಹುತಾತ್ಮರನ್ನು ಮತ್ತು ಸಜ್ಜನರನ್ನು ಆಯ್ಕೆ ಮಾಡುತ್ತಾನೆ.
ಅಲ್ಲಾಹನು ಮನುಷ್ಯನನ್ನು ಈ ಕಾರ್ಯಕ್ಕೆ ಆಯ್ಕೆ ಮಾಡಿದ ಬಳಿಕ ಅದರ ಮೇಲೆ ಬಹಳಷ್ಟು ವಿಚಾರಗಳು ಶಿಷ್ಟಾಚಾರಗಳು ಕಡ್ಡಾಯವಾಗುತ್ತದೆ. ಅವರು ಜೀವನದ ಎಲ್ಲ ಘಟ್ಟಗಳಲ್ಲಿ ಅಲ್ಲಾಹ್ ಮತ್ತು ಪ್ರವಾದಿ ಚರ್ಯೆಯನ್ನು ಅನುಸರಿಸುವವರಾಗಿರಬೇಕು.
ಕುರ್‍ಆನ್ ಹೇಳುತ್ತದೆ, “ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಆಜ್ಞಾಪಾಲನೆ ಮಾಡಿರಿ, ಸಂದೇಶವಾಹಕರ ಮತ್ತು ನಿಮ್ಮೊಳಗಿನ ‘ಉಲುಲ್ ಅಮ್ರ್’ರ (ಆಜ್ಞಾಧಿಕಾರ ಹೊಂದಿದವರ) ಆಜ್ಞಾಪಾಲನೆ ಮಾಡಿರಿ. ಅನಂತರ ನಿಮ್ಮೊಳಗೆ ಯಾವುದಾದರೊಂದು ವಿಷಯದಲ್ಲಿ ವಿವಾದವುಂಟಾದರೆ ನೀವು ನಿಜಕ್ಕೂ ಅಲ್ಲಾಹನ ಮತ್ತು ಅಂತಿಮ ದಿವಸದ ಮೇಲೆ ವಿಶ್ವಾಸವಿರಿಸುತ್ತೀರಾದರೆ ಆ ವಿವಾದವನ್ನು ಅಲ್ಲಾಹ್ ಮತ್ತು ಸಂದೇಶವಾಹಕರ ಕಡೆಗೆ ತಿರುಗಿಸಿರಿ. ಇದುವೇ ಅತ್ಯಂತ ಸರಿಯಾದ ಕರ್ಮ ವಿಧಾನ. ಇದು ಪರಿಣಾಮದ ದೃಷ್ಟಿಯಿಂದಲೂ ಉತ್ತಮವಾಗಿದೆ” (ಅನ್ನಿಸಾ 59)
ಅಲ್ಲಾಹನು ಯಾರಿಗೆ ನಾಯಕತ್ವ ನೀಡಿದ್ದಾನೆ. ಅವರೊಂದಿಗೆ ಹಲವು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ಮನುಷ್ಯರು ಇರುವಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಅದು ಬಂದೇ ಬರುತ್ತದೆ ಎಂಬ ನಿಟ್ಟಿನಲ್ಲಿ ಅಲ್ಲಾಹನು ಇಲ್ಲಿ ಅದನ್ನು ಪ್ರಸ್ತಾಪಿಸಿದ್ದಾನೆ. ಇಂತಹ ಭಿನ್ನಾಭಿಪ್ರಾಯಗಳು ಎದುರಾದರೆ ನೀವು 4 ತುಂಡುಗಳಾಗಿ ಹರಿಹಂಚಾಗಿ ಹೋಗುವುದಲ್ಲ. ನಿಮ್ಮ ಅಹಂಕಾರ, ಸ್ವಾರ್ಥ, ದರ್ಪದ ಹಿಂದೆ ಓಡುವುದಲ್ಲ. ಇತರರನ್ನು ಸೇರಿಸಲು, ಮೂಲೆಗುಂಪು ಮಾಡಲು ಯೋಜನೆ ರೂಪಿಸುವುದೂ ಅಲ್ಲ. ಬದಲಾಗಿ ನೀವು ಅಲ್ಲಾಹ್ ಮತ್ತು ಸಂದೇಶವಾಹಕರೆಡೆಗೆ ನಿಮ್ಮ ವಿವಾದಗಳನ್ನು ತಿರುಗಿಸಿ ಆಗ ಮಾತ್ರ ನೀವು ಅವನನ್ನು ನಂಬುತ್ತೀರಿ ಮತ್ತು ವಿಚಾರಣೆಯ ದಿನವನ್ನು ನಂಬುತ್ತೀರಿ ಎಂಬುದನ್ನು ಪ್ರಾಯೋಗಿಕವಾಗಿ ಸಾಕ್ಷ್ಯ ವಹಿಸುತ್ತೀರಿ. ಇವರಿಂದಲೇ ಉತ್ತಮ ಒಳಿತು ಮತ್ತು ಪರಿಣಾಮ ಸಾಧ್ಯ ಎಂದು ಅಲ್ಲಾಹನು ಉಪದೇಶ ಮಾಡುತ್ತಾನೆ. ಯಾಕೆಂದರೆ ಶೈತಾನನ ಉಪಟಳವು ಪ್ರತಿಯೊಬ್ಬ ಮನುಷ್ಯನ ಹಿಂದೆ ದಿನರಾತ್ರೆಯೆಂಬಂತೆ ಬೆಂಬತ್ತುತ್ತದೆ. ಅದು ಮನುಷ್ಯನನ್ನು ಕವನದಲ್ಲಿ ಹೇಳಿದಂತೆ ಆಲಸ್ಯನಾಗಿ, ನಿರಾಶಾವಾದಿಯಾಗಿ ಮಾಡಿ ಬಿಡುತ್ತದೆ.
ನಾಯಕರ ಅನುಸರಣೆಯ ಬಗ್ಗೆ ಹೇಗೆ ಕುರ್‍ಆನ್ ತಾಕೀತು ಮಾಡಿದೆಯೋ ಹಾಗೆಯೇ ನಾಯಕರೂ ತಮ್ಮ ಕರ್ತವ್ಯವನ್ನು ಮರೆಯಬಾರದು. ಹೆಚ್ಚಾಗಿ ಅನುಯಾಯಿಗಳ ಕುಂದುಕೊರತೆಯ ಬಗ್ಗೆ ನಾಯಕರು ಪ್ರಸ್ತಾಪಿಸುತ್ತಾರೆ. ಅವರ ವಿರುದ್ಧ ಒಂದು ವಿಮರ್ಶೆಯನ್ನು ಕೇಳಲು ತಯಾರಿರುವುದಿಲ್ಲ. ಯಾರಾದರೂ ವಿಮರ್ಶೆ ಮಾಡಿದರೆ ಕುರ್‍ಆನ್ ವಚನ, ಪ್ರವಾದಿ ವಚನವನ್ನು ಹೇಳುತ್ತಾರೆ ಮತ್ತು ನೆನಪಿಸುತ್ತಾರೆ.
ಆದರೆ ಇಸ್ಲಾಮ್ ಜ್ಞಾನ ಮತ್ತು ಗೌರವವನ್ನು ಬೇರೆ ಬೇರೆ ಕಡೆ ನಿಲ್ಲಿಸುತ್ತದೆ. ಅದನ್ನು ಕುರ್‍ಆನ್ ಮಗ ಮತ್ತು ತಾಯಿಯ ಉದಾಹರಣೆ ನೀಡಿ ಗೌರವಿಸಿದೆ. ಅವರು ಮತ್ತು ನಿಮ್ಮ ಮಧ್ಯೆ ದೊಡ್ಡ  ಪೀಳಿಗೆಯ ಅಂತರವಿದೆ. ವಿವೇಚನೆ, ವೈಚಾರಿಕತೆಯ ಅಂತರವಿದೆ. ಎಲ್ಲಿಯ ವರೆಗೆಂದರೆ ಅವರು ಶಿರ್ಕ್ ಮಾಡಲು ಹೇಳಬಹುದು. ಅಲ್ಲಿ ಜ್ಞಾನದ ಸತ್ಯದ ಆಧಾರದಲ್ಲಿ ಅವರನ್ನು ನಿರಾಕರಿಸಬಹುದು. ಆದರೆ ಭೂಮಿಯಲ್ಲಿ ಅವರೊಂದಿಗೆ ಅತ್ಯಂತ ಹೆಚ್ಚು ಗೌರವಯುತವಾಗಿ ನಡೆಯಲು ಕರೆ ಕೊಡುತ್ತದೆ. ಇದುವೇ ಭಿನ್ನಾಭಿಪ್ರಾಯಗಳ ಮೌಲ್ಯ ಮತ್ತು ಧೋರಣೆಯಾಗಿದೆ.
ನಾಯಕರು- ಅನುಯಾಯಿಗಳ ಮಧ್ಯೆ ಇದುವೇ ಸಂಬಂಧವನ್ನು ಕಾಯ್ದುಕೊಳ್ಳಬೇಕಾಗಿದೆ. ಆದ್ದರಿಂದಲೇ ಓರ್ವ ಸಾಮಾನ್ಯ ಮಹಿಳೆ ಖಲೀಫಾ ಉಮರ್‍ರನ್ನು(ರ) ಸಾರ್ವಜನಿಕವಾಗಿ ಪ್ರಶ್ನಿಸುತ್ತಾರೆ. ಇಮಾಮ್ ಶಾಫಿಈ ತನ್ನ ಗುರುವಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಹಲವಾರು ನಿರ್ಣಯಗಳನ್ನು ಕೈಗೊಳ್ಳುತ್ತಾರೆ. ಇದೆಲ್ಲವೂ ಜ್ಞಾನದ ಆಧಾರದಲ್ಲಿ. ಆದರೆ ಎಲ್ಲಿ ಗೌರವದ ವಿಷಯ ಬರುತ್ತದೋ ಅವರು ಅಪ್ರತಿಮ ಗೌರವ ತೋರಿಸಿದರು. ಈ ನಿಟ್ಟಿನಲ್ಲಿ ಜ್ಞಾನ ಮತ್ತು ಗೌರವವನ್ನು ಭಿನ್ನ ಭಿನ್ನವಾಗಿ ಕಾಣಲು ಸಾಧ್ಯವಾಗಬೇಕು. ಅದಕ್ಕೆ ನಾಯಕತ್ವ ಸ್ಥಾನಕ್ಕೆ ಅಲ್ಲಾಹನಿಂದ ಆಯ್ಕೆಯಾದವರು ಕುರ್‍ಆನಿನ ಮಾರ್ಗದರ್ಶನವನ್ನು ಹೆಚ್ಚು ಜೀವನದಲ್ಲಿ ಅಳವಡಿಸಬೇಕು.
“ಓ ಪೈಗಂಬರರೇ, ನೀವು ಇವರ ಪಾಲಿಗೆ ಅತ್ಯಂತ ಸೌಮ್ಯ ಸ್ವಭಾವಿಯಾಗಿರುವುದು ಅಲ್ಲಾಹನ ಮಹಾ ಕೃಪೆಯಾಗಿದೆ. ನೀವು ಕಠಿಣ ಸ್ವಭಾವಿ ಮತ್ತು ಕಲ್ಲೆದೆಯವರಾಗಿರುತ್ತಿದ್ದರೆ ಇವರೆಲ್ಲರೂ ನಿಮ್ಮ ಸುತ್ತಮುತ್ತಲಿನಿಂದ ಚದರಿ ಹೋಗುತ್ತಿದ್ದರು. ಇವರ ಪ್ರಮಾದಗಳನ್ನು ಕ್ಷಮಿಸಿರಿ, ಇವರ ಪಾಪ ವಿಮೋಚನೆಗಾಗಿ ಪ್ರಾರ್ಥಿಸಿರಿ ಮತ್ತು ಧರ್ಮದ ಕೆಲಸಗಳಲ್ಲಿ ಇವರೊಡನೆ ಸಮಾಲೋಚಿಸಿರಿ. ಆ ಬಳಿಕ, ಯಾವುದಾದರೊಂದು ಅಭಿಪ್ರಾಯದಲ್ಲಿ ನೀವು ದೃಢ ನಿರ್ಧಾರ ತಾಳಿದರೆ ಅಲ್ಲಾಹನ ಮೇಲೆ ಭರವಸೆಯಿಡಿರಿ. ಅಲ್ಲಾಹನ ಮೇಲೆಯೇ ಭರವಸೆಯಿಟ್ಟು ಕಾರ್ಯವೆಸಗುವವರನ್ನು ಅವನು ಪ್ರೀತಿಸುತ್ತಾನೆ.”
(ಆಲಿ ಇಮ್ರಾನ್: 159)
1) ಇಲ್ಲಿ ನಾಯಕತ್ವದ ಸ್ವಭಾವದಲ್ಲಿ ಸೌಮ್ಯತೆಗೆ ಬಹಳ ನಿರ್ಣಾಯಕ ಪಾತ್ರವಿರುತ್ತದೆ. ಸಕಾರಾತ್ಮಕ ಚಿಂತನೆ, ವಿಶ್ವಾಸ, ಸಹೃದಯತೆ, ಪ್ರೋತ್ಸಾಹನೀಯ ಕೆಲಸಗಳ ಶ್ಲಾಘನೆ ಎಲ್ಲವೂ ಸೌಮ್ಯ ಸ್ವಭಾವದ ಗುಣ ಲಕ್ಷಣಗಳಾಗಿವೆ. ಸೌಮ್ಯ ಸ್ವಭಾವ ಎಂದರೆ ಸಂಪೂರ್ಣ ಸಪ್ಪೆಯಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳದಿರುವುದರ ಲಕ್ಷಣವಲ್ಲ. ಬದಲಾಗಿ ಪರಿಸ್ಥಿತಿಯನ್ನು ಸಹನೆ, ಸ್ಥೆರ್ಯ, ಶಾಂತಿ ಮತ್ತು ಯುಕ್ತಿಯ ಮೂಲಕ ನಿಯಂತ್ರಣಕ್ಕೆ ತರುವುದಾಗಿದೆ. ಯಾವ ಸಮಸ್ಯೆ ಎದುರಾದಾರೂ ಆ ನಾಯಕನ ಬಳಿ ಸಂಗಾತಿಗಳು ಹೋಗಬೇಕು. ಆ ವಿಶ್ವಾಸ ನಾಯಕನಾದವನು ಬೆಳೆಸಿದರೆ ಅವನಿಂದ ಜನರು ಚದುರಿ ಹೋಗಲಾರರು.
2) ಜನರ ಪ್ರಮಾದಗಳನ್ನು ಕ್ಷಮಿಸುವಂತಹ ನಿಷ್ಕಳಂಕ ಹೃದಯವಿರಬೇಕು. ಜನರು ಸೇರಿರುವ ಸಂಘ ಸಂಸ್ಥೆಗಳಲ್ಲಿ, ಸಂಘಟನೆಗಳಲ್ಲಿ ಪ್ರಮಾದಗಳು ಸಹಜ. ಅದನ್ನು ನಿಯಂತ್ರಣ ತಪ್ಪಿ ಬಯ್ಯುವುದು, ನಿಂದಿಸುವುದು ಸರಿಯಲ್ಲ. ಒಬ್ಬ ನಾಯಕ ಮತ್ತು ಮ್ಯಾನೇಜರ್‍ಗೆ ಇರುವ ವ್ಯತ್ಯಾಸ ಇದೇ ಆಗಿದೆ. ಮ್ಯಾನೇಜರ್ ಜನರ ಪ್ರಮಾದಗಳನ್ನು ಸಹಿಸಲಾರ. ಆದ್ದರಿಂದ ಅವನ ಭಯಕ್ಕೆ ಜನರು  ಕೆಲಸ ಮಾಡುವರು. ಅವರಲ್ಲಿ ಯಾವುದೇ ಸೃಜನಾತ್ಮಕತೆ ಉಂಟಾಗಲಾರದು. ಆದರೆ ನಾಯಕ ಹಾಗಲ್ಲ. ಅವನು ಜನರಿಗೆ ಸ್ವಾತಂತ್ರ್ಯವನ್ನು, ಮಾರ್ಗದರ್ಶನವನ್ನು, ಕ್ಷಮೆಯನ್ನು ನೀಡುತ್ತಾನೆ. ಇದರಲ್ಲಿ ಜನರಲ್ಲಿ ಸಾಧನೆ ಮಾಡುವ ಹಂಬಲ, ಮುಂದೆ ಬರಬೇಕೆಂಬ ಹುಮ್ಮಸ್ಸು ಉಂಟಾಗುತ್ತದೆ. ಕಬ್ಬಿಣ ಬಿಸಿಯಾಗಿರುವಾಗಲೇ ಅದಕ್ಕೆ ಆಕಾರ ಕೊಡಬೇಕು. ಇದು ನಾಯಕನ ಗುಣ ವಿಶೇಷತೆಯಾಗಿದೆ.
3) ಅವರ ಮೋಕ್ಷಕ್ಕಾಗಿ ಪ್ರಾರ್ಥಿಸುತ್ತಿರಬೇಕು. ಇದು ಪ್ರೀತಿ ಮತ್ತು ಕಾಳಜಿಯ ಸಂಕೇತವಾಗಿದೆ. ನಾಯಕನು ತನ್ನ ಕಾರ್ಯಕರ್ತರ ಸಣ್ಣ ಸಣ್ಣ ವಿಚಾರಗಳ ಬಗ್ಗೆ ಕೂಡಾ ಗಮನ ಕೇಂದ್ರೀಕರಿಸುತ್ತಾನೆ ಮತ್ತು ಅವರ ಏಳಿಗೆಗಾಗಿ ಅವರ ಮೋಕ್ಷಕ್ಕಾಗಿ ನಿರಂತರ ಚಿಂತನೆ ನಡೆಸುತ್ತಿರುತ್ತಾನೆ. ಇಂತಹ ನಾಯಕರಿಗೆ ಜನರು ಜೀವ ಬೇಕಾದರೂ ಕೊಡುತ್ತಾರೆ.
4) ಸಮಾಲೋಚನೆ ನಡೆಸುತ್ತಿರಬೇಕು  ನಿರಂಕುಶ ಮನಸ್ಥಿತಿ ಸಲಹೆ ಸೂಚನೆಗಳನ್ನು ಇಷ್ಟ ಪಡುವುದಿಲ್ಲ. ಅದರಿಂದ ತಮ್ಮ ಗೌರವಕ್ಕೆ ಚ್ಯುತಿ ಬರುತ್ತದೆ ಎಂದು ಭಾವಿಸುತ್ತಾರೆ. ಆದರೆ ಸಮಾಲೋಚನಾ ಪ್ರಕೃತಿಯು ಎಲ್ಲರ ವಿಶ್ವಾಸಕ್ಕೆ ಪಾತ್ರವಾಗುತ್ತದೆ. ಅಲ್ಲಾಹನು ಮಾನವನನ್ನು ಸೃಷ್ಟಿಸುವ ಮುಂಚೆಯೇ ಮಾನವನ ಕುರಿತು ಮಲಕ್ ಜಿನ್ನ್ ಗಳೊಂದಿಗೆ ಸಮಾಲೋಚನೆ ನಡೆಸಿರುವಾಗ ನಾಯಕನೆನಿಸಿಕೊಂಡವನು ಈ ಬಗ್ಗೆ ಹೆಚ್ಚು ಗಮನ ಕೊಡಬೇಕು.
ಲೇಖಕರು : ಅಬೂಕುತುಬ್

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *