ನಾಡಿನ ಗಲಭೆಗಳು ಮತ್ತು ಧಾರ್ಮಿಕ ವಿದ್ವಾಂಸರು

⏺ ನಮ್ಮ ಸಮಾಜದಲ್ಲಿ ಅತ್ಯಧಿಕ ಹಿಂಸೆ-ಗಲಭೆ-ಕೊಲೆಪಾತಕಗಳು ನಡೆಯುತ್ತಿರುವುದು ಧರ್ಮ ಮತ್ತು ದೇವರ ಹೆಸರಲ್ಲಾಗಿದೆ.
ಓಟಿಗಾಗಿ ಜನರ ಭಾವನೆಗಳನ್ನು ಕೆರಳಿಸಿ ಮೆಟ್ಟಿಲುಗಳನ್ನಾಗಿಸಿದರೆ, ಗದ್ದುಗೆಯನ್ನೇರುವುದು ಬಹು ಸುಲಭವೆಂಬುವುದು ಇಲ್ಲಿನ ರಾಜಕೀಯ ಲೆಕ್ಕಾಚಾರ.
ಆದ್ದರಿಂದಲೇ ಅವರು ಬ್ರಿಟಿಷರಿಂದ ಎರವಲು ಪಡೆದ ಒಡೆದು ಆಳುವ ತಂತ್ರವನ್ನು ಪ್ರಯೋಗಿಸುತ್ತಾರೆ.
ಮನುಷ್ಯ-ಮನುಷ್ಯರ ಮಧ್ಯೆ ವಿದ್ವೇಷದ ವಿಷ ಬೀಜವನ್ನು ಬಿತ್ತುತ್ತಲೇ, ರಕ್ತದೊಂದಿಗೆ ಚೆಲ್ಲಾಡುತ್ತಾರೆ.
ಸ್ವಂತ ಮನೆಯ ಜವಾಬ್ದಾರಿಕೆಯನ್ನೂ ಕೈಗೆತ್ತಿಕೊಳ್ಳದ, ಕೆಲವು ಚಿಗುರು ಮೀಸೆಯ ಯುವಕರನ್ನು ಗೂಂಡಾಗಿರಿಗೆ ಪ್ರಚೋದಿಸುತ್ತಾ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾರೆ. ಅದಕ್ಕಾಗಿ ಅಲ್ಲಲ್ಲಿ ಗಲಭೆ, ಹಿಂಸೆ, ದೊಂಬಿ, ರಕ್ತಪಾತಗಳನ್ನು ಹರಿಸುತ್ತಾರೆ.
ಪಾಪ! ಯಾವ ತಪ್ಪೂ ಮಾಡದ ದಿನಗೂಲಿ ಕಾರ್ಮಿಕರೂ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಲೇ ಹುತಾತ್ಮರಾಗುತ್ತಾರೆ.

ಹೌದು! ನಮ್ಮದು ಧರ್ಮ ಮತ್ತು ದೇವನನ್ನು ನಂಬುವ ಆಸ್ತಿಕ ರಾಷ್ಟ್ರ. ಇದು ಸಾಧು-ಸಂತರು, ಪುಣ್ಯ ಪುರುಷರು, ಋಷಿಮುನಿಗಳು ನಡೆದಾಡಿದ ಭೂಮಿ.
ನೆನಪಿಡಿ! ದೇವನ ಶಿಕ್ಷೆ-ಕ್ರೋಧದಿಂದ ಪಾರಾಗಲು ನಮ್ಮ ರಟ್ಟೆ ಬಲ, ತಲವಾರು ಅಥವಾ ರಾಜಕೀಯ ಶಕ್ತಿ ಸಾಲದು. ದೇವನ ಕ್ರೋಧ ಅಷ್ಟಕ್ಕೂ ನಮ್ಮನ್ನಾವರಿಸಿ ಕೊಂಡಿರುವುದು. ಆದ್ದರಿಂದ ಅನ್ಯಾಯ ಮತ್ತು ಕ್ರೌರ್ಯವನ್ನು ಎಷ್ಟು ಮಾತ್ರಕ್ಕೂ ಸಹಿಸಲಾಗದು. ಯಾರು ನಮಗೆ ಗಲಭೆ ಹರಡಲು ಮತ್ತು ತಲವಾರು ಬೀಸಲು ಪ್ರಚೋದಿಸುವರೋ ಅವರ ಮಕ್ಕಳಂತೂ ದೂರದ ಪ್ರತಿಷ್ಟಿತ ಕಾಲೇಜಲ್ಲಿ ಡಾಕ್ಟರ್‌, ಇಂಜಿನಿಯರ್ ಹಾಗೂ ಉನ್ನತ ಪದವಿಗಳಿಸುತ್ತಿರುವರು. ಹೌದು! ಅವರ ಮಕ್ಕಳು ತಲವಾರು ಬೀಸಲೂ ಇಲ್ಲ, ಜೈಲಿಗೆ ಹೋಗಲೂ ಇಲ್ಲ. ಆದ್ದರಿಂದ ಈ ನಾಡಿನ ಸರ್ವ ಧರ್ಮೀಯರೊಂದಿಗೆ ನನ್ನ ಭಿನ್ನಹ ಇಷ್ಟೇ: ಯಾರ್ಯಾರ ಸುಳ್ಳುಗಳಿಗೆ ಆವೇಶಕ್ಕೊಳಗಾಗಿ ಮತ್ತು ಚಿಲ್ಲರೆ ಹಣಕ್ಕಾಗಿ ಮತ್ತೊಬ್ಬರ ಬದುಕನ್ನು ಹಾಳು ಮಾಡಿ ಶಪಿಸಲ್ಪಡದಿರಿ.
ಇಲ್ಲಿ ರಾಜಕೀಯ ಧ್ರುವೀಕರಣ ಮತ್ತು ಧರ್ಮದ ಹೆಸರಲ್ಲಿ ರಾಜಕೀಯ ಚದುರಂಗದಾಟ ನಡೆಯುತ್ತಿದೆ. ನಾವಂತೂ ಅದರ ಬಲಿಪಶುಗಳಾಗಬಾರದು. ವಿಶೇಷವಾಗಿ, ಸರ್ವ ಧರ್ಮೀಯ ವಿದ್ವಾಂಸರು ಇನ್ನಾದರೂ ಮೌನ ಮುರಿಯಬೇಕು. ಪರಮತ ದ್ವೇಷಿಗಳು, ಗೂಂಡಾಗಳು ಮತ್ತು ಲೂಟಿಕೋರರು ಧರ್ಮಗಳನ್ನು ಹೈಜಾಕ್‌ ಮಾಡುತ್ತಿರುವಾಗಲೂ ನಿದ್ರಿಸುತ್ತಿರುವಂತೆ ನಟಿಸುವುದು ಸರಿಯಲ್ಲ. ಈ ಸಮಾಜದಲ್ಲಿ ನಿಮ್ಮ ಮೇಲೆ ಬಹಳಷ್ಟು ಬಾಧ್ಯತೆಗಳಿವೆ‌ ಮತ್ತು ಹೊಣೆಗಾರಿಕೆಗಳಿವೆ. ಕೊಲೆಗಡುಕರ ಕೈಗಳಿಂದ ಧರ್ಮಗಳನ್ನು ಮತ್ತೆ ಕಿತ್ತೆಗೆದು ಅದರ ಪಾವಿತ್ರ್ಯತೆಗಳನ್ನು ಕಾಪಾಡಬೇಕು. ಮಾತ್ರವಲ್ಲ ಧರ್ಮದ ನೈಜ ಸಂದೇಶಗಳನ್ನು ಪಸರಿಸಿ, ಶಾಂತಿ-ಸಾಮರಸ್ಯ-ಸಹಬಾಳ್ವೆಯ ಉದಾತ್ತ ಆಶಯಗಳನ್ನು ಮನುಷ್ಯರ ಮಧ್ಯೆ ಬಿತ್ತಿ ಬೆಳೆಸಬೇಕು…..
ಎಲ್ಲರಿಗೂ ಒಳಿತನ್ನೇ ಬಯಸುವ ಉದಾರಮತಿಗಳಾಗೋಣ. ಇಲ್ಲಿ ಸಂವಿಧಾನವಿದೆ ಮತ್ತು ಕಾನೂನುಗಳಿವೆ. ಅದಕ್ಕೆ ಬದ್ಧರಾಗಿ ಬದುಕೋಣ!

*✍ಮುಹಮ್ಮದ್‌ ಸಿದ್ದೀಕ್‌, ಜಕ್ರಿಬೆಟ್ಟು*

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *