ತಂದೆ-ತಾಯಿ ಇದ್ದೂ ಮಗು ಅನಾಥವಾಗಬಾರದೇ…. ಇದನ್ನು ಸಂಪೂರ್ಣ ಓದಿ 

ಮನೆ ಅಸ್ತಿತ್ವಕ್ಕೆ ಬರುತ್ತದೆ. ಅದಕ್ಕೆ ನಾವು ಶಾಂತಿಧಾಮ, ಬೈತುಲ್ ಅಮನ್ ಮುಂತಾದ ಸುಂದರ ಹೆಸರು ಕೊಡುತ್ತೇವೆ. ಅದನ್ನು ಎಲ್ಲ ರೀತಿಯ ಸೌಂದರ್ಯಗಳಿಂದ ಸಜ್ಜುಗೊಳಿಸುತ್ತೇವೆ. ಈಗಿನ ಕಾಲದಲ್ಲಂತೂ ಇಂಟೀರಿಯರ್‍ಗಳನ್ನು ಹಾಕಿ ಇನ್ನಷ್ಟು ಸುಂದರಗೊಳಿಸಲಾಗುತ್ತದೆ. ಮನೆಯ ಕುರ್ಚಿ, ಟೇಬಲ್, ಮಂಚವನ್ನು ಶಿಸ್ತುಬದ್ಧವಾಗಿ ಇಡಲು ಪ್ರಯತ್ನಿಸುತ್ತೇವೆ. ಹಾಗೆಯೇ ಮನೆಯ ಕುಟುಂಬದಲ್ಲಿರುವ ಸಂಬಂಧಗಳನ್ನು ಈ ರೀತಿ ಶಿಸ್ತುಬದ್ಧವಾಗಿಡಲು ಇಸ್ಲಾಂ ಬಯಸುತ್ತದೆ.
ಮನೆ ಎಂಬುದು ಸಂತಾನ ಪೀಳಿಗೆಯನ್ನು ನಿರ್ಮಿಸುವ ಬೆಳೆಸುವ ಮತ್ತು ತರಬೇತಿಗೊಳಿಸುವ ಒಂದು ಪ್ರಾಥಮಿಕ ಸಂಸ್ಥೆಯಾಗಿದೆ, ಕೇಂದ್ರವಾಗಿದೆ.
 “ಅವನು ನಿಮ್ಮ ವರ್ಗದಿಂದಲೇ ನಿಮಗಾಗಿ ಜೊತೆಗಳನ್ನು ಸೃಷ್ಟಿಸಿದನು. ಹಾಗೆಯೇ ಪ್ರಾಣಿಗಳಲ್ಲೂ (ಅವುಗಳ ವರ್ಗದಿಂದ) ಜೋಡಿಗಳನ್ನು ಉಂಟು ಮಾಡಿದನು. ಈ ರೀತಿ ಅವನು ನಿಮ್ಮ ಸಂತತಿಗಳನ್ನು ಹಬ್ಬಿಸುತ್ತಾನೆ. (42: 11)
ಪ್ರಾಣಿಗಳೂ ತಮ್ಮ ಸಂತಾನ ಪೀಳಿಗೆಯನ್ನು ವೃದ್ಧಿಸುತ್ತವೆ. ಆದರೆ ಅವುಗಳಿಗೆ ಕುಟುಂಬ ಮನೆಯ ಅಸ್ತಿತ್ವವಿಲ್ಲ. ಶಿಸ್ತು ನಿಯಮಗಳು, ಉಡುಪು, ಲಜ್ಜೆ, ಗೌರವ ಎಂಬುದಿಲ್ಲ. ಸ್ವಲ್ಪ ಬೆಳೆದಂತೆ ತಾಯಿಯ ಒಡಹುಟ್ಟಿದವರ ಬಗ್ಗೆ ಲೈಂಗಿಕ ವ್ಯತ್ಯಾಸ ಕಂಡು ಬರುವುದಿಲ್ಲ. ಮನುಷ್ಯ ಮತ್ತು ಪ್ರಾಣಿಗಳ ಸಂತಾನ ಪೀಳಿಗೆಯ ವೃದ್ಧಿಯಲ್ಲಿ ಮೂಲಭೂತ ವ್ಯತ್ಯಾಸ ಅವುಗಳಲ್ಲಿ ಶಿಸ್ತು, ಮನೆ ಇಲ್ಲ ಎಂಬುದಲ್ಲ. ಬದಲಾಗಿ ಅವುಗಳು `ಸಂಬಂಧ’ವನ್ನೂ (ತಂದೆ-ತಾಯಿ-ಪತಿ, ಮಗಳು, ಮಗ, ಅಜ್ಜ-ಅಜ್ಜಿ) ಪರಿಗಣಿಸುವುದಿಲ್ಲ, ಗೌರವ ಕೊಡುವುದಿಲ್ಲ.
ಇಸ್ಲಾಮ್ ಈ ಸಂಬಂಧಗಳನ್ನು ಗಂಡು-ಹೆಣ್ಣು ಎಂಬ ಆಧಾರದಲ್ಲಿ ನೋಡುವುದಿಲ್ಲ. ಬದಲಾಗಿ ಸಂಬಂಧಗಳಿಗೆ ಸ್ಥಾನಮಾನ ಗೌರವ ನೀಡುವ ಮೂಲಕ ಅವುಗಳಿಗೆ ಮಾನ್ಯತೆ ನೀಡುತ್ತದೆ. ಪಾಶ್ಚಾತ್ಯ ಚಿಂತನೆ ಮತ್ತು ಇಸ್ಲಾಮಿಗಿರುವ ಪ್ರಾಥಮಿಕ ಸಂಘರ್ಷ ಇದೇ ಆಗಿದೆ. ಅವರು ಪತಿ-ಪತ್ನಿಯನ್ನು ಗಂಡು-ಹೆಣ್ಣು ಎಂಬ ದೃಷ್ಟಿಕೋನದಲ್ಲಿ ನೋಡುತ್ತಾರೆ. ಆದ್ದರಿಂದ ಯಾವುದೇ ಬೆಲೆ, ಗೌರವ, ಸ್ಥಾನಮಾನ ನೀಡುವ ಅಗತ್ಯವಿಲ್ಲ ಎಂದು ವಾದ ಮಂಡಿಸುವವರೂ ಇದ್ದಾರೆ.
ಇಸ್ಲಾಮ್ ಗಂಡು-ಹೆಣ್ಣು ಎಂದು ನೋಡದೆ ಅದನ್ನು ಸಂಬಂಧ (Relationship ) ಎಂಬ ನಿಟ್ಟಿನಲ್ಲಿ ಪರಿಗಣಿಸುತ್ತದೆ. ನನಗಿಂತ ಹತ್ತು ವರ್ಷ ಮುಂಚೆ ಹುಟ್ಟಿದ ನನ್ನ ಅಕ್ಕನಿಗೆ ಹೆಣ್ಣು ಎಂಬ ಆಧಾರದಲ್ಲಿ ಯಾವುದೇ ಶ್ರೇಷ್ಠತೆ ಇಲ್ಲ. ಅವಳು ನನಗಿಂತ ಹತ್ತು ವರ್ಷ ಮುಂಚೆ ಬಂದಿದ್ದಾಳೆ ಎಂಬುದಷ್ಟೇ. ಅವಳು ನನ್ನನ್ನು ಲಾಲಿಸಿ ಮುದ್ದಿಸಿರಬಹುದು. ಆದರೆ ನಾನು ಆಕೆಗೆ ಗೌರವ, ಹಕ್ಕು ನೀಡಬೇಕಾದ ಅಗತ್ಯವಿಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಮಕ್ಕಳು ವಯಸ್ಸಿಗೆ ಬಂದರೆ ತಂದೆ-ತಾಯಿಗಳಿಗೂ ಗೌರವ ಕೊಡದ ಪರಿಸ್ಥಿತಿ ಇದೆ. ನಾನು ವಯಸ್ಸಿಗೆ ಬಂದಿದ್ದೇನೆ. ಇನ್ನು ನಿಮ್ಮ ಅವಶ್ಯಕತೆಯಿಲ್ಲ ಎಂಬ ವಾದ ಮಂಡಿಸಲಾಗುತ್ತದೆ. ಇದು ಅರ್ಧ ಮಾನವ ಪರಿಕಲ್ಪನೆ(ಯುವತ್ವದಲ್ಲಿ ಜೀವನವನ್ನು ನೋಡುವ)ಯನ್ನು ಮಂಡಿಸುವ ಚಿಂತನೆಯಿಂದ ಮಾತ್ರ ಸಾಧ್ಯ. ಪೂರ್ಣ ಮಾನವ ಪರಿಕಲ್ಪನೆಯನ್ನು ಮಂಡಿಸುವ ಇಸ್ಲಾಂ ಧರ್ಮ ಅಕ್ಕನಿಗೆ `ಅಕ್ಕ’ ಎಂಬ ಗೌರವ ಕೊಡಲು, ತಾಯಿಗೆ ತಾಯಿ ಎಂಬ, ತಂದೆಗೆ ತಂದೆ ಎಂಬ, ಪತ್ನಿಗೆ ಪತ್ನಿ ಎಂಬ, ಪತಿಗೆ ಪತಿ ಎಂಬ ಗೌರವ ಕೊಡಲು ಆದೇಶಿಸುತ್ತದೆ.
ಉದಾ: ನನ್ನ ಅಕ್ಕ ನನಗೆ ಒಂದು ಪೆಟ್ಟು ಕೊಟ್ಟಿದ್ದರೆ ಅದನ್ನು ನಾನು ಹೆಣ್ಣು ಎಂದು ನೋಡಿದರೆ ನನಗೆ ಆಕೆಗೆ ತಿರುಗಿ ಹಲ್ಲೆ ಮಾಡಬಹುದು. ಆದರೆ ಅಕ್ಕ ಎಂದು ನೋಡುವಾಗ ನನ್ನ ತಪ್ಪಿದ್ದರೂ ನಾನು ಅದನ್ನು ಸಹಿಸಬೇಕಾಗುತ್ತದೆ. ಗೌರವ ಕೊಡಬೇಕಾತ್ತದೆ. ನಿನ್ನ ತಾಯಿ ನಿನಗೆ ಬುದ್ಧಿ ಹೇಳಲು ಹೊರಟರೆ ಹೆಣ್ಣು ಎಂಬ ನೆಲೆಯಲ್ಲಿ ಅವರು ನಿನಗೆ ಬುದ್ಧಿ ಹೇಳಲು ಯಾರು? ಆದರೆ ತಾಯಿ ಎಂಬ ನೆಲೆಯಲ್ಲಿ ನಿನಗೆ ಅವರು ಬುದ್ಧಿ ಹೇಳಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಆದ್ದರಿಂದ ಮನೆಯಲ್ಲಿ ತಂದೆ ತಂದೆಯಾಗಿರಬೇಕು. ತಾಯಿ ತಾಯಿಯಾಗಿರಬೇಕು. ಅಕ್ಕ ಅಕ್ಕನಾಗಿರಬೇಕು, ಅಣ್ಣ ಅಣ್ಣನಾಗಿರಬೇಕು. ಅಜ್ಜ-ಅಜ್ಜ- ಅಜ್ಜಿ ಅಜ್ಜಿಯಾಗಿರಬೇಕು. ಹಾಗೆಯ ಪತಿ ಪತಿಯಾಗಿರಬೇಕು. ಪತ್ನಿ ಪತ್ನಿಯಾಗಿರಬೇಕು.
ಹೇಗೆ ಮನೆಯಲ್ಲಿ ವಸ್ತುಗಳನ್ನು ನಾವು ಶಿಸ್ತುಬದ್ಧವಾಗಿ ಇಡುತ್ತೇವೆಯೋ ಅದಕ್ಕಿಂತಲೂ ಮಿಗಿಲಾಗಿ ಇಸ್ಲಾಮ್ ಈ ಸಂಬಂಧಗಳ ಸುದೃಢತೆಗೆ ಹೆಚ್ಚು ಒತ್ತು ಕೊಡುತ್ತದೆ. ಈ ಸಂಬಂಧಗಳು ಸರಿಯಾಗಿದ್ದರೆ ಮನೆ ಎಂಬ ಸಂಸ್ಥೆ ಸರಿಯಾಗಿರುತ್ತದೆ. ಛಿದ್ರ ಛಿದ್ರಗೊಳ್ಳುವುದರಿಂದ ರಕ್ಷಿಸಲ್ಪಡುತ್ತದೆ. ಪಾಶ್ಚಾತ್ಯ ಮತ್ತು ಆಧುನಿಕ ಕಾಲದಲ್ಲಿ ವೃದ್ಧಾಶ್ರಮಗಳ ಹೆಚ್ಚಳ, ವಿವಾಹ ವಿಚ್ಛೇದನ ಹೆಚ್ಚಳ, ಆತ್ಮಹತ್ಯೆ ಮುಂತಾದವುಗಳಿಗೆ ಕೌಟುಂಬಿಕ ಕಲಹ, ಒತ್ತಡ ಭಾರ (Family Problems, Stress, Pressure) ಮುಂತಾದವುಗಳು ಕಾರಣ ಎಂದು ಬಹಳ ಸವಿೂಕ್ಷೆಗಳು ತಿಳಿಸಿದರೆ ಅದರ ಮೂಲ ಕಾರಣ (Root cause ) ಈ ಸಂಬಂಧಗಳಿಗೆ ಬೆಲೆ ಇಲ್ಲದಾಗಿರುವುದಾಗಿದೆ. ಪತಿಯನ್ನು ಪತಿಯೆಂದು ಪರಿಗಣಿಸುವುದಿಲ್ಲ. ಪತ್ನಿಯನ್ನು ಪತ್ನಿಯೆಂದು ಪರಿಗಣಿಸುವುದಿಲ್ಲ.
ತಂದೆಯಾದವರಿಗೆ ಗಂಡು-ಹೆಣ್ಣು ಎಂಬ ಭೇದವೆನ್ನದೆ ಸಮಾನವಾಗಿ ಶಿಕ್ಷಣ ನೀಡುವ ತರಬೇತಿ ನೀಡುವ ಜವಾಬ್ದಾರಿ ಇದೆ. ಅದನ್ನು ಪ್ರವಾದಿ(ಸ) ಮಕ್ಕಳಿಗೆ ನೀಡುವ ಅತ್ಯುತ್ತಮ ಉಡುಗೊರೆ ಎಂದು ಪರಿಗಣಿಸಿದ್ದಾರೆ.
ಮಗುವಿಗೆ ಎದೆಹಾಲು, ಬಿಸಿ ಅಪ್ಪುಗೆ, ಆರೈಕೆ, ಮಾನಸಿಕ, ನೈತಿಕ, ಆಧ್ಯಾತ್ಮಿಕ ಲಾಲನೆ ಪೋಷಣೆ ನೀಡುವ ಜವಾಬ್ದಾರಿ ತಾಯಿಯ ಮೇಲಿದೆ. ಅದು ಪ್ರಕೃತಿದತ್ತವೂ ಆಗಿದೆ. ಮಕ್ಕಳ ಜೊತೆ ಅವರ ಹುಟ್ಟಿನಿಂದ ಹಿಡಿದು ಸುಮಾರು ಎದ್ದು ನಡೆದಾಡುವಷ್ಟು ಕಾಲ ಕಡಿಮೆ ಪಕ್ಷ `ತಾಯಿ’ ಅವರ ಜೊತೆ ಇರಬೇಕು ಎಂದು ಅಧ್ಯಯನಗಳು ಹೇಳುತ್ತವೆ ಮತ್ತು ನಮ್ಮ ಮನಸ್ಸೂ ಅದನ್ನು ನುಡಿಯುತ್ತದೆ. ‘ತಾರೆ ಝವಿೂನ್ ಪರ್’ ಎಂಬ ಚಲನಚಿತ್ರ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಹುಡುಗನ ತಾಯಿ ಅತ್ತು ಹೇಳುವ ಮಾತುಂಟು “ಈ ಮಕ್ಕಳಿಗಾಗಿ ನಾನು ನನ್ನ ವೃತ್ತಿ, ಜೀವನೋಪಾಯ (career ) ಎಲ್ಲವನ್ನೂ ತ್ಯಾಗ ಮಾಡಿದ್ದೇನೆ.” ಆದ್ದರಿಂದಲೇ ಇಸ್ಲಾಮ್ ತಾಯಿಗೆ ತಂದೆಗಿಂತ ಮೂರುಪಟ್ಟು ಹೆಚ್ಚು ಸ್ಥಾನಮಾನ ನೀಡಬೇಕು ಎಂದು ಹೇಳಿದೆ. ಅದು ತಂದೆ ಗಂಡು ತಾಯಿ ಹೆಣ್ಣು ಎಂಬ ಕಾರಣಕ್ಕಾಗಿ ಅಲ್ಲ. ತಾಯಿ `ತಾಯಿ’ ಎಂಬ ನೆಲೆಯಲ್ಲಿ ಆಕೆ ಮಾಡಿದ ತ್ಯಾಗ, ನೀಡಿದ ಬಲಿದಾನ, ಕೊಡುಗೆಯ ಕಾರಣವಾಗಿದೆ. ಈ ತ್ಯಾಗದ ಮಟ್ಟದಲ್ಲಿ ಯಾವ ತಂದೆಗೆ ಅಥವಾ ಯಾವ ಪುರುಷನಿಗೆ ತಾಯಿಯೊಂದಿಗೆ ಒಂದಿಷ್ಟೂ ಸ್ಪರ್ಧಿಸಲು ಸಾಧ್ಯವಿಲ್ಲ.
ಇದನ್ನೇ ಮುಂದಿಟ್ಟು ಹೆಣ್ಣು ತನ್ನ ವೃತ್ತಿ, ಜೀವನೋಪಾಯ, ಶಿಕ್ಷಣ, ಕಲೆ, ಪ್ರತಿಭೆ ಎಲ್ಲವನ್ನು ಮನೆಯೊಳಗೆ ಸೀಮಿತಗೊಳಿಸಿ ಆಕೆಯ ಹಕ್ಕನ್ನು ಮೊಟಕುಗೊಳಿಸುವ ಸಮಾಜವೂ ನಮ್ಮ ಮುಂದೆ ಇದೆ. ತಾಯ್ತತನವನ್ನು ಆಕೆಯ ಹಕ್ಕನ್ನು ಕಸಿಯುವ ಲೈಸೆನ್ಸ್ ಎಂದು ತಪ್ಪು ಭಾವಿಸಲಾಗಿದೆ. ಇಂತಹ ಪ್ರಕ್ರಿಯೆಯನ್ನು ಇಸ್ಲಾಮ್ ವಿರೋಧಿಸುತ್ತದೆ ಮತ್ತು ಅದರಲ್ಲಿ ಒಂದು ಮಧ್ಯಮ ನಿಲುವನ್ನು ಬಿಂಬಿಸುತ್ತದೆ. ಹೆಣ್ಣಿಗೆ ಓರ್ವ ಮಗಳಾಗಿ ಮಗನಿಗೆ ನೀಡುವ ಎಲ್ಲ ಶಿಕ್ಷಣವನ್ನು ತರಬೇತಿಯನ್ನು ಹಕ್ಕನ್ನು ನ್ಯಾಯ ಸಮ್ಮತವಾಗಿ ನೀಡಬೇಕು. ಆದರೆ ಆಕೆ `ತಾಯಿ’ ಎಂಬ ಸ್ಥಾನಕ್ಕೇರುವಾಗ ತನ್ನ ತಾಯ್ತನವನ್ನು ಮರೆತು ಬಿಡಬಾರದು. ತಾಯ್ತನವನ್ನು ಮರೆಯುವಂತಹ ಸಮಾಜದಲ್ಲಿ ವೃದ್ಧಾಶ್ರಮಗಳೇ ಹೆಚ್ಚಾಗುತ್ತಿದೆ. ಯಾಕೆಂದರೆ ಮನುಷ್ಯನ ಮಗು ಭೂಮಿಗೆ ಬರುವುದು ಆಡಿನ ಮರಿಯಂತೆ ಅಲ್ಲ. ಆನೆ ಮರಿಯಂತೆ ಎದ್ದು ಓಡಲು ಪ್ರಾರಂಭಿಸುವುದಿಲ್ಲ. ಮನುಷ್ಯನ ಮಗು ಬಹಳ ದುರ್ಬಲಾವಸ್ಥೆಯ ಘಟ್ಟವನ್ನು ದಾಟಿ ಮುಂದೆ ಆರು ಏಳು ವರ್ಷಕ್ಕಾಗುವಾಗ ಸ್ವಲ್ಪ ಮಟ್ಟಿನ ಗಟ್ಟಿತನವನ್ನು ಪಡೆದುಕೊಳ್ಳುತ್ತದೆ. ಅಲ್ಲಿ `ತಾಯಿ’ಯ ಪಾತ್ರ ಬಹಳ ಗಮನೀಯವಾಗಿರುತ್ತದೆ ಅಲ್ಲಿ ಗಂಡು-ಹೆಣ್ಣಿನ ಸ್ಥಾನದ ಬಗ್ಗೆ ಚರ್ಚೆ ಮಾಡಿ ಗಲಾಟೆ, ವಾದ-ಪ್ರತಿವಾದ ಮಾಡಿದರೆ ಮಗು ಅನಾಥವಾಗುವುದರಲ್ಲಿ ಸಂಶಯವಿಲ್ಲ.
ಲೇಖಕರು : ಅಬೂಕುತುಬ್

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *