ಕುಟುಂಬವನ್ನು ತೊರೆದವನು ನಾಶವಾದನು

ಜೀವನದಲ್ಲಿ ಪತಿ-ಪತ್ನಿಯ ಸಂಬಂಧ ಹುಟ್ಟಿಕೊಳ್ಳುತ್ತದೆ. ಒಂದು ಮನೆ-ಕುಟುಂಬ ಅಸ್ತಿತ್ವಕ್ಕೆ ಬರುತ್ತದೆ. ಈ ಕುಟುಂಬದಿಂದ ಹೊಸ ಪೀಳಿಗೆಯ ಪ್ರಾರಂಭವಾಗುತ್ತದೆ. ಅದರಲ್ಲಿ ವಿವಿಧ ಸಂಬಂಧಗಳು ಅಸ್ತಿತ್ವಕ್ಕೆ ಬರುತ್ತವೆ. ತಂದೆ, ತಾಯಿ, ಅಕ್ಕ, ತಂಗಿ, ಅಣ್ಣ, ತಮ್ಮ, ಚಿಕ್ಕಪ್ಪ, ದೊಡ್ಡಪ್ಪ, ಅಜ್ಜ, ಅಜ್ಜಿ ಹೀಗೆ ವಿವಿಧ ಸಂಬಂಧಗಳು ಅಸ್ತಿತ್ವಕ್ಕೆ ಬರುತ್ತವೆ. ಇದರಿಂದಲೇ ಗೋತ್ರ, ಸಮಾಜ ಅಸ್ತಿತ್ವಕ್ಕೆ ಬರುತ್ತವೆ ಮತ್ತು ಅದು ಒಗ್ಗಟ್ಟಾದ ರಾಜ್ಯ – ರಾಷ್ಟ್ರವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಒಂದು ಗಂಡು-ಹೆಣ್ಣಿನ ಒಂದು ತೀರ್ಮಾನದಿಂದ ಈ ಎಲ್ಲವೂ ಅಸ್ತಿತ್ವವನ್ನು ಪಡೆದುಕೊಳ್ಳುತ್ತದೆ. ಅದು ಕೆಲವೊಂದು ಫಲಿತಾಂಶವನ್ನು ನೀಡುತ್ತದೆ.

ಈ ಲೋಕದಲ್ಲಿ ಈ ವಿಷಯವನ್ನು ಎರಡು ರೀತಿಯಲ್ಲಿ ನೋಡಲಾಗುತ್ತದೆ. ಒಂದು ವ್ಯಕ್ತಿಯ ಬಾಲ್ಯ, ಯೌವನ ಅಥವಾ ವೃದ್ಧಾಪ್ಯದಲ್ಲಿ ಯಾವುದಾದರೂ ಒಂದನ್ನು ನೋಡುವುದು. ಇನ್ನೊಂದು ಇಡೀ ‘ಸಂಪೂರ್ಣ ಮನುಷ್ಯ’ ಎಂಬ ನೆಲೆಯಲ್ಲಿ ಒಟ್ಟಾಗಿ ನೋಡುವುದಾಗಿದೆ.

ಮನುಷ್ಯ ಆಕಾಶದಿಂದ ಹಾರಿ ಭೂಮಿಗಿಳಿದು ಎದ್ದು ನಡೆಯಲು ತೊಡಗುವುದಿಲ್ಲ. ಬದಲಾಗಿ ಜೀವ ಇಲ್ಲದ ವಸ್ತುವಿನಿಂದ ಜೀವ ಪಡೆದು ದುರ್ಬಲಾವಸ್ಥೆಯ ಘಟ್ಟವನ್ನು ದಾಟಿ ಯೌವನಕ್ಕೆ ಕಾಲಿಡುತ್ತಾನೆ. ಅವನಿಗೆ ದುರ್ಬಲಾವಸ್ಥೆಯಲ್ಲಿ ಇತರರ ಕೈಗಳ, ಅಪ್ಪುಗೆಯ, ಪ್ರೀತಿಯ ಅವಶ್ಯಕತೆ ಇರುತ್ತದೆ. ತನ್ನ ಸಣ್ಣಪುಟ್ಟ ಅವಶ್ಯಕತೆಗಳಿಗಾಗಿ ಇತರರನ್ನು ಅವಲಂಬಿಸುವ ಪರಿಸ್ಥಿತಿ ಇರುತ್ತದೆ. ಬಾಲ್ಯದಲ್ಲೂ ನಿರ್ಧಾರ, ವಿವೇಚನೆ, ಚಿಂತನೆ, ಸಿದ್ಧಾಂತ ಇವುಗಳಿಂದ ಮುಕ್ತವಾದ ತುಂಟ ಜೀವನವನ್ನು ಸಾಗಿಸುತ್ತಾನೆ.

ಇನ್ನು ಮುಂದಿನ ಹತ್ತು ಹದಿನೈದು ವರ್ಷದ ಯೌವನಕ್ಕೆ ಕಾಲಿಟ್ಟಾಗ ಮನುಷ್ಯ ತಾನು ದೊಡ್ಡವನು, ಮಹಾನನು, ಎಲ್ಲವನ್ನೂ ಮಾಡಲು ಶಕ್ತನು ಎಂಬ ಭ್ರಮೆ, ತಪ್ಪುಕಲ್ಪನೆ ಅವನಲ್ಲಿ ಮೇಳೈಸುತ್ತದೆ. ಈ ತಪ್ಪುಕಲ್ಪನೆ ಮೇರೆಯನ್ನು ವಿೂರಿ ಅಹಂಕಾರದ ಮಟ್ಟಕ್ಕೆ ತಲಪಿದಾಗ ಅವನು ಬಯಸದೆ ಬಿಳಿಕೂದಲು ಮುಪ್ಪು ಆವರಿಸ ತೊಡಗುತ್ತದೆ. ನಂತರ ಕೊನೆಗೆ ಅದೇ ಹಿಂದಿನ ಮಗುವಿನ ದುರ್ಬಲಾವಸ್ಥೆಗೆ ಅವನು ತಲಪುತ್ತಾನೆ.

“ಕೆಲವರನ್ನು ಎಲ್ಲವನ್ನೂ ತಿಳಿದುಕೊಂಡ ಬಳಿಕ ಏನೂ ತಿಳಿಯದಂತಾಗಲು ಅತಿ ವೃದ್ಧಾಪ್ಯದೆಡೆಗೆ ತಿರುಗಿಸಿ ಬಿಡಲಾಗುತ್ತದೆ.” (ಅಲ್‍ಹಜ್ಜ್: 5) ಪವಿತ್ರ ಕುರ್‍ಆನ್ ಮನುಷ್ಯನ ಈ ಜೀವನದ ಘಟ್ಟವನ್ನು ಮತ್ತು ದುರ್ಬಲಾವಸ್ಥೆಯನ್ನು ಬಹಳ ಸುಂದರ ಭಾಷೆಯಲ್ಲಿ ಮನನ ಮಾಡಿಕೊಡುತ್ತದೆ. ಆದ್ದರಿಂದ ‘ಪೂರ್ತಿ ಮನುಷ್ಯ’ನ ನೈಜತೆ ಇದು ಆಗಿರುವಾಗ ಅವನಿಗಾಗಿ ರೂಪಿಸಲ್ಪಡಬೇಕಾದ ಸಮಾಜದಲ್ಲಿ “ಕುಟುಂಬ” ಬಹಳ ಮಹತ್ವವನ್ನು ಪಡೆದುಕೊಳ್ಳುತ್ತದೆ. ಅದರ ಅಡಿಪಾಯ ಕುಟುಂಬ ಆಗಿರಬೇಕು ಎಂಬುದರಲ್ಲಿ ಎರಡು ಮಾತಿಲ್ಲ.

ಇಲ್ಲಿಂದಲೇ ಇಸ್ಲಾಮ್ ಮತ್ತು ಪಾಶ್ಚಿಮಾತ್ಯ ಸಿದ್ಧಾಂತದ ಸಂಘರ್ಷ, ಅಭಿಪ್ರಾಯ ವ್ಯತ್ಯಾಸ ಭಿನ್ನತೆ ಪ್ರಾರಂಭವಾಗುತ್ತದೆ. ಪಾಶ್ಚಿಮಾತ್ಯ ಸಿದ್ಧಾಂತವು (orientalist) ಮನುಷ್ಯನನ್ನು ಯೌವನಾವಸ್ಥೆಯಲ್ಲಿ ನೋಡುತ್ತದೆ. ಅಳೆಯುತ್ತದೆ. ಇಸ್ಲಾಮ್ ಮನುಷ್ಯನನ್ನು ಪೂರ್ಣ ರೂಪದಲ್ಲಿ ಅಜೀವ ಹಂತದಿಂದ ಹಿಡಿದು ಬಾಲ್ಯಾವಸ್ಥೆ ಮತ್ತು ಯೌವನ, ವೃದ್ಧಾಪ್ಯ ಮತ್ತು ಮರಣದ ಬಾಗಿಲಿನವರೆಗೆ ನೋಡುತ್ತದೆ. ಆದ್ದರಿಂದ ತಂದೆ-ತಾಯಿ, ಅಜ್ಜ-ಅಜ್ಜಿ, ಮನೆ, ಸಂಬಂಧಗಳು ಅವನಿಗೆ ಅವಶ್ಯಕವಾಗಿ ಬೇಕು ಎಂದು ಭಾವಿಸಬೇಕಾಗುತ್ತದೆ. ತನಗೆ ಆಶ್ರಯವಾಗಿ ದುರ್ಬಲಾವಸ್ಥೆಯಲ್ಲಿ (ಬಾಲ್ಯ / ಮುಪ್ಪು) ಒಬ್ಬರು ಬೇಕು ಎಂದೆನಿಸುತ್ತದೆ. ಈ ಆಶ್ರಯವನ್ನು ಸರಕಾರ, ಸಂಘಟನೆ, ಸಮಾಜಕ್ಕೆ ನೀಡಲು ಸಾಧ್ಯವಿಲ್ಲ.

ತಂದೆ-ತಾಯಿಯಿಂದ ಮಕ್ಕಳಿಗೆ ಸಿಗುವ ಆರೈಕೆ ಪೋಷಣೆ ಮತ್ತು ಮಕ್ಕಳಿಂದ ವೃದ್ಧರಾದ ತಂದೆ-ತಾಯಿಗಳಿಗೆ ಸಿಗುವ ಆಶ್ರಯ ಯಾವುದೇ ಬೇಬಿ ಸಿಟ್ಟಿಂಗ್ – ವೃದ್ಧಾಶ್ರಮಕ್ಕೆ ನೀಡಲು ಸಾಧ್ಯವೇ? ಸರಕಾರ ಪಿಂಚಿಣಿ ನೀಡಬಹುದು. ಸಮಾಜವು ಭಾಷಣ, ಉಪದೇಶ ಮಾಡಬಹುದು. ಸಂಘಟನೆಗಳು ಹಣ್ಣು-ಹಂಪಲುಗಳನ್ನು ನೀಡಬಹುದು. ಆದ್ದರಿಂದ ಮನುಷ್ಯನ ಸಂಪೂರ್ಣ ಲಾಲನೆ ಪೋಷಣೆ, ಅವನ ಸಂಪೂರ್ಣ ಅಗತ್ಯತೆಗಳನ್ನು ಪೂರೈಸಲು, ಅವನ ಎಲ್ಲ ಭಾವನೆಗಳನ್ನು ಅರಿಯಲು, ಅವರ ಎಲ್ಲ ತುಂಟತನ ಮತ್ತು ಮುಪ್ಪಿನ ಅರಳು-ಮರಳನ್ನು ಸಹಿಸಲು, ಅವನ ರೋಗ-ರುಜಿನವನ್ನು ಸಹಿಸಲು ಕೇವಲ ಕುಟಂಬಕ್ಕೆ ಮಾತ್ರ ಸಾಧ್ಯ. ಕುಟುಂಬ ಅವನ ನೈಜ ಮತ್ತು ದೇವ ನಿರ್ಮಿತ ಆಶ್ರಯ ತಾಣವಾಗಿದೆ. ಅದಕ್ಕೆ ಸಮವಾದ ಮತ್ತು ಪರ್ಯಾಯ ವ್ಯವಸ್ಥೆಯನ್ನು ರೂಪಿಸಲು ಈ ಹಿಂದೆಯೂ ಸಾಧ್ಯವಾಗಿಲ್ಲ. ಇನ್ನು ಮುಂದೆಯೂ ಸಾಧ್ಯವಾಗದು. ಈ ಆಶ್ರಯವನ್ನು, ಪ್ರೀತಿಯನ್ನು, ಗೌರವವನ್ನು ಮನಸಾರೆ ತಂದೆ ನೀಡುತ್ತಾರೆ, ತಾಯಿ ನೀಡುತ್ತಾರೆ, ಅಕ್ಕ-ತಂಗಿ, ಸಹೋದರರು, ಅಜ್ಜ-ಅಜ್ಜಿ ಹೀಗೆ ಎಲ್ಲರೂ ನೀಡುತ್ತಾರೆ.

ಲೇಖಕರು : ಅಬೂಕುತುಬ್

Check Also

`ನಾಲ್ವರು ಖಲೀಫರೇ ನನ್ನ ಆದರ್ಶ’: ಅಗಲಿದ ಬಿ.ಎ. ಮೊಹಿದೀನ್ ಸ್ಮರಣೆ

ಮಾಜಿ ಉನ್ನತ ಶಿಕ್ಷಣ ಸಚಿವ, ಸಜ್ಜನ ರಾಜಕಾರಣಿ, ಮುಸ್ಲಿಮ್ ಸಮುದಾಯದ ಸಾಮಾಜಿಕ ಮತ್ತು ರಾಜಕೀಯ ಧ್ವನಿಯಾಗಿದ್ದ ಬಿ.ಎ. ಮೊಹಿದೀನ್ (81) …

Leave a Reply

Your email address will not be published. Required fields are marked *