ಇಸ್ಲಾವಿೂ ಕಾನೂನಿನಲ್ಲಿ ಮಕ್ಕಳ ಹಕ್ಕುಗಳು ಭಾಗ- 03


ನ್ಯಾಯ ಪೂರ್ಣತೆ ಮತ್ತು ಸಮಾನತೆಯನ್ನು ಕಾಯ್ದುಕೊಳ್ಳುವುದು:

ಅನ್ಯಾಯವನ್ನು ಇಸ್ಲಾಮ್ ನಿಷೇಧಿಸುತ್ತದೆ. ಮಕ್ಕಳನ್ನು ಕೂಡಾ ನ್ಯಾಯ ಪೂರ್ಣವಾಗಿ ಬೆಳೆಸಬೇಕೆಂದು ಹಾಗೂ ಮಕ್ಕಳೊಂದಿಗೆಯೂ ನ್ಯಾಯವನ್ನು ಕಾಯ್ದುಕೊಳ್ಳಬೇಕೆಂದು ಇಸ್ಲಾಮ್ ಬೋಧಿಸುತ್ತದೆ. ಉಡುಗೊರೆ, ಅಧಿಕಾರ, ಕೊಡುಗೆ, ಪಿತ್ರಾರ್ಜಿತ ಆಸ್ತಿಗಳನ್ನು ನೀಡುವಾಗ ಸಮಾನತೆಯನ್ನು ಕಾಯ್ದುಕೊಳ್ಳಬೇಕೆಂದೂ ಅವರ ನಡುವೆ ತಾರತಮ್ಯವನ್ನು ಇರಿಸಬಾರದೆಂದು ಇಸ್ಲಾಮ್ ಬೋಧಿಸುತ್ತದೆ.

ಮಕ್ಕಳೊಂದಿಗೆ ಸಮಾನತೆಯೊಂದಿಗೆ ವ್ಯವಹಾರಿಸಬೇಕು. ಈ ಬಗ್ಗೆ ಸದಾ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಪ್ರಕೃತಿದತ್ತವಾಗಿ ಒಂದು ಮಗುವಿನ ಬಗ್ಗೆ ಹೆಚ್ಚು ಒಲವಿಲ್ಲದಿದ್ದರೆ ಪರವಾಗಿಲ್ಲ. ಆದರೆ ವರ್ತನೆ ಮತ್ತು ವ್ಯವಹಾರಗಳಲ್ಲಿ ಸದಾ ನ್ಯಾಯ ಮತ್ತು ಸಮಾನತೆಯನ್ನು ಪಾಲಿಸಬೇಕು. ಉಳಿದವರಿಗೆ ಅಹಿತವಾಗುವಂತೆ ಒಂದು ಮಗುವಿ ನೊಂದಿಗೆ ಪಕ್ಪಪಾತದ ವ್ಯವಹಾರ ಮಾಡಬಾರದು. ಇದರಿಂದ ಇತರ ಮಕ್ಕಳಲ್ಲಿ ಕೀಳರಿಮೆ, ದ್ವೇಷ, ನಿರಾಶೆ ಮತ್ತು ಬಂಡಾಯ ನೀತಿಗಳು ಬೆಳೆಯುತ್ತವೆ. ಈ ಕೆಡುಕುಗಳು ಅವರ ಸ್ವಾಭಾವಿಕ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತವೆ. ಇದು ಅವರ ನೈತಿಕ ಮತ್ತು ಆಧ್ಯಾತ್ಮಿಕ ಉನ್ನತಿಗೂ ಮಾರಕವಾಗಿದೆ.

ಒಮ್ಮೆ ಹ. ಬಶೀರ್(ರ) ತಮ್ಮ ಮಗನಾದ ನುಅಮಾನ್ ರೊಂದಿಗೆ(ರ) ಪ್ರವಾದಿವರ್ಯರ(ಸ) ಬಳಿಗೆ ಬಂದು, `ಓ ಪ್ರವಾದಿವರ್ಯರೇ! ನನ್ನ ಬಳಿ ಓರ್ವ ಗುಲಾಮನಿದ್ದ. ನಾನವನನ್ನು ಈ ಹುಡುಗನಿಗೆ ನೀಡಿದೆ’ ಎಂದರು. ಆಗ ಪ್ರವಾದಿ(ಸ), `ನೀವು ನಿಮ್ಮ ಎಲ್ಲ ಮಕ್ಕಳಿಗೆ ಒಬ್ಬೊಬ್ಬ ಗುಲಾಮನನ್ನು ನೀಡಿರುವಿರಾ?’ ಎಂದು ಕೇಳಿದರು. ಹ. ಬಶೀರ್(ರ), `ಇಲ್ಲ’ ಎಂದಾಗ ಪ್ರವಾದಿ(ಸ), “ಈ ಗುಲಾಮನನ್ನು ನೀವು ಹಿಂದಕ್ಕೆ ಪಡೆಯಿರಿ. ದೇವನನ್ನು ಭಯಪಡಿರಿ. ನಿಮ್ಮ ಮಕ್ಕಳ ಜೊತೆ ಸಮಾನತೆಯ ವ್ಯವಹಾರ ಮಾಡಿರಿ ಎಂದು ಆದೇಶಿಸಿದರು. ಅದರಂತೆ ಮನೆಗೆ ಮರಳಿದಾಗ ಹ. ಬಶೀರ್(ರ) ಆ ಗುಲಾಮನನ್ನು ಹಿಂತೆಗೆದುಕೊಂಡರು.

ಇನ್ನೊಂದು ವರದಿಯಂತೆ ಪ್ರವಾದಿ(ಸ) `ಹಾಗಾದರೆ ನನ್ನನ್ನು ಪಾಪಕ್ಕೆ ಸಾಕ್ಷಿಯಾಗಿಸದಿರಿ. ನಾನು ಅನ್ಯಾಯಕ್ಕೆ ಸಾಕ್ಷಿಯಾಗಲಾರೆ’ ಎಂದರು. ಮತ್ತೊಂದು ವರದಿಯಂತೆ ಪ್ರವಾದಿ(ಸ) `ಎಲ್ಲಾ ಮಕ್ಕಳೂ ನಿಮ್ಮೊಂದಿಗೆ ಉತ್ತಮ ವ್ಯವಹಾರ ಮಾಡಬೇಕೆಂದು ನೀವು ಬಯಸುವುದಿಲ್ಲವೇ?’ ಎಂದು ಪ್ರಶ್ನಿಸಿದರು. ಹ. ಬಶೀರ್(ರ) `ಹೌದೆಂದಾಗ `ಹಾಗಿದ್ದರೆ ಇಂತಹ ಕೆಲಸ ಮಾಡದಿರಿ’ ಎಂದು ಆಜ್ಞಾಪಿಸಿದರು. (ಬುಖಾರಿ, ಮುಸ್ಲಿಮ್)

ಮಕ್ಕಳ ಮುಂದೆ ಸದಾ ಉತ್ತಮ ಮಾದರಿಯನ್ನಿರಿಸಬೇಕಾದ ಅಗತ್ಯತೆ ಹೆತ್ತವರ ಮೇಲಿದೆ. ನಿಮ್ಮ ಜೀವನವು ಮಕ್ಕಳ ಮಟ್ಟಿಗೆ ಒಂದು ಪೂರ್ಣಾವಧಿ ಮೌನ ಶಿಕ್ಪಣವಾಗಿದೆ. ನಿಮ್ಮಿಂದ ಮಕ್ಕಳು ಕಲಿಯುತ್ತಿರುವರು. ಮಕ್ಕಳ ಮುಂದೆ ತಮಾಷೆಗೂ ಸುಳ್ಳಾಡದಿರಿ.

ಹ. ಅಬ್ದುಲ್ಲಾ ಬಿನ್ ಆಮಿರ್(ರ) ತಮ್ಮ ಒಂದು ವೃತ್ತಾಂತವನ್ನು ಈ ರೀತಿ ವಿವರಿಸಿದ್ದಾರೆ: ಒಮ್ಮೆ ಪ್ರವಾದಿ(ಸ) ನಮ್ಮ ಮನೆಗೆ ಆಗಮಿಸಿದರು. ಆಗ ನನ್ನ ತಾಯಿ ನನ್ನನ್ನು ಕರೆದು, `ಇಲ್ಲಿ ಬಾ, ಒಂದು ವಸ್ತು ಕೊಡುವೆ’ ಎಂದರು. ಪ್ರವಾದಿ(ಸ) ಇದನ್ನು ಕಂಡು, `ನೀವು ಮಗುವಿಗೆ ಏನು ಕೊಡ ಬಯಸಿದ್ದೀರಿ’ ಎಂದಾಗ ಅವರು `ಖರ್ಜೂರ ಕೊಡ ಬಯಸಿದ್ದೆ’ ಎಂದರು. ಆಗ ಪ್ರವಾದಿ(ಸ) `ಕೊಡುವ ನೆಪ ಮಾಡಿ ಬಂದಾಗ ಏನನ್ನೂ ಕೊಡದೆ ಇರುತ್ತಿದ್ದರೆ ಅದು ನಿಮ್ಮ ಕರ್ಮ ಪತ್ರದಲ್ಲಿ ಒಂದು ಸುಳ್ಳೆಂದು ಬರೆಯಲ್ಪಡುತ್ತಿತ್ತು’ ಎಂದರು.

ಗಂಡು ಮಗುವಾದಾಗ ಸಂತೋಷ ಪಡುವಂತೆ ಹೆಣ್ಣು ಮಗುವಾದಾಗಲೂ ಸಂತೋಷ ಪಡಬೇಕು. ಹೆಣ್ಣು, ಗಂಡುಗಳೆರಡೂ ಅಲ್ಲಾಹನ ಕೊಡುಗೆಗಳು. ಅವುಗಳ ಪೈಕಿ ನಿಮ್ಮ ಮಟ್ಟಿಗೆ ಯಾವುದು ಉತ್ತಮವೆಂಬುದನ್ನು ಅಲ್ಲಾಹನೇ ಚೆನ್ನಾಗಿ ಬಲ್ಲನು. ಹೆಣ್ಣು ಹುಟ್ಟಿದಾಗ ಮುಖ ಸಿಂಡರಿಸುವುದು ಮತ್ತು ನಿರಾಶರಾಗುವುದು ಅನುಸರಣಶೀಲ ಸತ್ಯವಿಶ್ವಾಸಿ ಗಳಿಗೆ ಭೂಷಣವಲ್ಲ. ಇದು ಕೃತಘ್ನತೆ, ಮಾತ್ರವಲ್ಲ ಸರ್ವಜ್ಞನೂ ಕರುಣಾಳುವೂ ಆದ ಅಲ್ಲಾಹನಿಗೆ ಮಾಡುವ ಅವಮಾನವಾಗಿದೆ.

ಒಂದು ಮನೆಯಲ್ಲಿ ಹೆಣ್ಣು ಹಡೆಯಲ್ಪಟ್ಟರೆ ಅಲ್ಲಾಹನು ದೇವಚರರನ್ನು ಅಲ್ಲಿಗೆ ಕಳುಹಿಸುವನು. ಅವರು ಬಂದು ಮನೆ ಮಂದಿಗೆ ರಕ್ಪಣೆ ಕೋರುತ್ತಾ ಆ ಮಗುವನ್ನು ತಮ್ಮ ರೆಕ್ಕೆಗಳ ನೆರಳಲ್ಲಿರಿಸುತ್ತಾರೆ ಮತ್ತು ಅದರ ತಲೆ ನೇವರಿಸುತ್ತಾ ‘ಇದು ಅಬಲೆಯ ಒಡಲಲ್ಲಿ ಹುಟ್ಟಿದ ಅಬಲೆ. ಈ ಮಗುವನ್ನು ಚೆನ್ನಾಗಿ ಸಾಕಿ ಸಲಹುವವನ ಮೇಲೆ ಅಲ್ಲಾಹನ ಸಹಾಯ ಅಂತಿಮ ದಿನದವರೆಗೂ ಇರುವುದು’ ಎಂದು ಹೇಳುತ್ತಾರೆ. (ತಬ್ರಾನಿ)

@ ಡಾ| ಇನಾಮುಲ್ಲಾಹ್ ಅಝ್ಮಿ ಫಲಾಹಿ

Check Also

ಸಂಕಷ್ಟದಲ್ಲಿ ದೇವಸ್ಮರಣೆ

ಇಬ್ರಾಹೀಮ್ ಸಈದ್ (ನೂರೆಂಟು ಚಿಂತನೆಗಳು ಕೃತಿಯಿಂದ) ಲಿಯೋ ಟಾಲ್‍ಸ್ಟಾಯ್‍ರ ಪ್ರಸಿದ್ಧ ಕೃತಿ ‘ಅನ್ನಾ ಕರೆನಿನಾ’ದಲ್ಲಿರುವ ಒಂದು ಪ್ರಮುಖ ಕಥಾ ಪಾತ್ರ …

Leave a Reply

Your email address will not be published. Required fields are marked *