Breaking News
Home / ಇಸ್ಲಾಮ್ ಇವರ ದೃಷ್ಟಿಯಲ್ಲಿ

ಇಸ್ಲಾಮ್ ಇವರ ದೃಷ್ಟಿಯಲ್ಲಿ

ಪ್ರಾಮಾಣಿಕನಾದ ಓರ್ವ ಮಾನವನು ದೇವನ ಅತ್ಯುತ್ಕ್ರಷ್ಟ ಸೃಷ್ಟಿ. ಮುಹಮ್ಮದ್ ಕೇವಲ ಪ್ರಾಮಾಣಿಕರಾಗಿರಲಿಲ್ಲ, ಅವರು ಅಡಿಯಿಂದ ಮುಡಿ ತನಕ ಮಾನವೀಯ ಅನುಕಂಪ ಉಳ್ಳವರಾಗಿದ್ದರು. ಸಹಜೀವಿಗಳ ಪ್ರೀತಿ ಮತ್ತು ಸಹಾನುಭೂತಿಗಳು ಅವರ ಹೃದಯದ ಸಂಗೀತವಾಗಿತ್ತು. ಮಾನವರ ಸೇವೆಗೈಯುವುದು, ಅವರನ್ನು ಉನ್ನತಗೊಳಿಸುವುದು, ಸಂಸ್ಕರಿಸುವುದು, ಅವರಿಗೆ ಜ್ಞಾನ ನೀಡುವುದು – ಒಂದೇ ಮಾತಿನಲ್ಲಿ ಹೇಳುವುದಾದರೆ, ಮನುಷ್ಯರನ್ನು ಮನುಷ್ಯರನ್ನಾಗಿ ಮಾಡುವುದು – ಇದು ಅವರ ಕಾರ್ಯಭಾರವಾಗಿತ್ತು. ಜೀವನದ ಸರ್ವಸ್ವವಾಗಿತ್ತು. ವಿಚಾರ, ಮಾತು ಮತ್ತು ಕೃತಿಗಳಲ್ಲಿ ಮಾನವಕುಲದ ಒಳಿತೇ ಅವರ ಏಕೈಕ ಗುರಿ! ಏಕೈಕ ಮಾರ್ಗದರ್ಶನ!

ಮುಹಮ್ಮದ್‍ರ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ಗ್ರಹಿಸಲು ಕಷ್ಟಸಾಧ್ಯ. ಅದರ ಒಂದು ಸಣ್ಣ ಅಂಶವನ್ನಷ್ಟೇ ಗ್ರಹಿಸಲು ನನಗೆ ಸಾಧ್ಯವಾಗಿದೆ. ಎಂತಹ ಹೃದಯಂಗಮ ಬಹುಮುಖ ಪ್ರತಿಭೆ! ಎಂತಹ ಅನುಪಮ ರಂಗಗಳು! ಮುಹಮ್ಮದ್ ಎಂಬ ಪ್ರವಾದಿ, ಮುಹಮ್ಮದ್ ಎಂಬ ಆಡಳಿತಗಾರ, ಮುಹಮ್ಮದ್ ಎಂಬ ವ್ಯಾಪಾರಿ, ಮುಹಮ್ಮದ್ ಎಂಬ ಉಪದೇಶಕ, ಮುಹಮ್ಮದ್ ಎಂಬ ತತ್ವಜ್ಞಾನಿ, ಮುಹಮ್ಮದ್ ಎಂಬ ರಾಜಕಾರಣಿ, ಮುಹಮ್ಮದ್ ಎಂಬ ವಾಗ್ಮಿ, ಮುಹಮ್ಮದ್ ಎಂಬ ಸುಧಾರಕ, ಮುಹಮ್ಮದ್ ಎಂಬ ಅನಾಥ ಸಂರಕ್ಪಕ, ಮುಹಮ್ಮದ್ ಎಂಬ ಗುಲಾಮ ವಿಮೋಚಕ, ಮುಹಮ್ಮದ್ ಎಂಬ ಸ್ತ್ರೀ ವಿಮೋಚಕ, ಮುಹಮ್ಮದ್ ಎಂಬ ಕಾನೂನು ತಜ್ಞ, ಮುಹಮ್ಮದ್ ಎಂಬ ನ್ಯಾಯಾಧೀಶ, ಮುಹಮ್ಮದ್ ಎಂಬ ಪುಣ್ಯಾತ್ಮ, ಉಜ್ವಲವಾದ ಈ ಎಲ್ಲ ರೂಪಗಳಲ್ಲಿ ಮಾನವ ಜೀವನದ ಈ ಎಲ್ಲ ರಂಗಗಳಲ್ಲಿ ಅವರೋರ್ವ ಹೀರೋ ಆಗಿದ್ದರು.

ಫ್ರೊಪೆಸರ್ ರಾಮಕೃಷ್ಣ ರಾವ್

ಪ್ರಜಾ ಪ್ರಭುತ್ವವನ್ನು ಪ್ರತಿಪಾದಿಸಿ ಅದನ್ನು ಕಾರ್ಯರೂಪಕ್ಕೆ ತಂದ ಪ್ರಥಮ ಧರ್ಮವೇ ಇಸ್ಲಾಮ್. ಮಸೀದಿಯ ಮಿನಾರಗಳಲ್ಲಿ ಅದಾನ್ ಕರೆ ಮೊಳಗುವಾಗ ಭಕ್ತರು ಮಸೀದಿಯಲ್ಲಿ ಒಟ್ಟು ಸೇರುತ್ತಾರೆ. ರಾಜನೂ ಪ್ರಜೆಯೂ ಭುಜಕ್ಕೆ ಭುಜ ತಾಗಿಸಿ; ಅಲ್ಲಾಹ್ ಅತಿ ಶ್ರೇಷ್ಠನು; ಎಂದು ಘೋಷಿಸುತ್ತಾ ಸಾಷ್ಟಾಂಗವೆರಗುವಾಗ ಇಸ್ಲಾಮಿನ ಪ್ರಜಾಸತ್ತೆಯು ರೂಪು ತಾಳುತ್ತದೆ ಓರ್ವ ಮನುಷ್ಯನನ್ನು ಜನ್ಮತಃ ಇನ್ನೊಬ್ಬ ಮನುಷ್ಯನ ಸಹೋದರನೆಂದು ಪರಿಗಣಿಸುವ ಇಸ್ಲಾಮ್‍ನ ಈ ಅಭೇದ್ಯವಾದ ಏಕತೆಯು ನನ್ನನ್ನು ಅನೇಕ ಬಾರಿ ಮಂತ್ರ ಮುಗ್ಧಗೊಳಿಸಿದೆ. ಈಜಿಪ್ಟ್, ಅಲ್ಜೀರಿಯಾ, ಭಾರತ ಮತ್ತು ಟರ್ಕಿಯ ವ್ಯಕ್ತಿಗಳು ಲಂಡನ್‍ನಲ್ಲಿ ಭೇಟಿಯಾದರೆ ಅವರಿಗೆ ಓರ್ವ ಭಾರತೀಯ ಇನ್ನೋರ್ವ ಈಜಿಪ್ಟ್ ನವನೆಂಬುದು ಒಂದು ಸಮಸ್ಯೆಯೇ ಆಗಿರುವುದಿಲ್ಲ.

ಸರೋಜಿನಿ ನಾಯ್ಡು

“ಇವರು ಜಗತ್ತು ಕಂಡಿರುವ ಧರ್ಮಗುರು. ಎನ್ ಸೈಕ್ಲೋಪೀಡಿಯಾ ಬ್ರಿಟಾನಿಕ ಅತ್ಯಂತ ವಿಜಯಿಯೆಂದು ಅಂದಾಜಿಸಿದ ವ್ಯಕ್ತಿ ” ಅವರು ಇಂದು ಬದುಕಿರುತ್ತಿದ್ದರೆ ಆಧುನಿಕ ಕಾಲಘಟ್ಟದಲ್ಲಿ ಮಾನವ ನಾಗರಿಕತೆಯ ವಿನಾಶಕ್ಕೀಡು ಮಾಡುವ ಭೀಕರ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಅವರು ಯಶಸ್ವಿಯಾಗುತ್ತಿದ್ದರು.

ಜಾರ್ಜ್ ಬರ್ನಾಡ್ ಶಾ

ಪ್ರಸಿದ್ಧ ಇತಿಹಾಸಕಾರ ಲಾಮಾರ್ಟಿನ್ ಮಾನವರಿಗಿರುವ ಮಹತ್ವದ ಬುನಾದಿಯ ಬಗ್ಗೆ ಮುಂದಿರಿಸಿದ ಕೆಲವು ವಿಷಯಗಳು ಇಲ್ಲಿವೆ. ಗುರಿಯ ವಿಸ್ತಾರ, ಸಂಪನ್ಮೂಲಗಳ ಮಿತಿ, ಅದ್ಭುತ ಫಲಸಿದ್ಧಿ ಎಂಬುದು ಮಾನವ ಪ್ರತಿಭೆಯ ಮೂರು ಅಳತೆಗೋಲಾಗಿದೆ. ಹಾಗಾದರೆ ಆಧುನಿಕ ಇತಿಹಾಸದ ಯಾವನಾದರೊಬ್ಬ ಮಹಾನ್ ವ್ಯಕ್ತಿಯನ್ನುಮುಹಮ್ಮದರೊಂದಿಗೆ(ಸ) ಹೋಲಿಸುವ ಧೈರ್ಯ ಯಾರಲ್ಲಿದೆ? ಅತ್ಯಧಿಕ ಪ್ರಸಿದ್ಧರಾದವರೆಲ್ಲ ಆಯುಧಗಳು, ನಿಯಮಗಳು, ಸಾಮ್ರಾಜ್ಯಗಳನ್ನು ಮಾತ್ರ ಕಟ್ಟಿದರು. ಕೆಲವು ವಿಷಯಗಳಿಗೆ ಅವರು ಪಂಚಾಂಗ ಹಾಕಿದ್ದರೂ ಅವೆಲ್ಲವೂ ಭೌತಿಕ ಹಕ್ಕುಗಳಿಗೆ ಸಂಬಂಧಿಸಿದ್ದಾಗಿದೆ. ಅವು ಕೆಲವೊಮ್ಮೆ ಅವರ ಕಣ್ಣ ಮುಂದೆಯೇ ನುಚ್ಚುನೂರಾಗಿತ್ತು.

ಆದರೆ ಈ ವ್ಯಕ್ತಿ (ಪ್ರವಾದಿ ಮುಹಮ್ಮದರು(ಸ)) ಸೈನ್ಯದಲ್ಲಿ, ನಿಯಮಗಳಲ್ಲಿ, ಸಾಮ್ರಾಜ್ಯಗಳಲ್ಲಿ, ಜನರನ್ನು ಅಧಿಕಾರ ಪೀಠಗಳಲ್ಲಿ ಮಾತ್ರವಲ್ಲ ಅಂದು ಭೂಮಿಯಲ್ಲಿ ವಾಸ್ತವ್ಯವಿದ್ದ ಜನಸಂಖ್ಯೆಯ ಮೂರನೇ ಒಂದು ಭಾಗದ ಜನರಲ್ಲಿ ಅಲ್ಲೋಲ ಕಲ್ಲೋಲವುಂಟು ಮಾಡಿದರು. ಅಷ್ಟೇ ಅಲ್ಲ ತಾರಾಪಟ್ಟದ ವ್ಯಕ್ತಿಗಳಲ್ಲಿ ದೇವಂದಿರಲ್ಲಿ ಧರ್ಮಗಳಲ್ಲಿ ಆಶಯ ವಿಶ್ವಾಸಗಳಲ್ಲಿ ಮತ್ತು ಆತ್ಮಗಳಲ್ಲಿ ಸಂಚಲನೆ ಮೂಡಿಸಿದರು. ವಿಜಯದ ವೇಳೆ ಅವರು ವಹಿಸಿದ ಸಂಯಮ, ಸಾಮ್ರಾಜ್ಯ ವ್ಯಾಮೋಹದ ಹೊರತಾದ ಒಂದು ಆಶಯದ ಮೇಲಿನ ಅವರ ಬಯಕೆ, ಪ್ರಾರ್ಥನೆಗಳು, ದೇವನೊಡನೆ ಆಧ್ಯಾತ್ಮಿಕ ಸಂಭಾಷಣೆಗಳು, ಅವರ ಮರಣವೂ, ಮರಣಾನಂತರ ವಿಜಯಗಳೆಲ್ಲವೂ ಯಾವ ಕಾಪಟ್ಯವನ್ನು ಹೊಂದಿರಲಿಲ್ಲ. ಬದಲಾಗಿ ಅವೆಲ್ಲವೂ ಒಂದು ವಿಶ್ವಾಸವನ್ನು ಪುನರುತ್ಥಾನಗೊಳಿಸುವುದಕ್ಕಾಗಿತ್ತು.

ಈ ವಿಶ್ವಾಸಕ್ಕೆ ಎರಡು ಪಾಶ್ರ್ವಗಳಿವೆ. ದೇವನ ಏಕತ್ವ ಮತ್ತು ದೇವನ ಅಭೌತಿಕತೆಯಾಗಿದೆ. ಮೊದಲನೆಯದು ದೇವನೆಂದರೆ ಏನು ಎಂದು ತಿಳಿಸುತ್ತದೆ. ಎರಡನೆಯದು ದೇವನು ಏನೆಲ್ಲ ಆಗಿರುವನೆಂದು ತಿಳಿಸುವುದು. ಮೊದಲನೆಯದು ನಕಲಿ ದೇವಂದಿರನ್ನು ಹೋರಾಟದಿಂದ ನಿರ್ಮೂಲಿಸುವುದು. ಎರಡನೆಯದು ಪ್ರವಚನದಿಂದ ಆಶಯವನ್ನು ಸ್ಥಾಪಿಸುವುದು. ದಾರ್ಶನಿಕ, ಭಾಷಣಗಾರ, ಪ್ರವಾದಿ, ಕಾನೂನು ತಜ್ಞ, ಯೋಧ, ಆಶಯಗಳ ವಿಜಯಿ, ವಿಗ್ರಹ ರಹಿತ ತರ್ಕ, ಭದ್ರವಾದ ವಿಶ್ವಾಸದ ಪುನರ್ ಸ್ಥಾಪಕ, ಇಪ್ಪತ್ತು ಭೌತಿಕ ಸಾಮ್ರಾಜ್ಯಗಳು ಮತ್ತು ಒಂದು ಆಧ್ಯಾತ್ಮಿಕ ಸಾಮ್ರಾಜ್ಯದ ಸಂಸ್ಥಾಪಕ. ಇದುವೇ ಮುಹಮ್ಮದ್! ಮಾನವ ಮಹತ್ವದ ಯಾವುದೇ ಮಾನದಂಡವನ್ನಿಟ್ಟು ಪರಿಶೀಲಿಸಿದರೂ ಇವರಿಗಿಂತ ಮಹಾನ್ ವ್ಯಕ್ತಿ ಯಾರು ಎಂದು ನಾವು ಪ್ರಶ್ನಿಸಬಹುದಾಗಿದೆ?”

(Lamartine,Histoire dela Turquie,Paris,1854, Vol.II Page 276-277)

ಗಾಂಧಿಜಿಯವರು ಪ್ರವಾದಿ(ಸ) ಕುರಿತು ಹೀಗೆ ಬರೆದರು:”ಕೋಟ್ಯಾಂತರ ಜನರ ಹೃದಯಗಳಲ್ಲಿ ತರ್ಕಾತೀತ ಪ್ರಭಾವ ಬೀರುವ ಆ ಮನುಷ್ಯನ ಜೀವನದ ಅತ್ಯಂತ ಉತ್ತಮ ಭಾಗ ಯಾವುದೆಂದು ತಿಳಿಯಲು ನಾನು ಬಯಸಿದೆ. ಅಂದಿನ ಜೀವನ ವ್ಯವಸ್ಥೆಯಲ್ಲಿ ಇಸ್ಲಾಮಿಗೆ ಸ್ಥಾನವನ್ನು ಖಡ್ಗ ತಂದು ಕೊಟ್ಟಿದ್ದಲ್ಲ ಎಂದು ನನಗೆ ಹೆಚ್ಚೆಚ್ಚು ಮನವರಿಕೆಯಾಗಿದೆ.

ಪ್ರವಾದಿಯ ಅಸಂದಿಗ್ಧ ಸರಳತನ, ಸಂಪೂರ್ಣ ನಿಸ್ವಾರ್ಥತೆ, ವಚನ ಪಾಲನೆ, ಗೆಳೆಯರು ಅನುಯಾಯಿಗಳೊಡನೆ ಪ್ರೀತಿ, ನಿರ್ಭೀತಿ, ದೇವನ ಮತ್ತು ತನ್ನ ದೌತ್ಯದ ಮೇಲಿರುವ ಪರಮ ವಿಶ್ವಾಸ ಎಂಬುದೇ ಎಲ್ಲಕ್ಕೂ ಉತ್ತೇಜನವಾಗಿದೆ. ಎದುರುಗಡೆ ಸಿಕ್ಕವರ ಮೇಲೆಲ್ಲ ಪ್ರಭಾವ ಬೀರಿದ್ದು ಎಲ್ಲ ಅಡ್ಡಿಯನ್ನು ನಿವಾರಿಸಿದ್ದು ಖಡ್ಗವಲ್ಲ, ಇದೇ ಆಗಿದೆ. ಪ್ರವಾದಿ ಜೀವನ ಚರಿತ್ರೆಯ ಎರಡನೇ ಅಧ್ಯಾಯವನ್ನು ಓದಿ ಮುಗಿಸಿದಾಗ ನನಗೆ ಒಂದು ಮಹಾ ದಿಗ್ವಿಜಯದ ಕುರಿತು ಓದಲು ಇನ್ನೂ ಹೆಚ್ಚು ಸಿಗಲಿಲ್ಲವಲ್ಲ ಎಂದು ಖೇದವೆನಿಸಿತು.

(Young India, Quoted in The Light, Lahore,16thept.1924)

ಒಬ್ಬ ವ್ಯಕ್ತಿ ಒಮ್ಮೆಗೆ ಅಂದರೆ ಎರಡು ದಶಕಗಳಿಗಿಂತ ಕಡಿಮೆ ಅವಧಿಯಲ್ಲಿ ಪರಸ್ಪರ ಕಾದಾಡುತ್ತಿದ್ದ ಗೋತ್ರಗಳನ್ನು ಮತ್ತು ಗ್ರಾಮೀಣ ಅರಬರನ್ನು ಅತ್ಯಂತ ಬಲಾಢ್ಯರು, ಸುಧಾರಿತ ಜನ ವಿಭಾಗವನ್ನಾಗಿ ಪರಿವರ್ತಿಸಿರುವುದು ಅದ್ಭುತವಾಗಿದೆ.

ಥಾಮಸ್ ಕಾರ್ಲೈಲ್, (ಹೀರೋಸ್ ಏಂಡ್ ಹೀರೋ ವರ್ಶಿಪ್ ಎಂಬ ಗ್ರಂಥದಲ್ಲಿ)

ಜಗತ್ತಿನಲ್ಲಿ ಅತೀ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳ ಪಟ್ಟಿಯಲ್ಲಿ ಒಂದನೆಯವರಾಗಿ ಮುಹಮ್ಮದ್(ಸ)ರನ್ನು ಆಯ್ಕೆ ಮಾಡಿರುವುದು ಕೆಲವರಿಗೆ ಆಶ್ಚರ್ಯವನ್ನುಂಟು ಮಾಡಿರಬಹುದು. ಕೆಲವರು ಪ್ರಶ್ನಿಸಿಯಾರು, ಆದರೆ ಇತಿಹಾಸದಲ್ಲಿ ಧಾರ್ಮಿಕ ಮತ್ತು ಧರ್ಮೇತರ ಸ್ತರಗಳಲ್ಲಿ ಅತ್ಯಂತ ಯಶಸ್ವಿಯಾದ ಏಕೈಕ ವ್ಯಕ್ತಿ ಅವರು ಮಾತ್ರ.

ಮೈಕಲ್ ಎಚ್. ಹಾರ್ಟ್ (The Hundred: A ranking of the most Influenced persons in history, Newyork, 1978, P.33)

ಮುಹಮ್ಮದ್(ಸ) ಅರಬ್ ದೇಶದಲ್ಲಿ 6ನೇ ಶತಮಾನದಲ್ಲಿ ಹುಟ್ಟಿದರು. ಆದರೆ ಅದಕ್ಕಿಂತ ಎಷ್ಟೋ ಮುಂಚೆ ಅವರ ಆಗಮನದ ಬಗ್ಗೆ ಹಿಂದೂ ಧರ್ಮದ ವೇದಗಳಲ್ಲಿ ಭವಿಷ್ಯ ನುಡಿಯಲಾಗಿದೆ. ಓರ್ವ ಹಿರಿಯರಿಂದ ಈ ವಿಷಯ ಕೇಳಿ ಆ ಬಗ್ಗೆ ನಾನು ಅದನ್ನು ಹುಡುಕಿದೆ. ವೇದಗಳಲ್ಲಿ ಪ್ರವಾದಿವರ್ಯರ ಆಗಮನದ ಬಗ್ಗೆ ಭವಿಷ್ಯವಾಣಿ ನೋಡಿ ಆಶ್ಚರ್ಯ ಚಕಿತನಾದೆ. ಮಹರ್ಷಿ ವ್ಯಾಸರ 18 ಪುರಾಣಗಳ ಪೈಕಿ ಒಂದು ಭವಿಷ್ಯ ಪುರಾಣ. ಅದರ ಒಂದು ಶ್ಲೋಕ ಈ ರೀತಿಯಿದೆ.
“ಹೊರ ರಾಷ್ಟ್ರ ಒಂದರಲ್ಲಿ ಓರ್ವ ಆಚಾರ್ಯ ತನ್ನ ಸಂಗಾತಿಗಳೊಂದಿಗೆ ಆಗಮಿಸುವರು. ಅವರ ಹೆಸರು ಮಹಾಮದ ಎಂದಾಗಿರುವುದು. ಅವರು ಮರುಭೂಮಿ ಪ್ರದೇಶದಲ್ಲಿ ಆಗಮಿಸುವರು.” (ಭವಿಷ್ಯ ಪುರಾಣ ಅಧ್ಯಾಯ 3 ಶ್ಲೋಕ 3 ಸೂತ್ರ 5 ರಿಂದ 8)

ಈ ಶ್ಲೋಕ ಮತ್ತು ಸೂತ್ರದಲ್ಲಿ ಹೆಸರು ಮತ್ತು ಸ್ಥಳದ ಸ್ಪಷ್ಟ ಸೂಚನೆಗಳಿವೆ. ಬರಲಿರುವ ಮಹಾನ್ ವ್ಯಕ್ತಿತ್ವದ ಇನ್ನೂ ಕೆಲವು ಕುರುಹುಗಳು ಈ ರೀತಿ ವಿವರಿಸಲ್ಪಟ್ಟಿದೆ.
” ಅವರು ವೃತ್ತಚ್ಛೇದ ಮಾಡಿದವರಾಗಿರುವರು. ಅವರಿಗೆ ಶಿಖೆ ಇರದು. ಅವರು ಗಡ್ಡ ಬೆಳೆಸುವರು. ಮಾಂಸ ಭಕ್ಷಿಸುವರು. ತನ್ನ ಸಂದೇಶವನ್ನು ವ್ಯಕ್ತವಾದ ಭಾಷೆಯಲ್ಲಿ ಪ್ರಭಾವಶಾಲಿಯಾಗಿ ಮುಂದಿಡುವರು. ತನ್ನ ಸಂದೇಶದ ಮೇಲೆ ವಿಶ್ವಾಸ ತರುವವರನ್ನು ಮುಸ್ಲಾಯೀ ಎಂಬ ಹೆಸರಿನಲ್ಲಿ ಕರೆಯುವರು. (ಅಧ್ಯಾಯ 3 ಶ್ಲೋಕ 25 ಸೂತ್ರ 3)

ಅಬ್ದುಲ್ಲಾ ಅಡಿಯಾರ್ (ನಾನು ಪ್ರೀತಿಸುವ ಇಸ್ಲಾಮ್ ಎಂಬ ಗ್ರಂಥದಲ್ಲಿ)